ಬುಧವಾರ, ಜೂನ್ 1, 2016

ಮೇ 31 ‘ವಿಶ್ವ ತಂಬಾಕು ರಹಿತ ದಿನ’; ಧೂಮಪಾನಿಗಳೇ, ಆತ್ಮಹತ್ಯೆ ಮಾಡಿಕೊಳ್ಳಬೇಡಿ!

ಮೇ 31, 2016ರ 'ಪ್ರಜಾಪ್ರಗತಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

http://balto123.deviantart.com/
ದೃಶ್ಯ ಒಂದು: ಮುದ್ದು ಮಗಳು ಅಂದವಾಗಿ ಚಿತ್ರ ಬರೆಯುತ್ತಿದ್ದಾಳೆ. ಅಪ್ಪ ಕೆಮ್ಮುತ್ತಾ ಒಳಗೆ ಬರುತ್ತಾನೆ. ಮಗಳ ಮುಖ ಬಾಡುತ್ತದೆ. ದೃಶ್ಯ ಎರಡು: ಎಲ್ಲರೂ ಊಟದ ಮೇಜಿನಲ್ಲಿದ್ದಾರೆ. ಅಪ್ಪನ ಕೈಯಲ್ಲಿ ಸಿಗರೇಟು. ಮಗಳ ಮುಖ ಸೊರಗುತ್ತದೆ. ದೃಶ್ಯ ಮೂರು: ಅಪ್ಪ-ಮಗಳಿಬ್ಬರೂ ಜತೆಯಾಗಿ ಕುಳಿತು ಟಿವಿ ನೋಡುತ್ತಿದ್ದಾರೆ. ಅಪ್ಪನ ಕೈಯಲ್ಲಿ ಸಿಗರೇಟು. ಶ್ವಾಸಕೋಶದ ಕ್ಯಾನ್ಸರಿನಿಂದ ಕೆಮ್ಮಿ ಕೆಮ್ಮಿ ವ್ಯಕ್ತಿಯೊಬ್ಬ ನರಳುತ್ತಿರುವುದು ಟಿವಿಯಲ್ಲಿ ಕಾಣಿಸುತ್ತದೆ. ಮಗಳ ಮುಖ ಮತ್ತೆ ಬಾಡುತ್ತದೆ. ಅವಳು ಅಪ್ಪನ ಮುಖ ನೋಡುತ್ತಾಳೆ. ಆತ ಒಮ್ಮೆ ಟಿವಿಯನ್ನೂ ಇನ್ನೊಮ್ಮೆ ಮಗಳ ಮುಖವನ್ನೂ ನೋಡಿ ತಕ್ಷಣ ಅಲ್ಲಿಂದೆದ್ದು ಹೋಗಿ ಸಿಗರೇಟನ್ನು ಎಸೆದು ಬರುತ್ತಾನೆ. ಮಗಳು ಅಪ್ಪನನ್ನು ಪ್ರೀತಿಯಿಂದ ತಬ್ಬಿಕೊಳ್ಳುತ್ತಾಳೆ.

ನೀವು ಯಾವುದೇ ಟಾಕೀಸಿಗೆ ಹೋಗಿರುವಿರಾದರೆ ಸಿನಿಮಾ ಆರಂಭಕ್ಕೂ ಮುನ್ನ ಹೀಗೊಂದು ಜಾಹೀರಾತನ್ನು ಖಂಡಿತ ನೋಡಿರುತ್ತೀರಿ. ಆಮೇಲೆ ಮಧ್ಯಂತರದಲ್ಲಿ ಎದ್ದು ಶೌಚಾಲಯದತ್ತ ಹೋದಿರೋ, ಸಿಗರೇಟಿನ ಹೊಗೆಯ ಮೋಡ ನಿಮ್ಮನ್ನು ಸ್ವಾಗತಿಸುತ್ತದೆ! ಆ ಹೊಗೆಗೆ ನೀವು ಮೂರ್ಛೆ ಹೋಗದಿದ್ದರೆ ಅದೇ ನಿಮ್ಮ ಪುಣ್ಯ. ಕನಿಷ್ಠ ಐವತ್ತು ಮಂದಿ ಯುವಕರು ಹೆಮ್ಮೆಯಿಂದ ಸಿಗರೇಟು ಸೇದುತ್ತಾ ಅದೊಂದು ಸಾಂವಿಧಾನಿಕ ಹಕ್ಕೋ ಎಂಬಹಾಗೆ ಅಡ್ಡಾಡುತ್ತಿರುತ್ತಾರೆ. ಆ ಹೊಗೆಗೆ ‘ಧೂಮಪಾನ ನಿಷೇಧಿಸಿದೆ’ ಎಂಬ ಗೋಡೆಯ ಮೇಲಿನ ಬೋರ್ಡು ಕಾಣಿಸುವುದೇ ಇಲ್ಲ.

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧಿಸಿ ಎಂಟು ವರ್ಷಗಳಾದರೂ ನಾವಿನ್ನೂ ತಂಬಾಕಿನ ಹೊಗೆಯ ಅಂಧಕಾರದಲ್ಲೇ ಇದ್ದೇವೆ. ಸಿಗರೇಟ್ ಸೇದುವವರು ಅದೊಂದು ಹೆಮ್ಮೆ ಎಂಬಂತೆ, ಇನ್ಯಾರಿಗೂ ಇರದ ವಿಶಿಷ್ಟವಾದ ಅರ್ಹತೆ ಎಂಬಂತೆ ವರ್ತಿಸುತ್ತಲೇ ಇದ್ದಾರೆ. ‘ನಿಮಗೆ ಬೇಡವಾದರೆ ಸೇದಬೇಡಿ, ನಮಗೇಕೆ ಬಿಟ್ಟಿ ಉಪದೇಶ ಮಾಡುತ್ತೀರಿ’ ಎಂಬ ಉಡಾಫೆ ಮನೋಭಾವದೊಂದಿಗೆ ದಿನದಿನವೂ ಸಾವನ್ನು ಸಮೀಪಿಸುತ್ತಿದ್ದಾರೆ.

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಜಗತ್ತಿನಾದ್ಯಂತ ಪ್ರತಿವರ್ಷ 60 ಲಕ್ಷ ಮಂದಿ ಧೂಮಪಾನದಿಂದ ಸಾವಿಗೀಡಾಗುತ್ತಿದ್ದಾರೆ. ಆತಂಕಕಾರಿ ಸಂಗತಿಯೆಂದರೆ ಇವರಲ್ಲಿ ಆರು ಲಕ್ಷಕ್ಕೂ ಹೆಚ್ಚು ಮಂದಿ ಸಕ್ರಿಯ ಧೂಮಪಾನಿಗಳಲ್ಲ. ತಾವು ನೇರವಾಗಿ ಧೂಮಪಾನಿಗಳಲ್ಲದಿದ್ದರೂ ಬೇರೆಯವರು ಸಿಗರೇಟ್ ಸೇದುವಾಗ ಆ ಪರಿಸರದಲ್ಲಿ ಇದ್ದ ಕಾರಣದಿಂದಾಗಿ ಮಾರಕ ಕಾಯಿಲೆಗಳಿಗೆ ತುತ್ತಾಗಿ ಪ್ರಾಣ ಕಳಕೊಂಡಿದ್ದಾರೆ. ಇನ್ನೊಂದು ಆತಂಕದ ವಿಷಯವೆಂದರೆ ಜಗತ್ತಿನ ಒಟ್ಟಾರೆ ಧೂಮಪಾನಿಗಳ ಪೈಕಿ ಶೇ. 12ರಷ್ಟು ಮಂದಿ (ಸುಮಾರು 12 ಕೋಟಿ) ಭಾರತದಲ್ಲೇ ಇದ್ದಾರೆ.

ತಂಬಾಕಿನ ಹೊಗೆಯಲ್ಲಿರುವ 4000 ರಾಸಾಯನಿಕಗಳಲ್ಲಿ ಕನಿಷ್ಠ 250 ತುಂಬ ಅಪಾಯಕಾರಿಯಾದವು; ಅದರಲ್ಲೂ 50ಕ್ಕೂ ಹೆಚ್ಚು ಕ್ಯಾನ್ಸರ್‍ಕಾರಕ ರಾಸಾಯನಿಕಗಳು. ಶೇ. 90ರಷ್ಟು ಬಾಯಿ ಹಾಗೂ ಶ್ವಾಸಕೋಶದ ಕ್ಯಾನ್ಸರಿಗೆ ಧೂಮಪಾನವೇ ಕಾರಣ ಎಂದು ಅಧ್ಯಯನಗಳು ದೃಢಪಡಿಸಿವೆ. ತಂಬಾಕಿನ ದುಷ್ಪರಿಣಾಮಗಳ ಬಗ್ಗೆ ಜನರಿಗೆ ಅರಿವಿಲ್ಲ ಎಂದಲ್ಲ. ಅವರು ಇರುಳು ಕಂಡ ಬಾವಿಗೆ ಹಗಲು ಬೀಳುತ್ತಿದ್ದಾರೆ ಅಷ್ಟೇ.

1987ರಿಂದಲೇ ವಿಶ್ವ ಆರೋಗ್ಯ ಸಂಸ್ಥೆ ಮೇ 31ನ್ನು ‘ತಂಬಾಕು ರಹಿತ ದಿನ’ವೆಂದು ಘೋಷಿಸಿ ತಂಬಾಕಿನ ವಿರುದ್ಧ ಜನಜಾಗೃತಿ ಮೂಡಿಸಲು ವ್ಯಾಪಕ ಪ್ರಯತ್ನ ಮಾಡುತ್ತಿದೆ. ಪ್ರತೀ ವರ್ಷ ತಂಬಾಕು ವಿರೋಧದ ಯಾವುದಾದರೊಂದು ಆಯಾಮವನ್ನು ಮುಖ್ಯ ಕಾರ್ಯಸೂಚಿಯಾಗಿಸಿಕೊಂಡು ವಿಶ್ವದೆಲ್ಲೆಡೆ ಎಚ್ಚರ ಮೂಡಿಸಲು ಪ್ರಯತ್ನಿಸುತ್ತಿದೆ. ಉದಾಹರಣೆಗೆ, ಈ ವರ್ಷ ಸಿಗರೇಟ್ ಪ್ಯಾಕೆಟ್‍ಗಳ ಮೇಲೆ ಯಾವುದೇ ಬಣ್ಣ, ಲಾಂಛನ, ಬ್ರಾಂಡ್ ಅಥವಾ ಉತ್ತೇಜಕ ವಾಕ್ಯಗಳನ್ನು ಮುದ್ರಿಸದೆ ಅವುಗಳ ಬದಲಾಗಿ ಆರೋಗ್ಯ ಎಚ್ಚರಿಕೆಗಳನ್ನು ಮಾತ್ರ ಮುದ್ರಿಸಲು ಕ್ರಮ ಕೈಗೊಳ್ಳುವಂತೆ ಡಬ್ಲ್ಯೂಎಚ್‍ಒ ವಿಶ್ವದ ವಿವಿಧ ದೇಶಗಳಿಗೆ ಕರೆ ನೀಡಿದೆ.

ಭಾರತವೂ ತಂಬಾಕಿನ ವಿರುದ್ಧ ಜಾಗೃತಿ ಮೂಡಿಸುವ ಸಾಕಷ್ಟು ಪ್ರಯತ್ನಗಳನ್ನು ಮಾಡುತ್ತಲೇ ಬಂದಿದೆ. 2008ರಿಂದ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧ ಕಾಯ್ದೆ ಜಾರಿಯಲ್ಲಿದೆ. ಇದರ ಪ್ರಕಾರ ಸಭಾಂಗಣ, ಹೊಟೇಲು, ಚಿತ್ರಮಂದಿರ, ಆಸ್ಪತ್ರೆ, ಸಾರ್ವಜನಿಕ ಸಾರಿಗೆ, ಗ್ರಂಥಾಲಯ, ಕ್ಯಾಂಟೀನ್, ನ್ಯಾಯಾಲಯ, ಅಂಚೆ ಕಚೇರಿ, ಮಾರುಕಟ್ಟೆ, ಮಾಲ್‍ಗಳು, ಉದ್ಯಾನ, ಶಾಲಾ ಕಾಲೇಜುಗಳು ಮುಂತಾದೆಡೆ ಧೂಮಪಾನ ಮಾಡುವುದು ಒಂದು ಅಪರಾಧ. ಇದಕ್ಕಾಗಿ ಒಬ್ಬ ವ್ಯಕ್ತಿಗೆ ರೂ. 200 ದಂಡ ವಿಧಿಸಬಹುದಾಗಿದೆ. ಇದನ್ನು ರೂ. 1000ಕ್ಕೆ ಏರಿಸಬೇಕು ಎಂಬ ಪ್ರಸ್ತಾಪ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡನೆಯಾಗಿದೆ. ಮಾಧ್ಯಮಗಳಲ್ಲಿ ತಂಬಾಕು ಉತ್ಪನ್ನಗಳ ಜಾಹೀರಾತುಗಳನ್ನು ಸರ್ಕಾರ ನಿಷೇಧಿಸಿದೆ.

ಇಷ್ಟೆಲ್ಲ ಆದರೂ ನಮ್ಮ ಜನರು ಎಚ್ಚೆತ್ತುಕೊಂಡಿಲ್ಲ. ಕೇವಲ ಕಾನೂನುಗಳಿಂದಲೇ ಸಮಾಜ ಸುಧಾರಣೆಯಾಗದು ಎಂಬುದಕ್ಕೆ ಇದೇ ದೊಡ್ಡ ನಿದರ್ಶನ. ಮೇಲೆ ಹೇಳಿರುವ ಸಾರ್ವಜನಿಕ ಸ್ಥಳಗಳಲ್ಲಿ ಎಷ್ಟರಮಟ್ಟಿಗೆ ಧೂಮಪಾನ ನಿಷೇಧ ಜಾರಿಯಾಗಿದೆ ಎಂದು ಯೋಚಿಸಿದರೆ ಸಾಕು, ಅರ್ಥವಾಗುತ್ತದೆ. ನೀವು ಯಾವುದೇ ಟೀ ಸ್ಟಾಲ್‍ಗೆ ಭೇಟಿ ನೀಡಿ, ಅಲ್ಲಿ ಚಹಾಕ್ಕಿಂತಲೂ ಸಮೃದ್ಧವಾದ ಸಿಗರೇಟ್ ಹೊಗೆ ನಿಮಗೆ ಉಚಿತವಾಗಿ ಲಭ್ಯ. ಧೂಮಪಾನ ಬೇಡದ ಜನಸಾಮಾನ್ಯರು ಸಿಗರೇಟ್ ಅಡ್ಡೆಗಳಾಗಿರುವ ಇಂತಹ ಅಂಗಡಿಗಳಿಗೆ ಹೋಗವುದೇ ಕಷ್ಟ ಎಂಬಂತಹ ಪರಿಸ್ಥಿತಿ ಇದೆ. ವಿದ್ಯಾವಂತ ಮಂದಿಯೂ ಯಾವುದೇ ನಾಚಿಕೆ ಮರ್ಯಾದೆಯಿಲ್ಲದೆ, ನಾಗರಿಕತೆಯ ಕನಿಷ್ಠ ಲಕ್ಷಣವೂ ಇಲ್ಲದೆ ತಮ್ಮೆದುರು ನಿಂತ ಜನರ ಮುಖಕ್ಕೆ ಹೊಗೆಯುಗುಳುತ್ತಿರುತ್ತಾರೆ.

ಶಿಕ್ಷಣ ಸಂಸ್ಥೆಗಳ 200 ಮೀ. ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ನಿಷೇಧಿಸಿದ್ದರೂ ಈ ನಿಯಮ ಕಟ್ಟುನಿಟ್ಟಾಗಿ ಜಾರಿಯಾಗಿಲ್ಲ. ಸಾಮಾನ್ಯವಾಗಿ ಸಿಗರೇಟ್, ಗುಟ್ಕಾದಂತಹ ತಂಬಾಕು ಉತ್ಪನ್ನಗಳ ಗೂಡಂಗಡಿಗಳು ಇರುವುದೂ ಕಾಲೇಜುಗಳ ಎದುರಲ್ಲೇ! ‘ಧೂಮಪಾನ ನಿಷೇಧಿಸಿದೆ. ಅದು ದಂಡನಾರ್ಹ ಅಪರಾಧ’ ಎಂಬ ಪೊಲೀಸರ ಬೋರ್ಡುಗಳನ್ನು ಅಂಗಡಿಯವರು ಅನಿವಾರ್ಯವಾಗಿ ಕಂಡೂಕಾಣಿಸದಂತೆ ತಗುಲಿಸುತ್ತಾರೆ; ಕೆಲವೊಮ್ಮೆ ತಣ್ಣಗೆ ಅದನ್ನು ಕಿತ್ತೆಸೆಯುವುದೂ ಇದೆ. ಎದುರಿಗೇ ಇದ್ದರೂ ನಮ್ಮ ದಪ್ಪ ಚರ್ಮದ ಮಂದಿಗೆ ಅದು ಕ್ಯಾರೇ ಅಲ್ಲ ಬಿಡಿ. ವಿದ್ಯಾರ್ಥಿಗಳಿಗೆ ಆರೋಗ್ಯದ, ನೀತಿ ನಿಯಮಗಳ ಪಾಠ ಹೇಳಬೇಕಾದ ಅಧ್ಯಾಪಕರುಗಳೇ ಹಲವು ಮಂದಿ ಗಂಟೆಗೊಮ್ಮೆ ಸಿಗರೇಟ್ ಸೇದದೆ, ಗುಟ್ಕಾ ಜಗಿಯದೆ ಬದುಕಲಾರರು ಎಂಬಂತಹ ಪರಿಸ್ಥಿತಿ ಇದೆ; ಇನ್ನು ಯುವಕರನ್ನು ದೂರಿ ಏನು ಪ್ರಯೋಜನ?

ಬದಲಾವಣೆಯಾಗಬೇಕಿರುವುದು ಮನಸ್ಸಿನಲ್ಲಿ. ಅದು ತಾನಾಗಿಯೇ ಸಮಾಜದಲ್ಲಿ ಪ್ರತಿಫಲಿಸುತ್ತದೆ. ಏಕೆಂದರೆ ಸಮಾಜವು ಸಮಷ್ಟಿ ಮನಸ್ಥಿತಿಯ ಕನ್ನಡಿ.

ಕಾಮೆಂಟ್‌ಗಳಿಲ್ಲ: