ಗುರುವಾರ, ಜೂನ್ 9, 2016

ಚಡ್ಡಿ ಎಂಬ ಬಾಲ್ಯವೂ, ಪ್ಯಾಂಟ್ ಎಂಬ ಯೌವನವೂ

ಜೂನ್ 9, 2016ರ ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ

ಬಸವನಹುಳುವಿನಂತೆ ತೆವಳುವ ಪ್ರೈಮರಿ ಹೈಸ್ಕೂಲು ದಿನಗಳೆಲ್ಲ ಸರಸರನೆ ಸರಿದುಹೋಗಿ ಕಾಲೇಜು ಮೆಟ್ಟಿಲು ಹತ್ತುವ ಮುಹೂರ್ತ ಯಥಾಶೀಘ್ರ ಕೂಡಿಬರಲಿ ದೇವರೇ ಎಂದು ನಿತ್ಯವೂ ಬೇಡಿಕೊಳ್ಳುವುದಕ್ಕೆ ನಮಗೆ ಮೂರು ದೊಡ್ಡ ಕಾರಣಗಳಿದ್ದವು. ಮೊದಲನೆಯದು, ಬೆನ್ನಿಗೆ ಮಣಭಾರದ ಚೀಲ ನೇತುಹಾಕಿಕೊಂಡು ಒಂಟೆಗಳಂತೆ ಓಡಾಡುವ ಬದಲು ಎರಡೇ ಎರಡು ಪುಸ್ತಕಗಳನ್ನು ಕೈಯಲ್ಲಿ ಹಿಡಿದುಕೊಂಡು ಸ್ಕೂಲ್ ಹುಡುಗರೆದುರು ಸ್ಟೈಲಾಗಿ ಪೋಸು ಕೊಡಬಹುದು; ಎರಡನೆಯದು, ಚಪ್ಪಲಿಯೂ ಇಲ್ಲದೆ ಬರಿಗಾಲಲ್ಲಿ ಮೈಲುಗಟ್ಟಲೆ ನಡೆಯುವ ಬದಲು ಟ್ರಿನ್ ಟ್ರಿನ್ ಶಬ್ದ ಮಾಡಿಕೊಂಡು ಬೈಸಿಕಲ್ ಮೇಲೆ ರೊಂಯ್ಯನೆ ವಾಯುವೇಗದಲ್ಲಿ ವಿಹರಿಸಬಹುದು; ಮೂರನೆಯದು, ಜೋರಾಗಿ ಗಾಳಿ ಬೀಸಿದರೂ ಧೊಪ್ಪೆಂದು ಕೆಳಗೆ ಬೀಳಬಹುದಾಗಿದ್ದ ಖಾಕಿ ಚಡ್ಡಿಯ ಬದಲಾಗಿ ಉದ್ದುದ್ದನೆಯ ಪ್ಯಾಂಟ್ ಹಾಕಿಕೊಂಡು ಯಾವ ಆಫೀಸರುಗಳಿಗೂ ಕಮ್ಮಿಯಿಲ್ಲದಂತೆ ನಮ್ಮೂರಿನ ಕಿರುದಾರಿಗಳಲ್ಲಿ ಗತ್ತಿನಿಂದ ಹೆಜ್ಜೆ ಹಾಕಬಹುದು.

ಹಗಲು ಇರುಳು ಎಂಬ ಬೇಧವಿಲ್ಲದೆ ಬೇಕಾದ ಹಾಗೆಲ್ಲ ಬೀಳುತ್ತಿದ್ದ ಈ ಕನಸುಗಳಿಗೆ ಕಾರಣ ನಮ್ಮೂರಿನ ಚರಿತ್ರೆಯಲ್ಲೇ ಮೊದಲ ಬಾರಿಗೆ ಹೈಸ್ಕೂಲು ಮುಗಿಸಿ ಕಾಲೇಜು ಸೇರಿದ್ದ ಒಂದಿಬ್ಬರು ಹುಡುಗ ಹುಡುಗಿಯರು. ನಮಗಿಂತ ತಡವಾಗಿ ತಮ್ಮ ಮನೆಗಳಿಂದ ಹೊರಟರೂ ನಮಗಿಂತ ಮೊದಲೇ ಕಾಲೇಜು ಬಿಟ್ಟು ವಾಪಸಾಗುತ್ತಿದ್ದ ಈ ಮಹನೀಯರುಗಳು ನಮಗೆಲ್ಲ ಅತ್ಯಂತ ಕುತೂಹಲದ ಜೀವಿಗಳಾಗಿದ್ದರು. ಅದರಲ್ಲೂ ಅವರ ಮೇಲಿದ್ದ ವಿಶೇಷ ಗೌರವಾದರಗಳಿಗೆ ಕಾರಣ ಅವರು ತೊಡುತ್ತಿದ್ದ ಪ್ಯಾಂಟ್ ಶರ್ಟ್, ಹುಡುಗಿಯರಾದರೆ ಚೂಡಿದಾರ್ ಇಲ್ಲವೇ ಚೆಂದದ ಯೂನಿಫಾರ್ಮ್, ಮತ್ತು ಬ್ಯಾಗಿನ ಹಂಗಿಲ್ಲದೆ ಬರಿಗೈಲಿ ಅವಚಿಕೊಂಡು ಹೋಗುತ್ತಿದ್ದ ಎರಡೋ ಮೂರೋ ಪುಸ್ತಕಗಳು.

ಅಂತೂ ಕಾಲೇಜಿಗೆ ಸೇರುವ ಕಾಲ ಬಂತೇ ಬಂತು. ಅದು ಬಹುನಿರೀಕ್ಷಿತ ಪ್ಯಾಂಟ್ ಭಾಗ್ಯ ಯೋಜನೆ ಜಾರಿಗೊಳ್ಳುವ ಸಮಯ. ಬೂದುಬಣ್ಣದ ಪ್ಯಾಂಟು, ಬೆಳ್ಳನೆಯ ಶರ್ಟೇ ಯೂನಿಫಾರ್ಮ್. ಅದನ್ನು ಹೊಲಿಸಿಕೊಳ್ಳಲು ಊರಾಚೆ ಇರುವ ಟೈಲರ್ ಎಂಬ ಅಪರೂಪದ ವ್ಯಕ್ತಿಯ ಬಳಿಗೆ ಮರುದಿನ ಹೋಗುವುದೆಂದು ಯಾವತ್ತು ನಿಗದಿಯಾಯಿತೋ ಅಲ್ಲಿಂದ ಮತ್ತೆ ಪುನಃ ಕನಸುಗಳ ಮೆರವಣಿಗೆ ಆರಂಭವಾಗಿತ್ತು. ಇಡೀ ಊರಿಗೇ ಅತ್ಯಂತ ಬೇಡಿಕೆಯ ವ್ಯಕ್ತಿಯಾಗಿದ್ದ ನಮ್ಮ ಟೈಲರ್ ಬಾಬು ಯೂನಿಫಾರ್ಮ್ ಹೊಲಿದು ಕೊಡಲು ಏನಿಲ್ಲವೆಂದರೂ ಐದು ಬಾರಿ ಓಡಾಡಿಸಿದ್ದ. ಆದರೂ ಅವನ ಅಂಗಡಿಗೆ ಸ್ನೇಹಿತರ ಜತೆ ಭೇಟಿ ಕೊಡುವುದು ಆಪ್ಯಾಯಮಾನ ವಿಚಾರವಾಗಿತ್ತು. ಆತ ಯೂನಿಫಾರ್ಮ್ ಕೊಡದೇ ಹೋದರೂ ಬೇರೆಯವರಿಗಾಗಿ ಹೊಲಿದು ಅಂಗಡಿಯೆದುರು ನೇತುಹಾಕಿದ್ದ ಗರಿಗರಿ ಪ್ಯಾಂಟ್ ಶರ್ಟ್‌ಗಳನ್ನು ನಮ್ಮದೇ ಎಂಬಂತೆ ಹತ್ತಾರು ನಿಮಿಷ ನೋಡಿ ಕಣ್ತುಂಬಿಕೊಂಡು ಇನ್ನೊಂದು ವಾರ ಕಳೆದರೆ ಇಂಥದ್ದನ್ನು ನಾವೂ ಏರಿಸಿಕೊಂಡು ಸಂಭ್ರಮದಿಂದ ಓಡಾಡಬಹುದೆಂದು ಕನಸು ಕಾಣುತ್ತಾ ವಾಪಸ್ ಹೆಜ್ಜೆ ಹಾಕುವುದು ನಡೆದೇ ಇತ್ತು.

ಕಾಲೇಜು ಆರಂಭದ ಮುನ್ನಾದಿನ ಸಂಜೆ ಯೌವನವೇ ಮೈವೆತ್ತು ಬಂದ ಹಾಗೆ ಪ್ಯಾಂಟ್ ಶರ್ಟ್ ಮನೆಗೆ ಬಂದಿತ್ತು. ಆ ಕಟ್ಟನ್ನು ಲಗುಬಗೆಯಿಂದ ಬಿಚ್ಚಿ ಹೊಸಾ ಇಸ್ತ್ರಿಯಿಂದ ಮಿರುಗುವ ಬಟ್ಟೆಯನ್ನು ನಿಧಾನವಾಗಿ ಸವರಿ, ಆಘ್ರಾಣಿಸಿ, ಎರಡೆರಡು ಬಾರಿ ಹಾಕಿ ತೆಗೆದು ಅದು ಎಲ್ಲ ರೀತಿಯಿಂದಲೂ ಸರಿಯಾಗಿದೆ ಎಂಬುದನ್ನು ಖಚಿತಪಡಿಸಿಕೊಂಡು ಮನೆಮಂದಿಯೆದುರೆಲ್ಲ ಪೆರೇಡ್ ಮಾಡಿದ ಮೇಲೆಯೇ ಮನಸ್ಸಿಗೆ ಸಮಾಧಾನ. ಆದರೂ ಬೆಳಗಾಗುವುದಕ್ಕೆ ಇನ್ನೂ ತಿಂಗಳುಗಟ್ಟಲೆ ಕಾಯಬೇಕೋ ಎಂಬ ತಹತಹ.

ಕಾಲೇಜು ಆರಂಭದ ಒಂದೆರಡು ವಾರದವರೆಗೂ ಇದೇ ಗುಂಗು. ಬಹುತೇಕ ಹುಡುಗರೂ ಅದೇ ಮೊದಲ ಬಾರಿ ಪ್ಯಾಂಟ್ ಏರಿಸಿಕೊಂಡವರಾದರೆ, ಬಹುತೇಕ ಹುಡುಗಿಯರೂ ಅದೇ ಮೊದಲ ಬಾರಿಗೆ ಚೂಡಿದಾರ್ ತೊಟ್ಟಿದ್ದಿರಬೇಕು. ಪ್ಯಾಂಟ್ ಶರ್ಟ್ ಹಾಕಿದ ದೆಸೆಯಿಂದಲೇ ನಾವೆಲ್ಲ ಏಕಾಏಕಿ ಯುವಕರಾಗಿಬಿಟ್ಟಿದ್ದರಿಂದ ಸುತ್ತಲಿನ ಜಗತ್ತೆಲ್ಲ ವರ್ಣಮಯವಾಗಿ ಹೊಸಹೊಸ ಕನಸುಗಳು ಥಟ್ಟನೆ ಹೊರಗಿಣುಕಲಾರಂಭಿಸಿದ್ದವು. ಹುಡುಗರೆಲ್ಲ ಹೈಸ್ಕೂಲಿನ ಸಣ್ಣಮಟ್ಟಿನ ನಾಚಿಕೆಯ ಪೊರೆಯನ್ನು ಕಳಚಿಕೊಂಡು ಅಕ್ಕಪಕ್ಕದ ಡೆಸ್ಕುಗಳತ್ತ ವಾರೆಗಣ್ಣಿನಲ್ಲಿ ನೋಡಬಲ್ಲಷ್ಟು ಧೈರ್ಯವನ್ನು ಹೊಂದುವುದಕ್ಕೂ, ಹುಡುಗಿಯರು ಇನ್ನೂ ಒಂದಿಷ್ಟು ಹೆಚ್ಚೇ ನಾಚಿಕೆ ಹಾಗೂ ಬಿಂಕವನ್ನು ಆವಾಹಿಸಿಕೊಂಡು ಸಣ್ಣಸಣ್ಣ ಗುಂಪುಗಳಲ್ಲಿ ಮಂತ್ರಾಲೋಚನೆ ನಡೆಸುವುದಕ್ಕೂ ಈ ಡ್ರೆಸ್‌ಕೋಡಿನಲ್ಲಾದ ವಿಶೇಷ ಬದಲಾವಣೆಯೇ ಪ್ರಮುಖ ಕಾರಣವಿದ್ದೀತೆಂದು ನನ್ನ ಅನುಮಾನ.

ಆದರೆ ಪ್ರೈಮರಿ-ಹೈಸ್ಕೂಲಿನಿಂದ ಕಾಲೇಜಿಗಾದ ಪ್ರಮೋಶನ್ನಿನಿಂದಾಗಿ ಅನೇಕಾನೇಕ ಸೌಲಭ್ಯಗಳು ನಮಗರಿವಿಲ್ಲದಂತೆಯೇ ಬಿಟ್ಟುಹೋಗಿದ್ದವು. ಕಾಲೇಜಿನ ಕೃಪೆಯಿಂದ ’ದೊಡ್ಡ ಹುಡುಗರಾಗಿದ್ದ’ ನಮಗೆ ಪ್ರೈಮರಿ ಸ್ಕೂಲಿನ ಹುಡುಗರ ಸ್ವಾತಂತ್ರ್ಯ ಇರಲಿಲ್ಲ. ಮೂಗಲ್ಲೂ ಬಾಯಲ್ಲೂ ತಿಂಡಿ ಮುಕ್ಕಿ ಎರಡು ಮೈಲಿ ದೂರ ದಾಪುಗಾಲು ಹಾಕಿ ಮತ್ತೆ ಹನ್ನೆರಡು ಮೈಲಿ ಕೆಂಪು ಬಸ್ಸೆಂಬ ಡಕೋಟಾ ಎಕ್ಸ್‌ಪ್ರೆಸ್‌ನ ಮೆಟ್ಟಿಲ ಮೇಲೆ ನೇತಾಡಿಕೊಂಡು ಪ್ರಯಾಣ ಮಾಡಿ ಮತ್ತೊಂದು ಕಿಲೋಮೀಟರ್ ನಡೆದು ಕಾಲೇಜು ಸೇರುವ ಹೊತ್ತಿಗೆ ತಾರುಣ್ಯದಲ್ಲೇ ಮುದುಕರಾದ ಅನುಭವ. ದೂರದ ಬೆಟ್ಟ ಕಣ್ಣಿಗೆ ನುಣ್ಣಗೆ ಎಂಬ ಮೇಷ್ಟ್ರ ಗಾದೆ ಅರ್ಥವಾಗತೊಡಗಿದ್ದೂ ಆವಾಗಲೇ.

ಮೊದಲೇ ಮಜಾ ಇತ್ತು ಕಣ್ರೋ ಎಂದು ಹುಡುಗರು ಮಾತಾಡಿಕೊಳ್ಳುತ್ತಿದ್ದುದರ ಹಿಂದೆ ನೂರಾರು ಸುಂದರ ನೆನಪುಗಳಿದ್ದವು: ಕಾಡಿನ ನಡುವೆ ಅಲ್ಲೊಂದು ಇಲ್ಲೊಂದು ಮನೆಗಳ ಮಕ್ಕಳೆಲ್ಲ ಒಬ್ಬೊಬ್ಬರಾಗಿ ಕಾಲುಹಾದಿ ಸೇರಿ ಮಣಭಾರದ ಚೀಲ ಹೊತ್ತು ಕಿಲೋಮೀಟರ್‌ಗಟ್ಟಲೆ ಬಿರಬಿರನೆ ಹಾಕುವ ಬರಿಗಾಲ ಹೆಜ್ಜೆ, ಕವಲು ಹಾದಿಗಳು ಸೇರುವಲ್ಲಿ ಸ್ನೇಹಿತರು ಇನ್ನೂ ಬಂದಿಲ್ಲದಿದ್ದರೆ ಮುಂದಕ್ಕೆ ಹೋದವರ ಗುರುತಿಗಾಗಿ ಅಲ್ಲೊಂದು ಮರಳಿನ ಸರ್ಕಲ್ ಮತ್ತು ಅದರೊಳಗೆ ಒಂದು ಹಿಡಿ ಹಸಿರುಸೊಪ್ಪು, ಶನಿವಾರದ ಅರ್ಧ ದಿನ ಕಾಡಿನಲ್ಲೇ ಮಾಡುವ ಪಿಕ್ನಿಕ್, ನಗರದ ಫಾಸ್ಟ್‌ಫುಡ್‌ಗಳನ್ನು ನಿವಾಳಿಸಿ ಎಸೆಯಬಲ್ಲ ನೆಲ್ಲಿ, ನೇರಳೆ, ಕೇಪುಳ, ಸರೊಳಿ, ಕುಂಟಾಲ, ಮಾವು, ಅಬ್ಳುಕ, ಕೊಟ್ಟೆ ಇನ್ನಿತರ ತರಹೇವಾರಿ ಹೆಸರುಗಳ ರಂಗುರಂಗಿನ ತಾಜಾ ಹಣ್ಣುಗಳು, ಘಮ್ಮೆನ್ನುವ ಹೂಗಳು...

ಧೋ ಎಂದು ಸುರಿವ ಆಷಾಢದ ಮಳೆಗೆ ದಾರಿಗುಂಟ ಹರಿವ ತಂಪು ನೀರಲ್ಲಿ ತಳಂಪಳಂ ಹೆಜ್ಜೆಹಾಕುತ್ತಾ ಬೇಕುಬೇಕೆಂದೇ ಮೈಯೆಲ್ಲ ಒದ್ದೆಯಾಗಿಸಿಕೊಂಡು ಮುಸ್ಸಂಜೆ ಹೊತ್ತು ಮನೆಗೆ ತಲುಪಿ ಅದೇ ಒದ್ದೆ ಮೈಯಲ್ಲಿ ಒಲೆಯೆದುರು ಕುಳಿತು ಅಮ್ಮ ಸುಟ್ಟು ಕೊಡುವ ಹಲಸಿನ ಹಪ್ಪಳ ಮೆಲ್ಲುತ್ತಾ ಬಿಸಿಬಿಸಿ ಕಾಫಿ ಹೀರುವ ಸೌಲಭ್ಯವಂತೂ ಕಾಲೇಜು ದಿನಗಳಲ್ಲಿ ಬರೀ ನೆನಪು ಮಾತ್ರ.

ಕಾಲವೇ ಕೇಳಿಸುತ್ತಿದೆಯಾ?

ಕಾಮೆಂಟ್‌ಗಳಿಲ್ಲ: