ಶುಕ್ರವಾರ, ಮೇ 13, 2016

ಸಮನ್ವಯತೆಯೇ ಸಂಸ್ಕೃತಿಯ ಅಂತರ್ಯ

ಏಪ್ರಿಲ್ 16-22, 2016 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಯಂ ಶೈವಾಃ ಸಮುಪಾಸತೇ ಶಿವ ಇತಿ ಬ್ರಹ್ಮೇತಿ ವೇದಾಂತಿನಃ |
ಬೌದ್ಧಾ ಬುದ್ಧ ಇತಿ ಪ್ರಮಾಣ ಪಟವಃ ಕರ್ತೇತಿ ನೈಯಾಯಿಕಾಃ ||
ಅರ್ಹನ್ನಿತ್ಯಥ ಜೈನ ಶಾಸನರತಾಃ ಕರ್ಮೇತಿ ಮೀಮಾಂಸಕಾಃ |
ಸೋಯಂ ವಿದಧಾತು ವಾಂಛಿತಫಲಂ ತ್ರೈಲೋಕ್ಯನಾಥೋ ಹರಿಃ ||
ಹನ್ನೆರಡನೇ ಶತಮಾನದ ಹೊಯ್ಸಳ ಶಾಸನವೊಂದರಲ್ಲಿ ಉಲ್ಲೇಖಿತವಾಗಿರುವ ಪ್ರಾರ್ಥನಾಶ್ಲೋಕವಿದು. “ಶೈವರು ಶಿವನೆಂದು ಯಾರನ್ನು ಉಪಾಸಿಸುವರೋ, ವೇದಾಂತಿಗಳು ಬ್ರಹ್ಮವೆಂದು ಯಾರನ್ನು ನಂಬುವರೋ, ವೈಚಾರಿಕಶ್ರೇಷ್ಠರಾದ ನೈಯಾಯಿಕರು ಯಾರನ್ನು ಕರ್ತೃವೆನ್ನುವರೋ, ಬೌದ್ಧರು ಯಾರನ್ನು ಬುದ್ಧನೆಂದು ಆರಾಧಿಸುವರೋ, ಜೈನಶಾಸನದ ಅನುಯಾಯಿಗಳು ಅರ್ಹತ್ ಎಂದು ನಿತ್ಯವೂ ಯಾರನ್ನು ನಂಬುವರೋ, ಮೀಮಾಂಸಕರು ಕರ್ಮವೆಂದು ಯಾರನ್ನು ಉಪಾಸನೆಗೈಯುವರೋ ಅಂತಹ ಮೂರು ಲೋಕದ ಒಡೆಯನಾಗಿರುವ ಶ್ರೀಹರಿಯು ನಿಮ್ಮ ಇಷ್ಟಫಲಗಳನ್ನು ಕರುಣಿಸಲಿ” ಎಂಬ ಭಾವಾರ್ಥದ ಈ ಶ್ಲೋಕ ಇಡೀ ಭಾರತೀಯ ಸಂಸ್ಕೃತಿಯ ಸಮನ್ವಯ ಗುಣಕ್ಕೆ ಹಿಡಿದ ಕೈಗನ್ನಡಿಯಂತಿದೆ.

ಎಲ್ಲರನ್ನೂ ಎಲ್ಲವನ್ನೂ ಗೌರವದಿಂದ, ಸಂತುಲಿತ ಮನಸ್ಸಿನಿಂದ ಕಂಡ ಮೇಲ್ಮೆ ಭಾರತೀಯ ಸಂಸ್ಕೃತಿಯದ್ದು. ಅದು ಅಧ್ಯಾತ್ಮದ ತೊಟ್ಟಿಲಾಗಿದ್ದಂತೆಯೇ ಎಲ್ಲ ಬಗೆಯ ನಂಬಿಕೆ-ನಡವಳಿಕೆ, ಆಚಾರ-ವಿಚಾರ, ಉಡುಗೆ-ತೊಡುಗೆ, ಆಹಾರ ಪದ್ಧತಿ, ಜೀವನಶೈಲಿಗಳ ತಾಯಿಯೂ ಆಗಿ ಸಾವಿರಾರು ವರ್ಷಗಳಿಂದ ಸಾಗಿ ಬಂದಿದೆ. ಅದು ಹತ್ತು ಹಲವು ಮತ-ಪಂಥಗಳ ಪ್ರಯೋಗಶಾಲೆ. ಈ ಭಾರತೀಯ ಪರಂಪರೆ ಯಾವುದೋ ಒಬ್ಬ ಚಕ್ರವರ್ತಿ, ಒಬ್ಬ ಮಹರ್ಷಿ ಅಥವಾ ಒಬ್ಬ ಪ್ರವಾದಿಯ ಕೊಡುಗೆ ಅಲ್ಲ. ಯಾವುದೋ ಒಂದು ವರ್ಗದ ಸೊತ್ತೂ ಅಲ್ಲ. ಅದಕ್ಕೇ ವೈವಿಧ್ಯತೆ ನಮ್ಮ ಸಂಸ್ಕøತಿಯ ಪ್ರಾಥಮಿಕ ಲಕ್ಷಣ. ವೈವಿಧ್ಯತೆಯನ್ನೂ ಸಮನ್ವಯತೆಯನ್ನೂ ಏಕಕಾಲಕ್ಕೆ ಪ್ರದರ್ಶಿಸಬಲ್ಲ ತನ್ನ ಸಾಮಥ್ರ್ಯದಿಂದಾಗಿಯೇ ಭಾರತೀಯ ಪರಂಪರೆಗೆ ವಿಶ್ವದಲ್ಲೇ ಅತ್ಯಂತ ಶ್ರೇಷ್ಠ ಸ್ಥಾನ ಲಭಿಸಿರುವುದು.

ಜನರು ಎಷ್ಟೇ ಮತಗಳನ್ನು ಹೊಂದಿರಲಿ, ಎಷ್ಟೇ ದೇವರುಗಳನ್ನು ಪೂಜಿಸಲಿ ಒಟ್ಟಾರೆ ಸಮಾಜ ಅದರ ಬಗ್ಗೆ ಅಸಹಿಷ್ಣುವಾಗಿದ್ದಿಲ್ಲ. ಮೂಲದಲ್ಲಿ ಎಲ್ಲವೂ ಒಂದೇ ಎಂಬ ಭಾವವೇ ಇದರ ಹಿಂದಿನ ರಹಸ್ಯ. ‘ಆಕಾಶಾತ್ಪತಿತಂ ತೋಯಂ ಯಥಾಗಚ್ಛತಿ ಸಾಗರಂ| ಸರ್ವದೇವ ಸಮಸ್ಕಾರಃ ಕೇಶವಂ ಪ್ರತಿಗಚ್ಛತಿ|’ ಎಂಬುದು ಹಿರಿಯರು ಅರಿತಿದ್ದ ಸತ್ಯ. ಆಕಾಶದಿಂದ ಬೀಳುವ ನೀರು ಹೇಗೆ ಸಮುದ್ರವನ್ನು ಸೇರುತ್ತದೆಯೋ ಹಾಗೆಯೇ ಯಾವ ದೇವರಿಗೆ ನಮಸ್ಕರಿಸಿದರೂ ಅದು ಭಗವಂತನಿಗೆ ತಲುಪುತ್ತದೆ ಎಂಬ ಉದಾರ ಮನಸ್ಥಿತಿಯೇ ನಮ್ಮ ಸಂಸ್ಕøತಿಯ ಅಂತರ್ಯ.

ಈ ಸಮನ್ವಯದ ಹತ್ತು ಹಲವು ಉದಾಹರಣೆಗಳು ಪುರಾಣೇತಿಹಾಸ ಕಾಲದಿಂದಲೂ ನಮ್ಮ ನೆಲದಲ್ಲಿ ಹೇರಳವಾಗಿ ಸಿಗುತ್ತವೆ. ಕರ್ನಾಟಕವನ್ನಾಳಿದ ರಾಷ್ಟ್ರಕೂಟರು, ಹೊಯ್ಸಳರು ಜೈನ-ವೈಷ್ಣವ ಸಮನ್ವಯವನ್ನು ಸಾರಿದವರಾದರೆ, ಚಾಲುಕ್ಯರು ಮತ್ತು ವಿಜಯನಗರದ ಅರಸರು ಶೈವ-ವೈಷ್ಣವ ತತ್ವವನ್ನು ಜತೆಯಾಗಿ ಗೌರವಿಸಿದವರು. ‘ಅಮುಕ್ತಮಾಲ್ಯದ’ವನ್ನು ರಚಿಸಿದ ಪ್ರಸಿದ್ಧ ರಾಜ ಕೃಷ್ಣದೇವರಾಯ ಶ್ರೀವೈಷ್ಣವ ಪಂಥದ ತಾತಾಚಾರ್ಯರನ್ನೂ, ಮಾಧ್ವ ಪಂಥದ ವ್ಯಾಸರಾಯರನ್ನೂ ಏಕಕಾಲಕ್ಕೆ ಗುರುಗಳಾಗಿ ಪಡೆದವನು. ವೈಯುಕ್ತಿಕವಾಗಿ ಶ್ರೀನಿವಾಸನ ಭಕ್ತನಾಗಿದ್ದ ಕೃಷ್ಣದೇವರಾಯ ಹಂಪಿಯ ವಿರೂಪಾಕ್ಷನನಿಗೂ ತಲೆಬಾಗಿದವನು; ವಿಜಯವಿಠ್ಠಲ ದೇವಾಲಯವನ್ನೂ ಕಟ್ಟಿಸಿದವನು.

ಬುದ್ಧನನ್ನೂ ಆದಿ ತೀರ್ಥಂಕರನನ್ನೂ ವಿಷ್ಣುವಿನ ಅವತಾರವೆಂದೇ ಪೂಜಿಸುವ ನೆಲವಿದು. ಹಿಂದೂ-ಮುಸಲ್ಮಾನರಿಬ್ಬರೂ ಸಂದರ್ಶಿಸುವ ನೂರಾರು ದೇವಸ್ಥಾನಗಳು, ದರ್ಗಾಗಳು ಭಾರತದಾದ್ಯಂತ ಅಲ್ಲಲ್ಲಿ ಸಿಗುತ್ತವೆ. ಗಣೇಶ ಚತುರ್ಥಿ, ಕೃಷ್ಣ ಜನ್ಮಾಷ್ಟಮಿಗಳಂತಹ ಹಬ್ಬಗಳಲ್ಲಿ ಮುಸಲ್ಮಾನರೂ, ಮೊಹರಂನಂತಹ ಹಬ್ಬಗಳಲ್ಲಿ ಹಿಂದೂಗಳೂ ಭಾಗವಹಿಸುವುದು ಹೊಸದೇನಲ್ಲ. ಬೆಂಗಳೂರಿನ ಪ್ರಸಿದ್ಧ ಕರಗ ಮಸ್ತಾನ್ ಸಾಬಿ ದರ್ಗಾಕ್ಕೂ ಹೋಗಿ ಪೂಜೆ ಸಲ್ಲಿಸಿ ಬರುವ ಕ್ರಮವಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಮೂರು ಮತಗಳ ಸಂಗಮಸ್ಥಾನ. ಅಲ್ಲಿನ ಆಡಳಿತದ ಹೊಣೆ ಜೈನರದ್ದು; ಪೂಜಿಸಲ್ಪಡುವ ದೇವರು ಮಂಜುನಾಥ, ಅಂದರೆ ಶಿವ; ಪೂಜೆಯ ಜವಾಬ್ದಾರಿ ಹೊಂದಿರುವವರು ವೈಷ್ಣವರು. ಪ್ರಸಿದ್ಧ ಯಾತ್ರಾಸ್ಥಳ ಮಂತ್ರಾಲಯದ ದೇವಾಲಯ ಶಿಖರದಲ್ಲಿ ಮುಸ್ಲಿಂ ವಾಸ್ತುಶಿಲ್ಪವಿದೆ.

ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿರುವ ಸಂಗೀತ-ಸಾಹಿತ್ಯ ಕ್ಷೇತ್ರದಲ್ಲಂತೂ ಈ ಸಮನ್ವಯತೆ ಹೇರಳವಾಗಿದೆ.  ನಮ್ಮ ಹಿಂದೂಸ್ತಾನಿ ಸಂಗೀತದ ಶ್ರೀಮಂತಿಕೆಯ ಹಿಂದೆ ಮುಸ್ಲಿಂ ಕಲಾವಿದರ ಕೊಡುಗೆ ಅಪಾರ. ದಾಸಸಾಹಿತ್ಯವನ್ನು ಜನಪ್ರಿಯಗೊಳಿಸಿದವರಲ್ಲಿ ಫಯಾಜ್ ಖಾನ್, ಹುಸೇನ್ ಸಾಬರಂಥ ಪ್ರಮುಖರಿದ್ದಾರೆ. ಅನೇಕ ಕೀರ್ತನೆಗಳನ್ನು ರಚಿಸಿರುವ ಬಡೇ ಸಾಬ್ ಅವರ ಅಂಕಿತನಾಮ ‘ಶ್ರೀರಾಮ’. ಪರ್ವೀನಾ ಸುಲ್ತಾನಾ, ಅಲ್ಲಾದಿಯಾ ಖಾನ್ ಅವರ ಕೊಡುಗೆಗಳನ್ನಾಗಲೀ, ಶಹನಾಯ್ ಮಾಂತ್ರಿಕ ಬಿಸ್ಮಿಲ್ಲಾ ಖಾನ್ ಅವರ ಕೊಡುಗೆಗಳನ್ನಾಗಲೀ ನಾವು ಹೇಗೆ ಮರೆತೇವು? ಗೋವಿಂದ ಭಟ್ಟರನ್ನು ಗುರುಗಳನ್ನಾಗಿ ಪಡೆದ ಸಂತ ಶಿಶುನಾಳ ಷರೀಫರನ್ನಾಗಲೀ, ಸಮನ್ವಯತೆಯೇ ಮೂರ್ತಿವೆತ್ತ ಕಬೀರ, ಸಮರ್ಥ ರಾಮದಾಸರು, ಕನಕದಾಸರನ್ನಾಗಲೀ ನಾವು ಹೇಗೆ ಮರೆತೇವು?

ಸಂಸ್ಕೃತಿಯೊಳಗಿನ ಸಮನ್ವಯತೆಯ ಬೀಜ ವೇದಗಳ ಕಾಲದಿಂದಲೂ ಜೀವಂತವಾಗಿದೆ. ಋಗ್ವೇದದ ಒಂದು ಮಂತ್ರ ಈ ಮಾತನ್ನು ಪುಷ್ಟೀಕರಿಸುತ್ತದೆ:
ತೇ ಅಜ್ಯೇಷ್ಠಾ ಅಕನಿಷ್ಠಾಸ ಉದ್ಭಿದೋ |
ಮಧ್ಯಮಾಸೋ ಮಹಸಾ ವಿವಾವೃಧುಃ ||
ಸುಜಾತಾಸೋ ಜನುಷಾ ಪೃಶ್ನಿಮಾತರೋ |
ದಿವೋ ಮರ್ಯಾ ಆ ನೋ ಅಚ್ಛಾ ಜಿಗಾತನ ||

‘ಮಾನವರಲ್ಲಿ ಯಾರೂ ಜನ್ಮತಃ ಜ್ಯೇಷ್ಠರೂ ಅಲ್ಲ, ಕನಿಷ್ಠರೂ ಅಲ್ಲ, ಮಧ್ಯಮರೂ ಅಲ್ಲ. ಎಲ್ಲರೂ ಉತ್ತಮರೇ.  ತಮ್ಮ ತಮ್ಮ ಶಕ್ತಿಯಿಂದ ಮೇಲೇರಬಲ್ಲವರಾಗಿದ್ದಾರೆ’ ಎಂಬ ಈ ಮಾತು ಎಲ್ಲಾ ಕಾಲಕ್ಕೂ ಸಮನ್ವಯ ತತ್ವವನ್ನು ಎತ್ತಿಹಿಡಿಯಬಲ್ಲ ಸಾಮರ್ಥ್ಯವುಳ್ಳದ್ದು.

ಯಜುರ್ವೇದದ ಇನ್ನೊಂದು ಮಂತ್ರವೂ ಇದೇ ಭಾವವನ್ನು ಸ್ಫುರಿಸುತ್ತದೆ:
ಯಸ್ತು ಸರ್ವಾಣಿ ಭೂತಾನ್ಯಾತ್ಮನ್ಯೇವಾನುಪಶ್ಯತಿ |
ಸರ್ವಭೂತೇಶು ಚಾತ್ಮಾನಂ ತತೋ ನ ವಿ ಚಿಕಿತ್ಸತಿ ||
‘ಯಾರು ಸಮಸ್ತ ಪ್ರಾಣಿಗಳೂ ತಮ್ಮಂತೆಯೇ ಇಚ್ಛಾ-ದ್ವೇಷ-ಪ್ರಯತ್ನ-ಸುಖ-ದುಃಖಗಳನ್ನು ಹೊಂದಿದ ಆತ್ಮಗಳೇ ಎಂದು ಭಾವಿಸುವರೋ, ತಮ್ಮಂತೆಯೇ ಎಂದು ಕಂಡುಕೊಳ್ಳುವರೋ ಅವರು ಸಂದೇಹಗಳಿಗೆ ಸಿಲುಕುವುದಿಲ್ಲ’.
ವೇದಗಳ ಈ ಬಗೆಯ ಆಶಯ ನಿಜವಾಗಿಯೂ ಸಮಾಜದ ಬೇರುಗಳಿಗೆ ಇಳಿದರೆ ಸಮಾಜದಲ್ಲಿ ಅಸಮಾನತೆಯಾಗಲೀ ಅಸಹಿಷ್ಣುತೆಯಾಗಲೀ ಮೇಲುಕೀಳು ಭಾವವವಾಗಲೀ ನೆಲೆಗೊಳ್ಳುವುದಕ್ಕೆ ಅವಕಾಶವೇ ಇಲ್ಲ. ಇದುವೇ ನಮ್ಮ ಸಂಸ್ಕೃತಿಯ ಶ್ರೇಷ್ಠತೆ.

“ಸಂಸ್ಕೃತಿಗಳು ಏಕರೂಪಿ ರಚನೆಗಳಲ್ಲ. ಅವು ಪರಸ್ಪರ ಕುಡುಕೊಳುವಿಕೆಗಳಿಂದ ನಿರಂತರವಾಗಿ ಬೆಳೆಯುತ್ತವೆ. ಆದ್ದರಿಂದ ಸಂಸ್ಕೃತಿಗಳಲ್ಲಿ ಬಹುಮುಖತೆ ಸಾಮಾನ್ಯವಾಗಿರುತ್ತದೆ. ಭಾಷೆ, ಧರ್ಮ, ಆಚರಣೆ, ಸಂಪ್ರದಾಯ, ಭಿನ್ನ ಅನುಸಂಧಾನ, ಕಲೆ, ಆರ್ಥಿಕತೆ, ಲೋಕಗ್ರಹಿಕೆ, ನೋಟಕ್ರಮ ಇವೇ ಮೊದಲಾದವುಗಳ ಸಂಶ್ಲೇಷಿತ ರೂಪವೇ ಸಂಸ್ಕೃತಿ” ಎಂಬ ಮಾತು ಉಲ್ಲೇಖನೀಯ. ಬಹುಮುಖತೆಯೇ ಭಾರತೀಯ ಸಂಸ್ಕೃತಿಯ ಜೀವಾಳ. ವಿಭಿನ್ನ ಸಾಂಸ್ಕೃತಿಕ ನೆಲೆಗಳ ಈ ದೇಶದಲ್ಲಿ ಸಂಸ್ಕೃತಿ, ಪ್ರತಿಸಂಸ್ಕೃತಿ, ಉಪಸಂಸ್ಕೃತಿಗಳೆಲ್ಲ ಒಂದೇ ವಾಹಿನಿಗೆ ಸೇರಿಹೋಗಿವೆ. ಹಾಗಂತ ಇವು ಯಾವುದೋ ಒಂದು ಏಕರೂಪತೆಯತ್ತ ತುಡಿಯುವುದಿಲ್ಲ. ಏಕರೂಪತೆಯ ಬಯಕೆ ವೈವಿಧ್ಯತೆಗೆ ವಿನಾಶಕಾರಿ. ನಮ್ಮ ಕನ್ನಡ ಸಾಹಿತ್ಯವೂ ಏಕಸ್ತರೀಯ ನೆಲೆಯಿಂದ ಬಹಿಸ್ತರೀಯ ನೆಲೆಗಳ ಕಡೆಗೇ ಸಾಗಿಬಂದಿದೆ.

“ವಾಸ್ತವವಾಗಿ ಭಾರತೀಯ ಸಂಸ್ಕøತಿಯೆಂಬುದು ಪ್ರತ್ಯೇಕವಾಗಿ ಇಲ್ಲ. ಕರ್ನಾಟಕ ಸಂಸ್ಕೃತಿ, ತಮಿಳು ಸಂಸ್ಕೃತಿ, ತೆಲುಗು ಸಂಸ್ಕೃತಿ, ಮಹಾರಾಷ್ಟ್ರ ಸಂಸ್ಕೃತಿ ಇವೇ ಮೊದಲಾದ ಸದೃಶವೂ ಭಿನ್ನವೂ ಆದ ಸಂಸ್ಕೃತಿಗಳ ಸಮಷ್ಟಿ ರೂಪವೇ ಭಾರತೀಯ ಸಂಸ್ಕೃತಿ. ಈ ಬಿಡಿ ಸಂಸ್ಕೃತಿಗಳನ್ನು ಬೇರ್ಪಡಿಸಿ ಭಾರತೀಯ ಸಂಸ್ಕೃತಿ ಇಲ್ಲ. ಎಂದರೆ, ಭಾರತೀಯ ಸಂಸ್ಕೃತಿಯನ್ನು ಪ್ರತ್ಯೇಕವಾಗಿ ನೋಡಲು ಸಾಧ್ಯವಿಲ್ಲ. ಭಾರತದಲ್ಲಿ ಒಂದೊಂದು ಪ್ರಾಂತಕ್ಕೂ ವಿಶಿಷ್ಟ ಜೀವನ ವಿಧಾನವಿದೆ. ಆ ವಿಶಿಷ್ಟ ಸಂಸ್ಕೃತಿಯನ್ನು ಗಮನಿಸುವುದು, ಪ್ರೀತಿಸುವುದು, ಭಾರತೀಯ ಸಂಸ್ಕೃತಿಯನ್ನು ಪ್ರೀತಿಸಿದಂತೆಯೇ” ಎಂಬ ಡಾ. ಎಂ. ಚಿದಾನಂದಮೂರ್ತಿಯವರ ಮಾತು ಸಂಸ್ಕೃತಿ ಹಾಗೂ ಸಮನ್ವಯತೆಗಳ ಅಂತಃಸತ್ವವನ್ನು ತೆರೆದಿಡುತ್ತದೆ.

ಈಚಿನ ದಿನಗಳಲ್ಲಿ ಸಂಸ್ಕೃತಿಯ ಹೆಸರಿನಲ್ಲಿ ಸಂಘರ್ಷಗಳು ಹೆಚ್ಚುತ್ತಿರುವುದನ್ನು ನೋಡಿದರೆ ಈ ಬೆಳವಣಿಗೆಗಳ ಹಿಂದೆ ಇರುವವರ್ಯಾರೂ ನಮ್ಮ ಸಂಸ್ಕೃತಿಯ ನಿಜವಾದ ಸಾರವನ್ನು ಅರ್ಥ ಮಾಡಿಕೊಂಡಿಲ್ಲವೆಂದೇ ಅನಿಸುತ್ತದೆ. ವೈಚಾರಿಕ ಸಂಘರ್ಷಗಳು ಒಳ್ಳೆಯದು, ಆದರೆ ಅದು ವ್ಯಕ್ತಿಗತವಾದಾಗ ಇಡೀ ಸಮಾಜದ ಆರೋಗ್ಯ ಕೆಡುತ್ತದೆ, ಹಿಂಸೆ ತಾಂಡವವಾಡುತ್ತದೆ. ಇದು ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೇ ವ್ಯಾಪಿಸಿಕೊಂಡಿರುವ ಒಂದು ಸಾಂಕ್ರಾಮಿಕ ರೋಗ. ‘ಆನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ - ಶ್ರೇಷ್ಠ ವಿಚಾರಗಳು ಜಗತ್ತಿನ ಎಲ್ಲೆಡೆಯಿಂದಲೂ ಬರಲಿ - ಎನ್ನುವ ಋಗ್ವೇದವನ್ನು ಕೊಟ್ಟ ದೇಶಕ್ಕೆ ಜಗತ್ತಿಗೆ ಸಾಮರಸ್ಯದ ಪಾಠ ಹೇಳುವ ಜವಾಬ್ದಾರಿ ಇದೆ ಎಂಬುದನ್ನು ನಾವು ಮರೆಯಬಾರದು.

ಕಾಮೆಂಟ್‌ಗಳಿಲ್ಲ: