ಬುಧವಾರ, ಏಪ್ರಿಲ್ 17, 2024

ಪರ್ಸೆಂಟೇಜಿಗಿಂತ ಬದುಕು ದೊಡ್ಡದು

14 ಏಪ್ರಿಲ್‌ 2024ರ ʻಉದಯವಾಣಿʼ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ.

ಹಿರಿಯರೊಬ್ಬರು ಮುಖದ ತುಂಬ ನೋವು ಹೊತ್ತುಕೊಂಡು ಹೇಳುತ್ತಿದ್ದರು: ‘ಈ ರಿಸಲ್ಟುಗಳು
ಯಾಕಾದರೂ ಬರುತ್ತವೋ... ರಿಸಲ್ಟಿನ ಮರುದಿನ ಪತ್ರಿಕೆ ನೋಡಲು ಭಯ... ಯಾವ ಎಳೆಯ ಹುಡುಗರು ಏನು ಅನಾಹುತ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಓದುವ ಆತಂಕ...’ ಇದು ಅವರದೊಬ್ಬರದೇ ಭಯ ಅಲ್ಲ. ಪ್ರತಿವರ್ಷ ನೂರಾರು ಮಂದಿಯ ಎದೆಯಲ್ಲಿ ಹುಟ್ಟಿಕೊಳ್ಳುವ ನಡುಕ. ಫಲಿತಾಂಶದ ಮರುದಿನ ಏನು, ಪರೀಕ್ಷೆಯ ಮರುದಿನದಿಂದಲೇ ಇದು ಆರಂಭವಾಗುತ್ತದೆ. ಪರೀಕ್ಷೆ ಚೆನ್ನಾಗಿ ಮಾಡಿಲ್ಲ ಎಂದು ನೇಣಿಗೆ ತಲೆಯೊಡ್ಡುವ ಮಕ್ಕಳು, ಮರುದಿನ ಬರುವ ರಿಸಲ್ಟಿಗೆ ಹೆದರಿಯೇ ರೈಲುಹಳಿಗೆ ಬಲಿಯಾಗುವ ಮಕ್ಕಳು... ಇವರಿಗೆ ಫಲಿತಾಂಶದವರೆಗೆ ಕಾಯುವ ತಾಳ್ಮೆಯೇ ಇಲ್ಲ. ಫಲಿತಾಂಶವನ್ನು ಊಹಿಸಿಕೊಂಡೇ ಬದುಕನ್ನು ಮುಗಿಸುವ ಮಕ್ಕಳಿವರು.

ಜೀವನಕ್ಕಿಂತ ಪರೀಕ್ಷೆಯೇ ದೊಡ್ಡದು ಎಂದು ಭಾವಿಸಿರುವ ಮಕ್ಕಳ ಕತೆಯಿದು. ವಾಸ್ತವವಾಗಿ ಇದು ಮಕ್ಕಳ ಸಮಸ್ಯೆ ಅಲ್ಲ, ಅವರ ತಂದೆತಾಯಿಯರದು, ಹತ್ತಿರದ ಬಂಧುಗಳದು ಮತ್ತು ಸುತ್ತಲಿನ ಸಮಾಜದ್ದು. ಇವರೆಲ್ಲ ಸೇರಿ ನಿರ್ಮಿಸಿರುವ ದೊಡ್ಡದೊಂದು ವ್ಯೂಹವಿದು- ಎಸ್.ಎಸ್.ಎಲ್.ಸಿ. ಮತ್ತು ಪಿಯುಸಿಗಳೆಂಬ ಭೂತ. ಭವಿಷ್ಯದ ದೃಷ್ಟಿಯಿಂದ ಇವರೆಡೂ ಹಂತಗಳು ಪ್ರಮುಖ ಎಂಬುದೇನೋ ನಿಜ. ಮುಂದೇನು ಓದಬೇಕು ಎಂಬ ವಿಚಾರದಲ್ಲಿ ನಿರ್ಧಾರ ತೆಗೆದುಕೊಳ್ಳುವ ದೃಷ್ಟಿಯಿಂದ ಇವು ಪ್ರಮುಖವೇ ಹೊರತು ಇಲ್ಲಿ ಒಂದೆರಡು ಪರ್ಸೆಂಟೇಜು ಕಡಿಮೆಯಾದರೆ ಬದುಕೇ ಮುಗಿಯಿತು ಎಂದು ಭಾವಿಸಬೇಕಾಗಿಲ್ಲ.

ಆದರೆ ನಮ್ಮ ಸಮಾಜ ಈ ಎರಡು ಪರೀಕ್ಷೆಗಳನ್ನು ಪ್ರತಿಷ್ಠೆಯ ಪ್ರಶ್ನೆಯನ್ನಾಗಿ ಮಾಡಿಕೊಂಡಿದೆ ಅಥವಾ ಮಾಡಿಕೊಳ್ಳುವಂತೆ ನೋಡಿಕೊಳ್ಳಲಾಗಿದೆ. ಮೂಲತಃ ಇದರ ಹಿಂದೆ ಇರುವುದು ಹಣದ ಬೆನ್ನುಹತ್ತಿರುವ ಖಾಸಗಿ ಶಿಕ್ಷಣ ಸಂಸ್ಥೆಗಳ ಷಡ್ಯಂತ್ರವೇ ಹೊರತು ಇನ್ನೇನೂ ಅಲ್ಲ. ಇಂಜಿನಿಯರಿಂಗ್-ಮೆಡಿಕಲ್‍ಗಳಂತಹ ಒಂದೆರಡು ವೃತ್ತಿಗಳನ್ನೇ ಭೂಮಿಯ ಮೇಲಿನ ಮಹೋನ್ನತ ಉದ್ಯೋಗಗಳೆಂದು ಬಿಂಬಿಸಿರುವುದರ ಹಿಂದೆಯೂ ಇದೇ ಷಡ್ಯಂತ್ರ ಇದೆ. ಈ ಎರಡು ವೃತ್ತಿಪರ ಕೋರ್ಸುಗಳಿಗೆ ಲಕ್ಷಾಂತರ ಹಣ ಬೇಕೆಂಬುದು ಹಿಂದಿನಿಂದಲೂ ಚಾಲ್ತಿಯಲ್ಲಿರುವ ನಂಬಿಕೆ. ಇವುಗಳಿಗೆ ಪ್ರವೇಶ ಪಡೆಯುವುದೂ ಭಾರೀ ದೊಡ್ಡ ಸ್ಪರ್ಧೆಯೆಂಬ ಭ್ರಮೆಯನ್ನು ಕೂಡ ಬಹು ವ್ಯವಸ್ಥಿತವಾಗಿ ರೂಪಿಸಲಾಗಿದೆ.

‘ಇಂಜಿನಿಯರಿಂಗ್ ಅಥವಾ ವೈದ್ಯಕೀಯ ಕೋರ್ಸುಗಳಿಗೆ ಸೇರಬೇಕೆಂದರೆ ಒಳ್ಳೆಯ ಕಡೆ ಪಿಯುಸಿ ಮಾಡಬೇಕು. ಅಲ್ಲಿ ಉತ್ಕøಷ್ಟ ಮಟ್ಟದ ಸಿಇಟಿ-ಜೆಇಇ-ನೀಟ್ ಕೋಚಿಂಗ್ ಸಿಗಬೇಕು. ಅಂತಹ ಕಾಲೇಜು ಸಿಗಬೇಕೆಂದರೆ ಎಸ್.ಎಸ್.ಎಲ್.ಸಿ.ಯಲ್ಲಿ ಒಂದೊಂದು ಅಂಕವೂ ಮುಖ್ಯ’ – ಇದು ಬಹುಪಾಲು ತಂದೆತಾಯಂದಿರಲ್ಲಿ ಇರುವ ಧಾವಂತ. ಈ ಧಾವಂತ ಕ್ಷಣಕ್ಷಣವೂ ಮಕ್ಕಳ ತಲೆಗೆ ವರ್ಗಾವಣೆ ಆಗುತ್ತಾ ಇರುತ್ತದೆ. ಬೆಳಗೆಂದರೇನು, ಸಂಜೆಯೆಂದರೇನು, ಮಳೆಯೆಂದರೇನು, ಬಿಸಿಲೆಂದರೇನು ಎಂದು ತಿಳಿಯದ ಮಕ್ಕಳು. ಬೆಳಕಾಗುವ ಮುನ್ನವೇ ಬಾಗಿಲು ತೆರೆಯುವ ಕೋಚಿಂಗ್ ಸಂಸ್ಥೆಗಳು, ಮಧ್ಯರಾತ್ರಿ ಕಳೆದರೂ ಮಲಗಲು ಬಿಡದ ಹಾಸ್ಟೆಲುಗಳು. ಓದಲೇಬೇಕು, ಕೋಚಿಂಗ್ ಪಡೆಯಲೇಬೇಕು, ಓದಿದ್ದನ್ನೇ ಓದಬೇಕು, ಉರುಹೊಡೆಯಲೇಬೇಕು, ಮತ್ತಮತ್ತೆ ಪರೀಕ್ಷೆ ಬರೆಯಬೇಕು, ಪರ್ಸೆಂಟೇಜು ಹೆಚ್ಚಾಗಬೇಕು...

ಈ ನಿರೀಕ್ಷೆಗಳ ಭಾರದಲ್ಲಿ ಮಕ್ಕಳ ಮನಸ್ಸಿನ ಪಾಡು ಯಾರಿಗೂ ಬೇಕಾಗಿಲ್ಲ. ಮನಸ್ಸು-ಬುದ್ಧಿಗಳು ಉಲ್ಲಾಸದಿಂದ ವಿಕಸಿತಗೊಳ್ಳಬೇಕಾದ ಬಂಗಾರದ ಕಾಲವದು. ಮನುಷ್ಯನ ಒಟ್ಟಾರೆ ವ್ಯಕ್ತಿತ್ವ ನಿರ್ಮಾಣವಾಗುವುದೇ ಈ ಹದಿಹರೆಯದ ಪರ್ವಕಾಲದಲ್ಲಿ. ಆದರೆ ಈಗ ಅಲ್ಲಿ ನಡೆಯುವುದು ಅಂಕ ಮೊಗೆಯುವ ಯಂತ್ರಗಳನ್ನು ತಯಾರು ಮಾಡುವ ಪ್ರಕ್ರಿಯೆ ಮಾತ್ರ. ಬುದ್ಧಿಭಾವಗಳು ಬಲಿಯಬೇಕಾದ ಕಾಲದಲ್ಲಿ ಇದೇನು ಮಾಡುತ್ತಿದ್ದೇವೆ ಎಂಬ ವಿವೇಕ ಯಾರಿಗೂ ಬೇಕಾಗಿಲ್ಲ. ಯಾವುದೋ ವೇಗೋತ್ಕರ್ಷದ ಬಲದಲ್ಲಿ ಆಸಕ್ತಿಯಿರುವ ಇಲ್ಲದಿರುವ ಎಲ್ಲ ಮಕ್ಕಳು ಮುಂದಮುಂದಕ್ಕೆ ತೇಲಿಕೊಂಡೇನೋ ಹೋಗುತ್ತವೆ. ಅವರ ನಿಜವಾದ ಭವಿಷ್ಯ ಏನು? ಮುಂದೆ ತಾವು ಜೀವನ ನಡೆಸಬೇಕಾದವರೊಂದಿಗೆ, ಸುತ್ತಲಿನ ಸಮಾಜದೊಂದಿಗೆ ಹೊಂದಿಕೊಂಡು ಸಂತೋಷವಾಗಿ ಬದುಕಬಲ್ಲರೇ ಇವರು?

ಸಂತೋಷ ಎಂದರೇನು? ಮುಂದೆ ದೊರೆಯಲಿರುವ ಉದ್ಯೋಗ, ಅದರಿಂದ ಸಂಪಾದನೆಯಾಗುವ ಹಣ ಮತ್ತು ಆ ಮೂಲಕ ದೊರೆಯುವ ಸಾಮಾಜಿಕ ಪ್ರತಿಷ್ಠೆ. ಸಮಾಜದ ಕಣ್ಣಿನಲ್ಲಿ ಇದೇ ಸಂತೋಷ. ಇದುವೇ ವೃತ್ತಿಪರ ಕೋರ್ಸುಗಳಲ್ಲಿ ಸೀಟು ಗಿಟ್ಟಿಸಿಕೊಳ್ಳುವ ಧಾವಂತದಲ್ಲಿ ದೆಸೆಗೆಟ್ಟು ಓಡುತ್ತಿರುವ ಒಟ್ಟಾರೆ ಸಮಾಜದ ಪರಮ ಉದ್ದೇಶ. ಇದರ ಹಿಂದಿರುವುದು ಶಿಕ್ಷಣ ಸಂಸ್ಥೆಗಳನ್ನು ಹಣದ ಮಳೆಗರೆಯುವ ಕಲ್ಪವೃಕ್ಷ-ಕಾಮಧೇನುಗಳನ್ನಾಗಿ ಮಾಡಿಕೊಂಡಿರುವ ಮಂದಿಯ ಸ್ವಾರ್ಥಬುದ್ಧಿ ಎಂಬುದು ನಮ್ಮ ಸಮಾಜಕ್ಕಿನ್ನೂ ಅರ್ಥವಾಗದಿರುವುದು ದುರಂತ.

ಈ ಕಾಲದಲ್ಲಿ ಒಂದೊಳ್ಳೆಯ ಜೀವನ ಕಟ್ಟಿಕೊಳ್ಳಬೇಕೆಂದರೆ ಹಣಕಾಸಿನ ಸ್ಥಿತಿಗತಿ ಚೆನ್ನಾಗಿರಬೇಕೆಂಬುದರಲ್ಲಿ ಅನುಮಾನವೇನೂ ಇಲ್ಲ. ಆದರೆ ಅದು ಎಷ್ಟು ಬೇಕು, ಹೇಗೆ ಬೇಕು ಎಂಬ ಬಗ್ಗೆ ಪ್ರಾಮಾಣಿಕವಾಗಿ ಯಾರೂ ಯೋಚಿಸಿಲ್ಲ. ಸಂಪಾದನೆ ಮಾಡುವುದು ತಪ್ಪಲ್ಲ; ಸಮಾಜದಲ್ಲಿ ನಾಲ್ಕು ಮಂದಿಯ ಗೌರವಕ್ಕೆ ಪಾತ್ರರಾಗಬೇಕು ಎಂಬ ಅಪೇಕ್ಷೆಯಿರುವುದು ತಪ್ಪಲ್ಲ. ಆದರೆ ಅದಕ್ಕೆ ಯಾವುದೋ ಒಂದೆರಡು ದಾರಿಗಳು ಮಾತ್ರ ಇರುವುದು ಎಂಬುದು ಮಾತ್ರ ಶುದ್ಧ ಭ್ರಮೆ. ಮರ್ಯಾದೆಯಿಂದ ಬದುಕುವುದಕ್ಕೆ ಸಾವಿರ ದಾರಿಗಳಿವೆ. ಎಲ್ಲರೂ ಒಂದೇ ರಸ್ತೆಯಲ್ಲಿ ಸಾಗುತ್ತಿದ್ದರೆ ಆಮೇಲೆ ಅವರೆಲ್ಲ ಅದೇ ಟ್ರಾಫಿಕ್ಕಿನಲ್ಲಿ ಬದುಕನ್ನೆಲ್ಲ ಕಳೆಯಬೇಕಾಗುತ್ತದೆ. ವಾಸ್ತವವಾಗಿ ಬೇರೆ ರಸ್ತೆ ಹಿಡಿದವರು ಉಳಿದವರಿಗಿಂತ ಮೊದಲೇ ಗಮ್ಯ ಸೇರಿರುತ್ತಾರೆ.

ರಿಲಯನ್ಸ್ ಎಂಬ ಸಾಮ್ರಾಜ್ಯವನ್ನು ಕಟ್ಟಿದ ಧೀರೂಭಾಯ್ ಅಂಬಾನಿ ಆರಂಭದಲ್ಲಿ ಏನಾಗಿದ್ದರು? ಹ್ಯಾರಿಪಾಟರ್ ಪುಸ್ತಕಗಳಿಂದಲೇ ಲೋಕಪ್ರಸಿದ್ಧಿ ಪಡೆದ ಜೆ.ಕೆ. ರೌಲಿಂಗ್ ಏನಾಗಿದ್ದರು? ಜಗತ್ಪ್ರಸಿದ್ಧ ಬ್ಯಾಗುಗಳ ಬ್ರಾಂಡ್ ಅನ್ನು ಕಟ್ಟಿಬೆಳೆಸಿದ ಗುಚಿಯೋ ಗುಚಿ ಏನಾಗಿದ್ದರು? ಮಸ್ಯಾಚುಸೆಟ್ಸ್ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿಗೆ ಪ್ರವೇಶ ಪಡೆದ ಮೊದಲ ಅಂತಾರಾಷ್ಟ್ರೀಯ ಅಂಧವ್ಯಕ್ತಿ ಶ್ರೀಕಾಂತ್ ಬೊಲ್ಲಾ ಅಲ್ಲಿಯವರೆಗೆ ಎದುರಿಸಿದ ನೋವು-ಅವಮಾನಗಳೇನು? ನಾವು ನಮ್ಮ ಸುತ್ತಲಿನ ಸಮಾಜವನ್ನು ಕಣ್ಣುತೆರೆದು ನೋಡುವುದೇ ಇಲ್ಲ. ಯಾರೋ ಬೆಳೆಸಿದ ಭ್ರಮೆಯಲ್ಲಿ, ನಾವೇ ಹಾಕಿಕೊಂಡ ಕನ್ನಡಕದಲ್ಲಿ ಬಂಧಿಯಾಗಿರುತ್ತೇವೆ. 

ಪರ್ಸೆಂಟೇಜಿಗಿಂತ ಬದುಕು ತುಂಬ ದೊಡ್ಡದು. ಬದುಕಿನ ತೃಪ್ತಿಯನ್ನು ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿಯ ಪರ್ಸೆಂಟೇಜಿನಿಂದ ಅಳೆಯಲು ಬರುವುದಿಲ್ಲ. ಮೂಲತಃ ಪರ್ಸೆಂಟೇಜು ಒಬ್ಬ ವ್ಯಕ್ತಿಯ ಒಟ್ಟಾರೆ ವ್ಯಕ್ತಿತ್ವವನ್ನು, ಪ್ರತಿಭೆಯನ್ನು ಅಳೆಯುವ ಮಾನದಂಡವೇ ಅಲ್ಲ. ಅದು ಮಗುವಿನೊಳಗೆ ಸುಪ್ತವಾಗಿಯೇ ಇರುತ್ತದೆ. ಅದನ್ನು ಸಶಕ್ತವಾಗಿ ಹೊರಗೆ ತರುವುದಕ್ಕೆ ಹತ್ತಾರು ಮಾರ್ಗಗಳಿವೆ. ಅದು ಕೋಚಿಂಗ್ ಸೆಂಟರುಗಳಲ್ಲಿ ವಿಕಾಸವಾಗುವುದಿಲ್ಲ. ಹಾರ್ವರ್ಡ್‍ನ ಮನಃಶಾಸ್ತ್ರಜ್ಞ ಹೊವಾರ್ಡ್ ಗಾರ್ಡನರ್ ಪ್ರತಿಪಾದಿಸಿರುವ ‘ಬಹುಬುದ್ಧಿವಂತಿಕೆಯ ಸಿದ್ಧಾಂತ’ವೂ (ಮಲ್ಟಿಪಲ್ ಇಂಟೆಲಿಜೆನ್ಸಸ್ ಥಿಯರಿ) ಇದನ್ನೇ ಪ್ರತಿಪಾದಿಸುತ್ತದೆ. ಬುದ್ಧಿವಂತಿಕೆಗೆ ಏಳೆಂಟು ಆಯಾಮಗಳಿವೆ, ಅವುಗಳಲ್ಲಿ ಯಾವುದಾರೂ ಒಂದೋ ಎರಡೋ ಮೂರೋ ಮಗುವಿನಲ್ಲಿ ಪ್ರಬಲವಾಗಿರಬಹುದು. ಅವುಗಳನ್ನು ಆರಂಭದಿಂದಲೇ ಗಮನಿಸಿ ಬೆಳೆಸಿದರೆ ಆ ಮಗು ಮುಂದೆ ತನ್ನ ಆಸಕ್ತಿಯ ಕ್ಷೇತ್ರದಲ್ಲಿ ಅಸಾಧಾರಣವಾದುದನ್ನು ಸಾಧಿಸಬಹುದು ಎಂದಿದ್ದಾರೆ ಗಾರ್ಡನರ್.

ಕೆಲವರಲ್ಲಿ ದೃಶ್ಶಿಕ (ವಿಶುವಲ್) ಶಕ್ತಿ ಪ್ರಬಲವಾಗಿರುತ್ತದೆ - ಆ ಶಕ್ತಿಯನ್ನು ಬೆಳೆಸಿದರೆ ಮುಂದೆ ಅವರು ಉತ್ತಮ ವಿನ್ಯಾಸಕಾರರಾಗಿ ಬೆಳೆಯಬಹುದು. ಕೆಲವರಲ್ಲಿ ಶಾಬ್ದಿಕ (ವರ್ಬಲ್) ಪ್ರತಿಭೆ ದಟ್ಟವಾಗಿರುತ್ತದೆ- ಮುಂದೆ ಅವರು ಉತ್ತಮ ಬರೆಹಗಾರರಾಗಿ, ಮಾತುಗಾರರಾಗಿ ಬೆಳೆಯಬಹುದು. ಇನ್ನು ಕೆಲವರಲ್ಲಿ ಸಂಗೀತದ (ಮ್ಯೂಸಿಕಲ್) ಕೌಶಲ ಆಳದಲ್ಲಿ ಬೇರೂರಿರುತ್ತದೆ- ಅವರು ಮುಂದೆ ಜಗತ್ತು ಮೆಚ್ಚುವ ಸಂಗೀತಗಾರರಾಗಿ ಬೆಳೆಯಬಹುದು. ಮತ್ತೆ ಕೆಲವರಲ್ಲಿ ತಾರ್ಕಿಕ (ಲಾಜಿಕಲ್) ಶಕ್ತಿ ಪ್ರಬಲವಾಗಿರುತ್ತದೆ- ಅವರು ಮುಂದೆ ವಿಜ್ಞಾನಿಯಾಗಿಯೋ, ಇಂಜಿನಿಯರಾಗಿಯೋ ಹೆಸರು ಮಾಡಬಹುದು. ಹಲವರಲ್ಲಿ ದೈಹಿಕ (ಬಾಡಿಲೀ) ಕೌಶಲಗಳು ಅಪೂರ್ವವಾಗಿರುತ್ತವೆ- ಅಂಥವರು ಮುಂದೆ ಕ್ರೀಡಾಕ್ಷೇತ್ರದಲ್ಲಿ ಪ್ರಸಿದ್ಧಿಗೇರಬಹುದು... ಇದನ್ನು ಗಾರ್ಡನರ್ ‘ಮಲ್ಟಿಪಲ್ ಇಂಟೆಲಿಜೆನ್ಸಸ್’ ಎಂದು ಕರೆದಿರುವುದು. ತಂದೆತಾಯಿಯರು ಮತ್ತು ಅಧ್ಯಾಪಕರು ಇದನ್ನು ಗುರುತಿಸುವುದನ್ನು ಮರೆತರೆ ತಮ್ಮ ಮಕ್ಕಳಿಗೆ ಬಹುದೊಡ್ಡ ಅನ್ಯಾಯ ಮಾಡಿದಂತೆ. ಇಂಜಿನಿಯರ್ ಆಗಲಾರದ ವ್ಯಕ್ತಿಯೊಬ್ಬ ನಾಳೆ ದೊಡ್ಡ ಹಾಡುಗಾರ ಆಗಬಹುದು, ವೈದ್ಯಕೀಯ ವಿಜ್ಞಾನ ಓದಲಾಗದವನೊಬ್ಬ ನಾಳೆ ದೊಡ್ಡ ಕ್ರೀಡಾಪಟುವಾಗಿ ಹೊರಹೊಮ್ಮಬಹುದು, ಚಿತ್ರಕಾರನೋ, ಸಾಹಿತಿಯೋ, ವಕೀಲನೋ, ಪತ್ರಕರ್ತನೋ, ಸಂಶೋಧನಕೋ, ಲೆಕ್ಕಪರಿಶೋಧಕನೋ, ಅಧಿಕಾರಿಯೋ, ಉದ್ಯಮಿಯೋ ಆಗಬಹುದು. ಈ ಸ್ಥಾನಗಳಲ್ಲಿರುವುದು ಅವಮಾನವೇ? ಇವುಗಳಿಂದ ವ್ಯಕ್ತಿಯೊಬ್ಬ ತನ್ನ ಬದುಕಿನ ತೃಪ್ತಿ ಕಂಡುಕೊಳ್ಳಲು ಸಾಧ್ಯವಿಲ್ಲವೇ?

ಎಲ್ಲರಿಗಿಂತ ಮೊದಲು ಅಪ್ಪ-ಅಮ್ಮಂದಿರು ತಮ್ಮ ಭ್ರಮೆಗಳಿಂದ ಹೊರಬರಬೇಕು. ಧನದಾಹಿಗಳ ಸ್ವಾರ್ಥದಲ್ಲಿ ನಲುಗುತ್ತಿರುವ ಶಿಕ್ಷಣವಲಯ ನಿರ್ಮಿಸಿರುವ ವ್ಯೂಹದೊಳಗೆ ತಾವು ಬಂಧಿಗಳಾಗಿದ್ದೇವೆ ಎಂಬುದನ್ನು ತಿಳಿಯಬೇಕು. ಮಕ್ಕಳು ನಮ್ಮ ಭ್ರಮೆಗಳನ್ನೆಲ್ಲ ಹೊತ್ತುಕೊಂಡು ಓಡಬೇಕಾದ ಕತ್ತೆಗಳಲ್ಲ. ಅವರಿಗೂ ಅವರದ್ದೇ ಆದ ಮನಸ್ಸು, ಕೌಶಲ, ಪ್ರತಿಭೆ, ಕನಸುಗಳು ಇರುತ್ತವೆ. ಅವು ಹೂವಿನಂತೆ ಸ್ವಾಭಾವಿಕವಾಗಿ ವಿಕಾಸವಾಗಿ, ಹೀಚಾಗಿ, ಕಾಯಿಯಾಗಿ, ಹಣ್ಣಾಗಿ ಸುತ್ತಲಿನ ಸಮಾಜಕ್ಕೆ ಹಿತವಾಗಿ, ಉಪಯುಕ್ತವಾಗಿ ಪರಿಣಮಿಸಲು ಅವಕಾಶ ಮಾಡಿಕೊಡೋಣ. ಇಲ್ಲವಾದರೆ ಭವಿಷ್ಯ ನಮ್ಮನ್ನು ಕ್ಷಮಿಸಲಾರದು.

- ಸಿಬಂತಿ ಪದ್ಮನಾಭ ಕೆ. ವಿ.

ಶುಕ್ರವಾರ, ಮಾರ್ಚ್ 29, 2024

ಪ್ರತಿಯೊಬ್ಬ ಕನ್ನಡಿಗನ ಬಳಿ ಇರಬೇಕಾದ ಕೃತಿ ʼಸರಿಗನ್ನಡ-ಸರಿಕನ್ನಡʼ

  • ಪುಸ್ತಕ: ಸರಿಗನ್ನಡ-ಸರಿಕನ್ನಡ
  • ಲೇಖಕರು: ಕೊಕ್ಕಡ ವೆಂಕಟ್ರಮಣ ಭಟ್‌, ಮಂಡ್ಯ
  • ಪ್ರಕಾಶಕರು: ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)
  • ವರ್ಷ: 2023
  • ಪುಟಗಳು: 180
  • ಬೆಲೆ: ರೂ. 200
  • ಸಂಪರ್ಕ: ಕೊಕ್ಕಡ ವೆಂಕಟ್ರಮಣ ಭಟ್‌ (9972448183), ಸಿರಿಬಾಗಿಲು ರಾಮಕೃಷ್ಣ ಮಯ್ಯ (9448344380)

ಎಲ್ಲರೂ ಕನ್ನಡ ರಕ್ಷಣೆಯ ಬಗ್ಗೆ ಮಾತಾಡುವವರೇ; ಆದರೆ ಕನ್ನಡ ಮಾತ್ರ ದಿನೇದಿನೇ ಸೊರಗುತ್ತಲೇ ಇದೆ. ದಿನಬೆಳಗಾದರೆ ಅಪಭ್ರಂಶಗಳೇ ಕಣ್ಣಿಗೆ ರಾಚುತ್ತಿರುತ್ತವೆ. ಭಾಷೆಯ ಸರಿಯಾದ ಬಳಕೆಯ ಬಗ್ಗೆ ಮಾತಾಡುವವರು ಬೆರಳೆಣಿಕೆಯಷ್ಟು. ಮಾತಾಡಿದರೂ ನೂರೆಂಟು ಕಾರಣ ಹೇಳಿ ಅವರ ಬಾಯಿ ಮುಚ್ಚಿಸುವವರೇ ಹೆಚ್ಚು.

ರಸ್ತೆಯಲ್ಲಿ ಐದು ನಿಮಿಷ ಓಡಾಡಿದರೆ ʼಶುಭಾಷಯʼದ ದೊಡ್ಡದೊಡ್ಡ ಫ್ಲೆಕ್ಸುಗಳು ಕಾಣುತ್ತವೆ. ಮೊಬೈಲು, ಸಾಮಾಜಿಕ ತಾಣಗಳಲ್ಲಂತೂ ದಿನಕ್ಕೆ ಹತ್ತಾರು ಬಾರಿ ʼಶುಭಾಷಯʼಗಳ ವಿನಿಮಯ ಆಗುತ್ತಾ ಇರುತ್ತದೆ. ಮೊನ್ನೆ ಒಂದು ಅಂಗಡಿಯ ಎದುರು ʼಹೊಸವರ್ಷದ ಶುಭಾಶಯಗಳುʼ ಎಂದು ಸರಿಯಾಗಿಯೇ ಬರೆದಿದ್ದರು. ಅಂಗಡಿಗೆ ಬಂದಿದ್ದಾತ ತನ್ನ ಹೆಂಡತಿಗೆ ಅದನ್ನು ತೋರಿಸಿ, “ನೋಡು! ಎಷ್ಟೊಂದು ತಪ್ಪು ಬರೆದಿದ್ದಾರೆ; ಅದು ಶುಭಾಷಯ ಆಗಬೇಕು” ಎಂದು ತಿಳಿಹೇಳುತ್ತಿದ್ದ. ತಪ್ಪುಗಳನ್ನೇ ಎಲ್ಲೆಡೆ ಬರೆಯುತ್ತಾ ಕೊನೆಗೆ ಸರಿಯಾದುದನ್ನೇ ತಪ್ಪು ಎಂದು ಜನರು ಸಾಧಿಸುವ ಕಾಲಕ್ಕೆ ಬಂದಿದ್ದೇವೆ. "ಸರಿಯಾಗಿ ಬರೆಯಲು ಬರುತ್ತಿಲ್ಲವೇ? ತಪ್ಪುಗಳನ್ನೇ ಜನಸ್ನೇಹೀ ಪರ್ಯಾಯ ಭಾಷೆಯೆಂದು ಬಿಂಬಿಸಿದರಾಯ್ತು" ಎಂಬ ಹೊಸ ವಾದಗಳನ್ನೂ ಹುಟ್ಟುಹಾಕುತ್ತಿದ್ದೇವೆ. ಇದು ಕೊನೆಗೆ ಎಲ್ಲಿಗೆ ತಲುಪೀತು? ಕನ್ನಡ ರಕ್ಷಣೆಗಾಗಿ ಕಲಾವಿದರು ಸಾಹಿತಿಗಳ ಹೊಸ ಸಂಘಟನೆ ಮಾಡುತ್ತಿರುವುದಾಗಿಯೂ, ಇದಕ್ಕೆ ಸಹಕರಿಸಿದರೆ "ನಿಮಗೆ ಹೊಳ್ಳೆದು ಹಾಗುತದೆ" ಎಂಬುದಾಗಿಯೂ ಒಬ್ಬ ಸಂಘಟಕರು ನನಗೆ ಇತ್ತೀಚೆಗೆ ಸಂದೇಶ ಕಳಿಸಿದ್ದರು. ಇವರ ಪ್ರಕಾರ ಕನ್ನಡದ ರಕ್ಷಣೆ ಎಂದರೆ ಏನು?

ಮಾಧ್ಯಮಗಳು ಭಾಷೆಯನ್ನು ಉಳಿಸಿ, ಬೆಳೆಸುವ ವೇದಿಕೆಗಳೆಂಬ ಹೆಗ್ಗಳಿಕೆ ಹೊಂದಿದ್ದವು. ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಮುದ್ರಣ ಮಾಧ್ಯಮದ ಕೊಡುಗೆಯಂತೂ ಅಪಾರ. “ಪತ್ರಿಕೆಯೆಂದರೆ ಪದಗಳ ಟಂಕಸಾಲೆ”ಯೆಂದು ಹಿರಿಯರು ಹೇಳಿದ್ದುಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳು, ಟಿವಿ ವಾಹಿನಿಗಳಲ್ಲಿ ಭಾಷೆಯ ಕಗ್ಗೊಲೆಯಾಗುತ್ತಿರುವುದು ನೋಡಿದರೆ ತೀರಾ ಕಸಿವಿಸಿ ಎನಿಸುತ್ತದೆ. ಹೆಜ್ಜೆಹೆಜ್ಜೆಗೂ ಅಪಶಬ್ದಗಳು, ಕಾಗುಣಿತ ದೋಷಗಳು… ಇವು ಮಾಧ್ಯಮಗಳ ಗುಣಮಟ್ಟವನ್ನು ಹೇಳುವುದಕ್ಕಿಂತಲೂ ನಮ್ಮ ಶಿಕ್ಷಣದ ಹಾಗೂ ಅಧ್ಯಾಪಕರ ಗುಣಮಟ್ಟದತ್ತಲೇ ಹೆಚ್ಚು ಬೊಟ್ಟು ಮಾಡುತ್ತಿರುವಂತಿದೆ.

ಇರಲಿ. ಭಾಷೆಯ ಉಳಿವಿಗೆ, ಸರಿಯಾದ ಬಳಕೆಯ ಬೆಳವಣಿಗೆಗೆ ನಾವೇನು ಮಾಡಬಹುದು ಎಂಬ ಪ್ರಶ್ನೆಗೆ ಇತ್ತೀಚೆಗೆ ಪ್ರಕಟವಾಗಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರ ʼಸರಿಗನ್ನಡ-ಸರಿನ್ನಡʼ ಕೃತಿಯು ಅತ್ಯಂತ ಸೂಕ್ತ ಉತ್ತರದಂತಿದೆ. ಕನ್ನಡವನ್ನು ಸಾಕಷ್ಟು ಚೆನ್ನಾಗಿ ಬಲ್ಲವರೂ ಪ್ರತಿದಿನ ಮಾಡುವ ಹತ್ತಾರು ತಪ್ಪುಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ, ಸರಿಯಾದ ಬಳಕೆ ಯಾವುದೆಂಬುದನ್ನು ತಿಳಿಸುವ ಅಮೂಲ್ಯ ಕೆಲಸವನ್ನು ಭಟ್ಟರು ಈ ಪುಸ್ತಕದ ಮೂಲಕ ಮಾಡಿದ್ದಾರೆ.

ಪತ್ರಿಕೆಗಳಲ್ಲಿ ದಿನಕ್ಕೊಮ್ಮೆಯಾದರೂ ʼಅಪ್ರಾಪ್ತನ ಬಂಧನʼ ಎಂಬ ಬಳಕೆಯನ್ನು ಕಾಣುತ್ತೇವೆ. ಭಾಷಣಕಾರರು ಮಾತಿಗೆ ತೊಡಗಿದರೆ ʼಅಜಗಜಾಂತರ ವ್ಯತ್ಯಾಸʼ ಎನ್ನುತ್ತಾರೆ. ಅನಾನುಕೂಲ, ಯಡವಟ್ಟು, ನಾಗರೀಕ, ಜಾತ್ಯಾತೀತ, ಕೋಟ್ಯಾಧಿಪತಿ, ಸದಾವಕಾಶ, ರೋಧನ, ಪೂರ್ವಾಗ್ರಹ, ಧಾಳಿ, ಅಮೂಲಾಗ್ರ… ಹೀಗೆ ತಪ್ಪುಬಳಕೆಗಳನ್ನೇ ಎಲ್ಲೆಡೆ ಕಾಣುತ್ತೇವೆ. ಕನ್ನಡ ಅಧ್ಯಾಪಕರು, ಕನ್ನಡ ಪತ್ರಕರ್ತರು, ಸಾಹಿತಿಗಳು… ಇವುಗಳನ್ನೇ ಸಲೀಸಾಗಿ ಬರೆಯುತ್ತಿರುತ್ತಾರೆ. ತಪ್ಪುಗಳನ್ನೇ ಬರೆಯುತ್ತಾ ಇವೇ ಸರಿಯಾದ ಬಳಕೆಗಳು ಎಂದು ವಾದಿಸುವಷ್ಟರಮಟ್ಟಿಗೆ ಇವು ದಿನನಿತ್ಯದ ಬಳಕೆಗಳಲ್ಲಿ ಗಟ್ಟಿಯಾಗಿಬಿಟ್ಟಿವೆ. ಇವು ಯಾಕೆ ತಪ್ಪು, ಸರಿಯಾದ ಬಳಕೆ ಯಾವುದು, ಸರಿಯಾದುದನ್ನು ಉಳಿಸಿ ಬೆಳೆಸಬೇಕಾದ ಅಗತ್ಯ ಏನು ಎಂಬುದನ್ನು ತಮ್ಮ ಪುಸ್ತಕದಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ ಶ್ರೀ ವೆಂಕಟ್ರಮಣ ಭಟ್ಟರು.

ಈ ರೀತಿಯ ಪದಗಳನ್ನು ಅಕಾರಾದಿ ಜೋಡಿಸಿರುವುದರಿಂದ ಪರಾಮರ್ಶನದ ದೃಷ್ಟಿಯಿಂದಲೂ ಕೃತಿ ಅನುಕೂಲಕರವಾಗಿದೆ. ಕೃತಿಕಾರರು ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದರಿಂದ ಪದಗಳ ವ್ಯುತ್ಪತ್ತಿ, ಅವುಗಳ ಅರ್ಥ, ತಪ್ಪು ಬಳಕೆಯಿಂದ ಆಗುವ ಅನರ್ಥಗಳನ್ನು ಅಧಿಕೃತವಾಗಿ ಹೇಳಬಲ್ಲವರಾಗಿದ್ದಾರೆ.

ʼಸರಿಗನ್ನಡ-ಸರಿಕನ್ನಡʼ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡದೊಂದು ಕೊಡುಗೆ. ಪ್ರತೀ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳೇ ಮೊದಲಾದ ಮಾಧ್ಯಮಗಳು ತಮ್ಮ ಕಚೇರಿಗಳಲ್ಲಿ ಇಟ್ಟುಕೊಳ್ಳಬೇಕಾದ ಪುಸ್ತಕ ಇದು. ಕನ್ನಡ ಅಧ್ಯಾಪಕರು, ವಿದ್ಯಾರ್ಥಿಗಳು, ಪತ್ರಕರ್ತರಂತೂ ತಮ್ಮ ಬಳಿ ಸದಾ ಇರಿಸಿಕೊಳ್ಳಬೇಕಾದ ಕೃತಿಯಿದು. ಅಷ್ಟೇ ಏಕೆ, ಭಾಷೆಯ ಬಗ್ಗೆ ಪ್ರೀತಿ-ಅಭಿಮಾನವುಳ್ಳ ಪ್ರತಿಯೊಬ್ಬ ಕನ್ನಡಿಗನೂ ಗಮನಿಸಬೇಕಾದ, ಪರಸ್ಪರ ಹಂಚಿಕೊಳ್ಳಬೇಕಾದ ಪುಸ್ತಕ ಇದೆಂದರೆ ಅತಿಶಯವೇನೂ ಇಲ್ಲ.

ಈ ಕಾಲಕ್ಕೆ ಬಹಳ ಅಗತ್ಯವಿರುವ ಕೃತಿಯಿದು. ಇಂತಹದೊಂದು ಮಹತ್ವದ ಪುಸ್ತಕ ರಚಿಸಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರಿಗೂ, ಇದನ್ನು ಪ್ರಕಟಿಸಿರುವ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೂ ನಾವು ಆಭಾರಿಗಳಾಗಿರಬೇಕು. ಭೌಗೋಳಿಕವಾಗಿ ಕರ್ನಾಟಕದ ಹೊರಗಿರುವ, ಗಡಿನಾಡಿನ ಸಂಸ್ಥೆಯೊಂದು ಇಂತಹ ಘನಕಾರ್ಯವನ್ನು ಮಾಡಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕು ಮತ್ತು ಅಭಿನಂದಿಸಬೇಕು.

 - ಸಿಬಂತಿ ಪದ್ಮನಾಭ ಕೆ. ವಿ.

ಶನಿವಾರ, ಜನವರಿ 27, 2024

ಭಾರತೀಯ ಪತ್ರಿಕಾಲೋಕದ ಹಿಂದಿನ ಕಥೆ

28 ಜನವರಿ 2024ರ ʻಉದಯವಾಣಿ ಸಾಪ್ತಾಹಿಕ ಸಂಪದʼದಲ್ಲಿ ಪ್ರಕಟವಾದ ಲೇಖನ

ಕಾಫಿಯಿಲ್ಲದ ಬೆಳಗನ್ನಾದರೂ ಊಹಿಸಬಹುದು, ಪತ್ರಿಕೆಯಿಲ್ಲದ ಮುಂಜಾವನ್ನು ಊಹಿಸಿಕೊಳ್ಳುವುದು ಕಡುಕಷ್ಟ. ಪತ್ರಿಕೆಯ ಜಾಗದಲ್ಲಿ ಮೊಬೈಲೇನೋ ಬಂದು ಕೂತಿರಬಹುದು, ಆದರೆ ಮನುಷ್ಯನ ದಿನದ ಬಾಗಿಲನ್ನು ತೆರೆಯುವುದು ಯಾವುದೋ ಒಂದು ಮಾಧ್ಯಮ ಎಂಬುದರಲ್ಲಿ ಎರಡು ಮಾತಿಲ್ಲ. ಯಾವ ಮಾಧ್ಯಮ ಬಂದರೂ ಪತ್ರಿಕೆಯ ಮೇಲೆ ಕಣ್ಣಾಡಿಸದೆ ತೃಪ್ತಿಯಿಲ್ಲ ಎನ್ನುವ ಮಂದಿಯಂತೂ ಬೇಕಾದಷ್ಟಿದ್ದಾರೆ.

ಪತ್ರಿಕೆಗಳನ್ನು ಇಷ್ಟೊಂದು ಹಚ್ಚಿಕೊಂಡಿರುವ ಎಲ್ಲರಿಗೂ ‘ಜನರನ್ನು ಈ ಮಟ್ಟಕ್ಕೆ ಪ್ರಭಾವಿಸಿರುವ ಇಂತಹದೊಂದು ಮಾಧ್ಯಮ ಹೇಗೆ ಹುಟ್ಟಿಕೊಂಡಿತು? ಯಾವಾಗ ಹುಟ್ಟಿಕೊಂಡಿತು?’ ಎಂಬ ಪ್ರಶ್ನೆ ಕಾಡದಿರದು.  ಆ ಕಥೆ ಬಹಳ ಸ್ವಾರಸ್ಯಕರವಾಗಿದೆ. ಸದ್ಯಕ್ಕೆ ನಾವು ಭಾರತದಲ್ಲಿ ಪತ್ರಿಕೆಗಳು ಹೇಗೆ ಹುಟ್ಟಿಕೊಂಡವು? ನಮ್ಮ ದೇಶದ ಮೊದಲ ಪತ್ರಿಕೆಯ ಕಥೆ ಏನು? ಆರಂಭಿಸಿದವರು ಯಾರು? ಇತ್ಯಾದಿಗಳನ್ನು ಗಮನಿಸೋಣ. 

ಸುಮಾರು ಇನ್ನೂರೈವತ್ತು ವರ್ಷಗಳ ಹಿಂದೆ ಭಾರತದಲ್ಲಿ ಪತ್ರಿಕೆಗಳೇ ಇರಲಿಲ್ಲ. ಇರಲಿಲ್ಲ ಎಂದರೆ ಜನ ಪತ್ರಿಕೆಗಳನ್ನು ಕಂಡೇ ಇರಲಿಲ್ಲ ಎಂದಲ್ಲ. ಯುರೋಪಿನ ಪತ್ರಿಕೆಗಳನ್ನು ಜನರು ಓದುತ್ತಿದ್ದುದುಂಟು. ಇಲ್ಲಿ ಬ್ರಿಟಿಷರ ವ್ಯಾಪಾರ ವ್ಯವಹಾರ ಜೋರಾಗಿದ್ದುದರಿಂದ, ಇಂಗ್ಲೆಂಡಿನಿಂದ ಹಡಗುಗಳ ಮೂಲಕ ಪತ್ರಿಕೆಗಳೂ ಆಗೊಮ್ಮೆ ಈಗೊಮ್ಮೆ ಬರುತ್ತಿದ್ದವು. ಅವು ಮೂರ್ನಾಲ್ಕು ತಿಂಗಳು ಹಳೆಯ ಪತ್ರಿಕೆಗಳು. ಅವನ್ನೇ ಇಲ್ಲಿನ ಮಂದಿ ಬಿಸಿಬಿಸಿ ಸುದ್ದಿಗಳೆಂದು ಭಾವಿಸಿ ಓದಬೇಕಿತ್ತು.

ವ್ಯಾಪಾರಿಯ ಕನಸು:

ಭಾರತದಲ್ಲೇ ಪತ್ರಿಕೆಗಳನ್ನು ಮುದ್ರಿಸಬೇಕು ಎಂಬ ಯೋಚನೆ ಮೊದಲು ಬಂದದ್ದು ವಿಲಿಯಂ ಬೋಲ್ಟ್ಸ್ ಎಂಬ ಯುರೋಪಿಯನ್ ವ್ಯಾಪಾರಿಗೆ. ಭಾರತದಲ್ಲಿ ಪತ್ರಿಕೆಗಳಿಲ್ಲದೆ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಬಹಳ ತೊಂದರೆಯಾಗುತ್ತಿದೆ ಎಂದೂ, ಯಾರಾದರೂ ಮುದ್ರಣಾಲಯವನ್ನು ಸ್ಥಾಪಿಸುವ ಆಸಕ್ತರಿದ್ದರೆ ಅವರಿಗೆ ತಾನು ಸಹಾಯ ಮಾಡುತ್ತೇನೆ ಎಂದೂ, ತನ್ನಲ್ಲಿ ಸಾಕಷ್ಟು ವಿಶೇಷ ಸುದ್ದಿಗಳಿದ್ದು ಅವನ್ನು ಓದಬಯಸುವವರು ತನ್ನಮನೆಗೆ ಬೆಳಗ್ಗಿನ ಹೊತ್ತು ಬರಬಹುದು ಎಂದೂ ಒಂದು ಕರಪತ್ರವನ್ನು ಸಿದ್ಧಪಡಿಸಿ ಅವನು ಕಲ್ಕತ್ತಾದ ಕೌನ್ಸಿಲ್ ಹೌಸಿನ ಹೆಬ್ಬಾಗಿಲಿನಲ್ಲಿ ಅಂಟಿಸಿದ. ಅದು 1760ರ ದಶಕದ ಕೊನೆಯ ಭಾಗ.

ಕಂಪೆನಿ ಸರ್ಕಾರಕ್ಕೆ ಅಲ್ಲೇ ಅಪಾಯದ ಮುನ್ಸೂಚನೆ ಕಂಡಿತು. ಇದನ್ನು ಚಿಗುರಲ್ಲೇ ಚಿವುಟದೆ ಹೋದರೆ ನಮಗೇ ಸಂಚಕಾರ ಉಂಟಾದೀತು ಎಂದು ಭಾವಿಸಿದ ಕಂಪೆನಿ ಅಧಿಕಾರಿಗಳು ಬೋಲ್ಟ್ಸ್‍ನನ್ನು ಗಡಿಪಾರು ಮಾಡುವುದೇ ಸರಿ ಎಂದು ಯೋಚಿಸಿದರು. ಆತ ಕೂಡಲೇ ಬಂಗಾಲ ತೊರೆದು ಮದ್ರಾಸಿಗೆ ಹೋಗಿ, ಅಲ್ಲಿಂದ ಇಂಗ್ಲೆಂಡ್‍ನ ಹಡಗು ಹಿಡಿಯಬೇಕು ಎಂದು ಸರ್ಕಾರ ಆದೇಶಿಸಿತು. ಅಲ್ಲಿಗೆ ಭಾರತದ ಮೊದಲ ಪತ್ರಿಕೆ ಹುಟ್ಟುವ ಮೊದಲೇ ಸತ್ತುಹೋಯಿತು.

ಬೆಂಗಾಲ್ ಗಜೆಟ್:

ಇದಾಗಿ ಹನ್ನೆರಡು ವರ್ಷಗಳ ಬಳಿಕ ಭಾರತದ ಮೊತ್ತಮೊದಲ ಪತ್ರಿಕೆ ‘ಬೆಂಗಾಲ್ ಗಜೆಟ್’ನ ಉಗಮವಾಯಿತು. 1780ರ ಜನವರಿ 29ರಂದು ಜೇಮ್ಸ್ ಆಗಸ್ಟಸ್ ಹಿಕಿ ಎಂಬ ಇನ್ನೊಬ್ಬ ಯುರೋಪಿಯನ್ ವ್ಯಾಪಾರಿ ‘ಬೆಂಗಾಲ್ ಗಜೆಟ್’ನ ಮೊದಲ ಸಂಚಿಕೆಯನ್ನು ಹೊರಡಿಸಿದ. ಅದಕ್ಕೆ ‘ದಿ ಒರಿಜಿನಲ್ ಕಲ್ಕತ್ತಾ ಜನರಲ್ ಅಡ್ವಟೈಸರ್’ ಎಂಬ ಇನ್ನೊಂದು ಹೆಸರೂ ಇತ್ತು. ಆ ಪತ್ರಿಕೆಗೆ ಹಿಕಿಯೇ ಲೇಖಕ, ವರದಿಗಾರ, ಪ್ರಕಾಶಕ, ಮುದ್ರಕ ಎಲ್ಲವೂ ಆಗಿದ್ದರಿಂದ ಅದಕ್ಕೆ ‘ಹಿಕೀಸ್ ಗಜೆಟ್’ ಎಂಬ ಹೆಸರೂ ಇತ್ತು.

ಭಾರತದಲ್ಲಿ ಬ್ರಿಟಿಷ್ ಸಾಮ್ರಾಜ್ಯಶಾಹಿಯ ಕೇಂದ್ರಸ್ಥಾನ ಬಂಗಾಳದ ಕಲ್ಕತ್ತಾವೇ ಆಗಿದ್ದುದರಿಂದ ನಮ್ಮ ಪತ್ರಿಕೋದ್ಯಮದ ಜನ್ಮಸ್ಥಳವೂ ಅದೇ ಆಯಿತು. ‘ಬೆಂಗಾಲ್ ಗಜೆಟ್’ ಇಂಗ್ಲಿಷ್ ಭಾಷೆಯ ವಾರಪತ್ರಿಕೆ ಆಗಿತ್ತು. 12 ಇಂಚು ಉದ್ದ, 8 ಇಂಚು ಅಗಲದ ಈ ಪುಟ್ಟ ಪತ್ರಿಕೆಯಲ್ಲಿ ನಾಲ್ಕು ಪುಟಗಳಿದ್ದವು. ಪುಟಗಳನ್ನು ತಲಾ ಮೂರು ಕಾಲಂಗಳಾಗಿ ವಿಭಾಗಿಸಲಾಗಿತ್ತು. ಕಂಪೆನಿ ಅಧಿಕಾರಿಗಳು, ಇಂಗ್ಲಿಷ್ ಬಲ್ಲ ಕೆಲವು ಭಾರತೀಯರು ಇದರ ಓದುಗರಾಗಿದ್ದರು. ಸರಾಸರಿ 400 ಪ್ರತಿಗಳಷ್ಟು ‘ಗಜೆಟ್’ ಪ್ರಕಟವಾಗುತ್ತಿತ್ತು. ಅದರ ಮುದ್ರಣವೇನೂ ಅಷ್ಟೊಂದು ಸೊಗಸಾಗಿರಲಿಲ್ಲ. ಸುದ್ದಿಗಳಿಗಿಂತ ಜಾಹೀರಾತುಗಳೇ ಹೆಚ್ಚಾಗಿದ್ದವು.

ಯಾರೀತ ಹಿಕಿ?

‘ಈಸ್ಟ್ ಇಂಡಿಯಾ ಕಂಪೆನಿಯ ಮಾಜಿ ಮುದ್ರಕ’ ಎಂದು ಜೇಮ್ಸ್ ಆಗಸ್ಟಸ್ ಹಿಕಿ ತನ್ನನ್ನು ತಾನು ಪರಿಚಯಿಸಿಕೊಂಡಿದ್ದ. ಆತ ಮೂಲತಃ ಐರ್ಲೆಂಡಿನವನು. 1740ರ ಆಸುಪಾಸಿನಲ್ಲಿ ಜನಿಸಿದ. ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿದ್ದ ಹಿಕಿ 1772ರಲ್ಲಿ ಭಾರತಕ್ಕೆ ಬಂದು ಈಸ್ಟ್ ಇಂಡಿಯಾ ಕಂಪೆನಿ ಸೇರಿಕೊಂಡ. ‘ಶಸ್ತ್ರಚಿಕಿತ್ಸಕ’ನಾಗಿ, ಮುದ್ರಣ ಸಹಾಯಕನಾಗಿ ಆತ ಕಾರ್ಯನಿರ್ವಹಿಸುತ್ತಿದ್ದ. ವ್ಯಾಪಾರದಲ್ಲಿ ಸಾಕಷ್ಟು ನಷ್ಟ ಅನುಭವಿಸಿ ಸಾಲ ತೀರಿಸಲಾಗದೆ ಜೈಲುಪಾಲಾದ. ಜೈಲಿನಲ್ಲಿದ್ದಾಗಲೇ ಒಂದು ಮುದ್ರಣ ಯಂತ್ರ ಪಡೆದುಕೊಂಡು ಮುದ್ರಣದ ಕೆಲಸ ಆರಂಭಿಸಿದ. 1777ರಲ್ಲಿ ಜೈಲಿನಿಂದ ಹೊರಬಂದು ತನ್ನದೇ ಪ್ರಿಂಟಿಂಗ್ ಪ್ರೆಸ್ ಆರಂಭಿಸಿದ. ಮೂರು ವರ್ಷಗಳ ಬಳಿಕ ಅವನಿಂದಲೇ ಭಾರತದ ಮೊದಲ ಪತ್ರಿಕೆ ಆರಂಭವಾಯಿತು.

ಹಿಕಿ ಒಬ್ಬ ವಿಲಕ್ಷಣ ಪ್ರವೃತ್ತಿಯ ವ್ಯಕ್ತಿ. ಆತನ ‘ಬೆಂಗಾಲ್ ಗಜೆಟ್’ ಆರಂಭದಲ್ಲಿ ಗಂಭೀರವಾಗಿಯೇ ಪ್ರಕಟವಾಗುತ್ತಿತ್ತು. ತನ್ನದು “ಎಲ್ಲ ಪಕ್ಷಗಳಿಗೂ ಮುಕ್ತವಾದ ಆದರೆ ಯಾರಿಂದಲೂ ಪ್ರಭಾವಕ್ಕೊಳಗಾಗದ ಪತ್ರಿಕೆ” ಎಂದು ಪತ್ರಿಕೆಯ ಮೇಲ್ಭಾಗದಲ್ಲೇ ಹಿಕಿ ಪ್ರಕಟಿಸುತ್ತಿದ್ದ. ಆದರೆ ಎಂಟ್ಹತ್ತು ತಿಂಗಳಲ್ಲಿ ‘ಇಂಡಿಯಾ ಗಜೆಟ್’ ಎಂಬ ಇನ್ನೊಂದು ಪತ್ರಿಕೆ ಆರಂಭವಾದಾಗ, ಹಿಕಿಗೆ ಆತಂಕವಾಯಿತು. ತನ್ನ ಓದುಗರು ಎಲ್ಲಿ ಕಡಿಮೆಯಾಗುತ್ತಾರೋ ಎಂಬ ಆತಂಕದಲ್ಲಿ ತನ್ನ ಪತ್ರಿಕೆಯ ಧ್ವನಿಯನ್ನೇ ಬದಲಾಯಿಸಿಕೊಂಡ. ಸುದ್ದಿಗಳಲ್ಲಿ, ಲೇಖನಗಳಲ್ಲಿ ಅಲ್ಲಿಯವರೆಗೆ ಇದ್ದ ಸಮತೋಲನ ಕಳೆದುಹೋಗಿ ವೈಯಕ್ತಿಕ ಪ್ರಹಾರಗಳನ್ನು ಆರಂಭಿಸಿದ.

ಪ್ರಖರ ಟೀಕಾಕಾರ:

ಸ್ವತಃ ಯುರೋಪಿಯನ್ನನಾಗಿದ್ದೂ ಹಿಕಿ ಈಸ್ಟ್ ಇಂಡಿಯಾ ಕಂಪೆನಿಯ ಪ್ರಖರ ಟೀಕಾಕಾರನಾಗಿದ್ದ. ಅಲ್ಲಿನ ಅಧಿಕಾರಿಗಳ ದಬ್ಬಾಳಿಕೆ ಹಾಗೂ ಭ್ರಷ್ಟಾಚಾರಗಳನ್ನು ತೀಕ್ಷ್ಣವಾಗಿ ಖಂಡಿಸಿ ಲೇಖನಗಳನ್ನು ಪ್ರಕಟಿಸುತ್ತಿದ್ದ. ‘ಬೆಂಗಾಲ್ ಗಜೆಟ್’ ಬ್ರಿಟಿಷ್ ಅಧಿಕಾರಿಗಳ ಪಾಲಿಗೆ ನುಂಗಲಾರದ ಬಿಸಿತುಪ್ಪವಾಗಿತ್ತು. ಆಗ ಭಾರತದ ಗವರ್ನರ್ ಜನರಲ್ ಆಗಿದ್ದ ವಾರನ್ ಹೇಸ್ಟಿಂಗ್ಸ್, ಸುಪ್ರೀಂಕೋರ್ಟಿನ ಮುಖ್ಯನಾಯಾಧೀಶರಾಗಿದ್ದ ಸರ್ ಎಲಿಜಾ ಇಂಪೆಯವರನ್ನೂ ಬಿಡದೆ ಕಾಡಿದ ಹಿಕಿ.

ಆದರೆ ಟೀಕೆಯ ಭರದಲ್ಲಿ ಹಿಕಿ ವೈಯಕ್ತಿಕ ದಾಳಿಯಲ್ಲಿ ತೊಡಗಿದ. ತನಗಾಗದಿದ್ದವರ ಖಾಸಗಿ ಬದುಕಿನ ಕುರಿತು ವ್ಯಂಗ್ಯವಾಡಿದ. ಹೇಸ್ಟಿಂಗ್ಸ್‍ನ ಪತ್ನಿಯ ಕುರಿತೂ ದೋಷಾರೋಪಣೆ ಮಾಡಿದ. ಇದರಿಂದಾಗಿ ಹಿಕಿ ಪದೇಪದೇ ಮಾನನಷ್ಟ ಮೊಕದ್ದಮೆಗಳನ್ನು ಎದುರಿಸಬೇಕಾಯಿತು. ಕೋರ್ಟು ಕಚೇರಿ ಅಲೆದಾಡಬೇಕಾಯಿತು. ಸಾವಿರಾರು ರುಪಾಯಿ ದಂಡ ಹಾಕಿಸಿಕೊಳ್ಳಬೇಕಾಯಿತು. ಬೆಂಗಾಲ್ ಗಜೆಟ್‍ನ ಅಂಚೆ ಸೌಲಭ್ಯ ರದ್ದಾಯಿತು. ಕೊನೆಗೊಂದು ದಿನ ಹಿಕಿಯ ಮುದ್ರಣಾಲಯವನ್ನೇ ಸರ್ಕಾರ ವಶಪಡಿಸಿಕೊಂಡು ಬೀಗ ಜಡಿಯಿತು. 1782ರ ಮಾರ್ಚ್ 23ರಂದು ಗಜೆಟ್‍ನ ಕೊನೆಯ ಸಂಚಿಕೆ ಪ್ರಕಟವಾಯಿತು.

ಮರೆತುಹೋದ ಮಹಾನುಭಾವ:

ಹಿಕಿಯ ಬಗ್ಗೆ ಇತಿಹಾಸದಲ್ಲಿ ಅಂತಹ ಒಳ್ಳೆಯ ಅಭಿಪ್ರಾಯವೇನೂ ಇಲ್ಲ. ಆದರೆ ಆತನಿಂದಲೇ ಭಾರತೀಯ ಪತ್ರಿಕಾಲೋಕ ಹುಟ್ಟಿಕೊಂಡಿತು ಎಂಬುದರಲ್ಲಿ ಎರಡು ಮಾತಿಲ್ಲ. ಆತ ಒಳ್ಳೆಯ ಉದ್ದೇಶದಿಂದಲೇ ಪತ್ರಿಕೆ ಆರಂಭಿಸಿದ, ಬ್ರಿಟಿಷರ ಭ್ರಷ್ಟಾಚಾರಗಳನ್ನು ಕಟುವಾಗಿ ಟೀಕಿಸಿದ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಷಿಸಿಕೊಳ್ಳುವುದಕ್ಕಾಗಿ ಕೊನೆಯವರೆಗೂ ಹೋರಾಡಿದ. ಆದರೆ ಒಂದು ಹಂತದಲ್ಲಿ ಆತ ಬೆಳೆಸಿಕೊಂಡ ಕೀಳು ಅಭಿರುಚಿ ಹಾಗೂ ಕಂಪೆನಿಯ ಪೂರ್ವಗ್ರಹದಿಂದ ಆತನಿಗೆ ಹೆಚ್ಚುಸಮಯ ಪತ್ರಿಕೆಯನ್ನು ನಡೆಸಲಾಗಲಿಲ್ಲ. ಆತನನ್ನು ‘ಮರೆತುಹೋದ ಮಹಾನುಭಾವ’ ‘ಭಾರತೀಯ ಪತ್ರಿಕೋದ್ಯಮದ ಪಿತಾಮಹ’ ಅಂತಲೂ ಇತಿಹಾಸಕಾರರು ದಾಖಲಿಸಿದ್ದುಂಟು.

ಒಟ್ಟಿನಲ್ಲಿ, ಬೆಂಗಾಲ್ ಗಜೆಟ್‍ನ ಹುಟ್ಟಿನ ನೆನಪಲ್ಲಿ ಜನವರಿ 29 ‘ಭಾರತೀಯ ಪತ್ರಿಕಾ ದಿನ’ ಎಂದು ಪ್ರಸಿದ್ಧಿಪಡೆದಿದೆ. ನಮ್ಮ ಪತ್ರಿಕಾಲೋಕದ ಸಿಂಹಾವಲೋಕನಕ್ಕೆ ಇದು ಸುದಿನ.

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 31, 2023

ಸವಾಲುಗಳೆಂಬ ಬದುಕಿನ ದೀಪಸ್ತಂಭಗಳು

23-29 ಸೆಪ್ಟೆಂಬರ್‌ 2023ರ ʻಬೋಧಿವೃಕ್ಷʼದಲ್ಲಿ ಪ್ರಕಟವಾದ ಲೇಖನ

:

:

ತೇಜಸ್ವಿ ಪಿಯುಸಿಗೆ ಬರುವ ಹೊತ್ತಿಗೆ ಕೋವಿಡ್ ಮಹಾಮಾರಿ ಜಗತ್ತನ್ನು ಆವರಿಸಿಕೊಂಡಿತ್ತು. ಎಲ್ಲೆಡೆ ಲಾಕ್‌ಡೌನ್, ಎಲ್ಲರಿಗೂ ಗೃಹಬಂಧನ. ಅವನು ಕಾಲೇಜನ್ನು ನೋಡಿದ್ದೇ ಕಡಿಮೆ. ಪಾಠ, ಪರೀಕ್ಷೆ ಎಲ್ಲವೂ ಆನ್ಲೆನಿನಲ್ಲೇ ನಡೆಯುತ್ತಿದ್ದವು. ಅಂತರಜಾಲದ ಹೊಸ ಸಾಧ್ಯತೆ ಹೊಸಹೊಸ ಆತಂಕಗಳನ್ನೂ ತಂದಿತ್ತು. ತೇಜಸ್ವಿಯ ವಯಸ್ಸಿನ ಬಹುತೇಕ ಹುಡುಗರು ಆಗಲೇ ಸಾಮಾಜಿಕ ಜಾಲತಾಣಗಳಲ್ಲಿ ಕಳೆದುಹೋಗಿದ್ದರು. ತೇಜಸ್ವಿಯೂ ಅವುಗಳಲ್ಲಿ ಮುಳುಗಿದ್ದ- ಆದರೆ ಕಾಲಯಾಪನೆಗೆ ಅಲ್ಲ.

ಅವನು ಭವಿಷ್ಯದ ಹೊಸ ಸಾಧ್ಯತೆಗಳ ಅನ್ವೇಷಣೆಯಲ್ಲಿದ್ದ. ಇಂಜಿನಿಯರಿಂಗ್, ಮೆಡಿಕಲ್ ಬಿಟ್ಟು ಜಗತ್ತಿನಲ್ಲಿ ಇನ್ನೇನಿದೆ ಎಂದು ಹುಡುಕುತ್ತಿದ್ದ. ಕೊಂಚ ಸಾಹಸಪ್ರವೃತ್ತಿಯ ಅವನನ್ನು ಸೆಳೆದದ್ದು ಮರ್ಚೆಂಟ್ ನೇವಿ. ಪ್ರಪಂಚದ ಒಟ್ಟಾರೆ ವಾಣಿಜ್ಯಕ ಸರಕು ಸಾಗಾಣಿಕೆಯ ಶೇ. ೯೦ರಷ್ಟು ವ್ಯವಹಾರ ಈ ಮರ್ಚೆಂಟ್ ನೇವಿಯ ಮೂಲಕವೇ ನಡೆಯುತ್ತದಾದರೂ ಇದರ ಬಗ್ಗೆ ತಿಳಿದುಕೊಂಡವರು ನಮ್ಮಲ್ಲಿ ಕಡಿಮೆ. ಕೋವಿಡ್ ತೆರೆದುತೋರಿಸಿದ ಆನ್ಲೈನ್ ಪ್ರಪಂಚ ತೇಜಸ್ವಿಗೆ ಅಜ್ಞಾತ ಪ್ರಪಂಚದ ಅನಾವರಣ ಮಾಡಿತು.

ಅಲ್ಲಿಂದ ಆರಂಭವಾಯಿತು ಹೊಸ ಧ್ಯಾನ. ಮರ್ಚೆಂಟ್ ನೇವಿ ಸೇರಬೇಕೆಂದರೆ ಅಗತ್ಯವಿರುವ ದೇಹದಾರ್ಢ್ಯ, ಮಾನಸಿಕ ದೃಢತೆ, ತಿಳುವಳಿಕೆ ಸಂಪಾದಿಸಲು ಸದಾ ತಯಾರಿ. ಊಟಕ್ಕೆ ಕೂರುವಾಗ ಪಕ್ಕದಲ್ಲಿ ತಕ್ಕಡಿ ಇಟ್ಟುಕೊಳ್ಳುವ ಅವನನ್ನು ನೋಡಿ ಮನೆಮಂದಿಗೆ ಸೋಜಿಗ. ಬಾಲ್ಯದಿಂದಲೂ ವೈವಿಧ್ಯಮಯ ತಿಂಡಿತಿನಿಸಿನಲ್ಲಿ ಆಸಕ್ತಿಯಿದ್ದ ಹುಡುಗ ಹೊಸ ಜಗತ್ತಿನ ಸೆಳೆತ ಹುಟ್ಟಿಕೊಂಡ ಮೇಲೆ ಶಿಸ್ತಿನ ಸಿಪಾಯಿಯಾಗಿಬಿಟ್ಟ. ಅವನದ್ದೇ ದಿನಚರಿ, ಅವನದ್ದೇ ಆಹಾರ ವಿಹಾರ, ಅವನದ್ದೇ ಕನಸಿನಲೋಕ. ಅಂತರಜಾಲದ ಅಷ್ಟೂ ಸಾಧ್ಯತೆಗಳನ್ನು ಬಳಸಿಕೊಂಡು ಮುಂದಿನ ವರ್ಷಕ್ಕೆ ಸಿದ್ಧವಾಗುತ್ತಿದ್ದ. ಸಾಮಾಜಿಕ ಜಾಲತಾಣಗಳ ಮೂಲಕ ಮರ್ಚೆಂಟ್ ನೇವಿಯಲ್ಲಿದ್ದ ಅನುಭವಸ್ಥರ ಸಂಪರ್ಕ ಮಾಡಿಕೊಂಡು ಅವರಿಂದ ಮಾರ್ಗದರ್ಶನ ಪಡೆದ. ಮಾಕ್ ಟೆಸ್ಟ್, ಮಾಕ್ ಇಂಟರ್ವ್ಯೂಗಳಲ್ಲಿ ಭಾಗವಹಿಸಿದ. ನೋಟ್ಸ್, ಪ್ರಶ್ನೋತ್ತರಗಳನ್ನು ಬರೆಯುತ್ತಾ ನೂರಾರು ಪುಟ ಮುಗಿಸಿದ. 

ನೋಡುತ್ತಲೇ ಪುಣೆಯ ಪ್ರತಿಷ್ಠಿತ ಕಾಲೇಜೊಂದರಲ್ಲಿ ತಾನು ಬಯಸಿದ ಕೋರ್ಸಿಗೆ ಆಯ್ಕೆಯಾದ. ಕೋವಿಡ್ ಆತಂಕದಿಂದ ಜಗತ್ತು ನಿಧಾನಕ್ಕೆ ಹೊರಬರುವ ಹೊತ್ತಿಗೆ ಅವನ ಹೊಸ ಪಯಣ ಆರಂಭವಾಯಿತು. ಒಂದು ವರ್ಷದ ಥಿಯರಿ ತರಗತಿಗಳನ್ನು ಮುಗಿಸಿ ಪ್ರಾಯೋಗಿಕ ತರಬೇತಿಗಾಗಿ ಸಿಂಗಾಪುರದಿಂದ ಹಡಗನ್ನೇರಿದ. ಹತ್ತಾರು ದೇಶಗಳ ಕಡಲಕಿನಾರೆಗಳನ್ನು ಮುಟ್ಟಿ, ತನ್ನ ಮೊದಲ ವರ್ಷದ ಸಮುದ್ರಯಾನ ಮುಗಿಸಿ ಮೊನ್ನೆಮೊನ್ನೆ ವಾಪಸಾದ. ತಾನು ಇಷ್ಟಪಟ್ಟದ್ದನ್ನು ಸಾಧಿಸಿದ ತೃಪ್ತಿ ಅವನ ಮುಖದಲ್ಲಿ. ಮಗನ ಬಗ್ಗೆ ಹೆಮ್ಮೆ ಅಪ್ಪ-ಅಮ್ಮನ ಮುಖದಲ್ಲಿ.

ಇದು ಕನ್ನಡದ ಹುಡುಗನೊಬ್ಬನ ಕಥೆ. ಅತ್ತಿತ್ತ ಕಣ್ಣಾಡಿಸಿದರೆ ಇಂತಹ ನೂರೆಂಟು ಕಥೆಗಳು ನಮಗೆ ಸಿಗಬಹುದು- ಕೋವಿಡ್ ಮಹಾಮಾರಿಯಿಂದ ಜಗತ್ತೇ ಕಂಗೆಟ್ಟಿರುವಾಗ, ಅದು ತಂದಿಟ್ಟ ಸವಾಲುಗಳನ್ನು ಅವಕಾಶಗಳನ್ನಾಗಿ ಪರಿವರ್ತಿಸಿಕೊಂಡವರ ಕಥೆಗಳು.

ಜೀವನದಲ್ಲಿ ಎದುರಾಗುವ ಬಹುತೇಕ ಕಷ್ಟಗಳು, ಸವಾಲುಗಳು ವಾಸ್ತವವಾಗಿ ಕಷ್ಟಗಳೇ ಆಗಿರುವುದಿಲ್ಲ. ನಿಜವಾಗಿಯೂ ಅವು ನಮ್ಮೆದುರಿನ ದೊಡ್ಡ ಅವಕಾಶಗಳಾಗಿರುತ್ತವೆ. ಇದನ್ನು ಅರ್ಥ ಮಾಡಿಕೊಂಡವರು ಯಶಸ್ಸು ಪಡೆಯುತ್ತಾರೆ, ಅರ್ಥ ಮಾಡಿಕೊಳ್ಳಲು ವಿಫಲರಾದವರು ಜೀವನದಲ್ಲೂ ವೈಫಲ್ಯ ಕಾಣುತ್ತಾರೆ. ಇನ್ನೇನು ಪ್ರವಾಹದಲ್ಲಿ ಮುಳುಗಿಯೇ ಹೋಗುತ್ತೇನೆ ಎಂದುಕೊಂಡವನಿಗೆ ಕೈಗೆ ಸಿಗುವ ಹುಲ್ಲುಕಡ್ಡಿಯೂ ಆಸರೆಯಾಗುತ್ತದಂತೆ. ಹುಲ್ಲುಕಡ್ಡಿಯಲ್ಲಿ ಆತ ತನ್ನ ಪುನರ್ಜನ್ಮದ ಶಕ್ತಿಯನ್ನು ಕಂಡುಕೊಳ್ಳುವುದು ಮುಖ್ಯ ಅಷ್ಟೇ. 

ಅಡೆತಡೆಗಳು ಇಲ್ಲದಾಗ ಬದುಕು ನೀರಸವೆನಿಸುತ್ತದೆ. ನಿಂತ ನೀರು ಮಾತ್ರ ಉಬ್ಬರವಿಳಿತವಿಲ್ಲದೆ ಇರಬಲ್ಲುದು. ಬದುಕು ಹರಿಯುವ ನದಿಯೆಂದು ನಾವು ಒಪ್ಪಿಕೊಳ್ಳುವುದಾದರೆ ಅಲ್ಲಲ್ಲಿ ಕಲ್ಲುಬಂಡೆಗಳು, ಜಲಪಾತಗಳು, ಕೊರಕಲುಗಳು ಇದ್ದೇ ಇರುತ್ತವೆ. ನೀರು ನಿಂತಲ್ಲೇ ಇದ್ದರೆ ಪಾಚಿ ಕಟ್ಟಿಕೊಂಡು ದುರ್ವಾಸನೆ ಬೀರುತ್ತದೆ. ಅದು ಹರಿಯಲೇಬೇಕು- ಬದುಕಿನ ಥರ. ‘ಸವಾಲುಗಳು ಬದುಕನ್ನು ಆಸಕ್ತಿದಾಯಕವನ್ನಾಗಿಸುತ್ತವೆ. ಅವುಗಳನ್ನು ಮೀರಿದಾಗ ಬದುಕು ಅರ್ಥಪೂರ್ಣವೆನಿಸುತ್ತದೆ’ ಎಂಬ ಮಾತನ್ನು ಇದೇ ಅರ್ಥದಲ್ಲಿ ಹೇಳಿರುವುದು.

ಎಂತೆಂತಹವರೆಲ್ಲ ಆರಾಮ ಜೀವನ ನಡೆಸುತ್ತಿರುತ್ತಾರೆ, ಕಷ್ಟಗಳೆಲ್ಲ ನಮಗೆ ಮಾತ್ರ ಬರುತ್ತಿರುತ್ತವೆ ಎಂದು ಕೊರಗುವವರು ಬಹಳ ಮಂದಿ. ಅವರೆಲ್ಲ ಅರ್ಥ ಮಾಡಿಕೊಳ್ಳಬೇಕಿರುವುದು ಇಷ್ಟೇ: ಕಹಿಯಿಲ್ಲದೆ ಹೋದರೆ ಸಿಹಿ ಯಾವುದೆಂದು ತಿಳಿಯುವುದಿಲ್ಲ, ಕತ್ತಲೆಯೆಂಬುದು ಇಲ್ಲದೆ ಹೋದರೆ ಬೆಳಕಿನ ಮಹಿಮೆ ತಿಳಿಯುವುದಿಲ್ಲ. ಹೆಚ್ಚಿನ ಸಂದರ್ಭಗಳಲ್ಲೂ ನಮ್ಮೆದುರಿನ ಸವಾಲುಗಳ ಅಂತರ್ಯದಲ್ಲಿ ಜಗತ್ತನ್ನು ಬೆರಗುಗೊಳಿಸಬಲ್ಲ ಹೊಸ ಸಾಧ್ಯತೆಗಳಿರುತ್ತವೆ. ನೋಡುವ ಕಣ್ಣುಗಳು ನಮ್ಮದಾಗಿರಬೇಕು ಅಷ್ಟೇ. ಅಡುಗೆ ಮನೆಯಲ್ಲಿ ಒಂದು ಹಿಡಿ ತರಕಾರಿ ಇಲ್ಲದಾಗಲೂ ರುಚಿಕಟ್ಟಾದ ಅಡುಗೆ ಮಾಡಿ ಉಣಬಡಿಸುತ್ತಾಳೆ ಅಮ್ಮ. ಅಂತಹದೊಂದು ಮನಸ್ಸು, ಸಾಮರ್ಥ್ಯ ಅಮ್ಮನಿಗೆ ಇರುತ್ತದೆ. ಇದ್ದುದರಲ್ಲಿ ನಳಪಾಕ ಮಾಡುತ್ತಾಳೆ ಅವಳು. ಬದುಕಿನ ಇತಿಮಿತಿಗಳ ಕಥೆಯೂ ಇದೇ. ಸಾಧ್ಯವೇ ಇಲ್ಲ ಎಂಬ ಸನ್ನಿವೇಶದಲ್ಲೂ ಏನಾದರೊಂದು ಸಾಧ್ಯತೆ ಇದ್ದೇ ಇರುತ್ತದೆ. ಅದನ್ನು ಬಳಸಿಕೊಳ್ಳುವುದು ನಮ್ಮ ಧೋರಣೆಯನ್ನು ಅವಲಂಬಿಸಿದೆ ಅಷ್ಟೇ. 

ಹಿರಿಯರು ಎಷ್ಟು ಚೆನ್ನಾಗಿ ಹೇಳಿದ್ದಾರೆ ನೋಡಿ- ‘ಜೀವನದಲ್ಲಿ ಕಷ್ಟಗಳು ಬರುವುದು ನಮ್ಮನ್ನು ನಾಶ ಮಾಡುವುದಕ್ಕಲ್ಲ; ನಮ್ಮ ಅಂತಃಸತ್ವವನ್ನು ನಮಗೆ ಪರಿಚಯಿಸಿಕೊಡುವುದಕ್ಕೆ’. ನಾವು ಏನು ಎಂದು ನಮಗೆ ಅರ್ಥವಾಗುವುದು ಸವಾಲುಗಳು ಎದುರಾದಾಗಲೇ. ತುಪ್ಪವಾಗಿ ಪರಿಮಳ ಬೀರುವುದಕ್ಕೆ ಬೆಣ್ಣೆಮುದ್ದೆಗೂ ಬಿಸಿ ಬೇಕೇಬೇಕು. ಸದಾ ತಣ್ಣಗೇ ಇರುತ್ತೇನೆಂದರೆ ಸುಮ್ಮನೇ ಮಜ್ಜಿಗೆಯ ಮೇಲೆ ತೇಲುತ್ತಾ ಕಾಲಯಾಪನೆ ಮಾಡಬೇಕಷ್ಟೆ. ಅನಿವಾರ್ಯತೆಯೇ ಅನ್ವೇಷಣೆಯ ತಾಯಿ ಎಂಬ ನಾಣ್ಣುಡಿಯಿದೆ. ಅನಿವಾರ್ಯಗಳು ಎದುರಾದಾಗ ಹೊಸ ಹಾದಿಗಳು ಗೋಚರಿಸುತ್ತವೆ. ಸವಾಲುಗಳು ಎದುರಾದಾಗ ಬುದ್ಧಿ ಚುರುಕಾಗುತ್ತದೆ, ಮನಸ್ಸು ಗಟ್ಟಿಯಾಗುತ್ತದೆ, ಕ್ರಿಯಾಶೀಲತೆ ತೆರೆದುಕೊಳ್ಳುತ್ತದೆ. ಪರಿಹಾರದ ದಾರಿಗಳು ತಾವಾಗಿಯೇ ತೆರೆದುಕೊಳ್ಳುತ್ತವೆ. ಅನಿವಾರ್ಯಗಳೇ ಇಲ್ಲದಾಗ ಮನಸ್ಸು ಜಡವಾಗುತ್ತದೆ, ಬುದ್ಧಿಗೆ ಮಂಕು ಕವಿಯುತ್ತದೆ. ಸೋಮಾರಿ ಮನಸ್ಸು ದೆವ್ವಗಳ ಆಡುಂಬೊಲ. ಏನೂ ಕೆಲಸವಿಲ್ಲದ ಮನಸ್ಸಿಗೆ ಕುಚೇಷ್ಟೆ, ದುರ್ವ್ಯಸನಗಳೇ ಆಕರ್ಷಕ, ರುಚಿಕರ ಎನಿಸುತ್ತವೆ. ಅವು ಚಟಗಳಾಗಿ ಬದಲಾಗುತ್ತವೆ. ಮನುಷ್ಯ ಬದುಕಿದ್ದಾಗಲೇ ಶವವಾಗುವುದಕ್ಕೆ ಇವು ಧಾರಾಳ ಸಾಕು.

ನಡೆಯುವ ಹಾದಿಯಲ್ಲಿ ವಾಸ್ತವವಾಗಿ ನಮಗೆ ಅಡೆತಡೆ ಗೋಚರಿಸುವುದು ತಲುಪಬೇಕಾದ ಗುರಿಯ ಬಗ್ಗೆ ಗೊಂದಲವಿದ್ದಾಗ ಮಾತ್ರ. ಉಳಿದೆಲ್ಲ ದ್ರೋಣಶಿಷ್ಯರಿಗೆ ಮರ, ರೆಂಬೆಕೊಂಬೆ, ಎಲೆ, ಬಳ್ಳಿ, ಹೂವು, ಹಕ್ಕಿ ಕಾಣಿಸಿದಾಗ ಅರ್ಜುನನೊಬ್ಬನಿಗೆ ಹಕ್ಕಿಯ ಕಣ್ಣು ಕಾಣಿಸಿತಲ್ಲ, ಅಂತಹದೇ ಸನ್ನಿವೇಶ ಇದು. ಗಮ್ಯಸ್ಥಾನದ ಬಗ್ಗೆ ಸ್ಪಷ್ಟತೆಯಿದ್ದಾಗ, ಉಳಿದವೆಲ್ಲ ನಗಣ್ಯ ಎನಿಸುತ್ತದೆ. ಗುರಿಯ ಕುರಿತೇ ಅನಾಸಕ್ತಿಯಿದ್ದಾಗ ಹತ್ತಾರು ನೆಪಗಳು ತಾವಾಗಿಯೇ ಎದ್ದುಬಂದು ಕೈಕಾಲಿಗೆ ತೊಡರಿಕೊಳ್ಳುತ್ತವೆ.

ಅನೇಕ ಬಾರಿ ನಮಗೆ ಕಷ್ಟಗಳು ಎದುರಾಗುವುದು ನಾವು ತಪ್ಪು ಮಾಡುತ್ತಿದ್ದೇವೆ ಎಂಬ ಕಾರಣಕ್ಕಲ್ಲ, ಸರಿಯಾದುದನ್ನು ಮಾಡುತ್ತಿದ್ದೇವೆ ಎಂಬ ಕಾರಣಕ್ಕೆ. ಸವಾಲುಗಳು ಎದುರಾದಾಗ ನಮ್ಮ ಹಾದಿ ಸರಿಯಿದೆ ಎಂದು ಭಾವಿಸಿಕೊಳ್ಳುವುದೇ ಸೂಕ್ತ. ನಮ್ಮತ್ತ ಎಸೆದ ಕಲ್ಲುಗಳನ್ನೇ ಆರಿಸಿಕೊಂಡು ಭವಿಷ್ಯದ ಸೌಧ ಕಟ್ಟಿಕೊಳ್ಳುವ ಛಾತಿ, ಆತ್ಮವಿಶ್ವಾಸ ನಮ್ಮದಿರಬೇಕು ಅಷ್ಟೇ. ಇಂತಹ ಅನುಭವಗಳಿರುವ ಕಾರಣಕ್ಕೇ ಹಿರಿಯರ ಮಾತುಗಳನ್ನು ದಾರಿದೀಪ ಎಂದು ನಾವು ತಿಳಿಯಬೇಕಿರುವುದು- “ಬದುಕೇ ಒಂದು ಸವಾಲು, ಏಕೆಂದರೆ ಸವಾಲುಗಳಿಂದ ಮಾತ್ರ ನಾವು ಬೆಳೆಯುವುದು ಸಾಧ್ಯ.” 

- ಸಿಬಂತಿ ಪದ್ಮನಾಭ ಕೆ. ವಿ.

ಮಂಗಳವಾರ, ಅಕ್ಟೋಬರ್ 10, 2023

ಲೇಖಕರಾಗಲು ಹತ್ತು ಸೂತ್ರಗಳು

ʻಉದಯವಾಣಿʼ UV Fusion 100ನೆಯ ಸಂಚಿಕೆಯಲ್ಲಿ ಪ್ರಕಟವಾದ ಲೇಖನ | 08 ಅಕ್ಟೋಬರ್‌ 2023

ಒಂದು ವಿಷಯದ ಕುರಿತು ಗಂಟೆಗಟ್ಟಲೆ, ದಿನಗಟ್ಟಲೆ ಅಧ್ಯಯನ ಮಾಡಿ, ಟಿಪ್ಪಣಿ ಮಾಡಿಕೊಂಡು, ಕೊನೆಗೊಮ್ಮೆ ಆ ಟಿಪ್ಪಣಿಗೆಳನ್ನೆಲ್ಲ ಮುಚ್ಚಿ ಬದಿಗಿಟ್ಟು ಕುಳಿತಲ್ಲಿಂದ ಏಳದೆ ಸರಸರನೆ ನಿಮ್ಮಷ್ಟಕ್ಕೆ ಒಂದು ಲೇಖನವನ್ನು ಬರೆಯಬಲ್ಲಿರಾ? ಅದು ನಿಮ್ಮ ಅತ್ಯುತ್ತಮ ಬರೆಹ ಎನಿಸೀತು.

ಅನೇಕ ಮಂದಿ ಒಳ್ಳೆಯ ಲೇಖಕರಾಗಬೇಕೆಂದು, ನಾಲ್ಕು ಮಂದಿಯಿಂದ ಸೈ ಅನಿಸಿಕೊಳ್ಳಬೇಕೆಂದು ಕನಸು ಕಾಣುತ್ತಾರೆ. ಅದು ನನಸಾಗದೆ ಭ್ರಮನಿರಸನಗೊಳ್ಳುತ್ತಾರೆ. ಇದಕ್ಕೆ ಮುಖ್ಯವಾಗಿ ಕಾರಣಗಳು ಎರಡು: ಬರೆವಣಿಗೆಗೆ ಪೂರಕ ಅಧ್ಯಯನವಿಲ್ಲದಿರುವುದು ಮತ್ತು ನಿರಂತರವಾಗಿ ಬರೆಯದಿರುವುದು.

ಬರೆವಣಿಗೆಯೆಂಬುದು ಕನಸು ಕಂಡಷ್ಟು ಸುಲಭವಲ್ಲ. ಅದೊಂದು ತಪಸ್ಸಿನ ಹಾಗೆ. ತಪಸ್ಸಿಗೆ ಕುಳಿತವರಿಗೆ ಎಂದೂ ಕರಗದ ಛಲ, ಕಠಿಣ ಪರಿಶ್ರಮ, ಏಕಾಗ್ರತೆ ಇರಬೇಕಾಗುತ್ತದೆ. ಅದು ಎವರೆಸ್ಟ್‌ ಶಿಖರವನ್ನು ಏರುವ ಸಾಹಸ. ಅರ್ಧದಲ್ಲಿ ಪ್ರಯತ್ನ ಕೈಬಿಟ್ಟರೆ ಎವರೆಸ್ಟ್‌ ಹತ್ತಿದಂತೆ ಆಗುವುದಿಲ್ಲ.

ಹಾಗಾದರೆ ಒಳ್ಳೆಯ ಬರೆಹಗಾರರೆನಿಸಿಕೊಳ್ಳಲು ಏನು ಮಾಡಬೇಕು? ಅದಕ್ಕಾಗಿ ಹತ್ತು ಸೂತ್ರಗಳು ಇಲ್ಲಿವೆ ನೋಡಿ:

  1. ಬರೆಯುವುದಕ್ಕಿಂತಲೂ ಓದು ಹೆಚ್ಚು ಮುಖ್ಯ. ಹತ್ತು ಓದಿದ ಬಳಿಕ ಒಂದು ಬರೆ ಎಂಬುದು ಹಿರಿಯರ ಸಲಹೆ. ಕಥೆ, ಕಾದಂಬರಿ, ಕಾವ್ಯ, ಲಲಿತಪ್ರಬಂಧ, ಜೀವನಚರಿತ್ರೆ ಇತ್ಯಾದಿಗಳನ್ನು ನಿರಂತರವಾಗಿ ಓದುತ್ತಿರಬೇಕು. ತಿಂಗಳಿಗೊಂದಾದರೂ ಹೊಸ ಪುಸ್ತಕ ಓದಬೇಕು.
  2. ಪತ್ರಿಕೆ ಹಾಗೂ ನಿಯತಕಾಲಿಕಗಳು ನಮ್ಮ ದೈನಂದಿನ ಓದಿನ ಭಾಗವಾಗಿರಬೇಕು. ಹೀಗೆ ಓದುವಾಗಲೆಲ್ಲ ಒಂದು ಪುಟ್ಟ ಟಿಪ್ಪಣಿ ಪುಸ್ತಕ ಜತೆಗಿರಬೇಕು. ಮುಖ್ಯವೆನಿಸುವ ಘಟನೆಗಳು, ಅಂಕಿಅಂಶಗಳು, ಉಕ್ತಿಗಳನ್ನು ಆಗಿಂದಾಗಲೇ ಬರೆದಿಟ್ಟುಕೊಳ್ಳಬೇಕು.
  3. ಭಾಷೆಯೇ ಬರೆಹಗಾರನ ಬಂಡವಾಳ. ಭಾಷೆಯನ್ನು ಚೆನ್ನಾಗಿ ದುಡಿಸಿಕೊಳ್ಳಬಲ್ಲವರು ಮಾತ್ರ ಉತ್ತಮ ಲೇಖಕರಾಗಬಲ್ಲರು. ಶ್ರೇಷ್ಠ ಗದ್ಯಕೃತಿಗಳ ನಿರಂತರ ಓದಿನಿಂದ ಮಾತ್ರ ಉತ್ತಮ ಶಬ್ದಭಂಡಾರ, ಸುಲಲಿತ ಭಾಷೆ ಬೆಳೆಯಬಹುದು.
  4. ಬರೆವಣಿಗೆಯಲ್ಲಿ ನಿರಂತರತೆ ಇದ್ದಾಗ ಮಾತ್ರ ಅದರಲ್ಲೊಂದು ಲಯಸಿದ್ಧಿ ಸಾಧ್ಯ. ʻಹಾಡಿ ಹಾಡಿ ರಾಗʼ ಎಂಬಂತೆ ಬರೆದು ಬರೆದೇ ಬರೆವಣಿಗೆಯ ನಾಡಿಮಿಡಿತ ಹಿಡಿಯಲಾದೀತು. ಪದದಿಂದ ಪದಕ್ಕೆ, ವಾಕ್ಯದಿಂದ ವಾಕ್ಯಕ್ಕೆ ಅರ್ಥಪೂರ್ಣ ಜೋಡಣೆ, ಸುಸಂಬದ್ಧತೆ, ಲಯಬದ್ಧತೆ ಇರಬೇಕು.
  5. ಆರೋಗ್ಯ ಮತ್ತು ಸೌಂದರ್ಯವನ್ನು ಕಾಪಾಡಿಕೊಳ್ಳುವುದಕ್ಕೆ ವ್ಯಾಯಾಮ ಹೇಗೆ ನಿರಂತರವಾಗಿರಬೇಕೋ, ಬರೆವಣಿಗೆಯ ಸೌಂದರ್ಯ ಉಳಿಸಿಕೊಳ್ಳುವುದಕ್ಕೂ ಅದೇ ಬಗೆಯ ಪ್ರಯತ್ನ ಬೇಕು. ನಡುವೆ ನಿಲ್ಲಿಸಿದರೆ ಬೊಜ್ಜು ಬೇಡವೆಂದರೂ ಬಂದು ತುಂಬಿಕೊಂಡೀತು.
  6. ದಿನಚರಿ ಬರೆಯುವುದನ್ನು ರೂಢಿಸಿಕೊಳ್ಳುವುದು ಬರೆವಣಿಗೆಯಲ್ಲಿ ನಿರಂತರತೆ ಸಾಧಿಸುವುದಕ್ಕೆ ಸುಲಭ ಮಾರ್ಗ. ಆಯಾ ದಿನದ ಪ್ರಮುಖ ಅನುಭವಗಳನ್ನು ಬರೆದಿಡುತ್ತಾ ಹೋಗಿ. ಪ್ರತಿದಿನ ಮಲಗುವುದಕ್ಕೆ ಮುಂಚೆ ಹತ್ತು ನಿಮಿಷ ಇದಕ್ಕಾಗಿ ಮೀಸಲಿಡಿ. ನಿಮ್ಮ ಅಭಿವ್ಯಕ್ತಿ ವಿಧಾನದಲ್ಲಿ ಆಗುವ ಬದಲಾವಣೆಯನ್ನು ನೀವೇ ಗಮನಿಸುವಿರಿ.
  7. ಆರಂಭದಲ್ಲೇ ದೊಡ್ಡ ದೊಡ್ಡ ಲೇಖನಗಳನ್ನು ಬರೆಯುವುದಕ್ಕೆ ತೊಡಗಬೇಡಿ. ಪುಟ್ಟಪುಟ್ಟ ಬರೆಹಗಳಿಂದ ಆರಂಭಿಸಿ. ಉದಾಹರಣೆಗೆ, ಪತ್ರಿಕೆಗಳಲ್ಲಿನ ʼಸಂಪಾದಕರಿಗೆ ಪತ್ರʼ ಅಂಕಣವನ್ನು ಯತೇಚ್ಛ ಬಳಸಿಕೊಳ್ಳಿ. ಸಮಕಾಲೀನ ವಿದ್ಯಮಾನಗಳು, ಸಮಸ್ಯೆಗಳ ಕುರಿತು ಬರೆಯಿರಿ; ಪ್ರಕಟಿತ ಲೇಖನ, ಅಂಕಣ, ಸಂಪಾದಕೀಯ, ನುಡಿಚಿತ್ರಗಳಿಗೆ ಪ್ರತಿಕ್ರಿಯೆ ಬರೆಯಿರಿ. ಇದರಿಂದ ಆತ್ಮವಿಶ್ವಾಸ ಹೆಚ್ಚುತ್ತದೆ.
  8. ಏನೇ ಬರೆದರೂ ಅದನ್ನು ನೀವೇ ಮತ್ತೆಮತ್ತೆ ಓದಿಕೊಂಡು ಪದಗಳು, ವಾಕ್ಯಗಳು ಸುಲಲಿತವಾಗಿ ಸಾಗಿವೆಯೇ ಎಂದು ಪರಿಶೀಲಿಸಿಕೊಳ್ಳಿ. ಕಾಗುಣಿತ ತಪ್ಪುಗಳಿದ್ದರೆ ತಿದ್ದಿಕೊಳ್ಳಿ. ಸ್ನೇಹಿತರಿಗೋ ಅಧ್ಯಾಪಕರಿಗೋ ತೋರಿಸಿ ಅವರ ಅಭಿಪ್ರಾಯ ಪಡೆಯಿರಿ.
  9. ಯಾವುದೇ ವಿಷಯ ಬರೆಯುವ ಮುಂಚೆ ಅದನ್ನು ಎಲ್ಲ ಆಯಾಮಗಳಿಂದಲೂ ಯೋಚಿಸಿ. ದೊರೆಯುವ ಸಂಪನ್ಮೂಲಗಳನ್ನೆಲ್ಲ ಅಧ್ಯಯನ ಮಾಡಿ. ಆದರೆ ಅವುಗಳನ್ನೇ ಲೇಖನಕ್ಕೆ ಭಟ್ಟಿಯಿಳಿಸಲು ಹೋಗಬೇಡಿ. ಸ್ವಂತಿಕೆಯೇ ನಿಮ್ಮ ಆದ್ಯತೆಯಾಗಿರಲಿ.
  10. ಬರೆದದ್ದೆಲ್ಲ ಪ್ರಕಟವಾಗಬೇಕು ಎಂಬ ಆಸೆ ಬೇಡ.  ನಾವು ಬರೆದದ್ದು ಇನ್ನೊಬ್ಬರಿಗೆ ಇಷ್ಟವಾಗಲೇಬೇಕು ಎಂದಿಲ್ಲ. ಅದು ಸಂದರ್ಭಕ್ಕೆ ಸರಿಹೊಂದದೆಯೂ ಇರಬಹುದು. ಎರಡು ಲೇಖನ ಪ್ರಕಟವಾಗದಿದ್ದ ಕೂಡಲೇ ಶಸ್ತ್ರಸನ್ಯಾಸ ಮಾಡಬೇಡಿ. ʻತಾಳ್ಮೆಗಿಂತ ಅನ್ಯ ತಪವು ಇಲ್ಲʼ.

 - ಸಿಬಂತಿ ಪದ್ಮನಾಭ ಕೆ. ವಿ.

ಸೋಮವಾರ, ಆಗಸ್ಟ್ 7, 2023

ಕಂಪ್ಯೂಟರಿಗೆ ಕನ್ನಡ ಕಲಿಸಿದ ಕೆ.ಪಿ.ರಾವ್

06 ಆಗಸ್ಟ್‌ 2023ರ ʼಉದಯವಾಣಿʼ ಸಾಪ್ತಾಹಿಕ ಸಂಪದದಲ್ಲಿ ಪ್ರಕಟವಾದ ಲೇಖನ

ಕರಾವಳಿ ತೀರದ ಕಿನ್ನಿಕಂಬಳದ ಪುಟ್ಟದೊಂದು ಮನೆ. ಅಲ್ಲಿನ ಹೆಣ್ಣುಮಗುವೊಂದಕ್ಕೆ ಅಕ್ಷರಾಭ್ಯಾಸ ಮಾಡಿಸುವುದಕ್ಕೆ ಪುರೋಹಿತರು ಬಂದಿದ್ದರು. ರಂಗೋಲಿ ಪುಡಿಯಲ್ಲಿ ʻಗʼ ಮತ್ತು ʻಶ್ರೀʼ ಎಂಬೆರಡು ಅಕ್ಷರಗಳನ್ನು ಒಂದೆಡೆ ಬರೆದಿದ್ದರು. ಇದನ್ನು ನೋಡುತ್ತ ಕುಳಿತಿದ್ದ ಹೆಣ್ಮಗುವಿನ ಎರಡು ವರ್ಷದ ತಮ್ಮ ಅದೇ ರಂಗೋಲಿ ಪುಡಿಯನ್ನೆತ್ತಿಕೊಂಡು ಸಂಜೆ ವೇಳೆಗೆ ಮನೆ ತುಂಬಾ ʻಗʼ ಮತ್ತು ʻಶ್ರೀʼ ಬರೆದುಬಿಟ್ಟಿದ್ದ. ಎರಡು ವರ್ಷದ ಕಂದಮ್ಮನ ಒಳಗೆ ಅದ್ಯಾವ ಶಕ್ತಿಯಿತ್ತೋ, ಮುಂದೆ ಅದೇ ಕಂದಮ್ಮ ಕಂಪ್ಯೂಟರುಗಳಿಗೆ ಕನ್ನಡ ಕಲಿಸಿಬಿಟ್ಟಿತು! ಹೌದು, ಆ ಮಗು ಬೇರಾರೂ ಅಲ್ಲ; ಕನ್ನಡದ ಅಧಿಕೃತ ಕೀಲಿಮಣೆ ವಿನ್ಯಾಸವನ್ನು ರೂಪಿಸಿದ ಪ್ರೊ. ಕಿನ್ನಿಕಂಬಳ ಪದ್ಮನಾಭ ರಾವ್, ಅಂದರೆ ಕೆ. ಪಿ. ರಾವ್.

ಹಾಗೆ ನೋಡಿದರೆ, ಕೆ. ಪಿ. ರಾವ್ ಅವರನ್ನು ಕಂಪ್ಯೂಟರಿಗೆ ಕನ್ನಡ ಕಲಿಸಿದವರು ಎಂದರೆ ಸಾಲದು; ಭಾರತೀಯ ಭಾಷೆಗಳನ್ನು ಕಂಪ್ಯೂಟರಿಗೆ ಕಲಿಸಿದವರು ಎನ್ನಬೇಕು. ಯಾವುದೇ ಭಾರತೀಯ ಭಾಷೆ ಕಂಪ್ಯೂಟರಿನಲ್ಲಿ ಇಲ್ಲದ ಕಾಲದಲ್ಲಿ ಅವುಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಹಗಲಿರುಳು ಶ್ರಮಿಸಿದವರು ಕೆ. ಪಿ. ರಾವ್. ಬಡುಗ, ತುಳು, ಬ್ರಾಹ್ಮಿ, ಖರೋಷ್ಠಿ, ಕದಂಬ ಮುಂತಾದ ಅನೇಕ ಲಿಪಿಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರು ಪಟ್ಟ ಶ್ರಮ ಅದ್ವಿತೀಯ. ʼಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್ ಕ್ಷೇತ್ರದ ಪಿತಾಮಹʼ ಎಂಬ ಅಭಿದಾನ ಅವರಿಗೆ ಚೆನ್ನಾಗಿಯೇ ಒಪ್ಪುತ್ತದೆ.

ಗುರುವಿನ ಕೃಪೆ ಅಂದರು...

ಬಾಲ್ಯದ ಪರಿಸರ ಹಾಗೂ ಶ್ರೇಷ್ಠ ಅಧ್ಯಾಪಕರೇ ತಮ್ಮ ಎಲ್ಲ ಅನ್ವೇಷಣೆಗಳ ಪ್ರೇರಣೆ ಎಂಬುದನ್ನು ರಾಯರು ಮುಕ್ತ ಮನಸ್ಸಿನಿಂದ ಹೇಳುತ್ತಾರೆ. ಅದರಲ್ಲೂ ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನಲ್ಲಿ ತಾವು ಬಿಎಸ್ಸಿ ಓದುತ್ತಿದ್ದಾಗ ಕನ್ನಡ ಪ್ರಾಧ್ಯಾಪಕರಾಗಿದ್ದ ಸೇಡಿಯಾಪು ಕೃಷ್ಣ ಭಟ್ಟರು ತಮಗೆ ಪ್ರಾತಃಸ್ಮರಣೀಯರು ಎನ್ನುತ್ತಾರೆ. “ಸೇಡಿಯಾಪು ನನ್ನ ಮರೆಯಲಾಗದ ಗುರು. ಪಾಣಿನಿಯನ್ನು ಅರ್ಥ ಮಾಡಿಸಿದವರು ಅವರು. ಲೋಕದ ಎಲ್ಲ ಭಾಷೆಗಳ ಮೂಲ ತತ್ವ ಏನು ಎಂಬುದನ್ನು ಮನಸ್ಸಿನಲ್ಲಿ ನಾಟಿಸಿಬಿಟ್ಟಿದ್ದರು. ಅವರಿಂದಾಗಿ ಕನ್ನಡದ ಜತೆಜತೆಗೆ ಜಗತ್ತಿನ ಎಲ್ಲ ಭಾಷೆಗಳ ಮೇಲೆ ನನಗೆ ಮಮತೆ ಹುಟ್ಟಿಬಿಟ್ಟಿತು,” ಎಂದು ನೆನಪಿಸಿಕೊಳ್ಳುತ್ತಾರೆ ರಾಯರು.

ಅವರಿಗೆ ಮೊದಲಿನಿಂದಲೂ ಗಣಿತವೆಂದರೆ ಪ್ರೀತಿ. ಜಗತ್ತಿನ ಎಲ್ಲ ಜ್ಞಾನಶಿಸ್ತು ಹಾಗೂ ಭಾಷೆಗಳ ಹಿಂದೆ ಇರುವ ಮೂಲತತ್ವ ಗಣಿತದ್ದು ಎಂಬುದನ್ನು ಅವರು ವಿದ್ಯಾರ್ಥಿದೆಸೆಯಲ್ಲೇ ಅರ್ಥಮಾಡಿಕೊಂಡಿದ್ದರು. ಕನ್ನಡವೂ ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು ಕಂಪ್ಯೂಟರಿನಲ್ಲಿ ಮೂಡಿಸುವುದಕ್ಕೆ ಅವರಿಗೆ ಸಾಧ್ಯವಾದದ್ದು ಇದೇ ಕಾರಣದಿಂದ. ಕಂಪ್ಯೂಟರ್ ಅಂತೂ ಗಣಿತವನ್ನೇ ಆಧಾರವಾಗಿಸಿಕೊಂಡಿರುವ ʻಗಣಕಯಂತ್ರʼ ಅಲ್ಲವೇ?

ವೈವಿಧ್ಯಮಯ ವೃತ್ತಿಬದುಕು:

ವೈವಿಧ್ಯಮಯ ವೃತ್ತಿಬದುಕು ಕೆ. ಪಿ. ರಾವ್ ಅವರದ್ದು. ಅವರ ವೃತ್ತಿಜೀವನ ಆರಂಭವಾದದ್ದು ಮುಂಬೈಯ ಪ್ರತಿಷ್ಠಿತ ಬಾಬಾ ಅಟೊಮಿಕ್ ರೀಸರ್ಚ್ ಸೆಂಟರಿನಲ್ಲಿ. ಅಲ್ಲಿ ಹೋಮಿ ಭಾಭಾ, ಡಿ. ಡಿ. ಕೊಸಾಂಬಿ, ಎ.ಕೆ. ಗಂಗೂಲಿ, ರಾಜಾರಾಮಣ್ಣ ಮೊದಲಾದ ದಾರ್ಶನಿಕರ ಒಡನಾಟ.  ಮುಂದೆ ಟಾಟಾ ಪ್ರೆಸ್ಸಿಗೆ ಇಂಜಿನಿಯರ್ ಆಗಿ ಸೇರಿಕೊಂಡಾಗಲೂ ಮುದ್ರಣದ ಹೊಸ ಸಾಧ್ಯತೆಗಳ ಕುರಿತ ಚಿಂತನೆ ಸಾಧ್ಯವಾಯಿತು. ಬೆರಳಚ್ಚು ಯಂತ್ರಕ್ಕೆ ಸಿಂಧೂ ಕಣಿವೆ ಲಿಪಿಯ ಸಂಕೇತಗಳನ್ನು ಅಳವಡಿಸುವ ಮಹತ್ತರ ಕಾರ್ಯವೂ ರಾಯರಿಂದ ಇದೇ ಸಮಯದಲ್ಲಿ ನಡೆಯಿತು.

ಟಾಟಾ ಪ್ರೆಸ್ಸಿನಲ್ಲಿ ಅಕ್ಷರಗಳೊಂದಿಗೆ ಆರಂಭವಾದ ರಾಯರ ಒಡನಾಟ ಬೆಂಗಳೂರಿನ ಮಾನೋಟೈಪ್ ಇಂಡಿಯಾ ಕಂಪೆನಿಯಲ್ಲಿ ಯಶಸ್ವಿಯಾಗಿ ಮುಂದುವರಿಯಿತು. ಭಾರತೀಯ ಭಾಷೆಗಳಿಗೆ ಫಾಂಟ್ಗಳನ್ನು ವಿನ್ಯಾಸಮಾಡುವ ಮಹತ್ಕಾರ್ಯಕ್ಕೆ ಅವರ ಪ್ರತಿಭೆ ಬಳಕೆಯಾಯಿತು. ಕಂಪ್ಯೂಟರಿನಲ್ಲಿ ಕನ್ನಡವನ್ನು ಮೂಡಿಸುವ ಬೇರೆಬೇರೆ ಪ್ರಯತ್ನಗಳು ಆ ಹಂತದಲ್ಲಿ ನಡೆದಿದ್ದರೂ, ಅವೆಲ್ಲವನ್ನು ಏಕಸೂತ್ರದಲ್ಲಿ ಒಯ್ಯುವ ಕೆಲಸ ಆಗಿರಲಿಲ್ಲ. ಆ ಕೆಲಸ ಸಾಧ್ಯವಾದದ್ದು ಕೆ. ಪಿ. ರಾಯರು ಒಂದು ಪ್ರಮಾಣಿತ ಕೀಲಿಮಣೆ ವಿನ್ಯಾಸವನ್ನು ಸಂಶೋಧಿಸಿದಾಗ. ರಾಯರು ತಮ್ಮ ಶಬ್ದಾಧಾರಿತ ಕೀಲಿಮಣೆಗೆ ʻಸೇಡಿಯಾಪುʼ ಎಂದು ನಾಮಕರಣ ಮಾಡಿದರು. 

ರಾಯರು ತಮ್ಮ ತಂತ್ರಾಂಶಕ್ಕೆ ತಮ್ಮ ಗುರುಗಳ ಹೆಸರನ್ನಿಟ್ಟು ಕೃತಾರ್ಥರಾದರೆ, ಕರ್ನಾಟಕ ಸರ್ಕಾರ 2002ರಲ್ಲಿ ಇದನ್ನೇ ರಾಜ್ಯದ ಅಧಿಕೃತ ಕೀಲಿಮಣೆ ವಿನ್ಯಾಸ ಎಂದು ಸ್ವೀಕರಿಸಿ ರಾಯರ ಶ್ರಮವನ್ನು ಗೌರವಿಸಿತು. ಇಂದು ಇದೇ ತಂತ್ರಾಂಶ ʻನುಡಿʼ ಎಂದು ಪ್ರಸಿದ್ಧವಾಗಿರುವುದು ಎಲ್ಲರಿಗೂ ತಿಳಿದದ್ದೇ. ಕಂಪ್ಯೂಟರಿನಲ್ಲಿ ಕನ್ನಡ ಟೈಪಿಂಗ್ ಮಾಡಲು ಇನ್ನೂ ಕೆಲವು ತಂತ್ರಾಂಶಗಳು ಬಳಕೆಯಾಗುತ್ತಿದ್ದರೂ, ʻನುಡಿʼ ತನ್ನ ಸರಳ ಪ್ರಮಾಣಿತ ಸ್ವರೂಪದಿಂದಾಗಿ ಹೆಚ್ಚು ಜನಪ್ರಿಯವೆನಿಸಿದೆ. 

ದುಡ್ಡಿನಿಂದ ಸಂತೋಷ ಸಿಗಲ್ಲ...

ವಿಶೇಷವೆಂದರೆ, ತಮ್ಮದೇ ತಂತ್ರಾಂಶ ʻಸೇಡಿಯಾಪುʼವಿನ ಸಂಶೋಧನೆಗೆ ರಾಯರು ಪೇಟೆಂಟ್ ಪಡೆದುಕೊಂಡಿಲ್ಲ. 80ರ ದಶಕದಲ್ಲೇ ಅದನ್ನು ಕೇಳಿದವರಿಗೆಲ್ಲ ಅವರು ಉಚಿತವಾಗಿ ಕೊಟ್ಟಿದ್ದರು. ಕರ್ನಾಟಕ ಸರ್ಕಾರದ ಗಣಕ ಪರಿಷತ್ತು ಕೂಡ ʼನುಡಿʼಯನ್ನು ಉಚಿತವಾಗಿಯೇ ಒದಗಿಸುತ್ತಿದೆ. “ನೀವು ಪೇಟೆಂಟ್ ತೆಗೆದುಕೊಂಡಿದ್ದರೆ ಸಾಕಷ್ಟು ಹಣಸಂಪಾದನೆ ಮಾಡಬಹುದಿತ್ತು ಎಂದು ತುಂಬ ಮಂದಿ ನನಗೆ ಹೇಳುತ್ತಾರೆ. ನನ್ನ ದೊಡ್ಡ ಸಮಸ್ಯೆ ಎಂದರೆ ನನಗೆ ದುಡ್ಡಿನ ಬೆಲೆ ಗೊತ್ತಿಲ್ಲ. ಈ ತಂತ್ರಾಂಶವನ್ನಿಟ್ಟುಕೊಂಡು ಹಣಸಂಪಾದಿಸಬೇಕು ಎಂದು ನನಗೆಂದೂ ಅನಿಸಿಯೇ ಇಲ್ಲ. ನಮ್ಮ ಭಾಷೆಗಾಗಿ, ತಂತ್ರಜ್ಞಾನದೊಂದಿಗೆ ಅದನ್ನು ಬೆಳೆಸುವುದಕ್ಕಾಗಿ ಕೆಲಸ ಮಾಡುವುದರಲ್ಲಿ ನನಗೆ ದೊರೆಯುವ ಸಂತೋಷ ಹಣದಿಂದ ದೊರೆಯದು ಅನಿಸುತ್ತದೆ,” ಎಂದು ಮುಗುಳ್ನಗುತ್ತಾರೆ ಕೆ. ಪಿ. ರಾಯರು. ಇಂತಹ ಮಂದಿ ಈ ಕಾಲದಲ್ಲಿ ದೊರೆಯುವುದು ಬಹಳ ಕಷ್ಟ.

ಮಾನೋಟೈಪ್ನ ನಿರ್ದೇಶಕರಾಗಿ ನಿವೃತ್ತಿ ಹೊಂದಿದ ಬಳಿಕ ರಾಯರು ಮಣಿಪಾಲ ವಿಶ್ವವಿದ್ಯಾನಿಲಯ ಹಾಗೂ ಗೌಹಾಟಿಯ ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ತಮ್ಮ ಜ್ಞಾನ-ಅನುಭವವನ್ನು ಹೊಸಪೀಳಿಗೆಗೆ ಧಾರೆಯೆರೆದರು. ಪ್ರತಿಷ್ಠಿತ ಅಡೋಬಿ ಕಂಪೆನಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸಿದರು.  ಅನೇಕ ವೈಜ್ಞಾನಿಕ ಹಾಗೂ ಸೃಜನಶೀಲ ಕೃತಿಗಳನ್ನು ರಚಿಸಿದರು.

ಪ್ರಶಸ್ತಿ-ಗೌರವ:

ರಾಯರ ಸಾಧನೆ-ಶ್ರಮವನ್ನು ಗುರುತಿಸಿ ಅನೇಕ ಪ್ರಶಸ್ತಿಗಳು ಸಂದಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ,  ಹಂಪಿ ಕನ್ನಡ ವಿಶ್ವವಿದ್ಯಾನಿಲಯದ ನಾಡೋಜ ಗೌರವ, ಆಳ್ವಾಸ್ ನುಡಿಸಿರಿ ಪ್ರಶಸ್ತಿಗಳು ಪ್ರಮುಖವಾದವು. ಕನ್ನಡ ಮಾಧ್ಯಮದಲ್ಲಿ ಕಲಿತ ಹಳ್ಳಿಗಾಡಿನ ಬಡಕುಟುಂಬದ ಹುಡುಗನೊಬ್ಬ ದೇಶವಿದೇಶ ಸುತ್ತಿ ಕನ್ನಡಕ್ಕಾಗಿ ಇಂತಹದೊಂದು ಶಾಶ್ವತ ಕೊಡುಗೆ ನೀಡಿರುವುದು ಕನ್ನಡಿಗರು ಎಂದೂ ಮರೆಯಲಾಗದ ವಿಷಯ. ಅದರಲ್ಲೂ “ನನಗೇನೂ ಬೇಡ, ಭಾಷೆ ಬೆಳೆದರೆ ಅಷ್ಟೇ ಸಾಕು,” ಎನ್ನುವುದಂತೂ ಯಾವ ಪ್ರಶಸ್ತಿಯೂ ಸರಿಗಟ್ಟದ ಒಂದು ಮನಸ್ಥಿತಿ. ಇಂತಹವರ ಸಂತತಿ ಅಸಂಖ್ಯವಾಗಲಿ.

- ಸಿಬಂತಿ ಪದ್ಮನಾಭ ಕೆ. ವಿ.


ಮಂಗಳವಾರ, ಜೂನ್ 13, 2023

ಬದುಕಿನ ಪಯಣಕ್ಕೆ ದಿಕ್ಸೂಚಿ ಯಾವುದು?

10-16 ಜೂನ್ 2023ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

‘ನಲ್ವತ್ತರ ಈ ವಯಸ್ಸಿನಲ್ಲಿ ಇಂತಹ ಸಾಧನೆ ಮಾಡುವುದು ನಿಮಗೆ ಹೇಗೆ ಸಾಧ್ಯವಾಯಿತು?’ ಜಗತ್ತಿನ ಅತಿ ಎತ್ತರದ ಪರ್ವತ ಶಿಖರ ಮೌಂಟ್ ಎವರೆಸ್ಟನ್ನು ಮೊದಲ ಬಾರಿ ತನ್ನ ಗೆಳೆಯ ಎಡ್ಮಂಡ್ ಹಿಲರಿ ಜತೆಗೆ ಏರಿ ವಿಶ್ವದಾಖಲೆ ನಿರ್ಮಿಸಿದ ತೇನ್‌ಸಿಂಗ್ ನಾರ್ಗೆಯನ್ನು ಪತ್ರಕರ್ತರು ಹೀಗೆ ಪ್ರಶ್ನಿಸಿದರಂತೆ. ‘ಅಯ್ಯೋ ಇದು ನಲ್ವತ್ತನೇ ವಯಸ್ಸಲ್ಲಿ ಸಾಧಿಸಿದ್ದಲ್ಲ, ಹತ್ತುವರ್ಷ ವಯಸ್ಸಿನವನಿರುವಾಗಲೇ ಶುರುಮಾಡಿದ್ದೆ. ಮೊನ್ನೆ ಪೂರೈಸಿದೆ ಅಷ್ಟೇ’ ಎಂದು ಉತ್ತರಿಸಿದನಂತೆ ತೇನ್‌ಸಿಂಗ್.

‘ಹತ್ತು ವರ್ಷದವನಿದ್ದಾಗ ಹಿಮಾಲಯದ ತಪ್ಪಲಲ್ಲಿ ನಾನು ಕುರಿ ಮೇಯಿಸ್ತಾ ಇದ್ದೆ. ಎವರೆಸ್ಟನ್ನು ತೋರಿಸಿ ನನ್ನಮ್ಮ- ನೋಡು ಈ ಶಿಖರವನ್ನು ಈವರೆಗೆ ಯಾರೂ ಹತ್ತಿಲ್ಲ, ನೀನು ಹತ್ತುತ್ತೀಯಾ – ಅಂತ ಕೇಳಿದರು. ಎವರೆಸ್ಟ್ ಹತ್ತುವ ಕನಸು ಅಲ್ಲಿಂದಲೇ ಆರಂಭವಾಯಿತು. ಪ್ರತಿದಿನ ಕುರಿಕಾಯುತ್ತಾ ನಾನು ಮನಸ್ಸಿನಲ್ಲೇ ಎವರೆಸ್ಟ್ ಏರುತ್ತಿದ್ದೆ’ ಎಂದು ತೇನ್‌ಸಿಂಗ್ ವಿವರಿಸಿದನಂತೆ. 

ತೇನ್‌ಸಿಂಗ್ ಕಂಡ ಕನಸು ಮತ್ತು ಅದನ್ನು ಸಾಧಿಸುವ ಛಲ - ಇವೆರಡೇ ಆತನ ಬದುಕಿನ ಪಯಣದ ದಿಕ್ಸೂಚಿಗಳು. ಸಾಧನೆಯ ಹಿಂದಿನ ಪ್ರಬಲ ಪ್ರೇರಣೆ ಒಂದು ದೊಡ್ಡ ಕನಸು. ಸಾಧಕ ತನ್ನ ಅಂತಿಮ ಯಶಸ್ಸನ್ನು ಮನಸ್ಸಿನಲ್ಲಿ ಸದಾ ದೃಶ್ಶೀಕರಿಸಿಕೊಳ್ಳುತ್ತಾ, ಧ್ಯಾನಿಸುತ್ತಾ ಇದ್ದಾಗ ಅದು ಆತ ತನ್ನ ದಾರಿಯಲ್ಲಿ ಹಿಂದೆ ಬೀಳದಂತೆ, ನಿರುತ್ಸಾಹಗೊಳ್ಳದಂತೆ ನಡೆಯುವುದಕ್ಕೆ ಪ್ರೇರಣೆಯಾಗುತ್ತದೆ. ಆದರೆ ಕನಸು ಕಂಡರಷ್ಟೇ ಸಾಲದು, ಸಾಗುವ ದಾರಿಯೂ ಮುಖ್ಯ. ದೊಡ್ಡ ಕನಸಿನ ಸಾಧನೆಗೆ ದೊಡ್ಡ ಪರಿಶ್ರಮವೇ ಬೇಕಾಗುತ್ತದೆ. ಕನಸಿನ ಗುಂಗಿನಲ್ಲೇ ಕಾಲ ಕಳೆಯುತ್ತಾ ಅದಕ್ಕಾಗಿ ವಾಸ್ತವದಲ್ಲಿ ಏನನ್ನಾದರೂ ಮಾಡದೆ ಹೋದರೆ ಕೊನೆಗೆ ಟೊಳ್ಳು ಭ್ರಮೆಯಷ್ಟೇ ಉಳಿದುಕೊಳ್ಳುತ್ತದೆ.

ಜೀವಗತಿಗೊಂದು ರೇಖಾಲೇಖವಿರಬೇಕು
ನಾವಿಕನಿಗಿರುವಂತೆ ದಿಕ್ಕು ದಿನವೆಣಿಸೆ
ಭಾವಿಸುವುದೆಂತದನು ಮೊದಲು ಕೊನೆ ತೋರದಿರೆ?
ಆವುದೀ ಜಗಕಾದಿ - ಮಂಕುತಿಮ್ಮ

ಎಂದು ಕೇಳುತ್ತಾರೆ ಡಿ.ವಿ.ಜಿ. ನಾವಿಕನಿಗೆ ದಿಕ್ಸೂಚಿ ಇರುವಂತೆ  ಜೀವನದ ಪಯಣಕ್ಕೂ ಒಂದು ಮಾರ್ಗದರ್ಶನದ ರೇಖೆ ಇರಲೇಬೇಕು; ಯಶಸ್ಸಿನ ತುದಿ-ಮೊದಲಿನ ಸ್ಪಷ್ಟ ಕಲ್ಪನೆ ಇಲ್ಲದೆ ಹೋದರೆ ಅದನ್ನು ಸಾಧಿಸುವುದಾದರೂ ಹೇಗೆ ಎಂಬುದು ಅವರ ಪ್ರಶ್ನೆ. 

ಎಲ್ಲರಿಗೂ ಸಲ್ಲುವಂಥ ಏಕರೂಪದ ದಿಕ್ಸೂಚಿಯೊಂದು ಇರುವುದು ಅಸಾಧ್ಯ. ಒಬ್ಬೊಬ್ಬರನ್ನು ನಡೆಸುವ ಶಕ್ತಿ ಒಂದೊಂದು ಇರಬಹುದು. ಕೆಲವರು ಅದನ್ನು ಕನಸು ಕಾಣುವ ಶಕ್ತಿ ಎನ್ನಬಹುದು, ಇನ್ನು ಕೆಲವರು ಛಲ ಎನ್ನಬಹುದು, ಮತ್ತೆ ಕೆಲವರು ಆತ್ಮವಿಶ್ವಾಸ ಎನ್ನಬಹುದು. ತಮ್ಮ ಕಣ್ಣೆದುರಿನ ಆದರ್ಶವೇ ತಮ್ಮ ದಿಕ್ಸೂಚಿ ಎಂದು ಹಲವರು ಭಾವಿಸಬಹುದು. ಆದರೆ ಎಲ್ಲವೂ ಮೂಲತಃ ನಮ್ಮೊಳಗಿನಿಂದಲೇ ಮೂಡಿಬರಬೇಕು ಎಂಬುದು ಮಾತ್ರ ಸತ್ಯ. ಅದನ್ನು ‘ಅಂತರಂಗದ ಧ್ವನಿ’ ಎಂದೋ, ‘ಆತ್ಮಸಾಕ್ಷಿ’ ಎಂದೋ ಕರೆದರೆ ಚೆನ್ನ.

ಯಾವುದು ಸರಿ, ಯಾವುದು ತಪ್ಪು ಎಂಬುದನ್ನು ನೂರು ಮಂದಿ ಸಾವಿರ ರೀತಿ ಹೇಳಬಹುದು. ಆದರೆ ಸರಿ-ತಪ್ಪುಗಳನ್ನು ಅಂತಿಮವಾಗಿ ನಿರ್ಧರಿಸಬೇಕಾದವರು ನಾವೇ. ಇಂಥ ಸಂದರ್ಭದಲ್ಲಿ ಅಂತರಂಗದ ಧ್ವನಿ ಮಾತ್ರ ನಮ್ಮ ನೆರವಿಗೆ ಬರುತ್ತದೆ. ಐಎಎಸ್ ತೇರ್ಗಡೆಯಾಗುವ ದೊಡ್ಡ ಕನಸು ಇಟ್ಟುಕೊಂಡ ವ್ಯಕ್ತಿ ಯಾವುದೋ ಕಾರಕೂನಿಕೆಯ ಕೆಲಸ ಸಿಕ್ಕಿತೆಂದು ಅದರಲ್ಲೇ ತೃಪ್ತಿಪಟ್ಟುಕೊಂಡರೆ ಐಎಎಸ್ ಕನಸಿನ ಕತೆಯೇನು? ‘ಬದುಕಿನಲ್ಲಿ ದೊಡ್ಡ ಕನಸುಗಳನ್ನು ನನಸು ಮಾಡಿಕೊಳ್ಳಬೇಕಾದರೆ ಸಣ್ಣಪುಟ್ಟ ತ್ಯಾಗಗಳನ್ನು ಮಾಡಬೇಕಾಗುತ್ತದೆ’ ಎನ್ನುತ್ತಾರೆ ಬಿ.ಜಿ.ಎಲ್. ಸ್ವಾಮಿ. ಸಾಧನೆಯ ಹಾದಿಯ ಇಕ್ಕೆಲಗಳಲ್ಲಿ ಸಾಕಷ್ಟು ಸಣ್ಣಪುಟ್ಟ ಆಕರ್ಷಣೆಗಳು ಇದ್ದೇ ಇರುತ್ತವೆ. ಅವುಗಳೇ ಸಾಕೆಂದು ಮುಂದೆ ಸಾಗುವ ಯೋಚನೆಯನ್ನು ಕೈಬಿಟ್ಟರೆ ಮುಂದೊಂದು ದಿನ ಕೊರಗಬೇಕಾಗುತ್ತದೆ. ಆಗ ಹಾಗೆ ಮಾಡಬಾರದಿತ್ತು ಅಂದುಕೊಳ್ಳುತ್ತೇವೆ. ಆದರೆ ಅಷ್ಟು ಹೊತ್ತಿಗೆ ಬಹಳ ತಡವಾಗಿರುತ್ತದೆ. ಕೆಲವು ತ್ಯಾಗಗಳು ಅನಿವಾರ್ಯ. ಆದರೆ ಅಂತಹ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಹೊತ್ತು ಸಾಕಷ್ಟು ಸಲ ನೆರವಿಗೆ ಬರುವುದು ನಮ್ಮ ಅಂತರಂಗದ ಧ್ವನಿ ಮಾತ್ರ.

ಇದರರ್ಥ ಹಿರಿಯರ, ಗೆಳೆಯರ ಮಾತುಗಳಿಗೆ ಕಿವಿಗೊಡಬಾರದು ಎಂದೇ? ಖಂಡಿತ ನಾಲ್ಕು ಮಂದಿಯ ಅಭಿಪ್ರಾಯವನ್ನು ಪರಿಗಣಿಸಬೇಕು. ಅನೇಕ ಸಂದರ್ಭ ಗೊಂದಲಗಳು ಏರ್ಪಡುತ್ತೇವೆ. ಮುಂದೇನು ಎಂಬ ಅಯೋಮಯ ಸನ್ನಿವೇಶ ಎದುರಾಗುತ್ತದೆ. ಅಂತಹ ಸಂದರ್ಭ ಹಿರಿಯರ ಇಲ್ಲವೇ ಸ್ನೇಹಿತರ ಸಲಹೆಯನ್ನು ಕೇಳುವುದರಲ್ಲಿ ತಪ್ಪೇನೂ ಇಲ್ಲ. ‘ಅಪ್ಪ ನೆಟ್ಟ ಆಲದ ಮರಕ್ಕೆ ಯಾಕೆ ಜೋತು ಬೀಳಬೇಕು?’ ಎಂಬ ಉಡಾಫೆ ಸಾಕಷ್ಟು ಮಂದಿಯಲ್ಲಿ ಇರುತ್ತದೆ. ಅಪ್ಪ ನೆಟ್ಟ ಆಲದ ಮರವೂ ಮಹತ್ವದ್ದೇ. ಹಳೆಯದು, ಹಳಬರು ಎಂಬ ಕಾರಣಕ್ಕೆ ಎಲ್ಲವೂ ವರ್ಜ್ಯವಲ್ಲ. ನಮ್ಮ ಬೇರುಗಳನ್ನಂತೂ ಮರೆಯಬಾರದು. ಎಷ್ಟೇ ಉನ್ನತ ಹಂತಕ್ಕೆ ತಲುಪಿದರೂ ನಮ್ಮ ಮೂಲದ ನೆನಪು ಇರಲೇಬೇಕು. ಆದರೆ ನಾಲ್ಕು ಮಂದಿಯ ಬಳಿ ಅಭಿಪ್ರಾಯ ಕೇಳಿದ ಮೇಲೂ ಅಂತಿಮ ನಿರ್ಧಾರ ತೆಗೆದುಕೊಳ್ಳುವವರು ನಾವೇ ಆಗಿರಬೇಕು.

ಅನೇಕ ಸಂದರ್ಭಗಳಲ್ಲಿ ನಮ್ಮನ್ನು ದಾರಿ ತಪ್ಪಿಸುವವರು, ನಿರುತ್ತೇಜಿಸುವವರು ಬಹಳ ಮಂದಿ ಇರುತ್ತಾರೆ. ಅವರಲ್ಲಿ ನಾವು ‘ಆತ್ಮೀಯರು’ ಎಂದು ನಂಬಿದವರೂ ಇರುತ್ತಾರೆ. ಯಾವುದೋ ಒಂದು ಮಹತ್ವಾಕಾಂಕ್ಷೆಯನ್ನೇ ನೆಚ್ಚಿ ವಿಶ್ವಾಸದಿಂದ ಮುಂದೆ ಸಾಗುತ್ತಿರುವಾಗ ನಮ್ಮನ್ನು ಹಿಂದಕ್ಕೆ ಎಳೆಯುವವರು, ಆಮಿಷ ಒಡ್ಡುವವರು, ಉತ್ಸಾಹವನ್ನು ಕುಗ್ಗಿಸುವವರು, ಟೀಕಿಸುವವರು ಇದ್ದೇ ಇರುತ್ತಾರೆ. ಅವರ ತಂತ್ರಗಳಿಗೆ ಬಲಿಯಾದರೆ ಅಲ್ಲಿಗೆ ಕತೆ ಮುಗಿದಂತೆ. ವಾಸ್ತವವಾಗಿ ಇವೇ ನಮ್ಮ ಅಗ್ನಿಪರೀಕ್ಷೆಯ ಕ್ಷಣಗಳು. ಟೀಕೆಗಳನ್ನು ನಿರುಮ್ಮಳವಾಗಿ ಕೇಳಿಸಿಕೊಳ್ಳಬೇಕು. ಅವು ಪೊಳ್ಳು ಎಂದು ಅನಿಸಿದರೆ ನಿರ್ಲಕ್ಷಿಸಿ ಮುಂದೆ ಸಾಗಬೇಕು. ಅವುಗಳಲ್ಲೂ ಸತ್ವವಿದೆ ಅನಿಸಿದರೆ ಅವುಗಳನ್ನು ಆತ್ಮವಿಮರ್ಶೆಯ ಪರಿಕರಗಳನ್ನಾಗಿ ಬಳಸಬೇಕು. ಆ ಹಂತವನ್ನು ದೃಢಚಿತ್ತದಿಂದ ದಾಟಿ ಮುಂದೆ ಹೋದರೆ ನಮ್ಮ ಯಶಸ್ಸನ್ನು ಕಸಿದುಕೊಳ್ಳುವವರು ಯಾರೂ ಇಲ್ಲ.

ಈ ದೃಢಚಿತ್ತ ಹುಟ್ಟಿಕೊಳ್ಳುವುದು ಸ್ವಂತಿಕೆಯಲ್ಲಿ. ಅದು ಒಳಗಿನಿಂದ ಹೊಮ್ಮುವ ಬೆಳಕು. ಎರವಲು ಪಡೆದದ್ದು ತಾತ್ಕಾಲಿಕ; ಸ್ವತಂತ್ರವಾಗಿ ಆರ್ಜಿಸಿಕೊಂಡದ್ದಷ್ಟೇ ಬದುಕಿನ ಶಾಶ್ವತ ದಿಕ್ಸೂಚಿ. ಆದ್ದರಿಂದ ನಮ್ಮೆದುರಿನದ್ದು ಎಷ್ಟೇ ಚೆನ್ನಾಗಿದ್ದರೂ ಅದನ್ನು ನಕಲು ಮಾಡುವುದು ಬೇಡ. ಅದರಿಂದ ಪ್ರೇರಣೆಯನ್ನಷ್ಟೇ ಪಡೆಯೋಣ.

ಬದುಕಿನ ಪಯಣಕ್ಕೆ ಬೇಕಾದದ್ದು ನಕಾಶೆಯೋ ದಿಕ್ಸೂಚಿಯೋ ಎಂಬ ಮೂಲಪ್ರಶ್ನೆಯಿದೆ. ನಕಾಶೆ ಎಂದರೆ ಈಗಾಗಲೇ ಯಾರೋ ತಯಾರಿಸಿಟ್ಟಿರುವ ಚಿತ್ರ. ನಾವು ಎಲ್ಲಿ, ಹೇಗೆ ಸಾಗಬೇಕು ಎಂದು ಅದು ಮಾರ್ಗದರ್ಶನ ಮಾಡುತ್ತದೆ. ನಾವು ಅದರ ಪ್ರಕಾರ ಹೋದರೆ ನಿರ್ದಿಷ್ಟ ಸ್ಥಳವನ್ನು ತಲುಪಬಹುದು. ಹೊಸ ಸಾಧ್ಯತೆಗಳ ಬಗ್ಗೆ ನಾವು ಯೋಚಿಸುವುದೇ ಇಲ್ಲ. ಆದರೆ ದಿಕ್ಸೂಚಿ ದಿಕ್ಕನ್ನು ಮಾತ್ರ ತೋರಿಸುತ್ತದೆ. ನಮ್ಮ ದಾರಿಯನ್ನು ನಾವೇ ರೂಪಿಸಿಕೊಳ್ಳಬೇಕು. ಈ ಪಯಣದಲ್ಲಿ ಒಂದು ಬಗೆಯ ಹೊಸತನ ಮತ್ತು ಇದನ್ನು ನಾವೇ ಸಾಧಿಸಿದೆವೆಂಬ ಹೆಚ್ಚುವರಿ ತೃಪ್ತಿಯೂ ಇರುತ್ತದೆ. ಇದು ಅರ್ಥವಾದರೆ ಬದುಕಿನ ಪಯಣ ರೋಚಕ ಮತ್ತು ಸಾರ್ಥಕ.

- ಸಿಬಂತಿ ಪದ್ಮನಾಭ ಕೆ. ವಿ.