ಶುಕ್ರವಾರ, ಮಾರ್ಚ್ 29, 2024

ಪ್ರತಿಯೊಬ್ಬ ಕನ್ನಡಿಗನ ಬಳಿ ಇರಬೇಕಾದ ಕೃತಿ ʼಸರಿಗನ್ನಡ-ಸರಿಕನ್ನಡʼ

  • ಪುಸ್ತಕ: ಸರಿಗನ್ನಡ-ಸರಿಕನ್ನಡ
  • ಲೇಖಕರು: ಕೊಕ್ಕಡ ವೆಂಕಟ್ರಮಣ ಭಟ್‌, ಮಂಡ್ಯ
  • ಪ್ರಕಾಶಕರು: ಕಾಸರಗೋಡು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.)
  • ವರ್ಷ: 2023
  • ಪುಟಗಳು: 180
  • ಬೆಲೆ: ರೂ. 200
  • ಸಂಪರ್ಕ: ಕೊಕ್ಕಡ ವೆಂಕಟ್ರಮಣ ಭಟ್‌ (9972448183), ಸಿರಿಬಾಗಿಲು ರಾಮಕೃಷ್ಣ ಮಯ್ಯ (9448344380)

ಎಲ್ಲರೂ ಕನ್ನಡ ರಕ್ಷಣೆಯ ಬಗ್ಗೆ ಮಾತಾಡುವವರೇ; ಆದರೆ ಕನ್ನಡ ಮಾತ್ರ ದಿನೇದಿನೇ ಸೊರಗುತ್ತಲೇ ಇದೆ. ದಿನಬೆಳಗಾದರೆ ಅಪಭ್ರಂಶಗಳೇ ಕಣ್ಣಿಗೆ ರಾಚುತ್ತಿರುತ್ತವೆ. ಭಾಷೆಯ ಸರಿಯಾದ ಬಳಕೆಯ ಬಗ್ಗೆ ಮಾತಾಡುವವರು ಬೆರಳೆಣಿಕೆಯಷ್ಟು. ಮಾತಾಡಿದರೂ ನೂರೆಂಟು ಕಾರಣ ಹೇಳಿ ಅವರ ಬಾಯಿ ಮುಚ್ಚಿಸುವವರೇ ಹೆಚ್ಚು.

ರಸ್ತೆಯಲ್ಲಿ ಐದು ನಿಮಿಷ ಓಡಾಡಿದರೆ ʼಶುಭಾಷಯʼದ ದೊಡ್ಡದೊಡ್ಡ ಫ್ಲೆಕ್ಸುಗಳು ಕಾಣುತ್ತವೆ. ಮೊಬೈಲು, ಸಾಮಾಜಿಕ ತಾಣಗಳಲ್ಲಂತೂ ದಿನಕ್ಕೆ ಹತ್ತಾರು ಬಾರಿ ʼಶುಭಾಷಯʼಗಳ ವಿನಿಮಯ ಆಗುತ್ತಾ ಇರುತ್ತದೆ. ಮೊನ್ನೆ ಒಂದು ಅಂಗಡಿಯ ಎದುರು ʼಹೊಸವರ್ಷದ ಶುಭಾಶಯಗಳುʼ ಎಂದು ಸರಿಯಾಗಿಯೇ ಬರೆದಿದ್ದರು. ಅಂಗಡಿಗೆ ಬಂದಿದ್ದಾತ ತನ್ನ ಹೆಂಡತಿಗೆ ಅದನ್ನು ತೋರಿಸಿ, “ನೋಡು! ಎಷ್ಟೊಂದು ತಪ್ಪು ಬರೆದಿದ್ದಾರೆ; ಅದು ಶುಭಾಷಯ ಆಗಬೇಕು” ಎಂದು ತಿಳಿಹೇಳುತ್ತಿದ್ದ. ತಪ್ಪುಗಳನ್ನೇ ಎಲ್ಲೆಡೆ ಬರೆಯುತ್ತಾ ಕೊನೆಗೆ ಸರಿಯಾದುದನ್ನೇ ತಪ್ಪು ಎಂದು ಜನರು ಸಾಧಿಸುವ ಕಾಲಕ್ಕೆ ಬಂದಿದ್ದೇವೆ. "ಸರಿಯಾಗಿ ಬರೆಯಲು ಬರುತ್ತಿಲ್ಲವೇ? ತಪ್ಪುಗಳನ್ನೇ ಜನಸ್ನೇಹೀ ಪರ್ಯಾಯ ಭಾಷೆಯೆಂದು ಬಿಂಬಿಸಿದರಾಯ್ತು" ಎಂಬ ಹೊಸ ವಾದಗಳನ್ನೂ ಹುಟ್ಟುಹಾಕುತ್ತಿದ್ದೇವೆ. ಇದು ಕೊನೆಗೆ ಎಲ್ಲಿಗೆ ತಲುಪೀತು? ಕನ್ನಡ ರಕ್ಷಣೆಗಾಗಿ ಕಲಾವಿದರು ಸಾಹಿತಿಗಳ ಹೊಸ ಸಂಘಟನೆ ಮಾಡುತ್ತಿರುವುದಾಗಿಯೂ, ಇದಕ್ಕೆ ಸಹಕರಿಸಿದರೆ "ನಿಮಗೆ ಹೊಳ್ಳೆದು ಹಾಗುತದೆ" ಎಂಬುದಾಗಿಯೂ ಒಬ್ಬ ಸಂಘಟಕರು ನನಗೆ ಇತ್ತೀಚೆಗೆ ಸಂದೇಶ ಕಳಿಸಿದ್ದರು. ಇವರ ಪ್ರಕಾರ ಕನ್ನಡದ ರಕ್ಷಣೆ ಎಂದರೆ ಏನು?

ಮಾಧ್ಯಮಗಳು ಭಾಷೆಯನ್ನು ಉಳಿಸಿ, ಬೆಳೆಸುವ ವೇದಿಕೆಗಳೆಂಬ ಹೆಗ್ಗಳಿಕೆ ಹೊಂದಿದ್ದವು. ಭಾಷೆ ಹಾಗೂ ಸಾಹಿತ್ಯದ ಬೆಳವಣಿಗೆಗೆ ಮುದ್ರಣ ಮಾಧ್ಯಮದ ಕೊಡುಗೆಯಂತೂ ಅಪಾರ. “ಪತ್ರಿಕೆಯೆಂದರೆ ಪದಗಳ ಟಂಕಸಾಲೆ”ಯೆಂದು ಹಿರಿಯರು ಹೇಳಿದ್ದುಂಟು. ಆದರೆ ಇತ್ತೀಚಿನ ವರ್ಷಗಳಲ್ಲಿ ಪತ್ರಿಕೆಗಳು, ಟಿವಿ ವಾಹಿನಿಗಳಲ್ಲಿ ಭಾಷೆಯ ಕಗ್ಗೊಲೆಯಾಗುತ್ತಿರುವುದು ನೋಡಿದರೆ ತೀರಾ ಕಸಿವಿಸಿ ಎನಿಸುತ್ತದೆ. ಹೆಜ್ಜೆಹೆಜ್ಜೆಗೂ ಅಪಶಬ್ದಗಳು, ಕಾಗುಣಿತ ದೋಷಗಳು… ಇವು ಮಾಧ್ಯಮಗಳ ಗುಣಮಟ್ಟವನ್ನು ಹೇಳುವುದಕ್ಕಿಂತಲೂ ನಮ್ಮ ಶಿಕ್ಷಣದ ಹಾಗೂ ಅಧ್ಯಾಪಕರ ಗುಣಮಟ್ಟದತ್ತಲೇ ಹೆಚ್ಚು ಬೊಟ್ಟು ಮಾಡುತ್ತಿರುವಂತಿದೆ.

ಇರಲಿ. ಭಾಷೆಯ ಉಳಿವಿಗೆ, ಸರಿಯಾದ ಬಳಕೆಯ ಬೆಳವಣಿಗೆಗೆ ನಾವೇನು ಮಾಡಬಹುದು ಎಂಬ ಪ್ರಶ್ನೆಗೆ ಇತ್ತೀಚೆಗೆ ಪ್ರಕಟವಾಗಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರ ʼಸರಿಗನ್ನಡ-ಸರಿನ್ನಡʼ ಕೃತಿಯು ಅತ್ಯಂತ ಸೂಕ್ತ ಉತ್ತರದಂತಿದೆ. ಕನ್ನಡವನ್ನು ಸಾಕಷ್ಟು ಚೆನ್ನಾಗಿ ಬಲ್ಲವರೂ ಪ್ರತಿದಿನ ಮಾಡುವ ಹತ್ತಾರು ತಪ್ಪುಗಳನ್ನು ಉದಾಹರಣೆಗಳೊಂದಿಗೆ ವಿವರಿಸಿ, ಸರಿಯಾದ ಬಳಕೆ ಯಾವುದೆಂಬುದನ್ನು ತಿಳಿಸುವ ಅಮೂಲ್ಯ ಕೆಲಸವನ್ನು ಭಟ್ಟರು ಈ ಪುಸ್ತಕದ ಮೂಲಕ ಮಾಡಿದ್ದಾರೆ.

ಪತ್ರಿಕೆಗಳಲ್ಲಿ ದಿನಕ್ಕೊಮ್ಮೆಯಾದರೂ ʼಅಪ್ರಾಪ್ತನ ಬಂಧನʼ ಎಂಬ ಬಳಕೆಯನ್ನು ಕಾಣುತ್ತೇವೆ. ಭಾಷಣಕಾರರು ಮಾತಿಗೆ ತೊಡಗಿದರೆ ʼಅಜಗಜಾಂತರ ವ್ಯತ್ಯಾಸʼ ಎನ್ನುತ್ತಾರೆ. ಅನಾನುಕೂಲ, ಯಡವಟ್ಟು, ನಾಗರೀಕ, ಜಾತ್ಯಾತೀತ, ಕೋಟ್ಯಾಧಿಪತಿ, ಸದಾವಕಾಶ, ರೋಧನ, ಪೂರ್ವಾಗ್ರಹ, ಧಾಳಿ, ಅಮೂಲಾಗ್ರ… ಹೀಗೆ ತಪ್ಪುಬಳಕೆಗಳನ್ನೇ ಎಲ್ಲೆಡೆ ಕಾಣುತ್ತೇವೆ. ಕನ್ನಡ ಅಧ್ಯಾಪಕರು, ಕನ್ನಡ ಪತ್ರಕರ್ತರು, ಸಾಹಿತಿಗಳು… ಇವುಗಳನ್ನೇ ಸಲೀಸಾಗಿ ಬರೆಯುತ್ತಿರುತ್ತಾರೆ. ತಪ್ಪುಗಳನ್ನೇ ಬರೆಯುತ್ತಾ ಇವೇ ಸರಿಯಾದ ಬಳಕೆಗಳು ಎಂದು ವಾದಿಸುವಷ್ಟರಮಟ್ಟಿಗೆ ಇವು ದಿನನಿತ್ಯದ ಬಳಕೆಗಳಲ್ಲಿ ಗಟ್ಟಿಯಾಗಿಬಿಟ್ಟಿವೆ. ಇವು ಯಾಕೆ ತಪ್ಪು, ಸರಿಯಾದ ಬಳಕೆ ಯಾವುದು, ಸರಿಯಾದುದನ್ನು ಉಳಿಸಿ ಬೆಳೆಸಬೇಕಾದ ಅಗತ್ಯ ಏನು ಎಂಬುದನ್ನು ತಮ್ಮ ಪುಸ್ತಕದಲ್ಲಿ ಸಮರ್ಥವಾಗಿ ವಿವರಿಸಿದ್ದಾರೆ ಶ್ರೀ ವೆಂಕಟ್ರಮಣ ಭಟ್ಟರು.

ಈ ರೀತಿಯ ಪದಗಳನ್ನು ಅಕಾರಾದಿ ಜೋಡಿಸಿರುವುದರಿಂದ ಪರಾಮರ್ಶನದ ದೃಷ್ಟಿಯಿಂದಲೂ ಕೃತಿ ಅನುಕೂಲಕರವಾಗಿದೆ. ಕೃತಿಕಾರರು ಸುಮಾರು ನಾಲ್ಕು ದಶಕಗಳ ಕಾಲ ಸಂಸ್ಕೃತ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುವುದರಿಂದ ಪದಗಳ ವ್ಯುತ್ಪತ್ತಿ, ಅವುಗಳ ಅರ್ಥ, ತಪ್ಪು ಬಳಕೆಯಿಂದ ಆಗುವ ಅನರ್ಥಗಳನ್ನು ಅಧಿಕೃತವಾಗಿ ಹೇಳಬಲ್ಲವರಾಗಿದ್ದಾರೆ.

ʼಸರಿಗನ್ನಡ-ಸರಿಕನ್ನಡʼ ನಿಜಕ್ಕೂ ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ದೊಡ್ಡದೊಂದು ಕೊಡುಗೆ. ಪ್ರತೀ ಕನ್ನಡ ಪತ್ರಿಕೆ, ಟಿವಿ ವಾಹಿನಿಗಳೇ ಮೊದಲಾದ ಮಾಧ್ಯಮಗಳು ತಮ್ಮ ಕಚೇರಿಗಳಲ್ಲಿ ಇಟ್ಟುಕೊಳ್ಳಬೇಕಾದ ಪುಸ್ತಕ ಇದು. ಕನ್ನಡ ಅಧ್ಯಾಪಕರು, ವಿದ್ಯಾರ್ಥಿಗಳು, ಪತ್ರಕರ್ತರಂತೂ ತಮ್ಮ ಬಳಿ ಸದಾ ಇರಿಸಿಕೊಳ್ಳಬೇಕಾದ ಕೃತಿಯಿದು. ಅಷ್ಟೇ ಏಕೆ, ಭಾಷೆಯ ಬಗ್ಗೆ ಪ್ರೀತಿ-ಅಭಿಮಾನವುಳ್ಳ ಪ್ರತಿಯೊಬ್ಬ ಕನ್ನಡಿಗನೂ ಗಮನಿಸಬೇಕಾದ, ಪರಸ್ಪರ ಹಂಚಿಕೊಳ್ಳಬೇಕಾದ ಪುಸ್ತಕ ಇದೆಂದರೆ ಅತಿಶಯವೇನೂ ಇಲ್ಲ.

ಈ ಕಾಲಕ್ಕೆ ಬಹಳ ಅಗತ್ಯವಿರುವ ಕೃತಿಯಿದು. ಇಂತಹದೊಂದು ಮಹತ್ವದ ಪುಸ್ತಕ ರಚಿಸಿರುವ ಶ್ರೀ ಕೊಕ್ಕಡ ವೆಂಕಟ್ರಮಣ ಭಟ್ಟರಿಗೂ, ಇದನ್ನು ಪ್ರಕಟಿಸಿರುವ ಕಾಸರಗೋಡಿನ ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನಕ್ಕೂ ನಾವು ಆಭಾರಿಗಳಾಗಿರಬೇಕು. ಭೌಗೋಳಿಕವಾಗಿ ಕರ್ನಾಟಕದ ಹೊರಗಿರುವ, ಗಡಿನಾಡಿನ ಸಂಸ್ಥೆಯೊಂದು ಇಂತಹ ಘನಕಾರ್ಯವನ್ನು ಮಾಡಿದೆ ಎಂಬುದನ್ನು ನಾವೆಲ್ಲ ಗಮನಿಸಬೇಕು ಮತ್ತು ಅಭಿನಂದಿಸಬೇಕು.

 - ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: