ಶನಿವಾರ, ಡಿಸೆಂಬರ್ 9, 2017

ಎಕ್ಸಾಂ ಎಂಬ ಗೊಂದಲಪುರ

28-11-2017ರ 'ಉದಯವಾಣಿ'ಯಲ್ಲಿ ಪ್ರಕಟವಾದ ಲೇಖನ

'ನಿದ್ದೆ ಹತ್ತಿರ ಸುಳಿಯುತ್ತಿಲ್ಲ; ಊಟ ತಿಂಡಿ ರುಚಿಸುತ್ತಿಲ್ಲ; ಮನದೊಳಗೆ ಅದೇನೋ ಆತಂಕ. ದೇವರೇ, ನಾನು ಪ್ರೀತಿಯಲ್ಲಿ ಬಿದ್ದಿದ್ದೀನಾ?'
'ಮಂಕೇ ಅದು ಪ್ರೀತಿಯಲ್ಲ, ಎಕ್ಸಾಂ ಫಿಯರು.'

ಹೌದು, ಜಗತ್ತಿನ ಸಕಲ ಚರಾಚರ ವಸ್ತುಗಳನ್ನೂ ವರ್ಷಕ್ಕೆರಡು ಬಾರಿ ಕಾಡುವ ಅತಿದೊಡ್ಡ ಭಯಕ್ಕೆ ಎಕ್ಸಾಂ ಫಿಯರೆಂದು ಹೆಸರು. ಇಡೀ ಸೆಮಿಸ್ಟರಿನಲ್ಲಿ ಆದ ಪಾಠಗಳನ್ನು ಒಂದೇ ರಾತ್ರಿಯಲ್ಲಿ ಓದುವುದಕ್ಕೆ ತೊಡಗಿ ಅದರ ತುದಿಮೊದಲು ಒಂದೂ ಆರ್ಥವಾಗದೆ ಇನ್ನು ಭೂಮಿಯ ಮೇಲಿನ ಯಾವ ದೇವರೂ ತನ್ನನ್ನು ಕಾಪಾಡನೆಂದು ಬ್ರಾಹ್ಮೀ ಮುಹೂರ್ತದಲ್ಲಿ ಅರ್ಥವಾದಾಗ ಈ ಭಯದ ಜೊತೆಗೆ ಚಳಿಜ್ವರವೂ ಕಾಡುವುದುಂಟು.

ಅತ್ತ ಎಚ್ಚರವೂ ಅಲ್ಲದ ಇತ್ತ ನಿದ್ದೆಯೂ ಅಲ್ಲದ ಬೆಳ್ಳಂಬೆಳಗ್ಗಿನ ಅರೆಪ್ರಜ್ಞಾವಸ್ಥೆಯ ನಡುವೆ ಸುತ್ತಲೂ ಭೋರೆಂದು ಮಹಾಮಳೆ ಸುರಿದಂತೆ, ಅಚಾನಕ್ ಪ್ರವಾಹಕ್ಕೆ ಪ್ರಶ್ನೆಪತ್ರಿಕೆಯ ಬಂಡಲ್‌ಗಳು ಕೊಚ್ಚಿಹೋದಂತೆ, ಪರೀಕ್ಷೆಗಳೆಲ್ಲ ಮೂರು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿವೆ ಎಂಬ ಸಿಹಿಸುದ್ದಿ ವಾಟ್ಸಾಪಿನಲ್ಲಿ ತೇಲಿಬಂದಂತೆ ಕನಸುಗಳು ಬೀಳುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಆದರೆ ನಿದ್ದೆಯ ಮಂಪರಿನೊಂದಿಗೆ ಕನಸೂ ಹಾರಿಹೋದಾಗ ಎಂತೆಂಥದೋ ಬ್ರೇಕಿಂಗ್ ನ್ಯೂಸ್ ಕೊಡುವ ಟಿವಿಗಳು ಕಡೇ ಪಕ್ಷ ಎಲ್ಲೋ ಪ್ರಶ್ನೆಪತ್ರಿಕೆ ಲೀಕ್ ಆಗಿದೆ, ಪರೀಕ್ಷೆಯನ್ನು ಮುಂದೂಡಲಾಗಿದೆ ಎಂಬ ಫ್ಲಾಶ್ ನ್ಯೂಸನ್ನಾದರೂ ಕೊಡಬಾರದೇ ಎಂದು ಅನ್ನಿಸುವುದುಂಟು.

ಛೇ! ತಿಂಗಳಿಗೊಮ್ಮೆಯಾದರೂ ಪುಸ್ತಕಗಳನ್ನು ತಿರುವಿ ಹಾಕಿರುತ್ತಿದ್ದರೆ ಈಗ ಇಷ್ಟೊಂದು ಟೆನ್ಷನ್ ತೆಗೆದುಕೊಳ್ಳೋ ಪರಿಸ್ಥಿತಿ ಬರುತ್ತಿರಲಿಲ್ಲ. ಹೋಗಲಿ ಹತ್ತು ದಿನದಿಂದ ರೀಡಿಂಗ್ ಹಾಲಿಡೇ ಇರುವಾಗಲಾದರೂ ಒಂದಿಷ್ಟು ಸೀರಿಯಸ್ ಆಗಿ ಓದಿರುತ್ತಿದ್ದರೆ ಕೊಂಚ ನಿರಾಳವಾಗುತ್ತಿತ್ತು. ಯೆಸ್, ಇದೇ ಕೊನೆ, ಇನ್ನು ಮುಂದೆ ಹೀಗಾಗಕೂಡದು. ಮುಂದಿನ ಸೆಮಿಸ್ಟರಿನಲ್ಲಿ ರ‍್ಯಾಂಕ್ ಸ್ಟೂಡೆಂಟ್ ರೀತಿಯಲ್ಲಿ ಓದಬೇಕು ಎಂದು ಇಂತಹ ಚಳಿಜ್ವರದ ನಡುವೆಯೂ ಪ್ರತಿಜ್ಞೆ ಮಾಡುವುದುಂಟು. ಇದೊಂಥರಾ ನ್ಯೂ ಇಯರ್ ರೆಸೊಲ್ಯೂಷನ್ ಇದ್ದ ಹಾಗೆ. ಈ ಪತ್ರಿಜ್ಞೆ ಮತ್ತೆ ನೆನಪಿಗೆ ಬರುವುದು ಮುಂದಿನ ಸೆಮಿಸ್ಟರ್ ಪರೀಕ್ಷೆಗಳು ಆರಂಭವಾದ ಮೇಲೆಯೇ.

ಇಂತಿಪ್ಪ ಗಡಿಬಿಡಿಯ ನಡುವೆ ಪರೀಕ್ಷಾ ಕೇಂದ್ರದತ್ತ ಹೊರಟಾಗ ಎಂದೂ ತಪ್ಪದ ಬಸ್ ಅಂದು ತಪ್ಪಿಸಿಕೊಳ್ಳುವುದುಂಟು. ಬಸ್ ಮಿಸ್ಸಾಗಿದೆ ಎಂದರೆ ಹಾಲ್ ಟಿಕೇಟು, ಐಡಿ ಕಾರ್ಡು, ಕೊನೆಗೆ ಬರೆಯಬೇಕಾಗಿರುವ ಪೆನ್ನೂ ಮನೆಯಲ್ಲೇ ಉಳಿದುಬಿಟ್ಟಿದೆ ಎಂದು ಬೇರೆ ಹೇಳಬೇಕಾಗಿಲ್ಲ. ಪರೀಕ್ಷೆ ಬರೆಯಬೇಕಾಗಿರುವವನು ತನ್ನನ್ನೇ ತಾನು ಮರೆತಿರುವಾಗ ಹಾಲ್ ಟಿಕೇಟಿನಂತಹ ಕ್ಷುಲ್ಲಕ ವಸ್ತುಗಳು ಮರೆತುಹೋಗುವುದು ವಿಶೇಷವಲ್ಲ.

ಅಂತೂ ಪರೀಕ್ಷಾ ಮುಖ್ಯಸ್ಥರ ಕೈಕಾಲು ಹಿಡಿದು ಪರೀಕ್ಷೆ ಬರೆಯುವುದಕ್ಕೆ ಅನುಮತಿ ಪಡೆದು ಎಕ್ಸಾಂ ಹಾಲ್ ಹುಡುಕಿ ಹೊರಟರೆ ಕಣ್ಣೆದುರೇ ಇರುವ ಹಾಲ್ ಕಾಣಿಸದೆ ಈ ಹಾಲಿನಿಂದ ಆ ಹಾಲಿಗೆ, ಆ ಹಾಲಿನಿಂದ ಈ ಹಾಲಿಗೆ ಅಲೆದಾಡುತ್ತಾ ಮತ್ತೆ ಹತ್ತು ನಿಮಿಷ ಕಳೆದುಹೋಗಿರುತ್ತದೆ. ಅಷ್ಟರಲ್ಲಿ ಪ್ರಶ್ನೆಪತ್ರಿಕೆಯೆಂಬ ಭಯಾನಕ ವಸ್ತು ಅದಾಗಲೇ ಎಲ್ಲರ ಕೈಯನ್ನೂ ಅಲಂಕರಿಸಿರುತ್ತದೆ. ಏದುಸಿರು ಬಿಡುತ್ತಾ ಅದನ್ನೂ ಪಡೆದುಕೊಂಡು ಸ್ವಸ್ಥಾನದಲ್ಲಿ ಕುಕ್ಕರಿಸಿ ಪ್ರಶ್ನೆಪತ್ರಿಕೆಯ ಮೇಲೆ ಕಣ್ಣಾಡಿಸಿದರೆ ಮುಂದಕ್ಕೆ ಏನೂ ಕಾಣಲೊಲ್ಲದು. ಸುತ್ತಲೂ ಕತ್ತಲು. ಅದ್ಯಾವ ಭೂಪ ಕ್ಷೆಶ್ಚನ್ ಪೇಪರ್ ತಯಾರಿಸಿದ್ದಾನೋ? ತಾನು ರಾತ್ರಿಯಿಡೀ ಓದಿದ್ದಕ್ಕೂ ಪ್ರಶ್ನೆಪತ್ರಿಕೆಯಲ್ಲಿರುವುದಕ್ಕೂ ಒಂದಿನಿತೂ ತಾಳಮೇಳ ಇಲ್ಲ. ಕುಳಿತಲ್ಲೇ ಭೂಕಂಪ ಸಂಭವಿಸಿ ಭೂಮಿ ಬಾಯ್ದೆರೆದು ತನ್ನನ್ನು ನುಂಗಿಬಿಡಬಾರದೇ ಎಂದು ಆ ಕ್ಷಣ ಅನ್ನಿಸುವುದೂ ಉಂಟು.

'ಯಾಕೋ ತಮ್ಮಾ, ನೀರು ಬೇಕೇನೋ?’ ಪರೀಕ್ಷಾ ಕೊಠಡಿಯಲ್ಲಿ ಮೇಲ್ವಿಚಾರಕನಾಗಿ ನಿಂತಿರುವ ನಾನು ಅಲ್ಲಿಯವರೆಗಿನ ಸಮಸ್ತ ವಿದ್ಯಮಾನಗಳನ್ನೆಲ್ಲ ಊಹಿಸಿಕೊಂಡು ಆತನನ್ನು ಕೇಳುತ್ತೇನೆ. ಗಟಗಟನೆ ಒಂದು ಲೀಟರ್ ನೀರು ಕುಡಿದ ಅವನಿಗೆ ತಾನೆಲ್ಲಿದ್ದೇನೆ ಎಂದು ಅರ್ಥವಾದ ಬಳಿಕ 'ಸುಧಾರಿಸ್ಕೊಳೋ. ಟೆನ್ಷನ್ ಮಾಡ್ಕೋಬೇಡ. ನಿಧಾನವಾಗಿ ಯೋಚಿಸಿ ಬರೆಯೋದಕ್ಕೆ ಶುರುಮಾಡು’ ಎಂದು ಬೆನ್ನುತಟ್ಟುತ್ತೇನೆ.

ಎಕ್ಸಾಂ ಹಾಲ್‌ನಲ್ಲಿ ಪ್ರತಿದಿನ ಇಂತಹ ದೃಶ್ಯಗಳು ಸಾಮಾನ್ಯ. ಪ್ರತೀ ಹಾಲ್‌ನಲ್ಲೂ ಇಂತಹವರು ನಾಲ್ಕೈದು ಮಂದಿಯಾದರೂ ಸಿಗುತ್ತಾರೆ. ನನ್ನ ಮಟ್ಟಿಗಂತೂ ಎಕ್ಸಾಂ ಹಾಲ್ ಒಂದು ಕುತೂಹಲದ ಕೇಂದ್ರ. ನಲ್ವತ್ತು ಮಂದಿ ಪರೀಕ್ಷಾರ್ಥಿಗಳಿದ್ದರೆ ನಲ್ವತ್ತು ಅಧ್ಯಯನದ ವಸ್ತುಗಳಿವೆ ಎಂದೇ ಅರ್ಥ. ಒಬ್ಬೊಬ್ಬರದೂ ಒಂದೊಂದು ಭಾವ, ಒಂದೊಂದು ವರ್ತನೆ. ಅವರನ್ನೆಲ್ಲ ಗಮನಿಸುತ್ತಾ ಮೂರು ಗಂಟೆ ಕಳೆಯುವುದೇ ಒಂದು ಸೊಗಸಾದ ಅನುಭವ.

ಕಣ್ಣುಮುಚ್ಚಿ ಧ್ಯಾನಸ್ಥರಾಗಿರುವವರು ಒಂದಷ್ಟು ಮಂದಿಯಾದರೆ ಕೂದಲೇ ಕಿತ್ತುಹೋಗುವಂತೆ ತಲೆಕೆರೆದುಕೊಳ್ಳುವವರು ಇನ್ನೊಂದಷ್ಟು ಮಂದಿ. ಪ್ರಪಂಚದಲ್ಲಿ ಅತಿಹೆಚ್ಚು ಉಗುರು ತಿನ್ನುವ ಜೀವಿಗಳನ್ನು ನೋಡಬೇಕಾದರೂ ಎಕ್ಸಾಂ ಹಾಲ್‌ಗೇ ಭೇಟಿ ನೀಡಬೇಕು. ಪ್ರಶ್ನೆಪತ್ರಿಕೆ ವಿತರಣೆಯೆಂಬ ದುರ್ಘಟನೆ ನಡೆದ ಮೊದಲ ಅರ್ಧ ಗಂಟೆಯಲ್ಲಿ ಕನಿಷ್ಟ ಅರ್ಧ ಕೆ.ಜಿ. ಉಗುರಾದರೂ ಅಭ್ಯರ್ಥಿಗಳ ಹೊಟ್ಟೆಯಲ್ಲಿ ಕರಗಿ ಬೆವರಾಗಿ ಈಚೆ ಬರುವುದುಂಟು.

ತಲೆ ಮೇಲೆ ಕೈಹೊತ್ತು ಕುಳಿತವರು, ಡೆಸ್ಕ್ ಮೇಲೆ ಮೊಣಕೈಯೂರಿ ಹಣೆ ನೀವಿಕೊಳ್ಳುವವರು, ಪೆನ್ನಿನ ತುದಿ ಕಚ್ಚಿ ವಿರೂಪಗೊಳಿಸುವವರು, ಅಕ್ಕಪಕ್ಕದಲ್ಲಿ ಇರುವವರು ಏನು ಮಾಡುತ್ತಿದ್ದಾರೆ ಎಂದು ಗಮನಿಸುವುದರಲ್ಲೇ ಕಾಲಕಳೆಯುವವರು, ಎಷ್ಟು ಬರೆದರೂ ಪುಟವೇ ತುಂಬುತ್ತಿಲ್ಲವಲ್ಲ ಎಂದು ಶಪಿಸಿಕೊಳ್ಳುವವರು, ಪಕ್ಕದ ಬೆಂಚಿನಲ್ಲಿ ಕುಳಿತಿರುವ ರ‍್ಯಾಂಕ್ ಸ್ಟೂಡೆಂಟ್ ಮೇಲಿಂದ ಮೇಲೆ ಅಡಿಶನಲ್ ಪೇಪರ್ ತೆಗೆದುಕೊಳ್ಳುವುದನ್ನೇ ಜಗತ್ತಿನ ಒಂಬತ್ತನೇ ಅದ್ಭುತವೆಂಬಂತೆ ಬೆರಗಿನಿಂದ ನೋಡುವವರು, ಕಿಟಕಿಯಾಚೆ ಶೂನ್ಯದತ್ತ ದೃಷ್ಟಿ ನೆಟ್ಟು ಓದಿದ್ದನ್ನು ನೆನಪಿಸಿಕೊಳ್ಳಲು ಪ್ರಯತ್ನಿಸುತ್ತಾ ಮಣಮಣ ಮಂತ್ರ ಪಠಿಸುವ, ಕಣ್ಣುಕೊಂಕಿಸುವ ಹುಡುಗ ಹುಡುಗಿಯರು, ಪದೇಪದೇ ವಾಚ್ ನೋಡಿಕೊಳ್ಳುತ್ತಾ ಎದ್ದು ಹೋಗಲು ಇನ್ನೆಷ್ಟು ಹೊತ್ತು ಕಾಯಬೇಕು ಎಂದು ಸಂಕಟಪಡುವವರು, 120 ಕಿ.ಮೀ. ಸ್ಪೀಡಿನಲ್ಲಿ ಬರೆಯುತ್ತಿರುವ ಮುಂದಿನ ಬೆಂಚಿನ ಹುಡುಗಿಯ ತಲೆಯೊಳಗೆ ಏನಿರಬಹುದು ಎಂಬ ವಿಸ್ಮಯದಲ್ಲಿ ಕಣ್ಣರಳಿಸಿ ಕುಳಿತವರು... ಪರೀಕ್ಷಾ ಕೊಠಡಿಯಲ್ಲಿ ಹತ್ತೆಂಟು ಬಗೆಯ ಮಂದಿ.

ವಾರೆಗಣ್ಣಿನಲ್ಲಿ ಅಕ್ಕಪಕ್ಕದವರ ಉತ್ತರಪತ್ರಿಕೆಗಳನ್ನು ಗಮನಿಸುವ, ಅಮಾಯಕರಂತೆ ಪೋಸ್ ಕೊಡುತ್ತಾ ಎದುರು ಕುಳಿತವರ ಉತ್ತರಗಳನ್ನು ಹೇಗೆಂದಹಾಗೆ ನಕಲು ಮಾಡುವ, ಮೇಲ್ವಿಚಾರಕರು ಗಮನಿಸಿದರು ಎಂದು ಗೊತ್ತಾದ ಕೂಡಲೇ ಕುತ್ತಿಗೆ ನೆಟಿಗೆ ತೆಗೆಯಲು ಪಕ್ಕಕ್ಕೆ ಕತ್ತು ತಿರುಗಿಸಿದೆ ಎಂಬ ಹಾಗೆ ತಲೆಯಲ್ಲಾಡಿಸುವ ಕಲೆಯಲ್ಲಂತೂ ಅನೇಕ ಪರೀಕ್ಷಾರ್ಥಿಗಳಿಗೆ ನೂರರಲ್ಲಿ ನೂರು ಅಂಕ.

ಹತ್ತು ನಿಮಿಷ ತಡವಾಗಿ ಎಕ್ಸಾಂ ಹಾಲ್‌ಗೆ ಬಂದ ಆಸಾಮಿ ಹತ್ತು ನಿಮಿಷ ಮೊದಲೇ ಎದ್ದು ಹೊರಟಾಗ ಹತ್ತಿರ ಕರೆದು ಸಣ್ಣ ಧ್ವನಿಯಲ್ಲಿ 'ಹೆಂಗಾಯ್ತೋ ಎಕ್ಸಾಂ?’ ಎಂದು ಕೇಳುತ್ತೇನೆ. 'ಅವ್ರು ನಂಗೆ ಗೊತ್ತಿಲ್ಲದ ಪ್ರಶ್ನೆಗಳನ್ನೇ ಕೇಳಿದಾರೆ. ಹಂಗೇ ನಾನೂ ಅವರಿಗೆ ಗೊತ್ತಿಲ್ಲದ ಉತ್ತರಗಳನ್ನೇ ಬರೆದಿದೀನಿ ಸಾರ್’ ಎನ್ನುತ್ತಾ ಆತ ಕ್ಷಣಾರ್ಧದಲ್ಲಿ ಕಾರಿಡಾರ್ ತುದಿಯಲ್ಲಿ ಮಾಯವಾಗಿರುತ್ತಾನೆ.

ಶುಕ್ರವಾರ, ಡಿಸೆಂಬರ್ 1, 2017

ನಮ್ಮ ವಿಶಿಷ್ಟ ಪಾಕ ಪರಂಪರೆ: ಅಯ್ಯಂಗಾರ್ ಬೇಕರಿ

ದಿನಾಂಕ: 26-11-2017ರ 'ವಿಜಯ ಕರ್ನಾಟಕ'ದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ

ಆಡು ಮುಟ್ಟದ ಸೊಪ್ಪಿಲ್ಲ, ಉಡುಪಿ ಹೋಟೆಲ್ ಇಲ್ಲದ ಊರಿಲ್ಲ, ಎಂ.ಜಿ. ರೋಡ್ ಇಲ್ಲದ ಪಟ್ಟಣವಿಲ್ಲ... ಎಂದೆಲ್ಲ ಗಾದೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅಯ್ಯಂಗಾರ್ ಬೇಕರಿಯಿಲ್ಲದ ರಸ್ತೆಯಿಲ್ಲ ಎಂಬ ಗಾದೆಯನ್ನೂ ಸೇರಿಸಲು ನಿಮ್ಮದೇನೂ ತಗಾದೆಯಿರದು ಅಲ್ಲವೇ?

ಕಿಕ್ಕಿರಿದ ನಗರದ ತುಂಬಿತುಳುಕುವ ರಸ್ತೆಗಳಲ್ಲಿ ಕಣ್ಣು ಕಿವಿ ಮೂಗು ಬಾಯಿ ಚರ್ಮಗಳೆಂಬ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಓಡಾಡುವ ವೇಳೆ
ಗೆ ನಿಮ್ಮ ಮೂಗಿನ ಹೊಳ್ಳೆಗಳನ್ನು ಒಂದಿನಿತಾದರೂ ಅರಳಿಸುವ ಧೈರ್ಯವಿರುವುದು ಈ ಅಯ್ಯಂಗಾರ್ ಬೇಕರಿಗಳಿಗೆ.

ಚುಮುಚುಮು ಚಳಿಗೆ ಹಬೆಯಾಡುವ ಕಾಫಿ, ಮಟಮಟ ಬಿಸಿಲಿಗೆ ತಂಪೆರೆಯುವ ಜ್ಯೂಸು, ರಪರಪ ರಾಚುವ ಮಳೆಗೆ ಕುರುಕುರು ತಿನಿಸು -ಎಲ್ಲವಕ್ಕೂ ಕಾಲದ ಹಂಗಿದೆ; ಆದರೆ ಈ ಬೇಕರಿಗಳಿಗೆ ಅದರ ಗೊಡವೆ ಇಲ್ಲ. ಚಳಿಯಿರಲಿ, ಬಿಸಿಲಿರಲಿ, ಮಳೆಯಿರಲಿ - ಜೋರು ಹಸಿವಿನ ಡೋಲು ಬಡಿಯುವ ಹೊಟ್ಟೆಯನ್ನು ಶಮನಗೊಳಿಸುವುದಕ್ಕೆ ಬೇಕರಿಯೇ ಬೇಕ್ರಿ.

ಇದಕ್ಕೆ ಮುಗಿಬೀಳುವ ಜನಕ್ಕೆ ಹೊತ್ತುಗೊತ್ತಿನ ಬೇಧವೂ ಇಲ್ಲ. ಬೆಳಗು, ಮಧ್ಯಾಹ್ನ, ಸಂಜೆ, ರಾತ್ರಿ- ಎಲ್ಲ ಹೊತ್ತುಗಳಲ್ಲೂ ಎಲ್ಲ ವಯೋಮಾನದ ಮಂದಿಗೂ ಬೇಕರಿಗಳು ಬೇಕು. ಶಾಲೆಗಳಿಂದ ಸ್ವಾತಂತ್ರ್ಯ ಪಡೆದು ಓಡೋಡಿ ಬರುವ ಮಕ್ಕಳು, ಗೆಳೆಯ ಗೆಳತಿಯರೊಂದಿಗೆ ಹರಟೆ ಕೊಚ್ಚುವುದಕ್ಕೆ ಜಾಗ ಹುಡುಕುವ ಕಾಲೇಜು ಹೈಕಳು, ಮನೆಗೇನಾದರೂ ಹೊಸದು ಒಯ್ಯುವ ಧಾವಂತದ ಗೃಹಿಣಿಯರು, ಮಧ್ಯಾಹ್ನದ ಊಟವನ್ನು ಸರಳಗೊಳಿಸುವ ವೃತ್ತಿಪರರು, ವಾಕಿಂಗಿನ ಏಕತಾನತೆಯನ್ನು ಕಳೆಯಲು ದಾರಿ ಹುಡುಕುವ ನಿವೃತ್ತರು... ಎಲ್ಲರಿಗೂ ಅಯ್ಯಂಗಾರ್ ಬೇಕರಿಗಳು ಪರಮಾಪ್ತ ತಾಣಗಳು.

ಯಾವುದೋ ನಿರ್ದಿಷ್ಟ ಬ್ರಾಂಡ್ ತೋರಿಸಿ ಅದೇ ಹಲ್ಲುಜ್ಜುವ ಪೇಸ್ಟ್ ಬೇಕೆಂದು ಕೇಳುವವರಿರುವಂತೆ, ಯಾವುದೋ ಬೇಕರಿ ತೋರಿಸಿ ಅಯ್ಯಂಗಾರ್‌ಗೆ ಹೋಗೋಣ ಎನ್ನುವವರೂ ಇದ್ದಾರೆ. ಅಷ್ಟರಮಟ್ಟಿಗೆ ಅಯ್ಯಂಗಾರ್ ರುಚಿ ಮತ್ತು ಹೆಸರು ಜನರ ನಾಲಿಗೆ ತುದಿಯಲ್ಲಿ ಭದ್ರ. ಈ ಅಂಕಿತನಾಮ ಅನ್ವರ್ಥನಾಮವಾದ ಕಥೆಗೆ ಒಂದು ಶತಮಾನಕ್ಕೂ ಹೆಚ್ಚಿನ ಹಿನ್ನೆಲೆಯಿದೆ ಎಂಬುದೇ ಒಂದು ಕುತೂಹಲದ ಸಂಗತಿ.

ಹಾಸನದಿಂದ ಬೆಂಗಳೂರಿಗೆ
ಅಯ್ಯಂಗಾರ್ ಬೇಕರಿಗಳ ಇತಿಹಾಸ ಹುಡುಕಿ ಹೊರಟರೆ ನೀವು ಹತ್ತೊಂಬತ್ತನೇ ಶತಮಾನಕ್ಕೆ ವಾಪಸ್ ಹೋಗಬೇಕಾಗುತ್ತದೆ. ಮತ್ತು ಹಾಗೆ ಹೋಗಿ ನೀವು ನಿಲ್ಲುವುದು ಹಾಸನದಲ್ಲಿ. ಹಾಸನ ಜಿಲ್ಲೆಗೆ ಸೇರಿದ ಅಷ್ಟಗ್ರಾಮಗಳಲ್ಲೊಂದಾದ ಹುಲಿಕಲ್‌ನ ಎಚ್. ಎಸ್. ತಿರುಮಲಾಚಾರ್ ಅವರೇ ಅಯ್ಯಂಗಾರ್ ಬೇಕರಿಗಳ ಮೂಲಪುರುಷನೆಂಬುದು ಈ ಹುಡುಕಾಟದಿಂದ ದೊರೆಯುವ ಮಾಹಿತಿ.

1890ರ ದಶಕದಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ವೈಷ್ಣವ ಮನೆತನದ ತಿರುಮಲಾಚಾರ್ ತಮ್ಮ ಸಹೋದರನೊಂದಿಗೆ ಸೇರಿಕೊಂಡು 1898ರಲ್ಲಿ ಚಿಕ್ಕಪೇಟೆ ಮುಖ್ಯರಸ್ತೆಯಲ್ಲಿ ಸಣ್ಣದೊಂದು ಸಿಹಿತಿಂಡಿ ಅಂಗಡಿ ತೆರೆದರು ಎಂಬುದು ಈ ಬೇಕರಿ ಕಥೆಯ ಮೊದಲ ಅಧ್ಯಾಯ. ಈ ಸ್ವೀಟ್ ಸ್ಟಾಲು ಬೆಂಗಳೂರು ಬ್ರದರ್ಸ್ ಬೇಕರಿಯೆಂದೋ, ಬೆಂಗಳೂರು ಬ್ರಾಹ್ಮಿನ್ಸ್ ಬೇಕರಿಯೆಂದೋ ನಾಮಧೇಯಗಳನ್ನು ಪಡೆದುಕೊಂಡು ಎಲ್ಲರಿಗೂ ಬೇಕಾದ ಅಯ್ಯಂಗಾರ್ ಬೇಕರಿಯಾಗಿ ಬೆಳೆದದ್ದು ಮುಂದಿನ ಅಧ್ಯಾಯಗಳು.

ಅಂದಹಾಗೆ ಈ ಬೇಕರಿ ಕಥೆಗೆ ರೋಚಕ ತಿರುವು ಕೊಟ್ಟದ್ದು ಒಬ್ಬ ಇಂಗ್ಲಿಷ್ ಮಹಾನುಭಾವ. ತಿರುಮಲಾಚಾರರ ಅಂಗಡಿಗೆ ಖಾಯಂ ಗಿರಾಕಿಯಾಗಿದ್ದ ಪ್ರಸಿದ್ಧ ವೆಸ್ಟ್ ಎಂಡ್ ಹೋಟೆಲಿನ ಉದ್ಯೋಗಿಯೊಬ್ಬ ಅವರಿಗೆ ಹೊಸ ತಿನಿಸುಗಳನ್ನು ತಯಾರಿಸಿ ಮಾರುವ ಯೋಚನೆಯನ್ನು ಬಿತ್ತಿದ. ಅಷ್ಟಲ್ಲದೆ ಬ್ರೆಡ್ಡು ಬನ್ನು ತಯಾರಿಸುವ ವಿದ್ಯೆಯನ್ನೂ ಕಲಿಸಿಬಿಟ್ಟ. ಅಲ್ಲಿಗೆ ಅಯ್ಯಂಗಾರರ ಹೊಸ ಪಯಣ ಆರಂಭವಾಯಿತು.

ಚಿಕ್ಕ ಬನ್ನುಗಳಿಗೆ ಪ್ರಸಿದ್ಧಿಯಾದ ಅಯ್ಯಂಗಾರ್ ಬೇಕರಿ ಪಲ್ಯ ಬನ್, ಆಲೂ ಬನ್, ತರಹೇವಾರಿ ಬಿಸ್ಕತ್ತು, ಖಾರ ಕುಕ್ಕೀಸ್, ದಿಲ್ ಪಸಂದ್ ಎನ್ನುತ್ತ ತನ್ನ ಮೆನುವನ್ನು ಬೆಳೆಸುತ್ತಾ ಹೋಯಿತು. ಖುದ್ದು ಮಾರ್ಕೆಟಿಗೆ ಹೋಗಿ ಬೇಕರಿಗೆ ಅವಶ್ಯಕ ಸಾಮಗ್ರಿಗಳನ್ನು ಎತ್ತಿನ ಗಾಡಿಯಲ್ಲಿ ತುಂಬಿಕೊಂಡು ತಂದು ರುಚಿರುಚಿಯಾದ ತಿಂಡಿತಿನಿಸುಗಳನ್ನು ತಯಾರಿಸುತ್ತಿದ್ದ ತಿರುಮಲಾಚಾರ್ ಮುಂದಿನ ತಲೆಮಾರುಗಳಿಗೆ ರೋಲ್ ಮಾಡೆಲ್ ಆಗಿಬಿಟ್ಟರು. ಈಗ ಅವರ ನಾಲ್ಕನೇ ತಲೆಮಾರಿನ ಮರಿಮಕ್ಕಳು ಅದೇ ಚಿಕ್ಕಪೇಟೆಯಲ್ಲಿ ತಮ್ಮ ಸಾಂಪ್ರದಾಯಿಕ ವೃತ್ತಿ ಮುಂದುವರಿಸಿದ್ದಾರೆ. ಚಿಕ್ಕಬನ್‌ನಿಂದ ಆರಂಭವಾದ ಬಿಬಿ ಬೇಕರಿಯಲ್ಲಿ ಈಗ ಏನಿಲ್ಲವೆಂದರೂ ಮೂವತ್ತೈದು ವೈವಿಧ್ಯತೆಗಳಿವೆ.

ನಾಮವೊಂದೇ, ಬೇಕರಿ ಹಲವು
ಗಣತಿ ನಡೆಸಿದರೆ ಬೆಂಗಳೂರಿನಲ್ಲೇ ಒಂದೈನೂರು ಅಯ್ಯಂಗಾರ್ ಬೇಕರಿ ಕಾಣಸಿಗಬಹುದು. ಕರ್ನಾಟಕದ ಉದ್ದಗಲದಲ್ಲಿ ಎಲ್ಲಿಗೇ ಹೋದರೂ ಅಯ್ಯಂಗಾರ್ ಬೇಕರಿ ಇಲ್ಲದ ಊರು ಸಿಗದೆಂದು ಆಗಲೇ ಹೇಳಿದೆ. ಕರ್ನಾಟಕವೇ ಏಕೆ, ಮುಂಬೈ, ಪೂನಾ, ಚೆನ್ನೈ, ಹೈದರಾಬಾದ್‌ನಂತಹ ಮಹಾನಗರಗಳಲ್ಲೂ ಅಯ್ಯಂಗಾರ್ ಬೇಕರಿ ಒಂದು ಅವಿಭಾಜ್ಯ ಅಂಗಡಿ. ಅಂತೂ ಇಡೀ ದೇಶ ಸುತ್ತಾಡಿದರೆ ಒಂದೂವರೆಸಾವಿರ ಅಯ್ಯಂಗಾರ್ ಬೇಕರಿಯಿದ್ದೀತೆಂದು ಅಂದಾಜು ಮಾಡಿದವರುಂಟು.

ಅಂದಹಾಗೆ, ಇವೆಲ್ಲ ಒಂದೇ ಕುಟುಂಬದವರು ಸ್ಥಾಪಿಸಿದ ಫ್ರಾಂಚೈಸಿಗಳೆಂದು ತಪ್ಪುತಿಳಿದೀರಿ ಜೋಕೆ. ಉಡುಪಿ ಹೋಟೆಲ್, ಮಂಗಳೂರು ನೀರ್‌ದೋಸೆ, ತುಮಕೂರು ತಟ್ಟೆ ಇಡ್ಲಿ, ದಾವಣೆಗೆರೆ ಬೆಣ್ಣೆದೋಸೆ ಥರ ಅಯ್ಯಂಗಾರ್ ಬೇಕರಿ ಕೂಡ ಒಂದು ಜನಪ್ರಿಯ ಬ್ರಾಂಡ್ ಆಗಿ ಬೆಳೆದುಬಿಟ್ಟಿದೆ. ಈ ಬಗ್ಗೆ ಹಳೆಯ ಮೂಲ ಅಯ್ಯಂಗಾರ್ ಬೇಕರಿ ಮಾಲೀಕರಿಗೆ ಅಸಮಾಧಾನವೂ ಇದೆ.

ತಿರುಮಲಾಚಾರ್ ಕುಟುಂಬ ಬೆಂಗಳೂರಿಗೆ ಬಂದು ಬೇಕರಿ ಉದ್ಯಮ ಹಿಡಿದು ಯಶಸ್ಸು ಕಂಡದ್ದನ್ನು ಗಮನಿಸಿದ ಅದೇ ಊರಿನ ಇತರ ಕೆಲವು ಕುಟುಂಬಗಳೂ ಮುಂದಿನ ವರ್ಷಗಳಲ್ಲಿ ಬೆಂಗಳೂರಿಗೆ ವಲಸೆ ಬಂದವು. 1950-60ರ ದಶಕದ ಬರ ಅಂತೂ ಅಷ್ಟಗ್ರಾಮಗಳ ಅಷ್ಟೂ ಮಂದಿ ಊರು ಬಿಡುವಂತೆ ಮಾಡಿತು. ಅವರಲ್ಲಿ ಬಹುತೇಕರು ರಾಜಧಾನಿಗೆ ಬಂದು ಬೇಕರಿ ಉದ್ಯಮದಲ್ಲಿ ತೊಡಗಿಸಿಕೊಂಡರು. ವಿಶ್ವೇಶ್ವರಪುರಂನ ವಿವಿ ಬೇಕರಿ, ಮೆಜೆಸ್ಟಿಕ್‌ನ ಸೂರ್ಯ ಬೇಕರಿ, ಎಲ್.ಜೆ. ಬೇಕರಿ ಹೀಗೆ ವಿವಿಧೆಡೆ ಬೇಕರಿಗಳು ತಲೆಯೆತ್ತಿದವು. 1981ರಲ್ಲಿ ಆಸ್ಟಿನ್ ಟೌನ್‌ನಲ್ಲಿ ಆರಂಭವಾದ ಅಯ್ಯಂಗಾರ್ ಬೇಕರಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಹಳೆಯ ಬೇಕರಿಗಳಲ್ಲೊಂದು.

ಆಮೇಲಾಮೇಲೆ ಅಯ್ಯಂಗಾರ್ ಬ್ರಾಂಡ್‌ನ ಜನಪ್ರಿಯತೆ ಬೆಂಬತ್ತಿ ಹತ್ತಾರು ಬೇಕರಿಗಳು ಹುಟ್ಟಿಕೊಂಡವು. ಅಯ್ಯಂಗಾರ್ ಬೇಕರಿಯೆಂದು ಬೋರ್ಡು ಹಾಕಿಕೊಂಡವು. ಮುಂದಿನ ವರ್ಷಗಳಲ್ಲಿ ಅಯ್ಯಂಗಾರ್ ಸಮುದಾಯದವರಲ್ಲದೆ ವಿವಿಧ ಸಮುದಾಯಕ್ಕೆ ಸೇರಿದವರು ಬೇಕರಿ ಕ್ಷೇತ್ರದಲ್ಲಿ ದುಡಿಯತೊಡಗಿದರು.

ಆದರೆ ಅಯ್ಯಂಗಾರ್ ಬೇಕರಿ ಬ್ರಾಂಡ್ ದುರುಪಯೋಗವಾಗುತ್ತಿದೆಯೆಂದು ಬೇಸರಗೊಂಡು ತಮ್ಮ ಅಂಗಡಿ ಹೆಸರನ್ನು ನೋಂದಣಿ ಮಾಡಿಸಿಕೊಂಡವರೂ ಇದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆಸ್ಟಿನ್ ಟೌನ್‌ನ ಹಳೆಯ ಬೇಕರಿ ಮಾಲೀಕರು ಅಯ್ಯಂಗಾರ್ ಬೇಕರಿ ಹೆಸರಿಗೆ ಪೇಟೆಂಟ್ ಮಾಡಿಸಿಕೊಳ್ಳುವ ಯೋಚನೆ ಮಾಡಿದ್ದುಂಟು.

ಮುಂಬೈ ಸೇರಿದಂತೆ ಹತ್ತುಹಲವು ನಗರಗಳಲ್ಲಿ ಅಯ್ಯಂಗಾರ್ ಹೆಸರಿನಲ್ಲಿ ಬೇಕರಿಗಳನ್ನು ತೆರೆದಿದ್ದಾರೆ; ಆದರೆ ಮೂಲ ಅಯ್ಯಂಗಾರ್ ಬೇಕರಿಗಳ ಶುಚಿ, ರುಚಿ, ಗುಣಮಟ್ಟಗಳನ್ನು ಕಾಪಾಡಿಕೊಳ್ಳದೆ ಜನ ಅಯ್ಯಂಗಾರ್ ಬೇಕರಿಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಇದನ್ನು ತಪ್ಪಿಸಲು ಪೇಟೆಂಟ್ ಪಡೆದುಕೊಳ್ಳುವುದು ಮತ್ತು ಸಂಘಟಿತರಾಗುವುದೊಂದೇ ದಾರಿ ಎಂಬುದು ಹೊಸ ತಲೆಮಾರಿನ ಉದ್ಯಮಿಗಳ ಅಂಬೋಣ.

ಕಾಲದೊಂದಿಗೆ ಹೆಜ್ಜೆ
ಕಾಲದೊಂದಿಗೆ ಹೆಜ್ಜೆಹಾಕುವುದು ಅನಿವಾರ್ಯವೆಂದು ಮನಗಂಡಿರುವ ಅಯ್ಯಂಗಾರ್ ಬೇಕರಿಗಳು ಸಾಂಪ್ರದಾಯಿಕ ವಿಧಾನಗಳೊಂದಿಗೆ ಆಧುನಿಕ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿವೆ. ಹಿಟ್ಟು ರುಬ್ಬಲು, ತರಕಾರಿ ಹೆಚ್ಚಲು, ತಿನಿಸುಗಳನ್ನು ಬೇಯಿಸಲು ಬಗೆಬಗೆಯ ಯಂತ್ರಗಳು ಬಂದು ಕುಳಿತಿವೆ. ಅಗತ್ಯ ಕಾರ್ಮಿಕರ ಅಲಭ್ಯತೆಯೂ ಈ ಬದಲಾವಣೆಗಳಿಗೆ ಕಾರಣ.
ಆಲೂ ಬನ್, ಪಲ್ಯ, ನಿಪ್ಪಟ್ಟು, ಬ್ರೆಡ್, ಬಟರ್, ಬಿಸ್ಕತ್ತುಗಳಿಗೆ ಸೀಮಿತವಾಗಿದ್ದ ಅಯ್ಯಂಗಾರ್ ಬೇಕರಿಗಳು ಈಗ ಕೇಕ್-ಪೇಸ್ಟ್ರಿಗಳನ್ನೂ, ಪನೀರ್, ಎಗ್ ಪಫ್‌ಗಳನ್ನೂ ತಯಾರಿಸುತ್ತಿವೆ. ರಮ್ ಮಿಶ್ರಿತ ಪ್ಲಮ್ ಕೇಕ್, ಸ್ಪಾಂಜ್ ಕೇಕ್, ಜೇನು, ಸಿರಪ್, ಜಾಮ್, ತೆಂಗಿನಕಾಯಿ ತುರಿ ಬೆರೆಸಿದ ಹನಿ ಕೇಕ್, ಬಾಯಲ್ಲಿ ನೀರೂರಿಸುವ ಕ್ರಿಸ್‌ಮಸ್ ಸ್ಪೆಷಲ್ ಕೇಕ್‌ಗಳು ಈಗ ಇವರ ವಿಶೇಷ ಆಕರ್ಷಣೆಗಳು.

ಕಾಲ ಬದಲಾಗಿದೆ, ಜನ ಆಧುನಿಕರಾಗಿದ್ದಾರೆ. ಕಂಪ್ಯೂಟರಿನಿಂದ ತೊಡಗಿ ತರಕಾರಿಯವರೆಗೆ ಎಲ್ಲವೂ ಆನ್‌ಲೈನ್ ಮಳಿಗೆಗಳಲ್ಲಿ ಬಿಕರಿಯಾಗುವಾಗ ಬೇಕರಿಯವರು ತಮ್ಮ ಅಂಗಡಿಗಳನ್ನಷ್ಟೇ ನಂಬಿ ಕೂರುವುದಕ್ಕಾಗುತ್ತದೆಯೇ? ಅವರೂ ಇ-ಕಾಮರ್ಸ್ ಯುಗಕ್ಕೆ ಕಾಲಿಟ್ಟಿದ್ದಾರೆ, ಆನ್‌ಲೈನ್ ಸೇವೆಗಳನ್ನು ಆರಂಭಿಸಿದ್ದಾರೆ. ತಮ್ಮದೇ ವೆಬ್‌ಸೈಟುಗಳನ್ನು ತೆರೆದು ತಮ್ಮಲ್ಲಿ ದೊರೆಯುವ ತಿನಿಸುಗಳ ಪಟ್ಟಿ ಪ್ರಕಟಿಸಿದ್ದಾರೆ. ಗ್ರಾಹಕರು ಅಲ್ಲಿಯೇ ಆರ್ಡರ್ ಬುಕ್ ಮಾಡಿ ತರಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಆಸ್ಟಿನ್ ಟೌನ್‌ನ ಅಯ್ಯಂಗಾರ್ ಬೇಕರಿಯವರಂತೂ ಬೆಂಗಳೂರಿನ 75ಕ್ಕೂ ಹೆಚ್ಚಿನ ಕಡೆಗಳಿಂದ ಕೆಲವೇ ನಿಮಿಷಗಳಲ್ಲಿ ಗ್ರಾಹಕರನ್ನು ತಲುಪುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಗರದ ಬೇರೆಬೇರೆ ಕಡೆ ಉತ್ತಮ ಗುಣಮಟ್ಟದ ತಿನಿಸುಗಳನ್ನು ಒದಗಿಸುವ ಸಹ ಉದ್ಯಮಿಗಳನ್ನು ಗುರುತು ಮಾಡಿಕೊಂಡು ಒಳ್ಳೆಯ ತಂಡ ಕಟ್ಟಿಕೊಂಡಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ರೋಮ್‌ನಲ್ಲಿ ಆರಂಭಗೊಂಡ ಬೇಕರಿಯೆಂಬ ಲಕ್ಷುರಿ ಈಗ ಜನಸಾಮಾನ್ಯರ ದಿನನಿತ್ಯದ ತಿನಿಸಾಗಿದೆ. ಬ್ರೆಡ್-ಪಫ್-ಬಿಸ್ಕತ್ತುಗಳ ಹೊರತಾದ ಟೀ-ಕಾಫಿ ರುಚಿಸುವುದೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಅವು ನಮ್ಮನ್ನು ಅಂಟಿಕೊಂಡುಬಿಟ್ಟಿವೆ. ಝಗಮಗಿಸುವ ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು ದೋಸೆಹಿಟ್ಟು, ಚಪಾತಿ, ತಿಳಿಗಂಜಿಯನ್ನು ಪ್ಯಾಕ್ ಮಾಡಿ ಮಾರುವ ಕಾಲ ಬಂದರೂ ಹಳೆಯ ಅಯ್ಯಂಗಾರ್ ಬೇಕರಿಗಳನ್ನು ಹುಡುಕಿ ಮೈಲಿಗಟ್ಟಲೆ ಹೋಗುವ ಜನಸಾಮಾನ್ಯರು ಮಾಯವಾಗಿಲ್ಲ. ರುಚಿಗೆ ವಯಸ್ಸುಂಟೆ?

ಮಂಗಳವಾರ, ನವೆಂಬರ್ 28, 2017

ಜೀವನ ಎಂಬ ಕಲೆ

ನವೆಂಬರ್ 18-24, 2017ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ

ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ: ಬೀದಿಯುದ್ದ ಬೈಸಿಕಲ್ ಹೊಡೆಯುವ ಹುಡುಗ ಹುಡುಗಿಯರನ್ನು ಕನಸುಗಣ್ಣುಗಳಿಂದ ನೋಡಿ ತನಗೂ ಒಂದು ಪುಟ್ಟ ಬೈಸಿಕಲ್ ಬೇಕು ಎಂದು ಆಸೆಪಡದವರು ಇದ್ದೀರಾ? ಬಣ್ಣಬಣ್ಣದ ತರಹೇವಾರಿ ಸೈಕಲುಗಳಿಂದ ಗಿಜಿಗುಡುವ ಅಂಗಡಿಯೆದುರು ನಿಂತು ಈಗಲೇ ಒಂದು ಸೈಕಲ್ ಕೊಡಿಸಲೇಬೇಕೆಂದು ಅಪ್ಪ-ಅಮ್ಮನ ಎದುರು ನಿಂತು ರಸ್ತೆಯಲ್ಲೇ ಮುಷ್ಕರ ಹೂಡದವರು ಇದ್ದೀರಾ? ಬೈಸಿಕಲ್ ಕೊಡಿಸದೇ ಹೋದರೆ ಶಾಲೆಗೇ ಹೋಗುವುದಿಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡದವರು ಇದ್ದೀರಾ?

ಬೈಸಿಕಲ್ ಎಂದರೆ ಹಾಗೆಯೇ. ಜಗತ್ತಿನ ಎಲ್ಲರ ಆಕರ್ಷಣೆ. ವಿಮಾನ ಏರಬೇಕೆಂದು ಆಸೆಪಡದವರು ಸಿಗಬಹುದು, ಆದರೆ ಬೈಸಿಕಲ್ ಓಡಿಸಬೇಕೆಂದು ಕನಸುಕಾಣದವರು ಸಿಗುವುದು ಕಷ್ಟ. ಎಳವೆಯಲ್ಲಂತೂ ಸೈಕಲ್ ಹೊಡೆಯುವುದೇ ದೊಡ್ಡ ಗುರಿ ಮತ್ತು ಸಾಧನೆ. ಆದರೆ ಬೈಸಿಕಲ್ ಮೇಲೆ ಕುಳಿತಾಗಲೇ ಗೊತ್ತಾಗುವುದು ಅದನ್ನು ಓಡಿಸುವುದು ಕನಸು ಕಂಡಷ್ಟು ಸರಳ ಅಲ್ಲವೆಂದು. ಮೊದಲ ಸಲ ಸೈಕಲ್ ಹತ್ತಿದ ಮಗುವಂತೂ ಇದು ತನ್ನಿಂದಾಗದ ಕೆಲಸವೆಂದು ಒಂದೇ ನಿಮಿಷದಲ್ಲಿ ಆತಂಕದಿಂದ ಇಳಿದು ಬರುವ ಸಾಧ್ಯತೆಯೇ ಹೆಚ್ಚು. ಆರಂಭದ ದಿನಗಳಲ್ಲಿ ಮಕ್ಕಳ ಬೈಸಿಕಲ್ಲಿನ ಹಿಂಬದಿ ಟಯರಿಗೆ ಮತ್ತೆರಡು ಪುಟ್ಟ ಚಕ್ರಗಳು ಬೇಕು. ಮತ್ತೊಂದು ದಿನ ಮಗುವೇ ಹೇಳುತ್ತದೆ: ಸಾಕಿನ್ನು ಹಿಂಬದಿ ಚಕ್ರ, ತೆಗೆದುಬಿಡಿ ಅದನ್ನು. ಬೈಸಿಕಲ್ ಓಡಿಸುವುದು ಕರಗತವಾದ ಬಳಿಕ ಹೆಚ್ಚುವರಿ ಚಕ್ರಗಳೇ ನಮ್ಮ ಸ್ವಾಭಿಮಾನಕ್ಕೆ ಅಡ್ಡಿ!

ಬಹುಶಃ ಅಂಬೆಗಾಲಿಕ್ಕುವ ದಿನಗಳಿಂದ ತೊಡಗಿ ಬದುಕಿನ ಕೊನೆಯ ದಿನಗಳವರೆಗೂ ಬ್ಯಾಲೆನ್ಸ್ ಮಾಡುವುದೇ ಮನುಷ್ಯ ಜೀವನದ ಬಲುದೊಡ್ಡ ಸವಾಲು ಇರಬೇಕು. ಬಾಲ್ಯದಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡುವುದೊಂದೇ ಅವಶ್ಯಕತೆ; ವರ್ಷಗಳು ಕಳೆದಂತೆ, ಹದಿಹರೆಯ, ಯೌವನ, ಉದ್ಯೋಗ, ಸಂಸಾರ, ಸಾಧನೆ, ಇಳಿವಯಸ್ಸು... ಹೀಗೆ ಒಂದೊಂದು ಹಂತಗಳು ದಾಟುತ್ತಿದ್ದಂತೆ ಬದುಕಿನ ಪ್ರತಿ ನಿಮಿಷವೂ ಪರ್ವತದಂಚಿನ ಹಾದಿಯ ಸೈಕಲ್ ಬ್ಯಾಲೆನ್ಸೇ! ಸಮತೋಲನ ಸಾಧಿಸಿದವನು ಪರ್ವತ ಏರಿಯಾನು, ಎಚ್ಚರ ತಪ್ಪಿದವನು ಮತ್ತೆಂದೂ ಏಳಲಾಗದ ಪ್ರಪಾತಕ್ಕೆ ಬಿದ್ದಾನು.

ಜೀವನವೆಂದರೆ ಬೈಸಿಕಲ್ ಓಡಿಸಿದ ಹಾಗೆ, ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ನೀವು ಚಲಿಸುತ್ತಲೇ ಇರಬೇಕು - ಎಂದರು ಆಲ್ಬರ್ಟ್ ಐನ್‌ಸ್ಟೀನ್. ಜಗತ್ತಿನ ಚಲನೆಯ ನಿಯಮಗಳನ್ನು ಅತ್ಯಂತ ಸರಳವಾಗಿ ಸೂತ್ರೀಕರಿಸಿದ ಮಹಾನ್ ವಿಜ್ಞಾನಿ ಬದುಕಿನ ಬಹುದೊಡ್ಡ ಸತ್ಯವನ್ನೂ ಎಷ್ಟೊಂದು ಸರಳವಾಗಿ ಹೇಳಿಬಿಟ್ಟಿದ್ದಾರೆ ನೋಡಿ. ಚಲಿಸದೇ ಹೋದರೆ ಸೈಕಲ್ ಅರೆಕ್ಷಣವೂ ನಿಲ್ಲದು. ಬೀಳದೆ ಇರಬೇಕೆಂದರೆ ಪೆಡಲ್ ಮಾಡುತ್ತಲೇ ಇರಬೇಕು. ಚಲನಶೀಲತೆ ಬದುಕಿನ ಸಾರಸರ್ವಸ್ವ ಎನ್ನುತ್ತಲೇ ಬದುಕೆಂಬುದೊಂದು ಕಲೆ ಎಂಬ ಸತ್ಯವನ್ನು ಐನ್‌ಸ್ಟೀನ್ ಎಷ್ಟು ಸುಲಭವಾಗಿ ವಿವರಿಸಿದ್ದಾರೆ!

ಕಲೆಯೆಂದರೆ ಹಾಗೆಯೇ, ಕಲಿಯುವವರೆಗೆ ಎಲ್ಲವೂ ಕಠಿಣ, ಕಲಿತ ಮೇಲೆ ತುಂಬ ಸಲೀಸು. ಆದರೆ ಕಲಿಯುವ ಹಾದಿಯೇ ಬಲುಕಠಿಣ. ಪೂರ್ತಿ ಕಲಿತಾಗುವ ಮುನ್ನವೇ ನಿವೃತ್ತಿ ಘೋಷಿಸುವವರೇ ಹೆಚ್ಚು. ನಮ್ಮ ಸುತ್ತಮುತ್ತ ಎಷ್ಟೊಂದು ಬಗೆಯ ಮಂದಿಯನ್ನು ನೋಡುತ್ತೇವೆ: ತೀರಾ ಕೆಳಹಂತದಿಂದ ಬೆಳೆದು ಶಿಖರಪ್ರಾಯ ಸಾಧನೆ ಮಾಡಿದವರು, ಯಶಸ್ಸಿನ ಶಿಖರಕ್ಕೇರಿ ಸೋಲಿನ ಪಾತಾಳಕ್ಕೆ ಕುಸಿದವರು, ಆರಕ್ಕೂ ಏರದೆ ಮೂರಕ್ಕೂ ಇಳಿಯದೆ ಇಡೀ ಜೀವನವನ್ನು ನೀರಸವಾಗಿಯೇ ಮುಗಿಸಿದವರು, ಅರೆಕ್ಷಣದ ದೌರ್ಬಲ್ಯಕ್ಕೆ ತುತ್ತಾಗಿ ಬದುಕಿಗೆ ಅಂತ್ಯ ಹಾಡಿದವರು, ಅದೇ ಅರೆಕ್ಷಣದಲ್ಲೂ ಮನಸ್ಸು ಬದಲಾಯಿಸಿ ಸಾವಿನ ದವಡೆಯಿಂದ ತಪ್ಪಿಸಿಕೊಂಡು ಯಶಸ್ಸಿನ ಉತ್ತುಂಗಕ್ಕೇರಿ ಮೆರೆದವರು...

ಒಬ್ಬೊಬ್ಬನ ಬದುಕೂ ಒಂದೊಂದು ಥರ. ಎಲ್ಲರೂ ಬದುಕುವ ನೆಲ ಅದೇ, ಕುಡಿಯುವ ನೀರು ಅದೇ, ಉಸಿರಾಡುವ ಗಾಳಿ ಅದೇ; ಆದರೆ ಯಾಕೆ ಎಲ್ಲರ ಬದುಕೂ ಒಂದೇ ರೀತಿ ಇರುವುದಿಲ್ಲ? ಏಕೆಂದರೆ ನೆಲ-ನೀರು-ಗಾಳಿ ಒಂದೇ ಆದರೂ ಯೋಚಿಸುವ ಮನಸ್ಸುಗಳು ಬೇರೆಬೇರೆ; ತೆಗೆದುಕೊಳ್ಳುವ ನಿರ್ಧಾರಗಳು ಬೇರೆಬೇರೆ. ನೂರು ಕೋಟಿ ಜನರಿದ್ದರೆ ನೂರು ಕೋಟಿ ಮನಸ್ಸುಗಳು, ಮುನ್ನೂರು ಕೋಟಿ ಆಲೋಚನೆಗಳು. ಜೀವನವೆಂದರೆ ಏನೆಂದು ಎಲ್ಲರನ್ನೂ ಕೇಳಿದರೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ನೀಡಿಯಾರು. ಆದರೆ ಜೀವನವೊಂದು ಕಲೆ ಎಂಬ ಮುಕ್ತ ರಹಸ್ಯವನ್ನು ಅವರು ಹೇಳಿಯಾರೇ?

'ಬದುಕೊಂದು ನಡೆದಾಡುವ ನೆರಳು, ರಂಗದ ಮೇಲೆ ಅತ್ತಿಂದಿತ್ತ ಇತ್ತಿಂದತ್ತ ಪರದಾಡುವ ಬಡ ಕಲಾವಿದ, ಮೂರ್ಖ ಹೇಳಿದ ಕಥೆ...’ ಎನ್ನುತ್ತಾನೆ ಶೇಕ್ಸ್‌ಪಿಯರನ ಮ್ಯಾಕ್‌ಬೆತ್. 'ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ’ ಎಂದರು ಡಿ.ವಿ.ಜಿ. ಆದರೆ ಬದುಕಿನ ಎಲ್ಲ ಬೆಳವಣಿಗೆಗಳನ್ನೂ ಕೇವಲ ವಿಧಿ ಲೀಲೆಗೇ ತೂಗುಹಾಕಲಿಲ್ಲ ಅವರು. 'ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು, ಪದಕುಸಿಯೆ ನೆಲವಿಹುದು-ಮಂಕುತಿಮ್ಮ’ ಎಂದು ಸಾಗುವ ಕಗ್ಗದಲ್ಲಿ 'ಕುದುರೆ ನೀನು’ ಮತ್ತು 'ಪದಕುಸಿಯೆ ನೆಲವಿಹುದು’ ಎಂಬ ಎರಡು ಮಾತುಗಳನ್ನು ನಾವು ಪ್ರತ್ಯೇಕವಾಗಿ ಗಮನಿಸಬೇಕು. ಎಲ್ಲವೂ ಅವನ ಲೀಲೆಯೆಂದು ಅಖೈರು ಮಾಡುವ ಮೊದಲು ಸಾಗುವ ಕುದುರೆಗಳು ನಾವೇ ಎಂಬ ಸಣ್ಣ ಆಯ್ಕೆಯ ಪ್ರಜ್ಞೆ ಹಾಗೂ ಎಷ್ಟು ಕುಸಿದರೂ ಕೆಳಗೆ ನೆಲವಿದೆ ಎಂಬ ವಿಶ್ವಾಸ ಬೆಳೆಸಿಕೊಂಡರೆ ವಿಧಿಯೂ ಮನುಷ್ಯನ ಬೆಂಬಲಕ್ಕೆ ನಿಲ್ಲದೆ ಇರಲಾರದು.

ವಾಸ್ತವವಾಗಿ ಬದುಕು ತುಂಬ ಸರಳವಾಗಿರುತ್ತದೆ. ನಾವೆಲ್ಲರೂ ಅದನ್ನು ಸಂಕೀರ್ಣಗೊಳಿಸಲು ಹವಣಿಸುತ್ತಿರುತ್ತೇವೆ ಎಂದ ತತ್ತ್ವಜ್ಞಾನಿ ಕನ್‌ಫ್ಯೂಶಿಯಸ್. ಎಲ್ಲರಿಗೂ ಜೀವನದಲ್ಲಿ ದೊಡ್ಡದನ್ನು ಸಾಧಿಸುವ ಹಂಬಲ. ದೊಡ್ಡದು ಎಂದರೆ ಏನು? ಕೋಟಿಗಟ್ಟಲೆ ಸಂಪಾದಿಸುವುದೇ? ಲಕ್ಷಾಂತರ ಅಭಿಮಾನಿಗಳನ್ನು ಪಡೆಯುವುದೇ? ಹತ್ತು ಮಹಡಿಯ ಬಂಗಲೆಯಲ್ಲಿ ವಾಸಿಸುವುದೇ? ಐಷಾರಾಮಿ ಕಾರಿನಲ್ಲಿ ಓಡಾಡುವುದೇ? ಚಿನ್ನದ ತಟ್ಟೆಯಲ್ಲಿ ಉಣ್ಣುವುದೇ? ಇದೇ ಬದುಕಿನ ಯಶಸ್ಸು ಎಂದುಕೊಳ್ಳುವುದಾದರೆ ಇದರಿಂದ ಮನುಷ್ಯ ಸಂತೋಷವಾಗಿರಬಲ್ಲನೇ? ಕಣ್ತುಂಬ ನಿದ್ದೆ ಮಾಡಬಲ್ಲನೇ? ಇಲ್ಲ ಎಂದಾದರೆ ಅವನ ’ದೊಡ್ಡ ಸಾಧನೆ’ಯ ಸಾರ್ಥಕ್ಯ ಏನು? ಎಲ್ಲರಿಗಿಂತ ಹೆಚ್ಚು ಸಂಪಾದಿವುದೇ ಯಶಸ್ಸು ಎಂದು ಜಗತ್ತಿನ ಬಹುಪಾಲು ಮಂದಿ ಭಾವಿಸಿರುವುದೇ ಅವರ ಅತೃಪ್ತಿಯ ಮೂಲ. ಬದುಕಿನ ಸರಳತೆಯನ್ನು ಸಂಕೀರ್ಣಗೊಳಿಸುವುದು ಎಂದರೆ ಇದೇ ಅಲ್ಲವೇ?

ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ |
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ||
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ |
ನರಳುವುದು ಬದುಕೇನೋ? - ಮಂಕುತಿಮ್ಮ ||
ಎಂದು ಡಿವಿಜಿಯವರು ಇಂತಹ ಮನಸ್ಥಿತಿಯವರನ್ನೇ ಪ್ರಶ್ನಿಸಿರುವುದು. ಸಣ್ಣ ಕೊರತೆಗಳೆಂಬ ತರಚು ಗಾಯಗಳನ್ನೇ ಕೆರೆದು ದೊಡ್ಡ ಹುಣ್ಣನ್ನಾಗಿಸುವ ಮನುಷ್ಯನ ಕೋತಿಬುದ್ಧಿಯನ್ನು ಅವರು ಎಷ್ಟೊಂದು ಮಾರ್ಮಿಕವಾಗಿ ಎತ್ತಿ ತೋರಿಸಿದ್ದಾರೆ ನೋಡಿ.  ’ಸರಿಯಾಗಲಿಲ್ಲವದು ಸರಿಯಿದಲ್ಲವೆನುತ/ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ/ ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು/ ಒರಟು ಕೆಲಸವೋ ಬದುಕು’ ಎಂದು ಬುದ್ಧಿಮಾತನ್ನೂ ಹೇಳಿದ್ದಾರೆ. ಇನ್ನೊಬ್ಬರೊಂದಿಗೆ ತಮ್ಮನ್ನು ಹೋಲಿಸಿಕೊಂಡು, ತಮಗೆ ಅದು ಸಿಕ್ಕಿಲ್ಲ ಇದು ದಕ್ಕಿಲ್ಲ ಎಂದು ಮುಳ್ಳಹಾಸಿಗೆಯಲ್ಲಿ ಹೊರಳುವ ಜನರಿಗೆ ಡಿವಿಜಿಯವರ ನುಡಿಯೇ ದಿವ್ಯೌಷಧ.

'ಮನಸ್ಸು ರೋಗವನ್ನು ಸೃಷ್ಟಿಸಬಲ್ಲುದು, ಗುಣಪಡಿಸಬಲ್ಲದು! ತಾಳ್ಮೆ, ಪ್ರೀತಿ, ಕರುಣೆ, ದಾನಬುದ್ಧಿ, ನಿಃಸ್ವಾರ್ಥ ಸೇವಾಮನೋಭಾವ- ಇವೇ ಮೊದಲಾದ ರಚನಾತ್ಮಕ ಭಾವನೆಗಳು ದೇಹಯಂತ್ರದ ಎಲ್ಲ ಭಾಗಗಳಲ್ಲಿ ಉತ್ಸಾಹಯುತ ಆರೋಗ್ಯಕರ ಚಟುವಟಿಕೆಗಳಿಗೆ ಕಾರಣವಾಗುತ್ತವೆ’ ಎಂದು ತಮ್ಮ 'ಬದುಕಲು ಕಲಿಯಿರಿ’ ಕೃತಿಯಲ್ಲಿ ಹೇಳುವ ಸ್ವಾಮಿ ಜಗದಾತ್ಮಾನಂದರು 'ಮನಸ್ಸಿನಲ್ಲಿ ಉದಿಸುವ ಯೋಚನೆ ಎಂಬ ದ್ರವ್ಯದಿಂದ ವಿಷವನ್ನೂ ತಯಾರಿಸಬಹುದು, ಅಮೃತವನ್ನೂ ತಯಾರಿಸಬಹುದು. ತಿಳಿದೋ ತಿಳಿಯದೆಯೋ ವಿಷವನ್ನು ತಯಾರಿಸುವವರೇ ಹೆಚ್ಚು. ಮನಸ್ಸು ಕೆಲಸ ಮಾಡುವ ಸೂಕ್ಷ್ಮ ನಿಯಮವನ್ನು ತಿಳಿದುಕೊಂಡರೆ, ಶ್ರದ್ಧೆಯಿಂದ ಶ್ರಮಿಸಿದರೆ ವಿಷವನ್ನೂ ಅಮೃತವನ್ನಾಗಿಸಬಹುದು’ ಎನ್ನುತ್ತಾರೆ. ವಿಷವನ್ನೂ ಅಮೃತವಾಗಿಸುವುದೇ ಬದುಕಿನ ಕಲೆಯಲ್ಲವೇ?

ಗುರುವಾರ, ನವೆಂಬರ್ 23, 2017

ಅಟೆಂಡೆನ್ಸ್ ಪ್ಲೀಸ್!

14-11-2017ರ ಉದಯವಾಣಿ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ನೋಟೀಸ್ ಬೋರ್ಡ್ ಕೆಳಗೆ ಗಿಜಿಗುಡುವ ಹುಡುಗರು, ಅವರೊಳಗೆಯೇ ಗುಸುಗುಸು ಪಿಸಪಿಸ, ಕಳೆಗುಂದಿ ವಾಪಸಾಗುವ ಮುಖಗಳು, ವೆರಾಂಡದ ತುದಿಬದಿಗಳಲ್ಲಿ ಬಿಸಿಬಿಸಿ ಚರ್ಚೆ, ಪ್ರಿನ್ಸಿಪಾಲ್ ಕೊಠಡಿಯೆದುರು ಕಣ್ಣೀರ ಧಾರೆ... ಕಾಲೇಜು ಆವರಣದಲ್ಲಿ ಇಂತಹದೆಲ್ಲ ಲಕ್ಷಣಗಳು ಕಂಡುಬರುತ್ತಿವೆಯೆಂದಾದರೆ ಅಟೆಂಡೆನ್ಸ್ ಶಾರ್ಟೇಜೆಂಬ ಜ್ವರ ಕಾಲಿಟ್ಟಿದೆಯೆಂದೇ ಅರ್ಥ. ಇದು ಎರಡು ಮೂರು ದಿನಗಳಲ್ಲಿ ವಾಸಿಯಾಗುವ ಸಾಮಾನ್ಯ ಜ್ವರವಂತೂ ಖಂಡಿತ ಅಲ್ಲ. ಕೆಲವೊಮ್ಮೆ ವಾರಗಟ್ಟಲೆ ಮುಂದುವರಿದು ಆಸ್ಪತ್ರೆ, ಅಲ್ಲಲ್ಲ, ನ್ಯಾಯಾಲಯದಲ್ಲಿ ಭರ್ಜರಿ ಟ್ರೀಟ್‌ಮೆಂಟ್ ಆದ ಬಳಿಕ ವಾಸಿಯಾಗುವುದೂ ಇದೆ.

ಪರೀಕ್ಷಾ ಜ್ವರದ ಬಗ್ಗೆ ಕೇಳಿದ್ದೇವೆ; ಇದು ಅದಕ್ಕೂ ಕೊಂಚ ಮೊದಲು ಕಾಣಿಸಿಕೊಳ್ಳುವ ಖಾಯಂ ಅತಿಥಿ. ಸೆಮಿಸ್ಟರ್ ಕೊನೆಗೊಳ್ಳುತ್ತಾ ಇದೆಯೆಂದರೆ ಈ ಅತಿಥಿ ತನ್ನ ಭೇಟಿಯನ್ನು ತಪ್ಪಿಸಿಕೊಳ್ಳುವುದೇ ಇಲ್ಲ. ಎಸ್‌ಎಸ್‌ಎಲ್‌ಸಿ-ಪಿಯುಸಿಯವರಿಗೆ ವರ್ಷಕ್ಕೊಮ್ಮೆ ಇದರ ಚಿಂತೆಯಾದರೆ, ಪದವಿ-ಇಂಜಿನಿಯರಿಂಗ್-ಸ್ನಾತಕೋತ್ತರ ಪದವಿ ಓದುವವರಿಗೆ ವರ್ಷಕ್ಕೆ ಎರಡು ಬಾರಿ ಇದರೊಂದಿಗೆ ಮುಖಾಮುಖಿಯಾಗುವುದು ಅನಿವಾರ್ಯ. ಅಂದಹಾಗೆ ಈ ಜ್ವರದ ಕಾವು ತಗಲುವುದು ಕೇವಲ ಹುಡುಗರಿಗೆ ಮಾತ್ರ ಅಲ್ಲ. ಅವರ ಶಾಲಾ-ಕಾಲೇಜುಗಳ ಪ್ರಿನ್ಸಿಪಾಲ್‌ಗಳೂ ಅನೇಕ ಬಾರಿ ಉರಿ ತಾಳಲಾಗದೆ ನೆತ್ತಿಯ ಮೇಲೆ ಐಸ್ ಹೊತ್ತು ಕೂರುವುದಿದೆ.

ಹಾಲ್ ಟಿಕೇಟಿಗೆ ಆಗ್ರಹಿಸಿ ಹಾಜರಾತಿ ಕೊರತೆಯುಳ್ಳ ವಿದ್ಯಾರ್ಥಿಗಳಿಂದ ಪ್ರಿನ್ಸಿಪಾಲರ ಮೇಲೆ ಹಲ್ಲೆ, ಕಾಲೇಜು ಮೈದಾನದಲ್ಲಿ ಪೋಷಕರಿಂದ ಪ್ರತಿಭಟನೆ, ಜನಪ್ರತಿನಿಧಿಗಳ ಮಧ್ಯಪ್ರವೇಶ ಇತ್ಯಾದಿ ಸುದ್ದಿಗಳು ವರ್ಷಕ್ಕೆ ಒಂದೆರಡು ಬಾರಿಯಾದರೂ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಿದೆ. ಶೈಕ್ಷಣಿಕ ನಿಯಮಗಳ ಪ್ರಕಾರ ಶೇ. ೭೫ರಷ್ಟಾದರೂ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿಲ್ಲ. ಅವರು ಮುಂದಿನ ವರ್ಷ ಮತ್ತೆ ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಪರೀಕ್ಷೆ ಬರೆಯುವ ಅರ್ಹತೆ ಪಡೆದುಕೊಳ್ಳಬೇಕು. ತಮಗಿಷ್ಟ ಬಂದಾಗ ಕ್ಲಾಸ್‌ಗೆ ವಿಸಿಟ್ ಕೊಟ್ಟು ಉಳಿದ ಸಮಯಗಳಲ್ಲಿ ಬೀದಿ ಸುತ್ತುವ, ಪಾರ್ಕ್-ಹೊಟೇಲು-ಸಿನಿಮಾ ಮಂದಿರಗಳಲ್ಲಿ ಕಾಲಯಾಪನೆ ಮಾಡುವ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದೇ ಈ ನಿಯಮದ ಉದ್ದೇಶ.

ಈ ಹುಡುಗರು ಎಷ್ಟೇ ಬ್ಯುಸಿಯಾಗಿದ್ದರೂ ಅಟೆಂಡೆನ್ಸ್ ಶಾರ್ಟೇಜ್ ಪಟ್ಟಿ ನೋಟೀಸ್ ಬೋರ್ಡಿಗೆ ಬೀಳುವ ಕ್ಷಣಕ್ಕೆ ಮಾತ್ರ ಸಂಪೂರ್ಣ ಬಿಡುವು ಮಾಡಿಕೊಂಡು ಕಾಲೇಜಿಗೆ ಬಂದೇ ಬರುವುದು ನಿಶ್ಚಿತ. ನಿನ್ನ ಹೆಸರು ನೋಟೀಸ್ ಬೋರ್ಡಲ್ಲಿದೆ ಎಂದು ಅವರಿಗೆ ಮಾಹಿತಿ ನೀಡಿ ಸಹಾಯ ಮಾಡುವ ಸ್ನೇಹಿತರೂ ಕಾಲೇಜಲ್ಲಿರುತ್ತಾರೆ. ಅಲ್ಲಿಂದ ಚಳುವಳಿ ಆರಂಭ.

ಮೊದಲಿಗೆ ಯಥಾಪ್ರಕಾರ ಮಂದಗಾಮಿ ನೀತಿ ಅನುಸರಿಸುವ ಈ ಹುಡುಗರು ಮುಖ ಬಾಡಿಸಿಕೊಂಡು, ಅಗತ್ಯವಿದ್ದರೆ ಕಣ್ಣೀರೂ ಹಾಕಿಕೊಂಡು ಪ್ರಿನ್ಸಿಪಾಲರ ಎದುರು ಕ್ಯೂ ನಿಂತು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಲವತ್ತುಕೊಳ್ಳುವುದು ವಾಡಿಕೆ. ತರಗತಿಗಳಿಗೆ ಹಾಜರಾಗದಿರಲು ಅವರಿಗಿದ್ದ ಅನಿವಾರ್ಯ ಕಾರಣಗಳ ಪಟ್ಟಿ ಸೆಮಿಸ್ಟರಿಗಿಂತಲೂ ದೀರ್ಘವಾಗಿರುವುದಿದೆ. ನಿಮ್ಮ ಮಗ ಅಂತ ಅಂದುಕೊಳ್ಳಿ, ಇದೊಂದು ಬಾರಿ ಅವಕಾಶ ಮಾಡಿಕೊಡಿ, ಇನ್ನೆಂದೂ ಹೀಗಾಗದಂತೆ ನೋಡ್ಕೋತೀವಿ ಎನ್ನುತ್ತಲೇ ಪ್ರಿನ್ಸಿಪಾಲರ ಪಾದಕ್ಕೆ ಸಾಷ್ಟಾಂಗ ಪ್ರಣಾಮ ಮಾಡುವ ಛಾನ್ಸನ್ನೂ ಇವರು ತಪ್ಪಿಸಿಕೊಳ್ಳುವುದಿಲ್ಲ.

ಈ ವಿಧಾನ ನಡೆಯದೇ ಹೋದರೆ ಮುಂದಿನದ್ದು ತೀವ್ರಗಾಮಿ ನೀತಿ. ಪ್ರಿನ್ಸಿಪಾಲರೊಂದಿಗೆ ಚರ್ಚೆ-ವಾಗ್ವಾದ, ಉದ್ದೇಶಪೂರ್ವಕವಾಗಿ ನಮಗೆ ಹಾಜರಾತಿ ಕೊರತೆ ತೋರಿಸಿದ್ದೀರಿ, ನಮ್ಮ ಭವಿಷ್ಯಕ್ಕೆ ಕಲ್ಲು ಹಾಕುತ್ತಿದ್ದೀರಿ ಇತ್ಯಾದಿ ರೋಷಾವೇಷದ ಮಾತು; ಕೊನೆಗೆ ಧಿಕ್ಕಾರಾ! ಧಿಕ್ಕಾರ!! ಕಾಲೇಜಿಗೆ ಮಗನನ್ನೋ ಮಗಳನ್ನೋ ಸೇರಿಸಿದ ಮೇಲೆ ಒಮ್ಮೆಯೂ ಕ್ಯಾಂಪಸ್‌ಗೆ ಬಂದು ತಮ್ಮ ಮಗ/ಮಗಳು ಹೇಗೆ ಓದುತ್ತಿದ್ದಾರೆ ಎಂದು ಕೇಳದ ಪೋಷಕರೂ ಇಷ್ಟು ಹೊತ್ತಿಗೆ ಕಾಲೇಜಿಗೆ ಓಡೋಡಿ ಬಂದು ಪ್ರತಿಭಟನೆಗೆ ಕೂರುವುದಿದೆ.

ಈ ವಿಧಾನವೂ ನಡೆಯದೇ ಹೋದರೆ ಕೊನೆಗೆ ಕೋರ್ಟ್ ಇದ್ದೇ ಇದೆ. ಪರೀಕ್ಷೆ ಬರೆಯಲು ಕಾಲೇಜು ಅವಕಾಶ ಕೊಡುತ್ತಿಲ್ಲ ಎಂದು ಪ್ರತೀವರ್ಷ ನ್ಯಾಯಾಲಯಕ್ಕೆ ಹೋಗುವವರು ಸಾಕಷ್ಟು ಮಂದಿ. ವಿದ್ಯಾರ್ಥಿಯ ಕಡೆಯಿಂದ ಪ್ರಾಮಾಣಿಕ ಕಾರಣಗಳಿದ್ದಾಗ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಕೆಲವೊಮ್ಮೆ ಕೋರ್ಟ್ ಕಾಲೇಜಿಗೆ ಆದೇಶಿಸುವುದೂ ಇದೆ. ಆದರೆ ಅತ್ತ ಕ್ಲಾಸಿಗೂ ಹೋಗದೆ ಇತ್ತ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಹಾಳು ಮಾಡುತ್ತಿದ್ದೀರಿ ಎಂದು ಛೀಮಾರಿ, ದಂಡ ಹಾಕಿಸಿಕೊಂಡು ಬರುವವರೇ ಹೆಚ್ಚು.

ಈ ತಗಾದೆಗಳ ತಂಟೆಯೇ ಬೇಡ ಎಂದು ಅನೇಕ ಕಾಲೇಜುಗಳು ಅಟೆಂಡೆನ್ಸ್ ಶಾರ್ಟೇಜ್ ಉಸಾಬರಿಗೇ ಹೋಗುವುದಿಲ್ಲ. ಹಳ್ಳಿ ಹುಡುಗರು ಕಾಲೇಜುಗಳ ಮುಖ ನೋಡುವುದೇ ಅಪರೂಪವಾಗಿರುವಾಗ ದಾಖಲಾದ ಬೆರಳೆಣಿಕೆಯ ಮಂದಿಗೆ ಹಾಜರಾತಿ ಕೊರತೆಯೆಂದು ಪರೀಕ್ಷೆ ನಿರಾಕರಿಸಿದರೆ ಮುಂದಿನ ವರ್ಷ ಕಾಲೇಜನ್ನೇ ಮುಚ್ಚುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಇನ್ನು ಕೆಲವು ಖಾಸಗಿ ಕಾಲೇಜುಗಳು ಅಟೆಂಡೆನ್ಸ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಆದಾಯ ಮಾಡಿಕೊಳ್ಳುವುದೂ ಇದೆ. ಒಂದು ಸಬ್ಜೆಕ್ಟ್‌ನಲ್ಲಿ ಹಾಜರಾತಿ ಕೊರತೆಗೆ ಇಷ್ಟು ಸಾವಿರ ದಂಡ ಎಂದು ನಿಗದಿಪಡಿಸುವ ಕಾಲೇಜುಗಳಿಗೆ ಹಾಜರಾತಿ ಕೊರತೆಯಿರುವ ವಿದ್ಯಾರ್ಥಿಗಳು ಹೆಚ್ಚಾದಷ್ಟೂ ಅನುಕೂಲವೇ! ಅಪ್ಪನ ಬಳಿ ದುಡ್ಡಿದೆ, ಶಾರ್ಟೇಜ್ ಇದ್ದರೆ ದುಡ್ಡು ತಂದು ಬಿಸಾಕಿದರಾಯಿತು ಎಂಬ ಭಂಡ ಹುಡುಗರೇ ಇಂತಹ ಕಾಲೇಜುಗಳ ಆಜೀವ ಚಂದಾದಾರರು.

ಇನ್ನೊಂದು ಮುಖ
ಹಾಜರಾತಿ ಕೊರತೆ ಎದುರಿಸುವ ಎಲ್ಲ ವಿದ್ಯಾರ್ಥಿಗಳೂ ಕ್ಲಾಸ್ ಬಂಕ್ ಮಾಡಿ ಉಡಾಫೆ ಮಾತನಾಡುವ ಉಂಡಾಡಿಗುಂಡರಲ್ಲ. ತಾವೇ ದುಡಿದು ಕುಟುಂಬವನ್ನು ಸಲಹಬೇಕಾದ ಕಡುಬಡತನದ ಹಿನ್ನೆಲೆಯ ಹುಡುಗರೂ ಇವರ ನಡುವೆ ಇದ್ದಾರೆ. ಒಂದು ಕಡೆ ಓದುವ ಆಸೆ, ಇನ್ನೊಂದು ಕಡೆ ದುಡಿಯುವ ಅನಿವಾರ್ಯತೆ. ಈ ಮಧ್ಯೆ ಸಿಕ್ಕಿಹಾಕಿಕೊಂಡು ಒದ್ದಾಡುವ ಮಕ್ಕಳೂ ಇಲ್ಲದಿಲ್ಲ. ಇನ್ನು ಕೆಲವರು ಅನಾರೋಗ್ಯ ಇತ್ಯಾದಿ ಗಂಭೀರ ಸಮಸ್ಯೆಗಳಿಂದ ಹಾಜರಾತಿ ಕೊರತೆ ಎದುರಿಸುವುದೂ ಇದೆ. ಇಂತಹವರನ್ನೆಲ್ಲ ಕಾಲೇಜುಗಳು ಮಾನವೀಯತೆಯ ನೆಲೆಯಿಂದ ನೋಡಬೇಕು ಎಂಬುದು ಒಪ್ಪಬೇಕಾದ ಮಾತು. ಆದರೆ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ನಿಜವಾಗಿಯೂ ಕಷ್ಟದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳು ಎಲ್ಲ ಸಮಸ್ಯೆಗಳನ್ನೂ ಸಂಭಾಳಿಸಿಕೊಂಡು ಶಿಸ್ತಾಗಿ ತರಗತಿಗಳಿಗೆ ಬಂದು ಉನ್ನತ ಶ್ರೇಣಿಯಲ್ಲಿ ಪಾಸಾಗುವುದನ್ನು ನಾನೇ ಕಣ್ಣಾರೆ ನೋಡುತ್ತಿದ್ದೇನೆ.

ನ್ಯಾಯಾಲಯ ಏನು ಹೇಳುತ್ತದೆ?
ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪದವಿಪೂರ್ವ ಹಂತದಲ್ಲಿ ಶೇ. ೭೫ರಷ್ಟು ಹಾಜರಾತಿ ಕಡ್ಡಾಯ. ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಜರಾತಿ ಇರಬೇಕೆಂದು ನಿಯಮ ರೂಪಿಸಿವೆ. ವೈದ್ಯಕೀಯ ಕಾರಣಗಳೇ ಮೊದಲಾದ ತೀರಾ ಅನಿವಾರ್ಯ ಸಂದರ್ಭಗಳಿದ್ದಾಗ ಅಭ್ಯರ್ಥಿಗೆ ಮಾನವೀಯ ದೃಷ್ಟಿಯಿಂದ ಶೇ. ೫ರಷ್ಟು ವಿನಾಯಿತಿ ನೀಡಲು ಕುಲಪತಿಗಳಿಗೆ ಮಾತ್ರ ಸ್ವವಿವೇಚನೆಯ ಅವಕಾಶವಿದೆ. ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದಕ್ಕೆ ಹಾಜರಾತಿಯಲ್ಲಿ ಕಟ್ಟುನಿಟ್ಟು ಪಾಲಿಸುವುದು ಮುಖ್ಯ ಎಂಬುದನ್ನು ಅನೇಕ ಉಚ್ಚ ನ್ಯಾಯಾಲಯಗಳು, ಭಾರತದ ಸರ್ವೋಚ್ಛ ನ್ಯಾಯಾಲಯವೂ ಮತ್ತೆಮತ್ತೆ ಹೇಳಿವೆ.

'ವಿದ್ಯಾರ್ಥಿಗಳು ತಾರುಣ್ಯ ಸಹಜ ವರ್ತನೆಗಳಿಂದಲೋ, ಅಸೌಖ್ಯದಿಂದಲೋ ತರಗತಿಗಳಿಗೆ ಗೈರುಹಾಜರಾಗುವ ಸಂದರ್ಭ ಇದೆ. ಆದರೆ ಅದಕ್ಕಾಗಿಯೇ ಅವರಿಗೆ ಶೇ. ೨೫ರಷ್ಟು ತರಗತಿಗಳಿಗೆ ಗೈರುಹಾಜರಾಗುವ ಸ್ವಾತಂತ್ರ್ಯ ಇದೆ. ಇನ್ನಷ್ಟು ವಿನಾಯಿತಿ ನೀಡಬೇಕೆಂಬುದು ನ್ಯಾಯ ಸಮ್ಮತ ಅಲ್ಲ. ಈ ಪ್ರವೃತ್ತಿಯಿಂದ ಶ್ರದ್ಧಾವಂತ ವಿದ್ಯಾರ್ಥಿಗಳ ನೈತಿಕತೆ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ತನ್ನ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಹೇಳಿದೆ.

ಬುಧವಾರ, ನವೆಂಬರ್ 15, 2017

ಎಸ್.ಡಿ.ಎಂ. ಶೈಕ್ಷಣಿಕ ಸಂಸ್ಕೃತಿ ಎಂಬ ಮಹಾಮಾದರಿ

(ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ನೇತೃತ್ವ ವಹಿಸಿ 50 ವರ್ಷಗಳಾದ ಹಿನ್ನೆಲೆಯಲ್ಲಿ  'ವಿಜಯವಾಣಿ' ನವೆಂಬರ್ 12, 2017ರಂದು ಹೊರತಂದ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

Education should be in future tense - ಎನ್ನುತ್ತಾನೆ ಆಲ್ವಿನ್ ಟೋಫ್ಲರ್. ಶಿಕ್ಷಣದ ದೃಷ್ಟಿ ಎಂದಿಗೂ ಭವಿಷ್ಯದ ಕಡೆಗಿರಬೇಕು; ವಿದ್ಯಾರ್ಥಿಯ ಮತ್ತು ಸಮಾಜದ ಭವಿತವ್ಯದ ಬಗ್ಗೆ ಚಿಂತಿಸದ ಶಿಕ್ಷಣ ಅರ್ಥಹೀನ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಈ ಅವಶ್ಯಕತೆಗೆ ಪೂರಕವಾಗಿದೆಯೇ ಎಂಬುದೇ ಎಲ್ಲರನ್ನೂ ಕಾಡುವ ಪ್ರಶ್ನೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಕಾಲೇಜುಗಳನ್ನು ತುಂಬುವ ಯಂತ್ರಗಳಾದರೆ, ಕಾಲೇಜುಗಳು ನಿರಾಶಾವಾದಿಗಳನ್ನೂ ನಿರುದ್ಯೋಗಿಗಳನ್ನೂ ತಯಾರಿಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಒಂದೆಡೆ ಆಲಸ್ಯವೇ ಮೈವೆತ್ತಂತೆ ಮಲಗಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಇನ್ನೊಂದೆಡೆ ದುಡ್ಡಿನ ದುರಾಸೆಯಲ್ಲಿ ಮುಳುಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು. ಈ ಎರಡು ಅತಿರೇಕಗಳ ನಡುವೆ ಸಿಲುಕಿ ಬಡವಾಗುತ್ತಿರುವ ನೈಜ ಶಿಕ್ಷಣದ ಶಿಶುವನ್ನು ಹುಡುಕಿ ಬದುಕಿಸುವುದೆಂತು? ಇದು ಹೀಗೆಯೇ ಮುಂದುವರಿದರೆ ಈ ವ್ಯವಸ್ಥೆ ಅಂತಿಮವಾಗಿ ಎಲ್ಲಿಗೆ ತಲುಪೀತು?  ಶಿಕ್ಷಣರಂಗದ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? ಎಂಬ ಕಳವಳದಲ್ಲಿ ಮನಸ್ಸು ಬರಡೆನಿಸಿದಾಗ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ಓಯಸಿಸ್ಸುಗಳಂತೆ ಕಾಣುತ್ತವೆ.

ಇವುಗಳನ್ನು ನೋಡಿದಾಗ ಶ್ರೀಕ್ಷೇತ್ರದ ಚತುರ್ದಾನ ಪರಂಪರೆಯಲ್ಲಿ ಅನ್ನದಾನ, ಔಷಧದಾನ, ವಸ್ತ್ರದಾನಗಳಿಗಿಂತಲೂ ವಿದ್ಯಾದಾನಕ್ಕೇ ಒಂದು ಹಿಡಿ ಹೆಚ್ಚು ಮಹತ್ವ ದೊರೆತಿದೆಯೇನೋ ಎಂದೆನಿಸಿದರೆ ಅತಿಶಯವೇನೂ ಇಲ್ಲ. ವಿದ್ಯೆಯೊಂದು ಲಭಿಸಿದರೆ ಉಳಿದ ಮೂರನ್ನೂ ವ್ಯಕ್ತಿ ತಾನಾಗಿಯೇ ಪಡೆದುಕೊಳ್ಳುತ್ತಾನೆ ಎಂಬುದೇ ಇದರ ಹಿಂದಿನ ಆಶಯ. ಶ್ರೀ ಕ್ಷೇತ್ರದಿಂದ ನಡೆಯುವ ಯಾವುದೇ ಶಿಕ್ಷಣ ಸಂಸ್ಥೆ ಹೊಕ್ಕು ನೋಡಿ, ಅಲ್ಲಿ ಆಡಂಬರವಿಲ್ಲ, ಅತಿರೇಕವಿಲ್ಲ. ಪ್ರತೀ ಹೆಜ್ಜೆಗೂ ಕಾಣಸಿಗುವುದು ಶಿಸ್ತು, ಸಂಯಮ, ಗಾಂಭೀರ್ಯತೆ ಮತ್ತು ವಿಧೇಯತೆ. ಎಸ್.ಡಿ.ಎಂ. ಎಂದು ಆರಂಭವಾಗುವ ಯಾವುದೇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಐದು ನಿಮಿಷ ಇದ್ದು ಬಿಡಿ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರುವ ನೂರಾರು ಆತಂಕಗಳು ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತವೆ. ಇಂತಹ ಶಾಲಾ ಕಾಲೇಜುಗಳಿರುವಾಗ ಶಿಕ್ಷಣಕ್ಷೇತ್ರದ ಭವಿಷ್ಯದ ಬಗ್ಗೆ ಭಯಪಡುವುದರಲ್ಲಿ ಅರ್ಥವೇ ಇಲ್ಲ ಎಂದು ಯಾರಿಗಾದರೂ ಅನ್ನಿಸಿಬಿಡುತ್ತದೆ.

ಸಮಗ್ರ ಶಿಕ್ಷಣ
ವ್ಯಕ್ತಿಯನ್ನು ಸ್ವಾವಲಂಬಿಯಾಗಿ ಮಾಡುವ ಹಾಗೂ ಶಾರೀರಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಜೀವನ ನಡೆಸುವ ಕಲೆಯನ್ನು ಸ್ಫುರಿಸುವಂತಹ ಶಿಕ್ಷಣವೇ ಸಮಗ್ರ ಶಿಕ್ಷಣ - ಇದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ನೇತಾರ ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸ್ಪಷ್ಟ ಪರಿಕಲ್ಪನೆ. ಇದೇ ಈ ಶಿಕ್ಷಣ ಸಂಸ್ಥೆಗಳ ಶ್ರೇಷ್ಠತೆಯ ಹಿಂದಿರುವ ಅಪೂರ್ವ ದರ್ಶನ ಕೂಡಾ. ಅದಕ್ಕೇ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಹತ್ತರೊಂದಿಗೆ ಹನ್ನೊಂದಾಗಿ ತೋರುವುದಿಲ್ಲ. ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಣುವ ದುಡ್ಡಿನ ದಂಧೆ, ವಿದ್ಯಾರ್ಥಿಗಳನ್ನು ಅಂಕಗಳಿಕೆಯ ಯಂತ್ರಗಳನ್ನಾಗಿಸುವ ಪೈಪೋಟಿ ಇಲ್ಲಿ ಕಾಣುವುದಿಲ್ಲ. ವಿದ್ಯಾರ್ಥಿಯ ನಾಳೆಯ ಬದುಕಿಗೆ ಪ್ರಯೋಜನವಾಗುವಂತಹ ಏನನ್ನಾದರೂ ಕೊಡಬೇಕು ಎಂಬ ಕಾಳಜಿಯೇ ಈ ಶಿಕ್ಷಣ ಸಂಸ್ಥೆಗಳ ಹೆಜ್ಜೆಹೆಜ್ಜೆಗೂ ಎದ್ದುಕಾಣುತ್ತದೆ.

ಶಿಕ್ಷಣವೆಂದರೆ ಓದುವುದು, ಬರೆಯುವುದು ಮತ್ತು ಗಣಿತ ಇವಿಷ್ಟೇ ಅಲ್ಲ ಅಥವಾ ಕೆಲವರು ಹೇಳುವಂತೆ ಅಧ್ಯಯನ, ಅಧ್ಯಾಪನ, ಜ್ಞಾನಪ್ರಸರಣ ಇಷ್ಟಕ್ಕೇ ಸೀಮಿತವಲ್ಲ. ಅದು ವ್ಯಕ್ತಿ ಮತ್ತು ಸಮಾಜದ ಬದುಕಿಗೆ ಬೇಕಾದ ಶಿಕ್ಷಣ ಎಂಬ ವೀರೇಂದ್ರ ಹೆಗ್ಗಡೆಯವರ ಆಶಯ ಒಂದೊಂದು ಶಿಕ್ಷಣ ಸಂಸ್ಥೆಯಲ್ಲೂ ಅತ್ಯಂತ ಸಮರ್ಥವಾಗಿ ಸಾಕಾರಗೊಂಡಿದೆ. ಯಾವ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲೂ ಕೇವಲ ಓದು, ಬರೆ, ಪರೀಕ್ಷೆ ಎದುರಿಸು, ಶೇ. ೯೫ ಅಂಕ ಗಳಿಸು ಎಂಬ ಯಾಂತ್ರಿಕ ಒತ್ತಡ ಕಾಣಸಿಗುವುದಿಲ್ಲ. ತರಗತಿ ಕೊಠಡಿಯ ಪಾಠ ಪ್ರವಚನಗಳಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಅಲ್ಲಿ ಸಮಾನ ಪ್ರಾಶಸ್ತ್ಯ.

ಯಾವ ಹೊತ್ತಿನಲ್ಲೇ ಹೋದರೂ ಶಾಲಾ-ಕಾಲೇಜಿನ ಯಾವುದಾದರೊಂದು ಮೂಲೆಯಲ್ಲಿ ಯಕ್ಷಗಾನವೋ, ಸಂಗೀತವೋ, ನಾಟಕವೋ, ಭಾಷಣವೋ, ನೃತ್ಯವೋ ಕೇಳಿಸೀತು, ಕಾಣಿಸೀತು. ಕೇವಲ ಪಾಠ-ಪರೀಕ್ಷೆಗಳಿಗಷ್ಟೇ ಸೀಮಿತವಾದ ವಿದ್ಯಾರ್ಥಿಯೊಬ್ಬನನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಿಂದ ಹುಡುಕಿ ತೆಗೆಯುವುದು ಬಹುಶಃ ಅಸಾಧ್ಯವಾದ ಕೆಲಸ. ಹಾಗೆಂದು ಅಲ್ಲಿ ಶಿಕ್ಷಣ ಪೂರೈಸಿ ಹೊರಗೆ ಬಂದ ವ್ಯಕ್ತಿ ಮುಂದೇನು ಮಾಡಬೇಕೆಂದು ಗೊಂದಲಕ್ಕೀಡಾಗುವ ಪ್ರಸಂಗಗಳೂ ಇಲ್ಲ. ಶಿಕ್ಷಣ ಮುಗಿಯುವ ವೇಳೆಗೆ ಆತನ ಗುರಿ-ದಾರಿಗಳೆರಡೂ ಸ್ಪಷ್ಟವಾಗಿಯೇ ಇರುತ್ತವೆ.

ಎಲ್ಲವೂ ಇದೆ
ವ್ಯಕ್ತಿಯ ಮತ್ತು ಸಮಾಜದ ಅವಶ್ಯಕತೆಗೆ ಅನುಗುಣವಾದ ಶಿಕ್ಷಣ ನೀಡುವ ಡಾ. ಹೆಗ್ಗಡೆಯವರ ಆಶಯ ಅವರು ನಡೆಸಿಕೊಂಡು ಹೋಗುತ್ತಿರುವ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಎದ್ದುಕಾಣುತ್ತದೆ. ಒಂದೊಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸುವಾಗಲೂ ಅದರ  ಅವಶ್ಯಕತೆ, ಅನಿವಾರ್ಯತೆ ಮತ್ತು ಪ್ರಸ್ತುತತೆಗಳ ಬಗ್ಗೆ ಅವರ ಕಲ್ಪನೆ ನಿಚ್ಚಳ. ಅದಕ್ಕೇ ಇಂದು ಎಸ್.ಡಿ.ಎಂ. ಹೆಸರಿನಲ್ಲಿ ವೈವಿಧ್ಯಮಯ ಆದರೆ ಅಷ್ಟೇ ವಿಶಿಷ್ಟ ಶಿಕ್ಷಣ ಸಂಸ್ಥೆಗಳು ನಮಗಿದಿರಾಗುತ್ತವೆ.

ಶಿಶುವಿಹಾರದಿಂದ ತೊಡಗಿ ಪಿಎಚ್.ಡಿ. ಅಧ್ಯಯನದವರೆಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯದ ಕೋರ್ಸ್‌ಗಳಿಲ್ಲ. ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು, ಆಡಳಿತ ನಿರ್ವಹಣೆ, ಆಯುರ್ವೇದ, ಪ್ರಕೃತಿಚಿಕಿತ್ಸೆ, ಮಾನವಿಕ ಶಾಸ್ತ್ರಗಳು, ವಿಜ್ಞಾನ- ಆಧುನಿಕ ಉದ್ಯೋಗ ಜಗತ್ತಿಗೆ ಏನು ಬೇಕೋ ಅವೆಲ್ಲವೂ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿವೆ. ಪ್ರತೀ ಸಂಸ್ಥೆಯಲ್ಲೂ ನೈತಿಕ ಶಿಕ್ಷಣ, ಸಾಂಸ್ಕೃತಿಕ ಅರಿವಿನ ರಸಪೋಷಣೆ ಒಂದು ಅನಿವಾರ್ಯ ಅಂಗವಾಗಿರುವಂತೆ ಇವುಗಳನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡು ನಡೆಯುತ್ತಿರುವ ಪ್ರಯತ್ನಗಳೂ ಸಾಕಷ್ಟಿವೆ.

ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಮತ್ತು ಟ್ರಸ್ಟ್ ಆಶ್ರಯದಲ್ಲಿ ಇಂದು ಏನಿಲ್ಲವೆಂದರೂ ೪೦-೫೦ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪುದುವೆಟ್ಟಿನಂತಹ ಕುಗ್ರಾಮದ ಪ್ರಾಥಮಿಕ ಶಾಲೆಯಿಂದ ತೊಡಗಿ ಧಾರವಾಡದ ಭವ್ಯ ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳವರೆಗೆ ವೈವಿಧ್ಯಮಯ ಶಿಕ್ಷಣ ಸಂಸ್ಥೆಗಳನ್ನು ಸಮಾನ ಕಾಳಜಿ ಮತ್ತು ಆಸಕ್ತಿಗಳಿಂದ ಶ್ರೀ ಕ್ಷೇತ್ರ ನಡೆಸಿಕೊಂಡು ಹೋಗುತ್ತಿದೆ.

ನಾಡಿನಾದ್ಯಂತ ಜನಮನ್ನಣೆ ಪಡೆದಿರುವ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜು, ಧಾರವಾಡದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದಂತವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಉಡುಪಿ ಮತ್ತು ಹಾಸನಗಳಲ್ಲಿರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರಿನ ಕಾನೂನು ಮಹಾವಿದ್ಯಾಲಯ, ವ್ಯವಹಾರಾಡಳಿತ ಕಾಲೇಜು, ಏಷ್ಯಾದಲ್ಲೇ ಪ್ರಥಮವೆನಿಸಿರುವ ಉಜಿರೆಯ ನ್ಯಾಚುರೋಪತಿ ಮತ್ತು ಯೋಗವಿಜ್ಞಾನ ಕಾಲೇಜು, ಮೈಸೂರಿನ ಮಹಿಳಾ ಕಾಲೇಜು... ಕರ್ನಾಟಕದ ಉದ್ದಗಲದಲ್ಲಿ ಹರಡಿಕೊಂಡಿರುವ ಬಗೆಬಗೆಯ ಶಿಕ್ಷಣ ಸಂಸ್ಥೆಗಳು ಡಾ. ಹೆಗ್ಗಡೆಯವರ ದೂರದರ್ಶಿತ್ವ ಮತ್ತು ನಾಯಕತ್ವಕ್ಕೆ ಹಿಡಿದಿರುವ ಕೈಗನ್ನಡಿಗಳೇ ಸರಿ. ವಿದ್ಯಾಭ್ಯಾಸದ ಗುಣಮಟ್ಟದಲ್ಲಿ ಪ್ರತಿಯೊಂದೂ ’ಎ’ ದರ್ಜೆಯವಾದರೆ, ಸಂದರ್ಶಕರ ದೃಷ್ಟಿಗೆ ಒಂದೊಂದು ಕ್ಯಾಂಪಸ್ ಕೂಡ ಪ್ರವಾಸಿ ತಾಣಗಳೇ.

ಗ್ರಾಮ ಗಮನ 
ಆಧುನಿಕ ಅವಶ್ಯಕತೆಗಳಿಗನುಗುಣವಾಗಿ ವೃತ್ತಿಪರ ಕಾಲೇಜುಗಳನ್ನು ತೆರೆದರೂ ಗ್ರಾಮೀಣ ಪ್ರದೇಶಗಳ ಶಿಕ್ಷಣ ಸುಧಾರಣೆಯೇ ಶ್ರೀ ಕ್ಷೇತ್ರದ ಪ್ರಥಮ ಆದ್ಯತೆ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮಸ್ಥಳದ ಗಾಥೆ ಆರಂಭವಾದದ್ದು 1903ರಲ್ಲಿ ಆಗಿನ ಧರ್ಮಾಧಿಕಾರಿ ಕೀರ್ತಿಶೇಷ ಚಂದಯ್ಯ ಹೆಗ್ಗಡೆಯವರು ಪ್ರಾಥಮಿಕ ಶಾಲೆಯೊಂದನ್ನು ತೆರೆಯುವುದರೊಂದಿಗೆ. ನಂತರ ಬಂದ ಧರ್ಮಾಧಿಕಾರಿಗಳಾದ ಡಿ. ಮಂಜಯ್ಯ ಹೆಗ್ಗಡೆ ಹಾಗೂ ಡಿ. ರತ್ನವರ್ಮ ಹೆಗ್ಗಡೆಯವರು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಜೊತೆಗೆ ಪಾರಂಪರಿಕ ಮೌಲ್ಯಗಳನ್ನು ಹಾಗೂ ಆಧುನಿಕತೆಯನ್ನು ಬೆಸೆಯುವ ಅವಶ್ಯಕತೆಯನ್ನು ಮನಗಂಡರೆ, ಕಳೆದ ಐವತ್ತು ವರ್ಷಗಳಿಂದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಸಂಸ್ಥೆಗಳ ಯಶಸ್ಸನ್ನು ಉತ್ತುಂಗಕ್ಕೆ ತಲುಪಿಸಿದ್ದಾರೆ.

ಡಾ. ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಶಾಲೆಗಳ ಬಗ್ಗೆ ಗಮನ ನೀಡದೇ ಇರುತ್ತಿದ್ದರೆ, ಉಜಿರೆಯಲ್ಲಿ ರತ್ನಮಾನಸ-ಸಿದ್ಧವನದಂತಹ ಅನರ್ಘ್ಯ ರತ್ನಗಳು ಇಲ್ಲದೇ ಹೋಗಿರುತ್ತಿದ್ದರೆ ದಕ್ಷಿಣ ಕನ್ನಡದ ಕುಗ್ರಾಮಗಳಲ್ಲಿ ಬೆಳೆದ ನನ್ನಂತಹ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದ ಬೆಳಕನ್ನೇ ಕಾಣುತ್ತಿರಲಿಲ್ಲ ಎಂಬುದು ನೂರು ಪ್ರತಿಶತ ಸತ್ಯ. ಧರ್ಮಸ್ಥಳ, ಉಜಿರೆ, ಬೆಳಾಲು, ಪೆರಿಂಜೆ, ಪುದುವೆಟ್ಟು, ಬೈಂದೂರು-  ಇಂತಹ ಗ್ರಾಮೀಣ ಪ್ರದೇಶಗಳಲ್ಲೆಲ್ಲ ಎಸ್.ಡಿ.ಎಂ. ಶಾಲೆಗಳು ಇರುವುದರಿಂದಲೇ ಉಳಿದ ಮೂಲಕಸೌಕರ್ಯಗಳ ಕೊರತೆಯಿದ್ದರೂ ಇವೆಲ್ಲ ಶೈಕ್ಷಣಿಕವಾಗಿ ಶ್ರೀಮಂತವಾಗಿ ಬೆಳೆದಿವೆ. ಹಳ್ಳಿಗಾಡಿನ ಮೂಲೆಯಲ್ಲಿರುವ ಎಸ್.ಡಿ.ಎಂ. ಶಾಲೆಗಳೂ ಪೂರ್ಣಪ್ರಮಾಣದ ಸಿಬ್ಬಂದಿ, ತರಬೇತಾದ ಶಿಕ್ಷಕರು, ಸುಸಜ್ಜಿತ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯ, ವಿಶಾಲ ಆಟದ ಮೈದಾನ, ಸುಂದರ ಉದ್ಯಾನವನಗಳಿಂದ ಕಂಗೊಳಿಸುತ್ತವೆ.

ನಗರ ಪ್ರದೇಶದಲ್ಲಿರುವ ಸುಸಜ್ಜಿತ ಶಾಲೆಗಳಿಂದ ತಮ್ಮ ಶಾಲೆಗಳೂ ಏನೇನೂ ಕಡಿಮೆಯಿಲ್ಲ ಎಂಬ ವಿಶ್ವಾಸ ಹಳ್ಳಿಗಳ ಬಡಮಕ್ಕಳಲ್ಲಿ ಮೂಡುವಲ್ಲಿ ಧರ್ಮಸ್ಥಳದ ಪಾತ್ರ ತುಂಬ ದೊಡ್ಡದು. ಕೇವಲ ತಾವು ಸ್ಥಾಪಿಸಿದ ಶಾಲೆಗಳಷ್ಟೇ ಡಾ. ಹೆಗ್ಗಡೆಯವರ ಕಾಳಜಿಯಲ್ಲ ಎಂಬುದು ಇಲ್ಲಿ ಗಮನಾರ್ಹ ಅಂಶ. ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಕುಗ್ರಾಮಗಳ ಯಾವುದೇ ಶಾಲೆಯಿರಲಿ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನೊದಗಿಸುವಲ್ಲಿ ಅವರು ಯಾವಾಗಲೂ ಒಂದು ಹೆಜ್ಜೆ ಮುಂದೆ.

ಡಾ. ಶಿವರಾಮ ಕಾರಂತರು 'ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮೋಪಚಾರವಾಗಬೇಕು’ ಎನ್ನುತ್ತಿದ್ದ ಕಾಲದಲ್ಲಿಯೇ ಧೂಳು ತಿನ್ನುತ್ತಿದ್ದ ಸರ್ಕಾರಿ ಕನ್ನಡ ಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು, ಅಧ್ಯಾಪಕರುಗಳನ್ನು ಶ್ರೀ ಕ್ಷೇತ್ರದ ಖರ್ಚಿನಲ್ಲಿಯೇ ಕಳುಹಿಸಿಕೊಟ್ಟ ಔದಾರ್ಯ ಹೆಗ್ಗಡೆಯವರದ್ದು. ಜ್ಞಾನದೀಪ, ಜ್ಞಾನವಿಕಾಸ ಮುಂತಾದ ಯೋಜನೆಗಳನ್ನು ಆರಂಭಿಸಿ ಜಿಲ್ಲೆಯ ಯಾವ ಮೂಲೆಯಲ್ಲಿ ಅಧ್ಯಾಪಕರ ಕೊರತೆಯಿದ್ದರೂ ಅಲ್ಲಿಗೆ ಅಧ್ಯಾಪಕರನ್ನು ನೇಮಿಸಿ ಸಂಬಳ ನೀಡಿ ಹಳ್ಳಿಯ ಶಾಲೆಗಳು ಬಡವಾಗದಂತೆ ನೋಡಿಕೊಂಡ ಅವರ ದೊಡ್ಡತನಕ್ಕೆ ಸಾಟಿ ಇಲ್ಲ. ಗ್ರಾಮೀಣಾಭಿವೃದ್ಧಿಯೇ ಮೂಲಮಂತ್ರವಾಗಿರುವ ಧರ್ಮಸ್ಥಳದ ಯೋಜನೆಗಳ ಹಿಂದೆ ಡಾ. ಹೆಗ್ಗಡೆಯವರ ಶೈಕ್ಷಣಿಕ ಸುಧಾರಣೆಗಳ ಪಾತ್ರ ಬಲುದೊಡ್ಡದು.

ಜೀವನ ಶಿಕ್ಷಣ
ಧರ್ಮಸ್ಥಳದ ಶೈಕ್ಷಣಿಕ ಸಾಧನೆಗಳಿಗೆಲ್ಲ ಕಿರೀಟಪ್ರಾಯವಾಗಿರುವುದು ಅದು ಮುನ್ನಡೆಸಿಕೊಂಡು ಬಂದಿರುವ ಜೀವನ ಶಿಕ್ಷಣದ ಪರಿಕಲ್ಪನೆ. ಉಜಿರೆಯಲ್ಲಿರುವ ಶ್ರೀ ಸಿದ್ಧವನ ಗುರುಕುಲ ಹಾಗೂ ರತ್ನಮಾನಸ ವಸತಿ ನಿಲಯಗಳೇ ಈ ಕಿರೀಟದ ಎರಡು ವಿಶಿಷ್ಟ ಮಣಿಗಳು. ರವೀಂದ್ರನಾಥ ಠಾಕೂರರ ’ಶಾಂತಿನಿಕೇತನ’ದ ಪರಿಕಲ್ಪನೆಯಿಂದ ಪ್ರೇರಣೆಗೊಂಡು 1940ರಲ್ಲಿ ಅಂದಿನ ಧರ್ಮಾಧಿಕಾರಿ ಡಿ. ಮಂಜಯ್ಯ ಹೆಗ್ಗಡೆಯವರು ಶ್ರೀ ಸಿದ್ಧವನ ಗುರುಕುಲವನ್ನು ಸ್ಥಾಪಿಸಿದರೆ, ಮಹಾತ್ಮ ಗಾಂಧೀಜಿಯವರ ಬುನಾದಿ ಶಿಕ್ಷಣದ ಚಿಂತನೆಯಿಂದ ಸ್ಫೂರ್ತಿ ಪಡೆದ ಡಾ. ವೀರೇಂದ್ರ ಹೆಗ್ಗಡೆಯವರು 1973ರಲ್ಲಿ ರತ್ನಮಾನಸವನ್ನು ಸ್ಥಾಪಿಸಿದರು.

ಇವು ಕೇವಲ ವಸತಿ ನಿಲಯಗಳಲ್ಲ, ವಿದ್ಯಾರ್ಥಿಗಳ ಸರ್ವತೋಮುಖ ಅಭ್ಯುದಯದ ಹೆದ್ದಾರಿಗಳು. ವಿವಿಧ ಜಾತಿ, ಮತ, ಸಮುದಾಯ, ಸಾಮಾಜಿಕ ಹಿನ್ನೆಲೆಗಳಿಗೆ ಸೇರಿದ ಮಕ್ಕಳು ಇಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ಕೃಷಿ-ಹೈನುಗಾರಿಕೆ-ವ್ಯಕ್ತಿತ್ವ ವಿಕಸನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಸಹಬಾಳ್ವೆ ನಡೆಸುವ ಪರಿ ಶಿಕ್ಷಣ ಜಗತ್ತಿಗೇ ಮಾದರಿ. ನಿಜವಾದ ಶಿಕ್ಷಣ ಓರ್ವನನ್ನು ಅವನ ಕಾಲಮೇಲೆ ನಿಲ್ಲಲು ಸಮರ್ಥನನ್ನಾಗಿಸಬೇಕು ಎನ್ನುವ ವೀರೇಂದ್ರ ಹೆಗ್ಗಡೆಯವರು ತಮ್ಮ ಕಾಣ್ಕೆಯನ್ನು ಈ ಸಂಸ್ಥೆಗಳ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ.

ಶುಚಿ ಮನ, ರುಚಿ ಭೋಜನ, ಆದರ್ಶ ಶಿಕ್ಷಣ, ಸಾಹಿತ್ಯ ಚಿಂತನ, ಸಾಂಸ್ಕೃತಿಕ ಲೋಕದ ಅನಾವರಣ, ಸಂಸ್ಕೃತ ಪಠಣ, ಸರಳ ಜೀವನ, ಹಿರಿಯರು ತೋರಿದ ದಾರಿಯ ಮನನ, ಸಮಾನತೆಯ ಚಿತ್ರಣ, ನೋವು-ನಲಿವು ಭಾವನೆಗಳ ಸಮ್ಮಿಶ್ರಣ, ಪರಸ್ಪರ ಸಹಕಾರ ಸಮ್ಮಿಲನ, ಸಹಿಷ್ಣುತೆಯ ಗುಣ, ಒಗ್ಗಟ್ಟಿನ ತಾಣ - ಇದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರು ಸಿದ್ಧವನ-ರತ್ನಮಾನಸಗಳ ಸಾರಸರ್ವಸ್ವವನ್ನು ಚಿತ್ರಿಸುವ ರೀತಿ.

ಇಂತಹ ವಾತಾವರಣದಲ್ಲಿ ಬೆಳೆದ ನೂರಾರು ವಿದ್ಯಾರ್ಥಿಗಳು ಇಂದು ಪ್ರಪಂಚದ ನಾನಾಕಡೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಯಶಸ್ಸು ಪಡೆದಿದ್ದಾರೆ. ಆದರೆ ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ಏಕೆಂದರೆ ಅವರು ಪಡೆದಿರುವುದು ಬುನಾದಿ ಶಿಕ್ಷಣ. ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಿಕೊಂಡು ಹೋಗಬಲ್ಲ ಆತ್ಮವಿಶ್ವಾಸವನ್ನು ದೃಢತೆಯನ್ನೂ ಘನತೆಯನ್ನೂ ಅವರಿಗೆ ಗುರುಕುಲ ಪದ್ಧತಿ ಕಲಿಸಿಕೊಟ್ಟಿದೆ. ಪಾಯ ಭದ್ರವಾಗಿರುವುದರಿಂದಲೇ ಅವರ ಬದುಕಿನ ಸೌಧ ಭವ್ಯವಾಗಿದೆ.

ಯೋಗ ಮತ್ತು ನೈತಿಕ ಶಿಕ್ಷಣ ಎಸ್.ಡಿ.ಎಂ. ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗ. ಡಾ. ಹೆಗ್ಗಡೆಯವರು ಸ್ಥಾಪಿಸಿದ ಶಾಂತಿವನ ಟ್ರಸ್ಟ್ ತನ್ನ 'ಯೋಗ ಮತ್ತು ನೈತಿಕ ಶಿಕ್ಷಣ ಅನುಷ್ಠಾನ ಯೋಜನೆ’ಯ ಮೂಲಕ ಶಿಕ್ಷಣದ ಮೌಲ್ಯವರ್ಧನೆಗೆ ನಿರಂತರ ಶ್ರಮಿಸುತ್ತಿದೆ. ಗಾಂಧೀಜಿ, ಸುಭಾಶ್ಚಂದ್ರ ಬೋಸ್, ವಿವೇಕಾನಂದ ಮೊದಲಾದ ಮಹಾತ್ಮರ ಜೀವನ ಸಂದೇಶಗಳನ್ನು ಸಾರುವ, ವ್ಯಕ್ತಿತ್ವ ವಿಕಸನದ ಮಹತ್ವ ಹೇಳುವ ಪುಸ್ತಕಗಳನ್ನು ಲಕ್ಷಾನುಗಟ್ಟಲೆ ಮುದ್ರಿಸಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿ ಅವುಗಳ ಬಗ್ಗೆ ಭಾಷಣ-ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವ ಯೋಜನೆಯ ದೂರದರ್ಶಿತ್ವ ಪ್ರಶಂಸನೀಯ.

ವಿದ್ಯಾರ್ಥಿಗಳ ಕೌಶಲ ಮತ್ತು ಸೃಜನಶೀಲತೆಯು ವೃತ್ತಿ ಆಧಾರಿತವಾಗಿರಬೇಕು ಹಾಗೂ ವಿದ್ಯಾರ್ಥಿಗಳು ನಿಸ್ವಾರ್ಥ ಗುಣಗಳಿಂದ ಸಮಾಜದ ಅಭ್ಯುದಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆಯಿಂದ ವಿಭಿನ್ನ ವಿಷಯಗಳನ್ನು ಆಧರಿಸಿದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದೆವು. ಜಗತ್ತಿನ ವೇಗದೊಂದಿಗೆ ಮುನ್ನಡೆಯಲು ಬೇಕಾದ ಎಲ್ಲ ರೀತಿಯ ಬೌದ್ಧಿಕ ಮತ್ತು ಭೌತಿಕ ಪರಿಸರವನ್ನು ರೂಪಿಸಿದೆವು. ಇದರ ಸದುಪಯೋಗವನ್ನು ಪಡೆದುಕೊಂಡ ವಿದ್ಯಾರ್ಥಿ ಸಮೂಹ ನಾಡಿನಾದ್ಯಂತ ಇಂದು ಪಸರಿಸಿ 'ಎಸ್‌ಡಿಎಂ ಸಂಸ್ಕೃತಿ’ ಎಂಬ ಮಾದರಿಯೊಂದನ್ನು ಹುಟ್ಟು ಹಾಕಿದ್ದಾರೆ ಎಂದು ತಮ್ಮ ಲೇಖನವೊಂದರಲ್ಲಿ ಬರೆಯುತ್ತಾರೆ ಡಾ. ಹೆಗ್ಗಡೆ.

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ
ಎಂಬ ಡಿವಿಜಿಯರ ಕನಸಿಗೆ ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಹೇಳುವ 'ಎಸ್‌ಡಿಎಂ ಸಂಸ್ಕತಿ’ ತುಂಬ ಅನುರೂಪವಾಗಿದೆ. ಬಹುಶಃ ವರ್ತಮಾನದ ಶಿಕ್ಷಣ ಪದ್ಧತಿ ಎದುರಿಸುತ್ತಿರುವ ಅಷ್ಟೂ ಕಾಯಿಲೆಗಳಿಗೆ ಎಸ್‌ಡಿಎಂ ಸಂಸ್ಕೃತಿಯಲ್ಲಿ ಅತ್ಯಂತ ಸೂಕ್ತ ಚಿಕಿತ್ಸೆಗಳೂ ಔಷಧಿಗಳೂ ಇವೆ.

ಭಾನುವಾರ, ಆಗಸ್ಟ್ 13, 2017

ಭುವನೇಶ್ವರಿ ಹೆಗಡೆ: ಹೊಸ ಬರಹಗಾರರ ಪ್ರೇರಕ ಶಕ್ತಿ

'ಬನಸಿರಿ' - ಶ್ರೀಮತಿ ಭುವನೇಶ್ವರಿ ಹೆಗಡೆ ಅಭಿನಂದನ ಗ್ರಂಥದಲ್ಲಿ ಪ್ರಕಟವಾಗಿರುವ ಲೇಖನ (2017)

ಶ್ರೀಮತಿ ಭುವನೇಶ್ವರಿ ಹೆಗಡೆ
ಅಭಿನಂದನ ಗ್ರಂಥ
ತರಂಗ, ಸುಧಾ ಪತ್ರಿಕೆಗಳೆಲ್ಲ ವಾರವಾರವೂ ಅಜ್ಜನ ಮನೆಗೆ ಬರುತ್ತಿದ್ದುದರಿಂದ ಅಲ್ಲೇ ಓದಿ ಬೆಳೆದ ನನಗೆ ಹೈಸ್ಕೂಲು
ದಿನಗಳಿಂದಲೇ ಭುವನೇಶ್ವರಿ ಹೆಗಡೆ ಎಂಬ ಹೆಸರು ಚಿರಪರಿಚಿತವಾಗಿತ್ತು. ಓದಿದರೆ ನಗು ಗ್ಯಾರಂಟಿ ಎಂದು ಗೊತ್ತಿದ್ದರಿಂದ ಆ ಹೆಸರು ಕಂಡ ಕೂಡಲೇ ಇಡೀ ಲೇಖನವನ್ನು ಒಂದೇ ಗುಕ್ಕಿಗೆ ಓದಿ ಮುಗಿಸುತ್ತಿದ್ದೆ. ಸಣ್ಣಮಾವ ಅಂತೂ ಅವರ ಲೇಖನಗಳನ್ನು ಓದಿದರೆ ಆಯ್ದ ಭಾಗಗಳನ್ನು ಅಲ್ಲಲ್ಲೇ ಜೋರಾಗಿ ವಾಚಿಸಿ ಮನೆಮಂದಿಗೆಲ್ಲ ನಗುವಿನ ವಿತರಣೆ ಮಾಡುತ್ತಿದ್ದುದು ನನಗಿನ್ನೂ ಚೆನ್ನಾಗಿಯೇ ನೆನಪಿದೆ.

ಪಿಯುಸಿ ಕನ್ನಡ ಪಠ್ಯಪುಸ್ತಕ ಕೈಗೆ ಬಂದ ದಿನವಂತೂ ಹೊಸದೊಂದು ಅಚ್ಚರಿ ಕಾದಿತ್ತು. ನಮಗೆಲ್ಲ ಮೋಸ್ಟ್ ವಾಂಟೆಡ್ ಆಗಿದ್ದ ಭುವನೇಶ್ವರಿ ಹೆಗಡೆ ಸೀದಾ ಪಠ್ಯಪುಸ್ತಕಕ್ಕೇ ಬಂದುಬಿಟ್ಟಿದ್ದರು. ಅವರ ‘ಮೂಢನಂಬಿಕೆಗಳ ಬೀಡಿನಲ್ಲಿ’ ಲೇಖನ ಪಠ್ಯವಾಗಿತ್ತು. ‘ಇವರು ನನಗೆ ಬಹಳ ಸಮಯದಿಂದ ಗೊತ್ತು’ ಎಂದು ಸಹಪಾಠಿಗಳ ಬಳಿ ಹೇಳಿಕೊಂಡು ಸಂಭ್ರಮಪಟ್ಟದ್ದಿದೆ. ಅದೊಂದು ಪಾಠವನ್ನಂತೂ ಶ್ರದ್ಧಾಭಕ್ತಿಗಳಿಂದ ಮತ್ತೆಮತ್ತೆ ಓದಿ ಖುಷಿಪಟ್ಟದ್ದಿದೆ. ಬೆಣ್ಣೆ ಮಜ್ಜಿಗೆಯಲ್ಲಿ ಪೂರ್ತಿ ಮುಳುಗಿದ ದಿನ ಜಗತ್ಪ್ರಳಯ ಎಂಬ ಕಥೆ ಕೇಳಿದ್ದ ಲೇಖಕಿ ತನ್ನ ತಮ್ಮನೊಂದಿಗೆ ಸೇರಿಕೊಂಡು ಮನೆಯಲ್ಲಿದ್ದ ಬೆಣ್ಣೆಮುದ್ದೆಯನ್ನು ಮುಳುಗಿಸಲು ಹವಣಿಸಿದ ಪ್ರಸಂಗವನ್ನಂತೂ ಎಂದೂ ಮರೆಯಲಿಕ್ಕಾಗದು.

ಇಂತಿಪ್ಪ ಭುವನೇಶ್ವರಿ ಹೆಗಡೆಯವರೇ ಸಾಕ್ಷಾತ್ ಕಣ್ಣೆದುರು ಪ್ರತ್ಯಕ್ಷವಾಗಿಬಿಟ್ಟರೆ ಏನು ಗತಿ? ಆ ದಿನವೂ ಬಂತು. ಬಿ.ಎ. ಮೊದಲ ವರ್ಷದಲ್ಲಿದ್ದಾಗ ಮಂಗಳೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ಎನ್.ಎಸ್.ಎಸ್.ನ ರಾಷ್ಟ್ರೀಯ ಭಾವೈಕ್ಯತಾ ಶಿಬಿರದಲ್ಲಿ ನಾನು ಭಾಗವಹಿಸಿದ್ದೆ. ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮಕ್ಕೆ ಭುವನೇಶ್ವರಿ ಹೆಗಡೆ ಬರುತ್ತಿದ್ದಾರೆ ಎಂದು ಸಂಘಟಕರು ಹೇಳಿದಾಗ ತುಂಬ ಸಂತೋಷವಾಗಿತ್ತು. ನನ್ನ ನಿರೀಕ್ಷೆ ಸುಳ್ಳಾಗಲಿಲ್ಲ. ಮೇಡಂ ಅಂದು ತುಂಬ ರಸವತ್ತಾಗಿ ಮಾತಾಡಿ ಸಾಕಷ್ಟು ಚಪ್ಪಾಳೆ ಗಿಟ್ಟಿಸಿಕೊಂಡರು. ಓಹೋ ಇವರು ಬರೆಯುವಷ್ಟೇ ಚೆನ್ನಾಗಿ ಮಾತಾಡಬಲ್ಲರು ಕೂಡಾ ಎಂದು ಗೊತ್ತಾಗಿ ಅವರ ಬಗೆಗಿನ ಅಭಿಮಾನ ಹೆಚ್ಚಾಯಿತು.

ಕ್ಯಾಂಪಿನ ಭಾಗವಾಗಿ ನಮ್ಮದೊಂದು ದೈನಿಕ ಭಿತ್ತಿಪತ್ರಿಕೆಯಿತ್ತು. ಅದನ್ನು ಸಂಪಾದಿಸುವ ಹೊಣೆ ನನ್ನದೇ ಆಗಿದ್ದರಿಂದ ಪ್ರತಿದಿನ ಬರುವ ಅತಿಥಿಗಳ ಸಂದರ್ಶನ ಮಾಡುತ್ತಿದ್ದೆ. ಹೀಗಾಗಿ ಭುವನೇಶ್ವರಿ ಹೆಗಡೆಯವರನ್ನು ಸಂದರ್ಶಿಸುವ ಅವಕಾಶವೂ ಸಹಜವಾಗಿಯೇ ಒದಗಿಬಂತು. ಅವರಿಗೆ ಅಂದು ಏನೆಲ್ಲ ಪ್ರಶ್ನೆ ಕೇಳಿದ್ದೆನೋ ನೆನಪಿಲ್ಲ, ಆದರೆ ಸಂದರ್ಶನದ ಕೊನೆಗೆ ಅವರು ನನ್ನ ಬೆನ್ನು ಚಪ್ಪರಿಸಿ, ‘ಈ ಡೇಟು ಬರೆದಿಟ್ಟುಕೋ. ಒಂದು ದಿನ ನೀನು ಖಂಡಿತ ದೊಡ್ಡದೊಂದು ಪೊಸಿಶನ್‍ಗೆ ಹೋಗುತ್ತೀಯಾ’ ಎಂದು ಹೇಳಿದ್ದು ಮಾತ್ರ ನೂರಕ್ಕೆ ನೂರು ನೆನಪಿದೆ. ಕಿರಿಯರನ್ನು ಈ ರೀತಿ ಪ್ರೋತ್ಸಾಹಿಸುವ ಗುಣ ಎಲ್ಲರಿಗೂ ಬರುವುದಿಲ್ಲ. ಮೇಡಂ, ನಿಮ್ಮ ನಿಷ್ಕಲ್ಮಶ ಹೃದಯದ ಮಾತು ನಿಜವಾಗಲಿ. ಆದರೆ ಆ ದಿನ ಮಾತ್ರ ನಾನು ನಿಮ್ಮನ್ನು ಖ್ಯಾತ ಜ್ಯೋತಿಷಿ ಎಂದು ಕರೆಯುವುದು ಶತಃಸಿದ್ಧ.

ಆರೇಳು ವರ್ಷಗಳ ನಂತರ ನನ್ನ ಮತ್ತು ಸಂಗಾತಿ ಆರತಿಯ ಕವನ ಸಂಕಲನಗಳನ್ನು ನಮ್ಮ ಮದುವೆಯ ದಿನವೇ ಬಿಡುಗಡೆ ಮಾಡುವ ಅವಕಾಶ ಬಂದಾಗ ನನಗೆ ಮತ್ತೆ ನೆನಪಾದದ್ದು ಶ್ರೀಮತಿ ಹೆಗಡೆಯವರೇ. ‘ಮದುವೆಗೆ ಬಂದರೆ ಸಾಲದು, ಕವನ ಸಂಕಲನಗಳನ್ನೂ ಬಿಡುಗಡೆ ಮಾಡತಕ್ಕದ್ದು’ ಎಂಬ ನಮ್ಮ ಅಕ್ಕರೆಯ ಆದೇಶವನ್ನು ಅಷ್ಟೇ ಪ್ರೀತಿಯಿಂದ ಮನ್ನಿಸಿದವರು ಅವರು. ಮನಸ್ಸಿಗೆ ಹತ್ತಿರವಾದವಳನ್ನು ಮದುವೆಯಾದದ್ದು, ಇಬ್ಬರ ಕವನ ಸಂಕಲನಗಳೂ ಮದುವೆಯ ದಿನವೇ ಅನಾವರಣಗೊಂಡದ್ದು, ಅವನ್ನು ಹೆಗಡೆಯವರೇ ಬಿಡುಗಡೆ ಮಾಡಿ ‘ಖುಷಿಯಿಂದ ಇರ್ರಪ್ಪ’ ಎಂದು ಆಶೀರ್ವದಿಸಿ ಹೋದದ್ದು ಎಲ್ಲವೂ ಯೋಗಾಯೋಗವೆಂದೇ ನನಗನ್ನಿಸುತ್ತದೆ.

***

ಪತ್ರಿಕೆ ಪುಸ್ತಕಗಳನ್ನೆಲ್ಲ ಓದಿಕೊಂಡು ಬೆಳೆದ ನನ್ನಂತಹ ನೂರಾರು ಯುವಕರಿಗೆ ಭುವನೇಶ್ವರಿ ಹೆಗಡೆಯವರು ನಿಸ್ಸಂಶಯವಾಗಿ ಒಂದು ದೊಡ್ಡ ಪ್ರೇರಣೆ. ಬರವಣಿಗೆಯಲ್ಲಿ ಇರಬೇಕಾದ ಲಯ, ಸ್ವಾರಸ್ಯ, ಮೊನಚು, ವಿನೋದ, ಮಾಧುರ್ಯ, ಸರಳತೆ, ಲಾಲಿತ್ಯ ಎಲ್ಲವಕ್ಕೂ ತಮ್ಮ ಪ್ರಬಂಧಗಳ ಮೂಲಕ ತುಂಬ ಸುಂದರ ಮಾದರಿಗಳನ್ನು ಒದಗಿಸಿದವರು ಅವರು. ಅವರ ಬರಹಗಳು ಓದುಗರು ಗಹಗಹಿಸಿ ನಗುವಂತೆ ಮಾಡುವ ಕ್ಷಣಿಕ ಜೋಕುಗಳಲ್ಲ, ಉದ್ದಕ್ಕೂ ಮುಗುಳ್ನಗು ಮಿನುಗಿಸುತ್ತಾ ಅಲ್ಲಲ್ಲಿ ನಗುವಿನ ಒರತೆ ಚಿಮ್ಮಿಸುತ್ತಾ ಬಹುಕಾಲ ನೆನಪಿನಲ್ಲಿ ಉಳಿಯುವಂತೆ ಮಾಡುವ ಸುಲಲಿತ ಪ್ರಬಂಧಗಳು.

ಅವರ ಎಲ್ಲ ಪ್ರಬಂಧಗಳು ಸ್ವಾನುಭವದ ನಿರೂಪಣೆಗಳ ಶೈಲಿಯಲ್ಲಿದ್ದರೂ ಅವು ಒಣ, ಗಂಭೀರ ಸ್ವಗತಗಳಲ್ಲ; ಅವು ಓದುಗರೊಂದಿಗೆ ನಡೆಸುವ ಆಪ್ತ ಸಂವಾದ. ದಿನನಿತ್ಯದ ಬದುಕಿನ ಸಣ್ಣಪುಟ್ಟ ಸಂಗತಿಗಳನ್ನೂ ಓದುಗರ ಕಣ್ಣಿಗೆ ಕಟ್ಟುವಂತೆ ನವಿರಾಗಿ ವಿವರಿಸುವ ಚಿತ್ರಕ ಶಕ್ತಿ ಈ ಪ್ರಬಂಧಗಳಿಗಿದೆ. ಸ್ವಚ್ಛಂದ ಬಂಧ, ಸಂಕ್ಷಿಪ್ತತೆ, ಆತ್ಮೀಯತೆ, ತಿಳಿಹಾಸ್ಯ, ಜೀವನಪ್ರೀತಿ, ವಿನೋದ, ವಿಡಂಬನೆ – ಇವೆಲ್ಲ ಪ್ರಬಂಧಗಳ ಮುಖ್ಯ ಲಕ್ಷಣಗಳೆಂದು ಹಿರಿಯರು ಗುರುತಿಸಿದ್ದಿದೆ. ಈ ಎಲ್ಲವನ್ನೂ ತಮ್ಮ ಒಂದೊಂದು ಬರಹಗಳಲ್ಲೂ ಅಚ್ಚುಕಟ್ಟಾಗಿ ಉಣಬಡಿಸುವ ಹೆಗಡೆಯವರು ನಮ್ಮನ್ನು ವಿದ್ಯಾರ್ಥಿ ಜೀವನದಲ್ಲೇ ಆಕರ್ಷಿಸಿದ್ದರಲ್ಲಿ ಅತಿಶಯವಿಲ್ಲ.

“ಮನುಷ್ಯ ಸಂತೋಷವಾಗಿರಬೇಕಾದರೆ ತನ್ನನ್ನು ತಾನು ತಮಾಷೆ ಮಾಡಿಕೊಳ್ಳಲು ಕಲಿಯಬೇಕು” ಎಂದು ಹೆಗಡೆಯವರು ಬೇರೆಬೇರೆ ಸಂದರ್ಭಗಳಲ್ಲಿ ಹೇಳಿದ್ದನ್ನು ನಾನು ಕೇಳಿದ್ದೇನೆ. ಸಹಜವಾಗಿಯೇ ಅವರ ಪ್ರಬಂಧಗಳಲ್ಲೂ ಅಂತಹದೊಂದು ವಿಶಿಷ್ಟ ಗುಣ ಎದ್ದು ಕಾಣುತ್ತದೆ. ತಮ್ಮ ಬಾಲ್ಯ, ಶಾಲಾ ಜೀವನ, ಕಾಲೇಜು, ಹಾಸ್ಟೆಲು, ವೃತ್ತಿಜೀವನಗಳಿಂದಲೇ ವಸ್ತುಗಳನ್ನು ಆಯ್ದುಕೊಳ್ಳುವ ಅವರು ತಮ್ಮನ್ನು ವಿಡಂಬಿಸಿಕೊಳ್ಳುತ್ತಲೇ ತಾವೂ ಖುಷಿಪಡುತ್ತಾ ಓದುಗರನ್ನೂ ಖುಷಿಪಡಿಸುತ್ತಾ ಹೋಗುವ ರೀತಿ ತುಂಬ ವಿಶಿಷ್ಟವಾದದ್ದು. ಬದುಕಿನ ಸಣ್ಣಪುಟ್ಟ ಘಟನೆಗಳನ್ನೂ ನೆನಪಿಸಿಕೊಂಡು ಆನಂದಿಸುವ ಅವರ ಜೀವನಪ್ರೀತಿಯೇ ಬಹುಶಃ ಅವರ ವಯಸ್ಸನ್ನು ಮರೆಸಿದೆ. ಅವರ ನಿಷ್ಕಪಟ ನಗು, ಆತ್ಮೀಯತೆ, ಸರಳತೆ, ಚುರುಕುತನಗಳೆಲ್ಲ ಅವರ ಬರವಣಿಗೆಯಲ್ಲೂ ಗೋಚರಿಸುತ್ತದೆ. ಬರವಣಿಗೆ-ವ್ಯಕ್ತಿತ್ವ ಎರಡೂ ಒಂದೇ ಆಗಿರುವುದರ ಚಂದವೇ ಬೇರೆ.

“ಲಘು ಪ್ರಬಂಧಕ್ಕೆ ವಿಷಯ ಇಂತಹದೇ ಆಗಬೇಕೆಂಬ ನಿಯಮವಿಲ್ಲ. ಸಣ್ಣ ವಿಷಯ ದೊಡ್ಡ ವಿಷಯ ಯಾವುದು ಬೇಕಾದರೂ ಆಗಬಹುದು. ಲಘು ಪ್ರಬಂಧವನ್ನು ಓದಿದ ಕೂಡಲೇ ಒಂದು ತೃಪ್ತಿಯ ಮನೋಭಾವ ಉಂಟಾಗಬೇಕು. ಹೇಳುವುದನ್ನೆಲ್ಲ ಹೇಳಿಯಾಯಿತು ಎಂಬಂತೆ ಇರಬಾರದು.... ಭಾವನೆಗಳು ಅನುಭವಗಳು ಹಾಸ್ಯನಗೆ ಇವು ಉದ್ದಕ್ಕೂ ಮಿಂಚುತ್ತಿರಬೇಕು. ಗುರಿಮುಟ್ಟುವುದೊಂದೇ ಮುಖ್ಯವಲ್ಲ, ಮಾರ್ಗ ಪ್ರಯಾಣವೂ ಆಕರ್ಷಕವಾಗಿರಬೇಕು” ಎನ್ನುತ್ತಾರೆ ಗೊರೂರು ರಾಮಸ್ವಾಮಿ ಅಯ್ಯಂಗಾರ್. ಭುವನೇಶ್ವರಿ ಹೆಗಡೆಯವರ ಪ್ರಬಂಧಗಳು ಈ ಚೌಕಟ್ಟಿನೊಳಗೆ ಎಷ್ಟು ಚೆನ್ನಾಗಿ ಕೂರುತ್ತವೆ!

ಹೆಗಡೆಯವರ ಬರಹಗಳು ಹೀಗೆ ಓದಿ ಹಾಗೆ ಮರೆಯುವ ಸಾಮಾನ್ಯ ಜೋಕುಗಳಲ್ಲವೆಂಬುದನ್ನು ಆಗಲೇ ಹೇಳಿದೆ. ಅವರ ಪ್ರತೀ ಪ್ರಬಂಧದಲ್ಲೂ ಒಂದು ಹೊಸತನ, ಕವಿಸಹಜ ಪ್ರತಿಭಾಸಂಪನ್ನತೆ, ಸೃಜನಶೀಲ ಅಭಿವ್ಯಕ್ತಿ ಥಟ್ಟನೆ ಎದ್ದುಕಾಣುತ್ತದೆ. ತಾಯಿಯ ಹೊಟ್ಟೆಯ ಮಾಂಸತೂಲಿಕಾತಲ್ಪ, ನನ್ನ ಬಾಲಾಗ್ರಫಿ, ಆಂಗ್ಲಾಶುಕವಿತ್ವ, ಹಳತಾವಾದಿಗಳು, ತರ್ಕಬದ್ಧ ಪ್ರೇಮ, ರೇಡಿಯಾಂಗನೆ, ಗದ್ಯವಿಮುಖೀ ಧೋರಣೆ, ವಿದ್ಯಾರ್ಥಿಗಳೆಂಬ ಪರೀಕ್ಷಾ ರೋಗಿಗಳು, ಮಾರಣಾಂತಿಕ ಕಾರಣಗಳು, ದೇಹ ಮನಸ್ಸು ಎಂಬೀ ಉಭಯ ಸದನಗಳಲ್ಲಿ... ಅವರ ಪ್ರಬಂಧಗಳಲ್ಲಿ ಧಾರಾಳವಾಗಿ ಸಿಗುವ ಈ ತರಹದ ಒರಿಜಿನಲ್ ಅಭಿವ್ಯಕ್ತಿಗಳಿಗೆ ಓದುಗರು ಭೇಷ್ ಅನ್ನದಿರಲಾರರು.

‘ಭಾಸ ಮೊದಲಾದ ಕವಿಗಳು ಸಾಕಿಕೊಂಡ ಬೆಕ್ಕೂ ಆ ಬೆಳದಿಂಗಳನ್ನು ಹಾಲೆಂದು ತಿಳಿದು ನೆಕ್ಕಬೇಕು’, ‘ಕೊಟ್ಟಿಗೆಯಲ್ಲಿರುವ ನಮ್ಮ ಎಮ್ಮೆ ತನ್ನ ಸಚ್ಚಿದಾನಂದ ಸ್ಥಿತಿಯಲ್ಲಿ ತನ್ನ ಕೋಡನ್ನು ಕಂಬಕ್ಕೆ ತಿಕ್ಕುತ್ತಿತ್ತು’ ಎಂಬಂತಹ ಅವರ ಅಭಿವ್ಯಕ್ತಿಗಳಲ್ಲಿ ಹಾಸ್ಯವಷ್ಟೇ ಅಲ್ಲದೆ, ಅವರಿಗಿರುವ ಸಾಹಿತ್ಯದ ವಿಸ್ತಾರ ಓದು ಕೂಡ ನಿಚ್ಚಳವಾಗಿ ಕಾಣುತ್ತದೆ. ಲಲಿತ ಪ್ರಬಂಧವೆಂದರೆ ನಾಲ್ಕು ಹಾಸ್ಯ ಚಟಾಕಿಗಳನ್ನು ಹಾರಿಸಿ ಜನರನ್ನು ನಗಿಸಿಬಿಡುವ ಸುಲಭಕಲೆಯಲ್ಲ, ಅದಕ್ಕೆ ಸಾಹಿತ್ಯದ ವಿಸ್ತಾರ ಓದಿನ ಹಿನ್ನೆಲೆ ಬೇಕು ಎಂಬುದಕ್ಕೆ ಹೆಗಡೆಯವರ ಬರಹಗಳು ಒಳ್ಳೆಯ ಉದಾಹರಣೆ. ಫೇಸ್‍ಬುಕ್ ವಾಟ್ಸಾಪುಗಳಲ್ಲಿ ನಾಲ್ಕು ಸಾಲು ಬರೆದು ದಿಢೀರ್ ಸಾಹಿತಿಗಳಾಗಿ ಹೊರಹೊಮ್ಮುವ ಇಂದಿನ ಹೊಸಹುಡುಗರು ಭುವನೇಶ್ವರಿ ಹೆಗಡೆಯವನ್ನು ಓದಿ ತಿಳಿದುಕೊಳ್ಳುವುದು ಬಹಳಷ್ಟಿದೆ.

ಭುವನೇಶ್ವರಿ ಹೆಗಡೆಯವರು ಇನ್ನೂ ಹತ್ತಾರು ವರ್ಷ ಹೀಗೆಯೇ ಬರೆಯುತ್ತಿರಲಿ. ನಮ್ಮಂತಹ ಕಿರಿಯರಿಗೆ ಪ್ರೋತ್ಸಾಹವನ್ನೂ ಪ್ರೇರಣೆಯನ್ನೂ ಪ್ರೀತಿಯನ್ನೂ ನೀಡುತ್ತಿರಲಿ.

ಮಂಗಳವಾರ, ಆಗಸ್ಟ್ 8, 2017

ನುಡಿಯೊಳಗಾಗಿ ನಡೆಯದಿದ್ದರೆ...

2017 ಜುಲೈ 29 - ಆಗಸ್ಟ್ 4ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಪ್ರಸಿದ್ಧ ಚಿಂತಕ ಬಟ್ರ್ರೆಂಡ್ ರಸೆಲ್ ಬರೆಯುತ್ತಾರೆ: ನಮ್ಮಲ್ಲಿ ಎರಡು ಬಗೆಯ ನೈತಿಕತೆಗಳು ಇವೆ – ಒಂದು, ನಾವು ಬೋಧಿಸುತ್ತೇವೆ ಆದರೆ ಆಚರಿಸುವುದಿಲ್ಲ, ಇನ್ನೊಂದು ನಾವು ಆಚರಿಸುತ್ತೇವೆ ಆದರೆ ಎಂದೂ ಬೋಧಿಸುವುದಿಲ್ಲ. ನಿಜ, ಜಗತ್ತಿನ ಬಹುಪಾಲು ಸಮಸ್ಯೆಗಳಿಗೆ ಕಾರಣ ಬೋಧನೆ ಮತ್ತು ಆಚರಣೆಯ ನಡುವೆ ಇರುವ ಆಕಾಶ-ಪಾತಾಳದಂತಹ ಅಂತರ. ಬಟ್ರ್ರೆಂಡ್ ರಸೆಲ್ ಹೇಳುವ ಎರಡನೆಯ ನೈತಿಕತೆ ಎಲ್ಲರಲ್ಲೂ ಮನೆ ಮಾಡಿದರೆ ಸಮಾಜದಲ್ಲಿ ಯಾವ ಸಮಸ್ಯೆಯೂ ಉಳಿಯಲಾರದು. ಆದರೆ ಅನುಷ್ಠಾನಕ್ಕಿಂತ ಭಾಷಣಗಳು ಹೆಚ್ಚಾಗಿರುವುದೇ ನಮ್ಮ ಕಾಲದ ಅತ್ಯಂತ ದೊಡ್ಡ ವ್ಯಂಗ್ಯ.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರದ ಬಗೆಗೇ ಸದಾ ಭಾಷಣ ಮಾಡುವ ರಾಜಕಾರಣಿಗಳು, ಯೋಜನೆಗಳ ಸಂಪೂರ್ಣ ಅನುಷ್ಠಾನವೇ ತಮ್ಮ ಪರಮಗುರಿಯೆಂದು ವಚನ ನೀಡುವ ಭ್ರಷ್ಟ ಅಧಿಕಾರಿಗಳು, ಜಾತ್ಯತೀತ ಸಮಾಜದ ನಿರ್ಮಾಣದ ಬಗ್ಗೆ ವೇದಿಕೆ ಸಿಕ್ಕಲ್ಲೆಲ್ಲ ಬಡಬಡಿಸುವ ಮಹಾನ್ ಜಾತೀವಾದಿಗಳು,  ಹುಟ್ಟುಹಬ್ಬದ ದಿನ ಅನಾಥಾಶ್ರಮದ ಮಕ್ಕಳಿಗೆ ಕೇಕು ತಿನ್ನಿಸುವ ಗ್ಲಾಮರ್ ಲೋಕದ ತಾರೆಗಳು, ನಿಷ್ಕಾಮ ಕರ್ಮ ಮತ್ತು ಸರ್ವಸಂಗ ಪರಿತ್ಯಾಗದ ಬಗ್ಗೆ ಪ್ರವಚನ ನೀಡುವ ಶ್ರೀಮಂತ ಧರ್ಮಗುರುಗಳು, ನೈತಿಕತೆ ಮತ್ತು ಸನ್ನಡತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಥಾನುಗಟ್ಟಲೆ ಬೋಧಿಸುವ ನೀತಿಗೆಟ್ಟ ಶಿಕ್ಷಕರು... ಸಮಾಜ ಇಂಥವರಿಂದಲೇ ತುಂಬಿ ಹೋದಾಗ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ.

ಕುಟಿಲವ ಬಿಡದಿಹ ಮನುಜರು ಮಂತ್ರವ /  
ಪಠನೆಯ ಮಾಡಿದರೇನು ಫಲ? 
ಸಟೆಯನ್ನಾಡುವ ಮನುಜರು ಸಂತತ / 
ನಟನೆಯ ಮಾಡಿದರೇನು ಫಲ?’
ಎಂದು ಕೇಳುತ್ತಾರೆ ಪುರಂದರದಾಸರು. ಮನಸ್ಸು ಪೂರ್ತಿ ವಿಷವನ್ನೇ ತುಂಬಿಕೊಂಡು ಊರೆಲ್ಲ ಅಮೃತವೇ ತುಂಬಿ ಹರಿಯಬೇಕೆಂದು ಬಯಸುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ. ಆಚಾರಕ್ಕೂ ವಿಚಾರಕ್ಕೂ ತಾಳಮೇಳಗಳಿಲ್ಲದೇ ಹೋದಾಗ ಸಮಾಜ ಬರೀ ನಾಟಕ ಪ್ರದರ್ಶನಗಳ ವೇದಿಕೆ ಆಗಿಬಿಡುತ್ತದೆ.

ಕಪಟತನದಲ್ಲಿ ಕಾಡುತ ಜನರನು /
ಜಪವನು ಮಾಡಿದರೇನು ಫಲ? 
ಕಲುಷಿತ ತನುವನು ಬಿಡದೆ ನಿರಂತರ / 
ಜಪವನು ಮಾಡಿದರೇನು ಫಲ?’
ಎಂದು ದಾಸರು ನಮ್ಮ ಸುತ್ತಲಿನ ನಟಭಯಂಕರರನ್ನು ಉದ್ದೇಶಿಸಿಯೇ ಕೇಳಿದ್ದಾರೆ.

ವಿದ್ಯೆಗೆ ವಿನಯವೇ ಭೂಷಣ ಎನ್ನುವ ತಥಾಕಥಿತ ವಿದ್ವಾಂಸ ತಾನೇ ಮಹಾಜ್ಞಾನಿಯೆಂದು ಬೀಗುತ್ತಾ ಕುಳಿತರೆ, ದೊಡ್ಡವರೆಂದರೆ ಬೆಲೆಯೇ ಇಲ್ಲ ಎಂದು ಮಕ್ಕಳೆದುರು ಹಲ್ಲುಕಡಿಯುವ ಅಪ್ಪ-ಅಮ್ಮ ತಮ್ಮ ಹಿರಿಯರೆದುರು ಹೇಗೆ ವರ್ತಿಸಬೇಕೆಂದು ಅರ್ಥ ಮಾಡಿಕೊಳ್ಳದೇ ಹೋದರೆ, ಮಾತಾಡುವುದೇ ಸಾಧನೆಯಾಗಬಾರದು ಸಾಧನೆ ಮಾತನಾಡಬೇಕು ಎಂದು ಪುಟಗಟ್ಟಲೆ ಬರೆಯುವ ಸಾಹಿತಿಯು ಪ್ರಶಸ್ತಿಗಳಿಗೆ ಲಾಬಿ ಮಾಡುವುದರಲ್ಲೇ ಕಾಲ ಕಳೆದರೆ ಸಮಾಜಕ್ಕೆ ನಿಜವಾಗಿಯೂ ಮಾದರಿ ಒದಗಿಸಬೇಕಾದವರು ಯಾರು ಎಂಬ ಪ್ರಶ್ನೆ ಉತ್ತರವಿಲ್ಲದೇ ಒದ್ದಾಡುತ್ತದೆ.

ಪಾತಾಳ ಗಂಗೆಯಲ್ಲಿ ಮುಳುಗೆದ್ದರೆ
ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ
ನಿನ್ನ ಪಾಪವು ಹೋಗಲಿಲ್ಲವು
ಎನ್ನುತ್ತಾರೆ ಅಂಬಿಗರ ಚೌಡಯ್ಯ. ಅಂತರಂಗ ಶುದ್ಧಿಯಾಗದೆ ಬಹಿರಂಗದಲ್ಲಿ ಮಿರಿಮಿರಿ ಮಿಂಚಿದರೆ ಆ ತೋರಿಕೆಯ ಹೊಳಪಿಗೆ ಯತಾರ್ಥವಾಗಿ ಯಾವ ಮೌಲ್ಯವೂ ಉಳಿದುಕೊಳ್ಳುವುದಿಲ್ಲ. ಬಡಜನರ ತಲೆಯೊಡೆದು ಕೋಟಿಗಟ್ಟಲೆ ಸಂಪಾದಿಸಿ ದೇವರಿಗೆ ರತ್ನಖಚಿತ ಕಿರೀಟ ಅರ್ಪಿಸಿದರೆ ಆ ದೇವರು ಒಲಿಯುತ್ತಾನೆಯೇ? ಅನ್ಯಾಯದಿಂದ ಅರ್ಜಿಸಿದ ಸಂಪತ್ತಿನಿಂದ ಚಿನ್ನದ ರಥ ಮಾಡಿಸಿ ಹರಕೆ ತೀರಿಸಿದರೆ ಭಗವಂತ ಒಪ್ಪಿಕೊಳ್ಳುತ್ತಾನೆಯೇ? ‘ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಕೊಳೆವುದಲ್ಲದೆ ಬಲುಹಾಗಬಲ್ಲುದೆ?’ ಎಂದು ಬಸವಣ್ಣ ಇಂತಹ ಡಾಂಬಿಕರನ್ನುದ್ದೇಶಿಸಿಯೇ ಕೇಳಿರುವುದು.

ಧರ್ಮದ ರಹಸ್ಯ ಸಿದ್ಧಾಂತಗಳಲ್ಲಿಲ್ಲ, ಅದರ ಅನುಷ್ಠಾನದಲ್ಲಿದೆ ಎಂದರು ಸ್ವಾಮಿ ವಿವೇಕಾನಂದರು. ಇಪ್ಪತ್ತು ಸಾವಿರ ಟನ್ನು ಬೋಧನೆಗಿಂತ ಒಂದು ಹಿಡಿ ಆಚರಣೆ ಮೇಲು ಎಂಬುದು ಅವರ ನಂಬಿಕೆಯಾಗಿತ್ತು. ಹಸಿದವನ ಮುಂದೆ ಪ್ರವಚನ ಮಾಡಬೇಡಿ, ಒಂದು ತುತ್ತು ಅನ್ನ ಹಾಕಿ ಎಂಬ ಅವರ ಮಾತಿನ ಹಿಂದಿರುವುದೂ ಇದೇ ಆಶಯ. ನುಡಿಯೊಳಗಾಗಿ ನಡೆಯದಿದ್ದರೆ ನಮ್ಮ ಕೂಡಲಸಂಗಮ ದೇವನೊಲಿಯನಯ್ಯ ಎಂದ ಬಸವಣ್ಣನವರು ತಮ್ಮ ಜೀವನಪೂರ್ತಿ ಅಚಾರ-ವಿಚಾರಗಳ ನಡುವಿನ ಸಾಂಗತ್ಯದ ಬಗೆಗೇ ಮಾತನಾಡುತ್ತಾ ಹೋದರು.

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದಡೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ
ಎಂಬ ಅವರ ವಚನ ಜನರ ಮಾತಿಗೂ ಕೃತಿಗೂ ಇರುವ ವ್ಯತ್ಯಾಸದ ಕೈಗನ್ನಡಿಯಷ್ಟೇ ಅಲ್ಲ, ಸಿದ್ಧಾಂತಕ್ಕೂ ಆಚರಣೆಗೂ ಸಂಬಂಧವಿಲ್ಲದೇ ಹೋದಾಗ ವಾಸ್ತವ ಎಷ್ಟು ನಗೆಪಾಟಲಿಗೀಡಾಗುತ್ತದೆ ಎಂಬ ಎಚ್ಚರಿಕೆಯೂ ಆಗಿದೆ.

ಹೆತ್ತ ತಾಯನು ಮಾರಿ | ತೊತ್ತ ತಂದಾ ತೆರದಿ
ತುತ್ತಿನಾತುರಕೆ ತತ್ತ್ವವನು ತೊರೆದಿಹನು
ಕತ್ತೆ ತಾನೆಂದ! ಸರ್ವಜ್ಞ
ಎಂಬ ಸರ್ವಜ್ಞ ಕವಿಯ ವಚನದಲ್ಲೂ ಆಚಾರ-ವಿಚಾರಗಳ ತುಲನೆಯೇ ಮುಖ್ಯವಾಗಿದೆ. ತಂದೆ-ತಾಯಿಗಳನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಲಾಗದ ಮಕ್ಕಳು ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿ ಎಂದು ಬಯಸುವುದರಲ್ಲಿ ಏನು ನ್ಯಾಯವಿದೆ? ಶಿಷ್ಯರೆದುರು ಗೌರವಕ್ಕೆ ಅರ್ಹವಾಗಿ ನಡೆದುಕೊಳ್ಳಲಾಗದ ಗುರುಗಳು ಅದೇ ಶಿಷ್ಯರು ತಮ್ಮನ್ನು ಗೌರವಾದರಗಳಿಂದ ಕಾಣಬೇಕೆಂದು ನಿರೀಕ್ಷಿಸುವುದರಲ್ಲಿ ಏನು ಅರ್ಥವಿದೆ?

ಸದಾಚಾರ ಭಾರತೀಯ ನೆಲದ ಅಂತಃಸತ್ವ. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ನಂಬಿದ ನಾಡು ಇದು. ಆಚಾರಕ್ಕರಸಾಗು ನೀತಿಗೆ ಪ್ರಭುವಾಗು ಎಂದು ಹಾಡಿದ ಜನಪದರ ಭೂಮಿ ಇದು. ಈ ಸದಾಚಾರ ಸಮಾಜದ ಯಾವುದೋ ಮೂಲೆಯಿಂದ ತಾನೇತಾನಾಗಿ ಉದಿಸಿಬರಬೇಕೆಂದು ನಿರೀಕ್ಷಿಸುವುದು ಹೇಗೆ? ಅದರ ಜವಾಬ್ದಾರಿ ಒಬ್ಬೊಬ್ಬ ವ್ಯಕ್ತಿಯ  ಮೇಲೂ ಇದೆ. ಪ್ರತಿಯೊಬ್ಬನೂ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ಮಾಡುತ್ತಾ ಹೋದರೆ ನಡೆ-ನುಡಿಯ ವ್ಯತ್ಯಾಸಗಳೇ ಉಳಿಯುವುದಿಲ್ಲ; ಇನ್ನೊಬ್ಬನನ್ನು ದೂರುವ ಪ್ರಶ್ನೆಯೂ ಇರುವುದಿಲ್ಲ. ಈ ಕರ್ತವ್ಯ ಮನೆಯಿಂದಲೇ ಆರಂಭವಾಗಲಿ. ಏಕೆಂದರೆ ಮನೆಯೆ ಮೊದಲ ಪಾಠಶಾಲೆ. ಈ ಶಾಲೆಯಲ್ಲಿ ನಡತೆಯೇ ಪಾಠ, ಪರಿಣಾಮವೇ ಪರೀಕ್ಷೆ. ವಿಚಾರವೆಲ್ಲವೂ ಆಚಾರ ರೂಪದಲ್ಲಿಯೇ ಇರುವ ಏಕೈಕ ಸ್ಥಳವದು. ಮನೆಯಲ್ಲಿ ಕಲಿತ ಪಾಠ ಶಾಶ್ವತ. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬ ಗಾದೆಯೇ ಇದೆಯಲ್ಲ? ನಮ್ಮ ನಡೆನುಡಿ ಚಿಂತನೆಗಳಂತೆ ನಮ್ಮ ಮಕ್ಕಳು ರೂಪುಗೊಳ್ಳುತ್ತಾರೆ. ನುಡಿಯೊಳಗಾಗಿ ನಡೆಯುವ ವ್ರತದ ಬೀಜ ಮನೆಗಳಲ್ಲೇ ಮೊಳೆತರೆ ಸಮಾಜ ಸ್ವಾಸ್ಥ್ಯದ ಹೊಲವಾಗುವುದು ನಿಸ್ಸಂಶಯ.

ಬುಧವಾರ, ಜುಲೈ 26, 2017

ವಿಜಯ ದಿವಸವಷ್ಟೇ ಅಲ್ಲ, ಆತ್ಮಾವಲೋಕನದ ಮುಂಬೆಳಗು

ವಿಜಯವಾಣಿ | ಕಾರ್ಗಿಲ್ ವಿಜಯ ದಿವಸ ವಿಶೇಷ ಪುರವಣಿ | 26 ಜುಲೈ2017

ಅದು 1999ರ ಮೇ ತಿಂಗಳು. ಕಾಶ್ಮೀರದ ಗುಡ್ಡಗಾಡುಗಳಲ್ಲಿ ಓಡಾಡುತ್ತಿದ್ದ ಸಾಮಾನ್ಯ ಕುರಿಗಾಹಿಯೊಬ್ಬ ಭಾರತೀಯ ಸೇನೆ ಬೆಚ್ಚಿಬೀಳುವಂತಹ
ಕೊನೆಗೆ ಉಳಿಯುವುದೇನು? (ಚಿತ್ರ: ಇಂಟರ್ನೆಟ್)
ವಾರ್ತೆಯೊಂದನ್ನು ಹೊತ್ತು ತಂದಿದ್ದ: ‘ಗಡಿನಿಯಂತ್ರಣ ರೇಖೆಯ ಆಚೆಯಿಂದ ಪಾಕ್ ಅತಿಕ್ರಮಣಕಾರರು ಭಾರತದೊಳಕ್ಕೆ ನುಸುಳುತ್ತಿದ್ದಾರೆ...’ ಸಾಮಾನ್ಯವಾಗಿ ವಿಪರೀತ ಹಿಮಪಾತವಿರುವ ಚಳಿಗಾಲದ ಅವಧಿಯಲ್ಲಿ ಎರಡೂ ದೇಶಗಳ ಸೈನಿಕರು ಕಾರ್ಗಿಲ್, ದ್ರಾಸ್, ಮುಷ್ಕೋ ಕಣಿವೆ ಪ್ರದೇಶಗಳಲ್ಲಿ ಪಹರೆ ಕಾಯುವುದಿಲ್ಲ. ಸುರಕ್ಷಿತ ಸ್ಥಳಗಳಿಗೆ ತಮ್ಮ ನೆಲೆ ಬದಲಾಯಿಸಿಕೊಂಡು ಹಿಮಪಾತ ಕಡಿಮೆಯಾದ ಮೇಲೆ ಮತ್ತೆ ಸ್ವಸ್ಥಾನಕ್ಕೆ ಮರಳುತ್ತಾರೆ. ಉಭಯ ದೇಶಗಳ ನಡುವೆ ಇರುವ ಈ ಅಲಿಖಿತ ಒಪ್ಪಂದವನ್ನೇ ಲಾಭವನ್ನಾಗಿಸಿಕೊಂಡು ನುಸುಳುಕೋರರು ಕಾರ್ಯಾಚರಣೆಗಿಳಿದಿದ್ದರು. ಸೈನ್ಯ ಈ ಸುದ್ದಿಯನ್ನು ಕೇಳಿಯೂ ಸುಮ್ಮನೆ ಕುಳಿತಿರಲು ಸಾಧ್ಯವಿರಲಿಲ್ಲ.

23ರ ನವತರುಣ ಕ್ಯಾಪ್ಟನ್ ಸೌರಭ್ ಕಾಲಿಯಾ ನೇತೃತ್ವದ ಆರು ಜನ ಸೈನಿಕರ ತಂಡ ಹೊರಟೇಬಿಟ್ಟಿತು. ಪರಿಸ್ಥಿತಿಯ ಮಾಹಿತಿ ಕಲೆಹಾಕುತ್ತಾ ಪರ್ವತ ಶಿಖರಗಳನ್ನು ಮೆಲ್ಲಮೆಲ್ಲನೆ ಏರಿತು. ಲಡಾಖ್‍ನ ಕಕ್ಸರ್ ಪ್ರದೇಶಕ್ಕೆ ಬರುತ್ತಿದ್ದಂತೆಯೇ ಅವರಿಗಿದ್ದ ಮಾಹಿತಿ ದೃಢಪಟ್ಟಿತು. ಭಾರತದೊಳಕ್ಕೆ ದೊಡ್ಡ ಸಂಖ್ಯೆಯ ನುಸುಳುಕೋರರು ಬಂದು ಅದಾಗಲೇ ತಮ್ಮ ನೆಲೆಗಳನ್ನು ಭದ್ರಪಡಿಸಿಕೊಂಡಿದ್ದರು. ಹೆಚ್ಚು ಸಮಯ ಕಳೆಯದೆ ಕಾಲಿಯಾ ಸುಮಾರು 13,000 ಅಡಿ ಎತ್ತರದಲ್ಲಿರುವ ಬಜರಂಗ್ ಪೋಸ್ಟ್ ಅನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡರು.

ಹಾಗೆಂದು ಸಮಾಧಾನಪಟ್ಟುಕೊಂಡು ನಿಟ್ಟುಸಿರುಬಿಡುವ ಮುನ್ನ ವೈರಿಪಡೆ ಗುಂಡಿನ ಮಳೆ ಆರಂಭಿಸಿಬಿಟ್ಟಿತು. ಕಾಲಿಯಾ ನೇತೃತ್ವದ ತಂಡಕ್ಕೂ ನುಸುಳುಕೋರರಿಗೂ ದೊಡ್ಡ ಕದನವೇ ನಡೆದುಹೋಯಿತು. ಆದರೆ ನೂರಾರು ಸಂಖ್ಯೆಯಲ್ಲಿದ್ದ ವೈರಿಗಳೆಲ್ಲಿ? ಕೇವಲ ಆರು ಮಂದಿಯ ಕಾಲಿಯಾ ತಂಡವೆಲ್ಲಿ? ಅವರ ಬಳಿಯಿದ್ದ ಆಪತ್ಕಾಲೀನ ಮದ್ದುಗುಂಡುಗಳು ಬಹುಬೇಗನೆ ಮುಗಿದುಹೋದವು. ಭಾರತೀಯ ತುಕಡಿಗಳು ಅವರ ಸಹಾಯಕ್ಕೆ ಧಾವಿಸುವ ಮುನ್ನವೇ ಪಾಕ್ ಸೇನೆ ಅವರನ್ನು ಸುತ್ತುವರಿದು ಹೊತ್ತೊಯ್ದಾಗಿತ್ತು. ಆಮೇಲೆ ನಡೆದುದು ಮಾತ್ರ ಅತ್ಯಂತ ಪೈಶಾಚಿಕ ಘೋರ ಕೃತ್ಯ. 

ಇಪ್ಪತ್ತು ದಿನಗಳ ಬಳಿಕ ಪಾಕ್ ಸೇನೆ ಕಾಲಿಯಾ ತಂಡದ ಛಿದ್ರಛಿದ್ರ ಮೃತ ದೇಹಗಳನ್ನು ಭಾರತಕ್ಕೆ ಹಸ್ತಾಂತರಿಸಿತು. ಆರು ಮಂದಿ ವೀರಯೋಧರನ್ನು ಅಸಹಾಯಕರನ್ನಾಗಿಸಿ ಅತ್ಯಂತ ಅಮಾನವೀಯ ರೀತಿಯಲ್ಲಿ ಚಿತ್ರಹಿಂಸೆ ನೀಡಿ ವೈರಿಪಡೆ ಕೊಂದುಹಾಕಿತ್ತು. ಅವರ ದೇಹಗಳನ್ನು ಅಲ್ಲಲ್ಲಿ ಸಿಗರೇಟಿನಿಂದ ಸುಡಲಾಗಿತ್ತು; ಕಿವಿಗಳಿಗೆ ಬಿಸಿ ರಾಡ್‍ಗಳನ್ನು ತೂರಿಸಲಾಗಿತ್ತು; ಕಣ್ಣುಗಳನ್ನು ಕಿತ್ತು ತೆಗೆಯಲಾಗಿತ್ತು; ಹಲ್ಲು ಮತ್ತು ಮೂಳೆಗಳನ್ನು ಮುರಿದು ಹಾಕಲಾಗಿತ್ತು; ಮೂಗು ತುಟಿಗಳನ್ನು ಸೀಳಲಾಗಿತ್ತು; ಕೈಕಾಲುಗಳನ್ನು ಅಷ್ಟೇ ಏಕೆ ಗುಪ್ತಾಂಗಗಳನ್ನು ಕತ್ತರಿಸಲಾಗಿತ್ತು.

ಈ ರೌದ್ರ ಘಟನೆಯ ಬಗ್ಗೆ ತಿಳಿದು ಇಡೀ ದೇಶವೇ ಬೆಚ್ಚಿಬಿದ್ದಿತು, ಮಮ್ಮಲ ಮರುಗಿತು. ಸ್ವತಃ ನಾನೇ ಚಿತ್ರಹಿಂಸೆಗೊಳಗಾದಂತೆ ಭಾಸವಾಗುತ್ತಿದೆ ಎಂದು ವಿದೇಶಾಂಗ ಸಚಿವ ಜಸ್ವಂತ್ ಸಿಂಗ್ ದುಃಖಿಸಿದರು. ಪಾಕ್ ಪಡೆಯ ನೀಚ ಕೃತ್ಯ ಇಡೀ ಭಾರತದ ಆತ್ಮಸಾಕ್ಷಿಯನ್ನು ಬಡಿದೆಬ್ಬಿಸಿತು. 1971ರ ಯುದ್ಧದ ಸಂದರ್ಭದಲ್ಲಿ ಭಾರತವು ಪಾಕಿಸ್ತಾನದ 93 ಸಾವಿರ ಸೈನಿಕರನ್ನು ಸೆರೆಹಿಡಿದಿತ್ತು. ಆದರೆ ಯುದ್ಧದ ತರುವಾಯ ಅಷ್ಟೂ ಮಂದಿಯನ್ನು ಸುರಕ್ಷಿತವಾಗಿ ತವರಿಗೆ ಬಿಟ್ಟುಕೊಡಲಾಗಿತ್ತು. ಭಾರತದ ಔದಾರ್ಯಕ್ಕೆ ಪ್ರತಿಯಾಗಿ ಸಿಕ್ಕಿದ್ದು ಮಾತ್ರ ಪಾಕ್‍ನ ಪೈಶಾಚಿಕತೆ. ಆದರೆ ಈ ಹೀನ ಕೆಲಸ ಜಿನೀವಾ ಅಂತಾರಾಷ್ಟ್ರೀಯ ಒಪ್ಪಂದದ ಸ್ಪಷ್ಟ ಉಲ್ಲಂಘನೆಯಾಗಿತ್ತು. ಭಾರತೀಯ ಸೇನೆಗೆ ಪ್ರತಿರೋಧ ತೋರದೆ ಬೇರೆ ದಾರಿಯೇ ಇರಲಿಲ್ಲ. ಪ್ರತಿರೋಧ ತೋರುವುದಕ್ಕಿಂತಲೂ ರಾಷ್ಟ್ರದ ಸಾರ್ವಭೌಮತೆಯನ್ನು ಕಾಪಾಡಿಕೊಳ್ಳುವುದು ನಮಗೆ ಅನಿವಾರ್ಯವಾಗಿತ್ತು. ಅದರ ಪರಿಣಾಮವೇ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಘೋರ ಕಾರ್ಗಿಲ್ ಯುದ್ಧ.

ಬದಲಾಗದ ಪಾಕ್ ಚಾಳಿ
ಭಾರತ-ಪಾಕ್ ವಿಭಜನೆಯಾದಲ್ಲಿಂದಲೂ ಕಾಶ್ಮೀರದ ಸಮಸ್ಯೆಯನ್ನು ಪಾಕಿಸ್ತಾನ ಜೀವಂತವಾಗಿಯೇ ಉಳಿದುಕೊಂಡಿದೆ. 1965 ಹಾಗೂ 1971ರಲ್ಲಿ ಅದು ದೊಡ್ಡಮಟ್ಟದಲ್ಲಿ ಕಾಣಿಸಿಕೊಂಡಿತು ಅಷ್ಟೇ. ಅದರ ಹೊರತಾಗಿ ಗಡಿಪ್ರದೇಶದಲ್ಲಿ ಪಾಕ್ ಕದನ ವಿರಾಮ ಉಲ್ಲಂಘಿಸಿದ್ದಕ್ಕೆ ಲೆಕ್ಕವೇ ಇಲ್ಲ. ಅಂತಾರಾಷ್ಟ್ರೀಯ ಸಮುದಾಯದ ಟೀಕೆಗೆ ಹೆದರಿ ಆಗಿಂದಾಗ್ಗೆ ‘ಶಾಂತಿಯುತ ಪರಿಹಾರ’ದ ಮಾತುಗಳನ್ನಾಡುತ್ತಿದ್ದರೂ ತಾನೇ ಸಾಕಿದ ಉಗ್ರರನ್ನಾಗಲೀ ತನ್ನದೇ ಸೇನೆಯನ್ನಾಗಲೀ ನಿಯಂತ್ರಿಸುವುದು ಅದರಿಂದ ಸಾಧ್ಯವಾಗಿಲ್ಲ. 

ಕಾಶ್ಮೀರ ಸಮಸ್ಯೆಗೆ ಸೌಹಾರ್ದಯುತ ಪರಿಹಾರವೊಂದನ್ನು ಕಂಡುಕೊಳ್ಳುವುದಕ್ಕೆ ಉತ್ಸುಕರಾಗಿದ್ದ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ತಮ್ಮಿಂದಾದ ಎಲ್ಲ ಪ್ರಯತ್ನಗಳನ್ನೂ ಮಾಡಿದರು. ದೆಹಲಿ-ಲಾಹೋರ್ ನಡುವೆ ಬಸ್ ಸೇವೆ ಆರಂಭಿಸಿದ ಅವರ ಕ್ರಮವಂತೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ‘ಬಸ್ ರಾಜತಾಂತ್ರಿಕತೆ’ ಎಂದೇ ಪ್ರಸಿದ್ಧಿ ಪಡೆದು ಸರ್ವಪ್ರಶಂಸೆಗೆ ಪಾತ್ರವಾಯಿತು. 1999 ಫೆಬ್ರವರಿ 20ರಂದು ಸ್ವತಃ ವಾಜಪೇಯಿಯವರೇ ಬಸ್ ಮೂಲಕ ಲಾಹೋರಿಗೆ ಪ್ರಯಾಣಿಸಿ ಪಾಕ್ ಪ್ರಧಾನಿಯನ್ನು ಭೇಟಿಯಾದರು. ಭಾರತ-ಪಾಕ್ ಸಮಸ್ಯೆಯನ್ನು ದಶಕಗಳ ಕಾಲ ನೋಡಿ ಕೈಚೆಲ್ಲಿ ಕುಳಿತಿದ್ದ ಅಂತಾರಾಷ್ಟ್ರೀಯ ಸಮುದಾಯ ಭಾರತದ ಈ ಹೊಸ ನಡೆಯನ್ನು ನೋಡಿ ಮೆಚ್ಚುಗೆಯಿಂದ ತಲೆದೂಗಿತು. ಅಂತೂ ಎರಡೂ ದೇಶಗಳ ನಡುವೆ ಒಂದು ಸೌಹಾರ್ದತೆಯ ವಾತಾವರಣ ಸೃಷ್ಟಿಯಾಯಿತಲ್ಲ ಎಂದು ಜನಸಾಮಾನ್ಯರು ಖುಷಿಪಟ್ಟರು. ‘ಜಂಗ್ ನ ಹೋನೇ ದೇಂಗೇ’ (ಯುದ್ಧ ಎಂದೂ ನಡೆಯಕೂಡದು) ಎಂದು ಎರಡೂ ದೇಶಗಳ ಮುಖ್ಯಸ್ಥರು ಪರಸ್ಪರ ಒಪ್ಪಂದ ಮಾಡಿಕೊಂಡದ್ದು ನೋಡಿ ಜನತೆ ಸಂಭ್ರಮಿಸಿದರು. ವಾಜಪೇಯಿಯವರನ್ನು ತಬ್ಬಿಕೊಂಡು, ಕೈಕುಲುಕಿ ನವಾಜ್ ಷರೀಫ್ ಕಳುಹಿಸಿಕೊಟ್ಟರು. ಕಾರ್ಗಿಲ್ ಕದನ ನಡೆಯುವವರೆಗೆ ಇದೆಲ್ಲ ಬರೀ ನಾಟಕ ಎಂದು ಭಾರತಕ್ಕಾಗಲೀ ಅಂತಾರಾಷ್ಟ್ರೀಯ ಸಮುದಾಯಕ್ಕಾಗಲೀ ಅರ್ಥವಾಗಲೇ ಇಲ್ಲ!

ಇತ್ತ ವಾಜಪೇಯಿ ಮರಳಿ ದೆಹಲಿಗೆ ಬರುತ್ತಿದ್ದಂತೆ ಅತ್ತ ಪಾಕಿಸ್ತಾನ ಮುಜಾಹಿದ್ದೀನ್ ಸೋಗಿನಲ್ಲಿ ತನ್ನ ಅರೆಸೇನಾ ಪಡೆಗಳನ್ನು ರಹಸ್ಯವಾಗಿ ಗಡಿನಿಯಂತ್ರಣ ರೇಖೆಯೊಳಕ್ಕೆ ಕಳುಹಿಸಲು ಆರಂಭಿಸಿತು. ಅಸಲಿಗೆ 1998ರಲ್ಲಿ ಮುಷರ್ರಫ್ ಪಾಕ್ ಸೇನಾ ಮುಖ್ಯಸ್ಥರಾಗಿ ನೇಮಕವಾದಲ್ಲಿಂದಲೇ ಈ ‘ಆಪರೇಷನ್ ಬದ್ರ್’ನ ನೀಲನಕ್ಷೆ ತಯಾರಾಗತೊಡಗಿತ್ತು. ವಾಜಪೇಯಿ ಹೊರಟು ಬಂದಲ್ಲಿಂದ ಅದರ ಅನುಷ್ಠಾನಕ್ಕೆ ವೇಗ ಲಭಿಸಿತ್ತು.

ತಮಾಷೆಯೆಂದರೆ ಇಂದಿನವರೆಗೂ ಪಾಕಿಸ್ತಾನ ಕಾರ್ಗಿಲ್ ಕದನದ ಹಿಂದೆ ತನ್ನ ಪಾತ್ರವಿದೆಯೆಂದು ಅಧಿಕೃತವಾಗಿ ಒಪ್ಪಿಕೊಂಡೇ ಇಲ್ಲ. ಗಡಿನಿಯಂತ್ರಣ ರೇಖೆಯಿಂದೀಚೆಗೆ ನುಸುಳಿದ್ದು ಯಾರೆಂದೇ ಅದಕ್ಕೆ ಗೊತ್ತಿಲ್ಲವಂತೆ. ನವಾಜ್ ಷರೀಫ್ ಅಂತೂ ವಾಜಪೇಯಿ ತಮಗೆ ತುರ್ತು ಫೋನ್ ಕರೆ ಮಾಡುವವರೆಗೆ ಕಾರ್ಗಿಲ್‍ನಲ್ಲಿ ನಡೆದ ಘಟನೆಗಳ ಬಗ್ಗೆ ಏನೇನೂ ಮಾಹಿತಿಯಿರಲಿಲ್ಲವೆಂದು ಹಸಿಹಸಿ ಸುಳ್ಳುಹೇಳಿದರು. ಆದರೆ ಪಾಕ್ ಪ್ರಧಾನಿಯಿಂದ ತೊಡಗಿ ಸೇನಾ ಮುಖ್ಯಸ್ಥರುಗಳವರೆಗೆ ಅನೇಕ ಮಂದಿ ಕಾರ್ಗಿಲ್ ಯುದ್ಧದ ಬಳಿಕ ಬೇರೆಬೇರೆ ಸಂದರ್ಭಗಳಲ್ಲಿ ನೀಡಿದ ಹೇಳಿಕೆಗಳು ಒಟ್ಟಾರೆ ಘಟನೆಯ ಹಿಂದೆ ಪಾಕಿಸ್ತಾನದ ಸಕ್ರಿಯ ಪಾತ್ರ ಇದ್ದುದನ್ನು ದೃಢಪಡಿಸಿವೆ. ಕಾರ್ಗಿಲ್ ದಾಳಿಯ ಯೋಜನೆಯ ಬಗ್ಗೆ ವಾಜಪೇಯಿ ಭೇಟಿಗೂ ಎರಡು ವಾರ ಮುನ್ನವೇ ತಾನು ಷರೀಫ್ ಜೊತೆಗೆ ಚರ್ಚೆ ಮಾಡಿದ್ದುದಾಗಿ ಮುಷರ್ರಫ್ ಹೇಳಿದ್ದು ಮಾಧ್ಯಮಗಳಲ್ಲಿ ವರದಿಯಾಗಿತ್ತು. ಅಂದಮೇಲೆ, ಲಾಹೋರ್ ಘೋಷಣೆ ಒಪ್ಪಂದಗಳೆಲ್ಲ ಬರೀ ಬೂಟಾಟಿಕೆ ಅಲ್ಲದೆ ಇನ್ನೇನು?

(ಚಿತ್ರ: ಇಂಟರ್ನೆಟ್)
ಅದು ಕಾರ್ಗಿಲ್ ಕದನ!
ಜಗತ್ತಿನ ಅತ್ಯಂತ ದುರ್ಗಮ ಯುದ್ಧಭೂಮಿಯೆಂದೇ ಹೆಸರಾಗಿರುವ ಕಾರ್ಗಿಲ್‍ನಲ್ಲಿ ನಡೆದ ಕದನ ಭಾರತಕ್ಕೆ ನಿಜಕ್ಕೂ ಸತ್ತ್ವಪರೀಕ್ಷೆಯೇ ಆಗಿತ್ತು. ಪಾಕ್ ನುಸುಳುಕೋರರು ಅದಾಗಲೇ ಭಾರತ ಪ್ರವೇಶಿಸಿ ಆಯಕಟ್ಟಿನ ಪ್ರದೇಶಗಳಲ್ಲಿ ನೆಲೆಗಳನ್ನು ಭದ್ರಪಡಿಸಿಕೊಂಡಿದ್ದರಿಂದ ಪ್ರತಿರೋಧದ ಆರಂಭದಲ್ಲೇ ಹೆಚ್ಚಿನ ಪ್ರಮಾಣದ ಸಾವು ನೋವುಗಳಾಗುವುದು ಖಚಿತವೆಂದು ಸೇನೆ ಅಂದಾಜಿಸಿತ್ತು. ಆದರೆ ತ್ಯಾಗದ ಹೊರತು ಬೇರೆ ದಾರಿಯಿರಲಿಲ್ಲ. ವೈರಿ ಸಮೂಹ ಶಿಖರಾಗ್ರಗಳಲ್ಲಿ ಹೊಂಚುಹಾಕಿದ್ದರಿಂದ ಭಾರತದ ಎದುರು ದೈತ್ಯ ಸವಾಲೇ ಇತ್ತು. ಎತ್ತರದಲ್ಲಿದ್ದ ವೈರಿಪಡೆಗೆ ಸಹಜವಾಗಿಯೇ ಅನುಕೂಲಕರ ವಾತಾವರಣವಿತ್ತು. ಭಾರತೀಯ ತುಕಡಿಗಳು ಸಾಗಿಬರುವುದನ್ನು ಅವರು ತುಂಬ ಸುಲಭವಾಗಿ ನೋಡಬಹುದಿತ್ತು ಮತ್ತು ದಾಳಿ ನಡೆಸಬಹುದಿತ್ತು. ನಮ್ಮ ಸೈನಿಕರಾದರೋ ಕಡಿದಾದ ಬೆಟ್ಟಗಳನ್ನು ವಸ್ತುಶಃ ತೆವಳಿಕೊಂಡು ಏರಬೇಕಿತ್ತು ಮತ್ತು ಅದೇ ಪರಿಸ್ಥಿತಿಯಲ್ಲಿ ಪ್ರತಿದಾಳಿ ನಡೆಸಬೇಕಿತ್ತು. ಅದಕ್ಕೇ ಕಾರ್ಗಿಲ್‍ನಲ್ಲಿ ಭಾರತೀಯ ಸೈನಿಕರು ಸಾಧಿಸಿದ ವಿಜಯ ಒಂದು ಸಾರ್ವಕಾಲಿಕ ಮತ್ತು ಐತಿಹಾಸಿಕ ವಿಕ್ರಮ.

ಎಲ್ಲ ಇತಿಮಿತಿಗಳ ನಡುವೆಯೂ ಭಾರತದ ದಂಡಯಾತ್ರೆ ಅಭೂತಪೂರ್ವವಾಗಿ ಸಾಗಿತು. ‘ಆಪರೇಷನ್ ವಿಜಯ್’ ಪಾಕಿಸ್ತಾನಕ್ಕೆ ಮರ್ಮಾಘಾತ ನೀಡಿತು. ವಾಯುಸೇನೆ ಯುದ್ಧವಿಮಾನ ಹಾಗೂ ಹೆಲಿಕಾಪ್ಟರ್‍ಗಳನ್ನು ಬಳಸಿ ಶತ್ರುನೆಲೆಗಳನ್ನು ಪತ್ತೆಹಚ್ಚಿದರೆ ಪದಾತಿ ಮತ್ತು ಫಿರಂಗಿ ದಳಗಳು ಅತಿಕ್ರಮಣಕಾರರನ್ನು ನಿಗ್ರಹಿಸುತ್ತಾ ಮುಂದುವರಿದವು. ಒಬ್ಬೊಬ್ಬ ಅತಿಕ್ರಮಣಕಾರನು ಗಡಿನಿಯಂತ್ರಣ ರೇಖೆಯಿಂದ ಆಚೆ ತೊಲಗುವವರೆಗೆ ಕದನವಿರಾಮದ ಪ್ರಶ್ನೆಯೇ ಇಲ್ಲ ಎಂದು ದೃಢವಾಗಿ ಹೇಳಿದರು ರಕ್ಷಣಾ ಸಚಿವ ಜಾರ್ಜ್ ಫೆರ್ನಾಂಡಿಸ್.

ಈ ನಡುವೆ ಪ್ರಧಾನಿ ವಾಜಪೇಯಿ ಶತ್ರುಗಳ ವಿರುದ್ಧ ಹೋರಾಡುತ್ತಿದ್ದ ಸೈನಿಕರಲ್ಲಿ ಉತ್ಸಾಹ ತುಂಬುವುದಕ್ಕಾಗಿ ಖುದ್ದು ಕಾರ್ಗಿಲ್‍ಗೆ ಭೇಟಿ ನೀಡಿದರು. ಭಾರತದ ಇತಿಹಾಸದಲ್ಲೇ ದೇಶದ ಅತ್ಯುನ್ನತ ಸ್ಥಾನದಲ್ಲಿರುವ ಪ್ರಧಾನಿಯೊಬ್ಬರು ಯುದ್ಧಕ್ಷೇತ್ರಕ್ಕೆ ಭೇಟಿಕೊಟ್ಟ ಈ ಅಪೂರ್ವ ಸಂದರ್ಭ ಸೈನಿಕರಲ್ಲಿ ಅಪಾರ ಹುಮ್ಮಸ್ಸನ್ನೂ ಮನೋಧೈರ್ಯವನ್ನೂ ತುಂಬಿತು. ವೈರಿಪಡೆ ವಶಪಡಿಸಿಕೊಂಡಿದ್ದ ಪ್ರದೇಶಗಳೆಲ್ಲ ಮತ್ತೆ ಒಂದೊಂದಾಗಿ ಭಾರತದ ತೆಕ್ಕೆಗೆ ಬರಲಾರಂಭಿಸಿದವು. 17000 ಅಡಿ ಎತ್ತರದಲ್ಲಿದ್ದ ತೊಲೊಲಿಂಗ್ ಪರ್ವತ ಪ್ರದೇಶ, ದ್ರಾಸ್ ವಲಯದ ದುರ್ಗಮ ಕಣಿವೆ, ಬಟಾಲಿಕ್ ವಲಯದ ಎರಡು ಪ್ರಮುಖ ನೆಲೆಗಳನ್ನು ಭಾರತ ವಶಪಡಿಸಿಕೊಳ್ಳುತ್ತಿದ್ದಂತೆ ಅತಿಕ್ರಮಣಕಾರರ ಶಕ್ತಿ ಕುಸಿಯತೊಡಗಿತು.

ಶ್ರೀನಗರ-ಲೇಹ್ ಹೆದ್ದಾರಿಗೆ ಅಭಿಮುಖವಾಗಿರುವ ಟೈಗರ್ ಹಿಲ್ಸ್ ಮೇಲೆ ವಿಜಯ ಪತಾಕೆ ಊರಿದಾಗಲಂತೂ ಭಾರತ ಆತ್ಮವಿಶ್ವಾಸದಿಂದ ನಳನಳಿಸುತ್ತಿತ್ತು. ಜುಬಾದ್ ಹಿಲ್ಸ್ ವಶಪಡಿಸಿಕೊಂಡು ಅದರ ತುದಿಯಲ್ಲಿದ್ದ ವೈರಿಪಡೆಯ ಮದ್ದುಗುಂಡುಗಳ ಕೋಠಿಯನ್ನು ನಾಶಪಡಿಸಿದ ಮೇಲೆ ಅತಿಕ್ರಮಣಕಾರರಿಗೆ ಪಲಾಯನವಲ್ಲದೆ ಬೇರೆ ದಾರಿಯೇ ಇರಲಿಲ್ಲ. ಕೊನೆಗೂ ಜುಲೈ 26ರಂದು ಭಾರತ ಕದನವನ್ನು ನಿಲ್ಲಿಸಿ ವಿಜಯ ದುಂದುಭಿಯನ್ನು ಮೊಳಗಿಸಿತು. ಅದರ ಸವಿನೆನಪೇ ನಾವಿಂದು ಹೆಮ್ಮೆಯಿಂದ ಆಚರಿಸುತ್ತಿರುವ ಕಾರ್ಗಿಲ್ ದಿನ.

ಆತ್ಮಾವಲೋಕನದ ಸಮಯ
ಪ್ರತಿಯೊಬ್ಬ ಭಾರತೀಯನೂ ಹೆಮ್ಮೆಪಡುವ ಕಾರ್ಗಿಲ್ ವಿಜಯ ಅಷ್ಟೊಂದು ಅನಾಯಾಸವಾಗಿಯೇನೂ ಒದಗಿಬರಲಿಲ್ಲ ಎಂಬುದನ್ನು ಮನಗಾಣುವುದು ಮುಖ್ಯ. ಈ ವಿಜಯದ ಹಿಂದೆ ಹತ್ತುಹಲವು ಬಲಿದಾನಗಳ ಕರುಣಾಜನಕ ಕಥೆಗಳಿವೆ. ಐದುನೂರಕ್ಕೂ ಹೆಚ್ಚು ಕೆಚ್ಚೆದೆಯ ವೀರರು ಈ ಕದನದಲ್ಲಿ ಪ್ರಾಣಾರ್ಪಣೆ ಮಾಡಬೇಕಾಯಿತು. ಸುಮಾರು 1500 ಸೈನಿಕರು ಗಾಯಗೊಂಡರು, ಅನೇಕರು ಶಾಶ್ವತವಾಗಿ ಅಂಗವಿಕಲರಾದರು. ಅದೆಷ್ಟೋ ಮಹಿಳೆಯರು ವಿಧವೆಯರಾದರು, ಅಮ್ಮ-ಅಪ್ಪಂದಿರು ತಮ್ಮ ಭರವಸೆಯ ಕುಡಿಗಳನ್ನು ಕಳೆದುಕೊಂಡರು, ಮಕ್ಕಳು ತಬ್ಬಲಿಗಳಾದರು. ರಕ್ತದಷ್ಟೇ ದುಃಖದ ಕಣ್ಣೀರೂ ಕೋಡಿಯಾಗಿ ಹರಿಯಿತು. 

“ಒಂದೋ ನಾನು ತ್ರಿವರ್ಣಧ್ವಜವೇರಿಸಿ ಬರುತ್ತೇನೆ. ಇಲ್ಲವೇ ಅದೇ ತ್ರಿವರ್ಣ ಧ್ವಜವನ್ನು ಹೊದ್ದುಕೊಂಡು ಬರುತ್ತೇನೆ. ಆದರೆ ನಾನು ಬಂದೇ ಬರುತ್ತೇನೆ...” ಹೀಗೆಂದು ಯುದ್ಧರಂಗಕ್ಕೆ ಹೋಗಿ, ಸಾವನ್ನಪ್ಪಿದ 24 ವರ್ಷದ ಕ್ಯಾಪ್ಟನ್ ವಿಕ್ರಮ್ ಬಾತ್ರಾ ಅವರ ಶೌರ್ಯದ ಕಥಾನಕ ನಮ್ಮ ಮುಂದಿದೆ. ಮದುವೆಯಾಗಿ ನಾಲ್ಕೇ ತಿಂಗಳಿಗೆ ಕನಸು ಕಂಗಳ ಪತ್ನಿಯನ್ನು ಮನೆಯಲ್ಲಿ ಬಿಟ್ಟು ಕಾರ್ಗಿಲ್‍ಗೆ ತೆರಳಿ ಮತ್ತೆರಡು ತಿಂಗಳಲ್ಲಿ ಹೆಣವಾಗಿ ಮರಳಿದ ಜಸ್‍ವಿಂದರ್ ಸಿಂಗ್‍ನ ಬಲಿದಾನದ ಕಥೆ ನಮ್ಮ ಮುಂದಿದೆ. ಯುದ್ಧದಿಂದ ಮರಳಿದ ಕೂಡಲೇ ನೀನು ಹುಡುಕಿದ ಹುಡುಗಿಯನ್ನು ಮದುವೆಯಾಗುತ್ತೇನಮ್ಮ ಎಂದು ತಾಯಿಗೆ ಭಾಷೆಯಿತ್ತು ಹೋಗಿ ಯುದ್ಧಭೂಮಿಯಲ್ಲಿ ಪ್ರಾಣತ್ಯಾಗಗೈದ ಕ್ಯಾಪ್ಟನ್ ಅಮೋಲ್ ಕಾಲಿಯಾ ಅವರ ಹೋರಾಟದ ಗಾಥೆಯಿದೆ. 

ಸೈನಿಕರೆಂದರೆ ಮೃತ್ಯುವಿನ ಬೂದು ನೆಲದ
ನಾಗರಿಕರು; ಕಾಲದ ನಾಳೆಗಳ ಲಾಭವನ್ನು ಬಯಸದವರು
ಸೈನಿಕರೆಂದರೆ ಕನಸುಗಾರರು; ಬಂದೂಕುಗಳು ಬೆಂಕಿಯುಗುಳುವ ವೇಳೆ
ಅವರು ಬೆಚ್ಚಗಿನ ಮನೆಗಳ, ಸ್ವಚ್ಛ ಹಾಸಿಗೆಗಳ, 
ಮತ್ತು ತಮ್ಮ ಪತ್ನಿಯರ ಕನಸು ಕಾಣುವರು...
ಎಂದು ಬರೆಯುತ್ತಾರೆ ಸೀಗ್‍ಫ್ರೈಡ್ ಸಾಸೂನ್. ಮಾನವೀಯತೆಗೆ ಬೆಲೆ ಕೊಡುವ ಯಾರೂ ಯುದ್ಧವನ್ನು ಬಯಸುವವರಲ್ಲ. ಅದರಲ್ಲೂ ಭಾರತ ಮೊದಲಿನಿಂದಲೂ ಶಾಂತಿಪ್ರಿಯ ರಾಷ್ಟ್ರ. ಆದರೆ ಶತ್ರುಗಳು ತಾವಾಗಿಯೇ ಕಾಲುಕೆದರಿಕೊಂಡು ಬಂದಾಗ ಕೈಕಟ್ಟಿ ಕೂರುವುದು ಈ ದೇಶದ ಜಾಯಮಾನ ಅಲ್ಲ. ಆದರೆ ಇದರ ಅಂತಿಮ ಪರಿಣಾಮವಾಗುವುದು ನಮ್ಮ ಸೈನಿಕರ ಮೇಲೆ ಮತ್ತವರ ಮುಗ್ಧ ಕುಟುಂಬದ ಮೇಲೆ. ಬಿಸಿಲು, ಮಳೆ, ಗಾಳಿ, ಚಳಿಯೆನ್ನದೆ ಹಗಲಿರುಳೂ ಗಡಿಗಳಲ್ಲಿ ಪಹರೆ ಕಾಯುವ ಈ ಮಹಾನ್ ಯೋಧರಿಗಾಗಿ ಬೆಚ್ಚಗಿನ ಮನೆಗಳಲ್ಲಿ ಕುಳಿತು ಸುಖವಾಗಿ ಉಂಡುಟ್ಟು ಮಲಗುವ ನಾವು ಏನನ್ನು ಕೊಟ್ಟಿದ್ದೇವೆ? ನಾವಿಂದು ಸೆಣಸುತ್ತಿರುವುದು ನಿಮ್ಮ ಒಳ್ಳೆಯ ನಾಳೆಗಳಿಗಾಗಿ ಎಂಬ ಸೈನಿಕರ ಅಂತರಂಗದ ಮಾತುಗಳನ್ನು ಸರ್ಕಾರಗಳಾಗಲೀ, ಜಾತಿ ಮತಗಳನ್ನು ಎತ್ತಿಕಟ್ಟಿ ರಾಜಕೀಯ ಮಾಡುತ್ತಿರುವ ಅಧಿಕಾರ ಲಾಲಸೆಯ ರಾಜಕಾರಣಗಳಾಗಲೀ ಎಷ್ಟರಮಟ್ಟಿಗೆ ಅರ್ಥ ಮಾಡಿಕೊಂಡಿದ್ದಾರೆ?

ಕಾರ್ಗಿಲ್ ಕದನದ ಮೊತ್ತಮೊದಲ ಹೀರೋ ಕ್ಯಾ| ಸೌರಭ್ ಕಾಲಿಯಾ. ವೈರಿಪಡೆಗಳ ಪೈಶಾಚಿಕ ಕೃತ್ಯಕ್ಕೆ ಬಲಿಯಾಗಿ ಘೋರ ಸಾವನ್ನಪ್ಪಿದ ಕಾಲಿಯಾ ಆತ್ಮಕ್ಕೆ 18 ವರ್ಷಗಳ ನಂತರವೂ ನ್ಯಾಯ ದೊರಕಿಲ್ಲ. ಮಗನ ಆಸರೆಯಲ್ಲಿ ವೃದ್ಧಾಪ್ಯ ಕಳೆಯಬೇಕಿದ್ದ 70ರ ಇಳಿವಯಸ್ಸಿನ ಆತನ ತಂದೆ ಎನ್. ಕೆ. ಕಾಲಿಯಾ ಪಾಕಿಸ್ತಾನದ ಪೈಶಾಚಿಕ ಕೃತ್ಯವನ್ನು ಪ್ರಶ್ನಿಸಿ ಭಾರತವು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದಾವೆ ಹೂಡಬೇಕೆಂದು ಬೇಡಿಕೊಳ್ಳುತ್ತಿರುವುದು ಇಂದಿಗೂ ಅರಣ್ಯ ರೋದನವಾಗಿಯೇ ಉಳಿದಿದೆ. ರಾಜತಾಂತ್ರಿಕ ಸಂಬಂಧಗಳ ನೆಪ ಹೇಳಿ ಈ ಎರಡು ದಶಕಗಳಲ್ಲಿ ಬಂದಿರುವ ಅಷ್ಟೂ ಸರ್ಕಾರಗಳು ಕಾಲಿಯಾ ತಂದೆಯ ಮನವಿ ಬಗ್ಗೆ ದಿವ್ಯ ಮೌನವನ್ನು ತಾಳುತ್ತಲೇ ಬಂದಿವೆ. ಇದುವೇ ಏನು ದೇಶಕ್ಕಾಗಿ ಹುತಾತ್ಮರಾದ ವೀರಯೋಧರನ್ನು ನಾವು ಸ್ಮರಿಸಿಕೊಳ್ಳುವ ರೀತಿ?


ಫಸ್ಟ್ ಡೇ, ಫಸ್ಟ್ ಶೋ

ಉದಯವಾಣಿ | ಜೋಶ್ | 04-07-2017

ಬೆರಗು, ಬೆರಗು ಮತ್ತು ಬೆರಗು. ಅದು ಬಿಟ್ಟರೆ ಕೊಂಚ ಆತಂಕ, ಇನ್ನೊಂದಿಷ್ಟು ಗೊಂದಲ. ಕ್ಯಾಂಪಸಿಗೆ ಹೊಸದಾಗಿ ಕಾಲಿಟ್ಟ ಹುಡುಗ ಹುಡುಗಿಯರ ಕಣ್ಣುಗಳಲ್ಲಿ ನೂರೆಂಟು ಕಥಾನಕಗಳು. ಆಗಷ್ಟೇ ತೆರೆದುಕೊಂಡ ಆ ಗಂಧರ್ವಲೋಕದಲ್ಲಿ ಅವರಿಗೆ ಪ್ರತಿಯೊಂದೂ ಹೊಸದು, ಎಲ್ಲವೂ ಅಪರಿಚಿತ.

ಒಬ್ಬೊಬ್ಬರಾಗಿ ಬರುವವರು ಕೆಲವರು, ಗುಂಪುಗುಂಪಾಗಿ ನಡೆಯುವವರು ಹಲವರು. 'ಏನಪಾ ಎಂಟ್ರೇನ್ಸೇ ಹೀಗಿದೆ, ಇನ್ನು ಒಳಗೆಲ್ಲಾ ಹೇಗಿದೆಯೋ’ ಅವರ ನಡುವೆಯೇ ಗುಸುಗುಸು ಪಿಸಪಿಸ. 'ಕ್ಲಾಸ್ ಎಷ್ಟೊತ್ಗೋ? ಮೊದಲ ದಿನ ಅಲ್ವ? ಕ್ಲಾಸ್ ಮಾಡ್ತಾರೋ, ಬಿಟ್‌ಬಿಡ್ತಾರೋ? ಇವತ್ತೊಂದಿನ ಬೇಗ ಬಿಟ್ರೆ ಚೆನ್ನಾಗಿತ್ತು’ ಗುಂಪಿನೊಳಗೆ ಹಲವು ಮಾತು. 'ತಡಿ ಮಗ, ಮೊದ್ಲು ಒಳಗೆ ಹೋಗೋಣ. ಒಂದು ಐಡಿಯಾ ಬರುತ್ತೆ’ ಅವರಲ್ಲೊಬ್ಬ ಧೈರ್ಯವಂತ ನಾಯಕತ್ವ ವಹಿಸುತ್ತಾನೆ.

'ಏನೇ, ಎಷ್ಟೊಂದು ದುರುಗುಟ್ಕೊಂಡು ನೋಡ್ತಿದಾರೆ ಈ ಹುಡುಗ್ರು. ಸೀನಿಯರ್ಸೇ ಇರಬೇಕು ಅನ್ಸುತ್ತೆ. ಅಯ್ಯೋ ಈ ಕಾಲೇಜ್ ತುಂಬ ಬರೀ ಹುಡುಗ್ರೇ ಇದಾರೇನೋ? ಸದ್ಯ ಅದೇನೋ ರ‍್ಯಾಗಿಂಗ್ ಅಂತಾರಾಲ್ಲ, ಅದಿಲ್ಲದಿದ್ರೆ ಸಾಕು... ಭಯ ಅನ್ಸುತ್ತೆ ಕಣೇ...’ ಇನ್ನೊಂದಷ್ಟು ಬೆದರಿದ ಹರಿಣಿಗಳ ತಂಡ ಮೆಲ್ಲಮೆಲ್ಲನೆ ಮುಂದಡಿಯಿಡುತ್ತದೆ.

ಯಪ್ಪಾ ಎಷ್ಟೊಂದು ನೋಟೀಸ್ ಬೋರ್ಡುಗಳು ಈ ಕಾಲೇಜಿನಲ್ಲಿ! ಗೋಡೆ ತುಂಬಾ ಬರೀ ನೋಟೀಸ್ ಬೋರ್ಡುಗಳೇ ಇದ್ದಂಗಿವೆ! ಯಾವ ನೋಟೀಸ್ ಬೋರ್ಡಿನಲ್ಲಿ ಏನಿದೆಯೋ? ಮೂರಂತಸ್ತಿನ ಕಟ್ಟಡದಲ್ಲಿ ಎಷ್ಟು ಕ್ಲಾಸು ರೂಮುಗಳಿವೆಯೋ? ನಮ್ಮ ಕ್ಲಾಸು ಎಲ್ಲಿ ನಡೆಯುತ್ತೋ? ಮೇಲೆ ಹತ್ತಿದ ಮೇಲೆ ಕೆಳಗಿಳಿಯೋ ದಾರಿ ಕಾಣಿಸದಿದ್ದರೆ ಏನು ಗತಿ? ನೂರು ಮನಸ್ಸುಗಳಲ್ಲಿ ಮುನ್ನೂರು ಪ್ರಶ್ನೆಗಳು.

ಕಾಲೇಜಿನ ಕಾರಿಡಾರುಗಳ ತುದಿ ಬದಿಗಳಲ್ಲಿ ಅಯೋಮಯರಾಗಿ ನಿಂತು ಇನ್ನೆಲ್ಲಿಗೆ ಹೋಗುವುದೆಂದು ಅರ್ಥವಾಗದೆ ಕಳವಳವೇ ಜೀವ ತಳೆದು ಬಂದಂತೆ ನಿಂತ ಹುಡುಗ ಹುಡುಗಿಯರಿದ್ದಾರೆಂದರೆ ಅವರು ಹೊಚ್ಚಹೊಸಬರೆಂದೇ ಅರ್ಥ. ಅಯ್ಯೋ ಈ ಅನ್ಯಗ್ರಹದಲ್ಲಿ ನಮಗೆ ಸಹಾಯ ಮಾಡುವ ಮನುಷ್ಯ ಜೀವಿಗಳು ಯಾರಾದರೂ ಇದ್ದಾರೆಯೇ... ಹಣೆಯಲ್ಲಿ ಬೆವರ ಹನಿಗಳು ಸಾಲುಗಟ್ಟುತ್ತವೆ.

ಹ್ಞಾಂ! ಕಾರಿಡಾರಿನ ಆ ತುದಿಯಿಂದ ಯಾರೋ ಒಬ್ಬರು ಬಿರಬಿರನೆ ನಡೆದುಕೊಂಡು ಬರುತ್ತಿದ್ದಾರೆ. ಅವರೇ ಪ್ರಿನ್ಸಿಪಾಲರೋ ಏನೋ? ನಮ್ಮ ಹಳೇ ಕಾಲೇಜಿನ ಪ್ರಿನ್ಸಿಪಾಲರ ಥರ ಭಯಂಕರ ಸಿಟ್ಟಿನ ಜಮದಗ್ನಿ ಮಹಾಮುನಿಗಳೇ ಇವರೂ ಆಗಿದ್ದರೆ ಏನ್ಮಾಡೋದು? ಕೆಂಗಣ್ಣು ಬಿಡುತ್ತಾ ಇಲ್ಯಾಕ್ರೋ ನಿಂತಿದ್ದೀರಾ ಎಂದು ಗದರಿದರೆ ಹೋಗೋದು ಎಲ್ಲಿಗೆ? ಓಹ್ ಅವರು ಪ್ರಿನ್ಸಿಪಾಲರು ಅಲ್ಲ ಅನಿಸುತ್ತೆ. ಪ್ರಿನ್ಸಿಪಾಲರಾಗಿದ್ದರೆ ಒಂದಾದರೂ ಕೂದಲು ಬಿಳಿಯಾಗಿರೋದು, ಇವರ‍್ಯಾರೋ ಮೇಷ್ಟ್ರೇ ಇರಬೇಕು. ಅಲ್ಲಲ್ಲ, ಮೇಷ್ಟ್ರೇ ಅಂತ ಏನು ಗ್ಯಾರಂಟಿ? ಇನ್ನೂ ಹಾಗೆ ಮೀಸೆ ಮೊಳೆತಿದೆ ಅಷ್ಟೇ... ಸೀನಿಯರ್ಸ್ ಅಲ್ಲ ಅಂತ ಹೇಗೆ ಹೇಳೋದು? ವಿಶ್ ಮಾಡೋದೋ ಬೇಡ್ವೋ? ಒಂದು ವೇಳೆ ಸ್ಟೂಡೆಂಟೇ ಆಗಿದ್ದು ನಾವು ಗುಡ್ ಮಾರ್ನಿಂಗ್ ಸರ್ ಅಂತ ಭಯಭಕ್ತಿಯಿಂದ ಹೇಳಿದ್ರೆ ಆ ಪುಣ್ಯಾತ್ಮ ಘೊಳ್ಳಂತ ನಕ್ಕು ಮಾನ ಮರ್ಯಾದೆ ಕಳೀದೇ ಇರ್ತಾನಾ? ಹೊಸ ಹುಡುಗರ ಮುಖದ ತುಂಬಾ ಬರೀ ಪ್ರಶ್ನೆಗಳೇ.

ಅಂತೂ ಅವರಿವರಲ್ಲಿ ಕೇಳಿ ಮಾಹಿತಿ ಪಡೆದುಕೊಂಡು ಕ್ಲಾಸ್‌ರೂಂ ಹೊಕ್ಕು ಮಿಸುಕಾಡದಂತೆ ಕುಳಿತಿರುತ್ತವೆ ಆತಂಕದ ಕಣ್ಣುಗಳು. ಬೆಳಗಿನಿಂದ ಯಾವ ಮಿಸ್ಸೂ ಕಣ್ಣಿಗೆ ಬಿದ್ದಿಲ್ಲ ಇವತ್ತು; ಬರೀ ಮೇಷ್ಟ್ರುಗಳೇ ತುಂಬಿದ್ದಾರೇನೋ ಈ ಕಾಲೇಜಿನಲ್ಲಿ? ಎಂತೆಂತಹ ಮೇಷ್ಟ್ರುಗಳಿದ್ದಾರೋ ಏನೋ? ಕಾಲೇಜ್ ಅಂದ್ರೆ ಬರೀ ಇಂಗ್ಲೀಷಲ್ಲೇ ಮಾತಾಡ್ತಾರೆ ಅಂತ ಪಕ್ಕದ್ಮನೆ ಅಣ್ಣ ಹೇಳ್ತಿದ್ದ. ಇಲ್ಲೂ ಅದೇ ಕಥೆಯೋ ಏನೋ? ಇವರೆಲ್ಲಾ ಇಂಗ್ಲೀಷಲ್ಲೇ ಮಾತಾಡಕ್ಕೆ ಶುರು ಮಾಡಿದರೆ ನನ್ನ ಗತಿಯೇನು ಭಗವಂತಾ? ಆತಂಕದ ಹಿಂದಿನ ಪ್ರಶ್ನೆಗಳಿಗೆ ತುದಿಮೊದಲಿಲ್ಲ.

ಸಮಯಕ್ಕೆ ಸರಿಯಾಗಿ ಅಟೆಂಡೆನ್ಸ್ ಬುಕ್ ಹಿಡಕೊಂಡು ಒಳಹೊಕ್ಕು ಪೋಡಿಯಂ ಏರುತ್ತೇನೆ ನಾನು. ಎಲ್ಲರೂ ಮಿಕಮಿಕ ನೋಡುತ್ತಾ ಧಡಬಡನೆ ಎದ್ದುನಿಂತು ನಮಸ್ಕಾರ ಹೇಳಬೇಕೋ ಬೇಡವೋ ಅನುಮಾನದಿಂದ ನೋಡುತ್ತಾರೆ. ’ಗುಡ್ ಮಾರ್ನಿಂಗ್. ಹೌ ಆರ್ ಯೂ? ವೆಲ್ಕಂ ಟು ದಿ ನ್ಯೂ ಕಾಲೇಜ್...’ ನಾನೇ ಮಾತು ಆರಂಭಿಸುತ್ತೇನೆ. ಅವರ ಮುಖದಲ್ಲಿನ ಗಾಬರಿ ಇಮ್ಮಡಿಯಾಗುತ್ತದೆ. ’ಅಂದ್ಕೊಂಡಂಗೇ ಆಯ್ತು. ಯಾರೋ ಬ್ರಿಟಿಷ್ ಮಹಾಪ್ರಜೆ ಇರಬೇಕು. ಇಂಗೀಷ್ ಬಿಟ್ಟು ಇನ್ನೇನೂ ಬರಲ್ಲ ಅನ್ಸುತ್ತೆ’ ಎಂಬಹಾಗೆ ಹಿಂದಿನ ಸಾಲಿನ ಹುಡುಗಿ ಪಕ್ಕದವಳ ಕಿವಿಯಲ್ಲಿ ಅದೇನೋ ಉಸುರುತ್ತಾಳೆ.

'ಎಲ್ಲರೂ ಚೆನ್ನಾಗಿದ್ದೀರೇನ್ರೋ? ಕುಳಿತುಕೊಳ್ರೋ...’ ನಾನೇ ಮತ್ತೆ ನಕ್ಕು ಅಚ್ಚಗನ್ನಡದಲ್ಲಿ ಮಾತಾಡುತ್ತೇನೆ. ಗರಬಡಿದಂತೆ ನಿಂತ ತರಗತಿ ಮೊತ್ತಮೊದಲ ಬಾರಿಗೆ ಉಸ್ಸಪ್ಪ ಎಂದು ಸಾವರಿಸಿಕೊಂಡು ತಣ್ಣನೆ ಕುಳಿತುಕೊಳ್ಳುತ್ತದೆ. ಪರವಾಗಿಲ್ವೋ ಈ ಮನುಷ್ಯನಿಗೆ ಕನ್ನಡಾನೂ ಬರುತ್ತೆ- ಹಾಗಂತ ಅವರವರ ಮನಸ್ಸು ಮಾತಾಡಿಕೊಂಡದ್ದು ಮುಖದ ಮೇಲೆ ಢಾಳಾಗಿ ಕಾಣುತ್ತದೆ. ಅರವತ್ತರಲ್ಲಿ ಐವತ್ತೆಂಟು ಮಂದಿಯೂ ಹಳ್ಳಿಗಳ ಸಂದಿಗೊಂದಿಗಳಿಂದ ಎದ್ದು ಬರುವ ಮಣ್ಣಿನ ಮಕ್ಕಳು. ಅದ್ಯಾಕೋ ಇಂಗ್ಲಿಷ್ ಅಂದ ತಕ್ಷಣ ಅವರ ಅರ್ಧ ಉತ್ಸಾಹವೇ ಉಡುಗಿಬಿಡುತ್ತದೆ. ಅದರ ಹೆಸರು ಕೇಳಿದರೇ ಬಹುತೇಕರು ನಿದ್ದೆಯಲ್ಲೂ ಬೆಚ್ಚಿಬೀಳುವುದಿದೆ.

ಹತ್ತು ನಿಮಿಷ ಕಳೆಯುವ ಹೊತ್ತಿಗೆ ಸಂಪೂರ್ಣ ಬಿಳಿಚಿಕೊಂಡ ಹೊಸಮುಖವೊಂದು ಬಾಗಿಲಲ್ಲಿ ಪ್ರತ್ಯಕ್ಷವಾಗುತ್ತದೆ. ’ಸಾರಿ ಸರ್. ಲೇಟ್ ಆಗೋಯ್ತು. ಕ್ಲಾಸ್‌ರೂಂ ಎಲ್ಲಿ ಅಂತ ಗೊತ್ತಾಗ್ಲಿಲ್ಲ...’ ಮೇಷ್ಟ್ರಿಂದ ಏನು ಕಾದಿದೆಯೋ ಎಂಬ ಭಯಕ್ಕೆ ಆತ ಅಳುವುದೊಂದೇ ಬಾಕಿ. 'ಅಯ್ಯೋ ಬಾರಪ್ಪಾ... ನಾಳೆಯಿಂದ ಎಲ್ಲ ಸರಿಹೋಗತ್ತೆ...’ ಒಳಗೆ ಕರೆಯುತ್ತೇನೆ. ಎಲ್ಲ ಕಣ್ಣುಗಳೂ ತನ್ನನ್ನೇ ನೋಡುತ್ತಿವೆಯೇನೋ ಎಂಬ ಆತಂಕದಲ್ಲಿ ಆತನಿಗೆ ಸುತ್ತಲೆಲ್ಲ ಆಯೋಮಯ.

ನಿಧಾನವಾಗಿ ಒಬ್ಬೊಬ್ಬರ ಪರಿಚಯ ಕೇಳಿಕೊಂಡು ನಾಲ್ಕು ತಮಾಷೆಯ ಮಾತಾಡುತ್ತೇನೆ. ಒಂದು ಗಂಟೆ ಮುಗಿಯುವ ಮುನ್ನವೇ ಎಲ್ಲರೂ ಮೈಕೊಡವಿಕೊಂಡು ನಿರುಮ್ಮಳವಾಗಿ ಕುಳಿತಿರುತ್ತಾರೆ. ನೋಡ್ರಪಾ ಭಯಪಡುವಂಥದ್ದು ಏನೂ ಇಲ್ಲ. ಈ ಸಬ್ಜೆಕ್ಟ್ ಆಯ್ಕೆ ಮಾಡ್ಕೊಂಡು ತುಂಬ ಒಳ್ಳೆ ಕೆಲಸ ಮಾಡಿದೀರ. ಉಳಿದೋರಿಗಿಂತ ಒಂದು ಹೆಜ್ಜೆ ಮುಂದೆ ನಿಂತಿದೀರ ಅಂದ್ಕೊಳ್ಳಿ. ಕ್ಲಾಸುಗಳನ್ನ ಸರಿಯಾಗಿ ಅಟೆಂಡ್ ಮಾಡಿ ಮೇಷ್ಟ್ರು ಹೇಳೋ ಕೆಲಸಗಳನ್ನ ಸರಿಯಾಗಿ ಮಾಡ್ತಾ ಇದ್ರೆ ಕಲಿಯೋದು ಕಷ್ಟಾನೇ ಅಲ್ಲ. ಡಿಗ್ರಿ ಮುಗುದ್ಮೇಲೆ ಯಾರ‍್ಯಾರು ಏನೇನು ಆಗ್ತೀರೋ ನನಗೊತ್ತಿಲ್ಲ; ಬದುಕಕ್ಕೆ ಬೇಕಾಗಿರೋದು ಧೈರ್ಯ, ಆತ್ಮವಿಶ್ವಾಸ ಮತ್ತು ಶ್ರದ್ಧೆ. ಅದನ್ನ ಈ ಕ್ಲಾಸು ನಿಮಗೆ ಖಂಡಿತ ಕೊಡುತ್ತೆ. ನಿಮ್ಮ ಜತೆ ನಾನಿದೀನಿ - ಅವರ ಕಣ್ಣಲ್ಲಿ ಕಣ್ಣಿಟ್ಟು ದೃಢವಾಗಿ ಮಾತನಾಡಿ ಮೊದಲ ತರಗತಿ ಮುಗಿಸುತ್ತೇನೆ. ಆಗ ಅವರ ಮುಖದಲ್ಲಿ ಮೂಡುವ ಹೊಸ ಹೊಳಪು ಇದೆಯಲ್ಲ, ಅದಕ್ಕಂತೂ ಬೆಲೆಕಟ್ಟಲಾಗದು.

ಶುಕ್ರವಾರ, ಜೂನ್ 2, 2017

Effects of Facebook on the political ideology of the youth

(An article published in 'Media Mimamsa' (January-March 2017; ISSN 2229-5593), refereed research journal, published by Makhanlal Chaturvedi National University of Journalism & Communication, Bhopal)

Padmanabha K. V., Assistant Professor, Department of Journalism, University College of Arts, B. H. Road, Tumkur-572103. E-mail: sibanthipadmanabha@gmail.com

Dr. Sathish Kumar, Assistant Professor, Department of Journalism and Mass Communication, Kuvempu University, Jnana Sahyadri, Shankaraghatta-577451. E-mail: sathishandinje@gmail.com

ABSTRACT
Social media plays a vital role in fostering democratic deliberations. Several studies have revealed that there are significant positive relationships between the use of digital media and political participation. Facebook is, nowadays, one of the widely used social media platforms to discuss news about government and politics. It allows users to share their political beliefs, support specific candidates, and interact with others on political issues. The present study is an attempt to understand the relationship between Facebook and political ideologies among the youth. The study based on an online survey reveals that Facebook can be a platform for political discussions but it does not have much impact on the political ideology of the youth.
Keywords: Social media, political communication, political knowledge, political participation, political ideology, Facebook

Introduction:
Social media plays a vital role in fostering democratic deliberations. Online tools such as blogging, podcasting, political websites with mechanisms for online feedback and participation, social networking, and online video sharing play a critical role in the political communication process (Kaid & Holtz-Bacha, 2008). Research has indicated that levels of political knowledge affect the acceptance of democratic principles, attitude toward specific issues and political participation (Galston, 2001). According to Pew Research Centre, the advent of social media has opened up new ways for people with similar interests to find, share and talk about news including news about politics with friends and colleagues. Several studies have revealed that an increased exposure and attention to online news is positively related to political knowledge, and there are significant positive relationships between the use of digital media and political participation (as cited in Dimitrova et al., 2011).

Social media has a great role to play in a democratic country like India. It is interesting to note that one third of India’s population is comprised of youth in the age group of 15-34 years, and it is expected to be the world’s youngest country by 2020 (Shivakumar, G., 2013). India has been recording a fast growth in Internet penetration too. In 2010, only 7.5% of Indian population had access to Internet, and in 2016, it has leaped to 34.8% (internetlivestats.com). According to a report by Internet and Mobile Association of India, 66% of Internet users in urban India regularly access social media (livemint.com), and at present there are about 21.5 crore social media users in the country (statista.com). Politicians and political parties in India have been making the best use of social media to reach out the voters during elections in the recent years.

Literature review:
Tolbert & McNeal (2003) found out that Internet may enhance voter information about candidates and elections, and in turn stimulate increased participation. Gil de Zúñiga et.al. (2012) found that informational use of social networking sites exerted a significant and positive impact on individuals' activities aimed at engaging in civic and political action. Another study (McClurg, 2003) has revealed that interaction in social networks has a strong influence on the propensity to participate in politics. A study of blogging by Gil de Zúñiga et al (2010) strongly suggest that blog readers are involved in a range of participatory activities, both online and offline, and that these two spheres are highly complementary and mutually supportive.

Cogburn & Espinoza-Vasquez (2011) examined the impact of internet and social media on political participation and civic engagement in the 2008 Obama campaign and found that the campaign created a nationwide virtual organization that motivated 3.1 million individual contributors. A study by Gil de Zúñiga et al. (2014) indicated that social media news use has direct effects on offline political participation and indirect effects on offline and online political participation mediated via political expression. Another study by Yamamoto et al. (2015) showed that online political expression enhanced the effects of political mobile apps, traditional offline and online media, and social media on political participation.

Sorensen (2016) examined the presence on Facebook and Twitter of Members of the Danish National Parliament and revealed that Danish MPs have a relatively high degree of engagement in political conversations with citizens on Facebook. Focusing on usage of Facebook in Hong Kong, Tang & Lee (2013) examined how time spent on FB, exposure to shared political information, network size, network structural heterogeneity, and direct connection with public political actors relate to young people’s online and offline political participation.

Chu (2011) examined the potential link of Facebook group participation with viral advertising responses. The study suggested that college-aged Facebook group members engage in higher levels of self-disclosure and maintain more favorable attitudes toward social media and advertising in general than do non-group members.

A few studies have been conducted in India too with regard to the use of social media by politicians and political parties during elections. However, there have been no specific efforts to understand whether social media like Facebook have any impact on the political ideology of the voters, especially the youth. The present study attempts to explore how young Facebook users’ react to the political posts and what kind of influence Facebook has on the political ideology of its users.

Method:
The primary data for the present study was collected through an online survey that lasted for two weeks. A total of 130 Facebook users, basically natives of Karnataka, in an age group of 18-35 years, were selected via a convenience sampling, who were distributed with a structured questionnaire using Google Forms. The respondents were invited to fill in the questionnaire through e-mails and Facebook messages. A total of 92 people responded to the request with a response rate of 71%.

The questionnaire gauged the demographic characteristics such as sex, age, education, employment and income of the respondents in the first part. In the second part, it collected information on their Facebook usage, like since when they had a Facebook account, hours spent on Facebook, number of ‘friends’ and groups, and reasons why they use Facebook. A question was also asked which political ideology they wanted to be identified with.

The third part of the questionnaire dealt with Facebook and politics. Respondents were asked to rate on a 5-point Likert-type scale (1= strongly agree, 5= strongly disagree) how they treated Facebook as a forum for political discussions. Another set of questions were asked to measure the connection between the respondents’ interest in political issues and their Facebook behaviour. They were also asked to respond to a set of eight items on 5-point scale (1= never, 5= very often) in order to assess their political activities on Facebook.

The respondents were also asked some direct questions with an intention to measure the impact of Facebook on their political ideologies such as, ‘Has your Facebook experience made you think that the political ideology you have is the correct one?’ or ‘not the correct one?’, ‘Have you started admiring a specific political ideology in course of your Facebook experience?’, ‘Have you changed your views on a politician or political party after going through Facebook posts?’, etc. The respondents were also asked which social media other than Facebook and which mass media influenced their political ideology.

Results:
Of the 92 respondents, 59 were males and 33 were females. Majority of them (66.3%) were post-graduates, while 12.8% had an under graduate degree, and 18.6% had an M. Phil. or PhD. Most of the respondents (71.8%) were employed in private sector, while 15.3% were in government sector, 8.2% were self-employed.

Majority of the respondents (77.9%) said that they had Facebook accounts for more than five years, while 16.3% said they created their account 3-4 years ago. As many as 37.2% respondents said they spend 1-5 hours on FB in a week, while 30.2% spent less than one hour and 24.4% spent 6-10 hours. Majority of the respondents (29.1%) had FB friends in between 1001-2000 and FB groups in between 1-10 (66.7%).

Most of respondents (71.4%) use FB for keeping in touch with friends, 57.1% for getting news updates, 47.6% for expressing their views on current issues, 29.8% for getting feedback on the contents they post, 22.6% for making news contacts, 21.4% for passing time and having fun, and 9.5% for promoting business. For a question, which political ideology they wanted to be identified with, 16.3% answered ‘rightist’, 2.3% leftist, 18.6% centrist, while 46.5% said they did not want to be identified with any political ideology, while 16.3% said they did not have any political ideology.
As shown in Table-1, most of the respondents considered FB an appropriate forum to discuss about politics. Majority of them felt that political leaders having accounts/pages on FB is something good.

Statements

Strongly Agree

Agree

Undecided

Disagree

Strongly Disagree

FB is an appropriate place for people to express political views
25.8%
36%
13.5%
16.9%
7.9%
FB can be used to inform and educate people regarding politics
27.3%
40.9%
13.6%
14.8%
3.4%
It is good that political leaders have accounts/pages on FB
47.7%
40.9%
3.4%
6.8%
1.1%
FB can be used to convince people on certain political issues
20.5%
48.9%
17%
11.4%
2.3%
Table-1: Facebook as a forum to discuss politics

However, when asked about their individual behavior in Facebook with regard to political issues, the majority of the respondents were negative in their answers. This is clear in Table-2.

How many times did you do the following things on Facebook in the past one year
Never
Rarely
Sometime
Often
Very Often
Posting a status update about a political issue
36.5%
31.8%
21.2%
7.1%
3.5%
Commenting on a friend’s post on politics
29.1%
30.2%
25.5%
11.6%
3.5%
Posting or sharing a photo or video or link about politics
41.7%
26.2%
23.8%
6%
2.4%
Writing or sharing a note about politics on my network
45.9%
27.1%
20%
3.5%
3.5%
Joining or leaving a group about politics
57.6%
24.7%
10.6%
4.7%
2.4%
Clicking ‘going’ for a political event
69.5%
24.4%
3.7%
1.2%
1.2%
Discussing a political issue on a message
48.2%
28.2%
20%
2.4%
1.2%
Clicking ‘like’ on a political party or politician’s fan page
52.9%
24.7%
14.1%
4.7%
3.5%
Table-2: FB users’ individual behavior in Facebook with regard to political issues

In case of individual reactions to Facebook posts (Table 3), respondents showed varied attitudes.

What do you do with a post/link/photo/ video related to political issues on Facebook?
Never
Rarely
Sometime
Often
Very Often
Read
8.2%
20%
36.3%
24.7%
10.6%
Like
20.7%
35.4%
39%
1.2%
3.7%
Comment
30.1%
43.4%
20.5%
3.6%
2.4%
Share on my wall
56.1%
22%
17.1%
3.7%
1.2%
Share on a message privately
61.4%
22.9%
15.7%
0%
0%
Tag friends
81.9%
12%
4.8%
0%
1.2%
Table-3: FB users’ reaction to political posts

The responses for the questions what do they do with the political posts which they don’t like, or what they do with a friend whose political posts irritate them often, also did not make much difference (Table-4 and Table-5).

What do you do with a post/link/photo/ video related to political issue or party, which you don’t like?
Never
Rarely
Sometime
Often
Very Often
Ignore
14%
15.1%
33.7%
17.4%
19.8%
Comment
57.1%
27.4%
10.7%
3.6%
1.2%
Share on my wall
79.8%
7.1%
11.9%
0%
1.2%
Share on a message privately
79.8%
14.3%
4.8%
0%
1.2%
Tag friends
88.1%
9.5%
0%
0%
2.4%
Table-4: FB users’ reaction to political posts which they don’t like

What do you do with a friend whose political posts irritate you often?
Never
Rarely
Sometime
Often
Very Often
Ignore
16.5%
7.1%
22.4%
18.8%
35.3%
Block
53.1%
14.8%
18.5%
6.2%
7.4%
Unfriend
50%
21.3%
16.3%
6.3%
6.3%
Unfollow
42.5%
15%
16.3%
10%
16.3%
Hide
46.9%
17.3%
16%
9.9%
9.9%
Table-5: Reaction to political posts that irritate users often

Table-6 summarizes the responses for some direct questions which were intended to understand whether FB had any impact on the political ideology of the respondents.

Questions
Yes
No
Don’t know
Has your Facebook experience made you think that the political ideology you have is the correct one?
4.8%
59.5%
35.7%
Have you started admiring a specific political ideology in course of your Facebook experience?
9.5%
75%
15.5%
Have you changed your views on a politician or political party after going through Facebook posts?
17.6%
77.6%
4.7%
Have you changed your option of candidate in any election after going through Facebook posts?
10.6%
78.8%
10.6%
Table-6: Impact of FB on political ideology of respondents

Responding to two other questions, the respondents said Twitter (41%) and YouTube (20.5%) were among the other social media that influenced their political ideology, while 45.8% marked the option ‘none of the above’. According to them, newspaper (79.1%) and television (61.6%) were the mass media that influenced their political thoughts.

Discussion:
The main objective of the present study was to explore how Facebook users’ react to the political posts and what kind of impact Facebook has on the political ideology its users. A large majority of the respondents made it clear that Facebook did not have any impact on their political ideology. As shown in Table-6, 59.5% of respondents said their FB experience did not even reassure them that what ideology they had was the correct one (35.7% replied ‘don’t know).

75% of the respondents said they did not start admiring any specific political ideology in course of their FB experience. 77.6% of the respondents said the political posts on the FB did not made them change their views on a politician or a political party. Finally, a high majority of respondents (78.8%) said they did not change their option of a candidate in any election after going through FB posts (Table-6).

As per the results, many people agree that FB can be an appropriate place to discuss about politics, but when it comes to their personal reaction to political issues, they maintain a distance. They were more positive on ‘reading’ and ‘liking’ certain posts/links/photos/videos related to politics, but negative on commenting, sharing and tagging friends (Tables 2, 3 & 4).

For instance, 36.3% respondents said they ‘sometime’ read, and 24.7% said they ‘often’ read; but 56.1% said they ‘never’ share such posts on their wall, 61.4% said they ‘never’ share them on messages privately, and 81.9% of respondents said they ‘never’ tag friends to such posts. Even most of them were never for blocking (53.1%), unfriending (59%), unfollowing (42.5%) or hiding (46.9%) a friend whose political posts irritated them. However, majority of the respondents said they ignored such friends (Table-5).

An interesting finding that can be noted here is that almost half of the respondents (46.5%) replied that they did not want to be identified with any political ideology. And a large number of respondents found FB a platform for keeping in touch with friends (71.4%), for getting news updates (57.1%) and for expressing views on current issues (47.6%).

Conclusion:
Various researches across the world have shown that social media platforms such as Facebook and Twitter play a major role in the 21st century politics. They revealed that the social media have a vital role in improving political knowledge, political expression, and political participation of the people. The present study reassures the phenomenon but emphasizes that Facebook does not have much to do with the political ideologies of the youth.  As the response to the last question indicates, people are highly influenced by newspaper and television with regard to politics but not by social media in the Indian context. However, it should be noted that the study has its own limitations, and further research should be conducted in a larger scale to confirm the results. The authors feel that a study during General Elections will be more helpful in assessing the social media impact on the political ideology of youth in a more precise manner.

References:
Chu, S. (2011). Viral advertising in social media: Participation in Facebook groups and responses among college-aged users. Journal of Interactive Advertising, 12(1), 30-43.
Cogburn, D. L. & Espinoza-Vasquez, F. K. (2011). From networked nominee to networked nation: Examining the impact of Web 2.0 and social media on political participation and civic engagement in the 2008 Obama campaign. Journal of Political Marketing, 10(1-2), 189-213.
Dimitrova, D. V., Shehata, A., Strömbäck, J. & Nord, L. W. (2011). The effects of digital media on political knowledge and participation in election campaigns: Evidence from panel data. Communication Research, 20(10), 1-24.
Galston, W. A. (2001). Political knowledge, political engagement, and civic education. Annual Review of Political Science, 4:217–34.
Gil de Zúñiga, H., Veenstra, A., Vraga, A. E. & Shah, D. (2010). Digital democracy: Reimagining pathways to political participation. Journal of Information Technology & Politics, 7(1), 36-51.
Gil de Zúñiga, H., Jung, N. & Valenzuela, S. (2012). Social media use for news and individuals' social capital, civic engagement and political participation. Journal of Computer-Mediated Communication, 17(3), 319–336.
Gil de Zúñiga, H., Molyneux, L. and Zheng, P. (2014), Social media, political expression, and political participation: Panel analysis of lagged and concurrent relationships. Journal of Communication, 64: 612–634.
Kaid, L. L., & Holtz-Bacha, C. (2008). Encyclopedia of political communication. London, UK: SAGE.
McClurg, S. D. (2003). Social networks and political participation: The role of social interaction in explaining political participation. Political Research Quarterly, 56(4), 449-464.
Shivakumar, G. (2013, April 17). India is set to become the youngest country by 2020. The Hindu. Retrieved from http://www.thehindu.com/news/national/india-is-set-to-become-the-youngest-country-by-2020/article4624347.ece
Sorensen, M. P. (2016). Political conversations on Facebook – the participation of politicians and citizens. Media Culture Society, 38(5), 664-685.
Tang, G. & Lee, F. L. F. (2013). Facebook use and political participation: The impact of exposure to shared political information, connections with public political actors, and network structural heterogeneity. Social Science Computer Review, DOI: 10.1177/0894439313490625.
Tolbert, C. J. & McNeal, R. S. (2003). Unraveling the effects of the Internet on political participation. Political Research Quarterly, 56 (2), 175-185.
Yamamoto, M., Kushin, M. J. & Dalisay, F. (2015). Social media and mobiles as political mobilization forces for young adults: Examining the moderating role of online political expression in political participation. New Media & Society, 17(6), 880-89.
-------------------------------------------------------------------------------------------------------------------
To cite this article:
Padmanabha, K. V. & Sathish Kumar. (2017). Effects of Facebook on the political ideology of the youth. Media Mimamsa, 10(3), 31-36.
-------------------------------------------------------------------------------------------------------------------