ಗುರುವಾರ, ನವೆಂಬರ್ 23, 2017

ಅಟೆಂಡೆನ್ಸ್ ಪ್ಲೀಸ್!

14-11-2017ರ ಉದಯವಾಣಿ 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ

ನೋಟೀಸ್ ಬೋರ್ಡ್ ಕೆಳಗೆ ಗಿಜಿಗುಡುವ ಹುಡುಗರು, ಅವರೊಳಗೆಯೇ ಗುಸುಗುಸು ಪಿಸಪಿಸ, ಕಳೆಗುಂದಿ ವಾಪಸಾಗುವ ಮುಖಗಳು, ವೆರಾಂಡದ ತುದಿಬದಿಗಳಲ್ಲಿ ಬಿಸಿಬಿಸಿ ಚರ್ಚೆ, ಪ್ರಿನ್ಸಿಪಾಲ್ ಕೊಠಡಿಯೆದುರು ಕಣ್ಣೀರ ಧಾರೆ... ಕಾಲೇಜು ಆವರಣದಲ್ಲಿ ಇಂತಹದೆಲ್ಲ ಲಕ್ಷಣಗಳು ಕಂಡುಬರುತ್ತಿವೆಯೆಂದಾದರೆ ಅಟೆಂಡೆನ್ಸ್ ಶಾರ್ಟೇಜೆಂಬ ಜ್ವರ ಕಾಲಿಟ್ಟಿದೆಯೆಂದೇ ಅರ್ಥ. ಇದು ಎರಡು ಮೂರು ದಿನಗಳಲ್ಲಿ ವಾಸಿಯಾಗುವ ಸಾಮಾನ್ಯ ಜ್ವರವಂತೂ ಖಂಡಿತ ಅಲ್ಲ. ಕೆಲವೊಮ್ಮೆ ವಾರಗಟ್ಟಲೆ ಮುಂದುವರಿದು ಆಸ್ಪತ್ರೆ, ಅಲ್ಲಲ್ಲ, ನ್ಯಾಯಾಲಯದಲ್ಲಿ ಭರ್ಜರಿ ಟ್ರೀಟ್‌ಮೆಂಟ್ ಆದ ಬಳಿಕ ವಾಸಿಯಾಗುವುದೂ ಇದೆ.

ಪರೀಕ್ಷಾ ಜ್ವರದ ಬಗ್ಗೆ ಕೇಳಿದ್ದೇವೆ; ಇದು ಅದಕ್ಕೂ ಕೊಂಚ ಮೊದಲು ಕಾಣಿಸಿಕೊಳ್ಳುವ ಖಾಯಂ ಅತಿಥಿ. ಸೆಮಿಸ್ಟರ್ ಕೊನೆಗೊಳ್ಳುತ್ತಾ ಇದೆಯೆಂದರೆ ಈ ಅತಿಥಿ ತನ್ನ ಭೇಟಿಯನ್ನು ತಪ್ಪಿಸಿಕೊಳ್ಳುವುದೇ ಇಲ್ಲ. ಎಸ್‌ಎಸ್‌ಎಲ್‌ಸಿ-ಪಿಯುಸಿಯವರಿಗೆ ವರ್ಷಕ್ಕೊಮ್ಮೆ ಇದರ ಚಿಂತೆಯಾದರೆ, ಪದವಿ-ಇಂಜಿನಿಯರಿಂಗ್-ಸ್ನಾತಕೋತ್ತರ ಪದವಿ ಓದುವವರಿಗೆ ವರ್ಷಕ್ಕೆ ಎರಡು ಬಾರಿ ಇದರೊಂದಿಗೆ ಮುಖಾಮುಖಿಯಾಗುವುದು ಅನಿವಾರ್ಯ. ಅಂದಹಾಗೆ ಈ ಜ್ವರದ ಕಾವು ತಗಲುವುದು ಕೇವಲ ಹುಡುಗರಿಗೆ ಮಾತ್ರ ಅಲ್ಲ. ಅವರ ಶಾಲಾ-ಕಾಲೇಜುಗಳ ಪ್ರಿನ್ಸಿಪಾಲ್‌ಗಳೂ ಅನೇಕ ಬಾರಿ ಉರಿ ತಾಳಲಾಗದೆ ನೆತ್ತಿಯ ಮೇಲೆ ಐಸ್ ಹೊತ್ತು ಕೂರುವುದಿದೆ.

ಹಾಲ್ ಟಿಕೇಟಿಗೆ ಆಗ್ರಹಿಸಿ ಹಾಜರಾತಿ ಕೊರತೆಯುಳ್ಳ ವಿದ್ಯಾರ್ಥಿಗಳಿಂದ ಪ್ರಿನ್ಸಿಪಾಲರ ಮೇಲೆ ಹಲ್ಲೆ, ಕಾಲೇಜು ಮೈದಾನದಲ್ಲಿ ಪೋಷಕರಿಂದ ಪ್ರತಿಭಟನೆ, ಜನಪ್ರತಿನಿಧಿಗಳ ಮಧ್ಯಪ್ರವೇಶ ಇತ್ಯಾದಿ ಸುದ್ದಿಗಳು ವರ್ಷಕ್ಕೆ ಒಂದೆರಡು ಬಾರಿಯಾದರೂ ಪತ್ರಿಕೆಗಳಲ್ಲಿ ಕಾಣಿಸಿಕೊಳ್ಳುವುದಿದೆ. ಶೈಕ್ಷಣಿಕ ನಿಯಮಗಳ ಪ್ರಕಾರ ಶೇ. ೭೫ರಷ್ಟಾದರೂ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅವಕಾಶವಿಲ್ಲ. ಅವರು ಮುಂದಿನ ವರ್ಷ ಮತ್ತೆ ನಿಯಮಿತವಾಗಿ ತರಗತಿಗಳಿಗೆ ಹಾಜರಾಗಿ ಪರೀಕ್ಷೆ ಬರೆಯುವ ಅರ್ಹತೆ ಪಡೆದುಕೊಳ್ಳಬೇಕು. ತಮಗಿಷ್ಟ ಬಂದಾಗ ಕ್ಲಾಸ್‌ಗೆ ವಿಸಿಟ್ ಕೊಟ್ಟು ಉಳಿದ ಸಮಯಗಳಲ್ಲಿ ಬೀದಿ ಸುತ್ತುವ, ಪಾರ್ಕ್-ಹೊಟೇಲು-ಸಿನಿಮಾ ಮಂದಿರಗಳಲ್ಲಿ ಕಾಲಯಾಪನೆ ಮಾಡುವ ವಿದ್ಯಾರ್ಥಿಗಳಲ್ಲಿ ಶಿಸ್ತು ಮೂಡಿಸುವುದೇ ಈ ನಿಯಮದ ಉದ್ದೇಶ.

ಈ ಹುಡುಗರು ಎಷ್ಟೇ ಬ್ಯುಸಿಯಾಗಿದ್ದರೂ ಅಟೆಂಡೆನ್ಸ್ ಶಾರ್ಟೇಜ್ ಪಟ್ಟಿ ನೋಟೀಸ್ ಬೋರ್ಡಿಗೆ ಬೀಳುವ ಕ್ಷಣಕ್ಕೆ ಮಾತ್ರ ಸಂಪೂರ್ಣ ಬಿಡುವು ಮಾಡಿಕೊಂಡು ಕಾಲೇಜಿಗೆ ಬಂದೇ ಬರುವುದು ನಿಶ್ಚಿತ. ನಿನ್ನ ಹೆಸರು ನೋಟೀಸ್ ಬೋರ್ಡಲ್ಲಿದೆ ಎಂದು ಅವರಿಗೆ ಮಾಹಿತಿ ನೀಡಿ ಸಹಾಯ ಮಾಡುವ ಸ್ನೇಹಿತರೂ ಕಾಲೇಜಲ್ಲಿರುತ್ತಾರೆ. ಅಲ್ಲಿಂದ ಚಳುವಳಿ ಆರಂಭ.

ಮೊದಲಿಗೆ ಯಥಾಪ್ರಕಾರ ಮಂದಗಾಮಿ ನೀತಿ ಅನುಸರಿಸುವ ಈ ಹುಡುಗರು ಮುಖ ಬಾಡಿಸಿಕೊಂಡು, ಅಗತ್ಯವಿದ್ದರೆ ಕಣ್ಣೀರೂ ಹಾಕಿಕೊಂಡು ಪ್ರಿನ್ಸಿಪಾಲರ ಎದುರು ಕ್ಯೂ ನಿಂತು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಿ ಎಂದು ಅಲವತ್ತುಕೊಳ್ಳುವುದು ವಾಡಿಕೆ. ತರಗತಿಗಳಿಗೆ ಹಾಜರಾಗದಿರಲು ಅವರಿಗಿದ್ದ ಅನಿವಾರ್ಯ ಕಾರಣಗಳ ಪಟ್ಟಿ ಸೆಮಿಸ್ಟರಿಗಿಂತಲೂ ದೀರ್ಘವಾಗಿರುವುದಿದೆ. ನಿಮ್ಮ ಮಗ ಅಂತ ಅಂದುಕೊಳ್ಳಿ, ಇದೊಂದು ಬಾರಿ ಅವಕಾಶ ಮಾಡಿಕೊಡಿ, ಇನ್ನೆಂದೂ ಹೀಗಾಗದಂತೆ ನೋಡ್ಕೋತೀವಿ ಎನ್ನುತ್ತಲೇ ಪ್ರಿನ್ಸಿಪಾಲರ ಪಾದಕ್ಕೆ ಸಾಷ್ಟಾಂಗ ಪ್ರಣಾಮ ಮಾಡುವ ಛಾನ್ಸನ್ನೂ ಇವರು ತಪ್ಪಿಸಿಕೊಳ್ಳುವುದಿಲ್ಲ.

ಈ ವಿಧಾನ ನಡೆಯದೇ ಹೋದರೆ ಮುಂದಿನದ್ದು ತೀವ್ರಗಾಮಿ ನೀತಿ. ಪ್ರಿನ್ಸಿಪಾಲರೊಂದಿಗೆ ಚರ್ಚೆ-ವಾಗ್ವಾದ, ಉದ್ದೇಶಪೂರ್ವಕವಾಗಿ ನಮಗೆ ಹಾಜರಾತಿ ಕೊರತೆ ತೋರಿಸಿದ್ದೀರಿ, ನಮ್ಮ ಭವಿಷ್ಯಕ್ಕೆ ಕಲ್ಲು ಹಾಕುತ್ತಿದ್ದೀರಿ ಇತ್ಯಾದಿ ರೋಷಾವೇಷದ ಮಾತು; ಕೊನೆಗೆ ಧಿಕ್ಕಾರಾ! ಧಿಕ್ಕಾರ!! ಕಾಲೇಜಿಗೆ ಮಗನನ್ನೋ ಮಗಳನ್ನೋ ಸೇರಿಸಿದ ಮೇಲೆ ಒಮ್ಮೆಯೂ ಕ್ಯಾಂಪಸ್‌ಗೆ ಬಂದು ತಮ್ಮ ಮಗ/ಮಗಳು ಹೇಗೆ ಓದುತ್ತಿದ್ದಾರೆ ಎಂದು ಕೇಳದ ಪೋಷಕರೂ ಇಷ್ಟು ಹೊತ್ತಿಗೆ ಕಾಲೇಜಿಗೆ ಓಡೋಡಿ ಬಂದು ಪ್ರತಿಭಟನೆಗೆ ಕೂರುವುದಿದೆ.

ಈ ವಿಧಾನವೂ ನಡೆಯದೇ ಹೋದರೆ ಕೊನೆಗೆ ಕೋರ್ಟ್ ಇದ್ದೇ ಇದೆ. ಪರೀಕ್ಷೆ ಬರೆಯಲು ಕಾಲೇಜು ಅವಕಾಶ ಕೊಡುತ್ತಿಲ್ಲ ಎಂದು ಪ್ರತೀವರ್ಷ ನ್ಯಾಯಾಲಯಕ್ಕೆ ಹೋಗುವವರು ಸಾಕಷ್ಟು ಮಂದಿ. ವಿದ್ಯಾರ್ಥಿಯ ಕಡೆಯಿಂದ ಪ್ರಾಮಾಣಿಕ ಕಾರಣಗಳಿದ್ದಾಗ ಪರೀಕ್ಷೆ ಬರೆಯಲು ಅವಕಾಶ ನೀಡಿ ಎಂದು ಕೆಲವೊಮ್ಮೆ ಕೋರ್ಟ್ ಕಾಲೇಜಿಗೆ ಆದೇಶಿಸುವುದೂ ಇದೆ. ಆದರೆ ಅತ್ತ ಕ್ಲಾಸಿಗೂ ಹೋಗದೆ ಇತ್ತ ನ್ಯಾಯಾಲಯದ ಅಮೂಲ್ಯ ಸಮಯವನ್ನೂ ಹಾಳು ಮಾಡುತ್ತಿದ್ದೀರಿ ಎಂದು ಛೀಮಾರಿ, ದಂಡ ಹಾಕಿಸಿಕೊಂಡು ಬರುವವರೇ ಹೆಚ್ಚು.

ಈ ತಗಾದೆಗಳ ತಂಟೆಯೇ ಬೇಡ ಎಂದು ಅನೇಕ ಕಾಲೇಜುಗಳು ಅಟೆಂಡೆನ್ಸ್ ಶಾರ್ಟೇಜ್ ಉಸಾಬರಿಗೇ ಹೋಗುವುದಿಲ್ಲ. ಹಳ್ಳಿ ಹುಡುಗರು ಕಾಲೇಜುಗಳ ಮುಖ ನೋಡುವುದೇ ಅಪರೂಪವಾಗಿರುವಾಗ ದಾಖಲಾದ ಬೆರಳೆಣಿಕೆಯ ಮಂದಿಗೆ ಹಾಜರಾತಿ ಕೊರತೆಯೆಂದು ಪರೀಕ್ಷೆ ನಿರಾಕರಿಸಿದರೆ ಮುಂದಿನ ವರ್ಷ ಕಾಲೇಜನ್ನೇ ಮುಚ್ಚುವ ಪರಿಸ್ಥಿತಿ ಬಂದರೂ ಅಚ್ಚರಿಯಿಲ್ಲ. ಇನ್ನು ಕೆಲವು ಖಾಸಗಿ ಕಾಲೇಜುಗಳು ಅಟೆಂಡೆನ್ಸ್ ಹೆಸರಲ್ಲಿ ಲಕ್ಷಾಂತರ ರೂಪಾಯಿ ಆದಾಯ ಮಾಡಿಕೊಳ್ಳುವುದೂ ಇದೆ. ಒಂದು ಸಬ್ಜೆಕ್ಟ್‌ನಲ್ಲಿ ಹಾಜರಾತಿ ಕೊರತೆಗೆ ಇಷ್ಟು ಸಾವಿರ ದಂಡ ಎಂದು ನಿಗದಿಪಡಿಸುವ ಕಾಲೇಜುಗಳಿಗೆ ಹಾಜರಾತಿ ಕೊರತೆಯಿರುವ ವಿದ್ಯಾರ್ಥಿಗಳು ಹೆಚ್ಚಾದಷ್ಟೂ ಅನುಕೂಲವೇ! ಅಪ್ಪನ ಬಳಿ ದುಡ್ಡಿದೆ, ಶಾರ್ಟೇಜ್ ಇದ್ದರೆ ದುಡ್ಡು ತಂದು ಬಿಸಾಕಿದರಾಯಿತು ಎಂಬ ಭಂಡ ಹುಡುಗರೇ ಇಂತಹ ಕಾಲೇಜುಗಳ ಆಜೀವ ಚಂದಾದಾರರು.

ಇನ್ನೊಂದು ಮುಖ
ಹಾಜರಾತಿ ಕೊರತೆ ಎದುರಿಸುವ ಎಲ್ಲ ವಿದ್ಯಾರ್ಥಿಗಳೂ ಕ್ಲಾಸ್ ಬಂಕ್ ಮಾಡಿ ಉಡಾಫೆ ಮಾತನಾಡುವ ಉಂಡಾಡಿಗುಂಡರಲ್ಲ. ತಾವೇ ದುಡಿದು ಕುಟುಂಬವನ್ನು ಸಲಹಬೇಕಾದ ಕಡುಬಡತನದ ಹಿನ್ನೆಲೆಯ ಹುಡುಗರೂ ಇವರ ನಡುವೆ ಇದ್ದಾರೆ. ಒಂದು ಕಡೆ ಓದುವ ಆಸೆ, ಇನ್ನೊಂದು ಕಡೆ ದುಡಿಯುವ ಅನಿವಾರ್ಯತೆ. ಈ ಮಧ್ಯೆ ಸಿಕ್ಕಿಹಾಕಿಕೊಂಡು ಒದ್ದಾಡುವ ಮಕ್ಕಳೂ ಇಲ್ಲದಿಲ್ಲ. ಇನ್ನು ಕೆಲವರು ಅನಾರೋಗ್ಯ ಇತ್ಯಾದಿ ಗಂಭೀರ ಸಮಸ್ಯೆಗಳಿಂದ ಹಾಜರಾತಿ ಕೊರತೆ ಎದುರಿಸುವುದೂ ಇದೆ. ಇಂತಹವರನ್ನೆಲ್ಲ ಕಾಲೇಜುಗಳು ಮಾನವೀಯತೆಯ ನೆಲೆಯಿಂದ ನೋಡಬೇಕು ಎಂಬುದು ಒಪ್ಪಬೇಕಾದ ಮಾತು. ಆದರೆ ಈ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವವರೇ ಹೆಚ್ಚು. ನಿಜವಾಗಿಯೂ ಕಷ್ಟದ ಹಿನ್ನೆಲೆಯಿಂದ ಬರುವ ವಿದ್ಯಾರ್ಥಿಗಳು ಎಲ್ಲ ಸಮಸ್ಯೆಗಳನ್ನೂ ಸಂಭಾಳಿಸಿಕೊಂಡು ಶಿಸ್ತಾಗಿ ತರಗತಿಗಳಿಗೆ ಬಂದು ಉನ್ನತ ಶ್ರೇಣಿಯಲ್ಲಿ ಪಾಸಾಗುವುದನ್ನು ನಾನೇ ಕಣ್ಣಾರೆ ನೋಡುತ್ತಿದ್ದೇನೆ.

ನ್ಯಾಯಾಲಯ ಏನು ಹೇಳುತ್ತದೆ?
ಕರ್ನಾಟಕ ಶಿಕ್ಷಣ ಕಾಯ್ದೆ 2006ರ ಪ್ರಕಾರ ಪದವಿಪೂರ್ವ ಹಂತದಲ್ಲಿ ಶೇ. ೭೫ರಷ್ಟು ಹಾಜರಾತಿ ಕಡ್ಡಾಯ. ಬಹುತೇಕ ಎಲ್ಲ ವಿಶ್ವವಿದ್ಯಾನಿಲಯಗಳು ವಿದ್ಯಾರ್ಥಿಗಳಿಗೆ ಶೇ. 75ರಷ್ಟು ಹಾಜರಾತಿ ಇರಬೇಕೆಂದು ನಿಯಮ ರೂಪಿಸಿವೆ. ವೈದ್ಯಕೀಯ ಕಾರಣಗಳೇ ಮೊದಲಾದ ತೀರಾ ಅನಿವಾರ್ಯ ಸಂದರ್ಭಗಳಿದ್ದಾಗ ಅಭ್ಯರ್ಥಿಗೆ ಮಾನವೀಯ ದೃಷ್ಟಿಯಿಂದ ಶೇ. ೫ರಷ್ಟು ವಿನಾಯಿತಿ ನೀಡಲು ಕುಲಪತಿಗಳಿಗೆ ಮಾತ್ರ ಸ್ವವಿವೇಚನೆಯ ಅವಕಾಶವಿದೆ. ಶೈಕ್ಷಣಿಕ ಗುಣಮಟ್ಟವನ್ನು ಕಾಪಾಡುವುದಕ್ಕೆ ಹಾಜರಾತಿಯಲ್ಲಿ ಕಟ್ಟುನಿಟ್ಟು ಪಾಲಿಸುವುದು ಮುಖ್ಯ ಎಂಬುದನ್ನು ಅನೇಕ ಉಚ್ಚ ನ್ಯಾಯಾಲಯಗಳು, ಭಾರತದ ಸರ್ವೋಚ್ಛ ನ್ಯಾಯಾಲಯವೂ ಮತ್ತೆಮತ್ತೆ ಹೇಳಿವೆ.

'ವಿದ್ಯಾರ್ಥಿಗಳು ತಾರುಣ್ಯ ಸಹಜ ವರ್ತನೆಗಳಿಂದಲೋ, ಅಸೌಖ್ಯದಿಂದಲೋ ತರಗತಿಗಳಿಗೆ ಗೈರುಹಾಜರಾಗುವ ಸಂದರ್ಭ ಇದೆ. ಆದರೆ ಅದಕ್ಕಾಗಿಯೇ ಅವರಿಗೆ ಶೇ. ೨೫ರಷ್ಟು ತರಗತಿಗಳಿಗೆ ಗೈರುಹಾಜರಾಗುವ ಸ್ವಾತಂತ್ರ್ಯ ಇದೆ. ಇನ್ನಷ್ಟು ವಿನಾಯಿತಿ ನೀಡಬೇಕೆಂಬುದು ನ್ಯಾಯ ಸಮ್ಮತ ಅಲ್ಲ. ಈ ಪ್ರವೃತ್ತಿಯಿಂದ ಶ್ರದ್ಧಾವಂತ ವಿದ್ಯಾರ್ಥಿಗಳ ನೈತಿಕತೆ ಮತ್ತು ನಂಬಿಕೆಯನ್ನು ದುರ್ಬಲಗೊಳಿಸಿದಂತಾಗುತ್ತದೆ’ ಎಂದು ತನ್ನ ತೀರ್ಪೊಂದರಲ್ಲಿ ದೆಹಲಿ ಹೈಕೋರ್ಟ್ ಹೇಳಿದೆ.

ಕಾಮೆಂಟ್‌ಗಳಿಲ್ಲ: