ಶುಕ್ರವಾರ, ಡಿಸೆಂಬರ್ 1, 2017

ನಮ್ಮ ವಿಶಿಷ್ಟ ಪಾಕ ಪರಂಪರೆ: ಅಯ್ಯಂಗಾರ್ ಬೇಕರಿ

ದಿನಾಂಕ: 26-11-2017ರ 'ವಿಜಯ ಕರ್ನಾಟಕ'ದ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ

ಆಡು ಮುಟ್ಟದ ಸೊಪ್ಪಿಲ್ಲ, ಉಡುಪಿ ಹೋಟೆಲ್ ಇಲ್ಲದ ಊರಿಲ್ಲ, ಎಂ.ಜಿ. ರೋಡ್ ಇಲ್ಲದ ಪಟ್ಟಣವಿಲ್ಲ... ಎಂದೆಲ್ಲ ಗಾದೆಗಳನ್ನು ಪಟ್ಟಿ ಮಾಡುತ್ತಾ ಹೋದರೆ ಅಯ್ಯಂಗಾರ್ ಬೇಕರಿಯಿಲ್ಲದ ರಸ್ತೆಯಿಲ್ಲ ಎಂಬ ಗಾದೆಯನ್ನೂ ಸೇರಿಸಲು ನಿಮ್ಮದೇನೂ ತಗಾದೆಯಿರದು ಅಲ್ಲವೇ?

ಕಿಕ್ಕಿರಿದ ನಗರದ ತುಂಬಿತುಳುಕುವ ರಸ್ತೆಗಳಲ್ಲಿ ಕಣ್ಣು ಕಿವಿ ಮೂಗು ಬಾಯಿ ಚರ್ಮಗಳೆಂಬ ಪಂಚೇಂದ್ರಿಯಗಳನ್ನು ಮುಚ್ಚಿಕೊಂಡು ಓಡಾಡುವ ವೇಳೆ
ಗೆ ನಿಮ್ಮ ಮೂಗಿನ ಹೊಳ್ಳೆಗಳನ್ನು ಒಂದಿನಿತಾದರೂ ಅರಳಿಸುವ ಧೈರ್ಯವಿರುವುದು ಈ ಅಯ್ಯಂಗಾರ್ ಬೇಕರಿಗಳಿಗೆ.

ಚುಮುಚುಮು ಚಳಿಗೆ ಹಬೆಯಾಡುವ ಕಾಫಿ, ಮಟಮಟ ಬಿಸಿಲಿಗೆ ತಂಪೆರೆಯುವ ಜ್ಯೂಸು, ರಪರಪ ರಾಚುವ ಮಳೆಗೆ ಕುರುಕುರು ತಿನಿಸು -ಎಲ್ಲವಕ್ಕೂ ಕಾಲದ ಹಂಗಿದೆ; ಆದರೆ ಈ ಬೇಕರಿಗಳಿಗೆ ಅದರ ಗೊಡವೆ ಇಲ್ಲ. ಚಳಿಯಿರಲಿ, ಬಿಸಿಲಿರಲಿ, ಮಳೆಯಿರಲಿ - ಜೋರು ಹಸಿವಿನ ಡೋಲು ಬಡಿಯುವ ಹೊಟ್ಟೆಯನ್ನು ಶಮನಗೊಳಿಸುವುದಕ್ಕೆ ಬೇಕರಿಯೇ ಬೇಕ್ರಿ.

ಇದಕ್ಕೆ ಮುಗಿಬೀಳುವ ಜನಕ್ಕೆ ಹೊತ್ತುಗೊತ್ತಿನ ಬೇಧವೂ ಇಲ್ಲ. ಬೆಳಗು, ಮಧ್ಯಾಹ್ನ, ಸಂಜೆ, ರಾತ್ರಿ- ಎಲ್ಲ ಹೊತ್ತುಗಳಲ್ಲೂ ಎಲ್ಲ ವಯೋಮಾನದ ಮಂದಿಗೂ ಬೇಕರಿಗಳು ಬೇಕು. ಶಾಲೆಗಳಿಂದ ಸ್ವಾತಂತ್ರ್ಯ ಪಡೆದು ಓಡೋಡಿ ಬರುವ ಮಕ್ಕಳು, ಗೆಳೆಯ ಗೆಳತಿಯರೊಂದಿಗೆ ಹರಟೆ ಕೊಚ್ಚುವುದಕ್ಕೆ ಜಾಗ ಹುಡುಕುವ ಕಾಲೇಜು ಹೈಕಳು, ಮನೆಗೇನಾದರೂ ಹೊಸದು ಒಯ್ಯುವ ಧಾವಂತದ ಗೃಹಿಣಿಯರು, ಮಧ್ಯಾಹ್ನದ ಊಟವನ್ನು ಸರಳಗೊಳಿಸುವ ವೃತ್ತಿಪರರು, ವಾಕಿಂಗಿನ ಏಕತಾನತೆಯನ್ನು ಕಳೆಯಲು ದಾರಿ ಹುಡುಕುವ ನಿವೃತ್ತರು... ಎಲ್ಲರಿಗೂ ಅಯ್ಯಂಗಾರ್ ಬೇಕರಿಗಳು ಪರಮಾಪ್ತ ತಾಣಗಳು.

ಯಾವುದೋ ನಿರ್ದಿಷ್ಟ ಬ್ರಾಂಡ್ ತೋರಿಸಿ ಅದೇ ಹಲ್ಲುಜ್ಜುವ ಪೇಸ್ಟ್ ಬೇಕೆಂದು ಕೇಳುವವರಿರುವಂತೆ, ಯಾವುದೋ ಬೇಕರಿ ತೋರಿಸಿ ಅಯ್ಯಂಗಾರ್‌ಗೆ ಹೋಗೋಣ ಎನ್ನುವವರೂ ಇದ್ದಾರೆ. ಅಷ್ಟರಮಟ್ಟಿಗೆ ಅಯ್ಯಂಗಾರ್ ರುಚಿ ಮತ್ತು ಹೆಸರು ಜನರ ನಾಲಿಗೆ ತುದಿಯಲ್ಲಿ ಭದ್ರ. ಈ ಅಂಕಿತನಾಮ ಅನ್ವರ್ಥನಾಮವಾದ ಕಥೆಗೆ ಒಂದು ಶತಮಾನಕ್ಕೂ ಹೆಚ್ಚಿನ ಹಿನ್ನೆಲೆಯಿದೆ ಎಂಬುದೇ ಒಂದು ಕುತೂಹಲದ ಸಂಗತಿ.

ಹಾಸನದಿಂದ ಬೆಂಗಳೂರಿಗೆ
ಅಯ್ಯಂಗಾರ್ ಬೇಕರಿಗಳ ಇತಿಹಾಸ ಹುಡುಕಿ ಹೊರಟರೆ ನೀವು ಹತ್ತೊಂಬತ್ತನೇ ಶತಮಾನಕ್ಕೆ ವಾಪಸ್ ಹೋಗಬೇಕಾಗುತ್ತದೆ. ಮತ್ತು ಹಾಗೆ ಹೋಗಿ ನೀವು ನಿಲ್ಲುವುದು ಹಾಸನದಲ್ಲಿ. ಹಾಸನ ಜಿಲ್ಲೆಗೆ ಸೇರಿದ ಅಷ್ಟಗ್ರಾಮಗಳಲ್ಲೊಂದಾದ ಹುಲಿಕಲ್‌ನ ಎಚ್. ಎಸ್. ತಿರುಮಲಾಚಾರ್ ಅವರೇ ಅಯ್ಯಂಗಾರ್ ಬೇಕರಿಗಳ ಮೂಲಪುರುಷನೆಂಬುದು ಈ ಹುಡುಕಾಟದಿಂದ ದೊರೆಯುವ ಮಾಹಿತಿ.

1890ರ ದಶಕದಲ್ಲಿ ಉದ್ಯೋಗ ಅರಸಿ ಬೆಂಗಳೂರಿಗೆ ಬಂದ ವೈಷ್ಣವ ಮನೆತನದ ತಿರುಮಲಾಚಾರ್ ತಮ್ಮ ಸಹೋದರನೊಂದಿಗೆ ಸೇರಿಕೊಂಡು 1898ರಲ್ಲಿ ಚಿಕ್ಕಪೇಟೆ ಮುಖ್ಯರಸ್ತೆಯಲ್ಲಿ ಸಣ್ಣದೊಂದು ಸಿಹಿತಿಂಡಿ ಅಂಗಡಿ ತೆರೆದರು ಎಂಬುದು ಈ ಬೇಕರಿ ಕಥೆಯ ಮೊದಲ ಅಧ್ಯಾಯ. ಈ ಸ್ವೀಟ್ ಸ್ಟಾಲು ಬೆಂಗಳೂರು ಬ್ರದರ್ಸ್ ಬೇಕರಿಯೆಂದೋ, ಬೆಂಗಳೂರು ಬ್ರಾಹ್ಮಿನ್ಸ್ ಬೇಕರಿಯೆಂದೋ ನಾಮಧೇಯಗಳನ್ನು ಪಡೆದುಕೊಂಡು ಎಲ್ಲರಿಗೂ ಬೇಕಾದ ಅಯ್ಯಂಗಾರ್ ಬೇಕರಿಯಾಗಿ ಬೆಳೆದದ್ದು ಮುಂದಿನ ಅಧ್ಯಾಯಗಳು.

ಅಂದಹಾಗೆ ಈ ಬೇಕರಿ ಕಥೆಗೆ ರೋಚಕ ತಿರುವು ಕೊಟ್ಟದ್ದು ಒಬ್ಬ ಇಂಗ್ಲಿಷ್ ಮಹಾನುಭಾವ. ತಿರುಮಲಾಚಾರರ ಅಂಗಡಿಗೆ ಖಾಯಂ ಗಿರಾಕಿಯಾಗಿದ್ದ ಪ್ರಸಿದ್ಧ ವೆಸ್ಟ್ ಎಂಡ್ ಹೋಟೆಲಿನ ಉದ್ಯೋಗಿಯೊಬ್ಬ ಅವರಿಗೆ ಹೊಸ ತಿನಿಸುಗಳನ್ನು ತಯಾರಿಸಿ ಮಾರುವ ಯೋಚನೆಯನ್ನು ಬಿತ್ತಿದ. ಅಷ್ಟಲ್ಲದೆ ಬ್ರೆಡ್ಡು ಬನ್ನು ತಯಾರಿಸುವ ವಿದ್ಯೆಯನ್ನೂ ಕಲಿಸಿಬಿಟ್ಟ. ಅಲ್ಲಿಗೆ ಅಯ್ಯಂಗಾರರ ಹೊಸ ಪಯಣ ಆರಂಭವಾಯಿತು.

ಚಿಕ್ಕ ಬನ್ನುಗಳಿಗೆ ಪ್ರಸಿದ್ಧಿಯಾದ ಅಯ್ಯಂಗಾರ್ ಬೇಕರಿ ಪಲ್ಯ ಬನ್, ಆಲೂ ಬನ್, ತರಹೇವಾರಿ ಬಿಸ್ಕತ್ತು, ಖಾರ ಕುಕ್ಕೀಸ್, ದಿಲ್ ಪಸಂದ್ ಎನ್ನುತ್ತ ತನ್ನ ಮೆನುವನ್ನು ಬೆಳೆಸುತ್ತಾ ಹೋಯಿತು. ಖುದ್ದು ಮಾರ್ಕೆಟಿಗೆ ಹೋಗಿ ಬೇಕರಿಗೆ ಅವಶ್ಯಕ ಸಾಮಗ್ರಿಗಳನ್ನು ಎತ್ತಿನ ಗಾಡಿಯಲ್ಲಿ ತುಂಬಿಕೊಂಡು ತಂದು ರುಚಿರುಚಿಯಾದ ತಿಂಡಿತಿನಿಸುಗಳನ್ನು ತಯಾರಿಸುತ್ತಿದ್ದ ತಿರುಮಲಾಚಾರ್ ಮುಂದಿನ ತಲೆಮಾರುಗಳಿಗೆ ರೋಲ್ ಮಾಡೆಲ್ ಆಗಿಬಿಟ್ಟರು. ಈಗ ಅವರ ನಾಲ್ಕನೇ ತಲೆಮಾರಿನ ಮರಿಮಕ್ಕಳು ಅದೇ ಚಿಕ್ಕಪೇಟೆಯಲ್ಲಿ ತಮ್ಮ ಸಾಂಪ್ರದಾಯಿಕ ವೃತ್ತಿ ಮುಂದುವರಿಸಿದ್ದಾರೆ. ಚಿಕ್ಕಬನ್‌ನಿಂದ ಆರಂಭವಾದ ಬಿಬಿ ಬೇಕರಿಯಲ್ಲಿ ಈಗ ಏನಿಲ್ಲವೆಂದರೂ ಮೂವತ್ತೈದು ವೈವಿಧ್ಯತೆಗಳಿವೆ.

ನಾಮವೊಂದೇ, ಬೇಕರಿ ಹಲವು
ಗಣತಿ ನಡೆಸಿದರೆ ಬೆಂಗಳೂರಿನಲ್ಲೇ ಒಂದೈನೂರು ಅಯ್ಯಂಗಾರ್ ಬೇಕರಿ ಕಾಣಸಿಗಬಹುದು. ಕರ್ನಾಟಕದ ಉದ್ದಗಲದಲ್ಲಿ ಎಲ್ಲಿಗೇ ಹೋದರೂ ಅಯ್ಯಂಗಾರ್ ಬೇಕರಿ ಇಲ್ಲದ ಊರು ಸಿಗದೆಂದು ಆಗಲೇ ಹೇಳಿದೆ. ಕರ್ನಾಟಕವೇ ಏಕೆ, ಮುಂಬೈ, ಪೂನಾ, ಚೆನ್ನೈ, ಹೈದರಾಬಾದ್‌ನಂತಹ ಮಹಾನಗರಗಳಲ್ಲೂ ಅಯ್ಯಂಗಾರ್ ಬೇಕರಿ ಒಂದು ಅವಿಭಾಜ್ಯ ಅಂಗಡಿ. ಅಂತೂ ಇಡೀ ದೇಶ ಸುತ್ತಾಡಿದರೆ ಒಂದೂವರೆಸಾವಿರ ಅಯ್ಯಂಗಾರ್ ಬೇಕರಿಯಿದ್ದೀತೆಂದು ಅಂದಾಜು ಮಾಡಿದವರುಂಟು.

ಅಂದಹಾಗೆ, ಇವೆಲ್ಲ ಒಂದೇ ಕುಟುಂಬದವರು ಸ್ಥಾಪಿಸಿದ ಫ್ರಾಂಚೈಸಿಗಳೆಂದು ತಪ್ಪುತಿಳಿದೀರಿ ಜೋಕೆ. ಉಡುಪಿ ಹೋಟೆಲ್, ಮಂಗಳೂರು ನೀರ್‌ದೋಸೆ, ತುಮಕೂರು ತಟ್ಟೆ ಇಡ್ಲಿ, ದಾವಣೆಗೆರೆ ಬೆಣ್ಣೆದೋಸೆ ಥರ ಅಯ್ಯಂಗಾರ್ ಬೇಕರಿ ಕೂಡ ಒಂದು ಜನಪ್ರಿಯ ಬ್ರಾಂಡ್ ಆಗಿ ಬೆಳೆದುಬಿಟ್ಟಿದೆ. ಈ ಬಗ್ಗೆ ಹಳೆಯ ಮೂಲ ಅಯ್ಯಂಗಾರ್ ಬೇಕರಿ ಮಾಲೀಕರಿಗೆ ಅಸಮಾಧಾನವೂ ಇದೆ.

ತಿರುಮಲಾಚಾರ್ ಕುಟುಂಬ ಬೆಂಗಳೂರಿಗೆ ಬಂದು ಬೇಕರಿ ಉದ್ಯಮ ಹಿಡಿದು ಯಶಸ್ಸು ಕಂಡದ್ದನ್ನು ಗಮನಿಸಿದ ಅದೇ ಊರಿನ ಇತರ ಕೆಲವು ಕುಟುಂಬಗಳೂ ಮುಂದಿನ ವರ್ಷಗಳಲ್ಲಿ ಬೆಂಗಳೂರಿಗೆ ವಲಸೆ ಬಂದವು. 1950-60ರ ದಶಕದ ಬರ ಅಂತೂ ಅಷ್ಟಗ್ರಾಮಗಳ ಅಷ್ಟೂ ಮಂದಿ ಊರು ಬಿಡುವಂತೆ ಮಾಡಿತು. ಅವರಲ್ಲಿ ಬಹುತೇಕರು ರಾಜಧಾನಿಗೆ ಬಂದು ಬೇಕರಿ ಉದ್ಯಮದಲ್ಲಿ ತೊಡಗಿಸಿಕೊಂಡರು. ವಿಶ್ವೇಶ್ವರಪುರಂನ ವಿವಿ ಬೇಕರಿ, ಮೆಜೆಸ್ಟಿಕ್‌ನ ಸೂರ್ಯ ಬೇಕರಿ, ಎಲ್.ಜೆ. ಬೇಕರಿ ಹೀಗೆ ವಿವಿಧೆಡೆ ಬೇಕರಿಗಳು ತಲೆಯೆತ್ತಿದವು. 1981ರಲ್ಲಿ ಆಸ್ಟಿನ್ ಟೌನ್‌ನಲ್ಲಿ ಆರಂಭವಾದ ಅಯ್ಯಂಗಾರ್ ಬೇಕರಿ ಇಂದಿಗೂ ಕಾರ್ಯನಿರ್ವಹಿಸುತ್ತಿರುವ ಹಳೆಯ ಬೇಕರಿಗಳಲ್ಲೊಂದು.

ಆಮೇಲಾಮೇಲೆ ಅಯ್ಯಂಗಾರ್ ಬ್ರಾಂಡ್‌ನ ಜನಪ್ರಿಯತೆ ಬೆಂಬತ್ತಿ ಹತ್ತಾರು ಬೇಕರಿಗಳು ಹುಟ್ಟಿಕೊಂಡವು. ಅಯ್ಯಂಗಾರ್ ಬೇಕರಿಯೆಂದು ಬೋರ್ಡು ಹಾಕಿಕೊಂಡವು. ಮುಂದಿನ ವರ್ಷಗಳಲ್ಲಿ ಅಯ್ಯಂಗಾರ್ ಸಮುದಾಯದವರಲ್ಲದೆ ವಿವಿಧ ಸಮುದಾಯಕ್ಕೆ ಸೇರಿದವರು ಬೇಕರಿ ಕ್ಷೇತ್ರದಲ್ಲಿ ದುಡಿಯತೊಡಗಿದರು.

ಆದರೆ ಅಯ್ಯಂಗಾರ್ ಬೇಕರಿ ಬ್ರಾಂಡ್ ದುರುಪಯೋಗವಾಗುತ್ತಿದೆಯೆಂದು ಬೇಸರಗೊಂಡು ತಮ್ಮ ಅಂಗಡಿ ಹೆಸರನ್ನು ನೋಂದಣಿ ಮಾಡಿಸಿಕೊಂಡವರೂ ಇದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಆಸ್ಟಿನ್ ಟೌನ್‌ನ ಹಳೆಯ ಬೇಕರಿ ಮಾಲೀಕರು ಅಯ್ಯಂಗಾರ್ ಬೇಕರಿ ಹೆಸರಿಗೆ ಪೇಟೆಂಟ್ ಮಾಡಿಸಿಕೊಳ್ಳುವ ಯೋಚನೆ ಮಾಡಿದ್ದುಂಟು.

ಮುಂಬೈ ಸೇರಿದಂತೆ ಹತ್ತುಹಲವು ನಗರಗಳಲ್ಲಿ ಅಯ್ಯಂಗಾರ್ ಹೆಸರಿನಲ್ಲಿ ಬೇಕರಿಗಳನ್ನು ತೆರೆದಿದ್ದಾರೆ; ಆದರೆ ಮೂಲ ಅಯ್ಯಂಗಾರ್ ಬೇಕರಿಗಳ ಶುಚಿ, ರುಚಿ, ಗುಣಮಟ್ಟಗಳನ್ನು ಕಾಪಾಡಿಕೊಳ್ಳದೆ ಜನ ಅಯ್ಯಂಗಾರ್ ಬೇಕರಿಗಳ ಮೇಲೆ ವಿಶ್ವಾಸ ಕಳೆದುಕೊಳ್ಳುವಂತೆ ಮಾಡಿದ್ದಾರೆ. ಇದನ್ನು ತಪ್ಪಿಸಲು ಪೇಟೆಂಟ್ ಪಡೆದುಕೊಳ್ಳುವುದು ಮತ್ತು ಸಂಘಟಿತರಾಗುವುದೊಂದೇ ದಾರಿ ಎಂಬುದು ಹೊಸ ತಲೆಮಾರಿನ ಉದ್ಯಮಿಗಳ ಅಂಬೋಣ.

ಕಾಲದೊಂದಿಗೆ ಹೆಜ್ಜೆ
ಕಾಲದೊಂದಿಗೆ ಹೆಜ್ಜೆಹಾಕುವುದು ಅನಿವಾರ್ಯವೆಂದು ಮನಗಂಡಿರುವ ಅಯ್ಯಂಗಾರ್ ಬೇಕರಿಗಳು ಸಾಂಪ್ರದಾಯಿಕ ವಿಧಾನಗಳೊಂದಿಗೆ ಆಧುನಿಕ ತಂತ್ರಜ್ಞಾನವನ್ನೂ ಅಳವಡಿಸಿಕೊಂಡಿವೆ. ಹಿಟ್ಟು ರುಬ್ಬಲು, ತರಕಾರಿ ಹೆಚ್ಚಲು, ತಿನಿಸುಗಳನ್ನು ಬೇಯಿಸಲು ಬಗೆಬಗೆಯ ಯಂತ್ರಗಳು ಬಂದು ಕುಳಿತಿವೆ. ಅಗತ್ಯ ಕಾರ್ಮಿಕರ ಅಲಭ್ಯತೆಯೂ ಈ ಬದಲಾವಣೆಗಳಿಗೆ ಕಾರಣ.
ಆಲೂ ಬನ್, ಪಲ್ಯ, ನಿಪ್ಪಟ್ಟು, ಬ್ರೆಡ್, ಬಟರ್, ಬಿಸ್ಕತ್ತುಗಳಿಗೆ ಸೀಮಿತವಾಗಿದ್ದ ಅಯ್ಯಂಗಾರ್ ಬೇಕರಿಗಳು ಈಗ ಕೇಕ್-ಪೇಸ್ಟ್ರಿಗಳನ್ನೂ, ಪನೀರ್, ಎಗ್ ಪಫ್‌ಗಳನ್ನೂ ತಯಾರಿಸುತ್ತಿವೆ. ರಮ್ ಮಿಶ್ರಿತ ಪ್ಲಮ್ ಕೇಕ್, ಸ್ಪಾಂಜ್ ಕೇಕ್, ಜೇನು, ಸಿರಪ್, ಜಾಮ್, ತೆಂಗಿನಕಾಯಿ ತುರಿ ಬೆರೆಸಿದ ಹನಿ ಕೇಕ್, ಬಾಯಲ್ಲಿ ನೀರೂರಿಸುವ ಕ್ರಿಸ್‌ಮಸ್ ಸ್ಪೆಷಲ್ ಕೇಕ್‌ಗಳು ಈಗ ಇವರ ವಿಶೇಷ ಆಕರ್ಷಣೆಗಳು.

ಕಾಲ ಬದಲಾಗಿದೆ, ಜನ ಆಧುನಿಕರಾಗಿದ್ದಾರೆ. ಕಂಪ್ಯೂಟರಿನಿಂದ ತೊಡಗಿ ತರಕಾರಿಯವರೆಗೆ ಎಲ್ಲವೂ ಆನ್‌ಲೈನ್ ಮಳಿಗೆಗಳಲ್ಲಿ ಬಿಕರಿಯಾಗುವಾಗ ಬೇಕರಿಯವರು ತಮ್ಮ ಅಂಗಡಿಗಳನ್ನಷ್ಟೇ ನಂಬಿ ಕೂರುವುದಕ್ಕಾಗುತ್ತದೆಯೇ? ಅವರೂ ಇ-ಕಾಮರ್ಸ್ ಯುಗಕ್ಕೆ ಕಾಲಿಟ್ಟಿದ್ದಾರೆ, ಆನ್‌ಲೈನ್ ಸೇವೆಗಳನ್ನು ಆರಂಭಿಸಿದ್ದಾರೆ. ತಮ್ಮದೇ ವೆಬ್‌ಸೈಟುಗಳನ್ನು ತೆರೆದು ತಮ್ಮಲ್ಲಿ ದೊರೆಯುವ ತಿನಿಸುಗಳ ಪಟ್ಟಿ ಪ್ರಕಟಿಸಿದ್ದಾರೆ. ಗ್ರಾಹಕರು ಅಲ್ಲಿಯೇ ಆರ್ಡರ್ ಬುಕ್ ಮಾಡಿ ತರಿಸಿಕೊಳ್ಳುವ ಅವಕಾಶ ಕಲ್ಪಿಸಿದ್ದಾರೆ. ಆಸ್ಟಿನ್ ಟೌನ್‌ನ ಅಯ್ಯಂಗಾರ್ ಬೇಕರಿಯವರಂತೂ ಬೆಂಗಳೂರಿನ 75ಕ್ಕೂ ಹೆಚ್ಚಿನ ಕಡೆಗಳಿಂದ ಕೆಲವೇ ನಿಮಿಷಗಳಲ್ಲಿ ಗ್ರಾಹಕರನ್ನು ತಲುಪುವ ವ್ಯವಸ್ಥೆ ಮಾಡಿಕೊಂಡಿದ್ದಾರೆ. ಇದಕ್ಕಾಗಿ ನಗರದ ಬೇರೆಬೇರೆ ಕಡೆ ಉತ್ತಮ ಗುಣಮಟ್ಟದ ತಿನಿಸುಗಳನ್ನು ಒದಗಿಸುವ ಸಹ ಉದ್ಯಮಿಗಳನ್ನು ಗುರುತು ಮಾಡಿಕೊಂಡು ಒಳ್ಳೆಯ ತಂಡ ಕಟ್ಟಿಕೊಂಡಿದ್ದಾರೆ.

ಸಾವಿರಾರು ವರ್ಷಗಳ ಹಿಂದೆ ಪ್ರಾಚೀನ ರೋಮ್‌ನಲ್ಲಿ ಆರಂಭಗೊಂಡ ಬೇಕರಿಯೆಂಬ ಲಕ್ಷುರಿ ಈಗ ಜನಸಾಮಾನ್ಯರ ದಿನನಿತ್ಯದ ತಿನಿಸಾಗಿದೆ. ಬ್ರೆಡ್-ಪಫ್-ಬಿಸ್ಕತ್ತುಗಳ ಹೊರತಾದ ಟೀ-ಕಾಫಿ ರುಚಿಸುವುದೇ ಇಲ್ಲವೇನೋ ಎಂಬಷ್ಟರ ಮಟ್ಟಿಗೆ ಅವು ನಮ್ಮನ್ನು ಅಂಟಿಕೊಂಡುಬಿಟ್ಟಿವೆ. ಝಗಮಗಿಸುವ ಮಾಲ್‌ಗಳು, ಸೂಪರ್ ಮಾರ್ಕೆಟ್‌ಗಳು ದೋಸೆಹಿಟ್ಟು, ಚಪಾತಿ, ತಿಳಿಗಂಜಿಯನ್ನು ಪ್ಯಾಕ್ ಮಾಡಿ ಮಾರುವ ಕಾಲ ಬಂದರೂ ಹಳೆಯ ಅಯ್ಯಂಗಾರ್ ಬೇಕರಿಗಳನ್ನು ಹುಡುಕಿ ಮೈಲಿಗಟ್ಟಲೆ ಹೋಗುವ ಜನಸಾಮಾನ್ಯರು ಮಾಯವಾಗಿಲ್ಲ. ರುಚಿಗೆ ವಯಸ್ಸುಂಟೆ?

ಕಾಮೆಂಟ್‌ಗಳಿಲ್ಲ: