(ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯಾಗಿ ನೇತೃತ್ವ ವಹಿಸಿ 50 ವರ್ಷಗಳಾದ ಹಿನ್ನೆಲೆಯಲ್ಲಿ 'ವಿಜಯವಾಣಿ' ನವೆಂಬರ್ 12, 2017ರಂದು ಹೊರತಂದ ವಿಶೇಷ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)
Education should be in future tense - ಎನ್ನುತ್ತಾನೆ ಆಲ್ವಿನ್ ಟೋಫ್ಲರ್. ಶಿಕ್ಷಣದ ದೃಷ್ಟಿ ಎಂದಿಗೂ ಭವಿಷ್ಯದ ಕಡೆಗಿರಬೇಕು; ವಿದ್ಯಾರ್ಥಿಯ ಮತ್ತು ಸಮಾಜದ ಭವಿತವ್ಯದ ಬಗ್ಗೆ ಚಿಂತಿಸದ ಶಿಕ್ಷಣ ಅರ್ಥಹೀನ. ಆದರೆ ನಮ್ಮ ಶಿಕ್ಷಣ ವ್ಯವಸ್ಥೆ ಈ ಅವಶ್ಯಕತೆಗೆ ಪೂರಕವಾಗಿದೆಯೇ ಎಂಬುದೇ ಎಲ್ಲರನ್ನೂ ಕಾಡುವ ಪ್ರಶ್ನೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಗಳು ಕಾಲೇಜುಗಳನ್ನು ತುಂಬುವ ಯಂತ್ರಗಳಾದರೆ, ಕಾಲೇಜುಗಳು ನಿರಾಶಾವಾದಿಗಳನ್ನೂ ನಿರುದ್ಯೋಗಿಗಳನ್ನೂ ತಯಾರಿಸುವ ಕಾರ್ಖಾನೆಗಳಾಗಿ ಮಾರ್ಪಟ್ಟಿವೆ. ಒಂದೆಡೆ ಆಲಸ್ಯವೇ ಮೈವೆತ್ತಂತೆ ಮಲಗಿರುವ ಸರ್ಕಾರಿ ಶಿಕ್ಷಣ ಸಂಸ್ಥೆಗಳು, ಇನ್ನೊಂದೆಡೆ ದುಡ್ಡಿನ ದುರಾಸೆಯಲ್ಲಿ ಮುಳುಗಿರುವ ಖಾಸಗಿ ಶಿಕ್ಷಣ ಸಂಸ್ಥೆಗಳು. ಈ ಎರಡು ಅತಿರೇಕಗಳ ನಡುವೆ ಸಿಲುಕಿ ಬಡವಾಗುತ್ತಿರುವ ನೈಜ ಶಿಕ್ಷಣದ ಶಿಶುವನ್ನು ಹುಡುಕಿ ಬದುಕಿಸುವುದೆಂತು? ಇದು ಹೀಗೆಯೇ ಮುಂದುವರಿದರೆ ಈ ವ್ಯವಸ್ಥೆ ಅಂತಿಮವಾಗಿ ಎಲ್ಲಿಗೆ ತಲುಪೀತು? ಶಿಕ್ಷಣರಂಗದ ಈ ಸಮಸ್ಯೆಗೆ ಪರಿಹಾರವೇ ಇಲ್ಲವೇ? ಎಂಬ ಕಳವಳದಲ್ಲಿ ಮನಸ್ಸು ಬರಡೆನಿಸಿದಾಗ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ನಡೆಯುವ ಶಿಕ್ಷಣ ಸಂಸ್ಥೆಗಳು ಓಯಸಿಸ್ಸುಗಳಂತೆ ಕಾಣುತ್ತವೆ.
ಇವುಗಳನ್ನು ನೋಡಿದಾಗ ಶ್ರೀಕ್ಷೇತ್ರದ ಚತುರ್ದಾನ ಪರಂಪರೆಯಲ್ಲಿ ಅನ್ನದಾನ, ಔಷಧದಾನ, ವಸ್ತ್ರದಾನಗಳಿಗಿಂತಲೂ ವಿದ್ಯಾದಾನಕ್ಕೇ ಒಂದು ಹಿಡಿ ಹೆಚ್ಚು ಮಹತ್ವ ದೊರೆತಿದೆಯೇನೋ ಎಂದೆನಿಸಿದರೆ ಅತಿಶಯವೇನೂ ಇಲ್ಲ. ವಿದ್ಯೆಯೊಂದು ಲಭಿಸಿದರೆ ಉಳಿದ ಮೂರನ್ನೂ ವ್ಯಕ್ತಿ ತಾನಾಗಿಯೇ ಪಡೆದುಕೊಳ್ಳುತ್ತಾನೆ ಎಂಬುದೇ ಇದರ ಹಿಂದಿನ ಆಶಯ. ಶ್ರೀ ಕ್ಷೇತ್ರದಿಂದ ನಡೆಯುವ ಯಾವುದೇ ಶಿಕ್ಷಣ ಸಂಸ್ಥೆ ಹೊಕ್ಕು ನೋಡಿ, ಅಲ್ಲಿ ಆಡಂಬರವಿಲ್ಲ, ಅತಿರೇಕವಿಲ್ಲ. ಪ್ರತೀ ಹೆಜ್ಜೆಗೂ ಕಾಣಸಿಗುವುದು ಶಿಸ್ತು, ಸಂಯಮ, ಗಾಂಭೀರ್ಯತೆ ಮತ್ತು ವಿಧೇಯತೆ. ಎಸ್.ಡಿ.ಎಂ. ಎಂದು ಆರಂಭವಾಗುವ ಯಾವುದೇ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಐದು ನಿಮಿಷ ಇದ್ದು ಬಿಡಿ, ಶಿಕ್ಷಣ ವ್ಯವಸ್ಥೆಯ ಬಗ್ಗೆ ಇರುವ ನೂರಾರು ಆತಂಕಗಳು ಹೇಳಹೆಸರಿಲ್ಲದಂತೆ ಮಾಯವಾಗಿಬಿಡುತ್ತವೆ. ಇಂತಹ ಶಾಲಾ ಕಾಲೇಜುಗಳಿರುವಾಗ ಶಿಕ್ಷಣಕ್ಷೇತ್ರದ ಭವಿಷ್ಯದ ಬಗ್ಗೆ ಭಯಪಡುವುದರಲ್ಲಿ ಅರ್ಥವೇ ಇಲ್ಲ ಎಂದು ಯಾರಿಗಾದರೂ ಅನ್ನಿಸಿಬಿಡುತ್ತದೆ.
ಸಮಗ್ರ ಶಿಕ್ಷಣ
ವ್ಯಕ್ತಿಯನ್ನು ಸ್ವಾವಲಂಬಿಯಾಗಿ ಮಾಡುವ ಹಾಗೂ ಶಾರೀರಿಕವಾಗಿ, ಬೌದ್ಧಿಕವಾಗಿ, ಭಾವನಾತ್ಮಕವಾಗಿ, ಆಧ್ಯಾತ್ಮಿಕವಾಗಿ ಜೀವನ ನಡೆಸುವ ಕಲೆಯನ್ನು ಸ್ಫುರಿಸುವಂತಹ ಶಿಕ್ಷಣವೇ ಸಮಗ್ರ ಶಿಕ್ಷಣ - ಇದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ನೇತಾರ ಪದ್ಮಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಸ್ಪಷ್ಟ ಪರಿಕಲ್ಪನೆ. ಇದೇ ಈ ಶಿಕ್ಷಣ ಸಂಸ್ಥೆಗಳ ಶ್ರೇಷ್ಠತೆಯ ಹಿಂದಿರುವ ಅಪೂರ್ವ ದರ್ಶನ ಕೂಡಾ. ಅದಕ್ಕೇ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳು ಹತ್ತರೊಂದಿಗೆ ಹನ್ನೊಂದಾಗಿ ತೋರುವುದಿಲ್ಲ. ಸಾಮಾನ್ಯವಾಗಿ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಕಾಣುವ ದುಡ್ಡಿನ ದಂಧೆ, ವಿದ್ಯಾರ್ಥಿಗಳನ್ನು ಅಂಕಗಳಿಕೆಯ ಯಂತ್ರಗಳನ್ನಾಗಿಸುವ ಪೈಪೋಟಿ ಇಲ್ಲಿ ಕಾಣುವುದಿಲ್ಲ. ವಿದ್ಯಾರ್ಥಿಯ ನಾಳೆಯ ಬದುಕಿಗೆ ಪ್ರಯೋಜನವಾಗುವಂತಹ ಏನನ್ನಾದರೂ ಕೊಡಬೇಕು ಎಂಬ ಕಾಳಜಿಯೇ ಈ ಶಿಕ್ಷಣ ಸಂಸ್ಥೆಗಳ ಹೆಜ್ಜೆಹೆಜ್ಜೆಗೂ ಎದ್ದುಕಾಣುತ್ತದೆ.
ಶಿಕ್ಷಣವೆಂದರೆ ಓದುವುದು, ಬರೆಯುವುದು ಮತ್ತು ಗಣಿತ ಇವಿಷ್ಟೇ ಅಲ್ಲ ಅಥವಾ ಕೆಲವರು ಹೇಳುವಂತೆ ಅಧ್ಯಯನ, ಅಧ್ಯಾಪನ, ಜ್ಞಾನಪ್ರಸರಣ ಇಷ್ಟಕ್ಕೇ ಸೀಮಿತವಲ್ಲ. ಅದು ವ್ಯಕ್ತಿ ಮತ್ತು ಸಮಾಜದ ಬದುಕಿಗೆ ಬೇಕಾದ ಶಿಕ್ಷಣ ಎಂಬ ವೀರೇಂದ್ರ ಹೆಗ್ಗಡೆಯವರ ಆಶಯ ಒಂದೊಂದು ಶಿಕ್ಷಣ ಸಂಸ್ಥೆಯಲ್ಲೂ ಅತ್ಯಂತ ಸಮರ್ಥವಾಗಿ ಸಾಕಾರಗೊಂಡಿದೆ. ಯಾವ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಯಲ್ಲೂ ಕೇವಲ ಓದು, ಬರೆ, ಪರೀಕ್ಷೆ ಎದುರಿಸು, ಶೇ. ೯೫ ಅಂಕ ಗಳಿಸು ಎಂಬ ಯಾಂತ್ರಿಕ ಒತ್ತಡ ಕಾಣಸಿಗುವುದಿಲ್ಲ. ತರಗತಿ ಕೊಠಡಿಯ ಪಾಠ ಪ್ರವಚನಗಳಷ್ಟೇ ಪಠ್ಯೇತರ ಚಟುವಟಿಕೆಗಳಿಗೂ ಅಲ್ಲಿ ಸಮಾನ ಪ್ರಾಶಸ್ತ್ಯ.
ಯಾವ ಹೊತ್ತಿನಲ್ಲೇ ಹೋದರೂ ಶಾಲಾ-ಕಾಲೇಜಿನ ಯಾವುದಾದರೊಂದು ಮೂಲೆಯಲ್ಲಿ ಯಕ್ಷಗಾನವೋ, ಸಂಗೀತವೋ, ನಾಟಕವೋ, ಭಾಷಣವೋ, ನೃತ್ಯವೋ ಕೇಳಿಸೀತು, ಕಾಣಿಸೀತು. ಕೇವಲ ಪಾಠ-ಪರೀಕ್ಷೆಗಳಿಗಷ್ಟೇ ಸೀಮಿತವಾದ ವಿದ್ಯಾರ್ಥಿಯೊಬ್ಬನನ್ನು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಿಂದ ಹುಡುಕಿ ತೆಗೆಯುವುದು ಬಹುಶಃ ಅಸಾಧ್ಯವಾದ ಕೆಲಸ. ಹಾಗೆಂದು ಅಲ್ಲಿ ಶಿಕ್ಷಣ ಪೂರೈಸಿ ಹೊರಗೆ ಬಂದ ವ್ಯಕ್ತಿ ಮುಂದೇನು ಮಾಡಬೇಕೆಂದು ಗೊಂದಲಕ್ಕೀಡಾಗುವ ಪ್ರಸಂಗಗಳೂ ಇಲ್ಲ. ಶಿಕ್ಷಣ ಮುಗಿಯುವ ವೇಳೆಗೆ ಆತನ ಗುರಿ-ದಾರಿಗಳೆರಡೂ ಸ್ಪಷ್ಟವಾಗಿಯೇ ಇರುತ್ತವೆ.
ಎಲ್ಲವೂ ಇದೆ
ವ್ಯಕ್ತಿಯ ಮತ್ತು ಸಮಾಜದ ಅವಶ್ಯಕತೆಗೆ ಅನುಗುಣವಾದ ಶಿಕ್ಷಣ ನೀಡುವ ಡಾ. ಹೆಗ್ಗಡೆಯವರ ಆಶಯ ಅವರು ನಡೆಸಿಕೊಂಡು ಹೋಗುತ್ತಿರುವ ಅಷ್ಟೂ ಶಿಕ್ಷಣ ಸಂಸ್ಥೆಗಳಲ್ಲಿ ಎದ್ದುಕಾಣುತ್ತದೆ. ಒಂದೊಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸುವಾಗಲೂ ಅದರ ಅವಶ್ಯಕತೆ, ಅನಿವಾರ್ಯತೆ ಮತ್ತು ಪ್ರಸ್ತುತತೆಗಳ ಬಗ್ಗೆ ಅವರ ಕಲ್ಪನೆ ನಿಚ್ಚಳ. ಅದಕ್ಕೇ ಇಂದು ಎಸ್.ಡಿ.ಎಂ. ಹೆಸರಿನಲ್ಲಿ ವೈವಿಧ್ಯಮಯ ಆದರೆ ಅಷ್ಟೇ ವಿಶಿಷ್ಟ ಶಿಕ್ಷಣ ಸಂಸ್ಥೆಗಳು ನಮಗಿದಿರಾಗುತ್ತವೆ.
ಶಿಶುವಿಹಾರದಿಂದ ತೊಡಗಿ ಪಿಎಚ್.ಡಿ. ಅಧ್ಯಯನದವರೆಗೆ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ದೊರೆಯದ ಕೋರ್ಸ್‌ಗಳಿಲ್ಲ. ವೈದ್ಯಕೀಯ, ಇಂಜಿನಿಯರಿಂಗ್, ಕಾನೂನು, ಆಡಳಿತ ನಿರ್ವಹಣೆ, ಆಯುರ್ವೇದ, ಪ್ರಕೃತಿಚಿಕಿತ್ಸೆ, ಮಾನವಿಕ ಶಾಸ್ತ್ರಗಳು, ವಿಜ್ಞಾನ- ಆಧುನಿಕ ಉದ್ಯೋಗ ಜಗತ್ತಿಗೆ ಏನು ಬೇಕೋ ಅವೆಲ್ಲವೂ ಧರ್ಮಸ್ಥಳ ಶಿಕ್ಷಣ ಸಂಸ್ಥೆಗಳ ವ್ಯಾಪ್ತಿಯಲ್ಲಿವೆ. ಪ್ರತೀ ಸಂಸ್ಥೆಯಲ್ಲೂ ನೈತಿಕ ಶಿಕ್ಷಣ, ಸಾಂಸ್ಕೃತಿಕ ಅರಿವಿನ ರಸಪೋಷಣೆ ಒಂದು ಅನಿವಾರ್ಯ ಅಂಗವಾಗಿರುವಂತೆ ಇವುಗಳನ್ನೇ ಪ್ರಧಾನ ಉದ್ದೇಶವಾಗಿಸಿಕೊಂಡು ನಡೆಯುತ್ತಿರುವ ಪ್ರಯತ್ನಗಳೂ ಸಾಕಷ್ಟಿವೆ.
ಎಸ್.ಡಿ.ಎಂ. ಎಜುಕೇಶನಲ್ ಸೊಸೈಟಿ ಮತ್ತು ಟ್ರಸ್ಟ್ ಆಶ್ರಯದಲ್ಲಿ ಇಂದು ಏನಿಲ್ಲವೆಂದರೂ ೪೦-೫೦ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಪುದುವೆಟ್ಟಿನಂತಹ ಕುಗ್ರಾಮದ ಪ್ರಾಥಮಿಕ ಶಾಲೆಯಿಂದ ತೊಡಗಿ ಧಾರವಾಡದ ಭವ್ಯ ಇಂಜಿನಿಯರಿಂಗ್-ಮೆಡಿಕಲ್ ಕಾಲೇಜುಗಳವರೆಗೆ ವೈವಿಧ್ಯಮಯ ಶಿಕ್ಷಣ ಸಂಸ್ಥೆಗಳನ್ನು ಸಮಾನ ಕಾಳಜಿ ಮತ್ತು ಆಸಕ್ತಿಗಳಿಂದ ಶ್ರೀ ಕ್ಷೇತ್ರ ನಡೆಸಿಕೊಂಡು ಹೋಗುತ್ತಿದೆ.
ನಾಡಿನಾದ್ಯಂತ ಜನಮನ್ನಣೆ ಪಡೆದಿರುವ ಉಜಿರೆಯ ಎಸ್.ಡಿ.ಎಂ. ಸ್ವಾಯತ್ತ ಕಾಲೇಜು, ಧಾರವಾಡದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ದಂತವೈದ್ಯಕೀಯ ಕಾಲೇಜು, ಇಂಜಿನಿಯರಿಂಗ್ ಕಾಲೇಜು, ಉಡುಪಿ ಮತ್ತು ಹಾಸನಗಳಲ್ಲಿರುವ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ, ಮಂಗಳೂರಿನ ಕಾನೂನು ಮಹಾವಿದ್ಯಾಲಯ, ವ್ಯವಹಾರಾಡಳಿತ ಕಾಲೇಜು, ಏಷ್ಯಾದಲ್ಲೇ ಪ್ರಥಮವೆನಿಸಿರುವ ಉಜಿರೆಯ ನ್ಯಾಚುರೋಪತಿ ಮತ್ತು ಯೋಗವಿಜ್ಞಾನ ಕಾಲೇಜು, ಮೈಸೂರಿನ ಮಹಿಳಾ ಕಾಲೇಜು... ಕರ್ನಾಟಕದ ಉದ್ದಗಲದಲ್ಲಿ ಹರಡಿಕೊಂಡಿರುವ ಬಗೆಬಗೆಯ ಶಿಕ್ಷಣ ಸಂಸ್ಥೆಗಳು ಡಾ. ಹೆಗ್ಗಡೆಯವರ ದೂರದರ್ಶಿತ್ವ ಮತ್ತು ನಾಯಕತ್ವಕ್ಕೆ ಹಿಡಿದಿರುವ ಕೈಗನ್ನಡಿಗಳೇ ಸರಿ. ವಿದ್ಯಾಭ್ಯಾಸದ ಗುಣಮಟ್ಟದಲ್ಲಿ ಪ್ರತಿಯೊಂದೂ ’ಎ’ ದರ್ಜೆಯವಾದರೆ, ಸಂದರ್ಶಕರ ದೃಷ್ಟಿಗೆ ಒಂದೊಂದು ಕ್ಯಾಂಪಸ್ ಕೂಡ ಪ್ರವಾಸಿ ತಾಣಗಳೇ.
ಗ್ರಾಮ ಗಮನ
ಆಧುನಿಕ ಅವಶ್ಯಕತೆಗಳಿಗನುಗುಣವಾಗಿ ವೃತ್ತಿಪರ ಕಾಲೇಜುಗಳನ್ನು ತೆರೆದರೂ ಗ್ರಾಮೀಣ ಪ್ರದೇಶಗಳ ಶಿಕ್ಷಣ ಸುಧಾರಣೆಯೇ ಶ್ರೀ ಕ್ಷೇತ್ರದ ಪ್ರಥಮ ಆದ್ಯತೆ. ಶಿಕ್ಷಣ ಕ್ಷೇತ್ರದಲ್ಲಿ ಧರ್ಮಸ್ಥಳದ ಗಾಥೆ ಆರಂಭವಾದದ್ದು 1903ರಲ್ಲಿ ಆಗಿನ ಧರ್ಮಾಧಿಕಾರಿ ಕೀರ್ತಿಶೇಷ ಚಂದಯ್ಯ ಹೆಗ್ಗಡೆಯವರು ಪ್ರಾಥಮಿಕ ಶಾಲೆಯೊಂದನ್ನು ತೆರೆಯುವುದರೊಂದಿಗೆ. ನಂತರ ಬಂದ ಧರ್ಮಾಧಿಕಾರಿಗಳಾದ ಡಿ. ಮಂಜಯ್ಯ ಹೆಗ್ಗಡೆ ಹಾಗೂ ಡಿ. ರತ್ನವರ್ಮ ಹೆಗ್ಗಡೆಯವರು ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯ ಜೊತೆಗೆ ಪಾರಂಪರಿಕ ಮೌಲ್ಯಗಳನ್ನು ಹಾಗೂ ಆಧುನಿಕತೆಯನ್ನು ಬೆಸೆಯುವ ಅವಶ್ಯಕತೆಯನ್ನು ಮನಗಂಡರೆ, ಕಳೆದ ಐವತ್ತು ವರ್ಷಗಳಿಂದ ಧರ್ಮಾಧಿಕಾರಿಯಾಗಿರುವ ವೀರೇಂದ್ರ ಹೆಗ್ಗಡೆಯವರು ಶಿಕ್ಷಣ ಸಂಸ್ಥೆಗಳ ಯಶಸ್ಸನ್ನು ಉತ್ತುಂಗಕ್ಕೆ ತಲುಪಿಸಿದ್ದಾರೆ.
ಡಾ. ಹೆಗ್ಗಡೆಯವರು ಗ್ರಾಮೀಣ ಪ್ರದೇಶದ ಶಾಲೆಗಳ ಬಗ್ಗೆ ಗಮನ ನೀಡದೇ ಇರುತ್ತಿದ್ದರೆ, ಉಜಿರೆಯಲ್ಲಿ ರತ್ನಮಾನಸ-ಸಿದ್ಧವನದಂತಹ ಅನರ್ಘ್ಯ ರತ್ನಗಳು ಇಲ್ಲದೇ ಹೋಗಿರುತ್ತಿದ್ದರೆ ದಕ್ಷಿಣ ಕನ್ನಡದ ಕುಗ್ರಾಮಗಳಲ್ಲಿ ಬೆಳೆದ ನನ್ನಂತಹ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣದ ಬೆಳಕನ್ನೇ ಕಾಣುತ್ತಿರಲಿಲ್ಲ ಎಂಬುದು ನೂರು ಪ್ರತಿಶತ ಸತ್ಯ. ಧರ್ಮಸ್ಥಳ, ಉಜಿರೆ, ಬೆಳಾಲು, ಪೆರಿಂಜೆ, ಪುದುವೆಟ್ಟು, ಬೈಂದೂರು- ಇಂತಹ ಗ್ರಾಮೀಣ ಪ್ರದೇಶಗಳಲ್ಲೆಲ್ಲ ಎಸ್.ಡಿ.ಎಂ. ಶಾಲೆಗಳು ಇರುವುದರಿಂದಲೇ ಉಳಿದ ಮೂಲಕಸೌಕರ್ಯಗಳ ಕೊರತೆಯಿದ್ದರೂ ಇವೆಲ್ಲ ಶೈಕ್ಷಣಿಕವಾಗಿ ಶ್ರೀಮಂತವಾಗಿ ಬೆಳೆದಿವೆ. ಹಳ್ಳಿಗಾಡಿನ ಮೂಲೆಯಲ್ಲಿರುವ ಎಸ್.ಡಿ.ಎಂ. ಶಾಲೆಗಳೂ ಪೂರ್ಣಪ್ರಮಾಣದ ಸಿಬ್ಬಂದಿ, ತರಬೇತಾದ ಶಿಕ್ಷಕರು, ಸುಸಜ್ಜಿತ ಗ್ರಂಥಾಲಯ, ವ್ಯವಸ್ಥಿತ ಪ್ರಯೋಗಾಲಯ, ವಿಶಾಲ ಆಟದ ಮೈದಾನ, ಸುಂದರ ಉದ್ಯಾನವನಗಳಿಂದ ಕಂಗೊಳಿಸುತ್ತವೆ.
ನಗರ ಪ್ರದೇಶದಲ್ಲಿರುವ ಸುಸಜ್ಜಿತ ಶಾಲೆಗಳಿಂದ ತಮ್ಮ ಶಾಲೆಗಳೂ ಏನೇನೂ ಕಡಿಮೆಯಿಲ್ಲ ಎಂಬ ವಿಶ್ವಾಸ ಹಳ್ಳಿಗಳ ಬಡಮಕ್ಕಳಲ್ಲಿ ಮೂಡುವಲ್ಲಿ ಧರ್ಮಸ್ಥಳದ ಪಾತ್ರ ತುಂಬ ದೊಡ್ಡದು. ಕೇವಲ ತಾವು ಸ್ಥಾಪಿಸಿದ ಶಾಲೆಗಳಷ್ಟೇ ಡಾ. ಹೆಗ್ಗಡೆಯವರ ಕಾಳಜಿಯಲ್ಲ ಎಂಬುದು ಇಲ್ಲಿ ಗಮನಾರ್ಹ ಅಂಶ. ನಿರ್ಲಕ್ಷ್ಯಕ್ಕೆ ತುತ್ತಾಗಿರುವ ಕುಗ್ರಾಮಗಳ ಯಾವುದೇ ಶಾಲೆಯಿರಲಿ, ಅದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನೊದಗಿಸುವಲ್ಲಿ ಅವರು ಯಾವಾಗಲೂ ಒಂದು ಹೆಜ್ಜೆ ಮುಂದೆ.
ಡಾ. ಶಿವರಾಮ ಕಾರಂತರು 'ಪ್ರಾಥಮಿಕ ಶಿಕ್ಷಣಕ್ಕೆ ಪ್ರಥಮೋಪಚಾರವಾಗಬೇಕು’ ಎನ್ನುತ್ತಿದ್ದ ಕಾಲದಲ್ಲಿಯೇ ಧೂಳು ತಿನ್ನುತ್ತಿದ್ದ ಸರ್ಕಾರಿ ಕನ್ನಡ ಶಾಲೆಗಳಿಗೆ ಅಗತ್ಯವಿರುವ ಪೀಠೋಪಕರಣಗಳನ್ನು, ಅಧ್ಯಾಪಕರುಗಳನ್ನು ಶ್ರೀ ಕ್ಷೇತ್ರದ ಖರ್ಚಿನಲ್ಲಿಯೇ ಕಳುಹಿಸಿಕೊಟ್ಟ ಔದಾರ್ಯ ಹೆಗ್ಗಡೆಯವರದ್ದು. ಜ್ಞಾನದೀಪ, ಜ್ಞಾನವಿಕಾಸ ಮುಂತಾದ ಯೋಜನೆಗಳನ್ನು ಆರಂಭಿಸಿ ಜಿಲ್ಲೆಯ ಯಾವ ಮೂಲೆಯಲ್ಲಿ ಅಧ್ಯಾಪಕರ ಕೊರತೆಯಿದ್ದರೂ ಅಲ್ಲಿಗೆ ಅಧ್ಯಾಪಕರನ್ನು ನೇಮಿಸಿ ಸಂಬಳ ನೀಡಿ ಹಳ್ಳಿಯ ಶಾಲೆಗಳು ಬಡವಾಗದಂತೆ ನೋಡಿಕೊಂಡ ಅವರ ದೊಡ್ಡತನಕ್ಕೆ ಸಾಟಿ ಇಲ್ಲ. ಗ್ರಾಮೀಣಾಭಿವೃದ್ಧಿಯೇ ಮೂಲಮಂತ್ರವಾಗಿರುವ ಧರ್ಮಸ್ಥಳದ ಯೋಜನೆಗಳ ಹಿಂದೆ ಡಾ. ಹೆಗ್ಗಡೆಯವರ ಶೈಕ್ಷಣಿಕ ಸುಧಾರಣೆಗಳ ಪಾತ್ರ ಬಲುದೊಡ್ಡದು.
ಜೀವನ ಶಿಕ್ಷಣ
ಧರ್ಮಸ್ಥಳದ ಶೈಕ್ಷಣಿಕ ಸಾಧನೆಗಳಿಗೆಲ್ಲ ಕಿರೀಟಪ್ರಾಯವಾಗಿರುವುದು ಅದು ಮುನ್ನಡೆಸಿಕೊಂಡು ಬಂದಿರುವ ಜೀವನ ಶಿಕ್ಷಣದ ಪರಿಕಲ್ಪನೆ. ಉಜಿರೆಯಲ್ಲಿರುವ ಶ್ರೀ ಸಿದ್ಧವನ ಗುರುಕುಲ ಹಾಗೂ ರತ್ನಮಾನಸ ವಸತಿ ನಿಲಯಗಳೇ ಈ ಕಿರೀಟದ ಎರಡು ವಿಶಿಷ್ಟ ಮಣಿಗಳು. ರವೀಂದ್ರನಾಥ ಠಾಕೂರರ ’ಶಾಂತಿನಿಕೇತನ’ದ ಪರಿಕಲ್ಪನೆಯಿಂದ ಪ್ರೇರಣೆಗೊಂಡು 1940ರಲ್ಲಿ ಅಂದಿನ ಧರ್ಮಾಧಿಕಾರಿ ಡಿ. ಮಂಜಯ್ಯ ಹೆಗ್ಗಡೆಯವರು ಶ್ರೀ ಸಿದ್ಧವನ ಗುರುಕುಲವನ್ನು ಸ್ಥಾಪಿಸಿದರೆ, ಮಹಾತ್ಮ ಗಾಂಧೀಜಿಯವರ ಬುನಾದಿ ಶಿಕ್ಷಣದ ಚಿಂತನೆಯಿಂದ ಸ್ಫೂರ್ತಿ ಪಡೆದ ಡಾ. ವೀರೇಂದ್ರ ಹೆಗ್ಗಡೆಯವರು 1973ರಲ್ಲಿ ರತ್ನಮಾನಸವನ್ನು ಸ್ಥಾಪಿಸಿದರು.
ಇವು ಕೇವಲ ವಸತಿ ನಿಲಯಗಳಲ್ಲ, ವಿದ್ಯಾರ್ಥಿಗಳ ಸರ್ವತೋಮುಖ ಅಭ್ಯುದಯದ ಹೆದ್ದಾರಿಗಳು. ವಿವಿಧ ಜಾತಿ, ಮತ, ಸಮುದಾಯ, ಸಾಮಾಜಿಕ ಹಿನ್ನೆಲೆಗಳಿಗೆ ಸೇರಿದ ಮಕ್ಕಳು ಇಲ್ಲಿ ಔಪಚಾರಿಕ ಶಿಕ್ಷಣದ ಜೊತೆಗೆ ಕೃಷಿ-ಹೈನುಗಾರಿಕೆ-ವ್ಯಕ್ತಿತ್ವ ವಿಕಸನದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾ ಸಹಬಾಳ್ವೆ ನಡೆಸುವ ಪರಿ ಶಿಕ್ಷಣ ಜಗತ್ತಿಗೇ ಮಾದರಿ. ನಿಜವಾದ ಶಿಕ್ಷಣ ಓರ್ವನನ್ನು ಅವನ ಕಾಲಮೇಲೆ ನಿಲ್ಲಲು ಸಮರ್ಥನನ್ನಾಗಿಸಬೇಕು ಎನ್ನುವ ವೀರೇಂದ್ರ ಹೆಗ್ಗಡೆಯವರು ತಮ್ಮ ಕಾಣ್ಕೆಯನ್ನು ಈ ಸಂಸ್ಥೆಗಳ ಮೂಲಕ ಅನುಷ್ಠಾನಕ್ಕೆ ತಂದಿದ್ದಾರೆ.
ಶುಚಿ ಮನ, ರುಚಿ ಭೋಜನ, ಆದರ್ಶ ಶಿಕ್ಷಣ, ಸಾಹಿತ್ಯ ಚಿಂತನ, ಸಾಂಸ್ಕೃತಿಕ ಲೋಕದ ಅನಾವರಣ, ಸಂಸ್ಕೃತ ಪಠಣ, ಸರಳ ಜೀವನ, ಹಿರಿಯರು ತೋರಿದ ದಾರಿಯ ಮನನ, ಸಮಾನತೆಯ ಚಿತ್ರಣ, ನೋವು-ನಲಿವು ಭಾವನೆಗಳ ಸಮ್ಮಿಶ್ರಣ, ಪರಸ್ಪರ ಸಹಕಾರ ಸಮ್ಮಿಲನ, ಸಹಿಷ್ಣುತೆಯ ಗುಣ, ಒಗ್ಗಟ್ಟಿನ ತಾಣ - ಇದು ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ. ಬಿ. ಯಶೋವರ್ಮ ಅವರು ಸಿದ್ಧವನ-ರತ್ನಮಾನಸಗಳ ಸಾರಸರ್ವಸ್ವವನ್ನು ಚಿತ್ರಿಸುವ ರೀತಿ.
ಇಂತಹ ವಾತಾವರಣದಲ್ಲಿ ಬೆಳೆದ ನೂರಾರು ವಿದ್ಯಾರ್ಥಿಗಳು ಇಂದು ಪ್ರಪಂಚದ ನಾನಾಕಡೆ ಉನ್ನತ ಹುದ್ದೆಗಳನ್ನು ಅಲಂಕರಿಸಿ ಯಶಸ್ಸು ಪಡೆದಿದ್ದಾರೆ. ಆದರೆ ಅವರು ತಮ್ಮ ಬೇರುಗಳನ್ನು ಮರೆತಿಲ್ಲ. ಏಕೆಂದರೆ ಅವರು ಪಡೆದಿರುವುದು ಬುನಾದಿ ಶಿಕ್ಷಣ. ಎಂತಹ ಪರಿಸ್ಥಿತಿಯನ್ನೂ ನಿಭಾಯಿಸಿಕೊಂಡು ಹೋಗಬಲ್ಲ ಆತ್ಮವಿಶ್ವಾಸವನ್ನು ದೃಢತೆಯನ್ನೂ ಘನತೆಯನ್ನೂ ಅವರಿಗೆ ಗುರುಕುಲ ಪದ್ಧತಿ ಕಲಿಸಿಕೊಟ್ಟಿದೆ. ಪಾಯ ಭದ್ರವಾಗಿರುವುದರಿಂದಲೇ ಅವರ ಬದುಕಿನ ಸೌಧ ಭವ್ಯವಾಗಿದೆ.
ಯೋಗ ಮತ್ತು ನೈತಿಕ ಶಿಕ್ಷಣ ಎಸ್.ಡಿ.ಎಂ. ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗ. ಡಾ. ಹೆಗ್ಗಡೆಯವರು ಸ್ಥಾಪಿಸಿದ ಶಾಂತಿವನ ಟ್ರಸ್ಟ್ ತನ್ನ 'ಯೋಗ ಮತ್ತು ನೈತಿಕ ಶಿಕ್ಷಣ ಅನುಷ್ಠಾನ ಯೋಜನೆ’ಯ ಮೂಲಕ ಶಿಕ್ಷಣದ ಮೌಲ್ಯವರ್ಧನೆಗೆ ನಿರಂತರ ಶ್ರಮಿಸುತ್ತಿದೆ. ಗಾಂಧೀಜಿ, ಸುಭಾಶ್ಚಂದ್ರ ಬೋಸ್, ವಿವೇಕಾನಂದ ಮೊದಲಾದ ಮಹಾತ್ಮರ ಜೀವನ ಸಂದೇಶಗಳನ್ನು ಸಾರುವ, ವ್ಯಕ್ತಿತ್ವ ವಿಕಸನದ ಮಹತ್ವ ಹೇಳುವ ಪುಸ್ತಕಗಳನ್ನು ಲಕ್ಷಾನುಗಟ್ಟಲೆ ಮುದ್ರಿಸಿ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಂಚಿ ಅವುಗಳ ಬಗ್ಗೆ ಭಾಷಣ-ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ನೀಡುವ ಯೋಜನೆಯ ದೂರದರ್ಶಿತ್ವ ಪ್ರಶಂಸನೀಯ.
ವಿದ್ಯಾರ್ಥಿಗಳ ಕೌಶಲ ಮತ್ತು ಸೃಜನಶೀಲತೆಯು ವೃತ್ತಿ ಆಧಾರಿತವಾಗಿರಬೇಕು ಹಾಗೂ ವಿದ್ಯಾರ್ಥಿಗಳು ನಿಸ್ವಾರ್ಥ ಗುಣಗಳಿಂದ ಸಮಾಜದ ಅಭ್ಯುದಯದಲ್ಲಿ ತೊಡಗಿಸಿಕೊಳ್ಳಬೇಕೆಂಬ ಬಯಕೆಯಿಂದ ವಿಭಿನ್ನ ವಿಷಯಗಳನ್ನು ಆಧರಿಸಿದ ಶಿಕ್ಷಣ ಸಂಸ್ಥೆಗಳನ್ನು ಅಭಿವೃದ್ಧಿಪಡಿಸಿದೆವು. ಜಗತ್ತಿನ ವೇಗದೊಂದಿಗೆ ಮುನ್ನಡೆಯಲು ಬೇಕಾದ ಎಲ್ಲ ರೀತಿಯ ಬೌದ್ಧಿಕ ಮತ್ತು ಭೌತಿಕ ಪರಿಸರವನ್ನು ರೂಪಿಸಿದೆವು. ಇದರ ಸದುಪಯೋಗವನ್ನು ಪಡೆದುಕೊಂಡ ವಿದ್ಯಾರ್ಥಿ ಸಮೂಹ ನಾಡಿನಾದ್ಯಂತ ಇಂದು ಪಸರಿಸಿ 'ಎಸ್‌ಡಿಎಂ ಸಂಸ್ಕೃತಿ’ ಎಂಬ ಮಾದರಿಯೊಂದನ್ನು ಹುಟ್ಟು ಹಾಕಿದ್ದಾರೆ ಎಂದು ತಮ್ಮ ಲೇಖನವೊಂದರಲ್ಲಿ ಬರೆಯುತ್ತಾರೆ ಡಾ. ಹೆಗ್ಗಡೆ.
ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ
ಚಿತ್ತದೊಳು ಬೆಳೆದರಿವು ತರುತಳೆದ ಪುಷ್ಪ
ವಸ್ತು ಸಾಕ್ಷಾತ್ಕಾರವಂತರೀಕ್ಷಣೆಯಿಂದ
ಶಾಸ್ತ್ರಿತನದಿಂದಲ್ಲ - ಮಂಕುತಿಮ್ಮ
ಎಂಬ ಡಿವಿಜಿಯರ ಕನಸಿಗೆ ರಾಜರ್ಷಿ ವೀರೇಂದ್ರ ಹೆಗ್ಗಡೆಯವರು ಹೇಳುವ 'ಎಸ್‌ಡಿಎಂ ಸಂಸ್ಕತಿ’ ತುಂಬ ಅನುರೂಪವಾಗಿದೆ. ಬಹುಶಃ ವರ್ತಮಾನದ ಶಿಕ್ಷಣ ಪದ್ಧತಿ ಎದುರಿಸುತ್ತಿರುವ ಅಷ್ಟೂ ಕಾಯಿಲೆಗಳಿಗೆ ಎಸ್‌ಡಿಎಂ ಸಂಸ್ಕೃತಿಯಲ್ಲಿ ಅತ್ಯಂತ ಸೂಕ್ತ ಚಿಕಿತ್ಸೆಗಳೂ ಔಷಧಿಗಳೂ ಇವೆ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ