ಮಂಗಳವಾರ, ಆಗಸ್ಟ್ 8, 2017

ನುಡಿಯೊಳಗಾಗಿ ನಡೆಯದಿದ್ದರೆ...

2017 ಜುಲೈ 29 - ಆಗಸ್ಟ್ 4ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ.

ಪ್ರಸಿದ್ಧ ಚಿಂತಕ ಬಟ್ರ್ರೆಂಡ್ ರಸೆಲ್ ಬರೆಯುತ್ತಾರೆ: ನಮ್ಮಲ್ಲಿ ಎರಡು ಬಗೆಯ ನೈತಿಕತೆಗಳು ಇವೆ – ಒಂದು, ನಾವು ಬೋಧಿಸುತ್ತೇವೆ ಆದರೆ ಆಚರಿಸುವುದಿಲ್ಲ, ಇನ್ನೊಂದು ನಾವು ಆಚರಿಸುತ್ತೇವೆ ಆದರೆ ಎಂದೂ ಬೋಧಿಸುವುದಿಲ್ಲ. ನಿಜ, ಜಗತ್ತಿನ ಬಹುಪಾಲು ಸಮಸ್ಯೆಗಳಿಗೆ ಕಾರಣ ಬೋಧನೆ ಮತ್ತು ಆಚರಣೆಯ ನಡುವೆ ಇರುವ ಆಕಾಶ-ಪಾತಾಳದಂತಹ ಅಂತರ. ಬಟ್ರ್ರೆಂಡ್ ರಸೆಲ್ ಹೇಳುವ ಎರಡನೆಯ ನೈತಿಕತೆ ಎಲ್ಲರಲ್ಲೂ ಮನೆ ಮಾಡಿದರೆ ಸಮಾಜದಲ್ಲಿ ಯಾವ ಸಮಸ್ಯೆಯೂ ಉಳಿಯಲಾರದು. ಆದರೆ ಅನುಷ್ಠಾನಕ್ಕಿಂತ ಭಾಷಣಗಳು ಹೆಚ್ಚಾಗಿರುವುದೇ ನಮ್ಮ ಕಾಲದ ಅತ್ಯಂತ ದೊಡ್ಡ ವ್ಯಂಗ್ಯ.

ಸಮಾಜದ ಕಟ್ಟಕಡೆಯ ವ್ಯಕ್ತಿಯ ಉದ್ಧಾರದ ಬಗೆಗೇ ಸದಾ ಭಾಷಣ ಮಾಡುವ ರಾಜಕಾರಣಿಗಳು, ಯೋಜನೆಗಳ ಸಂಪೂರ್ಣ ಅನುಷ್ಠಾನವೇ ತಮ್ಮ ಪರಮಗುರಿಯೆಂದು ವಚನ ನೀಡುವ ಭ್ರಷ್ಟ ಅಧಿಕಾರಿಗಳು, ಜಾತ್ಯತೀತ ಸಮಾಜದ ನಿರ್ಮಾಣದ ಬಗ್ಗೆ ವೇದಿಕೆ ಸಿಕ್ಕಲ್ಲೆಲ್ಲ ಬಡಬಡಿಸುವ ಮಹಾನ್ ಜಾತೀವಾದಿಗಳು,  ಹುಟ್ಟುಹಬ್ಬದ ದಿನ ಅನಾಥಾಶ್ರಮದ ಮಕ್ಕಳಿಗೆ ಕೇಕು ತಿನ್ನಿಸುವ ಗ್ಲಾಮರ್ ಲೋಕದ ತಾರೆಗಳು, ನಿಷ್ಕಾಮ ಕರ್ಮ ಮತ್ತು ಸರ್ವಸಂಗ ಪರಿತ್ಯಾಗದ ಬಗ್ಗೆ ಪ್ರವಚನ ನೀಡುವ ಶ್ರೀಮಂತ ಧರ್ಮಗುರುಗಳು, ನೈತಿಕತೆ ಮತ್ತು ಸನ್ನಡತೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಥಾನುಗಟ್ಟಲೆ ಬೋಧಿಸುವ ನೀತಿಗೆಟ್ಟ ಶಿಕ್ಷಕರು... ಸಮಾಜ ಇಂಥವರಿಂದಲೇ ತುಂಬಿ ಹೋದಾಗ ಬೆಕ್ಕಿನ ಕೊರಳಿಗೆ ಗಂಟೆ ಕಟ್ಟುವವರು ಯಾರು ಎಂಬ ಪ್ರಶ್ನೆ ಮಾತ್ರ ಉಳಿಯುತ್ತದೆ.

ಕುಟಿಲವ ಬಿಡದಿಹ ಮನುಜರು ಮಂತ್ರವ /  
ಪಠನೆಯ ಮಾಡಿದರೇನು ಫಲ? 
ಸಟೆಯನ್ನಾಡುವ ಮನುಜರು ಸಂತತ / 
ನಟನೆಯ ಮಾಡಿದರೇನು ಫಲ?’
ಎಂದು ಕೇಳುತ್ತಾರೆ ಪುರಂದರದಾಸರು. ಮನಸ್ಸು ಪೂರ್ತಿ ವಿಷವನ್ನೇ ತುಂಬಿಕೊಂಡು ಊರೆಲ್ಲ ಅಮೃತವೇ ತುಂಬಿ ಹರಿಯಬೇಕೆಂದು ಬಯಸುವುದರಲ್ಲಿ ಯಾವ ಅರ್ಥವೂ ಇರುವುದಿಲ್ಲ. ಆಚಾರಕ್ಕೂ ವಿಚಾರಕ್ಕೂ ತಾಳಮೇಳಗಳಿಲ್ಲದೇ ಹೋದಾಗ ಸಮಾಜ ಬರೀ ನಾಟಕ ಪ್ರದರ್ಶನಗಳ ವೇದಿಕೆ ಆಗಿಬಿಡುತ್ತದೆ.

ಕಪಟತನದಲ್ಲಿ ಕಾಡುತ ಜನರನು /
ಜಪವನು ಮಾಡಿದರೇನು ಫಲ? 
ಕಲುಷಿತ ತನುವನು ಬಿಡದೆ ನಿರಂತರ / 
ಜಪವನು ಮಾಡಿದರೇನು ಫಲ?’
ಎಂದು ದಾಸರು ನಮ್ಮ ಸುತ್ತಲಿನ ನಟಭಯಂಕರರನ್ನು ಉದ್ದೇಶಿಸಿಯೇ ಕೇಳಿದ್ದಾರೆ.

ವಿದ್ಯೆಗೆ ವಿನಯವೇ ಭೂಷಣ ಎನ್ನುವ ತಥಾಕಥಿತ ವಿದ್ವಾಂಸ ತಾನೇ ಮಹಾಜ್ಞಾನಿಯೆಂದು ಬೀಗುತ್ತಾ ಕುಳಿತರೆ, ದೊಡ್ಡವರೆಂದರೆ ಬೆಲೆಯೇ ಇಲ್ಲ ಎಂದು ಮಕ್ಕಳೆದುರು ಹಲ್ಲುಕಡಿಯುವ ಅಪ್ಪ-ಅಮ್ಮ ತಮ್ಮ ಹಿರಿಯರೆದುರು ಹೇಗೆ ವರ್ತಿಸಬೇಕೆಂದು ಅರ್ಥ ಮಾಡಿಕೊಳ್ಳದೇ ಹೋದರೆ, ಮಾತಾಡುವುದೇ ಸಾಧನೆಯಾಗಬಾರದು ಸಾಧನೆ ಮಾತನಾಡಬೇಕು ಎಂದು ಪುಟಗಟ್ಟಲೆ ಬರೆಯುವ ಸಾಹಿತಿಯು ಪ್ರಶಸ್ತಿಗಳಿಗೆ ಲಾಬಿ ಮಾಡುವುದರಲ್ಲೇ ಕಾಲ ಕಳೆದರೆ ಸಮಾಜಕ್ಕೆ ನಿಜವಾಗಿಯೂ ಮಾದರಿ ಒದಗಿಸಬೇಕಾದವರು ಯಾರು ಎಂಬ ಪ್ರಶ್ನೆ ಉತ್ತರವಿಲ್ಲದೇ ಒದ್ದಾಡುತ್ತದೆ.

ಪಾತಾಳ ಗಂಗೆಯಲ್ಲಿ ಮುಳುಗೆದ್ದರೆ
ನಿನ್ನ ದೇಹದ ಮೇಲಣ ಮಣ್ಣು ಹೋಯಿತಲ್ಲದೆ
ನಿನ್ನ ಪಾಪವು ಹೋಗಲಿಲ್ಲವು
ಎನ್ನುತ್ತಾರೆ ಅಂಬಿಗರ ಚೌಡಯ್ಯ. ಅಂತರಂಗ ಶುದ್ಧಿಯಾಗದೆ ಬಹಿರಂಗದಲ್ಲಿ ಮಿರಿಮಿರಿ ಮಿಂಚಿದರೆ ಆ ತೋರಿಕೆಯ ಹೊಳಪಿಗೆ ಯತಾರ್ಥವಾಗಿ ಯಾವ ಮೌಲ್ಯವೂ ಉಳಿದುಕೊಳ್ಳುವುದಿಲ್ಲ. ಬಡಜನರ ತಲೆಯೊಡೆದು ಕೋಟಿಗಟ್ಟಲೆ ಸಂಪಾದಿಸಿ ದೇವರಿಗೆ ರತ್ನಖಚಿತ ಕಿರೀಟ ಅರ್ಪಿಸಿದರೆ ಆ ದೇವರು ಒಲಿಯುತ್ತಾನೆಯೇ? ಅನ್ಯಾಯದಿಂದ ಅರ್ಜಿಸಿದ ಸಂಪತ್ತಿನಿಂದ ಚಿನ್ನದ ರಥ ಮಾಡಿಸಿ ಹರಕೆ ತೀರಿಸಿದರೆ ಭಗವಂತ ಒಪ್ಪಿಕೊಳ್ಳುತ್ತಾನೆಯೇ? ‘ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ ಕೊಳೆವುದಲ್ಲದೆ ಬಲುಹಾಗಬಲ್ಲುದೆ?’ ಎಂದು ಬಸವಣ್ಣ ಇಂತಹ ಡಾಂಬಿಕರನ್ನುದ್ದೇಶಿಸಿಯೇ ಕೇಳಿರುವುದು.

ಧರ್ಮದ ರಹಸ್ಯ ಸಿದ್ಧಾಂತಗಳಲ್ಲಿಲ್ಲ, ಅದರ ಅನುಷ್ಠಾನದಲ್ಲಿದೆ ಎಂದರು ಸ್ವಾಮಿ ವಿವೇಕಾನಂದರು. ಇಪ್ಪತ್ತು ಸಾವಿರ ಟನ್ನು ಬೋಧನೆಗಿಂತ ಒಂದು ಹಿಡಿ ಆಚರಣೆ ಮೇಲು ಎಂಬುದು ಅವರ ನಂಬಿಕೆಯಾಗಿತ್ತು. ಹಸಿದವನ ಮುಂದೆ ಪ್ರವಚನ ಮಾಡಬೇಡಿ, ಒಂದು ತುತ್ತು ಅನ್ನ ಹಾಕಿ ಎಂಬ ಅವರ ಮಾತಿನ ಹಿಂದಿರುವುದೂ ಇದೇ ಆಶಯ. ನುಡಿಯೊಳಗಾಗಿ ನಡೆಯದಿದ್ದರೆ ನಮ್ಮ ಕೂಡಲಸಂಗಮ ದೇವನೊಲಿಯನಯ್ಯ ಎಂದ ಬಸವಣ್ಣನವರು ತಮ್ಮ ಜೀವನಪೂರ್ತಿ ಅಚಾರ-ವಿಚಾರಗಳ ನಡುವಿನ ಸಾಂಗತ್ಯದ ಬಗೆಗೇ ಮಾತನಾಡುತ್ತಾ ಹೋದರು.

ಕಲ್ಲ ನಾಗರ ಕಂಡಡೆ ಹಾಲನೆರೆಯೆಂಬರು
ದಿಟದ ನಾಗರ ಕಂಡಡೆ ಕೊಲ್ಲೆಂಬರಯ್ಯ
ಉಂಬ ಜಂಗಮ ಬಂದಡೆ ನಡೆಯೆಂಬರು
ಉಣ್ಣದ ಲಿಂಗಕ್ಕೆ ಬೋನವ ಹಿಡಿಯೆಂಬರಯ್ಯ
ಎಂಬ ಅವರ ವಚನ ಜನರ ಮಾತಿಗೂ ಕೃತಿಗೂ ಇರುವ ವ್ಯತ್ಯಾಸದ ಕೈಗನ್ನಡಿಯಷ್ಟೇ ಅಲ್ಲ, ಸಿದ್ಧಾಂತಕ್ಕೂ ಆಚರಣೆಗೂ ಸಂಬಂಧವಿಲ್ಲದೇ ಹೋದಾಗ ವಾಸ್ತವ ಎಷ್ಟು ನಗೆಪಾಟಲಿಗೀಡಾಗುತ್ತದೆ ಎಂಬ ಎಚ್ಚರಿಕೆಯೂ ಆಗಿದೆ.

ಹೆತ್ತ ತಾಯನು ಮಾರಿ | ತೊತ್ತ ತಂದಾ ತೆರದಿ
ತುತ್ತಿನಾತುರಕೆ ತತ್ತ್ವವನು ತೊರೆದಿಹನು
ಕತ್ತೆ ತಾನೆಂದ! ಸರ್ವಜ್ಞ
ಎಂಬ ಸರ್ವಜ್ಞ ಕವಿಯ ವಚನದಲ್ಲೂ ಆಚಾರ-ವಿಚಾರಗಳ ತುಲನೆಯೇ ಮುಖ್ಯವಾಗಿದೆ. ತಂದೆ-ತಾಯಿಗಳನ್ನು ಅವರ ವೃದ್ಧಾಪ್ಯದಲ್ಲಿ ನೋಡಿಕೊಳ್ಳಲಾಗದ ಮಕ್ಕಳು ತಮ್ಮ ಇಳಿವಯಸ್ಸಿನಲ್ಲಿ ತಮ್ಮ ಮಕ್ಕಳು ಚೆನ್ನಾಗಿ ನೋಡಿಕೊಳ್ಳಲಿ ಎಂದು ಬಯಸುವುದರಲ್ಲಿ ಏನು ನ್ಯಾಯವಿದೆ? ಶಿಷ್ಯರೆದುರು ಗೌರವಕ್ಕೆ ಅರ್ಹವಾಗಿ ನಡೆದುಕೊಳ್ಳಲಾಗದ ಗುರುಗಳು ಅದೇ ಶಿಷ್ಯರು ತಮ್ಮನ್ನು ಗೌರವಾದರಗಳಿಂದ ಕಾಣಬೇಕೆಂದು ನಿರೀಕ್ಷಿಸುವುದರಲ್ಲಿ ಏನು ಅರ್ಥವಿದೆ?

ಸದಾಚಾರ ಭಾರತೀಯ ನೆಲದ ಅಂತಃಸತ್ವ. ಆಚಾರವೇ ಸ್ವರ್ಗ, ಅನಾಚಾರವೇ ನರಕ ಎಂದು ನಂಬಿದ ನಾಡು ಇದು. ಆಚಾರಕ್ಕರಸಾಗು ನೀತಿಗೆ ಪ್ರಭುವಾಗು ಎಂದು ಹಾಡಿದ ಜನಪದರ ಭೂಮಿ ಇದು. ಈ ಸದಾಚಾರ ಸಮಾಜದ ಯಾವುದೋ ಮೂಲೆಯಿಂದ ತಾನೇತಾನಾಗಿ ಉದಿಸಿಬರಬೇಕೆಂದು ನಿರೀಕ್ಷಿಸುವುದು ಹೇಗೆ? ಅದರ ಜವಾಬ್ದಾರಿ ಒಬ್ಬೊಬ್ಬ ವ್ಯಕ್ತಿಯ  ಮೇಲೂ ಇದೆ. ಪ್ರತಿಯೊಬ್ಬನೂ ತನ್ನ ಕರ್ತವ್ಯವನ್ನು ಸಮರ್ಪಕವಾಗಿ ಮಾಡುತ್ತಾ ಹೋದರೆ ನಡೆ-ನುಡಿಯ ವ್ಯತ್ಯಾಸಗಳೇ ಉಳಿಯುವುದಿಲ್ಲ; ಇನ್ನೊಬ್ಬನನ್ನು ದೂರುವ ಪ್ರಶ್ನೆಯೂ ಇರುವುದಿಲ್ಲ. ಈ ಕರ್ತವ್ಯ ಮನೆಯಿಂದಲೇ ಆರಂಭವಾಗಲಿ. ಏಕೆಂದರೆ ಮನೆಯೆ ಮೊದಲ ಪಾಠಶಾಲೆ. ಈ ಶಾಲೆಯಲ್ಲಿ ನಡತೆಯೇ ಪಾಠ, ಪರಿಣಾಮವೇ ಪರೀಕ್ಷೆ. ವಿಚಾರವೆಲ್ಲವೂ ಆಚಾರ ರೂಪದಲ್ಲಿಯೇ ಇರುವ ಏಕೈಕ ಸ್ಥಳವದು. ಮನೆಯಲ್ಲಿ ಕಲಿತ ಪಾಠ ಶಾಶ್ವತ. ಹಿರಿಯಕ್ಕನ ಚಾಳಿ ಮನೆಮಕ್ಕಳಿಗೆಲ್ಲ ಎಂಬ ಗಾದೆಯೇ ಇದೆಯಲ್ಲ? ನಮ್ಮ ನಡೆನುಡಿ ಚಿಂತನೆಗಳಂತೆ ನಮ್ಮ ಮಕ್ಕಳು ರೂಪುಗೊಳ್ಳುತ್ತಾರೆ. ನುಡಿಯೊಳಗಾಗಿ ನಡೆಯುವ ವ್ರತದ ಬೀಜ ಮನೆಗಳಲ್ಲೇ ಮೊಳೆತರೆ ಸಮಾಜ ಸ್ವಾಸ್ಥ್ಯದ ಹೊಲವಾಗುವುದು ನಿಸ್ಸಂಶಯ.

ಕಾಮೆಂಟ್‌ಗಳಿಲ್ಲ: