ಗುರುವಾರ, ನವೆಂಬರ್ 22, 2012

ಮಾಧ್ಯಮರಂಗದಲ್ಲಿ ವಿದೇಶಿ ಬಂಡವಾಳ: ಪರರ ಕೈಯಲ್ಲಿ ಕಾವಲುನಾಯಿಯ ಕುತ್ತಿಗೆಪಟ್ಟಿ


ಮಾಧ್ಯಮಶೋಧ-30, ಹೊಸದಿಗಂತ 23-11-2012

ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆ (FDI) ವಿಚಾರವಾಗಿ ನಡೆದ ದೊಡ್ಡಮಟ್ಟದ ಪ್ರತಿಭಟನೆ ಹಾಗೂ ಚರ್ಚೆಗಳ ಅಡಾವುಡಿಯಲ್ಲಿ ಟಿವಿ ಪ್ರಸಾರ ಸೇವಾ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆ ಮಿತಿಯನ್ನು ಶೇ. 49ರಿಂದ ಶೇ. 74ಕ್ಕೆ ಏರಿಸಿದ್ದು ಒಂದು 'ಚಿಲ್ಲರೆ’ ವಿಷಯವಾಗಿ ಗೌಣವಾಯಿತೇ ಎಂಬುದು ಸದ್ಯದ ಅನುಮಾನ. ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿನ ವಿದೇಶಿ ನೇರ ಬಂಡವಾಳ ಹೂಡಿಕೆಯ ಕುರಿತಾಗಿ ಇಷ್ಟೆಲ್ಲ ವಾದವಿವಾದಗಳು ನಡೆಯುತ್ತಿರುವ ವೇಳೆಯಲ್ಲೇ ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಂತಹದೇ ಬೆಳವಣಿಗೆ ಸಂಭವಿಸಿದರೂ ಆ ಕುರಿತು ವಿಶೇಷ ಚರ್ಚೆಗಳೇನೂ ನಡೆಯದಿರುವುದೇ ಈ ಅನುಮಾನಕ್ಕೆ ಕಾರಣ. ಚಿಲ್ಲರೆ ವಹಿವಾಟು ಕ್ಷೇತ್ರ ಹಾಗೂ ಮಾಧ್ಯಮ ಕ್ಷೇತ್ರಗಳಲ್ಲಿ ಎಫ್‌ಡಿಐ ಪ್ರವೇಶ ಅಥವಾ ಅದರ ಮಿತಿ ಹೆಚ್ಚಳದಿಂದ ಆಗುವ ಪರಿಣಾಮಗಳು ವಿಭಿನ್ನವಾಗಿರಬಹುದು, ಆದರೆ ಯಾವುದೇ ರಂಗದಲ್ಲಿ ಏನೇ ಸಂಭವಿಸಲಿ, ಅಂತಿಮವಾಗಿ ಎಲ್ಲ ಬಗೆಯ ಭಾರಗಳಿಗೆ ಹೆಗಲು ಕೊಡಬೇಕಾದವನು ಭಾರತವೆಂಬ ಶ್ರೀಮಂತ ಪ್ರಜಾಪ್ರಭುತ್ವದ ಬಡ ಶ್ರೀಸಾಮಾನ್ಯ ಎಂಬುದು ನಿಸ್ಸಂಶಯ.

ಚಿಲ್ಲರೆ ವಹಿವಾಟು ಕ್ಷೇತ್ರದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಮಿತಿ ಹೆಚ್ಚಳವಾದುದರ ನಡುವೆಯೇ, ಡಿಟಿಎಚ್, ಕೇಬಲ್ ಜಾಲ, ಹೆಡ್‌ಎಂಡ್-ಇನ್-ದ-ಸ್ಕೈ (HITS) ಸೇವೆ, ಮಲ್ಟಿಸರ್ವಿಸ್ ಆಪರೇಶನ್‌ಗಳಲ್ಲಿನ ಎಫ್‌ಡಿಐನ್ನು ಕೇಂದ್ರ ಸರ್ಕಾರ ಸದ್ದಿಲ್ಲದೆಯೇ ಶೇ. 49ರಿಂದ ಶೇ. 74ಕ್ಕೆ ಏರಿಸಿಬಿಟ್ಟಿದೆ. ಮೇಲ್ನೋಟಕ್ಕೆ ಉದ್ಯಮಿಗಳಿಗೆ ಇದೊಂದು ವರದಾನದಂತೆ ಕಂಡುಬಂದರೂ, ಈ ಬಗೆಯ ಬೆಳವಣಿಗೆಗಳೆಲ್ಲ ದೀರ್ಘಾವಧಿಯಲ್ಲಿ ಮಾಧ್ಯಮ ಕ್ಷೇತ್ರದ ಒಟ್ಟು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವುದರಲ್ಲಿ ಸಂಶಯವಿಲ್ಲ ಎನಿಸುತ್ತದೆ. ಕೇಬಲ್ ಸೇವೆ, ಡಿಟಿಎಚ್‌ಗಳಲ್ಲಿನ ವಿದೇಶಿ ನೇರಬಂಡವಾಳ ಹೂಡಿಕೆ ಮಿತಿ ಏರಿಕೆಯಿಂದ ಮಾಧ್ಯಮರಂಗಕ್ಕೆ ಅಂತಹ ಆಘಾತವಾಗುವುದೇನಿದೆ ಎಂಬ ಪ್ರಶ್ನೆ ಸಹಜವೇ; ಆದರೆ ಇದೆಲ್ಲ ಹಂತಹಂತವಾಗಿ ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆನಿಸಿರುವ ನಮ್ಮ ಮಾಧ್ಯಮರಂಗವನ್ನು ವಿದೇಶಿ ಶಕ್ತಿಗಳ ಕೈಗೆ ಒಪ್ಪಿಸುವ ಪ್ರಕ್ರಿಯೆಯ ಒಂದು ಭಾಗವೇ ಆಗಿದೆ.

1954ರಷ್ಟು ಹಿಂದೆಯೇ ಭಾರತದ ಪ್ರಥಮ ಪತ್ರಿಕಾ ಆಯೋಗ ಮುದ್ರಣ ಮಾಧ್ಯಮದಲ್ಲಿ ವಿದೇಶೀ ಬಂಡವಾಳ ಹೂಡಿಕೆಯನ್ನು ವಿರೋಧಿಸಿ ಶಿಫಾರಸು ಮಾಡಿತ್ತು. ಅದರ ಮುಂದಿನ ವರ್ಷವೇ ಸುದ್ದಿ ಹಾಗೂ ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ಪತ್ರಿಕೆಗಳು ಹಾಗೂ ನಿಯತಕಾಲಿಕಗಳು ಯಾವುದೇ ಕಾರಣಕ್ಕೂ ಭಾರತೀಯ ಆವೃತ್ತಿಗಳನ್ನು ತರಕೂಡದೆಂದು ಕೇಂದ್ರ ಸರ್ಕಾರ ಆದೇಶವೊಂದನ್ನು ಹೊರಡಿಸಿತು. ಇದಾಗಿ ಸುಮಾರು ಮೂರು ದಶಕಗಳ ನಂತರ ಬಂದ ಎರಡನೇ ಪತ್ರಿಕಾ ಆಯೋಗವೂ ಈ ವಿಷಯವನ್ನು ಇನ್ನಷ್ಟು ಸ್ಪಷ್ಟಪಡಿಸಿತು.  ಶೇರು ರೂಪದಲ್ಲಾಗಲೀ ಸಾಲ ರೂಪದಲ್ಲಾಗಲೀ ಯಾವುದೇ ಪತ್ರಿಕೆ ವಿದೇಶಿ ಮಾಲೀಕತ್ವವನ್ನು ಹೊಂದದಂತೆ ಸ್ಪಷ್ಟ ಕಾನೂನು ನಿಯಮಗಳಿರಬೇಕು ಎಂಬುದು ಆಯೋಗದ ಅಭಿಪ್ರಾಯವಾಗಿತ್ತು.

ಆದರೆ ಮತ್ತೆ ಹತ್ತು ವರ್ಷ ಉರುಳುವಲ್ಲಿ ಇಡೀ ಜಗತ್ತೇ ಬದಲಾಗಿ ಹೋಗಬಹುದೆಂದು ಯಾರೂ ಊಹಿಸಿರಲಿಲ್ಲ. ಇದ್ದಕ್ಕಿದ್ದಂತೆ ದೇಶದೇಶಗಳ ನಡುವಿನ ಗೋಡೆಗಳೆಲ್ಲ ಕಳಚಿ ಬೀಳಲಾರಂಭಿಸಿದವು. ಬೇಲಿಗಳೆಲ್ಲ ಬಿದ್ದು ಬಾಗಿಲುಗಳೆಲ್ಲ ಉರುಳಿ ಪ್ರಪಂಚದ ಗಾತ್ರ ಕುಗ್ಗತೊಡಗಿತು. ಉದಾರೀಕರಣ ಹಾಗೂ ಖಾಸಗೀಕರಣಗಳ ಚಂಡಮಾರುತದ ನಡುವೆ ಭಾರತವೊಂದು ಒಂಟಿ ನಾವೆಯಾಗಿ ಬದುಕುಳಿಯುವ ಯಾವುದೇ ಲಕ್ಷಣ ಇರಲಿಲ್ಲ. 1990ರ ಆರಂಭದಲ್ಲಿ ಪಿ. ವಿ. ನರಸಿಂಹರಾವ್ ನೇತೃತ್ವದಲ್ಲಿ ಭಾರತಕ್ಕೆ ಅಡಿಯಿಟ್ಟ ಆರ್ಥಿಕ ಉದಾರೀಕರಣದ ಬುಲ್ಡೋಜರ್ ಮಾಧ್ಯಮ ಕ್ಷೇತ್ರದ ಕಡೆಗೂ ದೃಷ್ಟಿ ಹರಿಸದೆ ಇರಲಿಲ್ಲ. ಆದರೆ ತತ್‌ಕ್ಷಣಕ್ಕೆ ಮಾಧ್ಯಮರಂಗಕ್ಕೆ ಬಲೆಬೀಸುವುದು ಸುಲಭದ ಮಾತಾಗಿರಲಿಲ್ಲ. ಎಲ್ಲೆಡೆಯಿಂದ ವ್ಯಾಪಕ ವಿರೋಧ ವ್ಯಕ್ತವಾಯಿತು. 40-50 ವರ್ಷಗಳಿಂದ ವಿರೋಧಿಸುತ್ತ ಬಂದಿದ್ದ ಸಂಗತಿಯೊಂದನ್ನು ಇದ್ದಕ್ಕಿದ್ದಂತೆ ಒಪ್ಪಿಕೊಳ್ಳುವುದು ಹೇಗೆ ಸಾಧ್ಯ?

ಆದರೆ ಈ ಜಾಗತೀಕರಣವೆಂಬುದು ಅತಿಂಥ ಬುಲ್ಡೋಜರ್ ಏನಲ್ಲ. ಅದಕ್ಕೆ ಕಣಿವೆ-ಪರ್ವತಗಳೆಲ್ಲ ಲೆಕ್ಕವೇ ಅಲ್ಲ. ಮತ್ತೆ ಹತ್ತು ವರ್ಷ ಉರುಳಬೇಕಾದರೆ ಮಾಧ್ಯಮರಂಗದ ಕೋಟೆಯನ್ನು ಒಡೆಯುವುದರಲ್ಲೂ ಅದು ಯಶಸ್ವಿಯಾಯಿತು. 2002ರಲ್ಲಿ ಸುಷ್ಮಾ ಸ್ವರಾಜ್ ವಾರ್ತಾ ಮತ್ತು ಪ್ರಸಾರ ಸಚಿವರಾಗಿದ್ದಾಗ ಕೇಂದ್ರ ಸರ್ಕಾರ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ಪತ್ರಿಕಾ ಕ್ಷೇತ್ರದಲ್ಲಿ ಶೇ. 29 ಎಫ್‌ಡಿಐ ಅನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಹೊರತಾದ ಕ್ಷೇತ್ರದಲ್ಲಿ ಶೇ. 74 ಎಫ್‌ಡಿಐ ಅನ್ನೂ ಹೂಡುವುದಕ್ಕೆ ಅನುಮತಿ ನೀಡಿತು.

53 ವರ್ಷಗಳಲ್ಲಿ ಎಲ್ಲರೂ ವಿರೋಧಿಸುತ್ತ ಬಂದ ಸಂಗತಿಯೊಂದನ್ನು ನೀವೇಕೆ ಮಾಡಿದಿರಿ? ಎಂದು ಪತ್ರಕರ್ತರು ಸುಷ್ಮಾ ಸ್ವರಾಜ್ ಅವರನ್ನು ಕೇಳಿದರು. ಇದು 53 ವರ್ಷಗಳ ಪ್ರಶ್ನೆ ಅಲ್ಲ. ಸದ್ಯದ ಅನಿವಾರ್ಯತೆಯ ಪ್ರಶ್ನೆ. ಉದಾರೀಕರಣ ಆರಂಭವಾಗಿ 12 ವರ್ಷಗಳೇ ಕಳೆದುಹೋಗಿವೆ. ನಮಗೀಗ ಗತ್ಯಂತರವಿಲ್ಲ. ಇಷ್ಟು ವರ್ಷ ತಡೆದುಕೊಂಡು ಬಂದಮೇಲೆ ಈಗಷ್ಟೇ ಮಾಧ್ಯಮ ಕ್ಷೇತ್ರದಲ್ಲಿ ವಿದೇಶಿ ಬಂಡವಾಳಕ್ಕೆ ಅವಕಾಶ ಮಾಡಿಕೊಟ್ಟಿದ್ದೇವೆ, ಎಂದು ಆಕೆ ಉತ್ತರಿಸಿದರು. ಅವರ ಬಳಿ ಬೇರೆ ಉತ್ತರವಿರಲಿಲ್ಲ. ಭಾರತ ಹತ್ತೇ ವರ್ಷಗಳಲ್ಲಿ ಜಾಗತೀಕರಣದ ದೈತ್ಯ ಪ್ರವಾಹದಲ್ಲಿ ಸಾಕಷ್ಟು ದೂರ ಸಾಗಿ ಬಂದಾಗಿತ್ತು.

2005ರಲ್ಲಿ ಸುದ್ದಿಯೇತರ ಹಾಗೂ ಪ್ರಚಲಿತ ವಿದ್ಯಮಾನೇತರ ಪತ್ರಿಕೆಗಳಲ್ಲಿ ಎಫ್‌ಡಿಐ ಮಿತಿಯನ್ನು ಶೇ. 74ರಿಂದ ಶೇ. 100ಕ್ಕೆ ಕೇಂದ್ರ ಸರ್ಕಾರ ಏರಿಸಿಬಿಟ್ಟಿತು. 2008ರಲ್ಲಿ ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳಿಗೆ ಸಂಬಂಧಿಸಿದ ವಿದೇಶಿ ನಿಯತಕಾಲಿಕಗಳ ಭಾರತೀಯ ಆವೃತ್ತಿಗಳಲ್ಲಿ ಶೇ. 26 ಎಫ್‌ಡಿಐ ಹೂಡಲು ಸರ್ಕಾರ ಅನುಮತಿಸಿತು. 2009ರಲ್ಲಿ ಸರ್ಕಾರದ ಪೂರ್ವಾನುಮತಿಯೊಂದಿಗೆ ವಿದೇಶಿ ಪತ್ರಿಕೆಗಳ ತದ್ರೂಪಿ ಮುದ್ರಣದಲ್ಲಿ ಶೇ. 100 ವಿದೇಶಿ ಬಂಡವಾಳ ಹೂಡಬಹುದೆಂದು ಸರ್ಕಾರ ಘೋಷಿಸಿತು.

ಪ್ರಸಾರ ಕ್ಷೇತ್ರದ ಸದ್ಯದ ಚಿತ್ರಣ ತೆಗೆದುಕೊಂಡರೆ, ಎಫ್. ಎಂ. ರೇಡಿಯೋ ಕ್ಷೇತ್ರದಲ್ಲಿ ಶೇ. 20 ವಿದೇಶಿ ನೇರ ಬಂಡವಾಳ ಹೂಡಿಕೆಯನ್ನೂ, ಸುದ್ದಿ ಮತ್ತು ಪ್ರಚಲಿತ ವಿದ್ಯಮಾನಗಳ ಟಿವಿ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 26 ಎಫ್‌ಡಿಐ ಅನ್ನೂ, ಸುದ್ದಿಯೇತರ ಚಾನೆಲ್‌ಗಳ ಅಪ್‌ಲಿಂಕಿಂಗ್‌ನಲ್ಲಿ ಶೇ. 100 ಎಫ್‌ಡಿಐ ಅನ್ನೂ ಸರ್ಕಾರ ಅನುಮತಿಸಿದೆ. ಆರಂಭದಲ್ಲಿಯೇ ಪ್ರಸ್ತಾಪಿಸಿರುವಂತೆ ಕೇಬಲ್ ಪ್ರಸಾರ ಜಾಲ ಹಾಗೂ ಡಿಟಿಎಚ್ ಸೇವೆಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಹಿಂದೆ ಇದ್ದ ಶೇ. 49ರ ಮಿತಿಯನ್ನು ಈಗ ಶೇ. 74ಕ್ಕೆ ಏರಿಸಲಾಗಿದೆ. ಅಂದರೆ, ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಎರಡು ವರ್ಷಗಳ ಹಿಂದೆ ಮಾಡಿದ್ದ ಶಿಫಾರಸು ಈಗ ನಿಜವಾಗಿದೆ. ಇಷ್ಟೆಲ್ಲ ಆದರೂ ಎಫ್‌ಡಿಐ ಮಾಯೆಯಿಂದ ದೂರವೇ ಉಳಿದಿರುವುದು ನಮ್ಮ ಸುದ್ದಿ ಸಂಸ್ಥೆಗಳು ಮಾತ್ರ!

ಸಾರಾಸಗಟಾಗಿ ಯಾರೇ ವಿದೇಶಿ ವ್ಯಕ್ತಿ ನಮ್ಮ ದೇಶಕ್ಕೆ ಬಂದು ಹೇಗೆಂದಹಾಗೆ ಪತ್ರಿಕೆ, ಚಾನೆಲ್ ಆರಂಭಿಸಬಹುದೆಂದೇನೂ ಇದರ ಅರ್ಥ ಅಲ್ಲ. ಸರ್ಕಾರ ಇದಕ್ಕೆಲ್ಲ ಹಲವಾರು ನಿಬಂಧನೆಗಳನ್ನು ಸೂಚಿಸಿದೆ. ಯಾವುದೇ ಬಗೆಯ ಹೂಡಿಕೆಗೂ ಸರ್ಕಾರದ ಪೂರ್ವಾನುಮತಿ ಬೇಕು; ವಿದೇಶಿ ಪತ್ರಿಕೆಯೊಂದರ ತದ್ರೂಪವನ್ನಾಗಲೀ, ಭಾರತೀಯ ಆವೃತ್ತಿಯನ್ನಾಗಲೀ ಆರಂಭಿಸುವ ಮುನ್ನ ಆ ಕಂಪೆನಿ 1956ರ ಭಾರತದ ಕಂಪೆನಿ ಕಾಯ್ದೆಯಡಿಯಲ್ಲಿ ನೋಂದಣಿಯಾಗಿರಬೇಕು; ಪತ್ರಿಕೆಯ ಸಂಪಾದಕೀಯ ಹಾಗೂ ಆಡಳಿತ ವಿಭಾಗಗಳ ಉನ್ನತ ಹುದ್ದೆಯಲ್ಲಿರುವವರು ಭಾರತೀಯರಾಗಿರಬೇಕು; ಸಂಸ್ಥೆಯ ನಿರ್ದೇಶಕರುಗಳ ಮಂಡಳಿಯಲ್ಲಿ ನಾಲ್ಕನೇ ಮೂರು ಭಾಗ ಭಾರತೀಯರು ಇರಬೇಕು ಇತ್ಯಾದಿ ಹಲವಾರು ನಿಯಮಗಳಿವೆ. ಆದರೆ ಈಗಾಗಲೇ ಮಾಯೆ ಎಂದಿರುವ ಈ ಎಫ್‌ಡಿಐ, ಮತ್ತದರ ಹಿರಿಯಣ್ಣ ಉದಾರೀಕರಣ, ಜಾಗತೀಕರಣಗಳಿಗೆ ಯಾವ ನಿಯಮವೂ ಅಂತಹ ಅಡಚಣೆಯಾಗಲಾರದು. ಜಗತ್ತು ಪೂರ್ತಿ ಒಂದೇ ಮಾರುತ ಬೀಸುತ್ತಿರಬೇಕಾದರೆ ಎಲ್ಲೋ ನುಸುಳಿಕೊಂಡ ವಿಷಗಾಳಿಯನ್ನು ಹಿಡಿದಿಡುವುದು ಹೇಗೆ? ನೇರವಾಗಿ ವಿದೇಶಿ ಬಂಡವಾಳ ಹೂಡಿಕೆಗೆ ಇತಿಮಿತಿಗಳಿದ್ದರೆ, ಒಳಬರಬೇಕಾದವರು ಜಾಹೀರಾತು ಕ್ಷೇತ್ರದ ಮೂಲಕವಾದರೂ ಪ್ರವೇಶಿಸಬಹುದು. ಅದಕ್ಕೆ ಇತಿಮಿತಿ ಸೂಚಿಸಿಲ್ಲ. ಮುಂಬಾಗಿಲಿಗೆ ಭದ್ರ ಬೀಗ ಜಡಿದಿದ್ದರೂ ಹಿಂಬಾಗಿಲ ಅಗುಳಿ ಹಾಕಿರದಿದ್ದರೇನು ಬಂತು!

ಮಾಧ್ಯಮ ರಂಗದಲ್ಲಿ ವಿದೇಶಿ ಬಂಡವಾಳದ ಪ್ರವೇಶ ಅನಿವಾರ್ಯವಾಗಿತ್ತೋ ಅಥವಾ ಅದಕ್ಕಿಂತಲೂ ಮುಂಚಿನ ಉದಾರೀಕರಣದ ಪ್ರಕ್ರಿಯೆ ಅನಿವಾರ್ಯವಾಗಿತ್ತೋ ಗೊತ್ತಿಲ್ಲ, ಆದರೆ ಇದರಿಂದಾಗಿ ನಮ್ಮ ಪ್ರಜಾಪ್ರಭುತ್ವದ ಕಾವಲುನಾಯಿಯೇ ಮೆಲ್ಲಮೆಲ್ಲಗೆ ವಿದೇಶಿ ಶಕ್ತಿಗಳ ಕೈಗೆ ಕುತ್ತಿಗೆ ಪಟ್ಟಿ ಒಪ್ಪಿಸುತ್ತಿರುವುದು ಮಾತ್ರ ಸುಳ್ಳಲ್ಲ. ನೇರವಾಗಿ ಸುದ್ದಿ ಮತ್ತು ಅಭಿಪ್ರಾಯಗಳ ಪ್ರಕಟಣೆಯಲ್ಲಿ ಮತ್ತು ಆ ಮೂಲಕ ದೇಶದ ರಾಜಕೀಯ, ಆಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವ ಮೂಲಕ ಮಾತ್ರ ಅಲ್ಲ, ಅಪ್‌ಲಿಂಕಿಂಗ್, ಕೇಬಲ್, ಡಿಟಿಎಚ್‌ನಂತಹ ಮೇಲ್ನೋಟಕ್ಕೆ ಅಷ್ಟೊಂದು ಸಮಸ್ಯಾತ್ಮಕವಾಗಿ ಕಾಣದ ವಿಷಯಗಳಲ್ಲೂ ವಿದೇಶಿ ಶಕ್ತಿಗಳು ನಮ್ಮನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.

ಭಾರತದಲ್ಲಿ ಪತ್ರಿಕೋದ್ಯಮವೇನೋ ಆರಂಭವಾದುದು ವಿದೇಶೀಯರಿಂದಲೇ. ಆದರೆ ಇಷ್ಟು ಬಲಿಷ್ಟವಾಗಿ ಬೆಳೆದ ಮೇಲೆ, ನಮ್ಮ ಸ್ವತಂತ್ರ ಪ್ರಜಾಪ್ರಭುತ್ವವನ್ನಾಗಲೀ ಅದರ ಕಾವಲುನಾಯಿಯಾಗಿರುವ ಮಾಧ್ಯಮವನ್ನಾಗಲೀ ವಿದೇಶೀಯರ ಕೈಗೆ ಒಪ್ಪಿಸುವುದು ಮಾತ್ರ ಒಂದು ದೊಡ್ಡ ದುರಂತವಲ್ಲದೆ ಬೇರೇನಲ್ಲ.

ಕಾಮೆಂಟ್‌ಗಳಿಲ್ಲ: