ಮಾಧ್ಯಮಶೋಧ-29, ಹೊಸದಿಗಂತ, 07 ನವೆಂಬರ್ 2012
ಜನರಿಗೆ ಉತ್ತಮ ಗುಣಮಟ್ಟದ ಟಿವಿ ವೀಕ್ಷಣಾ ಅನುಭವವನ್ನು ಒದಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಆರಂಭಿಸಿದ ಕೇಬಲ್ ಟಿವಿ ಡಿಜಿಟಲೀಕರಣ ಪ್ರಕ್ರಿಯೆಯ ಮೊದಲ ಹಂತದ ಗಡುವು ಮುಗಿದಿದ್ದರೂ ಈ ಯೋಜನೆ ನಿರೀಕ್ಷಿತ ಯಶಸ್ಸು ಕಂಡಿಲ್ಲ. ಸರ್ಕಾರ ನೀಡುವ ಅಂಕಿಅಂಶಗಳು ಯಶಸ್ಸಿನ ಕಥೆ ಹೇಳುತ್ತಾವಾದರೂ, ಅವುಗಳು ಎಷ್ಟು ನಂಬಿಕೆಗೆ ಅರ್ಹವೆಂಬುದನ್ನು ತಕ್ಷಣಕ್ಕೆ ಊಹಿಸಲಾಗದು.
ದೇಶದ ಕೇಬಲ್ ಪ್ರಸಾರ ಜಾಲವನ್ನು ಸಂಪೂರ್ಣ ಡಿಜಿಟಲೀಕರಣಗೊಳಿಸಬೇಕೆಂದು ಭಾರತದ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಶಿಫಾರಸು ಮಾಡಿದ ಒಂದು ವರ್ಷದ ಬಳಿಕ ಸರ್ಕಾರ ಆ ಪ್ರಕ್ರಿಯೆಗೆ ಚಾಲನೆ ನೀಡಿತು. ಕೇಬಲ್ ಟಿವಿ ಜಾಲಗಳ (ನಿಯಂತ್ರಣ) ತಿದ್ದುಪಡಿ ಕಾಯ್ದೆ 2011ನ್ನು ಜಾರಿಗೊಳಿಸುವ ಮೂಲಕ ಟಿವಿ ಪ್ರಸಾರಕ್ಕೆ ಸಂಬಂಧಿಸಿದಂತೆ ದೇಶದೆಲ್ಲೆಡೆ ಡಿಜಿಟಲ್ ಆಕ್ಸೆಸ್ ಸಿಸ್ಟಮ್ (ಡಿಎಎಸ್)ನ್ನು ಅನುಷ್ಠಾನಕ್ಕೆ ತರುವುದನ್ನು ಸರ್ಕಾರ ಕಡ್ಡಾಯಗೊಳಿಸಿತು.
ತನ್ನ ಮಹತ್ವಾಕಾಂಕ್ಷಿ ಯೋಜನೆಯನ್ನು ಹಂತಹಂತವಾಗಿ ಜಾರಿಗೆ ತರುವ ಉದ್ದೇಶವನ್ನೇನೋ ಸರ್ಕಾರ ಇಟ್ಟುಕೊಂಡಿದೆಯಾದರೂ, ಮೊದಲ ಹಂತ ಮುಗಿದಿರುವ ಈಗಿನ ಪರಿಸ್ಥಿತಿಯಲ್ಲಿ ಅದರ ಸಂಭವನೀಯ ಅಂತಿಮ ಯಶಸ್ಸನ್ನು ಅಂದಾಜುಮಾಡುವುದು ಕಷ್ಟ. ಕೇಂದ್ರ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸೂಚನೆಯಂತೆ, ಈ ಡಿಜಿಟಲೀಕರಣ ನಾಲ್ಕು ಹಂತಗಳಲ್ಲಿ ನಡೆಯಬೇಕಾಗಿದೆ. ಮೊದಲ ಹಂತದಲ್ಲಿ 10 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆಯುಳ್ಳ ಮಹಾನಗರಗಳಾದ ಮುಂಬೈ, ದೆಹಲಿ, ಕೋಲ್ಕತ ಹಾಗೂ ಚೆನ್ನೈಗಳಲ್ಲಿ ಅಕ್ಟೋಬರ್ 31, 2012ರ ಒಳಗಡೆ ಡಿಜಿಟಲೀಕರಣವನ್ನು ಪೂರ್ಣಗೊಳಿಸಬೇಕೆಂದು ನಿರ್ದೇಶನವಿತ್ತಾದರೂ, ಅದಿನ್ನೂ ಸಂಪೂರ್ಣ ಸಾಧ್ಯವಾಗಿಲ್ಲ.
ಸದ್ಯಕ್ಕೆ ತಮಿಳುನಾಡು ಸರ್ಕಾರ ಹೈಕೋರ್ಟ್ ಮೆಟ್ಟಿಲೇರಿರುವುದರಿಂದ ಚೆನ್ನೈನಲ್ಲಿ ಡಿಜಿಟಲೀಕರಣ ಪೂರ್ಣಗೊಳಿಸುವುದಕ್ಕೆ ನವೆಂಬರ್ 9ರವರೆಗೆ ಅವಕಾಶ ದೊರೆತಿದೆ. ಆದರೆ ಚೆನ್ನೈನಲ್ಲಿ ಈಗ ಪೂರ್ಣಗೊಂಡಿರುವುದು ಶೇ. 60ರಷ್ಟು ಡಿಜಿಟಲೀಕರಣ ಮಾತ್ರ. ಮುಂದಿನ ಎರಡು-ಮೂರು ದಿನಗಳಲ್ಲಿ ಇದನ್ನು ಶೇ. 100ಕ್ಕೆ ತಂದು ನಿಲ್ಲಿಸುವುದು ಕಷ್ಟಕರವೇ. ಕಳೆದ ಒಂದು ವರ್ಷದಲ್ಲಿ ಸಾಧ್ಯವಾಗದ್ದನ್ನು ಒಂದು ವಾರದಲ್ಲಿ ಸಾಧ್ಯವಾಗಿಸುವುದು ಹೇಗೆ?
ಈ ನಡುವೆ ಮುಂಬೈ ಹಾಗೂ ದೆಹಲಿ ಮಹಾನಗರಗಳಲ್ಲಿ ನೂರು ಪ್ರತಿಶತ ಡಿಜಿಟಲೀಕರಣ ನಡೆದಿದೆ ಎಂದು ಸರ್ಕಾರ ಹೇಳಿಕೊಳ್ಳುತ್ತಿದೆಯಾದರೂ, ಅದು ಕೇವಲ ತೋರಿಕೆಯ ಅಂಕಿಅಂಶಗಳೆಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಏಕೆಂದರೆ ಸರ್ಕಾರದ ಗಡುವಿನ ಪ್ರಕಾರ, ಅಕ್ಟೋಬರ್ 31ರಂದು ಎಲ್ಲಾ ಮಹಾನಗರಗಳಲ್ಲೂ ಅನಲಾಗ್ ಮಾದರಿಯ ಕೇಬಲ್ ಪ್ರಸಾರ ವ್ಯವಸ್ಥೆ ನಿಂತುಹೋಗಿ ಡಿಜಿಟಲ್ ಪ್ರಸಾರ ಆರಂಭವಾಗಬೇಕಿತ್ತು. ಆದರೆ ದೆಹಲಿ ಮತ್ತು ಮುಂಬೈನ ಅನೇಕ ಭಾಗಗಳಲ್ಲಿ ಒಂದು ವಾರದ ಬಳಿಕವೂ ಅನಲಾಗ್ ಕೇಬಲ್ ಸೇವೆಗಳು ಲಭ್ಯವಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಕೋಲ್ಕತಾದಲ್ಲಂತೂ ಡಿಜಿಟಲೀಕರಣದ ಪ್ರಕ್ರಿಯೆ ಇನ್ನೂ ಶೇ. 85ರಲ್ಲೇ ಇದೆ. ಇದೇ ಹೊತ್ತು ಪಶ್ಚಿಮ ಬಂಗಾಲದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಇಡೀ ಡಿಜಿಟಲೀಕರಣದ ಪ್ರಕ್ರಿಯೆಯೇ ಜನವಿರೋಧಿ ಎಂದು ಹರಿಹಾಯ್ದಿದ್ದಾರೆ ಕೂಡ.
ಡಿಜಿಟಲ್ ಪ್ರಸಾರ ಕಡ್ಡಾಯ ಮಾಡಿ ಅಧ್ಯಾದೇಶ ಹೊರಡಿಸಿದ ನಂತರದ ಕಳೆದೊಂದು ವರ್ಷದಲ್ಲಿ ಡಿಜಿಟಲ್ ಪ್ರಸಾರಕ್ಕೆ ಅವಶ್ಯಕವಿರುವ ಸುಮಾರು 64.31 ಲಕ್ಷ ಸೆಟ್ ಟಾಪ್ ಬಾಕ್ಸ್ (ಎಸ್‌ಟಿಬಿ)ಗಳನ್ನು ಮೇಲೆ ಹೇಳಿರುವ ನಾಲ್ಕು ಮಹಾನಗರಗಳಲ್ಲಿ ಸ್ಥಾಪಿಸಲಾಗಿದೆ. 2011ರ ಜನಗಣತಿಯ ಪ್ರಕಾರ ಈ ನಾಲ್ಕು ಮಹಾನಗರಗಳಲ್ಲಿ ಒಟ್ಟು 103.76 ಲಕ್ಷ ಕುಟುಂಬಗಳಿದ್ದು, ಅವುಗಳಲ್ಲಿ 82.59 ಲಕ್ಷ ಕುಟುಂಬಗಳು ಟಿವಿ ಸೆಟ್ ಹೊಂದಿವೆ. ಒಟ್ಟಾರೆ 28.14 ಲಕ್ಷ ಡಿಟಿಎಚ್ ಸಂಪರ್ಕ ಹೊಂದಿರುವ ಮನೆಗಳನ್ನು ಹೊರತುಪಡಿಸಿದರೆ, ಉಳಿದ 65.34 ಲಕ್ಷ ಕುಟುಂಬಗಳೂ ಕೇಬಲ್ ಸಂಪರ್ಕದಿಂದಲೇ ಟಿವಿ ವೀಕ್ಷಿಸುತ್ತಿವೆ. ಅಂದರೆ ಮೊದಲ ಹಂತದಲ್ಲೇ ಇಷ್ಟು ದೊಡ್ಡ ಸಂಖ್ಯೆಯ ಕುಟುಂಬಗಳು ಸಾಮಾನ್ಯ ಕೇಬಲ್ ಪ್ರಸಾರ ತಂತ್ರಜ್ಞಾನದಿಂದ ಡಿಜಿಟಲ್ ತಂತ್ರಜ್ಞಾನಕ್ಕೆ ಬದಲಾಗುವ ಅವಶ್ಯಕತೆ ಇತ್ತು.
ಡಿಜಿಟಲೀಕರಣದ ನಾಲ್ಕು ಹಂತಗಳಲ್ಲಿ ಇನ್ನೂ ಮೂರು ಹಂತಗಳು ಬಾಕಿಯಿವೆ. ಪುಣೆ, ಬೆಂಗಳೂರು, ಅಹಮದಾಬಾದ್‌ನಂತಹ ಒಂದು ಮಿಲಿಯನ್‌ಗಿಂತಲೂ ಕಡಿಮೆ ಜನಸಂಖ್ಯೆಯುಳ್ಳ ನಗರಗಳಲ್ಲಿ ಮಾರ್ಚ್ 31, 2012ರ ಒಳಗೆ ಸಂಪೂರ್ಣ ಡಿಜಿಟಲೀಕರಣ ನಡೆಯಬೇಕೆಂಬ ನಿರ್ದೇಶನವಿದೆ. ದೇಶದ ಎಲ್ಲಾ ನಗರ ಪ್ರದೇಶಗಳಲ್ಲೂ ಸೆಪ್ಟೆಂಬರ್ 30, 2014ರ ಒಳಗಾಗಿ ಡಿಜಿಟಲೀಕರಣ ಪೂರ್ಣಗೊಳಿಸಲು ಗಡುವು ಇದೆ. ಅಂತೂ ಡಿಸೆಂಬರ್ 31, 2014ರ ಒಳಗೆ ಇಡೀ ದೇಶದಲ್ಲಿ ಟಿವಿ ಪ್ರಸಾರ ಜಾಲ ಡಿಜಿಟಲೀಕರಣಗೊಳ್ಳಬೇಕು ಎಂಬುದು ಸರ್ಕಾರದ ಯೋಜನೆ.
ಟಿವಿ ಪ್ರಸಾರದಲ್ಲಿ ಅನಲಾಗ್ ಕೇಬಲ್ ಸೇವೆ, ಡಿಜಿಟಲ್ ಕೇಬಲ್ ಸೇವೆ ಹಾಗೂ ಡಿಟಿಎಚ್ ಸೇವೆಗಳೆಂಬ ಮೂರು ಪ್ರಮುಖ ವಿಧಾನಗಳು. ಅನಲಾಗ್ ವಿಧಾನದಲ್ಲಿ ಟಿವಿ ಪ್ರಸಾರ ಮಾಡುವುದು ಕಳೆದ ಎರಡು-ಮೂರು ದಶಕಗಳಿಂದ ಅನುಸರಿಸಿಕೊಂಡು ಬರುತ್ತಿರುವ ವ್ಯವಸ್ಥೆ. ಕೆಲವು ವರ್ಷಗಳಿಂದೀಚೆಗೆ ಡಿಟಿಎಚ್ ಸೇವೆಯೂ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿಕೊಳ್ಳುತ್ತಿದೆ. ಡಿಟಿಎಚ್ ಸೇವೆಯನ್ನು ಗಮನಿಸಿದವರಿಗೆ ಡಿಜಿಟಲ್ ಪ್ರಸಾರದ ಪ್ರಾಮುಖ್ಯತೆ ಅರ್ಥವಾಗುತ್ತದೆ.
ಅನಲಾಗ್ ತಂತ್ರಜ್ಞಾನದ ಕೇಬಲ್ ಆಪರೇಟರ್‌ಗಳು ಕೆಲವು ನಿರ್ದಿಷ್ಟ ಸಂಖ್ಯೆಯ ಚಾನೆಲ್‌ಗಳನ್ನು ಮಾತ್ರ ಒದಗಿಸಬಹುದು. ಅಂದರೆ ಕೇಬಲ್ ಸಂಪರ್ಕ ಹೊಂದಿರುವ ಮನೆಗಳಲ್ಲಿ ಅರುವತ್ತೋ ಎಪ್ಪತ್ತೋ ಎಂಭತ್ತೋ ವಾಹಿನಿಗಳನ್ನು ಮಾತ್ರ ವೀಕ್ಷಿಸಬಹುದು. ಅವೂ ಸಂಪೂರ್ಣ ಸ್ಪಷ್ಟತೆಯಿಂದ ಕಾಣಿಸಿಕೊಳ್ಳಲಾರವು. ಮೊದಲ ಒಂದಿಷ್ಟು ಚಾನೆಲ್‌ಗಳು ಚೆನ್ನಾಗಿ ಕಾಣಿಸುತ್ತಿದ್ದರೆ ಅಮೇಲಾಮೇಲೆ ಸ್ಪಷ್ಟತೆಯನ್ನು ಕಳೆದುಕೊಳ್ಳುತ್ತಾ ಹೋಗುತ್ತವೆ. ಹೆಚ್ಚು ಹಣ ಸುರಿದು ಉತ್ತಮ ಗುಣಮಟ್ಟದ ಟಿವಿ ಸೆಟ್ ತಂದರೂ ಪ್ರಯೋಜನವೇನೂ ಇಲ್ಲ. ಆದರೆ ಡಿಜಿಟಲ್ ಸೇವೆ ನೋಡುಗನಿಗೆ ಅತ್ಯುತ್ತಮ ವೀಕ್ಷಣಾ ಅನುಭವವನ್ನು ನೀಡುತ್ತದೆ. ಅಲ್ಲಿ ನೂರಾರು ಚಾನೆಲ್‌ಗಳನ್ನು ನೋಡಬಹುದು. ಚಿತ್ರ-ಧ್ವನಿ ಎರಡರಲ್ಲೂ ಉನ್ನತ ಗುಣಮಟ್ಟ. ಧ್ವನಿ ಹಾಗೂ ದೃಶ್ಯಗಳ ನಡುವೆ ಹೊಂದಾಣಿಕೆಯ ಸಮಸ್ಯೆಯೂ ಬರುವುದಿಲ್ಲ. ಹೀಗಾಗಿ ಡಿಜಿಟಲ್ ತಂತ್ರಜ್ಞಾನ ದಿನೇದಿನೇ ಜನಪ್ರಿಯವಾಗುತ್ತಾ ಹೋಯಿತು. ಆದರೂ ಇಡೀ ದೇಶದ ಕೇಬಲ್ ಪ್ರಸಾರ ವ್ಯವಸ್ಥೆಯನ್ನು ಡಿಜಿಟಲ್ ತಂತ್ರಜ್ಞಾನಕ್ಕೆ ಮಾರ್ಪಡಿಸುವುದು ಒಂದು ಹಿಮಾಲಯದಂಥ ಕೆಲಸವೇ.
ಅಂಕಿಅಂಶಗಳ ಪ್ರಕಾರ, ಪ್ರಸ್ತುತ ದೇಶಾದ್ಯಂತ 148 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿವೆ. ಅವುಗಳಲ್ಲಿ 126 ಮಿಲಿಯನ್ ಕುಟುಂಬಗಳು ಕೇಬಲ್ ಹಾಗೂ ಉಪಗ್ರಹ ತಂತ್ರಜ್ಞಾನವನ್ನು ಬಳಸಿಕೊಳ್ಳುತ್ತಿದ್ದರೆ, 42 ಮಿಲಿಯನ್ ಕುಟುಂಬಗಳು ಡಿಜಿಟಲ್ ವ್ಯವಸ್ಥೆಯನ್ನು ಹೊಂದಿವೆ. ಕಳೆದ ವರ್ಷ ದೇಶದಲ್ಲಿದ್ದ ಟಿವಿ ಹೊಂದಿರುವ ಕುಟುಂಬಗಳ ಸಂಖ್ಯೆ 142 ಮಿಲಿಯನ್ ಆಗಿದ್ದು, ಇದರಲ್ಲಿ ಡಿಜಿಟಲ್ ತಂತ್ರಜ್ಞಾನ ಬಳಸುತ್ತಿದ್ದವರು 26 ಮಿಲಿಯನ್ ಕುಟುಂಬಗಳು. ಡಿಜಿಟಲ್ ತಂತ್ರಜ್ಞಾನ ಒಂದೇ ವರ್ಷದಲ್ಲಿ ಎಷ್ಟು ಜನಪ್ರಿಯವಾಗಿದೆಯೆಂಬುದನ್ನು ಇದು ತೋರಿಸುತ್ತದೆ.
ಆದರೆ ಈಗಾಗಲೇ ಪ್ರಸ್ತಾಪಿಸಿರುವಂತೆ, ಡಿಜಿಟಲೀಕರಣ ಸುಲಭದ ಕೆಲಸವೇನೂ ಅಲ್ಲ. ಅದಕ್ಕೆ ಕೇಬಲ್ ಆಪರೇಟರ್‌ಗಳು ಹಾಗೂ ಗ್ರಾಹಕರ ಕಡೆಯಿಂದ ಸಮಾನ ಸಹಕಾರ ಇರಬೇಕು. ಏಕೆಂದರೆ, ಇದಕ್ಕಾಗಿ ಇಬ್ಬರೂ ಹಣ ಖರ್ಚು ಮಾಡಬೇಕಾಗುತ್ತದೆ. ಭಾರತದಲ್ಲಿ ಒಟ್ಟು 6,000 ಮಲ್ಟಿ-ಸಿಸ್ಟಮ್ ಆಪರೇಟರ್ (ಎಂಎಸ್‌ಒ)ಗಳೂ 60,000 ಸ್ಥಳೀಯ ಕೇಬಲ್ ಆಪರೇಟರ್‌ಗಳೂ ಇದ್ದು, ಇವರು ಏನಿಲ್ಲವೆಂದರೂ ರೂ. 10,000 ಕೋಟಿ ರೂ ಖರ್ಚು ಮಾಡಬೇಕಾಗುತ್ತದೆ. ಡಿಜಿಟಲ್ ಪ್ರಸಾರಕ್ಕಾಗಿ ಪ್ರತ್ಯೇಕ ಟ್ರಾನ್ಸ್‌ಮಿಟರ್, ಎನ್‌ಕೋಡರ್. ಡಿಕೋಡರ್, ಮಾಡ್ಯುಲೇಟರ್, ಸರ್ವರ್ ಹಾಗೂ ಸ್ಟೋರೇಜ್‌ಗಳನ್ನು ಅವರು ಸ್ಥಾಪಿಸಿಕೊಳ್ಳಬೇಕಾಗುತ್ತದೆ. ಇನ್ನೊಂದೆಡೆ ಟಿವಿ ಸೆಟ್ ಹೊಂದಿರುವವರು ಕನಿಷ್ಟ ರೂ. 1000-ರೂ. 2,000 ಖರ್ಚು ಮಾಡಿ ಸೆಟ್ ಟಾಪ್ ಬಾಕ್ಸ್‌ಗಳನ್ನು ಖರೀದಿ ಮಾಡಬೇಕಾಗುತ್ತದೆ. ಸೆಟ್ ಟಾಪ್ ಬಾಕ್ಸ್‌ಗಳ ಮಾರುಕಟ್ಟೆಯೇ ಒಂದು ದೊಡ್ಡ ದಂಧೆಯಾಗಿ ಮಾರ್ಪಡುವ ಎಲ್ಲ ಅಪಾಯಗಳೂ ನಿಚ್ಚಳವಾಗಿವೆ.
ಟಿವಿ ಹೊಂದಿರುವ ಭಾರತದ ಕುಟುಂಬಗಳ ಅನುಪಾತವನ್ನು ನೋಡಿದರೂ ಗ್ರಾಮೀಣರ ಸಂಖ್ಯೆಯೇ ಹೆಚ್ಚು. ದೇಶದ ನಗರ ಪ್ರದೇಶಗಳಲ್ಲಿ ಒಟ್ಟು 69 ಮಿಲಿಯನ್ ಟಿವಿ ಹೊಂದಿರುವ ಕುಟುಂಬಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿರುವ ಟಿವಿ ಕುಟುಂಬಗಳು 79 ಮಿಲಿಯನ್. ಹೀಗಾಗಿ, ಈ ಕುಟುಂಬಗಳೆಲ್ಲ ಡಿಜಿಟಲೀಕರಣಕ್ಕಾಗಿ ಹಣ ವಿನಿಯೋಗಿಸುವ ಸ್ಥಿತಿಯಲ್ಲಿದ್ದಾರೆಯೇ ಎಂಬುದು ಒಂದು ಪ್ರಶ್ನೆಯಾದರೆ, ಈಗ ಇರುವ ಡಿಜಿಟಲೀಕರಣದ ಹುರುಪು ಮುಂದೆಯೂ ಉಳಿಯುತ್ತದೆಯೇ ಎಂಬುದು ಇನ್ನೊಂದು ಪ್ರಶ್ನೆ. ಆದರೂ ಕುತೂಹಲದ ಸಂಗತಿಯೆಂದರೆ, ದೇಶದಾದ್ಯಂತ ಇರುವ ಡಿಟಿಎಚ್ ಸಂಪರ್ಕ ಗಮನಿಸಿದರೆ, ನಗರ ಪ್ರದೇಶಗಳಿಗಿಂತಲೂ ಗ್ರಾಮೀಣ ಪ್ರದೇಶದ ಜನರೇ ಹೆಚ್ಚು ಡಿಟಿಎಚ್ ಸಂಪರ್ಕ ಪಡೆದುಕೊಂಡಿದ್ದಾರೆ. ನಗರ ಪ್ರದೇಶಗಳಲ್ಲಿ 16 ಮಿಲಿಯನ್ ಡಿಟಿಎಚ್ ಸಂಪರ್ಕಗಳಿದ್ದರೆ, ಗ್ರಾಮೀಣ ಪ್ರದೇಶಗಳಲ್ಲಿ 26 ಮಿಲಿಯನ್ ಡಿಟಿಎಚ್ ಸಂಪರ್ಕ ಪಡೆದಿರುವ ಕುಟುಂಬಗಳಿವೆ. ಬಹುಶಃ ಗ್ರಾಮಾಂತರದಲ್ಲಿ ಕೇಬಲ್ ಸಂಪರ್ಕಕ್ಕಿಂತ ಡಿಟಿಎಚ್ ಸೇವೆಯೇ ಹೆಚ್ಚು ಅನುಕೂಲಕರವಾಗಿರುವುದು ಇದಕ್ಕೆ ಕಾರಣವಿರಬಹುದು. ಒಟ್ಟಿನಲ್ಲಿ, 2014ರ ಅಂತ್ಯದ ವೇಳೆಗೆ ಈ ಪ್ರಕ್ರಿಯೆ ಯಾವ ಹಂತ ತಲುಪೀತು ಎಂಬುದನ್ನು ಕಾದುನೋಡಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ