ಮಂಗಳವಾರ, ನವೆಂಬರ್ 6, 2012

ನಾಲ್ಕನೆಯ ಸ್ತಂಭದ ಮುಂದೆ ನಾಲ್ಕು ಪ್ರಶ್ನೆಗಳು

ಮಾಧ್ಯಮಶೋಧ-28, ಹೊಸದಿಗಂತ, 25 ಅಕ್ಟೋಬರ್ 2012

ಕೃಷ್ಣಪ್ರಸಾದ್
"ಭಾರತದಲ್ಲಿ ಮಾಧ್ಯಮಗಳ ವಿಶ್ವಾಸಾರ್ಹತೆ ಇಂದು ಅತ್ಯಂತ ಕನಿಷ್ಠ ಮಟ್ಟವನ್ನು ತಲುಪಿದೆ. Credibility of Indian media is at the lowest." ಹೀಗೆಂದು ಯಾರೋ ಒಬ್ಬ ಅನಾಮಧೇಯ ಹೇಳಿರುತ್ತಿದ್ದರೆ ಇದು ಇನ್ನೊಂದು ಕ್ಲೀಷೆ ಎಂದು ಭಾವಿಸಿ ಸುಮ್ಮನಿರಬಹುದಿತ್ತು. ಈ ಅರ್ಥದ ಹೇಳಿಕೆಗಳನ್ನು ನಾವು ಆಗಿಂದಾಗ್ಗೆ ಕೇಳುತ್ತಲೇ ಇದ್ದೇವೆ. ಮಾಧ್ಯಮ ವಿಶ್ಲೇಷಕರಿಂದ ತೊಡಗಿ ಸಾಮಾನ್ಯ ಓದುಗರು/ನೋಡುಗರವರೆಗೆ ಎಲ್ಲರಿಗೂ ನಮ್ಮ ಅನೇಕ ಮಾಧ್ಯಮಗಳ ವಿಶ್ವಾಸಾರ್ಹತೆಯ ಕಥೆ ಗೊತ್ತಿದೆ. ಆದರೆ ಮೇಲಿನ ಹೇಳಿಕೆ ಬಂದಿರುವುದು ಒಬ್ಬ ಸಾಮಾನ್ಯ ಓದುಗನಿಂದ ಅಲ್ಲ; ಒಬ್ಬ ಪ್ರತಿಭಾವಂತ ಪತ್ರಕರ್ತನಿಂದ. ಅವರು ಭಾರತದ ಪ್ರಮುಖ ಪತ್ರಿಕೆಗಳಲ್ಲಿ ಒಂದು ಎಂದು ಗುರುತಿಸಲಾಗಿರುವ 'ಔಟ್‌ಲುಕ್’ನ ಸಂಪಾದಕ ಕೃಷ್ಣಪ್ರಸಾದ್ ಅಥವಾ ಕೆ.ಪಿ.

ಕೃಷ್ಣಪ್ರಸಾದ್ ಈ ಮಾತನ್ನಾಡಿದ್ದು ಮೊನ್ನೆ ತುಮಕೂರಿನಲ್ಲಿ ನಡೆದ ಅಖಿಲ ಭಾರತ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ೬೫ನೇ ಮಹಾಧಿವೇಶನದಲ್ಲಿ - ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಸುಮಾರು 2000 ಪತ್ರಕರ್ತರ ಸಮ್ಮುಖದಲ್ಲಿ. ಬಹುಶಃ ಈ ಮಾತನ್ನು ಕೇಳಿದ ಯಾರಿಗೂ ಅಂತಹ ಆಶ್ಚರ್ಯವೇನೂ ಆಗಿರಲಿಕ್ಕಿಲ್ಲ. ಏಕೆಂದರೆ ಈಗಾಗಲೇ ಹೇಳಿರುವಂತೆ ಇದೊಂದು ಹೊಸ ಉದ್ಗಾರವೇನೂ ಅಲ್ಲ. ಆದರೆ ಒಂದು ಮಾತನ್ನು ಯಾರು ಎಲ್ಲಿ ಹೇಳಿದರೆಂಬುದು ತುಂಬ ಮುಖ್ಯವಾಗುತ್ತದೆ ಮತ್ತು ಅದು ಗಂಭೀರ ಚಿಂತನೆಯೊಂದಕ್ಕೆ ಪ್ರೇರಣೆಯಾಗುತ್ತದೆ.

ಮ್ಯಾಚ್ ಫಿಕ್ಸಿಂಗ್, ನೀರಾ ರಾಡಿಯಾ ಟೇಪ್ ಹಗರಣ, ಬಹುಕೋಟಿ ಮೊತ್ತದ 2ಜಿ ಸ್ಪೆಕ್ಟ್ರಂ ಹಗರಣ ಮುಂತಾದ ಕುಪ್ರಸಿದ್ಧ ಹಗರಣಗಳನ್ನು ಪ್ರಜಾಪ್ರಭುಗಳೆದುರು ಬಯಲುಮಾಡಿದ್ದ 'ಔಟ್‌ಲುಕ್’ನ ಕೆ.ಪಿ. ಪತ್ರಕರ್ತರ ಸಮ್ಮೇಳನದ ವೇದಿಕೆಯ ಮೂಲಕ ಹೇಳಿದ ನಾಲ್ಕು ವಿಚಾರಗಳು ಇಡೀ ಭಾರತೀಯ ಮಾಧ್ಯಮರಂಗದ ಆತ್ಮಾವಲೋಕನದ ದಿಕ್ಕುಗಳಾಗಬೇಕಿರುವುದು ಸುಸ್ಪಷ್ಟ.

ಕೃಷ್ಣಪ್ರಸಾದ್ ಬೊಟ್ಟುಮಾಡಿರುವ ನಾಲ್ಕು ಅಂಶಗಳಲ್ಲಿ ಮೊದಲನೆಯದು ಮಾಧ್ಯಮಗಳ ಮಾಲೀಕತ್ವದ ವಿಚಾರ. ನಮ್ಮ ಮಾಧ್ಯಮರಂಗದ ಮಾಲೀಕರುಗಳ ಕೈಯಲ್ಲಿ ಮಾಧ್ಯಮಗಳಾಗಲೀ, ಅವುಗಳ ಉದ್ಯೋಗಿಗಳಾಗಲೀ, ಸಾಮಾನ್ಯ ಓದುಗರು/ನೋಡುಗರಾಗಲೀ ಸುರಕ್ಷಿತವಾಗಿದ್ದಾರೆಯೇ? Cross-media ownership ಹಾಗೂ ಹೆಚ್ಚುತ್ತಿರುವ ಏಕಸ್ವಾಮ್ಯತೆಯ ಪ್ರವೃತ್ತಿಗಳು ಪ್ರಜಾಪ್ರಭುತ್ವದ ಮೂಲನಂಬಿಕೆಗಳನ್ನು ಛಿದ್ರಗೊಳಿಸದೆ ಬಿಟ್ಟಾವೆಯೇ? ಎಂಬುದು.

ಎರಡನೆಯದು, ಮಾಧ್ಯಮ ಶಿಕ್ಷಣ. ಟಿವಿ ಚಾನೆಲ್‌ಗಳವರು ಇಂದು ತಮ್ಮ ಯುವಪತ್ರಕರ್ತರಲ್ಲಿ ಮೌಲ್ಯಗಳನ್ನು ಮತ್ತು ನೈತಿಕತೆಯನ್ನು ಬಿತ್ತುವುದಕ್ಕೆ ಸಾಕಷ್ಟು ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆಯೇ? ತಮ್ಮ ಸಂಸ್ಥೆಗೆ ಉತ್ತಮ ಗುಣಮಟ್ಟದ ಪತ್ರಕರ್ತರನ್ನು ಪಡೆಯುವುದಕ್ಕೆ ಅವರು ಸಾಕಷ್ಟು ಬಂಡವಾಳ ಹೂಡುತ್ತಿದ್ದಾರೆಯೇ? ಟಿವಿ ಚಾನೆಲ್‌ಗಳವರು ಮಾಧ್ಯಮಗಳಿಗಾಗಿ ಒಳ್ಳೆಯ ಮಾನವ ಸಂಪನ್ಮೂಲವನ್ನು ರೂಪಿಸುವುದಕ್ಕಾಗಿ ತಮ್ಮ ಸುತ್ತಲಿನ ಶಿಕ್ಷಣ ಸಂಸ್ಥೆಗಳೊಂದಿಗೆ ಸೂಕ್ತ ರೀತಿಯಲ್ಲಿ ಸಹಕರಿಸುತ್ತಿದ್ದಾರೆಯೇ? ಇದು ಕೆ.ಪಿ. ಪ್ರಶ್ನೆ.

ಮೂರನೆಯದು, ವಿಶ್ವಾಸಾರ್ಹತೆ. ಇದನ್ನೇ ಈ ಬರೆಹದ ಆರಂಭದಲ್ಲಿ ಪ್ರಸ್ತಾಪಿಸಿದ್ದು. ಭಾರತೀಯ ಮಾಧ್ಯಮರಂಗದಲ್ಲಿ ವಿಶ್ವಾಸಾರ್ಹತೆಯೆಂಬುದು ಕನಿಷ್ಠ ಮಟ್ಟವನ್ನು ತಲುಪಿದೆ. ವಿಶ್ವಾಸಾರ್ಹತೆಯ ವಿಷಯಕ್ಕೆ ಬಂದಾಗ ಎರಡು ಹಂತದಲ್ಲಿ ನಾವು ಸಮಸ್ಯೆ ಎದುರಿಸುತ್ತಿದ್ದೇವೆ: ಒಂದು ವೈಯುಕ್ತಿಕ ಮಟ್ಟದಲ್ಲಿ ಅಂದರೆ ಪತ್ರಕರ್ತರ ಮಟ್ಟದಲ್ಲಿ; ಎರಡು ಮಾಧ್ಯಮ ಸಂಸ್ಥೆಗಳ ಮಟ್ಟದಲ್ಲಿ. ಪತ್ರಕರ್ತ ಹಾಗೂ ಆತ ಕೆಲಸ ಮಾಡುವ ಸಂಸ್ಥೆ ಎರಡನ್ನೂ ನಂಬದ ಸ್ಥಿತಿಗೆ ಜನ ಬಂದಿದ್ದಾರೆ ಎಂಬುದು ಕೆ.ಪಿ. ಕಳವಳ.

ನಾಲ್ಕನೆಯದು, ಕಂಟೆಂಟ್ ಅಥವಾ ಮಾಧ್ಯಮಗಳ ಹೂರಣ. ಮಾಧ್ಯಮಗಳು ಸುದ್ದಿ ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಅನುಸರಿಸುವ ಮಾನದಂಡ ಯಾವುದು? ವಸ್ತುನಿಷ್ಠವಾಗಿ ಸುದ್ದಿಮೌಲ್ಯಗಳ ಆಧಾರದಲ್ಲಿ ಸುದ್ದಿಗಳು ಪ್ರಸಾರವಾಗುತ್ತಿವೆಯೇ ಅಥವಾ ವೈಯುಕ್ತಿಕ ಪೂರ್ವಾಗ್ರಹಗಳು ಕೆಲಸ ಮಾಡುತ್ತಿವೆಯೇ? ಪತ್ರಿಕೆಗಳು ಹಾಗೂ ಚಾನೆಲ್‌ಗಳ ಹೂರಣವನ್ನು ಜನರು ನಿರ್ಧರಿಸಬೇಕೋ ಅಥವಾ ಜನರಿಗೆ ಏನು ಬೇಕೆಂಬುದನ್ನು ಮಾಧ್ಯಮಗಳು ನಿರ್ಧರಿಸಬೇಕೋ?

ಒಟ್ಟಿನಲ್ಲಿ ಇಡಿಯ ಮಾಧ್ಯಮರಂಗ ಇಂದು ಎದುರಿಸುತ್ತಿರುವ ಅಷ್ಟೂ ಸವಾಲುಗಳನ್ನು ಕೃಷ್ಣಪ್ರಸಾದ್ ನಾಲ್ಕೇ ಅಂಶಗಳಲ್ಲಿ ಸಾಂಧ್ರೀಕರಿಸಿದ್ದಾರೆ. ಅವರು ಎತ್ತಿರುವ ಒಂದೊಂದು ಪ್ರಶ್ನೆಯೂ ಒಂದೊಂದು ದೊಡ್ಡ ಸಮ್ಮೇಳನಗಳ ವಿಷಯವಾಗಬಹುದು.
ಭಾರತದಲ್ಲಿರುವ ಒಟ್ಟು ಪತ್ರಿಕೆ, ಚಾನೆಲ್, ರೇಡಿಯೋ ಇತ್ಯಾದಿಗಳ ಸಂಖ್ಯೆ ಈ ದೇಶದ ಮಾಧ್ಯಮರಂಗದ ಬಹುತ್ವ ಹಾಗೂ ವೈವಿಧ್ಯತೆಯನ್ನು ತೋರಿಸುತ್ತಾದರೂ ಈ ಕ್ಷೇತ್ರವನ್ನು ಬರೀ ನೂರರಷ್ಟು ಸಂಖ್ಯೆಯ ದೊಡ್ಡ ಮಾಧ್ಯಮ ಕುಳಗಳು ಆಳುತ್ತಿವೆ ಎಂಬುದು ವಿಚಿತ್ರವಾದರೂ ಸತ್ಯ: ’ಹಳ್ಳಿಗಳ ಮತ್ತು ಬಡವರ ದೇಶ’ವಾದ ಭಾರತದಲ್ಲಿ ವಿಶ್ವದ ಟಾಪ್-10 ಬಿಲಿಯನೇರ್‌ಗಳಿದ್ದ ಹಾಗೆ! ನಮ್ಮಲ್ಲಿ ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, ಅದಕ್ಕಿಂತಲೂ ಹೆಚ್ಚು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು ಇವೆಲ್ಲ ಇದ್ದರೂ ನಾವು ಏನನ್ನು ಓದಬೇಕು, ಏನನ್ನು ನೋಡಬೇಕು, ಏನನ್ನು ಕೇಳಬೇಕು ಮತ್ತು ಯಾವುದರಿಂದ ಪ್ರಭಾವಿತವಾಗಬೇಕು ಎಂದು ನಿರ್ಧರಿಸುವವರು ಬೆರಳೆಣಿಕೆಯ ಮಂದಿ. ನಾವೆಲ್ಲ cross-media ownerಗಳ ಹಾಗೂ monopolyಗಳ ಮನದಿಚ್ಛೆಯಂತೆ ಬದುಕಬೇಕಾದ ಕಾಲದಲ್ಲಿದ್ದೇವೆ. ನಮಗೆ ಗೊತ್ತಿಲ್ಲದಂತೆಯೇ ನಾವೊಂದು ಹೊಸಬಗೆಯ ಗುಲಾಮಗಿರಿಯತ್ತ ಸಾಗುತ್ತಿದ್ದೇವೆಯೇ?

ಹಿರಿಯ ಪತ್ರಕರ್ತ ಪರಂಜಯ್ ಗುಹಾ ಠಾಕುರ್ತಾ ಒಂದು ಉದಾಹರಣೆ ಕೊಡುತ್ತಾರೆ: ದೆಹಲಿ ಮಹಾನಗರದಲ್ಲಿ ೧೬ ಇಂಗ್ಲಿಷ್ ದಿನಪತ್ರಿಕೆಗಳು ಕಾರ್ಯಾಚರಿಸುತ್ತಿವೆ. ಇವುಗಳ ಪೈಕಿ ಮೊದಲ ಮೂರು ಪತ್ರಿಕೆಗಳಾದ 'ಟೈಮ್ಸ್ ಆಫ್ ಇಂಡಿಯಾ’, 'ಹಿಂದೂಸ್ತಾನ್ ಟೈಮ್ಸ್’ ಹಾಗೂ 'ಇಕನಾಮಿಕ್ ಟೈಮ್ಸ್’ ಪತ್ರಿಕೆಗಳು ಎಲ್ಲ ಪತ್ರಿಕೆಗಳ ಒಟ್ಟು ಮಾರುಕಟ್ಟೆಯ ನಾಲ್ಕನೇ ಮೂರು ಪಾಲನ್ನು ಹೊಂದಿವೆಯಂತೆ. ಅಂದರೆ, ಇಡೀ ದೆಹಲಿಯ ಜನತೆ ಏನು ಓದಬೇಕೆಂಬುದನ್ನು ಬಹುತೇಕ ಈ ಮೂರು ಪತ್ರಿಕೆಗಳೇ ನಿರ್ಧರಿಸುವ ಸ್ಥಾನದಲ್ಲಿವೆಂದಂತಾಯ್ತು. ಅದರಲ್ಲೂ ಮೊದಲ ಮತ್ತು ಮೂರನೇ ಪತ್ರಿಕೆಗೆ ಒಬ್ಬನೇ ಮಾಲೀಕ.
ದೆಹಲಿ ಒಂದು ನಿದರ್ಶನ ಅಷ್ಟೆ. ಭಾರತದ ಬಹುತೇಕ ರಾಜ್ಯಗಳ ಕಥೆಯೂ ಇದೇ. ಕೆಲವೇ ಜನ ಮಾಲೀಕರು, ಶ್ರೀಮಂತ ಉದ್ಯಮಿಗಳು, ಪ್ರಭಾವಿ ರಾಜಕಾರಣಿಗಳು ನಮ್ಮ ಮಾಧ್ಯಮಗಳ ಕಂಟೆಂಟ್, ದೃಷ್ಟಿಕೋನ ಹಾಗೂ ಸಂಪಾದಕೀಯ ನೀತಿಯನ್ನು ನಿರ್ಧರಿಸುವ ಪರಿಸ್ಥಿತಿ ಇದೆ. ಸರ್ಕಾರವೇನಾದರೂ ಈ ಪ್ರವೃತ್ತಿಯನ್ನು ನಿಯಂತ್ರಿಸುವ ಪ್ರಸ್ತಾಪ ಮುಂದಿಟ್ಟರೆ ಅದನ್ನು ಒಕ್ಕೊರಲಿನಿಂದ ವಿರೋಧಿಸುವುದಕ್ಕೆ ಈ ಎಲ್ಲ ಕುಳಗಳೂ ತಯಾರಾಗಿಯೇ ಇರುತ್ತವೆ. ಬರೀ ಮಾಧ್ಯಮ ಮಾಲೀಕರುಗಳಷ್ಟೇ ಅಲ್ಲ, ರಾಜಕಾರಣಿಗಳೂ ಇದನ್ನು ವಿರೋಧಿಸುತ್ತಾರೆ. ಏಕೆಂದರೆ ರಾಜಕೀಯ ಪಕ್ಷಗಳಿಗೂ ದೊಡ್ಡದೊಡ್ಡ ಮಾಧ್ಯಮ ಮಹಾಶಯರುಗಳ ಕೃಪಾಕಟಾಕ್ಷದ ಅನಿವಾರ್ಯತೆ ಇದ್ದೇ ಇದೆ. ತಾವು ಬೆಳೆಯಬೇಕಾದರೆ ಅವುಗಳಿಗೆ ಮಾಧ್ಯಮಗಳ ಬೆಂಬಲ ಬೇಕೇಬೇಕಲ್ಲ? ಅದರಲ್ಲೂ ಎರಡು ಮೂರು ಪತ್ರಿಕೆಗಳು, ಚಾನೆಲ್‌ಗಳು 'ಒಪೀನಿಯನ್ ಲೀಡರ್’ಗಳಾಗಿಬಿಟ್ಟರೆ ರಾಜಕೀಯದವರ ಕೆಲಸ ಇನ್ನೂ ಸುಲಭವಾಯಿತು.

ಇದನ್ನು ವಿರೋಧಿಸುವುದಕ್ಕೆ ಯಾವ ಮಾಧ್ಯಮಗಳಿಗೂ ನೈತಿಕ ಶಕ್ತಿಯಿಲ್ಲದಂತಹ ಒಂದು ಅಸಹಾಯಕ ಪರಿಸ್ಥಿತಿ ಸೃಷ್ಟಿಯಾಗಿದೆ. ಒಂದು ಕಡೆ ಪೇಯ್ಡ್ ನ್ಯೂಸ್, ನ್ಯೂಸ್ ಪ್ಯಾಕೇಜ್, ಮೀಡಿಯಾನೆಟ್‌ನಂತಹ ಮಾಧ್ಯಮ ಹಾದರ ಎಗ್ಗಿಲ್ಲದಂತೆ ನಡೆಯುತ್ತಲೇ ಇದೆ, ಇನ್ನೊಂದೆಡೆ ರಾಜಕಾರಣಿಗಳು ಮತ್ತು ಉದ್ಯಮಿಗಳು ಮಾಧ್ಯಮಗಳ ಆಡಳಿತದಲ್ಲಿ ಪಾಲುಪಡೆದುಕೊಳ್ಳುವುದೂ ನಿರಂತರವಾಗಿ ಸಾಗಿದೆ. ಮಾಧ್ಯಮಗಳಲ್ಲಿ ಉದ್ಯಮಿಗಳು-ರಾಜಕಾರಣಿಗಳು ಯಾರು, ಉದ್ಯಮಿ-ರಾಜಕಾರಣಿಗಳಲ್ಲಿ ಮಾಧ್ಯಮವರ್ಗಕ್ಕೆ ಸೇರಿದವರ್ಯಾರು ಎಂದು ತಿಳಿದುಕೊಳ್ಳಲು ಸಾಧ್ಯವಾಗದ ಮಟ್ಟಿಗೆ ಈ ಸಖ್ಯ ಒಂದಕ್ಕೊಂದು ಬೆಸೆದುಬಿಟ್ಟಿದೆ.

ಬಿರ್ಲಾ ಕುಟುಂಬದ ಶೋಭನಾ ಭಾರ್ತಿಯಾ ಈಗ ’ಹಿಂದೂಸ್ತಾನ್ ಟೈಮ್ಸ್’ ಸಮೂಹದ ಅಧ್ಯಕ್ಷೆ. ’ಲೋಕಮತ್’ ಸಮೂಹವನ್ನು ನಡೆಸುತ್ತಿರುವುದು ರಾಜಕಾರಣ ಹಾಗೂ ಉದ್ಯಮದಲ್ಲಿರುವ ದರ್ದಾ ಕುಟುಂಬ. ’ಸನ್ ನೆಟ್‌ವರ್ಕ್’ ಮಾರನ್ ಕುಟುಂಬದ ಒಡೆತನದ್ದು. ಜಾಗರಣ್ ಪಬ್ಲಿಕೇಶನ್ಸ್, ಎಚ್‌ಟಿ ಮೀಡಿಯಾ, ದೈನಿಕ್ ಭಾಸ್ಕರ್ ಸಮೂಹ, ಎನ್‌ಡಿಟಿವಿಯಂತಹ ದೊಡ್ಡ ಸಂಸ್ಥೆಗಳ ನಿರ್ದೇಶಕರುಗಳ ಮಂಡಳಿಯಲ್ಲಿ ಉದ್ಯಮಿಗಳು ಹಾಗೂ ರಾಜಕಾರಣಿಗಳದ್ದೇ ಸಿಂಹಪಾಲು. ಜಗನ್ ಮೋಹನ್ ರೆಡ್ಡಿಯ ’ಸಾಕ್ಷಿ’, ರಾಜೀವ್ ಶುಕ್ಲಾ ಒಡೆತನದ ’ನ್ಯೂಸ್24’, ಜಯಲಲಿತಾ ಒಡೆತನದ ’ಜಯಾ ಟಿವಿ’ ಮತ್ತಿತರ ಚಾನೆಲ್‌ಗಳು, ರಾಜೀವ್ ಚಂದ್ರಶೇಖರ್ ಮಾಲೀಕತ್ವದ ಟಿವಿ ಮತ್ತು ಪತ್ರಿಕಾ ಮಾಧ್ಯಮಗಳು, ಕಾಂಗ್ರೆಸ್, ಬಿಜೆಪಿ, ಕಮ್ಯೂನಿಸ್ಟ್ ಪಕ್ಷಗಳು ಬೇರೆಬೇರೆ ಹೆಸರುಗಳಲ್ಲಿ ಬೇರೆಬೇರೆ ಭಾಷೆಗಳಲ್ಲಿ ನಡೆಸುವ ಮುದ್ರಣ ಹಾಗೂ ವಿದ್ಯುನ್ಮಾನ ಮಾಧ್ಯಮಗಳು... ದೇಶದಾದ್ಯಂತ ಇಂತಹ ಹತ್ತಾರು ನಿದರ್ಶನಗಳಿವೆ. ತಮಿಳುನಾಡು ಹಾಗೂ ಆಂಧ್ರಪ್ರದೇಶಗಳಲ್ಲಂತೂ ರಾಜಕಾರಣಿಗಳು ಚಾನೆಲ್ ಹಾಗೂ ಪತ್ರಿಕೆ ನಡೆಸುವುದು ಒಂದು ಫ್ಯಾಶನ್ನೇ ಆಗಿಬಿಟ್ಟಿದೆ.

ಈ ಎಲ್ಲ ಉದ್ಯಮ ಹಾಗೂ ರಾಜಕೀಯಾಸಕ್ತಿಗಳ ನಡುವೆ ಮಾಧ್ಯಮಗಳು ಗುಣಮಟ್ಟದ ಉದ್ಯೋಗಿಗಳನ್ನು ಪಡೆಯುವುದಕ್ಕೆ ಸೂಕ್ತ ಬಂಡವಾಳ ಹೂಡುತ್ತಿಲ್ಲ ಎಂಬ ಸಂಗತಿ ವಿಷಾದನೀಯವೇ. ಸಂಪತ್ತು ಸಂಗ್ರಹಣೆಯತ್ತಲೇ ಮನಸ್ಸು ಲೆಕ್ಕಾಚಾರ ಹಾಕತೊಡಗಿದಾಗ ಗುಣಮಟ್ಟ ಕಡೆಗಣಿಸಲ್ಪಡುತ್ತದೆ. ಉತ್ತಮ ವೇತನ ನೀಡಿ ಒಳ್ಳೆಯ ಪತ್ರಕರ್ತರನ್ನು ನೇಮಿಸಿಕೊಳ್ಳುವುದು ಅವರ ಆದ್ಯತೆಯಾಗಿರುವ ಬದಲು ಮೀಡಿಯೋಕರ್‌ಗಳನ್ನು ಬಳಸಿಕೊಂಡು ಅದೇ ಗುಣಮಟ್ಟದ ಕಾರ್ಯಕ್ರಮಗಳನ್ನು ಪ್ರಸಾರ ಮಾಡುವುದಕ್ಕೇ ಅವರ ಮಾಧ್ಯಮ ಸೇವೆ ಸೀಮಿತವಾಗುತ್ತದೆ. ಒಳ್ಳೆಯ ಟಿಆರ್‌ಪಿ ಗಳಿಸಿಕೊಳ್ಳುವುದಕ್ಕೆ ಅವರ ಬಳಿ ಅವರದ್ದೇ ಆದ ತಂತ್ರಗಾರಿಕೆಗಳು ಇದ್ದೇಇವೆ.

ಇಷ್ಟೆಲ್ಲ ಆದ ಮೇಲೆ ಇಂತಹ ಮಾಧ್ಯಮಗಳ ವಿಶ್ವಾಸಾರ್ಹತೆ ಅಥವಾ ಹೂರಣದ ಪ್ರಾಮಾಣಿಕತೆ ಬಗ್ಗೆ ಮಾತನಾಡುವುದು ನಿಷ್ಪ್ರಯೋಜಕ. ಯಾವುದನ್ನು ನಂಬಬೇಕು ಯಾವುದನ್ನು ಬಿಡಬೇಕು ಎಂಬ ಗೊಂದಲವನ್ನು ಜನಸಾಮಾನ್ಯರಲ್ಲಿ ಸೃಷ್ಟಿಸುವುದೇ ಬಹುತೇಕ ಮಾಧ್ಯಮಗಳ ಹೆಚ್ಚುಗಾರಿಕೆ.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವೆಂದೋ ಸ್ತಂಭವೆಂದೋ ಕರೆಸಿಕೊಂಡಿರುವ ನಮ್ಮ ಮಾಧ್ಯಮಗಳು ಆ ಅಭಿದಾನವನ್ನು ಉಳಿಸಿಕೊಳ್ಳುವ ಶ್ರೇಷ್ಠತೆಯನ್ನು ಉಳಿಸಿಕೊಂಡಿದ್ದಾವೆಯೇ ಎಂಬುದು ಸದ್ಯದ ಪ್ರಶ್ನೆ. ಆದರೆ ಅದಕ್ಕೆ ಉತ್ತರಿಸುವ ಮೊದಲು ಕೆ.ಪಿ. ಎತ್ತಿರುವ ನಾಲ್ಕು ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

5 ಕಾಮೆಂಟ್‌ಗಳು:

Shreenidhi Odilnala ಹೇಳಿದರು...

Nice Article...

Unknown ಹೇಳಿದರು...

ನೀವು ನೀಡಿರುವ ಮಾಹಿತಿ ತುಂಬಾ ಚೆನ್ನಾಗಿದೆ... ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಇಂತಹ ಇನ್ನೂ ಲೇಖನಗಳು ಬರಲಿ ಎಂದು ನಿರೀಕ್ಷಿಸುತ್ತಿದ್ದೇನೆ- ಗಣೇಶ್‌ ಕೆ.ಪಿ. ಪುತ್ತೂರು

Unknown ಹೇಳಿದರು...

ನೀವು ನೀಡಿರುವ ಮಾಹಿತಿ ತುಂಬಾ ಚೆನ್ನಾಗಿದೆ... ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಇಂತಹ ಇನ್ನೂ ಲೇಖನಗಳು ಬರಲಿ ಎಂದು ನಿರೀಕ್ಷಿಸುತ್ತಿದ್ದೇನೆ- ಗಣೇಶ್‌ ಕೆ.ಪಿ. ಪುತ್ತೂರು

Unknown ಹೇಳಿದರು...

ನೀವು ನೀಡಿರುವ ಮಾಹಿತಿ ತುಂಬಾ ಚೆನ್ನಾಗಿದೆ... ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಇಂತಹ ಇನ್ನೂ ಲೇಖನಗಳು ಬರಲಿ ಎಂದು ನಿರೀಕ್ಷಿಸುತ್ತಿದ್ದೇನೆ- ಗಣೇಶ್‌ ಕೆ.ಪಿ. ಪುತ್ತೂರು

Unknown ಹೇಳಿದರು...

ನೀವು ನೀಡಿರುವ ಮಾಹಿತಿ ತುಂಬಾ ಚೆನ್ನಾಗಿದೆ... ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುವ ಇಂತಹ ಇನ್ನೂ ಲೇಖನಗಳು ಬರಲಿ ಎಂದು ನಿರೀಕ್ಷಿಸುತ್ತಿದ್ದೇನೆ- ಗಣೇಶ್‌ ಕೆ.ಪಿ. ಪುತ್ತೂರು