ಬುಧವಾರ, ಅಕ್ಟೋಬರ್ 24, 2012

ಚಿತ್ರಭಾಷಾಕಾವ್ಯದ 'ಸಾಂಗತ್ಯ'ದಲ್ಲಿ...


ಮಾಧ್ಯಮಶೋಧ-27, ಹೊಸದಿಗಂತ, 11 ಅಕ್ಟೋಬರ್ 2012
ಸಾಂಗತ್ಯ ಬ್ಲಾಗ್ ನಲ್ಲೂ ಪ್ರಕಟವಾಗಿದೆ.

ಮನೆತನದ ವೃತ್ತಿ ಗೊಂಬೆಯಾಟಕ್ಕೆ ಮುಕ್ತಾಯ ಹಾಡಿ ಮುಂಬೈ ಸೇರಿ ಸುಖಜೀವನ ನಡೆಸಬೇಕೆಂಬುದು ಮುಗ್ಧ ಯುವಕ ದಾಸುವಿನ ಅಪೇಕ್ಷೆ. ಗೊಂಬೆಗಳೊಂದಿಗೇ ಬದುಕು ಕಟ್ಟಿಕೊಂಡು ಬಂದ ದಾಸುವಿನ ವೃದ್ಧ ತಂದೆ ದಾದುವಿಗೆ ಇದೆಲ್ಲ ಇಷ್ಟವಿಲ್ಲದ ಸಂಗತಿ. ಅಂತೂ ಇಂತೂ ಮಗನ ಆಸೆಗೆ ಅಪ್ಪ ಸೈ ಎನ್ನುತ್ತಾನೆ. ಇಬ್ಬರೂ ತಮ್ಮ ಗೊಂಬೆಗಳೊಂದಿಗೆ ಮಹಾರಾಷ್ಟ್ರದ ಹಳ್ಳಿಯನ್ನು ತೊರೆದು ಮುಂಬೈ ಮಹಾನಗರ ಸೇರುತ್ತಾರೆ.

ದಾಸುವಿನ ಪೇಟೆ ಕನಸು ಕೆಲವೇ ದಿನಗಳಲ್ಲಿ ಹುಸಿಯಾಗುತ್ತದೆ. ತಂದೆಗಾದರೂ ಒಂದುಹೊತ್ತಿನ ಕೂಳು ಒದಗಿಸುವುದು ತನ್ನಿಂದ ಸಾಧ್ಯವಾಗುತ್ತಿಲ್ಲ ಎಂಬುದು ಅರಿವಾದಾಗ ದಾಸು ಪುನಃ ತನ್ನ ಗೊಂಬೆಗಳ ಮೂಟೆ ಬಿಚ್ಚಲೇಬೇಕಾಗುತ್ತದೆ. ಅಲ್ಲಿಂದ ಮತ್ತೆ ಗೊಂಬೆಯಾಟದ ಬದುಕು ಆರಂಭ. ಆದರೆ ನೆಮ್ಮದಿ ಮರುಕೊಳಿಸಿತು ಎಂಬಷ್ಟರಲ್ಲಿ ದಾಸುವಿಗೆ ಅನಿರೀಕ್ಷಿತ ಬರಸಿಡಿಲು. ಅಪಘಾತವೊಂದರಲ್ಲಿ ಅಪ್ಪ ದಾದು ಸಾವಿಗೀಡಾಗುತ್ತಾನೆ. ಈಗ ಒಬ್ಬಂಟಿ ದಾಸುವಿಗೆ ಗೊಂಬೆಗಳೇ ಕುಟುಂಬ, ಅವೇ ಸ್ನೇಹಿತರು, ಅವೇ ಬಂಧುಗಳು, ಅವೇ ಸರ್ವಸ್ವ.

ಈ ನಡುವೆ ದಾಸು ಬಿಡಾರ ಹೂಡಿದ್ದ ಕೊಂಪೆ ಕೋಮುಗಲಭೆಯ ಉರಿಗೆ ಸಿಲುಕಿ ಭಸ್ಮವಾಗುತ್ತದೆ. ತನ್ನ ಅಳಿದುಳಿದ ಗೊಂಬೆಗಳನ್ನು ಆಯ್ದುಕೊಳ್ಳಲು ಬಂದ ದಾಸುವಿಗೆ ದೊರೆತದ್ದು ಮಾತ್ರ ಅವಶೇಷಗಳ ನಡುವೆ ಒಂದು ಪುಟ್ಟ ಹೆಣ್ಣು ಶಿಶು. ಅದರ ಪಾಲಕರನ್ನು ಹುಡುಕುವ ದಾಸುವಿನ ಪ್ರಯತ್ನಗಳೆಲ್ಲ ವಿಫಲವಾದರೆ, ಇನ್ನೊಂದೆಡೆ ಈ ಮಗು ತನ್ನದೇ ಏನೋ ಎಂಬಷ್ಟರ ಮಟ್ಟಿಗೆ ಆತನಿಗೆ ಮಗುವಿನೊಂದಿಗೆ ಭಾವಬಂಧ ಬೆಳೆಯುತ್ತದೆ. ತನ್ನ ಗೊಂಬೆಗಳಲ್ಲೆಲ್ಲ ಅತ್ಯಂತ ಮುದ್ದಾದ ಈ ಮಗುವಿಗೆ ದಾಸು 'ಬಾಹುಲಿ’ (ಗೊಂಬೆ) ಎಂದೇ ಹೆಸರಿಡುತ್ತಾನೆ. ಆದರೆ ಆಕೆ ತನ್ನ ಗೊಂಬೆಗಳಿಗಿಂತ ಏನೇನೂ ಭಿನ್ನವಾಗಿಲ್ಲ ಎಂಬುದು ಅರ್ಥವಾಗಲು ದಾಸುವಿಗೆ ತುಂಬ ಸಮಯ ಹಿಡಿಯುವುದಿಲ್ಲ. ಬಾಹುಲಿಗೆ ಮಾತು ಬರದು, ಕಣ್ಣು ಕಾಣಿಸದು, ಕಿವಿ ಕೇಳಿಸದು. ಆಕೆ ದಾಸುವಿನ ಗೊಂಬೆ ಕುಟುಂಬದೊಳಗೊಂದು ಸಜೀವ ಗೊಂಬೆ.

ಕ್ರೂರ ಸತ್ಯಕ್ಕೆ ಎದೆಬಿರಿದರೂ ಅದರೊಂದಿಗೆ ರಾಜಿಯಾಗದೆ ದಾಸುವಿಗೆ ವಿಧಿಯಿಲ್ಲ. ಮೂರು ಇಂದ್ರಿಯಗಳು ನಿಷ್ಕ್ರಿಯವಾಗಿದ್ದ ಹೆಣ್ಣುಮಗು ಅನಿವಾರ್ಯವಾಗಿ ಮತ್ತೊಂದು ಗೊಂಬೆಯಾಗುತ್ತದೆ. ಏನಿಲ್ಲದಿದ್ದರೂ ತನ್ನ ಕೈಕಾಲಿನ ದಾರಗಳು ಚಲಿಸಿದಾಗ ಅದಕ್ಕೆ ತಕ್ಕಂತೆ ಕುಣಿಯಬೇಕೆಂಬುದು ಆಕೆಗೆ ಗೊತ್ತು. ಸಂತೆಗಳಲ್ಲಿ, ರಸ್ತೆಗಳಲ್ಲಿ, ಗಲ್ಲಿಗಳಲ್ಲಿ, ನಿಲ್ದಾಣಗಳಲ್ಲಿ, ಸಂದಣಿಯಲ್ಲಿ... ಬಾಹುಲಿ ಜನಾಕರ್ಷಣೆಯ ಕೇಂದ್ರ. ಆದರೆ ದಾಸು-ಬಾಹುಲಿಯನ್ನು ಬೆಸೆದ ದಾರಗಳ ಹಿಂದೆ ಯಾರಿಗೂ ಕಾಣದ ಒಂದು ಅಂತರಂಗದ ಭಾಷೆ ಮೊಳೆತು ಅಪ್ಪ-ಮಗಳ ಸಂಬಂಧ ಇನ್ನಿಲ್ಲದಂತೆ ಭದ್ರವಾಗುತ್ತದೆ.

ಇಷ್ಟೆಲ್ಲ ಆಗುವ ಹೊತ್ತಿಗೆ ಈ ಸಂಗತಿ ಮಾಧ್ಯಮದವರ ಕಣ್ಣಿಗೆ ಬೀಳದೆ ಹೋಗುತ್ತದೆಯೇ? ಟಿವಿ ವಾಹಿನಿಯೊಂದಕ್ಕೆ ದಾಸು-ಬಾಹುಲಿ ಒಳ್ಳೆಯ ಬ್ರೇಕಿಂಗ್ ನ್ಯೂಸ್ ಆಗುತ್ತಾರೆ. ಒಬ್ಬ ವರದಿಗಾರ್ತಿಗೆ ಇದು ಮಾನವೀಯ ವರದಿಯಾದರೆ, ಮತ್ತೊಬ್ಬನಿಗೆ ಇದು ಟಿಆರ್‌ಪಿ ಹೆಚ್ಚಿಸುವ ಸುಲಭದ ದಾರಿಯಾಗುತ್ತದೆ. ಏನೇ ಇರಲಿ, ಚಾನೆಲ್ ಕಾರ್ಯಕ್ರಮ ಮಗುವಿನ ನಿಜವಾದ ತಂದೆ-ತಾಯಿ ಪತ್ತೆಗೆ ಕಾರಣವಾಗುತ್ತದೆ. ಮಗುವಿನ ಅಂಗವೈಕಲ್ಯವನ್ನು ಒಪ್ಪಿಕೊಳ್ಳಲಾಗದೆ ಅದನ್ನು ತಾಯಿಗೆ ತಿಳಿಯದಂತೆ ಬೀದಿಗೆಸೆದು ಬಂದಿದ್ದ ತಂದೆ ಈಗ ಹೇಗಾದರೂ ಮಾಡಿ ಆ ಮಗುವನ್ನು ಮರಳಿ ಪಡೆಯಬೇಕೆಂದು ಹಪಹಪಿಸುತ್ತಾನೆ. ಮಗು ಹುಟ್ಟುವಾಗಲೇ ಸತ್ತುಹೋಗಿತ್ತು ಎಂದು ಪತ್ನಿ ಬಳಿ ಸುಳ್ಳು ಹೇಳಿದ್ದ ತಂದೆ ಈಗ ಆಕೆಯ ಬಳಿ ಸತ್ಯ ನುಡಿಯುವುದು ಅನಿವಾರ್ಯವಾಗುತ್ತದೆ. ಆದರೆ ಇಷ್ಟರಲ್ಲಿ ದಾಸು-ಬಾಹುಲಿ ಸಂಬಂಧ ಯಾವ ಏಟಿಗೂ ಛಿದ್ರವಾಗದಷ್ಟು ಭದ್ರವಾಗಿಬಿಟ್ಟಿರುತ್ತದೆ.

ಮಗುವನ್ನು ಬೀದಿಗೆಸೆದು ಆಮೇಲೆ ಅಂತರಂಗದ ಎಳೆ ಜಾಗೃತಗೊಂಡು ಮಗು ತನಗೆ ಬೇಕೇಬೇಕೆಂದು ಪಟ್ಟುಹಿಡಿವ ಮಗುವಿನ ನಿಜವಾದ ತಂದೆ ಒಂದು ಕಡೆ. ಅನಾಥಶಿಶುವನ್ನು ಸಾಕಿಸಲಹಿ ಅದು ಸಜೀವ ಬೊಂಬೆಯಷ್ಟೇ ಆಗಿದ್ದರೂ ಅದನ್ನು ತನ್ನ ಮಗುವಾಗಿ ಸ್ವೀಕರಿಸಿ ಅದನ್ನೇ ಸರ್ವಸ್ವವನ್ನಾಗಿಸಿಕೊಂಡ ದಾಸು ಇನ್ನೊಂದು ಕಡೆ. ತನ್ನದಲ್ಲದ ತಪ್ಪಿಗೆ ಮಗುವಿಂದ ದೂರವಾಗಿ ಅದಕ್ಕಾಗಿ ಹಗಲಿರುಳು ಹಂಬಲಿಸುತ್ತಿರುವ, ಇನ್ನೆಂದೂ ತಾಯಿಯಾಗುವ ಅವಕಾಶ ಇಲ್ಲದ ಅಮ್ಮ ಮತ್ತೊಂದು ಕಡೆ. ಇದೆಲ್ಲದಕ್ಕೂ 'ಮೂಕ-ಕಿವುಡು-ಕುರುಡು ಸಾಕ್ಷಿ’ಯಾಗಿ ಕಾಡುವ ಬಾಹುಲಿ ಮಗದೊಂದು ಕಡೆ. ಸರಿ, ಇದೆಲ್ಲದರ ಅಂತ್ಯ ಹೇಗೆ?
ರಾಷ್ಟ್ರಕವಿ ಕುವೆಂಪು ಅವರ ಕುಪ್ಪಳಿಯ ಹೇಮಾಂಗಣದ ದೃಕ್-ಶ್ರವಣ ಮಂದಿರದ ಒಳಗೆ ಲೈಟ್ ಹತ್ತಿಕೊಳ್ಳುತ್ತದೆ. ಅಷ್ಟೂ ಹೊತ್ತು ಈ ಕಥೆಯನ್ನು ಬೆಳ್ಳಿತೆರೆಯಲ್ಲಿ ವೀಕ್ಷಿಸುತ್ತಿದ್ದ ಪ್ರೇಕ್ಷಕರೆಲ್ಲ ಅಪ್ರಜ್ಞಾಪೂರ್ವಕವಾಗಿ ತೊಟ್ಟಿಕ್ಕುತ್ತಿದ್ದ ಕಣ್ಣೀರು ಒರೆಸಿಕೊಳ್ಳುವುದನ್ನೂ ಮರೆತು ಹಾಗೆಯೇ ಕುಳಿತಿದ್ದಾರೆ.

ಅದು 'ಸಾಂಗತ್ಯ’ ಬಳಗ ಮೊನ್ನೆ ಅಕ್ಟೋಬರ್ 1 ಮತ್ತು 2ರಂದು ಕುಪ್ಪಳಿಯಲ್ಲಿ ಆಯೋಜಿಸಿದ್ದ ಎಂಟನೇ ಚಲನಚಿತ್ರ ಅಧ್ಯಯನ ಶಿಬಿರದ ಮೊದಲನೇ ಸಿನಿಮಾ. ಇದೇ ಏಪ್ರಿಲ್‌ನಲ್ಲಿ ತೆರೆಕಂಡ 'ಖೇಲ್ ಮಂಡಲ’ ಎಂಬ ಮರಾಠಿ ಭಾಷೆಯ ಚಲನಚಿತ್ರ. ಮೇಲ್ನೋಟಕ್ಕೆ ಸಾಮಾನ್ಯ ಎನಿಸಬಲ್ಲ ಒಂದು ಕಥಾಹಂದರಕ್ಕೆ ಭಾವನೆಗಳ ಬಣ್ಣ ತುಂಬಿ ಪ್ರೇಕ್ಷಕನ ಮನಕಲಕುವಂತಹ ಒಂದು ಸಿನಿಮಾ ಮಾಡಿದ ಹೆಗ್ಗಳಿಕೆ ನಿರ್ದೇಶಕ ವಿಜು ಮಾನೆಯವರದ್ದು. ಅನಾಥ ಮಗುವೊಂದಕ್ಕೆ ಬದುಕು ಕೊಟ್ಟ ಬಡವನ ಕಥೆ ಇದೆಂದು ಒಂದೇ ಮಾತಿನಲ್ಲಿ ಹೇಳಿ ಮುಗಿಸಬಹುದಾದರೂ, ಆ ಹೃದಯವಿದ್ರಾವಕ ಕಥನದ ಮೂಲಕ ನಿರ್ದೇಶಕ ಹೇಳುವ ಮಾನವ ಸಂಬಂಧಗಳ ಬೆರಗು, ಮಹಾನಗರಗಳ ಬದುಕಿನ ಸಂಕೀರ್ಣತೆ, ಜಾಗತೀಕರಣದ ಕರಿಛಾಯೆ, ಮಾಧ್ಯಮಗಳ ಧಾವಂತ, ವರ್ತಮಾನದ ವೈರುಧ್ಯಗಳು... ಇವನ್ನೆಲ್ಲ ವಿವರಿಸುವುದಕ್ಕೆ ಒಂದು ಮಾತು ಸಾಲದು. ಆದರೆ 'ಖೇಲ್ ಮಂಡಲ’ದ ವಿಮರ್ಶೆ ಈ ಬರೆಹದ ಉದ್ದೇಶ ಅಲ್ಲ.

'ಖೇಲ್ ಮಂಡಲ’ ಒಂದು ಗಾಢ ನೆನಪಾಗಿ 'ಸಾಂಗತ್ಯ’ದ ಎರಡು ದಿನ ಪೂರ್ತಿ ಶಿಬಿರಾರ್ಥಿಗಳನ್ನು ಬಿಡದೇ ಕಾಡಿತು. ಮುಂದೆ ಸ್ಟೀವನ್ ಸ್ಪೀಲ್‌ಬರ್ಗ್ ಅವರ 'ಡ್ಯುಯೆಲ್’, (ಇಂಗ್ಲಿಷ್-1971) ಸುಶೀಂದ್ರನ್ ಅವರ 'ಅಳಗರ್‌ಸಾಮಿಯಿನ್ ಕುದಿರೈ’ (ತಮಿಳು-2011), ಒಲಿವಿಯರ್ ಅವರ 'ದಿ ಇನ್‌ಟಚಬಲ್ಸ್’ (ಫ್ರೆಂಚ್-2011), ಸ್ಟೀಫನ್ ಚೌ ಅವರ 'ಶಾವೊಲಿನ್ ಸಾಕರ್’ (ಚೈನೀಸ್-2001) ಹೀಗೆ ಆರೇಳು ಚಲನಚಿತ್ರಗಳನ್ನು ನೋಡಿ ಸಿನಿಮಾಸಕ್ತರು ವಿಚಾರ ವಿಮರ್ಶೆ ನಡೆಸಿದರು. ಆದರೆ 'ಖೇಲ್ ಮಂಡಲ’ದಷ್ಟು ಆಳವಾಗಿ ತಟ್ಟಿದ, ಹೆಚ್ಚಿನ ಪ್ರಶಂಸೆ ಹಾಗೂ ವಿಮರ್ಶೆಗೆ ಕಾರಣವಾದ ಚಿತ್ರ ಇನ್ನೊಂದಿರಲಿಲ್ಲವೇನೋ? ಒಂದೊಂದು ದೃಶ್ಯವೂ ಒಂದೊಂದು ಕಾವ್ಯದಂತೆ, ಒಂದೊಂದು ಮಾತೂ ಒಂದೊಂದು ವ್ಯಾಖ್ಯಾನದಂತೆ ಇದ್ದ ಸಿನಿಮಾವನ್ನು ವೀಕ್ಷಿಸಿ ಹೃದಯ ಒದ್ದೆ ಮಾಡಿಕೊಳ್ಳದ ಶಿಬಿರಾರ್ಥಿಗಳಿರಲಿಲ್ಲ.

'ಸಾಂಗತ್ಯ’ ತೋರಿಸಿದ ಇನ್ನೊಂದು ಸಿನಿಮಾ ರಾಷ್ಟ್ರಪ್ರಶಸ್ತಿ ಪುರಸ್ಕೃತ 'ಬ್ಯಾರಿ’(2011). ಧರ್ಮದ ಹೆಸರಿನಲ್ಲಿ ಮುಸ್ಲಿಂ ಮಹಿಳೆಯರು ಎಂತಹ ಕಠೋರ ಬದುಕನ್ನು ಎದುರಿಸಬೇಕಾಗುತ್ತದೆ ಎಂಬ ಕಥೆ ಹೊಂದಿರುವ ಈ ಚಿತ್ರದ ಸಂವಾದಕ್ಕೆ ಖುದ್ದು ನಿರ್ದೇಶಕ ಸುವೀರನ್ ಅವರೇ ಬರಬೇಕಿತ್ತಾದರೂ, ಅವರ ಗೈರುಹಾಜರಿಯ ಕೊರತೆಯನ್ನು ತುಂಬಿದವರು ಸಹನಿರ್ದೇಶಕ ರಿಯಾಜ಼್ ಅಶ್ರಫ್. ಸಿನಿಮಾ ಹಿನ್ನೆಲೆ ಮತ್ತು ಅದರ ನಿರ್ಮಾಣದ ಕಥೆಯನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡ ರಿಯಾಜ಼್ ಒಂದು ಅರ್ಥಪೂರ್ಣ ಸಂವಾದವನ್ನು ಹುಟ್ಟುಹಾಕಿದರು.

ಸಮಾನಾಸಕ್ತ ಮನಸ್ಸುಗಳು ಒಂದೆಡೆ ಕಲೆತ ಫಲವಾಗಿ ಮೂರ್ನಾಲ್ಕು ವರ್ಷಗಳ ಹಿಂದೆ ಹುಟ್ಟಿಕೊಂಡ ಸಿನಿಮಾ ಅಧ್ಯಯನದ ತಂಡವೇ ಈ ಸಾಂಗತ್ಯ. ತೀರಾ ಅನೌಪಚಾರಿಕವಾಗಿ ರೂಪುಗೊಂಡ ಈ ಗುಂಪು ನೋಡನೋಡುತ್ತಲೇ ಎಂಟು ಚಲನಚಿತ್ರ ಶಿಬಿರಗಳನ್ನೂ ಆಯೋಜಿಸಿಬಿಟ್ಟಿದೆ. ಚಲನಚಿತ್ರೋತ್ಸವ ಹೊಸ ವಿಚಾರವೇನಲ್ಲ. ರಾಜ್ಯಮಟ್ಟ, ರಾಷ್ಟ್ರಮಟ್ಟ, ಅಂತಾರಾಷ್ಟ್ರೀಯ ಮಟ್ಟ ಹೀಗೆ ಸಾಕಷ್ಟು ದೊಡ್ಡಮಟ್ಟದ ’ಉತ್ಸವ’ಗಳು ನಡೆಯುವುದಿದೆ. ಆದರೆ ಸಾಂಗತ್ಯ ಆಯೋಜಿಸುತ್ತಾ ಬಂದಿರುವುದು ಜನಪ್ರಿಯ ಮಾದರಿಯ ಫಿಲ್ಮ್ ಫೆಸ್ಟ್‌ಗಳನ್ನಲ್ಲ, ಬದಲಾಗಿ, ಈಗಾಗಲೇ ಉಲ್ಲೇಖವಾಗಿರುವಂತೆ, ಸಿನಿಮಾ ಅಧ್ಯಯನ ಶಿಬಿರಗಳನ್ನು.

ಸಾಂಗತ್ಯವೇ ಹೇಳಿಕೊಂಡಿರುವಂತೆ ಅದು ಶಿಬಿರಗಳ ಮೂಲಕ ಮಾಡಹೊರಟಿರುವುದು 'ಚಿತ್ರಭಾಷಾಕಾವ್ಯ’ದ ರಸಾಸ್ವಾದನೆ ಅಷ್ಟೆ. ಒಂದು ಸಿನಿಮಾವನ್ನು ಬೇರೆಬೇರೆ ಆಯಾಮಗಳಿಂದ ಅರ್ಥಮಾಡಿಕೊಳ್ಳುವ ಬಗೆ, ಕಥೆ, ಸಂಗೀತ, ಕ್ಯಾಮೆರಾ, ನಿರ್ದೇಶನ, ಬಣ್ಣ, ಬೆಳಕು, ಉಡುಗೆ ತೊಡುಗೆ ಇತ್ಯಾದಿ ತಾಂತ್ರಿಕ ಅಂಶಗಳ ಮಹತ್ವ ಮತ್ತು ಅವುಗಳ ಸಾಧ್ಯತೆಗಳು, ಬೇರೆಬೇರೆ ಭಾಷೆಗಳಲ್ಲಿ, ದೇಶಗಳಲ್ಲಿ ನಡೆಯುತ್ತಿರುವ ಸಿನಿಮಾ ನಿರ್ಮಾಣದ ಹೊಸಹಾದಿಗಳು... ಹೀಗೆ ಶುದ್ಧ ಶೈಕ್ಷಣಿಕ ಉದ್ದೇಶದಿಂದ ಸಿನಿಮಾ ಅಧ್ಯಯನ ನಡೆಸುವ ಆಸಕ್ತರೆಲ್ಲ ಒಂದು ಕಡೆ ಕುಳಿತು ಮುಖಾಮುಖಿಯಾಗುವುದಕ್ಕೆ ಸಾಂಗತ್ಯ ವೇದಿಕೆ ಒದಗಿಸಿದೆ. ಸಾಂಗತ್ಯದ ಈ 'ಸಿನಿಮಾ ಸೇವೆ’ಯನ್ನು ಆರಂಭದಿಂದಲೂ ಬೆಂಬಲಿಸುತ್ತಾ ಬಂದದ್ದು ಕುಪ್ಪಳಿಯ ರಾಷ್ಟ್ರಪತಿ ಕುವೆಂಪು ಪ್ರತಿಷ್ಠಾನ. ತನ್ನ ಮೊದಲನೇ ಶಿಬಿರದಿಂದಲೂ ಸಾಂಗತ್ಯವು ಕುವೆಂಪು ಪ್ರತಿಷ್ಠಾನ ಸ್ಥಾಪಿಸಿರುವ ದೃಕ್-ಶ್ರವಣ ಸ್ಟುಡಿಯೋದಲ್ಲೇ ಸಿನಿಮಾಗಳನ್ನು ಪ್ರದರ್ಶಿಸುತ್ತ ಬಂದಿದೆ.

ಬಹುಶಃ 'ಸಾಂಗತ್ಯ’ದಂತಹ ಸಂಸ್ಥೆ ಆಯೋಜಿಸುವ ವಿಶಿಷ್ಟ ಚಿತ್ರಶಿಬಿರಕ್ಕೆ ಮಲೆನಾಡಿನ ನಯನಮನೋಹರ ಹಸಿರು ಪರಿಸರದ ನಡುವೆ ಕಂಗೊಳಿಸುತ್ತಿರುವ ಕುವೆಂಪು ಅವರ ಜನ್ಮಶತಮಾನೋತ್ಸವದ ನೆನಪಿನ ಹೇಮಾಂಗಣಕ್ಕಿಂತ ಉತ್ತಮ ತಾಣ ಇನ್ನೊಂದು ಸಿಗಲಾರದು. ಪಕ್ಕದಲ್ಲೇ ಕುವೆಂಪು ಅವರು ಹುಟ್ಟಿಬೆಳೆದ ಕವಿಮನೆ, ಎದುರಿಗೆ ಮಹಾಕವಿಯ ಕಾವ್ಯಸುಧೆಯುಕ್ಕಿಸಿದ ಕವಿಶೈಲ, ಹೋದೆಡೆಯಲ್ಲೆಲ್ಲ ಕುವೆಂಪು ಧ್ಯಾನದ ದಿವ್ಯಾನುಭವಕ್ಕೆ ಪ್ರೇರಣೆಯಾಗುವ ರಮಣೀಯ ಪ್ರಕೃತಿ... ಇದ್ದ ಎರಡು ದಿನವಂತೂ ಚಿತ್ರಭಾಷಾಕಾವ್ಯದ ಸಾಂಗತ್ಯದೊಂದಿಗೆ ನಿಸರ್ಗದ ಒಳದನಿಯ ಸಾಂಗತ್ಯವೂ ತಪ್ಪದು.

'ಸಾಂಗತ್ಯ’ ತನ್ನ ಅಧ್ಯಯನಾಸಕ್ತಿಯ ಮುಂದುವರಿಕೆಯಾಗಿ 'ಸಾಂಗತ್ಯ’ ಎಂಬ ತ್ರೈಮಾಸಿಕವನ್ನು ಹೊರತರುತ್ತಿದೆ. ಅಲ್ಲದೆ, saangatya.wordpress.com ಎಂಬ ಬ್ಲಾಗ್‌ನ್ನೂ ನಿರ್ವಹಿಸುತ್ತಿದೆ. ಚಿತ್ರವೀಕ್ಷಣೆಯ ತಾಜಾ ಅನುಭವಗಳಿಗೆ, ಹೊಸ ಚರ್ಚೆ, ಸಂವಾದಗಳಿಗೆ ಇವೆರಡೂ ಸಮರ್ಥ ವೇದಿಕೆಗಳಾಗಿವೆ. ಹೊಸ ಅಲೆಯ ಚಿತ್ರಗಳಿಗೆ ವೀಕ್ಷಕರು ಸಿಗುತ್ತಿಲ್ಲ, ಸದಭಿರುಚಿಯ ಚಿತ್ರಗಳ ಬಿಡುಗಡೆಗೆ ಥಿಯೇಟರುಗಳೇ ದೊರೆಯುತ್ತಿಲ್ಲ ಎಂಬ ಆತಂಕಗಳಿಗೆ ಸಾಂಗತ್ಯದಂತಹ ಕೂಟಗಳು ಸಮಾಧಾನ ಹೇಳುತ್ತವೆ. ಒಳ್ಳೆಯ ಉದ್ದೇಶದಿಂದ ಮಾಡುವ ಚಿತ್ರಗಳಿಗೆ ಸೂಕ್ತ ಪ್ರತಿಕ್ರಿಯೆ, ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಕೊರಗಿನ ನಿವಾರಣೆಗೆ ಈ ಬಗೆಯ ಪರ್ಯಾಯ ವ್ಯವಸ್ಥೆಗಳನ್ನು ರೂಪಿಸುವ ಕೆಲಸ ಸಣ್ಣ ಪ್ರಮಾಣದಲ್ಲಾದರೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುವುದು ಸದ್ಯದ ಅವಶ್ಯಕತೆ ಎನಿಸುತ್ತದೆ.

ಕಾಮೆಂಟ್‌ಗಳಿಲ್ಲ: