ಮಂಗಳವಾರ, ಮಾರ್ಚ್ 3, 2026

ವಿವೇಕವೇ ಸಾಮಾಜಿಕ ವರ್ತನೆಯ ದಿಕ್ಸೂಚಿ

ಬೋಧಿವೃಕ್ಷ, 21-27 ಫೆಬ್ರವರಿ 2026ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅಧ್ಯಯನ ಯೋಜನೆಯೊಂದರ ಭಾಗವಾಗಿ ಇತ್ತೀಚೆಗೆ ಭೂತಾನ್ ದೇಶದಲ್ಲಿ ಕೆಲವು ದಿನ ಕಳೆಯುವ ಅವಕಾಶ ಒದಗಿತ್ತು. ಈ ಸಂದರ್ಭದಲ್ಲಿ ವಿಶಿಷ್ಟ ಅಂಶವೊಂದು ನಮ್ಮನ್ನು ಚಕಿತಗೊಳಿಸಿತು. ಅದೇನೆಂದರೆ, ಇಡೀ ಭೂತಾನ್ ದೇಶದಲ್ಲಿ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಇಲ್ಲದಿರುವುದು! ಅರೆ, ಈ ಕಾಲದಲ್ಲೂ ಟ್ರಾಫಿಕ್ ಸಿಗ್ನಲ್ ಇಲ್ಲದೆ ವಾಹನ ಸಂಚಾರವನ್ನು ಹೇಗೆ ನಿಭಾಯಿಸುತ್ತಾರೆ ಎಂದು ಅಚ್ಚರಿ ಎನಿಸಬಹುದು. ಆದರೆ ಆ ದೇಶದ ಮಟ್ಟಿಗೆ ಈ ಅಚ್ಚರಿಯೇ ನಿಜ. ದೇಶದ ರಾಜಧಾನಿ ಥಿಂಪುವಿನಲ್ಲೇ ಒಂದೇ ಒಂದು ಟ್ರಾಫಿಕ್ ಸಿಗ್ನಲ್ ಕಾಣಸಿಗುವುದಿಲ್ಲ. ಟ್ರಾಫಿಕ್ ಸಿಗ್ನಲ್ ಅಷ್ಟೇ ಅಲ್ಲ, ರಸ್ತೆ ಉಬ್ಬುಗಳು ಕೂಡ ಕಾಣಸಿಗುವುದಿಲ್ಲ. ರಸ್ತೆಗಳು ಕೂಡುವ ಜಾಗದಲ್ಲಿ ಇರುವ ವೃತ್ತಗಳು ಕೂಡ ತೀರಾ ಸಣ್ಣವು.

ಒಂದು ದೇಶದ ರಸ್ತೆಗಳು ಆ ದೇಶದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ ಎಂಬ ಪ್ರಸಿದ್ಧ ಮಾತೊಂದು ಇದೆ. ರಸ್ತೆಗಳು ಎಂಬಲ್ಲಿ ಸಂಚಾರ ವ್ಯವಸ್ಥೆ ಎಂದರೂ ಚೆನ್ನಾಗಿ ಒಪ್ಪುತ್ತದೆ. ಬೇರೆ ದೇಶಗಳಿಗೆ ಹೋಲಿಸಿದರೆ ಭೂತಾನ್‌ನಲ್ಲಿ ಜನಸಂಖ್ಯೆ ಮತ್ತು ವಾಹನಗಳ ಸಂಖ್ಯೆ ಕಡಿಮೆ ಇರುವುದರಿಂದ ಅಲ್ಲಿ ಸಂಚಾರ ವ್ಯವಸ್ಥೆಯನ್ನು ನಿಭಾಯಿಸುವುದು ಸುಲಭ ಎಂಬ ತಾಂತ್ರಿಕ ಕಾರಣವನ್ನು ಕೊಡಬಹುದಾದರೂ, ವಾಸ್ತವವಾಗಿ ಇಂತಹದೊಂದು ಸೋಜಿಗ ಸಾಧ್ಯವಾಗಿರುವುದು ಅಲ್ಲಿನ ಜನರು ಮತ್ತವರ ಗುಣನಡತೆಯಿಂದಾಗಿ ಎಂಬುದೇ ನಿಜ.

ಭೂತಾನ್ ನಾಗರಿಕರ ಸಾಮಾಜಿಕ ವರ್ತನೆಯು ಸಾಂಸ್ಕೃತಿಕ ಮೌಲ್ಯಗಳು ಮತ್ತು ಅದರಿಂದ ಹುಟ್ಟಿಕೊಂಡಿರುವ ವಿಶಿಷ್ಟವಾಗಿರುವ ನೈತಿಕ ಪ್ರಜ್ಞೆಯಿಂದ ಪ್ರಭಾವಿಸಲ್ಪಟ್ಟಿದೆ. ಅವರ ಪ್ರತಿ ವರ್ತನೆಯಲ್ಲೂ ಅಪಾರ ಸಂಯಮ ಮತ್ತು ಸೌಜನ್ಯ ಎದ್ದು ಕಾಣುತ್ತದೆ. ನಮ್ಮಿಂದಾಗಿ ಇನ್ನೊಬ್ಬರಿಗೆ ತೊಂದರೆ ಆಗಬಾರದು, ಸಾಧ್ಯವಾದಷ್ಟು ಇನ್ನೊಬ್ಬರಿಗೆ ಸಹಾಯ ಮಾಡಬೇಕು ಎಂಬ ಅವರ ಮನಸ್ಸೇ ಈ ಬಗೆಯ ವ್ಯಕ್ತಿತ್ವಕ್ಕೆ ಕಾರಣ. ಹೀಗಾಗಿ ರಸ್ತೆಯ ಮೇಲೆ ನಡೆಯುವಾಗಲಾಗಲೀ, ವಾಹನ ಚಲಾಯಿಸುವಾಗಲಾಗಲೀ ಅವರಿಗೆ ಧಾವಂತವಿಲ್ಲ. ಅನಗತ್ಯವಾಗಿ ಹಾರ್ನ್ ಮಾಡುವುದಿಲ್ಲ, ಸ್ಪರ್ಧೆಗೆ ಬಿದ್ದವರಂತೆ ಓವರ್‌ಟೇಕ್ ಮಾಡುವುದಿಲ್ಲ, ಒಂದು ನಿರ್ದಿಷ್ಟ ವೇಗಮಿತಿಯಿಂದಾಚೆ ವಾಹನ ಚಾಲನೆ ಮಾಡುವುದಿಲ್ಲ. ತಾಳ್ಮೆಯೇ ಅಲ್ಲಿನ ಸಂಚಾರ ವ್ಯವಸ್ಥೆಯ ಸ್ಥಾಯೀಭಾವ.

ಹೀಗಾಗಿ ರಸ್ತೆಗಳು ಸೇರುವಲ್ಲಿ ಟ್ರಾಫಿಕ್ ದೀಪಗಳು ಬೇಕೆಂದು ಅವರಿಗೆ ಅನ್ನಿಸಿಯೇ ಇಲ್ಲ.
ಎದುರಿನಿಂದಲೋ, ಪಕ್ಕದಿಂದಲೋ ವಾಹನವೊಂದು ಬಂತೆಂದರೆ ಈ ಕಡೆಯ ವಾಹನ ಸವಾರರು ಆ ವಾಹನ ಮೊದಲು ಹೋಗುವುದಕ್ಕೆ ಅವಕಾಶ ಮಾಡಿಕೊಡುತ್ತಾರೆ. ಅವರ ಮಧ್ಯೆ ತಮ್ಮದೇ ಆದ ಒಂದು ಸಂವಹನ ಇರುತ್ತದೆ. ಇನ್ನೊಬ್ಬರ ಅಗತ್ಯವನ್ನು ಅರ್ಥ ಮಾಡಿಕೊಂಡು ವ್ಯವಹರಿಸುವ ವಿಶೇಷ ಸಂವಹನವದು. ತಾವೇ ಮೊದಲು ಹೋಗಿಬಿಡಬೇಕು ಎಂಬ ಮನಸ್ಥಿತಿಗೂ ಇನ್ನೊಬ್ಬ ಮೊದಲು ಹೋಗಿಬಿಡಲಿ ಎಂಬ ಮನಸ್ಥಿತಿಗೂ ಎಷ್ಟೊಂದು ವ್ಯತ್ಯಾಸ ಅಲ್ಲವೇ?

ಪರಸ್ಪರ ಗೌರವ:

ಪರಸ್ಪರರನ್ನು ಗೌರವಿಸುವ ಗುಣ ಜನರಲ್ಲಿ ಇದ್ದಾಗ ಮಾತ್ರ ಇಂತಹದೊಂದು ಮನಸ್ಥಿತಿ ಮತ್ತು ವರ್ತನೆ ಸಾಧ್ಯವಾಗುತ್ತದೆ. ತಮಗೊಬ್ಬರಿಗೆ ಮಾತ್ರ ತುರ್ತು ಕೆಲಸವಿರುವುದು, ಬೇರೆಯವರ ಅಗತ್ಯಗಳ ಬಗ್ಗೆ ತಾನೇಕೆ ತಲೆಕೆಡಿಸಿಕೊಳ್ಳಲಿ ಎಂಬ ಮನೋಭಾವ ನಮ್ಮ ನಾಗರಿಕ ಪ್ರಜ್ಞೆಯನ್ನೇ ಹಾಳುಮಾಡಿಬಿಡುತ್ತದೆ. ಇದು ಕೇವಲ ರಸ್ತೆಯ ಮೇಲಿನ ವಿಷಯ ಮಾತ್ರವಲ್ಲ, ನಮ್ಮ ದಿನನಿತ್ಯದ ಜೀವನದ ಪ್ರತಿ ಹಂತದಲ್ಲೂ ನಡೆಯುತ್ತದೆ. ಇನ್ನೊಬ್ಬರ ಇಷ್ಟಾನಿಷ್ಟಗಳ ಬಗ್ಗೆ ಯೋಚಿಸಿಕೊಂಡು ತಾವೇಕೆ ಸಮಯ ಕಳೆಯಬೇಕು, ನಮ್ಮನಮ್ಮ ಕೆಲಸ ನೋಡಿಕೊಂಡರಾಯಿತು ಎಂಬುದು ನಮ್ಮ ಸಾಮಾನ್ಯ ಯೋಚನಾವಿಧಾನ. ಇನ್ನೊಬ್ಬರ ತಂಟೆಗೆ ಹೋಗದಿರುವುದು ಸರಿ, ಆದರೆ ಇನ್ನೊಬ್ಬರ ಅವಶ್ಯಕತೆಗಳ ಬಗ್ಗೆ ಗೌರವ ಮತ್ತು ಕಾಳಜಿ ಇಲ್ಲದೆ ಹೋದಾಗ ನಾವು ಕೇವಲ ಯಂತ್ರಗಳಾಗಿಬಿಡುತ್ತೇವೆ.

ಹೇಳಿಕೇಳಿ ಮನುಷ್ಯ ಸಂಘಜೀವಿ, ಸಮಾಜಜೀವಿ. ಭೂಮಿಯ ಮೇಲೆ ನಾಗರಿಕತೆಯ ವಿಕಾಸ ಆರಂಭವಾದಲ್ಲಿಂದಲೂ ಮನುಷ್ಯ ಜತೆಯಾಗಿಯೇ ಬದುಕುವುದನ್ನು ಅಭ್ಯಾಸ ಮಾಡಿಕೊಂಡ. ಜತೆಯಾಗಿಯೇ ವಾಸ, ಜತೆಯಾಗಿಯೇ ಊಟ, ಜತೆಯಾಗಿಯೇ ಓಡಾಟ. ಒಂಟಿಯಾಗಿರುವುದು ಬಲುಕಷ್ಟ. ಹಾಗೆ ನೋಡಿದರೆ ಒಂಟಿಯಾಗಿರುವುದಕ್ಕಿಂತಲೂ ಒಟ್ಟಿಗೆ ಬಾಳುವುದು ಇನ್ನೂ ಕಷ್ಟ. “ಎಷ್ಟು ಕಷ್ಟವೋ ಹೊಂದಿಕೆಯೆAಬುದು ನಾಲ್ಕು ದಿನದ ಈ ಬದುಕಿನಲಿ?” ಎಂದು ಕವಿ ಇದನ್ನೇ ಉದ್ದೇಶಿಸಿ ಕೇಳಿರುವುದು. ಇದೇ ಕವಿ “ಇಲ್ಲಿದೆ ನಂದನ ಇಲ್ಲಿದೆ ಬಂಧನ ಎಲ್ಲಾ ಇವೆ ಈ ನಮ್ಮೊಳಗೆ” ಅಂತಲೂ ಸೂಚನೆ ಕೊಟ್ಟಿದ್ದಾರೆ. ನಮ್ಮನಮ್ಮ ಬದುಕನ್ನು ಸ್ವರ್ಗವಾಗಿಯೋ ನರಕವಾಗಿಯೋ ಮಾಡಿಕೊಳ್ಳುವುದು ನಮ್ಮಲ್ಲೇ ಇದೆ. ಇನ್ನೊಬ್ಬರಿಂದಾಗಿ ನಮ್ಮ ಬದುಕು ಅಸಹನೀಯವಾಯಿತು ಎಂಬ ಭಾವನೆಯೇ ಮೂರ್ಖತನದ್ದು.

ವಿವೇಕವೇ ಬದುಕು:

ಸರಿತಪ್ಪುಗಳ ವಿವೇಚನೆ, ಸಮಾಜದಲ್ಲಿ ಇನ್ನೊಬ್ಬರೊಂದಿಗೆ ಹೇಗೆ ವ್ಯವಹರಿಸಬೇಕು ಎಂಬ ವಿವೇಕ ನಮ್ಮ ಬದುಕನ್ನು ನಿರ್ಧರಿಸುತ್ತದೆ. ಪ್ರತಿದಿನ ಹತ್ತುಹಲವು ಮಂದಿಯೊಂದಿಗೆ ನಾವು ವ್ಯವಹರಿಸುತ್ತಿರುತ್ತೇವೆ. ಅಪ್ಪ-ಅಮ್ಮ, ಕುಟುಂಬದ ಸದಸ್ಯರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು, ಗುರುಗಳು, ವಿದ್ಯಾರ್ಥಿಗಳು, ನೆರೆಹೊರೆಯವರು, ಅಪರಿಚಿತರು... ಇವರೆಲ್ಲರೊಂದಿಗೆ ಒಂದಲ್ಲ ಒಂದು ರೀತಿ ಸಂವಹನ ನಡೆಸುವ ಸಂದರ್ಭ ಇದ್ದೇ ಇರುತ್ತದೆ. ತಾನು, ತನ್ನದು, ತಾನು ಮಾಡಿದ್ದು ಸರಿ, ಉಳಿದವರೆಲ್ಲ ಅವಿವೇಕಿಗಳು ಎಂಬ ಭಾವನೆ ಇದ್ದಾಗ ಸಹಬಾಳ್ವೆ, ಸಾಮರಸ್ಯ ಮರೀಚಿಕೆಯಾಗುತ್ತದೆ.

ಹೆತ್ತವರ ಮಾತನ್ನು ಯಾಕೆ ಕೇಳಬೇಕು, ಗುರುಗಳನ್ನು ಯಾಕೆ ಗೌರವಿಸಬೇಕು, ಸಹಪ್ರಯಾಣಿಕರೊಂದಿಗೆ ಯಾಕೆ ಹೊಂದಾಣಿಕೆ ಮಾಡಿಕೊಳ್ಳಬೇಕು, ರಸ್ತೆಯ ಮೇಲೆ ಯಾಕೆ ಸಂಯಮದಿಂದ ವರ್ತಿಸಬೇಕು, ಸಾಮಾಜಿಕ ಮಾಧ್ಯಮಗಳನ್ನು ಯಾಕೆ ಜವಾಬ್ದಾರಿಯಿಂದ ಬಳಸಬೇಕು, ನನ್ನ ಪರಿಸರವನ್ನು ಯಾಕೆ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು – ಇಂತಹ ಪ್ರಶ್ನೆಗಳನ್ನು ಕೇಳುವವರ ಮನಸ್ಸಿನಲ್ಲಿ “ಇದೆಲ್ಲ ನನ್ನ ಕೆಲಸವಲ್ಲ, ಬೇರೆ ಯಾರಾದರೂ ಮಾಡಲಿ” ಎಂಬ ಉಡಾಫೆಯೊಂದು ಸದಾ ಇರುತ್ತದೆ. ಈ ಉಡಾಫೆಯೇ ಅವರ ಬಾಹ್ಯ ವರ್ತನೆಗಳಿಗೆ ಕಾರಣ. ಇದರಿಂದಾಗಿಯೇ ಅವರು ಹಿರಿಯರ ಸಲಹೆಗಳಿಗೆ ಕಿವಿಗೊಡುವುದಿಲ್ಲ, ಗುರುಗಳನ್ನು ಗೌರವಿಸುವುದಿಲ್ಲ, ಸಹಪ್ರಯಾಣಿಕರೊಂದಿಗೋ ಸಹೋದ್ಯೋಗಿಗಳೊಂದಿಗೋ ಸಂಯಮದಿಂದ ವರ್ತಿಸುವುದಿಲ್ಲ, ಸಾಮಾಜಿಕ ಮಾಧ್ಯಮಗಳನ್ನು ವಿವೇಕದಿಂದ ಬಳಸುವುದಿಲ್ಲ. 

ಇಂಥವರು ಕಾನೂನನ್ನಾಗಲೀ ಸಾಮಾಜಿಕ ಮೌಲ್ಯಗಳನ್ನಾಗಲೀ ಗೌರವಿಸುವುದಿಲ್ಲ. ಸಾರ್ವಜನಿಕ ಸೌಲಭ್ಯಗಳನ್ನು ಜವಾಬ್ದಾರಿಯಿಂದ ಬಳಸಬೇಕು, ಅದು ಎಲ್ಲರಿಗೂ ಸಂಬಂಧಪಟ್ಟದ್ದು ಎಂಬ ತಿಳುವಳಿಕೆ ಇಲ್ಲದವರು ಇವರಲ್ಲ. ಶಿಕ್ಷಿತರೇ ಆಗಿರುತ್ತಾರೆ. ಆದರೆ ಶಿಕ್ಷಿತರಿಗೂ ವಿದ್ಯಾವಂತರಿಗೂ ವ್ಯತ್ಯಾಸ ಇದೆ. ಶಿಕ್ಷಣ ಕೇವಲ ಅಂಕಪಟ್ಟಿಗಳಿಗೆ, ಪ್ರಮಾಣಪತ್ರಗಳಿಗೆ ಸೀಮಿತವಾಗಿದ್ದಾಗ ಆಗುವ ಸಮಸ್ಯೆ ಇದು. ಶಿಕ್ಷಣ ವಿದ್ಯೆ ಆಗಿ ಪರಿವರ್ತನೆ ಆದರೆ ಸಾಮಾಜಿಕ ವಿವೇಕ ತಾನಾಗಿಯೇ ರೂಪುಗೊಳ್ಳುತ್ತಾ ಹೋಗುತ್ತದೆ.

- ಸಿಬಂತಿ ಪದ್ಮನಾಭ ಕೆ. ವಿ.

ವಿದ್ಯಾರ್ಥಿಗಳು, ಯುವಕರು ಓದಲೇಬೇಕಾದ ಪುಸ್ತಕ ʼಸಕ್ಸೆಸ್‌ ಮಂತ್ರʼ

ಇಂಥದ್ದೊಂದು ಪುಸ್ತಕ ಬರೆಯಬೇಕೆನ್ನುವುದು ನನ್ನ ಬಹುದಿನಗಳ ಆಸೆಯಾಗಿತ್ತು.

ಅಪ್ಪ ಮೊಬೈಲ್‌ ಕೊಡಿಸಲಿಲ್ಲ, ಅಮ್ಮ ಗೇಮ್‌ ಆಡಲು ಬಿಡಲಿಲ್ಲ, ಮೇಷ್ಟ್ರು ಬೈದರು, ಪ್ರೀತಿಸಿದವರು ಕೈಕೊಟ್ಟರು ಎಂಬ ಕಾರಣಗಳಿಗೆ ಜೀವ ಕಳೆದುಕೊಳ್ಳುವ ಎಳೆಯ ವಯಸ್ಸಿನ ಹುಡುಗರು; ಸಾಮಾನ್ಯ ಜ್ಞಾನವೇ ಇಲ್ಲದ ತೊಂಬತ್ತೊಂಬತ್ತು ಪರ್ಸೆಂಟೇಜಿನ ಬುದ್ಧಿವಂತರು; ಕಿರಿಯರೊಂದಿಗೆ, ಓರಗೆಯವರೊಂದಿಗೆ, ಹಿರಿಯರೊಂದಿಗೆ ಹೇಗೆ ವ್ಯವಹರಿಸಬೇಕೆಂದೇ ಗೊತ್ತಿಲ್ಲದ rank ಹೋಲ್ಡರುಗಳು; ಇಂಜಿನಿಯರಿಂಗ್‌, ಮೆಡಿಕಲ್‌ ಬಿಟ್ಟರೆ ಬದುಕುವುದಕ್ಕೆ ಬೇರೆ ದಾರಿಗಳೇ ಇಲ್ಲ ಎಂಬ ಮನಸ್ಥಿತಿಗೆ ಬಂದಿರುವ ಸಮಾಜ; ಸಣ್ಣಪುಟ್ಟ ಸೋಲುಗಳನ್ನೂ ನಿಭಾಯಿಸಲಾಗದ ದುರ್ಬಲ ತರುಣರು...
ಇಂತಹ ಸುದ್ದಿಗಳು ಪ್ರತಿದಿನ ನಮ್ಮ ಕಣ್ಣು-ಕಿವಿಗಳಿಗೆ ಬೀಳುತ್ತಿರುತ್ತವೆ. ಆಗೆಲ್ಲ ಮನಸ್ಸು ವಿಹ್ವಲವಾಗುತ್ತದೆ. ಇದಕ್ಕೆಲ್ಲ ಏನು ಕಾರಣ? ಯಾರು ಕಾರಣ? ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯವೇ? ಶಿಕ್ಷಕರ, ಹೆತ್ತವರ ಸೋಲೇ? ಆಧುನಿಕತೆಯ ಪರಿಣಾಮವೇ? ಕುಟುಂಬ ವ್ಯವಸ್ಥೆ ಕುಸಿದಿರುವ ಸೂಚನೆಯೇ? ಯಾವುದೂ ಆಗಿರಬಹುದು; ಎಲ್ಲವೂ ಆಗಿರಬಹುದು.
ಆದರೆ ಇದರ ಬಲಿಪಶುಗಳು ಮಾತ್ರ ಮುಂದೆ ಬಾಳಿ ಬದುಕಬೇಕಾದ ನಮ್ಮ ಮಕ್ಕಳು.
ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ದೊಡ್ಡದೊಂದು ಕೊರತೆಯಿದೆ. ಅದನ್ನು ಹೇಗಾದರೂ ಮಾಡಿ ನಮ್ಮಿಂದಾದ ಮಟ್ಟಿಗೆ ಸರಿಪಡಿಸಬೇಕು. ಮಕ್ಕಳ ಹೃದಯ-ಮನಸ್ಸು-ವ್ಯಕ್ತಿತ್ವ ಸಮರ್ಪಕವಾಗಿ ಬೆಳೆದುಬರಬೇಕು. ಅವರು ಒಳಗಿಂದಲೇ ಗಟ್ಟಿಯಾಗಬೇಕು.
ಹೀಗೆಂದು ಯೋಚಿಸುತ್ತಲೇ ಹುಟ್ಟಿಕೊಂಡ ಬರಹಗಳಿವು. ʼವಿಜಯ ಕರ್ನಾಟಕʼದ ವಿದ್ಯಾರ್ಥಿ ಆವೃತ್ತಿ (ವಿಕ ಮಿನಿ)ಯಲ್ಲಿ ಇದೇ ʼಸಕ್ಸೆಸ್‌ ಮಂತ್ರʼ ಎಂಬ ಶೀರ್ಷಿಕೆಯಲ್ಲಿ ಐವತ್ತು ಕಂತುಗಳಲ್ಲಿ ಪ್ರಕಟವಾದವು. ಕೆಲವನ್ನು ಫೇಸ್ಬುಕ್‌ ಇತ್ಯಾದಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡದ್ದೂ ಇದೆ. (ಬೇರೆ ಕೆಲವು ಲೇಖನಗಳೂ ಇವೆ).

ಆದರೆ ಇವು ಒಟ್ಟಾಗಿ ಒಂದೇ ಕಡೆ ನಮ್ಮ ವಿದ್ಯಾರ್ಥಿಗಳಿಗೆ, ಅವರ ಹೆತ್ತವರಿಗೆ, ಶಿಕ್ಷಕರಿಗೆ ದೊರೆಯಬೇಕು ಎಂಬುದು ನನ್ನ ಬಯಕೆ. ಪ್ರಕಟಿಸುತ್ತೀರಾ ಎಂದು ಅಯೋಧ್ಯಾ ಪ್ರಕಾಶನವನ್ನು ಕೇಳಿಕೊಂಡೆ. ಅವರು ಮರುಮಾತಿಲ್ಲದೆ ಆಯಿತು ಎಂದರು. ಅವರಿಗೆ ಎಷ್ಟು ಕೃತಜ್ಞತೆ ಹೇಳಿದರೂ ಸಾಲದು. ಈಗ ʼಸಕ್ಸೆಸ್‌ ಮಂತ್ರʼ ಪುಸ್ತಕರೂಪದಲ್ಲಿ ನಿಮ್ಮ ಮುಂದಿದೆ. ಪ್ರಾಥಮಿಕ ಶಾಲೆಯಿಂದ ತೊಡಗಿ ಪದವಿ ಹಂತದ ವಿದ್ಯಾರ್ಥಿಗಳವರೆಗೆ ವಿವಿಧ ಸ್ತರಗಳ ವಿದ್ಯಾರ್ಥಿಗಳು ಓದಬೇಕಾದ ಪುಸ್ತಕವಿದು.
ಪುಟ: 180
ಬೆಲೆ: ರೂ. 200
ನಿಮ್ಮ ಪ್ರತಿಯನ್ನು
ಇಲ್ಲಿಂದ ನೇರವಾಗಿ ಪಡೆದುಕೊಳ್ಳಬಹುದು.
ಅಥವಾ-
ನನಗೆ ಒಂದು ವಾಟ್ಸಾಪ್‌ ಮೆಸೇಜ್‌ ಮಾಡಬಹುದು: 9449525854
- ಸಿಬಂತಿ ಪದ್ಮನಾಭ

ಬುಧವಾರ, ಫೆಬ್ರವರಿ 18, 2026

ಮಾಧ್ಯಮ: ಎಐ ಕಾಲದ ನೈತಿಕ ಸವಾಲುಗಳು

(ʻದಿ ಚೆನ್ನುಡಿʼ ವಾರಪತ್ರಿಕೆಯ ಚೊಚ್ಚಲ ಸಂಚಿಕೆಗೆ ಬರೆದ ಮುನ್ನುಡಿ) 

17 ಫೆಬ್ರವರಿ 2026


ಎಪ್ಸ್ಟೀನ್ ಕಡತಗಳ ವಿಚಾರ ಭಾರತವೂ ಸೇರಿದಂತೆ ಜಗತ್ತಿನಾದ್ಯಂತ ಕೋಲಾಹಲ ಎಬ್ಬಿಸಿದ ಬೆನ್ನಲ್ಲೇ ನಮ್ಮ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜೆಫ್ರಿ ಎಪ್ಸ್ಟೀನ್  ಹಾಗೂ ಒಬ್ಬ ಯುವತಿಯೊಂದಿಗೆ ನಿಂತಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಯಿತು. ಮೇಲ್ನೋಟಕ್ಕೆ ಅದೊಂದು ಫೇಕ್ ಫೋಟೋ ಎಂದು ಅರ್ಥೈಸಿಕೊಳ್ಳಬಹುದಾದರೂ ಅನೇಕ ಫ್ಯಾಕ್ಟ್ಚೆಕ್ ಸಂಸ್ಥೆಗಳು ಅದನ್ನು ದುರುದ್ದೇಶಪೂರಿತ ನಕಲಿ ಚಿತ್ರವೆಂದು ದೃಢಪಡಿಸಿದವು. ಇದರ ಬೆನ್ನಲ್ಲೇ ಮೋದಿಯವರಿದ್ದ ಜಾಗದಲ್ಲಿ ರಾಹುಲ್ ಗಾಂಧಿಯವರಿದ್ದ ಇನ್ನೊಂದು ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡತೊಡಗಿತು. ಮೊದಲನೆಯದು ಫೇಕ್ ಎಂದ ಮೇಲೆ ಎರಡನೆಯದು ಫೇಕ್ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಇದು ಏಕಾಯಿತು ಎಂಬುದಕ್ಕೆ ದೊಡ್ಡ ತರ್ಕವೇನೂ ಬೇಕಾಗಿಲ್ಲ. ಇದರ ಹಿಂದಿರುವುದು ನೂರಕ್ಕೆ ನೂರು ರಾಜಕೀಯ ಕೆಸರೆರಚಾಟದ ತಂತ್ರಗಳು. ಇಂಥವುಗಳನ್ನು ಮಾಡುವುದಕ್ಕಾಗಿಯೇ ಸಾಮಾಜಿಕ ಜಾಲತಾಣಗಳ ಹಿಂದೆ ಸಾವಿರಾರು ಮಂದಿ ಮಾರುವೇಷಗಳಲ್ಲಿ ಹಗಲಿರುಳು ದುಡಿಯುತ್ತಿದ್ದಾರೆ. ಎಪ್ಸ್ಟೀನ್ ಹಾಗೂ ಯುವತಿಯ ಜೊತೆ ಮೋದಿಯವರನ್ನು ತೋರಿಸಿ ಒಂದು ವರ್ಗ ವಿಕೃತ ಸಂತೋಷ ಅನುಭವಿಸಿದರೆ, ಎದುರಿನ ಇನ್ನೊಂದು ವರ್ಗ ತಾನೇಕೆ ರಾಹುಲ್ ಗಾಂಧಿಯವರನ್ನು ಆ ಜಾಗದಲ್ಲಿ ತೋರಿಸಬಾರದು ಎಂದು ಭಾವಿಸುತ್ತದೆ. ಮುಯ್ಯಿಗೆ ಮುಯ್ಯಿ ತಂತ್ರ. ಇದರಲ್ಲಿ ಯಾರು ಸರಿ ಯಾರು ತಪ್ಪು ಎಂಬ ವಾದ ಅನಗತ್ಯ. ಎಲ್ಲರದೂ ತಪ್ಪೇ. ಇದೊಂದು ತುದಿಮೊದಲಿಲ್ಲದ ವಿಷವೃತ್ತ ಎಂಬುದು ಮಾತ್ರ ನಿಜ. ಇಂಥವು ಈಗೀಗ ಸಾಮಾಜಿಕ ಜಾಲತಾಣಗಳಲ್ಲಿ ಸರ್ವೇಸಾಮಾನ್ಯವಾಗಿವೆ. ದಿನಕ್ಕೆ ಇಂತಹ ನೂರಾರು ವಿಕೃತ ವಿಚಾರಗಳನ್ನು ಹರಡುವ ಕಾರ್ಖಾನೆಗಳು ಎಗ್ಗಿಲ್ಲದೆ ಕಾರ್ಯನಿರ್ವಹಿಸುತ್ತಿವೆ.


ಅವಿವೇಕಿಗಳ ಕೈಗೆ ಆಯುಧ:

ಕೃತಕ ಬುದ್ಧಿಮತ್ತೆ (ಎಐ)ಯ ಕರಾಳಮುಖ ಹೀಗೆ ಇಷ್ಟಿಷ್ಟೇ ಬೆಳಕಿಗೆ ಬರುತ್ತಿದೆ. ಎಐ ಜಗತ್ತಿಗೆ ವರವೇ ಶಾಪವೇ ಎಂಬ ವಿಚಾರವಾಗಿ ಸಾಕಷ್ಟು ಚರ್ಚೆಗಳು ನಡೆದಿವೆ, ನಡೆಯುತ್ತಲೇ ಇವೆ. ಎಷ್ಟೋ ಮಂದಿ ಅದನ್ನೊಂದು ಶಾಪವೆಂದು ಒಪ್ಪುವುದೇ ಇಲ್ಲ. ಅದೇನಿದ್ದರೂ ಬಳಸುವವರ ಮನಸ್ಸು ಮತ್ತು ಕೈಗಳಲ್ಲಿದೆ ಎಂಬುದು ಅವರ ವಾದ. ಎಐ ಆಯುಧವಿದ್ದ ಹಾಗೆ. ಆಯುಧವೆಂದ ಕೂಡಲೇ ಹಾನಿಯನ್ನೇ ಮಾಡಬೇಕಿಲ್ಲ. ಆತ್ಮರಕ್ಷಣೆಗೂ ಆಯುಧ ಬೇಕು. ತಾನು ದುರ್ಬಲನಲ್ಲ ಎಂದು ತೋರಿಸಿಕೊಳ್ಳುವುದಕ್ಕೂ ಆಯುಧ ಬೇಕು. ಆದರೆ ಯಾರು ಆಯುಧವನ್ನು ಧರಿಸುತ್ತಾನೋ ಅವನಿಗೆ ವಿವೇಕ ಇರಬೇಕು. ಅವಿವೇಕಿಯ ಕೈಗೆ ಆಯುಧ ಕೊಟ್ಟರೆ ಅವಿವೇಕತನದ್ದಲ್ಲದೆ ಬೇರೆ ಯಾವ ಕೆಲಸ ಮಾಡಲು ಸಾಧ್ಯ? ಎಐ ಎಂಬ ಆಯುಧ ಅವಿವೇಕಿಗಳ ಕೈಗೆ ಸಿಕ್ಕರೂ ಆಗುವುದು ಇದೇ.

ಸಾಮಾಜಿಕ ಜಾಲತಾಣಗಳನ್ನು ತೆರೆದರೆ ಕಾಣಸಿಗುವ ಚಿತ್ರಗಳು ಮತ್ತು ವೀಡಿಯೋಗಳಲ್ಲಿ ಅಸಲಿ ಯಾವುದು, ನಕಲಿ ಯಾವುದು ಎಂದು ಪ್ರತ್ಯೇಕಿಸಿ ನೋಡಲಾಗದ ಅಸಹಾಯಕ ಸ್ಥಿತಿಗೆ ಜಗತ್ತು ತಲುಪಿದೆ. ಕೆಲವನ್ನು ಮನರಂಜನೆಯ ಉದ್ದೇಶಕ್ಕಾಗಿ ಬಳಸಲಾಗುತ್ತಿದ್ದರೆ ಹಲವನ್ನು ದುರುದ್ದೇಶಕ್ಕಾಗಿ ಬಳಸಿಕೊಳ್ಳಲಾಗುತ್ತಿದೆ. ಎಲ್ಲಿಂದಲೋ ಬಂದ ಹುಲಿಯೊಂದು ಒಂಟಿ ವ್ಯಕ್ತಿಯನ್ನು ಎತ್ತಿಕೊಂಡು ಕಾಡಿನೊಳಗೆ ಓಡುತ್ತದೆ. ನದಿಯಿಂದ ಜಿಗಿಯುವ ಮೊಸಳೆಯೊಂದು ಯುವತಿಯನ್ನು ಇಡಿಯಾಗಿ ನುಂಗಿಬಿಡುತ್ತದೆ. ದೈತ್ಯ ಹೆಬ್ಬಾವೊಂದು ಮಗುವನ್ನು ಅದರ ಅಮ್ಮನೆದುರೇ ತಿಂದುಹಾಕಿದೆ. ಇವೆಲ್ಲ ಫೇಸ್‌ಬುಕ್, ಇನ್‌ಸ್ಟಾಗ್ರಾಮಿನಂತಹ ಸಾಮಾಜಿಕ ತಾಣಗಳಲ್ಲಿ ಕಂಡುಬರುತ್ತಿರುವ ಎಐ ಆಧಾರಿತ ವೀಡಿಯೋಗಳು. ಎಲ್ಲೋ ಮೂಲೆಯಲ್ಲಿ ಸಣ್ಣ ಅಕ್ಷರಗಳಲ್ಲಿ ‘ಇದು ಎಐ ಪ್ರೇರಿತ ವೀಡಿಯೋವೆಂದೂ, ಯಾರೂ ಸತ್ಯವೆಂದು ತಿಳಿಯಬಾರದೆಂದೂ, ಮನರಂಜನೆಯ ಉದ್ದೇಶಕ್ಕಾಗಿ ಮಾಡಲಾಗಿದೆಯೆಂದೂ’ ನಮೂದಿಸಲ್ಪಟ್ಟಿರುತ್ತದೆ.

ಇಂತಹ ವೀಡಿಯೋಗಳಿಂದ ಜನರ ಮನರಂಜಿಸಿ ಆಗಬೇಕಾದ ಘನಕಾರ್ಯವಾದರೂ ಏನಿದೆ? ಇದನ್ನು ಮನರಂಜನೆ ಎಂದು ತಿಳಿದವರಾದರೂ ಎಂತಹ ಮನಸ್ಥಿತಿಯವರು? ಜನರ ಮನಸ್ಸನ್ನು ವಿಹ್ವಲಗೊಳಿಸಿ, ಮುಗ್ಧರನ್ನು ವಂಚಿಸಿ ದೊರೆಯುವ ಕ್ಲಿಕ್ಸ್, ವ್ಯೂಸ್‌ಗಳಿಂದ ಇವರು ದುಡಿಯುವ ದುಡ್ಡಿಗೆ ಯಾವ ನೈತಿಕತೆ ಇದೆ? ಈ ದುಡ್ಡು ಎಷ್ಟು ಕಾಲ ಉಳಿಯುತ್ತದೆ?

ಎಐ ಬಳಸಿ ಇಂತಹ ವೀಡಿಯೋಗಳನ್ನು ತಯಾರಿಸುವವರಿಗೂ ರಾಜಕೀಯ ಪ್ರೇರಿತವಾಗಿರುವ ಮತ್ತು ಜನರ ಧಾರ್ಮಿಕ ಭಾವನೆಗಳನ್ನು ಕೆದಕುವ ವೀಡಿಯೋಗಳನ್ನು ಸಿದ್ಧಪಡಿಸುವವರಿಗೂ ಮೂಲತಃ ಯಾವ ವ್ಯತ್ಯಾಸವೂ ಇಲ್ಲ. ಇಬ್ಬರೂ ಪರಮಧೂರ್ತರೇ. ಆದರೆ ಎರಡನೆಯ ವರ್ಗದವರು ಸಮಾಜದಲ್ಲಿ ಸೃಷ್ಟಿಮಾಡುವ ಸಮಸ್ಯೆಗಳು ಮಾತ್ರ ಮಾರಣಾಂತಿಕವಾದವು. ಅವರನ್ನು ಯಾವ ಕಟು ಶಬ್ದಗಳಿಂದ ಜರೆದರೂ ಕಡಿಮೆಯೇ. ಎಐ ಬಳಸಿಕೊಂಡು ತಮ್ಮ ರಾಜಕೀಯ ವಿರೋಧಿಗಳನ್ನು ಹಣಿಯುವ, ಜನರ ಧಾರ್ಮಿಕ ನಂಬಿಕೆಗಳಲ್ಲಿ ವಿಷ ಹರಡುವ ಕೆಲಸಗಳಂತೂ ಇತ್ತೀಚಿನ ದಿನಗಳಲ್ಲಿ ಅವ್ಯಾಹತವಾಗಿ ನಡೆಯುತ್ತಿವೆ.

ಮಾಧ್ಯಮಗಳಿಗೆ ಎಐ ಕಾಟ:

ಕೇವಲ ಸಾಮಾಜಿಕ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಷ್ಟೇ ಅಲ್ಲದೆ ಸಾಂಪ್ರದಾಯಿಕ ಮಾಧ್ಯಮಗಳಾದ ಪತ್ರಿಕೆ ಮತ್ತು ಟಿವಿ ವಾಹಿನಿಗಳಿಗೂ ಎಐ ಶಾಪ ಮತ್ತು ತಾಪ ಆವರಿಸಿಕೊಂಡಿದೆ. ಏಕೆಂದರೆ ಸಾಂಪ್ರದಾಯಿಕ ಮಾಧ್ಯಮಗಳಿಗೆ ಇಂದು ಡಿಜಿಟಲ್ ಮಾಧ್ಯಮಗಳೇ ಪ್ರಮುಖ ಸುದ್ದಿಮೂಲಗಳಾಗಿವೆ. ತಲೆಯ ಮೇಲೆ ಎರೆದದ್ದು ಕಾಲಿಗೆ ಇಳಿಯುವುದಕ್ಕೆ ಹೆಚ್ಚು ಸಮಯವೇನೂ ಬೇಕಾಗುವುದಿಲ್ಲವಲ್ಲ! ಸಾಮಾಜಿಕ ಮಾಧ್ಯಮಗಳಲ್ಲಿ ಬಂದದ್ದು ಪತ್ರಿಕೆ ಹಾಗೂ ಟಿವಿ ಚಾನೆಲ್‌ಗಳಿಗೂ ಕಾಳ್ಗಿಚ್ಚಿನಂತೆ ಹರಡುತ್ತದೆ. ಈ ಮಾಧ್ಯಮಗಳಲ್ಲಿ ಅಸಲಿ ಮತ್ತು ನಕಲಿಗಳನ್ನು ಪರಿಶೀಲಿಸುವುದಕ್ಕೊಂದು ಗೇಟ್ ಕೀಪಿಂಗ್ ವ್ಯವಸ್ಥೆ ಇದ್ದರೂ, ಒಂದು ಹಂತದಲ್ಲಿ ವಿಷವಾಯು ಈ ಎಲ್ಲ ತಡೆಗೋಡೆಗಳನ್ನು ದಾಟಿಕೊಂಡು ಹೋಗುತ್ತದೆ. 

ಇಂದು ಲೇಖನವೊಂದನ್ನು ಸಿದ್ಧಪಡಿಸಿಕೊಡಲು ವಿಷಯದ ತಿಳುವಳಿಕೆಯೂ ಬೇಕಿಲ್ಲ, ಭಾಷಾಜ್ಞಾನವೂ ಬೇಕಿಲ್ಲ. ಒಂದೆರಡು ಪದಗಳಲ್ಲಿ ವಿನಂತಿಸಿಕೊಂಡರೆ ಸಾಕು, ಎಐ ಎರಡೇ ಕ್ಷಣಗಳಲ್ಲಿ ಎಷ್ಟು ಬೇಕೋ ಅಷ್ಟು ಪದಗಳಲ್ಲಿ ಲೇಖನ ಸಿದ್ಧಪಡಿಸಿಕೊಡುತ್ತದೆ. ಕಥೆ-ಕವನ ಬೇಕಾದರೂ ಬರೆದುಕೊಡುತ್ತದೆ. ಹೀಗಾಗಿ ಯಾರು ಬೇಕಾದರೂ ಈಗ ದಿನಬೆಳಗಾಗುವುದರೊಳಗೆ ಲೇಖಕ, ಕಥೆಗಾರ, ಕವಿ, ಸಂಶೋಧಕ ಎಲ್ಲ ಆಗಬಹುದು. ತಮಗೆ ಬಂದಿರುವ ಬರಹಗಳಲ್ಲಿ ನೈಜವಾದವು ಎಷ್ಟು, ಕೃತಕ ಬುದ್ಧಿಮತ್ತೆಯವೆಷ್ಟು ಎಂದು ಸಂಪಾದಕರೇ ನಿರ್ಧರಿಸಲಾಗದೆ ಬಸವಳಿಯುವ ಸ್ಥಿತಿ ಇಂದು ನಿರ್ಮಾಣವಾಗಿದೆ. ಇನ್ನು ಅವುಗಳನ್ನು ಓದುವವರ ಗತಿಯೇನು?

ಎಐಯನ್ನು ಹೇಗೆ ಬಳಸಬೇಕು, ಎಷ್ಟು ಬಳಸಬೇಕು ಎಂಬುದರ ಬಗ್ಗೆ ಸಮಾಜಕ್ಕೆ ಸ್ಪಷ್ಟತೆಯಿಲ್ಲ. ಎಲ್ಲರೂ ಬಳಸುತ್ತಾರೆ, ನಾವು ಬಳಸಿದರೆ ತಪ್ಪೇನು? ತಂತ್ರಜ್ಞಾನ ಇರುವುದೇ ಬಳಸುವುದಕ್ಕೆ ಅಲ್ಲವೇ? ಬಳಸಿದರೆ ಏನಾಗುತ್ತದೆ? ಹೀಗೆ ಸಾಗುತ್ತದೆ ಮನುಷ್ಯನ ಆಲೋಚನಾ ಲಹರಿ. ಮಾಧ್ಯಮಗಳಿಗೂ, ಉದ್ಯಮಗಳಿಗೂ, ಜನಸಾಮಾನ್ಯರಿಗೂ, ಪತ್ರಕರ್ತರಿಗೂ ವ್ಯತ್ಯಾಸಗಳು ಉಳಿಯದಿರುವ ಈ ಕಾಲದಲ್ಲಿ ಎಐ ಬಳಕೆಯ ಇತಿಮಿತಿಗಳ ಸ್ಪಷ್ಟತೆ ಮಾಧ್ಯಮ ಜಗತ್ತಿನಲ್ಲಿಯೂ ಇಲ್ಲದಿರುವುದು ಅಚ್ಚರಿಯೇನಲ್ಲ.

ಆಧುನಿಕ ಸಮಾಜದ ಅತಿದೊಡ್ಡ ಬಿಕ್ಕಟ್ಟು ಇದು: ಸರಿ-ತಪ್ಪುಗಳ ವಿವೇಚನೆಯಲ್ಲಿರುವ ಸಮಸ್ಯೆ. ಯಾವುದು ನೈತಿಕ, ಯಾವುದು ಅನೈತಿಕ ಎಂಬುದರ ವಿವೇಚನೆಯಲ್ಲಿರುವ ಸಮಸ್ಯೆ. ಪತ್ರಿಕೋದ್ಯಮದಲ್ಲಿಯೂ ಈ ಬಿಕ್ಕಟ್ಟು ಸಾಕಷ್ಟು ಹಿಂದಿನಿಂದಲೂ ಇದೆ. ಈ ರಂಗವನ್ನು ಉದ್ಯಮ ಎಂದು ಪರಿಗಣಿಸಿದ ಮೇಲೆ ಲಾಭ-ನಷ್ಟಗಳ ಪ್ರಶ್ನೆ ಅಸಂಗತವೇನೂ ಅಲ್ಲ. ಯಾರೂ ಯಾವ ವೃತ್ತಿಯನ್ನೂ ಶುದ್ಧಾಂಗ ಸೇವೆಯನ್ನಾಗಿ ಉಳಿಸಿಕೊಳ್ಳುವುದಕ್ಕೆ ಸಾಧ್ಯವಿಲ್ಲದ ಕಾಲ ಇದಾಗಿರುವಾಗ ಮಾಧ್ಯಮ ಜಗತ್ತೂ ಲೌಕಿಕ ಲಾಭದ ಅಪೇಕ್ಷೆಯಿಲ್ಲದೆ ಮುಂದುವರಿಯುವುದು ಅಸಾಧ್ಯ. ಆದರೆ ಬೇರೆ ಉದ್ಯಮಗಳಿಗೂ ಮಾಧ್ಯಮರಂಗಕ್ಕೂ ಒಂದು ನಿರ್ದಿಷ್ಟ ವ್ಯತ್ಯಾಸ ಇದೆ. ಅದು ‘ಸಾಮಾಜಿಕ ಹೊಣೆಗಾರಿಕೆ’ಯದ್ದು. ಏನೇ ಲಾಭ-ನಷ್ಟದ ಲೆಕ್ಕಾಚಾರವಿದ್ದರೂ ಸಾಮಾಜಿಕ ಹೊಣೆಗಾರಿಕೆಯಿಲ್ಲದೆ ಮಾಧ್ಯಮದ ವಿಚಾರವನ್ನು ಮಾತಾಡುವುದಕ್ಕೆ ಬರುವುದಿಲ್ಲ. ಮಾಧ್ಯಮಗಳನ್ನು ಸಮಾಜ ವಿಶಿಷ್ಟವಾಗಿ ನೋಡುವುದಕ್ಕೂ ಇದೇ ಕಾರಣ. ಮಾಧ್ಯಮಗಳು ಯಾವಾಗ ಸಾಮಾಜಿಕ ಜವಾಬ್ದಾರಿಯನ್ನು ಸಂಪೂರ್ಣವಾಗಿ ಮರೆಯುತ್ತವೋ, ಆಗ ಅವುಗಳಿಗೂ ಬೇರೆ ಉದ್ಯಮಗಳಿಗೂ ಯಾವ ವ್ಯತ್ಯಾಸವೂ ಉಳಿಯುವುದಿಲ್ಲ. ಎಐ ಬಳಕೆಯ ನೈತಿಕ ಹೊಣೆಗಾರಿಕೆಯೂ ಈ ಸಾಮಾಜಿಕ ಜವಾಬ್ದಾರಿಯ ಒಂದು ಭಾಗವೆಂದು ನಾವು ಅರ್ಥ ಮಾಡಿಕೊಳ್ಳಬೇಕು.

‘ಚೆನ್ನುಡಿ’ ಚಿರಾಯುವಾಗಲಿ:

ಪತ್ರಿಕೆಯಿಂದ ತೊಡಗಿ ಡಿಜಿಟಲ್ ಮಾಧ್ಯಮದವರೆಗೆ ಯಾವ ಹೊಸ ಉಪಕ್ರಮವನ್ನು ಆರಂಭಿಸುವುದಕ್ಕೂ ಈ ಕಾಲದಲ್ಲಿ ಎಂಟೆದೆ ಇರಬೇಕು. ಮಾಧ್ಯಮವೊಂದನ್ನು ನಡೆಸಿಕೊಂಡು ಹೋಗುವುದು ಯಾವ ಕಾಲದಲ್ಲೂ ಸುಲಭದ ವಿಚಾರವಲ್ಲ. ಅದರಲ್ಲೂ ಲಕ್ಷಾಂತರ ಸಂಖ್ಯೆಯ ಮಾಧ್ಯಮಗಳು ಇರುವ ಈ ಕಾಲದಲ್ಲಿ ವಿದ್ಯಾರ್ಥಿಮಿತ್ರರಾದ ಶ್ರೀ ಚನ್ನಬಸವ ಮತ್ತು ಶ್ರೀ ಗಿರೀಶ್ ‘ದಿ ಚೆನ್ನುಡಿ’ ಎಂಬ ಹೊಸದೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ತಮ್ಮ ಮುಂದಿರುವ ಎಲ್ಲ ಸವಾಲುಗಳನ್ನು ಅರಿತುಕೊಂಡೇ ಅವರು ಈ ಸಾಹಸದಲ್ಲಿ ತೊಡಗಿದ್ದಾರೆ ಎಂದು ನಾನು ಭಾವಿಸುತ್ತೇನೆ. ಹಾಗೆಂದು ತಾವೇನೋ ವಿಶಿಷ್ಟವಾದುದನ್ನು ಮಾಡುತ್ತೇವೆ ಎಂದು ವಿದ್ಯಾರ್ಥಿಗಳಾಗಿದ್ದವರು ಹೊರಟಾಗ ಅವರ ಅಧ್ಯಾಪಕನಾಗಿ ಅವರ ಉತ್ಸಾಹವನ್ನು ತಗ್ಗಿಸುವ, ಕುಗ್ಗಿಸುವ ಮಾತುಗಳನ್ನಾಡಲಾರೆ. ಆದರೆ ಎಚ್ಚರಿಕೆಯ ಮಾತನ್ನಾಡುವುದು ನನ್ನ ಕರ್ತವ್ಯ. ಅವರು ಕೇವಲ ವಾಣಿಜ್ಯಕ ಉದ್ದೇಶವನ್ನಷ್ಟೇ ಇಟ್ಟುಕೊಳ್ಳದಿರಲಿ. ಸಾಮಾಜಿಕ ಹೊಣೆಗಾರಿಕೆ ಪತ್ರಿಕೆಯ ಸ್ಥಾಯೀಗುಣವಾಗಿರಲಿ. ಕೃತಕ ಬುದ್ಧಿಮತ್ತೆ ಒಡ್ಡಿರುವ ನೈತಿಕ ಸವಾಲುಗಳನ್ನು ಅವರು ಸದಾ ನೆನಪಿನಲ್ಲಿ ಇಟ್ಟುಕೊಳ್ಳಲಿ. ವಿಶ್ವಾಸಾರ್ಹತೆಯೇ ಪತ್ರಿಕೋದ್ಯಮದ ಬೆನ್ನೆಲುಬು ಮತ್ತು ಅದರ ಅಂತಿಮ ಗುರಿ. ವಿಶ್ವಾಸಾರ್ಹತೆ ಕಳೆದುಹೋದ ದಿನ ಮಾಧ್ಯಮ ಮತ್ತು ಅದರ ಸಂಪಾದಕರು ಸತ್ತುಹೋದಂತೆ. ‘ದಿ ಚೆನ್ನುಡಿ’ ಚಿರಾಯುವಾಗಲಿ.

- ಡಾ. ಸಿಬಂತಿ ಪದ್ಮನಾಭ ಕೆ.ವಿ.