ಶನಿವಾರ, ಏಪ್ರಿಲ್ 24, 2021

ಡಾ. ಬಿ. ಆರ್. ಅಂಬೇಡ್ಕರ್ ಅವರ ಶೈಕ್ಷಣಿಕ ಚಿಂತನೆಗಳು

'ವಿದ್ಯಾರ್ಥಿಪಥ'ದ ಏಪ್ರಿಲ್ 2021ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಶಿಕ್ಷಣ ಪ್ರತಿಯೊಬ್ಬನ ಜನ್ಮಸಿದ್ಧ ಹಕ್ಕು ಮಾತ್ರವಲ್ಲ, ಅದು ಸಾಮಾಜಿಕ ಬದಲಾವಣೆಯ ಅಸ್ತ್ರ ಕೂಡಾ- ಹೀಗೆಂದು ಭಾರತದ
ಇತಿಹಾಸ ಕಂಡ ಬಹುದೊಡ್ಡ ದಾರ್ಶನಿಕ ಡಾ. ಬಿ. ಆರ್. ಅಂಬೇಡ್ಕರ್ ತಮ್ಮ ಜೀವನ ಪರ್ಯಂತ ನಂಬಿದ್ದರು. ‘ಶಿಕ್ಷಿತರಾಗಿರಿ! ಸಂಘಟಿತರಾಗಿರಿ! ಪ್ರತಿಭಟಿಸಿ!’ ಎಂಬ ಅವರ ಬಹುಪ್ರಸಿದ್ಧ ಘೋಷಣೆ ಶಿಕ್ಷಣವೇ ಸಮಾಜದ ಎಲ್ಲ ಕಾಯಿಲೆಗಳಿಗೆ ಶ್ರೇಷ್ಠ ಔಷಧಿ ಎಂಬುದನ್ನು ಸ್ಪಷ್ಟವಾಗಿ ಸಂಕೇತಿಸುತ್ತದೆ. ಶಿಕ್ಷಣದ ಹೊರತಾಗಿ ಇನ್ನೇನನ್ನು ನೀಡುವುದೂ ಭಾರತದ ದಮನಿತ ವರ್ಗಗಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಲ್ಲ ಎಂಬುದು ಅವರ ದೃಢ ನಿಲುವಾಗಿತ್ತು. ಬಾಲ್ಯದಿಂದಲೂ ಶೋಷಣೆ, ನಿರ್ಲಕ್ಷ್ಯ, ಅವಮಾನಗಳಿಗೆ ಒಳಗಾದ ದಲಿತ ಬಾಲಕನೊಬ್ಬ ದೇಶಕಂಡ ಅಪರೂಪದ ವಿದ್ವಾಂಸನಾಗಿ, ಸಂವಿಧಾನ ಶಿಲ್ಪಿಯಾಗಿ, ಮೂಕ ವರ್ಗಗಳ ಧ್ವನಿಯಾಗಿ ಬೆಳೆದುದರ ಹಿಂದೆ ಇದ್ದುದು ಇದೇ ಶಿಕ್ಷಣವೆಂಬ ಮಹಾ ಜೀವಸತ್ವ.

ಅಂಬೇಡ್ಕರ್ ಅವರ ಶೈಕ್ಷಣಿಕ ಚಿಂತನೆಗಳು ಅವರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಚಿಂತನೆಗಳಿಗಿಂತ ಭಿನ್ನವಾಗಿರಲಿಲ್ಲ. ಎಲ್ಲ ಕ್ಷೇತ್ರಗಳ ಕುರಿತಾದ ಅವರ ಚಿಂತನೆಗಳ ಅಂತಸ್ರೋತದಲ್ಲಿ ಒಂದು ಏಕಸೂತ್ರ ಇತ್ತು. ಅವರು ಕೇವಲ ಭಾಷಣಗಳನ್ನು ಮಾಡುವ ಸಿದ್ಧಾಂತಿಯಾಗಿರಲಿಲ್ಲ ಎಂಬುದು ಇಲ್ಲಿ ಬಹುಮುಖ್ಯ ಅಂಶ. ಅವರು ಬರೆದ, ಮಾತಾಡಿದ ಪ್ರತಿಯೊಂದು ವಿಷಯವೂ ಪ್ರಾಯೋಗಿಕವಾಗಿತ್ತು. ಬಹುಕಾಲ ಅಸಡ್ಡೆಗೆ ಒಳಗಾಗಿದ್ದ, ಸಮಾಜದ ಮುಖ್ಯವಾಹಿನಿಯ ಸಮೀಪವೂ ಸುಳಿಯಲಾಗದ ಸಮುದಾಯದ ಪ್ರತಿನಿಧಿಯೊಬ್ಬ ಒಂದು ಶತಮಾನದ ಹಿಂದೆಯೇ ಅಮೇರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ, ಇಂಗ್ಲೆಂಡಿನ ಲಂಡನ್ ಸ್ಕೂಲ್ ಅಫ್ ಇಕನಾಮಿಕ್ಸ್ ನಂತಹ ಶ್ರೇಷ್ಠ ಸಂಸ್ಥೆಗಳಿಂದ ಡಾಕ್ಟರೇಟ್ ಪದವಿ ಪಡೆಯುವಷ್ಟು ಎತ್ತರಕ್ಕೆ ಬೆಳೆಯುತ್ತಾರೆಂದರೆ ಶಿಕ್ಷಣ ಅವರಲ್ಲಿ ತುಂಬಿದ ಶಕ್ತಿ ಎಂತಹದೆಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಅದೇ ಕಾರಣಕ್ಕೆ ಅವರ ಶೈಕ್ಷಣಿಕ ಚಿಂತನೆಗಳೆಲ್ಲವೂ ಅನುಭವಜನ್ಯವಾದದ್ದು. ಅವುಗಳಲ್ಲಿ ಕೆಲವು ಪ್ರಮುಖ ಚಿಂತನೆಗಳನ್ನು ನೋಡುತ್ತಾ ಹೋಗೋಣ.

ಸಾಮಾಜಿಕ ವಿಮೋಚನೆಯ ಅಸ್ತ್ರ:

ಯಾವುದೇ ಶಿಕ್ಷಣದ ಒಟ್ಟಾರೆ ಉದ್ದೇಶ ಸಾಮಾಜಿಕ ವಿಮೋಚನೆ ಆಗಿರಬೇಕು ಎಂಬುದು ಅಂಬೇಡ್ಕರ್ ಅವರ ದೃಷ್ಟಿಕೋನವಾಗಿತ್ತು. ವ್ಯಕ್ತಿಯನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮೇಲೆತ್ತುವುದೇ ಶಿಕ್ಷಣದ ಧ್ಯೇಯವಾಗಿರಬೇಕು; ಜಾತೀಯತೆ, ಅಸ್ಪೃಶ್ಯತೆ, ಸಾಮಾಜಿಕ ಭೇದಭಾವ, ಅಸಮಾನತೆ ಹಾಗೂ ಮಹಿಳೆಯರ ಶೋಷಣೆಯನ್ನು ಇಲ್ಲವಾಗಿಸುವುದಕ್ಕೆ ಶಿಕ್ಷಣ ಅನಿವಾರ್ಯ ಎಂದು ಅವರು ನಂಬಿದ್ದರು. ಎಲ್ಲ ವರ್ಗಗಳಿಗೆ ಸೇರಿದ ಜನರ ಯೋಚನೆಯ ಧಾಟಿಯನ್ನು ಬದಲಾಯಿಸುವುದಕ್ಕೆ, ಸಮಾಜದಲ್ಲಿ ಸಮಾನತೆ, ಭ್ರಾತೃತ್ವ, ಸಹಬಾಳ್ವೆ, ಪರಸ್ಪರ ಸ್ವೀಕಾರ ಮನೋಭಾವವನ್ನು ಬೆಳೆಸುವುದಕ್ಕೆ ಶಿಕ್ಷಣವೊಂದರಿಂದ ಮಾತ್ರ ಸಾಧ್ಯ ಎಂದು ಅವರು ಪ್ರತಿಪಾದಿಸುತ್ತಲೇ ಇದ್ದರು.

ಶಿಕ್ಷಣದ ಸಾರ್ವತ್ರೀಕರಣ:

ಶಿಕ್ಷಣ ಎಲ್ಲರ ಕೈಗೆಟಕುವಂತಿರಬೇಕು, ಆ ಮೂಲಕ ಅದರ ಸಾರ್ವತ್ರೀಕರಣ ಆಗಬೇಕು ಎಂಬುದು ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಅಮೇರಿಕದ ಶೈಕ್ಷಣಿಕ ಸುಧಾರಕ, ಮನಃಶಾಸ್ತ್ರಜ್ಞ ಜಾನ್ ಡ್ಯೂಯಿ ಅವರಿಂದ ಬಹುವಾಗಿ ಪ್ರಭಾವಿತರಾಗಿದ್ದ ಅಂಬೇಡ್ಕರ್, ಅವರು ಹೇಳಿದ್ದ ‘ಶಿಕ್ಷಣದ ಪ್ರಜಾಪ್ರಭುತ್ವೀಕರಣ’ ಪರಿಕಲ್ಪನೆಯ ಪ್ರಬಲ ಪ್ರತಿಪಾದಕರಾಗಿದ್ದರು. ಸಾಮಾಜಿಕ ಅಸಮಾನತೆಯ ಕಾರಣದಿಂದಾಗಿ ಭಾರತದ ದೊಡ್ಡಸಂಖ್ಯೆಯ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದರು; ಜಾತಿ-ವರ್ಗ-ಹಿನ್ನೆಲೆಯ ಭೇದವಿಲ್ಲದೆ ಇವರೆಲ್ಲರಿಗೆ ಶಿಕ್ಷಣದ ಬೆಳಕು ಲಭಿಸುವಂತಾಗಬೇಕೆಂಬುದು ಅವರ ಒತ್ತಾಯವಾಗಿತ್ತು. ಒಂದು ಪ್ರಜಾಪ್ರಭುತ್ವ ದೇಶ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ನೀಡಬೇಕು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಧಿಕಾರದ ಹಂಚಿಕೆಯಾಗುವುದಕ್ಕಿಂತ ಮೊದಲು ಶಿಕ್ಷಣದ ಅಧಿಕಾರದ ಸಮಾನ ವಿತರಣೆ ಆಗಬೇಕು ಎಂದು ಅವರು ಬಲವಾಗಿ ನಂಬಿದ್ದರು.

ಗಿಡ ನೆಟ್ಟರೆ ಸಾಲದು:

ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ವಿದ್ಯಾರ್ಥಿಗಳ ಬಗ್ಗೆ ಶತಮಾನದ ಹಿಂದೆಯೇ ಅಂಬೇಡ್ಕರ್ ಆತಂಕ ವ್ಯಕ್ತಪಡಿಸಿದ್ದರು. ಮಕ್ಕಳನ್ನು ಶಾಲೆಗೆ ಸೇರಿಸುವುದಷ್ಟೇ ನಮ್ಮ ಕರ್ತವ್ಯ ಅಲ್ಲ, ಅವರು ಶಾಲೆಯಲ್ಲಿ ಉಳಿದು ಶಿಕ್ಷಣ ಪೂರೈಸುವಂತೆ ಮಾಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ‘ಗಿಡ ನೆಟ್ಟರಾಯಿತೇ? ನೀರು ಗೊಬ್ಬರ ಹಾಕಿ ಅದನ್ನು ಬದುಕಿಸಬೇಕು, ಪೋಷಿಸಬೇಕು’ ಎಂದು ಬೊಟ್ಟುಮಾಡುತ್ತಿದ್ದ ಅವರು ಪ್ರಾಥಮಿಕ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಹಣ ವಿನಿಯೋಗಿಸಬೇಕೆಂದು ಪ್ರತಿಪಾದಿಸಿದ್ದರು. ‘ನಾವು ಸಂಗ್ರಹಿಸುವ ತೆರಿಗೆಗೂ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವ ಮೊತ್ತಕ್ಕೂ ಏನೇನೂ ತಾಳೆಯಾಗುವುದಿಲ್ಲ. ಇದು ಜನಸಾಮಾನ್ಯರಿಗೆ ಮಾಡುವ ಅನ್ಯಾಯ’ ಎಂದು ಅವರು 1927ರಲ್ಲಿ ಬಾಂಬೆ ಶಾಸನ ಸಭೆಯಲ್ಲಿ ಮಾತನಾಡುತ್ತಾ ಎಚ್ಚರಿಸಿದ್ದರು.

ಮಹಿಳೆಯರ ಶಿಕ್ಷಣ:

‘ಒಂದು ಸಮುದಾಯದ ಪ್ರಗತಿಯನ್ನು ನಾನು ಆ ಸಮುದಾಯದ ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ’ – ಇದು ೧೯೪೨ರಲ್ಲಿ ನಾಗಪುರದಲ್ಲಿ ಮಾಡಿದ ಭಾಷಣವೊಂದರಲ್ಲಿ ಅಂಬೇಡ್ಕರ್ ಅವರಾಡಿದ ಪ್ರಸಿದ್ಧ ಮಾತು. ಅವರು ಮಹಿಳೆಯರ ಶಿಕ್ಷಣಕ್ಕೆ ಅಪಾರ ಒತ್ತು ನೀಡಿದರು. ದೇಶದ ಅರ್ಧಭಾಗ ಮಹಿಳೆಯರಿದ್ದಾರೆ ಅಂದ ಮೇಲೆ ಅವರನ್ನು ಅಶಿಕ್ಷಿತರನ್ನಾಗಿ ಉಳಿಸಿದರೆ ಅಂತಹ ದೇಶ ಅಭಿವೃದ್ಧಿ ಹೊಂದುವುದು ಹೇಗೆ ಸಾಧ್ಯ ಎಂಬ ಅವರ ಪ್ರಶ್ನೆ ಸಮಂಜಸವಾಗಿಯೇ ಇತ್ತು.

ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯ ಪಾತ್ರ ಪ್ರಧಾನವಾದದ್ದು. ಏಕೆಂದರೆ ಆಕೆ ಮೊದಲ ಗುರು. ಒಬ್ಬ ವ್ಯಕ್ತಿಯ ಮೊದಲ ದಿನದಿಂದಲೇ ಆತನ ಜತೆಗಿರುವವಳು ತಾಯಿ. ಮಗುವಿನಲ್ಲಿ ಮೌಲ್ಯಗಳನ್ನು ತುಂಬುವಲ್ಲಿ ಆಕೆಗಿರುವಷ್ಟು ಅವಕಾಶ ಇನ್ಯಾರಿಗೂ ಇಲ್ಲ. ಆದ್ದರಿಂದ ಅವಳ ಶಿಕ್ಷಣಕ್ಕೆ ಮೊದಲ ಆದ್ಯತೆ ದೊರೆಯಬೇಕು ಎಂಬುದನ್ನು ಅಂಬೇಡ್ಕರ್ ಪದೇಪದೇ ಹೇಳುತ್ತಿದ್ದರು.

ಚಾರಿತ್ರ್ಯ ನಿರ್ಮಾಣ:

ಶಿಕ್ಷಣದ ಮೂಲಕ ಚಾರಿತ್ರ್ಯನಿರ್ಮಾಣ ಆಗಬೇಕು ಎಂದು ನಂಬಿದ್ದವರಲ್ಲಿ ಅಂಬೇಡ್ಕರ್ ಪ್ರಮುಖರು. ನೈತಿಕ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡುವುದರಿಂದ ಈ ಉದ್ದೇಶವನ್ನು ಸಾಧಿಸಬಹುದೆಂದು ಅವರು ನಂಬಿದ್ದರು. “ಶಿಕ್ಷಣದ ಮೂಲಕ ಜನರ ಚಾರಿತ್ರ್ಯ ನಿರ್ಮಾಣ ಆಗದಿದ್ದರೆ ಅಂಥವರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಚಾರಿತ್ರ್ಯ ಹಾಗೂ ನಮ್ರತೆಯಿಲ್ಲದ ಶಿಕ್ಷಿತ ವ್ಯಕ್ತಿ ಪ್ರಾಣಿಗಿಂತಲೂ ಹೆಚ್ಚು ಅಪಾಯಕಾರಿ. ಆತನ ಮನಸ್ಥಿತಿ ಜನಸಾಮಾನ್ಯರ ಏಳ್ಗೆಗೆ ವಿರುದ್ಧವಾಗಿದ್ದರೆ ಆತ ಸಮಾಜಕ್ಕೊಂದು ಶಾಪ. ಚಾರಿತ್ರ್ಯವು ಶಿಕ್ಷಣಕ್ಕಿಂತಲೂ ಮುಖ್ಯವಾದದ್ದು”- ಇದು 1938ರಲ್ಲಿ ನಡೆದ ಮುಂಬೈ ಪ್ರಾಂತ ಶೋಷಿತ ವರ್ಗಗಳ ಯುವಸಮ್ಮೇಳನದಲ್ಲಿ ಅಂಬೇಡ್ಕರ್ ಅವರಾಡಿದ ಮಾತು.

ಶಿಕ್ಷಣದಲ್ಲಿ ಧರ್ಮ ಮತ್ತು ಸಂಸ್ಕಾರ:

ಡಾ. ಅಂಬೇಡ್ಕರ್ ಅವರು ಧರ್ಮದ ಹೆಸರಿನಲ್ಲಿ ನಡೆಯುವ ಸಾಮಾಜಿಕ ಅಸಮಾನತೆ ಹಾಗೂ ಕಂದಾಚಾರಗಳಿಗೆ ವಿರುದ್ಧವಾಗಿದ್ದರು. ಆದರೆ ಕೆಲವು ವಿಚಾರಗಳಲ್ಲಿ ಅವರಿಗೆ ಸಹಮತ ಇತ್ತು. ಧರ್ಮ ಎಂಬುದನ್ನು ಸನ್ನಡತೆ ಮತ್ತು ಲೋಕಕಲ್ಯಾಣ ಎಂದು ಭಾವಿಸುವುದಾದರೆ ಅಂತಹ ಧರ್ಮದಲ್ಲಿ ಅವರಿಗೆ ನಂಬಿಕೆ ಇತ್ತು. “ನನ್ನಲ್ಲಿರುವ ಉತ್ತಮ ಗುಣಗಳಿದ್ದರೆ ಅಥವಾ ಸಮಾಜಕ್ಕೆ ನನ್ನ ವಿದ್ಯೆಯಿಂದ ಏನಾದರೂ ಅನುಕೂಲವಾಗಿದ್ದರೆ ಅದಕ್ಕೆ ನನ್ನಲ್ಲಿರುವ ಧಾರ್ಮಿಕ ಭಾವನೆಗಳು ಕಾರಣ. ನಮಗೆ ಧರ್ಮ ಬೇಕು. ಆದರೆ ಧರ್ಮದ ಹೆಸರಿನ ಬೂಟಾಟಿಕೆ ಬೇಡ” ಎಂಬುದು ಅವರ ದೃಷ್ಟಿಯಾಗಿತ್ತು.

ವಾಣಿಜ್ಯೀಕರಣದ ಆತಂಕ:

ಶಿಕ್ಷಣದ ವಾಣಿಜ್ಯೀಕರಣದ ಪ್ರಬಲ ವಿರೋಧಿಯಾಗಿದ್ದರು ಅಂಬೇಡ್ಕರ್. ಶಿಕ್ಷಣ ಎಲ್ಲರ ಕೈಗೂ ಎಟುಕುವಂತೆ ಇರಬೇಕು. ಉನ್ನತ ಶಿಕ್ಷಣವಂತೂ ಕಡಿಮೆ ವೆಚ್ಚದಲ್ಲಿ ದೊರೆಯುವಂತಾಗಬೇಕು. ಶಿಕ್ಷಣದ ವಿಷಯದಲ್ಲಿ ಸಮಾಜದ ವಿವಿಧ ವರ್ಗಗಳ ನಡುವೆ ಬಹುದೊಡ್ಡ ಕಂದಕ ಇದೆ. ಇದು ನಿವಾರಣೆಯಾಗದೆ ಶೋಷಿತ ವರ್ಗಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದರು.

ಉದ್ಯೋಗ ಮತ್ತು ಕೌಶಲ:

ಔದ್ಯೋಗಿಕ ಶಿಕ್ಷಣದ ಕುರಿತು ಅಂಬೇಡ್ಕರ್ ಅವರಿಗೆ ಅಪಾರ ಒಲವಿತ್ತು. ವ್ಯಕ್ತಿಯೊಬ್ಬ ಉದ್ಯೋಗ ಪಡೆದು ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಳ್ಳುವಲ್ಲಿ, ಸ್ವಾವಲಂಬಿಯನ್ನಾಗಿಸುವಲ್ಲಿ ಶಿಕ್ಷಣ ಸಹಕಾರಿಯಾಗಬೇಕು ಎಂದು ಅವರು ಭಾವಿಸಿದ್ದರು. ಶಿಕ್ಷಣ ಪರಿಪೂರ್ಣವಾಗಬೇಕಾದರೆ ವ್ಯಕ್ತಿಯಲ್ಲಿ ಒಂದಷ್ಟು ಕೌಶಲಗಳು ಬೆಳೆಯಬೇಕು. ಆ ಮೂಲಕ ಉದ್ಯೋಗ ದೊರೆಯಬೇಕು ಎಂದು ನಂಬಿದ್ದ ಅಂಬೇಡ್ಕರ್ ಹಿಂದುಳಿದ ಮತ್ತು ಶೋಷಿತ ವರ್ಗಗಳ ಪ್ರಗತಿಯಾಗಬೇಕೆಂದರೆ ಅವರಿಗೆ ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್ ಹಾಗೂ ವಿಜ್ಞಾನದ ಶಿಕ್ಷಣ ಲಭ್ಯವಾಗಬೇಕು ಎಂದು ಪ್ರತಿಪಾದಿಸಿದ್ದರು. 

ಸರ್ಕಾರದ ಸಹಾಯವಿಲ್ಲದೆ ದಲಿತ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದು ಅಥವಾ ವಿದೇಶದ ಶ್ರೇಷ್ಠ ಸಂಸ್ಥೆಗಳಲ್ಲಿ ವ್ಯಾಸಂಗ ನಡೆಸುವುದು ಸಾಧ್ಯವಿಲ್ಲ. ಇದಕ್ಕೆ ಅನುಕೂಲವಾಗುವಷ್ಟು ವಿದ್ಯಾರ್ಥಿವೇತನದ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ. ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಮಾಡಿಕೊಡಲು ಕನಿಷ್ಠ ಶೇ.10 ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು.

ವಿಶ್ವವಿದ್ಯಾನಿಲಯಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು. ದಾಖಲಾತಿ, ಬೋಧನೆ, ಪರೀಕ್ಷೆ ಹಾಗೂ ಸಿಬ್ಬಂದಿ ನೇಮಕಾತಿ ವಿಚಾರಗಳಲ್ಲಿ ವಿಶ್ವವಿದ್ಯಾನಿಲಯಗಳಿಗೆ ಪೂರ್ತಿ ಸ್ವಾಯತ್ತತೆ ನೀಡಬೇಕೆಂಬುದು ಅವರ ನಿಲುವಾಗಿತ್ತು.

ಭಾಷೆ ಮತ್ತು ಪಠ್ಯಕ್ರಮ:

ಮಾತೃಭಾಷೆಯ ಶಿಕ್ಷಣದ ಕಡೆ ಅಂಬೇಡ್ಕರ್ ಅವರಿಗೆ ಒಲವಿತ್ತು. ಆದರೆ ವಿದ್ಯಾರ್ಥಿಗಳು ಕಡೇ ಪಕ್ಷ ಒಂದು ವಿದೇಶೀ ಭಾಷೆಯನ್ನಾದರೂ ಕಲಿಯಬೇಕು ಎಂಬುದು ಅವರ ನಿಲುವಾಗಿತ್ತು. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ವಿವಿಧ ಬೆಳವಣಿಗೆಗಳ ಬಗ್ಗೆ ಸಮರ್ಪಕ ಜ್ಞಾನ ಹೊಂದಿ ಅವುಗಳಿಗೆ ಸ್ಪಂದಿಸಬೇಕಾದರೆ ಅಂತರರಾಷ್ಟ್ರೀಯ ಭಾಷೆಯೊಂದರ ತಿಳುವಳಿಕೆ ಅನಿವಾರ್ಯ ಎಂದು ಅವರು ವಾದಿಸಿದ್ದರು.

ಪಠ್ಯಕ್ರಮವನ್ನು ಬಾಹ್ಯ ಸಂಸ್ಥೆಯೊಂದು ಹೇರುವುದಲ್ಲ, ಪಾಠ ಮಾಡುವ ಶಿಕ್ಷಕರೇ ಅದನ್ನು ರೂಪಿಸಬೇಕು ಎಂದು ಅಂಬೇಡ್ಕರ್ ನಂಬಿದ್ದರು. ವಿಷಯದ ಸ್ವರೂಪ ಹಾಗೂ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮ ರೂಪುಗೊಳ್ಳಬೇಕು. ಈ ವಿಷಯದಲ್ಲಿ ಸಂಪೂರ್ಣ ಪ್ರಜಾತಾಂತ್ರಿಕ ವ್ಯವಸ್ಥೆ ಇರಬೇಕು.  ಪಠ್ಯಕ್ರಮ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕವೂ ಪ್ರಗತಿಪರವೂ ಆಗಿರಬೇಕು ಎಂಬುದು ಅವರ ನಿಲುವಾಗಿತ್ತು.

ಶಿಕ್ಷಕರ ಪಾತ್ರ:

ಅಂಬೇಡ್ಕರ್ ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಶಿಕ್ಷಕನಾದವ ಸಾಕಷ್ಟು ಜ್ಞಾನವಂತ ಹಾಗೂ ಅನುಭವಸ್ಥನಾಗಿರಬೇಕು; ಸಮಾಜದ ಎಲ್ಲ ವರ್ಗಗಳ ಕಡೆಗೂ ಧನಾತ್ಮಕ ಮನೋಭಾವ ಹಾಗೂ ಸಮತಾವಾದದ ದೃಷ್ಟಿಕೋನ ಹೊಂದಿದವನಾಗಿರಬೇಕು ಎಂದು ನಂಬಿದ್ದ ಅವರು ಶಾಲಾ ಕಾಲೇಜುಗಳಿಗೆ ಅಧ್ಯಾಪಕರನ್ನು ನೇಮಿಸುವಾಗ ಅವರ ಅರ್ಹತೆ, ಸಾಮರ್ಥ್ಯಗಳ ಸಂಪೂರ್ಣ ಪರಿಶೀಲನೆ ನಡೆಸುವುದು ಅವಶ್ಯಕ ಎಂದು ಪ್ರತಿಪಾದಿಸಿದ್ದರು.

ಶಿಕ್ಷಕ ಒಳ್ಳೆಯ ಓದುಗ, ಉತ್ತಮ ಸಂವಹನಕಾರ ಹಾಗೂ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಸರಿಯಾಗಿ ಅರಿತವನಾಗಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಸ್ನೇಹಿತ ಹಾಗೂ ಪಥದರ್ಶಕ ಆಗಿರಬೇಕು. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಒಲವು ಮೂಡಿಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಅವರು ಬಯಸಿದ್ದರು.

ಸಿದ್ಧಾಂತವಷ್ಟೇ ಅಲ್ಲ:

ಅಂಬೇಡ್ಕರ್ ಅವರು ಆರಾಮಕುರ್ಚಿಯ ಸಿದ್ಧಾಂತಿಯಾಗಿರಲಿಲ್ಲ, ಪ್ರಯೋಗದಲ್ಲಿ ನಂಬಿಕೆ ಹೊಂದಿದ್ದರು. ದಮನಿತ ವರ್ಗಗಳ ಕಲ್ಯಾಣ ಮತ್ತು ಶಿಕ್ಷಣದ ಕುರಿತಾಗಿ ಅವರು ಏನನ್ನು ಪ್ರತಿಪಾದಿಸಿದ್ದರೋ ಅವುಗಳ ಅನುಷ್ಠಾನಕ್ಕೂ ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. 1924ರಲ್ಲಿ ಅವರು ಸ್ಥಾಪಿಸಿದ ‘ಹಿತಕಾರಿಣಿ ಸಭಾ’, 1928ರಲ್ಲಿ ಸ್ಥಾಪಿಸಿದ ‘ದಮನಿತ ವರ್ಗಗಳ ಶಿಕ್ಷಣ ಸಂಘ’, 1945ರಲ್ಲಿ ಸ್ಥಾಪಿಸಿದ ‘ಲೋಕ ಶೈಕ್ಷಿಕ್ ಸಮಾಜ’ ಮುಂತಾದವೆಲ್ಲ ಅವರ ಪ್ರಯತ್ನಗಳಿಗೆ ನಿದರ್ಶನಗಳು. ಹಿತಕಾರಿಣಿ ಸಭಾದ ವತಿಯಿಂದ ಅನೇಕ ಕಾಲೇಜು, ಹಾಸ್ಟೆಲ್ ಹಾಗೂ ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು. ಲೋಕ ಶೈಕ್ಷಿಕ್ ಸಮಾಜ ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಉತ್ತೇಜನ ನೀಡಿತು.

ಶಿಕ್ಷಣದಿಂದಲೇ ಉದ್ಧಾರ:

ಶಿಕ್ಷಣ ವ್ಯಕ್ತಿಯನ್ನು ನಿರ್ಭೀತನನ್ನಾಗಿಸಬೇಕು. ಏಕತೆಯ ಪಾಠ ಕಲಿಸಬೇಕು. ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ತನ್ನ ಹಕ್ಕುಗಳಿಗಾಗಿ ಹೋರಾಡಲು ಪ್ರೇರಣೆ ನೀಡಬೇಕು ಎಂಬುದು ಅಂಬೇಡ್ಕರ್ ಅವರ ಒಟ್ಟಾರೆ ನಿಲುವಾಗಿತ್ತು. ಜನರ ಜೀವನ ಮಟ್ಟವನ್ನು ಸುಧಾರಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ಅಲಕ್ಷಿತ, ಹಿಂದುಳಿದ ಸಮುದಾಯಗಳು ಇಂದು ಸಮಾಜದಲ್ಲಿ ಸಾಕಷ್ಟು ಮುಂದುವರಿಯುವುದು ಸಾಧ್ಯವಿದ್ದರೆ ಅದರ ಹಿಂದೆ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟಗಳು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿವೆ ಎಂಬುದನ್ನು ಮರೆಯಬಾರದು. ಇದಕ್ಕೆ ಅವರ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನವೇ ಒಂದು ಪರಿಪೂರ್ಣ ಸಾಕ್ಷಿ.

- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: