ಶನಿವಾರ, ಮಾರ್ಚ್ 27, 2021

ನಕಲಿ ಖಾತೆಗಳ ಅಸಲಿಯತ್ತು

ಮಾರ್ಚ್ 27, 2021ರ 'ಪ್ರಜಾವಾಣಿ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ. ಇಲ್ಲಿ ಕ್ಲಿಕ್ ಮಾಡಿ.

ಸಾಮಾಜಿಕ ಜಾಲತಾಣಗಳಲ್ಲಿನ ಸೆಲೆಬ್ರಿಟಿಗಳ ನಕಲಿ ಖಾತೆಗಳ ಬಗ್ಗೆ ಮಾತಾಡಿಕೊಳ್ಳುತ್ತಿದ್ದ ಜನಸಾಮಾನ್ಯರು ಈಗ ತಮ್ಮದೇ ನಕಲಿ ಖಾತೆಗಳ ಬಗ್ಗೆ ತಲೆಕೆಡಿಸಿಕೊಳ್ಳುವ ಕಾಲ ಬಂದಿದೆ. ತಾವು ಪ್ರತಿದಿನ ವ್ಯವಹರಿಸುತ್ತಿರುವ ಖಾತೆಗಳು ಅಸಲಿಯೋ ನಕಲಿಯೋ ಎಂದು ಗೊಂದಲಕ್ಕೊಳಗಾಗುವುದರ ಜೊತೆಗೆ, ಯಾವ ಕ್ಷಣದಲ್ಲಿ ತಮ್ಮದೇ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಯಾಗಿ ಮುಜುಗರಕ್ಕೊಳಗಾಗುವ ಸಂದರ್ಭ ಬರುತ್ತದೋ ಎಂಬ ಆತಂಕ ಬಹುತೇಕರನ್ನು ಕಾಡುತ್ತಿದೆ.

ಫೇಸ್‍ಬುಕ್‍ನಲ್ಲಿ ತೀರಾ ಪರಿಚಿತರೊಬ್ಬರಿಂದ ಫ್ರೆಂಡ್ ರಿಕ್ವೆಸ್ಟ್ ಬಂತೆಂದು ಸ್ವೀಕರಿಸಿಬಿಟ್ಟರೆ ಮರುಕ್ಷಣ ಅವರಿಂದ ಹಣದ ಬೇಡಿಕೆ. ‘ಬಹಳ ತೊಂದರೆಯಲ್ಲಿದ್ದೇನೆ. ನಿಮ್ಮಲ್ಲಿ ಗೂಗಲ್ ಪೇ ಅಥವಾ ಫೋನ್ ಪೇ ಇದೆಯೇ? ತುರ್ತಾಗಿ ಹತ್ತು ಸಾವಿರ ರುಪಾಯಿ ಬೇಕಾಗಿದೆ. ಕೂಡಲೇ ವರ್ಗಾಯಿಸಿಬಿಡಿ. ನಾಳೆಯೇ ವಾಪಸ್ ಕೊಡುತ್ತೇನೆ’ – ಇದು ಅಂತಹ ಖಾತೆಗಳ ಸಾಮಾನ್ಯ ವರಸೆ. 

ನಮಗೆ ಬಹಳ ಗೊತ್ತಿರುವ ವ್ಯಕ್ತಿಗಳಿಂದ ಇಂತಹ ಕೋರಿಕೆ ಬಂದಾಗ ‘ಛೇ, ಏನು ತೊಂದರೆಯಾಯಿತೋ ಏನೋ? ಸಹಾಯ ಮಾಡೋಣ’ ಎಂದು ಅನಿಸುವುದು ಸಹಜ. ಒಂದಷ್ಟು ಮಂದಿ ಅವರಿಗೆ ಫೋನ್ ಮಾಡಿಯೋ, ವೈಯಕ್ತಿಕ ಮೆಸೇಜ್ ಮಾಡಿಯೋ ಖಚಿತಪಡಿಸಿಕೊಳ್ಳುವ ಕೆಲಸ ಮಾಡಿದರೆ ಕೆಲವು ಮಂದಿ ಹಣವನ್ನೂ ಕೊಟ್ಟು ಮೋಸ ಹೋಗುವುದುಂಟು. ಇಂತಹ ಪ್ರಕರಣಗಳು ಇತ್ತೀಚಿನ ದಿನಗಳಲ್ಲಂತೂ ಬಹುವಾಗಿ ವರದಿಯಾಗುತ್ತಿವೆ. ‘ನನ್ನ ಹೆಸರಿನಲ್ಲಿ ಫೇಕ್ ಅಕೌಂಟ್ ಸೃಷ್ಟಿಯಾಗಿದೆ. ದಯಮಾಡಿ ಯಾರೂ ಪ್ರತಿಕ್ರಿಯಿಸಬೇಡಿ, ಹಣ ನೀಡಬೇಡಿ’ ಎಂದು ಪರಿಚಿತರು ಪ್ರಕಟಿಸಿಕೊಳ್ಳುವುದು ತೀರಾ ಸಾಮಾನ್ಯ ಎಂಬ ಹಂತಕ್ಕೆ ಬಂದಿದೆ.

ತಂತ್ರಜ್ಞಾನದಿಂದ ಬದುಕು ಸ್ಮಾರ್ಟ್ ಆಗಿದೆ ಅಂದುಕೊಳ್ಳುತ್ತೇವೆ. ಜೀವನ ಸ್ಮಾರ್ಟ್ ಆದಂತೆ ಕಳ್ಳರೂ ಸ್ಮಾರ್ಟ್ ಆಗುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಿಂದ ಸಂವಹನದ ಪ್ರಜಾಪ್ರಭುತ್ವ ಸಾಧ್ಯವಾಗಿದೆ ಎಂದು ನಿನ್ನೆಮೊನ್ನೆಯವರೆಗೆ ವ್ಯಾಖ್ಯಾನಿಸುತ್ತಿದ್ದ ಸಂವಹನ ಪಂಡಿತರು ಈ ಪ್ರಜಾಪ್ರಭುತ್ವ ಅಸಲಿಯೋ ನಕಲಿಯೋ ಎಂಬ ಸಂಶಯದಲ್ಲಿ ಬಿದ್ದಿದ್ದಾರೆ.

ಫೇಸ್‍ಬುಕ್ ಇಂದು ಜಗತ್ತಿನಲ್ಲೇ ಅತಿಹೆಚ್ಚು ಜನಪ್ರಿಯವಾಗಿರುವ ಸಾಮಾಜಿಕ ಜಾಲತಾಣವಾಗಿದ್ದು 274 ಕೋಟಿ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಯೂಟ್ಯೂಬ್ 229 ಕೋಟಿ ಖಾತೆಗಳನ್ನು ಹೊಂದಿ ಎರಡನೇ ಸ್ಥಾನದಲ್ಲಿದ್ದರೆ, 200 ಕೋಟಿ ಬಳಕೆದಾರರೊಂದಿಗೆ ವಾಟ್ಸಾಪ್, 130 ಕೋಟಿ ಬಳಕೆದಾರರೊಂದಿಗೆ ಫೇಸ್‍ಬುಕ್ ಮೆಸೆಂಜರ್, 122 ಕೋಟಿ ಬಳಕೆದಾರರೊಂದಿಗೆ ಇನ್‍ಸ್ಟಾಗ್ರಾಂ ಹಾಗೂ 35 ಕೋಟಿ ಬಳಕೆದಾರರೊಂದಿಗೆ ಟ್ವಿಟರ್ ನಂತರದ ಸ್ಥಾನದಲ್ಲಿವೆ. ಯಾವುದೇ ಸೋಶಿಯಲ್ ಮೀಡಿಯಾ ಜನಪ್ರಿಯವಾಗುತ್ತಿದ್ದಂತೆ ಅದನ್ನು ದುರ್ಬಳಕೆ ಮಾಡುವವರ ಸಂಖ್ಯೆಯೂ ಹೆಚ್ಚಾಗುತ್ತದೆ. ಫೇಸ್‍ಬುಕ್, ಇನ್‍ಸ್ಟಾಗ್ರಾಂ, ಟ್ವಿಟರ್ ಕಂಪೆನಿಗಳು ಈ ನಕಲಿಗಳನ್ನು ನಿಭಾಯಿಸಲು ಹರಸಾಹಸಪಡುತ್ತಿವೆ. 

ನಕಲಿಗಳನ್ನು ನಿಯಂತ್ರಿಸಲು ಈ ಕಂಪೆನಿಗಳು ತಂತ್ರಗಾರಿಕೆಗಳನ್ನು ಹೆಚ್ಚಿಸುತ್ತಿರುವಂತೆಯೇ, ನಕಲಿಗಳು ಕೂಡ ಮೋಸದ ಹೊಸಹೊಸ ದಾರಿಗಳನ್ನು ಹುಡುಕುತ್ತಿದ್ದಾರೆ. 2018ರ ಮೊದಲ ಮೂರು ತಿಂಗಳಲ್ಲಿ ಫೇಸ್‍ಬುಕ್ 58 ಕೋಟಿ ನಕಲಿ ಖಾಯೆಗಳನ್ನು ನಿಷ್ಕ್ರಿಯಗೊಳಿಸಿದ್ದರೆ, ಕೊನೆಯ ಮೂರು ತಿಂಗಳಲ್ಲಿ 120 ಕೋಟಿ ನಕಲಿ ಖಾತೆಗಳನ್ನು ತೆಗೆದುಹಾಕಿತು. 2019ರ ಮೊದಲ ಮೂರು ತಿಂಗಳಲ್ಲಿ 220 ಕೋಟಿ ಖಾತೆಗಳನ್ನೂ, ಕೊನೆಯ ಮೂರು ತಿಂಗಳಲ್ಲಿ 110 ಕೋಟಿ ಖಾತೆಗಳನ್ನೂ, 2020ರ ಅಂತ್ಯಕ್ಕೆ 130 ಕೋಟಿ ಖಾತೆಗಳನ್ನೂ ನಿಷ್ಕ್ರಿಯಗೊಳಿಸಿತು. 

ನಕಲಿ ಖಾತೆಗಳನ್ನು ತೆಗೆದುಹಾಕಿದ ಇಮ್ಮಡಿ ವೇಗದಲ್ಲಿ ಮತ್ತೆ ನಕಲಿಗಳು ಸೃಷ್ಟಿಯಾಗುತ್ತಿವೆ. ಇನ್‍ಸ್ಟಾಗ್ರಾಂನಲ್ಲಿ 9.5 ಕೋಟಿ ನಕಲಿ ಖಾತೆಗಳಿರುವುದಾಗಿಯೂ, ಟ್ವಿಟರ್‍ನಲ್ಲಿ ಪ್ರತೀ 10 ಖಾತೆಗಳಲ್ಲಿ ಒಂದು ಖಾತೆ ನಕಲಿ ಇರುವುದಾಗಿಯೂ ಸಮೀಕ್ಷೆಗಳು ಬಹಿರಂಗಪಡಿಸಿವೆ. ಫೇಸ್‍ಬುಕ್‍ನಲ್ಲಿ ಶೇ. 13ರಷ್ಟು ನಕಲಿ ಖಾತೆಗಳಿರುವುದಾಗಿ ಸ್ವತಃ ಕಂಪೆನಿಯೇ ಒಪ್ಪಿಕೊಂಡಿದೆ. ಸಾಮಾಜಿಕ ಜಾಲತಾಣಗಳ ಬಳಕೆಯೆಂಬುದು ಕತ್ತಿಯಂಚಿನ ನಡಿಗೆಯೆಂಬುದನ್ನು ಸಾಕಷ್ಟು ಮಂದಿ ತಿಳಿದಿದ್ದಾರೆ. ಆದರೆ ನಿಯಂತ್ರಣಕ್ಕೆ ಸಿಗದ ಈ ಬೆಳವಣಿಗೆಯಂತೂ ತೀರಾ ಆತಂಕಕಾರಿ ಹಂತವನ್ನು ತಲುಪಿದೆ.

ನಕಲಿ ಖಾತೆಗಳಲ್ಲಿ ಎರಡು ವರ್ಗದವು ಇವೆ: ಒಂದು, ಸಾಫ್ಟ್‍ವೇರ್‍ಗಳ ಸಹಾಯದಿಂದ ಏಕಕಾಲಕ್ಕೆ ಬಹುಸಂಖ್ಯೆಯಲ್ಲಿ ಸೃಷ್ಟಿಯಾದವು, ಇನ್ನೊಂದು, ವ್ಯಕ್ತಿಗಳಿಂದ ಸೃಷ್ಟಿಯಾದವು. ಎರಡರಿಂದಲೂ ಅವುಗಳದ್ದೇ ಆದ ಅಪಾಯಗಳಿವೆ. ಸಾಫ್ಟ್‍ವೇರ್‍ಗಳನ್ನು ಬಳಸಿ ಹುಟ್ಟುಹಾಕುವ ಖಾತೆಗಳು ವಿವಿಧ ಕಂಪೆನಿಗಳು ಹಾಗೂ ರಾಜಕಾರಣಿಗಳಿಗೆ ಹೆಚ್ಚಿನ ‘ಫಾಲೋವರ್ಸ್’ ಅಥವಾ ‘ಲೈಕ್ಸ್’ ಅನ್ನು ಸೃಷ್ಟಿಸುವ ಮೂಲಕ ನಕಲಿ ಜನಪ್ರಿಯತೆಯನ್ನು ತಂದುಕೊಡುತ್ತವೆ. ಲೈಕ್ಸ್ ಅಥವಾ ವ್ಯೂಸ್ ಆಧಾರದಲ್ಲಿ ವಿವಿಧ ವಾಣಿಜ್ಯಕ ಸಂಸ್ಥೆಗಳು ಸೋಶಿಯಲ್ ಮೀಡಿಯಾದಲ್ಲಿ ಲಕ್ಷಾಂತರ ರೂಪಾಯಿ ಹಣ ಸುರಿಯುವುದು ವಾಸ್ತವವಾಗಿ ಹೊಳೆಯಲ್ಲಿ ಹುಣಸೆಹಣ್ಣು ತೊಳೆದ ಹಾಗೆ. ಆದರೆ ಮಾನವನಿರ್ಮಿತ ನಕಲಿ ಖಾತೆಗಳಂತೂ ಇದಕ್ಕಿಂತ ಹೆಚ್ಚು ಅಪಾಯಕಾರಿ. ಜನಸಾಮಾನ್ಯರ ಖಾಸಗಿತನ, ಗೌಪ್ಯತೆ ಹಾಗೂ ಆದಾಯದೊಂದಿಗೆ ಚೆಲ್ಲಾಟ ಆಡುವ ಇವು ಸಾಮಾಜಿಕ ಬದುಕಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಬಲ್ಲವು.

ಸಾಮಾಜಿಕ ಜಾಲತಾಣಗಳ ಈ ಸಮಸ್ಯೆ ಇಡೀ ವಿಶ್ವಕ್ಕೇ ಸಂಬಂಧಪಟ್ಟುದಾದರೂ, ಭಾರತದಂತಹ ಸೂಕ್ಷ್ಮ ಸಮಾಜದಲ್ಲಿ ಇದು ಹೆಚ್ಚು ದುಷ್ಪರಿಣಾಮಗಳಿಗೆ ಕಾರಣವಾಗಬಹುದು. ಜಗತ್ತಿನ ಅತಿದೊಡ್ಡ ಸಾಮಾಜಿಕ ಜಾಲತಾಣ ಫೇಸ್‍ಬುಕ್‍ಗೆ ಭಾರತದಲ್ಲೇ ಅತಿಹೆಚ್ಚು ಸಕ್ರಿಯ ಬಳಕೆದಾರರಿರುವುದು ಗಮನಾರ್ಹ. ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಡೇಟಾ ಬಲು ಅಗ್ಗ, ಯುವಕರ ಪ್ರಮಾಣ ಹೆಚ್ಚು. ಅದಕ್ಕೇ ಇಂಟರ್ನೆಟ್ ಬಳಸುವವರ ಸಂಖ್ಯೆಯೂ ಅಧಿಕ. 

ಇಂಟರ್ನೆಟ್ ದಿನೇದಿನೇ ಹುಟ್ಟುಹಾಕುತ್ತಿರುವ ಸಮಸ್ಯೆಗಳ ಎದುರು ನಮ್ಮ ಮಾಹಿತಿ ತಂತ್ರಜ್ಞಾನ ಕಾಯ್ದೆ ಸೊರಗಿ ಕುಳಿತಿದೆ. ನಮ್ಮ ಸೈಬರ್ ಕ್ರೈಂ ನಿಯಂತ್ರಣ ವ್ಯವಸ್ಥೆ ಚಾಪೆ ಕೆಳಗೆ ತೂರಿದರೆ ಕ್ರಿಮಿನಲ್‍ಗಳು ರಂಗೋಲಿ ಕೆಳಗೆ ತೂರುತ್ತಿದ್ದಾರೆ. ವಾಸ್ತವವಾಗಿ ಕೇವಲ ಕಾನೂನಿನಿಂದ ತಡೆಗಟ್ಟಬಹುದಾದ ಸಮಸ್ಯೆ ಇದಲ್ಲ. ಕಾನೂನು ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಬಹುದೇ ಹೊರತು ಸಮಸ್ಯೆಗಳು ಘಟಿಸದಂತೆ ತಡೆಯಲಾರದು. ಅದಕ್ಕೆ ಜನರು ಜಾಗೃತರಾಗಿರುವುದೇ ಸರಿಯಾದ ಪರಿಹಾರ. ಸಾಮಾಜಿಕ ಜಾಲತಾಣಗಳ ಅಪಾಯಗಳಿಗೆ ಬಲಿಬೀಳದಂತೆ ಜನಸಾಮಾನ್ಯರನ್ನು ಎಚ್ಚರಿಸುವುದು, ಅವುಗಳ ಸರಿಯಾದ ಬಳಕೆಯ ಬಗ್ಗೆ ಅವರಲ್ಲಿ ಅರಿವು ಮೂಡಿಸುವುದು ಹೆಚ್ಚು ಪ್ರಯೋಜನಕಾರಿ.

- ಡಾ. ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ: