ಏಪ್ರಿಲ್ 30, 2021ರ 'ಹೊಸದಿಗಂತ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.
-------------------------------
ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯ ಅಧ್ಯಾಪಕ, ಯಕ್ಷಗಾನ ಕಲಾವಿದ, ಲೇಖಕ, ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ಗಣರಾಜ ಕುಂಬ್ಳೆ ಇದೇ ಏಪ್ರಿಲ್ 30ರಂದು ನಿವೃತ್ತಿ ಹೊಂದುತ್ತಿದ್ದಾರೆ. ಅವರಿಗೊಂದು ಅಕ್ಷರ ಗೌರವ.
-------------------------------
ಎರಡು ದಶಕಗಳ ಹಿಂದಿನ ಮಾತು. ನಾವಾಗ ರಾಮಕುಂಜದಲ್ಲಿ ಪಿಯುಸಿ ಓದುತ್ತಿದ್ದೆವು. ನಮ್ಮ ಕನ್ನಡ ಉಪನ್ಯಾಸಕರೊಂದಿಗೆ ನಾವು ಒಂದಷ್ಟು ವಿದ್ಯಾರ್ಥಿಗಳು ಮಂಗಳೂರಿಗೆ ಹೋಗಿದ್ದೆವು. ಹಿಂತಿರುಗುವ ದಾರಿಯಲ್ಲಿ ಗುರುಗಳು ನಮ್ಮನ್ನು ನರಹರಿ ಪರ್ವತಕ್ಕೆ ಕರೆದೊಯ್ದಿದ್ದರು. ಅಲ್ಲಿ ಅರ್ಚಕರೊಬ್ಬರು ದೇವಸ್ಥಾನದ ಸುತ್ತಲಿನ ಕೆಲವು ಸ್ಥಳಗಳನ್ನು ನಮಗೆ ಪರಿಚಯಿಸಿದರು. ಹಿಂದಿನಿಂದಲೇ ಬರುತ್ತಿದ್ದ ಗುರುಗಳನ್ನು ನಾನು ಬಾವಿಯೊಂದರ ಸಮೀಪ ಕರೆದು ‘ಸರ್, ಇದು ಗಧಾತೀರ್ಥವಂತೆ’ ಎಂದು ಹೇಳಿದೆ. ತಕ್ಷಣ ನನ್ನನ್ನು ತಡೆದ ಅವರು ‘ಅದು ಗಧಾತೀರ್ಥವಲ್ಲಪ್ಪಾ, ಗದಾತೀರ್ಥ. ಮಹಾಪ್ರಾಣ ಅಲ್ಲ, ಅಲ್ಪಪ್ರಾಣ. ಗಧಾ ಎಂದರೆ ಕತ್ತೆ ಅಂತ ಅರ್ಥ’ ಎಂದು ಮುಗುಳ್ನಗುತ್ತಲೇ ತಿದ್ದಿದರು. ‘ಹೌದಾ ಸರ್? ಹಾಗಾದರೆ ಗಧಾಯುದ್ಧ, ಗಧಾಪ್ರಹಾರ ಅಂತೆಲ್ಲ ಹೇಳಬಾರದಾ?’ ಅಂತ ಕೇಳಿದೆ. ‘ಇಲ್ಲ, ಹಾಗೆ ಹೇಳಬಾರದು. ಅಪಾರ್ಥ ಆಗುತ್ತದೆ’ ಎಂದು ಮತ್ತೊಂದಿಷ್ಟು ವಿವರ ನೀಡಿದರು.ಅವರು ಗಣರಾಜ ಕುಂಬ್ಳೆಯವರು. ಪಾಠ ಮಾಡಲು ಅವರಿಗೆ ತರಗತಿ ಕೊಠಡಿಯೇ ಬೇಕಿರಲಿಲ್ಲ. ಎಲ್ಲೆಲ್ಲಿ ವಿದ್ಯಾರ್ಥಿಗಳನ್ನು ತಿದ್ದಬಹುದೋ ಅಲ್ಲೆಲ್ಲ ತಿದ್ದುತ್ತಲೇ ಇದ್ದರು. ನಿಂತದ್ದೇ ತರಗತಿ, ಮಾಡಿದ್ದೇ ಪಾಠ. ನಾನಂತೂ ಅವರ ಪಾಠ ಕೇಳಿದ ಮೊದಲ ದಿನದಿಂದಲೇ ಅವರ ಪರಮ ಅಭಿಮಾನಿಯಾಗಿದ್ದೆ. ಅವರ ತರಗತಿಗಳಿಗಾಗಿ ಕಾದು ಕೂತಿರುತ್ತಿದ್ದೆ. ಅವರ ಪ್ರತೀ ತರಗತಿಯಲ್ಲೂ ಏನಾದರೊಂದು ಹೊಸದನ್ನು ಕಲಿಯುವುದಿತ್ತು. ಯಕ್ಷಗಾನಕ್ಕೋ, ತಾಳಮದ್ದಳೆಗೋ, ಯಾವುದೋ ಸಾಹಿತ್ಯ ಸಂಬಂಧೀ ಕಾರ್ಯಕ್ರಮಕ್ಕೋ ಅವರು ಹೋಗುವಾಗೆಲ್ಲ ‘ಬರ್ತೀಯಾ’ ಅಂತ ಕೇಳುತ್ತಿದ್ದುದುಂಟು. ನಾನು ಅವರ ಬೆನ್ನಿಗಂಟಿಕೊಂಡು ಓಡಾಡುತ್ತಿದ್ದೆ. ಅವರೊಂದಿಗಿದ್ದ ಪ್ರತೀಕ್ಷಣವೂ ಹೊಸದೊಂದು ಪಾಠ.
ಅಧ್ಯಾಪಕರಾಗಿ ನನಗೆ ಅವರೊಂದು ಮಹಾಮಾದರಿಯಾಗಿದ್ದರು. ನೂರು ವಿದ್ಯಾರ್ಥಿಗಳಿದ್ದ ತರಗತಿಯಲ್ಲೂ ಅವರಿದ್ದಷ್ಟು ಹೊತ್ತು ತಂಟೆ ತಕರಾರುಗಳಿಲ್ಲ. ಗುಸುಗುಸು ಪಿಸಪಿಸ ಇಲ್ಲ. ಮುಂದಿನ ಬೆಂಚು ಹಿಂದಿನ ಬೆಂಚೆಂಬ ವ್ಯತ್ಯಾಸವಿಲ್ಲದೆ, ಅಷ್ಟೂ ಮಂದಿ ಕಣ್ಣುಕಿವಿಯರಳಿಸಿ ಪಾಠ ಕೇಳುವಂತೆ ಮಾಡುವ ವಿಶಿಷ್ಟ ಶಕ್ತಿ ಅವರಲ್ಲಿತ್ತು. ಅವರದ್ದೇ ಒಂದು ವಿಶಿಷ್ಟ ಮ್ಯಾನರಿಸಂ ಇತ್ತು. ತರಗತಿಯಲ್ಲಿದ್ದಷ್ಟೂ ಹೊತ್ತು ಮುಖದಲ್ಲಿ ಮಂದಹಾಸ ತಪ್ಪುತ್ತಿರಲಿಲ್ಲ. ಸ್ವತಃ ಯಕ್ಷಗಾನ ಕಲಾವಿದರಾದ್ದರಿಂದ ಅವರ ಮಾತು, ಹಾವ-ಭಾವ ಎಲ್ಲದರಲ್ಲೂ ಯಕ್ಷಗಾನದ ಛಾಪು ದಟ್ಟವಾಗಿಯೇ ಇತ್ತು. ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದ ಕವಿಗಳ ಕಾವ್ಯಭಾಗಗಳ ಕುರಿತ ಅವರ ಪಾಠಗಳಂತೂ ಯಾವತ್ತಿಗೂ ಸ್ಮರಣೀಯ. ‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’ ಎಂದವರು ವರ್ಣಿಸುತ್ತಿದ್ದರೆ ಹರಿಶ್ಚಂದ್ರ ತರಗತಿಯಲ್ಲೇ ಬಂದು ನಿಂತುಬಿಡುತ್ತಿದ್ದ. ‘ಹಲುಬಿದಳ್ ಕಲ್ಮರಂ ಕರಗುವಂತೆ’ ಎಂದು ವಿವರಿಸುತ್ತಿದ್ದರೆ ಸೀತೆ ಬಂದು ಕಣ್ಣಂಚಲ್ಲಿ ಕರಗುತ್ತಿದ್ದಳು. ಒಂದೊಂದು ತರಗತಿ ಮುಗಿಯುವ ಹೊತ್ತಿಗೂ ನನಗೆ ಒಂದೊಂದು ಯಕ್ಷಗಾನ ನೋಡಿ ಬಂದ ಭಾವ.
ತಾವು ಮಾಡುವ ಪಾಠದ ಒಂದೊಂದು ಪದವನ್ನೂ ಸಾಲನ್ನೂ ಹಿಂಜಿಹಿಂಜಿ ಅರ್ಥ ಬಿಡಿಸುತ್ತಿದ್ದ ಅವರ ವಿಧಾನವಂತೂ ಬಲುಚಂದ. ಒಂದು ವಿಶಿಷ್ಟ ಪದ ಸಿಕ್ಕರೆ ಅದರ ವ್ಯುತ್ಪತ್ತಿಯಿಂದ ತೊಡಗಿ ನಾನಾರ್ಥಗಳವರೆಗೆ ಎಲ್ಲ ಮಗ್ಗುಲುಗಳನ್ನೂ ಪರಿಚಯ ಮಾಡದೆ ಮುಂದಕ್ಕೆ ಹೋಗುತ್ತಿರಲಿಲ್ಲ. ಈಗಲೂ ಒಂದೊಂದು ಪದ ಬರೆಯುವಾಗಲೂ ಅದನ್ನು ಬಳಸಿದ್ದು ಸರಿಯೇ, ಇದು ಬೇಕಿತ್ತೇ ಎಂದೆಲ್ಲ ನನಗೆ ಯೋಚನೆ ಬರುವುದುಂಟು. ಅದಕ್ಕೆ ನೂರಕ್ಕೆ ನೂರು ಕುಂಬ್ಳೆಯವರ ಪಾಠ ಕಾರಣ. ಮಾತಾಡುವಾಗ, ಬರೆಯುವಾಗ ಒಂದು ಪದ ತಪ್ಪಾದರೂ ಒಂದು ಲೇಖನ ಚಿಹ್ನೆ ವ್ಯತ್ಯಾಸವಾದರೂ ಕೂಡಲೇ ಅದನ್ನು ಬೊಟ್ಟುಮಾಡಿ ತಿದ್ದುತ್ತಿದ್ದರು ಅವರು. ಪತ್ರಿಕೋದ್ಯಮಕ್ಕೆ ಕುಂಬ್ಳೆಯವರಂತಹ ಅಧ್ಯಾಪಕರು ಇದ್ದಿದ್ದರೆ ಎಷ್ಟು ಚೆನ್ನ ಎಂದು ನಾನು ಎಷ್ಟೋ ಸಲ ಅಂದುಕೊಂಡದ್ದಿದೆ. ಅವರೆದುರು ನಿಂತು ಮಾತಾಡುವುದಕ್ಕೆ ಈಗಲೂ ಸಣ್ಣ ಭಯ. ಇತ್ತೀಚೆಗೆ ವೇದಿಕೆಯೊಂದರಲ್ಲಿ ‘ವೈಯುಕ್ತಿಕ’ ಎಂಬ ಪದ ಬಳಸಿದಾಗ, ಹತ್ತಿರ ಕರೆದು ಕಿವಿಯಲ್ಲಿ ‘ವೈಯುಕ್ತಿಕ ಅಲ್ಲ, ವೈಯಕ್ತಿಕ ಅಂತ ಹೇಳಬೇಕು’ ಎಂದು ತಿದ್ದಿದ್ದರು. ಬೆನ್ನಿಗೇ, ಹೀಗೆ ಹೇಳಿದರೆ ಬೇಜಾರಿಲ್ವಲ್ಲ ಎಂದು ವಿಚಾರಿಸಿಕೊಂಡಿದ್ದರು. ‘ಅಯ್ಯೋ, ಗುರುಗಳು ಯಾವತ್ತೂ ಗುರುಗಳೇ’ ಎಂದು ತಿದ್ದಿಕೊಂಡಿದ್ದೆ.
ಗಣರಾಜ ಕುಂಬ್ಳೆ ಎಂಬ ಅದ್ಭುತ ಅಧ್ಯಾಪಕರ ಹಿಂದೆ ಒಂದು ಬಹುಮುಖ ವ್ಯಕ್ತಿತ್ವ ಇದೆ. ಪರಿಣಾಮಕಾರಿಯಾಗಿ ಮಾತಾಡಬಲ್ಲ ಹಲವರಿಗೆ ಬರೆವಣಿಗೆ ಕಷ್ಟ; ಸೊಗಸಾಗಿ ಬರೆಯಬಲ್ಲ ಹಲವರು ಮಾತಿನಲ್ಲಿ ಹಿಂದೆ. ಆದರೆ ಕುಂಬ್ಳೆಯವರು ಎರಡನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಉತ್ತಮ ಸಂವಹನಕಾರರು. ಅವರು ಉತ್ತಮ ವಾಗ್ಮಿಯಾಗಿರುವಂತೆ ಒಳ್ಳೆಯ ಬರೆಹಗಾರರೂ ಹೌದು. ನೂರಾರು ಬಿಡಿ ಲೇಖನಗಳನ್ನು, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಬಿರಿವ ಮೊಗ್ಗು’, ‘ಅರಳು’ ಕವನ ಸಂಕಲನಗಳು ಅವರಲ್ಲಿರುವ ಕವಿಯನ್ನು ಕಾಣಿಸಿದರೆ, ‘ಹಾಡುಗಳ ಮಣಿಸರ’, ‘ಯಕ್ಷಗಾನ ವಿಮರ್ಶಾ ಪರಂಪರೆ’, ‘ಕೋಟೆ ಕ್ಷತ್ರಿಯ ಜನಾಂಗದ ಅಧ್ಯಯನ’, ‘ಮಚ್ಚಿಮಲೆ ಶಂಕರನಾರಾಯಣ ರಾಯರ ಬಾಲಸಾಹಿತ್ಯ’, ‘ಮಿಂಚು ಮಾತಿನ ಯಕ್ಷ’ ಮೊದಲಾದವು ಅವರೊಳಗಿನ ಸಂಶೋಧಕನನ್ನು ಪರಿಚಯಿಸಿವೆ. ‘ಕಗ್ಗದೊಳಗಿನ ಸಗ್ಗ’ ಅವರು ಹೊಸದಿಗಂತಕ್ಕೆ ಬರೆದ ಅಂಕಣ ಬರೆಹಗಳ ಸಂಕಲನ. ‘ಪುಣ್ಯಕೋಟಿ’, ‘ಚಂದ್ರಹಾಸ’, ‘ಮರಳು ಬಿಂದಿಗೆ’ ಕೃತಿಗಳು ನಾಟಕದ ಬಗ್ಗೆ ಅವರ ಒಲವನ್ನು ತೋರಿಸುತ್ತವೆ. ಹಲವಾರು ಸ್ಮರಣ ಸಂಚಿಕೆ, ಅಭಿನಂದನ ಗ್ರಂಥಗಳ ಸಂಪಾದಕರು ಅವರು.
ಯಕ್ಷಗಾನದ ಕುರಿತ ಅವರ ಪ್ರೀತಿ ದೊಡ್ಡದು. ಶೇಣಿ, ಸಾಮಗತ್ರಯರು, ಮೂಡಂಬೈಲು, ಜೋಶಿ, ತೆಕ್ಕಟ್ಟೆ, ಕುಂಬ್ಳೆ,ಸೂರಿಕುಮೇರು ಮೊದಲಾದ ಹಿರಿಯ ತಲೆಮಾರಿನ ಪ್ರಸಿದ್ಧರೊಂದಿಗೆ ಹಾಗೂ ಅನೇಕ ಸಮಕಾಲೀನ ಕಲಾವಿದರೊಂದಿಗೆ ಅರ್ಥ ಹೇಳಿದ ಹೆಗ್ಗಳಿಕೆ ಅವರದ್ದು. ಯಕ್ಷಗಾನದ ಮನೆತನದಿಂದ ಬಂದ ಕುಂಬ್ಳೆಯವರು, ವಿದ್ಯಾರ್ಥಿ ದೆಸೆಯಿಂದಲೇ ಆಟ-ಕೂಟಗಳಲ್ಲಿ ಸಕ್ರಿಯರು. ಉಪ್ಪಳದ ಭಗವತಿ ಮೇಳದಲ್ಲಿ, ಕುಬಣೂರು ಭಾಗವತರ ನೇತೃತ್ವದ ಕೂಡ್ಲು ಮೇಳದಲ್ಲಿ ಅತಿಥಿ ಕಲಾವಿದರಾಗಿ ತಿರುಗಾಟ ನಡೆಸಿದ್ದೂ ಇದೆ. ಈಗಲೂ ಬಿಡುವು ಸಿಕ್ಕಾಗಲೆಲ್ಲ ವೇಷ ಮಾಡುವ ಹುಮ್ಮಸ್ಸು; ತಾಳಮದ್ದಳೆಯೆಂದರೆ ಒಂದು ಹಿಡಿ ಆಸಕ್ತಿ ಹೆಚ್ಚು. ನಿರಂತರ ಅಧ್ಯಯನಶೀಲತೆ, ಯಾವ ಸ್ಥಾಯಿಗೂ ಹೊಂದಿಕೊಳ್ಳುವ ಕಂಠ ಅವರ ವೈಶಿಷ್ಟ್ಯ ಆಕಾಶವಾಣಿಯ ಬಿ-ಹೈಗ್ರೇಡ್ ಕಲಾವಿದರು. ರಾಮ, ಭರತ, ಭೀಷ್ಮ, ಪರಶುರಾಮ, ದಶರಥ, ಅತಿಕಾಯ, ವಾಲಿ, ಸುಗ್ರೀವ, ದಕ್ಷ, ಈಶ್ವರ, ಮಾಗಧ, ಭೀಮ- ಅವರು ಯಶಸ್ವಿಯಾಗಿ ನಿರ್ವಹಿಸಿದ ಪಾತ್ರಗಳು ನೂರಾರು. ‘ಶ್ರೀ ರಾಮಕುಂಜೇಶ್ವರ ಕ್ಷೇತ್ರ ಮಹಾತ್ಮೆ’, ‘ವಜ್ರಜ್ವಾಲಾ ಪರಿಣಯ’ ಎಂಬ ಪ್ರಸಂಗಗಳನ್ನೂ ರಚಿಸಿದ್ದಾರೆ.
ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಅವರ ಗುಣ ಎಲ್ಲರಿಗೂ ಮಾದರಿ. ಪ್ರಚಾರದ, ಪ್ರಶಸ್ತಿ-ಸಮ್ಮಾನಗಳ ಆಸೆಗೆ ಬಿದ್ದವರಲ್ಲ. ಸುತ್ತಮುತ್ತಲಿನ ಊರಿನಲ್ಲಿ ಯಾವುದೇ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿದ್ದರೂ ಅಲ್ಲಿ ಕುಂಬ್ಳೆಯವರು ಇರಲೇಬೇಕು ಎಂಬಷ್ಟು ಪ್ರೀತಿ-ಅಭಿಮಾನಗಳನ್ನು ಉಳಿಸಿಕೊಂಡವರು. ಕೊಯಿಲದಲ್ಲಿ ‘ಯಕ್ಷನಂದನ’ ಎಂಬ ಕಲಾಸಂಘವನ್ನು ಸ್ಥಾಪಿಸಿ ಆಸಕ್ತ ಮಕ್ಕಳು ಹಾಗೂ ಮಹಿಳೆಯರಿಗೆ ನಿರಂತರ ಯಕ್ಷಗಾನ ತರಬೇತಿಯನ್ನು ಕೊಡುತ್ತಾ ಬಂದವರು.
ಕಳೆದ ನಾಲ್ಕು ದಶಕಗಳಿಂದ ಅಧ್ಯಾಪನದಲ್ಲಿ ತೊಡಗಿರುವ ಗಣರಾಜ ಕುಂಬ್ಳೆಯವರದ್ದು ವೃತ್ತಿ ಹಾಗೂ ಪ್ರವೃತ್ತಿಗಳೆರಡರಿಂದಲೂ ನಿಜವಾದ ಕನ್ನಡದ ಸೇವೆ. ನನ್ನಂತಹ ಸಾವಿರಾರು ಶಿಷ್ಯರ ಪ್ರೀತಿಯ ಅಧ್ಯಾಪಕ ಇದೇ ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ವೃತ್ತಿಗೆ ನಿವೃತ್ತಿ ಇದೆ, ಗುರುವಿಗೆ ಇಲ್ಲ. ಇಂತಹ ಗುರು ಎಲ್ಲರಿಗೂ ಸಿಗಬಾರದೇ?
- ಸಿಬಂತಿ ಪದ್ಮನಾಭ ಕೆ. ವಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ