ಶುಕ್ರವಾರ, ಏಪ್ರಿಲ್ 17, 2020

ಆನ್‌ಲೈನ್ ಶಿಕ್ಷಣ ಮತ್ತು ಡಿಜಿಟಲ್ ಕಂದಕ

ದಿನಾಂಕ: 18-04-2020ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಲೇಖನ.

ಕೊರೋನಾ ಸೃಷ್ಟಿಸಿದ ಪಲ್ಲಟ ಉಳಿದೆಲ್ಲಾ ಕ್ಷೇತ್ರಗಳಂತೆ ಶಿಕ್ಷಣ ಕ್ಷೇತ್ರವೂ ಹೊಸ ರೀತಿಯಲ್ಲಿ ಯೋಚಿಸುವಂತೆ ಮಾಡಿದೆ. ಐದೋ ಹತ್ತೋ ವರ್ಷಕ್ಕೆ ಅನಿವಾರ್ಯವಾಗಬಹುದಾಗಿದ್ದ ಆನ್‌ಲೈನ್ ಬೋಧನೆ-ಕಲಿಕೆ ಈಗಲೇ ಅನಿವಾರ್ಯವಾಗಿಬಿಟ್ಟಿದೆ. ಕೊರೋನಾ ಬಿಕ್ಕಟ್ಟಿನಿಂದಾಗಿ ಅನೇಕ ರಂಗಗಳು ಹಲವು ವರ್ಷ ಹಿಂದಕ್ಕೆ ಚಲಿಸುವಂತಾಗಿದ್ದರೆ, ಶಿಕ್ಷಣ ರಂಗ ತಂತ್ರಜ್ಞಾನದ ಬಳಕೆಯ ದೃಷ್ಟಿಯಿಂದಲಾದರೂ ಒಂದಷ್ಟು ವರ್ಷ ಮುಂದಕ್ಕೆ ಸಾಗುವಂತಾಗಿದೆ.

'ವರ್ಚುವಲ್ ಕ್ಲಾಸ್‌ರೂಂ’ ಎಂದಾಕ್ಷಣ ದೊಡ್ಡ ನಗರಗಳ ಶ್ರೀಮಂತ ಖಾಸಗಿ ಶಿಕ್ಷಣ ಸಂಸ್ಥೆಗಳನ್ನೋ, ಪಶ್ಚಿಮದ ದೇಶಗಳನ್ನೋ ಮನಸ್ಸಿಗೆ ತಂದುಕೊಳ್ಳುವುದು ಸಾಮಾನ್ಯವಾಗಿತ್ತು. ಅದು ನಮಗಿರುವುದಲ್ಲ ಅಥವಾ ನಮ್ಮಂಥವರಿಗಲ್ಲ ಎಂಬುದೇ ಬಹುಪಾಲು ಭಾರತೀಯರ ಮನಸ್ಥಿತಿಯಾಗಿತ್ತು- ಇಲ್ಲಿಯವರೆಗೆ. ಕೇವಲ ಒಂದೆರಡು ತಿಂಗಳಲ್ಲೇ ಒಟ್ಟಾರೆ ಜಗತ್ತಿನ ಮನಸ್ಥಿತಿಯೇ ಬದಲಾಗಿದೆ, ಜತೆಗೆ ನಮ್ಮದೂ. ವರ್ಚುವಲ್ ಕ್ಲಾಸ್‌ರೂಂಗಳ ಅನಿವಾರ್ಯತೆ ನಮ್ಮ ಮನೆ ಬಾಗಿಲಿಗೇ ಈಗ ಬಂದು ನಿಂತಿದೆ. ಎಷ್ಟಾದರೂ ಅನಿವಾರ್ಯತೆ ಅನ್ವೇಷಣೆಯ ತಾಯಿ.

ಪ್ರಜಾವಾಣಿ | 18-04-2020
ಪ್ರೌಢಶಾಲೆ, ಪದವಿಪೂರ್ವ ಶಿಕ್ಷಣದವರೆಗಿನದ್ದು ಒಂದು ಕತೆಯಾದರೆ, ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳದ್ದು ಇನ್ನೊಂದು ಕತೆ. ಪದವಿ ತರಗತಿಗಳು ಬಹುತೇಕ ಮುಕ್ತಾಯದ ಹಂತಕ್ಕೆ ತಲುಪಿದ್ದರೆ, ವಿಶ್ವವಿದ್ಯಾನಿಲಯಗಳ ಶೈಕ್ಷಣಿಕ ವರ್ಷದ ಎರಡನೆಯ ಭಾಗ ಅರ್ಧದಲ್ಲೇ ಇದೆ. ಪಾಠಪ್ರವಚನಗಳನ್ನು ಮುಂದುವರಿಸುವುದಕ್ಕೆ ಲಾಕ್‌ಡೌನ್ ಅಡ್ಡಿ, ಆದರೆ ಮುಂದುವರಿಸದೆ ವಿಧಿಯಿಲ್ಲ. ಒಟ್ಟಿನಲ್ಲಿ, ಕಾಲೇಜು-ವಿಶ್ವವಿದ್ಯಾನಿಲಯಗಳಿಗೆ ಆನ್‌ಲೈನ್ ಕಲಿಕೆಯ ಹೊರತು ಬೇರೆ ದಾರಿಯಿಲ್ಲ ಎಂಬಂತಾಗಿದೆ.

ಬಹುತೇಕ ವಿಶ್ವವಿದ್ಯಾನಿಲಯಗಳು, ಒಂದಷ್ಟು ಕಾಲೇಜುಗಳು ಈ ನಿಟ್ಟಿನಲ್ಲಿ ಹೊಸ ಸಾಧ್ಯತೆಗಳನ್ನು ಅಳವಡಿಸಿಕೊಳ್ಳುತ್ತಿವೆ. ವಿದೇಶಗಳ ಪರಿಸ್ಥಿತಿಗೆ ಹೋಲಿಸಿದರೆ ನಾವು ಕನಿಷ್ಠ ಹತ್ತು ವರ್ಷ ಹಿಂದೆ ಇದ್ದರೂ ಈಗಲಾದರೂ ಈ ಹಂತದಿಂದ ಆರಂಭಿಸುವುದು ಅನಿವಾರ್ಯವಾಗಿದೆ. ಕೆಲವರು ಜೂಮ್‌ನಂತಹ ಆಪ್‌ಗಳ ಸಹಾಯದಿಂದ ತರಗತಿಗಳನ್ನು ನಡೆಸಲು ಪ್ರಯತ್ನಿಸುತ್ತಿದ್ದರೆ, ಇನ್ನು ಕೆಲವರು ಯೂಟ್ಯೂಬ್‌ನಲ್ಲಿ ವೀಡಿಯೋ ಉಪನ್ಯಾಸಗಳನ್ನು ಪ್ರಕಟಿಸಿ ವಿದ್ಯಾರ್ಥಿಗಳಿಗೆ ತಲುಪಿಸುತ್ತಿದ್ದಾರೆ. ವಾಟ್ಸ್‌ಆಪ್‌ನಲ್ಲಿ ಆಡಿಯೋ ಪಾಠ, ಅಧ್ಯಯನ ಸಾಮಗ್ರಿಗಳನ್ನು ಶೇರ್ ಮಾಡಿಕೊಳ್ಳುತ್ತಿದ್ದಾರೆ. ಸ್ಕೈಪ್, ವಿಮಿಯೋ, ಗೂಗಲ್ ಮೀಟ್, ಗೋಟುಮೀಟಿಂಗ್, ಗೋಟುವೆಬಿನಾರ್, ವೆಬಿನಾರ್ ಜಾಮ್, ಲೈವ್‌ಸ್ಟ್ರೀಂ - ಹೀಗೆ ಲಭ್ಯವಿರುವ ಹತ್ತು ಹಲವು ಸಾಧ್ಯತೆಗಳನ್ನು ಹುಡುಕಿ ಅರ್ಥ ಮಾಡಿಕೊಳ್ಳುತ್ತಿದ್ದಾರೆ.

ಅಧ್ಯಾಪಕರಿಗೂ ವಿದ್ಯಾರ್ಥಿಗಳಿಗೂ ಇದೊಂದು ಹೊಸ ಅನುಭವ. ಒಂದೆಡೆ ತರಗತಿಗಳಲ್ಲಿ ಮಾತ್ರ ಸಿಗುತ್ತಿದ್ದ ಅಧ್ಯಾಪಕರು ಆನ್‌ಲೈನ್ ಮೂಲಕ ತಮ್ಮನ್ನು ತಲುಪುತಿದ್ದಾರೆ ಎಂಬ ಸಂಭ್ರಮ ವಿದ್ಯಾರ್ಥಿಗಳದ್ದಾರೆ, ಹೀಗೆಲ್ಲ ಮಾಡಬಹುದೇ ಎಂಬ ಸೋಜಿಗ ಅನೇಕ ಅಧ್ಯಾಪಕರದ್ದು. ಕಂಪ್ಯೂಟರ್, ಪ್ರೊಜೆಕ್ಟರ್ ಎಂದರೆ ಮೂಗುಮುರಿಯುತ್ತಾ ಇನ್ನೂ ಕರಿಹಲಗೆ-ಪಠ್ಯಪುಸ್ತಕಗಳಿಗೆ ಅಂಟಿಕೊಂಡಿದ್ದ ಅವರು ತಾವು ಸದಾ ಬಳಸುವ ಮೊಬೈಲಿನಲ್ಲೇ ಇಷ್ಟೊಂದು ಸಾಧ್ಯತೆಗಳಿವೆಯೇ ಎಂದು ನಿಧಾನಕ್ಕೆ ಅರ್ಥಮಾಡಿಕೊಳ್ಳುತ್ತಿದ್ದಾರೆ. ವಿದ್ಯಾರ್ಥಿಗಳಿಗೂ ಸಾಮಾಜಿಕ ಮಾಧ್ಯಮಗಳಲ್ಲಿ ಕಾಲಯಾಪನೆ ಮಾಡುವುದಲ್ಲದೆ ಮೊಬೈಲಿನಿಂದ ಇನ್ನೂ ಅನೇಕ ಉಪಯೋಗಗಳಿವೆ ಎಂದು ಮನದಟ್ಟಾಗುತ್ತಿದೆ.

ಇಂತಹ ಅನಿವಾರ್ಯ ಇಷ್ಟೊಂದು ಬೇಗನೆ ಮತ್ತು ಅಚಾನಕ್ಕಾಗಿ ಎದುರಾದೀತು ಎಂಬ ಕಲ್ಪನೆ ಯಾರಿಗೂ ಇರಲಿಲ್ಲ. ಹೀಗಾಗಿ ಇಂಥದ್ದೊಂದು ಪರಿಸ್ಥಿತಿ ಎದುರಾದಾಗ ಅದನ್ನು ಹೇಗೆ ನಿಭಾಯಿಸಬೇಕೆಂಬ ಚಿಂತನೆಯನ್ನೂ ಮಾಡಿದವರು ಕಡಿಮೆಯೇ. ಆನ್‌ಲೈನ್ ಕೋರ್ಸುಗಳು ಕೆಲವು ವರ್ಷಗಳಿಂದ ನಮ್ಮಲ್ಲಿ ಲಭ್ಯವಿದ್ದರೂ ಅವು ಐಚ್ಛಿಕ. ಬಹುತೇಕ ಖಾಸಗಿ ವಲಯದಲ್ಲೇ ಇವೆ. ಈಗಾಗಲೇ ಉದ್ಯೋಗದಲ್ಲಿರುವವರು, ಹೆಚ್ಚುವರಿ ಶೈಕ್ಷಣಿಕ ಅರ್ಹತೆ ಬಯಸುವವರು, ಪರೀಕ್ಷೆಗಳಿಗೆ ಕೋಚಿಂಗ್ ಪಡೆಯುವವರು ಇಂಥವುಗಳನ್ನು ಆಯ್ದುಕೊಳ್ಳುತ್ತಿದ್ದುದು ಇದೆ. ಕೇಂದ್ರ ಮಾನವ ಸಂಪನ್ಮೂಲ ಇಲಾಖೆ 'ಸ್ವಯಂ’ ಎಂಬ ಆನ್‌ಲೈನ್ ಕಲಿಕಾ ವೇದಿಕೆಯನ್ನು 2017ರಲ್ಲಿ ಆರಂಭಿಸಿ ನೂರಾರು ಮುಕ್ತ ಕೋರ್ಸುಗಳನ್ನು ಪರಿಚಯಿಸಿದ್ದರೂ, ಅವೆಲ್ಲವೂ ಐಚ್ಛಿಕ. ಅವನ್ನು ಔಪಚಾರಿಕ ಕೋರ್ಸುಗಳ ಭಾಗವನ್ನಾಗಿಸುವ ಅಥವಾ ಕಡ್ಡಾಯಗೊಳಿಸುವ ಪ್ರಕ್ರಿಯೆ ಇನ್ನೂ ಪ್ರಗತಿಯಲ್ಲಿದೆ.

ಹೌದು, ಆನ್‌ಲೈನ್ ತರಗತಿಗಳಿಂದ ಅನೇಕ ಲಾಭಗಳಿದ್ದರೂ ಅವುಗಳ ಇತಿಮಿತಿಗಳೂ ಅಷ್ಟೇ ಇವೆ. ನಮಗೆ ಬೇಕಾದ ಸಮಯವನ್ನು ಹೊಂದಿಸಿಕೊಂಡು ಪಾಠ ಮಾಡಬಹುದು ಅಥವಾ ಕೇಳಬಹುದು, ವಿದ್ಯಾರ್ಥಿಗಳು ಅಂತರಜಾಲವನ್ನು ಬಳಸಿಕೊಂಡು ಯಥೇಚ್ಛ ಅಧ್ಯಯನ ಸಾಮಗ್ರಿಗಳನ್ನು ಪಡೆದುಕೊಳ್ಳಬಹುದು. ಆದರೆ ಈ ತಂತ್ರಜ್ಞಾನದ ಲಾಭ ಪಡೆಯುವ ಮಂದಿಯ ಪ್ರಮಾಣ ಎಷ್ಟು ಎಂಬುದೂ ಮುಖ್ಯವಾದ ಪ್ರಶ್ನೆ.

ವಿದೇಶಗಳಲ್ಲಿ ಆನ್‌ಲೈನ್ ಬೋಧನೆ-ಕಲಿಕೆ ಯಶಸ್ವಿಯಾಗಿದ್ದರೆ ಅದರ ಹಿಂದೆ ಅಲ್ಲಿನ ಮೂಲಭೂತ ಸೌಕರ್ಯ, ವಿದ್ಯಾರ್ಥಿ ಹಾಗೂ ಅಧ್ಯಾಪಕರಿಗೆ ನೀಡಲಾಗಿರುವ ಹೆಚ್ಚುವರಿ ತರಬೇತಿಯ ಪಾತ್ರ ಇದೆ. ಅಲ್ಲಿ ಪ್ರತಿಕ್ರಿಯಾತ್ಮಕ ಅಧ್ಯಯನ ಸಾಮಗ್ರಿಗಳು, ಆನ್‌ಲೈನ್ ಪರೀಕ್ಷಾ ವ್ಯವಸ್ಥೆ, ತೆರೆದ ಪುಸ್ತಕದ ಪರೀಕ್ಷೆ- ಎಲ್ಲವೂ ಸಾಕಷ್ಟು ಮೊದಲಿನಿಂದಲೂ ಜಾರಿಯಲ್ಲಿದೆ. ನಮಗೆ ಎದುರಾಗಿರುವ ಪರಿಸ್ಥಿತಿ ತೀರಾ ಅನಿರೀಕ್ಷಿತವಾದದ್ದು.

ಭಾರತದ ಒಟ್ಟಾರೆ ಜನಸಂಖ್ಯೆಯ ಪೈಕಿ ಶೇ. 32.5ರಷ್ಟು ಮಂದಿ ನಗರಗಳಲ್ಲಿದ್ದಾರೆ, ಶೇ. 67.5ರಷ್ಟು ಹಳ್ಳಿಗಳಲ್ಲಿದ್ದಾರೆ. ನಮ್ಮ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಸುಮಾರು 60 ಕೋಟಿ. ಅಂದರೆ ಅರ್ಧಕ್ಕಿಂತಲೂ ಕಡಿಮೆ. ಅವರಲ್ಲಿಯೂ ಮೊಬೈಲ್ ಇಂಟರ್ನೆಟ್ ಬಳಕೆದಾರರೇ ಹೆಚ್ಚು. ಟ್ರಾಯ್ ವರದಿ ಪ್ರಕಾರ, ಹಳ್ಳಿಗಳಲ್ಲೇ ಮುಕ್ಕಾಲು ಪಾಲು ಜನರಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 25. ಉಳಿದಿರುವ ಜನರಷ್ಟೇ ನಗರಗಳಲ್ಲಿದ್ದರೂ ಅಲ್ಲಿನ ಇಂಟರ್ನೆಟ್ ಸಾಂಧ್ರತೆ ಶೇ. 97. ಇದು ನಮ್ಮ ದೇಶದ ಡಿಜಿಟಲ್ ಕಂದಕದ ಆಳ-ಅಗಲ. ಹೀಗಾಗಿ ನಮ್ಮಲ್ಲಿ ಆನ್‌ಲೈನ್ ಕಲಿಕೆಯ ಪರಿಣಾಮಕಾರಿ ಅನುಷ್ಠಾನ ಅಷ್ಟು ಸುಲಭದ ಕೆಲಸವೇನೂ ಅಲ್ಲ.

ನಮ್ಮ ಬಹುತೇಕ ವಿದ್ಯಾರ್ಥಿಗಳು ಹಳ್ಳಿಗಳಲ್ಲಿದ್ದಾರೆ. ಮೊಬೈಲ್ ಹೊಂದಿರುವ ವಿದ್ಯಾರ್ಥಿಗಳಿದ್ದರೂ ಮೊಬೈಲ್ ಇಲ್ಲದ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚು. ಅನೇಕ ಕಡೆ ಆನ್‌ಲೈನ್ ಕಲಿಕಾ ವ್ಯವಸ್ಥೆ ಸುಗಮವಾಗಿ ಕಾರ್ಯನಿರ್ವಹಿಸಬಲ್ಲ ೪ಜಿ ನೆಟ್‌ವರ್ಕ್ ಇಲ್ಲ. ಆನ್‌ಲೈನ್ ಪಾಠಗಳನ್ನು ಶೇ. 60ರಷ್ಟು ವಿದ್ಯಾರ್ಥಿಗಳು ಬಳಸುತ್ತಿದ್ದಾರೆ ಎಂದರೂ ಉಳಿದ ಶೇ. 40 ವಿದ್ಯಾರ್ಥಿಗಳ ಕಥೆಯೇನು? ಅವರನ್ನು ಬಿಟ್ಟು ನಾವು ಮುಂದಕ್ಕೆ ಹೋಗುವುದಾದರೂ ಹೇಗೆ? ಡಿಜಿಟಲ್ ಕಂದಕದ ನಡುವೆ ನಮ್ಮ ವಿದ್ಯಾರ್ಥಿಗಳು ಸಿಲುಕಿಕೊಳ್ಳದಂತೆ ನೋಡಿಕೊಳ್ಳುವುದು ಶಿಕ್ಷಣ ವಲಯದ ದೊಡ್ಡ ಜವಾಬ್ದಾರಿ. ಜತೆಗೆ ಅಧ್ಯಾಪಕರಿಗೂ ಶಿಕ್ಷಕರಿಗೂ ವಿಶೇಷ ತರಬೇತಿಯ ಅಗತ್ಯವೂ ಇದೆ. ತರಗತಿ ಪಾಠಪ್ರವಚನಗಳಿಗೆ ಆನ್‌ಲೈನ್ ಶಿಕ್ಷಣ ಸಂಪೂರ್ಣವಾಗಿ ಪರ್ಯಾಯವೂ ಆಗಲಾರದು ಎಂಬದೂ ಗಮನಾರ್ಹ.

ಸಾಗಬೇಕಿರುವ ದಾರಿ ಬಲುದೂರ ಇದೆ. ಆದರೆ ಕೊರೋನಾ ಆ ದಾರಿಯ ಅನಿವಾರ್ಯ, ಇತಿಮಿತಿ ಹಾಗೂ ಅಗತ್ಯ ತಯಾರಿಗಳ ಕುರಿತು ನಾವು ಯೋಚಿಸುವಂತೆ ಮಾಡಿದೆ.

-ಸಿಬಂತಿ ಪದ್ಮನಾಭ ಕೆ. ವಿ. 

ಕಾಮೆಂಟ್‌ಗಳಿಲ್ಲ: