ಸೋಮವಾರ, ಏಪ್ರಿಲ್ 22, 2019

ಸಾಕ್ಷರತೆಯೇ ಶಿಕ್ಷಣವಲ್ಲ: ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಹತ್ತು ಹಾದಿಗಳು

ಕನ್ನಡಪ್ರಭ 'ವಿದ್ಯಾಕುಸುಮ' ವಿಶೇಷ ಸಂಚಿಕೆ-2019ರಲ್ಲಿ ಪ್ರಕಟವಾದ ಲೇಖನ

ನಾಳೆಯೇ ಪರೀಕ್ಷೆ. ಎರಡನೇ ತರಗತಿಯ ಮಗು ತರಾತುರಿಯಿಂದ ಪೆನ್ಸಿಲು, ರಬ್ಬರು, ಮೆಂಡರು ಎಂದೆಲ್ಲ ಪ್ಯಾಕ್ ಮಾಡಿಕೊಳ್ಳುತ್ತಿತ್ತು. ಎರಡನೇ ತರಗತಿಯವರಿಗೇನು ಮಹಾ ಪರೀಕ್ಷೆ ಅಂದುಕೊಂಡಿರಾ? ಆ ಮಗುವಿನ ಮಟ್ಟಿಗೆ ಅದು ದೊಡ್ಡ ವಿದ್ಯಮಾನವೇ. ಅದು ಐಎಎಸ್ ಪರೀಕ್ಷೆಗೆ ತಯಾರಾಗುವವರಂತೆ ಸಿದ್ಧತೆ ಮಾಡಿಕೊಳ್ಳುವುದನ್ನು ನೋಡುವುದೇ ಚಂದ. ಅಷ್ಟರಲ್ಲಿ ಊರಿಂದ ಅಜ್ಜಿಯ ಫೋನು. 'ಅಮ್ಮಾ, ಅಜ್ಜಿಯ ಬಳಿ ನಾನು ಸ್ವಲ್ಪ ಮಾತಾಡಬೇಕು. ಫೋನ್ ಕೊಡು’ ಮಗು ಅಮ್ಮನ ಬೆನ್ನು ಹಿಡಿಯಿತು. ಈ ಅಜ್ಜಿ-ಪುಳ್ಳಿಯ ಉಭಯಕುಶಲೋಪರಿ ಸಾಂಪ್ರತ ಇದ್ದದ್ದೇ. ಅಮ್ಮ ಫೋನ್ ಕೊಟ್ಟಳು.

ಕನ್ನಡಪ್ರಭ | ವಿದ್ಯಾಕುಸುಮ | ವಿಶೇಷ ಸಂಚಿಕೆ-2019
'ಅಜ್ಜಿ, ನಾಳೆಯಿಂದ ಪರೀಕ್ಷೆ. ನಂಗೆ ನಿನ್ನ ಆಶೀರ್ವಾದ ಬೇಕು...’ ಮೊಮ್ಮಗುವಿನ ಡೈಲಾಗು ಕೇಳಿ ಅತ್ತಲಿಂದ ಅಜ್ಜಿಗೆ ನಗುವೋ ನಗು. ಒಳಗೊಳಗಿಂದ ಸಂಭ್ರಮ. ಇತ್ತಲಿಂದ ಈ ಸಂಭಾಷಣೆ ಕೇಳಿಸಿಕೊಳ್ಳುತ್ತಿದ್ದ ಅಮ್ಮನಿಗೆ ಸೋಜಿಗ: ಎಲಾ! ನಂಗೆ ನಿನ್ನ ಆಶೀರ್ವಾದ ಬೇಕು- ಇನ್ನೂ ಎಂಟು ವರ್ಷ ತುಂಬದ ಮಗುವಿನ ಬಾಯಲ್ಲಿ ಎಂಥಾ ಮಾತು! ಯಾರೋ ಹೇಳಿಕೊಟ್ಟ ಮಾತಲ್ಲ ಅದು, ಅನಾಯಾಸವಾಗಿ ಬಂದ ಪುಟ್ಟ ಮನಸಿನ ಕೋರಿಕೆ.

ನಂಗೆ ಆಲ್ ದಿ ಬೆಸ್ಟ್ ಹೇಳಲ್ವಾ ಅಂತ ಮಗು ಕೇಳಿದ್ದರೆ ಆಕೆಗೆ ಅಷ್ಟು ಸೋಜಿಗವೆನಿಸುತ್ತಿರಲಿಲ್ಲವೇನೋ? ಇಂತಹ ಪ್ರಬುದ್ಧ ಮಾತೊಂದು ಅಷ್ಟು ಸಣ್ಣ ಮಗುವಿನ ಬಾಯಿಂದ ಹೇಗೆ ಬಂತು? ಯೋಚಿಸಿದ ಅವಳಿಗೆ ತಕ್ಷಣ ಉತ್ತರ ಹೊಳೆಯಿತು: ಯೆಸ್, ಅದು ಯಕ್ಷಗಾನದ ಆಶೀರ್ವಾದ! ಮಗು ಇರುವುದು ನಗರದಲ್ಲೇ ಆದರೂ ಮನೆ ತುಂಬ ಯಕ್ಷಗಾನದ ವಾತಾವರಣ. ದಿನ ಬೆಳಗಾದರೆ ಬಲ್ಲಿರೇನಯ್ಯ! ಸ್ವರ್ಗಲೋಕಕ್ಕೆ ಯಾರೆಂದು ಕೇಳಿದ್ದೀರಿ! ಯಕ್ಷಗಾನ ಅದಕ್ಕೆ ಊಟ-ತಿಂಡಿ-ಚಾಕಲೇಟಿನಷ್ಟೇ ಸಹಜ. ಆಗಲೇ ಏಳೆಂಟು ಬಾರಿ ಬಣ್ಣ ಹಚ್ಚಿ ಗೆಜ್ಜೆ ಕಟ್ಟಿ ವೇದಿಕೆಯಲ್ಲಿ ಪುಟಪುಟನೆ ಹೆಜ್ಜೆ ಹಾಕಿದ್ದೂ ಆಗಿದೆ.

'ವೈರಿಗಳಿಂದ ಆಪತ್ತೇ? ಬಿಡಿ ಚಿಂತೆ. ಇದೋ ನಿಮ್ಮ ಸಿಡಿಲಮರಿ ಬಂದಿದ್ದೇನೆ. ಅಪ್ಪಣೆ ಕೊಟ್ಟರೆ ಅರೆಕ್ಷಣದಲ್ಲಿ ಅವರನ್ನು ನಿವಾರಿಸಿ ಬರುತ್ತೇನೆ. ಆಶೀರ್ವದಿಸಿ ಕಳುಹಿಸಿ...’ ರಂಗಸ್ಥಳದಲ್ಲಿ ಅಂತಹ ಡೈಲಾಗುಗಳನ್ನು ಅದೆಷ್ಟೋ ಬಾರಿ ಆ ಮಗು ಒಪ್ಪಿಸಿದ್ದಿದೆ. ಆ ಕ್ಷಣಕ್ಕೆ ಅದು ಬರೀ ಡೈಲಾಗು. ವೇಷ ಬಿಚ್ಚಿ ಬಣ್ಣ ತೆಗೆದ ಮೇಲೆ ಪಾತ್ರಕ್ಕೂ ಅದಕ್ಕೂ ಸಂಬಂಧವಿಲ್ಲ. ಆದರೆ ಯಾವುದೇ ಕಲೆಯ ಪ್ರಭಾವ ಅಷ್ಟಕ್ಕೇ ಸೀಮಿತವಲ್ಲ. ಅದು ಎಳೆಬಿಸಿಲಿನ ಸೋನೆಯಂತೆ ಪಾತ್ರಧಾರಿಯ ಮನಸ್ಸಿನೊಳಗೆ ಮೆಲ್ಲಮೆಲ್ಲಗೆ ಜಿನುಗತೊಡಗುತ್ತದೆ. ಅದು ನಾಡಿಗಳೊಳಗಿನ ರಕ್ತದ ಹರಿವಿನಷ್ಟೇ ಸಹಜ ಮತ್ತು ಅಜ್ಞಾತ.

ಒಳಗೆ ಇಳಿದದ್ದೆಲ್ಲ ಯಾವುದೋ ಒಂದು ರೂಪದಲ್ಲಿ ಇನ್ಯಾವುದೋ ಸಮಯದಲ್ಲಿ ಹೊರಗೆ ಕಾಣಿಸತೊಡಗುತ್ತದೆ. ನಾವು ಅದನ್ನೇ ವ್ಯಕ್ತಿತ್ವ ಎಂದು ಕರೆಯುತ್ತೇವೆ. ಎಲ್ಲೋ ಕೇಳಿದ ಮಾತು, ಇನ್ನೆಲ್ಲೋ ನೋಡಿದ ಘಟನೆ ಗೊತ್ತಿಲ್ಲದಂತೆಯೇ ವ್ಯಕ್ತಿಯ ಗುಣದ ಒಂದು ಭಾಗವೇ ಆಗಿಬಿಡುತ್ತದೆ. ಒಳ್ಳೆಯದರ ಸಹವಾಸದಿಂದ ಒಳ್ಳೆಯದೂ, ಕೆಟ್ಟದ್ದರ ಒಡನಾಟದಿಂದ ಕೆಟ್ಟದ್ದೂ ಪ್ರತಿಫಲಿಸುತ್ತದೆ ಎಂಬ ಮಾತು ನಾಗರಿಕತೆಯಷ್ಟೇ ಹಳೆಯದು ಅಲ್ಲವೇ?

'ಹೂವಿಗೆ ಸುಗಂಧ ಹೇಗೆಯೋ, ಹಾಗೆಯೇ ಮನುಷ್ಯನಿಗೆ ವ್ಯಕ್ತಿತ್ವ’ ಎನ್ನುತ್ತಾನೆ ಚಾರ್ಲ್ಸ್ ಶ್ವಾಬ್. ಸುಗಂಧ ಇಲ್ಲದ ಹೂವಿಗೂ ಪ್ಲಾಸ್ಟಿಕ್ಕಿಗೂ ಏನೂ ವ್ಯತ್ಯಾಸ ಇಲ್ಲ. ವ್ಯಕ್ತಿತ್ವ ಎಂಬ ಸುಗಂಧವಿಲ್ಲದ ಮನುಷ್ಯನಿಗೂ ಬಂಡೆಗಲ್ಲಿಗೂ ಏನೂ ವ್ಯತ್ಯಾಸ ಇಲ್ಲ. ವ್ಯಕ್ತಿತ್ವ ಸುಗಂಧವಷ್ಟೇ ಅಲ್ಲ, ಭೂಷಣ ಕೂಡ. ವಿದ್ಯೆಯಿಂದ ವಿನಯವೂ, ವಿನಯದಿಂದ ವ್ಯಕ್ತಿತ್ವವೂ, ವ್ಯಕ್ತಿತ್ವದಿಂದ ಸಂಪತ್ತೂ, ಸಂಪತ್ತಿನಿಂದ ಸುಖ ಸಂತೋಷವೂ ಲಭಿಸುತ್ತದೆ ಎಂಬ ಹಿರಿಯರ ಮಾತಿನ ಮರ್ಮವೂ ಇದೇ.

ವಿದ್ಯೆಯಿಂದ ವ್ಯಕ್ತಿತ್ವ ಲಭಿಸುವುದಾದರೆ ಆ ವಿದ್ಯೆ ನಾಲ್ಕು ಗೋಡೆಗಳ ನಡುವೆ ನಡೆಯುವ ಪಾಠಪ್ರವಚನದಿಂದ ದೊರೆಯುವ ತಿಳುವಳಿಕೆ ಮಾತ್ರ ಅಲ್ಲ. ಅದೊಂದು ಬಹುಮುಖ ಕಲಿಕೆ. ದೇಶದ ಭವಿಷ್ಯ ತರಗತಿ ಕೊಠಡಿಗಳಲ್ಲಿ ರೂಪುಗೊಳ್ಳುತ್ತದೆ ಎಂಬ ಮಾತೇನೂ ಸುಳ್ಳಲ್ಲ, ಆದರೆ ಇಲ್ಲಿ ತರಗತಿ ಕೊಠಡಿ ಎಂಬ ಪದ ಇಡೀ ಶಿಕ್ಷಣವನ್ನು ಪ್ರತಿನಿಧಿಸುತ್ತದೆ. ಶಿಕ್ಷಣ ಎಂದರೆ ಬರಿಯ ಪಠ್ಯಪುಸ್ತಕದ ಓದಲ್ಲ.

'ಸಾಕ್ಷರತೆಯೇ ಶಿಕ್ಷಣ ಅಲ್ಲ. ಅದು ಶಿಕ್ಷಣದ ಆರಂಭವೂ ಅಲ್ಲ, ಅಂತ್ಯವೂ ಅಲ್ಲ. ಶಿಕ್ಷಣ ಎಂದರೆ ಮಗು ಮತ್ತು ಮನುಷ್ಯನ ದೇಹ, ಮನಸ್ಸು ಮತ್ತು ಅಂತರ್ಯದಲ್ಲಿರುವ ಅತ್ಯುತ್ತಮವಾದದ್ದನ್ನು ಹೊರತರುವ ವಿಧಾನ’ ಎಂಬ ಗಾಂಧೀಜಿಯವರ ಮಾತೂ ಇದನ್ನೇ ಧ್ವನಿಸುತ್ತದೆ. 'ಶಿಕ್ಷಣ ಎಂದರೆ ಮನುಷ್ಯನಲ್ಲಿ ಈಗಾಗಲೇ ಇರುವ ಪರಿಪೂರ್ಣತೆಗೆ ಮೂರ್ತರೂಪ ಕೊಡುವ ವಿಧಾನ’ ಎಂಬ ವಿವೇಕಾನಂದರ ಮಾತಿನಲ್ಲೂ ಇದೇ ಅರ್ಥವಿದೆ.

ಮನುಷ್ಯನ ವ್ಯಕ್ತಿತ್ವ ರೂಪಿಸುವ ಈ ಶಿಕ್ಷಣ ಒಂದು ನಿರಂತರ ಪ್ರಕ್ರಿಯೆ. ಅದು ಶಾಲೆ, ಕಾಲೇಜು, ಕುಟುಂಬ, ಸ್ನೇಹಿತರು, ಸಮಾಜ- ಹೀಗೆ ವಿವಿಧ ಸ್ತರಗಳಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ. ವ್ಯಕ್ತಿತ್ವವೆಂಬ ಶಿಲ್ಪಕ್ಕೆ ನೂರೆಂಟು ಶಿಲ್ಪಿಗಳು. ಅದರಲ್ಲೂ ಮಗುವಿನ ವ್ಯಕ್ತಿತ್ವ ವಿಕಸನದಲ್ಲಿ ಕುಟುಂಬದ, ಅಪ್ಪ-ಅಮ್ಮಂದಿರ ಪಾತ್ರ ಬಹುದೊಡ್ಡದು. ಪಠ್ಯೇತರವಾಗಿ ಮಕ್ಕಳ ವ್ಯಕ್ತಿತ್ವ ರೂಪಿಸುವ ಒಂದಷ್ಟು ಹಾದಿಗಳನ್ನು ಗಮನಿಸೋಣ:

1. ಸಂಗೀತ ಕಲಿಸಿ:
ಭಾರತಕ್ಕೆ ಶ್ರೇಷ್ಠ ವಿಜ್ಞಾನಿಗಳು, ಅನ್ವೇಷಕರು, ನ್ಯಾಯಪಂಡಿತರು ಬೇಕಿದ್ದರೆ ನಿಮ್ಮ ಮಕ್ಕಳಿಗೆ ಸಂಗೀತ ಕಲಿಸಿ... ಶಾಸ್ತ್ರೀಯ ಸಂಗೀತದ ಶಕ್ತಿ ಏನೆಂದರೆ ಅದು ವ್ಯಕ್ತಿಯೊಬ್ಬ ತೊಡಗಿರುವ ಇತರ ಕ್ಷೇತ್ರಗಳಲ್ಲಿಯೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಭಾರತೀಯ ಸಂಗೀತವೆಂಬುದು ಆಳ ಗಣಿತವನ್ನೂ ಸಂಕೀರ್ಣ ಸೌಂದರ್ಯವನ್ನೂ ತನ್ನೊಳಗಿರಿಸಿಕೊಂಡಿರುವ ಅತಿ ವಿಸ್ತಾರದ ಅಭಿವ್ಯಕ್ತಿ- ಇದು ಭಾರತೀಯ ಸಂಜಾತ ವಿಶ್ವಪ್ರಸಿದ್ಧ  ಗಣಿತಜ್ಞ ಮಂಜುಳ್ ಭಾರ್ಗವ ಅವರ ಮಾತು.

ನಿಮಗೆ ಒಂದು ಸಣ್ಣ ಅವಕಾಶ ಇದ್ದರೂ ನಿಮ್ಮ ಮಗುವಿಗೆ ಸಂಗೀತ ಕಲಿಸುವುದನ್ನು ತಪ್ಪಿಸಬೇಡಿ. ಮಗು ಸಂಗೀತ ಕಲಿಯುತ್ತಲೇ ತನ್ನಷ್ಟಕ್ಕೇ ವಿಶಿಷ್ಟವಾದ ಶಿಸ್ತೊಂದನ್ನು ರೂಢಿಸಿಕೊಳ್ಳುತ್ತದೆ. ಅದರ ಬೌದ್ಧಿಕ ತೀಕ್ಷ್ಣತೆ, ಸೃಜನಶೀಲತೆ, ಆತ್ಮವಿಶ್ವಾಸ, ಒಟ್ಟಾರೆ ವ್ಯಕ್ತಿತ್ವ ಹೂವಿನಂತೆ ಅರಳುತ್ತಾ ಹೋಗುತ್ತದೆ. ಸಂಗೀತದ ಶಕ್ತಿ ಅವ್ಯಕ್ತ, ಅದ್ಭುತ.

2. ಕಲೆಯತ್ತ ಸೆಳೆಯಿರಿ:
ನೃತ್ಯ, ಪೈಂಟಿಂಗ್, ನಾಟಕ, ಯಕ್ಷಗಾನ, ಕಸೂತಿ, ಕರಾಟೆ, ಭರತನಾಟ್ಯ... ಯಾವುದಾದರೂ ಒಂದು ಕಲೆಯಲ್ಲಿ ನಿಮ್ಮ ಮಗು ತೊಡಗುವಂತೆ ಮಾಡಿ. ಎಲ್ಲವನ್ನೂ ಕಲಿಸಬೇಕೆಂಬ ಆತುರ ಬೇಡ; ಅಥವಾ ತಾವು ಇಷ್ಟಪಟ್ಟದ್ದನ್ನೇ ಮಗು ಕಲಿಯಬೇಕು ಎಂಬ ಒತ್ತಾಯವೂ ಬೇಡ. ತನಗಿಷ್ಟವಾದ ಯಾವುದಾದರೂ ಒಂದನ್ನು ಕಲಿಯುವ ಅವಕಾಶವನ್ನು ಮಗುವಿಗೆ ಮಾಡಿಕೊಡಿ. ಯಾವುದೇ ಒಂದು ಕಲೆಯನ್ನು ಅಭ್ಯಾಸ ಮಾಡಿಕೊಂಡಿರುವ ಮಗು ಇತರ ಮಕ್ಕಳಿಗಿಂತ ತುಂಬ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ.

ನಾನು ನನ್ನ ಕಂಪೆನಿಗೆ ತಂತ್ರಜ್ಞರುಗಳನ್ನು ಆಯ್ಕೆಮಾಡುವಾಗ ಕೇವಲ ಅವರ ಇಂಜಿನಿಯರಿಂಗ್ ಪ್ರತಿಭೆಯನ್ನಷ್ಟನ್ನೇ ನೋಡುವುದಿಲ್ಲ. ಯಾವುದಾದರೂ ಲಲಿತಕಲೆಗಳಲ್ಲಿ ಅವರು ತರಬೇತಿ ಪಡೆದಿದ್ದಾರೆಯೇ ಎಂಬುದನ್ನು ಗಮನಿಸುತ್ತೇನೆ ಮತ್ತು ಅಂಥವರಿಗೆ ಆದ್ಯತೆ ನೀಡುತ್ತೇನೆ - ಇದು ಸಾಫ್ಟ್‌ವೇರ್ ದೈತ್ಯ 'ಆಪಲ್’ ಸಂಸ್ಥಾಪಕ ಸ್ಟೀವ್ ಜಾಬ್ಸ್ ಮಾತು. ಎಂತಹ ವಿದ್ಯೆಗೂ ಕಲೆಯೇ ಮೂಲತಳಹದಿ. ಕಲೆಯಿಂದ ಹದಗೊಂಡ ಮನಸ್ಸು ಮತ್ತು ಸಹೃದಯತೆ ವ್ಯಕ್ತಿತ್ವಕ್ಕೆ ಹಾಕುವ ಸುವರ್ಣ ಚೌಕಟ್ಟು.

3. ಆಟೋಟಗಳಲ್ಲಿ ತೊಡಗಿಸಿ:
ಕ್ರೀಡೆ ದೈಹಿಕವಾಗಿಯೂ ಮಾನಸಿಕವಾಗಿಯೂ ಮಗುವನ್ನು ಸದೃಢಗೊಳಿಸುತ್ತದೆ. ಸ್ವಸ್ಥ ದೇಹ ಮತ್ತು ಸ್ವಸ್ಥ ಮನಸ್ಸು ಪರಿಪೂರ್ಣ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳು. ತನಗಿಷ್ಟವಾದ ಆಟೋಟ ಕ್ರೀಡೆಗಳಲ್ಲಿ ನಿಮ್ಮ ಮಗು ತೊಡಗಿಸಿಕೊಳ್ಳುವುದನ್ನು ಪ್ರೋತ್ಸಾಹಿಸಿ.

ನಿಮ್ಮ ಮಗುವಿನ ಸಾಮರ್ಥ್ಯ ಯಾವ ಕ್ಷೇತ್ರದಲ್ಲಿದೆ ಎಂಬುದನ್ನು ಸೂಕ್ಷ್ಮವಾಗಿ ಗಮನಿಸಿ. ಅಂಕಪಟ್ಟಿ ತೂಕದ ಮೇಲೆಯೇ ಬುದ್ಧಿವಂತಿಕೆಯನ್ನು ಅಳೆಯಬೇಡಿ. ಪರ್ಸೆಂಟೇಜೇ ಸರ್ವಸ್ವ ಅಲ್ಲ. ಓದಿನಲ್ಲಿ ಹಿಂದಿರುವ ಮಗು ಆಟೋಟದಲ್ಲಿ ವಿಶೇಷ ಆಸಕ್ತಿ ಹೊಂದಿರಬಹುದು. ಅದನ್ನು ಗುರುತಿಸಿ ಪ್ರೋತ್ಸಾಹಿಸಿ. ಒತ್ತಾಯಕ್ಕೆ ಮಣಿದು ಯಾವುದೋ ಡಿಗ್ರಿ ಮಾಡಿ ನಿರುದ್ಯೋಗಿಯಾಗುವ ಮಗು ನಾಳೆ ಕ್ರೀಡಾ ಕ್ಷೇತ್ರದಲ್ಲಿ ಶಾಶ್ವತ ದಾಖಲೆಗಳನ್ನು ಮಾಡೀತು, ಬಲ್ಲವರಾರು?

4. ಅವಕಾಶಗಳನ್ನು ಬಾಚಿಕೊಳ್ಳಲಿ:
ಪಾಠ-ಪ್ರವಚನಗಳ ಹೊರತಾಗಿ ಶಾಲಾ ಕಾಲೇಜುಗಳಲ್ಲಿ ದೊರೆಯುವ ಪಠ್ಯೇತರ ವೇದಿಕೆಗಳನ್ನು ಮಕ್ಕಳು ಗರಿಷ್ಠ ಬಳಸಿಕೊಳ್ಳಲಿ. ಭಾಷಣ, ಚರ್ಚೆ, ಪ್ರಬಂಧ, ರಸಪ್ರಶ್ನೆ, ಗಾಯನ, ಕವನವಾಚನ ಇತ್ಯಾದಿ ಯಾವುದೇ ಸ್ಪರ್ಧೆಗಳಲ್ಲಿ ಭಾಗವಹಿಸುವ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳಲಿ. ಕಬ್ಸ್ & ಬುಲ್‌ಬುಲ್ಸ್, ರೋವರ‍್ಸ್ & ರೇಂಜರ್ಸ್, ಸ್ಕೌಟ್ಸ್ & ಗೈಡ್ಸ್, ಎನ್‌ಎಸ್‌ಎಸ್, ಎನ್‌ಸಿಸಿ- ಇತ್ಯಾದಿ ಯಾವುದಾದರೂ ಒಂದು ಗುಂಪು ಚಟುವಟಿಕೆಯಲ್ಲಾದರೂ ಪಾಲ್ಗೊಳ್ಳುವ ಅವಕಾಶವನ್ನೂ ತಪ್ಪಿಸಿಕೊಳ್ಳಬಾರದು.

ಅನೇಕ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಇವೆಲ್ಲ ಟೈಂವೇಸ್ಟ್ ಎಂಬ ಭಾವನೆ ಇದೆ. ಆದರೆ ಇಂತಹ ಅವಕಾಶಗಳನ್ನು ಬಾಚಿಕೊಳ್ಳುತ್ತಾ ಮಕ್ಕಳ ಜ್ಞಾನ, ಕೌಶಲ, ಆತ್ಮವಿಶ್ವಾಸ, ನಾಯಕತ್ವ, ಸಂಘಟನಾ ಶಕ್ತಿ ಬೆಳೆಯುತ್ತಾ ಹೋಗುತ್ತದೆ ಎಂಬುದು ಗಮನಾರ್ಹ. ಇವೆಲ್ಲ ಅತ್ಯುತ್ತಮ ವ್ಯಕ್ತಿತ್ವದ ವಿವಿಧ ಆಯಾಮಗಳೆಂಬುದನ್ನು ಮರೆಯಬಾರದು. ಇಂತಹ ಚಟುವಟಿಕೆಗಳಲ್ಲಿ ಭಾಗವಹಿಸುವ ವಿದ್ಯಾರ್ಥಿ ಉಳಿದವರಿಗಿಂತ ವಿಶಿಷ್ಟವಾಗಿ ಕಾಣಿಸಿಕೊಳ್ಳುತ್ತಾನೆ/ಳೆ.

5. ಹೋಲಿಕೆ ಬೇಡ:
ನಿಮ್ಮ ಮಗುವನ್ನು ದಯಮಾಡಿ ಯಾರೊಂದಿಗೂ ಹೋಲಿಸಬೇಡಿ. ಏಕೆಂದರೆ ಪ್ರತಿಯೊಂದು ಮಗುವೂ ವಿಶಿಷ್ಟ. ಅದಕ್ಕೆ ಅದರದ್ದೇ ಆದ ಬುದ್ಧಿವಂತಿಕೆ, ಸಾಮರ್ಥ್ಯ ಇದೆ. ಪರಸ್ಪರ ಹೋಲಿಸುವ ಮೂಲಕ ಮಗುವನ್ನು ಮಾನಸಿಕವಾಗಿ ಇನ್ನಷ್ಟು ದುರ್ಬಲಗೊಳಿಸುತ್ತೇವೆಯೇ ಹೊರತು ಯಾವ ಪ್ರಯೋಜನವೂ ಆಗುವುದಿಲ್ಲ.

6. ಮೊಬೈಲ್, ಟಿವಿ ನಿಯಂತ್ರಿಸಿ:
ಊಟಕ್ಕೆ ಉಪ್ಪಿನಕಾಯಿ ಇದ್ದರೆ ಒಳ್ಳೆಯದು. ಆದರೆ ಉಪ್ಪಿನಕಾಯಿಯೇ ಊಟ ಆಗಬಾರದು. ಮಕ್ಕಳಿಗೆ ಹೊಸ ಕಾಲದ ತಂತ್ರಜ್ಞಾನದ ಪರಿಚಯ ಇರಬೇಕು. ಆದರೆ ಮೊಬೈಲ್, ಕಂಪ್ಯೂಟರ್, ಟಿವಿಗಳೇ ಸರ್ವಸ್ವ ಆಗಬಾರದು. ಕಾರ್ಟೂನ್ ನೋಡುತ್ತ ಮಗು ಇನ್ನೊಂದು ಕಾರ್ಟೂನು ಆಗುತ್ತದೆಯೇ ಹೊರತು ಅದರ ಸೃಜನಶೀಲತೆ ಒಂದಿನಿತೂ ಅರಳುವುದಿಲ್ಲ.

7. ಮನೆಗೆಲಸಗಳಲ್ಲಿ ತೊಡಗಿಸಿ:
ಅಡುಗೆ, ಮನೆಯನ್ನು ಓರಣವಾಗಿರಿಸುವುದು ಮುಂತಾದ ಕೆಲಸಗಳಲ್ಲಿ ಸಾಧ್ಯವಾದಷ್ಟು ಮಕ್ಕಳನ್ನು ತೊಡಗಿಸಿಕೊಳ್ಳಿ. ಇದರಿಂದ ಮಗು ಮೊಬೈಲಿನಂತಹ ಚಟಕ್ಕೆ ಬೀಳುವುದೂ ಕಡಿಮೆಯಾಗುತ್ತದೆ, ಮನೆಗೆಲಸಗಳನ್ನೂ ಕಲಿಯುತ್ತದೆ. ಮಕ್ಕಳ ವ್ಯಕ್ತಿತ್ವ ವಿಕಸನದಲ್ಲಿ ಕೌಟುಂಬಿಕ ಸಮಯದ ಪಾಲು ತುಂಬ ದೊಡ್ಡದು.

8. ಸೋಲುವುದನ್ನು ಕಲಿಸಿ:
ನಿಮ್ಮ ಮಗು ಎಲ್ಲ ಕಡೆ ಗೆಲ್ಲಬೇಕೆಂದು ಬಯಸಬೇಡಿ. ಸೋಲುವುದನ್ನೂ ಕಲಿಸಿಕೊಡಿ. ಸಣ್ಣಪುಟ್ಟ ವೈಫಲ್ಯಗಳನ್ನು ದೊಡ್ಡದು ಮಾಡಬೇಡಿ. ಅದು ಸಹಜ ಎಂಬುದನ್ನು ಮಗುವಿಗೆ ಅರ್ಥೈಸಿಕೊಳ್ಳಲು ಸಹಾಯ ಮಾಡಿ. ಸೋಲು ಸಹಜ ಎಂಬುದನ್ನು ಮಗುವಿಗೆ ನಾವು ಹೇಳಿಕೊಡದಿದ್ದರೆ ಬದುಕಿನ ಯಾವುದೋ ಹಂತದಲ್ಲಿ ಎದುರಾಗುವ ಅನಿರೀಕ್ಷಿತ ಪರಾಜಯಗಳನ್ನು ಮಗು ಎದುರಿಸಲಾಗದೇ ಹೋದೀತು.

9. ಬೆರೆಯುವುದನ್ನು ಬೆಂಬಲಿಸಿ:
ಮಕ್ಕಳು ಸಮಾಜದೊಂದಿಗೆ ಬೆರೆಯುವುದನ್ನು ಪ್ರೋತ್ಸಾಹಿಸಿ. ದಿನದಲ್ಲಿ ಒಂದಿಷ್ಟು ಸಮಯವನ್ನು ಮಕ್ಕಳು ನೆರೆಹೊರೆಯ ಗೆಳೆಯರೊಂದಿಗೆ ಕಳೆಯಲಿ. ಓರಗೆಯವರೊಂದಿಗಿನ ಕಲಿಕೆ ಯಾವ ಪಠ್ಯದ ಕಲಿಕೆಗೂ ಸಾಟಿಯಲ್ಲ. ಕೌಟುಂಬಿಕ ಸಮಾರಂಭಗಳಲ್ಲಿ ಭಾಗವಹಿಸುವಾಗ ಮಕ್ಕಳನ್ನೂ ಕರೆದುಕೊಂಡು  ಹೋಗಿ. ಬಂಧುಮಿತ್ರರನ್ನು ಪರಿಚಯಿಸಿ. ಯಾರೊಂದಿಗೆ ಎಲ್ಲಿ ಹೇಗೆ ಮಾತನಾಡಬೇಕೆಂಬ ಕೌಶಲ ಮಕ್ಕಳಿಗೆ ತಾನಾಗೇ ಒಲಿಯುತ್ತದೆ.

10. ನಿಮ್ಮ ಬಗ್ಗೆ ಎಚ್ಚರ:
ನಿಮ್ಮ ಮಕ್ಕಳಿಗೆ ನೀವೇ ಎಲ್ಲದಕ್ಕಿಂತ ದೊಡ್ಡ ಮಾದರಿ. ಅಪ್ಪ-ಅಮ್ಮನಿಗಿಂತ ದೊಡ್ಡ ರೋಲ್ ಮಾಡೆಲ್ ಮಕ್ಕಳಿಗೆ ಬೇರೆ ಯಾರೂ ಇಲ್ಲ. ಮಕ್ಕಳೆದುರಿನ ನಿಮ್ಮ ಮಾತು-ವರ್ತನೆಗಳಲ್ಲಿ ಎಚ್ಚರದಿಂದ ಇರಿ. ಅವರು ನಿಮ್ಮನ್ನು ಸದಾ ಗಮನಿಸುತ್ತಿರುತ್ತಾರೆ ಮಾತ್ರವಲ್ಲ, ಅನುಸರಿಸುತ್ತಾರೆ. ತಂದೆ-ತಾಯಿಯಂತೆ ಮಗು, ನೂಲಿನಂತೆ ಸೀರೆ- ಎಂಬುದನ್ನು ಮರೆಯದಿರಿ. ಕಾಲ ಎಷ್ಟೇ ಮುಂದುವರಿದರೂ ಮನೆಯೇ ಮೊದಲ ಪಾಠ ಶಾಲೆ ಎಂಬ ಮಾತು ಹಳತಾಗುವುದಿಲ್ಲ.

ಕಾಮೆಂಟ್‌ಗಳಿಲ್ಲ: