ಮಾರ್ಚ್ 20, 2019ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ
ಮಾಗಿಯ ಚಳಿಯಿಂದ ಮುದುಡಿದ್ದ ಪ್ರಕೃತಿ ಮೆಲ್ಲಮೆಲ್ಲನೆ ಅರಳಿ ನಿಲ್ಲುವ ಕಾಲ. ಕೆಂದಳಿರಿನಿಂದ ಸಿಂಗರಿತಗೊಂಡ ವನರಾಜಿ. ರಸ್ತೆಯ ಇಕ್ಕೆಲಗಳಲ್ಲಿ ಚದುರಿಬಿದ್ದ ಹೂಪಕಳೆಗಳ ರಾಶಿ ರಾಶಿ. ಮರಗಿಡಗಳ ಕೊರಳುಗಳಿಂದ ಹೊರಹೊಮ್ಮುವ ಕೋಗಿಲೆ-ಕಾಜಾಣಗಳ ಇಂಪಾದ ಸಂಗೀತ. ಋತುಗಳ ರಾಜ ವಸಂತನ ಸ್ವಾಗತಕ್ಕೆ ನಿಸರ್ಗದೇವತೆ ಇಷ್ಟಾದರೂ ಸಿದ್ಧತೆ ಮಾಡಿಕೊಳ್ಳದಿದ್ದರೆ ಹೇಗೆ? ’ಸಗ್ಗದ ಬಾಗಿಲು ಅಲ್ಲಿಹುದಣ್ಣ! ನುಗ್ಗಿದರಲ್ಲೆ ತೆರೆಯುವುದಣ್ಣ! ಹಕ್ಕಿಯ ಟುವ್ವಿಯೊಳವಿತಿದೆಯಣ್ಣ, ಹೂವಿನ ಬಣ್ಣದೊಳಡಗಿದೆಯಣ್ಣ’ ಎಂದು ಕವಿ ಕುವೆಂಪು ಬಣ್ಣಿಸಿರುವುದು ಎಷ್ಟೊಂದು ಸಹಜವಾಗಿದೆ.
ಗೋಡೆಯ ಮೇಲಿನ ಕ್ಯಾನ್ವಾಸು ತುಂಬುವುದಕ್ಕೆ ಒಂದೆರಡು ಹಿಡಿ ಬಣ್ಣ ಸಾಕು. ಪ್ರಕೃತಿ ದೇವಿಯ ಕನಸುಗಳ ಕ್ಯಾನ್ವಾಸು ವರ್ಣಮಯವಾಗಬೇಕೆಂದರೆ ಟನ್ನುಗಟ್ಟಲೆ ಬಣ್ಣ ಬೇಕು. ಒಂದೆರಡು ವಿಧವೆಲ್ಲ ಸಾಲದು. ಕೆಂಪು, ಹಳದಿ, ಹಸುರು, ಕಿತ್ತಳೆ, ನೀಲಿ, ನೇರಳೆ... ನೂರೆಂಟು ಬಗೆ ಇರಬೇಕು. ಅವನ್ನೆಲ್ಲ ನಿರೀಕ್ಷೆಗಳ ಸಮುದ್ರದಲ್ಲಿ ಕಲಸಿ ಭರವಸೆಯೆಂಬ ಪಿಚಕಾರಿಗಳಲ್ಲಿ ಚೆಲ್ಲಾಡಬೇಕು. ಹೌದು, ಪ್ರಕೃತಿ ಮರಳಿ ಮರಳಿ ಅರಳುವುದಕ್ಕೆ ಬಣ್ಣಬಣ್ಣದ ಕನಸುಗಳ ಹೋಳಿಯೇ ನಡೆಯಬೇಕು.
ಪ್ರಕೃತಿಯಲ್ಲಿ ಸಂಭ್ರಮ ತುಂಬಿದಾಗ ಸಹಜವಾಗಿಯೇ ಅದು ಜನಜೀವನದಲ್ಲೂ ಪ್ರತಿಫಲಿಸಬೇಕು. ಆಗಲೇ ನಿಸರ್ಗದ ನಲಿವು ಜನಪದರ ಒಲವಾಗಿ ಮಾರ್ಪಡುತ್ತದೆ. ಕಹಿನೆನಪುಗಳ ನಿಟ್ಟುಸಿರು ವಸಂತನನ್ನು ಹಿಂಬಾಲಿಸುವ ಮಂದಮಾರುತನ ಅಲೆಯಲೆಗಳಲ್ಲಿ ಸೇರಿ ಮರೆಯಾಗಿಬಿಡುತ್ತದೆ. ಕೊನೆಯಲ್ಲಿ ಉಳಿಯುವುದು ಮಧುರ ಭಾವಗಳು ಮಾತ್ರ. ಕೆಟ್ಟದ್ದನ್ನು ಸುಟ್ಟು ಇಷ್ಟವಾದದ್ದನ್ನು ಮೂಟೆಕಟ್ಟುವ ಒಟ್ಟಂದದ ಹಬ್ಬವಲ್ಲವೇ ಹೋಳಿ?
ಜನಪದರ ಆಚರಣೆಗಳೆಲ್ಲವೂ ನಿಸರ್ಗಮೂಲದವು. ಆ ಕಾರಣಕ್ಕೇ ಅಲ್ಲಿ ಮೂಢನಂಬಿಕೆಗಳಿಲ್ಲ. ಅಲ್ಲಿರುವುದೇನಿದ್ದರೂ ನಂಬಿಕೆ, ನಂಬಿಕೆ ಮತ್ತು ನಂಬಿಕೆ ಮಾತ್ರ. ಆ ನಂಬಿಕೆಯೇ ಜನಪದರ ಬದುಕಿನ ಸಮೃದ್ಧತೆಯ ಮೂಲದ್ರವ್ಯ. ಬಣ್ಣಗಳ ಹಬ್ಬ ಹೋಳಿಯ ಹಿಂದೆಯೂ ಇಂತಹ ನಂಬಿಕೆಗಳ ಸಾಲುಸಾಲು ಕತೆಗಳಿವೆ. ಆದ್ದರಿಂದಲೇ ಕೆಲವರು ಅದನ್ನು ಹೋಳಿಯೆಂದರು, ಇನ್ನು ಕೆಲವರು ವಸಂತೋತ್ಸವವೆಂದರು, ಹಲವರು ಕಾಮನ ಹುಣ್ಣಿಮೆಯೆಂದರು, ಮತ್ತೆ ಕೆಲವರು ಕಾಮದಹನವೆಂದರು, ಉಳಿದವರು ಹೋಳಿಕಾ ದಹನವೆಂದರು. ನೂರು ಮಂದಿ ಸಾವಿರ ಹೆಸರುಗಳಿಂದ ಕರೆದರು.
ಅಂತೂ ಎಲ್ಲವೂ ಅಂತಿಮವಾಗಿ ಸಂಕೇತಿಸುವುದು ದುಷ್ಟಶಕ್ತಿಗಳೆದುರು ಒಳ್ಳೆಯತನದ ಗೆಲುವನ್ನು; ಮುರಿದ ಸಂಬಂಧಗಳ ಮರುಬೆಸುಗೆಯನ್ನು; ತಪ್ಪುಗಳನ್ನೆಲ್ಲ ಮರೆತು ಒಪ್ಪುಗಳನ್ನಷ್ಟೇ ಅಪ್ಪಿಕೊಳ್ಳುವ ಉದಾರತೆಯನ್ನು; ಹೊಸ ಭರವಸೆಯೊಂದಿಗೆ ಬದುಕಿನ ನೂತನ ಅಧ್ಯಾಯದ ಆರಂಭವನ್ನು. ಮಾರ್ಗ ಹೇಗೆಯೇ ಇರಲಿ, ಕೊನೆಯಲ್ಲಿ ತಲುಪುವ ಗಮ್ಯ ರಮ್ಯವಾಗಿರುತ್ತದೆ ಎಂಬ ವಿಶ್ವಾಸವೇ ತಾನೇ ನಾವೆಲ್ಲ ನಾಳೆಯ ಬೆಳಗನ್ನು ಕಾಯುವಂತೆ ಮಾಡುವುದು?
ಹೋಳಿಯ ಹಿಂದಿನ ಕಥೆ:
ಹೋಳಿಯ ಹಿಂದಿನ ಕಥೆಗಳು ಹಲವು. ಅವುಗಳಲ್ಲಿ ಕಾಮದಹನದ ಕಥೆ ಪ್ರಮುಖವಾದದ್ದು. ಬ್ರಹ್ಮನ ವರಬಲದಿಂದ ಕೊಬ್ಬಿದ ತಾರಕನೆಂಬ ರಾಕ್ಷಸನ ಉಪಟಳ ಮೂರು ಲೋಕಗಳಲ್ಲೂ ಮೇರೆ ಮೀರುತ್ತದೆ. ಸಜ್ಜನರು ಬದುಕುವುದು ಕಷ್ಟವಾಗುತ್ತದೆ. ಕಂಗೆಟ್ಟ ದೇವತೆಗಳು ಪರಿಹಾರ ಯಾಚಿಸಿ ಶಿವನ ಬಳಿಗೆ ಬರುತ್ತಾರೆ. ತಾರಕಾಸುರನ ಸಂಹಾರವಾಗಬೇಕಾದರೆ ಶಿವನೇ ಮನಸ್ಸು ಮಾಡಬೇಕು. ಆದರೆ ಗೌರಿಯಿಂದ ದೂರನಾದ ಆತ ಗಾಢ ತಪಸ್ಸಿನಲ್ಲಿದ್ದಾನೆ.
ಗೌರಿ ದಕ್ಷಯಜ್ಞದ ಪ್ರಕರಣದಲ್ಲಿ ಸ್ವಯಂದಹಿಸಿಹೋಗಿದ್ದಾಳೆ. ಆಕೆ ಮತ್ತೆ ಪರ್ವತರಾಜನ ಮಗಳಾಗಿ ಹುಟ್ಟಿ ತಾನೂ ಮತ್ತೆ ಶಿವನನ್ನು ಪತಿಯಾಗಿ ಪಡೆಯಬೇಕೆಂಬ ಹಂಬಲದಿಂದ ದೃಢ ತಪಸ್ಸಿನಲ್ಲಿ ತೊಡಗಿದ್ದಾಳೆ. ಇವರಿಬ್ಬರು ಒಂದಾದರಷ್ಟೇ ತಾರಕನನ್ನು ಕೊಲ್ಲಬಲ್ಲ ಶಕ್ತಿಯ ಜನನವಾದೀತು. ಆದರೆ ಇದು ಹೇಗೆ? ಮುಕ್ಕಣ್ಣನನ್ನು ತಪಸ್ಸಿನಿಂದ ಎಬ್ಬಿಸುವ ಧೈರ್ಯ ಯಾರಿಗಿದೆ? ಇದ್ದರೂ ಆತನ ಸಿಟ್ಟನ್ನು ಎದುರಿಸುವ ಸಾಮರ್ಥ್ಯ ಯಾರಿಗಿದೆ?
ದೇವತೆಗಳು ಬೇರೆ ದಾರಿ ಕಾಣದೆ ಕಾಮದೇವನಾದ ಮನ್ಮಥನ ಮೊರೆಹೊಗುತ್ತಾರೆ. ಮನ್ಮಥ ತನ್ನ ಪುಷ್ಪಬಾಣಗಳ ಮೂಲಕ ಶಿವನನ್ನು ತಪಸ್ಸಿನಿಂದ ವಿಚಲಿತಗೊಳಿಸಿ ಎಚ್ಚರವಾಗುವಂತೆ ಮಾಡುತ್ತಾನೆ. ಆದರೆ ತನ್ನ ತಪೋಭಂಗಕ್ಕೆ ಕಾರಣನಾದ ಕಾಮನನ್ನು ಶಿವ ತನ್ನ ಉರಿಗಣ್ಣಿನಿಂದ ಸುಟ್ಟೇಬಿಡುತ್ತಾನೆ. ಮನ್ಮಥನನ್ನು ಕಳೆದುಕೊಂಡ ರತಿ ತನಗಿನ್ನಾರು ಗತಿಯೆಂದು ಶಿವನ ಪಾದಕ್ಕೆ ಬಿದ್ದು ಬೇಡಿಕೊಳ್ಳುತ್ತಾಳೆ. ಮನಸ್ಸು ಕರಗಿದ ಈಶ್ವರನು ರತಿಯನ್ನು ಸಂತೈಸಿ, ಕಾಮನು ರತಿಗಷ್ಟೇ ಕಾಣಿಸಿಕೊಳ್ಳುವಂತೆ ಮಾಡುತ್ತಾನೆ. ಮುಂದೆ ಪರಶಿವನು ಪಾರ್ವತಿಯನ್ನು ವಿವಾಹವಾಗಿ ಅವರಿಂದ ಜನಿಸಿದ ಷಣ್ಮುಖ ತಾರಕನನ್ನು ಸಂಹರಿಸುತ್ತಾನೆ. ಲೋಕಕ್ಕೆ ಒಳಿತಾಗುತ್ತದೆ. ಇದು ಕಾಮದಹನ ಅಥವಾ ಕಾಮನ ಹುಣ್ಣಿಮೆಯ ಕಥೆ.
ಹೋಳಿಯ ಹಿಂದಿನ ಇನ್ನೊಂದು ಕಥೆ ಹಿರಣ್ಯಕಶಿಪುವಿಗೆ ಸಂಬಂಧಿಸಿದ್ದು. ಹರಿಭಕ್ತನಾದ ಪುತ್ರ ಪ್ರಹ್ಲಾದನ ಮನವೊಲಿಸಲು ಸೋತ ಹಿರಣ್ಯಕಶಿಪು ಹೇಗಾದರೂ ಮಾಡಿ ಆತನನ್ನು ಕೊಂದೇಬಿಡಬೇಕೆಂದು ತೀರ್ಮಾನಿಸುತ್ತಾನೆ. ಆದರೆ ಅವನನ್ನು ಕೊಲ್ಲುವ ಪಯತ್ನಗಳೆಲ್ಲವೂ ಪ್ರಹ್ಲಾದನ ಹರಿಭಕ್ತಿಯೆದುರು ವಿಫಲವಾಗುತ್ತವೆ. ಒಂದು ಹಂತದಲ್ಲಿ ಹಿರಣ್ಯಕಶಿಪು ಪ್ರಹ್ಲಾದನನ್ನು ಕೊಲ್ಲಲು ತನ್ನ ಸಹೋದರಿ ಹೋಳಿಕಾಳ ನೆರವು ಕೇಳುತ್ತಾನೆ. ಅಗ್ನಿನಿರೋಧವುಳ್ಳ ಬಟ್ಟೆಯನ್ನು ತೊಟ್ಟು ಹೋಳಿಕಾ ಪ್ರಹ್ಲಾದನನ್ನು ಎತ್ತಿಕೊಂಡು ಅಗ್ನಿಯನ್ನು ಪ್ರವೇಶಿಸುತ್ತಾಳೆ. ಆದರೆ ಬಟ್ಟೆ ಗಾಳಿಯಲ್ಲಿ ಹಾರಿಹೋಗಿ ಹೋಳಿಕಾ ಅಗ್ನಿಯಲ್ಲಿ ದಹಿಸಿಹೋಗುತ್ತಾಳೆ. ಪ್ರಹ್ಲಾದ ಹರಿಕೃಪೆಯಿಂದ ಸುರಕ್ಷಿತನಾಗಿರುತ್ತಾನೆ. ಹೋಳಿಕಾ ಸುಟ್ಟುಹೋದ ಹಿನ್ನೆಲೆಯ ಆಚರಣೆಯೇ ಹೋಳಿ ಹಬ್ಬ ಎಂಬುದು ಇಲ್ಲಿನ ಕಥೆ.
ಅಂತೂ ಎಲ್ಲ ಪಾಠಾಂತರಗಳ ಸಾರಾಂಶ ಇಷ್ಟೇ: ದುಷ್ಟಶಕ್ತಿಯ ಎದುರು ಒಳ್ಳೆಯತನದ ಗೆಲುವು ಎಂಬ ಲೋಕಾರೂಢಿ. ಚಳಿಗಾಲವೆಂಬ ಕಷ್ಟದ ಕವಚ ಹರಿದು ವಸಂತವೆಂಬ ಸುಖಸಂತೋಷದ ಆಗಮನವನ್ನೇ ಜನಪದರು ಪೌರಾಣಿಕ ಕಥೆಗಳ ಹಿನ್ನೆಲೆಯಲ್ಲಿ ಬಣ್ಣಗಳ ಹಬ್ಬವನ್ನಾಗಿ ಆಚರಿಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬಂದಿದೆ. ಪುರಾಣಗಳಲ್ಲಿ, ದಶಕುಮಾರ ಚರಿತೆಯಲ್ಲಿ, ಕಾಳಿದಾಸನ ಕಾವ್ಯಗಳಲ್ಲಿ, ಏಳನೇ ಶತಮಾನದ ರತ್ನಾವಳಿ ನಾಟಕದಲ್ಲಿ ಹೋಳಿ ಆಚರಣೆಯ ಉಲ್ಲೇಖಗಳಿವೆ. ಬ್ರಿಟಿಷರ ಆಡಳಿತ ಕಾಲದಲ್ಲೂ ಹೋಳಿಯನ್ನು ಒಂದು ವಿಶಿಷ್ಟ ಹಬ್ಬವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿತ್ತು.
ಆಚರಣೆಯ ವೈವಿಧ್ಯತೆ:
ಹೋಳಿ ಶುದ್ಧಾನುಶುದ್ಧ ಭಾರತೀಯ ಆಚರಣೆ. ಅದರಲ್ಲೂ ಉತ್ತರ ಭಾರತದಲ್ಲಿ ಭಾರೀ ಜನಪ್ರಿಯ. ಆ ಜನಪ್ರಿಯತೆಯ ಕಾರಣದಿಂದಲೇ ಅದಿಂದು ಇಡೀ ದೇಶವನ್ನು ಹಬ್ಬಿದ್ದಷ್ಟೇ ಅಲ್ಲದೆ ವಿದೇಶಗಳಲ್ಲೂ ವ್ಯಾಪಿಸಿಕೊಂಡಿದೆ.
ಎರಡು ದಿನದಿಂದ ತೊಡಗಿ ಒಂದು ವಾರದವರೆಗೆ ವಿವಿಧ ಅವಧಿಯ ಆಚರಣೆಗಳು ಭಾರತದಾದ್ಯಂತ ಪ್ರಚಲಿತದಲ್ಲಿವೆ. ಹೋಳಿಯ ಮುನ್ನಾದಿನ ರಾತ್ರಿ ಕಾಮದಹನದ ಪ್ರತೀಕವಾಗಿ ಅಗ್ನಿಯನ್ನು ರಚಿಸಿ ಅದರ ಸುತ್ತ ಹಾಡಿಕುಣಿದು ಸಂಭ್ರಮಿಸುವ ಪದ್ಧತಿ ಇದೆ. ಮರುದಿನ ಅಂದರೆ ಫಾಲ್ಗುಣ ಮಾಸ ಶುಕ್ಲಪಕ್ಷದ ಪೌರ್ಣಮಿಯ ದಿನ ಹೋಳಿಯ ಆಚರಣೆ. ಹೇಳಿಕೇಳಿ ಬಣ್ಣಗಳ ಹಬ್ಬ. ವಿವಿಧ ಬಗೆಯ ಬಣ್ಣಗಳನ್ನು ಪರಸ್ಪರ ಎರಚಿಕೊಂಡು ಸಂಭ್ರಮದಿಂದ ಓಡಾಡುವ ಓಕುಳಿಯಾಟವೇ ಅದರ ವಿಶೇಷತೆ.
ಯಾರು ಯಾರಿಗೇ ಬಣ್ಣ ಎರಚಿದರೂ ಆ ದಿನದಲ್ಲೊಂದು ವಿನಾಯಿತಿ. ಇಡೀ ದಿನ ಬಣ್ಣಗಳಲ್ಲಿ ಮಿಂದ ಮಂದಿ ಸಂಜೆ ವೇಳೆ ಹೊಸ ಉಡುಗೆ ತೊಡುಗೆಗಳನ್ನು ಧರಿಸಿ ಮನೆಮನೆಗೆ ಭೇಟಿ ನೀಡಿ ಶುಭಾಶಯ ಕೋರುವುದು, ಸಿಹಿತಿನಿಸುಗಳನ್ನು ಹಂಚಿಕೊಳ್ಳುವುದು ಸಂಪ್ರದಾಯ. ಜೋಳದ ಹಿಟ್ಟಿನ ಗುಜಿಯಾ ಮತ್ತು ಪಾಪ್ಡಿ ಹೋಳಿ ಹಬ್ಬದ ವಿಶೇಷ ತಿನಿಸುಗಳು. ರಾತ್ರಿಯಂತೂ ಸಾಂಸ್ಕೃತಿಕ ವೈವಿಧ್ಯತೆಯ ರಂಗು, ಮನಸ್ಸಿನಲ್ಲೆಲ್ಲ ಬಣ್ಣಗಳ ಗುಂಗು.
ಉತ್ತರ ಪ್ರದೇಶದ ಮಥುರಾದಲ್ಲಿ ಹೋಳಿ ಅತ್ಯಂತ ಜನಪ್ರಿಯ. ಹೋಳಿ ಹಬ್ಬದೊಂದಿಗೆ ರಾಧಾ-ಕೃಷ್ಣರ ಒಲುಮೆಯ ಕಥೆ ಬೆಸೆದುಕೊಂಡಿರುವುದೇ ಇದಕ್ಕೆ ಕಾರಣ. ಅಲ್ಲಿನ ಬ್ರಜ್ ಪ್ರದೇಶದಲ್ಲಿ ಬರೋಬ್ಬರಿ ೧೬ ದಿನಗಳ ಕಾಲ ಹೋಳಿಯ ಆಚರಣೆ ನಿರಂತರವಾಗಿ ನಡೆಯುತ್ತದೆ. ಸ್ವಾತಂತ್ರ್ಯ ಹೋರಾಟದ ಕಾಲದಲ್ಲಿ ಜನರನ್ನು ಸಂಘಟಿಸಲು ನಾನಾ ಸಾಹೇಬ್‌ನಂತಹ ಚಳುವಳಿಗಾರರು ಹೋಳಿಯನ್ನು ಒಂದು ಸಾಧನವನ್ನಾಗಿ ಬಳಸಿಕೊಂಡ ನಿದರ್ಶನಗಳಿವೆ. ಹಾಗೆಯೇ, ಸಿಖ್ಖರು ಮೂರು ದಿನಗಳ 'ಹೋಲಾ ಮೊಹಲ್ಲಾ’ ಆಚರಿಸುವುದಿದೆ. ಅವರಿಗದು ಗುರು ಗೋವಿಂದ ಸಿಂಗರಿಂದ ಆರಂಭಗೊಂಡ ಆತ್ಮರಕ್ಷಣಾ ಕಲೆಗಳ ಹಬ್ಬ. ಅಸ್ಸಾಮಿಗರಿಗೆ ಹೋಳಿ 'ಫಕುವಾ’ ಅಥವಾ 'ಫಗುವಾ’ ಆಗಿದ್ದರೆ ಒಡಿಶಾ ಮಂದಿಗೆ 'ಡೋಲಾ ಜಾತ್ರಾ’, ಬಂಗಾಳಿಯರಿಗೆ 'ಬಸಂತೋ ಉತ್ಸವ್’.
ಗುಜರಾತಿನ ದ್ವಾರಕಾಧೀಶ ದೇವಾಲಯದಲ್ಲಂತೂ 'ಧುಲೇಟಿ’ ಹೋಳಿಯ ಎರಡು ದಿನ ಭಾರೀ ಗೌಜಿ ಗದ್ದಲ. ತೆಂಗಿನಕಾಯಿ, ಜೋಳದ ತೆನೆಗಳನ್ನು ಅಗ್ನಿಗೆ ಅರ್ಪಿಸಿ ಕುಣಿದು ಕುಪ್ಪಳಿಸುವುದಲ್ಲದೆ ಮೊಸರುಕುಡಿಕೆ, ಮಾನವ ಪಿರಮಿಡ್‌ಗಳ ರಚನೆ ಇತ್ಯಾದಿಗಳೂ ಅಲ್ಲಲ್ಲಿ ನಡೆಯುತ್ತವೆ. ಉತ್ತರಾಖಂಡದಲ್ಲಿ ಶಾಸ್ತ್ರೀಯ ಸಂಗೀತ ಸಂಭ್ರಮದ 'ಕುಮಾನಿ ಹೋಳಿ’, ಗ್ರಾಮೀಣ ಪ್ರದೇಶಗಳಲ್ಲಿ 'ಬೈಠಕಿ ಹೋಳಿ’ ಇಲ್ಲವೇ 'ಖಡೀ ಹೋಳಿ’ ಸಾಮಾನ್ಯ. ಬಿಹಾರ, ಜಾರ್ಖಂಡ್, ಮಹಾರಾಷ್ಟ್ರ, ಮಣಿಪುರ, ಪಂಜಾಬ್, ಹಿಮಾಚಲ ಪ್ರದೇಶ, ಮಣಿಪುರಗಳಲ್ಲಂತೂ ವಿವಿಧ ರೀತಿಯ ಆಚರಣೆಗಳು ಚಾಲ್ತಿಯಲ್ಲಿವೆ. ವೈವಿಧ್ಯತೆಯಲ್ಲಿ ಏಕತೆಯೆಂಬ ಭಾರತದ ಅಂತಃಸತ್ವ ಸಾಕಾರಗೊಳ್ಳುವುದೇ ಹೋಳಿಯಂತಹ ಹಬ್ಬಗಳಲ್ಲಿ.
ವಿದೇಶಗಳಲ್ಲೂ ಬಣ್ಣಗಳ ಓಕುಳಿ:
ವಿದೇಶಗಳಲ್ಲಿ ಎಲ್ಲೆಲ್ಲ ಭಾರತೀಯ ಮೂಲದ ಜನತೆ ವಿಸ್ತರಿಸಿಕೊಂಡಿದ್ದಾರೋ ಅಲ್ಲೆಲ್ಲ ಹೋಳಿಯ ರಂಗೂ ವ್ಯಾಪಿಸಿಕೊಂಡಿದೆ. ದಕ್ಷಿಣ ಏಷ್ಯಾದ ಹಲವು ದೇಶಗಳು, ಜಮೈಕ, ಸುರಿನಾಮ್, ಗಯಾನ, ಟ್ರಿನಿಡಾಡ್ & ಟಬಾಗೊ, ದಕ್ಷಿಣ ಆಫ್ರಿಕಾ, ಮಲೇಷ್ಯಾ, ಇಂಗ್ಲೆಂಡ್, ಅಮೇರಿಕ, ಕೆನಡ, ಮಾರಿಷಸ್, ಫಿಜಿ, ಉತ್ತರ ಅಮೇರಿಕದ ಭಾಗಗಳಲ್ಲಿ ಹೋಳಿ ಜನಪ್ರಿಯ ಹಬ್ಬವೆನಿಸಿದೆ.
ಇತ್ತೀಚಿನವರೆಗೂ ಜಗತ್ತಿನ ಏಕೈಕ ಹಿಂದೂ ರಾಷ್ಟ್ರವೆಂದು ಅಧಿಕೃತವಾಗಿ ಕರೆಸಿಕೊಂಡಿದ್ದ ನೇಪಾಳದಲ್ಲಿ ಹೋಳಿ ವರ್ಣರಂಜಿತ ಹಬ್ಬ. ಅಲ್ಲಿ ಹೋಳಿಯ ಹಿನ್ನೆಲೆಯಲ್ಲಿ ಕೃಷ್ಣ-ರಾಧೆಯರ ಪ್ರೀತಿಯ ಕಥೆಯಿದೆ. ನೇವಾರ್ ಬೌದ್ಧರು ವಜ್ರಯೋಗಿನಿ ದೇವಾಲಯದಲ್ಲಿ ಸರಸ್ವತಿಯನ್ನು ಶ್ರದ್ಧಾಭಕ್ತಿಗಳಿಂದ ಪೂಜಿಸುವುದು ಚಾಲ್ತಿಯಲ್ಲಿದೆ. ಕಾಠ್ಮಂಡು, ನಾರಾಯಣಗಡ, ಪೊಖರಾ ಮೊದಲಾದೆಡೆ ಸಾಂಪ್ರದಾಯಿಕ ಹಾಡು-ಭಜನೆಗಳಿಂದ ಹೋಳಿ ಕಳೆಯೇರುತ್ತದೆ.
ದಕ್ಷಿಣ ಅಮೇರಿಕದ ಸುರಿನಾಮ್‌ನಲ್ಲಿ ಶೇ. 37ರಷ್ಟು ಭಾರತೀಯ ಮೂಲದ ಜನರಿದ್ದರೆ, ಗಯಾನಾದಲ್ಲಿ ಶೇ. 43ರಷ್ಟು ಅನಿವಾಸಿ ಭಾರತೀಯರಿದ್ದಾರೆ. ಇವರೆಲ್ಲ ಡಚ್ಚರ, ಬ್ರಿಟಿಷರ ಕಾಲದಲ್ಲಿ ತೋಟದ ಕಾರ್ಮಿಕರಾಗಿ ಭಾರತದಿಂದ ಅಲ್ಲಿಗೆ ಹೋಗಿ ನೆಲೆಸಿದ ಮಂದಿ. ಶತಮಾನಗಳ ಅಂತರದಲ್ಲಿ ಈಗ ಅಲ್ಲಿನವರೇ ಆಗಿಬಿಟ್ಟಿದ್ದಾರೆ. ಆದರೆ ಅವರು ಬೇರುಗಳನ್ನು ಮರೆತಿಲ್ಲ ಎಂಬುದಕ್ಕೆ ಸಂಭ್ರಮದಿಂದ ಆಚರಿಸುವ ಹೋಳಿಯೇ ಸಾಕ್ಷಿ.
ಪ್ರಕೃತಿಯ ಸೌಂದರ್ಯದ ಮಡಿಲಂತಿರುವ ಮಾರಿಷಸ್, ಫಿಜಿ ಎಂಬ ಹವಳದ ದಂಡೆಗಳ ಶ್ರೀಮಂತ ದ್ವೀಪಸಮೂಹ, ೪೦ ಲಕ್ಷ ಅನಿವಾಸಿ ಭಾರತೀಯರಿರುವ ಮಲೇಷ್ಯಾ, ಟ್ರಿನಿಡಾಡ್ & ಡೊಬಾಗೊ ಎಂಬ ವೆಸ್ಟ್ ಇಂಡೀಸ್‌ನ ಪ್ರಸಿದ್ಧ ಅವಳಿ ದ್ವೀಪಗಳು- ವರ್ಷಗಳು ಉರುಳಿದಂತೆ ಪ್ರಪಂಚದೆಲ್ಲೆಡೆ ಹೋಳಿಯ ಜನಪ್ರಿಯತೆ ವ್ಯಾಪಿಸುತ್ತಲೇ ಇದೆ. ನಮ್ಮ ನೆಲದ ಬಣ್ಣಗಳು ಬೆಳೆಯುತ್ತಲೇ ಇರಲಿ, ಅದು ಸಂತೋಷದ ವಿಷಯವೇ. ಬಣ್ಣಗಳೆಷ್ಟೇ ಇದ್ದರೂ ಅಂತಿಮವಾಗಿ ಎಲ್ಲವೂ ಒಂದೇ ಬಣ್ಣ ಎಂಬುದನ್ನು ನಾವು ಅರ್ಥಮಾಡಿಕೊಳ್ಳಬಲ್ಲೆವೇ?
ಮಾಗಿಯ ಚಳಿಯಿಂದ ಮುದುಡಿದ್ದ ಪ್ರಕೃತಿ ಮೆಲ್ಲಮೆಲ್ಲನೆ ಅರಳಿ ನಿಲ್ಲುವ ಕಾಲ. ಕೆಂದಳಿರಿನಿಂದ ಸಿಂಗರಿತಗೊಂಡ ವನರಾಜಿ. ರಸ್ತೆಯ ಇಕ್ಕೆಲಗಳಲ್ಲಿ ಚದುರಿಬಿದ್ದ ಹೂಪಕಳೆಗಳ ರಾಶಿ ರಾಶಿ. ಮರಗಿಡಗಳ ಕೊರಳುಗಳಿಂದ ಹೊರಹೊಮ್ಮುವ ಕೋಗಿಲೆ-ಕಾಜಾಣಗಳ ಇಂಪಾದ ಸಂಗೀತ. ಋತುಗಳ ರಾಜ ವಸಂತನ ಸ್ವಾಗತಕ್ಕೆ ನಿಸರ್ಗದೇವತೆ ಇಷ್ಟಾದರೂ ಸಿದ್ಧತೆ ಮಾಡಿಕೊಳ್ಳದಿದ್ದರೆ ಹೇಗೆ? ’ಸಗ್ಗದ ಬಾಗಿಲು ಅಲ್ಲಿಹುದಣ್ಣ! ನುಗ್ಗಿದರಲ್ಲೆ ತೆರೆಯುವುದಣ್ಣ! ಹಕ್ಕಿಯ ಟುವ್ವಿಯೊಳವಿತಿದೆಯಣ್ಣ, ಹೂವಿನ ಬಣ್ಣದೊಳಡಗಿದೆಯಣ್ಣ’ ಎಂದು ಕವಿ ಕುವೆಂಪು ಬಣ್ಣಿಸಿರುವುದು ಎಷ್ಟೊಂದು ಸಹಜವಾಗಿದೆ.
ವಿಜಯ ಕರ್ನಾಟಕ, 20-03-2019 |

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ