ಮಂಗಳವಾರ, ಜನವರಿ 2, 2018

ಮಾನವೀಯತೆಯೆಂಬ ದೈವತ್ವ

'ಬೋಧಿವೃಕ್ಷ' 16-22 ಡಿಸೆಂಬರ್ 2017 ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಅವನು ದನಮಾಝಿ. ಒಡಿಶಾ ಜಿಲ್ಲೆಯ ಬುಡಕಟ್ಟು ಜನಾಂಗಕ್ಕೆ ಸೇರಿದ ಕಡುಬಡವ. ಕ್ಷಯರೋಗದಿಂದ ನರಳುತ್ತಿದ್ದ ಪತ್ನಿಯನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ಸೇರಿಸಿದ್ದ. ಆದರೆ ಅದೃಷ್ಟ ಕೈಹಿಡಿಯಲಿಲ್ಲ, ಪ್ರಾರ್ಥನೆಗಳು ಫಲಿಸಲಿಲ್ಲ. ಸಾವು ಬದುಕಿನ ನಡುವೆ ಹೋರಾಡಿದ ಆಕೆ ಎರಡು ದಿನಗಳ ಬಳಿಕ ಸಾವನ್ನಪ್ಪಿದಳು. ಇನ್ನೀಗ ಶವವನ್ನು ಊರಿಗೆ ಸಾಗಿಸಬೇಕು, ಅಂತ್ಯಕ್ರಿಯೆ ನಡೆಸಬೇಕು. ಬರಿಗೈದಾಸ ದನಮಾಝಿ ಬಾಡಿಗೆಗೆ ವಾಹನ ಗೊತ್ತುಮಾಡಿ ಶವವನ್ನು ಒಯ್ಯುವ ಸ್ಥಿತಿಯಲ್ಲಿರಲಿಲ್ಲ. ಒಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಎಂದು ಆಸ್ಪತ್ರೆ ಸಿಬ್ಬಂದಿಯನ್ನು ಗೋಗರೆದ. ಅವರೆಲ್ಲ ಬಂಡೆಗಲ್ಲುಗಳಂತೆ ಕುಳಿತಿದ್ದರು. ಪುಡಿಗಾಸೂ ಇಲ್ಲದ ಬಡಪಾಯಿಗೆ ನೆರವಾಗಿ ಅವರಿಗೇನೂ ಆಗಬೇಕಿರಲಿಲ್ಲ. ದನಮಾಝಿಗೆ ಬೇರೆ ದಾರಿಯಿರಲಿಲ್ಲ. ಹೆಂಡತಿಯ ಕಳೇಬರವನ್ನು ಬಟ್ಟೆಯಿಂದ ಸುತ್ತಿ ಹೆಗಲ ಮೇಲೆ ಹೊತ್ತು ನಡೆದೇ ನಡೆದ. ಒಂದೆರಡು ಫರ್ಲಾಂಗು ದೂರವಲ್ಲ, ಬರೋಬ್ಬರಿ ಹತ್ತು ಮೈಲಿ! ಅವನ ಹಿಂದೆಯೇ ಕಣ್ಣೀರಧಾರೆಯೊಂದಿಗೆ ಹೆಜ್ಜೆಹಾಕುತ್ತಿದ್ದಳು ಹನ್ನೆರಡು ವರ್ಷದ ಅಸಹಾಯಕ ಮಗಳು.

ಈ ಘಟನೆ ಕಂಡ ಕೆಲವು ಸ್ಥಳೀಯ ಪತ್ರಕರ್ತರು ಜಿಲ್ಲಾಡಳಿತಕ್ಕೆ ಸುದ್ದಿ ಮುಟ್ಟಿಸಿ, ಕೊನೆಗೂ ಅಂಬ್ಯುಲೆನ್ಸ್ ತರಿಸುವ ವ್ಯವಸ್ಥೆ ಮಾಡಿದರು. ಪತ್ನಿಯ ಶವ ಹೊತ್ತು ಮಗಳೊಂದಿಗೆ ಸಾಗುವ ದನಮಾಝಿಯ ದೌರ್ಭಾಗ್ಯವನ್ನು ಮರುದಿನ ಪತ್ರಿಕೆ-ಟಿವಿಗಳಲ್ಲಿ ಕಂಡ ಜನರು ಅಯ್ಯೋ ಎಂದು ಮರುಗಿದರು. ಆದರೆ ಕಾಲ ಮಿಂಚಿತ್ತು. ಈ ಪರಿಸ್ಥಿತಿಗೆ ಕಾರಣರಾದ ಮಂದಿಯ ಅಮಾನವೀಯತೆ ಜಗಜ್ಜಾಹೀರಾಗಿತ್ತು. ಗೌರವಯುತ ಬದುಕಂತೂ ಸಿಗಲಿಲ್ಲ, ಗೌರವಯುತವಾಗಿ ಸಾಯುವುದಕ್ಕೂ ನಿಮ್ಮಲ್ಲಿ ಅವಕಾಶವಿಲ್ಲವೇ ಎಂದು ಜಗತ್ತೇ ಕೇಳಿತು.

ಸ್ವಾತಂತ್ರ್ಯ ಬಂದು ಏಳು ದಶಕಗಳೇ ಕಳೆದುಹೋಗಿವೆ. ಬಡವ-ಹಿಂದುಳಿದವನೆಂಬ ಕಾರಣಕ್ಕೆ ವ್ಯಕ್ತಿಯೊಬ್ಬ ಶವವನ್ನು ಹೆಗಲ ಮೇಲೆ ಹೊತ್ತು ಹತ್ತಾರು ಮೈಲಿ ನಡೆಯುವ ಪರಿಸ್ಥಿತಿ ನಮ್ಮಲ್ಲಿದೆ ಎಂದಾದರೆ ನಮ್ಮ ಸ್ವಾತಂತ್ರ್ಯಕ್ಕಾಗಲೀ ಅಭಿವೃದ್ಧಿಗಾಗಲೀ ಮಾನವೀಯತೆಗಾಗಲೀ ಏನರ್ಥ? ಇನ್ನೊಬ್ಬನ ಕಷ್ಟಕ್ಕೆ ಮರುಗಲಾರದ ಮನಸ್ಸುಗಳು ಯಾವ ಹುದ್ದೆಯಲ್ಲಿದ್ದರೇನು, ಎಷ್ಟು ಸಂಪಾದಿಸಿದರೇನು? ದಯೆ, ಅನುಕಂಪ, ಸಹಾನುಭೂತಿ, ಪ್ರೀತಿ, ವಿಶ್ವಾಸಗಳಿಗೆ ಜಾತಿ-ಮತ-ಧರ್ಮ-ಪಂಥಗಳ ಹಂಗಿದೆಯೇ? ನಡೆವುದೊಂದೇ ಭೂಮಿ, ಕುಡಿವುದೊಂದೇ ನೀರು, ಸುಡುವಗ್ನಿಯೊಂದೇ ಇರುತಿರಲು, ಕುಲಗೋತ್ರ ಎತ್ತಣದು ಎಂಬ ಸರ್ವಜ್ಞಕವಿಯ ಮಾತು ಇನ್ನೂ ಒಂದು ಶತಮಾನ ದಾಟಿದರೂ ನಮ್ಮ ಸಮಾಜದ ನರನಾಡಿಗಳಲ್ಲಿ ಹರಿದಾಡುವುದೇ?

ಇಡೀ ಜಗತ್ತು ನಿಂತಿರುವುದೇ ಮಾನವೀಯತೆ-ನಂಬಿಕೆಗಳೆಂಬ ಪರಮ ಸತ್ಯಗಳ ಮೇಲೆ. ಭೂಮಿಯ ಮೇಲೆ ಮನುಷ್ಯ ಹುಟ್ಟಿಕೊಂಡಾಗ ಅವನಿಗೆ ಯಾವ ಜಾತಿಯಿತ್ತು? ಅವನು ಯಾವ ಮತಕ್ಕೆ ಸೇರಿದವನಾಗಿದ್ದ? ಹಾಗಾದರೆ ಇವೆಲ್ಲ ಹೇಗೆ ಹುಟ್ಟಿಕೊಂಡವು? ಇದು ಮೇಲ್ಜಾತಿ, ಅದು ಕೀಳ್ಜಾತಿ, ಇದು ಶ್ರೇಷ್ಠ ಕುಲ, ಅದು ಕನಿಷ್ಠ ಕುಲ ಎಂದು ವಿಂಗಡಣೆ ಮಾಡಿದವರು ಯಾರು? ಬಾಯಾರಿದವನಿಗೆ ಬೇಕಾದದ್ದು ನೀರು. ಹಸಿದವನಿಗೆ ಬೇಕಾದದ್ದು ಊಟ. ಜೀವ ಉಳಿಸಿಕೊಳ್ಳಲು ಬೇಕಾದದ್ದು ಗಾಳಿ. ಈ ನೀರು-ಗಾಳಿ-ಆಹಾರವೆಲ್ಲ ಯಾರ ಆಸ್ತಿ? ಯಾವ ಜಾತಿಗೆ ಸೇರಿದ್ದು? ಯಾವ ಕುಲಕ್ಕೆ ಸೇರಿದ್ದು? ಯಾವ ಧರ್ಮಕ್ಕೆ ಸೇರಿದ್ದು?

ನೀರಡಿಸಿ ಬಂದ ಸೋದರಗೆ ನೀರನು ಕೊಡಲು
ಮನುಧರ್ಮಶಾಸ್ತ್ರವೆನಗೊರೆಯಬೇಕೇನು?
ನೊಂದವನ ಕಂಬನಿಯನೊರೆಸಿ ಸಂತೈಸುವೊಡೆ
ಶಾಸ್ತ್ರಪ್ರಮಾಣವದಕಿರಲೆ ಬೇಕೇನು?
ಎಂದು ಕೇಳುತ್ತಾರೆ ಮಹಾಕವಿ ಕುವೆಂಪು. ಅವರ ಪ್ರಕಾರ 'ನಮ್ಮ ಹೃದಯವೇ ನಮಗೆ ಶ್ರೀಧರ್ಮಸೂತ್ರ’. ಸರಿಯಾದುದನ್ನು ಮಾಡಲು, ಇನ್ನೊಬ್ಬರಿಗೆ ಒಳ್ಳೆಯದನ್ನು ಬಯಸಲು ಯಾರು ಯಾರನ್ನೂ ಕೇಳಬೇಕಿಲ್ಲ. ಏಕೆಂದರೆ ಯಾರೂ ಮಾತನಾಡದಿದ್ದಾಗ ಕೇಳಿಸುವ ಮಾತು ಒಂದೇ- ಅದು ಅಂತರಂಗದ ಮಾತು. ಅದೇ ಮಾನವೀಯತೆ. ಅದು ಜೀವಂತವಾಗಿರುವುದರಿಂದಲೇ ಜಗತ್ತಿನಲ್ಲಿ ಇನ್ನೂ ಪ್ರಳಯವಾಗಿಲ್ಲ. ಅದನ್ನು ಬೊಟ್ಟು ಮಾಡಿಯೇ ಕವಿ ಕೇಳಿರುವುದು:
ಯಾವ ಕಾಲದ ಶಾಸ್ತ್ರವೇನು ಹೇಳಿದರೇನು?
ಎದೆಯ ದನಿಗೂ ಮಿಗಿಲು ಶಾಸ್ತ್ರವಿಹುದೇನು?
ಎಂದು. 'ಎದೆಯ ದನಿ ಧರ್ಮನಿಧಿ! ಕರ್ತವ್ಯವದುವೆ ವಿಧಿ! ನಂಬದನು! ಅದನುಳಿದು ಋಷಿಯು ಬೇರಿಲ್ಲ!’ ಎಂಬ ಸಾಲಿನಲ್ಲೂ ಮನಸ್ಸಿನ ಮಾತಿಗಿಂತ ದೊಡ್ಡ ಶಾಸ್ತ್ರಪ್ರಮಾಣ ಇನ್ನೊಂದಿಲ್ಲ ಎಂಬ ಮಹಾಭಾಷ್ಯವಿದೆ.

ದಿನಬೆಳಗಾದರೆ ನೂರೆಂಟು ಬಗೆಯ ಸಂಕಟದ ಸುದ್ದಿಗಳನ್ನು ಕೇಳುತ್ತೇವೆ, ಹತ್ತಾರು ಅಮಾನವೀಯ ಘಟನೆಗಳನ್ನು ನೋಡುತ್ತೇವೆ: ವರದಕ್ಷಿಣೆಗೆ ಪೀಡಿಸಿ ಹೆಣ್ಣಿನ ಹತ್ಯೆ, ಸಾಲ ತೀರಿಸಲಿಲ್ಲ ಎಂಬ ಕಾರಣಕ್ಕೆ ಜೀತ, ಕೆಳಜಾತಿಯವರೆಂಬ ಕಾರಣಕ್ಕೆ ದೇವಾಲಯ ಪ್ರವೇಶ ನಿಷೇಧ, ಸ್ತ್ರೀಭ್ರೂಣ ಹತ್ಯೆ, ಬಾಲಕಾರ್ಮಿಕ ಪಿಡುಗು, ಮೂರು ವರ್ಷದ ಮಗುವಿನ ಮೇಲೆ ಅತ್ಯಾಚಾರ... ನಾವು ಯಾವ ಯುಗದಲ್ಲಿ ಬದುಕುತ್ತಿದ್ದೇವೆ? ಅತ್ಯಾಚಾರ ಮಾಡಿದರೆ ನಾಳೆ ಗಲ್ಲುಶಿಕ್ಷೆ ಕಾದಿದೆ ಎಂಬ ಅರಿವಿಲ್ಲದೆ ಪ್ರತಿದಿನವೆಂಬಂತೆ ಸಾಮೂಹಿಕ ಅತ್ಯಾಚಾರಗಳು ನಡೆಯುತ್ತವೆಯೇ? ಖಂಡಿತ ಇಲ್ಲ. ಅವರಿಗದು ಚೆನ್ನಾಗಿಯೇ ತಿಳಿದಿದೆ. ಮರೆತು ಹೋಗುವ ಮಾನವೀಯತೆ, ಅದರಿಂದಾಗಿ ಮನಸ್ಸಿಗೆ ಕವಿಯುವ ಮಬ್ಬು, ತನ್ನಂತೆ ಪರರ ಬಗೆವ ಕನಿಷ್ಠ ಮನಸ್ಥಿತಿ ಇಲ್ಲದಿರುವುದೇ ಎಲ್ಲ ಪೈಶಾಚಿಕತೆಗಳಿಗೂ ಕಾರಣ.

ಕಳೆದ ವರ್ಷ ಹೊಸದಿಲ್ಲಿಯಲ್ಲಿ ನಡೆದ ಘಟನೆಯೊಂದನ್ನು ನೆನಪಿಸಿಕೊಳ್ಳಿ: ರಸ್ತೆ ಅಪಘಾತಕ್ಕೆ ತುತ್ತಾದ ವ್ಯಕ್ತಿಯೊಬ್ಬ ನೆರವಿಗೆ ಅಂಗಲಾಚುತ್ತ ರಕ್ತದ ಮಡುವಿನಲ್ಲಿ ಸುಮಾರು ಒಂದು ಗಂಟೆ ಹೊತ್ತು ಬಿದ್ದಿದ್ದು ಆಮೇಲೆ ಕೊನೆಯುಸಿರೆಳೆದ. ಹತ್ತಿರದ ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿತ್ತು. ಅದರ ಪ್ರಕಾರ ಒಬ್ಬ ವ್ಯಕ್ತಿ ಅಪಘಾತಕ್ಕೀಡಾದವನ ಮೊಬೈಲನ್ನೇ ಎತ್ತಿಕೊಂಡು ಹೋಗಿದ್ದ; ಹತ್ತಾರು ಮಂದಿ ವೀಡಿಯೋ ಮಾಡಿಕೊಂಡಿದ್ದರು; ಈ ಅವಧಿಯಲ್ಲಿ ಸುಮಾರು ನೂರೈವತ್ತು ಕಾರುಗಳು, ಎಂಬತ್ತು ರಿಕ್ಷಾಗಳು, ಇನ್ನೂರು ಬೈಕ್‌ಗಳು ಆ ದಾರಿಯಾಗಿ ಹಾದು ಹೋಗಿದ್ದವು, ಹಲವಾರು ಪಾದಚಾರಿಗಳು ನಡೆದುಹೋಗಿದ್ದರು. ಆದರೆ ಯಾರೊಬ್ಬರೂ ಅವನನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸುವ ಕೆಲಸ ಮಾಡಿರಲಿಲ್ಲ. ಸಕಾಲದಲ್ಲಿ ಚಿಕಿತ್ಸೆ ದೊರೆಯುತ್ತಿದ್ದರೆ ಅವನ ಪ್ರಾಣ ಉಳಿಯುತ್ತಿತ್ತು.

ಇಂತಹ ಅನೇಕ ಘಟನೆಗಳು ನಮ್ಮ ಜೀವನದಲ್ಲಿ ನಡೆಯುತ್ತಲೇ ಇರುತ್ತವೆ. ಅಪಘಾತ ನಡೆದು ಗಾಯಾಳುಗಳು ರಕ್ತದ ಮಡುವಿನಲ್ಲಿ ಬಿದ್ದಿದ್ದರೂ ಅವರ ನೆರವಿಗೆ ಧಾವಿಸುವುದಕ್ಕೆ ಜನರಿಗೆ ಭಯ. ಎಲ್ಲಿ ಆಸ್ಪತ್ರೆಗೆ ಸೇರಿಸಿದವರನ್ನೇ ಪೊಲೀಸರು ಹಿಡಿದುಕೊಳ್ಳುತ್ತಾರೋ, ನಾಳೆ ಸಾಕ್ಷಿ ಹೇಳಲು ಕೋರ್ಟು ಕಚೇರಿಗಳಿಗೆ ಅಲೆದಾಡಬೇಕಾಗುತ್ತದೋ ಎಂಬ ಆತಂಕ. ಅಪಘಾತಕ್ಕೀಡಾದವರನ್ನು ಆಸ್ಪತ್ರೆಗೆ ಸೇರಿಸಲು ಹಿಂದೆಮುಂದೆ ನೋಡಬೇಡಿ ಎಂದು ಖುದ್ದು ಸರ್ವೋಚ್ಛ ನ್ಯಾಯಾಲಯವೇ ಹೇಳಿದ್ದರೂ ಜನ ತಮಗೇಕೆ ಇಲ್ಲದ ತಂಟೆಯೆಂದು ಪಲಾಯನ ಮಾಡುವುದಿದೆ.

ಹಾಗೆಂದು ಇಡೀ ಲೋಕವೇ ಕೆಟ್ಟು ಹೋಗಿದೆಯೆಂದು ನಿರಾಶೆ ತಾಳಬೇಕಿಲ್ಲ. ಎಂತಹ ವಿಷಮ ಪರಿಸ್ಥಿತಿಯಲ್ಲೂ ಪರರಿಗೆ ಉಪಕರಿಸುವ ಉನ್ನತ ಮನಸ್ಥಿತಿಯ ಸಾವಿರಾರು ಮಂದಿ ನಮ್ಮ ನಡುವೆ ಇದ್ದಾರೆ. ಗರ್ಭಿಣಿಯರು, ವಿಕಲಾಂಗರು, ವೃದ್ಧರು, ಅಶಕ್ತರು, ಮಕ್ಕಳು, ಅಸಹಾಯಕರಿಗೆ ನೆರವಾಗುವ ನೂರೆಂಟು ಮಾನವೀಯ ಹೃದಯಗಳೂ ನಮ್ಮ ನಡುವೆ ಇವೆ. ಇವರನ್ನು ಕಂಡಾಗಲೆಲ್ಲ ಗಾಂಧೀಜಿಯವರ ಭರವಸೆ ಕಣ್ಣೆದುರಿಗೆ ಬರುತ್ತದೆ: 'ಮಾನವತೆಯಲ್ಲಿ ನಂಬಿಕೆ ಕಳೆದುಕೊಳ್ಳಬೇಡಿ. ಅದೊಂದು ಮಹಾಸಾಗರವಿದ್ದಂತೆ. ಸಾಗರದ ಕೆಲವು ಬಿಂದುಗಳು ಕೊಳಕಾಗಿವೆಯೆಂಬ ಕಾರಣಕ್ಕೆ ಇಡೀ ಸಾಗರವೇ ಕೊಳಕಾಗುವುದಿಲ್ಲ’. ಅಲ್ಲವೇ?

ಕಾಮೆಂಟ್‌ಗಳಿಲ್ಲ: