ಉದಯವಾಣಿ 'ಜೋಶ್' ಪುರವಣಿಯಲ್ಲಿ ಜನವರಿ 2, 2018ರಂದು ಪ್ರಕಟವಾದ ಲೇಖನ
'ಭಾನುವಾರ ಎಲ್ಲರೂ ಫ್ರೀ ಇದ್ದೀರೇನ್ರೋ? ನಿಮ್ಗೆಲ್ಲ ಓಕೆ ಅಂದ್ರೆ ದೇವರಾಯನದುರ್ಗಕ್ಕೆ ಒಂದು ಟ್ರೆಕ್ಕಿಂಗ್ ಹೋಗ್ಬರೋಣ’
ಅಂದಿದ್ದೇ ತಡ ಇನ್ನೇನು ಸೇತುವೆ ಕಟ್ಟಿಯೇ ಸಿದ್ಧ ಎಂದು ಹೊರಟ ವಾನರ ಸೈನ್ಯದಂತೆ ಇಡೀ ಕ್ಲಾಸು ಜೈ ಎಂದು ಎದ್ದು ನಿಂತಿತು. 'ಅಂದ್ರೆ ನಡ್ಕೊಂಡೇ ಹೋಗೋದಾ ಸಾರ್?’ ಎಂದು ಸೈನ್ಯದ ನಡುವಿನಿಂದ ಕೀರಲು ಅಶರೀರವಾಣಿಯೊಂದು ಕೇಳಿಬಂದದ್ದೂ, 'ಅಲ್ಲ ನನ್ ತಾತ ಫ್ಲೈಟ್ ತರ್ತಾರೆ, ಟೆನ್ಷನ್ ಮಾಡ್ಕೋಬೇಡ’ ಎಂದು ಮತ್ತೊಂದು ದನಿ ಛೇಡಿಸಿದ್ದೂ, 'ಟ್ರೆಕ್ಕಿಂಗ್ ಅಂದ್ರೆ ನಡ್ಕೊಂಡೇ ಹೋಗೋದು ಕಣಮ್ಮಾ’ ಎಂದು ಇನ್ನೊಬ್ಬ ಸ್ಪಷ್ಟೀಕರಣ ಕೊಟ್ಟಿದ್ದೂ ಮುಂದಿನ ಮೂರು ಕ್ಷಣಗಳಲ್ಲಿ ನಡೆದುಹೋಯಿತು.
ಹದಿನೈದೂ ಕಿ.ಮೀ ನಡ್ಕೊಂಡು ಹೋಗೋದು ಬೇಡ, ಆಮೇಲೆ ಬೆಟ್ಟ ಹತ್ತೋದಕ್ಕಾಗಲೀ ಇಳಿಯೋದಕ್ಕಾಗಲೀ ಬ್ಯಾಟರಿ ಉಳಿಯದೆ ಅಲ್ಲೇ ತಪಸ್ಸಿಗೆ ಕೂರುವ ಪರಿಸ್ಥಿತಿ ಬಂದೀತೆಂದು ಯೋಚನೆ ಮಾಡಿ ನಾಮದ ಚಿಲುಮೆಯವರೆಗೆ ಲೋಕಲ್ ಬಸ್ಸಿನಲ್ಲಿ ಹೋಗಿ ಅಲ್ಲಿಂದ ಮುಂದಕ್ಕೆ ನಡೆದುಕೊಂಡು ಹೋಗೋಣವೆಂದು ತೀರ್ಮಾನಿಸಿದ್ದಾಯಿತು.
ಹೊರಟಿತು ಸವಾರಿ
ಅಂತೂ ಭಾನುವಾರದ ಚುಮುಚುಮು ಮುಂಜಾನೆ ಎಲ್ಲರನ್ನೂ ಹೊತ್ತು ತುಮಕೂರಿನಲ್ಲೇ ವರ್ಲ್ಡ್‌ಫೇಮಸ್ಸಾದ ಡಕೋಟಾ ಬಸ್ಸು ಬೆಳಗುಂಬ ಗ್ರಾಮ ದಾಟಿ ಮುಂದಕ್ಕೆ ತೆವಳಿತು. ಅಪರೂಪಕ್ಕೆ ಹುಡುಗ ಹುಡುಗಿಯರಿಂದಲೇ ತುಂಬಿ ತೊನೆದಾಡುತ್ತಿದ್ದ ಬಸ್ಸು ಯಾವ ಕೋನದಿಂದ ನೋಡಿದರೂ ಮದುವೆ ದಿಬ್ಬಣಕ್ಕಿಂತ ಕಡಿಮೆಯಿರಲಿಲ್ಲ. ಅರ್ಧ ಗಂಟೆಯಲ್ಲಿ ನಾವು ನಾಮದ ಚಿಲುಮೆ ತಲುಪಿಯಾಗಿತ್ತು. ಜಿಂಕೆವನಕ್ಕೆ ಸುತ್ತು ಹಾಕಿ, ಬಂಡೆಗಲ್ಲಿನ ನಡುವೆ ವರ್ಷವಿಡೀ ಬತ್ತದೆ ಹರಿಯುವ ಚಿಲುಮೆಯನ್ನು ನೋಡಲು ಮುನ್ನುಗ್ಗಿತು ಕಪಿಸೇನೆ.
ವನವಾಸದ ವೇಳೆ ಕಾಡಿನಿಂದ ಕಾಡಿಗೆ ಸಂಚರಿಸುತ್ತಾ ಶ್ರೀರಾಮ ಈ ಪ್ರದೇಶಕ್ಕೆ ಬಂದಾಗ ನೀರಿನ ಸೆಲೆ ಕಾಣದೆ ತಾನೇ ಬಾಣ ಪ್ರಯೋಗಿಸಿ ಒರತೆಯೊಂದನ್ನು ಚಿಮ್ಮಿಸಿದ ಕತೆಯನ್ನು ತಾನೇ ಕಣ್ಣಾರೆ ಕಂಡಂತೆ ವರ್ಣಿಸಿದಳು ಅದೇ ಏರಿಯಾದ ಮೂಲನಿವಾಸಿ ಸವಿತಾ. ಅಲ್ಲೇ ಸಮೀಪದ ಕಲ್ಲುಮಂಟಪವನ್ನು ಏರಿ ಫೋಟೋ ಸೆಶನ್ ಮುಗಿಸಿಕೊಂಡ ಮೇಲೆ ಆರಂಭವಾಯಿತು ನಿಜವಾದ ಟ್ರೆಕ್ಕಿಂಗ್.
ನಡೆ ಮುಂದೆ ನಡೆ ಮುಂದೆ
ತಂದಾನಿ ತಾನೋ ತಾನಿ ತಂದಾನೋ ಎಂದು ಕೈಕೈ ಹಿಡಿದು ಹುಡುಗಿಯರ ತಂಡ ಮುಂದುವರಿದರೆ ಡಕ್ಕಣಕಾ ಣಕಾ ಜಕಾ ಎಂದು ತಮ್ಮದೇ ಸ್ಟೈಲಲ್ಲಿ ಹೆಜ್ಜೆ ಹಾಕುತ್ತಾ ತಿರುವುಗಳಲ್ಲಿ ಸಾಗಿ ಬೆಟ್ಟದ ಬುಡ ತಲುಪಿತು ಹುಡುಗರ ಗಡಣ. ದುರ್ಗದ ಬಾಗಿಲಲ್ಲಿರುವ ಯೋಗಾನರಸಿಂಹಸ್ವಾಮಿ ದೇವಾಲಯದ ಎದುರೇ ಮನೆಕಟ್ಟಿಕೊಂಡಿರುವ ಕವಿತಾ ಜ್ಯೂಸು ಪಾನಕಗಳೊಂದಿಗೆ ಆಗಲೇ ಸಿದ್ಧವಾಗಿದ್ದರಿಂದ ಬೆಟ್ಟವೇರುವ ಸೈನ್ಯದ ಉತ್ಸಾಹ ಇಮ್ಮಡಿಸಿತು. ತಮ್ಮ ತಮ್ಮ ಟ್ಯಾಂಕ್‌ಗಳನ್ನು ಮತ್ತೊಮ್ಮೆ ಭರ್ತಿ ಮಾಡಿಕೊಂಡ ಹುಡುಗರು ಬೆಟ್ಟದತ್ತ ಸರಭರನೆ ಹೆಜ್ಜೆಯಿಟ್ಟೇಬಿಟ್ಟರು.
ಬ್ಯಾಗ್ ಹೊತ್ತೊಯ್ದ ಕೋತಿ
ಹುಡುಗಿಯರು ಸಲೀಸಾದ ಡಾಂಬಾರು ರಸ್ತೆಯಲ್ಲಿ ಗುಂಪುಗುಂಪಾಗಿ ಗೀಗೀಪದ ಹೊಸೆದುಕೊಂಡು ಸಾಗಿದರೆ ಹುಡುಗರು ತಮ್ಮ ಸಹಜ ಧರ್ಮವನ್ನು ಬಿಡಲಾಗದೆ ಕಲ್ಲುಬಂಡೆಗಳ ನಡುವೆ ಹಾದಿ ಹುಡುಕಿಕೊಂಡು ಏರತೊಡಗಿದರು. ದೇವರಾಯನದುರ್ಗವೆಂದರೆ ಕೇಳಬೇಕೇ? ತಮ್ಮ ಸ್ನೇಹಿತ ವರ್ಗ ಬರುತ್ತಿದೆಯೆಂದು ಮೊದಲೇ ತಿಳಿದವರಂತೆ ಕಾದುಕುಳಿತಿದ್ದವು ನೂರಾರು ಕೋತಿಗಳು. ತಮಗಿಂತಲೂ ಚೆನ್ನಾಗಿ ಬೆಟ್ಟವೇರಲು ಗೊತ್ತಿದ್ದ ಹುಡುಗರನ್ನು ಕಂಡು ಸೋಜಿಗದಿಂದ ತಾವೂ ಮರದಿಂದ ಮರಕ್ಕೆ ನೆಗೆಯುತ್ತಾ ಹಿಂಬಾಲಿಸಿಯೇಬಿಟ್ಟವು. ಚುರುಮುರಿ ಸೌತೆಕಾಯಿ ಮೆಲ್ಲುತ್ತಾ ಬೆಟ್ಟದ ತಪ್ಪಲಿನ ರಮಣೀಯ ಹಸಿರನ್ನು ನಿರಾಳವಾಗಿ ಕಣ್ತುಂಬಿಕೊಳ್ಳುತ್ತಿದ್ದ ಹುಡುಗಿಯರ ಗುಂಪೊಂದು ಕಿಟಾರನೆ ಕಿರುಚಿಕೊಂಡಾಗಲೇ ಕೋತಿಗಳ ನಿಜವಾದ ಕೌಶಲ ಎಲ್ಲರಿಗೂ ಅರ್ಥವಾದದ್ದು. ಕೆಂಪು ಮೂತಿಯ ದಢೂತಿ ಗಡವವೊಂದು ಅನಿತಳ ಹೊಚ್ಚಹೊಸ ಹ್ಯಾಂಡ್‌ಬ್ಯಾಗನ್ನು ಸರಕ್ಕನೆ ಲಪಟಾಯಿಸಿಕೊಂಡು ಹೋಗಿ ಮರದ ತುದಿಯಲ್ಲಿ ಪ್ರತಿಷ್ಠಾಪಿತವಾಗಿತ್ತು.
ಮಿಷನ್ ಬ್ಯಾಗ್ ವಾಪಸಿ
ಜಗತ್ತನ್ನೇ ಗೆದ್ದು ಬರುವ ಉತ್ಸಾಹದಲ್ಲಿ ಬೀಗುತ್ತಿದ್ದ ಹುಡುಗರಿಗೆ ಕೋತಿಯ ಕೈಯಿಂದ ಬ್ಯಾಗನ್ನು ಪಡೆಯುವ ಕೆಲಸ ಮಾತ್ರ ಹರಸಾಹಸವಾಯಿತು. ಮರದಿಂದ ಮರಕ್ಕೆ ಬಂಡೆಯಿಂದ ಬಂಡೆಗೆ ಬ್ಯಾಗ್ ಸಮೇತ ನೆಗೆಯುತ್ತಾ ಕೋತಿ ಮಜಾ ತೆಗೆದುಕೊಳ್ಳುತ್ತಿದ್ದರೆ ಬ್ಯಾಗಿನ ಒಳಗೆ ಪ್ರಾಣವನ್ನೆಲ್ಲಾ ಪ್ಯಾಕ್ ಮಾಡಿಟ್ಟಿದ್ದ ಹುಡುಗಿಯ ಕಣ್ಣುಗಳಿಂದ ಸ್ವತಃ ಜಯಮಂಗಲಿಯೇ ಧಾರಾಕಾರವಾಗಿ ಹರಿಯುತ್ತಿದ್ದಳು. ಅಂತೂ ಹದಿನೈದು ನಿಮಿಷ ಹೋರಾಡಿ ಹುಡುಗರೆಲ್ಲ ಸೋಲೊಪ್ಪಿಕೊಂಡ ಬಳಿಕ ಬ್ಯಾಗನ್ನು ಬಂಡೆಯೊಂದರ ತುದಿಯಲ್ಲಿ ಬಿಟ್ಟು ಮಾಯವಾಯಿತು ಮಂಗ.
ಮರಳಿ ಮನೆಗೆ
ಬೆಟ್ಟದ ತುದಿ ತಲುಪಿ ದುರ್ಗವೇ ಬೆಚ್ಚಿಬೀಳುವಂತೆ ಡ್ಯಾನ್ಸ್ ಮಾಡಿ ಇದ್ದ ಏಕೈಕ ಕೂಲಿಂಗ್ ಗ್ಲಾಸನ್ನೇ ಒಬ್ಬರಾದಮೇಲೊಬ್ಬರಂತೆ ತೊಟ್ಟು ಫೋಟೋ ಹೊಡೆಸಿಕೊಳ್ಳುವ ಹೊತ್ತಿಗೆ ಚಿಪ್ಸು ಪಪ್ಸಾದಿ ಸರಕುಗಳೆಲ್ಲ ಬಹುತೇಕ ಖಾಲಿಯಾಗಿದ್ದವು. ಮಟಮಟ ಮಧ್ಯಾಹ್ನದ ಬಿಸಿಲಿನ ನಡುವೆಯೇ ಬೆಟ್ಟವಿಳಿದು ರಸ್ತೆ ಸೇರಿದಾಗ ಮತ್ತೆ ನಡೆದುಕೊಂಡು ನಗರ ಸೇರುವ ಉತ್ಸಾಹ ಯಾರಿಗೂ ಉಳಿದಿರಲಿಲ್ಲ. ನಡೆದುಕೊಂಡೇ ವಾಪಸ್ ಬಂದೆವೆಂದು ಮರುದಿನ ಪ್ರಚಾರ ಮಾಡುವುದೆಂಬ ಮಸೂದೆಯನ್ನು ಸರ್ವಾನುಮತದಿಂದ ಅಂಗೀಕರಿಸಿದ ಮೇಲೆ ಎಲ್ಲರೂ ಮತ್ತದೇ ಸೂಪರ್ ಡಿಲಕ್ಸ್ ಬಸ್ ಹತ್ತಿದ್ದಾಯಿತು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ