ಸೋಮವಾರ, ಮೇ 2, 2016

ಸಿದ್ಧವನವೆಂಬ ಪುಟ್ಟ ಭಾರತ

ಮೇ 1, 2016ರ 'ಉದಯವಾಣಿ'ಯಲ್ಲಿ ಪ್ರಕಟವಾದ ಲೇಖನ.

‘ಶಾಲಾ ಕಾಲೇಜುಗಳಲ್ಲಿ ಪಾಠ ಕಲಿತ ಮೇಲೆ ಪರೀಕ್ಷೆ ಬರೆಯುತ್ತೇವೆ; ಬದುಕಿನಲ್ಲಿ ಪರೀಕ್ಷೆಗಳಾದ ಮೇಲೆ ಪಾಠ ಕಲಿಯುತ್ತೇವೆ...’ ಪ್ರಾರ್ಥನಾ ಸಭೆಯಿಂದ ಈಚೆ ಬಂದ ಮೇಲೂ ಆ ಮಾತು ಕಿವಿಯಲ್ಲಿ ಗುಂಯ್‍ಗುಡುತ್ತಿತ್ತು. ಇನ್ನೂ ಚುಮುಚುಮು ಮುಂಜಾವು. ಬೆಳಕು

ಸರಿಯಾಗಿ ಹರಿದಿರಲಿಲ್ಲ. ಸಿದ್ಧವನದ ಹಸುರು ಮರಗಿಡಗಳ ನಡುವೆ ತಂಗಾಳಿ ಸುಳಿದಾಡುತ್ತಿತ್ತು. ಬೋಗುಣಿಯಲ್ಲಿ ಹಬೆಯಾಡುತ್ತಿದ್ದ ಬಿಸಿಬಿಸಿ ಚಹಾ ನಿಧಾನಕ್ಕೆ ಗಂಟಲೊಳಕ್ಕೆ ಇಳಿಯುತ್ತಿತ್ತು. ಸಿದ್ಧವನದ ಬೆಳ್ಳಂಬೆಳಗಿನ ಚಹಾ ಎಂದರೆ ಹಾಗೆಯೇ; ಕೊಂಚ ಸಪ್ಪೆಯೇ ಎನಿಸಿದರೂ ಅಂತಹದೊಂದು ಪಾನೀಯ ಪ್ರಪಂಚದ ಇನ್ಯಾವ ಪಾಕಶಾಲೆಯಲ್ಲೂ ತಯಾರಾಗದು.

ಚಹಾ ಮುಗಿದರೂ ಪ್ರಾರ್ಥನಾ ಸಭೆಯಲ್ಲಿ ಕೇಳಿದ ಆ ವಾಕ್ಯ ಮನಸ್ಸಿನಿಂದ ಮಾಸಿರಲಿಲ್ಲ. ಹುಡುಗರೆಲ್ಲ ತಾವು ತೊಟ್ಟಿದ್ದ ಶ್ವೇತ ವಸ್ತ್ರಗಳನ್ನು ಬದಲಾಯಿಸಿ ಲಗುಬಗೆಯಿಂದ ಹಾರೆ ಗುದ್ದಲಿಗಳೊಂದಿಗೆ ತೋಟದಲ್ಲಿ ಹಾಜರಾದರು. ತರಕಾರಿ ಸಾಲುಗಳಿಂದ ಕಳೆಕೀಳುವ, ನೀರು ಹಾಯಿಸುವ, ತೆಂಗಿನ ಮರಗಳಿಗೆ ಹಟ್ಟಿಯ ಸ್ಲರಿ ಊಡುವ ಕೆಲಸಗಳು ಅವ್ಯಾಹತವಾಗಿದ್ದವು. ಎರಡು ಗಂಟೆಗಳ ನಿರಂತರ ಶ್ರಮದ ಬಳಿಕ ಹೊಟ್ಟೆ ಬಕಾಸುರನಂತೆ ಬಾಯ್ದೆರೆದು ಕಾದಿದ್ದರೆ ಭೋಜನಶಾಲೆಯಲ್ಲಿ ಮತ್ತೆ ಬಿಸಿಬಿಸಿ ಗಂಜಿ-ಚಟ್ನಿ ಸಿದ್ಧವಾಗಿ ಕಾಯುತ್ತಿದ್ದವು. ಅಂತಹದೊಂದು ಮೃಷ್ಟಾನ್ನ ಭೋಜನ ಕೂಡ ಸಿದ್ಧವನದಲ್ಲದೆ ಇನ್ಯಾವ ಪಂಚತಾರಾ ಹೊಟೇಲಲ್ಲೂ ದೊರೆಯದು. ಮನಸ್ಸು ಮಾತ್ರ ನಸುಕಿನ ‘ಪಾಠ-ಪರೀಕ್ಷೆ’ಗಳ ಪ್ರಮೇಯವನ್ನು ಇನ್ನಿಲ್ಲದೆ ನೆನೆಯುತ್ತಿತ್ತು.

ಇದೆಲ್ಲ ಆಗಿ ಹದಿನೈದು ವರ್ಷಗಳೇ ಕಳೆದು ಹೋಗಿವೆ. ಆ ಪ್ರಮೇಯ ಮಾತ್ರ ಮನಸ್ಸಿನಲ್ಲಿ ನಿನ್ನೆ ಮೊನ್ನೆ ಕೇಳಿದಷ್ಟೇ ತಾಜಾ ಆಗಿ ಉಳಿದುಕೊಂಡಿದೆ. ಕಷ್ಟಗಳು ಎದುರಾದಾಗಲೆಲ್ಲ ಅದು ನೆನಪಾಗುತ್ತದೆ. ಮನಸ್ಸು ಗಟ್ಟಿಯಾಗುತ್ತದೆ. ವಿದ್ವಾನ್ ಮಹಾಬಲೇಶ್ವರ ಭಟ್ಟರ ಮಾತುಗಳೆಂದರೆ ಹಾಗೆಯೇ. ಚುಟುಕು, ಚುರುಕು. ಮುಂಜಾನೆಯ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಒಂದು ವಾಕ್ಯ ಇಡೀ ದಿನಕ್ಕೆ ಸಾಕಾಗುವ ಶಕ್ತಿಮದ್ದು. ಸಾಮಾನ್ಯ ಭಾಷೆಯಲ್ಲಿ ಅವರ ಹುದ್ದೆಯ ಹೆಸರು ‘ವಾರ್ಡನ್’. ಆದರೆ ಉಜಿರೆಯ ಶ್ರೀ ಸಿದ್ಧವನ ಗುರುಕುಲ ನಮಗೆ ಹಾಸ್ಟೆಲೂ ಆಗಿರಲಿಲ್ಲವಾಗಿ ಅವರು ವಾರ್ಡನ್ ಕೂಡ ಆಗಿರಲಿಲ್ಲ. ಗುರುಕುಲವಾಗಿದ್ದರಿಂದ ಅವರು ನಮಗೆ ಅಕ್ಷರಶಃ ಗುರುವೂ, ಎಲ್ಲೆಲ್ಲಿಂದಲೋ ಬಂದ ಬಡಪಾಯಿ ಹುಡುಗರಿಗೆ ಗುರುಕುಲ ಎರಡನೇ ಮನೆಯಾಗಿದ್ದರಿಂದ ಅವರೇ ಅಪ್ಪ-ಅಮ್ಮ, ಬಂಧು-ಬಳಗ ಎಲ್ಲವೂ ಆಗಿದ್ದರು. ಐದುನೂರರಷ್ಟು ಹದಿಹರೆಯದ ಹುಡುಗರ ತಂಟೆ-ತಕರಾರು, ಅವಿವೇಕತನ, ಸುಖ-ದುಃಖ, ಕಾಯಿಲೆ-ಕಸಾಲೆ ಎಲ್ಲವನ್ನೂ ಸಹಿಸಿಕೊಳ್ಳುವ ಭೂಮಿತಾಯಿ ಅವರಿದ್ದರು. ಹೀಗೆ ಬರೆಯುತ್ತಿದ್ದರೆ ಯಾಕೋ ಮನಸ್ಸೆಲ್ಲ ಆರ್ದ್ರವಾಗಿ ಕಣ್ಣಂಚು ಒ
ದ್ದೆಯಾಗುತ್ತಿದೆ.

ಸಿದ್ಧವನ ಗುರುಕುಲವನ್ನೇ ತಮ್ಮ ಮನೆಯಾಗಿ ಹೊಂದಿ ಉಜಿರೆಯ ಕಾಲೇಜಿನಲ್ಲಿ ಪದವಿ ಪಡೆದ ನನ್ನಂತಹ ಸಾವಿರಾರು ಮಂದಿಗೆ ಗುರುಕುಲದೊಂದಿಗೆ ಇಂತಹದೊಂದು ಅಖಂಡ ಮೈತ್ರಿ ಇದೆ. ಸಾವಿರಾರು ಬಡ ಮಕ್ಕಳ ವಿದ್ಯಾಭ್ಯಾಸದ ಕನಸನ್ನು ನಿಜವಾಗಿಸಿದ ಸಿದ್ಧವನ ಗುರುಕುಲಕ್ಕೀಗ 75ರ ಸಂಭ್ರಮ.  ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ದಿ| ಮಂಜಯ್ಯ ಹೆಗ್ಗಡೆಯವರು 1940ರಲ್ಲಿ ಬಿತ್ತಿದ ಬೀಜವಿದು. ದೂರದ ಬಂಗಾಲದಲ್ಲಿ ಗುರುದೇವ ರವೀಂದ್ರನಾಥ ಠ್ಯಾಗೋರರು ‘ವಿಶ್ವಭಾರತಿ’ಯ ಕನಸು ಕಂಡಿದ್ದರೆ, ಮಂಜಯ್ಯ ಹೆಗ್ಗಡೆಯವರು ಸಿದ್ಧವನ ಗುರುಕುಲದ ಕನಸು ಕಂಡರು. ‘ವಿದ್ಯೆಯೆಂದರೆ ಹೊರಗಿನಿಂದ ಹೊತ್ತಿಸಬಲ್ಲ ಮತ್ತು ಸರಿಪಡಿಸಬಲ್ಲ ಲಾಟೀನಿನ ಬೆಳಕಲ್ಲ; ಸ್ವಯಂಪ್ರಭೆ ಬೀರುವ ಮಿಂಚುಹುಳ’ ಎಂದಿದ್ದರು ಠ್ಯಾಗೋರರು. ಅಂತಹದೇ ಒಂದು ದರ್ಶನ ಹೆಗ್ಗಡೆಯವರ ಮನಸ್ಸಿನಲ್ಲಿದ್ದಿರಬೇಕು. ಅದಕ್ಕೇ ಸಿದ್ಧವನ ಕೇವಲ ಹಾಸ್ಟೆಲ್ ಆಗಲಿಲ್ಲ. ಜೀವನ ಶಿಕ್ಷಣವನ್ನು ನೀಡುವ ಗುರುಕುಲ ಆಯಿತು. ಆಧುನಿಕ ಬದುಕಿಗೆ ಬೇಕಾದ ಲೌಕಿಕ ಶಿಕ್ಷಣದ ಜೊತೆಗೆ ನೈತಿಕ ಮೌಲ್ಯಗಳಿಗೆ ಪ್ರಚೋದನೆ ನೀಡಿ, ನಮ್ಮ ಸಂಸ್ಕೃತಿ, ಪರಂಪರೆಗಳ ಮಹೋನ್ನತಿಯನ್ನು ತಿಳಿಸಿಕೊಡುವಂತಹ ಆಧ್ಯಾತ್ಮಿಕ ಶಿಕ್ಷಣದ ಕೇಂದ್ರವಾಗಿ ಅದು ಬೆಳೆಯಿತು.

ಮಂಜಯ್ಯ ಹೆಗ್ಗಡೆಯವರು ಬಿತ್ತಿದ ಬೀಜವನ್ನು ಬೆಳೆಸಿ ಹೆಮ್ಮರವಾಗಿಸುವಲ್ಲಿ ಅವರ ನಂತರ ಬಂದ ದಿ| ರತ್ನವರ್ಮ ಹೆಗ್ಗಡೆ, ಈಗಿನ ಧರ್ಮಾಧಿಕಾರಿಯಾಗಿ ಹಳ್ಳಿಗಳಲ್ಲಿ ಅಭಿವೃದ್ಧಿಯ ಹೊಸ ಪರಂಪರೆ ಹುಟ್ಟುಹಾಕಿದ ಡಾ. ವೀರೇಂದ್ರ ಹೆಗ್ಗಡೆಯವರ ಕೊಡುಗೆ ತುಂಬ ದೊಡ್ಡದು. ಸಿದ್ಧವನ ಗುರುಕುಲವೆಂದರೆ ಇವರೆಲ್ಲರಿಗೂ ತಮ್ಮ ಉಳಿದ ನೂರಾರು ಶಿಕ್ಷಣ ಸಂಸ್ಥೆಗಳಿಗಿಂತ ಒಂದು ಹಿಡಿ ಪ್ರೀತಿ ಜಾಸ್ತಿ. ಧರ್ಮಸ್ಥಳದಿಂದ ಉಜಿರೆ ಮಾರ್ಗವಾಗಿ ಓಡಾಡುವಾಗ ಒಂದಿಷ್ಟು ಬಿಡುವು ದೊರೆತರೂ ಗುರುಕುಲಕ್ಕೆ ಭೇಟಿ ನೀಡಿ ಮಕ್ಕಳ ಕ್ಷೇಮಸಮಾಚಾರ ವಿಚಾರಿಸದೆ ಇರರು. ನಾವು ಗುರುಕುಲದಲ್ಲಿದ್ದಾಗಲಂತೂ ವೀರೇಂದ್ರ ಹೆಗ್ಗಡೆಯವರ ತಾಯಿ ದಿ| ರತ್ಮಮ್ಮ ಹೆಗ್ಗಡೆಯವರು, ಪತ್ನಿ ಶ್ರೀಮತಿ ಹೇಮಾವತಿ ಹೆಗ್ಗಡೆಯವರು, ಪ್ರೊ. ಎಸ್. ಪ್ರಭಾಕರ್, ಡಾ. ಬಿ. ಯಶೋವರ್ಮ ಮುಂತಾದವರು ಆಗಾಗ್ಗೆ ಗುರುಕುಲಕ್ಕೆ ಬಂದು ವಿದ್ಯಾರ್ಥಿಗಳನ್ನು ವಿಚಾರಿಸಿಕೊಳ್ಳುವುದು ಸಾಮಾನ್ಯವಾಗಿತ್ತು. ಎದುರಿಗೆ ಸಿಕ್ಕ ಒಬ್ಬೊಬ್ಬರನ್ನೂ ಹತ್ತಿರ ಕರೆದು ‘ಊಟ-ತಿಂಡಿ ಚೆನ್ನಾಗಿದೆಯಾ? ತೋಟದ ಕೆಲಸ, ಹಸುಕರುಗಳನ್ನು ನೋಡಿಕೊಳ್ಳುವುದು ಕಷ್ಟವಾಗುತ್ತಾ? ಮನೆಯ ನೆನಪಾಗುತ್ತಾ?’ ಎಂದು ಬೆನ್ನು ನೇವರಿಸಿ ಕೇಳಿದರೇ ಅವರಿಗೆ ಸಮಾಧಾನ. ಇವೆಲ್ಲಕ್ಕೂ ಸರಿಸಮನಾಗಿ ಗುರುಕುಲಕ್ಕಾಗಿ ತಮ್ಮ ಬದುಕು ತೇದವರು ಅದರ ವಾರ್ಡನ್‍ಗಳು. ಪಂಡಿತ ಜಿನರಾಜ ಶಾಸ್ತ್ರಿಯಾದಿಯಾಗಿ ಹಲವು ಮಂದಿ ಹಾಕಿಕೊಟ್ಟ ಈ ಪರಂಪರೆಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಸಮರ್ಥವಾಗಿ ಮುಂದುವರಿಸಿಕೊಂಡು ಬರುತ್ತಿರುವವರು ನಾನು ಆಗಲೇ ಹೇಳಿದ ಮಹಾಬಲೇಶ್ವರ ಭಟ್ಟರು.

ಸಿದ್ಧವನವನ್ನು ಹತ್ತಿರದಿಂದ ನೋಡಿದ ಯಾರಿಗಾದರೂ ಅದರಲ್ಲೊಂದು ಮಿನಿ ಭಾರತದ ಬಿಂಬ ಕಂಡೀತು. ಭಾರತದ ವೈವಿಧ್ಯತೆ, ಅದರೊಳಗಿನ ಏಕತೆ, ಸರಳ ಜೀವನ, ಸಹಬಾಳ್ವೆ-ಸಮನ್ವಯತೆಗಳೆಲ್ಲ ಸಿದ್ಧವನ ಗುರುಕುಲದೊಳಗೆ ಅಂತರ್ಗತವಾಗಿವೆ. ಅಲ್ಲಿ ಜಾತಿ-ಮತ-ಪಂಥಗಳ ಪ್ರತ್ಯೇಕತೆಯಿಲ್ಲ. ಬಡವ-ಶ್ರೀಮಂತ ಬೇಧವಿಲ್ಲ. ಸಿದ್ಧವನದೊಳಗೆ ಕಾಲಿಟ್ಟ ಮೇಲೆ ಎಲ್ಲರೂ ಅಲ್ಲಿನ ಶ್ವೇತ ಸಮವಸ್ತ್ರದ ಒಳಗೆ ಸರ್ವಸಮಾನರು. ಹಿಂದೂ-ಮುಸ್ಲಿಂ-ಕ್ರಿಶ್ಚಿಯನ್-ಜೈನ ಇತ್ಯಾದಿ ಎಲ್ಲ ಮತ-ಪಂಥದವರಿಗೂ ಅಲ್ಲಿ ಪ್ರವೇಶವಿದೆ. ವಿದ್ಯಾರ್ಥಿಯ ಬಡ ಆರ್ಥಿಕ ಹಿನ್ನೆಲೆ ಹಾಗೂ ಉತ್ತಮ ಶೈಕ್ಷಣಿಕ ಸಾಧನೆಯಷ್ಟೇ ಅಲ್ಲಿನ ಪ್ರವೇಶಾತಿಯ ಮಾನದಂಡ.

ಸಿದ್ಧವನದಲ್ಲಿ ಎರಡೋ ಮೂರೋ ವರ್ಷ ಕಳೆದ ವಿದ್ಯಾರ್ಥಿ ಪ್ರಪಂಚದ ಯಾವ ಭಾಗದಲ್ಲೂ ಬದುಕಿ ಬರಬಲ್ಲ ಎಂಬುದು ಅಲ್ಲಿ ಬೆಳೆದವರ ನಡುವಿನ ಹೆಮ್ಮೆಯ ನುಡಿ. ಬರೀ ಬದುಕಿ ಬರುವುದಲ್ಲ, ಸಿದ್ಧವನದ ತೋಟದಲ್ಲಿ ಚಿಗಿತ ಸಾವಿರಾರು ಮೊಗ್ಗುಗಳು ಇಂದು ಪ್ರಪಂಚದ ನಾನಾ ಕಡೆ ನಾನಾ ಕ್ಷೇತ್ರಗಳಲ್ಲಿ ಅರಳಿ ಸುವಾಸನೆ ಬೀರುತ್ತಿವೆ. ಅವರ ಯಶಸ್ಸಿನ ಹಿಂದೆ ಸಿದ್ಧವನದಲ್ಲಿ ಕಲಿತ ಜೀವನದ ಪಾಠಗಳಿವೆ. ಅಲ್ಲಿ ಅವರಿಗೆ ತೊಡಿಸಲಾಗುವ ಶಿಸ್ತು-ಸಂಸ್ಕಾರದ ಚೌಕಟ್ಟು ಬದುಕಿನುದ್ದಕ್ಕೂ ಅವರನ್ನು ಕಾಪಾಡುತ್ತದೆ. ಅವರೆಲ್ಲ ‘ಊಟಕೆ ಹಾಜರ್’ ಸಂಸ್ಕೃತಿಯವವರಲ್ಲ. ಒಂದೊಂದು ತುತ್ತಿನ ಹಿಂದಿನ ಬೆವರಿನ ಬೆಲೆಯನ್ನು ಅರಿತವರು.

‘ಹಡಗನ್ನು ತುಂಬಿಸಲು ಹೋದವ ಹಿಂದೆ ಬಂದ, ಹೊಟ್ಟೆ ತುಂಬಿಸಲು ಹೋದವ ಹಿಂದೆ ಬರಲಿಲ್ಲ’ ಎನ್ನುತ್ತಿದ್ದರು ಮಹಾಬಲೇಶ್ವರ ಭಟ್ಟರು. ಸ್ಪರ್ಧೆಯ ಈ ಪ್ರಪಂಚದಲ್ಲಿ ಹೊಟ್ಟೆಯೆಂಬ ಹಡಗು ತುಂಬಿಸುವ ಕೆಲಸ ಎಷ್ಟು ಕಷ್ಟದ್ದು ಎಂಬುದನ್ನು ಅವರು ಪ್ರತಿದಿನ ನೆನಪಿಸುತ್ತಿದ್ದರು. ತೆಂಗಿನ ತೋಟದ ಕಳೆ ತೆಗೆಸುತ್ತಲೇ, ತರಕಾರಿ ಸಾಲು ಹಸನುಗೊಳಿಸುತ್ತಲೇ ಮನಸ್ಸು-ದೇಹಗಳನ್ನು ಹಸನುಗೊಳಿಸಲು ಕಲಿಸುವ ಅಸದೃಶ ಕಲೆಯೊಂದು ಅವರಿಗೆ ಕರಗತವಾಗಿತ್ತು. ಆ ಶಕ್ತಿ ಅವರ ಮಾತುಗಳಿಗೆ ಇತ್ತು. ಬೆಳಗ್ಗೆ ಐದು ಗಂಟೆಗೆ ಎದ್ದರೆ ತಣ್ಣೀರಿನ ಸ್ನಾನ, ಮತ್ತೆ ಅರ್ಧ ಗಂಟೆ ಪ್ರಾರ್ಥನೆ, ವಿಚಾರ ಮಂಥನ. ಆ ಪ್ರಾರ್ಥನಾ ಸಭೆಯಲ್ಲಿ ಅವರಾಡುವ ಮಾತು ಕಾಲೇಜಿನಲ್ಲಿ ನಡೆಯುವ ಇಡೀ ದಿನದ ಪಾಠ-ಪ್ರವಚನಗಳಿಗೆ ಶ್ರೇಷ್ಠ ಮುನ್ನುಡಿಯಂತೆ ಇರುತ್ತಿತ್ತು. ಸಂಜೆ ಮತ್ತೆ ನಡೆಯುತ್ತಿದ್ದ ಚಿಂತನಾ ಸಭೆಯಂತೂ ಪಠ್ಯ ಪುಸ್ತಕಗಳಾಚೆಯ ಕಲಿಕೆಯ ವೇದಿಕೆಯಾಗಿತ್ತು. ಅಲ್ಲಿ ಹೊಮ್ಮುತ್ತಿದ್ದ ಭಗವದ್ಗೀತೆ, ರಾಮಾಯಣ, ಮಹಾಭಾರತ, ಮಂಕುತಿಮ್ಮನ ಕಗ್ಗಗಳ ಸಾರ ಬದುಕಿನ ಗಾಂಭೀರ್ಯತೆಗೆ ಕೈದೀವಿಗೆಯಾಗಿತ್ತು.

ಸಿದ್ಧವನವೀಗ ಪ್ರಸಿದ್ಧವನವಾಗಿದೆ. ಕಾಲಕ್ಕೆ ತಕ್ಕಂತೆ ಬದಲಾವಣೆಗೆ ತೆರೆದುಕೊಂಡಿದೆ. ಮೊದಲು ಏಳೆಂಟು ಪ್ರತ್ಯೇಕ ಬ್ಲಾಕ್‍ಗಳಲ್ಲಿ ವಿದ್ಯಾರ್ಥಿಗಳ ವಾಸ್ತವ್ಯ ಇತ್ತು. ಈಗ ಒಂದೇ ಸುಸಜ್ಜಿತ ಕಟ್ಟಡವಿದೆ. ಸಾಕಷ್ಟು ಸೌಲಭ್ಯಗಳಿವೆ. ಬೆಳಗ್ಗೆ ಗಂಜಿ ಊಟದ ಬದಲು ವಿದ್ಯಾರ್ಥಿಗಳಿಗೆ ತಿಂಡಿ ವ್ಯವಸ್ಥೆಯಿದೆ. ಇವೆಲ್ಲ ಭೌತಿಕ ಬದಲಾವಣೆಗಳು ಮಾತ್ರ. ಸಿದ್ಧವನದ ಹಿಂದಿನ ದರ್ಶನ, ಮೌಲ್ಯಗಳ ಅಂತರ್ಯ ಇನ್ನೂ ಸಾವಿರ ವರ್ಷ ಕಳೆದರೂ ಬದಲಾಗದು, ಬದಲಾಗಬಾರದು. ಏಕೆಂದರೆ ಅದೊಂದು ಪುಟ್ಟ ಭಾರತ.

2 ಕಾಮೆಂಟ್‌ಗಳು:

Anagha Kirana ಅನಘ ಕಿರಣ ಹೇಳಿದರು...

��

Unknown ಹೇಳಿದರು...

Idi lekhana matte nannanu 10 varsha hindakke karedoyyitu. Naanu siddavanaalli odiddene annuvude nanna jeevanada dodda sadhane .khavandaru namage devaru ..avra runada bhara doddadu. Tirisuvudu Tumba kashta. ..