ಗುರುವಾರ, ಜನವರಿ 24, 2013

ಅಂತೂ ಬಂತು ’ಮುಕ್ತ ಮುಕ್ತ’ದ ಅಂತಿಮ ಕಂತು: ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ...


ಮಾಧ್ಯಮಶೋಧ-34, ಹೊಸದಿಗಂತ, 25 ಜನವರಿ 2013

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ

ಜೀವನ ಪ್ರೀತಿಯ ತಾಜಾ ರೂಪಕದಂತಿರುವ ಈ ಸಾಲುಗಳು ಕನ್ನಡ ಟಿವಿ ವೀಕ್ಷಕರಿಗೆ ದಿನನಿತ್ಯದ ಗುನುಗು. 'ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ’ ಎಂಬ ರಮ್ಯ ಕಲ್ಪನೆಯೊಂದಿಗೆ ಆರಂಭವಾಗುವ 'ಮುಕ್ತ ಮುಕ್ತ’ದ ಶೀರ್ಷಿಕೆ ಸಾಹಿತ್ಯಕ್ಕೆ ಒಂದು ಧಾರಾವಾಹಿಯ ಟೈಟಲ್ ಸಾಂಗ್‌ಗಿಂತ ತುಂಬ ವಿಭಿನ್ನವಾದ ಸ್ಥಾನವನ್ನು ಪ್ರೇಕ್ಷಕ ತನ್ನ ಹೃದಯದಲ್ಲಿ ಕೊಟ್ಟಿದ್ದಾನೆ. ಎಚ್. ಎಸ್. ವೆಂಕಟೇಶಮೂರ್ತಿಯವರ ಒಂದು ಪರಿಪೂರ್ಣ ಕವಿತೆಯೇ ಇದು ಎಂಬ ಹಾಗೆ ಈ ಸಾಲುಗಳು ಸಹೃದಯರ ಮನಸ್ಸಿನೊಳಗಿನ ಒಂದು ಸುಂದರ ಭಾವಗೀತೆಯೇ ಆಗಿಬಿಟ್ಟಿವೆ.


ಕೊನೆಗೂ ಟಿ. ಎನ್. ಸೀತಾರಾಮ್ ಅವರ ಸುದೀರ್ಘ ಧಾರಾವಾಹಿ ’ಮುಕ್ತ ಮುಕ್ತ’ಕ್ಕೆ ತೆರೆ ಬೀಳುತ್ತಿದೆ. ಪ್ರತಿಭಾವಂತ ನಿರ್ದೇಶಕನೊಬ್ಬನ ಹೊಸ ಧಾರಾವಾಹಿ ಆರಂಭವಾಗುತ್ತಿದೆ ಎಂದರೆ ಜನ ಅದರ ಬಗ್ಗೆ ಮಾತನಾಡಿಕೊಳ್ಳುವುದು ಸಾಮಾನ್ಯ. ಆದರೆ ಒಂದು ಧಾರಾವಾಹಿ ಮುಗಿಯುತ್ತಿರುವುದು ಕೂಡ ಸುದ್ದಿಯಾಗುತ್ತಿದೆ ಎಂದರೆ ಒಂದೋ ಅದು ಪ್ರೇಕ್ಷಕರ ಜೊತೆಗೆ ಹೊಂದಿರುವ ವಿಶಿಷ್ಟ ಸಂಬಂಧಕ್ಕಾಗಿ ಇಲ್ಲವೇ ಅದು ಪ್ರೇಕ್ಷಕರ ಮನಸ್ಸಿನಲ್ಲಿ ಹುಟ್ಟಿಸಿರುವ 'ಸಾಕಪ್ಪಾ ಸಾಕು’ ಎಂಬ ಭಾವನೆಯಿಂದಾಗಿ. ಎಲ್ಲ ಧಾರಾವಾಹಿಗಳ ಬಗ್ಗೆ ಪ್ರೇಕ್ಷಕರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವಂತೆ ’ಮುಕ್ತ ಮುಕ್ತ’ ಧಾರಾವಾಹಿ ಬಗೆಗೂ ಸಾಕಷ್ಟು ಪ್ರಶಂಸೆ ಹಾಗೂ ಟೀಕೆಗಳಿರಬಹುದು. ಆದರೂ ಅದು ಮುಗಿಯುತ್ತಿರುವುದರ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದರೆ ಖಂಡಿತವಾಗಿಯೂ ಅದು ಬಹುತೇಕ ಮೆಗಾ ಧಾರಾವಾಹಿಗಳು ಹುಟ್ಟಿಸುವ ಜುಗುಪ್ಸೆಗಾಗಿ ಅಲ್ಲ.

ಒಟ್ಟು 1204 ಕಂತುಗಳಷ್ಟು ದೀರ್ಘವಾಗಿ ಮುಕ್ತ ಮುಕ್ತ ವಿಸ್ತರಿಸಿದೆ ಎಂಬುದು ತಕ್ಷಣ ಮನಸ್ಸಿಗೆ ಬರುವ ವಿಚಾರ. ಕನ್ನಡದ ಧಾರಾವಾಹಿಗಳ ಮಟ್ಟಿಗೆ ಇದು ದೊಡ್ಡ ಸಂಖ್ಯೆಯೇ. ಆದರೆ ಇದಕ್ಕಿಂತಲೂ ದೀರ್ಘವಾದ ಧಾರಾವಾಹಿಗಳನ್ನು ಪ್ರೇಕ್ಷಕ ಕಂಡಿದ್ದಾನೆ. ಸ್ಟಾರ್ ಪ್ಲಸ್‌ನಲ್ಲಿ 2000-2008ರ ನಡುವೆ ಪ್ರಸಾರವಾದ 1830 ಕಂತುಗಳ ಏಕ್ತಾ ಕಪೂರ್ ಅವರ  'ಕ್ಯೋಂಕಿ ಸಾಸ್ ಭೀ ಕಭಿ ಬಹೂ ಥೀ’ ಹಿಂದಿ ಧಾರಾವಾಹಿ ಭಾರತದ ಟಿವಿ ಧಾರಾವಾಹಿಗಳಲ್ಲೇ ಅತ್ಯಂತ ದೀರ್ಘವಾದದ್ದು. ಅಮೇರಿಕ, ಇಂಗ್ಲೆಂಡಿನಂತಹ ಪಾಶ್ಚಾತ್ಯ ದೇಶಗಳನ್ನು ಗಮನಿಸಿದರಂತೂ ಬೆಚ್ಚಿಬೀಳುವ ಸರದಿ ನಮ್ಮದಾಗುತ್ತದೆ. 'ಗೈಡಿಂಗ್ ಲೈಟ್’ ಎಂಬ ಅಮೆರಿಕನ್ ಧಾರಾವಾಹಿ 56 ವರ್ಷಗಳ ಕಾಲ ಪ್ರಸಾರವಾಗಿ ಇಂದಿಗೂ ಪ್ರಪಂಚದ ಅತ್ಯಂತ ದೀರ್ಘ ಧಾರಾವಾಹಿ ಎಂಬ ಗಿನ್ನೆಸ್ ದಾಖಲೆಯನ್ನು ಉಳಿಸಿಕೊಂಡಿದೆ. ಕೇವಲ 13 ಕಂತುಗಳಿಗೆಂದು 1960ರಲ್ಲಿ ಆರಂಭವಾದ ಇಂಗ್ಲೆಂಡಿನ 'ಕೊರೋನೇಶನ್ ಸ್ಟ್ರೀಟ್’ ಎಂಬ ಮೆಗಾ ಸೀರಿಯಲ್ 52 ವರ್ಷ ಪೂರೈಸಿದೆ. 1956ರಿಂದ 2010೦ರವರೆಗೆ ಪ್ರಸಾರವಾದ 'ಅಸ್ ದಿ ವರ್ಲ್ಡ್ ಟರ್ನ್ಸ್’ ಎಂಬ ಧಾರಾವಾಹಿ ಕೂಡ 53 ವರ್ಷಗಳನ್ನು ಪೂರೈಸಿ ವಿಶ್ವದ ಅತಿ ದೀರ್ಘ ಧಾರಾವಾಹಿಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊಂದಿದೆ. ಕನ್ನಡದ ಧಾರಾವಾಹಿಗಳ ಕಂತುಗಳ ಸಂಖ್ಯೆಯನ್ನೇ ಕಂಡು ಹುಬ್ಬೇರಿಸುವವರು ಈ ಧಾರಾವಾಹಿಗಳ ಅಂಕಿಅಂಶ ಕಂಡರೆ ಹೌಹಾರದಿರರು!

ನಿಜ, ಮುಕ್ತ ಮುಕ್ತ ಧಾರಾವಾಹಿ ಸಾವಿರ ಕಂತುಗಳನ್ನು ದಾಟಿ ಮುಂದುವರಿಯುತ್ತಿರುವುದನ್ನು ಕಂಡು ಇಷ್ಟೊಂದು ಲಂಬಿಸುವ ಅಗತ್ಯವಾದರೂ ಏನು ಎಂದು ಭಾವಿಸಿದ ಪ್ರೇಕ್ಷಕರೂ ಸಾಕಷ್ಟು ಇರಬಹುದು. ಸದ್ಯ ಈಗಲಾದರೂ ಮುಗಿಯುತ್ತಿದೆಯಲ್ಲ ಎಂದು ತಮಾಷೆ ಮಾಡುವ ಮಂದಿಯೂ ಸಾಕಷ್ಟು ಸಿಗುತ್ತಾರೆ. ಆದರೆ ಕೊನೆಯವರೆಗೂ ವಿಶೇಷ ಬೋರ್ ಹೊಡೆಸದೆ ಉದ್ದಕ್ಕೂ ಒಂದು ವಿಶಿಷ್ಟ ಸ್ವಾರಸ್ಯ ಹಾಗೂ ನಿರೀಕ್ಷೆಗಳನ್ನು ಉಳಿಸಿಕೊಂಡು ಹೋದ ಈ ಧಾರಾವಾಹಿ ತನ್ನ ಸುದೀರ್ಘತೆಗಾಗಿಯೇ ಟೀಕೆಗೊಳಗಾಗಬೇಕಾದ್ದಿಲ್ಲ ಎಂದು ಭಾವಿಸುವ ಮಂದಿಯೂ ಹೆಚ್ಚಿನ ಸಂಖೆಯಲ್ಲಿ ಸಿಗಬಹುದು. ಆದರೆ ಸ್ವತಃ ಸೀತಾರಾಮ್ ಅವರೇ ತಮ್ಮ ಮುಕ್ತ ಮುಕ್ತ ಧಾರಾವಾಹಿ ಜನವರಿ ೨೫ಕ್ಕೆ ಮುಕ್ತಾಯವಾಗುತ್ತಿದೆ ಎನ್ನುತ್ತಾ ಎಲ್ಲರೂ ಆನಂದದ ನಿಟ್ಟುಸಿರು ಬಿಡಬಹುದು...! ಎಂದು ಹೇಳಿರುವುದರ ವಿಶೇಷಾರ್ಥವೇನೋ ಹೊಳೆಯುತ್ತಿಲ್ಲ.

ಮಾಯಾಮೃಗ, ಮನ್ವಂತರ, ಮಿಂಚು, ಮಳೆಬಿಲ್ಲು, ಮುಕ್ತದಂತಹ ಧಾರಾವಾಹಿಗಳನ್ನು ನೋಡಿದ ಮೇಲೆ ಟಿ. ಎನ್. ಸೀತಾರಾಮ್ ಮೇಲೆ ಪ್ರೇಕ್ಷಕ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜವೇ. ಹಾಗಂತ ಪ್ರೇಕ್ಷಕನಿಗೆ ತಾನು ನೋಡಿದ ಧಾರಾವಾಹಿ ಹಿಂದಿನ ಧಾರಾವಾಹಿಯಷ್ಟು ಶ್ರೇಷ್ಠವಾಗಿಲ್ಲ ಎಂದು ಅನ್ನಿಸಿದರೆ ಅದರಲ್ಲಿ ನಿರ್ದೇಶಕನ ಪ್ರಮಾದವೇನೂ ಇಲ್ಲ. ತನಗನ್ನಿಸಿದ್ದನ್ನು ಹೇಳುವ, ವಿಮರ್ಶೆ ಮಾಡುವ ಅಧಿಕಾರ ಪ್ರೇಕ್ಷಕನಿಗೆ ಇದ್ದೇ ಇದೆ. ಹೇಳಿಕೇಳಿ ಒಂದು ಮಾಧ್ಯಮ ಜನರ ಮೇಲೆ ಬೀರುವ ಪರಿಣಾಮ ನಿಸ್ಸಂಶಯವಾಗಿ ವ್ಯಕ್ತಿನಿಷ್ಠವಾದದ್ದು.

ಸೀತಾರಾಮ್ ದೂರದರ್ಶನಕ್ಕಾಗಿ ಮಾಡಿದ ’ಮಾಯಾಮೃಗ’ ಮನೆಮಾತಾದದ್ದಂತೂ ನಿಜ. ಅದರ ನಂತರ ಈ ಟಿವಿಗಾಗಿ ನಿರ್ದೇಶಿಸಿದ ಮನ್ವಂತರ, ಮುಕ್ತ ಹಾಗೂ ಈಗ ಕೊನೆಗೊಳ್ಳುತ್ತಿರುವ ಮುಕ್ತ ಮುಕ್ತ ಕೂಡ ದೊಡ್ದ ಸಂಖ್ಯೆಯ ಕನ್ನಡ ಟಿವಿ ವೀಕ್ಷಕರಲ್ಲಿ ಸೀತಾರಾಮ್ ಬಗ್ಗೆ ವಿಶೇಷ ಅಭಿಮಾನ ಮೂಡಿಸಿರುವುದು ಸುಳ್ಳಲ್ಲ. ಆರ್. ಕೆ. ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕೃತಿ ಶಂಕರ್‌ನಾಗ್ ಪ್ರತಿಭೆಯಲ್ಲಿ ಧಾರಾವಾಹಿಯಾದಾಗ ಜನ ಸಹಜವಾಗಿಯೇ ಅದನ್ನು ವಿಶೇಷ ಉತ್ಸಾಹದಿಂದ ಸ್ವಾಗತಿಸಿದರು. ದುರದೃಷ್ಟವಶಾತ್ ಅಂತಹ ಧಾರಾವಾಹಿಗಳನ್ನು ನೋಡುವ ಅವಕಾಶವೇ ಜನರಿಗೆ ಸಿಗಲಿಲ್ಲ. ಬರಗಾಲದ ನಡುವೆ ಸೋನೆ ಸುರಿದಂತೆ ಸೀತಾರಾಮ್ 'ಮಾಯಾಮೃಗ', 'ಮುಕ್ತ'ದಂತಹ ಧಾರಾವಾಹಿಗಳನ್ನು ಕೊಟ್ಟಾಗ ಪ್ರೇಕ್ಷಕರಿಗೆ ಅವರ ಬಗ್ಗೆ ವಿಶೇಷ ಅಭಿಮಾನ ಮೂಡಿದ್ದರಲ್ಲಿ ಅಚ್ಚರಿಯಿಲ್ಲ.

ಸೀತಾರಾಮ್ ಧಾರಾವಾಹಿಗಳು ಜನರಿಗೆ ಇಷ್ಟವಾದದ್ದೇ ಅವು ನೈಜತೆಗೆ ಹೊಂದಿರುವ ಸಾಮೀಪ್ಯದಿಂದ. ಅತಿರಂಜಿತ ಕೌಟುಂಬಿಕ ನಾಟಕಗಳು, ಮೂಢನಂಬಿಕೆಗಳ ವೈಭವೀಕರಣ, ಅನೈತಿಕ ಸಾಮಾಜಿಕ ಸಂಬಂಧಗಳು, ಮಹಿಳೆಯರನ್ನು ಸಂಕುಚಿತ ಮನಸ್ಸಿನವರಂತೆಯೂ, ಜಗಳಗಂಟಿಯರಂತೆಯೂ ತೋರಿಸುವ ಚಿತ್ರಣ ಇತ್ಯಾದಿಗಳಿಂದಲೇ ತುಂಬಿ ಹೋದ ಕನ್ನಡ ಧಾರಾವಾಹಿಗಳಿಗೆ ವಾಸ್ತವಿಕತೆಯ ಮೆರುಗು ಕೊಟ್ಟವರು ಸೀತಾರಾಮ್. ವರ್ತಮಾನಕ್ಕೆ ಹತ್ತಿರವಾದ ಕಥಾನಕಗಳನ್ನು ಪ್ರೇಕ್ಷಕ ಪ್ರೋತ್ಸಾಹಿಸುತ್ತಾನೆ ಎಂಬುದಕ್ಕೆ ಸೀತಾರಾಮ್ ಅವರ ಧಾರಾವಾಹಿಗಳು ಗಳಿಸಿರುವ ಜನಪ್ರಿಯತೆ ಸಾಕ್ಷಿ. ಅವರ ಧಾರಾವಾಹಿಗಳು ವಾಸ್ತವದಲ್ಲಿ ಬೆಳೆಯುತ್ತವೆ. ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುತ್ತವೆ. ಜನರ ದಿನನಿತ್ಯದ ಬದುಕಿನ ಎಳೆಗಳಿಗೆ ಜೀವ ನೀಡುತ್ತವೆ. ಸೀತಾರಾಮ್ ಕನ್ನಡದಲ್ಲಿ ಹೊಸ ಪ್ರೇಕ್ಷಕ ಸಂಸ್ಕೃತಿಯನ್ನು ಬೆಳೆಸಿದರು. ಟಿವಿ ಧಾರಾವಾಹಿಗಳೆಂದರೆ ಸೋಮಾರಿಗಳ ಟೈಮ್‌ಪಾಸ್‌ನ ಮಾರ್ಗಗಳೆಂದು ಮೂಗುಮುರಿಯುತ್ತಿದ್ದವರೂ ಧಾರಾವಾಹಿಗಳತ್ತ ಮುಖಮಾಡುವಂತೆ ಮಾಡಿದರು. ಅದು ಅವರ ಯಶಸ್ಸು ಎಂದರೆ ಅತಿಶಯದ ಹೇಳಿಕೆ ಆಗಲಾರದೇನೋ?

'ಮುಕ್ತ' ಧಾರಾವಾಹಿಯ ಮುಂದುವರಿದ ಭಾಗದಂತೆ ಮೂಡಿಬಂದ 'ಮುಕ್ತಮುಕ್ತ'ವೂ ಜನರಿಗೆ ಹತ್ತಿರವಾದದ್ದು ಅದು ಎತ್ತಿಕೊಂಡ ವಾಸ್ತವಿಕ ವಸ್ತುಗಳಿಂದಾಗಿಯೇ. ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ, ವಿಶೇಷ ಆರ್ಥಿಕ ವಲಯ, ರಾಜಕಾರಣಿ ಹಾಗೂ ಉದ್ಯಮಿಗಳ ಸಂಬಂಧ, ಅಕ್ರಮ ಭೂಒತ್ತುವರಿ, ನೀತಿಗೆಟ್ಟ ರಾಜಕಾರಣ ಮೊದಲಾದ ವಸ್ತುಗಳನ್ನು ಬಳಸಿಕೊಂಡೇ ಕಥೆ ಹೆಣೆದದ್ದೇ ಮುಕ್ತ ಮುಕ್ತದ ಶಕ್ತಿ. ಧಾರಾವಾಹಿಯ ಉದ್ದಕ್ಕೂ ರಾಜಕಾರಣದ ಒಂದು ಚೌಕಟ್ಟು ಹಾಕಿಕೊಂಡು ಪ್ರಚಲಿತ ವಿದ್ಯಮಾನಗಳೊಂದಿಗೆ ಸಮೀಕರಿಸುತ್ತಾ ಹೋಗಿದ್ದರಿಂದ ಇದು ಕಥೆಗಿಂತಲೂ ಮುಖ್ಯವಾಗಿ ವರ್ತಮಾನದ ರಾಜಕೀಯ ವ್ಯವಸ್ಥೆಯ ವಿಡಂಬನೆಯೋ ಎಂದು ನೋಡುಗರಿಗೆ ಅನ್ನಿಸಿದ್ದರೆ ಅದು ಆಕಸ್ಮಿಕ ಆಗಿರಲಾರದು. ಅನೇಕ ಪ್ರಜ್ಞಾವಂತ ನಾಗರಿಕರು ಮುಕ್ತ ಮುಕ್ತದ ಖಾಯಂ ಪ್ರೇಕ್ಷಕರಾಗಿ ಬದಲಾಗಿದ್ದರೆ ಅದಕ್ಕೆ ಧಾರಾವಾಹಿ ವಾಸ್ತವಿಕತೆಯ ಕನ್ನಡಿಯಂತೆ ಇದ್ದುದೇ ಕಾರಣ.

ಎಲ್ಲ ಪ್ರಶಂಸೆಗಳ ಜತೆಗೆ ಸಹಜವಾಗಿಯೇ ಮುಕ್ತಮುಕ್ತದ ಬಗ್ಗೆ ಸಾಕಷ್ಟು ಟೀಕೆಗಳೂ ಕೇಳಿಬಂದಿವೆ. ಸೀತಾರಾಮ್ ಅವರ ಟ್ರಂಪ್ ಕಾರ್ಡ್ ಎನಿಸಿರುವ ಕೋರ್ಟ್ ದೃಶ್ಯಗಳು ಬಹುಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿರುವಂತೆ, ನ್ಯಾಯಾಲಯ ದೃಶ್ಯಗಳಿಲ್ಲದೆ ಸೀತಾರಾಮ್ ಅವರಿಗೆ ಒಂದು ಧಾರಾವಾಹಿಯನ್ನು ಗೆಲ್ಲಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುವವರೂ ಇದ್ದಾರೆ. ಕೋರ್ಟ್ ದೃಶ್ಯಗಳನ್ನು ಜನ ಇಷ್ಟಪಡುತ್ತಾರೆಂದು ಸೀತಾರಾಮ್ ಅವುಗಳನ್ನೇ ಅನಗತ್ಯವಾಗಿ ಲಂಬಿಸುತ್ತಾ ಹೋಗುವುದು ಸರಿಯಾದ ಕ್ರಮವಲ್ಲ ಎಂಬ ಟೀಕೆ ಕೆಲವರದ್ದು. ಊಟಕ್ಕಿಂತ ಉಪ್ಪಿನಕಾಯಿಯೇ ಹೆಚ್ಚಾಗಬಾರದಲ್ಲ ಎಂಬ ಅವರ ಅಭಿಪ್ರಾಯ ಅತಿರೇಕದ್ದೇನೂ ಅಲ್ಲ. ಆದರೆ ನ್ಯಾಯಾಲಯ ದೃಶ್ಯಗಳನ್ನು ಸೃಷ್ಟಿಸುವಾಗ ಸೀತಾರಾಮ್ ತೋರಿಸುವ ತಾದಾತ್ಮ್ಯ ಕೂಡ ತುಂಬ ಮಂದಿಗೆ ಇಷ್ಟವಾದದ್ದು. ಒಂದು ಸುದೀರ್ಘ ಕಥೆ ಹೆಣೆಯುವಾಗ ಕೆಲವೊಮ್ಮೆ ಕೊಂಡಿಗಳ ನಡುವೆ ಸರಿಯಾದ ತರ್ಕ ಇಲ್ಲದೇ ಹೋಗಿ ತಮಾಷೆ ಎನಿಸುವುದು ಇದ್ದೇ ಇದೆ. ಅದರಲ್ಲೂ ನಿವೇದಿತ ಪಾತ್ರವನ್ನು ರಾಜಾನಂದಸ್ವಾಮಿ ಕೊಲೆ ಆರೋಪದಿಂದ ಪಾರು ಮಾಡುವ ವಾದಸರಣಿಯಲ್ಲಿ ಸೀತಾರಾಮ್ ಸಿಎಸ್‌ಪಿ ಆಗಿ ವಾದಿಸುವುದಕ್ಕಿಂತಲೂ ಧಾರಾವಾಹಿಯ ನಿರ್ದೇಶಕರಾಗಿ ವಾದಿಸುವುದು ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಆದರೂ ಅದು ಅಸಹನೀಯ ಆಗಿರಲಿಲ್ಲ. ಧಾರಾವಾಹಿಯ ಎಲ್ಲ ಕಂತುಗಳನ್ನೂ ಖುದ್ದು ಸೀತಾರಾಮ್ ಅವರೇ ನಿರ್ದೇಶಿಸದೆ ಇದ್ದುದು ಕೂಡ ಅನೇಕ ಪ್ರೇಕ್ಷಕರಿಗೆ ಅಸಮಾಧಾನ ತಂದದ್ದಿದೆ.

ಮುಕ್ತಮುಕ್ತದ ಬಳಿಕ ಒಂದೆರಡು ಸಿನಿಮಾ ಮಾಡುವ ಆಸಕ್ತಿಯಿದೆ ಎಂದು ಸೀತಾರಾಮ್ ಘೋಷಿಸಿಕೊಂಡಿದ್ದಾರೆ. ಮುಕ್ತಮುಕ್ತದ ಆರಂಭದಲ್ಲಿ ಸಿನಿಮಾ ಮಾಡಿ ಸೋತು ತಾನು ಖಿನ್ನನಾಗಿದ್ದೆ ಎಂದು ಸೀತಾರಾಮ್ ಹೇಳಿಕೊಂಡಿದ್ದರು. ಇದೀಗ ಅವರು ಮತ್ತೆ ಕಾದಂಬರಿ ಆಧಾರಿತ ಸಿನಿಮಾಗಳನ್ನು ಮಾಡುವ ಆಸಕ್ತಿ ತೋರಿಸಿರುವುದು ಪ್ರೇಕ್ಷಕರಿಗೆ ಕುತೂಹಲದ ಸಂಗತಿಯೇ. ತಾನು ತನ್ನ ಮುಂದಿನ ಧಾರಾವಾಹಿಗಳಿಗೆ ಯುವ ಪ್ರತಿಭಾವಂತರನ್ನು ಹುಡುಕುತ್ತಿರುವುದಾಗಿಯೂ, ಅವರಿಗೆ ತರಬೇತಿ ಕೊಡುವುದಾಗಿಯೂ ಕೆಲಸಮಯದ ಹಿಂದೆ ಅವರು ಹೇಳಿದ್ದಿದೆ. ಸೀತಾರಾಮ್ ನಿಜಕ್ಕೂ ಆ ಕೆಲಸ ಮಾಡಿದರೆ ಒಳ್ಳೆಯದೇ. ಏಕತಾನತೆ ಹಾಗೂ ಕಲಾವಿದರ ಕೊರತೆಯಿಂದ ಸೊರಗಿ ಹೋಗಿರುವ ನಮ್ಮ ಧಾರಾವಾಹಿ ಜಗತ್ತಿನಲ್ಲಿ ಹೊಸ ಪರ್ವವೇನಾದರೂ ಕಾಣಿಸಿಕೊಂಡರೆ ಅದು ಸ್ವಾಗತಾರ್ಹ.

ಇಲ್ಲಿಗೆ ಬರೆಹವನ್ನು ಮುಗಿಸಬೇಕೆಂದು ಅಂದುಕೊಂಡರೂ, ಮುಕ್ತಮುಕ್ತದ ಶೀರ್ಷಿಕೆ ಸಾಹಿತ್ಯ ಏಕೋ ಮತ್ತೆಮತ್ತೆ ಮನಸ್ಸಿನಲ್ಲಿ ಗುಂಯ್‌ಗುಡುತ್ತಿದೆ. ಹೀಗಾಗಿ, ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರ ಅನುಮತಿ ಕೋರಿ, ಅವರ ರಚನೆಯನ್ನು ಇಲ್ಲಿಗೆ ಜೋಡಿಸುತ್ತಿದ್ದೇನೆ.

ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ ಮರೆಯಲಿನಿಂತೆ ಕಾಯುವ ಕರುಣಾಮಯಿಯ

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ?
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ


2 ಕಾಮೆಂಟ್‌ಗಳು:

Unknown ಹೇಳಿದರು...

ಸದಭಿರುಚಿಯ ಧಾರಾವಾಹಿ...ಸಭ್ಯತೆಯ ಸೀಮೆ ಮೀರದ ಪಾತ್ರಗಳು (ಖಳ ಪಾತ್ರವೂ ಸೇರಿದಂತೆ) TNS ಅವರ ಧಾರಾವಾಹಿಗಳ ವಿಶೇಷ...ಅವರಿಗೆ ಶುಭವಾಗಲಿ..

VENU VINOD ಹೇಳಿದರು...

ಒಳ್ಳೆ ಲೇಖನ ಸಿಬಂತಿ.
ಮುಕ್ತ ಧಾರಾವಾಹಿ ನಾನು ನೋಡಿದ್ದು ಕಡಿಮೆ, ಆದರೆ ಮುಕ್ತ ಮುಕ್ತ ನನ್ನ ಆಪ್ತ ಗೀತೆ!
ಲಿರಿಕ್ಸ್ ಕೊಟ್ಟಿದ್ದಕ್ಕೆ ವಂದನೆ, ಅಂದಹಾಗೆ ನಾನೂ ಕೂಡಾ ಗುನುಗುವ ಗೀತೆ ಇದುವೆ!