ಮಾಧ್ಯಮಶೋಧ-33, ಹೊಸದಿಗಂತ, 10 ಜನವರಿ 2013
ಮೂವತ್ತು ದಾಟುವ ಹೊತ್ತಿಗೆ ಒಬ್ಬ ವ್ಯಕ್ತಿ ತನ್ನೆಲ್ಲ ಹುಡುಗಾಟಿಕೆಗಳನ್ನು ಮುಗಿಸಿ ಒಂದು ಗಂಭೀರ, ಪ್ರಬುದ್ಧ ಬದುಕಿಗೆ ಅಡಿಯಿಡುತ್ತಾನೆಂಬುದು ಸಾಮಾನ್ಯ ನಂಬಿಕೆ. ಕಾನೂನಿನ ಪ್ರಕಾರ 18 ವರ್ಷ ಪೂರ್ಣಗೊಂಡ ವ್ಯಕ್ತಿ ವಯಸ್ಕನೆನಿಸುತ್ತಾನಾದರೂ, ಆತ ಬಾಲ್ಯದ ಮುಗ್ಧತೆ, ಹದಿಹರೆಯದ ಕೌತುಕಗಳನ್ನು ದಾಟಿ ತಾರುಣ್ಯದ ಮೆಟ್ಟಿಲೇರುತ್ತಾ ತನ್ನ ಜೀವನದ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವ ಸಮಯಕ್ಕೆ ಮೂವತ್ತು ವರ್ಷಗಳೇ ಕಳೆದಿರುತ್ತವೆ ಎಂಬುದು ಅನುಭವಸ್ಥರ ಮಾತು. ಅಂದಹಾಗೆ, ನಮ್ಮ ಇಂಟರ್ನೆಟ್ ಎಂಬ ವಿಸ್ಮಯ ಜಗತ್ತು ಜನಿಸಿ ಮೂವತ್ತು ವರ್ಷಗಳೇ ಆಗಿಹೋದವಂತೆ. ಅಂತಿಂಥ ದೃಷ್ಟಿಗೆ ನಿಲುಕದ ಬೃಹತ್ ಜಗತ್ತನ್ನು ಅಂಗೈ ಮೇಲೆ ತಂದು ನಿಲ್ಲಿಸಿದ ಹೆಗ್ಗಳಿಗೆ ಹೊಂದಿರುವ ಈ ಇಂಟರ್ನೆಟ್ಟೇನಾದರೂ ಪ್ರಬುದ್ಧತೆಯ ಮಜಲನ್ನು ಪ್ರವೇಶಿಸಿದೆಯೇ? ಅದು ಕ್ರಮಿಸಿರುವ ಹಾದಿ, ಏರಿರುವ ಗಾದಿಯಲ್ಲಿ ಮೂವತ್ತು ವರ್ಷಗಳ ಸಾರ್ಥಕತೆ ಕಾಣಿಸುತ್ತಿದೆಯೇ?
ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಕಷ್ಟವಾದರೂ, ಇಂಟರ್ನೆಟ್ ಎಂಬ ಮಾಯಾಲೋಕದಿಂದಾಗಿ ಸಂವಹನವೆಂಬ ಮನುಷ್ಯನ ಪ್ರಾಥಮಿಕ ಪ್ರಪಂಚದಲ್ಲಿ ಒಂದು ಪ್ರಜಾಪ್ರಭುತ್ವ ನೆಲೆಗೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ಮಾತ್ರ ನಿಸ್ಸಂಶಯವಾಗಿ ಒಪ್ಪಿಕೊಳ್ಳಬಹುದು. ಮೂವತ್ತನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಅಂತರ್ಜಾಲಕ್ಕೆ ಈಗಿನ್ನೂ ಹದಿಹರೆಯವೋ ಎಂದರೆ ಅದು ತಪ್ಪಾದ ಊಹೆಯೇನೂ ಅಲ್ಲ; ಅದು ಪ್ರಬುದ್ಧತೆಗೆ ಅಡಿಯಿಟ್ಟಿದೆಯೋ ಎಂದರೆ ಅಲ್ಲಗಳೆಯುವಂಥದ್ದೂ ಅಲ್ಲ.
ಇಂಟರ್ನೆಟ್ ಲೋಕ ದಿನದಿಂದ ದಿನಕ್ಕೆ ಹೊಸಹೊಸ ಬದಲಾವಣೆಗಳಿಗೆ ಮೈಯೊಡ್ಡಿಕೊಳ್ಳುತ್ತಿರುವುದು ನೋಡಿದರೆ ಇದಿನ್ನೂ ಎಷ್ಟೊಂದು ಬದಲಾವಣೆಗಳನ್ನು ಆವಾಹಿಸಿಕೊಳ್ಳುವುದಕ್ಕೆ ಸಶಕ್ತವಾಗಿದೆ, ಅಂದರೆ ಇದಿನ್ನೂ ಬಲಿಯುವುದಕ್ಕೆ ಎಷ್ಟೊಂದು ಬಾಕಿಯಿದೆ ಎಂದೆನಿಸದೆ ಇರದು. ಅದು ತಲುಪಿರುವ ಎತ್ತರ, ಜನಜೀವನದೊಂದಿಗೆ ಅದು ಮಿಳಿತವಾಗಿರುವ ಪರಿಯನ್ನು ಕಂಡರೆ, ಅಬ್ಬಾ, ಮೂವತ್ತು ವರ್ಷಗಳಲ್ಲಿ ಒಂದು ತಂತ್ರಜ್ಞಾನ ಇಷ್ಟೊಂದು ಪ್ರಬುದ್ಧವಾಗಿ ಬೆಳೆಯುವುದಾಗಲೀ, ಪ್ರಪಂಚವನ್ನು ಈ ಮಟ್ಟಿಗೆ ಪ್ರಭಾವಿಸುವುದಾಗಲೀ ಸಾಧ್ಯವೇ ಎಂದೂ ವಿಸ್ಮಯವಾಗುತ್ತದೆ.
ಇಂಟರ್ನೆಟ್‌ನ್ನು ಹುಟ್ಟುಹಾಕಿದ ಮಹಾನುಭಾವರ‍್ಯಾರೂ ದಶಕಗಳ ಬಳಿಕ ಅದು ಇಷ್ಟೊಂದು ಬಲಿಷ್ಟವಾಗಿ ಬೆಳೆದುಬಿಡಬಹುದೆಂದು ಊಹಿಸಿರಲಿಲ್ಲ. ಇಂಟರ್ನೆಟ್‌ನ ಸಾಮಾನ್ಯ ಬಳಕೆದಾರರ ಅಚ್ಚರಿ ಹಾಗಿರಲಿ, ಅದರ ಹರಿಕಾರರುಗಳೆನಿಸಿದ ವಿಂಟ್ ಸೆರ್ಫ್, ರಾಬರ್ಟ್ ಕಾನ್, ಟಿಮ್ ಬರ್ನರ್ಸ್ ಲೀಯಂತಹ ವಿಜ್ಞಾನಿಗಳಿಗೇ ತಮ್ಮ ಮಾನಸಶಿಶುವಿನ ದೈತ್ಯಾಕೃತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಇಂಟರ್ನೆಟ್‌ಗೆ ಬೀಜಾಂಕುರವಾದಾಗ ಅದೊಂದು ಪುಟ್ಟ ಪ್ರಯೋಗವಷ್ಟೇ ಆಗಿತ್ತು. ಸರಿಸುಮಾರು 40 ವರ್ಷಗಳ ಹಿಂದೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಸ್ನೇಹಿತರು ತಮ್ಮ ಕಂಪ್ಯೂಟರ್‌ಗಳ ಮೂಲಕ ಒಂದಷ್ಟು ಅಂಕಿಅಂಶಗಳನ್ನು ವಿನಿಮಯ ಮಾಡಿಕೊಂಡ ಕ್ಷಣ ತಾವು ಈ ಜಗತ್ತಿನ ಅತ್ಯಂತ ಶಕ್ತಿಯುತ ಸಂವಹನ ಮಾಧ್ಯಮವೊಂದರ ಸೃಷ್ಟಿಗೆ ಬೀಜ ಬಿತ್ತಿದ್ದೇವೆ ಎಂದೇನೂ ಯೋಚಿಸಿರಲಾರರು. ಅವರು ತಮ್ಮಷ್ಟಕ್ಕೇ ಹಾಗೊಂದು ಪ್ರಯೋಗ ನಡೆಸಿದರು ಅಷ್ಟೆ. ಅದು ತಾನೇ ತಾನಾಗಿ ಅಭಿವೃದ್ಧಿಯಾಗುತ್ತಾ ಹೋಯಿತು. ಆರಂಭದಲ್ಲಿ ಇಂಟರ್ನೆಟ್ ಎಂಬುದು ಅಮೇರಿಕದ ರಕ್ಷಣಾ ಇಲಾಖೆಯ ಆರ್ಥಿಕ ಒತ್ತಾಸೆಯ ಸಂಪರ್ಕಜಾಲವೊಂದರ ಸಂಶೋಧನ ಯೋಜನೆಯಾಗಿತ್ತು. 1969ರ ಅಕ್ಟೋಬರ್ 29ರಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಹಾಗೂ ಸ್ಟ್ಯಾನ್‌ಫೋರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡುವೆ ‘ಅರ್ಪಾನೆಟ್’ ಎಂಬ ಸಂಪರ್ಕಜಾಲದ ಸೃಷ್ಟಿ ಸಾಧ್ಯವಾಯಿತು.
1950ರ ದಶಕದಲ್ಲೇ ವಿಜ್ಞಾನಿಗಳು ಕಂಪ್ಯೂಟರ್ ಜಾಲವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದರೂ, ಈ ನೆಟ್‌ವರ್ಕ್ ಮೂಲಕ ಕಂಪ್ಯೂಟರ್‌ಗಳು ಪರಸ್ಪರ ಸಂವಹನ ನಡೆಸಬಹುದಾದ ಒಂದು ಸಾಮಾನ್ಯ ಭಾಷೆಯನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. 1970ರ ಅಂತ್ಯದವರೆಗೂ ಈ ಪರಿಸ್ಥಿತಿ ಮುಂದುವರಿದಿತ್ತು. 1979ರಲ್ಲಿ ಕಂಪ್ಯೂಟರುಗಳು ಆಂತರಿಕವಾಗಿ ಪರಸ್ಪರ ಸಂವಹನ ನಡೆಸಬಹುದಾದ ಪ್ರೊಟೋಕಾಲ್‌ಗಳ ಬಗ್ಗೆ ರಾಬರ್ಟ್ ಕಾನ್ ಹಾಗೂ ವಿಂಟ್ ಸೆರ್ಫ್ ಎಂಬವರು ಸಂಶೋಧನ ನಿಯತಕಾಲಿಕವೊಂದರಲ್ಲಿ ಪ್ರಬಂಧವನ್ನು ಪ್ರಕಟಿಸಿ ಅದರ ಸಾಧ್ಯತೆಗಳನ್ನು ಚರ್ಚಿಸಿದರು; ಮುಂದೇ ಅವರೇ ಅದನ್ನು ಟ್ರಾನ್ಸ್‌ಮಿಶನ್ ಕಂಟ್ರೋಲ್ ಪ್ರೊಟೋಕಾಲ್ (ಟಿಸಿಪಿ) ಮತ್ತು ಇಂಟರ್ನೆಟ್ ಪ್ರೊಟೋಕಾಲ್ (ಐಪಿ) ಎಂದು ಕರೆದರು. ಈ ಟಿಸಿಪಿ/ಐಪಿಗಳೇ ಆಧುನಿಕ ಇಂಟರ್ನೆಟ್‌ನ ಉಗಮಕ್ಕೆ ಕಾರಣವಾದವು. 1983 ಜನವರಿ 1ರಿಂದ ಇದೇ ಪ್ರೊಟೋಕಾಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಭಾಷೆಯಾಗಿ ಬಳಕೆಯಾಗತೊಡಗಿತು.
1983ರನ್ನು ಇಂಟರ್ನೆಟ್‌ನ ಉಗಮದ ವರ್ಷವೆಂದು ಪರಿಗಣಿಸಲಾಗುತ್ತಿದೆಯಾದರೂ, ಜನಸಾಮಾನ್ಯರ ಬಳಕೆಯಲ್ಲಿ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಆಗಿರುವ ವರ್ಲ್ಡ್ ವೈಡ್ ವೆಬ್ ಪ್ರಪಂಚಕ್ಕೆ ಪರಿಚಯವಾದದ್ದು 1990ರಲ್ಲಿ ಟಿಮ್ ಬರ್ನರ್ಸ್ - ಲೀ ಮೂಲಕ. ಆದರೆ ಇದಕ್ಕಿಂತ ಮೊದಲೇ ಅಂದರೆ 1972ರಲ್ಲೇ ಇ-ಮೇಲ್‌ನ ಪರಿಚಯವಾಗಿತ್ತು. 1995ರ ವೇಳೆಗೆ ಜಗತ್ತಿನಾದ್ಯಂತ 16 ಮಿಲಿಯನ್ ಜನರು ಇಂಟರ್ನೆಟ್ ಬಳಸಲಾರಂಭಿಸಿದ್ದರು. ಇಂದು ಈ ಸಂಖ್ಯೆ 2.4 ಬಿಲಿಯನ್‌ಗೆ ಏರಿದೆ. ಒಂದು ಅಂದಾಜಿನ ಪ್ರಕಾರ ಇಂಟರ್ನೆಟ್‌ನ್ನು ಒಂದು ದೇಶವೆಂದು ಪರಿಗಣಿಸುವುದಾದರೆ, ಆದಾಯದ ವಿಷಯದಲ್ಲಿ ಇದು ಜಗತ್ತಿನ ಐದನೇ ಅತಿದೊಡ್ಡ ಅರ್ಥವ್ಯವಸ್ಥೆ ಆಗುವಷ್ಟು ಬಲಿಷ್ಟವಾಗಿದೆಯಂತೆ! 2020ರ ವೇಳೆಗೆ ಇಂಟರ್ನೆಟ್ 40 ಟ್ರಿಲಿಯನ್ ಡಾಲರ್ ದೈತ್ಯ ಉದ್ಯಮವಾಗಿ ಬೆಳೆಯಬಲ್ಲುದೆಂಬುದು ಪರಿಣಿತರ ಅಂದಾಜು. ಬರೀ ಭಾರತವೊಂದರಲ್ಲೇ ಅಂದರೆ, ಜನಸಂಖ್ಯೆಯ ಶೇ. 10 ಭಾಗ ಮಾತ್ರ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಅಭಿವೃದ್ಧಿಶೀಲ ದೇಶದಲ್ಲಿ ಇಂದು ಇಂಟರ್ನೆಟ್ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ಆದಾಯ ತರುವ ಉದ್ಯಮವಾಗಿದೆ ಎಂದರೆ ಪ್ರಪಂಚದ ಉಳಿದ ದೇಶಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು.
ಇಂಟರ್ನೆಟ್ ಇಷ್ಟು ಬಲಿಷ್ಟವಾಗಿ ವಿಸ್ತಾರವಾಗಿ ಬೆಳೆದಿರುವ ಹೊತ್ತಿಗೇ ಅದರ ಸಾಧಕ ಬಾಧಕಗಳ ಚರ್ಚೆಯೂ ಸಾಕಷ್ಟು ವ್ಯಾಪಕವಾಗಿಯೇ ನಡೆಯುತ್ತಿದೆ. ಇಂಟರ್ನೆಟ್, ಅದರಲ್ಲೂ, ಸಾಮಾಜಿಕ ಮಾಧ್ಯಮಗಳ ಭರಾಟೆ ಕಾವೇರಿರುವ ಸಂದರ್ಭದಲ್ಲೇ ಅವುಗಳ ಕರಾಳ ಮುಖದ ಬಗ್ಗೆ ಕಳವಳಗೊಂಡು ಜಗತ್ತು ತಲೆಮೇಲೆ ಕೈಹೊತ್ತಿದೆ. ಇಂಟರ್ನೆಟ್ಟಿನ ಹೆಸರಲ್ಲಿ ಜನತೆ ಅನುಭವಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ತಮ್ಮ ಬುಡಕ್ಕೇ ಕೊಡಲಿಯೇಟು ಹಾಕುತ್ತಿದೆಯೋ ಎಂದು ಆಳುವ ಸರ್ಕಾರಗಳು ಚಿಂತಾಕ್ರಾಂತವಾಗಿದ್ದರೆ, ಇಂಟರ್ನೆಟ್ ಸೆನ್ಸಾರ್‌ಶಿಪ್ ನೆಪದಲ್ಲಿ ಅಧಿಕಾರ ಹಿಡಿದಿರುವವರು ಎಲ್ಲಿ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತಾರೋ ಎಂದು ಜನತೆ ಕಳವಳಕ್ಕೀಡಾಗಿದ್ದಾರೆ. ಜಗತ್ತಿನ ಅನೇಕ ದೇಶಗಳು ಕೆಲವೊಮ್ಮೆ ಅಧಿಕೃತವಾಗಿಯೂ ಬಹುಪಾಲು ಅನಧಿಕೃತವಾಗಿಯೂ ಅಂತರ್ಜಾಲದ ವಿರುದ್ಧ ಸಮರ ಸಾರಿವೆ. ಈ ಕ್ರಮಗಳಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಿಸ್ತು, ರಾಷ್ಟ್ರೀಯ ಭದ್ರತೆ ಇತ್ಯಾದಿ ಕಾರಣಗಳನ್ನು ನೀಡಿದರೂ, ಅನೇಕ ಬಾರಿ ಆಡಳಿತದಲ್ಲಿರುವವರು ತಮ್ಮ ರಾಜಕೀಯ ದೌರ್ಬಲ್ಯಗಳನ್ನು ಮುಚ್ಚಿಹಾಕಿಕೊಳ್ಳಲೆಂದೇ ಇಂಟರ್ನೆಟ್‌ಗೆ ನಿಷೇಧ ಅಥವಾ ನಿಯಂತ್ರಣದ ಲಗಾಮು ಹಾಕುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.
ಏನೇ ಇದ್ದರೂ, ಇಂಟರ್ನೆಟ್‌ನಿಂದಾಗಿ ಇಂದು ವ್ಯಕ್ತಿಯ ಮೂಲಭೂತ ಅವಶ್ಯಕತೆಯಾಗಿರುವ ಸಂವಹನದ ’ಡೆಮಾಕ್ರಸಿ’ ಸಾಧ್ಯವಾಗಿದೆಯೆಂಬುದು ಒಂದು ಸಮಾಧಾನದ ಸಂಗತಿ. ಇಂಟರ್ನೆಟ್‌ನ್ನು ಭಯೋತ್ಪಾದಕರಂತಹ ಸಮಾಜಘಾತುಕ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿಯಾದರೂ ಎಲ್ಲವುಗಳಿಗಿಂತ ಮಿಗಿಲಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಂತರ್ಜಾಲ ಒಂದು ಪ್ರಚಂಡ ವೇದಿಕೆಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಇಂಟರ್ನೆಟ್ ಇಲ್ಲದೇ ಹೋದರೆ ಆಳುವ ವರ್ಗ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚಿಡಬಯಸುವ ಹಲವಾರು ಪ್ರಮುಖ ಸಂಗತಿಗಳು ಇಂದು ಕತ್ತಲಲ್ಲೇ ಕಾಣೆಯಾಗಿ ಹೋಗಿರುತ್ತಿದ್ದವು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಕಣ್ಣು ತಪ್ಪಿಸಿದರೂ ಇಂದು ಅಂತರ್ಜಾಲದ ಜತೆ ಕಣ್ಣುಮುಚ್ಚಾಲೆ ಸಾಧ್ಯವಿಲ್ಲ. ಅದು ಬಟಾಬಯಲಿನಲ್ಲಿ ಅಡಗಿದಷ್ಟೇ ನಿಷ್ಪ್ರಯೋಜಕ. ಇದಕ್ಕೆ ಕಳೆದ ಎರಡು ಮೂರು ವರ್ಷಗಳಲ್ಲಿ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.
ಕಳೆದೆರಡು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನೇ ತೆಗೆದುಕೊಳ್ಳೋಣ. ವಿವಾಹ ಮತ್ತು ಸ್ತ್ರೀ-ಪುರುಷ ಸಂಬಂಧಗಳ ಹಿನ್ನೆಲೆಯಲ್ಲಿ ಭಾಗವತ್ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡೋ ಉದ್ದೇಶಪೂರ್ವಕವಾಗಿ ತಿರುಚಿಯೋ ಒಂದಿಬ್ಬರು ಸುದ್ದಿಸಂಸ್ಥೆ ಪ್ರತಿನಿಧಿಗಳು ಮಾಡಿದ ವರದಿ ಇಡೀ ದೇಶದಲ್ಲಿ ಸಾಲುಸಾಲು ಖಂಡನೆಗಳನ್ನು ಹುಟ್ಟುಹಾಕಿತು. ಎಲ್ಲರೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರತಿಭಟನೆ, ಚರ್ಚೆಗೆ ಕಾರಣವಾಗಿರುವ ಅತ್ಯಾಚಾರ ಪ್ರಕರಣಗಳ ಗುಂಗಿನಲ್ಲೇ ಯೋಚನೆ ಮಾಡುತ್ತಿದ್ದರು. ಭಾಗವತ್ ನಿಜವಾಗಿಯೂ ಹೇಳಿದ್ದಾದರೂ ಏನು ಎಂಬುದನ್ನು ಯಾರೂ ಕೇಳಿಸಿಕೊಂಡಿರಲಿಲ್ಲ. ಸುದ್ದಿಸಂಸ್ಥೆ ಕಳುಹಿಸಿದ ವರದಿಯೇ ಎಲ್ಲವಕ್ಕೂ ಆಧಾರವಾಗಿತ್ತು. ಎಲ್ಲ ಪತ್ರಿಕೆ, ಚಾನೆಲ್‌ಗಳಲ್ಲೂ ಅದು ಲೀಡ್ ಸುದ್ದಿಯಾಯಿತು. ಮಾಧ್ಯಮಗಳು ಸಿಕ್ಕಿದ್ದೇ ಅವಕಾಶ ಸಾಕೆಂದು ಎಷ್ಟು ಸಾಧ್ಯವೋ ಅಷ್ಟು 'ಆಕರ್ಷಕ’ವಾಗಿ ಸುದ್ದಿಯನ್ನು ಪ್ರಸಾರ ಮಾಡಿದವು. ಖಂಡನೆ ಪ್ರತಿಭಟನೆಗಾಗಿ ಕಾಯುತ್ತಿದ್ದವರಂತೂ ಪುಂಖಾನುಪುಂಖವಾಗಿ ತಮ್ಮ ಖಂಡನೆಯ ಬಾಣಗಳನ್ನು ಎಸೆದರು. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಮನಬಂದಂತೆ ಕಾಮೆಂಟುಗಳನ್ನು ಹಾಕಿ ತಮ್ಮ ರೋಷಾವೇಶವನ್ನು ಹೊರಹಾಕಿದರು.
ವಿಶೇಷವೆಂದರೆ ಇದೇ ಇಂಟರ್ನೆಟ್‌ನಿಂದಾಗಿ ನಿಜ ಏನೆಂಬುದು ನಿಧಾನವಾಗಿಯಾದರೂ ಜನರಿಗೆ ಗೊತ್ತಾಗತೊಡಗಿದೆ. ಭಾಗವತ್ ಭಾಷಣದಲ್ಲಿ ಏನು ಹೇಳಿದರು, ಅದರ ವೀಡಿಯೋ ತುಣುಕಿನಲ್ಲಿ ಏನಿದೆ ಎಂಬುದು ಗೊತ್ತಾದ ಮೇಲೂ ನಮ್ಮ ಪತ್ರಿಕೆಗಳು, ಚಾನೆಲ್‌ಗಳು ತುಟಿಪಿಟಕ್ಕೆನ್ನದೆ ಕುಳಿತಿರಬಹುದು, ಈ ಜಾಣ ಮೌನದ ಹಿಂದೆ ಅವರದ್ದೇ ಆದ ಅಜೆಂಡಾಗಳೂ ಇರಬಹುದು ಆದರೆ ಸಾಮಾಜಿಕ ಜಾಲತಾಣಗಳ ಬಾಯಿಕಟ್ಟಲು ಸಾಧ್ಯವಿಲ್ಲ. ಅವು ಸತ್ಯವನ್ನು ಹೊರಗೆಡಹಿವೆ. ಫೇಸ್‌ಬುಕ್ ಟ್ವಿಟರ್, ಯೂಟ್ಯೂಬ್‌ಗಳಲ್ಲಿ ವರದಿಯ ನಂತರದ ಬೆಳವಣಿಗೆಗಳು ಬಹಿರಂಗವಾಗುತ್ತಿವೆ. ತಾನು ಭಾಗವತ್ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ ಎಂದು ಸಿಎನ್‌ಎನ್-ಐಬಿಎನ್‌ನ ಸಾಗರಿಕಾ ಘೋಷ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ; ಅತ್ತ ಕಾರ್ಯಕ್ರಮದ ವರದಿ ಮಾಡಿ ಎಲ್ಲ ಅವಾಂತರಕ್ಕೆ ಕಾರಣವಾಗಿದ್ದ ವರದಿಗಾರನನ್ನು ಕೆಲಸದಿಂದ ತೆಗೆಯಲಾಗಿದೆಯೆಂದು ಎನ್‌ಎನ್‌ಐ ಸುದ್ದಿಸಂಸ್ಥೆಯ ಮುಖ್ಯಸ್ಥೆ ಸ್ಮಿತಾ ಪ್ರಕಾಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.
ಆದರೆ ಇವ್ಯಾವುವೂ ಸುದ್ದಿಯಾಗಿಲ್ಲ. ಭಾಗವತ್ ತಮ್ಮ ಮನುವಾದದ ಬಣ್ಣ ಬಯಲುಮಾಡಿಕೊಂಡಿದ್ದಾರೆಂದು ವಾಚಾಮಗೋಚರವಾಗಿ ಜರಿದ ಮಾಧ್ಯಮಗಳು ತಪ್ಪಿಯೂ ಮೂಲ ವರದಿಯೇ ತಿರುಚಲ್ಪಟ್ಟಿರುವ ಬಗ್ಗೆ ಒಂದು ಕಾಲಂ ಸುದ್ದಿಯನ್ನೂ ಪ್ರಕಟಿಸಿಲ್ಲ. ಮಾಧ್ಯಮಗಳ ಜಾಣಕಿವುಡಿಗೆ ಇದೊಂದೇ ಉದಾಹರಣೆಯೇನೂ ಅಲ್ಲ; ತಮ್ಮಿಂದಲೇ ತಪ್ಪಾಗಿ ಹೋಗಿ ಕ್ರಮೇಣ ಅದರ ಅರಿವಾದರೂ ಏನೂ ಘಟಿಸಿಯೇ ಇಲ್ಲವೇನೋ ಎಂಬಂತೆ ಮಾಧ್ಯಮಗಳು ನಟಿಸಿದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.
ದೆಹಲಿ ವಿದ್ಯಾರ್ಥಿನಿಯ ಹೆತ್ತವರೇ ಬಯಸಿದರೂ ಆಕೆಯ ಹೆಸರನ್ನು ಬಹಿರಂಗಪಡಿಸುವುದು ಪತ್ರಿಕಾ ಧರ್ಮ ಅಲ್ಲವಾದ್ದರಿಂದ ನಾವು ಆಕೆಯ ಹೆಸರನ್ನು ಪ್ರಕಟಿಸುತ್ತಿಲ್ಲ ಎಂದು ದೊಡ್ಡತನ ಮೆರೆದ ಮಾಧ್ಯಮಗಳೂ ಈ ವಿಚಾರದಲ್ಲಿ ತಾವೊಂದು ನೈತಿಕ ಜವಾಬ್ದಾರಿ ಮರೆತಿದ್ದೇವೆಂದು ಅರ್ಥಮಾಡಿಕೊಂಡಿಲ್ಲ. ಆದರೆ ಇಂಟರ್ನೆಟ್ ಎಲ್ಲ ಪೊಳ್ಳುಗಳನ್ನೂ ಬಯಲಾಗಿಸಿದೆ. ಅದೇ ಅದರ ದೊಡ್ಡತನ. ಮನುಷ್ಯ ಮೂಲಭೂತವಾಗಿ ಬಯಸುವ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಇಂಟರ್ನೆಟ್ ಜಾತಿ, ವರ್ಗ, ಧರ್ಮ, ಪಂಥಗಳ ಬೇಧಭಾವವಿಲ್ಲದೆ ಎಲ್ಲರಿಗೂ ಒದಗಿಸಿದೆ. ಈ ನಿಟ್ಟಿನಲ್ಲಿ ಅದೊಂದು ಸಂವಹನದ ಪ್ರಜಪ್ರಭುತ್ವವನ್ನು ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಹಾಗೆಯೇ ಮೂವತ್ತರ ಹೊಸಿಲು ದಾಟಿರುವ ಇಂಟರ್ನೆಟ್ ಮುಂದೆ ಬಹುಕಾಲ ಬಾಳಿಬದುಕಬೇಕಾಗಿರುವುದರಿಂದ ಅದರ ಜವಾಬ್ದಾರಿಯೂ ಅಷ್ಟೇ ಅಗಾಧವಾಗಿ ಬೆಳೆದಿದೆ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕು.
2 ಕಾಮೆಂಟ್‌ಗಳು:
verry informative article...
verry informative sir...
ಕಾಮೆಂಟ್ ಪೋಸ್ಟ್ ಮಾಡಿ