ಮಂಗಳವಾರ, ಜನವರಿ 29, 2013

ಮಂಗಳೂರು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನದ ಅಂಗವಾಗಿ ವಿವಿಧ ಸ್ಪರ್ಧೆಗಳು

ಹಿನ್ನೋಟ: ಶ್ರೀ ಜೋಗಿಯವರು 24-03-2012ರಂದು 8ನೇ ಸಮ್ಮೇಳನ ಉದ್ಘಾಟಿಸಿದ ಕ್ಷಣ.

ಮಂಗಳೂರು ವಿಶ್ವವಿದ್ಯಾನಿಲಯ ಸ್ನಾತಕೋತ್ತರ ಹಳೆವಿದ್ಯಾರ್ಥಿ ಸಂಘವು ವಿ.ವಿ. ಮಟ್ಟದ 9ನೇ ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನವನ್ನು ಮಾರ್ಚ್ ತಿಂಗಳ ಎರಡನೇ ವಾರ ಮಂಗಳೂರಿನಲ್ಲಿ ಆಯೋಜಿಸಲಿದೆ. ಸಮ್ಮೇಳನದಲ್ಲಿ ವಿಚಾರಗೋಷ್ಠಿ, ಕಥಾಗೋಷ್ಠಿ ಹಾಗೂ ಕವಿಗೋಷ್ಠಿಗಳು ನಡೆಯಲಿದ್ದು, ಅವುಗಳಲ್ಲಿ ಮಂಡನೆಯಾಗಬೇಕಾದ ಪ್ರಬಂಧ, ಕಥೆ ಹಾಗೂ ಕವಿತೆಗಳನ್ನು ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಿದೆ.

ಪ್ರಬಂಧ ಸ್ಪರ್ಧೆಗೆ ಎರಡು ವಿಷಯಗಳನ್ನು ಕೊಡಲಾಗಿದೆ:
1. ಜಾತಿಮುಕ್ತ ಭಾರತ: ಸಾಧ್ಯತೆಗಳು ಮತ್ತು ಸವಾಲುಗಳು
2. ಮಹಿಳಾ ಸಬಲೀಕರಣ: ಆಗಿರುವುದೇನು? ಆಗಬೇಕಿರುವುದೇನು?

ವಿದ್ಯಾರ್ಥಿಗಳು ಯಾವುದೇ ಒಂದು ವಿಷಯವನ್ನು ಆಯ್ದುಕೊಳ್ಳಬಹುದು. ಪ್ರಬಂಧ 15 ನಿಮಿಷಗಳ ಓದಿನ ಮಿತಿಯಲ್ಲಿರಬೇಕು. ಪ್ರತೀ ವಿಷಯಕ್ಕೂ ಮೂರು ಪ್ರತ್ಯೇಕ ಬಹುಮಾನಗಳಿವೆ. ಪ್ರಥಮ ಬಹುಮಾನ ಪಡಕೊಂಡ ಪ್ರಬಂಧಗಳು ಸಮ್ಮೇಳನದಲ್ಲಿ ಮಂಡನೆಯಾಗುತ್ತವೆ.

ಕಥೆ ಹಾಗೂ ಕವನಗಳ ವಿಷಯ ವಿದ್ಯಾರ್ಥಿಗಳ ಆಯ್ಕೆಗೆ ಬಿಟ್ಟದ್ದು. ಮೂರು ಉತ್ತಮ ಕಥೆಗಳನ್ನು ಹಾಗೂ ಮೊದಲ ಹತ್ತು ಸ್ಥಾನ ಪಡೆದುಕೊಳ್ಳುವ ಕವಿತೆಗಳನ್ನು ಸಮ್ಮೇಳನದ ಗೋಷ್ಠಿಗಳಿಗೆ ಆಯ್ಕೆ ಮಾಡಲಾಗುತ್ತದೆ. ಕಥೆ ನಾಲ್ಕು ಪುಟಗಳ ಮಿತಿಯಲ್ಲಿರಲಿ.

ಮಂಗಳೂರು ವಿ.ವಿ. ವ್ಯಾಪ್ತಿಗೆ ಬರುವ (ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ) ಎಲ್ಲಾ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಈ ಸ್ಪರ್ಧೆಗಳಲ್ಲಿ ಭಾಗವಹಿಸಬಹುದು. ಕಾಸರಗೋಡಿನ ವಿದ್ಯಾರ್ಥಿಗಳಿಗೂ ಮುಕ್ತ ಅವಕಾಶವಿದೆ. ಎಲ್ಲಾ ವಿಜೇತರಿಗೆ ನಗದು ಬಹುಮಾನ ಹಾಗೂ ಭಾಗವಹಿಸುವ ಎಲ್ಲಾ ವಿದ್ಯಾರ್ಥಿ ಸಾಹಿತಿಗಳಿಗೆ ಪ್ರಶಸ್ತಿ ಪತ್ರಗಳಿವೆ.

ಒಂದು ಕಾಲೇಜಿನಿಂದ ಎಷ್ಟು ಮಂದಿ ಬೇಕಾದರೂ ಭಾಗವಹಿಸಬಹುದು. ಸಂಖ್ಯೆಯ ನಿರ್ಬಂಧವಿಲ್ಲ. ಕಾಲೇಜಿನ ದೃಢೀಕರಣ ಪತ್ರವನ್ನು ಕಡ್ಡಾಯವಾಗಿ ಜತೆಗಿರಿಸಬೇಕು. ಪ್ರವೇಶದೊಂದಿಗೆ ಪೂರ್ಣ ಕಾಲೇಜು ವಿಳಾಸ ಮತ್ತು ಸಂಪರ್ಕ ವಿಳಾಸ ಇರಲಿ. ದೂರವಾಣಿ ಸಂಖ್ಯೆ ಕಡ್ಡಾಯವಾಗಿ ನಮೂದಿಸಿ.

ನಿಮ್ಮ ಪ್ರವೇಶಗಳನ್ನು ಫೆಬ್ರವರಿ 20, 2013 ರೊಳಗೆ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ: ಕಾರ್ಯದರ್ಶಿ, ವಿದ್ಯಾರ್ಥಿ ಸಾಹಿತ್ಯ ಸಮ್ಮೇಳನ ಸಮಿತಿ, ಅಕ್ಷರೋದ್ಯಮ, 4ನೇ ಮಹಡಿ, ಸಿಟಿ ಪಾಯಿಂಟ್, ಕೋಡಿಯಾಲಬೈಲ್, ಮಂಗಳೂರು-572103. ಆಸಕ್ತರು ಹೆಚ್ಚಿನ ಮಾಹಿತಿಗಳಿಗೆ 9880621824, 9449525854, 9449663744 ಮೊಬೈಲ್ ಸಂಖ್ಯೆಗಳನ್ನು ಸಂಪರ್ಕಿಸಬಹುದು.

ಗುರುವಾರ, ಜನವರಿ 24, 2013

ಅಂತೂ ಬಂತು ’ಮುಕ್ತ ಮುಕ್ತ’ದ ಅಂತಿಮ ಕಂತು: ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ...


ಮಾಧ್ಯಮಶೋಧ-34, ಹೊಸದಿಗಂತ, 25 ಜನವರಿ 2013

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ

ಜೀವನ ಪ್ರೀತಿಯ ತಾಜಾ ರೂಪಕದಂತಿರುವ ಈ ಸಾಲುಗಳು ಕನ್ನಡ ಟಿವಿ ವೀಕ್ಷಕರಿಗೆ ದಿನನಿತ್ಯದ ಗುನುಗು. 'ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ’ ಎಂಬ ರಮ್ಯ ಕಲ್ಪನೆಯೊಂದಿಗೆ ಆರಂಭವಾಗುವ 'ಮುಕ್ತ ಮುಕ್ತ’ದ ಶೀರ್ಷಿಕೆ ಸಾಹಿತ್ಯಕ್ಕೆ ಒಂದು ಧಾರಾವಾಹಿಯ ಟೈಟಲ್ ಸಾಂಗ್‌ಗಿಂತ ತುಂಬ ವಿಭಿನ್ನವಾದ ಸ್ಥಾನವನ್ನು ಪ್ರೇಕ್ಷಕ ತನ್ನ ಹೃದಯದಲ್ಲಿ ಕೊಟ್ಟಿದ್ದಾನೆ. ಎಚ್. ಎಸ್. ವೆಂಕಟೇಶಮೂರ್ತಿಯವರ ಒಂದು ಪರಿಪೂರ್ಣ ಕವಿತೆಯೇ ಇದು ಎಂಬ ಹಾಗೆ ಈ ಸಾಲುಗಳು ಸಹೃದಯರ ಮನಸ್ಸಿನೊಳಗಿನ ಒಂದು ಸುಂದರ ಭಾವಗೀತೆಯೇ ಆಗಿಬಿಟ್ಟಿವೆ.


ಕೊನೆಗೂ ಟಿ. ಎನ್. ಸೀತಾರಾಮ್ ಅವರ ಸುದೀರ್ಘ ಧಾರಾವಾಹಿ ’ಮುಕ್ತ ಮುಕ್ತ’ಕ್ಕೆ ತೆರೆ ಬೀಳುತ್ತಿದೆ. ಪ್ರತಿಭಾವಂತ ನಿರ್ದೇಶಕನೊಬ್ಬನ ಹೊಸ ಧಾರಾವಾಹಿ ಆರಂಭವಾಗುತ್ತಿದೆ ಎಂದರೆ ಜನ ಅದರ ಬಗ್ಗೆ ಮಾತನಾಡಿಕೊಳ್ಳುವುದು ಸಾಮಾನ್ಯ. ಆದರೆ ಒಂದು ಧಾರಾವಾಹಿ ಮುಗಿಯುತ್ತಿರುವುದು ಕೂಡ ಸುದ್ದಿಯಾಗುತ್ತಿದೆ ಎಂದರೆ ಒಂದೋ ಅದು ಪ್ರೇಕ್ಷಕರ ಜೊತೆಗೆ ಹೊಂದಿರುವ ವಿಶಿಷ್ಟ ಸಂಬಂಧಕ್ಕಾಗಿ ಇಲ್ಲವೇ ಅದು ಪ್ರೇಕ್ಷಕರ ಮನಸ್ಸಿನಲ್ಲಿ ಹುಟ್ಟಿಸಿರುವ 'ಸಾಕಪ್ಪಾ ಸಾಕು’ ಎಂಬ ಭಾವನೆಯಿಂದಾಗಿ. ಎಲ್ಲ ಧಾರಾವಾಹಿಗಳ ಬಗ್ಗೆ ಪ್ರೇಕ್ಷಕರು ವಿಭಿನ್ನ ಅಭಿಪ್ರಾಯಗಳನ್ನು ಹೊಂದಿರುವಂತೆ ’ಮುಕ್ತ ಮುಕ್ತ’ ಧಾರಾವಾಹಿ ಬಗೆಗೂ ಸಾಕಷ್ಟು ಪ್ರಶಂಸೆ ಹಾಗೂ ಟೀಕೆಗಳಿರಬಹುದು. ಆದರೂ ಅದು ಮುಗಿಯುತ್ತಿರುವುದರ ಹಿನ್ನೆಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ ಎಂದರೆ ಖಂಡಿತವಾಗಿಯೂ ಅದು ಬಹುತೇಕ ಮೆಗಾ ಧಾರಾವಾಹಿಗಳು ಹುಟ್ಟಿಸುವ ಜುಗುಪ್ಸೆಗಾಗಿ ಅಲ್ಲ.

ಒಟ್ಟು 1204 ಕಂತುಗಳಷ್ಟು ದೀರ್ಘವಾಗಿ ಮುಕ್ತ ಮುಕ್ತ ವಿಸ್ತರಿಸಿದೆ ಎಂಬುದು ತಕ್ಷಣ ಮನಸ್ಸಿಗೆ ಬರುವ ವಿಚಾರ. ಕನ್ನಡದ ಧಾರಾವಾಹಿಗಳ ಮಟ್ಟಿಗೆ ಇದು ದೊಡ್ಡ ಸಂಖ್ಯೆಯೇ. ಆದರೆ ಇದಕ್ಕಿಂತಲೂ ದೀರ್ಘವಾದ ಧಾರಾವಾಹಿಗಳನ್ನು ಪ್ರೇಕ್ಷಕ ಕಂಡಿದ್ದಾನೆ. ಸ್ಟಾರ್ ಪ್ಲಸ್‌ನಲ್ಲಿ 2000-2008ರ ನಡುವೆ ಪ್ರಸಾರವಾದ 1830 ಕಂತುಗಳ ಏಕ್ತಾ ಕಪೂರ್ ಅವರ  'ಕ್ಯೋಂಕಿ ಸಾಸ್ ಭೀ ಕಭಿ ಬಹೂ ಥೀ’ ಹಿಂದಿ ಧಾರಾವಾಹಿ ಭಾರತದ ಟಿವಿ ಧಾರಾವಾಹಿಗಳಲ್ಲೇ ಅತ್ಯಂತ ದೀರ್ಘವಾದದ್ದು. ಅಮೇರಿಕ, ಇಂಗ್ಲೆಂಡಿನಂತಹ ಪಾಶ್ಚಾತ್ಯ ದೇಶಗಳನ್ನು ಗಮನಿಸಿದರಂತೂ ಬೆಚ್ಚಿಬೀಳುವ ಸರದಿ ನಮ್ಮದಾಗುತ್ತದೆ. 'ಗೈಡಿಂಗ್ ಲೈಟ್’ ಎಂಬ ಅಮೆರಿಕನ್ ಧಾರಾವಾಹಿ 56 ವರ್ಷಗಳ ಕಾಲ ಪ್ರಸಾರವಾಗಿ ಇಂದಿಗೂ ಪ್ರಪಂಚದ ಅತ್ಯಂತ ದೀರ್ಘ ಧಾರಾವಾಹಿ ಎಂಬ ಗಿನ್ನೆಸ್ ದಾಖಲೆಯನ್ನು ಉಳಿಸಿಕೊಂಡಿದೆ. ಕೇವಲ 13 ಕಂತುಗಳಿಗೆಂದು 1960ರಲ್ಲಿ ಆರಂಭವಾದ ಇಂಗ್ಲೆಂಡಿನ 'ಕೊರೋನೇಶನ್ ಸ್ಟ್ರೀಟ್’ ಎಂಬ ಮೆಗಾ ಸೀರಿಯಲ್ 52 ವರ್ಷ ಪೂರೈಸಿದೆ. 1956ರಿಂದ 2010೦ರವರೆಗೆ ಪ್ರಸಾರವಾದ 'ಅಸ್ ದಿ ವರ್ಲ್ಡ್ ಟರ್ನ್ಸ್’ ಎಂಬ ಧಾರಾವಾಹಿ ಕೂಡ 53 ವರ್ಷಗಳನ್ನು ಪೂರೈಸಿ ವಿಶ್ವದ ಅತಿ ದೀರ್ಘ ಧಾರಾವಾಹಿಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊಂದಿದೆ. ಕನ್ನಡದ ಧಾರಾವಾಹಿಗಳ ಕಂತುಗಳ ಸಂಖ್ಯೆಯನ್ನೇ ಕಂಡು ಹುಬ್ಬೇರಿಸುವವರು ಈ ಧಾರಾವಾಹಿಗಳ ಅಂಕಿಅಂಶ ಕಂಡರೆ ಹೌಹಾರದಿರರು!

ನಿಜ, ಮುಕ್ತ ಮುಕ್ತ ಧಾರಾವಾಹಿ ಸಾವಿರ ಕಂತುಗಳನ್ನು ದಾಟಿ ಮುಂದುವರಿಯುತ್ತಿರುವುದನ್ನು ಕಂಡು ಇಷ್ಟೊಂದು ಲಂಬಿಸುವ ಅಗತ್ಯವಾದರೂ ಏನು ಎಂದು ಭಾವಿಸಿದ ಪ್ರೇಕ್ಷಕರೂ ಸಾಕಷ್ಟು ಇರಬಹುದು. ಸದ್ಯ ಈಗಲಾದರೂ ಮುಗಿಯುತ್ತಿದೆಯಲ್ಲ ಎಂದು ತಮಾಷೆ ಮಾಡುವ ಮಂದಿಯೂ ಸಾಕಷ್ಟು ಸಿಗುತ್ತಾರೆ. ಆದರೆ ಕೊನೆಯವರೆಗೂ ವಿಶೇಷ ಬೋರ್ ಹೊಡೆಸದೆ ಉದ್ದಕ್ಕೂ ಒಂದು ವಿಶಿಷ್ಟ ಸ್ವಾರಸ್ಯ ಹಾಗೂ ನಿರೀಕ್ಷೆಗಳನ್ನು ಉಳಿಸಿಕೊಂಡು ಹೋದ ಈ ಧಾರಾವಾಹಿ ತನ್ನ ಸುದೀರ್ಘತೆಗಾಗಿಯೇ ಟೀಕೆಗೊಳಗಾಗಬೇಕಾದ್ದಿಲ್ಲ ಎಂದು ಭಾವಿಸುವ ಮಂದಿಯೂ ಹೆಚ್ಚಿನ ಸಂಖೆಯಲ್ಲಿ ಸಿಗಬಹುದು. ಆದರೆ ಸ್ವತಃ ಸೀತಾರಾಮ್ ಅವರೇ ತಮ್ಮ ಮುಕ್ತ ಮುಕ್ತ ಧಾರಾವಾಹಿ ಜನವರಿ ೨೫ಕ್ಕೆ ಮುಕ್ತಾಯವಾಗುತ್ತಿದೆ ಎನ್ನುತ್ತಾ ಎಲ್ಲರೂ ಆನಂದದ ನಿಟ್ಟುಸಿರು ಬಿಡಬಹುದು...! ಎಂದು ಹೇಳಿರುವುದರ ವಿಶೇಷಾರ್ಥವೇನೋ ಹೊಳೆಯುತ್ತಿಲ್ಲ.

ಮಾಯಾಮೃಗ, ಮನ್ವಂತರ, ಮಿಂಚು, ಮಳೆಬಿಲ್ಲು, ಮುಕ್ತದಂತಹ ಧಾರಾವಾಹಿಗಳನ್ನು ನೋಡಿದ ಮೇಲೆ ಟಿ. ಎನ್. ಸೀತಾರಾಮ್ ಮೇಲೆ ಪ್ರೇಕ್ಷಕ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳುವುದು ಸಹಜವೇ. ಹಾಗಂತ ಪ್ರೇಕ್ಷಕನಿಗೆ ತಾನು ನೋಡಿದ ಧಾರಾವಾಹಿ ಹಿಂದಿನ ಧಾರಾವಾಹಿಯಷ್ಟು ಶ್ರೇಷ್ಠವಾಗಿಲ್ಲ ಎಂದು ಅನ್ನಿಸಿದರೆ ಅದರಲ್ಲಿ ನಿರ್ದೇಶಕನ ಪ್ರಮಾದವೇನೂ ಇಲ್ಲ. ತನಗನ್ನಿಸಿದ್ದನ್ನು ಹೇಳುವ, ವಿಮರ್ಶೆ ಮಾಡುವ ಅಧಿಕಾರ ಪ್ರೇಕ್ಷಕನಿಗೆ ಇದ್ದೇ ಇದೆ. ಹೇಳಿಕೇಳಿ ಒಂದು ಮಾಧ್ಯಮ ಜನರ ಮೇಲೆ ಬೀರುವ ಪರಿಣಾಮ ನಿಸ್ಸಂಶಯವಾಗಿ ವ್ಯಕ್ತಿನಿಷ್ಠವಾದದ್ದು.

ಸೀತಾರಾಮ್ ದೂರದರ್ಶನಕ್ಕಾಗಿ ಮಾಡಿದ ’ಮಾಯಾಮೃಗ’ ಮನೆಮಾತಾದದ್ದಂತೂ ನಿಜ. ಅದರ ನಂತರ ಈ ಟಿವಿಗಾಗಿ ನಿರ್ದೇಶಿಸಿದ ಮನ್ವಂತರ, ಮುಕ್ತ ಹಾಗೂ ಈಗ ಕೊನೆಗೊಳ್ಳುತ್ತಿರುವ ಮುಕ್ತ ಮುಕ್ತ ಕೂಡ ದೊಡ್ದ ಸಂಖ್ಯೆಯ ಕನ್ನಡ ಟಿವಿ ವೀಕ್ಷಕರಲ್ಲಿ ಸೀತಾರಾಮ್ ಬಗ್ಗೆ ವಿಶೇಷ ಅಭಿಮಾನ ಮೂಡಿಸಿರುವುದು ಸುಳ್ಳಲ್ಲ. ಆರ್. ಕೆ. ನಾರಾಯಣ್ ಅವರ 'ಮಾಲ್ಗುಡಿ ಡೇಸ್' ಕೃತಿ ಶಂಕರ್‌ನಾಗ್ ಪ್ರತಿಭೆಯಲ್ಲಿ ಧಾರಾವಾಹಿಯಾದಾಗ ಜನ ಸಹಜವಾಗಿಯೇ ಅದನ್ನು ವಿಶೇಷ ಉತ್ಸಾಹದಿಂದ ಸ್ವಾಗತಿಸಿದರು. ದುರದೃಷ್ಟವಶಾತ್ ಅಂತಹ ಧಾರಾವಾಹಿಗಳನ್ನು ನೋಡುವ ಅವಕಾಶವೇ ಜನರಿಗೆ ಸಿಗಲಿಲ್ಲ. ಬರಗಾಲದ ನಡುವೆ ಸೋನೆ ಸುರಿದಂತೆ ಸೀತಾರಾಮ್ 'ಮಾಯಾಮೃಗ', 'ಮುಕ್ತ'ದಂತಹ ಧಾರಾವಾಹಿಗಳನ್ನು ಕೊಟ್ಟಾಗ ಪ್ರೇಕ್ಷಕರಿಗೆ ಅವರ ಬಗ್ಗೆ ವಿಶೇಷ ಅಭಿಮಾನ ಮೂಡಿದ್ದರಲ್ಲಿ ಅಚ್ಚರಿಯಿಲ್ಲ.

ಸೀತಾರಾಮ್ ಧಾರಾವಾಹಿಗಳು ಜನರಿಗೆ ಇಷ್ಟವಾದದ್ದೇ ಅವು ನೈಜತೆಗೆ ಹೊಂದಿರುವ ಸಾಮೀಪ್ಯದಿಂದ. ಅತಿರಂಜಿತ ಕೌಟುಂಬಿಕ ನಾಟಕಗಳು, ಮೂಢನಂಬಿಕೆಗಳ ವೈಭವೀಕರಣ, ಅನೈತಿಕ ಸಾಮಾಜಿಕ ಸಂಬಂಧಗಳು, ಮಹಿಳೆಯರನ್ನು ಸಂಕುಚಿತ ಮನಸ್ಸಿನವರಂತೆಯೂ, ಜಗಳಗಂಟಿಯರಂತೆಯೂ ತೋರಿಸುವ ಚಿತ್ರಣ ಇತ್ಯಾದಿಗಳಿಂದಲೇ ತುಂಬಿ ಹೋದ ಕನ್ನಡ ಧಾರಾವಾಹಿಗಳಿಗೆ ವಾಸ್ತವಿಕತೆಯ ಮೆರುಗು ಕೊಟ್ಟವರು ಸೀತಾರಾಮ್. ವರ್ತಮಾನಕ್ಕೆ ಹತ್ತಿರವಾದ ಕಥಾನಕಗಳನ್ನು ಪ್ರೇಕ್ಷಕ ಪ್ರೋತ್ಸಾಹಿಸುತ್ತಾನೆ ಎಂಬುದಕ್ಕೆ ಸೀತಾರಾಮ್ ಅವರ ಧಾರಾವಾಹಿಗಳು ಗಳಿಸಿರುವ ಜನಪ್ರಿಯತೆ ಸಾಕ್ಷಿ. ಅವರ ಧಾರಾವಾಹಿಗಳು ವಾಸ್ತವದಲ್ಲಿ ಬೆಳೆಯುತ್ತವೆ. ಪ್ರಚಲಿತ ವಿದ್ಯಮಾನಗಳನ್ನು ಚರ್ಚಿಸುತ್ತವೆ. ಜನರ ದಿನನಿತ್ಯದ ಬದುಕಿನ ಎಳೆಗಳಿಗೆ ಜೀವ ನೀಡುತ್ತವೆ. ಸೀತಾರಾಮ್ ಕನ್ನಡದಲ್ಲಿ ಹೊಸ ಪ್ರೇಕ್ಷಕ ಸಂಸ್ಕೃತಿಯನ್ನು ಬೆಳೆಸಿದರು. ಟಿವಿ ಧಾರಾವಾಹಿಗಳೆಂದರೆ ಸೋಮಾರಿಗಳ ಟೈಮ್‌ಪಾಸ್‌ನ ಮಾರ್ಗಗಳೆಂದು ಮೂಗುಮುರಿಯುತ್ತಿದ್ದವರೂ ಧಾರಾವಾಹಿಗಳತ್ತ ಮುಖಮಾಡುವಂತೆ ಮಾಡಿದರು. ಅದು ಅವರ ಯಶಸ್ಸು ಎಂದರೆ ಅತಿಶಯದ ಹೇಳಿಕೆ ಆಗಲಾರದೇನೋ?

'ಮುಕ್ತ' ಧಾರಾವಾಹಿಯ ಮುಂದುವರಿದ ಭಾಗದಂತೆ ಮೂಡಿಬಂದ 'ಮುಕ್ತಮುಕ್ತ'ವೂ ಜನರಿಗೆ ಹತ್ತಿರವಾದದ್ದು ಅದು ಎತ್ತಿಕೊಂಡ ವಾಸ್ತವಿಕ ವಸ್ತುಗಳಿಂದಾಗಿಯೇ. ಜಾಗತೀಕರಣದ ಪರಿಣಾಮಗಳು, ರೈತರ ಸಮಸ್ಯೆ, ವಿಶೇಷ ಆರ್ಥಿಕ ವಲಯ, ರಾಜಕಾರಣಿ ಹಾಗೂ ಉದ್ಯಮಿಗಳ ಸಂಬಂಧ, ಅಕ್ರಮ ಭೂಒತ್ತುವರಿ, ನೀತಿಗೆಟ್ಟ ರಾಜಕಾರಣ ಮೊದಲಾದ ವಸ್ತುಗಳನ್ನು ಬಳಸಿಕೊಂಡೇ ಕಥೆ ಹೆಣೆದದ್ದೇ ಮುಕ್ತ ಮುಕ್ತದ ಶಕ್ತಿ. ಧಾರಾವಾಹಿಯ ಉದ್ದಕ್ಕೂ ರಾಜಕಾರಣದ ಒಂದು ಚೌಕಟ್ಟು ಹಾಕಿಕೊಂಡು ಪ್ರಚಲಿತ ವಿದ್ಯಮಾನಗಳೊಂದಿಗೆ ಸಮೀಕರಿಸುತ್ತಾ ಹೋಗಿದ್ದರಿಂದ ಇದು ಕಥೆಗಿಂತಲೂ ಮುಖ್ಯವಾಗಿ ವರ್ತಮಾನದ ರಾಜಕೀಯ ವ್ಯವಸ್ಥೆಯ ವಿಡಂಬನೆಯೋ ಎಂದು ನೋಡುಗರಿಗೆ ಅನ್ನಿಸಿದ್ದರೆ ಅದು ಆಕಸ್ಮಿಕ ಆಗಿರಲಾರದು. ಅನೇಕ ಪ್ರಜ್ಞಾವಂತ ನಾಗರಿಕರು ಮುಕ್ತ ಮುಕ್ತದ ಖಾಯಂ ಪ್ರೇಕ್ಷಕರಾಗಿ ಬದಲಾಗಿದ್ದರೆ ಅದಕ್ಕೆ ಧಾರಾವಾಹಿ ವಾಸ್ತವಿಕತೆಯ ಕನ್ನಡಿಯಂತೆ ಇದ್ದುದೇ ಕಾರಣ.

ಎಲ್ಲ ಪ್ರಶಂಸೆಗಳ ಜತೆಗೆ ಸಹಜವಾಗಿಯೇ ಮುಕ್ತಮುಕ್ತದ ಬಗ್ಗೆ ಸಾಕಷ್ಟು ಟೀಕೆಗಳೂ ಕೇಳಿಬಂದಿವೆ. ಸೀತಾರಾಮ್ ಅವರ ಟ್ರಂಪ್ ಕಾರ್ಡ್ ಎನಿಸಿರುವ ಕೋರ್ಟ್ ದೃಶ್ಯಗಳು ಬಹುಸಂಖ್ಯೆಯ ಪ್ರೇಕ್ಷಕರನ್ನು ಸೆಳೆದಿರುವಂತೆ, ನ್ಯಾಯಾಲಯ ದೃಶ್ಯಗಳಿಲ್ಲದೆ ಸೀತಾರಾಮ್ ಅವರಿಗೆ ಒಂದು ಧಾರಾವಾಹಿಯನ್ನು ಗೆಲ್ಲಿಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸುವವರೂ ಇದ್ದಾರೆ. ಕೋರ್ಟ್ ದೃಶ್ಯಗಳನ್ನು ಜನ ಇಷ್ಟಪಡುತ್ತಾರೆಂದು ಸೀತಾರಾಮ್ ಅವುಗಳನ್ನೇ ಅನಗತ್ಯವಾಗಿ ಲಂಬಿಸುತ್ತಾ ಹೋಗುವುದು ಸರಿಯಾದ ಕ್ರಮವಲ್ಲ ಎಂಬ ಟೀಕೆ ಕೆಲವರದ್ದು. ಊಟಕ್ಕಿಂತ ಉಪ್ಪಿನಕಾಯಿಯೇ ಹೆಚ್ಚಾಗಬಾರದಲ್ಲ ಎಂಬ ಅವರ ಅಭಿಪ್ರಾಯ ಅತಿರೇಕದ್ದೇನೂ ಅಲ್ಲ. ಆದರೆ ನ್ಯಾಯಾಲಯ ದೃಶ್ಯಗಳನ್ನು ಸೃಷ್ಟಿಸುವಾಗ ಸೀತಾರಾಮ್ ತೋರಿಸುವ ತಾದಾತ್ಮ್ಯ ಕೂಡ ತುಂಬ ಮಂದಿಗೆ ಇಷ್ಟವಾದದ್ದು. ಒಂದು ಸುದೀರ್ಘ ಕಥೆ ಹೆಣೆಯುವಾಗ ಕೆಲವೊಮ್ಮೆ ಕೊಂಡಿಗಳ ನಡುವೆ ಸರಿಯಾದ ತರ್ಕ ಇಲ್ಲದೇ ಹೋಗಿ ತಮಾಷೆ ಎನಿಸುವುದು ಇದ್ದೇ ಇದೆ. ಅದರಲ್ಲೂ ನಿವೇದಿತ ಪಾತ್ರವನ್ನು ರಾಜಾನಂದಸ್ವಾಮಿ ಕೊಲೆ ಆರೋಪದಿಂದ ಪಾರು ಮಾಡುವ ವಾದಸರಣಿಯಲ್ಲಿ ಸೀತಾರಾಮ್ ಸಿಎಸ್‌ಪಿ ಆಗಿ ವಾದಿಸುವುದಕ್ಕಿಂತಲೂ ಧಾರಾವಾಹಿಯ ನಿರ್ದೇಶಕರಾಗಿ ವಾದಿಸುವುದು ಸ್ಪಷ್ಟವಾಗಿ ಎದ್ದುಕಾಣುತ್ತಿತ್ತು. ಆದರೂ ಅದು ಅಸಹನೀಯ ಆಗಿರಲಿಲ್ಲ. ಧಾರಾವಾಹಿಯ ಎಲ್ಲ ಕಂತುಗಳನ್ನೂ ಖುದ್ದು ಸೀತಾರಾಮ್ ಅವರೇ ನಿರ್ದೇಶಿಸದೆ ಇದ್ದುದು ಕೂಡ ಅನೇಕ ಪ್ರೇಕ್ಷಕರಿಗೆ ಅಸಮಾಧಾನ ತಂದದ್ದಿದೆ.

ಮುಕ್ತಮುಕ್ತದ ಬಳಿಕ ಒಂದೆರಡು ಸಿನಿಮಾ ಮಾಡುವ ಆಸಕ್ತಿಯಿದೆ ಎಂದು ಸೀತಾರಾಮ್ ಘೋಷಿಸಿಕೊಂಡಿದ್ದಾರೆ. ಮುಕ್ತಮುಕ್ತದ ಆರಂಭದಲ್ಲಿ ಸಿನಿಮಾ ಮಾಡಿ ಸೋತು ತಾನು ಖಿನ್ನನಾಗಿದ್ದೆ ಎಂದು ಸೀತಾರಾಮ್ ಹೇಳಿಕೊಂಡಿದ್ದರು. ಇದೀಗ ಅವರು ಮತ್ತೆ ಕಾದಂಬರಿ ಆಧಾರಿತ ಸಿನಿಮಾಗಳನ್ನು ಮಾಡುವ ಆಸಕ್ತಿ ತೋರಿಸಿರುವುದು ಪ್ರೇಕ್ಷಕರಿಗೆ ಕುತೂಹಲದ ಸಂಗತಿಯೇ. ತಾನು ತನ್ನ ಮುಂದಿನ ಧಾರಾವಾಹಿಗಳಿಗೆ ಯುವ ಪ್ರತಿಭಾವಂತರನ್ನು ಹುಡುಕುತ್ತಿರುವುದಾಗಿಯೂ, ಅವರಿಗೆ ತರಬೇತಿ ಕೊಡುವುದಾಗಿಯೂ ಕೆಲಸಮಯದ ಹಿಂದೆ ಅವರು ಹೇಳಿದ್ದಿದೆ. ಸೀತಾರಾಮ್ ನಿಜಕ್ಕೂ ಆ ಕೆಲಸ ಮಾಡಿದರೆ ಒಳ್ಳೆಯದೇ. ಏಕತಾನತೆ ಹಾಗೂ ಕಲಾವಿದರ ಕೊರತೆಯಿಂದ ಸೊರಗಿ ಹೋಗಿರುವ ನಮ್ಮ ಧಾರಾವಾಹಿ ಜಗತ್ತಿನಲ್ಲಿ ಹೊಸ ಪರ್ವವೇನಾದರೂ ಕಾಣಿಸಿಕೊಂಡರೆ ಅದು ಸ್ವಾಗತಾರ್ಹ.

ಇಲ್ಲಿಗೆ ಬರೆಹವನ್ನು ಮುಗಿಸಬೇಕೆಂದು ಅಂದುಕೊಂಡರೂ, ಮುಕ್ತಮುಕ್ತದ ಶೀರ್ಷಿಕೆ ಸಾಹಿತ್ಯ ಏಕೋ ಮತ್ತೆಮತ್ತೆ ಮನಸ್ಸಿನಲ್ಲಿ ಗುಂಯ್‌ಗುಡುತ್ತಿದೆ. ಹೀಗಾಗಿ, ಕವಿ ಎಚ್. ಎಸ್. ವೆಂಕಟೇಶಮೂರ್ತಿಯವರ ಅನುಮತಿ ಕೋರಿ, ಅವರ ರಚನೆಯನ್ನು ಇಲ್ಲಿಗೆ ಜೋಡಿಸುತ್ತಿದ್ದೇನೆ.

ಮಣ್ಣ ತಿಂದು ಸಿಹಿ ಹಣ್ಣಕೊಡುವ ಮರ ನೀಡಿ ನೀಡಿ ಮುಕ್ತ
ಬೇವ ಅಗಿವ ಸವಿಗಾನದ ಹಕ್ಕಿ ಹಾಡಿ ಮುಕ್ತ ಮುಕ್ತ

ಹಸಿರ ತೋಳಿನಲಿ ಬೆಂಕಿಯ ಕೂಸ ಪೊರೆವುದು ತಾಯಿಯ ಹೃದಯ
ಮರೆಯುವುದುಂಟೆ ಮರೆಯಲಿನಿಂತೆ ಕಾಯುವ ಕರುಣಾಮಯಿಯ

ತನ್ನಾವರಣವೆ ಸೆರೆಮನೆಯಾದರೆ ಜೀವಕೆ ಎಲ್ಲಿಯ ಮುಕ್ತಿ?
ಬೆಳಕಿನ ಬಟ್ಟೆಯ ಬಿಚ್ಚುವ ಜ್ಯೋತಿಗೆ ಬಯಲೇ ಜೀವನ್ಮುಕ್ತಿ

ಇರುಳ ವಿರುದ್ಧ ಬೆಳಕಿನ ಯುದ್ಧ ಕೊನೆಯಿಲ್ಲದ ಕಾದಾಟ
ತಡೆಯೇ ಇಲ್ಲದೆ ನಡೆಯಲೆ ಬೇಕು ಸೋಲಿಲ್ಲದ ಹೋರಾಟ


ಗುರುವಾರ, ಜನವರಿ 10, 2013

ಇಂಟರ್ನೆಟ್‌ಗೆ 30: ಇದು ಸಂವಹನ ಪ್ರಜಾಪ್ರಭುತ್ವದ ಹೊತ್ತು


ಮಾಧ್ಯಮಶೋಧ-33, ಹೊಸದಿಗಂತ, 10 ಜನವರಿ 2013

ಮೂವತ್ತು ದಾಟುವ ಹೊತ್ತಿಗೆ ಒಬ್ಬ ವ್ಯಕ್ತಿ ತನ್ನೆಲ್ಲ ಹುಡುಗಾಟಿಕೆಗಳನ್ನು ಮುಗಿಸಿ ಒಂದು ಗಂಭೀರ, ಪ್ರಬುದ್ಧ ಬದುಕಿಗೆ ಅಡಿಯಿಡುತ್ತಾನೆಂಬುದು ಸಾಮಾನ್ಯ ನಂಬಿಕೆ. ಕಾನೂನಿನ ಪ್ರಕಾರ 18 ವರ್ಷ ಪೂರ್ಣಗೊಂಡ ವ್ಯಕ್ತಿ ವಯಸ್ಕನೆನಿಸುತ್ತಾನಾದರೂ, ಆತ ಬಾಲ್ಯದ ಮುಗ್ಧತೆ, ಹದಿಹರೆಯದ ಕೌತುಕಗಳನ್ನು ದಾಟಿ ತಾರುಣ್ಯದ ಮೆಟ್ಟಿಲೇರುತ್ತಾ ತನ್ನ ಜೀವನದ ಜವಾಬ್ದಾರಿಗಳನ್ನು ಅರ್ಥಮಾಡಿಕೊಳ್ಳುವ ಸಮಯಕ್ಕೆ ಮೂವತ್ತು ವರ್ಷಗಳೇ ಕಳೆದಿರುತ್ತವೆ ಎಂಬುದು ಅನುಭವಸ್ಥರ ಮಾತು. ಅಂದಹಾಗೆ, ನಮ್ಮ ಇಂಟರ್ನೆಟ್ ಎಂಬ ವಿಸ್ಮಯ ಜಗತ್ತು ಜನಿಸಿ ಮೂವತ್ತು ವರ್ಷಗಳೇ ಆಗಿಹೋದವಂತೆ. ಅಂತಿಂಥ ದೃಷ್ಟಿಗೆ ನಿಲುಕದ ಬೃಹತ್ ಜಗತ್ತನ್ನು ಅಂಗೈ ಮೇಲೆ ತಂದು ನಿಲ್ಲಿಸಿದ ಹೆಗ್ಗಳಿಗೆ ಹೊಂದಿರುವ ಈ ಇಂಟರ್ನೆಟ್ಟೇನಾದರೂ ಪ್ರಬುದ್ಧತೆಯ ಮಜಲನ್ನು ಪ್ರವೇಶಿಸಿದೆಯೇ? ಅದು ಕ್ರಮಿಸಿರುವ ಹಾದಿ, ಏರಿರುವ ಗಾದಿಯಲ್ಲಿ ಮೂವತ್ತು ವರ್ಷಗಳ ಸಾರ್ಥಕತೆ ಕಾಣಿಸುತ್ತಿದೆಯೇ?

ಈ ಪ್ರಶ್ನೆಗಳಿಗೆ ಸ್ಪಷ್ಟ ಉತ್ತರ ನೀಡುವುದು ಕಷ್ಟವಾದರೂ, ಇಂಟರ್ನೆಟ್ ಎಂಬ ಮಾಯಾಲೋಕದಿಂದಾಗಿ ಸಂವಹನವೆಂಬ ಮನುಷ್ಯನ ಪ್ರಾಥಮಿಕ ಪ್ರಪಂಚದಲ್ಲಿ ಒಂದು ಪ್ರಜಾಪ್ರಭುತ್ವ ನೆಲೆಗೊಳ್ಳುವುದು ಸಾಧ್ಯವಾಗಿದೆ ಎಂಬುದನ್ನು ಮಾತ್ರ ನಿಸ್ಸಂಶಯವಾಗಿ ಒಪ್ಪಿಕೊಳ್ಳಬಹುದು. ಮೂವತ್ತನೇ ಜನ್ಮದಿನವನ್ನು ಆಚರಿಸಿಕೊಂಡಿರುವ ಅಂತರ್ಜಾಲಕ್ಕೆ ಈಗಿನ್ನೂ ಹದಿಹರೆಯವೋ ಎಂದರೆ ಅದು ತಪ್ಪಾದ ಊಹೆಯೇನೂ ಅಲ್ಲ; ಅದು ಪ್ರಬುದ್ಧತೆಗೆ ಅಡಿಯಿಟ್ಟಿದೆಯೋ ಎಂದರೆ ಅಲ್ಲಗಳೆಯುವಂಥದ್ದೂ ಅಲ್ಲ.

ಇಂಟರ್ನೆಟ್ ಲೋಕ ದಿನದಿಂದ ದಿನಕ್ಕೆ ಹೊಸಹೊಸ ಬದಲಾವಣೆಗಳಿಗೆ ಮೈಯೊಡ್ಡಿಕೊಳ್ಳುತ್ತಿರುವುದು ನೋಡಿದರೆ ಇದಿನ್ನೂ ಎಷ್ಟೊಂದು ಬದಲಾವಣೆಗಳನ್ನು ಆವಾಹಿಸಿಕೊಳ್ಳುವುದಕ್ಕೆ ಸಶಕ್ತವಾಗಿದೆ, ಅಂದರೆ ಇದಿನ್ನೂ ಬಲಿಯುವುದಕ್ಕೆ ಎಷ್ಟೊಂದು ಬಾಕಿಯಿದೆ ಎಂದೆನಿಸದೆ ಇರದು. ಅದು ತಲುಪಿರುವ ಎತ್ತರ, ಜನಜೀವನದೊಂದಿಗೆ ಅದು ಮಿಳಿತವಾಗಿರುವ ಪರಿಯನ್ನು ಕಂಡರೆ, ಅಬ್ಬಾ, ಮೂವತ್ತು ವರ್ಷಗಳಲ್ಲಿ ಒಂದು ತಂತ್ರಜ್ಞಾನ ಇಷ್ಟೊಂದು ಪ್ರಬುದ್ಧವಾಗಿ ಬೆಳೆಯುವುದಾಗಲೀ, ಪ್ರಪಂಚವನ್ನು ಈ ಮಟ್ಟಿಗೆ ಪ್ರಭಾವಿಸುವುದಾಗಲೀ ಸಾಧ್ಯವೇ ಎಂದೂ ವಿಸ್ಮಯವಾಗುತ್ತದೆ.

ಇಂಟರ್ನೆಟ್‌ನ್ನು ಹುಟ್ಟುಹಾಕಿದ ಮಹಾನುಭಾವರ‍್ಯಾರೂ ದಶಕಗಳ ಬಳಿಕ ಅದು ಇಷ್ಟೊಂದು ಬಲಿಷ್ಟವಾಗಿ ಬೆಳೆದುಬಿಡಬಹುದೆಂದು ಊಹಿಸಿರಲಿಲ್ಲ. ಇಂಟರ್ನೆಟ್‌ನ ಸಾಮಾನ್ಯ ಬಳಕೆದಾರರ ಅಚ್ಚರಿ ಹಾಗಿರಲಿ, ಅದರ ಹರಿಕಾರರುಗಳೆನಿಸಿದ ವಿಂಟ್ ಸೆರ್ಫ್, ರಾಬರ್ಟ್ ಕಾನ್, ಟಿಮ್ ಬರ್ನರ್ಸ್ ಲೀಯಂತಹ ವಿಜ್ಞಾನಿಗಳಿಗೇ ತಮ್ಮ ಮಾನಸಶಿಶುವಿನ ದೈತ್ಯಾಕೃತಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

ಇಂಟರ್ನೆಟ್‌ಗೆ ಬೀಜಾಂಕುರವಾದಾಗ ಅದೊಂದು ಪುಟ್ಟ ಪ್ರಯೋಗವಷ್ಟೇ ಆಗಿತ್ತು. ಸರಿಸುಮಾರು 40 ವರ್ಷಗಳ ಹಿಂದೆ ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿ ಇಬ್ಬರು ಸ್ನೇಹಿತರು ತಮ್ಮ ಕಂಪ್ಯೂಟರ್‌ಗಳ ಮೂಲಕ ಒಂದಷ್ಟು ಅಂಕಿಅಂಶಗಳನ್ನು ವಿನಿಮಯ ಮಾಡಿಕೊಂಡ ಕ್ಷಣ ತಾವು ಈ ಜಗತ್ತಿನ ಅತ್ಯಂತ ಶಕ್ತಿಯುತ ಸಂವಹನ ಮಾಧ್ಯಮವೊಂದರ ಸೃಷ್ಟಿಗೆ ಬೀಜ ಬಿತ್ತಿದ್ದೇವೆ ಎಂದೇನೂ ಯೋಚಿಸಿರಲಾರರು. ಅವರು ತಮ್ಮಷ್ಟಕ್ಕೇ ಹಾಗೊಂದು ಪ್ರಯೋಗ ನಡೆಸಿದರು ಅಷ್ಟೆ. ಅದು ತಾನೇ ತಾನಾಗಿ ಅಭಿವೃದ್ಧಿಯಾಗುತ್ತಾ ಹೋಯಿತು. ಆರಂಭದಲ್ಲಿ ಇಂಟರ್ನೆಟ್ ಎಂಬುದು ಅಮೇರಿಕದ ರಕ್ಷಣಾ ಇಲಾಖೆಯ ಆರ್ಥಿಕ ಒತ್ತಾಸೆಯ ಸಂಪರ್ಕಜಾಲವೊಂದರ ಸಂಶೋಧನ ಯೋಜನೆಯಾಗಿತ್ತು. 1969ರ ಅಕ್ಟೋಬರ್ 29ರಂದು ಕ್ಯಾಲಿಫೋರ್ನಿಯಾ ವಿಶ್ವವಿದ್ಯಾನಿಲಯ ಹಾಗೂ ಸ್ಟ್ಯಾನ್‌ಫೋರ್ಡ್ ರಿಸರ್ಚ್ ಇನ್‌ಸ್ಟಿಟ್ಯೂಟ್ ನಡುವೆ ‘ಅರ್ಪಾನೆಟ್’ ಎಂಬ ಸಂಪರ್ಕಜಾಲದ ಸೃಷ್ಟಿ ಸಾಧ್ಯವಾಯಿತು.

1950ರ ದಶಕದಲ್ಲೇ ವಿಜ್ಞಾನಿಗಳು ಕಂಪ್ಯೂಟರ್ ಜಾಲವನ್ನು ಸೃಷ್ಟಿಸುವುದರಲ್ಲಿ ಯಶಸ್ವಿಯಾಗಿದ್ದರೂ, ಈ ನೆಟ್‌ವರ್ಕ್ ಮೂಲಕ ಕಂಪ್ಯೂಟರ್‌ಗಳು ಪರಸ್ಪರ ಸಂವಹನ ನಡೆಸಬಹುದಾದ ಒಂದು ಸಾಮಾನ್ಯ ಭಾಷೆಯನ್ನು ಕಂಡುಹಿಡಿಯಲು ಸಾಧ್ಯವಾಗಿರಲಿಲ್ಲ. 1970ರ ಅಂತ್ಯದವರೆಗೂ ಈ ಪರಿಸ್ಥಿತಿ ಮುಂದುವರಿದಿತ್ತು. 1979ರಲ್ಲಿ ಕಂಪ್ಯೂಟರುಗಳು ಆಂತರಿಕವಾಗಿ ಪರಸ್ಪರ ಸಂವಹನ ನಡೆಸಬಹುದಾದ ಪ್ರೊಟೋಕಾಲ್‌ಗಳ ಬಗ್ಗೆ ರಾಬರ್ಟ್ ಕಾನ್ ಹಾಗೂ ವಿಂಟ್ ಸೆರ್ಫ್ ಎಂಬವರು ಸಂಶೋಧನ ನಿಯತಕಾಲಿಕವೊಂದರಲ್ಲಿ ಪ್ರಬಂಧವನ್ನು ಪ್ರಕಟಿಸಿ ಅದರ ಸಾಧ್ಯತೆಗಳನ್ನು ಚರ್ಚಿಸಿದರು; ಮುಂದೇ ಅವರೇ ಅದನ್ನು ಟ್ರಾನ್ಸ್‌ಮಿಶನ್ ಕಂಟ್ರೋಲ್ ಪ್ರೊಟೋಕಾಲ್ (ಟಿಸಿಪಿ) ಮತ್ತು ಇಂಟರ್ನೆಟ್ ಪ್ರೊಟೋಕಾಲ್ (ಐಪಿ) ಎಂದು ಕರೆದರು. ಈ ಟಿಸಿಪಿ/ಐಪಿಗಳೇ ಆಧುನಿಕ ಇಂಟರ್ನೆಟ್‌ನ ಉಗಮಕ್ಕೆ ಕಾರಣವಾದವು. 1983 ಜನವರಿ 1ರಿಂದ ಇದೇ ಪ್ರೊಟೋಕಾಲ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಮಾಣೀಕೃತ ಭಾಷೆಯಾಗಿ ಬಳಕೆಯಾಗತೊಡಗಿತು.

1983ರನ್ನು ಇಂಟರ್ನೆಟ್‌ನ ಉಗಮದ ವರ್ಷವೆಂದು ಪರಿಗಣಿಸಲಾಗುತ್ತಿದೆಯಾದರೂ, ಜನಸಾಮಾನ್ಯರ ಬಳಕೆಯಲ್ಲಿ ಡಬ್ಲ್ಯೂಡಬ್ಲ್ಯೂಡಬ್ಲ್ಯೂ ಆಗಿರುವ ವರ್ಲ್ಡ್ ವೈಡ್ ವೆಬ್ ಪ್ರಪಂಚಕ್ಕೆ ಪರಿಚಯವಾದದ್ದು 1990ರಲ್ಲಿ ಟಿಮ್ ಬರ್ನರ್ಸ್ - ಲೀ ಮೂಲಕ. ಆದರೆ ಇದಕ್ಕಿಂತ ಮೊದಲೇ ಅಂದರೆ 1972ರಲ್ಲೇ ಇ-ಮೇಲ್‌ನ ಪರಿಚಯವಾಗಿತ್ತು. 1995ರ ವೇಳೆಗೆ ಜಗತ್ತಿನಾದ್ಯಂತ 16 ಮಿಲಿಯನ್ ಜನರು ಇಂಟರ್ನೆಟ್ ಬಳಸಲಾರಂಭಿಸಿದ್ದರು. ಇಂದು ಈ ಸಂಖ್ಯೆ 2.4 ಬಿಲಿಯನ್‌ಗೆ ಏರಿದೆ. ಒಂದು ಅಂದಾಜಿನ ಪ್ರಕಾರ ಇಂಟರ್ನೆಟ್‌ನ್ನು ಒಂದು ದೇಶವೆಂದು ಪರಿಗಣಿಸುವುದಾದರೆ, ಆದಾಯದ ವಿಷಯದಲ್ಲಿ ಇದು ಜಗತ್ತಿನ ಐದನೇ ಅತಿದೊಡ್ಡ ಅರ್ಥವ್ಯವಸ್ಥೆ ಆಗುವಷ್ಟು ಬಲಿಷ್ಟವಾಗಿದೆಯಂತೆ! 2020ರ ವೇಳೆಗೆ ಇಂಟರ್ನೆಟ್ 40 ಟ್ರಿಲಿಯನ್ ಡಾಲರ್ ದೈತ್ಯ ಉದ್ಯಮವಾಗಿ ಬೆಳೆಯಬಲ್ಲುದೆಂಬುದು ಪರಿಣಿತರ ಅಂದಾಜು. ಬರೀ ಭಾರತವೊಂದರಲ್ಲೇ ಅಂದರೆ, ಜನಸಂಖ್ಯೆಯ ಶೇ. 10 ಭಾಗ ಮಾತ್ರ ಇಂಟರ್ನೆಟ್ ಬಳಕೆದಾರರನ್ನು ಹೊಂದಿರುವ ಅಭಿವೃದ್ಧಿಶೀಲ ದೇಶದಲ್ಲಿ ಇಂದು ಇಂಟರ್ನೆಟ್ ವಾರ್ಷಿಕವಾಗಿ 100 ಬಿಲಿಯನ್ ಡಾಲರ್ ಆದಾಯ ತರುವ ಉದ್ಯಮವಾಗಿದೆ ಎಂದರೆ ಪ್ರಪಂಚದ ಉಳಿದ ದೇಶಗಳ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಬಹುದು.

ಇಂಟರ್ನೆಟ್ ಇಷ್ಟು ಬಲಿಷ್ಟವಾಗಿ ವಿಸ್ತಾರವಾಗಿ ಬೆಳೆದಿರುವ ಹೊತ್ತಿಗೇ ಅದರ ಸಾಧಕ ಬಾಧಕಗಳ ಚರ್ಚೆಯೂ ಸಾಕಷ್ಟು ವ್ಯಾಪಕವಾಗಿಯೇ ನಡೆಯುತ್ತಿದೆ. ಇಂಟರ್ನೆಟ್, ಅದರಲ್ಲೂ, ಸಾಮಾಜಿಕ ಮಾಧ್ಯಮಗಳ ಭರಾಟೆ ಕಾವೇರಿರುವ ಸಂದರ್ಭದಲ್ಲೇ ಅವುಗಳ ಕರಾಳ ಮುಖದ ಬಗ್ಗೆ ಕಳವಳಗೊಂಡು ಜಗತ್ತು ತಲೆಮೇಲೆ ಕೈಹೊತ್ತಿದೆ. ಇಂಟರ್ನೆಟ್ಟಿನ ಹೆಸರಲ್ಲಿ ಜನತೆ ಅನುಭವಿಸುತ್ತಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿ ತಮ್ಮ ಬುಡಕ್ಕೇ ಕೊಡಲಿಯೇಟು ಹಾಕುತ್ತಿದೆಯೋ ಎಂದು ಆಳುವ ಸರ್ಕಾರಗಳು ಚಿಂತಾಕ್ರಾಂತವಾಗಿದ್ದರೆ, ಇಂಟರ್ನೆಟ್ ಸೆನ್ಸಾರ್‌ಶಿಪ್ ನೆಪದಲ್ಲಿ ಅಧಿಕಾರ ಹಿಡಿದಿರುವವರು ಎಲ್ಲಿ ತಮ್ಮ ಮೂಲಭೂತ ಸ್ವಾತಂತ್ರ್ಯವನ್ನೇ ಕಿತ್ತುಕೊಳ್ಳುತ್ತಾರೋ ಎಂದು ಜನತೆ ಕಳವಳಕ್ಕೀಡಾಗಿದ್ದಾರೆ. ಜಗತ್ತಿನ ಅನೇಕ ದೇಶಗಳು ಕೆಲವೊಮ್ಮೆ ಅಧಿಕೃತವಾಗಿಯೂ ಬಹುಪಾಲು ಅನಧಿಕೃತವಾಗಿಯೂ ಅಂತರ್ಜಾಲದ ವಿರುದ್ಧ ಸಮರ ಸಾರಿವೆ. ಈ ಕ್ರಮಗಳಿಗೆ ಸಾಮಾಜಿಕ ಹಾಗೂ ಸಾಂಸ್ಕೃತಿಕ ಶಿಸ್ತು, ರಾಷ್ಟ್ರೀಯ ಭದ್ರತೆ ಇತ್ಯಾದಿ ಕಾರಣಗಳನ್ನು ನೀಡಿದರೂ, ಅನೇಕ ಬಾರಿ ಆಡಳಿತದಲ್ಲಿರುವವರು ತಮ್ಮ ರಾಜಕೀಯ ದೌರ್ಬಲ್ಯಗಳನ್ನು ಮುಚ್ಚಿಹಾಕಿಕೊಳ್ಳಲೆಂದೇ ಇಂಟರ್ನೆಟ್‌ಗೆ ನಿಷೇಧ ಅಥವಾ ನಿಯಂತ್ರಣದ ಲಗಾಮು ಹಾಕುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ.

ಏನೇ ಇದ್ದರೂ, ಇಂಟರ್ನೆಟ್‌ನಿಂದಾಗಿ ಇಂದು ವ್ಯಕ್ತಿಯ ಮೂಲಭೂತ ಅವಶ್ಯಕತೆಯಾಗಿರುವ ಸಂವಹನದ ’ಡೆಮಾಕ್ರಸಿ’ ಸಾಧ್ಯವಾಗಿದೆಯೆಂಬುದು ಒಂದು ಸಮಾಧಾನದ ಸಂಗತಿ. ಇಂಟರ್ನೆಟ್‌ನ್ನು ಭಯೋತ್ಪಾದಕರಂತಹ ಸಮಾಜಘಾತುಕ ಶಕ್ತಿಗಳು ದುರುಪಯೋಗಪಡಿಸಿಕೊಳ್ಳುತ್ತಿರುವುದು ಆಘಾತಕಾರಿ ಸಂಗತಿಯಾದರೂ ಎಲ್ಲವುಗಳಿಗಿಂತ ಮಿಗಿಲಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಅಂತರ್ಜಾಲ ಒಂದು ಪ್ರಚಂಡ ವೇದಿಕೆಯಾಗಿರುವುದನ್ನು ಅಲ್ಲಗಳೆಯುವಂತಿಲ್ಲ. ಇಂಟರ್ನೆಟ್ ಇಲ್ಲದೇ ಹೋದರೆ ಆಳುವ ವರ್ಗ ಮತ್ತು ಪಟ್ಟಭದ್ರ ಹಿತಾಸಕ್ತಿಗಳು ಮುಚ್ಚಿಡಬಯಸುವ ಹಲವಾರು ಪ್ರಮುಖ ಸಂಗತಿಗಳು ಇಂದು ಕತ್ತಲಲ್ಲೇ ಕಾಣೆಯಾಗಿ ಹೋಗಿರುತ್ತಿದ್ದವು. ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳ ಕಣ್ಣು ತಪ್ಪಿಸಿದರೂ ಇಂದು ಅಂತರ್ಜಾಲದ ಜತೆ ಕಣ್ಣುಮುಚ್ಚಾಲೆ ಸಾಧ್ಯವಿಲ್ಲ. ಅದು ಬಟಾಬಯಲಿನಲ್ಲಿ ಅಡಗಿದಷ್ಟೇ ನಿಷ್ಪ್ರಯೋಜಕ. ಇದಕ್ಕೆ ಕಳೆದ ಎರಡು ಮೂರು ವರ್ಷಗಳಲ್ಲಿ ಸಾಕಷ್ಟು ಉದಾಹರಣೆಗಳನ್ನು ನಾವು ನೋಡಿದ್ದೇವೆ.

ಕಳೆದೆರಡು ದಿನಗಳಿಂದ ಭಾರೀ ಚರ್ಚೆಗೆ ಗ್ರಾಸವಾಗಿರುವ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರ ಹೇಳಿಕೆಯನ್ನೇ ತೆಗೆದುಕೊಳ್ಳೋಣ. ವಿವಾಹ ಮತ್ತು ಸ್ತ್ರೀ-ಪುರುಷ ಸಂಬಂಧಗಳ ಹಿನ್ನೆಲೆಯಲ್ಲಿ ಭಾಗವತ್ ಆಡಿದ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಂಡೋ ಉದ್ದೇಶಪೂರ್ವಕವಾಗಿ ತಿರುಚಿಯೋ ಒಂದಿಬ್ಬರು ಸುದ್ದಿಸಂಸ್ಥೆ ಪ್ರತಿನಿಧಿಗಳು ಮಾಡಿದ ವರದಿ ಇಡೀ ದೇಶದಲ್ಲಿ ಸಾಲುಸಾಲು ಖಂಡನೆಗಳನ್ನು ಹುಟ್ಟುಹಾಕಿತು. ಎಲ್ಲರೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಪ್ರತಿಭಟನೆ, ಚರ್ಚೆಗೆ ಕಾರಣವಾಗಿರುವ ಅತ್ಯಾಚಾರ ಪ್ರಕರಣಗಳ ಗುಂಗಿನಲ್ಲೇ ಯೋಚನೆ ಮಾಡುತ್ತಿದ್ದರು. ಭಾಗವತ್ ನಿಜವಾಗಿಯೂ ಹೇಳಿದ್ದಾದರೂ ಏನು ಎಂಬುದನ್ನು ಯಾರೂ ಕೇಳಿಸಿಕೊಂಡಿರಲಿಲ್ಲ. ಸುದ್ದಿಸಂಸ್ಥೆ ಕಳುಹಿಸಿದ ವರದಿಯೇ ಎಲ್ಲವಕ್ಕೂ ಆಧಾರವಾಗಿತ್ತು. ಎಲ್ಲ ಪತ್ರಿಕೆ, ಚಾನೆಲ್‌ಗಳಲ್ಲೂ ಅದು ಲೀಡ್ ಸುದ್ದಿಯಾಯಿತು. ಮಾಧ್ಯಮಗಳು ಸಿಕ್ಕಿದ್ದೇ ಅವಕಾಶ ಸಾಕೆಂದು ಎಷ್ಟು ಸಾಧ್ಯವೋ ಅಷ್ಟು 'ಆಕರ್ಷಕ’ವಾಗಿ ಸುದ್ದಿಯನ್ನು ಪ್ರಸಾರ ಮಾಡಿದವು. ಖಂಡನೆ ಪ್ರತಿಭಟನೆಗಾಗಿ ಕಾಯುತ್ತಿದ್ದವರಂತೂ ಪುಂಖಾನುಪುಂಖವಾಗಿ ತಮ್ಮ ಖಂಡನೆಯ ಬಾಣಗಳನ್ನು ಎಸೆದರು. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಮನಬಂದಂತೆ ಕಾಮೆಂಟುಗಳನ್ನು ಹಾಕಿ ತಮ್ಮ ರೋಷಾವೇಶವನ್ನು ಹೊರಹಾಕಿದರು.

ವಿಶೇಷವೆಂದರೆ ಇದೇ ಇಂಟರ್ನೆಟ್‌ನಿಂದಾಗಿ ನಿಜ ಏನೆಂಬುದು ನಿಧಾನವಾಗಿಯಾದರೂ ಜನರಿಗೆ ಗೊತ್ತಾಗತೊಡಗಿದೆ. ಭಾಗವತ್ ಭಾಷಣದಲ್ಲಿ ಏನು ಹೇಳಿದರು, ಅದರ ವೀಡಿಯೋ ತುಣುಕಿನಲ್ಲಿ ಏನಿದೆ ಎಂಬುದು ಗೊತ್ತಾದ ಮೇಲೂ ನಮ್ಮ ಪತ್ರಿಕೆಗಳು, ಚಾನೆಲ್‌ಗಳು ತುಟಿಪಿಟಕ್ಕೆನ್ನದೆ ಕುಳಿತಿರಬಹುದು, ಈ ಜಾಣ ಮೌನದ ಹಿಂದೆ ಅವರದ್ದೇ ಆದ ಅಜೆಂಡಾಗಳೂ ಇರಬಹುದು ಆದರೆ ಸಾಮಾಜಿಕ ಜಾಲತಾಣಗಳ ಬಾಯಿಕಟ್ಟಲು ಸಾಧ್ಯವಿಲ್ಲ. ಅವು ಸತ್ಯವನ್ನು ಹೊರಗೆಡಹಿವೆ. ಫೇಸ್‌ಬುಕ್ ಟ್ವಿಟರ್, ಯೂಟ್ಯೂಬ್‌ಗಳಲ್ಲಿ ವರದಿಯ ನಂತರದ ಬೆಳವಣಿಗೆಗಳು ಬಹಿರಂಗವಾಗುತ್ತಿವೆ. ತಾನು ಭಾಗವತ್ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದೆ ಎಂದು ಸಿಎನ್‌ಎನ್-ಐಬಿಎನ್‌ನ ಸಾಗರಿಕಾ ಘೋಷ್ ಬಹಿರಂಗವಾಗಿ ಹೇಳಿಕೊಂಡಿದ್ದಾರೆ; ಅತ್ತ ಕಾರ್ಯಕ್ರಮದ ವರದಿ ಮಾಡಿ ಎಲ್ಲ ಅವಾಂತರಕ್ಕೆ ಕಾರಣವಾಗಿದ್ದ ವರದಿಗಾರನನ್ನು ಕೆಲಸದಿಂದ ತೆಗೆಯಲಾಗಿದೆಯೆಂದು ಎನ್‌ಎನ್‌ಐ ಸುದ್ದಿಸಂಸ್ಥೆಯ ಮುಖ್ಯಸ್ಥೆ ಸ್ಮಿತಾ ಪ್ರಕಾಶ್ ಟ್ವಿಟರ್‌ನಲ್ಲಿ ಬರೆದಿದ್ದಾರೆ.

ಆದರೆ ಇವ್ಯಾವುವೂ ಸುದ್ದಿಯಾಗಿಲ್ಲ. ಭಾಗವತ್ ತಮ್ಮ ಮನುವಾದದ ಬಣ್ಣ ಬಯಲುಮಾಡಿಕೊಂಡಿದ್ದಾರೆಂದು ವಾಚಾಮಗೋಚರವಾಗಿ ಜರಿದ ಮಾಧ್ಯಮಗಳು ತಪ್ಪಿಯೂ ಮೂಲ ವರದಿಯೇ ತಿರುಚಲ್ಪಟ್ಟಿರುವ ಬಗ್ಗೆ ಒಂದು ಕಾಲಂ ಸುದ್ದಿಯನ್ನೂ ಪ್ರಕಟಿಸಿಲ್ಲ. ಮಾಧ್ಯಮಗಳ ಜಾಣಕಿವುಡಿಗೆ ಇದೊಂದೇ ಉದಾಹರಣೆಯೇನೂ ಅಲ್ಲ; ತಮ್ಮಿಂದಲೇ ತಪ್ಪಾಗಿ ಹೋಗಿ ಕ್ರಮೇಣ ಅದರ ಅರಿವಾದರೂ ಏನೂ ಘಟಿಸಿಯೇ ಇಲ್ಲವೇನೋ ಎಂಬಂತೆ ಮಾಧ್ಯಮಗಳು ನಟಿಸಿದ ಸಾಕಷ್ಟು ಉದಾಹರಣೆಗಳು ಸಿಗುತ್ತವೆ.

ದೆಹಲಿ ವಿದ್ಯಾರ್ಥಿನಿಯ ಹೆತ್ತವರೇ ಬಯಸಿದರೂ ಆಕೆಯ ಹೆಸರನ್ನು ಬಹಿರಂಗಪಡಿಸುವುದು ಪತ್ರಿಕಾ ಧರ್ಮ ಅಲ್ಲವಾದ್ದರಿಂದ ನಾವು ಆಕೆಯ ಹೆಸರನ್ನು ಪ್ರಕಟಿಸುತ್ತಿಲ್ಲ ಎಂದು ದೊಡ್ಡತನ ಮೆರೆದ ಮಾಧ್ಯಮಗಳೂ ಈ ವಿಚಾರದಲ್ಲಿ ತಾವೊಂದು ನೈತಿಕ ಜವಾಬ್ದಾರಿ ಮರೆತಿದ್ದೇವೆಂದು ಅರ್ಥಮಾಡಿಕೊಂಡಿಲ್ಲ. ಆದರೆ ಇಂಟರ್ನೆಟ್ ಎಲ್ಲ ಪೊಳ್ಳುಗಳನ್ನೂ ಬಯಲಾಗಿಸಿದೆ. ಅದೇ ಅದರ ದೊಡ್ಡತನ. ಮನುಷ್ಯ ಮೂಲಭೂತವಾಗಿ ಬಯಸುವ ತನ್ನ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶವನ್ನು ಇಂಟರ್ನೆಟ್ ಜಾತಿ, ವರ್ಗ, ಧರ್ಮ, ಪಂಥಗಳ ಬೇಧಭಾವವಿಲ್ಲದೆ ಎಲ್ಲರಿಗೂ ಒದಗಿಸಿದೆ. ಈ ನಿಟ್ಟಿನಲ್ಲಿ ಅದೊಂದು ಸಂವಹನದ ಪ್ರಜಪ್ರಭುತ್ವವನ್ನು ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿದೆಯೆಂದು ನಿಸ್ಸಂಶಯವಾಗಿ ಹೇಳಬಹುದು. ಹಾಗೆಯೇ ಮೂವತ್ತರ ಹೊಸಿಲು ದಾಟಿರುವ ಇಂಟರ್ನೆಟ್ ಮುಂದೆ ಬಹುಕಾಲ ಬಾಳಿಬದುಕಬೇಕಾಗಿರುವುದರಿಂದ ಅದರ ಜವಾಬ್ದಾರಿಯೂ ಅಷ್ಟೇ ಅಗಾಧವಾಗಿ ಬೆಳೆದಿದೆ ಎಂಬುದನ್ನೂ ಅರ್ಥಮಾಡಿಕೊಳ್ಳಬೇಕು.