ಬುಧವಾರ, ಅಕ್ಟೋಬರ್ 10, 2012

ಸುದ್ದಿಗಷ್ಟೇ ಅಲ್ಲ, ಟಿಆರ್‌ಪಿಗೂ ಕಾಸು!


ಮಾಧ್ಯಮಶೋಧ-26, ಹೊಸದಿಗಂತ, 27 ಸೆಪ್ಟೆಂಬರ್ 2012

ಸುದ್ದಿಗೂ ಕಾಸು (ಪೇಯ್ಡ್ ನ್ಯೂಸ್) ವಿಚಾರ ಬಹಿರಂಗ ಚರ್ಚೆಗೆ ಬಂದಾಗ ಜನತೆ ಅಚ್ಚರಿಯನ್ನೂ ಆಘಾತವನ್ನು ಅನುಭವಿಸಿತ್ತು. ಸುದ್ದಿ ಪ್ರಕಟಿಸುವುದಕ್ಕೂ ದುಡ್ಡು ತಗೋತಾರಾ? ಸುದ್ದಿ ಅಂದುಕೊಂಡು ನಾವು ಪತ್ರಿಕೆಗಳಲ್ಲಿ ಓದುವುದೆಲ್ಲವೂ/ಚಾನೆಲ್‌ಗಳಲ್ಲಿ ನೋಡುವುದೆಲ್ಲವೂ ವಾಸ್ತವವಾಗಿ ಸುದ್ದಿಗಳಲ್ಲವಾ? ಜಾಹೀರಾತುಗಳೂ ಛದ್ಮವೇಷ ಧರಿಸಿ ಸುದ್ದಿಗಳ ನಡುವೆ ಬಂದು ಕೂರುತ್ತವಾ? ಎಂದು ಸಾಮಾನ್ಯ ಓದುಗ/ಪ್ರೇಕ್ಷಕ ಅಯೋಮಯಗೊಂಡುಬಿಟ್ಟಿದ್ದ. ’ಈ ಬಗೆಯ ಪತ್ರಿಕೋದ್ಯಮ ವೇಶ್ಯಾವಾಟಿಕೆಗಿಂತಲೂ ಹೀನವಾದದ್ದು’ ಎಂದು ಕೆಲ ಜನರು ಜರಿದರೆ, ’ಜನನ ಪ್ರಮಾಣಪತ್ರದಿಂದ ತೊಡಗಿ ಮರಣ ಪ್ರಮಾಣಪತ್ರದವರೆಗೆ ಪ್ರತಿಯೊಂದಕ್ಕೂ ಹಣ ತೆರಬೇಕಾಗಿರುವ ಈ ದೇಶದಲ್ಲಿ, ಸುದ್ದಿ ಬರೆಯುವುದಕ್ಕೆ ಪತ್ರಕರ್ತರಿಗೂ ಹಣ ಕೊಡಬೇಕಾಗಿದೆಯೆಂದರೆ ಅಚ್ಚರಿಯೇನುಂಟು?’ ಎಂದು ಇನ್ನು ಕೆಲವರು ಜುಗುಪ್ಸೆ ವ್ಯಕ್ತಪಡಿಸಿದರು.

ಈ ಭ್ರಮನಿರಸನದ ಕಹಿಯನ್ನು ಜನತೆ ಇನ್ನೂ ಅರಗಿಸಿಕೊಳ್ಳುವ ಮೊದಲೇ ಮಾಧ್ಯಮಗಳಿಗೆ ಸಂಬಂಧಪಟ್ಟ ಮತ್ತೊಂದು ಆಘಾತಕಾರಿ ಸಂಗತಿ ಅನಾವರಣಗೊಂಡಿದೆ. ಟಿಆರ್‌ಪಿ ಟಿಆರ್‌ಪಿ ಎಂದು ಇಪ್ಪತ್ನಾಲ್ಕು ಗಂಟೆಯೂ ತಲೆಕೆಡಿಸಿಕೊಂಡಿರುವ ಟಿವಿ ವಾಹಿನಿಗಳು ಪ್ರೇಕ್ಷಕ ಸಂಶೋಧನ ಕಂಪೆನಿಗಳಿಗೆ ಖುದ್ದು ಲಂಚ ನೀಡಿ ತಮಗೆ ಬೇಕಾದ ಟಿಆರ್‌ಪಿಯನ್ನು ತರಿಸಿಕೊಳ್ಳುತ್ತವೆ ಎಂಬ ವಿಚಾರ ಜನಸಾಮಾನ್ಯರನ್ನಷ್ಟೇ ಅಲ್ಲ, ಕಾರ್ಪೋರೇಟ್ ವಲಯವನ್ನೂ ಅಲುಗಾಡಿಸಿಬಿಟ್ಟಿದೆ.

ಹಾಗೆ ನೋಡಿದರೆ ಪೇಯ್ಡ್ ನ್ಯೂಸ್ ಮತ್ತು ಪೇಯ್ಡ್ ಟಿಆರ್‌ಪಿಗಳೆರಡೂ ಮಾಧ್ಯಮಗಳಿಗೆ ಅಷ್ಟೊಂದು ಹೊಸ ಸಂಗತಿಗಳೇನಲ್ಲ. ಸಾಕಷ್ಟು ವರ್ಷಗಳಿಂದ ಒಳಗೊಳಗೇ ಇಂತಹ ವ್ಯವಹಾರಗಳೆಲ್ಲ ನಡೆಯುತ್ತಿವೆ ಎಂಬುದು ಮಾಧ್ಯಮ ವಲಯದಲ್ಲಂತೂ ಪರಿಚಿತ ವಿಷಯವೇ ಆಗಿತ್ತು; ಆದರೆ ಅಷ್ಟಾಗಿ ಬಹಿರಂಗ ಚರ್ಚೆಗೆ ಬಂದಿರಲಿಲ್ಲ. ಯಾವಾಗ ಒಂದಷ್ಟು ಪತ್ರಿಕೆಗಳೇ ಇದನ್ನು ದಾಖಲೆ ಸಮೇತ ಬಹಿರಂಗಗೊಳಿಸುವ ಧೈರ್ಯ ಮಾಡಿದವೋ, ಆಗ ಸುದ್ದಿಗೂ ಕಾಸು ವಿಷಯ ಜನಸಾಮಾನ್ಯರ ನಾಲಿಗೆಗಳಲ್ಲೂ ಹರಿದಾಡಿತು.

ಈ ಟಿಆರ್‌ಪಿ ವಿಚಾರವೂ ಅಷ್ಟೇ, ಟಿಆರ್‌ಪಿ ಘೋಷಿಸುವ ಸಂಸ್ಥೆಗಳು ವಾಹಿನಿಗಳಿಂದ ದುಡ್ಡು ಪಡೆದುಕೊಂಡು ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ತಮ್ಮಿಷ್ಟದಂತೆ ತಿದ್ದಿ ಪ್ರಕಟಿಸುತ್ತವೆ ಎಂಬ ವಿಷಯದಲ್ಲಿ ಆಗೊಮ್ಮೆ ಈಗೊಮ್ಮೆ ಚರ್ಚೆ ನಡೆಯುತ್ತಲೇ ಇತ್ತು. ಆದರೆ ಅದಕ್ಕೆ ಅಧಿಕೃತತೆಯ ಮುದ್ರೆ ಇರಲಿಲ್ಲ. ಇತ್ತೀಚೆಗೆ ಎನ್‌ಡಿಟಿವಿ ವಾಹಿನಿಯು ಟಾಮ್ (TAM – Television Audience Measurement) ಇಂಡಿಯಾ ಕಂಪೆನಿಯ ಮಾತೃಸಂಸ್ಥೆ ನೀಲ್ಸನ್ ಮತ್ತು ಕ್ಯಾಂಟರ್ ವಿರುದ್ಧ ನ್ಯೂಯಾರ್ಕ್‌ನ ನ್ಯಾಯಾಲಯವೊಂದರಲ್ಲಿ ದಾವೆ ಹೂಡುವುದರೊಂದಿಗೆ ಟಿಆರ್‌ಪಿಯ ಅಸಲಿತನದ ಚರ್ಚೆ ಜನಸಾಮಾನ್ಯರ ಕಿವಿಗೂ ತಲುಪಿದೆ.

ತನ್ನ ಪ್ರತಿಸ್ಪರ್ಧಿ ಚಾನೆಲ್‌ಗಳಿಂದ ಲಂಚ ಪಡೆದುಕೊಂಡು ಅವುಗಳ ಟಿಆರ್‌ಪಿ ಸದಾ ಹೆಚ್ಚಾಗಿರುವಂತೆಯೂ ತನ್ನ ಟಿಆರ್‌ಪಿ ಸದಾ ಕಡಿಮೆ ಇರುವಂತೆಯೂ ಪ್ರೇಕ್ಷಕ ಸಂಶೋಧನೆಯ ಫಲಿತಾಂಶಗಳನ್ನು ಟಾಮ್ ಇಂಡಿಯಾ ತಿದ್ದುತ್ತಿದೆ ಎಂಬುದು ಎನ್‌ಡಿಟಿವಿಯ ದಾವೆ. ತನ್ನ ಪ್ರೇಕ್ಷಕ ಸಂಶೋಧನೆಗೆ ಟಾಮ್ ಇಂಡಿಯಾ ಆರಿಸಿಕೊಳ್ಳುತ್ತಿರುವ ಪ್ರದೇಶಗಳು ಮತ್ತು ಕುಟುಂಬಗಳ ಹಾಗೂ ಸಮೀಕ್ಷಾ ಉಪಕರಣಗಳ ಸಂಖ್ಯೆ ನ್ಯಾಯಸಮ್ಮತವಾಗಿಲ್ಲ; ಭಾರತದಲ್ಲಿ ಟಿವಿ ವೀಕ್ಷಿಸುವವರ ಸಂಖ್ಯೆಗೂ ಸಮೀಕ್ಷೆಗೆ ಆಯ್ದುಕೊಳ್ಳುತ್ತಿರುವ ಜನರ ಸಂಖ್ಯೆಗೂ ಏನೇನೂ ಸಮತೋಲನ ಇಲ್ಲ ಎಂಬುದು ಎನ್‌ಡಿಟಿವಿಯ ಇನ್ನೊಂದು ಆರೋಪ. ಒಟ್ಟು 194 ಪುಟಗಳಲ್ಲಿ ತನಗಾಗಿರುವ ಅನ್ಯಾಯವನ್ನು ನ್ಯಾಯಾಲಯಕ್ಕೆ ವಿವರಿಸಿರುವ ಚಾನೆಲ್ ಈ ನಷ್ಟಕ್ಕಾಗಿ ನೀಲ್ಸನ್ ಕಂಪೆನಿ ತನಗೆ 1.3 ಬಿಲಿಯನ್ ಯುಎಸ್ ಡಾಲರ್ ಪರಿಹಾರವನ್ನೂ ನೀಡಬೇಕೆಂದು ಆಗ್ರಹಿಸಿದೆ.

ಎನ್‌ಡಿಟಿವಿ-ನೀಲ್ಸನ್ ಜಗಳ ಬಹಿರಂಗವಾಗುತ್ತಿದ್ದಂತೆ ಟಿಆರ್‌ಪಿಗೂ ಕಾಸು ವಿವಾದದ ಕುರಿತ ಚರ್ಚೆಗೆ ಸಾಕಷ್ಟು ಮಂದಿ ದನಿಗೂಡಿಸುವುದಕ್ಕೆ ಆರಂಭಿಸಿದ್ದಾರೆ. ಎಚ್‌ಎಮ್‌ಟಿವಿ ಎಂಬ ಆಂಧ್ರಪ್ರದೇಶ ಮೂಲದ ಚಾನೆಲೊಂದು ಟಿಆರ್‌ಪಿ ಅವ್ಯವಹಾರದ ಬಗ್ಗೆ ತಾನು ಮಾಡಿದ್ದ ಕುಟುಕು ಕಾರ್ಯಾಚರಣೆಯನ್ನು ಪ್ರಸಾರ ಮಾಡಿದೆ. ಟಾಮ್ ಕಂಪೆನಿಯ ಉದ್ಯೋಗಿಗಳು ಒಂದು ನಿರ್ದಿಷ್ಟ ಚಾನೆಲ್‌ನ್ನು ಮಾತ್ರ ನೋಡುವಂತೆ ಜನರನ್ನು ಕೇಳಿಕೊಳ್ಳುವ, ಅದಕ್ಕೆ ಒಪ್ಪದ ಮಂದಿಯ ಮನೆಯಿಂದ 'ಪೀಪಲ್ ಮೀಟರ್’ನ್ನು ತೆರವುಗೊಳಿಸುವ ದೃಶ್ಯಗಳನ್ನು ಈ ಚಾನೆಲ್ ಪ್ರಸಾರ ಮಾಡಿದ್ದು ಹೆಚ್ಚಿನ ಚರ್ಚೆಗೆ ಇಂಬು ನೀಡಿದೆ.

ಭಾರತದ ಬಹುತೇಕ ಚಾನೆಲ್‌ಗಳ ಮಾಲೀಕತ್ವ ರಾಜಕಾರಣಿಗಳ ಮತ್ತು ದೊಡ್ಡ ದುಡ್ಡಿನ ಕುಳಗಳ ಕೈಯಲ್ಲಿದೆ. ಭಾರತದ ಸುದ್ದಿಜಾಲದ ಮೂರನೇ ಒಂದು ಪಾಲನ್ನೂ, ಕೇಬಲ್ ಜಾಲದ ಶೇ.60 ಪಾಲನ್ನೂ ನಮ್ಮ ರಾಜಕಾರಣಿಗಳೇ ಹೊಂದಿದ್ದಾರೆ. ಇವರಲ್ಲಿ ಅನೇಕರು ತಮ್ಮ ಚಾನೆಲ್‌ಗೆ ಒಳ್ಳೆಯ ಟಿಆರ್‌ಪಿ ಇದೆಯೆಂದು ಬಿಂಬಿಸಿಕೊಳ್ಳುವುದಕ್ಕೆ ಲಂಚರುಷುವತ್ತುಗಳ ಭ್ರಷ್ಟಾಚಾರ ನಡೆಸುತ್ತಿದ್ದಾರೆ ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಅಷ್ಟೇ ಅಲ್ಲ, ಕೇಬಲ್ ಜಾಲದಲ್ಲಿ ತಮ್ಮ ಚಾನೆಲ್ ಇಂತಹ ನಂಬರಿನಲ್ಲಿಯೇ ಸಿಗುವಂತೆ ಮಾಡುವುದಕ್ಕೆ, ಎರಡು ಮನರಂಜನಾ ಚಾನೆಲ್‌ನ ನಡುವೆ ಒಂದು ಸುದ್ದಿವಾಹಿನಿ ಬರುವಂತೆ ಮಾಡುವುದಕ್ಕೆ ಅಥವಾ ಕ್ರಿಕೆಟ್ ಪಂದ್ಯಾವಳಿಯಂತಹ ಜನಪ್ರಿಯ ನೇರಪ್ರಸಾರಗಳನ್ನು ಮಾಡುವ ವಾಹಿನಿಗಳ ಅಕ್ಕಪಕ್ಕ ತಮ್ಮ ವಾಹಿನಿ ಸಿಗುವಂತೆ ಮಾಡುವುದಕ್ಕೆ  ಕೇಬಲ್‌ದಾರರಿಗೆ ಲಂಚದ ಆಮಿಷ ತೋರಿಸುವುದು ಇತ್ಯಾದಿಗಳೂ ನಡೆಯುತ್ತಿವೆ. ಇವೆಲ್ಲ ಪರೋಕ್ಷವಾಗಿ ಟಿಆರ್‌ಪಿ ಹೆಚ್ಚಳದ (ಕು)ತಂತ್ರಗಳೇ. ನಮ್ಮ ಚಾನೆಲ್‌ಗಳಿಗೆ ಜಾಹೀರಾತಿನದ್ದೇ ಪ್ರಧಾನ ಆದಾಯ, ಜಾಹೀರಾತುದಾರರಿಗೆ ಚಾನೆಲ್‌ಗಳ ಟಿಆರ್‌ಪಿಯೇ ಮುಖ್ಯ ಮಾನದಂಡ ಆಗಿರುವುದರಿಂದ ಟಿಆರ್‌ಪಿಗೂ ಕಾಸು ಪಿಡುಗು ನೋಡನೋಡುತ್ತಿರುವಂತೆಯೇ ಹೆಮ್ಮರವಾಗಿ ಬೆಳೆದಿದೆ.

ಆದರೆ ಟಿಆರ್‌ಪಿ ಪ್ರಕಟಣೆಯಲ್ಲೂ ಭ್ರಷ್ಟಾಚಾರ ಇದೆ ಎಂಬ ಅಂಶ ಜಾಹೀರಾತುದಾರರಿಗೂ ಆಘಾತ ತರುವಂಥದ್ದೇ. ಏಕೆಂದರೆ ಇದೇ ಟಿಆರ್‌ಪಿಯ ಆಧಾರದಲ್ಲೇ ಅವರು ಜಾಹೀರಾತಿಗಾಗಿ ದುಡ್ಡಿನ ಹೊಳೆ ಹರಿಸುತ್ತಿರುವುದು. ಯಾವ ಚಾನೆಲ್‌ನ್ನು ಹೆಚ್ಚು ಜನ ವೀಕ್ಷಿಸುತ್ತಾರೋ ಆ ಚಾನೆಲ್ ಕಡೆಗೆ ಅವರ ಒಲವು, ಯಾವ ಕಾರ್ಯಕ್ರಮಕ್ಕೆ ಹೆಚ್ಚಿನ ಪ್ರೇಕ್ಷಕರಿದ್ದಾರೋ ಆ ಕಾರ್ಯಕ್ರಮದತ್ತ ಅವರ ಒಲವು. ಇದನ್ನು ಪ್ರತಿನಿಧಿಸುವ ಟಿಆರ್‌ಪಿಯೇ ನಕಲಿ ಎಂದಾದರೆ ಜಾಹೀರಾತುದಾರರು ಯಾರನ್ನು/ಯಾವುದನ್ನು ನಂಬಬೇಕು? ಇದೇ ಟಿಆರ್‌ಪಿ ವರ್ಷವೊಂದಕ್ಕೆ ರೂ. 11,000 ಕೋಟಿಗೂ ಹೆಚ್ಚಿನ ಟಿವಿ ಜಾಹೀರಾತು ವ್ಯವಹಾರವನ್ನು ನಿರ್ಧರಿಸುವ ಅಂಶವೆಂಬುದನ್ನು ನಾವು ಗಮನಿಸಬೇಕು.

ಎನ್‌ಡಿಟಿವಿಯು ಟಾಮ್ ವಿರುದ್ಧ ದಾವೆ ಹೂಡಿದ ಕೆಲವೇ ದಿನಗಳಲ್ಲಿ ಭಾರತೀಯ ಜಾಹೀರಾತುದಾರರ ಸಂಘ ಹಾಗೂ ಭಾರತೀಯ ಜಾಹೀರಾತು ಸಂಸ್ಥೆಗಳ ಸಂಘ ಟಾಮ್‌ನೊಂದಿಗೆ ಸಭೆ ನಡೆಸಿ ಈ ಸಂಬಂಧ ಚರ್ಚೆ ನಡೆಸಿದ್ದು, ಟಾಮ್ ಟಿಆರ್‌ಪಿ ಅವ್ಯವಹಾರ ನಡೆಯದಂತೆ ಕೆಲವು ಸುಧಾರಣಾ ಕ್ರಮಗಳನ್ನು ಕೈಗೊಳ್ಳುವ ಭರವಸೆ ನೀಡಿದೆ. ಅವುಗಳಲ್ಲಿ ಮುಖ್ಯವಾದದ್ದು: ಟಿಆರ್‌ಪಿ ಸಮೀಕ್ಷೆ ನಡೆಸುವ ಪ್ರಕ್ರಿಯೆಗೆ ಒಂದು ಆಂತರಿಕ ಮೌಲ್ಯಮಾಪನ ವ್ಯವಸ್ಥೆಯನ್ನು ರೂಪಿಸುವುದು, ಟಿಆರ್‌ಪಿ ಸಮಗ್ರ ಉಸ್ತುವಾರಿಗೆ ಒಬ್ಬ ಪ್ರತ್ಯೇಕ ’ಭದ್ರತಾ ಅಧಿಕಾರಿ’ಯನ್ನು ನೇಮಿಸುವುದು ಹಾಗೂ ಆರು ಮಹಾನಗರಗಳಲ್ಲಿರುವ ’ಪೀಪಲ್ ಮೀಟರ್’ಗಳ ಸಂಖ್ಯೆಯನ್ನು ಹೆಚ್ಚಿಸುವುದು.

ಪ್ರೇಕ್ಷಕ ಸಂಶೋಧನ ಉಪಕರಣಗಳ ಸಂಖ್ಯೆಯನ್ನು ಹೆಚ್ಚಿಸುವ ನಿರ್ಧಾರವೇನೋ ಒಳ್ಳೆಯದೇ. ಆದರೆ ಮೂಲ ಸಮಸ್ಯೆಯಿರುವುದೇ ಇಲ್ಲಿ. ಏಕೆಂದರೆ ಟಾಮ್ ’ಪೀಪಲ್ ಮೀಟರ್’ಗಳನ್ನು ಹೆಚ್ಚಿಸುತ್ತೇನೆಂದು ಹೇಳಿದ್ದು ಮಹಾನಗರಗಳಲ್ಲಿ. ಟಿವಿ ವೀಕ್ಷಿಸುವ ಮಂದಿಯಿರುವುದು ಮಹಾನಗರಗಳಲ್ಲಿ ಮಾತ್ರವೇ? ಸಾಮಾನ್ಯ ಪಟ್ಟಣಗಳಲ್ಲೋ ಹಳ್ಳಿಗಳಲ್ಲೋ ಜನ ಟಿವಿ ವೀಕ್ಷಿಸುವುದಿಲ್ಲವೇ? ಅವರು ಯಾವ ಚಾನೆಲ್ ನೋಡುತ್ತಾರೆ, ಯಾವ ಹೊತ್ತಿನಲ್ಲಿ ಯಾವಯಾವ ಕಾರ್ಯಕ್ರಮಗಳನ್ನು ನೋಡುತ್ತಾರೆ ಎಂಬುದು ಮುಖ್ಯವಾಗುವುದಿಲ್ಲವೇ? ಹೇಳಿಕೇಳಿ ಇದು ಹಳ್ಳಿಗಳ ಮತ್ತು ಸಣ್ಣಪುಟ್ಟ ಪಟ್ಟಣಗಳ ದೇಶ.

ಟಾಮ್ ಸಂಸ್ಥೆ ತನ್ನ ಸಮೀಕ್ಷೆಗಾಗಿ ಇಡೀ ದೇಶದಲ್ಲಿ ಆರಿಸಿಕೊಳ್ಳುವ ಕುಟುಂಬಗಳ ಸಂಖ್ಯೆ ಕೇವಲ 8,150. ಈ ದೇಶದಲ್ಲಿ 130 ಮಿಲಿಯನ್‌ಗಿಂತಲೂ ಹೆಚ್ಚು ಟಿವಿ ಸೆಟ್‌ಗಳಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ಜನ ಟಿವಿ ವೀಕ್ಷಿಸಬೇಕಾದರೆ ಅವರ ಇಷ್ಟಾನಿಷ್ಟಗಳನ್ನು ಕೇವಲ ಎಂಟುಸಾವಿರ ಚಿಲ್ಲರೆ ಕುಟುಂಬಗಳು ನಿರ್ಧರಿಸುವುದು ಸಾಧ್ಯವೇ? ಹೀಗೆಂದು ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ಸಮಿತಿಯೊಂದು ಪ್ರಶ್ನೆ ಮಾಡಿದ್ದಕ್ಕೆ ಟಾಮ್ ಕಂಪೆನಿಯು ’ರಕ್ತ ಪರೀಕ್ಷೆ ಮಾಡಬೇಕಾದರೆ ಇಡೀ ದೇಹದಲ್ಲಿರುವ ರಕ್ತವೇನೂ ಬೇಕಾಗುವುದಿಲ್ಲ, ಒಂದು ಬಿಂದು ರಕ್ತವೂ ಸಾಕಾಗುತ್ತದಲ್ಲ’ ಎಂಬ ಭೋಳೇತನದ ಉತ್ತರ ಕೊಟ್ಟಿತ್ತಂತೆ! ಆದರೆ ತಾನು ಟಿಆರ್‌ಪಿಗಾಗಿ ಸಂಗ್ರಹಿಸುವ ಒಂದು ಬಿಂದು ರಕ್ತದಲ್ಲಿ ಬೆರಳೆಣಿಕೆಯ ನಗರವಾಸಿಗಳ ರಕ್ತ ಮಾತ್ರ ಸೇರಿಕೊಂಡಿದೆಯೆಂಬುದು ಖುದ್ದು ಟಾಮ್‌ಗೂ ಗೊತ್ತಿದೆ.

ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವರಿಗೆ ಪತ್ರ ಬರೆದು ಟಾಮ್ ಪ್ರಕಟಿಸುವ ಟಿಆರ್‌ಪಿ ಫಲಿತಾಂಶದ ಸ್ವತಂತ್ರ ಮೌಲ್ಯಮಾಪನಕ್ಕೆ ಒಂದು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದೆ. ಟಿಆರ್‌ಪಿ ಸಮೀಕ್ಷೆಗೆ ಭಾರತದಲ್ಲಿರುವುದು ಟಾಮ್ ಮತ್ತು ಎಮ್ಯಾಪ್ ಎಂಬ ಎರಡು ಕಂಪೆನಿಗಳು ಮಾತ್ರ - ಅವೂ ಖಾಸಗಿ ಸ್ವಾಮ್ಯದವು. ಹೀಗಾಗಿ ಇವುಗಳಿಗೆ ಪರ್ಯಾಯವಾಗಿ ಸರ್ಕಾರವೇ ಅಖಿಲ ಭಾರತ ಮಟ್ಟದ ಒಂದು ಸಂಸ್ಥೆಯನ್ನು ಸ್ಥಾಪಿಸಬೇಕೆಂಬ ಬೇಡಿಕೆ ಬಹಳ ಹಿಂದಿನಿಂದಲೂ ಇದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಒಂದೆರಡು ಪ್ರಯತ್ನಗಳನ್ನು ಮಾಡಿದ್ದರೂ ಅವು ಯಶಸ್ವಿಯಾಗಿಲ್ಲ. ಈಗ ಎನ್‌ಡಿಟಿವಿ-ಟಾಮ್ ವಿವಾದದ ಮೂಲಕ ಸಮಸ್ಯೆ ಸಾರ್ವಜನಿಕ ಚರ್ಚೆಗೆ ಬಂದಿರುವುದರಿಂದಲಾದರೂ ಸರ್ಕಾರ ಇದಕ್ಕೊಂದು ಪರಿಹಾರದ ದಾರಿ ಹುಡುಕುತ್ತದೋ, ಕಾದು ನೋಡಬೇಕು.

ಕಾಮೆಂಟ್‌ಗಳಿಲ್ಲ: