ಶುಕ್ರವಾರ, ಸೆಪ್ಟೆಂಬರ್ 14, 2012

ಕ್ಲಾಸ್‌ರೂಂ ಪತ್ರಿಕೋದ್ಯಮ ವೇಸ್ಟಾ? ಮಾಧ್ಯಮ ಶಿಕ್ಷಣ ಚರ್ಚೆಯ ಸುತ್ತಮುತ್ತ

ಮಾಧ್ಯಮಶೋಧ-25, ಹೊಸದಿಗಂತ, 13 ಸೆಪ್ಟೆಂಬರ್ 2012 

ಸುಮಾರು 82,500 ಪತ್ರಿಕೆಗಳು, 830ರಷ್ಟು ಟಿವಿ ಚಾನೆಲ್‌ಗಳು, 230ಕ್ಕಿಂತಲೂ ಹೆಚ್ಚು ಆಕಾಶವಾಣಿ ಕೇಂದ್ರಗಳು, 250ರಷ್ಟು ಖಾಸಗಿ ಎಫ್‌ಎಂ ಕೇಂದ್ರಗಳು, ಲಕ್ಷಾಂತರ ಜಾಲತಾಣಗಳು, ಸಾವಿರಾರು ಜಾಹೀರಾತು ಏಜೆನ್ಸಿಗಳು, ಆಷ್ಟೇ ಪ್ರಮಾಣದ ಪಬ್ಲಿಕ್ ರಿಲೇಶನ್ಸ್-ಈವೆಂಟ್ ಮ್ಯಾನೇಜ್ಮೆಂಟ್ ಕಂಪೆನಿಗಳು... ಭಾರತದ ಸಂವಹನ ಕ್ಷೇತ್ರ ಕ್ಷಣದಿಂದ ಕ್ಷಣಕ್ಕೆ ದಿನದಿಂದ ದಿನಕ್ಕೆ ಬಲೂನಿನಂತೆ ಹಿಗ್ಗುತ್ತಲೇ ಇದೆ. ಪತ್ರಿಕೋದ್ಯಮದ ಬಗ್ಗೆ 50-60 ವರ್ಷಗಳ ಹಿಂದೆ ಇದ್ದ ಕಲ್ಪನೆಗೂ ನಮ್ಮ ಕಣ್ಣಮುಂದಿನ ವಾಸ್ತವಕ್ಕೂ ಅಜಗಜಾಂತರ. ಅರ್ಧಶತಮಾನದ ಹಿಂದಿನ ಕಥೆ ಬದಿಗಿರಲಿ, ಮಾಧ್ಯಮ ಕ್ಷೇತ್ರದಲ್ಲಿ ಅರ್ಧದಿನದ ಹಿಂದಿನ ಸನ್ನಿವೇಶವೂ ಹಾಗೆಯೇ ಉಳಿಯುವ ಪರಿಸ್ಥಿತಿ ಇಲ್ಲ. ತಂತ್ರಜ್ಞಾನದ ಜತೆಜತೆಗೇ ಕ್ಷಣಕ್ಷಣಕ್ಕೂ ಬದಲಾಗುತ್ತಾ ಹೋಗುವ ಪ್ರಚಂಡ ಕ್ಷೇತ್ರ ಅದು. ಪತ್ರಿಕೋದ್ಯಮ ಎಂಬ ಪದದ ವ್ಯಾಪ್ತಿಯೇ ತುಂಬ ಕಿರಿದೆನ್ನಿಸಿ ಎಲ್ಲವನ್ನೂ ಒಟ್ಟಾಗಿ ಸಮೂಹ ಸಂವಹನದ ಪರಿಭಾಷೆಯಲ್ಲೇ ಅರ್ಥಮಾಡಿಕೊಳ್ಳಬೇಕಾದ ಕಾಲ ನಮ್ಮದು.

ಇಷ್ಟು ದೊಡ್ಡ ಕ್ಷೇತ್ರಕ್ಕೆ ಅವಶ್ಯಕವಾದ ಮಾನವ ಸಂಪನ್ಮೂಲವನ್ನು ಸಿದ್ಧಗೊಳಿಸುವುದಕ್ಕೆ ನಮ್ಮ ದೇಶ, ಅಂದರೆ ನಮ್ಮ ಶಿಕ್ಷಣರಂಗ ಸನ್ನದ್ಧವಾಗಿದೆಯೇ ಎಂಬುದು ಆಗೀಗ ಚರ್ಚೆಗೆ ಬರುವ ವಿಷಯ. ಮಾಧ್ಯಮ ಶಿಕ್ಷಣವಾಗಿ ಮಾರ್ಪಾಟುಗೊಂಡಿರುವ ಪತ್ರಿಕೋದ್ಯಮ ಶಿಕ್ಷಣ ಎಷ್ಟರಮಟ್ಟಿಗೆ ಆಧುನಿಕ ಕಾಲದ ಮಾಧ್ಯಮಕ್ಷೇತ್ರದ ಅವಶ್ಯಕತೆಗಳನ್ನು ಪೂರೈಸುವಲ್ಲಿ ಸಮರ್ಥವಾಗಿದೆ ಎಂಬ ಬಗ್ಗೆ ಈಚಿನ ದಿನಗಳಲ್ಲಂತೂ ಸಾಕಷ್ಟು ಚರ್ಚೆ, ವಾಗ್ವಾದಗಳು ನಡೆಯುತ್ತಿವೆ. ಕ್ಲಾಸ್‌ರೂಮಿನಲ್ಲೇನು ಪತ್ರಿಕೋದ್ಯಮ ಕಲಿಸುತ್ತಾರೆ, ಅಲ್ಲಿ ಕಲಿತದಕ್ಕೂ ಪತ್ರಿಕೆ ಅಥವಾ ಟಿವಿಯೊಳಗಿನ ವಾಸ್ತವಕ್ಕೂ ಏನಾದರೂ ಸಂಬಂಧವಿದೆಯಾ? ಎಂಬುದು ಬಹುತೇಕ ವೃತ್ತಿನಿರತ ಪತ್ರಕರ್ತರ ಟೀಕೆಯಾದರೆ, ಪತ್ರಿಕೆಯಲ್ಲಿ ಕೆಲಸಮಾಡುವವರೆಲ್ಲ ಮಹಾನ್ ವೃತ್ತಿಪರರೇ? ಅವರಲ್ಲಿ ಬುದ್ಧಿಗೇಡಿಗಳಿಲ್ಲವೇ? ವರದಿ-ಲೇಖನ ಬರೆಯುವ ಕೌಶಲವಷ್ಟೇ ಪತ್ರಿಕೋದ್ಯಮವೇ? ಎಂಬ ಚೋದ್ಯ ಅನೇಕ ಅಧ್ಯಾಪಕರದ್ದು.

ಎರಡೂ ಕಡೆಯ ವಾದದಲ್ಲೂ ಹುರುಳಿಲ್ಲದಿಲ್ಲ. ಹಾಗಂತ ಯಾವುದೋ ಒಂದು ವಾದ ಮಾತ್ರ ಸರಿ ಎಂದು ನಿರ್ಧರಿಸಿಬಿಡುವಂತೆಯೂ ಇಲ್ಲ. ಇದನ್ನೊಂದು ಚರ್ಚೆಯಾಗಿ ಮಾತ್ರ ಮುಂದುವರಿಸಿಕೊಂಡು ಹೋಗುವಲ್ಲಿ ಯಾವ ಅರ್ಥವೂ ಇಲ್ಲ. ಏಕೆಂದರೆ ಇಂತಹ ಚರ್ಚೆಗಳಿಗೆ ತುದಿಮೊದಲಿಲ್ಲ. ಎರಡೂ ಕಡೆಯವರು ವಾಸ್ತವಾಂಶಗಳನ್ನು ಅರ್ಥಮಾಡಿಕೊಂಡು ಯೋಚನೆ ಮಾಡಿದರೆ ಮಾತ್ರ ಒಂದು ಸಮಾಧಾನದ ಹಾದಿ ಹೊಳೆಯಬಹುದು. ಏಕೆಂದರೆ ಇದು ’ಹೋಗಲಿ ಬಿಡಿ’ ಎಂದು ಸುಮ್ಮನಾಗುವ ಕ್ಷುಲ್ಲಕ ವಿಚಾರವೇನೂ ಅಲ್ಲ; ಬೃಹದಾಕಾರವಾಗಿ ಬೆಳೆದಿರುವ ಮತ್ತು ಇನ್ನೂ ಬೆಳೆಯುತ್ತಲೇ ಇರುವ ಮಾಧ್ಯಮ ಕ್ಷೇತ್ರದ ಭವಿಷ್ಯದ ಪ್ರಶ್ನೆ.

ಮಾಧ್ಯಮ ಕ್ಷೇತ್ರಕ್ಕೆ ಪ್ರವೇಶಿಸುವವರು ಪತ್ರಿಕೋದ್ಯಮವನ್ನೇ ಓದಿರಬೇಕು ಎಂಬ ನಿಯಮವೇನೂ ಹಿಂದೆ ಇರಲಿಲ್ಲ. ಈಗಲೂ ಇಲ್ಲ. ಆ ಕ್ಷೇತ್ರದಲ್ಲಿ ಆಸಕ್ತಿಯಿರುವ, ಅದು ಬಯಸುವ ಕೌಶಲ್ಯಗಳನ್ನು ಹೊಂದಿರುವ ಯಾರಿಗೇ ಆದರೂ ಪತ್ರಿಕೋದ್ಯಮಕ್ಕೆ ಸ್ವಾಗತ ಇತ್ತು. ಈಗಲೂ ಇದೆ. ಕಾನೂನು, ಸಾಹಿತ್ಯ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ವಿಜ್ಞಾನ... ಇತ್ಯಾದಿ ಯಾವುದೇ ವಿಷಯ ಓದಿದವರಿಗೂ ಪತ್ರಿಕೋದ್ಯಮದಲ್ಲಿ ಅವಕಾಶಕ್ಕೇನೂ ಕೊರತೆಯಿಲ್ಲ. ಡಿಗ್ರಿಗಳ ಕಥೆ ಹಾಗಿರಲಿ, ಹೈಸ್ಕೂಲನ್ನೇ ಮುಗಿಸದ ಮಂದಿಯೂ ಪತ್ರಿಕೋದ್ಯಮದ ದಂತಕತೆಗಳಾದ ಇತಿಹಾಸ ನಮ್ಮ ಮುಂದಿದೆ. ಪತ್ರಿಕೋದ್ಯಮ ಬಯಸುವುದು ಅದನ್ನು ಪ್ರೀತಿಸಬಲ್ಲ ಮನಸ್ಸು ಮತ್ತು ನಿಭಾಯಿಸಬಲ್ಲ ಪ್ರತಿಭೆಯನ್ನು ಮಾತ್ರ. ಆದರೆ ಕಾಲವೂ ತುಂಬ ಬದಲಾಗಿಬಿಟ್ಟಿದೆ. ಪತ್ರಿಕೆ, ಚಾನೆಲ್, ರೇಡಿಯೋ, ಇಂಟರ್ನೆಟ್ ಇತ್ಯಾದಿ ಸಂವಹನ ಮಾಧ್ಯಮಗಳ ಸಂಖ್ಯೆ ಊಹನೆಗೂ ಮೀರಿ ಬೆಳೆಯುತ್ತಿದೆ. ಮೇಲಾಗಿ ಇದು ಸ್ಪೆಷಲೈಸೇಶನ್ ಯುಗ. ಎಲ್ಲದರಲ್ಲೂ ವೃತ್ತಿಪರತೆಯನ್ನು ಬಯಸುವ ಕಾಲ. ಹೀಗಾಗಿ ಮಾಧ್ಯಮ ಶಿಕ್ಷಣ ಹಿನ್ನೆಲೆಯಿಂದ ಬಂದವರಿಗೇ ಮಾಧ್ಯಮಗಳಲ್ಲಿ ಆದ್ಯತೆ ನೀಡುವ ಪ್ರವೃತ್ತಿ ಹೆಚ್ಚಾಗುತ್ತಿದೆ.

ಆದರೆ ಇಷ್ಟೊಂದು ಮುಂದುವರಿದಿರುವ ಮಾಧ್ಯಮ ಪ್ರಪಂಚಕ್ಕೆ ಒಪ್ಪುವ ಸಮರ್ಥ ಮಾನವ ಸಂಪನ್ಮೂಲ ದೊರೆಯುತ್ತಿಲ್ಲ ಎಂಬುದೇ ಸದ್ಯದ ಚರ್ಚೆ. 'Journalists are born, not made' ಎಂಬ ಸಾಂಪ್ರದಾಯಿಕ ನಿಲುವಿನ ನಡುವೆಯೇ ಪತ್ರಿಕೋದ್ಯಮ ಶಿಕ್ಷಣ ಬೆಳೆದು ಬಂತು. 'Journalists may be born, but they are made too' ಎಂಬ ಮಾತಿಗೆ ಬೆಂಬಲ ದೊರೆಯಿತು. ಅನೇಕ ಮಾನವಿಕ ಮತ್ತು ಶಾಸ್ತ್ರೀಯ ವಿಷಯಗಳಿಗೆ ಹೋಲಿಸಿದರೆ ಒಂದು ಅಧ್ಯಯನದ ವಿಷಯವಾಗಿ ಪತ್ರಿಕೋದ್ಯಮವೂ ತುಂಬಾ ಹೊಸತೇ. ಆದರೆ ಅದು ಬೆಳೆದ ವೇಗ ಅಗಾಧವಾದದ್ದು. ಪತ್ರಿಕೋದ್ಯಮ ಒಂದು ಅಧ್ಯಯನದ ವಿಷಯವಾಗಿ ಬೆಳೆದ ಮೇಲೂ ಮಾಧ್ಯಮಗಳಿಗೆ ಅವಶ್ಯಕವಾದ, ಅವು ಬಯಸುವ ಕೌಶಲಗಳುಳ್ಳ ಮಂದಿ ತಯಾರಾಗುತ್ತಿಲ್ಲವಲ್ಲ ಎಂಬ ಕೊರಗು ನ್ಯಾಯವಾದದ್ದೇ.

ತರಗತಿಯಲ್ಲಿ ಕಲಿತ ಪತ್ರಿಕೋದ್ಯಮ ವೃತ್ತಿಯ ಅವಶ್ಯಕತೆಗಳನ್ನು ಸರಿಯಾಗಿ ಪೂರೈಸುತ್ತಿಲ್ಲ ಎಂಬ ಮಾತಲ್ಲಿ ಆಕ್ಷೇಪಿಸುವಂಥದ್ದೇನೂ ಇಲ್ಲ. ಹಾಗಂತ ಕ್ಲಾಸ್‌ರೂಂನಲ್ಲಿ ಕಲಿತದ್ದು ಪೂರ್ತಿ ವೇಸ್ಟು ಎಂದು ಪತ್ರಿಕೋದ್ಯಮ ಶಿಕ್ಷಣವನ್ನೇ ಸಾರಾಸಗಟಾಗಿ ಹೀಗಳೆಯುವ ಪ್ರವೃತ್ತಿ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ. ಯಾವ ಅಧ್ಯಯನದ ವಿಷಯವೂ ಅದರಷ್ಟಕ್ಕೇ ಒಳ್ಳೆಯದೂ ಆಗುವುದಿಲ್ಲ, ನಿಷ್ಪ್ರಯೋಜಕವೂ ಆಗುವುದಿಲ್ಲ. ಸಮಸ್ಯೆಯಿದೆ ಎಂದಾದರೆ ಅದು ಒಟ್ಟು ವ್ಯವಸ್ಥೆಯಲ್ಲಿ: ಅಂದರೆ, ಕಲಿಯುವವರಲ್ಲಿ, ಕಲಿಸುವವರಲ್ಲಿ ಮತ್ತು ಕಲಿಕೆಯ ಪ್ರಕ್ರಿಯೆಯಲ್ಲಿ. ಹಾಗಾದರೆ ಚರ್ಚೆ ನಡೆಯಬೇಕಾದ್ದು ಈ ವ್ಯವಸ್ಥೆಯನ್ನು ಸರಿಪಡಿಸುವ ಬಗೆಗೇ ಹೊರತು ಒಟ್ಟು ಮಾಧ್ಯಮ ಶಿಕ್ಷಣವನ್ನೇ ಜೊಳ್ಳು ಅಥವಾ ಟೊಳ್ಳು ಎಂದು ಟೀಕೆ ಮಾಡುವುದರಲ್ಲಲ್ಲ.

ಪತ್ರಿಕೋದ್ಯಮ ಪಾಠ ಮಾಡುವ ಅಧ್ಯಾಪಕರಲ್ಲೇ ಪ್ರಾಯೋಗಿಕ ತಿಳುವಳಿಕೆಯ ಕೊರತೆ ಇದೆ ಎಂಬ ಮಾತು ಒಪ್ಪುವಂಥದ್ದೇ. ಅನೇಕ ಪತ್ರಿಕೋದ್ಯಮ ಅಧ್ಯಾಪಕರಿಗೆ ಪತ್ರಿಕೆ, ಟಿವಿ, ರೇಡಿಯೋ ಯಾವುದೋ ಒಂದರಲ್ಲಾದರೂ ಕೆಲಸ ಮಾಡಿದ ಕನಿಷ್ಠ ಅನುಭವ ಇಲ್ಲ. ಸ್ವತಃ ವರದಿಗಾರಿಕೆ ಮಾಡಿ ಗೊತ್ತಿಲ್ಲದವರು ವಿದ್ಯಾರ್ಥಿಗಳಿಗೆ ರಿಪೋರ್ಟಿಂಗ್ ಹೇಗೆ ತಾನೇ ಹೇಳಿಕೊಟ್ಟಾರು? ಸ್ವತಃ ಎಡಿಟಿಂಗ್ ಮಾಡಲಾರದವರು ತಮ್ಮ ವಿದ್ಯಾರ್ಥಿಗಳಿಗೆ ಎಂತಹ ಎಡಿಟಿಂಗ್ ಅಭ್ಯಾಸ ಮಾಡಿಸಿಯಾರು? ಸ್ವತಃ ಸಂದರ್ಶನ ಮಾಡಿದ ಅನುಭವವಾಗಲೀ ಕೌಶಲವಾಗಲೀ ಇಲ್ಲದವರು ಅದರಲ್ಲಿ ವಿದ್ಯಾರ್ಥಿಗಳನ್ನೆಷ್ಟು ತಯಾರು ಮಾಡಿಯಾರು ಎಂಬ ಪ್ರಶ್ನೆಗಳು ಸಹಜವಾದವೇ. ಅನೇಕ ಮಂದಿ ಸ್ನಾತಕೋತ್ತರ ಪದವಿ ಮುಗಿಸಿ ಇಲ್ಲವೇ ಪಿಎಚ್.ಡಿ. ಸಂಶೋಧನೆ ಕೈಗೊಂಡು ನೇರವಾಗಿ ಅಧ್ಯಾಪನಕ್ಕೆ ಬಂದುಬಿಡುತ್ತಾರೆ. ವಿದ್ಯಾರ್ಥಿಗಳಾಗಿದ್ದಾಗ ಅಥವಾ ಸಂಶೋಧನೆಯಲ್ಲಿ ತೊಡಗಿದ್ದಾಗಲಾದರೂ ನಾಲ್ಕಕ್ಷರ ಬರೆದು ಅಭ್ಯಾಸವಿದೆಯಾ ಎಂದರೆ ದಿನಕ್ಕೆ ಒಂದಿಷ್ಟು ಪತ್ರಿಕೆಗಳನ್ನಾದರೂ ವಿವರವಾಗಿ ಓದಿದವರು ಅವರಲ್ಲ; ಪ್ರಚಲಿತ ವಿದ್ಯಮಾನಗಳ ಬಗ್ಗೆ ಅವರ ತಿಳುವಳಿಕೆ ಬಗೆಗಂತೂ ಕೇಳುವುದೇ ಬೇಡ. ಇಂಥವರು ಮಾಧ್ಯಮಗಳಿಗಾಗಿ ಎಂತಹ ಮಂದಿಯನ್ನು ತಯಾರು ಮಾಡಿಯಾರು ಎಂದು ಯಾರಾದರೂ ಊಹಿಸಬಹುದು.

ಅನೇಕ ವಿಶ್ವವಿದ್ಯಾನಿಲಯಗಳಲ್ಲಿ ಬಳಕೆಯಲ್ಲಿರುವ ಪತ್ರಿಕೋದ್ಯಮ ಸಿಲೆಬಸ್ ಕಾಲದ ವೇಗಕ್ಕೆ ತಕ್ಕಂತೆ ಅಪ್‌ಡೇಟ್ ಆಗುತ್ತಿಲ್ಲ ಎಂಬ ವಿಷಯದಲ್ಲೂ ಹುರುಳಿದೆ. ಒಂದು ವೇಳೆ ಅಪ್‌ಡೇಟ್ ಆಗುತ್ತಿದ್ದರೂ ಅದನ್ನು ಕಲಿಸುವ ಅಧ್ಯಾಪಕರೇ ಅಪ್‌ಡೇಟ್ ಆಗದಿದ್ದರೆ ಎಂತಹ ಸಿಲೆಬಸ್ ರೂಪಿಸಿಯೂ ಪ್ರಯೋಜನ ಇಲ್ಲ ಎಂದಾಗುತ್ತದೆ. ಆದರೆ ಪದವಿ ಅಥವಾ ಸ್ನಾತಕೋತ್ತರ ಹಂತದಲ್ಲಿ ತರಗತಿಯಲ್ಲಿ ಹೇಳುವ ವಿಷಯಗಳೆಲ್ಲ ಅಪ್ರಸ್ತುತ, ಪತ್ರಿಕಾಲಯಕ್ಕೆ ಕಾಲಿಟ್ಟ ಮೇಲೆ ಬೇಕಾಗುವ ಅವಶ್ಯಕತೆಗಳೇ ಬೇರೆ ಎಂಬ ಮಾತು ಶುದ್ಧ ಅಪ್ರಬುದ್ಧ. ಮಾಧ್ಯಮದಲ್ಲಿ ಕೆಲಸ ಮಾಡುವುದೆಂದರೆ ಬರೀ ವರದಿ ಬರೆಯುವುದೋ, ಸುದ್ದಿ ಪರಿಷ್ಕರಿಸುವುದೋ, ಸುದ್ದಿ ಪ್ರಸ್ತುತಪಡಿಸುವುದೋ ಅಲ್ಲ; ಪತ್ರಕರ್ತ ವೈಯುಕ್ತಿಕವಾಗಿ ಅದಕ್ಕಿಂತಲೂ ಆಚೆ ಬೆಳೆಯಬೇಕು. ಅಂತಹ ಪತ್ರಕರ್ತ ಮಾತ್ರ ತನ್ನ ಪತ್ರಿಕೆ/ಚಾನೆಲ್‌ನ್ನು ಅಥವಾ ಒಟ್ಟು ಮಾಧ್ಯಮ ಕ್ಷೇತ್ರವನ್ನು ಬೆಳೆಸಬಲ್ಲ. ಪತ್ರಕರ್ತನಾಗುವವನು ತನ್ನ ವೃತ್ತಿಯ ಇತಿಹಾಸವನ್ನು, ಅದರ ಮಹತ್ವವನ್ನು, ಅದರ ನೈತಿಕ ನೆಲೆಗಟ್ಟನ್ನು, ವಿವಿಧ ಆಯಾಮಗಳನ್ನು, ಜೊತೆಗೆ ಆರ್ಥಿಕ, ರಾಜಕೀಯ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಸಾಹಿತ್ಯಿಕ ಸಿದ್ಧಾಂತಗಳನ್ನು ಅರಿತುಕೊಳ್ಳುವುದು ತುಂಬ ಮುಖ್ಯ. ಇದನ್ನು ಪತ್ರಕರ್ತರಾಗಲು ಉತ್ಸುಕರಾದವರು, ಅವರ ಅಧ್ಯಾಪಕರು ಮತ್ತು ವೃತ್ತಿನಿರತರು - ಎಲ್ಲರೂ ಅರ್ಥಮಾಡಿಕೊಳ್ಳಬೇಕು. ಪತ್ರಕರ್ತ ಮಾಗುತ್ತಾ ಹೋಗಬೇಕು, ಅದರ ಆರಂಭಿಕ ತಯಾರಿಯನ್ನಾದರೂ ಅಧ್ಯಾಪಕ ಮಾಡಿಕಳಿಸಬೇಕು. ಮಾಗಿದವನು ಬಾಗಿಯಾನು.

ಕಾಲೇಜು ಹಂತದಲ್ಲಾಗಲೀ, ವಿಶ್ವವಿದ್ಯಾನಿಲಯ ಹಂತದಲ್ಲಾಗಲೀ ಪತ್ರಿಕೋದ್ಯಮವನ್ನು ಇಂದಿಗೂ ಇತರೆ ಮಾನವಿಕ ವಿಷಯಗಳ ಜತೆಗಿಟ್ಟು ನೋಡುವ ಪರಿಸ್ಥಿತಿಯಿರುವುದೇ ಒಂದು ಸಮಸ್ಯೆ. ಇದರರ್ಥ ಬೇರೆ ವಿಷಯಗಳು ಕಮ್ಮಿ ಎಂದಲ್ಲ; ಪತ್ರಿಕೋದ್ಯಮ ಒಂದು ಕೌಶಲ ಆಧಾರಿತ, ವೃತ್ತಿಪರ ವಿಷಯವಾಗಿರುವುದರಿಂದ ಅದನ್ನು ನೋಡುವ ರೀತಿ ಬೇರೆ ಆಗಬೇಕೆಂದಷ್ಟೇ. ಸಮಾಜಶಾಸ್ತ್ರವನ್ನೋ ಇತಿಹಾಸವನ್ನೋ ಸಾಹಿತ್ಯವನ್ನೋ ಬೋಧಿಸಿದ ಹಾಗೆ ಪತ್ರಿಕೋದ್ಯಮವನ್ನು ಬೋಧಿಸಲಾಗದು. ಬರೀ ಪತ್ರಿಕೋದ್ಯಮ ಪದವಿಯನ್ನಷ್ಟೇ ಹೊಂದಿರುವವರನ್ನು ಅಧ್ಯಾಪಕರನ್ನಾಗಿಯೂ ನೇಮಿಸಲಾಗದು. ಪತ್ರಿಕೋದ್ಯಮಕ್ಕಿರುವ ಬೇಡಿಕೆಯನ್ನು ಕಂಡು ಅನೇಕ ವಿಶ್ವವಿದ್ಯಾನಿಲಯಗಳು, ಕಾಲೇಜುಗಳು ಪತ್ರಿಕೋದ್ಯಮವನ್ನು ಒಂದು ಅಧ್ಯಯನದ ವಿಷಯವನ್ನಾಗಿ ಹೊಂದಲು ಆಸಕ್ತಿಯನ್ನೇನೋ ತೋರಿಸುತ್ತವೆ; ಆದರೆ ಅದರ ಬೋಧನೆಗೆ ಅವಶ್ಯಕವಿರುವ ಮೂಲಸೌಕರ್ಯಗಳನ್ನು ಒದಗಿಸುವಲ್ಲಿ ಬಹುತೇಕರಿಗೆ ಅಂತಹ ಆಸಕ್ತಿ ಇದ್ದಂತಿಲ್ಲ. ಒಂದೇ ಒಂದು ಕಂಪ್ಯೂಟರ್, ಒಂದಾದರೂ ಕ್ಯಾಮರಾ ಇಲ್ಲದ ಪತ್ರಿಕೋದ್ಯಮ ವಿಭಾಗಗಳನ್ನು ಹೊಂದಿರುವ ಸಾಕಷ್ಟು ಕಾಲೇಜುಗಳು ಕರ್ನಾಟಕದಲ್ಲೇ ಸಿಗುತ್ತವೆ. ಈಚಿನ ವರ್ಷಗಳಲ್ಲಿ ಸಾಕಷ್ಟು ಖಾಸಗಿ ಮಾಧ್ಯಮ ಶಿಕ್ಷಣ ಸಂಸ್ಥೆಗಳೇನೋ ಹುಟ್ಟಿಕೊಳ್ಳುತ್ತಿವೆ, ಆದರೆ ಅವರು ಲಕ್ಷಗಳಲ್ಲಿ ನಿರೀಕ್ಷಿಸುವ ಶುಲ್ಕವನ್ನು ನಮ್ಮ ಗ್ರಾಮಭಾರತದ ಉತ್ಸಾಹಿಗಳು ಊಹಿಸುವಂತೆಯೂ ಇಲ್ಲ.

ಮೆಡಿಕಲ್, ಇಂಜಿನಿಯರಿಂಗ್‌ನಂತಹ ವೃತ್ತಿಪರ ಕೋರ್ಸುಗಳನ್ನು ನಿಯಂತ್ರಿಸಲು ರಾಷ್ಟ್ರಮಟ್ಟದಲ್ಲಿ ಶಾಸನಬದ್ಧ ಸಂಸ್ಥೆಗಳಿವೆ; ಪತ್ರಿಕೋದ್ಯಮ ಅಥವಾ ಮಾಧ್ಯಮ ಶಿಕ್ಷಣದ ಒಟ್ಟು ಅಭಿವೃದ್ಧಿ-ನಿಯಂತ್ರಣಕ್ಕೂ ಈ ಬಗೆಯ ಒಂದು ಸಂಸ್ಥೆಯನ್ನು ಸ್ಥಾಪಿಸುವ ಬಗ್ಗೆ ನಮ್ಮ ಸರ್ಕಾರ ಏಕೆ ಯೋಚಿಸಬಾರದು? ಒಂದು ಪತ್ರಿಕೋದ್ಯಮ ವಿಭಾಗ ತೆರೆಯಬೇಕಾದರೆ ಇಂತಿಷ್ಟು ಸೌಲಭ್ಯಗಳು ಇರಲೇಬೇಕು, ಒಬ್ಬ ಪತ್ರಿಕೋದ್ಯಮ ಅಧ್ಯಾಪಕನಿಗೆ ಇಂತಿಷ್ಟು ವರ್ಷಗಳ ಪ್ರಾಯೋಗಿಕ ಅನುಭವ ಇರಲೇಬೇಕು, ಆತ ಇಂತಿಷ್ಟು ವರ್ಷಗಳಿಗೊಮ್ಮೆ ಪತ್ರಿಕಾಲಯದಲ್ಲೋ ಟಿವಿ ಚಾನೆಲ್‌ಗಳಲ್ಲೋ ಒಂದಷ್ಟು ದಿನ ಕೆಲಸ ಮಾಡಿ ತನ್ನನ್ನು ತಾನು ಅಪ್‌ಡೇಟ್ ಮಾಡಿಕೊಳ್ಳುತ್ತಿರಬೇಕು ಎಂಬ ನಿಯಮಗಳನ್ನು ಈ ಸಂಸ್ಥೆ ಏಕೆ ರೂಪಿಸಬಾರದು?

ಈ ನಿಟ್ಟಿನಲ್ಲಿ ಏನಾದರೂ ಪ್ರಗತಿ ನಿರೀಕ್ಷಿಸೋಣವೇ?

4 ಕಾಮೆಂಟ್‌ಗಳು:

Hariprasada. A ಹೇಳಿದರು...

ಪದ್ಮ ತುಂಬಾ ಚೆನ್ನಾಗಿ ಬರೆದಿದ್ದಿ.. ನಿಜ ಪತ್ರಿಕೋದ್ಯಮ ತರಗತಿಗಳಲ್ಲಿ ಕಲಿಯೋದು ಹೆಚ್ಚಿನದೇನೂ ಇಲ್ಲ ಅನ್ನೋ ಅಭಿಪ್ರಾಯವನ್ನು ಈ ಹಿಂದೆ ನಾನು ವ್ಯಕ್ತಪಡಿಸಿದ್ದೆ. ಅದು ಈಗಲೂ ನನ್ನ ಅನಿಸಿಕೆ. 'Journalist are born, not made' ಅನ್ನೋದನ್ನೂ ಒಪ್ಪೋದಿಕ್ಕೆ ಸಾಧ್ಯವಿಲ್ಲದ ಮಾತು. 'ಹುಟ್ಟುತ್ತಾ ಬರೋದು ಅನುವಂಶಿಕ ಖಾಯಿಲೆಗಳು ಮಾತ್ರ' ಅನ್ನೋ ಮಾತನ್ನು ಹಿರಿಯರೊಬ್ಬರು ಹೇಳಿದ್ದಾರೆ. ಜರ್ನಲಿಸ್ಟ್ ಗಳು ಕೂಡ ಅಷ್ಟೇ.. ನಮ್ಮ ಕಲಿಕೆಯ ಹಂತದಲ್ಲಿ ನಾವು ನಮ್ಮನ್ನೇ ಅಂದಾಜಿಸಿಕೊಂಡಾಗ ಆಯ್ಕೆ ಮಾಡಿಕೊಂಡ ಕ್ಷೇತ್ರ ಇದು ಅನ್ನೋದು ನನ್ನ ವೈಯಕ್ತಿಕ ನೆಲೆಯ ಅಭಿಪ್ರಾಯ. ಹಾಗಂತ journalist are made too ಅನ್ನೋದನ್ನೂ ಒಪ್ಪಿಕೊಳ್ಳೋದು ಕಷ್ಟ. ಯಾಕಂದ್ರೆ ಒತ್ತಾಯಪೂರ್ವಕವಾಗಿ ಅಥವಾ ಕೇವಲ ಕ್ರೇಜ್ ನಿಂದ ಯಾರೂ ಜರ್ನಲಿಸ್ಟ್ ಆಗೋದಿಕ್ಕೆ ಸಾಧ್ಯವಿಲ್ಲ.
ಜರ್ನಲಿಸ್ಟ್ ಆದವನಿಗೆ ಪ್ರಮುಖವಾಗಿ ಇರಬೇಕಾಗಿರೋದು ತನ್ನ ಕಾರ್ಯಕ್ಷೇತ್ರ ಬಯಸುವ ಕಮಿಟ್ ಮೆಂಟ್, ಅದರ ಹಿನ್ನೆಲೆ ಸೇರಿದಂತೆ ಕಠಿಣ ಪರಿಶ್ರಮ. ಬರೀತಾ ಹೋದ್ರೆ ಈ ವಿಚಾರದಲ್ಲಿ ಇನ್ನೂ ಸಾಕಷ್ಟು ಹೇಳುವುದಿದೆ. ಅದು ಇಲ್ಲಿ ಅಪ್ರಸ್ತುತ.
ಇದೆಲ್ಲದರ ಹೊರತಾಗಿ ಇವತ್ತು ಮಾಧ್ಯಮ ಕ್ಷೇತ್ರಕ್ಕೆ ಸಂಬಂಧಿಸಿದ ಕೋರ್ಸ್ ಗಳನ್ನು ಮುಗಿಸಿಕೊಂಡು ರಿಪೋರ್ಟಿಂಗ್ ಗೆ ಬರುವ ಅನೇಕರಲ್ಲಿ ಪೂರ್ವ ತಯಾರಿಯ ಕೊರತೆ ಎದ್ದು ಕಾಣುತ್ತದೆ. ಮಾಧ್ಯಮ ಲೋಕ ಬಯಸುವ ಕಮಿಟ್ ಮೆಂಟ್ ಕಾಣ್ತಿಲ್ಲ. ಅದಕ್ಕೇ ನಾನು ಹೇಳಿದ್ದು ಪತ್ರಿಕೋದ್ಯಮ ತರಗತಿಗಳಲ್ಲಿ ಕಲಿಯುವಂತದ್ದು ಹೆಚ್ಚಿನದ್ದು ಏನೂ ಇಲ್ಲ. ಯಾಕಂದ್ರೆ ಮೂಲತಃ ಪತ್ರಕರ್ತ ಆಗಬೇಕು ಅಂತ ಬಯಸುವವರಲ್ಲಿ ಕಲಿಕೆಯ ಆಸಕ್ತಿ ಇರಬೇಕು. ಆಗ ಮಾತ್ರ ಪತ್ರಿಕೋದ್ಯಮ ಕ್ಲಾಸ್ ನಲ್ಲಿ ಕಲಿಯೋದು ಬಹಳಷ್ಟು ಇರುತ್ತೆ. ಇಲ್ಲದಿದ್ರೆ ಪತ್ರಿಕೋದ್ಯಮ ಅನ್ನೋದು ಕೇವಲ ಕೋರ್ಸ್ ಗೆ ಸೀಮಿತವಾಗಿರುತ್ತೆ!
ಅಂದಹಾಗೆ ಲೇಖನದ ನಿಜಕ್ಕೂ ಅರ್ಥಪೂರ್ಣವಾಗಿದೆ. ಜೊತೆಗೆ ಹೆಚ್ಚು ಪ್ರಾಯೋಗಿಕ ನೆಲೆಯಲ್ಲಿ ಬರೆದಿರುವುದು ಖುಷಿ ಕೊಟ್ಟಿದೆ. ನಿನ್ನಂತೆ ಯೋಚಿಸುವ ಪತ್ರಕರ್ತ ಪ್ರಾಧ್ಯಾಪಕರು ಸಿಕ್ಕರೆ ಒಳ್ಳೆಯ ಔಟ್ ಪುಟ್ ಸಿಗುತ್ತೆ ಅನ್ನೋದ್ರಲ್ಲಿ ಅನುಮಾನವಿಲ್ಲ.
ಮತ್ತಷ್ಟು ಲೇಖನಗಳನ್ನು ಓದುವ ನಿರೀಕ್ಷೆಯಲ್ಲಿ...
- ಹರಿ

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

Thank you ಹರಿ.
Journalists are born ಅಂದ್ರೆ ಹುಟ್ಟುತ್ತಲೇ ಮಾಧ್ಯಮವೃತ್ತಿಯನ್ನು ಕಲಿತುಕೊಂಡು ಬರುತ್ತಾರೆ ಅಂತಲ್ಲ. ಪತ್ರಕರ್ತನಿಗೆ ಅವಶ್ಯವಿರುವ ಕೆಲವು ಅನಿವಾರ್ಯ ಗುಣಗಳು by blood ಬರುತ್ತವೆ ಎಂಬ ಅರ್ಥದಲ್ಲಿ ಹೇಳಿರಬೇಕು. For example, ಸುದ್ದಿ ಯಾವುದು, ಅದು ಎಲ್ಲಿದೆ ಎಂದು ಪತ್ತೆ ಹಚ್ಚುವ nose for news ಅಂತೀವಲ್ಲ ಆ ಗುಣ, ಪತ್ರಕರ್ತನಿಗೆ ಅಗತ್ಯವಿರುವ straightforwardness, ಧೈರ್ಯ, ಒಂದು ಸಣ್ಣ ಅನುಮಾನದ ಪ್ರವೃತ್ತಿ, contactಗಳನ್ನು ಮಾಡಿಕೊಳ್ಳುವ ಮತ್ತು ಉಳಿಸಿಕೊಳ್ಳುವ ಸಾಮರ್ಥ್ಯ... ಹೀಗೆ ಅನೇಕ ಗುಣಗಳು ತರಬೇತಿಯಿಂದ ಬರುವಂಥದ್ದಲ್ಲ ಎಂಬುದು ನನ್ನ ಅನಿಸಿಕೆ. ಅವು ವ್ಯಕ್ತಿಯಲ್ಲಿ ಅವ್ಯಕ್ತವಾಗಿಯಾದರೂ ಇದ್ದರೆ ಮಾತ್ರ ಆತ ಮಾಧ್ಯಮ ಕ್ಷೇತ್ರಕ್ಕೆ ಲಾಯಕ್ಕಾಗುತ್ತಾನೆ. ಈ basic ಸ್ವಭಾವಗಳಿರುವ ಒಬ್ಬ ವ್ಯಕ್ತಿಗೆ ತರಬೇತಿಯಿಂದ, ಶಿಕ್ಷಣದಿಂದ ಒಂದಷ್ಟು ಒಳ್ಳೆಯದಾಗಬಹುದು. ಉದಾಹರಣೆಗೆ, ಭಾಷೆ, ಬರಹ ಅಥವಾ ಮಾತಿನಶೈಲಿ, ವಿದ್ಯಮಾನಗಳ ಬಗ್ಗೆ ತಿಳುವಳಿಕೆ etc ಗಳನ್ನು improve ಮಾಡಿಕೊಳ್ಳಬಹುದು. ಇಷ್ಟಾಗಿಯೂ ನೀನು ಹೇಳುವ ಹಾಗೆ commitment, hard work ಇಲ್ಲದೇ ಹೋದರೆ ಆತ ಖಂಡಿತ ಪತ್ರಕರ್ತನಾಗಲಾರ.ಈ ಎರಡರ ಕೊರತೆ ಅನೇಕ ವೃತ್ತಿನಿರತರಲ್ಲೂ ಇದೆ ಎಂದರೆ ನೀನೂ ಒಪ್ಪಬಹುದು ಅಂದುಕೊಳ್ಳುವೆ.

Hariprasada. A ಹೇಳಿದರು...

ಒಪ್ಪಿಕೊಳ್ಳಲೇ ಬೇಕಾದ ಸತ್ಯ ಅದು.. ಆದ್ರೆ nose for news ಅನ್ನೋದನ್ನು ನಾವು ಮಾಧ್ಯಮ ಕ್ಷೇತ್ರ ಆರಿಸಿಕೊಂಡು ಇದನ್ನು ವೃತ್ತಿಯಾಗಿ ಸ್ವೀಕರಿಸಿದಾಗ ನಾವು ರೂಢಿಸಿಕೊಳ್ಳಬೇಕು. ಅದು ಯಾವತ್ತೂ ಅಲರ್ಟ್ ಆಗಿರಬೇಕಾದ ಅನಿವಾರ್ಯತೆ. ಅಷ್ಟಿದ್ದರೆ ಉಳಿದದ್ದೆಲ್ಲಾ follow ಮಾಡ್ತವೆ.

minchulli ಹೇಳಿದರು...

ಪ್ರಣತಿ ಭಾಷೇಲಿ ಹೇಳಲಾ "ಏ ಚದಾ" (ಏನ್ ಚಂದಾ)..

"ಪತ್ರಕರ್ತ ಮಾಗುತ್ತಾ ಹೋಗಬೇಕು, ಅದರ ಆರಂಭಿಕ ತಯಾರಿಯನ್ನಾದರೂ ಅಧ್ಯಾಪಕ ಮಾಡಿಕಳಿಸಬೇಕು. ಮಾಗಿದವನು ಬಾಗಿಯಾನು."

ಬಹು ಅರ್ಥಪೂರ್ಣ ಬರಹ.. ಮೌಲಿಕ, ಸಮಯೋಚಿತ, ಅವಶ್ಯಕ ಮತ್ತು ಅನಿವಾರ್ಯತೆ ಎಲ್ಲವು ಹೌದಿದು.