ಬುಧವಾರ, ಸೆಪ್ಟೆಂಬರ್ 5, 2012

ಸೈಬರ್ ಸಮರದ ಕರಿನೆರಳಲ್ಲಿ ಭಾರತ


ಮಾಧ್ಯಮಶೋಧ-24, ಹೊಸದಿಗಂತ, 30-08-2012

ವಿಲಿಯಂ ಗಿಬ್ಸನ್, ಜಾನ್ ಫೋರ್ಡ್ ಮೊದಲಾದವರು ಎಂಭತ್ತರ ದಶಕದಲ್ಲಿ ಸೈಬರ್ ಸ್ಪೇಸ್, ಸೈಬರ್ ಅಟ್ಯಾಕ್, ಸೈಬರ್ ವಾರ್ ಎಂದೆಲ್ಲ ವೈಜ್ಞಾನಿಕ ಕಥೆ-ಕಾದಂಬರಿಗಳನ್ನು ಕಣ್ಣಿಗೆ ಕಟ್ಟುವಂತೆ ಬರೆಯುತ್ತಿದ್ದರೆ ಜನ ಅವುಗಳನ್ನು ಬಾಯಿ ಚಪ್ಪರಿಸಿಕೊಂಡು ಓದುತ್ತ ಹೀಗೂ ಉಂಟೆ ಎಂದು ವಿಸ್ಮಯಪಡುತ್ತಿದ್ದುದುಂಟು. ಮೂವತ್ತು ವರ್ಷಗಳ ನಂತರ ಈ ಥ್ರಿಲ್ಲರ್‌ಗಳು ತಮ್ಮ ಕಣ್ಣೆದುರೇ ಸಂಭವಿಸಬಹುದೆಂದು ಅವರು ಬಹುಶಃ ಕನಸಿನಲ್ಲೂ ಭಾವಿಸಿರಲಿಕ್ಕಿಲ್ಲ. ಅಂದಿನ ಕಲ್ಪನೆ, ಕಟ್ಟುಕಥೆಗಳು ಇಂದು ಜಾಗತಿಕ ಆತಂಕಗಳಾಗಿ ನಮ್ಮೆದುರು ಧುತ್ತೆಂದು ವಕ್ಕರಿಸಿರುವುದು ಸಂಪರ್ಕಮಾಧ್ಯಮಗಳ ಕ್ರಾಂತಿಯೋ ಆಧುನಿಕತೆಯ ವಿಪರ್ಯಾಸವೋ ಅರ್ಥವಾಗುವುದಿಲ್ಲ.

ಅದೆಲ್ಲೋ ಈ-ಮೇಲ್ ಹ್ಯಾಕಿಂಗ್ ಮಾಡಿದ್ದಾರಂತೆ, ಇನ್ಯಾರದೋ ಕಂಪ್ಯೂಟರ್‌ನಲ್ಲಿರುವ ಫೈಲ್‌ಗಳನ್ನು ವೈರಸ್‌ಗಳು ತಿಂದುಹಾಕಿವೆಯಂತೆ, ಮತ್ಯಾರದೋ ಬ್ಯಾಂಕ್ ಅಕೌಂಟ್‌ನಲ್ಲಿರುವ ಲಕ್ಷಾಂತರ ರೂಪಾಯಿ ಹಣವನ್ನು ಇನ್ಯಾರೋ ಆನ್‌ಲೈನಲ್ಲೇ ಎಗರಿಸಿದ್ದಾರಂತೆ ಎಂಬಿತ್ಯಾದಿ ಸುದ್ದಿಗಳನ್ನು ಆಗೊಮ್ಮೆ ಈಗೊಮ್ಮೆ ಓದುತ್ತಾ ಅದೇನೆಂದು ಅರ್ಥವಾಗದೆ ತಲೆಕೊಡವಿಕೊಂಡವರು ಈಗ ಇವೆಲ್ಲ ನಮಗೂ ಸಂಭವಿಸಿಬಿಡಬಹುದೇ ಎಂದು ಚಿಂತಾಕ್ರಾಂತರಾಗುವ ಕಾಲ ಎದುರಾಗಿದೆ. ಇಡೀ ಜಗತ್ತನ್ನು ಸೈಬರ್ ಲೋಕದ ಸಂಭವನೀಯ ವಿಪತ್ತಿನ ಕರಿಛಾಯೆ ಆವರಿಸಿಕೊಂಡಿದೆ.

ದೇಶವನ್ನು ಚಿಂತೆಗೀಡು ಮಾಡಿದ ಈಚಿನ ಅಸ್ಸಾಂ ಹಿಂಸಾಚಾರ ಮತ್ತು ಅದರ ಮುಂದುವರಿದ ಭಾಗವೆಂಬಂತೆ ನಡೆದ ಸಾಮಾಜಿಕ ಸಾಮರಸ್ಯವನ್ನು ಕದಡುವ ದೇಶವ್ಯಾಪಿ ಹುನ್ನಾರಗಳು ಸೈಬರ್ ಮಾಯಾವಿ ಸೃಷ್ಟಿಸಬಹುದಾದ ದುರಂತಗಳನ್ನು ದೇಶಕ್ಕೆ ಮನದಟ್ಟು ಮಾಡಿವೆ; ಅಂತರ್ಜಾಲ, ಸಾಮಾಜಿಕ ಜಾಲತಾಣ, ಮೊಬೈಲ್ ದೂರವಾಣಿ ಮೊದಲಾದ ಆಧುನಿಕ ಸಂವಹನದ ಮಾಧ್ಯಮಗಳು ಸಂಪರ್ಕ ಕ್ಷೇತ್ರದಲ್ಲಿ ಕ್ರಾಂತಿಯನ್ನುಂಟುಮಾಡುವ ಜೊತೆಗೆ ಎಂತೆಂತಹ ವಿಪತ್ತುಗಳನ್ನು ತಂದೊಡ್ಡಬಹುದು ಎಂಬುದರ ಬಗೆಗೂ ಗಂಭೀರವಾಗಿ ಯೋಚಿಸುವಂತೆ ಮಾಡಿವೆ.

ಅನೇಕ ಅಭಿವೃದ್ಧಿಶೀಲ ದೇಶಗಳಂತೆಯೇ ನಾವೂ ಕೂಡ ಇಂಟರ್ನೆಟ್ ವಿಷಯದಲ್ಲಿ ಅಷ್ಟೊಂದು ವೇಗವಾಗಿಯೇನೂ ಇರಲಿಲ್ಲ. ಸಹಜವಾಗಿಯೇ ಅದರ ಭದ್ರತೆಯ ಬಗೆಗಿನ ನಮ್ಮ ಗಮನವೂ ಸಾಧಾರಣವಾಗಿಯೇ ಇತ್ತು. ಅಮೇರಿಕ, ಚೀನಾದಂತಹ ದೇಶಗಳು ತಮ್ಮ ದೇಶದ ಗಡಿಗಳನ್ನು ಕಾಯುವುದಕ್ಕೆ ಕೊಡುವಷ್ಟೇ ಪ್ರಾಮುಖ್ಯತೆಯನ್ನು ಅಂತರ್ಜಾಲದ ಗೋಡೆಗಳನ್ನು ರಕ್ಷಿಸುವುದಕ್ಕೆ ಕೊಡುತ್ತಿದ್ದರೂ ನಾವು ನಿಧಾನವಾಗಿ ಕಣ್ಣುತೆರೆದುಕೊಳ್ಳುತ್ತಿದ್ದೆವು. ಹ್ಯಾಕಿಂಗ್, ರಹಸ್ಯ ಮಾಹಿತಿ ಕಳವು ಇತ್ಯಾದಿ ಅಪಾಯಗಳ ಬಗೆಗಷ್ಟೇ ಎಚ್ಚರವಾಗಿದ್ದ ಸರ್ಕಾರ ಡೇವಿಡ್ ಹೆಡ್ಲಿಯಂತಹ ಪಾತಕಿಗಳು ಸಾವಿರಾರು ಮೈಲಿ ದೂರದಲ್ಲಿ ಕುಳಿತು ಇಂಟರ್ನೆಟ್ ಮೂಲಕವೇ ಹತ್ಯಾಕಾಂಡಗಳ ನಿರ್ದೇಶನ ಮಾಡುತ್ತಿದ್ದುದು ಅರಿವಿಗೆ ಬಂದಾಗ, ಭಯೋತ್ಪಾದಕ ಸಂಘಟನೆಗಳು ಯಾವುದೋ ದೇಶದಲ್ಲಿ ನೆಲೆಯೂರಿಕೊಂಡು ಜಾಲತಾಣಗಳ ನೆರವಿನಿಂದ ತಮ್ಮ ಸೈನ್ಯಕ್ಕೆ ಇನ್ನಷ್ಟು ಸದಸ್ಯರನ್ನು ನೇಮಕಾತಿ ಮಾಡಿಕೊಳ್ಳುತ್ತಿದ್ದುದು ಗೊತ್ತಾದಾಗ ಮಾತ್ರ ಬೆಚ್ಚಿಬಿದ್ದಿತ್ತು. ಅದರಲ್ಲೂ ಭಯೋತ್ಪಾದಕ ಸಂಘಟನೆಗಳು ಇಂಟರ್ನೆಟ್‌ನ್ನು ಬಳಸಿಕೊಂಡು ವದಂತಿಗಳನ್ನು ಹಬ್ಬಿಸಿ ದೇಶದ ಏಕತೆ ಹಾಗೂ ಧಾರ್ಮಿಕ ಸಾಮರಸ್ಯವನ್ನೇ ಕದಡಿಸಿ ಬುಡಮೇಲು ಕೃತ್ಯಗಳನ್ನು ಎಸಗುವ ಪ್ರಯತ್ನಗಳನ್ನು ನಡೆಸಿದಾಗ ನಾವು ನಿಜವಾಗಿಯೂ ಒಂದು ಸೈಬರ್ ಸಮರದ ಹೊಸಿಲಲ್ಲಿ ನಿಂತಿದ್ದೇವೆಯೇ ಎಂಬ ಆತಂಕ ಸರ್ಕಾರದ ನಿದ್ದೆಗೆಡಿಸಿಬಿಟ್ಟಿದೆ. ಇದು ಕೇವಲ ಸರ್ಕಾರದ ಆತಂಕ ಮಾತ್ರ ಅಲ್ಲ, ದೇಶದ ಒಬ್ಬೊಬ್ಬ ಪ್ರಜೆಯ ತಲ್ಲಣ ಎಂಬುದೇ ಗಮನಿಸಬೇಕಾದ ವಿಷಯ.

ಅಂತಾರಾಷ್ಟ್ರೀಯ ಸಂಬಂಧಗಳ ಪರಿಣಿತ ಜೋಸೆಫ್ ನೀ ಎಂಬವರನ್ನು ಉಲ್ಲೇಖಿಸುತ್ತಾ ಮಾಜಿ ವಿದೇಶಾಂಗ ಸಚಿವ ಶಶಿ ತರೂರ್ ತಮ್ಮ ಇತ್ತೀಚಿನ ಲೇಖನವೊಂದರಲ್ಲಿ ಸೈಬರ್ ಲೋಕದ ನಾಲ್ಕು ಬಗೆಯ ಅಪಾಯಗಳನ್ನು ಪಟ್ಟಿ ಮಾಡಿದ್ದಾರೆ. ಒಂದು, ಸೈಬರ್ ಯುದ್ಧ. ಅಂದರೆ ಒಂದು ದೇಶ ಇನ್ನೊಂದು ದೇಶದ ಕಂಪ್ಯೂಟರ್ ಹಾಗೂ ಇಂಟರ್ನೆಟ್ ಸಂಪರ್ಕ ಜಾಲವನ್ನು ಅನಧಿಕೃತವಾಗಿ ಹತೋಟಿಗೆ ತೆಗೆದುಕೊಂಡು ಅದನ್ನು ಹಾಳುಗೆಡಹುವ ಮೂಲಕ ಆ ದೇಶದ ಸಮಸ್ತ ಚಟುವಟಿಕೆಗಳನ್ನು ಬುಡಮೇಲು ಮಾಡುವುದು. ಎರಡನೆಯದು, ಸೈಬರ್ ಕಳ್ಳತನ. ಅಂದರೆ ಕಂಪ್ಯೂಟರ್ ತಂತ್ರಜ್ಞಾನ ಬಳಸಿಕೊಂಡು ವಿವಿಧ ಸಂಸ್ಥೆ ಅಥವಾ ಸರ್ಕಾರಗಳ ರಹಸ್ಯ ಮಾಹಿತಿಗಳನ್ನು ಕಳವು ಮಾಡಿ ಅದನ್ನು ವಿನಾಶಕಾರಿ ಕೃತ್ಯಗಳಿಗೆ ಬಳಸಿಕೊಳ್ಳುವುದು. ಮೂರನೆಯದು, ಸೈಬರ್ ಕ್ರೈಂ. ಅಂದರೆ ಈ -ಮೇಲ್ ಹ್ಯಾಕಿಂಗ್ ಮಾಡುವುದು, ವೈರಸ್‌ಗಳನ್ನು ಛೂಬಿಡುವುದು, ಅಂತರ್ಜಾಲದ ಮೂಲಕ ವಂಚಿಸುವುದು, ಬೇಹುಗಾರಿಕೆ ನಡೆಸುವುದು, ವೇಶ್ಯಾವಾಟಿಕೆ, ಜೂಜು, ಕಳ್ಳಸಾಗಣೆ ಮುಂತಾದವುಗಳನ್ನು ಪ್ರೇರೇಪಿಸುವುದು, ಮಾನಹಾನಿ ಎಸಗುವುದು ಇತ್ಯಾದಿ. ನಾಲ್ಕನೆಯದು, ಸೈಬರ್ ಭಯೋತ್ಪಾದನೆ. ಅಂದರೆ ಭಯೋತ್ಪಾದಕ ಯೋಜನೆಗಳನ್ನು ಮತ್ತು ದಾಳಿಗಳನ್ನು ಇಂಟರ್ನೆಟ್ ಮೂಲಕ ಕಾರ್ಯಾಚರಣೆಗೆ ತರುವುದು, ತಮ್ಮದೇ ಸಿದ್ಧಾಂತಗಳನ್ನು ವಿವಿಧ ಜಾಲತಾಣಗಳ ಮೂಲಕ ಪ್ರಚಾರ ಮಾಡುವುದು, ತಮ್ಮ ಸಂಘಟನೆಗಳಿಗೆ ಹೆಚ್ಚುಹೆಚ್ಚು ಸದಸ್ಯರನ್ನು ಸೇರಿಸಿಕೊಳ್ಳುವುದು ಇತ್ಯಾದಿ.

ಒಂದು ಬಾಂಬ್ ದಾಳಿಯ ಮೂಲಕ ಒಂದು ದೇಶ ತನ್ನ ಶತ್ರು ದೇಶದ ನಿರ್ದಿಷ್ಟ ಭಾಗವನ್ನಷ್ಟೇ ನಾಶಮಾಡಬಹುದು; ಆದರೆ ಸೈಬರ್ ದಾಳಿಯ ಮೂಲಕ ಒಂದು ದೇಶ ಇನ್ನೊಂದು ದೇಶದ ಸಮಸ್ತ ನರನಾಡಿಗಳನ್ನೇ ನಿಷ್ಕ್ರಿಯಗೊಳಿಸಿಬಿಡಬಹುದು. ಒಂದು ದೇಶ ತನ್ನ ರಕ್ಷಣೆಗೆ ಕ್ಷಿಪಣಿಗಳನ್ನು, ಬಾಂಬುಗಳನ್ನೇನೋ ತಯಾರಿಸಿ ಗುಡ್ಡೆಹಾಕಬಹುದು, ಆದರೆ ಅವುಗಳ ಕಾರ್ಯಾಚರಣೆಗೆ ಬಳಸುವ ತಂತ್ರಜ್ಞಾನ, ಸಾಫ್ಟ್‌ವೇರ್‌ಗಳನ್ನೇ ಶತ್ರು ದೇಶ ನಾಶ ಮಾಡಿಬಿಟ್ಟರೆ ಈ ಕ್ಷಿಪಣಿಗಳ, ಬಾಂಬುಗಳ ಗತಿಯೇನಾಗಬೇಕು! ಒಂದು ದೇಶದ ಭದ್ರತಾ ವ್ಯವಸ್ಥೆಯಿಂದ ತೊಡಗಿ ಹಣಕಾಸು ವ್ಯವಹಾರಗಳವರೆಗೆ, ಆಡಳಿತದಿಂದತೊಡಗಿ ಸಾರಿಗೆ ಸಂಪರ್ಕದವರೆಗೆ ಎಲ್ಲವೂ ಕಂಪ್ಯೂಟರ್ ಜಾಲ ಅಥವಾ ವರ್ಲ್ಡ್ ವೈಡ್ ವೆಬ್ ಅಂಬ ಮಹಾಮಾಯೆಯ ಕೃಪೆಯಿಂದಲೇ ನಡೆಯುತ್ತಿರಬೇಕಾದರೆ ಈ ವ್ಯವಸ್ಥೆಯಲ್ಲಿ ಉಂಟಾಗುವ ಸಣ್ಣಸಣ್ಣ ಲೋಪಗಳೂ ದೊಡ್ಡದೊಡ್ದ ಪ್ರಮಾದಗಳಿಗೆ ಕಾರಣವಾಗುತ್ತವೆ. ಅದರಲ್ಲೂ ವೈರಿರಾಷ್ಟ್ರಗಳು ಅಥವಾ ಭಯೋತ್ಪಾದಕ ಸಂಘಟನೆಗಳೇ ನಮ್ಮ ಕಂಪ್ಯೂಟರ್ ಜಾಲದೊಳಕ್ಕೆ ಲಗ್ಗೆಯಿಟ್ಟುಬಿಟ್ಟರೆ ಎಲ್ಲ ನಿಯಂತ್ರಣವೂ ನಮ್ಮ ಕೈತಪ್ಪಿಹೋದಂತೆ. ಕಂಪ್ಯೂಟರ್-ಇಂಟರ್ನೆಟ್‌ನ್ನು ಬಳಸದ ಇಲಾಖೆ, ಸಂಸ್ಥೆಗಳೇ ಇಲ್ಲ ಎಂದಾದಮೇಲೆ ಬಾಹ್ಯಶಕ್ತಿಗಳು ಒಮ್ಮೆ ಇವನ್ನು ನಿಯಂತ್ರಣಕ್ಕೆ ತೆಗೆದುಕೊಂಡರೆ ದೇಶದ ಸಮಸ್ತ ಚಟುವಟಿಕೆಗಳೂ ನಿಷ್ಕ್ರಿಯವಾದಂತೆ. ಹೀಗಾಗಿ ಕ್ಷಿಪಣಿ ಬಾಂಬುಗಳ ಯುದ್ಧಕ್ಕಿಂತಲೂ ಈ ಸೈಬರ್ ಯುದ್ಧವೇ ಹೆಚ್ಚು ಅಪಾಯಕಾರಿ. ಸರ್ಕಾರಗಳು ಇನ್ನೂ ದೇಶದ ಭೌತಿಕ ಗಡಿಗಳನ್ನು ಕಾಯುವ ಬಗೆಗೇ ತಲೆಕೆಡಿಸಿಕೊಂಡಿದ್ದರೆ ಭಯೋತ್ಪಾದಕ ಸಂಘಟನೆಗಳು, ದುಷ್ಕರ್ಮಿಗಳು ಮಾತ್ರ ಇವರಿಗಿಂತ ನೂರು ಸಾವಿರ ಮೈಲಿ ವೇಗದಲ್ಲಿ ಸಾಗಿ ಕಣ್ಣಿಗೆ ಕಾಣದ ಸೈಬರ್ ಲೋಕದ ಸೀಮೆಗಳನ್ನು ಬೇಧಿಸಿ ತಮಾಷೆ ನೋಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ.

ಅಸ್ಸಾಂ ಗಲಭೆ, ಕರ್ನಾಟಕ-ತಮಿಳುನಾಡು ರಾಜ್ಯಗಳಿಂದ ನಡೆದ ಈಶಾನ್ಯ ಭಾಗದ ಜನರ ವಲಸೆ, ದೇಶಾದ್ಯಂತ ಹಬ್ಬಿದ ಕೋಮುಭಾವನೆ ಕೆರಳಿಸುವ ಸಂದೇಶಗಳು ಇತ್ಯಾದಿ ಘಟನೆಗಳ ಹಿನ್ನೆಲೆಯಲ್ಲಿ ಸಂಭವನೀಯ ಸೈಬರ್ ದಾಳಿಗಳ ಬಗ್ಗೆ ಸರ್ಕಾರ ಎಚ್ಚೆತ್ತುಕೊಂಡಿದೆ. ತಿರುಚಿದ ಸಂದೇಶಗಳನ್ನು ಹೊಂದಿರುವ ಮತ್ತು ಹಿಂಸಾಚಾರವನ್ನು ಪ್ರೇರೇಪಿಸುವ 300ಕ್ಕೂ ಅಧಿಕ ವೆಬ್‌ಸೈಟ್‌ಗಳನ್ನು ಸರ್ಕಾರ ಈಗಾಗಲೇ ನಿರ್ಬಂಧಿಸಿದೆ, 90ಕ್ಕೂ ಹೆಚ್ಚು ಜಾಲತಾಣಗಳನ್ನು ನಿಷೇಧಿಸಿದೆ. ಪ್ರಧಾನಿ ಕಾರ್ಯಾಲಯದ ಹೆಸರಿನಲ್ಲಿದ್ದ ಆರು ಖೋಟಾ ಟ್ವಿಟರ್ ಖಾತೆಗಳನ್ನು ತೆಗೆದುಹಾಕಿದೆ.

ಸರ್ಕಾರದ ಈ ಬಗೆಯ ಕ್ರಮಗಳು ಟೀಕೆಗೂ ಗುರಿಯಾಗಿವೆ. ನೆಗಡಿಯಾಯಿತೆಂದು ಮೂಗನ್ನೇ ಕತ್ತರಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆಯಲ್ಲ ಎಂಬ ಆರೋಪ ಕೇಳಿಬಂದಿದೆ. ವೆಬ್‌ಸೈಟುಗಳನ್ನು, ಬ್ಲಾಗ್‌ಗಳನ್ನು, ಸಾಮಾಜಿಕ ಜಾಲತಾಣಗಳನ್ನು ನಿಯಂತ್ರಿಸುವ ಮೂಲಕ ಸರ್ಕಾರ ಜನರ ಮೂಲಭೂತ ಹಕ್ಕಾಗಿರುವ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂಚಕಾರ ತರುತ್ತಿದೆ ಎಂಬ ಚರ್ಚೆಯೂ ಜೀವಂತವಾಗಿದೆ. ’ವದಂತಿ ಹಬ್ಬಿಸಿ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಪ್ರಯತ್ನಗಳನ್ನು ಶಾಶ್ವತವಾಗಿ ಕೊನೆಗಾಣಿಸುವುದಕ್ಕೆ ಸರ್ಕಾರ ದಿಟ್ಟ ನಿರ್ಧಾರ ಕೈಗೊಂಡಿದೆಯೇ ಹೊರತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವುದಕ್ಕಲ್ಲ’ ಎಂಬ ಸಮರ್ಥನೆ ಸರ್ಕಾರದಿಂದ ಹೊರಬಿದ್ದರೂ, ಅನಪೇಕ್ಷಿತ ವಿಚಾರಗಳನ್ನು ನಿಯಂತ್ರಿಸುವ, ನಿಷೇಧಿಸುವ ಅವಕಾಶವನ್ನು ಬಳಸಿಕೊಂಡು ಸರ್ಕಾರ ತನಗಾಗದವರ ಮೇಲೆ ಸೆನ್ಸಾರ್ ಹೇರಿ ದ್ವೇಷ ಸಾಧಿಸುತ್ತಿದೆ ಎಂಬ ಆರೋಪ ಹಾಗೆಯೇ ಉಳಿದುಕೊಂಡಿದೆ.

ಇನ್ನೊಂದೆಡೆ ಈ ಬಗೆಯ ಸೈಬರ್ ದಾಳಿಗಳನ್ನು ನಿರ್ವಹಿಸುವುದಕ್ಕೆ ಅಥವಾ ತಡೆಗಟ್ಟುವುದಕ್ಕೆ ಭಾರತದಲ್ಲಿ ಸೂಕ್ತ ವ್ಯವಸ್ಥೆಗಳಿಲ್ಲ ಎಂಬ ಟೀಕೆಯೂ ಇದೆ. ಅಮೇರಿಕ ಅಥವಾ ಚೀನಾ ಮಾಡಿಕೊಂಡಷ್ಟು ಸೈಬರ್ ಭದ್ರತಾ ವ್ಯವಸ್ಥೆಗಳು ನಮ್ಮ ಸೇನಾವ್ಯಾಪ್ತಿಯಲ್ಲಿ ಇಲ್ಲ, ಮತ್ತು ಸೈಬರ್ ಅಪರಾಧಗಳನ್ನು ಶಿಕ್ಷಿಸುವ ಸಾಕಷ್ಟು ಕಾನೂನುಗಳೂ ನಮ್ಮಲ್ಲಿ ಇಲ್ಲ ಎಂಬ ಅಭಿಪ್ರಾಯ ಇದೆ. ಸೈಬರ್ ಭದ್ರತೆಗೆ ಸಂಬಂಧಿಸಿದಂತೆ ಗೃಹಸಚಿವಾಲಯ, ಮಾಹಿತಿ ತಂತ್ರಜ್ಞಾನ ಇಲಾಖೆ ಮೊದಲಾದ 10-12 ಸಂಸ್ಥೆಗಳು ಸಕ್ರಿಯವಾಗಿದ್ದರೂ, ಅದನ್ನೊಂದನ್ನೇ ಗಮನಿಸುವ ಒಂದು ಪ್ರತ್ಯೇಕ ಸಶಕ್ತ ಪಡೆಯ ಅವಶ್ಯಕತೆಯಿದೆ ಎಂಬ ಮಾತು ತಳ್ಳಿಹಾಕುವಂತಹದ್ದಲ್ಲ. ಅಲ್ಲದೆ ಈಗ ಚಾಲ್ತಿಯಲ್ಲಿರುವ ಭಾರತೀಯ ದಂಡ ಸಂಹಿತೆ ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ 2000ದ ಹೊರತಾಗಿ ಸೈಬರ್ ದುಷ್ಕೃತ್ಯಗಳನ್ನು ಶಿಕ್ಷಿಸುವ ಪ್ರತ್ಯೇಕವಾದ ವಿಶೇಷ ಕಾನೂನೊಂದನ್ನು ರೂಪಿಸಬೇಕಾಗಿದೆ ಎಂಬ ಬಗೆಗೂ ಗಂಭೀರ ಚಿಂತನೆ ನಡೆಸಬೇಕಿದೆ.

ಕಾಮೆಂಟ್‌ಗಳಿಲ್ಲ: