ಶನಿವಾರ, ಜೂನ್ 30, 2012

170ರ ಹೊಸಿಲಲ್ಲಿ ಕನ್ನಡ ಪತ್ರಿಕೋದ್ಯಮ: ಸುನಾಮಿಯಾಗದಿರಲಿ ಬದಲಾವಣೆಯ ಅಲೆ

ಮಾಧ್ಯಮಶೋಧ-21, ಹೊಸದಿಗಂತ 28 ಜೂನ್ 2012

ಮಂಗಳೂರ ಸಮಾಚಾರ -
ಕನ್ನಡದ ಮೊದಲ ಪತ್ರಿಕೆಯ ಒಂದು ಪ್ರತಿ.
 
'....ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ. ನಮ್ಮ ದೇಶದ ಭಾರೀ ಇಂಗ್ಲಿಷ್ ಪತ್ರಿಕೆಗಳಲ್ಲಿ ಬರುವ ಭಾವಚಿತ್ರಗಳೇ ತೆನಾಲಿ ರಾಮಕೃಷ್ಣನ ಚಿತ್ರಗಳಂತೆಯೂ, 'ಪಂಚ್' ಮೊದಲಾದ ಪ್ರಸಿದ್ಧ ಇಂಗ್ಲಿಷ್ ಹಾಸ್ಯಪತ್ರಿಕೆಗಳಲ್ಲಿರುವ ಅಣಕುಚಿತ್ರಗಳಿಗೆ ಪ್ರತಿಯಾದ ವಿಕಾರಗಳಂತೆಯೂ ಇರುವಲ್ಲಿ, ಕನ್ನಡ ಪತ್ರಿಕೆಗಳ ಚಿತ್ರವೈಭವವನ್ನು ವರ್ಣನೆ ಮಾಡುವುದು ಅನವಶ್ಯಕ. ಒಂದು ವೇಳೆ ಈ ಚಿತ್ರಗಳನ್ನು ನೋಡಿದರೆ ಚಿತ್ರಿತರಾದವರಿಗೂ ಅವರ ಬಂಧುಮಿತ್ರರಿಗೂ ನಗು ಬಂದೀತೋ ಅಳು ಬಂದೀತೋ ಊಹಿಸುವುದು ಕಷ್ಟ. ಚಿತ್ರಗಳನ್ನು ಅಚ್ಚು ಮಾಡುವುದು ವೆಚ್ಚದ ಕೆಲಸ. ನುಣುಪಿನ ಕಾಗದ, ಒಳ್ಳೆಯ ಮಶಿ, ಚೊಕ್ಕಟವಾದ ಪಡಿಯಚ್ಚು, ನಯವಾದ ಯಂತ್ರ, ನಾಜೂಕಾದ ಕೈಗಾರಿಕೆ- ಇವುಗಳಲ್ಲಿ ಯಾವುದಿಲ್ಲದಿದ್ದರೂ ಚಿತ್ರವು ಅಂದವಾಗುವುದಿಲ್ಲ. ಈಚೆಗೆ ಬೆಂಗಳೂರಿನ ಒಂದೆರಡು ಪತ್ರಿಕೆಗಳವರು ಪ್ರಕಟಿಸಿರುವ ಭಾವಚಿತ್ರಭರಿತಗಳಾದ ವಿಶೇಷ ಸಂಚಿಕೆಗಳು ಅಂದವಾಗಿವೆ...’

ಅರೆ! ಯಾವ ಕಾಲದ ಪತ್ರಿಕೋದ್ಯಮದ ಬಗ್ಗೆ ಓದುತ್ತಿದ್ದೇವೆ ಎಂದು ಯಾರಿಗಾದರೂ ಸೋಜಿಗವೆನಿಸದಿರದು. ಈ ಮಾಹಿತಿಸ್ಫೋಟದ ಯುಗದಲ್ಲಿ ಹುಟ್ಟಿ ಬೆಳೆಯುತ್ತಿರುವವರಿಗಂತೂ 'ಈಚೆಗೆ ಕೆಲವು ಪತ್ರಿಕೆಗಳಲ್ಲಿ ಭಾವಚಿತ್ರಗಳೂ ಬರುತ್ತಿವೆ’ ಎಂಬಂತಹ ಮಾತುಗಳು ಶುದ್ಧ ತಮಾಷೆಯಂತೆ ಕಂಡರೂ ಅಚ್ಚರಿಯಿಲ್ಲ. ಈ ಅಚ್ಚರಿ-ಅನುಮಾನ ನಿಜ. ೧೯೨೮ರ ಜುಲೈ ೩೧ರಂದು ಬಾಗಲಕೋಟೆಯಲ್ಲಿ ನಡೆದ ಅಖಿಲ ಕರ್ನಾಟಕ ಪತ್ರಕರ್ತರ ಪ್ರಥಮ ಸಮ್ಮೇಳನದ ಅಧ್ಯಕ್ಷಸ್ಥಾನದಿಂದ ಪತ್ರಿಕಾಭೀಷ್ಮ ಡಿವಿಜಿಯವರು ಮಾಡಿದ ಭಾಷಣದ ಕೆಲವು ಸಾಲುಗಳಿವು. ಅವರ ಮಾತಿನಲ್ಲಿ ದಾಖಲಾಗಿರುವ ಕಾಲವನ್ನೂ ನಾವೀಗ ಬದುಕುತ್ತಿರುವ ಮಾಧ್ಯಮಕ್ರಾಂತಿಯ ದಿನಗಳನ್ನೂ ಹೋಲಿಸಿ ನೋಡಿದರೆ ಕಳೆದ ಶತಮಾನದುದ್ದಕ್ಕೂ ನಮ್ಮ ಕನ್ನಡ ಪತ್ರಿಕೋದ್ಯಮ ಎಂತೆಂತಹ ಮಜಲುಗಳನ್ನು ದಾಟಿಬಂದಿದೆ ಎಂಬುದು ಒಂದು ಇಂದ್ರಜಾಲದಂತೆ, ಒಂದು ಅಪ್ಪಟ ವಿಸ್ಮಯದಂತೆ ಭಾಸವಾಗುತ್ತದೆ.

ಹೌದು, ಜಾಗತಿಕ ಪತ್ರಿಕೋದ್ಯಮ ಇಂದು ಯಾವೆಲ್ಲ ಸ್ಥಿತ್ಯಂತರಗಳ ನಡುವೆ ನಿಂತಿದೆಯೋ ಆ ಎಲ್ಲ ಸ್ಥಿತ್ಯಂತರಗಳಿಗೆ ಕನ್ನಡ ಪತ್ರಿಕೋದ್ಯಮವೂ ಸಾಕ್ಷಿಯಾಗಿದೆ. ಇದೊಂದು ನಿರಂತರ ಪ್ರವಾಹ. ನೀರು ಮಡುಗಟ್ಟಿ ಪಾಚಿ ಬೆಳೆಯುವ ಮಾತು ಹಾಗಿರಲಿ, ನೆರೆಯ ವಿರುದ್ಧ ಈಜಬಲ್ಲ ಗಟ್ಟಿಕುಳಗಳು ಮಾತ್ರ ಬದುಕುವ ಮಹಾನದಿ ಇದೆಂದು ಪತ್ರಿಕೋದ್ಯಮದ ಈವರೆಗಿನ ಸಾವಿರಾರು ಪ್ರಯೋಗಗಳು ಮನದಟ್ಟು ಮಾಡಿವೆ. ಕನ್ನಡ ಪತ್ರಿಕೋದ್ಯಮವೇ ಏಕೆ, ಭಾರತೀಯ ಪತ್ರಿಕೋದ್ಯಮವೂ ಸೇರಿದಂತೆ ಜಗತ್ತಿನ ಯಾವುದೇ ಭಾಗದ ಪತ್ರಿಕೋದ್ಯಮದ ಇತಿಹಾಸವೂ ಸಂಘರ್ಷಮಯವಾದದ್ದೇ. ಬಹುತೇಕ ಎಲ್ಲ ದೇಶಗಳ ಪತ್ರಿಕಾ ಇತಿಹಾಸಗಳೂ ಪತ್ರಿಕಾ ಸ್ವಾತಂತ್ರ್ಯಕ್ಕಾಗಿನ ಹೋರಾಟದ ಇತಿಹಾಸಗಳೆಂದೇ ಪ್ರಸಿದ್ಧವಾದವು.

ಬದಲಾವಣೆ ಪತ್ರಿಕೋದ್ಯಮದ ಅಂತಃಸತ್ವ. ತಂತ್ರಜ್ಞಾನದ ದೃಷ್ಟಿಯಿಂದ, ಪತ್ರಿಕೆಗಳ ಹೂರಣ, ಪ್ರಸ್ತುತಿ, ಪ್ರಸರಣೆಯ ದೃಷ್ಟಿಯಿಂದ ಕಾಲದಿಂದ ಕಾಲಕ್ಕೆ ಪತ್ರಿಕೋದ್ಯಮದಲ್ಲಿ ಅಸಂಖ್ಯ ಬದಲಾವಣೆಗಳಾಗುತ್ತ ಹೋದವು. ಆದರೆ ಪತ್ರಿಕಾವೃತ್ತಿ-ಪತ್ರಿಕೋದ್ಯೋಗವಾಗಿದ್ದ ಪತ್ರಿಕಾ ಕ್ಷೇತ್ರ ಪತ್ರಿಕೋದ್ಯಮವಾಗಿ ಬದಲಾದದ್ದು ಮಾತ್ರ ತುಂಬ ಹಳೆಯ ಬೆಳವಣಿಗೆಯೇನಲ್ಲ. ಎಂಭತ್ತರ ದಶಕದವರೆಗೂ ಪತ್ರಿಕೋದ್ಯಮ ಒಂದು ಲಾಭಗಳಿಕೆಯ ಉದ್ಯಮವೆಂದು ಯಾರಿಗೂ ಅನಿಸಿರಲೇ ಇಲ್ಲ ಅಥವಾ ಅದನ್ನೊಂದು ಉದ್ಯಮವಾಗಿ ಪರಿಗಣಿಸಲು ಅವರ ತತ್ವಾದರ್ಶಗಳು ಒಪ್ಪಿಗೆ ನೀಡಿರಲಿಲ್ಲ. ಆದರೆ ಯಾವಾಗ ಅವಸಾನದ ಹಾದಿಯಲ್ಲಿದ್ದ ಬೆನೆಟ್ ಅಂಡ್ ಕೋಲ್‌ಮನ್ ಕಂಪೆನಿಯ ಸಾರಥ್ಯವನ್ನು ಸಮೀರ್ ಜೈನ್ ವಹಿಸಿಕೊಂಡರೋ (1986) ಅಲ್ಲಿಂದ ಭಾರತೀಯ ಪತ್ರಿಕೋದ್ಯಮದ ಒಟ್ಟು ಚಿತ್ರಣವೇ ಬದಲಾಯಿತು. ಆಮೇಲಂತೂ ದೂರದರ್ಶನ ಪ್ರವರ್ಧಮಾನಕ್ಕೆ ಬಂದುದು, ಖಾಸಗಿ ಚಾನೆಲ್‌ಗಳ ಪ್ರವೇಶವಾದುದು, ಉದಾರೀಕರಣ-ಖಾಸಗೀಕರಣಗಳ ಗೋಡೆಯಿಲ್ಲದ ಜಗತ್ತಿನಲ್ಲಿ ಜಾಹೀರಾತೆಂಬ ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಪತ್ರಿಕೆಗಳೂ ಕಂಡು ರೋಮಾಂಚಿತವಾದುದು ಎಲ್ಲವೂ ಎರಡು-ಮೂರು ದಶಕಗಳ ಅತ್ಯಂತ ಕ್ಷಿಪ್ರ ಬೆಳವಣಿಗೆ. 232 ವರ್ಷಗಳ ಭಾರತೀಯ ಪತ್ರಿಕೋದ್ಯಮ ಅಥವಾ 170 ವರ್ಷಗಳ ಕನ್ನಡ ಪತ್ರಿಕೋದ್ಯಮದ ಇತಿಹಾಸದಲ್ಲಿ ಇದು ಅತ್ಯಂತ ಸಣ್ಣ ಅವಧಿ.

ತಿರುಮಲೆ ತಾತಾಚಾರ್ಯ ಶರ್ಮ, ಎಂ. ವೆಂಕಟಕೃಷ್ಣಯ್ಯ, ಡಿವಿಜಿ, ಆರ್. ಆರ್. ದಿವಾಕರ್, ಮೊಹರೆ ಹಣಮಂತರಾವ್, ಸಿದ್ಧವನಹಳ್ಳಿ ಕೃಷ್ಣಶರ್ಮ, ಖಾದ್ರಿ ಶಾಮಣ್ಣ, ಟಿ. ಎಸ್. ರಾಮಚಂದ್ರರಾವ್... ಮುಂತಾದ ದಿಗ್ಗಜರನ್ನು ಕಂಡ ಕನ್ನಡ ಪತ್ರಿಕೋದ್ಯಮಕ್ಕಂತೂ ಬದಲಾವಣೆಯ ಗಾಳಿ ಪತ್ರಿಕಾವೃತ್ತಿಯ ಉನ್ನತಿಯ ಗಾಳಿ ಆಯಿತೇ ಹೊರತು ಉದ್ಯಮದ ಗಾಳಿಯಾಗಲಿಲ್ಲ. ಆದರೆ ಜಾಗತೀಕರಣದ ಪ್ರವಾಹದಲ್ಲಿ ದೇಶದ ಅಥವಾ ಜಗತ್ತಿನ ಇತರ ಭಾಗದ ಪತ್ರಿಕೋದ್ಯಮ ಯಾವ ಹಾದಿ ಹಿಡಿಯಿತೋ ಆ ಹಾದಿಯಿಂದ ತಪ್ಪಿಸಿಕೊಳ್ಳುವುದೂ ಕನ್ನಡ ಪತ್ರಿಕೋದ್ಯಮಕ್ಕೆ ಸಾಧ್ಯವಿರಲಿಲ್ಲ.

ಪತ್ರಿಕೆ ಒಂದು 'ಪ್ರಾಡಕ್ಟ್’ ಆಗಿ ಓದುಗ ಒಬ್ಬ 'ಗ್ರಾಹಕ’ ಆದಲ್ಲಿಂದ ಕನ್ನಡ ಪತ್ರಿಕೋದ್ಯಮದ ಗತಿ ಹಾಗೂ ಹಾದಿಗಳೆರಡೂ ಬದಲಾಗಿಬಿಟ್ಟವು. ಆದ್ಯತೆಯೇ ಬದಲಾದ ಮೇಲೆ ಪ್ರಯತ್ನ ಹಾಗೂ ಫಲಿತಾಂಶವೂ ಬದಲಾಗಬೇಕು. ಕಳೆದೊಂದು ದಶಕದಲ್ಲಿ ಅಂದರೆ ಹೊಸ ಸಹಸ್ರಮಾನದ ಈಚಿನ ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮ ಕಂಡ ಸ್ಥಿತ್ಯಂತರ ನಭೂತೋ ನಭವಿಷ್ಯತಿ ಎಂಬಂತಹದ್ದು. ತಾವು ತಮ್ಮ 'ಕನ್‌ಸ್ಯೂಮರ್’ಗೆ ಮಾರುತ್ತಿರುವ ಪ್ರತಿಯೊಂದು ಸಂಚಿಕೆಯನ್ನೂ 'ಪ್ರಾಡಕ್ಟ್’ ಎಂದು ಪರಿಗಣಿಸಿದ ಮೇಲೆ ಪತ್ರಿಕಾ ಸಂಸ್ಥೆಗಳು ತಮ್ಮ ಅಷ್ಟೂ ವ್ಯವಹಾರವನ್ನೂ 'ಬಿಸಿನೆಸ್ ಮ್ಯಾನೇಜ್‌ಮೆಂಟ್’ನ ಪರಿಭಾಷೆಯಲ್ಲೇ ನಡೆಸಿಕೊಂಡು ಹೋಗಬೇಕಾಗುತ್ತದೆ. ಹೀಗಾಗಿ ಬೇರೆ ಯಾವುದೇ ವ್ಯವಹಾರದ ಸಂಸ್ಥೆ ಬಳಸುವ ಮಾರ್ಕೆಟಿಂಗ್, ಪ್ರೊಮೋಶನ್, ಪ್ಯಾಕೇಜಿಂಗ್ ಮೊದಲಾದ ಅಪ್ಪಟ ವ್ಯವಹಾರದ ಪದಗಳನ್ನೇ ವೃತ್ತಪತ್ರಿಕೆಗಳ ಆಡಳಿತ ವಿಭಾಗಗಳೂ ಬಳಸಲಾರಂಭಿಸಿದವು.

ಯಾವುದೇ ವೈಭವೀಕರಣವಿಲ್ಲದೆ ಹೇಳುವುದಾದರೆ, ಮೂರು ರೂಪಾಯಿ ಕೊಟ್ಟು ಪೇಪರ್ ಕೊಳ್ಳುವ ಓದುಗನಿಗೆ ತಾವು ನ್ಯಾಯ ಒದಗಿಸಬೇಕು ಎಂಬುದಕ್ಕಿಂತಲೂ ಸಾವಿರಾರು ರೂಪಾಯಿ ತೆತ್ತು ಜಾಹೀರಾತು ನೀಡುವ ಕಂಪೆನಿಯವನಿಗೇ ತಾವು ನ್ಯಾಯ ಒದಗಿಸಬೇಕೆಂಬುದು ಈ ಹಾದಿ ಹಿಡಿದಿರುವ ಮುಖ್ಯವಾಹಿನಿ ಪತ್ರಿಕೆಗಳ ಸದ್ಯದ ಪರಿಸ್ಥಿತಿ. ತಮ್ಮ ಮಾಹಿತಿಯಿಂದ ಓದುಗ ಎಷ್ಟು ಮಾಹಿತಿ ಪಡೆದುಕೊಳ್ಳುತ್ತಾನೆ, ಎಷ್ಟು ಎಚ್ಚೆತ್ತುಕೊಳ್ಳುತ್ತಾನೆ ಎಂಬುದಕ್ಕಿಂತಲೂ ಆತ ತಾವು ಪ್ರಕಟಿಸುವ ಜಾಹೀರಾತಿಗೆ ಎಷ್ಟು ಪ್ರತಿಕ್ರಿಯಿಸುತ್ತಾನೆ ಎಂಬುದೇ ಪತ್ರಿಕೆಗಳಿಗೆ ಹೆಚ್ಚು ಮುಖ್ಯ. ಹೀಗಾಗಿ, ಒಂದು ಪತ್ರಿಕೆ ಎಷ್ಟು ಪ್ರಸರಣೆ ಹೊಂದಿದೆ ಎಂಬಷ್ಟೇ ಅದು ಯಾವ ವರ್ಗದ ಯಾವ ಪ್ರದೇಶದ ಓದುಗರಲ್ಲಿ ಪ್ರಸರಣೆ ಹೊಂದಿದೆ ಎಂಬುದೂ ಪತ್ರಿಕೆಗಳಿಗೆ ಅತ್ಯಂತ ಪ್ರಮುಖವಾಗುತ್ತದೆ.

ಹೊಸಯುಗದ ಸ್ಪರ್ಧೆಗೆ ತೆರೆದುಕೊಂಡ ಕನ್ನಡ ಪತ್ರಿಕೆಗಳು ಹೊಸ ಪ್ರಯೋಗಗಳಿಗೂ ಅನಿವಾರ್ಯವಾಗಿ ತೆರೆದುಕೊಂಡವು. ಪ್ರಸರಣೆ-ಪ್ರವರ್ಧನೆ ವಿಭಾಗಳು ಚುರುಕಾದಷ್ಟೇ ಸಂಪಾದಕೀಯ ವಿಭಾಗವೂ ಚುರುಕಾಗಿ ಬದಲಾವಣೆಗಳನ್ನು ತರುವುದು ಅನಿವಾರ್ಯವಾಯಿತು. ರಾಷ್ಟ್ರೀಯ-ಅಂತಾರಾಷ್ಟ್ರೀಯ ವಿದ್ಯಮಾನಗಳಿಗಿಂತ ಪ್ರಾದೇಶಿಕ ಹಾಗೂ ಸ್ಥಳೀಯ ಸುದ್ದಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ಬಂತು. ಒಟ್ಟಾರೆ ರಾಜಕಾರಣದ ಬಗ್ಗೆ ಬರೆಯುವುದಕ್ಕಿಂತಲೂ ರಾಜಕಾರಣಿಗಳ ಬಗ್ಗೆ ಬರೆಯುವುದಕ್ಕೆ ಪತ್ರಿಕೆಗಳು ಹೆಚ್ಚಿನ ಆದ್ಯತೆ ನೀಡಿದವು. ಎಲ್ಲ ಪತ್ರಿಕೆಗಳಿಗೂ ಏಕಾಏಕಿ ಯುವಜನರ ಮೇಲೆ ಪ್ರೀತಿ ಹುಟ್ಟಿತು. ಸಾಧ್ಯವಾದಷ್ಟು ಹೊಸಜನಾಂಗವನ್ನು ತಮ್ಮತ್ತ ಆಕರ್ಷಿಸುವುದರಿಂದ ತಮಗೆ ಹೆಚ್ಚಿನ ಲಾಭವಿದೆ ಎಂದು ಪತ್ರಿಕೆಗಳು ಅರ್ಥಮಾಡಿಕೊಂಡವು. ಪತ್ರಿಕೆಗಳಿಗೂ ಮ್ಯಾಗಜಿನ್‌ಗಳಿಗೂ ಇರುವ ಅಂತರ ಕಡಿಮೆಯಾಗತೊಡಗಿತು. ಬಹುತೇಕ ಪತ್ರಿಕೆಗಳು ಪ್ರತಿನಿತ್ಯ ಪುರವಣಿಗಳನ್ನು ಹೊರಡಿಸಲಾರಂಭಿಸಿದವು. ಸುದ್ದಿಬರವಣಿಗೆ ಹಾಗೂ ಪ್ರಸ್ತುತಿಯ ಶೈಲಿಯಲ್ಲೂ ಸಾಕಷ್ಟು ಬದಲಾವಣೆಗಳಾದವು. ಸಂಕ್ಷಿಪ್ತತೆಯೇ ಸುದ್ದಿಯ ಜೀವಾಳ ಎಂಬ ಮಾತು ನಿಜದರ್ಥದಲ್ಲಿ ಅನುಷ್ಠಾನಕ್ಕೆ ಬಂತು. ಸುದ್ದಿಯನ್ನು ಸುದ್ದಿಯಾಗೇ ಕೊಡುವುದಕ್ಕಿಂತಲೂ ಅದನ್ನು ಸಂಪಾದಕೀಕರಣಗೊಳಿಸಿ ಕೊಡುವುದನ್ನು ಹಲವರು ಜಾರಿಗೆ ತಂದರು. ಚಿತ್ರಗಳಿಗೆ, ಗ್ರಾಫಿಕ್ಸ್‌ಗಳಿಗೆ, ಓದುಗಸ್ನೇಹೀ ವಿನ್ಯಾಸಕ್ಕೆ ಹೆಚ್ಚಿನ ಆದ್ಯತೆ ಬಂತು. ಅಂದರೆ 'ಕಂಟೆಟ್’ನಷ್ಟೇ 'ಪ್ಯಾಕೇಜಿಂಗ್’ಗೂ ಮಹತ್ವ ದೊರೆಯಿತು.

ಇವೆಲ್ಲ ಬದಲಾವಣೆಗಳಾದವು ಮತ್ತು ಇನ್ನೂ ಆಗುತ್ತಿವೆ ಎಂದಷ್ಟೇ ಹೇಳಲಾಗಿದೆಯೇ ಹೊರತು ಇವುಗಳಿಂದ ಪತ್ರಿಕೋದ್ಯಮಕ್ಕೆ ಒಳ್ಳೆಯದೇ ಆಗಿದೆ ಅಥವಾ ಎಲ್ಲವೂ ಕೆಟ್ಟದ್ದಾಗಿದೆ ಎಂದು ಹೇಳುವುದು ಇಲ್ಲಿನ ಉದ್ದೇಶ ಅಲ್ಲ. ಪತ್ರಿಕೋದ್ಯಮದ ಒಟ್ಟು ಅಭಿವೃದ್ಧಿಯ ದೃಷ್ಟಿಯಿಂದ, ಸಮಾಜಕ್ಕೆ ಅದರ ಕೊಡುಗೆಯ ದೃಷ್ಟಿಯಿಂದ ಸಾಕಷ್ಟು ಒಳ್ಳೆಯದೇ ಆಗಿದೆ; ಹಾಗಂತ ಅದರ ಮಗ್ಗುಲ ಮುಳ್ಳು ಕಾಡದೇ ಉಳಿದಿಲ್ಲ. ಪತ್ರಿಕೆಗಳು ಹೆಚ್ಚುಹೆಚ್ಚು ಸ್ಥಳೀಯವಾದದ್ದರಿಂದ ಸ್ಥಳೀಯ ಸುದ್ದಿಗಳಿಗೆ ಆದ್ಯತೆಯೇನೋ ದೊರೆಯಿತು, ಆದರೆ ರಾಜ್ಯ-ರಾಷ್ಟ್ರಮಟ್ಟದಲ್ಲಿ ಪ್ರಾತಿನಿಧ್ಯ ದೊರೆಯಬೇಕಿದ್ದ ಸಾಮಾಜಿಕ ನ್ಯಾಯದ ಹೋರಾಟಗಳೂ ಸ್ಥಳೀಯ ಮಟ್ಟದಲ್ಲೇ ಉಳಿದುಬಿಡುವ ಅಪಾಯ ಎಷ್ಟೋ ಸಂದರ್ಭ ನಿಜವಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪ್ರಜಾಪ್ರಭುತ್ವದ ಅಂತರಂಗದಂತಿರುವ ಸಣ್ಣ ಮತ್ತು ಮಧ್ಯಮ ಪತ್ರಿಕೆಗಳು ಮುಖ್ಯವಾಹಿನಿ ಪತ್ರಿಕೆಗಳ ಈ ಭರಾಟೆಯಿಂದ ಕಂಗೆಟ್ಟಿವೆ. ಎಷ್ಟೇ ಆಯೋಗಗಳು-ಮಂಡಳಿಗಳು ಬಂದರೂ ಸಣ್ಣ ಪತ್ರಿಕೆಗಳ ದೊಡ್ಡ ಸಮಸ್ಯೆಗಳಿಗೆ ತಾತ್ಕಾಲಿಕ ಪರಿಹಾರವಾದರೂ ಒದಗಿಸುವ ಕೆಲಸ ನಡೆದಿಲ್ಲ. ಸಾಮಾಜಿಕ ಸ್ವಾಸ್ಥ್ಯ ನೋಡಿಕೊಳ್ಳುವ ವೈದ್ಯರುಗಳೆಂಬ ಮರ್ಯಾದೆಗೆ ಪಾತ್ರವಾಗಿರುವ ಪತ್ರಿಕೆ-ಪತ್ರಕರ್ತರೂ ನೈತಿಕತೆಯ ಹಾದಿಯಲ್ಲಿ ಜಾರಿಬೀಳುತ್ತಿರುವ ನಿದರ್ಶನಗಳು ಆಗಿಂದಾಗ್ಗೆ ಕಾಣಸಿಗುವುದು, ಇದರ ಬಗ್ಗೆ ಜನಸಾಮಾನ್ಯರೂ ಅತ್ಯಂತ ಕೇವಲವಾಗಿ, ತುಚ್ಛವಾಗಿ ಮಾತಾಡಿಕೊಳ್ಳುವ ಪರಿಸ್ಥಿತಿ ಬಂದಿರುವುದು ಪತ್ರಿಕೋದ್ಯಮ ನಿರ್ಮಿಸಿರುವ ಘನಪರಂಪರೆಯ ಸೌಧ ಕುಸಿಯುತ್ತಿರುವುದರ ಸಂಕೇತವಲ್ಲದೆ ಇನ್ನೇನು?

'ಮಂಗಳೂರ ಸಮಾಚಾರ’ದೊಂದಿಗೆ 1843ರಲ್ಲಿ ಆರಂಭಗೊಂಡ ಕನ್ನಡ ಪತ್ರಿಕೋದ್ಯಮ ಇದೇ ಜುಲೈ 1ಕ್ಕೆ 169 ವರ್ಷಗಳನ್ನು ಪೂರೈಸಿ 170ನೇ ವರ್ಷಕ್ಕೆ ಕಾಲಿಡುತ್ತಿದೆ. ಕನ್ನಡ ಪತ್ರಿಕೋದ್ಯಮದಲ್ಲಿ ಬೀಸುತ್ತಿರುವುದು ಬದಲಾವಣೆಯ ಮಂದಮಾರುತವಾದರೆ ಖಂಡಿತ ಅದಕ್ಕೆ ಸ್ವಾಗತ; ಆದರೆ ಯಾವುದೇ ಕಾರಣಕ್ಕೂ ಅದು ಚಂಡಮಾರುತವಾಗದಿರಲಿ; ಬದಲಾವಣೆಯ ಅಲೆ ಸುನಾಮಿಯಾಗದಿರಲಿ.


ಕಾಮೆಂಟ್‌ಗಳಿಲ್ಲ: