ಗುರುವಾರ, ಜೂನ್ 14, 2012

ಟ್ರಾಯ್ (TRAI)-ಟಿವಿ ಚಾನೆಲ್‌ಗಳ ಕದನವಿರಾಮ: ಮುಂದೇನು?


ಮಾಧ್ಯಮಶೋಧ-20, ಹೊಸದಿಗಂತ, 14 ಜೂನ್ 2012

ಸದ್ಯ ಕಿರಿಕಿರಿ ತಪ್ಪಿತು ಎಂದು ನಿರಾಳಗೊಳ್ಳುತ್ತಿದ್ದ ಟಿವಿ ವೀಕ್ಷಕರಿಗೆ ಈಗ ಮತ್ತೆ ನಿರಾಸೆಯ ಸರದಿ; ಇತ್ತ ತಮ್ಮ ಆದಾಯದ ಮೂಲಕ್ಕೇ ಬಿತ್ತಲ್ಲ ಕತ್ತರಿ ಎಂದು ಆತಂಕದಲ್ಲಿದ್ದ ಟಿವಿ ಚಾನೆಲ್‌ಗಳಿಗೆ ಸಂಭ್ರಮದ ಅವಧಿ. ಟಿವಿ ಜಾಹೀರಾತು ಪ್ರಸಾರಕ್ಕೆ ಸಂಬಂಧಿಸಿದಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಕಳೆದ ತಿಂಗಳಷ್ಟೇ ಪ್ರಕಟಿಸಿದ ಹೊಸ ನಿಯಮಾವಳಿಗಳಿಗೆ ದೂರಸಂಪರ್ಕ ವ್ಯಾಜ್ಯಗಳ ಪರಿಹಾರ ಮತ್ತು ಮೇಲ್ಮನವಿ ಮಂಡಳಿ (TDSAT) ತಾತ್ಕಾಲಿಕ ತಡೆ ನೀಡಿದೆ. ಇನ್ನೈದು ವಾರಗಳವರೆಗೆ ಅಂದರೆ ಜುಲೈ 17ರವರೆಗೆ ಯಥಾಸ್ಥಿತಿ ಮುಂದುವರಿಯಲಿ ಎಂದು ಸೂಚಿಸಿದೆ.

ಟಿವಿ ಜಾಹೀರಾತುಗಳ ಬಗ್ಗೆ ಸಾಮಾನ್ಯವಾಗಿ ಬರುವ ಆಕ್ಷೇಪಗಳು ಎರಡು ಬಗೆಯವು: ಒಂದು, ಜಾಹೀರಾತುಗಳ ಗುಣಮಟ್ಟ ಅಥವಾ ಅವು ರವಾನಿಸುವ ತಪ್ಪು ಸಂದೇಶಗಳ ಬಗ್ಗೆ; ಎರಡು, ಮಿತಿಮೀರಿದ ಜಾಹೀರಾತಿನಿಂದಾಗಿ ಟಿವಿ ಕಾರ್ಯಕ್ರಮಗಳೇ ಅಸಹನೀಯ ಅನ್ನಿಸುವ ಬಗ್ಗೆ. ಮೊದಲನೆ ವರ್ಗದ ಜಾಹೀರಾತುಗಳ ಬಗೆಗಿನ ತಕರಾರುಗಳನ್ನು ನೋಡಿಕೊಳ್ಳಲು ಭಾರತೀಯ ಜಾಹೀರಾತು ಗುಣಮಟ್ಟ ಮಂಡಳಿ (ಅಡ್ವರ್ಟೈಸಿಂಗ್ ಸ್ಟಾಂಡರ್ಡ್ ಕೌನ್ಸಿಲ್ ಆಫ್ ಇಂಡಿಯಾ)ದಂತಹ ಸಂಸ್ಥೆಗಳಿವೆ; ಆದರೆ ಕಾರ್ಯಕ್ರಮಗಳಿಗಿಂತಲೂ ಹೆಚ್ಚು ಜಾಹೀರಾತೇ ನೋಡಬೇಕಾದ ಪರಿಸ್ಥಿತಿಯಿಂದ ರೋಸಿಹೋದ ವೀಕ್ಷಕರು ಯಾರನ್ನು ಕೇಳಬೇಕು ಎಂಬ ಗೊಂದಲಕ್ಕೆ ಕೇಂದ್ರ ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ತೆರೆ ಎಳೆದಿತ್ತು. ೨೦೦೪ರಲ್ಲಿ ಪ್ರಸಾರ ಹಾಗೂ ಕೇಬಲ್ ಸೇವೆಗಳನ್ನು ದೂರಸಂಪರ್ಕ ಸೇವೆಗಳ ವ್ಯಾಪ್ತಿಗೆ ತಂದು ಅಧಿಸೂಚನೆ ಹೊರಡಿಸಿದ ಸಚಿವಾಲಯ, ಪ್ರಸಾರ ಹಾಗೂ ಕೇಬಲ್ ಟಿವಿ ಸೇವೆಗಳ ನಿಯಮಾವಳಿಗಳೂ ಟ್ರಾಯ್ ಪರಿಧಿಗೆ ಬರಬೇಕೆಂದು ನಿರ್ದೇಶನ ನೀಡಿತ್ತು. ಇದರಿಂದ ಟಿವಿ ಪ್ರಸಾರಕ್ಕೆ ಸಂಬಂಧಿಸಿದ ಯಾವುದೇ ದೂರುಗಳನ್ನೂ ಟ್ರಾಯ್‌ಗೆ ಸಲ್ಲಿಸಲು ಗ್ರಾಹಕರಿಗೆ ಅವಕಾಶವಾಯಿತು.

ಮಿತಿಮೀರಿದ ಟಿವಿ ಜಾಹೀರಾತುಗಳ ಕಿರಿಕಿರಿಗಳಿಗೆ ಸಂಬಂಧಿಸಿದಂತೆ ವೀಕ್ಷಕರಿಂದ ಟ್ರಾಯ್ ಸ್ವೀಕರಿಸಿದ ದೂರುಗಳು ನೂರಾರು. ಈ ಹಿನ್ನೆಲೆಯಲ್ಲಿ ಸೂಕ್ತವಾದ್ದೊಂದು ನಿರ್ಧಾರಕ್ಕೆ ಬರಲೇಬೇಕೆಂದು ಟ್ರಾಯ್ ತೀರ್ಮಾನಿಸಿಬಿಟ್ಟಿತ್ತು. ಮಾರ್ಚ್ ೧೬, ೨೦೧೨ದಂದು ತನ್ನ ಪ್ರಸ್ತಾಪಿತ ನಿಯಮಾವಳಿಗಳನ್ನೊಳಗೊಂಡ ಒಂದು 'ಸಮಾಲೋಚನಾ ಪತ್ರ’ವನ್ನು ಹೊರಡಿಸಿದ ಟ್ರಾಯ್ ಈ ಬಗ್ಗೆ ಸಂಬಂಧಪಟ್ಟವರಿಂದ ಆಕ್ಷೇಪಗಳನ್ನು ಆಹ್ವಾನಿಸಿತ್ತು. ಪ್ರತಿಯಾಗಿ ಟಿವಿ ಚಾನೆಲ್‌ಗಳು, ಸಂಘಟನೆಗಳು ಹಾಗೂ ಜಾಹೀರಾತುದಾರರಿಂದ ಒಟ್ಟು ೨೯ ಪ್ರತಿಕ್ರಿಯೆಗಳೂ ಬಂದವು.

ಎಲ್ಲ ಆಕ್ಷೇಪ-ಪ್ರತಿಕ್ರಿಯೆಗಳನ್ನು ಪರಿಶೀಲಿಸಿದ ಟ್ರಾಯ್ ಟಿವಿ ವೀಕ್ಷಕರಿಗೆ 'ಉತ್ತಮ ವೀಕ್ಷಣಾ ಅನುಭವ’ವನ್ನು ಒದಗಿಸಿಕೊಡುವ ಉದ್ದೇಶದಿಂದ ಕಳೆದ ಮೇ 14ರಂದು ಸೇವೆಯ ಗುಣಮಟ್ಟ (ಟಿವಿ ವಾಹಿನಿಗಳಲ್ಲಿ ಜಾಹೀರಾತುಗಳ ಅವಧಿ) ನಿಯಮಾವಳಿಗಳು 2012 [Standards of Quality of Service (Duration of Advertisements in TV Channels) Regulations 2012] ಅಡಿಯಲ್ಲಿ ಅಂತಿಮ ನಿಯಮಾವಳಿಗಳನ್ನು ಪ್ರಕಟಿಸಿತು. ತಮ್ಮ ಆಕ್ಷೇಪಗಳ ನಡುವೆಯೂ ಜಾಹೀರಾತು ನಿಯಮಾವಳಿಗಳು ಗೆಜೆಟ್‌ನಲ್ಲಿ ಅಧಿಕೃತವಾಗಿ ಪ್ರಕಟವಾಗಿದ್ದು ನೋಡಿ ಟಿವಿ ಚಾನೆಲ್‌ಗಳು, ಜಾಹೀರಾತುದಾರರು ಕ್ರುದ್ಧರಾಗಿಬಿಟ್ಟರು. ಟಿಡಿಎಸ್‌ಎಟಿಗೆ ಮೇಲ್ಮನವಿಯನ್ನೂ ಸಲ್ಲಿಸಿದರು. ಟಿಡಿಎಸ್‌ಎಟಿ ಟ್ರಾಯ್‌ಗೆ ನೋಟೀಸ್ ಜಾರಿ ಮಾಡಿ ಮೂರು ವಾರಗಳೊಳಗೆ ವಿವರಣೆ ನೀಡಲು ಸೂಚಿಸಿದೆ; ನಂತರದ ಎರಡು ವಾರಗಳಲ್ಲಿ ಅದಕ್ಕೆ ಸೂಕ್ತ ಪ್ರತಿಕ್ರಿಯೆ ನೀಡಲು ಚಾನೆಲ್‌ಗಳವರಿಗೆ ಸೂಚಿಸಿದೆ. ಪರ-ವಿರೋಧ ವಾದಗಳನ್ನು ಆಲಿಸಿದ ಬಳಿಕವಷ್ಟೇ ಟಿಡಿಎಸ್‌ಎಟಿಯ ತೀರ್ಮಾನ ಹೊರಬೀಳಲಿದೆ. ಅಲ್ಲಿಯವರೆಗೆ ಕದನವಿರಾಮ. ಹಾಗಾದರೆ ಟಿವಿ ಚಾನೆಲ್‌ಗಳನ್ನು ಆತಂಕಕ್ಕೆ ದೂಡಿದ ಟ್ರಾಯ್ ನಿರ್ದೇಶನಗಳಾದರೂ ಏನು?

ಟ್ರಾಯ್‌ನ ಪ್ರಮುಖ ಉದ್ದೇಶವೇ ಚಾನೆಲ್‌ಗಳಲ್ಲಿ ಜಾಹೀರಾತು ಪ್ರಸಾರದ ಅವಧಿಯನ್ನು ಕಡಿತಗೊಳಿಸುವುದು ಮತ್ತು ಆ ಮೂಲಕ ವೀಕ್ಷಕರಿಗಾಗುತ್ತಿರುವ ಕಿರಿಕಿರಿಯನ್ನು ತಪ್ಪಿಸುವುದು. ಅದಕ್ಕೇ ಟ್ರಾಯ್ ಸೂಚಿಸಿರುವ ಮೊದಲನೆ ನಿಯಮ, ಟಿವಿ ಚಾನೆಲ್‌ಗಳು ಗಂಟೆಯೊಂದರ ಶೇ. ೨೦ ಭಾಗ ಮಾತ್ರ ಜಾಹೀರಾತು ಪ್ರಸಾರಮಾಡಬಹುದೆಂಬುದು. ಅಂದರೆ 60 ನಿಮಿಷಗಳ ಅವಧಿಯಲ್ಲಿ 12 ನಿಮಿಷ ಮಾತ್ರ ಜಾಹೀರಾತು ಪ್ರಸಾರ ಮಾಡಲು ಅವಕಾಶ (ತಮ್ಮದೇ ಕಾರ್ಯಕ್ರಮಗಳ ಕುರಿತ ಪ್ರೊಮೋಗಳೂ ಸೇರಿ). ಎರಡು ಜಾಹೀರಾತು ಸ್ಲಾಟ್‌ಗಳ ನಡುವೆ ೧೫ ನಿಮಿಷಗಳ ಅಂತರ ಇರಲೇಬೇಕು. ಸಿನಿಮಾ ಪ್ರಸಾರದ ಸಂದರ್ಭದಲ್ಲಾದರೆ ಎರಡು ಜಾಹೀರಾತು ಅವಧಿಯ ನಡುವೆ ಕನಿಷ್ಠ ೩೦ ನಿಮಿಷಗಳ ಅಂತರ ಇರಬೇಕು. ಹಾಗಂತ ಒಂದು ಗಂಟೆಯ ನಿರ್ದಿಷ್ಟ ಅವಧಿಯಲ್ಲಿ 12 ನಿಮಿಷ ಜಾಹೀರಾತು ಇಲ್ಲದಿದ್ದರೆ ಅದರ ಪಾಲು ಇನ್ನೊಂದು ಅವಧಿಯಲ್ಲಿ ಜಾಹೀರಾತು ಪ್ರಸಾರ ಮಾಡುವಂತಿಲ್ಲ. ಅಂದರೆ ಒಂದು ಗಂಟೆಯ ಅವಧಿಯಲ್ಲಿ 10 ನಿಮಿಷ ಜಾಹೀರಾತು ಹಾಕಿ, ಇನ್ನೊಂದು ಅವಧಿಯಲ್ಲಿ 14 ನಿಮಿಷ ಜಾಹೀರಾತು ಪ್ರಸಾರ ಮಾಡುವಂತಿಲ್ಲ.

ಅಂತೆಯೇ, ಕ್ರೀಡಾ ಚಾನೆಲ್‌ಗಳು ಪಂದ್ಯಗಳ ನೇರಪ್ರಸಾರ ಮಾಡುವ ಸಂದರ್ಭ ತಮಗೆ ಬೇಕೆನಿಸಿದಾಗೆಲ್ಲ ಜಾಹೀರಾತು ತೋರಿಸುವಂತಿಲ್ಲ. ಪಂದ್ಯದ ನಡುವೆ ಸ್ವಾಭಾವಿಕ ವಿರಾಮ (ನ್ಯಾಚುರಲ್ ಬ್ರೇಕ್) ಇದ್ದಾಗ ಮಾತ್ರ ಜಾಹೀರಾತು ಹಾಕಬಹುದು. ಉದಾಹರಣೆಗೆ ಕ್ರಿಕೆಟ್ ಪಂದ್ಯ ನಡೆಯುತ್ತಿರುವ ವೇಳೆ ಆಟಗಾರ ಔಟ್ ಆದಾಗ, ಚಹಾ ವಿರಾಮ, ಊಟದ ವಿರಾಮ, ಪ್ರತಿಕೂಲ ವಾತಾವರಣ ಇದ್ದಾಗ, ಮಳೆಯಿಂದ ಪಂದ್ಯ ನಿಂತಾಗ... ಇತ್ಯಾದಿ ಸನ್ನಿವೇಶಗಳಲ್ಲಿ ಮಾತ್ರ ಜಾಹೀರಾತು ತೋರಿಸಬಹುದು.

ಇನ್ನೊಂದು ಪ್ರಮುಖ ನಿಯಮವೆಂದರೆ, ಪೂರ್ತಿ ಸ್ಕ್ರೀನ್ ಜಾಹೀರಾತುಗಳಿಗೆ ಮಾತ್ರ ಅವಕಾಶ. ಸ್ಕ್ರೋಲ್‌ನಲ್ಲಿ ಜಾಹೀರಾತು ಪ್ರಕಟಿಸುವುದು, ಕಾರ್ಯಕ್ರಮ ಪ್ರಸಾರ ಆಗುತ್ತಿರುವಾಗಲೇ ತೆರೆಯ ಅರ್ಧಭಾಗದಲ್ಲಿ ಜಾಹೀರಾತು ತೋರಿಸುವುದು, ಇದ್ದಕ್ಕಿದ್ದಂತೆ ಸ್ಕ್ರೀನ್‌ನ ಒಂದು ಅಂಚಿನಿಂದ ಜಾಹೀರಾತು ಕುಪ್ಪಳಿಸಿ ಬರುವುದು (ಅಂದರೆ ಪಾಪ್-ಅಪ್ ಆಗುವುದು) ಇತ್ಯಾದಿಗಳಿಗೆ ಅವಕಾಶ ಇಲ್ಲ. ಇದು ಸುದ್ದಿ, ಮನರಂಜನೆ, ಕ್ರೀಡೆ - ಎಲ್ಲಾ ಚಾನೆಲ್‌ಗಳಿಗೂ ಅನ್ವಯಿಸುವ ನಿಯಮ. ಹಾಗೆಯೇ, ಟಿವಿ ಕಾರ್ಯಕ್ರಮದ ಧ್ವನಿಮಟ್ಟಕ್ಕಿಂತ ಜಾಹೀರಾತಿನ ಧ್ವನಿಮಟ್ಟ ಹೆಚ್ಚಾಗಿರುವಂತಿಲ್ಲ. ಅದೆರಡೂ ಒಂದೇ ರೀತಿ ಇರಬೇಕು. ಟಿವಿ ನೋಡುತ್ತ ಕುಳಿತ ಮಂದಿ ಜಾಹೀರಾತು ಬರುತ್ತಿದ್ದಂತೆ 'ಅರೆ ಅದ್ಯಾರು ಟಿವಿ ವಾಲ್ಯೂಮ್ ಹೆಚ್ಚು ಮಾಡಿದ್ದು’ ಎಂದು ಬೆಪ್ಪಾಗಿ ನೋಡುವುದು ಈಗ ಸಾಮಾನ್ಯ ದೃಶ್ಯ.

ಒಟ್ಟಿನಲ್ಲಿ, ಟ್ರಾಯ್ ಹೊರತಂದಿರುವ ಈ ಎಲ್ಲ ನಿಯಮಾವಳಿಗಳು ಟಿವಿ ಚಾನೆಲ್‌ಗಳನ್ನು, ಜಾಹೀರಾತುದಾರರನ್ನು ಕೆರಳಿಸಿವೆ. ಹೇಳಿಕೇಳಿ ಜಾಹೀರಾತೇ ಚಾನೆಲ್‌ಗಳ ಆದಾಯದ ಬಹುದೊಡ್ಡ ಮೂಲ. ಪೇ ಚಾನೆಲ್‌ಗಳಿಗಾದರೆ ಒಂದಷ್ಟು ಚಂದಾ ಹಣವಾದರೂ ಬರುತ್ತದೆ. ಉಚಿತ ಚಾನೆಲ್‌ಗಳಿಗೆ ಜಾಹೀರಾತಿನ ಹೊರತಾಗಿ ಬೇರೆ ಆದಾಯ ಇಲ್ಲ. ಭಾರತದಲ್ಲಿ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ 607 ಟಿವಿ ಚಾನೆಲ್‌ಗಳ ಪೈಕಿ 100 ಮಾತ್ರ ಪೇ ಚಾನೆಲ್‌ಗಳು; ಉಳಿದ 507 ಕೂಡ ಉಚಿತ ವಾಹಿನಿಗಳೇ. ಟ್ರಾಯ್ ಹೇರಿರುವ ಮಿತಿಗಳಿಂದಾಗಿ ಟಿವಿ ಚಾನೆಲ್‌ಗಳ ಶೇ. 15-40ರಷ್ಟು ಆದಾಯಕ್ಕೆ ಕತ್ತರಿ ಬೀಳಲಿದೆ ಎಂಬುದೇ ಇವರ ಆತಂಕದ ಮೂಲ ಕಾರಣ. ಒಂದು ಅಂದಾಜಿನ ಪ್ರಕಾರ 2011ರಲ್ಲಿ ದೇಶದ ಟಿವಿ ಜಾಹೀರಾತು ಮಾರುಕಟ್ಟೆಯ ಒಟ್ಟು ಆದಾಯ ರೂ. 12,000 ಕೋಟಿಗಿಂತಲೂ ಹೆಚ್ಚು.

ತಮ್ಮ ಆದಾಯಕ್ಕೆ ಕೊಕ್ಕೆ ಹಾಕಲು ಟ್ರಾಯ್‌ಗೆ ಅಧಿಕಾರ ಕೊಟ್ಟವರಾರು ಎಂಬುದು ಚಾನೆಲ್‌ಗಳ ಮೊದಲನೆ ತಕರಾರು. ’ಜಾಹೀರಾತಿನ ಸಮಯ ಇತ್ಯಾದಿಗಳ ಬಗ್ಗೆ ಮಿತಿ ಹೇರಲು ಕೇಂದ್ರ ಸಂಪರ್ಕ ಸಚಿವಾಲಯ ಅಥವಾ ಮಾಹಿತಿ ಮತ್ತು ಪ್ರಸಾರ ಸಚಿವಾಲಯಗಳಿವೆ; ಟ್ರಾಯ್‌ಗೆ ಆ ಅಧಿಕಾರ ಇಲ್ಲ. 1997ರ ಟ್ರಾಯ್ ಕಾಯ್ದೆಯ ಪ್ರಕಾರ ಟ್ರಾಯ್‌ಗೆ ಶಿಫಾರಸು ಮಾಡುವ ಅಧಿಕಾರ ಮಾತ್ರ ಇದೆ. ಸಂಪರ್ಕ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಸಾರ ಹಾಗೂ ಕೇಬಲ್ ಸೇವೆಗಳನ್ನು ಟ್ರಾಯ್ ವ್ಯಾಪ್ತಿಗೆ ತಂದಿದ್ದರೂ ಅದು ಈ ಬಗೆಯ ನಿಯಂತ್ರಣಗಳನ್ನು ಹೇರಬಾರದು’ ಎಂಬುದು ಇಂಡಿಯನ್ ಬ್ರಾಡ್‌ಕಾಸ್ಟಿಂಗ್ ಫೌಂಡೇಶನ್ ಹಾಗೂ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್‌ಗಳ ವಾದ.

ಸರ್ವೋಚ್ಛ ನ್ಯಾಯಾಲಯವು ವೃತ್ತಪತ್ರಿಕೆಗಳ ಜಾಹೀರಾತಿಗೆ ಸಂಬಂಧಿಸಿದಂತೆ ನೀಡಿರುವ ತೀರ್ಪೊಂದನ್ನು ಪ್ರಸ್ತಾಪಿಸಿರುವ ಕೆಲವರು, ಟ್ರಾಯ್ ಹೇರಿರುವ ನಿರ್ದೇಶನಗಳು ಸಂವಿಧಾನದ 19(1)(a)ಯಲ್ಲಿ ವ್ಯಕ್ತವಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಆಶಯಗಳಿಗೆ ವಿರುದ್ಧವಾದವು ಎಂದು ವಾದಿಸಿದ್ದಾರೆ. ಕೇಬಲ್ ಟಿವಿ ವಲಯದ ಸಂಪೂರ್ಣ ಡಿಜಿಟಲೀಕರಣಕ್ಕೆ ಸರ್ಕಾರ ಈಗಾಗಲೇ ಮೂರು ವರ್ಷಗಳ ಗಡುವು ವಿಧಿಸಿರುವುದರಿಂದ ಟ್ರಾಯ್ ಅದರ ಪರಿಣಾಮಕಾರಿ ಅನುಷ್ಠಾನಕ್ಕೆ ಮನಸ್ಸು ಮಾಡಬೇಕೇ ಹೊರತು ವಾಹಿನಿಗಳ ಆದಾಯಕ್ಕೆ ಸಂಚಕಾರ ತರುವುದಲ್ಲ ಎಂಬುದು ಇನ್ನು ಕೆಲವರ ವಾದ. ಜಾಹೀರಾತು ಪ್ರಸಾರದ ಮೇಲಿನ ಇತಿಮಿತಿಗಳಿಂದ ವಾಹಿನಿಗಳಿಗಾಗುವ ನಷ್ಟ ತುಂಬಲು ಚಂದಾ ಹಣ ಹೆಚ್ಚಿಸಬೇಕಾಗುತ್ತದೆ ಮತ್ತು ಇದರಿಂದ ಸಾಮಾನ್ಯ ವೀಕ್ಷಕನಿಗೆ ಹೊರೆಯಾಗುತ್ತದೆ. ಇನ್ನೊಂದೆಡೆ ಜಾಹೀರಾತು ದರವನ್ನೂ ಹೆಚ್ಚಿಸಬೇಕಾಗುತ್ತದೆ; ಇದರಿಂದ ಸಣ್ಣ ಮತ್ತು ಮಧ್ಯಮ ಮಟ್ಟದ ಕಂಪೆನಿಗಳು ತಮ್ಮ ವಸ್ತು-ಸೇವೆಗಳನ್ನು ಜಾಹೀರು ಮಾಡುವುದು ಕಷ್ಟವಾಗುತ್ತದೆ. ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗಿವೆ.

ವಾದಗಳೇನೇ ಇರಲಿ, ಟ್ರಾಯ್ ನಿಯಮಾವಳಿಗಳಿಂದ ವೀಕ್ಷಕರಿಗೆ, ಕೇಬಲ್‌ನವರಿಗಂತೂ ಸಂತೋಷವಾಗಿತ್ತು. ಸದ್ಯ, ವಿಪರೀತ ಜಾಹೀರಾತುಗಳ ಕಾಟವಿಲ್ಲದೆ ಕಾರ್ಯಕ್ರಮಗಳನ್ನು ನೋಡಬಹುದೆಂದು ಜನಸಾಮಾನ್ಯರು ನಿಟ್ಟುಸಿರು ಬಿಟ್ಟಿದ್ದರು. ಇನ್ನೊಂದೆಡೆ ಟಿವಿ ವಾಹಿನಿಗಳು ತಮ್ಮ ಆದಾಯದ ಮೂಲವನ್ನು ಕಳೆದುಕೊಳ್ಳಬೇಕೆಂಬುದೂ ನ್ಯಾಯಸಮ್ಮತವಲ್ಲ. ಹಾಗಂತ ಅತಿಯಾದರೆ ಅಮೃತವೂ ವಿಷ. ಹಣದ ದುರಾಸೆಗೆ ಬಿದ್ದು ದಿಕ್ಕುದೆಸೆಯಿಲ್ಲದೆ ಬೇಕಾಬಿಟ್ಟಿ ಜಾಹೀರಾತು ಪ್ರಸಾರ ಮಾಡುವುದು, 'ಟಿವಿಯೇ ನೋಡೋದು ಬೇಡಪ್ಪ’ ಎಂಬ ಅಸಹಾಯಕ ಪರಿಸ್ಥಿತಿಯನ್ನು ಪ್ರೇಕ್ಷಕನಿಗೆ ತಂದಿಡುವುದು ಶುದ್ಧ ಅನ್ಯಾಯ. ಈ ಸಂದಿಗ್ಧದ ಹಿನ್ನೆಲೆಯಲ್ಲಿ ಮೇಲ್ಮನವಿ ಮಂಡಳಿ ಹೇಗೆ ಒಂದು ಸಮತೋಲನದ ನಿರ್ಧಾರಕ್ಕೆ ಬರುತ್ತದೆ ಎಂಬುದನ್ನು ಕಾದುನೋಡಬೇಕಾಗಿದೆ.

ಕಾಮೆಂಟ್‌ಗಳಿಲ್ಲ: