ಗುರುವಾರ, ಮೇ 31, 2012

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆಗೆ ಕಾಯ್ದೆಯ ಯೋಗ: ಸಾಹಿತಿ-ಕಲಾವಿದರಿಗೆ ಸಿಹಿಸಿಹಿ ಸುದ್ದಿ

ಮಾಧ್ಯಮಶೋಧ-19, ಹೊಸದಿಗಂತ, 31 ಮೇ 2012


ಸಂಸತ್ತಿನ ಉಭಯ ಸದನಗಳಲ್ಲೂ ಅನುಮೋದನೆ ಪಡೆಯುವ ಮೂಲಕ ಬಹುನಿರೀಕ್ಷಿತ ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ [Copyright (Amendment) Bill ] 2012ಕ್ಕೆ ಅಂತಿಮವಾಗಿ ಕಾಯ್ದೆಯಾಗುವ ಯೋಗ ಬಂದಿದೆ. ಆ ಮೂಲಕ ಸಾಹಿತಿ-ಕಲಾವಿದರ ಅದೃಷ್ಟದ ಬಾಗಿಲೂ ತೆರೆದಂತಾಗಿದೆ. ಬೇರೆ ಮಾತಿನಲ್ಲಿ ಹೇಳುವುದಾದರೆ, ಬಡಪಾಯಿ ಗೀತರಚನೆಕಾರರು, ಹಾಡುಗಾರರು, ಸಂಗೀತ ಸಂಯೋಜಕರು, ಇತರೆ ಕಲಾವಿದರ ಪ್ರತಿಭೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ದುಡ್ಡಿನ ಚೀಲ ತುಂಬಿಸಿಕೊಳ್ಳುತ್ತಿದ್ದ 'ನಿರ್ಮಾಪಕ’ರ ನಾಗಾಲೋಟಕ್ಕೆ ಈಗ ಸರಿಯಾದ ಬ್ರೇಕ್ ಬಿದ್ದಿದೆ. ಯಾರೋ ರಚಿಸಿದ ಇನ್ಯಾರೋ ಸಂಗೀತ ಸಂಯೋಜಿಸಿದ ಮತ್ಯಾರೋ ಹಾಡಿದ ಗೀತೆಗೆ ತಾವೇ ಹಕ್ಕುದಾರರೆಂದು ನಿರ್ಮಾಪಕರು ಬೀಗುವ ಕಾಲ ಕೊನೆಯಾಗಿದೆ. ಹೊಸ ಕಾನೂನಿನ ಪ್ರಕಾರ ಅವರವರ 'ಸೃಷ್ಟಿ’ಗೆ ಅವರವರೇ ಬಾಧ್ಯಸ್ಥರು, ಹಕ್ಕುದಾರರು. ಜನರ ಅಭಿಮಾನ ಅಷ್ಟೇ ಅಲ್ಲ, ಅವರ ಆರ್ಥಿಕ ಬೆಂಬಲದ ಪಾಲೂ ಆಯಾ ಕಲಾವಿದರಿಗೇ ಇನ್ನು ಮುಂದೆ ಸಲ್ಲುತ್ತದೆ.

ಈಗಾಗಲೇ ಐದು ತಿದ್ದುಪಡಿಗಳನ್ನು ಕಂಡಿರುವ ಭಾರತೀಯ ಕೃತಿಸ್ವಾಮ್ಯ ಕಾಯ್ದೆ, ಇದೀಗ ಆರನೆಯ ತಿದ್ದುಪಡಿಯಲ್ಲಿ ಕೆಲವು ಮಹತ್ವದ ಅಂಶಗಳನ್ನು ಸೇರಿಸಿಕೊಳ್ಳುವ ಮೂಲಕ ಬಹುಜನರ ಮನ್ನಣೆಗೆ ಪಾತ್ರವಾಗಿದೆ. ಪುಸ್ತಕ, ನಾಟಕ, ಸಂಗೀತ, ಸಿನಿಮಾ, ಕಲಾಕೃತಿ ಮತ್ತಿತರ ಸೃಜನಶೀಲ ರಚನೆಗಳ ಮೂಲ ಕರ್ತೃಗಳನ್ನು ಗೌರವಿಸುವ ಹಾಗೂ ಅವರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ 1957ರಲ್ಲಿ ಜಾರಿಗೆ ಬಂದ ಕೃತಿಸ್ವಾಮ್ಯ ಕಾಯ್ದೆ 1983, 1984, 1992, 1994 ಹಾಗೂ 1999ರಲ್ಲೂ ತಿದ್ದುಪಡಿಗೆ ಒಳಗಾಗಿತ್ತು. 1994ರ ತಿದ್ದುಪಡಿ 1991ರ ರೋಮ್ ಒಪ್ಪಂದದ ಆಶಯಗಳಿಗೆ ಅನುಗುಣವಾಗಿ ಕಲಾವಿದರ ಹಾಗೂ ಪೋನೋಗ್ರಾಮ್ ಮತ್ತು ಪ್ರಸಾರ ಸಂಸ್ಥೆಗಳ ಹಕ್ಕುಗಳನ್ನು ರಕ್ಷಿಸುವ ಅಂಶಗಳಿಂದಾಗಿ ಮಹತ್ವದ್ದೆಂದು ಪರಿಗಣಿತವಾಗಿತ್ತು. ಅಲ್ಲದೆ ಇದು ಕೃತಿಸ್ವಾಮ್ಯ ಸಂಘಗಳನ್ನು (Copyright Societies) ನೋಂದಾಯಿಸುವ ಪರಿಕಲ್ಪನೆಯನ್ನೂ ಜಾರಿಗೆ ತಂದಿತ್ತು. 1999ರ ತಿದ್ದುಪಡಿಯು ಬೌದ್ಧಿಕ ಆಸ್ತಿ ಹಕ್ಕುಗಳ ವ್ಯಾಪಾರ ಸಂಬಂಧೀ ಅಂಶಗಳ (TRIPS) ಅವಶ್ಯಕತೆಗಳಿಗನುಗುಣವಾದ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿತ್ತು.

ಈ ಬಾರಿಯ ತಿದ್ದುಪಡಿಗಳ ಹಿಂದೆಯೂ ಭಾರತದ ಕೆಲವು ಅಂತಾರಾಷ್ಟ್ರೀಯ ಬಾಧ್ಯತೆಗಳ ಪಾತ್ರವಿರುವುದು ಗಮನಾರ್ಹ. ಜಾಗತಿಕ ಬೌದ್ಧಿಕ ಆಸ್ತಿ ಸಂಘಟನೆ (WIPO)ಯ ಕೃತಿಸ್ವಾಮ್ಯ ಒಪ್ಪಂದ (WCT) ಮತ್ತು ಡಬ್ಲ್ಯೂಐಪಿಒ ಪರ್‌ಫಾರ್ಮೆನ್ಸಸ್ ಅಂಡ್ ಪೋನೋಗ್ರಾಮ್ಸ್ ಟ್ರೀಟಿ (WPPT) ಮೊದಲಾದವುಗಳ ಆಶಯಗಳನ್ನು ಈಡೇರಿಸುವ ಉದ್ದೇಶ ಈ ತಿದ್ದುಪಡಿಗಳ ಹಿಂದೆ ಇದೆ. ಭಾರತದ ಉದಾರೀಕರಣ ನೀತಿ ಈ ವಿಷಯದಲ್ಲಾದರೂ ಕೆಲವು ಧನಾತ್ಮಕ ಬೆಳವಣಿಗೆಗಳಿಗೆ ಕಾರಣವಾಗಿರುವುದು ತುಸು ನಿರಾಳದ ಸಂಗತಿ.

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ 2012 ಈ ಹಿಂದಿನ ಕಾಯ್ದೆಗಿಂತ ಹೇಗೆ ವಿಭಿನ್ನ ಎಂಬುದನ್ನು ಗಮನಿಸೋಣ. ಈಗಾಗಲೇ ಹೇಳಿದಂತೆ, ಹೊಸದಾಗಿ ಜಾರಿಯಾಗಲಿರುವ ಕಾಯ್ದೆ ಕಲಾವಿದರ, ಸಾಹಿತಿಗಳ ಬೌದ್ಧಿಕ ಆಸ್ತಿ ಹಕ್ಕನ್ನು ವಿಶೇಷವಾಗಿ ಗುರುತಿಸಿ ಮನ್ನಿಸುವ ಪ್ರಯತ್ನ ಮಾಡಿದೆ. ಉದಾಹರಣೆಗೆ ಒಂದು ಸಿನಿಮಾವನ್ನು ತೆಗೆದುಕೊಂಡರೆ ಅದರ ಹಾಡುಗಳ ಸಂಪೂರ್ಣ ಕೃತಿಸ್ವಾಮ್ಯ ಸಿನಿಮಾ ನಿರ್ಮಾಪಕನದ್ದಾಗಿತ್ತು; ಅಲ್ಲಿ ಅದನ್ನು ರಚಿಸಿದವನಿಗಾಗಲೀ, ಸಂಗೀತ ಸಂಯೋಜಿಸಿದವನಿಗಾಗಲೀ, ಹಾಡಿದವನಿಗಾಗಲೀ ಯಾವುದೇ ಹಕ್ಕು ಇರಲಿಲ್ಲ. ನಿರ್ಮಾಪಕ ಕೊಟ್ಟದ್ದು, ಅವರು ಪಡೆದುಕೊಂಡದ್ದು - ಅಷ್ಟೇ. ಆದರೆ ಈಗ ಹಾಗಲ್ಲ, ತಮ್ಮ 'ಸೃಷ್ಟಿ’ಯ ಮೇಲೆ ಅವರಿಗೆ ಕಾನೂನುರಿತ್ಯಾ ಅಧಿಕಾರವಿದೆ. ಬಡ ಕಲಾವಿದರನ್ನು ಯಾಮಾರಿಸಿ ನಿರ್ಮಾಪಕರು ಜೇಬು ತುಂಬಿಕೊಳ್ಳುವ ಹಾಗಿಲ್ಲ. ಕಲಾವಿದರಿಗೆ ಎಷ್ಟು ಸಂಭಾವನೆ ಸಲ್ಲಬೇಕೋ ಅಷ್ಟನ್ನು ಕಾನೂನು ಪ್ರಕಾರ ಕೊಡಲೇಬೇಕು. ಒಂದು ಸಿನಿಮಾದಲ್ಲಿ ಬಳಕೆಯಾದ ಹಾಡುಗಳನ್ನಾಗಲೀ ಇನ್ಯಾವುದೇ ಭಾಗವನ್ನಾಗಲೀ ಬೇರೆ ವಾಣಿಜ್ಯಾತ್ಮಕ ಉದ್ದೇಶಗಳಿಗೆ ಬಳಸಿಕೊಳ್ಳುವುದಿದ್ದರೆ, ಆಗ ಅದಕ್ಕೆ ಸಂಬಂಧಪಟ್ಟ ಎಲ್ಲ ಕಲಾವಿದರ ಅನುಮತಿ ಪಡೆಯುವುದು ಹಾಗೂ ಅವರಿಗೆ ಸೂಕ್ತ ಸಂಭಾವನೆ ನೀಡುವುದು ಅನಿವಾರ್ಯ.

ಸಿನಿಮಾ ಮಾಡಿದ್ದಷ್ಟೇ ಅಲ್ಲದೆ, ನಿರ್ಮಾಪಕ ತನಗೆ ಇಷ್ಟ ಬಂದಾಗಲೆಲ್ಲ ಇಷ್ಟ ಬಂದಷ್ಟು ಸಂಖ್ಯೆಯ ಸಿ.ಡಿ., ಕ್ಯಾಸೆಟ್ಟುಗಳನ್ನು ತಯಾರಿಸಿ ಮಾರಾಟ ಮಾಡುವಂತಿಲ್ಲ. ಈ ನಿಯಮ ಸಿನಿಮಾ ಅಷ್ಟೇ ಅಲ್ಲ, ಯಾವುದೇ ಬಗೆಯ ಧ್ವನಿಮುದ್ರಣಕ್ಕೂ ಅನ್ವಯಿಸುತ್ತದೆ. ಧ್ವನಿಮುದ್ರಿತ ಸಿ.ಡಿ. ಅಥವಾ ಕ್ಯಾಸೆಟ್‌ನ ಇನ್ನೊಂದು ಆವೃತ್ತಿ ತರಬೇಕಾದರೆ ಮೂಲ ಧ್ವನಿಮುದ್ರಣದ ಬಳಿಕ ಕನಿಷ್ಠ ಐದು ವರ್ಷ ಕಾಯಲೇಬೇಕು ಮತ್ತು ಅದಕ್ಕೆ ಕಾನೂನಾತ್ಮಕ ಪರವಾನಗಿ ಪಡೆದಿರಬೇಕು; ಕನಿಷ್ಠ 50,000 ಧ್ವನಿಮುದ್ರಿತ ಪ್ರತಿಗಳಿಗೊಮ್ಮೆ ಸಂಬಂಧಿತ ಕಲಾವಿದರಿಗೆ ಸಂಭಾವನೆ ನೀಡಬೇಕು (ಈ ಸಂಖ್ಯೆ ನಿರ್ದಿಷ್ಟ ಭಾಷೆ ಹಾಗೂ ಪ್ರಸರಣೆಯನ್ನು ಅನುಲಕ್ಷಿಸಿ ಇನ್ನೂ ಕಡಿಮೆಯಾಗಬಹುದು). ಅಲ್ಲದೆ ರೇಡಿಯೋ, ದೂರದರ್ಶನದಂತಹ ಪ್ರಸಾರ ಸಂಸ್ಥೆಗಳೂ ಪ್ರತೀಬಾರಿ ಒಂದು ಧ್ವನಿಮುದ್ರಣವನ್ನು ಪ್ರಸಾರ ಮಾಡುವಾಗಲೂ ಸಂಬಂಧಪಟ್ಟ ಕಲಾವಿದರನ್ನು ಉಲ್ಲೇಖಿಸಬೇಕು ಮತ್ತು ಮುಂಚಿತವಾಗಿಯೇ ಸಂಭಾವನೆ ನೀಡಬೇಕು. ಎಷ್ಟು ಸಂಭಾವನೆ ನೀಡಬೇಕು ಎಂಬುದನ್ನು ಕೃತಿಸ್ವಾಮ್ಯ ಮಂಡಳಿ ನಿರ್ಧರಿಸುತ್ತದೆ.

ಪ್ರಸ್ತುತ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುತ್ತಾ ಕೇಂದ್ರ ಮಾನವ ಸಂಪನ್ಮೂಲ ಸಚಿವ ಕಪಿಲ್ ಸಿಬಲ್ ಅವರು ದಿ|
ಬಿಸ್ಮಿಲ್ಲಾ ಖಾನ್‌ರಂತಹ ವಿಶ್ವಪ್ರಸಿದ್ಧ ಕಲಾವಿದರು ತಮ್ಮ ಇಳಿವಯಸ್ಸಿನಲ್ಲಿ ಮನೆ ಬಾಡಿಗೆ, ಆಸ್ಪತ್ರೆ ಖರ್ಚುಗಳನ್ನೂ ಭರಿಸಲಾಗದ ದುಸ್ಥಿತಿಯಲ್ಲಿದ್ದುದನ್ನು ನೆನಪಿಸಿಕೊಂಡಿದ್ದರು ಮತ್ತು ಇದಕ್ಕೆ ಕೃತಿಸ್ವಾಮ್ಯ ಕಾಯ್ದೆಯಲ್ಲಿದ್ದ ಲೋಪದೋಷಗಳೇ ಕಾರಣ ಎಂದು ಅಭಿಪ್ರಾಯಪಟ್ಟಿದ್ದರು. ವಿರೋಧ ಪಕ್ಷದ ನಾಯಕಿ ಸುಷ್ಮಾ ಸ್ವರಾಜ್ ಕೂಡ ಪಂ|
ರವಿಶಂಕರ್, ಎ. ಆರ್. ರೆಹಮಾನ್ ಮುಂತಾದ ಪ್ರಸಿದ್ಧ ಕಲಾವಿದರೂ ಕೃತಿಸ್ವಾಮ್ಯ ಕಾಯ್ದೆಯಲ್ಲಿ ಸೂಕ್ತ ತಿದ್ದುಪಡಿ ತರಲು ಒತ್ತಾಯಿಸಿದ್ದನ್ನು ನೆನಪಿಸಿ ಪ್ರಸಕ್ತ ಮಸೂದೆ ಕಾಯ್ದೆರೂಪ ಪಡೆದುಕೊಳ್ಳಲು ಪೂರ್ಣ ಬೆಂಬಲ ಸೂಚಿಸಿದ್ದರು. ಎಲ್ಲ ಪಕ್ಷಗಳ ಅವಿರೋಧ ಒತ್ತಾಸೆ ಪಡೆದ ಹೆಮ್ಮೆ ಈ ಶಾಸನದ್ದು.

ಹೊಸ ಕಾಯ್ದೆಯ ಇನ್ನೊಂದು ಮುಖ್ಯ ವಿಚಾರವೆಂದರೆ, ಒಂದು ಚಲನಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕರಿಬ್ಬರನ್ನೂ ಪ್ರಥಮ ಕೃತಿಕಾರರನ್ನಾಗಿ ಇದು ಪರಿಗಣಿಸುತ್ತದೆ. ಇಲ್ಲಿ, ನಿರ್ಮಾಪಕನ ಕೃತಿಸ್ವಾಮ್ಯದ ಅವಧಿ ಸಿನಿಮಾವೊಂದರ ತಯಾರಿಯ ನಂತರದ 60 ವರ್ಷವಾದರೆ, ಪ್ರಧಾನ ನಿರ್ದೇಶಕನ ಕೃತಿಸ್ವಾಮ್ಯದ ಅವಧಿ 70 ವರ್ಷ. ನಿರ್ಮಾಪಕನು ನಿರ್ದೇಶಕನೊಂದಿಗೆ ಒಂದು ಒಪ್ಪಂದವನ್ನು ಮಾಡಿಕೊಂಡು ತನ್ನ ಕೃತಿಸ್ವಾಮ್ಯದ ಅವಧಿಯನ್ನೂ ಹತ್ತು ವರ್ಷ ವಿಸ್ತರಿಸಲು ಕಾನೂನು ಅವಕಾಶ ನೀಡಿದೆ.

ಹಿಂದಿನ ಕೃತಿಸ್ವಾಮ್ಯ ಕಾಯ್ದೆಯ ಪ್ರಕಾರ ಸಾಹಿತ್ಯ, ನಾಟಕ, ಕಲೆ, ಸಂಗೀತ ಮತ್ತಿತರ ಕೃತಿಗಳ ಮೇಲಿನ ಹಕ್ಕಿನ ಅವಧಿ ಕೃತಿಕಾರನ ಮರಣದ ಬಳಿಕ 60 ವರ್ಷವೂ, ಛಾಯಾಚಿತ್ರ, ಸಿನಿಮಾ ಹಾಗೂ ಧ್ವನಿಮುದ್ರಣದ ಮೇಲಿನ ಹಕ್ಕಿನ ಅವಧಿ ಆ ಕೃತಿಗಳ ಪ್ರಕಟಣೆಯ/ಬಿಡುಗಡೆಯ ಬಳಿಕ 60 ವರ್ಷವೂ ಆಗಿತ್ತು. ಹೊಸ ತಿದ್ದುಪಡಿಯ ಪ್ರಕಾರ, ಛಾಯಾಚಿತ್ರವನ್ನು ಮೊದಲನೆ ವರ್ಗಕ್ಕೆ ಸೇರಿಸಲಾಗಿದೆ. ಅಂದರೆ ಛಾಯಾಚಿತ್ರಕಾರನ ಮರಣದ 60 ವರ್ಷ ನಂತರವೂ ಆತನ ಉತ್ತರಾಧಿಕಾರಿಗೆ ಛಾಯಾಚಿತ್ರದ ಮೇಲೆ ಸ್ವಾಮ್ಯ ಇರುತ್ತದೆ. ಆದರೆ ಯಾವುದೇ ಬಗೆಯ ಕೃತಿಯ ಸ್ವಾಮ್ಯವನ್ನು ಒಬ್ಬ ಕಲಾವಿದ ಅಥವಾ ಸಾಹಿತಿ ತನ್ನ ಕಾನೂನಾತ್ಮಕ ಉತ್ತರಾಧಿಕಾರಿಗೋ ಇಲ್ಲವೇ ಕೃತಿಸ್ವಾಮ್ಯ ಸಂಘಕ್ಕೋ ಮಾತ್ರ ನೀಡಬಹುದಾಗಿದೆ. ಬೇರೆ ಯಾರಿಗೆ ನೀಡಿದರೂ ಅದು ಅಸಿಂಧುವಾಗುತ್ತದೆ.

ಕೃತಿಸ್ವಾಮ್ಯ (ತಿದ್ದುಪಡಿ) ಮಸೂದೆ 2012 ಅಂಗವಿಕಲರಿಗೆ ಸಂಬಂಧಪಟ್ಟಂತೆ ಎರಡು ಪ್ರಮುಖ ಅನುಕೂಲಗಳನ್ನು ಮಾಡಿಕೊಟ್ಟಿದೆ. ಒಂದು, ಯಾವುದೇ ಕೃತಿಯನ್ನು ಬ್ರೈಲ್‌ನಂತಹ ವಿಶೇಷ ಮಾದರಿಗಳಲ್ಲಿ ಪ್ರಕಟಿಸುವುದಾದರೆ ಅದಕ್ಕೆ ಕೃತಿಸ್ವಾಮ್ಯದಿಂದ ವಿನಾಯಿತಿ ಇದೆ. ಎರಡು, ಅಂಗವಿಕಲರ ಅಭ್ಯುದಯಕ್ಕಾಗಿ ಸ್ಥಾಪನೆಯಾದ ಸಂಸ್ಥೆಗಳು ಯಾವುದೇ ಕೃತಿಯನ್ನು ಸಾಮಾನ್ಯ ಮಾದರಿಗಳಲ್ಲೂ ಮರುಪ್ರಕಟಿಸಬಹುದಾಗಿದೆ. ಆದರೆ ಇಂತಹ ಸಂಸ್ಥೆಗಳು ಕಡ್ಡಾಯವಾಗಿ ಅಂಗವಿಕಲ ವ್ಯಕ್ತಿಗಳ ಕಾಯ್ದೆ 1995ರ ಅಡಿಯಲ್ಲಿ ಮಾನ್ಯತೆಯನ್ನೂ, ಆದಾಯ ತೆರಿಗೆ ಕಾಯ್ದೆ 1961ರ ಪ್ರಕಾರ ತೆರಿಗೆ ವಿನಾಯಿತಿಯನ್ನೂ ಪಡೆದವಾಗಿರಬೇಕು.

ಕೃತಿಸ್ವಾಮ್ಯ ಕಾಯ್ದೆಯಲ್ಲಿ ಹೆಚ್ಚು ಸ್ಪಷ್ಟತೆಯನ್ನು ತರುವುದು, ಅನುಷ್ಠಾನದಲ್ಲಿನ ಕೆಲವು ತೊಡಕುಗಳನ್ನು ಹೋಗಲಾಡಿಸುವುದು ಮತ್ತು ಇಂಟರ್ನೆಟ್-ಡಿಜಿಟಲ್ ಯುಗದ ಸಂದರ್ಭದ ಕೆಲವು ಹೊಸ ಸವಾಲುಗಳನ್ನು ಎದುರಿಸುವುದು ತಿದ್ದುಪಡಿಯ ಉದ್ದೇಶ ಎಂದು ಹೇಳಲಾಗಿತ್ತಾದರೂ, ಅದರಲ್ಲಿನ ಕೆಲವು ಸಂಶಯಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಉದಾಹರಣೆಗೆ, ಕೃತಿಸ್ವಾಮ್ಯ ಅವಧಿಯನ್ನು ನಿರ್ಮಾಪಕರಿಗೆ 60 ವರ್ಷ ಎಂದೂ, ಪ್ರಧಾನ ನಿರ್ದೇಶಕರಿಗೆ 70 ವರ್ಷ ಎಂದೂ ನಿಗದಿಪಡಿಸಲಾಗಿದೆ. ಈ ವ್ಯತ್ಯಾಸದ ಹಿಂದಿನ ತಾರ್ಕಿಕತೆಗೆ ಯಾವುದೇ ಸಮರ್ಥನೆ ಇಲ್ಲ. ಅಲ್ಲದೆ 'ಪ್ರಧಾನ ನಿರ್ದೇಶಕ’ ಎಂಬ ಪದಕ್ಕೆ ಎಲ್ಲೂ ವ್ಯಾಖ್ಯಾನ ಇಲ್ಲ. ಎಲ್ಲ ಕಾನೂನುಗಳ ಬಗ್ಗೆ ಬರಬಹುದಾದ ಕೆಲವು ಆಕ್ಷೇಪಗಳು ಇದರ ಬಗೆಗೂ ಇವೆ, ಅದರಲ್ಲಿ ಅತಿಶಯವೇನೂ ಇಲ್ಲ. ಆದರೆ ಕಲಾವಿದರಿಗೆ ಸ್ವತಂತ್ರ ಹಕ್ಕುಸ್ವಾಮ್ಯವನ್ನು ಕಲ್ಪಿಸುವುದರ ಮೂಲಕ ಕಾಯ್ದೆ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಎತ್ತಿಹಿಡಿದಿದೆ. ಈ ಕಾರಣಕ್ಕಾಗಿಯಾದರೂ ಅದಕ್ಕೆ ವಿಶೇಷ ಪ್ರಶಂಸೆ ಸಲ್ಲಬೇಕು.

ಶುಕ್ರವಾರ, ಮೇ 18, 2012

ಧನಮೇವ ಜಯತೇ! ಇದೇ ನಮ್ಮ ಸದ್ಯದ ರಿಯಾಲಿಟಿ

ಮಾಧ್ಯಮಶೋಧ-18, ಹೊಸದಿಗಂತ, 17 ಮೇ 2012

ಸಮಾಜದ ಕಠೋರ ವಾಸ್ತವಗಳನ್ನೇ ಕೈಗೆತ್ತಿಕೊಂಡು ಆರಂಭಿಸಲಾಗಿರುವ 'ಸತ್ಯಮೇವ ಜಯತೇ’ ರಿಯಾಲಿಟಿ ಶೋಗಳ ಹೊಸ ಸಾಧ್ಯತೆಗಳನ್ನು ತೆರೆದಿಟ್ಟಿದೆ. ತಮಗೆ ಹಿಡಿದಿರುವ 'ಝಣಝಣ ಕಾಂಚಾಣ'ದ ಹುಚ್ಚನ್ನು ಜನಸಾಮಾನ್ಯರಿಗೂ ದಾಟಿಸಿ ಮಜಾ ತೆಗೆದುಕೊಳ್ಳುತ್ತಿರುವ ನಮ್ಮ ಚಾನೆಲ್‌ಗಳಿಗೆ 'ಸತ್ಯಮೇವ ಜಯತೇ’ ನಿಜಕ್ಕೂ ಒಂದು ಒಳ್ಳೆಯ ಪಾಠವನ್ನೇ ಹೇಳಿಕೊಟ್ಟಿದೆ. ಬರೀ ಎರಡು ಕಂತುಗಳ ಪ್ರಸಾರದ ಬಳಿಕ ಸತ್ಯಮೇವ ಜಯತೇಯ ವೆಬ್‌ಸೈಟ್ ಪಡೆದ ಪ್ರತಿಕ್ರಿಯೆಗಳ ಸಂಖ್ಯೆ ಹತ್ತುಸಾವಿರಕ್ಕೂ ಹೆಚ್ಚು.

ಪ್ಯಾಟೆ ಮಂದಿಯನ್ನು ಕಾಡಿಗೆ ಕಳಿಸಿ ತಮಾಷೆ ನೋಡುವ, ಕಾಡಿನ ಮಂದಿಯನ್ನು ಪ್ಯಾಟೆಗೆ ಕರೆಸಿ ಗೇಲಿಮಾಡುವ, ನಿಂತಲ್ಲೇ ಸ್ವಯಂವರ ಏರ್ಪಡಿಸುವ, ಗಂಡಹೆಂಡಿರ ಜಗಳಗಳನ್ನು ಊರಿಗೆಲ್ಲ ಬಿತ್ತರಿಸುವ, ಸೀರೆಯ ಬೆಲೆ ನಿರ್ಧರಿಸಿಯೋ, ಅತಿಹೆಚ್ಚು ಈರುಳ್ಳಿ ಹೆಚ್ಚಿಯೋ ದುಡ್ಡು ಕೊಳ್ಳೆಹೊಡೆಯುವ ನಾಟಕಗಳೇ ರಿಯಾಲಿಟಿ ಶೋಗಳೆಂದು ನಂಬಿರುವ ಅಥವಾ ನಂಬಿಸಿರುವ ಚಾನೆಲ್‌ಗಳು ಅಮೀರ್ ಖಾನ್ ಎತ್ತಿಕೊಂಡಿರುವ ವಿಷಯಗಳನ್ನಾದರೂ ನೋಡಿ ತಮ್ಮೆದುರಿನ ಸಾಧ್ಯತೆಗಳನ್ನು ಅರ್ಥಮಾಡಿಕೊಳ್ಳಬೇಕು.

'ಸತ್ಯಮೇವ ಜಯತೇ’ಯನ್ನು ಕನ್ನಡಕ್ಕೆ ಡಬ್ ಮಾಡಬೇಕೇ ಬೇಡವೇ ಎಂಬ ಬಗ್ಗೆ ಎಲ್ಲ ಮಾಧ್ಯಮಗಳಲ್ಲೂ ವಿಸ್ತೃತ ಚರ್ಚೆ-ವಾದ-ವಿವಾದಗಳು ನಡೆಯುತ್ತಲೇ ಇವೆ. ಅದು ಗಂಭೀರ ಚಿಂತನೆಗೊಳಪಡಬೇಕಾದ ಮಹತ್ವದ ವಿಚಾರವೇ ಎಂಬುದರಲ್ಲಿ ಎರಡು ಮಾತಿಲ್ಲ; ಆದರೆ ಅದೇ ಹೊತ್ತಿನಲ್ಲಿ 'ಸತ್ಯಮೇವ ಜಯತೇ’ಯಂತಹ ಮಾದರಿಗಳನ್ನು ಪ್ರಾದೇಶಿಕವಾಗಿಯೂ ಅಳವಡಿಸಿಕೊಳ್ಳುವ ಬಗ್ಗೆ ನಮ್ಮ ಮಾಧ್ಯಮಗಳೇನಾದರೂ ಯೋಚಿಸಿದ್ದಾವೆಯೇ?

ತಮ್ಮ ಕಾರ್ಯಕ್ರಮದ ಮೊದಲನೇ ಕಂತಿನಲ್ಲೇ ಹೆಣ್ಣು ಭ್ರೂಣ ಹತ್ಯೆಯ ಕರುಣಾಜನಕ ಕಥೆಗಳನ್ನು ಅನಾವರಣಗೊಳಿಸುವ ಮೂಲಕ ಅಮೀರ್ ಖಾನ್ ಅದಾಗಲೇ ಕಾರ್ಯಕ್ರಮದ ಬಗ್ಗೆ ಮೂಡಿದ್ದ ಅಪಾರ ನಿರೀಕ್ಷೆಗೆ ಸಮರ್ಥವಾಗಿಯೇ ಜೀವ ತುಂಬಿದರು. ಕಳೆದ ಭಾನುವಾರದಂದು ಪ್ರಸಾರವಾದ ಸರಣಿಯ ಎರಡನೇ ಕಂತಿನಲ್ಲಿ ಮಕ್ಕಳ ಲೈಂಗಿಕ ಶೋಷಣೆಯೆಂಬ ಇನ್ನೊಂದು ಕತ್ತಲ ಪ್ರಪಂಚದ ಮೇಲೆ ಕಾಳಜಿಯ ಬೆಳಕು ಚೆಲ್ಲಿದರು.

ಅಮೀರ್ ಖಾನ್ ಬರೀ ಕಥೆಗಳಿಗಷ್ಟೇ ಜೋತುಬಿದ್ದಿದ್ದರೆ 'ಸತ್ಯಮೇವ ಜಯತೇ’ ಈಗಾಗಲೇ ಚಾಲ್ತಿಯಲ್ಲಿರುವ ಅನೇಕ ಬಗೆಯ ಕಣ್ಣೀರು ಮಾರುವ ದಂಧೆಗಳಿಗೆ ಇನ್ನೊಂದು ಸೇರ್ಪಡೆಯಾಗುತ್ತಿತ್ತು ಅಷ್ಟೇ. ಆದರೆ ಅವರು ಅಷ್ಟಕ್ಕೇ ಕಾರ್ಯಕ್ರಮವನ್ನು ಸೀಮಿತಗೊಳಿಸದೆ ಸಮಸ್ಯೆಯ ಆಳಕ್ಕಿಳಿಯುವ ಪ್ರಯತ್ನ ಮಾಡಿದರು. ತಮ್ಮ ಹೇಳಿಕೆಗಳಿಗೆ ಸಮೀಕ್ಷೆ-ಸಂಶೋಧನೆಗಳ ಆಧಾರ ಕೊಟ್ಟರು, ಅದನ್ನು ಸರಳಾತಿಸರಳವಾಗಿ ಜನಸಾಮಾನ್ಯರಿಗೂ ಅರ್ಥವಾಗುವಂತೆ ವಿವರಿಸಿದರು. ಡಾಕ್ಟರು, ಮನೋವೈದ್ಯರು, ಕಾನೂನುತಜ್ಞರು, ಚಳುವಳಿಗಾರರ ನೇರ ಸಂದರ್ಶನ ಮಾಡಿ ಸಮಸ್ಯೆಯ ಎಳೆಎಳೆಯನ್ನೂ ಬಿಚ್ಚಿಟ್ಟರು. ಜನರಲ್ಲಿ ತಿಳುವಳಿಕೆ ಮೂಡಿಸುವ ಬಗ್ಗೆ, ಹೊಸ ಕಾನೂನುಗಳ ರಚನೆ ಹಾಗೂ ಅನುಷ್ಠಾನದ ಬಗ್ಗೆ ದೃಢವಾಗಿ ಮಾತಾಡಿದರು.

ಲೈಂಗಿಕ ಶೋಷಣೆಯಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಮಕ್ಕಳು ಹೊಂದಿರಬೇಕಾದ ಪ್ರಾಥಮಿಕ ಜ್ಞಾನ ಏನೆಂಬುದರ ಬಗ್ಗೆ ಅಮೀರ್ ಖಾನ್ ಮಾಡಿದ 'ಮೂರು ನಿಮಿಷದ ವರ್ಕ್‌ಶಾಪ್’ ಇಡೀ ದಿನ ಮಾಡುವ 'ರಾಷ್ಟ್ರೀಯ ವಿಚಾರಸಂಕಿರಣ’ಗಳಿಂತ ಎಷ್ಟೋ ಮೇಲ್ಮಟ್ಟದ್ದಾಗಿತ್ತು. ಅಲ್ಲೆಲ್ಲೂ ಅತಿರಂಜಕತೆ, ಕೃತಕತೆ, ನಟನೆ ಇರಲಿಲ್ಲ.

ರಿಯಾಲಿಟಿ ಶೋ, ಗೇಮ್ ಶೋಗಳನ್ನು ನಡೆಸುವಲ್ಲಿ ಸ್ಪರ್ಧೆಗೆ ಬಿದ್ದಿರುವ ನಮ್ಮ ವಾಹಿನಿಗಳು ಮಾಡುತ್ತಿರುವುದಾದರೂ ಏನನ್ನು? ಯಾವ ರೀತಿಯಲ್ಲಿ ನೋಡಿದರೂ ಇವೆಲ್ಲ ಬಗೆಬಗೆಯ 'ಬಂಗಾರದ ಬೇಟೆ’ಗಳೇ ಆಗಿವೆ. ರಿಯಾಲಿಟಿ ಶೋಗಳು ಜನರ ಭಾವನೆಗಳಿಗೆ ತಿದಿಯೊತ್ತುವ ಮೂಲಕ ಟಿಆರ್‌ಪಿ ಕೊಯ್ಲು ಮಾಡುತ್ತಲೇ ತಮ್ಮ ತಿಜೋರಿ ತುಂಬಿಸಿಕೊಂಡರೆ, ಗೇಮ್ ಶೋಗಳು ಹಣದ ಕಂತೆಗಳನ್ನೇ ಪರದೆಯೆದುರು ಚೆಲ್ಲುತ್ತಾ ಸುಲಭದಲ್ಲಿ ದುಡ್ಡು ಸಂಪಾದಿಸುವ ಬಗ್ಗೆ ಜನರಲ್ಲಿ ಹುಚ್ಚುಕಲ್ಪನೆಗಳನ್ನು ಬಿತ್ತುತ್ತವೆ.

ನೂರೋ ಇನ್ನೂರೋ ರೂಪಾಯಿ ಪಣ ಇಟ್ಟು ಆಟ ಆಡುವ ಅಡ್ಡೆಗಳಿಗೆ ನಮ್ಮ ಪೊಲೀಸರು ದಾಳಿ ಮಾಡಿ ಅದರಲ್ಲಿ ಪಾಲ್ಗೊಂಡವರನ್ನು ಬಂಧಿಸುವುದಿದೆ. ಏಕೆಂದರೆ ಕಾನೂನಿನ ಪ್ರಕಾರ ಜೂಜು ಅಪರಾಧ. ಸರಿ; ಹಾಗಾದರೆ ಸಾವಿರ-ಲಕ್ಷ-ಕೋಟಿ ಲೆಕ್ಕದಲ್ಲಿ ಗರಿಗರಿ ನೋಟುಗಳ ಕಂತೆಗಳನ್ನೇ ಕ್ಯಾಮರಾ ಎದುರು ಪೇರಿಸಿಟ್ಟುಕೊಂಡು ಜನಸಾಮಾನ್ಯರು ಭ್ರಮಾಲೋಕದಲ್ಲಿ ಬೀಳುವಂತೆ ಮಾಡುವ ನಮ್ಮ ವಾಹಿನಿಗಳ 'ಸಕತ್ ಕಿಕ್ ಕೊಡೋ ಗೇಮ್ ಶೋ'ಗಳು, 'ಬೊಂಬಾಟ್ ಬದುಕಿನ ಬಿಂದಾಸ್ ಆಟ'ಗಳು, 'ಡೀಲ್ ಆರ್ ನೋ ಡೀಲ್' ಹುಚ್ಚಾಟಗಳು ಯಾವ ಜೂಜಿಗಿಂತ ಕಡಿಮೆ? ಅದರ ಹಿಂದಿನ 'ಬಿಗ್‌ಬಾಸ್‌'ಗಳನ್ನು ಬಂಧಿಸುವ ಪೊಲೀಸರು ಎಲ್ಲಿದ್ದಾರೆ? ಅಂಥವರನ್ನು ಶಿಕ್ಷಿಸಿ ಜೈಲಿಗೆ ನೂಕಿ 'ಇದು ಕಥೆಯಲ್ಲ ಜೀವನ' ಎಂದು ಅರ್ಥಮಾಡಿಸುವ ಕಾನೂನುಗಳು ಎಲ್ಲಿವೆ?

'ನಮ್ಮ ಟಿವಿ ಚಾನೆಲ್‌ಗಳು ಸಾದರಪಡಿಸುತ್ತಿರುವ ಬಹುತೇಕ ಗೇಮ್‌ಶೋಗಳು ನಿಸ್ಸಂಶಯವಾಗಿ ಜೂಜಿನ ಅಡ್ಡೆಗಳೇ ಆಗಿವೆ. ಹಣವೆಂದರೆ ಇವರಿಗೆ ಕಾಲಕಸ’ ಎಂದು ಜನರಾಡಿಕೊಳ್ಳುವ ಮಟ್ಟಿಗೆ ಈ ಗೇಮ್‌ಶೋಗಳು ಕೊಳೆತ ಹಣದ ಕೊಚ್ಚೆಗಳಾಗಿ ಮಾರ್ಪಟ್ಟಿವೆ. ಅಲ್ಲಿ ಕಾಣುವುದು ಅವರು ಹೇಳುವ 'ಎಂಟರ್‌ಟೈನ್‌ಮೆಂಟ್’ ಆಗಲೀ, 'ಕ್ರಿಯೇಟಿವಿಟಿ’ಯಾಗಲೀ ಅಲ್ಲ; ಬದಲಾಗಿ ದುಡ್ಡಿನ ಠೇಂಕಾರ, ಸಿರಿವಂತಿಕೆಯ ಅಹಂಕಾರ.

ಈ ಗೇಮ್ ಶೋಗಳಲ್ಲಿ ಭಾಗವಹಿಸುವ ಮಂದಿ ಕೆಲವು ಸರಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ಸಣ್ಣಪುಟ್ಟ ಆಟಗಳನ್ನು ಆಡುವ ಮೂಲಕ, ಹೆಚ್ಚೆಂದರೆ ಕುಣಿದು ಕುಪ್ಪಳಿಸುವ ಮೂಲಕ ಅರ್ಧಗಂಟೆಯಲ್ಲಿ ಲಕ್ಷಾಂತರ ರೂಪಾಯಿ ಸಂಪಾದಿಸಬಹುದು; ಕಳೆದುಕೊಳ್ಳುವ ನಾಟಕಗಳನ್ನೂ ಆಡಬಹುದು. ಜೂಜೆಂದಮೇಲೆ ಅಷ್ಟಾದರೂ ಇರದಿದ್ದರೆ ಹೇಗೆ?

ಅಂದಹಾಗೆ ಈ ಗೇಮ್ ಶೋಗಳಿಂದ ಯಾರೋ ಒಂದಷ್ಟು ಬಡಪಾಯಿಗಳಿಗಾದರೂ ಅನುಕೂಲವಾಗುತ್ತದೆಯೇ ಎಂದು ನೋಡಿದರೆ, ಇಂಥವುಗಳಿಗೆ ಜನಸಾಮಾನ್ಯರಿಗೆ ಪ್ರವೇಶವಿಲ್ಲ. ಈ ಕಾರ್ಯಕ್ರಮಗಳನ್ನು ನಡೆಸಿಕೊಡುವುದಕ್ಕೆ, ಅವುಗಳಲ್ಲಿ ಸ್ಪರ್ಧಾರ್ಥಿಗಳಾಗಿ ಭಾಗವಹಿಸುವುದಕ್ಕೆ ಟಿವಿಯವರಿಗೆ ಸಿನಿಮಾ-ಕಿರುತೆರೆ ತಾರೆಗಳಂತಹ ಸೆಲೆಬ್ರಿಟಿಗಳೇ ಬೇಕು. ಎಳಸೆಳಸು ಪ್ರಶ್ನೆಗಳಿಗೆ ಉತ್ತರಿಸುತ್ತಾ ಚೆಲ್ಲುಚೆಲ್ಲಾಗಿ ವರ್ತಿಸುತ್ತಾ ಸಾವಿರ ಲಕ್ಷ ಎಣಿಸುವವರೂ ಇದೇ ಸೆಲೆಬ್ರಿಟಿಗಳೇ. ಸೆಲೆಬ್ರಿಟಿಗಳನ್ನಲ್ಲದೆ ಈ ಬಡಪಾಯಿಗಳನ್ನು ಅಲ್ಲಿ ಕೋತಿಗಳಂತೆ ಕುಣಿಸುವುದಕ್ಕಾಗುತ್ತದೆಯೇ? ಅರ್ಧ ಗಂಟೆ ಗೇಮ್ ಶೋ ಮುಗಿವ ಹೊತ್ತಿಗೆ ಇವರೆಲ್ಲ ಹಣದ ಕಂತೆಗಳನ್ನು ತರಕಾರಿ ಚೀಲದಂತೆ ಹೊತ್ತುಕೊಂಡು ಹೊರನಡೆಯುತ್ತಾರೆ. ಟಿವಿ ಎದುರು ಕೂತ ಬಡ-ಮಧ್ಯಮವರ್ಗಗಳ ಸಾವಿರಾರು ಮಂದಿ ಪರದೆಯೊಳಗಿನ ಗಂಟಿನ ಬಗ್ಗೆ ಹಗಲುಗನಸು ಕಾಣುತ್ತಾ ಇನ್ನೊಂದು ಗೇಮ್‌ಶೋಗೆ ತಯಾರಾಗುತ್ತಾರೆ. ಯಾರದೋ ದುಡ್ಡು, ಟಿವಿಯವರ ಟಿಆರ್‌ಪಿ!

ಹಾಗೆ ನೋಡಿದರೆ ಈಚೆಗೆ ಕೌನ್ ಬನೇಗಾ ಕರೋಡ್‌ಪತಿ ಮಾದರಿಯಲ್ಲಿ ಕನ್ನಡದ ಎರಡು ವಾಹಿನಿಗಳಲ್ಲಿ ಬರುತ್ತಿರುವ ಗೇಮ್‌ಶೋಗಳೇ ಹೆಚ್ಚು ವಾಸಿ. ಅದೃಷ್ಟವಶಾತ್ ಅವರಿನ್ನೂ ತಮ್ಮ ಸ್ಪರ್ಧೆಗಳಲ್ಲಿ ಭಾಗವಹಿಸುವುದಕ್ಕೆ ಸೆಲೆಬ್ರಿಟಿಗಳೇ ಆಗಬೇಕು ಎಂದು ಘೋಷಣೆ ಹೊರಡಿಸಿಲ್ಲ. ಬದುಕಿನಲ್ಲಿ ಸೋಲುಗಳನ್ನುಂಡವರು, ಹಣದ ತೀರಾ ಅವಶ್ಯಕತೆ ಇರುವವರು, ಪ್ರತಿಭಾವಂತರು ಹಾಟ್‌ಸೀಟ್‌ನಲ್ಲಿ ಕುಳಿತು ಸಂತೃಪ್ತಿಯ ಗೆಲುವಿನ ನಗೆ ಬೀರುತ್ತಿದ್ದಾರೆ ಎಂಬುದೇ ಕೊಂಚ ಸಮಾಧಾನದ ವಿಷಯ. ಹಾಗಂತ, ಇವರೂ ಜನಪ್ರಿಯ ಸೂತ್ರಗಳ ಮಾದರಿಯಿಂದ ಈಚೆಗೆ ಬಂದಿಲ್ಲ. ಬಿಬಿಸಿಯ ಮಾಸ್ಟರ್‌ಮೈಂಡ್, ದೂರದರ್ಶನ-ಆಕಾಶವಾಣಿಗಳಲ್ಲಿ ಪ್ರಸಾರವಾಗುತ್ತಿದ್ದ ಶ್ರೇಷ್ಠಮಟ್ಟದ ಕ್ವಿಜ಼್ ಕಾರ್ಯಕ್ರಮಗಳ ಹಂತಕ್ಕೆ ಇವು ಬೆಳೆದಿಲ್ಲ, ಅಥವಾ ಆ ರೀತಿ ಬೆಳೆಸುವ ಇರಾದೆಯೂ ಚಾನೆಲ್‌ಗಳಿಗಿಲ್ಲ. ಅವರಿಗೂ ಬೇಕಾಗಿರುವುದು ಹೆಚ್ಚುಜನರ (ಜನಸಾಮಾನ್ಯರ) ವೀಕ್ಷಣೆ; ಸರಿಯಾಗಿ ಹೇಳುವುದಾದರೆ ಮತ್ತದೇ - ಟಿಆರ್‌ಪಿ.

ಹಾಗಾದರೆ 'ಸತ್ಯಮೇವ ಜಯತೇ' ಟಿಆರ್‌ಪಿ ಬಗ್ಗೆ ಯೋಚಿಸಿಲ್ಲವೇ? ಇಲ್ಲ ಎಂದಾದರೆ ಸ್ಟಾರ್‌ಪ್ಲಸ್ ಚಾನೆಲ್ ಬರೀ ಅದರ ಪ್ರಚಾರಕ್ಕೇ ರೂ. ೬.೨೫ ಕೋಟಿಯಷ್ಟು ದೊಡ್ಡ ಮೊತ್ತವನ್ನು ವಿನಿಯೋಗಿಸಿದ್ದೇಕೆ? ಮೂರು ಕೋಟಿ ರೂಪಾಯಿಯಷ್ಟು ಬೃಹತ್ ಮೊತ್ತದ ಸಂಭಾವನೆ ನೀಡುತ್ತೇವೆಂದು ಅಮೀರ್ ಖಾನನ್ನೇ ಕರೆತಂದದ್ದೇಕೆ? ಈ ಪ್ರಶ್ನೆಗಳು ಸಹಜ. ಆದರೆ, ವ್ಯವಹಾರಕ್ಕೂ ಒಂದು ಗೊತ್ತುಗುರಿ ನೀತಿನಿಯಮ ಇದೆ. ವಾಣಿಜ್ಯ ಉದ್ದೇಶದ ಯಾವ ಖಾಸಗಿ ವಾಹಿನಿಯೂ ಟಿಆರ್‌ಪಿಯನ್ನು ಮರೆತು ಕಾರ್ಯಕ್ರಮ ಮಾಡಲಾರದು. ಆದರೆ ವ್ಯಾವಹಾರಿಕ ಉದ್ದೇಶಗಳ ನಡುವೆಯೂ ಸಮೂಹ ಮಾಧ್ಯಮಗಳಾಗಿ ತಮಗೊಂದು ಸಾಮಾಜಿಕ ಬಾಧ್ಯತೆಯಿದೆಯೆಂಬುದನ್ನು ಚಾನೆಲ್‌ಗಳು ಮರೆಯಬಾರದು. ವ್ಯಾವಹಾರಿಕ ಉದ್ದೇಶಗಳೇನೇ ಇದ್ದರೂ 'ಸತ್ಯಮೇವ ಜಯತೇ’ ತನ್ನ ಜನಪರ ಕಾಳಜಿಯಿಂದ, ಹೊಸ ಸಾಧ್ಯತೆಗಳ ಅನ್ವೇಷಣೆಯಿಂದ, ಪರಿವರ್ತನಾಶೀಲತೆಯ ಬಯಕೆಯಿಂದ ವಿಶಿಷ್ಟವಾಗಿ ಎದ್ದುನಿಲ್ಲುತ್ತದೆ. ಅದಕ್ಕೇ ಅದು ನಮ್ಮೆಲ್ಲ 'ರಿಯಾಲಿಟಿ’ಗಳನ್ನು ಮೀರಿದ ಒಂದು 'ವಾಸ್ತವ’.


ಬುಧವಾರ, ಮೇ 16, 2012

ಸಂವೇದನಾಶೀಲ ಮನಸ್ಸೇ ನಗರಗಳ ಬರಕ್ಕೆ ಪರಿಹಾರ


ಥ್ಯಾಂಕ್ಸ್: ವಿಜಯವಾಣಿ, 16 ಮೇ 2012


ಪಕ್ಕದ ಬೀದಿಯ ಮನೆಯೊಂದರ ಟೆರೇಸ್ ಮೇಲಿನ ನೀರಿನ ಟ್ಯಾಂಕ್ ಭರ್ತಿಯಾಗಿ ಅರ್ಧ ಗಂಟೆಯೇ ಕಳೆದಿದೆ. ನೀರು ದಪದಪನೆ ಕೆಳಗಿಳಿದು ಚರಂಡಿಯಲ್ಲಿ ಸುಖಾಸುಮ್ಮನೆ ಹರಿದುಹೋಗುತ್ತಿದೆ. ಅರೆ, ಪಂಪ್ ಆಫ್ ಮಾಡದೆ ಮನೆಯವರು ಏನು ಮಾಡುತ್ತಿದ್ದಾರೆ? ಅವರು ಪ್ರವಾಸ ಹೋಗಿದ್ದಾರೆ. ಟ್ಯಾಂಕ್‌ನಲ್ಲಿ ನೀರಿಲ್ಲವೆಂದು ಅವರು ಹೊರಡೋ ಅರ್ಧ ಗಂಟೆ ಮುಂಚೆ ಪಂಪ್ ಆನ್ ಮಾಡಿದ್ದರು. ಈ ನಡುವೆ ಕರೆಂಟ್ ಹೋಗಿತ್ತು; ಅವರಿಗೆ ಸ್ವಿಚ್ ಆಫ್ ಮಾಡಲು ಮರೆತುಹೋಗಿದೆ. ಅವರು ಹೊರಟು ಎಷ್ಟೋ ಹೊತ್ತಿನ ನಂತರ ಕರೆಂಟ್ ಬಂದಿದೆ. ಪಂಪ್ ಆನ್ ಆಗಿದೆ...

ಅರೆ ಈಗೇನು ಮಾಡೋಣ? ಪೇಟೆ ಬೇರೆ; ಅಕ್ಕಪಕ್ಕದ ಮನೆಗಳವರಿಗೆ ಈ ಮನೆಯವರ ಮೊಬೈಲ್ ಸಂಖ್ಯೆಯೂ ಗೊತ್ತಿಲ್ಲ. ಅದೃಷ್ಟವಶಾತ್, ಯಾರೋ ಒಬ್ಬರಲ್ಲಿ ಆ ಮನೆಯ ಮಾಲೀಕನ ಫೋನ್ ನಂಬರಿತ್ತು. ಅವರು ಮಾಲೀಕನಿಗೆ ಕರೆ ಮಾಡುತ್ತಾರೆ; ಮಾಲೀಕ ಬಾಡಿಗೆದಾರನಿಗೆ ಕರೆ ಮಾಡುತ್ತಾರೆ. ಬಾಡಿಗೆದಾರ ಮನೆ ಉಸ್ತುವಾರಿಗಾಗಿ ಕೆಲಸದವಳೊಬ್ಬಳನ್ನು ಗೊತ್ತುಮಾಡಿ ಅವಳಿಗೊಂದು ಕೀ ಕೊಟ್ಟಿದ್ದು ನೆನಪಾಗಿ ಅವಳಿಗೆ ಫೋನಾಯಿಸುತ್ತಾನೆ. ಮನೆಗೆಲಸದಾಕೆ ಗಡಬಡಿಸಿ ತನ್ನ ಮನೆಯಿಂದ ಓಡಿಬಂದು ಬೀಗ ತೆರೆದು ಮೋಟಾರು ಬಂದ್ ಮಾಡುವಷ್ಟರಲ್ಲಿ ಟ್ಯಾಂಕ್ ತುಂಬಿಹರಿಯಲು ಶುರುವಾಗಿ ಒಂದೂವರೆ ಗಂಟೆಯಾಗಿದೆ...

ರಾಜ್ಯದ ಬರಪೀಡಿತ ಪ್ರದೇಶಗಳಲ್ಲೊಂದು ಎಂದು ಗುರುತಿಸಲ್ಪಟ್ಟ ತುಮಕೂರಿನ ಬಡಾವಣೆಯೊಂದರಲ್ಲಿ ನಡೆದ ಘಟನೆ ಇದು. ಬಹುಶಃ ಇಂಥ ಉದಾಹರಣೆಗಳನ್ನು ಬರೀ ತುಮಕೂರಿಗೇ ಸೀಮಿತಗೊಳಿಸಬೇಕಾಗಿಲ್ಲ. ಬಹುತೇಕ ನಗರ ಪ್ರದೇಶಗಳ ಮಂದಿ ನೀರಿನ ಬಗ್ಗೆ ಹೊಂದಿರುವ ದಿವ್ಯನಿರ್ಲಕ್ಷ್ಯ ಇದು. ಕೈತುಂಬ ಹಣವಿದ್ದರೆ ಏನನ್ನೂ ಕೊಂಡುಕೊಳ್ಳಬಹುದು, ಯಾವ ಕಷ್ಟವನ್ನೂ ಎದುರಿಸಬಹುದು ಎಂಬ ದುರಹಂಕಾರದಿಂದಲೇ ಇವರ ಸಂವೇದನೆಗೂ ಬರ ಬಡಿದಿದೆ. ಬರಗಾಲ ಹಾಗಿರಲಿ, ಊರಿಗೆ ಊರೇ ಹೊತ್ತಿಕೊಂಡು ಉರಿಯುತ್ತಿದ್ದರೂ ಅದಕ್ಕೂ ತಮಗೂ ಏನೇನೂ ಸಂಬಂಧವಿಲ್ಲ ಎಂದು ಮುಸುಕೆಳೆದುಕೊಂಡು ಮಲಗುವ ಜನರೇ ಸಮಾಜದಲ್ಲಿ ತುಂಬಿ ಹೋಗುತ್ತಿದ್ದಾರೆ.

ರಾಜ್ಯ ಹಿಂದೆದೂ ಕಾಣದ ಬರದ ಬೇಗೆ ಅನುಭವಿಸಿತು. ಈಚೆಗೆ ಒಂದೆರಡು ಒಳ್ಳೆಯ ಮಳೆಯಾಗಿದ್ದರೂ ಅದು ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತಷ್ಟೇ ಆಗಿದೆ. ಮುನಿಸಿಪಾಲಿಟಿಯ ನಲ್ಲಿ ನೀರಿನ ಕೃಪೆಯಲ್ಲೇ ಜೀವದ ದಾಹ ಇಂಗಿಸಿಕೊಳ್ಳಬೇಕಾದ ನಗರ ಪ್ರದೇಶಗಳ ಮಂದಿಯಲ್ಲಂತೂ ಈ ವರ್ಷದ ಕಥೆ ಹೇಗೋ ಮುಗಿಯುತ್ತಿದೆ, ಮುಂದಿನ ವರ್ಷ ಇನ್ನೂ ಭೀಕರವಾಗಿರದೇ ಎಂಬ ಭಯ ಅಡರಿಕೊಂಡಿದೆ. ಆದರೂ ನೀರಿನ ಅಮೂಲ್ಯತೆ ಬಗ್ಗೆ, ಅದರ ಕೊರತೆಯಲ್ಲಿ ತಲೆದೋರಬಹುದಾದ ಭವಿಷ್ಯದ ಕರಾಳತೆ ಬಗ್ಗೆ ಅವರಿನ್ನೂ ಏಕೆ ಸಂವೇದನಾಶೀಲರಾಗುತ್ತಿಲ್ಲ ಎಂಬುದೇ ಯಕ್ಷಪ್ರಶ್ನೆಯಾಗಿದೆ.

ಸಂಪಿನಲ್ಲಿ ನೀರಿಲ್ಲವೇ? ಟ್ಯಾಂಕರ್ ನೀರು ತರಿಸೋಣ ಎನ್ನುತ್ತಾರವರು. ಈ ಟ್ಯಾಂಕರುಗಳ ಅವಸ್ಥೆ ಕೇಳುವುದೇ ಬೇಡ. ಅವು ಎಲ್ಲಿಂದ ಹೊರಟವೋ ಅಲ್ಲಿಂದ ನೀರು ತರಹೇಳಿದ ಮನೆಯವರೆಗೆ ನೀರಿನ ಅಭಿಷೇಕ ಮಾಡುತ್ತಲೇ ಬರುತ್ತವೆ. ನಗರದ ಬೀದಿಗಳಲ್ಲಿ ಓಡಾಡುವ ನೀರಿನ ಟ್ಯಾಂಕರ್‌ಗಳನ್ನು ಗಮನಿಸಿ ಬೇಕಾದರೆ, ಹತ್ತರಲ್ಲೊಂದಾದರೂ ಲೀಕೇಜ್ ಇಲ್ಲದೆ ಚಲಿಸುತ್ತಿದ್ದರೆ ನಮ್ಮ ಪುಣ್ಯ. ಮನೆಗೆ ತಲುಪಿದಾಗ ಅರ್ಧ ಟ್ಯಾಂಕೋ ಕಾಲು ಟ್ಯಾಂಕೋ ನೀರಿದ್ದರೂ ಅವರಿಗೆ ಚಿಂತೆಯಿಲ್ಲ; ನೀರು ಹಾಕಿಸಿಕೊಂಡವನು ಕೇಳಿದಷ್ಟು ಹಣ ಎಣಿಸುತ್ತಾನೆ. ಬೀದಿಯಲ್ಲಿ ಚೆಲ್ಲಿ ಹೋದ ನೀರಿನ ಮೌಲ್ಯ ತುಂಬುವವರು ಯಾರು?

ಮಳೆಗಾಲವೋ, ವೈಶಾಖವೋ, ಚಳಿಗಾಲವೋ, ನಮ್ಮವರ ಶಾಸ್ತ್ರ-ಸಂಪ್ರದಾಯಗಳಿಗೆ ಎಳ್ಳಿನಿತೂ ಕುಂದುಂಟಾಗಬಾರದು. ಭರ್ತಿ ಮೂವತ್ತು ಲೀಟರು ನೀರು ಸುರಿದು ಮೆಟ್ಟಿಲು-ಜಗುಲಿ ತೊಳೆದು ರಂಗೋಲಿ ಹಾಕಲೇ ಬೇಕು. ರಂಗೋಲಿ ಹಾಕಲಿ ಬಿಡಿ, ಅದಕ್ಕೆ ಕೊಡಗಟ್ಟಲೆ ನೀರು ಸುರಿಯಬೇಕೆ? ಸರಳವಾಗಿ ನೀರು ಚಿಮುಕಿಸಿ ಗುಡಿಸಿಕೊಂಡರೆ ಸಾಲದೆ? ನೆಲಬಿರಿವ ಬೇಸಿಗೆಯಲ್ಲಾದರೂ ಕನಿಷ್ಟ ಈ ನಿಯಮ ಪಾಲಿಸಬಾರದೇ? ಕೆಲವರಂತೂ ಒಂದು ಹನಿ ನೀರೂ ತಮ್ಮ ಮನೆಯಂಗಳದಲ್ಲಿ ಇಂಗಿ ಅಂತರ್ಜಲ ಸೇರಬಾರದೆಂದು ಅಷ್ಟೂ ಜಾಗಕ್ಕೆ ಕಾಂಕ್ರೀಟ್ ಹಾಕಿಸಿರುತ್ತಾರೆ. ಹಾಗಿದ್ದರೇ ಅವರಿಗದು ಹೆಚ್ಚು ನೀಟ್, ಕ್ಲೀನ್. ಕೆಲವರಿಗೆ ಅಷ್ಟಿದ್ದರೂ ಸಮಾಧಾನವಿಲ್ಲ, ಕುಡಿಯುವ ನೀರಿಗೆ ತತ್ವಾರವಾದರೂ ಪ್ರತಿದಿನ ಅವರ ಕಾಂಕ್ರೀಟ್ ಮನೆಯಂಗಳಕ್ಕೆ ನೀರುಣಿಸಿ ಶುಚಿಗೊಳಿಸಲೇಬೇಕು.

ನಮ್ಮ ನಗರವಾಸಿಗಳು ನೀರಿನ ವಿಷಯದಲ್ಲಿ ಇನ್ನಾದರೂ ಎಚ್ಚೆತ್ತುಕೊಳ್ಳದೇ ಹೋದರೆ ಉಳಿಗಾಲವಿಲ್ಲ. ಮನಸ್ಸು ಮಾಡಿದರೆ ಇರುವ ನೀರನ್ನೇ ಸದುಪಯೋಗಪಡಿಸಿಕೊಂಡು ಬರದ ಭಾರವನ್ನು ಕೊಂಚಮಟ್ಟಿಗಾದರೂ ಇಳಿಸಿಕೊಳ್ಳಬಹುದು. ಹೊಸ ಕಟ್ಟಡಗಳು ನೀರಿಂಗಿಸುವ ವ್ಯವಸ್ಥೆ ಮಾಡಿಕೊಳ್ಳುವುದನ್ನೇನೋ ಈಗ ಸರ್ಕಾರ ಕಡ್ಡಾಯ ಮಾಡಿದೆ. ಆದರೆ ಅವರು ಅದನ್ನು ಮನಃಪೂರ್ವಕವಾಗಿ ನಡೆಸಿಕೊಂಡು ಹೋಗುತ್ತಿದ್ದಾರೆಯೇ ಎಂಬುದನ್ನೂ ಪರಿಶೀಲಿಸುವ ವ್ಯವಸ್ಥೆಯೊಂದನ್ನು ಸ್ಥಳೀಯಾಡಳಿತ ಮಾಡಿಕೊಳ್ಳಬೇಕು.

ಅದರೊಂದಿಗೆ ಇತರ ಕಟ್ಟಡಗಳ, ಮನೆಗಳ ಮಾಲೀಕರೂ ಮಳೆಗಾಲದಲ್ಲಿ ಸಿಗುವ ನೀರನ್ನಾದರೂ ಸದುಪಯೋಗಪಡಿಸಿಕೊಳ್ಳುವ/ಇಂಗಿಸುವ ವ್ಯವಸ್ಥೆ ಮಾಡಿಕೊಳ್ಳಬೇಕು. ಮಳೆಗಾಲದಲ್ಲಿ ಮನೆ ಟೆರೇಸ್ ಮೇಲೆ ಸಂಗ್ರಹವಾಗುವ ನೀರನ್ನು ಕುಡಿಯುವುದರ ಹೊರತಾಗಿ ಬೇರೆಲ್ಲ ಕೆಲಸಗಳಿಗೂ ಬಳಸಿಕೊಳ್ಳಬಹುದು. ಒಂದೆರಡು ಮಳೆಗೆ ಟೆರೇಸ್ ಸ್ವಚ್ಛವಾಗುತ್ತದೆ; ಆಮೇಲಿನ ಅಷ್ಟೂ ನೀರನ್ನೂ ನೇರವಾಗಿ ಸಂಪ್‌ಗೆ ತುಂಬಿಕೊಳ್ಳುವ ವ್ಯವಸ್ಥೆಯನ್ನು ಮಾಡಿಕೊಳ್ಳಬಹುದು. ಮಳೆಗಾಲದಲ್ಲೇ ಏಕೆ, ಈಗಲೇ ವಾರಕ್ಕೊಂದೆರಡು ಮಳೆ ಸುರಿಯುತ್ತಿದೆ. ಇದೇ ನೀರನ್ನು ಸಂಗ್ರಹಿಸಿಕೊಂಡರೂ ಸಾಕಷ್ಟು ಅನುಕೂಲವಾದೀತು. ಮನೆಯೊಳಗೂ ಅಷ್ಟೇ, ಮಿತಬಳಕೆಯ ವಿಧಾನಗಳನ್ನು ಅನುಸರಿಸಬಹುದು. ಟ್ಯಾಪ್ ತಿರುಗಿಸಿ ನೀರು ಬಳಸುವ ಸಂದರ್ಭಗಳನ್ನು ಕಡಿಮೆ ಮಾಡಿ ಪಾತ್ರೆಯಲ್ಲಿ ನೀರು ತುಂಬಿಕೊಂಡು ಬಳಸಬಹುದು; ತರಕಾರಿ-ಹಣ್ಣುಹಂಪಲುಗಳನ್ನು ತೊಳೆದ ನೀರನ್ನು ಟಾಲೆಟ್ ಸ್ವಚ್ಛಗೊಳಿಸಲು, ವೆರಾಂಡದ ಗಿಡಗಳಿಗೆರೆಯಲು, ಗಾರ್ಡನ್ ಇದ್ದರೆ ಅದಕ್ಕೂ ಬಳಸಬಹುದು. ಬೇಸಿಗೆಯಲ್ಲಾದರೂ ವಾಷಿಂಗ್ ಮಷಿನ್‌ಗೆ ರಜೆ ಕೊಟ್ಟು ಕೈಯಲ್ಲೇ ಬಟ್ಟೆ ಒಗೆದುಕೊಂಡರೆ ಸಾಕಷ್ಟು ನೀರಿನ ಉಳಿತಾಯವಾಗುತ್ತದೆ. ಬಟ್ಟೆ ಹಿಂಡಿದ ನೀರೂ ಬೇರೊಂದು ಕಡೆ ಉಪಯೋಗಕ್ಕೆ ಬರುತ್ತದೆ.

ಮನಸ್ಸು ಮಾಡಿದರೆ ನೀರಿನ ಮಿತವ್ಯಯಕ್ಕೆ ನೂರಾರು ಹಾದಿಗಳಿವೆ. ಎಲ್ಲರೂ ಏಕಕಾಲಕ್ಕೆ ಇವುಗಳನ್ನು ಅನುಸರಿಸುವುದರಿಂದ ದೊಡ್ಡ ಮಟ್ಟದ ಲಾಭವಂತೂ ಖಂಡಿತ ಆಗುತ್ತದೆ. ಆದರೆ ಎಲ್ಲಕ್ಕಿಂತ ಮೊದಲು ಹದಗೊಳ್ಳಬೇಕಾಗಿರುವುದು ನಮ್ಮ ಮನಸ್ಸು. ಅಲ್ಲಿ ಸಂವೇದನೆಯ ಸೆಲೆ ಒಡೆದರೆ ಮಾತ್ರ, ಹೊರಗೆ ನೀರಿನ ಸೆಲೆ ಚಿಮ್ಮೀತು.

ಗುರುವಾರ, ಮೇ 3, 2012

ನ್ಯಾಯಾಲಯ ವರದಿಗಾರಿಕೆ: ಮಾರ್ಗಸೂಚಿ ಬೇಕೆ?

ಮಾಧ್ಯಮಶೋಧ-17, ಹೊಸದಿಗಂತ, 03-05-2012

ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಬಗ್ಗೆ ಸರ್ವೋಚ್ಛ ನ್ಯಾಯಾಲಯದ ಅಂಗಳದಲ್ಲಿ ಆರಂಭವಾಗಿರುವ ಚರ್ಚೆ ಸಾರ್ವಜನಿಕವಾಗಿಯೂ ಕಾವು ಪಡೆದುಕೊಂಡಿದೆ. ಪ್ರಸ್ತಾಪದ ಹಿನ್ನೆಲೆಯಲ್ಲಿ ನ್ಯಾಯಿಕ ತಜ್ಞರು ಹಾಗೂ ಹಿರಿಯ ಪತ್ರಕರ್ತರು ವ್ಯಕ್ತಪಡಿಸುತ್ತಿರುವ ಪರ ಹಾಗೂ ವಿರೋಧ ಅಭಿಪ್ರಾಯಗಳು ಮಾಧ್ಯಮ ಹಾಗೂ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚಿಂತನೆಗೆ ಕಾರಣವಾಗಿದ್ದು, ಒಟ್ಟು ಸನ್ನಿವೇಶ ಒಂದು ಕುತೂಹಲಕಾರಿ ಘಟ್ಟ ತಲುಪಿದೆ.

ಮಾಧ್ಯಮಗಳಿಗೆ ನಿಯಂತ್ರಣ ಬೇಕು/ಬೇಡ ಎನ್ನುವ ಚರ್ಚೆ ಹೊಸದೇನೂ ಅಲ್ಲ. ಮಾಧ್ಯಮಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ತಮ್ಮ ಶಕ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿವೆ, ಅವುಗಳನ್ನು ನಿಯಂತ್ರಿಸುವುದು ಅವಶ್ಯಕ ಎಂಬ ವಾದ ಒಂದು ಕಡೆ; ಮಾಧ್ಯಮಗಳು ಮಿತಿಮೀರಿ ಹೋಗದಿರಲು ಸ್ವನಿಯಂತ್ರಣವೇ ಸರಿಯಾದ ಉಪಾಯ, ಅದಕ್ಕೆ ಮೂರನೆಯ ಸಂಸ್ಥೆ ಅಥವಾ ವ್ಯಕ್ತಿ ಮೂಗುದಾರ ತೊಡಿಸುವ ಅಗತ್ಯ ಇಲ್ಲ ಎಂಬ ವಾದ ಇನ್ನೊಂದೆಡೆ; ಸ್ವನಿಯಂತ್ರಣವೆಂಬುದು ಶುದ್ಧ ಬೊಗಳೆ, ಪರಿಸ್ಥಿತಿ ಹೀಗೆಯೇ ಮುಂದುವರಿದರೆ, ಮಾಧ್ಯಮಗಳೇ ಸರ್ಕಾರದ ಎಲ್ಲ ಅಂಗಗಳನ್ನೂ ನಿಯಂತ್ರಿಸುವ ಸನ್ನಿವೇಶ ಸೃಷ್ಟಿಯಾಗಿ ಪ್ರಜಾಪ್ರಭುತ್ವವೆಂಬುದು ಕೇವಲ ಮರೀಚೆಕೆಯಾದೀತು ಎಂಬ ಆತಂಕ ಮತ್ತೊಂದೆಡೆ. ಈ ಎಲ್ಲ ಚರ್ಚೆಗಳು ಸಾಕಷ್ಟು ಹಿಂದಿನಿಂದಲೂ ಜೀವಂತವಾಗಿಯೇ ಇವೆ.

ಆದರೆ ಸ್ವತಃ ಸರ್ವೋಚ್ಛ ನ್ಯಾಯಾಲಯವೇ ಈಗ ರಂಗಪ್ರವೇಶ ಮಾಡಿರುವುದರಿಂದ ಈ ಚರ್ಚೆಗೆ ಹೊಸದೊಂದು ತಿರುವು ಸಿಕ್ಕಿರುವುದು ಸ್ಪಷ್ಟವಾಗಿದೆ. ಮಾಧ್ಯಮಗಳನ್ನು ಒಟ್ಟಾರೆಯಾಗಿ ನಿಯಂತ್ರಿಸುವ ಬಗೆಗೇನೂ ನ್ಯಾಯಾಲಯ ಮಾತಾಡುತ್ತಿಲ್ಲವಾದರೂ, ನಿರ್ದಿಷ್ಟವಾಗಿ ನ್ಯಾಯಾಲಯ ವರದಿಗಾರಿಕೆಯ ವಿಷಯದಲ್ಲಿ ಮಾಧ್ಯಮಗಳಿಗೆ ತಮ್ಮ ಮಿತಿಯನ್ನು ತೋರಿಸಿಕೊಡುವ ಇಚ್ಛೆಯನ್ನು ಅದು ವ್ಯಕ್ತಪಡಿಸಿದೆ. ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ ನ್ಯಾ| ಎಸ್. ಎಚ್. ಕಪಾಡಿಯಾ ನೇತೃತ್ವದ ಐದು ಮಂದಿ ಸದಸ್ಯರ ಸಂವಿಧಾನ ಪೀಠ ನ್ಯಾಯಾಲಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾಧ್ಯಮಗಳಿಗೆ ಕೆಲವು ಮಾರ್ಗದರ್ಶಿ ಸೂತ್ರಗಳನ್ನು ರೂಪಿಸುವ ಪ್ರಸ್ತಾಪವನ್ನು ಮುಂದಿಟ್ಟು ಮಾಧ್ಯಮ ಸಂಸ್ಥೆಗಳೂ ಸೇರಿದಂತೆ ಸಮಾಜದ ವಿವಿಧ ವಲಯಗಳ ಅಭಿಪ್ರಾಯಗಳನ್ನು ಆಲಿಸುತ್ತಿದ್ದು, ಇದರ ತಾತ್ವಿಕ ಅಂತ್ಯ ಹೇಗಿರಬಹುದು ಎಂಬುದು ಮಾಧ್ಯಮ ವೀಕ್ಷಕರಿಗೆ ಒಂದು ಕೌತುಕದ ವಿಚಾರವೇ ಆಗಿದೆ.

ಸಂವಿಧಾನದ ೨೧ನೇ ಪರಿಚ್ಛೇದ (ಬದುಕು ಮತ್ತು ಸ್ವಾತಂತ್ರ್ಯದ ಹಕ್ಕು) ಹಾಗೂ ೧೯(೧)(ಎ) (ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ)ದ ನಡುವೆ ಒಂದು ಸಮತೋಲನವನ್ನು ತರುವುದೇ ತಾವು ಆರಂಭಿಸಿರುವ ಹೊಸ ಚರ್ಚೆಯ ಉದ್ದೇಶ ಎಂದು ಸಂವಿಧಾನ ಪೀಠ ಮಾರ್ಮಿಕವಾಗಿ ಹೇಳಿದೆ. 'ಮಾಧ್ಯಮಗಳ ಸಂಪಾದಕೀಯ ವಸ್ತುವಿಚಾರ(editorial content)ಗಳನ್ನು ನಿಯಂತ್ರಿಸುವಲ್ಲಿ ನಮಗೆ ಆಸಕ್ತಿ ಇಲ್ಲ. ತಪ್ಪು ಮಾಡುವ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಅಂತಹ ತಪ್ಪುಗಳಾಗದಂತೆ ತಡೆಗಟ್ಟುವುದಷ್ಟೇ ನಮ್ಮ ಉದ್ದೇಶ' ಎಂದು ಆರಂಭದಲ್ಲೇ ಮುಖ್ಯ ನ್ಯಾಯಾಧೀಶರು ಸ್ಪಷ್ಟಪಡಿಸಿದ್ದಾರೆ.
 
ನ್ಯಾಯಾಲಯ ಕಲಾಪಗಳನ್ನು ತಪ್ಪಾಗಿ ವರದಿಮಾಡುವ ಮೂಲಕ ಜನಸಾಮಾನ್ಯರನ್ನು ಹಾದಿತಪ್ಪಿಸುವ ಕೆಲಸವನ್ನು ಅನೇಕ ಬಾರಿ ಮಾಧ್ಯಮಗಳು ಮಾಡುತ್ತವೆ ಎಂಬುದು ನ್ಯಾಯಾಲಯದ ಬೇಸರ. ಅಲ್ಲದೆ, ಒಬ್ಬ ಆಪಾದಿತನ ವಿಚಾರಣೆ ನಡೆದು ನ್ಯಾಯಾಲಯ ಇನ್ನೂ ತೀರ್ಪು ನೀಡುವ ಮುನ್ನವೇ ಆತನ ಬಗ್ಗೆ ಪೂರ್ವಾಗ್ರಹಪೀಡಿತ ವರದಿಗಳನ್ನು ಪ್ರಕಟಿಸುವುದು, ಆತನೇ ಅಪರಾಧಿಯೋ ಎಂಬ ಹಾಗೆ ಬಿಂಬಿಸುತ್ತಾ ಹೋಗುವುದು ನ್ಯಾಯಿಕ ಪ್ರಕ್ರಿಯೆಯ ಮೇಲೆ ನೇರ ಪರಿಣಾಮ ಬೀರುತ್ತದೆ. ಹೀಗಾಗಿ ಒಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿದ ಮೇಲೆ ಅದರ ಬಗ್ಗೆ ಯಾವ ರೀತಿ ವರದಿ ಮಾಡಬೇಕು, ಅಲ್ಲಿನ ಕಲಾಪಗಳನ್ನು ವರದಿಮಾಡುವಾಗ ತಪ್ಪುಸಂದೇಶ ರವಾನೆಯಾಗದಂತೆ ಯಾವ ಎಚ್ಚರ ವಹಿಸಬೇಕು ಎಂಬುದನ್ನು ನಿರ್ಧರಿಸುವುದಕ್ಕೆ ತಾನು ಮಾರ್ಗಸೂಚಿ ರೂಪಿಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.

'ಮಾಧ್ಯಮಗಳು ತಮ್ಮ ಮಿತಿಯನ್ನು ಅರಿಯಬೇಕು ಎಂಬುದು ನಮ್ಮ ಉದ್ದೇಶ. ಪತ್ರಕರ್ತರು ಜೈಲಿಗೆ ಹೋಗಬೇಕು ಎಂಬುದು ನಮ್ಮ ಇಚ್ಛೆ ಅಲ್ಲ' ಎಂದು ನ್ಯಾ| ಕಪಾಡಿಯಾ ಸ್ಪಷ್ಟೀಕರಿಸಿದ್ದಾರೆ. ಏತನ್ಮಧ್ಯೆ ಮಾಧ್ಯಮ ಸಂಸ್ಥೆಗಳು, ಹಿರಿಯ ಪತ್ರಕರ್ತರು ಈ ಪ್ರಸ್ತಾಪಕ್ಕೆ ತಮ್ಮ ತೀವ್ರ ವಿರೋಧ ವ್ಯಕ್ತಪಡಿಸಿರುವುದೂ ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ.

'ನೀವು ನ್ಯಾಯಾಲಯ ಕಲಾಪಗಳ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಬೇಡಿ, ಅದರ ಬದಲು ಸಂಪಾದಕರುಗಳನ್ನು ಕರೆಸಿ ಚರ್ಚೆ ಮಾಡಿ' ಎಂದು ಭಾರತೀಯ ಸಂಪಾದಕರ ಒಕ್ಕೂಟ ಒತ್ತಾಯಿಸಿದೆ. 'ಮಾರ್ಗದರ್ಶಿ ಸೂತ್ರಗಳನ್ನು ಜಾರಿ ಮಾಡುವುದು ಸಂವಿಧಾನದತ್ತವಾಗಿರುವ ಮುಕ್ತ ಅಭಿವ್ಯಕ್ತಿ ಪರಿಕಲ್ಪನೆಗೆ ಮಾರಕವಾದದ್ದು... ೧೯(೧)(ಎ)ಯನ್ನು ಒಳಗೊಂಡಂತೆ ಸಂವಿಧಾನದ ೧೯ನೇ ಪರಿಚ್ಛೇದದಲ್ಲಿ ದತ್ತವಾಗಿರುವ ಎಲ್ಲ ಮೂಲಭೂತ ಹಕ್ಕುಗಳನ್ನು ಸಕಾರಣ ನಿರ್ಬಂಧಗಳ (reasonable restrictions) ಮೂಲಕ ಮಾತ್ರ ಕಾನೂನಿನ ಚೌಕಟ್ಟಿನಲ್ಲಿ ನಿರ್ಬಂಧಿಸಬಹುದು. ೨೧ನೇ ಪರಿಚ್ಛೇದವನ್ನು ಮುಂದಿಟ್ಟುಕೊಂಡು ೧೯ನೇ ಪರಿಚ್ಛೇದವನ್ನು ತಳ್ಳಿಹಾಕಲಾಗದು...' ಎಂದು ಸಂಪಾದಕರ ಒಕ್ಕೂಟದ ಪರವಾಗಿ ಹಿರಿಯ ನ್ಯಾಯವಾದಿ ರಾಜೀವ್ ಧವನ್ ವಾದಿಸಿದ್ದಾರೆ.

'ನ್ಯಾಯಾಲಯ ಆರಂಭಿಸಿರುವ ಸದರಿ ಪ್ರಕ್ರಿಯೆಯೇ ಕೊನೆಗೆ ನಿಷ್ಪ್ರಯೋಜಕವೆನಿಸುವ ಸಾಧ್ಯತೆಯಿದೆ. ಇದರಿಂದ ಯಾವ ಉದ್ದೇಶವೂ ಸಾಧನೆಯಾಗದು' ಎಂದು ಮಾಜಿ ಕಾನೂನು ಸಚಿವ ಶಾಂತಿ ಭೂಷಣ್ ಕೂಡ ವಾದಿಸಿದ್ದಾರೆ. ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಾಧೀಶರಾಗಿದ್ದ ನ್ಯಾ| ಎ. ಎನ್. ರೇ ಇಂತಹ ಪ್ರಕರಣವೊಂದರಲ್ಲಿ ನೇಮಿಸಲಾಗಿದ್ದ ೧೩ ಸದಸ್ಯರ ಪೀಠವನ್ನು ಬರ್ಕಾಸ್ತುಗೊಳಿಸಿದ್ದನ್ನು ಅವರು ಉಲ್ಲೇಖಿಸಿದ್ದಾರೆ.

'ದಿ ಹಿಂದೂ' ಪತ್ರಿಕೆಯ ಪರವಾಗಿ ವಾದಿಸಿರುವ ಹಿರಿಯ ವಕೀಲ ಅನಿಲ್ ದಿವಾನ್ ಅವರು 'ಇತರ ಯಾವುದೇ ಹಕ್ಕುಗಳಿಗೋಸ್ಕರ ಪತ್ರಿಕಾ ಸ್ವಾತಂತ್ರ್ಯದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ. 'ಪರಿಚ್ಛೇದ ೧೯(೧)(ಎ)ಯಲ್ಲಿ ದತ್ತವಾಗಿರುವ ಹಕ್ಕು ಅಬಾಧಿತವಾದುದಲ್ಲವಾದರೂ, ಅದನ್ನು ಪರಿಚ್ಛೇದ ೧೯(೨)ರಲ್ಲಿ ಹೇಳಲಾಗಿರುವ ಸಕಾರಣ ನಿರ್ಬಂಧಗಳ ಮೂಲಕ ಮಾತ್ರ ಮಿತಗೊಳಿಸಬಹುದು' ಎಂಬುದು ಅವರ ವಾದವಾದರೆ, ಆ ಪತ್ರಿಕೆಯ ಸಂಪಾದಕ ಸಿದ್ಧಾರ್ಥ ವರದರಾಜನ್ ತಮ್ಮ ಲೇಖನವೊಂದರಲ್ಲಿ, 'ನ್ಯಾಯಾಂಗದ ತುತ್ತತುದಿಯಲ್ಲಿರುವ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಿಬಿಟ್ಟರೆ ಅದು ಸರ್ಕಾರದ ಇತರ ಅಂಗಗಳಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ; ಸಂಸತ್ತು, ರಾಜ್ಯ ವಿಧಾನಸಭೆಗಳು, ಸಚಿವಾಲಯಗಳು ಹೀಗೆ ಎಲ್ಲರೂ ಪತ್ರಕರ್ತರಿಗೆ ನಿಯಮಗಳನ್ನು ರೂಪಿಸುತ್ತಾ ಹೋಗುವುದಕ್ಕೆ ಇದು ಕಾರಣವಾಗಬಹುದು' ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸುಪ್ರೀಂ ಕೋರ್ಟಿನ ಅಧಿಕೃತ ನ್ಯಾಯಾಲಯ ವರದಿಗಾರರು ಕಡ್ಡಾಯವಾಗಿ ಕಾನೂನು ಪದವೀಧರರಾಗಿರಬೇಕು ಮತ್ತು ಇಂತಿಷ್ಟು ವರ್ಷಗಳ ಕಾಲ ಅಧೀನ ನ್ಯಾಯಾಲಯಗಳ ಕಲಾಪಗಳನ್ನು ವರದಿ ಮಾಡಿದ ಅನುಭವ ಹೊಂದಿರಬೇಕು ಎಂಬ ನಿಯಮಗಳನ್ನು ನ್ಯಾಯಾಲಯ ರೂಪಿಸುವ ಸಾಧ್ಯತೆಯಿರುವ ಬಗ್ಗೆ ತಮ್ಮ ಈಚಿನ ಬರೆಹವೊಂದರಲ್ಲಿ ಪ್ರಸ್ತಾಪಿಸಿರುವ ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷರೂ ಆಗಿರುವ ಹಿರಿಯ ಪತ್ರಕರ್ತ ಡಾ. ಎಂ. ವಿ. ಕಾಮತ್, 'ವರದಿಗಾರಿಕೆ ಒಂದು ಕಲೆ. ನ್ಯಾಯಾಧೀಶರು ನೀಡಿರುವ ತೀರ್ಪನ್ನು ಯಥಾವತ್ತು ಉದ್ಧರಿಸುವುದಷ್ಟೇ ವರದಿಗಾರಿಕೆಯಲ್ಲ. ಒಬ್ಬ ಒಳ್ಳೆಯ ಜ್ಞಾನವಂತ ನ್ಯಾಯವಾದಿ ಒಳ್ಳೆಯ ಪತ್ರಿಕಾ ವರದಿಗಾರ ಆಗಿರಬೇಕೆಂದು ನಿರೀಕ್ಷಿಸಲಾಗದು' ಎಂದು ಅಭಿಪ್ರಾಯಪಟ್ಟಿದ್ದಾರೆ.

ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಸುಪ್ರೀಂ ಕೋರ್ಟು ನ್ಯಾಯಾಲಯ ವರದಿಗಾರಿಕೆಗೆ ಸಂಬಂಧಿಸಿದಂತೆ ಮಾರ್ಗಸೂಚಿಗಳನ್ನು ಜಾರಿಗೆ ತರಲು ಪ್ರಯತ್ನಿಸಿದಲ್ಲಿ ತಮ್ಮ ನೇತೃತ್ವದಲ್ಲೇ ಅದರ ವಿರುದ್ಧ ಆಂದೋಲನ ರೂಪಿಸಬೇಕಾದೀತು ಎಂದಿದ್ದಾರೆ. 'ಮಾಧ್ಯಮ ಏನಾದರೂ ಕೆಟ್ಟದು ಮಾಡುತ್ತದೆ ಎಂದುಕೊಳ್ಳುತ್ತೇವಲ್ಲ, ಅದಕ್ಕಿಂತ ಹೆಚ್ಚು ಅನಾಹುತ ಮಾಡುವ ಶಕ್ತಿ ನ್ಯಾಯಂಗಕ್ಕಿದೆ... ಒಂದು ವರದಿಯಲ್ಲಿನ ಸಣ್ಣಪುಟ್ಟ ತಪ್ಪುಗಳಿಗಿಂತ ಒಂದು ತಪ್ಪು ತೀರ್ಪು ಅತಿಹೆಚ್ಚು ಅನಾಹುತ ಮಾಡಬಲ್ಲದು...' ಎಂದು ಅವರು ತಮ್ಮ ಅಂಕಣದಲ್ಲೂ ಬರೆದಿದ್ದಾರೆ.

ಇನ್ನೊಂದೆಡೆ, ಭಾರತೀಯ ಪತ್ರಿಕಾ ಮಂಡಳಿಯ ಅಧ್ಯಕ್ಷ ನ್ಯಾ| ಮಾರ್ಕಂಡೇಯ ಕಟ್ಜು ಮಾರ್ಗಸೂಚಿಗಳನ್ನು ರೂಪಿಸುವ ಸುಪ್ರೀಂ ಕೋರ್ಟಿನ ಪ್ರಸ್ತಾಪಕ್ಕೆ ಪೂರ್ಣ ಬೆಂಬಲ ನೀಡಿದ್ದಾರೆ. ಪತ್ರಿಕಾ ಮಂಡಳಿಯ ಚುಕ್ಕಾಣಿ ಹಿಡಿದಂದಿನಿಂದಲೂ ಈ ವಿಚಾರದಲ್ಲಿ ಸದಾ ಸುದ್ದಿಯಲ್ಲಿರುವ ನ್ಯಾ| ಕಟ್ಜು, 'ರೆಗ್ಯುಲೇಶನ್' ಬೇರೆ, 'ಕಂಟ್ರೋಲ್' ಬೇರೆ. ನಾನು ಮಾಧ್ಯಮಗಳನ್ನು 'ಕಂಟ್ರೋಲ್' ಮಾಡಬೇಕೆಂದು ಹೇಳುತ್ತಿಲ್ಲ, 'ರೆಗ್ಯುಲೇಟ್' ಮಾಡಬೇಕೆಂದು ಹೇಳುತ್ತಿದ್ದೇನೆ ಎಂದು ತಮ್ಮ ಲೇಖನವೊಂದರಲ್ಲಿ ಹೇಳಿದ್ದಾರೆ. ಸ್ವನಿಯಂತ್ರಣದ ಮಂತ್ರ ಹೇಳುವ ನ್ಯೂಸ್ ಬ್ರಾಡ್‌ಕಾಸ್ಟರ್ಸ್ ಅಸೋಸಿಯೇಶನ್ ಆಗಲೀ, ಬ್ರಾಡ್‌ಕಾಸ್ಟ್ ಎಡಿಟರ್ಸ್ ಅಸೋಸಿಯೇಶನ್ ಆಗಲೀ ತಮ್ಮ ಚಾನೆಲ್‌ಗಳನ್ನು ಎಷ್ಟರಮಟ್ಟಿಗೆ ನಿಯಂತ್ರಿಸಲು ಯಶಸ್ವಿಯಾಗಿದ್ದಾರೆ ಎಂಬುದು ಅವರ ಪ್ರಶ್ನೆ.

ಒಟ್ಟಿನಲ್ಲಿ, ಸರ್ವೋಚ್ಛ ನ್ಯಾಯಾಲಯದ ಮೂಲಕ ಆರಂಭವಾಗಿರುವ ಈ ಚರ್ಚೆ ಎಂತಹ ತಾತ್ವಿಕ ಅಂತ್ಯ ತಲುಪೀತು ಎಂದು ಹೇಳುವುದು ಕಷ್ಟ. ಆದರೆ ನ್ಯಾಯಾಲಯ ವರದಿಗಾರಿಕೆಯ ರೀತಿನೀತಿಗಳ ಬಗ್ಗೆ ಚರ್ಚೆ ನಡೆಸುವ ನೆಪದಲ್ಲಿ ಇಡೀ ಮಾಧ್ಯಮ ರಂಗದ ಬಗ್ಗೆ ಒಂದು ಉನ್ನತ ಮಟ್ಟದ ಆರೋಗ್ಯಕರ ಚರ್ಚೆ ನಡೆಯುತ್ತಿರುವುದಂತೂ ಸ್ವಾಗತಾರ್ಹ ವಿಚಾರವೇ. ಅದಕ್ಕಾಗಿ ಸರ್ವೋಚ್ಛ ನ್ಯಾಯಾಲಯಕ್ಕೆ ಧನ್ಯವಾದ ಎನ್ನೋಣ.