ಭಾನುವಾರ, ಮೇ 8, 2011

ಕೊನೆಗೂ ಅಪ್ಪ ಮನೆಗೆ ಬಂದಿದ್ದಾರೆ...

ಹೌದು, ಅಪ್ಪನ ಬರೋಬ್ಬರಿ ಐದು ತಿಂಗಳ ಒಂಟಿ ಒಬ್ಬಂಟಿ ವನವಾಸ ಇವತ್ತಿಗೆ ಮುಗಿದಿದೆ. ’ಪುರದ ಪುಣ್ಯಂ ಪುರುಷ ರೂಪಿಂದೆ’ ಆಗಮಿಸಿದೆ. ಎರಡು ವರ್ಷದ ಹಿಂದೆ ಬಹುವಾಗಿ ಕಾಡಿದ ನೇಗಿಲಯೋಗಿ ನನಗೇ ಗೊತ್ತಿಲ್ಲದ ಹಾಗೆ ಇಂದು ಯಾಕೋ ಮತ್ತೆಮತ್ತೆ ಕಾಡುತ್ತಿದ್ದಾನೆ.

ಅರರೆ, ಬದುಕು ಎಷ್ಟೊಂದು ಬದಲಾಗಿ ಹೋಯಿತು... ಎಲ್ಲಿಯ ಸಿಬಂತಿ, ಎಲ್ಲಿಯ ಮಂಗಳೂರು, ಎಲ್ಲಿಯ ತುಮಕೂರು... ಇದೆಲ್ಲ ಒಂದು ಸಿನಿಮಾದಂತೆ ಇದೆಯಲ್ಲ ಎನಿಸುತ್ತಿದೆ. ರಾಜಧಾನಿಯ ಮಣೇಕ್ ಷಾ ಪೆರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೂರಾರು ಸಹಗಾಯಕರೊಂದಿಗೆ ’ಉಳುವಾ ಯೋಗಿಯ ನೋಡಲ್ಲಿ...’ ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ, ನನಗೆ ಮಾತ್ರ ಕಾಡಿನ ನಡುವೆ ಉಳುಮೆ ನಡೆಸುತ್ತಿದ್ದ ಅಪ್ಪನ ನೆನಪು ಒತ್ತೊತ್ತಿ ಬರುತ್ತಿತ್ತು. ಅವರನ್ನು ಹೇಗಾದರೂ ನಾನಿರುವೆಡೆ ಕರೆತಂದು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಮನಸ್ಸು ಬಿಡದೆ ಹಂಬಲಿಸುತ್ತಿತ್ತು. ಆದರೆ ಅದಾಗಿ ವರ್ಷ ಕಳೆಯುವುದರೊಳಗಾಗಿ ನನ್ನ ಬದುಕಿನ ಮಾರ್ಗವೇ ಬದಲಾಗಬಹುದು ಎಂದು ಮಾತ್ರ ಅನಿಸಿರಲೇ ಇಲ್ಲ.

ಜಾಗದ ತಗಾದೆ ಇನ್ನು ಮುಂದುವರಿಸೋದು ಬೇಡ; ಬರಿದೇ ವರ್ಷಾನುಗಟ್ಟಲೆ ಕೋರ್ಟು-ಕಚೇರಿಯ ಅಲೆದಾಟ ಯಾಕೆ? ನಮಗೆ ಸಲ್ಲುವ ಋಣವಿರೋದು ಸಂದೇ ಸಲ್ಲುತ್ತದೆ. ಇಲ್ಲಿ ಅಲ್ಲದಿದ್ದರೆ ಇನ್ನೊಂದು ಕಡೆ. ಆ ಬಗ್ಗೆ ಚಿಂತೆ ಬೇಡವೇ ಬೇಡ. ಮಾತುಕತೆಯಲ್ಲಿ ಹೇಗಾದರೂ ಈ ತಕರಾರು ಮುಗಿಸುವ ಆಗದಾ? - ಆ ರೀತಿ ಅಪ್ಪನನ್ನು ಕೇಳುವುದಕ್ಕೆ ನನಗೆ ಯಾವ ಅರ್ಹತೆಯೂ ಇರಲಿಲ್ಲ. ಆದರೆ ನಾನು ಹಾಗೆ ಕೇಳಿದ್ದೆ. ತಾನು ನಾಕು ದಶಕ ಬೆವರು ಬಸಿದು ದುಡಿದ ಭೂಮಿ ತನ್ನ ಕಣ್ಣೆದುರೇ ಅನ್ಯಾಯವಾಗಿ ಬೇರೆಯವರ ಪಾಲಾಗುತ್ತಿದೆ ಎಂದುಕೊಂಡಾಗ ಯಾವ ಶ್ರಮಜೀವಿಗೂ ಸಂಕಟವಾಗದೆ ಇರಲಾರದು. ಆದರೆ ನನ್ನ ಮಾತಿಗೆ ಅಪ್ಪ ಒಪ್ಪಿಬಿಟ್ಟರು. ಅಮ್ಮ ತಲೆಯಾಡಿಸಿದರು.

ಕೊಂಚ ನಿಧಾನವಾಗಿಯೇ ಆದರೂ ನನ್ನ ಯೋಜನೆಯಂತೆ ಕೆಲಸ ಆಯಿತು. ತಗಾದೆ ಮುಗಿಯಿತು. ಮನೆಗೆ ಅಗಲ ರಸ್ತೆ ಬಂತು. ಚಿಮಿಣಿ ಎಣ್ಣೆ ದೀಪದ ಹೊಗೆಯಿಂದ ಕಪ್ಪಿಟ್ಟಿದ್ದ ಮನೆಯಲ್ಲಿ ಮೊದಲ ಬಾರಿಗೆ ಕರೆಂಟು ಲೈಟು ಉರಿಯಿತು. ಅದಾಗಲೇ ಮಂಗಳೂರು ಬಿಡುವ ಯೋಚನೆ ನಾನು ಮಾಡಿಯಾಗಿತ್ತು. ಮನೆಯಲ್ಲೇ ಇದ್ದುಕೊಂಡು ಅಲ್ಲೆಲ್ಲಾದರೂ ಪಾಠ ಮಾಡುತ್ತಾ ತೋಟದ ನಡುವೆಯೇ ಬದುಕು ಕಟ್ಟುವ ಮಾನಸಿಕ ತಯಾರಿಯನ್ನು ನಾನೂ-ಆರತಿಯೂ ನಡೆಸಿಯಾಗಿತ್ತು. ಮಕ್ಕಳು ಖಾಯಂ ಆಗೇ ಊರಿಗೆ ಬಂದುಬಿಡುತ್ತಿದ್ದಾರೆ ಎಂಬ ಸಂಭ್ರಮ ಅಪ್ಪ-ಅಮ್ಮನ ಮುಖಮನಸ್ಸುಗಳಲ್ಲಿ ಎದ್ದು ಕುಣಿಯುತ್ತಿತ್ತು. ಆ ಸಂಭ್ರಮ ಅಷ್ಟಕ್ಕೇ ನಿಲ್ಲದೆ ಒಂದೆರಡು ದಿನಗಳಲ್ಲೇ ಊರೆಲ್ಲ ಹರಡಿಬಿಟ್ಟಿತ್ತು.


ಈ ನಡುವೆ ಅದೇನಾಯ್ತೋ, ನಾನು ತುಮಕೂರು ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಗುಜರಾಯಿಸಿಬಿಟ್ಟಿದ್ದೆ. ಅದರ ಬೆನ್ನಿಗೇ ಚಿಕನ್‌ಪಾಕ್ಸ್ ಬಂದು ಎರಡು-ಮೂರು ವಾರ ಏನೂ ಮಾಡಲಾಗದೆ ಸಿಬಂತಿಯಲ್ಲಿ ಮಲಗಿದ್ದೆ. ಇನ್ನೇನು ಪೂರ್ತಿ ಚೇತರಿಸಿಕೊಳ್ಳುವ ಮುನ್ನ ಸಂದರ್ಶನ ಪತ್ರ ಕೈಸೇರಿತ್ತು. ಚಿಕನ್‌ಪಾಕ್ಸ್‌ನ ಕಲೆಗಳಿಂದ ತುಂಬಿದ ವಿಕಾರ ಮುಖ ಹೊತ್ತುಕೊಂಡೇ ನಾನು ತಜ್ಞರ ಸಮಿತಿಯೆದುರು ಕುಗ್ಗಿಕುಳಿತಿದ್ದೆ. ಅದರ ಮಾರನೆ ದಿನ ನಾನು ವಿಶ್ವವಿದ್ಯಾನಿಲಯದಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದೆ... ಅಂದಹಾಗೆ ಇದೆಲ್ಲಾ ಆಗಿ ಇವತ್ತಿಗೆ (ಮೇ ೯) ಸರಿಯಾಗಿ ಒಂದು ವರ್ಷ ಆಯಿತು. ಎಲ್ಲವೂ ಒಂದು ಸಿನಿಮಾದಂತೆಯೇ ಭಾಸವಾಗುತ್ತಿದೆ. ಆದರೆ ನಾವಂದುಕೊಳ್ಳುವುದೇ ಒಂದು, ಆಗುವುದೇ ಮತ್ತೊಂದು ಎಂಬುದು ಸಿನಿಮಾದಲ್ಲಷ್ಟೇ ನಡೆಯುವುದಿಲ್ಲವಲ್ಲ!


ತುಮಕೂರಿಗೆ ಬಂದಾಯಿತು. ಈಗ ನಾನು ಮೊದಲಿಗಿಂತಲೂ ಹೆಚ್ಚು ದೂರಕ್ಕೆ ಬಂದುಬಿಟ್ಟಿದ್ದೆ. ಅಪ್ಪ-ಅಮ್ಮನ ಕಳವಳ, ನನ್ನ ಸಂಕಟ ಹೆಚ್ಚೇ ಆಯಿತು. ಅವರನ್ನು ಇಲ್ಲಿಗೆ ಕರೆತರುವ ಅವಶ್ಯಕತೆಯೂ ದಿನೇದಿನೇ ಹೆಚ್ಚಾಗುತ್ತಿತ್ತು. ಶೂನ್ಯದಿಂದ ಸೃಷ್ಟಿಸಿದ ಬಂಗಾರದಂಥಾ ಆ ಭೂಮಿಯನ್ನು ಮಾರುವುದು ನಮಗ್ಯಾರಿಗೂ ರುಚಿಸದ ಸಂಗತಿಯೇ ಆಗಿದ್ದರೂ, ಆಮೇಲಾಮೇಲೆ ಅದು ಅನಿವಾರ್ಯ ಎನಿಸತೊಡಗಿತು. ಅನಾರೋಗ್ಯ - ಅಭದ್ರತೆಗಳಿಂದ ಅಪ್ಪ-ಅಮ್ಮ ಕುಸಿಯುತ್ತಿದ್ದುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತಿತ್ತು.


ಆದರೆ ಜಾಗ ಮಾರುವುಡು ಅಷ್ಟು ಸುಲಭದ ಮಾತಾಗಿರಲಿಲ್ಲ. ಕಾನೂನು ಪ್ರಕಾರ ಅದನ್ನು ಮಾರಬೇಕಾದರೆ ಇನ್ನೂ ನಾಕೈದು ವರ್ಷ ಕಾಯಬೇಕಿತ್ತು. ಅಷ್ಟು ಕಾಯುವ ಸ್ಥಿತಿಯಲ್ಲಿ ನಾವಿರಲಿಲ್ಲ. ಇದೇ ಯೋಚನೆಯಲ್ಲಿರಬೇಕಾದರೇ ಮತ್ತೊಂದು ಆಘಾತ ಕಾದಿತ್ತು. ಅಮ್ಮಂಗೆ ಕೈಕಾಲು ಬತ್ತಿಲ್ಲೆ... ಮಧ್ಯರಾತ್ರಿ ಒಂದು ಗಂಟೆಗೆ ಅಪ್ಪನ ಫೋನು. ನಾನೇನು ಆಗಬಾರದು ಅಂದುಕೊಂಡಿದ್ದೆನೋ ಅದು ಆಗಿ ಹೋಗಿತ್ತು. ಅಮ್ಮನಿಗೆ ಮೈಲ್ಡ್ ಹ್ಯಾಮರೇಜ್ ಆಗಿತ್ತು. ಎಡಭಾಗದ ಕೈ-ಕಾಲು ಶಕ್ತಿ ಕಳೆದುಕೊಂಡಿದ್ದವು. ದಾಲಾಟ ಭಾವ ಅದೇ ಅಪರಾತ್ರಿಯಲ್ಲಿ ಮನೆಗೆ ಧಾವಿಸಿ ಅಮ್ಮನನ್ನು ಆಸ್ಪತ್ರೆಗೆ ಸೇರಿಸುವಲ್ಲಿ ನೆರವಾದ. ನಾನು ಇನ್ನೂರೈವತ್ತು ಕಿ.ಮೀ. ದೂರದಲ್ಲಿದ್ದೆ.


ಇಪ್ಪತ್ತು ದಿನ ಅಸ್ಪತ್ರೆ ಹಾಸಿಗೆಗೆ ಅಂಟಿಕೊಂಡಿದ್ದ ಅಮ್ಮನನ್ನು ಮತ್ತೆ ಸಿಬಂತಿಗೆ ಕರೆದೊಯ್ಯದೇ ತುಮಕೂರಿಗೇ ಕರಕೊಂಡು ಬಂದೆ. ಮತ್ತೆ ಅಪ್ಪ ಒಬ್ಬಂಟಿಯಾದರು ಅಲ್ಲಿ. ಜಾಗ ಮಾರಲೇಬೇಕಾದ ಅನಿವಾರ್ಯತೆ ಈಗ ಮತ್ತೆ ಬೆಂಬಿಡದೆ ಕಾಡಿತು. ಛೇ, ಜಾಗ ಮಾರ್ತೀಯಾ? ಹುಡುಗಾಟಾನಾ? ಈಗ ಮಾರಿದ್ರೆ ಅಂಥಾ ಜಾಗ ಮತ್ತೊಮ್ಮೆ ಸಿಗುತ್ತಾ? ಹತ್ತಾರು ಜನ ಎಚ್ಚರಿಸಿದರು. ಬೇರೆ ಏನಾದ್ರೂ ವ್ಯವಸ್ಥೆ ಮಾಡಪ್ಪ, ಆದ್ರೆ ಜಾಗ ಮಾರ್ಬೇಡ... ನೋಡಿಕೊಳ್ಳುವುದಕ್ಕೆ ಜನ ಮಾಡು... ಲೀಸ್‌ಗೆ ಕೊಡು... ಹೀಗೆ ನೂರಾರು ಸಲಹೆಗಳ ಮಹಾಪೂರ. ಆದರೆ ಯಾವುದೂ ಪ್ರಾಯೋಗಿಕವಾಗಿರಲಿಲ್ಲ.


ಕೆಲಸಕ್ಕೆ ಜನ ಇಲ್ಲ. ಅಪ್ಪನ ಜೊತೆ ಸಂಗಾತಕ್ಕೆ ಅಂತ ಬಂದವರೂ ವಾರದಿಂದ ಹೆಚ್ಚು ನಿಲ್ಲಲಿಲ್ಲ. ತೋಟದ ಕೆಲಸ ಮಾಡಲೂ ಆಗದೆ, ಮಾಡದೆ ಇರಲೂ ಆಗದೆ ಎಂಬತ್ತೆರಡು ವರ್ಷದ ಅಪ್ಪ ದೈಹಿಕವಾಗಿ ದಿನದಿಂದ ದಿನಕ್ಕೆ ಸೋಲುತ್ತಿದ್ದರು. ವಾಯಿದೆ ಆಗದಿದ್ದರೂ ಏನಾದರೂ ಮಾಡಿ ಜಾಗ ಕೊಟ್ಟುಬಿಡೋದು ಅಂತ ಎಂದೋ ತೀರ್ಮಾನಿಸಿಯಾಗಿತ್ತು, ಆದರೆ ಆ ಗೊಂಡಾರಣ್ಯಕ್ಕೆ ತಕ್ಕಮಟ್ಟಿನ ಗಿರಾಕಿಯೂ ಬರದೆ ಹೈರಾಣಾದೆವು. ನಲ್ವತ್ತು ವರ್ಷ ಒಂದು ಹೊಲಕ್ಕೆ ಹಗಲಿರುಳೆನ್ನದೆ ದುಡಿದ ವ್ಯಕ್ತಿ ಅದನ್ನು ತೀರಾ ಕ್ಷುಲ್ಲಕ ಮೌಲ್ಯಕ್ಕೆ ಮಾರಿಯಾನೇ? ಅದಕ್ಕೆ ಅಪ್ಪನ ಸ್ವಾಭಿಮಾನ, ಆತ್ಮವಿಶ್ವಾಸ ಎಡೆಮಾಡಿಕೊಡದು. ಆದರೆ ಅಂಥಾ ಅಪ್ಪನೇ ಒಂದು ದಿನ ಬೆಳ್ಳಂಬೆಳಗ್ಗೆ ಪೋನು ಮಾಡಿ, ’ಮಾರಿಬಿಡುವಾ ಅತ್ಲಾಗಿ... ಇನ್ನೆನಗೆ ಧೈರ್ಯ ಇಲ್ಲೆ...’ ಎಂದಾಗ ನಾನು ಮತ್ತೆ ಯೋಚನೆ ಮಾಡುವ ಶೇ. ೧ ಪಾಲೂ ಉಳಿದಿರಲಿಲ್ಲ. ಎಷ್ಟು ಕಮ್ಮಿಗಾದರೂ ಸರಿ, ಹೆಚ್ಚು ದಿನ ತಳ್ಳದೆ ಕೊಟ್ಟುಬಿಡಬೇಕು ಅಂತ ಶಪಥ ಮಾಡಿಬಿಟ್ಟೆ.
ಎಲ್ಲ ಮುಗಿಯದಿದ್ದರೂ ಮುಗಿಯಬೇಕಾದಷ್ಟು ಮುಗಿಯಿತು ಈಗ. ಇವತ್ತು ಅಪ್ಪ ಮನೆಗೆ ಬಂದಿದ್ದಾರೆ - ಒಂದು ತಂಗೀಸು ಚೀಲ, ಮತ್ತೊಂದು ಊರುಗೋಲು ಹಾಗೂ ಹಿಮಾಲಯದಷ್ಟು ಸಂತೋಷದ ಸಮೇತ.

11 ಕಾಮೆಂಟ್‌ಗಳು:

Ashwini ಹೇಳಿದರು...

Nanna Thevagonda kannugalashte... mooka saakshi !

ಗೀತಾ ಗಣಪತಿ ಹೇಳಿದರು...

ellara mane kathenoo idE reeti.vayassaada appa, amma na joteyallittukondiro neeve punyavantaru.

Hariprasada. A ಹೇಳಿದರು...

tumba chennagide Padma.. aadaru aasti maaruvaga ninna manassina novannu maatra yaargu gottaagada haage baredidya.. Appa ammma chennagirali. Nimma santasa noorkaala irali. Amma bega Hushaaragli.

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

thank you ashwini, geetha ganapathi and hari...

ವಿನಾಯಕ ಕೆ.ಎಸ್ ಹೇಳಿದರು...

sibanti,
ninne yaako andukondidde kano olle maatu, baraha ulla ninu, shreesha ibru pradyapka vrutti hididu baraha lokadinda kaane aadri anta! evattu nodidre olle barahadondoge pratyaksha! facebook moolaka ninna blog ge bande. aapta ennisuva baraha. nija kaiyaare maadida krushi bhumi maaruivudu nanna paaligu uttama ennisalilla. naavu este nagaraabhimukhigaaladru namma oorina hemme ulisuvudu ee bhumi mattu hale mane maatra. oorina runa kaledukonde annistu nange. aadru adu anivaarya. heege barita iru...
-vinayak kodsara

archanashivala ಹೇಳಿದರು...

Mava.. thumba emotional aagi barede.. Great parents n great son.. happy for u..

Anto ಹೇಳಿದರು...

sibanthi I articlennu-aaksmikavaagi nodide, konevarege odisithu... chennagide.

Sukhesha. ಹೇಳಿದರು...

nimmastu adrustavanta ee prpanchadalli innobba illa. Tande, Tayiya kone kaladdalli seve maduva avakasha estu mandige ide ee prapanchadalli

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

Thank you Vinayak.

ಬೆತ್ತಲೆ ಮನಸು(Naked Mind) ಹೇಳಿದರು...

Very very hapy to see ur words dear..though things hav not turned into fence, ur wish to carry the responsibility with great love and dignity wil end up wonderful things to u....wishing u and ur parents hapines together...am sure by reading ur mind ur parents wil b very proud....u knw what...while reading my eyes were realy wet...guess something resembling to my life....sadly my father no more....thats hw many farmers dreams dying...alwa??
barita iri...gd luck :)

Dr.Dinesh

... ಹೇಳಿದರು...

Heart touching... Idannu odi india dalliruva nanna tande tayi nenapayithu. Adastu bega avarannu illege karetarabekendu manasu gogareyuttide..thought provoking writeup.

Yahya
Abu Dhabi