ಬುಧವಾರ, ಜುಲೈ 6, 2011

ಪ್ರಾಥಮಿಕ ಶಿಕ್ಷಣದ ಗೊಂದಲ ಮತ್ತು ಉನ್ನತ ಶಿಕ್ಷಣದ ಕುಹಕ

ಇದು ಜುಲೈ ೦೭, ೨೦೧೧ರ ಹೊಸದಿಗಂತ ಪತ್ರಿಕೆಯಲ್ಲಿ ಪ್ರಕಟವಾಗಿರುವ ಲೇಖನ. ಇದನ್ನು ಈ ಲಿಂಕ್‌ನಲ್ಲಿಯೂ ಓದಬಹುದು.

ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣದಲ್ಲಿನ ಕೊರತೆ ಹಾಗೂ ಸುಧಾರಣೆಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಬೇರೆಬೇರೆ ಮಾಧ್ಯಮಗಳಲ್ಲಿ ಹಲವಾರು ರೀತಿಯ ಚರ್ಚೆಗಳು ನಡೆಯುತ್ತಿವೆ. ಶಾಲೆಗಳಲ್ಲಿ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣದ ಕೊರತೆಯಿಂದಾಗಿ ವರ್ಷದಿಂದ ವರ್ಷಕ್ಕೆ ಫಲಿತಾಂಶ ಕುಸಿಯುತ್ತಿರುವ ಬಗೆಗಿನ ಆತಂಕವೇ ಎಲ್ಲ ಚರ್ಚೆಗಳಲ್ಲಿದ್ದ ಸಾಮಾನ್ಯ ಅಂಶ. ’ಹತ್ತನೇ ತರಗತಿ ಪಾಸಾದ ವಿದ್ಯಾರ್ಥಿಗಳಿಗೆ ಸ್ಪಷ್ಟವಾಗಿ ಓದಲು ಮತ್ತು ಬರೆಯಲು ಬರುವುದೇ ಇಲ್ಲ. ಇವರಿಗೆ ಪಿಯುಸಿಯಲ್ಲಿ ಕನ್ನಡ ಅಕ್ಷರಮಾಲೆ, ಕಾಗುಣಿತ ಒತ್ತಕ್ಷರಗಳನ್ನು ಕಲಿಸಬೇಕಾದ ಅನಿವಾರ್ಯತೆ ಇದೆ’ ಎಂದು ಲೇಖಕರೊಬ್ಬರು ಕಳವಳ ವ್ಯಕ್ತಪಡಿಸಿದ್ದರು.

ವಿಷಯವೇನೋ ನಿಜ. ಆದರೆ ಇದನ್ನು ಕೇವಲ ಪ್ರೌಢಶಾಲೆ ಅಥವಾ ಪಿಯುಸಿ ಹಂತದವರೆಗಿನ ಸಮಸ್ಯೆಯೆಂದು ಮಾತ್ರ ಪರಿಗಣಿಸಿ ಸುಮ್ಮನಾಗುವಂತಿಲ್ಲ. ಏಕೆಂದರೆ, ಪ್ರಾಥಮಿಕ ಶಿಕ್ಷಣದಿಂದ ತೊಡಗಿ ಪದವಿಪೂರ್ವ ಶಿಕ್ಷಣದವರೆಗೆ ಏನೆಲ್ಲ ಸಮಸ್ಯೆಗಳು ಕಾಡುತ್ತವೆಯೋ ಅವು ಮುಂದೆ ಪದವಿ ಹಂತವನ್ನೂ ಬೆಂಬಿಡದೆ ಕಾಡುವುದು ನಿಸ್ಸಂಶಯ. ಪಿಯುಸಿ ಹಂತ ದಾಟಿದಾಕ್ಷಣ ಅಷ್ಟೂ ಸಮಸ್ಯೆಗಳು ಏಕಾಏಕಿ ನಿವಾರಣೆಯಾಗುವುದಂತೂ ದೂರದ ಮಾತು. ಅಲ್ಲದೆ, ಪದವಿ ಹಾಗೂ ಸ್ನಾತಕೋತ್ತರ ಹಂತಗಳಲ್ಲಿ ಅವುಗಳದ್ದೇ ಆದ ಪ್ರತ್ಯೇಕ ಸವಾಲುಗಳು ಹುಟ್ಟಿಕೊಂಡು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸುತ್ತಿರುವುದು ವಾಸ್ತವ ಸಂಗತಿ.

’ಕಾಗುಣಿತ ಕಲಿಸಬೇಕಾದ ಅನಿವಾರ್ಯತೆ ಇದೆ’ ಎಂಬ ಮಾತಿನ ಹಿಂದೆ ಅಪಾರ ಆತಂಕ ಹಾಗೂ ವ್ಯಥೆ ಇರುವುದು ನಿಜ. ಆದರೆ ಇದಕ್ಕಿಂತ ನೋವಿನ ಸಂಗತಿಯೆಂದರೆ ಈ ಪರಿಸ್ಥಿತಿ ಎಸ್.ಎಸ್.ಎಲ್.ಸಿ. ಅಥವಾ ಪಿಯುಸಿ ಮಟ್ಟಕ್ಕೆ ಸೀಮಿತವಾಗಿಲ್ಲ, ಪದವಿ ಮತ್ತು ಸ್ನಾತಕೋತ್ತರ ಹಂತದಲ್ಲೂ ಅಷ್ಟೇ ದಟ್ಟವಾಗಿ ಇದೆ. ತಮ್ಮ ಊರು, ತಾವು ಅಧ್ಯಯನ ನಡೆಸುತ್ತಿರುವ ಕಾಲೇಜಿನ ಹೆಸರನ್ನೂ ತಪ್ಪಿಲ್ಲದೆ ಬರೆಯಲಾಗದ ಅದೆಷ್ಟೋ ಪದವಿ ವಿದ್ಯಾರ್ಥಿಗಳು ನಮ್ಮಲ್ಲಿದ್ದಾರೆ. ಕನ್ನಡದಲ್ಲಿ ಒಂದು ಸರಳ ಅರ್ಥಪೂರ್ಣ ವಾಕ್ಯವನ್ನು ಸ್ವತಂತ್ರವಾಗಿ ಬರೆಯಲಾಗದ ಸ್ನಾತಕೋತ್ತರ ವಿದ್ಯಾರ್ಥಿಗಳೂ ಇದ್ದಾರೆ. ಈ ಹಂತದಲ್ಲೂ ತಾವು ಕಾಗುಣಿತವನ್ನೇ ಸ್ಪಷ್ಟವಾಗಿ ಬರೆಯಲಾಗದಿರುವುದು ಒಂದು ದಯನೀಯ ಪರಿಸ್ಥಿತಿಯೆಂದಾಗಲೀ, ಈಗಲಾದರೂ ಅದನ್ನು ಸರಿಪಡಿಸಿಕೊಂಡು ಹೋಗುವುದು ತಮ್ಮ ಕರ್ತವ್ಯವೆಂದಾಗಲೀ ಭಾವಿಸುವ ಪ್ರೌಢಿಮೆ ಈ ವಿದ್ಯಾರ್ಥಿಗಳಿಗೆ ಬಾರದೇ ಇರುವುದು ಇನ್ನಷ್ಟು ಶೋಚನೀಯ ವಿಚಾರ.

’ಎಷ್ಟೊಂದು ತಪ್ಪು ಬರೆಯುತ್ತಿದ್ದೀರಿ ನೀವು! ಒಂದು ಅಕ್ಷರ ವ್ಯತ್ಯಾಸದಿಂದ ಅರ್ಥ ಎಷ್ಟೊಂದು ಬದಲಾಗುತ್ತದೆ ಗೊತ್ತಾ? ಮುದ್ರಣದಲ್ಲಿರುವುದನ್ನು ನೋಡಿ ನಕಲು ಮಾಡುವಾಗಲೂ ಹೀಗೇಕೆ ತಪ್ಪಾಗುತ್ತದೆ?’ ಎಂದು ಈ ವಿದ್ಯಾರ್ಥಿಗಳನ್ನು ಕೇಳಿದರೆ ಅವರ ಮುಖದಲ್ಲಿ ’ಅಂಥದ್ದೇನಾಯಿತೀಗ?’ ಎಂಬ ಭಾವ. ಸ್ನಾತಕ-ಸ್ನಾತಕೋತ್ತರ ಹಂತದಲ್ಲಾದರೂ ಭಾಷೆಯ ಗಾಂಭೀರ್ಯತೆ ತಟ್ಟದೇ ಹೋದರೆ ಮುಂದಿನ ಗತಿ ಏನು? ಇದೆಲ್ಲ ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ನಡೆದ ತಪ್ಪುಗಳು ಎಂದು ಹೇಳಿ ಕೈತೊಳೆದುಕೊಳ್ಳುವುದು ಸುಲಭವೇನೋ? ಹಾಗಂತ ಇದಕ್ಕೆ ಪರಿಹಾರ ಏನು? ಇದೆಲ್ಲ ಸರಿಯಾಗುವುದು ಯಾವಾಗ?

ಹಾಗಾದರೆ ಅಧ್ಯಾಪಕರೇನು ಮಾಡುತ್ತಿದ್ದಾರೆ? ವಿದ್ಯಾರ್ಥಿಗಳ ಭಾಷೆಯ ಬಗ್ಗೆ ಅವರಾದರೂ ಕೊಂಚ ಗಮನ ಕೊಡಬಾರದಾ ಎಂದರೆ ’ಕಾಲೇಜಿಗೆ ಬಂದ ಮೇಲೆ ಕಾಗುಣಿತ ತಿದ್ದುತ್ತಾ ಕೂರುವುದಕ್ಕಾಗುತ್ತದೆಯೇ? ಅಕ್ಷರ ಕಲಿಸುತ್ತಾ ಕೂರುವುದಾದರೆ ಉಳಿದ ಪಾಠ ಮಾಡುವುದು ಯಾವಾಗ’ ಎಂಬ ಪ್ರಶ್ನೆ ಬಂದೇ ಬರುತ್ತದೆ. ಇದನ್ನೂ ಪೂರ್ತಿ ತಳ್ಳಿಹಾಕಲಾಗದು. ವಿದ್ಯಾರ್ಥಿಗಳು ಡಿಗ್ರಿ ತಲುಪಿದ ಮೇಲೆ ಅವರು ಸಿಲೆಬಸ್ ಅಧಾರದಲ್ಲಿ ಕಲಿಯಬೇಕಾದ್ದು ಸಾಕಷ್ಟಿರುತ್ತದೆ. ಅಲ್ಲದೆ ಪದವಿ-ಸ್ನಾತಕೋತ್ತರ ಹಂತದಲ್ಲಿ ಸ್ವತಃ ವಿದ್ಯಾರ್ಥಿಯೇ ತನ್ನ ಅಧ್ಯಾಪಕನ ಮಾರ್ಗದರ್ಶನ ಬಳಸಿಕೊಂಡು ಸ್ವತಂತ್ರವಾಗಿ ಅಧ್ಯಯನ ನಡೆಸಿಕೊಂಡು ಹೋಗುವ ಪ್ರೌಢಿಮೆ ಗಳಿಸಿಕೊಂಡಿರಬೇಕು ಎಂಬ ಅಪೇಕ್ಷೆಯೂ ಸಹಜವಾದದ್ದೇ. ಹಾಗಂತ ಈ ಅಪೇಕ್ಷೆ ಹೊಂದುವುದಕ್ಕೆ ನಮ್ಮ ಅಧ್ಯಾಪಕವರ್ಗದವರೂ ಸಂಪೂರ್ಣ ನೈತಿಕ ಬಲ ಹೊಂದಿದ್ದಾರೆಯೇ?

’ನಮ್ಮ ವಿದ್ಯಾರ್ಥಿಗಳ ಪಾಲಿಗೆ ಪರೀಕ್ಷೆಯಲ್ಲಿ ಕೇಳುವ ಪ್ರಶ್ನೆಗಳಿಗೆ ಸಂಬಂಧವಿಲ್ಲದ ಯಾವುದೇ ವಿಷಯ ಬೋಧನೆಯೂ ಬೇಡವಾಗಿದೆ. ಇನ್ನು ಶಿಕ್ಷಕರೋ! ಅವರು ಸಹ ತಮ್ಮ ನಿತ್ಯ ಪ್ರವಚನಕ್ಕೆ ಎಷ್ಟು ಬೇಕೋ ಅಷ್ಟು ಓದಿಕೊಂಡು ಬರುವವರು. ಪರೀಕ್ಷೆಗೆ ಬಾರದ ಯಾವ ವಿಷಯವೂ ಮುಖ್ಯವಲ್ಲ ಎಂಬ ವಿಚಾರದಲ್ಲಿ ಅವರ ನಡುವೆ ಸಂಪೂರ್ಣ ಒಮ್ಮತ’ ಎಂದು ದಶಕಗಳ ಹಿಂದೆಯೇ ಡಾ. ಶಿವರಾಮ ಕಾರಂತರು ಕುಟುಕಿದ್ದರು. ಈ ಪರಿಸ್ಥಿತಿಯಲ್ಲಿ ಇಂದು ಏನಾದರೂ ಬದಲಾವಣೆಯಾಗಿದೆಯೇ?
ಸ್ವಂತ ಅಧ್ಯಯನದ ವಿಷಯ ಹಾಗಿರಲಿ, ಭಾಷಾಶುದ್ಧಿಯ ವಿಚಾರದಲ್ಲಾದರೂ ನಮ್ಮ ಎಲ್ಲ ಕಾಲೇಜು ಅಧ್ಯಾಪಕರುಗಳು ತಾವು ಒಂದಿಷ್ಟೂ ತಪ್ಪಿಲ್ಲದೆ ಒಳ್ಳೆಯ ಕನ್ನಡ ಅಥವಾ ಇಂಗ್ಲಿಷ್‌ನ್ನು ಬರೆಯಬಲ್ಲೆವು ಎಂದು ಘೋಷಿಸಿಕೊಳ್ಳುವ ಧೈರ್ಯ ಹೊಂದಿದ್ದಾರೆಯೇ? ಸ್ವತಃ ಒಬ್ಬ ಅಧ್ಯಾಪಕನಾಗಿ ಈ ಪ್ರಶ್ನೆ ಕೇಳುವುದು ಶೋಭೆಯ ಸಂಗತಿಯೇನೂ ಅಲ್ಲವಾದರೂ ಈ ರೀತಿ ಕೇಳಲೇಬೇಕಾಗಿದೆ. ’ಮನದುಂಬಿ ಹಾರೈಸುತ್ತೇನೆ’ ಎಂದು ಇತ್ತೀಚೆಗೆ ಯಾವುದೋ ಒಂದು ಸಂದರ್ಭಕ್ಕೆ ನಾನು ಬರೆದಿದ್ದೆ. ಅದನ್ನು ನೋಡಿದ ಪಿಎಚ್.ಡಿ. ಪೂರೈಸಿರುವ ಕನ್ನಡ ಉಪನ್ಯಾಸಕರೊಬ್ಬರು ಹೌಹಾರಿ ’ಸಾರ್ ತಪ್ಪು ತಪ್ಪು... ಇದು ಮನದುಂಬಿ ಆರೈಸುತ್ತೇನೆ ಎಂದಾಗಬೇಕು...’ ಎನ್ನುತ್ತಾ ಅರೆಕ್ಷಣವೂ ಕಾಯದೆ ತಮ್ಮ ಪೆನ್ನಿನಿಂದ ತಿದ್ದುಪಡಿ ಮಾಡಿಯೇಬಿಟ್ಟರು. ಭಾಷೆ-ಸಾಹಿತ್ಯ ಪಾಠ ಮಾಡುವ ಅಧ್ಯಾಪಕ ಮಹೋದಯರೇ ಹೀಗಾದರೆ ವಿದ್ಯಾರ್ಥಿಗಳ ಗತಿ ಏನು?

ಪದವಿ ಶಿಕ್ಷಣ ಹಂತದ ಉಲ್ಲೇಖಿಸಲೇಬೇಕಾದ ಸಮಸ್ಯೆಯೆಂದರೆ ತರಗತಿಯಲ್ಲಿ ವಿದ್ಯಾರ್ಥಿಗಳ ಗೈರುಹಾಜರಿ. ಫಲಿತಾಂಶ ಗುಣಮಟ್ಟವನ್ನು ಕಾಯ್ದುಕೊಳ್ಳುವ ತುರ್ತು ಇರುವ ಖಾಸಗಿ ಕಾಲೇಜುಗಳಾದರೂ ಶೇ. ೭೫ ಹಾಜರಾತಿ ಕಡ್ಡಾಯ ಮಾಡಿ ವಿದ್ಯಾರ್ಥಿಗಳನ್ನು ತರಗತಿಯಲ್ಲಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತವೆ. ಆದರೆ ಸರ್ಕಾರಿ ಕಾಲೇಜುಗಳ ಅವಸ್ಥೆ ಕಳವಳಕಾರಿಯೇ. ಅದ್ಯಾವ ಕಾರಣಕ್ಕಾಗಿಯೋ, ಪರೀಕ್ಷೆ ಪಾಸಾಗಬೇಕಾದರೆ ತರಗತಿಗೆ ಹೋಗಬೇಕಾಗಿಯೇನೂ ಇಲ್ಲ. ವರ್ಷದ ಆರಂಭದಲ್ಲಿ ಕಾಲೇಜಿಗೆ ಹೇಗಾದರೂ ಅಡ್ಮಿಷನ್ ಪಡೆದುಕೊಂಡು ಪರೀಕ್ಷೆ ಸಮಯಕ್ಕೆ ನಿಗದಿತ ಶುಲ್ಕ ಕಟ್ಟಿ, ಪರೀಕ್ಷೆಗಳಿಗೆ ಹಾಜರಾದರಾಯಿತು. ಹಾಗೂಹೀಗೂ ಪಾಸಾಗಿ ಪ್ರಮಾಣಪತ್ರ ಸಿಕ್ಕಿಬಿಡುತ್ತದೆ ಎಂಬ ಭಾವನೆ ಸಾಕಷ್ಟು ವಿದ್ಯಾರ್ಥಿಗಳಲ್ಲಿ ಇದೆ. ಹೀಗಾಗಿ ಅನೇಕ ಕಾಲೇಜುಗಳಲ್ಲಿ ಹಾಜರಾತಿಯೇ ಇಲ್ಲ. ವಿದ್ಯಾರ್ಥಿಗಳು ತರಗತಿಗೆ ಬಂದರೆ ಬಂದರು ಬಿಟ್ಟರೆ ಬಿಟ್ಟರು ಎಂಬ ಪರಿಸ್ಥಿತಿ ಇದೆ.

ಎಲ್ಲಾ ಕಾಲೇಜುಗಳಲ್ಲೂ ಶೇ. ೭೫ ಹಾಜರಾತಿ ಕಡ್ಡಾಯ ಮಾಡುವುದೊಂದೇ ಇದಕ್ಕೆ ಪರಿಹಾರ. ನಿಗದಿತ ಹಾಜರಾತಿ ಇಲ್ಲದೆ ಪರೀಕ್ಷೆ ಬರೆಯುವುದಕ್ಕೆ ಅವಕಾಶ ಇಲ್ಲ ಎಂಬ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದರೆ ಬಹುತೇಕ ಸಮಸ್ಯೆಗಳು ತಾವಾಗಿಯೇ ಪರಿಹಾರಗೊಳ್ಳುತ್ತವೆ. ಅನಿವಾರ್ಯವಾಗಿಯಾದರೂ ನಿಯಮಿತವಾಗಿ ತರಗತಿಗೆ ಹಾಜರಾಗುವುದರಿಂದ ಕಾಲೇಜಿನಲ್ಲಿ ಕಲಿಕಾ ಪರಿಸರ ಸ್ವಾಭಾವಿಕವಾಗೇ ಅಭಿವೃದ್ಧಿಯಾಗುತ್ತದೆ; ಫಲಿತಾಂಶದ ಗುಣಮಟ್ಟವೂ ಸುಧಾರಿಸುತ್ತದೆ. ವಿದ್ಯಾರ್ಥಿಗಳಲ್ಲಿ ನಿಧಾನವಾಗಿಯಾದರೂ ಅವಶ್ಯವಿರುವ ಕಲಿಕಾ ಆಸಕ್ತಿ ವೃದ್ಧಿಸುತ್ತದೆ.

ಹಾಗಂತ ಕಾಲೇಜು ಓದುವವರಲ್ಲಿ ಸಾಕಷ್ಟು ಬಡವರು, ಕೂಲಿಕಾರರ ಮಕ್ಕಳಿದ್ದಾರೆ. ಅವರು ದುಡಿದೇ ಓದುವ ಮಂದಿ. ಈ ಕಡ್ಡಾಯ ಹಾಜರಾತಿಯಿಂದ ಅವರು ಸಂಕಷ್ಟಕ್ಕೀಡಾಗುತ್ತಾರೆ ಎಂಬ ಮಾತಿದೆ. ನಿಜ, ಆದರೆ ಇದು ಪರಿಹರಿಸಲಾಗದ ಸಮಸ್ಯೆಯೇನೂ ಅಲ್ಲ. ಪ್ರತೀದಿನ ತಾಸುಗಟ್ಟಲೆ ದುಡಿದು ಅದರೊಂದಿಗೆ ಕಲಿಕೆಗೂ ವಿಮುಖರಾಗದೆ ಅದ್ಭುತವೆನಿಸುವ ಫಲಿತಾಂಶ ತರುವ ಛಲಗಾರ ಪ್ರಾಮಾಣಿಕ ವಿದ್ಯಾರ್ಥಿಗಳು ನಮ್ಮೊಂದಿಗಿರುವುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಇವೆಲ್ಲದರ ಜೊತೆಗೆ ಅನೇಕ ಸರ್ಕಾರಿ ಕಾಲೇಜುಗಳು ಮೂಲಭೂತ ಸೌಕರ್ಯಗಳಿಂದ ವಂಚಿತವಾಗಿವೆ. ಮುಖ್ಯವಾಗಿ ಅಗತ್ಯ ಕಟ್ಟಡ, ತರಗತಿ ಕೊಠಡಿ, ಶೌಚಾಲಯ ಇತ್ಯಾದಿಗಳಿಲ್ಲದಿರುವುದೇ ಬಹುದೊಡ್ಡ ಕೊರತೆಯಾಗಿದೆ. ಇಷ್ಟವೆನಿಸಿದಾಗೆಲ್ಲ ಹೊಸ ಕಾಲೇಜು, ವಿಶ್ವವಿದ್ಯಾನಿಲಯಗಳ ಸ್ಥಾಪನೆಯ ಬಗ್ಗೆ ಆಶ್ವಾಸನೆ ನೀಡುವುದು, ಮಂಜೂರು ಮಾಡುವುದು ನಮ್ಮಲ್ಲಿ ಒಂದು ಫ್ಯಾಶನ್ ಆಗಿಬಿಟ್ಟಿದೆ. ಅವುಗಳಿಗೆ ಅಗತ್ಯ ಜಾಗ ಇದೆಯೇ, ಕಟ್ಟಡ ಇದೆಯೇ, ಇಲ್ಲವಾದರೆ ಅವುಗಳ ಒದಗಣೆ ಹೇಗೆ ಎಂದು ಯೋಚನೆ ಬರುವುದೇ ಎರಡು ವರ್ಷ ದಾಟಿದ ಮೇಲೆ. ಇವೆಲ್ಲ ಉನ್ನತ ಶಿಕ್ಷಣದ ಕುಹಕಗಳಲ್ಲದೆ ಇನ್ನೇನು?

1 ಕಾಮೆಂಟ್‌:

Nanda Kishor B ಹೇಳಿದರು...

ಒಳ್ಳೆ ಲೇಖನ ಭಾವಾ...
ನಿಜ..

{ ’ಮನದುಂಬಿ ಹಾರೈಸುತ್ತೇನೆ’ ಎಂದು ಇತ್ತೀಚೆಗೆ ಯಾವುದೋ ಒಂದು ಸಂದರ್ಭಕ್ಕೆ ನಾನು ಬರೆದಿದ್ದೆ. ಅದನ್ನು ನೋಡಿದ ಪಿಎಚ್.ಡಿ. ಪೂರೈಸಿರುವ ಕನ್ನಡ ಉಪನ್ಯಾಸಕರೊಬ್ಬರು ಹೌಹಾರಿ ’ಸಾರ್ ತಪ್ಪು ತಪ್ಪು... ಇದು ಮನದುಂಬಿ ಆರೈಸುತ್ತೇನೆ ಎಂದಾಗಬೇಕು...’ ಎನ್ನುತ್ತಾ ಅರೆಕ್ಷಣವೂ ಕಾಯದೆ ತಮ್ಮ ಪೆನ್ನಿನಿಂದ ತಿದ್ದುಪಡಿ ಮಾಡಿಯೇಬಿಟ್ಟರು} - ಇದರ ಓದಿ ನೆಗೆ ಬಂತು... ಹೀಂಗಿಪ್ಪೋರೂ ಇರ್ತವಾ ಹೇಳಿ..

ಕೋಲೇಜಿಲ್ಲಿ ಇಪ್ಪಗ ನೆಡದ ಒಂದು ಘಟನೆ ನೆಂಪಾತು..
ಒಂದು ಎನ್ ಎಸ್ ಎಸ್ ಕಾರ್ಯಕ್ರಮ,
ಸ್ವಾಗತ ಭಾಶಣ ಮಾಡುವವ ಬಾಯಿತಪ್ಪಿ ಹೇಳಿದ - "ನಮ್ಮೀ ಕಾರ್ಯಕ್ರಮಕ್ಕೆ ಅಥಿತಿಗಳಾಗಿ ಬಂದಿರುವ ---ರೇ ನಿಮಗೆ ಹಾದರದ ಸ್ವಾಗತ" ಹೇಳಿ. ಅವ ಬಾಯಿತಪ್ಪಿ ಹೇಳಿದ್ದಾದಿಕ್ಕು, ಆದರೆ ಅದು ಆರಿಂಗೂ ಗೊಂತಾಯಿದಿಲ್ಲೆ ಹೇಳುದು ಮುಖ್ಯ..

ಹೀಂಗೂ ಇರ್ತವು..