ಶನಿವಾರ, ಆಗಸ್ಟ್ 15, 2009

ನೇಗಿಲಯೋಗಿ, ಅಪ್ಪ ಮತ್ತು ಸ್ವಾತಂತ್ರ್ಯೋತ್ಸವ


"ಉಳುವಾ ಯೋಗಿಯ ನೋಡಲ್ಲಿ" ಎಂದು ಹಾಡಬೇಕೆಂದು ನಿರ್ಧರಿಸಿತು ಸರ್ಕಾರ. "ಅಳುವಾ ರೋಗಿಯ ನೋಡಲ್ಲಿ" ಎಂದು ಹಾಡಬೇಕೆನಿಸುತ್ತಿದೆ ಎಂದಿತು ಬುದ್ಧಿಜೀವಿಗಳ ಗಡಣ. ನಾನು ಆ ಬಗ್ಗೆ ವಿಶೇಷವಾಗಿ ತಲೆಕೆಡಿಸಿಕೊಂಡವನಲ್ಲ. ಆದರೆ, ಈ ಬೆಳಗ್ಗೆ ಮಣೇಕ್ ಶಾ ಪರೇಡ್ ಮೈದಾನದಲ್ಲಿ ಡಾ. ಅಶ್ವಥ್ ನೇತ್ರ್ ತ್ವದ ಮಕ್ಕಳ ಸಮೂಹ "ಉಳುವಾ ಯೋಗಿಯ ನೋಡಲ್ಲಿ" ಎಂದು ಉಚ್ಛಸ್ಥಾಯಿಯಲ್ಲಿ ಹಾಡುತ್ತಿದ್ದರೆ ಅತ್ತ ನೇಗಿಲನ್ನೂ ಹಿಡಿಯಲಾಗದೆ ಇತ್ತ ಅದನ್ನು ಬಿಟ್ಟು ಪೇಟೆಗೂ ಬರಲಾಗದೆ ಒದ್ದಾಡುತ್ತಿರುವ ಎಂಭತ್ತು ವರ್ಷದ ಅಪ್ಪನ ನೆನಪಾಗಿ ಕಣ್ಣಂಚಲ್ಲಿ ನೀರಾಡಿದ್ದಂತೂ ಅನ್ನದ ಬಟ್ಟಲಿನಷ್ಟೇ ಸತ್ಯ.


ನನಗರಿವಿಲ್ಲದಂತೆಯೇ ಕೆಲ ವರ್ಷಗಳ ಹಿಂದೆ ಬರೆದ ಕವನವೊಂದು ಮತ್ತೆ ಮತ್ತೆ ನೆನಪಾಗಿ ಕಾಡಿತು. ನಾನು ಬಹಳ ಸಮಯದ ಬಳಿಕ ಒಬ್ಬನೇ ಕುಳಿತು ಬಿಕ್ಕಳಿಸಿದೆ. "ತೀರ್ಥರೂಪರಿಗೆ..." ಎಂಬುದು ಆ ಕವನದ ಶೀರ್ಷಿಕೆ. (ಪ್ರತ್ಯೇಕವಾಗಿ ಅದನ್ನು ಮುಂದೆ ಪ್ರಕಟಿಸುವೆ).


ಹುಟ್ಟಿದ ಎರಡೇ ವರ್ಷಕ್ಕೆ ತನ್ನ ಅಮ್ಮನನ್ನು ಕಳಕೊಂಡರಂತೆ ಅಪ್ಪ. ಹೊಟ್ಟೆ ಪಾಡು ಎಂಟನೇ ವರ್ಷಕ್ಕೆ ಮನೆ ಬಿಟ್ಟು ಹೊರಡಲು ತಾಕೀತು ಮಾಡಿತಂತೆ. ಅಲ್ಲಿಂದ ಸತತ ನಲವತ್ತು ವರ್ಷಗಳ ಕಾಲ ಯಾರ್ಯಾರದೋ ತೋಟ-ಮನೆಗಳಲ್ಲಿ ಜೀತ. ಮದುವೆಯಾದಾಗ ಅಪ್ಪನಿಗೆ ೪೦ ದಾಟಿತ್ತಂತೆ. ಭವಿಷ್ಯಕ್ಕಾಯಿತು ಎಂದು ತಾನು ದುಡಿಯುತ್ತಿದ್ದ "ಧಣಿ"ಯ ಜಮೀನಿನ ಪಕ್ಕದಲ್ಲೇ ಇದ್ದ ಸರ್ಕಾರಿ ಜಾಗವನ್ನು ಸಜ್ಜುಗೊಳಿಸಿಕೊಂಡರಂತೆ. ಕ್ರಮೇಣ ವಾಸ್ತವ್ಯ ಅಲ್ಲಿಗೆ ಬದಲಾಯಿತು. ಆ ಬಳಿಕದ್ದು ಅಪ್ಪ-ಅಮ್ಮ ಜತೆಯಾಗಿ ರಕ್ತ ಬೆವರು ಬಸಿದ ಕನಸುಗಳ ಮಹಾಸತ್ರ. ಎಲ್ಲ ಸಂಕಟಗಳ ನಡುವೆಯೂ ಮೂವರು ಅಕ್ಕಂದಿರು ಮತ್ತು ನಾನು ಅಜ್ಜನ ಮನೆಯ ಒತ್ತಾಸೆಯಲ್ಲಿ ಕಲಿತೆವು ಬಲಿತೆವು. ತನ್ಮಧ್ಯೆ ಅಪ್ಪ ಹಾಸಿಗೆ ಹಿಡಿದರು. ಚಿಮಿಣಿ ದೀಪಕ್ಕೆ ಕಣ್ಣೀರು ಎರೆದೇ ಅಮ್ಮ ಹತ್ತಾರು ಇರುಳುಗಳನ್ನು ಬೆಳಗು ಮಾಡಿದರು. ಆಪರೇಷನ್ ಆಯಿತು. ಸಾವಿರಗಟ್ಟಲೆ ಮುಗಿಯಿತು. ಮೂರು ಹೊತ್ತು ಗಂಜಿ ಕುಡಿಯುವುದಕ್ಕೂ ಗತಿಯಿಲ್ಲದ ಆ ಹೊತ್ತಿನಲ್ಲಿ ಅಷ್ಟೊಂದು ಹಣ ಹೇಗೆ ಒಟ್ಟಾಯಿತೋ ಅಪ್ಪ ಹೇಗೆ ಮತ್ತೆ ಮನೆಗೆ ಮರಳಿದರೋ ಅದೊಂದು ವಿಸ್ಮಯ.


ಎಲ್ಲವೂ ಒಂದು ತಹಬದಿಗೆ ಬಂತೆನ್ನುವ ಹೊತ್ತಿಗೆ ಬಡಿದದ್ದು ಗಡಿ ತಕರಾರಿನ ಸಿಡಿಲು. ಅಷ್ಟು ವರ್ಷ ಚಾಕರಿ ಮಾಡಿಸಿಕೊಂಡ ಧಣಿ ಮಹಾಶಯನೇ ವರ್ಷಾನುಗಟ್ಟಲೆಯ ಬೆವರಿನ ಫಲಕ್ಕೆ ಕನ್ನವಿಟ್ಟ. ಅರ್ಧ ತೋಟ ಲಪಟಾಯಿಸಿದ. ಅಪ್ಪ ಕುಸಿದು ಹೋದರು. ಇನ್ನೂ ಶಾಲೆಗೆ ಹೋಗುತ್ತಿದ್ದ ನನ್ನನ್ನೂ ಸಣ್ಣಕ್ಕನನ್ನೂ ಕರೆದುಕೊಂಡು ತಿಂಗಳುಗಟ್ಟಲೆ ತಲಕಾವೇರಿ ಭಾಗಮಂಡಲ ಎಂದು ಹುಚ್ಚರಂತೆ ಅಲೆದರು. ಇತ್ತ ಅಮ್ಮ ಆ ಗೊಂಡಾರಣ್ಯದಲ್ಲಿ ಒಬ್ಬಂಟಿಯಾಗಿ ರೋದಿಸಿದರು. ಕೋರ್ಟು ಕಚೇರಿ ಪೋಲೀಸ್ ಸ್ಟೇಷನ್ ಅಂತ ಅಪ್ಪ ಮತ್ತೆ ಅಲೆದರು. ಇಷ್ಟರ ನಡುವೆಯೂ ಮೂವರು ಅಕ್ಕಂದಿರನ್ನು ಗೌರವಯುತವಾಗಿ ಮದುವೆ ಮಾಡಿಸಿದರು. "ನೀವು ತಿರುಗಾಡಿದ್ದು ಸಾಕು, ಇನ್ನು ಜಾಗದ ವಿಚಾರ ನಾನು ನೋಡಿಕೊಳ್ಳುವೆ" ಎಂದೆ ವಿದ್ಯಾಭ್ಯಾಸ ಮುಗಿಸಿದ ನಾನು. ನನಗೆ ಚೆನ್ನಾಗೇ ಗೊತ್ತಿತ್ತು ಅವರಿಗೆ ಬೇಕಿದ್ದುದು ಅದಲ್ಲ, ನನ್ನ ಸಾಮೀಪ್ಯ ಎಂಬುದು. ಆದರೆ ನೇಗಿಲ ಬಗ್ಗೆ ಅಪಾರ ಗೌರವವಿದ್ದಾಗ್ಯೂ ಆ ಸಂದರ್ಭ ನಾನು ಹೊರಗೆ ದುಡಿಯುವುದು ಅನಿವಾರ್ಯವಿತ್ತು. ದಶಕಗಳ ಕಾಲ ಇರುಳು ಹಗಲೆನ್ನದೆ ಬೇಸಾಯದ ತಪಸ್ಸು ಮಾಡಿದ ಅಪ್ಪ-ಅಮ್ಮ ಸಾಲದ ಸರಂಜಾಮಲ್ಲದೆ ಬೇರೇನನ್ನೂ ಕೂಡಿಡಲಾಗದೆ ಇದ್ದದ್ದು ನನಗೆ ಚೆನ್ನಾಗಿ ಅರಿವಿತ್ತು. ಇಷ್ಟು ವರ್ಷಗಳ ನಂತರವೂ ಜಾಗದ ತಕರಾರು ಹಾಗೆಯೇ ಇದೆ. ಇಂದಲ್ಲ ನಾಳೆ ಅದು ಮುಗಿಯುತ್ತದೆ, ಈ ಸುಳಿಯಿಂದ ಹೊರಬಂದು ಮಗನೊಂದಿಗೆ ನೆಮ್ಮದಿಯ ಬದುಕ ಸಂಜೆಗಳನ್ನು ಕಳೆಯಬಹುದೆಂಬ ಕನಸಿನೊಂದಿಗೆ ಅವರು ದಿನದೂಡುತ್ತಲೇ ಇದ್ದಾರೆ ಕರೆಂಟು, ಟೀವಿ, ಪತ್ರಿಕೆ ತಲುಪದ ಆ ವಿಚಿತ್ರ ದ್ವೀಪದಲ್ಲಿ. ಅವರೀಗ ಸ್ವಾತಂತ್ರ್ಯೋತ್ಸವಕ್ಕೆ ಕಾಯುತ್ತಿದ್ದಾರೆ.


ಹೇಳಿ, ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ ನಾನು ಕಣ್ಣೀರಾಗದೆ ಉಳಿಯಲು ಹೇಗೆ ಸಾಧ್ಯ?

10 ಕಾಮೆಂಟ್‌ಗಳು:

thandacool ಹೇಳಿದರು...

ಮನಸ್ಸಿಗೆ ತಟ್ಟುತ್ತದೆ ಸಿಬಂತಿ. ಉಳುವ ಯೋಗಿಯ ಜೀವನದ ನೆಗಿಲು ತುಕ್ಕು ಹಿಡಿದು ಮೂಲೆ ಸೇರಿರುವಾಗ ಬೆಂಗಳೂರಿನ ಮೈದಾನದಲ್ಲಿ ಹಾಡು ಹೇಳಿದರೆ ಏನು ಪ್ರಯೋಜನ? ಬೆವರು ಹರಿಸುವ ಮಂದಿ ರಕ್ತ ಹರಿಸಿದರು.... ಇಂದು ಮುಂದು ಎಂದೆಂದು ಹಾಗೇ.... ರೈತರ ಹೆಸರಿನಲ್ಲಿ ಶ್ರೀಮಂತರಾಗುವ ಮಂದಿ ಬಹಳ. ಇದನ್ನು ಓದಿ ಮನಸ್ಸಿಗೆ ತುಂಬಾ ಬೇಸರವಾದದ್ದು ಸತ್ಯ. ಆದರೂ ಸತ್ಯವನ್ನು ಒಪ್ಪಿಕೊಳ್ಳಲೇ ಬೇಕು.

Pandit Sri Subrahmanya Bhat ಹೇಳಿದರು...

ನಿಜವಾಗಿಯು ನೀನು ಬರೆದ ಸತ್ಯ ನನ್ನ ಕಣ್ಣಲ್ಲೂ ನೀರಾಡುವಂತೆ ಮಾಡಿತು. ಇದಕ್ಕೆ ಬಹು ಕಾರಣವಿದೆ ಅದನ್ನು ಮುಂದೊಂದು ದಿನ ಹೇಳುವೆ.

Unknown ಹೇಳಿದರು...

Hi Sibanthi,

Always your writing will be very good. It does not matter whether you write in English or Kannada. I felt very sad as I have gone through it. I also come across few things similar to that one. Anyhow let us go ahead with all difficulties. Let us have the happy and beautiful life ahead. Let me pray for you to come best of the things in life. All the best your blog.

venky@IISc

minchulli ಹೇಳಿದರು...

"ಉಳುವಾ ಯೋಗಿಯ ನೋಡಲ್ಲಿ ಎಂಬ ಆರ್ದ್ರ ದನಿ ಕೇಳಿದಾಗಲೂ ನಾನು ಕಣ್ಣೀರಾಗದೆ ಉಳಿಯಲು ಹೇಗೆ ಸಾಧ್ಯ? " ನಿಜ ಅವರ ಮಗನಾದ ನಿನಗೆ ಮಾತ್ರವಲ್ಲ.. ಅವರ ಸಾಮೀಪ್ಯದಲ್ಲಿ ಒಂದಷ್ಟು ದಿನ ಕಳೆದ, ನಿನ್ನಮ್ಮನ ಕೈ ತುತ್ತು ತಿಂದ ನಂಗೂ ಕಣ್ಣೀರು ಚಿಮ್ಮಿದ್ದು ಸುಳ್ಳಲ್ಲ.. ಮಕ್ಕಳಿಗಾಗಿ ಮಾತ್ರ ಎಂಬಂತೆ ಬದುಕು ಸವೆಸಿದ ಅವರದು ಯೋಗಿಗಳ ಬದುಕೇ ಹೌದು. ಈ ಕ್ಷಣ ಹೆಚ್ಚು ಬರೆಯಲು ಸಾಧ್ಯವಾಗ್ತಾ ಇಲ್ಲ...

ನಿನ್ನ "ತೀರ್ಥರೂಪರಿಗೆ..." ಕವನವನ್ನು ಅದೆಷ್ಟು ಬಾರಿ ಓದಿಕೊಂಡೆ ಲೆಕ್ಕವಿಲ್ಲ. (ಆ ಕವನಕ್ಕೆ ಕ್ರೈಸ್ಟ್ ಕಾಲೇಜಿನ ಬಹುಮಾನವೂ ಬಂದ ನೆನಪು)

ಹೀಗೆ ಬರೆಯುತ್ತಿರು.. ಜೀವನಾನುಭವ, ಜೀವ ಭಾವ ಎಲ್ಲ ತುಂಬಿಕೊಂಡ ನಿನ್ನ ಬರಹಗಳನ್ನು ಇಷ್ಟು ದಿನ ಮಿಸ್ ಮಾಡಿಕೊಳ್ಳುತ್ತಿದ್ದ ನಂಗೆ ನೀ ಮತ್ತೆ ಬಂದಿದ್ದು ತುಂಬಾ ಖುಷಿ...

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

* ಪ್ರಿಯ ಥನ್ಡಾಕೂಲ್, ಸತ್ಯ ತುಂಬ ಶಾರ್ಪು ಅಲ್ವ? ಓದಿ ಪ್ರತಿಕ್ರಿಯಿಸಿದ್ದಕ್ಕೆ ಥ್ಯಾಂಕ್ಸ್. ಬಿಡುವಾದಾಗ ಓದುತ್ತಿರಿ.

* ಪ್ರಿಯ ಅಣ್ಣ, ಅಪ್ಪನ ಬಗ್ಗೆ ನನಗಿಂತ ಜಾಸ್ತಿ ನಿಂಗೇ ಗೊತ್ತು. ನಾನು ಅಪ್ಪನ ಬಯಾಗ್ರಫಿ ಬರೆವ ಹೊತ್ತು ನಿನ್ನ ಸಹಾಯ ಬೇಕೇ ಬೇಕಾಗುತ್ತೆ!

* Dear Venky, your words were so much encouraging. thank you. keep visiting the blog.

* ಪ್ರಿಯ ಮಿಂಚುಳ್ಳಿ, ಮುಕ್ತ ಮಾತಿಗೆ ನಮೋ. ಪ್ರೋತ್ಸಾಹದ ಮಾತು ಖುಷಿ ಕೊಟ್ಟಿತು.

ಏಕಾಂತ ಹೇಳಿದರು...

ನಮಸ್ತೆ ಪದ್ಮನಾಭ್...
ಎಲ್ಲೋ ಅಲೆದಾಡುತ್ತಿದ್ದವನ ಧಕ್ಕನೆ ಹಿಡಿದು ನಿಲ್ಲಿಸಿತು ನಿಮ್ಮ ಬರಹ. ಹೇಳೋದಕ್ಕೆ ತೋಚುತ್ತಿಲ್ಲ. ಬರವಣಿಗೆ ಶೈಲಿ ಹಾಗೇ ಇದೆ. ಅಮ್ಮನ ಪ್ರೀತಿಯಲ್ಲಿ ಅಪ್ಪನ ಆದರ್ಶಗಳ ಜೊತೆಯಿದ್ದ ಪ್ರತಿಯೊಬ್ಬರಿಗೂ ಲೇಖನ ಆಪ್ತವಾಗಿತ್ತದೆ.

ಇನಿದನಿ ಹೇಳಿದರು...

yaako illi appa yemballella amma yendu serisidare nanna katheyu ade yeno...

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

ಹೌದು ಇನಿದನಿ, ಬದುಕು ಎಷ್ಟು ಸತ್ಯ!

ashoka vardhana gn ಹೇಳಿದರು...

‘ನೇಗಿಲ ಹೊತ್ತ ರೈತ’ ರಾಜಕೀಯ ಪಕ್ಷ ಒಂದರ ಗುರುತಾಗಿದ್ದ ಕಾಲ ಕುಂದಾಪ್ರ ಕಡೆಯ ಮಿತ್ರರೊಬ್ಬರ ಮಕ್ಕಳು ಶಿಶುಪ್ರಾಸ ಸೇರಿಸುತ್ತಿದ್ದದ್ದು ನೆನಪಾಯ್ತು - ಹೊಟ್ಟೆಗಿಟ್ಟಿಲ್ದೆ ಸಾಯ್ತಾ. ಕೊನೆಗುಳಿದ ಭಾವ ಛೇ.
ಅಶೋಕವರ್ಧನ

ವಿಜಯ್ ಜೋಶಿ ಹೇಳಿದರು...

Dear Sibanthi Anna,

I read this blog post for two times. The first time when I read this was a much long ago. I couldn't write any comment to this post then as my hands were struck with deep compassion for a fellow farmer.

But, now I am reading this after you are selected as a lecturer for the Tumkur University. Now it feels my nerves with joy and pride to say that you have achieved something remarkable. As a person who knows something about your struggle to reach out to this post, I can say with cent percent confidence that hard work and perseverance never fails and your life is a living testimony for this.

Wishing you all the best.