ಶುಕ್ರವಾರ, ಏಪ್ರಿಲ್ 30, 2021

ಗುರುವಿನ ಸ್ಥಾನಕ್ಕೆ ಗೌರವ ತಂದ ಗಣರಾಜ ಕುಂಬ್ಳೆ

ಏಪ್ರಿಲ್ 30, 2021ರ 'ಹೊಸದಿಗಂತ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ.

-------------------------------

ಸಾವಿರಾರು ವಿದ್ಯಾರ್ಥಿಗಳ ಪ್ರೀತಿಯ ಅಧ್ಯಾಪಕ, ಯಕ್ಷಗಾನ ಕಲಾವಿದ, ಲೇಖಕ, ಶ್ರೀರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಶ್ರೀ ಗಣರಾಜ ಕುಂಬ್ಳೆ ಇದೇ ಏಪ್ರಿಲ್  30ರಂದು ನಿವೃತ್ತಿ ಹೊಂದುತ್ತಿದ್ದಾರೆ. ಅವರಿಗೊಂದು ಅಕ್ಷರ ಗೌರವ.

-------------------------------

ಎರಡು ದಶಕಗಳ ಹಿಂದಿನ ಮಾತು. ನಾವಾಗ ರಾಮಕುಂಜದಲ್ಲಿ ಪಿಯುಸಿ ಓದುತ್ತಿದ್ದೆವು. ನಮ್ಮ ಕನ್ನಡ ಉಪನ್ಯಾಸಕರೊಂದಿಗೆ ನಾವು ಒಂದಷ್ಟು ವಿದ್ಯಾರ್ಥಿಗಳು ಮಂಗಳೂರಿಗೆ ಹೋಗಿದ್ದೆವು. ಹಿಂತಿರುಗುವ ದಾರಿಯಲ್ಲಿ ಗುರುಗಳು ನಮ್ಮನ್ನು ನರಹರಿ ಪರ್ವತಕ್ಕೆ ಕರೆದೊಯ್ದಿದ್ದರು. ಅಲ್ಲಿ ಅರ್ಚಕರೊಬ್ಬರು ದೇವಸ್ಥಾನದ ಸುತ್ತಲಿನ ಕೆಲವು ಸ್ಥಳಗಳನ್ನು ನಮಗೆ ಪರಿಚಯಿಸಿದರು. ಹಿಂದಿನಿಂದಲೇ ಬರುತ್ತಿದ್ದ ಗುರುಗಳನ್ನು ನಾನು ಬಾವಿಯೊಂದರ ಸಮೀಪ ಕರೆದು ‘ಸರ್, ಇದು ಗಧಾತೀರ್ಥವಂತೆ’ ಎಂದು ಹೇಳಿದೆ. ತಕ್ಷಣ ನನ್ನನ್ನು ತಡೆದ ಅವರು ‘ಅದು ಗಧಾತೀರ್ಥವಲ್ಲಪ್ಪಾ,  ಗದಾತೀರ್ಥ. ಮಹಾಪ್ರಾಣ ಅಲ್ಲ, ಅಲ್ಪಪ್ರಾಣ. ಗಧಾ ಎಂದರೆ ಕತ್ತೆ ಅಂತ ಅರ್ಥ’ ಎಂದು ಮುಗುಳ್ನಗುತ್ತಲೇ ತಿದ್ದಿದರು. ‘ಹೌದಾ ಸರ್? ಹಾಗಾದರೆ ಗಧಾಯುದ್ಧ, ಗಧಾಪ್ರಹಾರ ಅಂತೆಲ್ಲ ಹೇಳಬಾರದಾ?’ ಅಂತ ಕೇಳಿದೆ. ‘ಇಲ್ಲ, ಹಾಗೆ ಹೇಳಬಾರದು. ಅಪಾರ್ಥ ಆಗುತ್ತದೆ’ ಎಂದು ಮತ್ತೊಂದಿಷ್ಟು ವಿವರ ನೀಡಿದರು.

ಅವರು ಗಣರಾಜ ಕುಂಬ್ಳೆಯವರು. ಪಾಠ ಮಾಡಲು ಅವರಿಗೆ ತರಗತಿ ಕೊಠಡಿಯೇ ಬೇಕಿರಲಿಲ್ಲ. ಎಲ್ಲೆಲ್ಲಿ ವಿದ್ಯಾರ್ಥಿಗಳನ್ನು ತಿದ್ದಬಹುದೋ ಅಲ್ಲೆಲ್ಲ ತಿದ್ದುತ್ತಲೇ ಇದ್ದರು. ನಿಂತದ್ದೇ ತರಗತಿ, ಮಾಡಿದ್ದೇ ಪಾಠ. ನಾನಂತೂ ಅವರ ಪಾಠ ಕೇಳಿದ ಮೊದಲ ದಿನದಿಂದಲೇ ಅವರ ಪರಮ ಅಭಿಮಾನಿಯಾಗಿದ್ದೆ. ಅವರ ತರಗತಿಗಳಿಗಾಗಿ ಕಾದು ಕೂತಿರುತ್ತಿದ್ದೆ. ಅವರ ಪ್ರತೀ ತರಗತಿಯಲ್ಲೂ ಏನಾದರೊಂದು ಹೊಸದನ್ನು ಕಲಿಯುವುದಿತ್ತು. ಯಕ್ಷಗಾನಕ್ಕೋ, ತಾಳಮದ್ದಳೆಗೋ, ಯಾವುದೋ ಸಾಹಿತ್ಯ ಸಂಬಂಧೀ ಕಾರ್ಯಕ್ರಮಕ್ಕೋ ಅವರು ಹೋಗುವಾಗೆಲ್ಲ ‘ಬರ್ತೀಯಾ’ ಅಂತ ಕೇಳುತ್ತಿದ್ದುದುಂಟು. ನಾನು ಅವರ ಬೆನ್ನಿಗಂಟಿಕೊಂಡು ಓಡಾಡುತ್ತಿದ್ದೆ. ಅವರೊಂದಿಗಿದ್ದ ಪ್ರತೀಕ್ಷಣವೂ ಹೊಸದೊಂದು ಪಾಠ.

ಅಧ್ಯಾಪಕರಾಗಿ ನನಗೆ ಅವರೊಂದು ಮಹಾಮಾದರಿಯಾಗಿದ್ದರು. ನೂರು ವಿದ್ಯಾರ್ಥಿಗಳಿದ್ದ ತರಗತಿಯಲ್ಲೂ ಅವರಿದ್ದಷ್ಟು ಹೊತ್ತು ತಂಟೆ ತಕರಾರುಗಳಿಲ್ಲ. ಗುಸುಗುಸು ಪಿಸಪಿಸ ಇಲ್ಲ. ಮುಂದಿನ ಬೆಂಚು ಹಿಂದಿನ ಬೆಂಚೆಂಬ ವ್ಯತ್ಯಾಸವಿಲ್ಲದೆ, ಅಷ್ಟೂ ಮಂದಿ ಕಣ್ಣುಕಿವಿಯರಳಿಸಿ ಪಾಠ ಕೇಳುವಂತೆ ಮಾಡುವ ವಿಶಿಷ್ಟ ಶಕ್ತಿ ಅವರಲ್ಲಿತ್ತು. ಅವರದ್ದೇ ಒಂದು ವಿಶಿಷ್ಟ ಮ್ಯಾನರಿಸಂ ಇತ್ತು. ತರಗತಿಯಲ್ಲಿದ್ದಷ್ಟೂ ಹೊತ್ತು ಮುಖದಲ್ಲಿ ಮಂದಹಾಸ ತಪ್ಪುತ್ತಿರಲಿಲ್ಲ. ಸ್ವತಃ ಯಕ್ಷಗಾನ ಕಲಾವಿದರಾದ್ದರಿಂದ ಅವರ ಮಾತು, ಹಾವ-ಭಾವ ಎಲ್ಲದರಲ್ಲೂ ಯಕ್ಷಗಾನದ ಛಾಪು ದಟ್ಟವಾಗಿಯೇ ಇತ್ತು. ರಾಘವಾಂಕ, ಕುಮಾರವ್ಯಾಸ, ಲಕ್ಷ್ಮೀಶ ಮೊದಲಾದ ಕವಿಗಳ ಕಾವ್ಯಭಾಗಗಳ ಕುರಿತ ಅವರ ಪಾಠಗಳಂತೂ ಯಾವತ್ತಿಗೂ ಸ್ಮರಣೀಯ. ‘ಪುರದ ಪುಣ್ಯಂ ಪುರುಷ ರೂಪಿಂದೆ ಪೋಗುತಿದೆ’ ಎಂದವರು ವರ್ಣಿಸುತ್ತಿದ್ದರೆ ಹರಿಶ್ಚಂದ್ರ ತರಗತಿಯಲ್ಲೇ ಬಂದು ನಿಂತುಬಿಡುತ್ತಿದ್ದ. ‘ಹಲುಬಿದಳ್ ಕಲ್ಮರಂ ಕರಗುವಂತೆ’ ಎಂದು ವಿವರಿಸುತ್ತಿದ್ದರೆ ಸೀತೆ ಬಂದು ಕಣ್ಣಂಚಲ್ಲಿ ಕರಗುತ್ತಿದ್ದಳು. ಒಂದೊಂದು ತರಗತಿ ಮುಗಿಯುವ ಹೊತ್ತಿಗೂ ನನಗೆ ಒಂದೊಂದು ಯಕ್ಷಗಾನ ನೋಡಿ ಬಂದ ಭಾವ.

ತಾವು ಮಾಡುವ ಪಾಠದ ಒಂದೊಂದು ಪದವನ್ನೂ ಸಾಲನ್ನೂ ಹಿಂಜಿಹಿಂಜಿ ಅರ್ಥ ಬಿಡಿಸುತ್ತಿದ್ದ ಅವರ ವಿಧಾನವಂತೂ ಬಲುಚಂದ. ಒಂದು ವಿಶಿಷ್ಟ ಪದ ಸಿಕ್ಕರೆ ಅದರ ವ್ಯುತ್ಪತ್ತಿಯಿಂದ ತೊಡಗಿ ನಾನಾರ್ಥಗಳವರೆಗೆ ಎಲ್ಲ ಮಗ್ಗುಲುಗಳನ್ನೂ ಪರಿಚಯ ಮಾಡದೆ ಮುಂದಕ್ಕೆ ಹೋಗುತ್ತಿರಲಿಲ್ಲ. ಈಗಲೂ ಒಂದೊಂದು ಪದ ಬರೆಯುವಾಗಲೂ ಅದನ್ನು ಬಳಸಿದ್ದು ಸರಿಯೇ, ಇದು ಬೇಕಿತ್ತೇ ಎಂದೆಲ್ಲ ನನಗೆ ಯೋಚನೆ ಬರುವುದುಂಟು. ಅದಕ್ಕೆ ನೂರಕ್ಕೆ ನೂರು ಕುಂಬ್ಳೆಯವರ ಪಾಠ ಕಾರಣ. ಮಾತಾಡುವಾಗ, ಬರೆಯುವಾಗ ಒಂದು ಪದ ತಪ್ಪಾದರೂ ಒಂದು ಲೇಖನ ಚಿಹ್ನೆ ವ್ಯತ್ಯಾಸವಾದರೂ ಕೂಡಲೇ ಅದನ್ನು ಬೊಟ್ಟುಮಾಡಿ ತಿದ್ದುತ್ತಿದ್ದರು ಅವರು. ಪತ್ರಿಕೋದ್ಯಮಕ್ಕೆ ಕುಂಬ್ಳೆಯವರಂತಹ ಅಧ್ಯಾಪಕರು ಇದ್ದಿದ್ದರೆ ಎಷ್ಟು ಚೆನ್ನ ಎಂದು ನಾನು ಎಷ್ಟೋ ಸಲ ಅಂದುಕೊಂಡದ್ದಿದೆ. ಅವರೆದುರು ನಿಂತು ಮಾತಾಡುವುದಕ್ಕೆ ಈಗಲೂ ಸಣ್ಣ ಭಯ. ಇತ್ತೀಚೆಗೆ ವೇದಿಕೆಯೊಂದರಲ್ಲಿ ‘ವೈಯುಕ್ತಿಕ’ ಎಂಬ ಪದ ಬಳಸಿದಾಗ, ಹತ್ತಿರ ಕರೆದು ಕಿವಿಯಲ್ಲಿ ‘ವೈಯುಕ್ತಿಕ ಅಲ್ಲ, ವೈಯಕ್ತಿಕ ಅಂತ ಹೇಳಬೇಕು’ ಎಂದು ತಿದ್ದಿದ್ದರು. ಬೆನ್ನಿಗೇ, ಹೀಗೆ ಹೇಳಿದರೆ ಬೇಜಾರಿಲ್ವಲ್ಲ ಎಂದು ವಿಚಾರಿಸಿಕೊಂಡಿದ್ದರು. ‘ಅಯ್ಯೋ, ಗುರುಗಳು ಯಾವತ್ತೂ ಗುರುಗಳೇ’ ಎಂದು ತಿದ್ದಿಕೊಂಡಿದ್ದೆ.

ಗಣರಾಜ ಕುಂಬ್ಳೆ ಎಂಬ ಅದ್ಭುತ ಅಧ್ಯಾಪಕರ ಹಿಂದೆ ಒಂದು ಬಹುಮುಖ ವ್ಯಕ್ತಿತ್ವ ಇದೆ. ಪರಿಣಾಮಕಾರಿಯಾಗಿ ಮಾತಾಡಬಲ್ಲ ಹಲವರಿಗೆ ಬರೆವಣಿಗೆ ಕಷ್ಟ; ಸೊಗಸಾಗಿ ಬರೆಯಬಲ್ಲ ಹಲವರು ಮಾತಿನಲ್ಲಿ ಹಿಂದೆ. ಆದರೆ ಕುಂಬ್ಳೆಯವರು ಎರಡನ್ನೂ ಸಮರ್ಥವಾಗಿ ನಿರ್ವಹಿಸಬಲ್ಲ ಉತ್ತಮ ಸಂವಹನಕಾರರು. ಅವರು ಉತ್ತಮ ವಾಗ್ಮಿಯಾಗಿರುವಂತೆ ಒಳ್ಳೆಯ ಬರೆಹಗಾರರೂ ಹೌದು. ನೂರಾರು ಬಿಡಿ ಲೇಖನಗಳನ್ನು, ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ‘ಬಿರಿವ ಮೊಗ್ಗು’, ‘ಅರಳು’ ಕವನ ಸಂಕಲನಗಳು ಅವರಲ್ಲಿರುವ ಕವಿಯನ್ನು ಕಾಣಿಸಿದರೆ, ‘ಹಾಡುಗಳ ಮಣಿಸರ’, ‘ಯಕ್ಷಗಾನ ವಿಮರ್ಶಾ ಪರಂಪರೆ’, ‘ಕೋಟೆ ಕ್ಷತ್ರಿಯ ಜನಾಂಗದ ಅಧ್ಯಯನ’, ‘ಮಚ್ಚಿಮಲೆ ಶಂಕರನಾರಾಯಣ ರಾಯರ ಬಾಲಸಾಹಿತ್ಯ’, ‘ಮಿಂಚು ಮಾತಿನ ಯಕ್ಷ’ ಮೊದಲಾದವು ಅವರೊಳಗಿನ ಸಂಶೋಧಕನನ್ನು ಪರಿಚಯಿಸಿವೆ. ‘ಕಗ್ಗದೊಳಗಿನ ಸಗ್ಗ’ ಅವರು ಹೊಸದಿಗಂತಕ್ಕೆ ಬರೆದ ಅಂಕಣ ಬರೆಹಗಳ ಸಂಕಲನ. ‘ಪುಣ್ಯಕೋಟಿ’, ‘ಚಂದ್ರಹಾಸ’, ‘ಮರಳು ಬಿಂದಿಗೆ’ ಕೃತಿಗಳು ನಾಟಕದ ಬಗ್ಗೆ ಅವರ ಒಲವನ್ನು ತೋರಿಸುತ್ತವೆ. ಹಲವಾರು ಸ್ಮರಣ ಸಂಚಿಕೆ, ಅಭಿನಂದನ ಗ್ರಂಥಗಳ ಸಂಪಾದಕರು ಅವರು.

ಯಕ್ಷಗಾನದ ಕುರಿತ ಅವರ ಪ್ರೀತಿ ದೊಡ್ಡದು. ಶೇಣಿ, ಸಾಮಗತ್ರಯರು, ಮೂಡಂಬೈಲು, ಜೋಶಿ, ತೆಕ್ಕಟ್ಟೆ, ಕುಂಬ್ಳೆ,
ಸೂರಿಕುಮೇರು ಮೊದಲಾದ ಹಿರಿಯ ತಲೆಮಾರಿನ ಪ್ರಸಿದ್ಧರೊಂದಿಗೆ ಹಾಗೂ ಅನೇಕ ಸಮಕಾಲೀನ ಕಲಾವಿದರೊಂದಿಗೆ ಅರ್ಥ ಹೇಳಿದ ಹೆಗ್ಗಳಿಕೆ ಅವರದ್ದು. ಯಕ್ಷಗಾನದ ಮನೆತನದಿಂದ ಬಂದ ಕುಂಬ್ಳೆಯವರು, ವಿದ್ಯಾರ್ಥಿ ದೆಸೆಯಿಂದಲೇ ಆಟ-ಕೂಟಗಳಲ್ಲಿ ಸಕ್ರಿಯರು. ಉಪ್ಪಳದ ಭಗವತಿ ಮೇಳದಲ್ಲಿ, ಕುಬಣೂರು ಭಾಗವತರ ನೇತೃತ್ವದ ಕೂಡ್ಲು ಮೇಳದಲ್ಲಿ ಅತಿಥಿ ಕಲಾವಿದರಾಗಿ ತಿರುಗಾಟ ನಡೆಸಿದ್ದೂ ಇದೆ. ಈಗಲೂ ಬಿಡುವು ಸಿಕ್ಕಾಗಲೆಲ್ಲ ವೇಷ ಮಾಡುವ ಹುಮ್ಮಸ್ಸು; ತಾಳಮದ್ದಳೆಯೆಂದರೆ ಒಂದು ಹಿಡಿ ಆಸಕ್ತಿ ಹೆಚ್ಚು. ನಿರಂತರ ಅಧ್ಯಯನಶೀಲತೆ, ಯಾವ ಸ್ಥಾಯಿಗೂ ಹೊಂದಿಕೊಳ್ಳುವ ಕಂಠ ಅವರ ವೈಶಿಷ್ಟ್ಯ ಆಕಾಶವಾಣಿಯ ಬಿ-ಹೈಗ್ರೇಡ್ ಕಲಾವಿದರು. ರಾಮ, ಭರತ, ಭೀಷ್ಮ, ಪರಶುರಾಮ, ದಶರಥ, ಅತಿಕಾಯ, ವಾಲಿ, ಸುಗ್ರೀವ, ದಕ್ಷ, ಈಶ್ವರ, ಮಾಗಧ, ಭೀಮ- ಅವರು ಯಶಸ್ವಿಯಾಗಿ ನಿರ್ವಹಿಸಿದ ಪಾತ್ರಗಳು ನೂರಾರು. ‘ಶ್ರೀ ರಾಮಕುಂಜೇಶ್ವರ ಕ್ಷೇತ್ರ ಮಹಾತ್ಮೆ’, ‘ವಜ್ರಜ್ವಾಲಾ ಪರಿಣಯ’ ಎಂಬ ಪ್ರಸಂಗಗಳನ್ನೂ ರಚಿಸಿದ್ದಾರೆ.

ಹಿಡಿದ ಕೆಲಸವನ್ನು ಬಿಡದೆ ಮಾಡಿ ಮುಗಿಸುವ ಅವರ ಗುಣ ಎಲ್ಲರಿಗೂ ಮಾದರಿ. ಪ್ರಚಾರದ, ಪ್ರಶಸ್ತಿ-ಸಮ್ಮಾನಗಳ ಆಸೆಗೆ ಬಿದ್ದವರಲ್ಲ. ಸುತ್ತಮುತ್ತಲಿನ ಊರಿನಲ್ಲಿ ಯಾವುದೇ ಸಾಹಿತ್ಯಕ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವುದಿದ್ದರೂ ಅಲ್ಲಿ ಕುಂಬ್ಳೆಯವರು ಇರಲೇಬೇಕು ಎಂಬಷ್ಟು ಪ್ರೀತಿ-ಅಭಿಮಾನಗಳನ್ನು ಉಳಿಸಿಕೊಂಡವರು. ಕೊಯಿಲದಲ್ಲಿ ‘ಯಕ್ಷನಂದನ’ ಎಂಬ ಕಲಾಸಂಘವನ್ನು ಸ್ಥಾಪಿಸಿ ಆಸಕ್ತ ಮಕ್ಕಳು ಹಾಗೂ ಮಹಿಳೆಯರಿಗೆ ನಿರಂತರ ಯಕ್ಷಗಾನ ತರಬೇತಿಯನ್ನು ಕೊಡುತ್ತಾ ಬಂದವರು. 

ಕಳೆದ ನಾಲ್ಕು ದಶಕಗಳಿಂದ ಅಧ್ಯಾಪನದಲ್ಲಿ ತೊಡಗಿರುವ ಗಣರಾಜ ಕುಂಬ್ಳೆಯವರದ್ದು ವೃತ್ತಿ ಹಾಗೂ ಪ್ರವೃತ್ತಿಗಳೆರಡರಿಂದಲೂ ನಿಜವಾದ ಕನ್ನಡದ ಸೇವೆ. ನನ್ನಂತಹ ಸಾವಿರಾರು ಶಿಷ್ಯರ ಪ್ರೀತಿಯ ಅಧ್ಯಾಪಕ ಇದೇ ಏಪ್ರಿಲ್ 30ರಂದು ಸೇವೆಯಿಂದ ನಿವೃತ್ತರಾಗುತ್ತಿದ್ದಾರೆ. ವೃತ್ತಿಗೆ ನಿವೃತ್ತಿ ಇದೆ, ಗುರುವಿಗೆ ಇಲ್ಲ. ಇಂತಹ ಗುರು ಎಲ್ಲರಿಗೂ ಸಿಗಬಾರದೇ?

- ಸಿಬಂತಿ ಪದ್ಮನಾಭ ಕೆ. ವಿ.


ಶನಿವಾರ, ಏಪ್ರಿಲ್ 24, 2021

ಡಾ. ಬಿ. ಆರ್. ಅಂಬೇಡ್ಕರ್ ಅವರ ಶೈಕ್ಷಣಿಕ ಚಿಂತನೆಗಳು

'ವಿದ್ಯಾರ್ಥಿಪಥ'ದ ಏಪ್ರಿಲ್ 2021ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ

ಶಿಕ್ಷಣ ಪ್ರತಿಯೊಬ್ಬನ ಜನ್ಮಸಿದ್ಧ ಹಕ್ಕು ಮಾತ್ರವಲ್ಲ, ಅದು ಸಾಮಾಜಿಕ ಬದಲಾವಣೆಯ ಅಸ್ತ್ರ ಕೂಡಾ- ಹೀಗೆಂದು ಭಾರತದ
ಇತಿಹಾಸ ಕಂಡ ಬಹುದೊಡ್ಡ ದಾರ್ಶನಿಕ ಡಾ. ಬಿ. ಆರ್. ಅಂಬೇಡ್ಕರ್ ತಮ್ಮ ಜೀವನ ಪರ್ಯಂತ ನಂಬಿದ್ದರು. ‘ಶಿಕ್ಷಿತರಾಗಿರಿ! ಸಂಘಟಿತರಾಗಿರಿ! ಪ್ರತಿಭಟಿಸಿ!’ ಎಂಬ ಅವರ ಬಹುಪ್ರಸಿದ್ಧ ಘೋಷಣೆ ಶಿಕ್ಷಣವೇ ಸಮಾಜದ ಎಲ್ಲ ಕಾಯಿಲೆಗಳಿಗೆ ಶ್ರೇಷ್ಠ ಔಷಧಿ ಎಂಬುದನ್ನು ಸ್ಪಷ್ಟವಾಗಿ ಸಂಕೇತಿಸುತ್ತದೆ. ಶಿಕ್ಷಣದ ಹೊರತಾಗಿ ಇನ್ನೇನನ್ನು ನೀಡುವುದೂ ಭಾರತದ ದಮನಿತ ವರ್ಗಗಗಳ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಅಲ್ಲ ಎಂಬುದು ಅವರ ದೃಢ ನಿಲುವಾಗಿತ್ತು. ಬಾಲ್ಯದಿಂದಲೂ ಶೋಷಣೆ, ನಿರ್ಲಕ್ಷ್ಯ, ಅವಮಾನಗಳಿಗೆ ಒಳಗಾದ ದಲಿತ ಬಾಲಕನೊಬ್ಬ ದೇಶಕಂಡ ಅಪರೂಪದ ವಿದ್ವಾಂಸನಾಗಿ, ಸಂವಿಧಾನ ಶಿಲ್ಪಿಯಾಗಿ, ಮೂಕ ವರ್ಗಗಳ ಧ್ವನಿಯಾಗಿ ಬೆಳೆದುದರ ಹಿಂದೆ ಇದ್ದುದು ಇದೇ ಶಿಕ್ಷಣವೆಂಬ ಮಹಾ ಜೀವಸತ್ವ.

ಅಂಬೇಡ್ಕರ್ ಅವರ ಶೈಕ್ಷಣಿಕ ಚಿಂತನೆಗಳು ಅವರ ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯ ಚಿಂತನೆಗಳಿಗಿಂತ ಭಿನ್ನವಾಗಿರಲಿಲ್ಲ. ಎಲ್ಲ ಕ್ಷೇತ್ರಗಳ ಕುರಿತಾದ ಅವರ ಚಿಂತನೆಗಳ ಅಂತಸ್ರೋತದಲ್ಲಿ ಒಂದು ಏಕಸೂತ್ರ ಇತ್ತು. ಅವರು ಕೇವಲ ಭಾಷಣಗಳನ್ನು ಮಾಡುವ ಸಿದ್ಧಾಂತಿಯಾಗಿರಲಿಲ್ಲ ಎಂಬುದು ಇಲ್ಲಿ ಬಹುಮುಖ್ಯ ಅಂಶ. ಅವರು ಬರೆದ, ಮಾತಾಡಿದ ಪ್ರತಿಯೊಂದು ವಿಷಯವೂ ಪ್ರಾಯೋಗಿಕವಾಗಿತ್ತು. ಬಹುಕಾಲ ಅಸಡ್ಡೆಗೆ ಒಳಗಾಗಿದ್ದ, ಸಮಾಜದ ಮುಖ್ಯವಾಹಿನಿಯ ಸಮೀಪವೂ ಸುಳಿಯಲಾಗದ ಸಮುದಾಯದ ಪ್ರತಿನಿಧಿಯೊಬ್ಬ ಒಂದು ಶತಮಾನದ ಹಿಂದೆಯೇ ಅಮೇರಿಕದ ಕೊಲಂಬಿಯಾ ವಿಶ್ವವಿದ್ಯಾನಿಲಯ, ಇಂಗ್ಲೆಂಡಿನ ಲಂಡನ್ ಸ್ಕೂಲ್ ಅಫ್ ಇಕನಾಮಿಕ್ಸ್ ನಂತಹ ಶ್ರೇಷ್ಠ ಸಂಸ್ಥೆಗಳಿಂದ ಡಾಕ್ಟರೇಟ್ ಪದವಿ ಪಡೆಯುವಷ್ಟು ಎತ್ತರಕ್ಕೆ ಬೆಳೆಯುತ್ತಾರೆಂದರೆ ಶಿಕ್ಷಣ ಅವರಲ್ಲಿ ತುಂಬಿದ ಶಕ್ತಿ ಎಂತಹದೆಂಬುದನ್ನು ಯಾರು ಬೇಕಾದರೂ ಊಹಿಸಬಹುದು. ಅದೇ ಕಾರಣಕ್ಕೆ ಅವರ ಶೈಕ್ಷಣಿಕ ಚಿಂತನೆಗಳೆಲ್ಲವೂ ಅನುಭವಜನ್ಯವಾದದ್ದು. ಅವುಗಳಲ್ಲಿ ಕೆಲವು ಪ್ರಮುಖ ಚಿಂತನೆಗಳನ್ನು ನೋಡುತ್ತಾ ಹೋಗೋಣ.

ಸಾಮಾಜಿಕ ವಿಮೋಚನೆಯ ಅಸ್ತ್ರ:

ಯಾವುದೇ ಶಿಕ್ಷಣದ ಒಟ್ಟಾರೆ ಉದ್ದೇಶ ಸಾಮಾಜಿಕ ವಿಮೋಚನೆ ಆಗಿರಬೇಕು ಎಂಬುದು ಅಂಬೇಡ್ಕರ್ ಅವರ ದೃಷ್ಟಿಕೋನವಾಗಿತ್ತು. ವ್ಯಕ್ತಿಯನ್ನು ಸಾಮಾಜಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಮೇಲೆತ್ತುವುದೇ ಶಿಕ್ಷಣದ ಧ್ಯೇಯವಾಗಿರಬೇಕು; ಜಾತೀಯತೆ, ಅಸ್ಪೃಶ್ಯತೆ, ಸಾಮಾಜಿಕ ಭೇದಭಾವ, ಅಸಮಾನತೆ ಹಾಗೂ ಮಹಿಳೆಯರ ಶೋಷಣೆಯನ್ನು ಇಲ್ಲವಾಗಿಸುವುದಕ್ಕೆ ಶಿಕ್ಷಣ ಅನಿವಾರ್ಯ ಎಂದು ಅವರು ನಂಬಿದ್ದರು. ಎಲ್ಲ ವರ್ಗಗಳಿಗೆ ಸೇರಿದ ಜನರ ಯೋಚನೆಯ ಧಾಟಿಯನ್ನು ಬದಲಾಯಿಸುವುದಕ್ಕೆ, ಸಮಾಜದಲ್ಲಿ ಸಮಾನತೆ, ಭ್ರಾತೃತ್ವ, ಸಹಬಾಳ್ವೆ, ಪರಸ್ಪರ ಸ್ವೀಕಾರ ಮನೋಭಾವವನ್ನು ಬೆಳೆಸುವುದಕ್ಕೆ ಶಿಕ್ಷಣವೊಂದರಿಂದ ಮಾತ್ರ ಸಾಧ್ಯ ಎಂದು ಅವರು ಪ್ರತಿಪಾದಿಸುತ್ತಲೇ ಇದ್ದರು.

ಶಿಕ್ಷಣದ ಸಾರ್ವತ್ರೀಕರಣ:

ಶಿಕ್ಷಣ ಎಲ್ಲರ ಕೈಗೆಟಕುವಂತಿರಬೇಕು, ಆ ಮೂಲಕ ಅದರ ಸಾರ್ವತ್ರೀಕರಣ ಆಗಬೇಕು ಎಂಬುದು ಅಂಬೇಡ್ಕರ್ ಅವರ ಚಿಂತನೆಯಾಗಿತ್ತು. ಅಮೇರಿಕದ ಶೈಕ್ಷಣಿಕ ಸುಧಾರಕ, ಮನಃಶಾಸ್ತ್ರಜ್ಞ ಜಾನ್ ಡ್ಯೂಯಿ ಅವರಿಂದ ಬಹುವಾಗಿ ಪ್ರಭಾವಿತರಾಗಿದ್ದ ಅಂಬೇಡ್ಕರ್, ಅವರು ಹೇಳಿದ್ದ ‘ಶಿಕ್ಷಣದ ಪ್ರಜಾಪ್ರಭುತ್ವೀಕರಣ’ ಪರಿಕಲ್ಪನೆಯ ಪ್ರಬಲ ಪ್ರತಿಪಾದಕರಾಗಿದ್ದರು. ಸಾಮಾಜಿಕ ಅಸಮಾನತೆಯ ಕಾರಣದಿಂದಾಗಿ ಭಾರತದ ದೊಡ್ಡಸಂಖ್ಯೆಯ ಮಂದಿ ಶಿಕ್ಷಣದಿಂದ ವಂಚಿತರಾಗಿದ್ದರು; ಜಾತಿ-ವರ್ಗ-ಹಿನ್ನೆಲೆಯ ಭೇದವಿಲ್ಲದೆ ಇವರೆಲ್ಲರಿಗೆ ಶಿಕ್ಷಣದ ಬೆಳಕು ಲಭಿಸುವಂತಾಗಬೇಕೆಂಬುದು ಅವರ ಒತ್ತಾಯವಾಗಿತ್ತು. ಒಂದು ಪ್ರಜಾಪ್ರಭುತ್ವ ದೇಶ ಯಾವುದೇ ತಾರತಮ್ಯವಿಲ್ಲದೆ ಪ್ರತಿಯೊಬ್ಬರಿಗೂ ಶಿಕ್ಷಣದ ಹಕ್ಕು ನೀಡಬೇಕು. ಪ್ರಜಾಪ್ರಭುತ್ವದಲ್ಲಿ ರಾಜಕೀಯ ಅಧಿಕಾರದ ಹಂಚಿಕೆಯಾಗುವುದಕ್ಕಿಂತ ಮೊದಲು ಶಿಕ್ಷಣದ ಅಧಿಕಾರದ ಸಮಾನ ವಿತರಣೆ ಆಗಬೇಕು ಎಂದು ಅವರು ಬಲವಾಗಿ ನಂಬಿದ್ದರು.

ಗಿಡ ನೆಟ್ಟರೆ ಸಾಲದು:

ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸುವ ವಿದ್ಯಾರ್ಥಿಗಳ ಬಗ್ಗೆ ಶತಮಾನದ ಹಿಂದೆಯೇ ಅಂಬೇಡ್ಕರ್ ಆತಂಕ ವ್ಯಕ್ತಪಡಿಸಿದ್ದರು. ಮಕ್ಕಳನ್ನು ಶಾಲೆಗೆ ಸೇರಿಸುವುದಷ್ಟೇ ನಮ್ಮ ಕರ್ತವ್ಯ ಅಲ್ಲ, ಅವರು ಶಾಲೆಯಲ್ಲಿ ಉಳಿದು ಶಿಕ್ಷಣ ಪೂರೈಸುವಂತೆ ಮಾಡಬೇಕು ಎಂಬುದು ಅವರ ಒತ್ತಾಯವಾಗಿತ್ತು. ‘ಗಿಡ ನೆಟ್ಟರಾಯಿತೇ? ನೀರು ಗೊಬ್ಬರ ಹಾಕಿ ಅದನ್ನು ಬದುಕಿಸಬೇಕು, ಪೋಷಿಸಬೇಕು’ ಎಂದು ಬೊಟ್ಟುಮಾಡುತ್ತಿದ್ದ ಅವರು ಪ್ರಾಥಮಿಕ ಶಿಕ್ಷಣಕ್ಕೆ ಸರ್ಕಾರ ಹೆಚ್ಚು ಹಣ ವಿನಿಯೋಗಿಸಬೇಕೆಂದು ಪ್ರತಿಪಾದಿಸಿದ್ದರು. ‘ನಾವು ಸಂಗ್ರಹಿಸುವ ತೆರಿಗೆಗೂ ಶಿಕ್ಷಣಕ್ಕೆ ವಿನಿಯೋಗಿಸುತ್ತಿರುವ ಮೊತ್ತಕ್ಕೂ ಏನೇನೂ ತಾಳೆಯಾಗುವುದಿಲ್ಲ. ಇದು ಜನಸಾಮಾನ್ಯರಿಗೆ ಮಾಡುವ ಅನ್ಯಾಯ’ ಎಂದು ಅವರು 1927ರಲ್ಲಿ ಬಾಂಬೆ ಶಾಸನ ಸಭೆಯಲ್ಲಿ ಮಾತನಾಡುತ್ತಾ ಎಚ್ಚರಿಸಿದ್ದರು.

ಮಹಿಳೆಯರ ಶಿಕ್ಷಣ:

‘ಒಂದು ಸಮುದಾಯದ ಪ್ರಗತಿಯನ್ನು ನಾನು ಆ ಸಮುದಾಯದ ಮಹಿಳೆಯರ ಪ್ರಗತಿಯಿಂದ ಅಳೆಯುತ್ತೇನೆ’ – ಇದು ೧೯೪೨ರಲ್ಲಿ ನಾಗಪುರದಲ್ಲಿ ಮಾಡಿದ ಭಾಷಣವೊಂದರಲ್ಲಿ ಅಂಬೇಡ್ಕರ್ ಅವರಾಡಿದ ಪ್ರಸಿದ್ಧ ಮಾತು. ಅವರು ಮಹಿಳೆಯರ ಶಿಕ್ಷಣಕ್ಕೆ ಅಪಾರ ಒತ್ತು ನೀಡಿದರು. ದೇಶದ ಅರ್ಧಭಾಗ ಮಹಿಳೆಯರಿದ್ದಾರೆ ಅಂದ ಮೇಲೆ ಅವರನ್ನು ಅಶಿಕ್ಷಿತರನ್ನಾಗಿ ಉಳಿಸಿದರೆ ಅಂತಹ ದೇಶ ಅಭಿವೃದ್ಧಿ ಹೊಂದುವುದು ಹೇಗೆ ಸಾಧ್ಯ ಎಂಬ ಅವರ ಪ್ರಶ್ನೆ ಸಮಂಜಸವಾಗಿಯೇ ಇತ್ತು.

ಸಾಮಾಜಿಕ ಬದಲಾವಣೆಯಲ್ಲಿ ಮಹಿಳೆಯ ಪಾತ್ರ ಪ್ರಧಾನವಾದದ್ದು. ಏಕೆಂದರೆ ಆಕೆ ಮೊದಲ ಗುರು. ಒಬ್ಬ ವ್ಯಕ್ತಿಯ ಮೊದಲ ದಿನದಿಂದಲೇ ಆತನ ಜತೆಗಿರುವವಳು ತಾಯಿ. ಮಗುವಿನಲ್ಲಿ ಮೌಲ್ಯಗಳನ್ನು ತುಂಬುವಲ್ಲಿ ಆಕೆಗಿರುವಷ್ಟು ಅವಕಾಶ ಇನ್ಯಾರಿಗೂ ಇಲ್ಲ. ಆದ್ದರಿಂದ ಅವಳ ಶಿಕ್ಷಣಕ್ಕೆ ಮೊದಲ ಆದ್ಯತೆ ದೊರೆಯಬೇಕು ಎಂಬುದನ್ನು ಅಂಬೇಡ್ಕರ್ ಪದೇಪದೇ ಹೇಳುತ್ತಿದ್ದರು.

ಚಾರಿತ್ರ್ಯ ನಿರ್ಮಾಣ:

ಶಿಕ್ಷಣದ ಮೂಲಕ ಚಾರಿತ್ರ್ಯನಿರ್ಮಾಣ ಆಗಬೇಕು ಎಂದು ನಂಬಿದ್ದವರಲ್ಲಿ ಅಂಬೇಡ್ಕರ್ ಪ್ರಮುಖರು. ನೈತಿಕ ಶಿಕ್ಷಣ ಮತ್ತು ವ್ಯಕ್ತಿತ್ವ ವಿಕಸನಕ್ಕೆ ಮಹತ್ವ ನೀಡುವುದರಿಂದ ಈ ಉದ್ದೇಶವನ್ನು ಸಾಧಿಸಬಹುದೆಂದು ಅವರು ನಂಬಿದ್ದರು. “ಶಿಕ್ಷಣದ ಮೂಲಕ ಜನರ ಚಾರಿತ್ರ್ಯ ನಿರ್ಮಾಣ ಆಗದಿದ್ದರೆ ಅಂಥವರಿಂದ ಸಮಾಜಕ್ಕೆ ಯಾವ ಪ್ರಯೋಜನವೂ ಇಲ್ಲ. ಚಾರಿತ್ರ್ಯ ಹಾಗೂ ನಮ್ರತೆಯಿಲ್ಲದ ಶಿಕ್ಷಿತ ವ್ಯಕ್ತಿ ಪ್ರಾಣಿಗಿಂತಲೂ ಹೆಚ್ಚು ಅಪಾಯಕಾರಿ. ಆತನ ಮನಸ್ಥಿತಿ ಜನಸಾಮಾನ್ಯರ ಏಳ್ಗೆಗೆ ವಿರುದ್ಧವಾಗಿದ್ದರೆ ಆತ ಸಮಾಜಕ್ಕೊಂದು ಶಾಪ. ಚಾರಿತ್ರ್ಯವು ಶಿಕ್ಷಣಕ್ಕಿಂತಲೂ ಮುಖ್ಯವಾದದ್ದು”- ಇದು 1938ರಲ್ಲಿ ನಡೆದ ಮುಂಬೈ ಪ್ರಾಂತ ಶೋಷಿತ ವರ್ಗಗಳ ಯುವಸಮ್ಮೇಳನದಲ್ಲಿ ಅಂಬೇಡ್ಕರ್ ಅವರಾಡಿದ ಮಾತು.

ಶಿಕ್ಷಣದಲ್ಲಿ ಧರ್ಮ ಮತ್ತು ಸಂಸ್ಕಾರ:

ಡಾ. ಅಂಬೇಡ್ಕರ್ ಅವರು ಧರ್ಮದ ಹೆಸರಿನಲ್ಲಿ ನಡೆಯುವ ಸಾಮಾಜಿಕ ಅಸಮಾನತೆ ಹಾಗೂ ಕಂದಾಚಾರಗಳಿಗೆ ವಿರುದ್ಧವಾಗಿದ್ದರು. ಆದರೆ ಕೆಲವು ವಿಚಾರಗಳಲ್ಲಿ ಅವರಿಗೆ ಸಹಮತ ಇತ್ತು. ಧರ್ಮ ಎಂಬುದನ್ನು ಸನ್ನಡತೆ ಮತ್ತು ಲೋಕಕಲ್ಯಾಣ ಎಂದು ಭಾವಿಸುವುದಾದರೆ ಅಂತಹ ಧರ್ಮದಲ್ಲಿ ಅವರಿಗೆ ನಂಬಿಕೆ ಇತ್ತು. “ನನ್ನಲ್ಲಿರುವ ಉತ್ತಮ ಗುಣಗಳಿದ್ದರೆ ಅಥವಾ ಸಮಾಜಕ್ಕೆ ನನ್ನ ವಿದ್ಯೆಯಿಂದ ಏನಾದರೂ ಅನುಕೂಲವಾಗಿದ್ದರೆ ಅದಕ್ಕೆ ನನ್ನಲ್ಲಿರುವ ಧಾರ್ಮಿಕ ಭಾವನೆಗಳು ಕಾರಣ. ನಮಗೆ ಧರ್ಮ ಬೇಕು. ಆದರೆ ಧರ್ಮದ ಹೆಸರಿನ ಬೂಟಾಟಿಕೆ ಬೇಡ” ಎಂಬುದು ಅವರ ದೃಷ್ಟಿಯಾಗಿತ್ತು.

ವಾಣಿಜ್ಯೀಕರಣದ ಆತಂಕ:

ಶಿಕ್ಷಣದ ವಾಣಿಜ್ಯೀಕರಣದ ಪ್ರಬಲ ವಿರೋಧಿಯಾಗಿದ್ದರು ಅಂಬೇಡ್ಕರ್. ಶಿಕ್ಷಣ ಎಲ್ಲರ ಕೈಗೂ ಎಟುಕುವಂತೆ ಇರಬೇಕು. ಉನ್ನತ ಶಿಕ್ಷಣವಂತೂ ಕಡಿಮೆ ವೆಚ್ಚದಲ್ಲಿ ದೊರೆಯುವಂತಾಗಬೇಕು. ಶಿಕ್ಷಣದ ವಿಷಯದಲ್ಲಿ ಸಮಾಜದ ವಿವಿಧ ವರ್ಗಗಳ ನಡುವೆ ಬಹುದೊಡ್ಡ ಕಂದಕ ಇದೆ. ಇದು ನಿವಾರಣೆಯಾಗದೆ ಶೋಷಿತ ವರ್ಗಗಳ ಅಭಿವೃದ್ಧಿ ಸಾಧ್ಯವಿಲ್ಲ ಎಂದು ಅವರು ಪುನರುಚ್ಚರಿಸಿದ್ದರು.

ಉದ್ಯೋಗ ಮತ್ತು ಕೌಶಲ:

ಔದ್ಯೋಗಿಕ ಶಿಕ್ಷಣದ ಕುರಿತು ಅಂಬೇಡ್ಕರ್ ಅವರಿಗೆ ಅಪಾರ ಒಲವಿತ್ತು. ವ್ಯಕ್ತಿಯೊಬ್ಬ ಉದ್ಯೋಗ ಪಡೆದು ತನ್ನ ಅನ್ನವನ್ನು ತಾನೇ ಸಂಪಾದಿಸಿಕೊಳ್ಳುವಲ್ಲಿ, ಸ್ವಾವಲಂಬಿಯನ್ನಾಗಿಸುವಲ್ಲಿ ಶಿಕ್ಷಣ ಸಹಕಾರಿಯಾಗಬೇಕು ಎಂದು ಅವರು ಭಾವಿಸಿದ್ದರು. ಶಿಕ್ಷಣ ಪರಿಪೂರ್ಣವಾಗಬೇಕಾದರೆ ವ್ಯಕ್ತಿಯಲ್ಲಿ ಒಂದಷ್ಟು ಕೌಶಲಗಳು ಬೆಳೆಯಬೇಕು. ಆ ಮೂಲಕ ಉದ್ಯೋಗ ದೊರೆಯಬೇಕು ಎಂದು ನಂಬಿದ್ದ ಅಂಬೇಡ್ಕರ್ ಹಿಂದುಳಿದ ಮತ್ತು ಶೋಷಿತ ವರ್ಗಗಳ ಪ್ರಗತಿಯಾಗಬೇಕೆಂದರೆ ಅವರಿಗೆ ಕಡಿಮೆ ಖರ್ಚಿನಲ್ಲಿ ಇಂಜಿನಿಯರಿಂಗ್ ಹಾಗೂ ವಿಜ್ಞಾನದ ಶಿಕ್ಷಣ ಲಭ್ಯವಾಗಬೇಕು ಎಂದು ಪ್ರತಿಪಾದಿಸಿದ್ದರು. 

ಸರ್ಕಾರದ ಸಹಾಯವಿಲ್ಲದೆ ದಲಿತ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯುವುದು ಅಥವಾ ವಿದೇಶದ ಶ್ರೇಷ್ಠ ಸಂಸ್ಥೆಗಳಲ್ಲಿ ವ್ಯಾಸಂಗ ನಡೆಸುವುದು ಸಾಧ್ಯವಿಲ್ಲ. ಇದಕ್ಕೆ ಅನುಕೂಲವಾಗುವಷ್ಟು ವಿದ್ಯಾರ್ಥಿವೇತನದ ವ್ಯವಸ್ಥೆ ಮಾಡುವುದು ಸರ್ಕಾರದ ಕರ್ತವ್ಯ. ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉನ್ನತ ಶಿಕ್ಷಣ ಪಡೆಯುವುದಕ್ಕೆ ಅವಕಾಶ ಮಾಡಿಕೊಡಲು ಕನಿಷ್ಠ ಶೇ.10 ಮೀಸಲಾತಿ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು.

ವಿಶ್ವವಿದ್ಯಾನಿಲಯಗಳಿಗೆ ಸಂಪೂರ್ಣ ಸ್ವಾಯತ್ತತೆಯನ್ನು ಅಂಬೇಡ್ಕರ್ ಪ್ರತಿಪಾದಿಸಿದ್ದರು. ದಾಖಲಾತಿ, ಬೋಧನೆ, ಪರೀಕ್ಷೆ ಹಾಗೂ ಸಿಬ್ಬಂದಿ ನೇಮಕಾತಿ ವಿಚಾರಗಳಲ್ಲಿ ವಿಶ್ವವಿದ್ಯಾನಿಲಯಗಳಿಗೆ ಪೂರ್ತಿ ಸ್ವಾಯತ್ತತೆ ನೀಡಬೇಕೆಂಬುದು ಅವರ ನಿಲುವಾಗಿತ್ತು.

ಭಾಷೆ ಮತ್ತು ಪಠ್ಯಕ್ರಮ:

ಮಾತೃಭಾಷೆಯ ಶಿಕ್ಷಣದ ಕಡೆ ಅಂಬೇಡ್ಕರ್ ಅವರಿಗೆ ಒಲವಿತ್ತು. ಆದರೆ ವಿದ್ಯಾರ್ಥಿಗಳು ಕಡೇ ಪಕ್ಷ ಒಂದು ವಿದೇಶೀ ಭಾಷೆಯನ್ನಾದರೂ ಕಲಿಯಬೇಕು ಎಂಬುದು ಅವರ ನಿಲುವಾಗಿತ್ತು. ಜಾಗತಿಕ ಮಟ್ಟದಲ್ಲಿ ಆಗುತ್ತಿರುವ ವಿವಿಧ ಬೆಳವಣಿಗೆಗಳ ಬಗ್ಗೆ ಸಮರ್ಪಕ ಜ್ಞಾನ ಹೊಂದಿ ಅವುಗಳಿಗೆ ಸ್ಪಂದಿಸಬೇಕಾದರೆ ಅಂತರರಾಷ್ಟ್ರೀಯ ಭಾಷೆಯೊಂದರ ತಿಳುವಳಿಕೆ ಅನಿವಾರ್ಯ ಎಂದು ಅವರು ವಾದಿಸಿದ್ದರು.

ಪಠ್ಯಕ್ರಮವನ್ನು ಬಾಹ್ಯ ಸಂಸ್ಥೆಯೊಂದು ಹೇರುವುದಲ್ಲ, ಪಾಠ ಮಾಡುವ ಶಿಕ್ಷಕರೇ ಅದನ್ನು ರೂಪಿಸಬೇಕು ಎಂದು ಅಂಬೇಡ್ಕರ್ ನಂಬಿದ್ದರು. ವಿಷಯದ ಸ್ವರೂಪ ಹಾಗೂ ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ ಪಠ್ಯಕ್ರಮ ರೂಪುಗೊಳ್ಳಬೇಕು. ಈ ವಿಷಯದಲ್ಲಿ ಸಂಪೂರ್ಣ ಪ್ರಜಾತಾಂತ್ರಿಕ ವ್ಯವಸ್ಥೆ ಇರಬೇಕು.  ಪಠ್ಯಕ್ರಮ ಪ್ರಾಥಮಿಕ ಹಂತದಿಂದಲೇ ವೈಜ್ಞಾನಿಕವೂ ಪ್ರಗತಿಪರವೂ ಆಗಿರಬೇಕು ಎಂಬುದು ಅವರ ನಿಲುವಾಗಿತ್ತು.

ಶಿಕ್ಷಕರ ಪಾತ್ರ:

ಅಂಬೇಡ್ಕರ್ ಶಿಕ್ಷಕರ ಬಗ್ಗೆ ಅಪಾರ ಗೌರವ ಹೊಂದಿದ್ದರು. ಶಿಕ್ಷಕನಾದವ ಸಾಕಷ್ಟು ಜ್ಞಾನವಂತ ಹಾಗೂ ಅನುಭವಸ್ಥನಾಗಿರಬೇಕು; ಸಮಾಜದ ಎಲ್ಲ ವರ್ಗಗಳ ಕಡೆಗೂ ಧನಾತ್ಮಕ ಮನೋಭಾವ ಹಾಗೂ ಸಮತಾವಾದದ ದೃಷ್ಟಿಕೋನ ಹೊಂದಿದವನಾಗಿರಬೇಕು ಎಂದು ನಂಬಿದ್ದ ಅವರು ಶಾಲಾ ಕಾಲೇಜುಗಳಿಗೆ ಅಧ್ಯಾಪಕರನ್ನು ನೇಮಿಸುವಾಗ ಅವರ ಅರ್ಹತೆ, ಸಾಮರ್ಥ್ಯಗಳ ಸಂಪೂರ್ಣ ಪರಿಶೀಲನೆ ನಡೆಸುವುದು ಅವಶ್ಯಕ ಎಂದು ಪ್ರತಿಪಾದಿಸಿದ್ದರು.

ಶಿಕ್ಷಕ ಒಳ್ಳೆಯ ಓದುಗ, ಉತ್ತಮ ಸಂವಹನಕಾರ ಹಾಗೂ ವಿದ್ಯಾರ್ಥಿಗಳ ಬೌದ್ಧಿಕ ಸಾಮರ್ಥ್ಯವನ್ನು ಸರಿಯಾಗಿ ಅರಿತವನಾಗಿರಬೇಕು. ವಿದ್ಯಾರ್ಥಿಗಳಿಗೆ ಉತ್ತಮ ಸ್ನೇಹಿತ ಹಾಗೂ ಪಥದರ್ಶಕ ಆಗಿರಬೇಕು. ಪ್ರಾಥಮಿಕ ಶಿಕ್ಷಣ ಹಂತದಲ್ಲಿ ಶಿಕ್ಷಕರು ಮಕ್ಕಳಿಗೆ ಸ್ವಚ್ಛತೆ ಹಾಗೂ ಆರೋಗ್ಯದ ಬಗ್ಗೆ ಹೆಚ್ಚಿನ ಒಲವು ಮೂಡಿಸಬೇಕು. ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳಲು ಪ್ರೇರಣೆ ನೀಡಬೇಕು ಎಂದು ಅವರು ಬಯಸಿದ್ದರು.

ಸಿದ್ಧಾಂತವಷ್ಟೇ ಅಲ್ಲ:

ಅಂಬೇಡ್ಕರ್ ಅವರು ಆರಾಮಕುರ್ಚಿಯ ಸಿದ್ಧಾಂತಿಯಾಗಿರಲಿಲ್ಲ, ಪ್ರಯೋಗದಲ್ಲಿ ನಂಬಿಕೆ ಹೊಂದಿದ್ದರು. ದಮನಿತ ವರ್ಗಗಳ ಕಲ್ಯಾಣ ಮತ್ತು ಶಿಕ್ಷಣದ ಕುರಿತಾಗಿ ಅವರು ಏನನ್ನು ಪ್ರತಿಪಾದಿಸಿದ್ದರೋ ಅವುಗಳ ಅನುಷ್ಠಾನಕ್ಕೂ ಸಾಕಷ್ಟು ಪ್ರಯತ್ನಗಳನ್ನು ಮಾಡಿದರು. 1924ರಲ್ಲಿ ಅವರು ಸ್ಥಾಪಿಸಿದ ‘ಹಿತಕಾರಿಣಿ ಸಭಾ’, 1928ರಲ್ಲಿ ಸ್ಥಾಪಿಸಿದ ‘ದಮನಿತ ವರ್ಗಗಳ ಶಿಕ್ಷಣ ಸಂಘ’, 1945ರಲ್ಲಿ ಸ್ಥಾಪಿಸಿದ ‘ಲೋಕ ಶೈಕ್ಷಿಕ್ ಸಮಾಜ’ ಮುಂತಾದವೆಲ್ಲ ಅವರ ಪ್ರಯತ್ನಗಳಿಗೆ ನಿದರ್ಶನಗಳು. ಹಿತಕಾರಿಣಿ ಸಭಾದ ವತಿಯಿಂದ ಅನೇಕ ಕಾಲೇಜು, ಹಾಸ್ಟೆಲ್ ಹಾಗೂ ಗ್ರಂಥಾಲಯಗಳನ್ನು ಸ್ಥಾಪಿಸಲಾಯಿತು. ಲೋಕ ಶೈಕ್ಷಿಕ್ ಸಮಾಜ ದಲಿತ ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲು ಉತ್ತೇಜನ ನೀಡಿತು.

ಶಿಕ್ಷಣದಿಂದಲೇ ಉದ್ಧಾರ:

ಶಿಕ್ಷಣ ವ್ಯಕ್ತಿಯನ್ನು ನಿರ್ಭೀತನನ್ನಾಗಿಸಬೇಕು. ಏಕತೆಯ ಪಾಠ ಕಲಿಸಬೇಕು. ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಬೇಕು. ತನ್ನ ಹಕ್ಕುಗಳಿಗಾಗಿ ಹೋರಾಡಲು ಪ್ರೇರಣೆ ನೀಡಬೇಕು ಎಂಬುದು ಅಂಬೇಡ್ಕರ್ ಅವರ ಒಟ್ಟಾರೆ ನಿಲುವಾಗಿತ್ತು. ಜನರ ಜೀವನ ಮಟ್ಟವನ್ನು ಸುಧಾರಿಸುವುದು ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು ಅವರು ಬಲವಾಗಿ ನಂಬಿದ್ದರು. ಅಲಕ್ಷಿತ, ಹಿಂದುಳಿದ ಸಮುದಾಯಗಳು ಇಂದು ಸಮಾಜದಲ್ಲಿ ಸಾಕಷ್ಟು ಮುಂದುವರಿಯುವುದು ಸಾಧ್ಯವಿದ್ದರೆ ಅದರ ಹಿಂದೆ ಅಂಬೇಡ್ಕರ್ ಅವರ ಚಿಂತನೆ ಮತ್ತು ಹೋರಾಟಗಳು ದೊಡ್ಡ ಮಟ್ಟದಲ್ಲಿ ಕೆಲಸ ಮಾಡಿವೆ ಎಂಬುದನ್ನು ಮರೆಯಬಾರದು. ಇದಕ್ಕೆ ಅವರ ನೇತೃತ್ವದಲ್ಲಿ ರಚನೆಯಾದ ಭಾರತದ ಸಂವಿಧಾನವೇ ಒಂದು ಪರಿಪೂರ್ಣ ಸಾಕ್ಷಿ.

- ಸಿಬಂತಿ ಪದ್ಮನಾಭ ಕೆ. ವಿ.