ಸೋಮವಾರ, ಮಾರ್ಚ್ 5, 2018

ಮನದ ಕತ್ತಲು ಕಳೆಯುವ ಕಾಮನ ಕಿರಣ

ಫೆಬ್ರವರಿ 24- ಮಾರ್ಚ್ 2, 2018ರ 'ಬೋಧಿವೃಕ್ಷ'ದಲ್ಲಿ ಪ್ರಕಟವಾದ ಲೇಖನ

ಜೀವನವನ್ನೆಲ್ಲ ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಕಳೆದ ವ್ಯಕ್ತಿಯೊಬ್ಬ ತನ್ನ ಏಕೈಕ ಮಗನಿಗಾಗಿ ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿ ಕೂಡಿಟ್ಟು ಒಂದು ಶುಭಮುಂಜಾನೆ ಇಹಲೋಕ ತ್ಯಜಿಸಿದನಂತೆ. ತಂದೆಯ ವ್ಯವಹಾರವನ್ನು ಮುಂದುವರಿಸಿಕೊಂಡು ಬಂದಿದ್ದ ಮಗ ತನ್ನ ಬಿಡುವಿರದ ಕೆಲಸಕಾರ್ಯಗಳ ನಡುವೆಯೂ ಅಂತ್ಯಕ್ರಿಯೆಯನ್ನು ಸಾರ್ವಜನಿಕ ಸ್ಮಶಾನದಲ್ಲಿ ಮುಗಿಸಿ ವಾಪಸ್ ಬಂದ.

'ಅಲ್ಲಯ್ಯಾ, ಅಪ್ಪನೇ ನಿನಗಾಗಿ ಮಾಡಿರುವ ನಾಲ್ಕಾರು ಎಕರೆ ಜಮೀನಿದೆ. ಅದರಲ್ಲೇ ಒಂದು ಕಡೆ ಅಪ್ಪನನ್ನು ಮಣ್ಣುಮಾಡಿರುತ್ತಿದ್ದರೆ ಅಲ್ಲೇ ಒಂದು ಸಣ್ಣ ಸಮಾಧಿಯೇನಾದರೂ ಮಾಡಬಹುದಿತ್ತು. ಅಪ್ಪನ ಆತ್ಮಕ್ಕೆ ಒಂಚೂರು ಶಾಂತಿ ಸಮಾಧಾನ ಆಗೋದು’ ಎಂದು ಹಿರೀಕರೊಬ್ಬರು ಹಿತವಚನ ಹೇಳಿದರಂತೆ. 'ಹೋಗಿ ಸಾರ್, ಯಾಕೆ ಸುಮ್ನೆ ದುಡ್ಡು ಹಾಳು ಮಾಡೋ ಐಡಿಯಾ ಕೊಡ್ತೀರಾ? ಅಷ್ಟು ಜಾಗದಲ್ಲಿ ಒಂದು ಸೈಟಾದರೂ ಆಗೋದು. ಅಪ್ಪನ ಕಾಲ ಹೆಂಗೂ ಮುಗೀತು. ಎಲ್ಲಿ ಮಣ್ಣು ಮಾಡಿದರೂ ನಡೆಯುತ್ತೆ. ನಾನ್ಯಾಕೆ ಸುಮ್ನೆ ಮೂವತ್ತು ಲಕ್ಷದ ಸೈಟು ಹಾಳು ಮಾಡಿಕೊಳ್ಳಲಿ?’ ಎಂದು ತಿರುಗಿ ಕೇಳಿದನಂತೆ ಮಗ ಮಹಾಶಯ. ಅಯ್ಯೋ ಎಂಥಾ ಕಾಲ ಬಂತಪ್ಪಾ ಎಂದು ನಿಧಾನಕ್ಕೆ ಅಲ್ಲಿಂದ ಕಾಲ್ತೆಗೆದರಂತೆ ಆ ಹಿರೀಕರು.

ಮನುಷ್ಯ ಎಂತಹ ವಿಚಿತ್ರ ಪ್ರಾಣಿ! ಅಪ್ಪನಂತೆ ತಾನೂ ಒಂದು ದಿನ ಶಿವನಪಾದ ಸೇರಬೇಕಾದವನು ಎಂಬುದು ಮಗನಿಗೆ ಗೊತ್ತಿಲ್ಲದ ವಿಚಾರವೇನಲ್ಲ. ಸಾಯುವಾಗ ಮೂವತ್ತು ಲಕ್ಷವೇನು, ಒಂದು ಪೈಸೆಯನ್ನೂ ಜತೆಗೆ ಒಯ್ಯಲಾಗದೆಂಬುದೂ ಅವನಿಗೆ ಅರ್ಥವಾಗದ್ದೇನಲ್ಲ. ಆದರೂ ಅಪ್ಪನ ಸಮಾಧಿ ಮಾಡಿದರೆ ಒಂದು ಸೈಟು ವೇಸ್ಟ್ ಆಗುತ್ತದಲ್ಲ ಎಂಬ ಚಿಂತೆ. ನಾಳೆ ತನ್ನ ಮಕ್ಕಳು ತನ್ನ ಬಗ್ಗೆ ಹೀಗೆಯೇ ಮಾತಾಡಿಕೊಂಡರೇನು ಗತಿಯೆಂದು ಅವನ ಮನಸ್ಸಿಗೆ ಹೊಳೆಯಿತೋ ಇಲ್ಲವೋ!

ಉಸಿರು ನಿಂತ ಮೇಲೆ ಉಳಿದದ್ದನ್ನು ಕಳೇಬರ ಎಂದಷ್ಟೇ ಜನ ಕರೆಯುತ್ತಾರೆ. ಅದಕ್ಕೆ ಹೆಸರೂ ಇರುವುದಿಲ್ಲ. ಇದು ತಿಳಿದಿದ್ದೂ ಮನುಷ್ಯ ಜೀವನವನ್ನೆಲ್ಲ ಕುರುಡು ಕಾಂಚಾಣದ ಹಿಂದಿನ ಓಟದಲ್ಲೇ ಕಳೆಯುತ್ತಾನೆ. ಪ್ರತಿನಿಮಿಷವೂ ಸಂಪಾದನೆಯ ಯೋಚನೆ, ತಾನು ತನ್ನದು ಎಂಬ ಮೋಹ. ತನ್ನ ಆಸ್ತಿ ಬೆಳೆಯುತ್ತಿರುವುದನ್ನು ನೋಡುತ್ತಾ ಮನಸ್ಸಿಗೆ ಅದೇನೋ ಸಂತೋಷ ತಂದುಕೊಳ್ಳುತ್ತಾನೆ. ಯಾರೋ ಬಡವನಿಗೆ ಮನಸಾರೆ ಕೈಯೆತ್ತಿ ಒಂದು ರೂಪಾಯಿ ನೀಡುವುದಕ್ಕೆ ಅವನ ಮನಸ್ಸು ಒಪ್ಪುವುದಿಲ್ಲ. ಕಾರಣ ಆಸೆ. ನಾಳೆ ತನಗೆ ಗಲ್ಲುಶಿಕ್ಷೆಯೇ ಕಾದಿದೆ ಎಂಬ ಅರಿವು ಇದ್ದ ವ್ಯಕ್ತಿಯೂ ಯಾವುದೋ ಕ್ಷಣದಲ್ಲಿ ಮನಸ್ಸಿನ ನಿಯಂತ್ರಣ ಕಳೆದುಕೊಂಡು ಒಂಟಿ ಹೆಣ್ಣಿನ ಮೇಲೆ ಅತ್ಯಾಚಾರ ಮಾಡುತ್ತಾನೆ. ಕಾರಣ ಕ್ಷಣಿಕ ಬಯಕೆ. ಎರಡಕ್ಕೂ ಇರುವ ಸಾಮಾನ್ಯ ಹೆಸರು ಕಾಮ.

ಆಸೆಯೆಡೆಗಿನ ನಡಿಗೆ
ಕಾಮ ಅಡರಿಕೊಂಡ ಮನಸ್ಸಿಗೆ ಬೇರೇನೂ ಕಾಣಿಸುವುದಿಲ್ಲ. ಎಷ್ಟೇ ಸಂಪಾದಿಸಿದರೂ, ಎಷ್ಟೇ ಸುಖಪಟ್ಟರೂ ಅದಕ್ಕೆ ಶಾಂತಿಯೂ ಲಭಿಸುವುದಿಲ್ಲ. ಅದು ಇನ್ನೂ ಬೇಕು ಎಂದಷ್ಟೇ ಹೇಳುತ್ತದೆ. ಏಕೆಂದರೆ ಕಾಮ ಕುರುಡು. ಅದನ್ನು ಹೊತ್ತುಕೊಂಡ ಮನುಷ್ಯನೂ ಕುರುಡು. ಅದಕ್ಕೇ ಕವಿ ಸ್ಯಾಮುವೆಲ್ ಜಾನ್ಸನ್ ಹೇಳುತ್ತಾನೆ: 'ಜೀವನವೆಂಬುದು ಆಸೆಯಿಂದ ಆಸೆಯೆಡೆಗಿನ ನಡಿಗೆ; ಸಂತೋಷದಿಂದ ಸಂತೋಷದೆಡೆಗಿನದ್ದಲ್ಲ.’

ಜಗತ್ತಿನ ಮಹಾತ್ಮರೆಲ್ಲರೂ ಬದುಕಿನ ನಶ್ವರತೆ ಹಾಗೂ ಕ್ಷಣಿಕತೆಯ ಬಗೆಗೇ ಮಾತನಾಡಿದರು. ಆಸೆಯೇ ದುಃಖಕ್ಕೆ ಮೂಲ ಎಂದ ಬುದ್ಧ. ಮನುಷ್ಯನ ಅವಶ್ಯಕತೆಗಳನ್ನು ಪೂರೈಸಬೇಕಾದ್ದೆಲ್ಲ ಜಗತ್ತಿನಲ್ಲಿದೆ, ಆದರೆ ಅವನ ದುರಾಸೆಗಳನ್ನಲ್ಲ ಎಂದರು ಗಾಂಧೀಜಿ. ಚಿನ್ನ ನೆಕ್ಕಿ ಬಾಳ್ವರಿಲ್ಲ, ಅನ್ನ ಸೂರೆ ಮಾಡಿರಿ ಎಂದರು ಬೇಂದ್ರೆ. ಯಾವುದೇ ಪ್ರತಿಫಲದ ಅಪೇಕ್ಷೆ ಇಟ್ಟುಕೊಳ್ಳಬೇಡ, ನಿನ್ನ ಕೆಲಸವನ್ನಷ್ಟೇ ಮಾಡು, ಅದರಿಂದ ಮಾತ್ರ ಮನಃಶಾಂತಿ ಲಭಿಸುವುದು ಸಾಧ್ಯ ಎಂದು ಎಲ್ಲರಿಗಿಂತಲೂ ಮೊದಲೇ ಘೋಷಿಸಿದ್ದ ಗೀತಾಚಾರ್ಯ.

ಯುಕ್ತಃ ಕರ್ಮಫಲಂ ತ್ಯಕ್ತ್ವಾ ಶಾಂತಿಮಾಪ್ನೋತಿ ನೈಷ್ಠಿಕೀಮ್|
ಅಯುಕ್ತಃ ಕಾಮಕಾರೇಣ ಫಲೇ ಸಕ್ತೋ ನಿಬಧ್ಯತೇ||
ಯೋಗಿಯು ಕರ್ಮಫಲವನ್ನು ಬಿಟ್ಟು ನಿಷ್ಠಾರೂಪವಾದ ಶಾಂತಿಯನ್ನು ಪಡೆಯುತ್ತಾನೆ; ಅಮುಕ್ತನಾದವನು ಕಾಮಪ್ರೇರಣೆಯಿಂದ ಫಲದಲ್ಲಿ ಆಸಕ್ತನಾಗಿ ಬಂಧಿಸಲ್ಪಡುತ್ತಾನೆ - ಎಂಬುದು ಶ್ರೀಕೃಷ್ಣನ ಮಾತು.

ಎಲ್ಲ ಸಮಸ್ಯೆಗಳಿಗೂ ಮೂಲಕಾರಣ ಮನುಷ್ಯನ ಮನಸ್ಸು ಮತ್ತು ಅದರ ಚಾಂಚಲ್ಯ. ಅದನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದರಿಂದ ಮಾತ್ರವೇ ಅವನ ಉದ್ಧಾರ ಸಾಧ್ಯ ಎನ್ನುತ್ತದೆ ಭಗವದ್ಗೀತೆ.
'ಉದ್ಧರೇದಾತ್ಮನಾತ್ಮಾನಂ ನಾತ್ಮಾನಮವಸಾದಯೇತ್ | ಆತ್ಮೈವ ಹ್ಯಾತ್ಮನೋ ಬಂಧುರಾತ್ಮೈವ ರಿಪುರಾತ್ಮನಃ’ ಎಂಬಲ್ಲಿ ಶ್ರೀಕೃಷ್ಣ 'ಮನಸ್ಸೇ ತನ್ನ ಬಂಧು, ಮನಸ್ಸೇ ತನ್ನ ಶತ್ರು’ ಎಂಬ ಸಾರ್ವಕಾಲಿಕ ಸತ್ಯವನ್ನು ಬೋಧಿಸುತ್ತಾನೆ. ಶತ್ರುವನ್ನು ತನ್ನೊಳಗೇ ಇಟ್ಟುಕೊಂಡ ಮನುಷ್ಯ ಜೀವನಪೂರ್ತಿ ಅದೇ ಶತ್ರುವನ್ನು ಹುಡುಕಿಕೊಂಡು ಜಗತ್ತನ್ನೇ ಜಾಲಾಡುತ್ತಾನೆ.

ಬಯಕೆಗಳನ್ನು ಸುಟ್ಟುಹಾಕುವ
ಬಣ್ಣಗಳ ಹಬ್ಬ ಹೋಳಿ ಕಾಮದಹನದ ಕಥೆ ಹೇಳುತ್ತದೆ. ನಮ್ಮೊಳಗಿನ ಮೇರೆಮೀರಿದ ಬಯಕೆಗಳನ್ನು ಸುಟ್ಟುಹಾಕುವ ಸುಂದರ ಪ್ರತಿಮೆ ಅದು. ಭಾರತೀಯ ಸಂಸ್ಕೃತಿಯಲ್ಲಿ ಕಾಮಕ್ಕೆ ವಿಶಿಷ್ಟ ಸ್ಥಾನವಿದೆ. ಇದು ಕಾಮವನ್ನು ನಿರಾಕರಿಸಿದ ದೇಶ ಅಲ್ಲ; ಅದರ ಇತಿಮಿತಿಗಳನ್ನು ಜಗತ್ತಿಗೆ ತೋರಿಸಿಕೊಟ್ಟ ನೆಲ. ಅರ್ಥ-ಕಾಮಗಳನ್ನು ಧರ್ಮದ ಚೌಕಟ್ಟಿನಲ್ಲಿ ಇರಿಸಿದರಷ್ಟೇ ಮೋಕ್ಷದ ಹಾದಿ ಕಾಣಿಸೀತೆಂದು ಹೇಳಿದ ದೇಶ ಭೂಮಿಯಲ್ಲಿ ಬೇರೆಲ್ಲೂ ಸಿಗದು. ಕಾಮನ ಹುಣ್ಣಿಮೆಯ ಬೆಳಕು ನಮ್ಮ ಸುತ್ತಲಿನ ಕತ್ತಲನ್ನು ತೊಲಗಿಸೀತೇ?

ಕಾಮೆಂಟ್‌ಗಳಿಲ್ಲ: