ನವೆಂಬರ್ 18-24, 2017ರ ಬೋಧಿವೃಕ್ಷದಲ್ಲಿ ಪ್ರಕಟವಾದ ಲೇಖನ
ಬಾಲ್ಯವನ್ನೊಮ್ಮೆ ನೆನಪಿಸಿಕೊಳ್ಳಿ: ಬೀದಿಯುದ್ದ ಬೈಸಿಕಲ್ ಹೊಡೆಯುವ ಹುಡುಗ ಹುಡುಗಿಯರನ್ನು ಕನಸುಗಣ್ಣುಗಳಿಂದ ನೋಡಿ ತನಗೂ ಒಂದು ಪುಟ್ಟ ಬೈಸಿಕಲ್ ಬೇಕು ಎಂದು ಆಸೆಪಡದವರು ಇದ್ದೀರಾ? ಬಣ್ಣಬಣ್ಣದ ತರಹೇವಾರಿ ಸೈಕಲುಗಳಿಂದ ಗಿಜಿಗುಡುವ ಅಂಗಡಿಯೆದುರು ನಿಂತು ಈಗಲೇ ಒಂದು ಸೈಕಲ್ ಕೊಡಿಸಲೇಬೇಕೆಂದು ಅಪ್ಪ-ಅಮ್ಮನ ಎದುರು ನಿಂತು ರಸ್ತೆಯಲ್ಲೇ ಮುಷ್ಕರ ಹೂಡದವರು ಇದ್ದೀರಾ? ಬೈಸಿಕಲ್ ಕೊಡಿಸದೇ ಹೋದರೆ ಶಾಲೆಗೇ ಹೋಗುವುದಿಲ್ಲ ಎಂದು ಉಪವಾಸ ಸತ್ಯಾಗ್ರಹ ಮಾಡದವರು ಇದ್ದೀರಾ?
ಬೈಸಿಕಲ್ ಎಂದರೆ ಹಾಗೆಯೇ. ಜಗತ್ತಿನ ಎಲ್ಲರ ಆಕರ್ಷಣೆ. ವಿಮಾನ ಏರಬೇಕೆಂದು ಆಸೆಪಡದವರು ಸಿಗಬಹುದು, ಆದರೆ ಬೈಸಿಕಲ್ ಓಡಿಸಬೇಕೆಂದು ಕನಸುಕಾಣದವರು ಸಿಗುವುದು ಕಷ್ಟ. ಎಳವೆಯಲ್ಲಂತೂ ಸೈಕಲ್ ಹೊಡೆಯುವುದೇ ದೊಡ್ಡ ಗುರಿ ಮತ್ತು ಸಾಧನೆ. ಆದರೆ ಬೈಸಿಕಲ್ ಮೇಲೆ ಕುಳಿತಾಗಲೇ ಗೊತ್ತಾಗುವುದು ಅದನ್ನು ಓಡಿಸುವುದು ಕನಸು ಕಂಡಷ್ಟು ಸರಳ ಅಲ್ಲವೆಂದು. ಮೊದಲ ಸಲ ಸೈಕಲ್ ಹತ್ತಿದ ಮಗುವಂತೂ ಇದು ತನ್ನಿಂದಾಗದ ಕೆಲಸವೆಂದು ಒಂದೇ ನಿಮಿಷದಲ್ಲಿ ಆತಂಕದಿಂದ ಇಳಿದು ಬರುವ ಸಾಧ್ಯತೆಯೇ ಹೆಚ್ಚು. ಆರಂಭದ ದಿನಗಳಲ್ಲಿ ಮಕ್ಕಳ ಬೈಸಿಕಲ್ಲಿನ ಹಿಂಬದಿ ಟಯರಿಗೆ ಮತ್ತೆರಡು ಪುಟ್ಟ ಚಕ್ರಗಳು ಬೇಕು. ಮತ್ತೊಂದು ದಿನ ಮಗುವೇ ಹೇಳುತ್ತದೆ: ಸಾಕಿನ್ನು ಹಿಂಬದಿ ಚಕ್ರ, ತೆಗೆದುಬಿಡಿ ಅದನ್ನು. ಬೈಸಿಕಲ್ ಓಡಿಸುವುದು ಕರಗತವಾದ ಬಳಿಕ ಹೆಚ್ಚುವರಿ ಚಕ್ರಗಳೇ ನಮ್ಮ ಸ್ವಾಭಿಮಾನಕ್ಕೆ ಅಡ್ಡಿ!
ಬಹುಶಃ ಅಂಬೆಗಾಲಿಕ್ಕುವ ದಿನಗಳಿಂದ ತೊಡಗಿ ಬದುಕಿನ ಕೊನೆಯ ದಿನಗಳವರೆಗೂ ಬ್ಯಾಲೆನ್ಸ್ ಮಾಡುವುದೇ ಮನುಷ್ಯ ಜೀವನದ ಬಲುದೊಡ್ಡ ಸವಾಲು ಇರಬೇಕು. ಬಾಲ್ಯದಲ್ಲಿ ಸೈಕಲ್ ಬ್ಯಾಲೆನ್ಸ್ ಮಾಡುವುದೊಂದೇ ಅವಶ್ಯಕತೆ; ವರ್ಷಗಳು ಕಳೆದಂತೆ, ಹದಿಹರೆಯ, ಯೌವನ, ಉದ್ಯೋಗ, ಸಂಸಾರ, ಸಾಧನೆ, ಇಳಿವಯಸ್ಸು... ಹೀಗೆ ಒಂದೊಂದು ಹಂತಗಳು ದಾಟುತ್ತಿದ್ದಂತೆ ಬದುಕಿನ ಪ್ರತಿ ನಿಮಿಷವೂ ಪರ್ವತದಂಚಿನ ಹಾದಿಯ ಸೈಕಲ್ ಬ್ಯಾಲೆನ್ಸೇ! ಸಮತೋಲನ ಸಾಧಿಸಿದವನು ಪರ್ವತ ಏರಿಯಾನು, ಎಚ್ಚರ ತಪ್ಪಿದವನು ಮತ್ತೆಂದೂ ಏಳಲಾಗದ ಪ್ರಪಾತಕ್ಕೆ ಬಿದ್ದಾನು.
ಜೀವನವೆಂದರೆ ಬೈಸಿಕಲ್ ಓಡಿಸಿದ ಹಾಗೆ, ಸಮತೋಲನವನ್ನು ಕಾಯ್ದುಕೊಳ್ಳಬೇಕಾದರೆ ನೀವು ಚಲಿಸುತ್ತಲೇ ಇರಬೇಕು - ಎಂದರು ಆಲ್ಬರ್ಟ್ ಐನ್ಸ್ಟೀನ್. ಜಗತ್ತಿನ ಚಲನೆಯ ನಿಯಮಗಳನ್ನು ಅತ್ಯಂತ ಸರಳವಾಗಿ ಸೂತ್ರೀಕರಿಸಿದ ಮಹಾನ್ ವಿಜ್ಞಾನಿ ಬದುಕಿನ ಬಹುದೊಡ್ಡ ಸತ್ಯವನ್ನೂ ಎಷ್ಟೊಂದು ಸರಳವಾಗಿ ಹೇಳಿಬಿಟ್ಟಿದ್ದಾರೆ ನೋಡಿ. ಚಲಿಸದೇ ಹೋದರೆ ಸೈಕಲ್ ಅರೆಕ್ಷಣವೂ ನಿಲ್ಲದು. ಬೀಳದೆ ಇರಬೇಕೆಂದರೆ ಪೆಡಲ್ ಮಾಡುತ್ತಲೇ ಇರಬೇಕು. ಚಲನಶೀಲತೆ ಬದುಕಿನ ಸಾರಸರ್ವಸ್ವ ಎನ್ನುತ್ತಲೇ ಬದುಕೆಂಬುದೊಂದು ಕಲೆ ಎಂಬ ಸತ್ಯವನ್ನು ಐನ್ಸ್ಟೀನ್ ಎಷ್ಟು ಸುಲಭವಾಗಿ ವಿವರಿಸಿದ್ದಾರೆ!
ಕಲೆಯೆಂದರೆ ಹಾಗೆಯೇ, ಕಲಿಯುವವರೆಗೆ ಎಲ್ಲವೂ ಕಠಿಣ, ಕಲಿತ ಮೇಲೆ ತುಂಬ ಸಲೀಸು. ಆದರೆ ಕಲಿಯುವ ಹಾದಿಯೇ ಬಲುಕಠಿಣ. ಪೂರ್ತಿ ಕಲಿತಾಗುವ ಮುನ್ನವೇ ನಿವೃತ್ತಿ ಘೋಷಿಸುವವರೇ ಹೆಚ್ಚು. ನಮ್ಮ ಸುತ್ತಮುತ್ತ ಎಷ್ಟೊಂದು ಬಗೆಯ ಮಂದಿಯನ್ನು ನೋಡುತ್ತೇವೆ: ತೀರಾ ಕೆಳಹಂತದಿಂದ ಬೆಳೆದು ಶಿಖರಪ್ರಾಯ ಸಾಧನೆ ಮಾಡಿದವರು, ಯಶಸ್ಸಿನ ಶಿಖರಕ್ಕೇರಿ ಸೋಲಿನ ಪಾತಾಳಕ್ಕೆ ಕುಸಿದವರು, ಆರಕ್ಕೂ ಏರದೆ ಮೂರಕ್ಕೂ ಇಳಿಯದೆ ಇಡೀ ಜೀವನವನ್ನು ನೀರಸವಾಗಿಯೇ ಮುಗಿಸಿದವರು, ಅರೆಕ್ಷಣದ ದೌರ್ಬಲ್ಯಕ್ಕೆ ತುತ್ತಾಗಿ ಬದುಕಿಗೆ ಅಂತ್ಯ ಹಾಡಿದವರು, ಅದೇ ಅರೆಕ್ಷಣದಲ್ಲೂ ಮನಸ್ಸು ಬದಲಾಯಿಸಿ ಸಾವಿನ ದವಡೆಯಿಂದ ತಪ್ಪಿಸಿಕೊಂಡು ಯಶಸ್ಸಿನ ಉತ್ತುಂಗಕ್ಕೇರಿ ಮೆರೆದವರು...
ಒಬ್ಬೊಬ್ಬನ ಬದುಕೂ ಒಂದೊಂದು ಥರ. ಎಲ್ಲರೂ ಬದುಕುವ ನೆಲ ಅದೇ, ಕುಡಿಯುವ ನೀರು ಅದೇ, ಉಸಿರಾಡುವ ಗಾಳಿ ಅದೇ; ಆದರೆ ಯಾಕೆ ಎಲ್ಲರ ಬದುಕೂ ಒಂದೇ ರೀತಿ ಇರುವುದಿಲ್ಲ? ಏಕೆಂದರೆ ನೆಲ-ನೀರು-ಗಾಳಿ ಒಂದೇ ಆದರೂ ಯೋಚಿಸುವ ಮನಸ್ಸುಗಳು ಬೇರೆಬೇರೆ; ತೆಗೆದುಕೊಳ್ಳುವ ನಿರ್ಧಾರಗಳು ಬೇರೆಬೇರೆ. ನೂರು ಕೋಟಿ ಜನರಿದ್ದರೆ ನೂರು ಕೋಟಿ ಮನಸ್ಸುಗಳು, ಮುನ್ನೂರು ಕೋಟಿ ಆಲೋಚನೆಗಳು. ಜೀವನವೆಂದರೆ ಏನೆಂದು ಎಲ್ಲರನ್ನೂ ಕೇಳಿದರೆ ಒಬ್ಬೊಬ್ಬರು ಒಂದೊಂದು ವ್ಯಾಖ್ಯಾನ ನೀಡಿಯಾರು. ಆದರೆ ಜೀವನವೊಂದು ಕಲೆ ಎಂಬ ಮುಕ್ತ ರಹಸ್ಯವನ್ನು ಅವರು ಹೇಳಿಯಾರೇ?
'ಬದುಕೊಂದು ನಡೆದಾಡುವ ನೆರಳು, ರಂಗದ ಮೇಲೆ ಅತ್ತಿಂದಿತ್ತ ಇತ್ತಿಂದತ್ತ ಪರದಾಡುವ ಬಡ ಕಲಾವಿದ, ಮೂರ್ಖ ಹೇಳಿದ ಕಥೆ...’ ಎನ್ನುತ್ತಾನೆ ಶೇಕ್ಸ್ಪಿಯರನ ಮ್ಯಾಕ್ಬೆತ್. 'ಬದುಕು ಜಟಕಾ ಬಂಡಿ, ವಿಧಿಯದರ ಸಾಹೇಬ’ ಎಂದರು ಡಿ.ವಿ.ಜಿ. ಆದರೆ ಬದುಕಿನ ಎಲ್ಲ ಬೆಳವಣಿಗೆಗಳನ್ನೂ ಕೇವಲ ವಿಧಿ ಲೀಲೆಗೇ ತೂಗುಹಾಕಲಿಲ್ಲ ಅವರು. 'ಕುದುರೆ ನೀನ್, ಅವನು ಪೇಳ್ದಂತೆ ಪಯಣಿಗರು, ಮದುವೆಗೋ ಮಸಣಕೋ ಹೋಗೆಂದ ಕಡೆಗೋಡು, ಪದಕುಸಿಯೆ ನೆಲವಿಹುದು-ಮಂಕುತಿಮ್ಮ’ ಎಂದು ಸಾಗುವ ಕಗ್ಗದಲ್ಲಿ 'ಕುದುರೆ ನೀನು’ ಮತ್ತು 'ಪದಕುಸಿಯೆ ನೆಲವಿಹುದು’ ಎಂಬ ಎರಡು ಮಾತುಗಳನ್ನು ನಾವು ಪ್ರತ್ಯೇಕವಾಗಿ ಗಮನಿಸಬೇಕು. ಎಲ್ಲವೂ ಅವನ ಲೀಲೆಯೆಂದು ಅಖೈರು ಮಾಡುವ ಮೊದಲು ಸಾಗುವ ಕುದುರೆಗಳು ನಾವೇ ಎಂಬ ಸಣ್ಣ ಆಯ್ಕೆಯ ಪ್ರಜ್ಞೆ ಹಾಗೂ ಎಷ್ಟು ಕುಸಿದರೂ ಕೆಳಗೆ ನೆಲವಿದೆ ಎಂಬ ವಿಶ್ವಾಸ ಬೆಳೆಸಿಕೊಂಡರೆ ವಿಧಿಯೂ ಮನುಷ್ಯನ ಬೆಂಬಲಕ್ಕೆ ನಿಲ್ಲದೆ ಇರಲಾರದು.
ವಾಸ್ತವವಾಗಿ ಬದುಕು ತುಂಬ ಸರಳವಾಗಿರುತ್ತದೆ. ನಾವೆಲ್ಲರೂ ಅದನ್ನು ಸಂಕೀರ್ಣಗೊಳಿಸಲು ಹವಣಿಸುತ್ತಿರುತ್ತೇವೆ ಎಂದ ತತ್ತ್ವಜ್ಞಾನಿ ಕನ್ಫ್ಯೂಶಿಯಸ್. ಎಲ್ಲರಿಗೂ ಜೀವನದಲ್ಲಿ ದೊಡ್ಡದನ್ನು ಸಾಧಿಸುವ ಹಂಬಲ. ದೊಡ್ಡದು ಎಂದರೆ ಏನು? ಕೋಟಿಗಟ್ಟಲೆ ಸಂಪಾದಿಸುವುದೇ? ಲಕ್ಷಾಂತರ ಅಭಿಮಾನಿಗಳನ್ನು ಪಡೆಯುವುದೇ? ಹತ್ತು ಮಹಡಿಯ ಬಂಗಲೆಯಲ್ಲಿ ವಾಸಿಸುವುದೇ? ಐಷಾರಾಮಿ ಕಾರಿನಲ್ಲಿ ಓಡಾಡುವುದೇ? ಚಿನ್ನದ ತಟ್ಟೆಯಲ್ಲಿ ಉಣ್ಣುವುದೇ? ಇದೇ ಬದುಕಿನ ಯಶಸ್ಸು ಎಂದುಕೊಳ್ಳುವುದಾದರೆ ಇದರಿಂದ ಮನುಷ್ಯ ಸಂತೋಷವಾಗಿರಬಲ್ಲನೇ? ಕಣ್ತುಂಬ ನಿದ್ದೆ ಮಾಡಬಲ್ಲನೇ? ಇಲ್ಲ ಎಂದಾದರೆ ಅವನ ’ದೊಡ್ಡ ಸಾಧನೆ’ಯ ಸಾರ್ಥಕ್ಯ ಏನು? ಎಲ್ಲರಿಗಿಂತ ಹೆಚ್ಚು ಸಂಪಾದಿವುದೇ ಯಶಸ್ಸು ಎಂದು ಜಗತ್ತಿನ ಬಹುಪಾಲು ಮಂದಿ ಭಾವಿಸಿರುವುದೇ ಅವರ ಅತೃಪ್ತಿಯ ಮೂಲ. ಬದುಕಿನ ಸರಳತೆಯನ್ನು ಸಂಕೀರ್ಣಗೊಳಿಸುವುದು ಎಂದರೆ ಇದೇ ಅಲ್ಲವೇ?
ತರಚು ಗಾಯವ ಕೆರೆದು ಹುಣ್ಣನಾಗಿಪುದು ಕಪಿ |
ಕೊರತೆಯೊಂದನು ನೀನು ನೆನೆನೆನೆದು ಕೆರಳಿ ||
ಧರೆಯೆಲ್ಲವನು ಶಪಿಸಿ ಮನದಿ ನರಕವ ನಿಲಿಸಿ |
ನರಳುವುದು ಬದುಕೇನೋ? - ಮಂಕುತಿಮ್ಮ ||
ಎಂದು ಡಿವಿಜಿಯವರು ಇಂತಹ ಮನಸ್ಥಿತಿಯವರನ್ನೇ ಪ್ರಶ್ನಿಸಿರುವುದು. ಸಣ್ಣ ಕೊರತೆಗಳೆಂಬ ತರಚು ಗಾಯಗಳನ್ನೇ ಕೆರೆದು ದೊಡ್ಡ ಹುಣ್ಣನ್ನಾಗಿಸುವ ಮನುಷ್ಯನ ಕೋತಿಬುದ್ಧಿಯನ್ನು ಅವರು ಎಷ್ಟೊಂದು ಮಾರ್ಮಿಕವಾಗಿ ಎತ್ತಿ ತೋರಿಸಿದ್ದಾರೆ ನೋಡಿ. ’ಸರಿಯಾಗಲಿಲ್ಲವದು ಸರಿಯಿದಲ್ಲವೆನುತ/ ಹರಡಿಕೊಳ್ಳಬೇಡ ಮುಳ್ಳನು ಹಾಸಿಗೆಯಲಿ/ ಕೊರೆಯಾದೊಡೇನೊಂದು, ನೆರೆದೊಡೇನಿನ್ನೊಂದು/ ಒರಟು ಕೆಲಸವೋ ಬದುಕು’ ಎಂದು ಬುದ್ಧಿಮಾತನ್ನೂ ಹೇಳಿದ್ದಾರೆ. ಇನ್ನೊಬ್ಬರೊಂದಿಗೆ ತಮ್ಮನ್ನು ಹೋಲಿಸಿಕೊಂಡು, ತಮಗೆ ಅದು ಸಿಕ್ಕಿಲ್ಲ ಇದು ದಕ್ಕಿಲ್ಲ ಎಂದು ಮುಳ್ಳಹಾಸಿಗೆಯಲ್ಲಿ ಹೊರಳುವ ಜನರಿಗೆ ಡಿವಿಜಿಯವರ ನುಡಿಯೇ ದಿವ್ಯೌಷಧ.
'ಮನಸ್ಸು ರೋಗವನ್ನು ಸೃಷ್ಟಿಸಬಲ್ಲುದು, ಗುಣಪಡಿಸಬಲ್ಲದು! ತಾಳ್ಮೆ, ಪ್ರೀತಿ, ಕರುಣೆ, ದಾನಬುದ್ಧಿ, ನಿಃಸ್ವಾರ್ಥ ಸೇವಾಮನೋಭಾವ- ಇವೇ ಮೊದಲಾದ ರಚನಾತ್ಮಕ ಭಾವನೆಗಳು ದೇಹಯಂತ್ರದ ಎಲ್ಲ ಭಾಗಗಳಲ್ಲಿ ಉತ್ಸಾಹಯುತ ಆರೋಗ್ಯಕರ ಚಟುವಟಿಕೆಗಳಿಗೆ ಕಾರಣವಾಗುತ್ತವೆ’ ಎಂದು ತಮ್ಮ 'ಬದುಕಲು ಕಲಿಯಿರಿ’ ಕೃತಿಯಲ್ಲಿ ಹೇಳುವ ಸ್ವಾಮಿ ಜಗದಾತ್ಮಾನಂದರು 'ಮನಸ್ಸಿನಲ್ಲಿ ಉದಿಸುವ ಯೋಚನೆ ಎಂಬ ದ್ರವ್ಯದಿಂದ ವಿಷವನ್ನೂ ತಯಾರಿಸಬಹುದು, ಅಮೃತವನ್ನೂ ತಯಾರಿಸಬಹುದು. ತಿಳಿದೋ ತಿಳಿಯದೆಯೋ ವಿಷವನ್ನು ತಯಾರಿಸುವವರೇ ಹೆಚ್ಚು. ಮನಸ್ಸು ಕೆಲಸ ಮಾಡುವ ಸೂಕ್ಷ್ಮ ನಿಯಮವನ್ನು ತಿಳಿದುಕೊಂಡರೆ, ಶ್ರದ್ಧೆಯಿಂದ ಶ್ರಮಿಸಿದರೆ ವಿಷವನ್ನೂ ಅಮೃತವನ್ನಾಗಿಸಬಹುದು’ ಎನ್ನುತ್ತಾರೆ. ವಿಷವನ್ನೂ ಅಮೃತವಾಗಿಸುವುದೇ ಬದುಕಿನ ಕಲೆಯಲ್ಲವೇ?