ಶನಿವಾರ, ಏಪ್ರಿಲ್ 1, 2017

ಸದ್ದುಗದ್ದಲವಿರದ ಸಾಧನೆ ಗದ್ದುಗೆಯೇರಿದ ಪರಿ

ಏಪ್ರಿಲ್ 1, 2017ರ 'ವಿಜಯವಾಣಿ' ವಿಶೇಷ ಪುರವಣಿಯಲ್ಲಿ ಪ್ರಕಟವಾದ ಲೇಖನ

ಸದ್ದುಗದ್ದಲವಿರದ ಸಾಧನೆ ಇಲ್ಲಿ ಗದ್ದುಗೆಯೇರಿದೆ
ಕಾಯಕವೆ ಕೈಲಾಸವೆನ್ನುವ ಮಾತು ಕೃತಿಯೊಳು ಮೂಡಿದೆ|
ಕಾವಿಯುಡುಗೆಯನುಟ್ಟು ನಭವೇ ಕಿರಣ ಹಸ್ತವ ಚಾಚಿದೆ
ಎಲ್ಲ ನನ್ನವರೆನ್ನುವ ಭಾವದ ಕರುಣೆಯೇ ಕಣ್ತೆರೆದಿದೆ||
ಶ್ರೀ ಸಿದ್ದಗಂಗಾ ಮಠದ ಹಿರಿಯ ವಿದ್ಯಾರ್ಥಿ ರಾಷ್ಟ್ರಕವಿ ಡಾ. ಜಿ. ಎಸ್. ಶಿವರುದ್ರಪ್ಪನವರು 1972ರಲ್ಲಿ ಬರೆದ 'ಸಿದ್ದಗಂಗೆಯ ಶ್ರೀಚರಣಕ್ಕೆ' ಎಂಬ ಕವಿತೆಯ ಸಾಲುಗಳಿವು. ತ್ರಿವಿಧ ದಾಸೋಹವೆಂಬ ಮೌನಕ್ರಾಂತಿಯ ಮೂಲಕವೇ ವಿಶ್ವಪ್ರಸಿದ್ಧಿ ಪಡೆದ, ಕಾಯಕವೇ ಕೈಲಾಸವೆಂಬ ಶರಣ ತತ್ತ್ವದ ಶ್ರೇಷ್ಠ ಪ್ರಯೋಗಶಾಲೆಯಾದ, ಬಹುಮುಖ್ಯವಾಗಿ ಎಲ್ಲ ನನ್ನವರೆನ್ನುವ ಭಾವದ ವಿಶ್ವಮಾನವ ಸಂದೇಶವನ್ನು ಜಗತ್ತಿಗೆ ಸಾರಿದ ಸಿದ್ದಗಂಗೆಯ ಅಮೋಘ ವ್ಯಕ್ತಿತ್ವವನ್ನು ಕಟ್ಟಿಕೊಡುವಲ್ಲಿ ಕವಿವಾಣಿ ನೂರು ಪ್ರತಿಶತ ಯಶಸ್ವಿಯಾಗಿದೆ.

ಸಿದ್ದಗಂಗೆಯ ಇಂತಹ ಪರ್ವತೋಪಮ ವ್ಯಕ್ತಿತ್ವದ ಹಿಂದಿನ ಶಕ್ತಿ ಕರ್ನಾಟಕ ರತ್ನ ಡಾ. ಶ್ರೀ ಶಿವಕುಮಾರ ಮಹಾಸ್ವಾಮೀಜಿಗಳೆಂಬುದು ಸರ್ವವಿದಿತ. ನೂರಹತ್ತು ಸಂವತ್ಸರಗಳ ಸುದೀರ್ಘ ಇತಿಹಾಸಕ್ಕೆ ಜೀವಂತ ಸಾಕ್ಷಿಯಾಗಿರುವ, ಸರಳತೆ, ಸಜ್ಜನಿಕೆ, ಮಮತೆ, ನಿಸ್ವಾರ್ಥತೆಗಳ ಸಾಕಾರಮೂರ್ತಿ ಸಿದ್ದಗಂಗಾಶ್ರೀಗಳು ಸಾರಿದ ತತ್ತ್ವಗಳು ಮತ್ತು ತಮ್ಮ ಬದುಕಿನಲ್ಲಿ ಅವುಗಳನ್ನು ಆಚರಿಸಿದ ರೀತಿ ಇಡೀ ವಿಶ್ವಕ್ಕೆ ಮಾದರಿಯಾದದ್ದು.

ಮತ-ಧರ್ಮಗಳ ಕುಲುಮೆಯಲ್ಲಿ ಬೇಯುತ್ತಿರುವ, ಜಾತಿ-ಪಂಗಡಗಳ ಬಿರುಕುಗಳಲ್ಲಿ ಕುಸಿಯುತ್ತಿರುವ, ಹಿಂಸೆ-ಸಂಘರ್ಷಗಳ ಬೇಗೆಯಲ್ಲಿ ನಲುಗುತ್ತಿರುವ ವರ್ತಮಾನದ ಪ್ರಪಂಚಕ್ಕೆ ಇಂದು ತುರ್ತಾಗಿ ಬೇಕಿರುವುದು ಸಿದ್ದಗಂಗಾ ಶ್ರೀಗಳ 'ಎಲ್ಲ ನನ್ನವರೆನ್ನುವ ಭಾವದ ಕರುಣೆ' ಮತ್ತು ಮನುಷ್ಯ ತಾನೇ ಸೃಷ್ಟಿಸಿಕೊಂಡಿರುವ ಕಟ್ಟುಪಾಡುಗಳನ್ನು ಮೀರಿ ನಿಲ್ಲುವ ಮಾನವೀಯತೆ. ಇಡೀ ಶತಮಾನದ ಏಳುಬೀಳುಗಳನ್ನು ಕಣ್ಣಾರೆ ನೋಡಿ, ಶರಣಚಿಂತನೆಗಳ ಚೌಕಟ್ಟಿನಲ್ಲಿ ಅವುಗಳ ಮೌಲ್ಯಮಾಪನ ನಡೆಸಿರುವ ಶ್ರೀಗಳಿಗೆ ಪ್ರಪಂಚಕ್ಕೆ ಯಾವುದು ಸನ್ಮಾರ್ಗವೆಂದು ಬೋಧಿಸುವ ಎಲ್ಲ ಅಧಿಕಾರವೂ ಇದೆ.

ಶ್ರೀ ಉದ್ಧಾನ ಶಿವಯೋಗಿಗಳಿಂದ ತೊಡಗಿ ಬಸವಾದಿ ಶರಣರು, ಸ್ವಾಮಿ ವಿವೇಕಾನಂದರು, ಮಹರ್ಷಿ ಅರವಿಂದರು ಹಾಗೂ ಡಾ. ಎಸ್. ರಾಧಾಕೃಷ್ಣನ್ ಅವರಂತಹ ದಾರ್ಶನಿಕರಿಂದ ಅಪಾರವಾಗಿ ಪ್ರಭಾವಿಸಲ್ಪಟ್ಟ ಡಾ. ಶಿವಕುಮಾರ ಸ್ವಾಮೀಜಿಯವರು ಅವರದೇ ಹಾದಿಯಲ್ಲಿ ಮುಂದುವರಿದು ಪ್ರಪಂಚಕ್ಕೆ ಮಾದರಿಯಾಗಿರುವುದಲ್ಲದೆ ಲಕ್ಷಾಂತರ ಮಂದಿಗೆ ಋಜುಮಾರ್ಗದ ಪರಿಚಯ ಮಾಡಿಕೊಟ್ಟಿದ್ದಾರೆ. 'ನನ್ನ ಜೀವನವೇ ನನ್ನ ಸಂದೇಶ' ಎಂದಿದ್ದರು ಮಹಾತ್ಮ ಗಾಂಧೀಜಿ. ಬಹುಶಃ ಅಂತಹ ಮಾತನ್ನು ಇನ್ನೊಮ್ಮೆ ಹೇಳುವ ನೈತಿಕ ಸ್ಥೈರ್ಯವಿದ್ದರೆ ಅದು ಅಭಿಮಾನಿಗಳ ಮನಸ್ಸಿನಲ್ಲಿ 'ನಡೆದಾಡುವ ದೇವರಾಗಿ' ನೆಲೆಸಿರುವ ಸಿದ್ದಗಂಗೆಯ ಶ್ರೀಗಳಿಗೆ ಮಾತ್ರ.

ಇಡೀ ಜಗತ್ತು ಇಂದು ಎದುರು ನೋಡುತ್ತಿರುವುದು ಶಾಂತಿ ಸಮಾಧಾನಗಳಿಗೆ ಮತ್ತು ಸಂತೃಪ್ತಿಯ ಬದುಕಿಗೆ. ಈ ಸಂತೃಪ್ತಿ ಒದಗಬೇಕಾದರೆ ಓಣಿಓಣಿಗಳಲ್ಲಿ ಮಹಡಿ ಮಹಲುಗಳು ಏಳಬೇಕಾಗಿಲ್ಲ, ಜನಸಾಮಾನ್ಯರು ಚಿನ್ನದ ತಟ್ಟೆಗಳಲ್ಲಿ ಉಣ್ಣಬೇಕಾಗಿಲ್ಲ. ಜನರಿಗೆ ಬೇಕಿರುವುದು ಹೊಟ್ಟೆ ತುಂಬುವಷ್ಟು ಅನ್ನ, ಬಿಸಿಲು-ಮಳೆಗಳಿಂದ ರಕ್ಷಿಸಿಕೊಳ್ಳುವ ಆಶ್ರಯ ಮತ್ತು ಪ್ರಪಂಚನ್ನು ನೋಡಲು ಬೇಕಾಗಿರುವ ಜ್ಞಾನದ ಕಣ್ಣು. ಮಹಾದಾಸೋಹಿ ಶಿವಕುಮಾರ ಸ್ವಾಮೀಜಿಯವರು ಈ ಮೂರು ಮೂಲಭೂತ ಅವಶ್ಯಕತೆಗಳನ್ನು ಪೂರೈಸುವುದಕ್ಕೆ ತಮ್ಮ ಜೀವನವನ್ನು ಮೀಸಲಾಗಿರಿಸಿರುವುದರಿಂದಲೇ ಇಂದು ಜನಮಾನಸದಲ್ಲಿ ಶಾಶ್ವತ ಸ್ಥಾನ ಪಡೆದುಕೊಂಡಿದ್ದಾರೆ.

'ಬಡವರಿಗಾಗಿ ಯಾರ ಹೃದಯ ಮಿಡಿಯುತ್ತದೆಯೋ ಅವನು ಮಹಾತ್ಮ, ಇಲ್ಲವಾದರೆ ದುರಾತ್ಮ' ಎಂದಿದ್ದರು ಸ್ವಾಮಿ ವಿವೇಕಾನಂದರು. ಸಿದ್ದಗಂಗೆಯ ಪರಂಪರೆಯನ್ನು ಮುಂದುವರಿಸುವ ಮಹಾಜವಾಬ್ದಾರಿಯನ್ನು ಹೊತ್ತುಕೊಂಡಲ್ಲಿಂದೀಚೆಗಿನ ಸುಮಾರು ತೊಂಬತ್ತು ವರ್ಷಗಳ ಸುದೀರ್ಘ ಅವಧಿಯಲ್ಲಿ ಶ್ರೀಗಳ ಅಂತರಂಗದಲ್ಲಿ ಅನುರಣಿಸುತ್ತಿದ್ದುದು ಬಹುಶಃ ಇದೇ ಮಾತು. 'ಹಸಿದು ಬಂದವನಿಗೆ ಅನ್ನ ನೀಡುವುದು ಧರ್ಮ. ಕತ್ತಲಿನಲ್ಲಿ ತೊಳಲಾಡುತ್ತಿರುವವನಿಗೆ ಬೆಳಕು ನೀಡುವುದು ಧರ್ಮ' - ಶ್ರೀಗಳು ಧರ್ಮಕ್ಕೆ ನೀಡಿರುವ ವ್ಯಾಖ್ಯಾನ ಎಷ್ಟೊಂದು ಅದ್ಭುತವಾಗಿದೆ! 1966ರಲ್ಲಿ ತುಮಕೂರಿನಲ್ಲಿ ಭೀಕರ ಬರಗಾಲ ತಟ್ಟಿದಾಗಲೂ ಜನರು ಉಪವಾಸ ಬೀಳದಂತೆ ಮಾಡಿದ್ದು ಸ್ವಾಮೀಜಿಯವರ ಇದೇ ಕರುಣೆಯ ಕಣ್ಣು.

ಭಿಕ್ಷೆ ಹೊರಟಿದೆ ಜಂಗಮದ ಜೋಳಿಗೆ, ಲಕ್ಷ ಜನಗಳ ಪೊರೆದಿದೆ;
ತೀರ್ಥವಾಗಿದೆ ಭಕ್ತರಿಗೆ, ಚಿರಸ್ಫೂರ್ತಿಯಾಗಿದೆ ಬುದ್ಧಿಗೆ |
ಬಂದ ಹಣತೆಗೆ ಎಣ್ಣೆ-ಬತ್ತಿಯ-ದೀಪ್ತಿದಾನವ ಮಾಡಿದೆ
ರಕ್ಷೆಯಾಗಿದೆ ಮುಗಿಲನೇರಿದ ಎಷ್ಟೊ ರೆಕ್ಕೆಯ ಹಾದಿಗೆ ||
ಜಿ.ಎಸ್.ಎಸ್. ಅವರ ಸಾಲುಗಳು ಎಷ್ಟೊಂದು ಮಾರ್ಮಿಕವಾಗಿ ಈ ವಿಚಾರವನ್ನು ಕಟ್ಟಿಕೊಟ್ಟಿವೆ ನೋಡಿ. ಬಹುಶಃ ಈ ಜಂಗಮದ ಜೋಳಿಗೆ ಪೊರೆದಿರುವ ಹೊಟ್ಟೆ-ಹೃದಯಗಳ ಲೆಕ್ಕವಿಡುವುದು ಕಷ್ಟ. ಇಂದಿಗೂ ಮಠದಲ್ಲಿ ಪ್ರತಿದಿನ ಹತ್ತುಸಾವಿರ ಮಂದಿಗೆ ಪ್ರಸಾದ ವಿನಿಯೋಗವಾಗುತ್ತದೆ ಎಂದರೆ ಅದೊಂದು ತಪಸ್ಸಿಗೆ ಸಮಾನವಾದ ಕೆಲಸ.

ಸಿದ್ದಗಂಗಾ ಮಠದಲ್ಲಿ ಶಿಕ್ಷಣ ಪಡೆದು ದೊಡ್ಡದೊಡ್ಡ ಹುದ್ದೆಗಳನ್ನು ಅಲಂಕರಿಸಿದ ಮಂದಿ ಜಗತ್ತಿನಾದ್ಯಂತ ಇದ್ದಾರೆ. ಉಚಿತ ಅನ್ನ, ಆಶ್ರಯ, ವಿದ್ಯಾದಾನದ ಪರಂಪರೆ ಇಲ್ಲದೇ ಹೋಗಿರುತ್ತಿದ್ದರೆ ಎಷ್ಟು ಸಹಸ್ರ ಮಂದಿ ಶಿಕ್ಷಣದಿಂದ ವಂಚಿತರಾಗಿರುತ್ತಿದ್ದರೋ ಏನೋ? ಇಂದಿಗೂ ಹತ್ತುಸಾವಿರದಷ್ಟು ವಿದ್ಯಾರ್ಥಿಗಳು ಮಠದ ಆಶ್ರಯದಲ್ಲಿದ್ದುಕೊಂಡು ವಿದ್ಯಾಭ್ಯಾಸ ನಡೆಸುತ್ತಿದ್ದಾರೆ ಎಂದರೆ ಜನರ ಬಾಳನ್ನು ಬೆಳಗುವ ವಿದ್ಯೆಗೆ ಮಠ ನೀಡಿರುವ ಮಹತ್ವ ಅರ್ಥವಾಗುತ್ತದೆ. ಕೆಲವು ನೂರು ವಿದ್ಯಾರ್ಥಿಗಳನ್ನು ಹೊಂದಿರುವ ಹಾಸ್ಟೆಲುಗಳನ್ನು ನಡೆಸುವವರೇ ಅಲ್ಲಲ್ಲಿ ಎಡವಿಬೀಳುತ್ತಿರುವ ಈ ದಿನಗಳಲ್ಲಿ ಎಲ್ಲೆಲ್ಲಿಂದಲೋ ಬಂದಿರುವ, ಸಮಾಜದ ವಿವಿಧ ವರ್ಗಗಳಿಗೆ ಸೇರಿರುವ ಸಾವಿರಾರು ಮಕ್ಕಳನ್ನು ಒಂದೇ ಸೂರಿನಡಿ ಪೊರೆಯುತ್ತಿರುವ ಸಿದ್ದಗಂಗೆಯ ಮಹಾಮನೆ ಒಂದು ದೊಡ್ಡ ವಿಸ್ಮಯದ ಕೇಂದ್ರ.

ನರ್ಸರಿಯಿಂದ ತೊಡಗಿ ಎಂಜಿನಿಯರಿಂಗ್‌ವರೆಗೆ ವಿವಿಧ ಹಂತ ಮತ್ತು ಕ್ಷೇತ್ರಗಳಿಗೆ ಸಂಬಂಧಿಸಿದ ಸುಮಾರು ನೂರೈವತ್ತು ಶಿಕ್ಷಣ ಸಂಸ್ಥೆಗಳನ್ನು ನಡೆಸುತ್ತಿರುವ ಹೆಗ್ಗಳಿಕೆ ಸಿದ್ದಗಂಗಾ ಮಠದ್ದು. ಅದರಲ್ಲೂ ಸಂಸ್ಕೃತ ಅಧ್ಯಯನ, ಕನ್ನಡ ಪಂಡಿತ ಪದವಿ ಹಾಗೂ ಅಂಧರ ಶಿಕ್ಷಣಕ್ಕೆ ಅದು ನೀಡುತ್ತಿರುವ ಪ್ರಾಮುಖ್ಯತೆಗೆ ವಿಶೇಷ ಮನ್ನಣೆ ಸಲ್ಲಬೇಕು.

ಜಾತಿ ವ್ಯವಸ್ಥೆ ಸಮಾಜವನ್ನು ದುರ್ಬಲಗೊಳಿಸುತ್ತಿರುವ ಇಂದಿನ ಸಮಾಜದ ಬಗ್ಗೆ ಒಂದಿಷ್ಟಾದರೂ ಆಶಾಭಾವನೆ ಮೂಡಬೇಕಾದರೆ ಸಿದ್ದಗಂಗೆಯ ವಿಸ್ತಾರ ಅಂಗಣದಲ್ಲಿ ಸಮವಸ್ತ್ರದೊಂದಿಗೆ ಪ್ರಾರ್ಥನೆಗೆ ಕುಳಿತಿರುವ ಸಾವಿರಾರು ಪುಟಾಣಿಗಳ ಒಕ್ಕೊರಲ ಧ್ವನಿ ಕೇಳಬೇಕು. ಜಾತಿವ್ಯವಸ್ಥೆ ಹಾಗೂ ಅನಕ್ಷರತೆ ಇಂದಿನ ಹಲವಾರು ಸಮಸ್ಯೆಗಳಿಗೆ ಮೂಲಕಾರಣವಾಗಿದೆ. ಹಸಿವು, ಬಡತನ, ನಿರುದ್ಯೋಗ ಮೊದಲಾದ ಸಮಸ್ಯೆಗಳಿದ್ದರೂ ಅವುಗಳ ನಿವಾರಣೆಯ ಬದಲು ನಾವು ಜಾತಿ ವ್ಯವಸ್ಥೆಯಲ್ಲಿ ಮುಳುಗಿ ಹೋಗಿದ್ದೇವೆ ಎಂಬ ಶ್ರೀವಾಣಿ ಸಮಾಜವನ್ನು ಎಚ್ಚರಿಸಬೇಕಿದೆ.

'ಸಕಲ ಜೀವರಿಗೆ ಲೇಸನ್ನೇ ಬಯಸುವ ವಿಜ್ಞಾನವಿಂದು ಬೇಕಾಗಿದೆ. ಬಾಂಬುಗಳ, ಅಣುಬಾಂಬುಗಳ ಮೂಲಕ ಮನುಕುಲವನ್ನು ನಾಶಮಾಡುವ ಯುದ್ಧದ ಅಸ್ತ್ರಕ್ಕಿಂತ ನರಳುತ್ತಿರುವ ಜೀವಿಗಳಿಗೆ ನಗು ತಂದುಕೊಡುವ ವಿಜ್ಞಾನ ಇಂದು ಬೇಕಾಗಿದೆ' ಎಂಬ ಶ್ರೀಗಳ ಮಾತಂತೂ ಇಂದಿನ ಆಧುನಿಕ ಯುಗಕ್ಕೆ ಅನಿವಾರ್ಯವಿರುವ ವಿವೇಕದ ಕನ್ನಡಿ. ನಭೋಮಂಡಲಕ್ಕೆ ನೂರಾರು ಉಪಗ್ರಹಗಳನ್ನು ಏಕಕಾಲಕ್ಕೆ ಹಾರಿಬಿಡುವ, ಮಂಗಳನ ಅಂಗಳದಲ್ಲಿ ನಡೆಯುವ ಮನುಕುಲದ ಬುದ್ಧಿವಂತಿಕೆಯ ತುರೀಯಾವಸ್ಥೆಯಲ್ಲಿ ನಾವಿದ್ದೇವೆ; ಆದರೆ 'ಎದೆಎದೆಗೂ ನಡುವೆ ಹಿರಿಗಡಲು, ಮುಟ್ಟಲಾರೆವೇನೋ ಸೇತುವೆ ಕಟ್ಟಲಾರೆವೇನೋ?’ ಎಂಬ ಆತಂಕದಲ್ಲಿ ಬದುಕುತ್ತಿದ್ದೇವೆ. ಬಹುಶಃ ಶ್ರೀಗಳ ಮಾತಿನಲ್ಲಿ ಇದಕ್ಕೆ ಸುಲಭದ ಪರಿಹಾರವಿದೆ.

ಔಪಚಾರಿಕ ಶಿಕ್ಷಣದ ಜತೆಜತೆಗೆ ಅಧ್ಯಾತ್ಮಿಕತೆಯ ಚೌಕಟ್ಟಿನಲ್ಲಿ ನೈತಿಕ ಶಿಕ್ಷಣವನ್ನು ನೀಡುವ ಶ್ರೀಮಠದ ಚಿಂತನೆ ಬಹುಶಃ ಆಧುನಿಕ ಕಾಲದ ಬಹುತೇಕ ಸಮಸ್ಯೆಗಳಿಗೆ ಸರಳ ಪರಿಹಾರ ಒದಗಿಸಬಲ್ಲುದು. 'ಒಂದು ತುತ್ತು ಅನ್ನದ ಹಿಂದೆ ಸಾವಿರಾರು ಮಂದಿಯ ಶ್ರಮದ ಶಕ್ತಿಯ ಸಾಗರವೇ ನಿಂತಿದೆ. ಅದನ್ನು ಅರಿತಾಗಲೇ ಮನುಷ್ಯ ಮನುಷ್ಯನಾಗುವುದು’ ಎಂಬ ಶ್ರೀಗಳ ಮಾತು ಮಠದ ವಿದ್ಯಾರ್ಥಿ ನಿಲಯಗಳಲ್ಲಿ ಆಶ್ರಯ ಪಡೆದಿರುವ, ಅದರ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿರುವ ಶಿಕ್ಷಣ ಸಂಸ್ಥೆಗಳಿಂದ ಹೊರಬರುವ ಲಕ್ಷ ವಿದ್ಯಾರ್ಥಿಗಳ ಮನದಾಳಕ್ಕೆ ಇಳಿದರೆ ಅದಕ್ಕಿಂತ ದೊಡ್ಡ ಸಾಧನೆ ಇನ್ನೊಂದಿಲ್ಲ. ಶ್ರಮದ ಬಗ್ಗೆ ಗೌರವ, ಸಮಾಜದ ಕಟ್ಟಕಡೆಯ ವ್ಯಕ್ತಿಯ ಬಗೆಗೂ ಆದರ- ಇವೆರಡನ್ನು ಹೊಂದಿರುವ ವ್ಯಕ್ತಿಗಳು ಮಾತ್ರ ಆರೋಗ್ಯವಂತ ಸಮಾಜವನ್ನು ನಿರ್ಮಿಸಬಲ್ಲರು.

ಬೆಳಗಿನ ಜಾವ 2-15ರಿಂದ ತೊಡಗಿ ರಾತ್ರಿ ಮಲಗುವವರೆಗಿನ 11 ಗಂಟೆಯವರೆಗಿನ ಶ್ರೀಗಳ ಬಿಡುವಿಲ್ಲದ ದಿನಚರಿಯನ್ನು ನೋಡಿದರೆ ಎಂತಹ ಚುರುಕು ತರುಣನೂ ಬೆರಗಾಗಬೇಕು. ವಿಶ್ರಾಂತಿ ಎಂದರೆ ಗಂಟೆಗಟ್ಟಲೆ ಹಾಸಿಗೆಯ ಮೇಲೆ ಮಲಗಿ ಗೊರಕೆ ಹೊಡೆಯುವುದಲ್ಲ. ಹರಟೆಯಲ್ಲಿ ದಿನವೆಲ್ಲಾ ನಿರತರಾಗಿರುವುದಲ್ಲ. ಬೇಸರವಿಲ್ಲದೆ ಬೇರೆಬೇರೆ ಕೆಲಸಗಳಲ್ಲಿ ತೊಡಗಿಕೊಳ್ಳುವುದು. ಕೆಲಸದ ಪಲ್ಲಟವೇ ವಿಶ್ರಾಂತಿ ಎನ್ನುತ್ತಾರೆ ಶ್ರೀಗಳು. ಇವರಲ್ಲವೇ ನಿಜವಾದ ಕಾಯಕ ಯೋಗಿಗಳು?

ಇಷ್ಟಲ್ಲ ಸಾಧನೆಗಳ ನಡುವೆಯೂ, ಸುಮಾರು ಏಳು ಶತಮಾನಗಳ ಐತಿಹ್ಯವಿರುವ ಸಿದ್ದಗಂಗೆಯ ಮುಕುಟಮಣಿ ಡಾ. ಶಿವಕುಮಾರ ಸ್ವಾಮೀಜಿಯವರು ಹೇಳುವ ಒಂದು ಮಾತು ನಮ್ಮನ್ನು ವಿಸ್ಮಿತರಾಗಿಸಬಲ್ಲುದು: ನಾವು ಮಾಡಿರುವ ಸಾಧನೆ ಅತ್ಯಂತ ಕಿರಿದು. ಮಾಡಬೇಕಾದುದು ಅತ್ಯಂತ ಹಿರಿದು. ಇದರ ಅರಿವೇ ಬದುಕು. ಅಬ್ಬ, ಅಹಮಿಕೆಯ ಒಂದೆಳೆಯೂ ಸುಳಿಯದ ಮಾತು! ಜಗುಲಿ ಹಾರದವರೇ ಗಗನ ಹಾರಿದೆವೆಂದು ಕೊಬ್ಬುವುದೇ ಸರ್ವೇಸಾಮಾನ್ಯವಾಗಿರುವ ಇಂದಿನ ದಿನಗಳಲ್ಲಿ ನೂರಹತ್ತು ವಸಂತಗಳನ್ನು ಲೋಕೋಪಕಾರದಲ್ಲೇ ಕಳೆದ ಹಿರಿಯ ಜೀವವೊಂದು 'ನಾವು ಮಾಡಬೇಕಾದುದು ಅತ್ಯಂತ ಹಿರಿದು' ಎನ್ನುವುದು ಎಂತಹ ಉನ್ನತ ಭಾವ! ಇದೇ ಅಲ್ಲವೇ 'ಎನಗಿಂತ ಕಿರಿಯರಿಲ್ಲ’ ಎಂಬ ಬಸವತತ್ತ್ವದ ಸಾರ?

ಕಾಮೆಂಟ್‌ಗಳಿಲ್ಲ: