ಶುಕ್ರವಾರ, ಏಪ್ರಿಲ್ 20, 2012

ಸಿನಿಮಾ ಪ್ರಶಸ್ತಿ ವಿವಾದಗಳಿಗೆ ಅಂತ್ಯವೆಂದು?

ಮಾಧ್ಯಮ ಶೋಧ-16, ಹೊಸದಿಗಂತ, 19-4-2012

ಚಲನಚಿತ್ರ ಪ್ರಶಸ್ತಿ ವಿವಾದ ಎಂಬ ಮಾತು ಕ್ಲೀಷೆ ಎನಿಸುವಷ್ಟರ ಮಟ್ಟಿಗೆ ಪುನರಾವರ್ತನೆಯಾಗುತ್ತಿರುವುದು ವ್ಯವಸ್ಥೆಯ ವ್ಯಂಗ್ಯವೋ ಶಾಶ್ವತ ಸತ್ಯವೋ ಗೊತ್ತಿಲ್ಲ, ಆದರೆ ಪ್ರತೀ ಬಾರಿ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾದಾಗಲೂ ಅಪಸ್ವರ, ವಾದ-ವಿವಾದಗಳು ಹೊಗೆಯಾಡುವುದು ಸರ್ವೇಸಾಮಾನ್ಯ ಎನಿಸಿಬಿಟ್ಟಿದೆ. ಹಾಗೆ ನೋಡಿದರೆ ಯಾವುದೇ ಪ್ರಶಸ್ತಿ-ಪುರಸ್ಕಾರಗಳು, ನಿರ್ದಿಷ್ಟವಾಗಿ ಸರ್ಕಾರದಿಂದ ಕೊಡಮಾಡಲ್ಪಡುವ ಪ್ರಶಸ್ತಿಗಳು, ವಿವಾದರಹಿತವಾಗಿರುವುದು ತೀರಾ ಅಪರೂಪ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಈ ಬಗೆಯ ಎಚ್ಚರ, ಚರ್ಚೆ, ಟೀಕೆ, ವಿಮರ್ಶೆಗಳು ಒಂದು ರೀತಿಯಲ್ಲಿ ಅನಿವಾರ್ಯ ಕೂಡಾ; ಆದರೆ ಇವು ಆರೋಗ್ಯಕರ ಟೀಕೆಯ ವ್ಯಾಪ್ತಿಯಿಂದ ಹೊರಹೋಗತೊಡಗಿದಾಗ, ವೈಯುಕ್ತಿಕ ತೇಜೋವಧೆಯ ಮಟ್ಟಕ್ಕೆ ಇಳಿದಾಗ, ಪುನರಾವರ್ತನೆಯಾಗದಂತೆ ನೋಡಿಕೊಳ್ಳುವ ಅವಕಾಶವಿದ್ದಾಗಲೂ ಮರುಕೊಳಿಸತೊಡಗಿದಾಗ ಮಾತ್ರ ನಾವು ಸಾಗುತ್ತಿರುವ ಹಾದಿಯ ಬಗ್ಗೆ ಆತಂಕವಾಗುತ್ತದೆ.

ಹಾಗೆ ನೋಡಿದರೆ ಹಿಂದೆಂದಿಗಿಂತಲೂ ಈ ಬಾರಿಯ ರಾಜ್ಯ ಚಲನಚಿತ್ರ ಪ್ರಶಸ್ತಿಗಳೇ ಹೆಚ್ಚು ಚರ್ಚೆಗೆ ಗ್ರಾಸವಾಗಿರುವಂತೆ ಕಾಣುತ್ತದೆ. ಸಿನಿಮಾಗಳನ್ನು ಸಬ್ಸಿಡಿಗೆ ಆಯ್ಕೆ ಮಾಡುವ ಸಂದರ್ಭ ನಡೆದಿದೆಯೆನ್ನಲಾದ ಲಕ್ಷಾಂತರ ರೂಪಾಯಿಗಳ ಅವ್ಯವಹಾರದ ಆರೋಪಗಳು ಇನ್ನೂ ನಿಗಿನಿಗಿಯಾಗಿರುವಾಗಲೇ ಚಲನಚಿತ್ರ ಪ್ರಶಸ್ತಿಗಳು ಘೋಷಣೆಯಾದದ್ದು, ಮತ್ತು ಆ ಪ್ರಶಸ್ತಿಗಳ ಬಗ್ಗೆ ಬೇರೆಬೇರೆ ತೆರನಾದ ಅಸಂತೃಪ್ತಿಗಳು ಹೆಡೆಯೆತ್ತಿದ್ದು ಈ ಮಟ್ಟದ ವಾದವಿವಾದಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಿರಬಹುದು. ಎಲ್ಲಾ ಕಡೆ ಎಲ್ಲರನ್ನೂ ಎಲ್ಲ ರೀತಿಯಿಂದಲೂ ತೃಪ್ತಿಪಡಿಸುವುದು ಬಹುಶಃ ಅಸಾಧ್ಯದ ಮಾತು; ಯಾವುದಾದರೊಂದು ಅತೃಪ್ತ ಮನಸ್ಸು ಉಳಿದುಕೊಂಡಿದ್ದರೂ, ಅಪಸ್ವರ ಎದ್ದೇ ಏಳುತ್ತದೆ. ತನಗೆ ಅಥವಾ ತನ್ನ ಚಿತ್ರಕ್ಕೇ ಪ್ರಶಸ್ತಿ ಬರಬೇಕಿತ್ತೆಂಬ ನಿರೀಕ್ಷೆ-ಹಂಬಲ ಇಟ್ಟುಕೊಂಡಿದ್ದ ವ್ಯಕ್ತಿಗೆ ಆ ಪ್ರಶಸ್ತಿ ಬರದೇ ಹೋದರೂ, ಒಟ್ಟು ಪ್ರಶಸ್ತಿಗಳ ಆಯ್ಕೆಯೇ ಸರಿ ಇಲ್ಲ ಎಂದು ವಾದಿಸುವ ಸಾಧ್ಯತೆಯೂ ಇದೆ. ಹಾಗೆಂದ ಮಾತ್ರಕ್ಕೆ ಅದೇ ನಿಜವಾದ ಸಂಗತಿಯಾಗಿರಬೇಕೆಂದೇನೂ ಇಲ್ಲ. ಆದರೆ ಈ ಬಾರಿಯ ವಿವಾದ ಚರ್ಚೆಯ ಹಂತಕ್ಕೆ ನಿಲ್ಲದೆ, ನ್ಯಾಯಾಲಯದ ಮೇಟ್ಟಿಲೇರಿಬಿಟ್ಟಿದೆ. ಹೀಗಾಗಿ ಇದಕ್ಕೊಂದು ತಾತ್ವಿಕ ಅಂತ್ಯ ಕಾಣುವುದು ಅನಿವಾರ್ಯವಾಗಿದೆ.

ಈ ಬಾರಿ ಬಂದಿರುವ ಪ್ರಮುಖ ಆರೋಪಗಳನ್ನು ಗಮನಿಸೋಣ. ಮೊದಲನೆಯದಾಗಿ, ಅತ್ಯುತ್ತಮ ಚಿತ್ರ ಎಂದು ಘೋಷಣೆಯಾಗಿರುವ ಉಪೇಂದ್ರ ನಿರ್ದೇಶನದ ’ಸೂಪರ್’ ಚಿತ್ರದ ಆಯ್ಕೆಯೇ ಸರಿಯಾಗಿಲ್ಲ ಎಂಬ ಮಾತು ಕೇಳಿ ಬಂದಿದೆ. ಅಲ್ಲದೆ, ರಾಷ್ಟ್ರಪ್ರಶಸ್ತಿ ಪುರಸ್ಕೃತ ಸಿನಿಮಾಗಳನ್ನು ಆಯ್ಕೆ ಸಮಿತಿ ಉದ್ದೇಶಪೂರ್ವಕವಾಗಿ ಹೊರಗಿಟ್ಟಿದೆ; ಸದಭಿರುಚಿಯ ಚಿತ್ರಗಳನ್ನು ಗುರುತಿಸುವಲ್ಲಿ ಸಮಿತಿ ಎಡವುತ್ತಿದೆ; ಪ್ರಶಸ್ತಿಗಳ ಆಯ್ಕೆಯಲ್ಲಿ ಪ್ರಭಾವ-ಸ್ನೇಹ-ಸಂಬಂಧಗಳು ಕೆಲಸ ಮಾಡುತ್ತಿವೆ; ಯೋಗ್ಯರಲ್ಲದವರಿಗೆ ವೈಯುಕ್ತಿಕ ಪ್ರಶಸ್ತಿಗಳು ಸಂದಿವೆ; ಪ್ರಶಸ್ತಿಗಳ ಆಯ್ಕೆಗೆ ಸೂಕ್ತ ಮಾನದಂಡಗಳನ್ನು ಇಟ್ಟುಕೊಂಡಿಲ್ಲ... ಇತ್ಯಾದಿ ಆರೋಪಗಳೂ ಹಾಗೆಯೇ ಉಳಿದುಕೊಂಡಿವೆ.

ಅತ್ಯುತ್ತಮ ಚಿತ್ರವೆಂದು ’ಸೂಪರ್’ ಚಿತ್ರವನ್ನು ಆಯ್ಕೆ ಮಾಡಿದ್ದಕ್ಕೆ ಬಿ. ಸುರೇಶ್, ಪಿ. ಶೇಷಾದ್ರಿ, ಟಿ. ಎಸ್. ನಾಗಾಭರಣರಂಥವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಸದಭಿರುಚಿಯ ಮತ್ತು ಪ್ರಯೋಗಶೀಲ ಸಿನಿಮಾಗಳಿಗೆ ಪ್ರಶಸ್ತಿ ನೀಡಬೇಕಿತ್ತು ಎಂಬ ಮಾತಿನ ಜೊತೆಗೇ, ಕಮರ್ಷಿಯಲ್ ಚಿತ್ರಗಳಿಗೇ ಪ್ರಶಸ್ತಿ ಕೊಡಬೇಕೆಂಬುದು ಸಮಿತಿಯ ನಿಲುವಾಗಿದ್ದರೆ ’ಸೂಪರ್’ಗಿಂತಲೂ ಒಳ್ಳೆಯ ಚಿತ್ರಗಳಿದ್ದವು ಎಂಬ ಮಾತೂ ಕೇಳಿ ಬಂದಿದೆ. ಕಳೆದ ಭಾನುವಾರ ಖಾಸಗಿ ವಾಹಿನಿಯೊಂದರಲ್ಲಿ ಪ್ರಸಾರವಾದ ’ಸೂಪರ್’ ಚಿತ್ರ ನೋಡಿದ ಮೇಲೆ ಈ ಮಾತಿನಲ್ಲಿ ಹುರುಳಿದೆ ಎಂದೆನಿಸುತ್ತಿದೆ. ಚಿತ್ರಕ್ಕೊಂದು ಒಳ್ಳೆಯ ಕಥಾಹಂದರವಾಗಲೀ, ತಾತ್ವಿಕ ನಿಲುವಾಗಲೀ, ಗಟ್ಟಿ ನಿರೂಪಣೆಯಾಗಲೀ ಕಾಣಿಸುವುದಿಲ್ಲ. ನಿರ್ದೇಶಕ ವಿಡಂಬನೆಯ ಹಿಂದೆ ಹೋಗಿದ್ದಾನೆಂದರೆ, ಚಿತ್ರದ ಯಾವಭಾಗದಲ್ಲೂ ಅಂತಹ ಸದಭಿರುಚಿಯ ವಿಡಂಬನೆಯೇ ಇಲ್ಲ; ಅದು ಅಪಹಾಸ್ಯದಂತೆ ಭಾಸವಾಗುತ್ತದೆ. ಚಿತ್ರಕ್ಕೊಂದು ದೇಶಭಕ್ತಿಯ ಚೌಕಟ್ಟು ಹಾಕಿಕೊಳ್ಳೋಣವೆಂದರೆ, ನೋಡುಗರಲ್ಲಿ ದೇಶಭಕ್ತಿ ಮಿಡಿಯುವಂತೆ ಮಾಡುವ ಯಾವ ತೆರನಾದ ಗಾಂಭೀರ್ಯವೂ ಅದಕ್ಕಿಲ್ಲ; ಅದು ಕೇವಲ ನಾಯಕನ ಪೊಳ್ಳು ಬಡಬಡಿಕೆಗಳಂತೆ ಭಾಸವಾಗುತ್ತದೆ ಅಷ್ಟೆ. ತಮ್ಮ ಎಂದಿನ ಫ್ಯಾಂಟಸಿ, ಅತಿರಂಜಕತೆ, ವಿಲಕ್ಷಣ ಸಂಕೇತಗಳ ಮೂಲಕ ಉಪೇಂದ್ರ ಏನೋ ಹೇಳಹೊರಟಿದ್ದಾರೆ ಎಂದುಕೊಂಡರೂ, ಅವರು ಅದರಲ್ಲಿ ಏನೇನೂ ಯಶಸ್ವಿಯಾಗಿಲ್ಲ.

ಇಷ್ಟಲ್ಲದೆ, ’ಸೂಪರ್’ ಚಿತ್ರದ ಛಾಯಾಗ್ರಾಹಕ ಅಶೋಕ್ ಕಶ್ಯಪ್ ಅವರೇ ಸ್ವತಃ ಪ್ರಶಸ್ತಿಗಳ ಆಯ್ಕೆ ಸಮಿತಿಯ ಸದಸ್ಯರಲ್ಲೊಬ್ಬರು ಎಂಬುದು ಸೋಜಿಗದ ಸಂಗತಿ. ’ಸೂಪರ್’ ಸಿನಿಮಾವನ್ನೇ ಅತ್ಯುತ್ತಮ ಚಿತ್ರವೆಂದು ಅಂತಿಮಗೊಳಿಸುವ ಸಂದರ್ಭ ಕಶ್ಯಪ್ ಅಲ್ಲಿ ಹಾಜರಿರಲಿಲ್ಲ ಎಂದು ಸಮಿತಿ ಅಧ್ಯಕ್ಷೆ ಭಾರತಿ ವಿಷ್ಣುವರ್ಧನ್ ಅವರು ಸ್ಪಷ್ಟೀಕರಣ ನೀಡಿದ್ದಾರಾದರೂ, ಸಮಿತಿಯಲ್ಲಿ ಕಶ್ಯಪ್ ಇದ್ದದ್ದು ಒಂದು ಪ್ರಮುಖ ಲೋಪವೇ ಹೌದು. ಪ್ರಶಸ್ತಿ ಆಯ್ಕೆಯಲ್ಲಿ ಅವರ ಪಾತ್ರ ಏನೇನೂ ಇಲ್ಲವೆಂಬುದು ಒಂದುವೇಳೆ ನಿಜವೇ ಆಗಿದ್ದರೂ, ಸಾರ್ವಜನಿಕವಾಗಿ ಇದು ನೈತಿಕತೆಯ ಪ್ರಶ್ನೆಯಾಗುತ್ತದೆ.

ರಾಷ್ಟ್ರಪ್ರಶಸ್ತಿಗೆ ಭಾಜನವಾದ ಚಿತ್ರಗಳನ್ನು ಆಯ್ಕೆಸಮಿತಿ ದೂರವಿಟ್ಟಿದೆ ಎಂಬುದೂ ಒಂದು ಗಂಭೀರ ಆರೋಪ. ರಾಷ್ಟ್ರಮಟ್ಟದಲ್ಲಿ ಸಾಕಷ್ಟು ಮನ್ನಣೆ ಪಡೆದದ್ದಲ್ಲದೆ, ಕಳೆದ ಬಾರಿಯ ಗೋವಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದ ಪನೋರಮಾಗೆ ಆಯ್ಕೆಯಾದ ಕನ್ನಡದ ಏಕೈಕ ಚಿತ್ರ ಪಿ. ಶೇಷಾದ್ರಿಯವರ ’ಬೆಟ್ಟದ ಜೀವ’ ನಮ್ಮ ರಾಜ್ಯಪ್ರಶಸ್ತಿಗಳ ಪಟ್ಟಿಯಲ್ಲಿ ಎಲ್ಲಿಯೂ ಕಾಣಿಸಿಕೊಂಡಿಲ್ಲ. ಮಕ್ಕಳ ಚಿತ್ರಗಳ ವಿಭಾಗದಲ್ಲಿ ಸ್ವರ್ಣಕಮಲ ಗಳಿಸಿದ್ದ ’ಹೆಜ್ಜೆಗಳು’ ಕೂಡಾ ರಾಜ್ಯಪ್ರಶಸ್ತಿಯಿಂದ ವಂಚಿತವಾಗಿದೆ. ಇವುಗಳನ್ನು ಉದ್ದೇಶಪೂರ್ವಕವಾಗಿಯೇ ದೂರವಿಡಲಾಗಿದೆಯೇ? ಹಾಗಂತ ರಾಷ್ಟ್ರಪ್ರಶಸ್ತಿ ಪಡೆದ ಚಿತ್ರಗಳನ್ನು ರಾಜ್ಯಪ್ರಶಸ್ತಿಗೆ ಪರಿಗಣಿಸಬಾರದು ಎಂಬ ನಿಯಮವೇನಾದರೂ ಇದ್ದಿದ್ದರೆ, ’ಪುಟ್ಟಕ್ಕನ ಹೈವೇ’ ಚಿತ್ರದ ಬಿ. ಸುರೇಶರಿಗೆ ’ಅತ್ಯುತ್ತಮ ಚಿತ್ರಕಥೆ ಬರಹಗಾರ’ ಪ್ರಶಸ್ತಿಯೂ ಬರುತ್ತಿರಲಿಲ್ಲ. ಒಟ್ಟಿನಲ್ಲಿ ಸಮರ್ಪಕ ಮಾನದಂಡಗಳನ್ನು ಇಟ್ಟುಕೊಳ್ಳುವಲ್ಲಿ ಸಮಿತಿ ವಿಫಲವಾಗಿರುವುದು ಇಲ್ಲಿ ಎದ್ದುಕಾಣುತ್ತದೆ.

ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆದ ಚಿತ್ರಗಳು ತಮ್ಮ ರಾಜ್ಯದಲ್ಲೇ ಅಲಕ್ಷ್ಯಕ್ಕೆ ಒಳಗಾಗುವುದು ಕೇವಲ ಕರ್ನಾಟಕದಲ್ಲಿ ಮಾತ್ರ ಎಂದು ಭಾವಿಸಬೇಕಾಗಿಲ್ಲ. ೧೯೭೩ರಷ್ಟು ಹಿಂದೆಯೇ, ನಾಲ್ಕು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಅಡೂರು ಗೋಪಾಲಕೃಷ್ಣನ್‌ರ ’ಸ್ವಯಂವರಂ’ ಕೇರಳದಲ್ಲೇ ತೀರ್ಪುಗಾರರಿಂದ ತಿರಸ್ಕೃತವಾಗಿತ್ತು. ೨೦೦೮ರ ರಾಷ್ಟ್ರಪ್ರಶಸ್ತಿ ಪಡೆದ ’ಕಾಂಚೀವರಂ’ ತಮಿಳುನಾಡಿನಲ್ಲೇ ಆಯ್ಕೆಯಾಗಿರಲಿಲ್ಲ. ೧೧ ಅಂತಾರಾಷ್ಟ್ರೀಯ ಪುರಸ್ಕಾರಗಳನ್ನು ಗೆದ್ದ ಸತ್ಯಜಿತ್ ರೇಯವರ ’ಅಪರಾಜಿತೋ’ವನ್ನು ಪ್ರಾದೇಶಿಕ ಮಟ್ಟದಲ್ಲೇ ತಿರಸ್ಕರಿಸಲಾಗಿತ್ತು! ಇದೇ ಕಾರಣಕ್ಕೆ ರಾಷ್ಟೀಯ ಪ್ರಶಸ್ತಿಗಳನ್ನು ನೀಡುವ ’ಚಲನಚಿತ್ರೋತ್ಸವಗಳ ನಿರ್ದೇಶನಾಲಯ’ವನ್ನು ವಿಕೇಂದ್ರೀಕರಣಗೊಳಿಸುವ ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಈಚಿನ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿದೆ.

ಸದಭಿರುಚಿಯ ಕಲಾತ್ಮಕ ಚಿತ್ರಗಳು ಕಳೆದ ಎರಡುಮೂರು ವರ್ಷಗಳಿಂದ ರಾಜ್ಯದಲ್ಲಿ ಅವಗಣನೆಗೆ ಒಳಗಾಗುತ್ತಿವೆ ಎಂಬ ಟೀಕೆ ಒಂದೆಡೆಯಾದರೆ, ಪ್ರಶಸ್ತಿಗಾಗಿಯೇ ಸಿನಿಮಾ ಮಾಡುತ್ತಿರುವವರ ಸಂಖ್ಯೆಯೂ ಜಾಸ್ತಿಯಾಗುತ್ತಿದೆ; ಪ್ರತಿವರ್ಷವೂ ಅವರಿಗೇ ಪ್ರಶಸ್ತಿಗಳ ಸುರಿಮಳೆಯಾಗುತ್ತಿದೆ ಎಂಬ ಆರೋಪವೂ ಇನ್ನೊಂದೆಡೆಯಿಂದ ಕೇಳಿಬಂದಿದೆ.

ಅವಾರ್ಡ್ ಸಿಗಲೆಂದೇ ಚಿತ್ರನಿರ್ಮಾಣ ಮಾಡುವವರಿಗೆ ಪ್ರತಿವರ್ಷ ಪ್ರಶಸ್ತಿಯ ಸುರಿಮಳೆಯಾಗುತ್ತದೆ. ಆಯ್ಕೆ ಸಮಿತಿಯಲ್ಲಿ ಭಾರತಿ ವಿಷ್ಣುವರ್ಧನ್ ಇದ್ದದ್ದಕ್ಕೆ ಕಡೇಪಕ್ಷ ಸೂಪರ್, ಮೈಲಾರಿ, ಪೃಥ್ವಿಯಂತಹ ಚಿತ್ರಗಳಿಗಾದರೂ ಬೇರೆಬೇರೆ ವಿಭಾಗಗಳಲ್ಲಿ ಅವಾರ್ಡ್ ಬಂದಿದೆ ಎಂದಿದ್ದಾರೆ ’ಪೃಥ್ವಿ’ ನಿರ್ಮಾಪಕರು. ಕೆಲವೇ ಲಕ್ಷ ರೂಪಾಯಿಗಳಲ್ಲಿ ಸಿನಿಮಾ ಮಾಡಿಮುಗಿಸಿ ಅದಕ್ಕೆ ಕಲಾತ್ಮಕ ಸಿನಿಮಾ ಎಂದು ಹೆಸರಿಟ್ಟು ಪ್ರಶಸ್ತಿ ಗಳಿಸುವವರು ಸಾಕಷ್ಟಿದ್ದಾರೆ. ಆ ಚಿತ್ರಗಳನ್ನು ಅವರ ಕುಟುಂಬದವರು ಬಿಟ್ಟು ಇನ್ಯಾರೂ ನೋಡುವುದಿಲ್ಲ ಎಂಬರ್ಥದ ಕಟುಟೀಕೆಗಳೂ ಬಂದಿವೆ. ’ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ’ದ ಆಯ್ಕೆ ನಡೆದಾಗಲೂ ಪ್ರತೀಬಾರಿ ಈ ತೆರನಾದ ಟೀಕೆಗಳು ಬರುವುದು ಸಾಮಾನ್ಯವಾಗಿಬಿಟ್ಟಿದೆ. ಇನ್ನೂ ಬಿಡುಗಡೆಯೇ ಆಗದ, ಒಂದು ದಿನವೂ ಥಿಯೇಟರ್‌ನಲ್ಲಿ ಓಡದ ಸಿನಿಮಾಗಳನ್ನು ಅತ್ಯುತ್ತಮ ಸಿನಿಮಾ ಎಂದೋ, ವಿಶೇಷ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂದೋ ಹೇಗೆ ನಿರ್ಧರಿಸುತ್ತೀರಿ ಎಂಬ ಪ್ರಶ್ನೆಗಳನ್ನೂ ಆಗಿಂದಾಗ್ಗೆ ಕೇಳಿದವರಿದ್ದಾರೆ. ಇಂತಹ ಸಂದರ್ಭಗಳಲ್ಲೆಲ್ಲ ಜನರ ಅಭಿರುಚಿಯ ಬಗ್ಗೆ, ಕಲಾತ್ಮಕ ಸಿನಿಮಾ ಮಾಡುವವರ ಅಸಹಾಯಕತೆ ಬಗ್ಗೆಯೂ ಚರ್ಚೆ ನಡೆಯುತ್ತದೆ. ಗಲ್ಲಾಪೆಟ್ಟಿಗೆಯಲ್ಲಿ ಯಶಸ್ಸು ಕಾಣದ ಸದಭಿರುಚಿಯ ಚಿತ್ರಗಳಿಗೆ ಸರ್ಕಾರದಿಂದಲಾದರೂ ಪ್ರೋತ್ಸಾಹ ಸಿಗಬೇಕು ಎಂಬುದು ಒಂದು ಗಮನಾರ್ಹ ಅಂಶವೇ.

ಕಳೆದ ಬಾರಿ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡುವಾಗ ಉಂಟಾಗಿದ್ದ ವಿವಾದ ಈ ಬಾರಿ ಡಾ. ರಾಜ್‌ಕುಮಾರ್ ಪ್ರಶಸ್ತಿ ಘೋಷಣೆಯಾದಾಗಲೂ ಉಂಟಾಗಿದೆ. ಮೊನ್ನೆಮೊನ್ನೆ ಸ್ವರ್ಣಕಮಲ ಪ್ರಶಸ್ತಿ ಗೆದ್ದುಕೊಂಡ ’ಬ್ಯಾರಿ’ ಸಿನಿಮಾ ಇನ್ನೂ ಕೃತಿಚೌರ್ಯ ಆರೋಪದಿಂದ ಮುಕ್ತವಾಗಿಲ್ಲ.

ಒಟ್ಟಿನಲ್ಲಿ, ಚಲನಚಿತ್ರ ಪ್ರಶಸ್ತಿಗಳು ವರ್ಷಕಳೆದಂತೆ ಗೊಂದಲದ ಗೂಡಾಗುತ್ತಿರುವುದು ಸ್ಪಷ್ಟವಾಗುತ್ತಿದೆ. ಆಯ್ಕೆ ಸಮಿತಿಯ ರಚನೆ ಕುರಿತಂತೆಯೇ ಸೂಕ್ತ ನಿರ್ದೇಶನಗಳಿಲ್ಲದಿರುವುದು ಮತ್ತು ಈ ಸಮಿತಿಯ ಮುಂದೆ ಸಿನಿಮಾಗಳ ಆಯ್ಕೆ ಸಂಬಂಧ ನಿಚ್ಚಳವಾದ ಮಾನದಂಡಗಳಿಲ್ಲದಿರುವುದೇ ಬಹುಶಃ ಇಷ್ಟೆಲ್ಲ ಗೊಂದಲಗಳಿಗೆ ಕಾರಣ. ಇವೆರಡನ್ನು ಸರಿಪಡಿಸಿಕೊಳ್ಳಬೇಕಿರುವುದು ಸದ್ಯದ ತುರ್ತು.

ಕಾಮೆಂಟ್‌ಗಳಿಲ್ಲ: