ಬುಧವಾರ, ಅಕ್ಟೋಬರ್ 7, 2009

ಗಾಂಧಿಯ ಕಂಡಿರಾ? (ಭಾಗ-ಎರಡು)


ಸದಾಶಿವಜ್ಜ ಬಂಟ್ವಾಳದ ಭಂಡಾರಿಬೆಟ್ಟಿನವರು. ಅವರು ಹುಟ್ಟಿದ್ದು ಭಾರತಕ್ಕೆ ಸ್ವಾತಂತ್ರ್ಯ ಸಿಗುವುದಕ್ಕೆ ಹೆಚ್ಚುಕಮ್ಮಿ ಹದಿನೈದು ವರ್ಷಗಳ ಹಿಂದೆ. ಬಾಲ್ಯದ ತುಂಬೆಲ್ಲ ದರಿದ್ರಲಕ್ಷ್ಮಿಯದೇ ಕಾರುಭಾರು. ಮನೆ ಪಕ್ಕದಲ್ಲಿ ದೊಡ್ಡದೊಂದು ಕೈಮಗ್ಗ. ಆ ಕಾಲಕ್ಕೆ ಬಂಟ್ವಾಳದ ಖಾದಿ ಸೆಂಟರ್ ಎಂದರೆ ಇಡೀ ಕರಾವಳಿಗೇ ಪ್ರಸಿದ್ಧ. ಎಷ್ಟು ದೊಡ್ಡದೆಂದರೆ, ಅಷ್ಟು ವರ್ಷಗಳ ಹಿಂದೆಯೇ ಅದು ಐವತ್ತು ಮಹಿಳೆಯರಿಗೆ ಉದ್ಯೋಗ ಕೊಡುತ್ತಿತ್ತು. ನಾಲ್ಕನೇ ಇಯತ್ತೆಗಿಂತ ಆಚೆಗೆ ವಿದ್ಯಾಭ್ಯಾಸ ಮುಂದುವರಿಸದಾದ ಸದಾಶಿವನಿಗೆ ಆಸರೆಯಾದದ್ದು ಇದೇ ಖಾದಿ ಸೆಂಟರ್.


ಆದರೆ ಈ ಆಧಾರ ಹೆಚ್ಚು ಸಮಯ ಉಳಿಯಲಿಲ್ಲ. ಅದೇನು ತೊಡಕಾಯಿತೋ, ದಿನೇದಿನೇ ದುರ್ಬಲವಾಗುತ್ತಾ ಬಂದ ಕೈಮಗ್ಗ ಒಂದು ದಿನ ಪರ್ಮನೆಂಟಾಗಿ ಬಾಗಿಲೆಳೆದುಕೊಂಡಿತು. "ನಾನು ನಿರುದ್ಯೋಗಿಯಾದೆ. ಹೊಟ್ಟೆಪಾಡು, ಅಲ್ಲೇ ಬಂಟ್ವಾಳದ ಒಂದು ಫರ್ನಿಚರ್ ಅಂಗಡಿಯಲ್ಲಿ ದುಡಿಯತೊಡಗಿದೆ. ಒಂದು ದಿನ ಅದ್ಯಾರೋ ನನಗೆ ಬೆಂಗಳೂರಿನ ಚರಕ ಟ್ರೈನಿಂಗ್ ವಿಚಾರ ಹೇಳಿದರು. ಟ್ರೈನಿಂಗ್ ಸಮಯದಲ್ಲಿ ತಿಂಗಳಿಗೆ ಎಪ್ಪತ್ತೈದು ರುಪಾಯಿ ಸ್ಟೈಪೆಂಡ್ ಕೊಡುತ್ತಾರೆ ಅಂತಲೂ ಹೇಳಿದರು. ಅರ್ಧಶತಮಾನದ ಹಿಂದೆ ಎಪ್ಪತ್ತೈದು ರುಪಾಯಿ ಎಂದರೆ ಸಣ್ಣ ಮಾತೇ! ಮತ್ತೇನೂ ಯೋಚಿಸದೆ ನಾನು ಹೊರಟುನಿಂತೆ," ಎಂದು ಹಳೇ ಪುಟಗಳನ್ನು ತೆರೆಯುತ್ತಾರೆ ಸದಾಶಿವಜ್ಜ.


ಚರಕ ಟ್ರೈನಿಂಗ್ ಎಂದರೆ ಚರಕದಲ್ಲಿ ನೂಲುವ ಟ್ರೈನಿಂಗ್ ಅಲ್ಲ. ಚರಕ ತಯಾರಿಸಲು ತರಬೇತಿ. ಹಾಗೆ, ೧೯೫೭ರಲ್ಲಿ ಒಟ್ಟು ೩ ತಿಂಗಳು ಸದಾಶಿವ ಮತ್ತು ಅವರ ಚಿಕ್ಕಪ್ಪನ ಮಗ ಶ್ರೀನಿವಾಸ ಬೆಂಗಳೂರಿನ ಕೃಷ್ಣರಾಜಪುರದ ದೂರವಾಣಿನಗರದಲ್ಲಿ ಚರಕ ತಯಾರಿಸುವ ತರಬೇತಿ ಪಡೆದರು. (ಅಂದಹಾಗೆ, ಅವರು ಕಲಿತದ್ದು ಅಂಬರ್ ಚರಕ ತಯಾರಿ. ಆ ಸಮಯಕ್ಕೆ ಮಹಾತ್ಮಾ ಗಾಂಧಿ ಮತ್ತವರ ಸಹವರ್ತಿಗಳಿಂದ ರೂಪುಗೊಂಡ ಯರವಾಡ ಚರಕ, ಕಿಸಾನ್ ಚರಕ, ಬನಾರಸ್ ಚರಕ ಮುಂತಾದ ಮಾದರಿಗಳಿದ್ದವು. ಅಂಬರ್ ಚರಕ ಕೊಂಚ ವಿಭಿನ್ನ. ಯರವಾಡ ಚರಕ ಪೋರ್ಟಬಲ್ ಆಗಿದ್ದರೆ, ಅಂಬರ್ ಚರಕ ದೊಡ್ಡದಾಗಿತ್ತು. ಅದರ ಚಕ್ರ ತುಂಬ ದೊಡ್ಡದಿತ್ತು. ಒಂದೆಡೆಯಿಂದ ಇನ್ನೊಂದೆಡೆಗೆ ಒಯ್ಯುವ ವಿಚಾರದಲ್ಲಿ ಅದು ಅಷ್ಟೊಂದು ಅನುಕೂಲಕರವಲ್ಲದಿದ್ದರೂ, ಸಾಮರ್ಥ್ಯದಲ್ಲಿ ಇತರವುಗಳಿಗಿಂತ ಹೆಚ್ಚಿನದಾಗಿತ್ತು. ಬೇರೆ ಚರಕಗಳಲ್ಲಿ ಒಮ್ಮೆಗೆ ಒಂದೇ ಎಳೆ ನೂಲು ಬರುತ್ತಿದ್ದರೆ, ಅಂಬರ್ ಚರಕದಲ್ಲಿ ಒಮ್ಮೆಗೆ ಆರು ಎಳೆ ನೂಲು ಬರುತ್ತಿತ್ತು.)


ಬಂಟ್ವಾಳಕ್ಕೆ ಹಿಂತಿರುಗಿದ ಇಪ್ಪತ್ತೈದರ ಹರೆಯದ ಸದಾಶಿವನಿಗೆ ಕೈತುಂಬ ಕೆಲಸ. ತನ್ನ ಸಹವರ್ತಿಗಳೊಡಗೂಡಿ ಅವರು ನೂರಾರು ಚರಕ ತಯಾರಿಸಿದರು. ಊರೆಲ್ಲ ಹಂಚಿದರು. "ಒಟ್ಟು ಎಷ್ಟು ತಯಾರಿಸಿದೆವೋ ನೆನಪಿಲ್ಲ. ಕೆಲವು ನೂರು ಆಗಬಹುದು. ಅತ್ಲಾಗಿ ಸುಬ್ರಹ್ಮಣ್ಯದಿಂದ ತೊಡಗಿ ಇತ್ಲಾಗಿ ಶಿರೂರಿನವರೆಗೆ ಎಷ್ಟೋ ಚರಕ ತಯಾರಿಸಿ ಜನರಿಗೆ ಹಂಚಿದೆವು. ಜಿಲ್ಲೆಯ ಬೇರೆಬೇರೆ ಕಡೆ ಅಲ್ಲಲ್ಲಿ ಚರಕದಿಂದ ನೂಲು ತೆಗೆಯುವ ಟ್ರೈನಿಂಗ್ ಕ್ಲಾಸ್ ನಡೆಯುತ್ತಿತ್ತು. ಅಲ್ಲೇ ಚರಕ ಹಂಚಲಾಗುತ್ತಿತ್ತು..." ಸದಾಶಿವಜ್ಜ ನೆನಪಿಸಿಕೊಳ್ಳುತ್ತಾರೆ.


ಆದರೆ, ಚರಕದ ಕಥೆ ಕೂಡ ಹೆಚ್ಚು ದಿನ ಮುಂದುವರಿಯಲಿಲ್ಲ. ಕರ್ನಾಟಕದ ಬೇರೆ ಕಡೆಗಳಲ್ಲಿ ಚರಕ ಚಳುವಳಿಗೆ ದೊರೆತ ಪ್ರತಿಕ್ರಿಯೆ ಕರಾವಳಿಯಲ್ಲಿ ದೊರೆಯಲಿಲ್ಲ. ಸದಾಶಿವ ಮತ್ತವರ ಸಹವರ್ತಿಗಳಿಂದ ತಯಾರಾಗಿ ಮನೆಮನೆ ತಲುಪಿದ ಚರಕಗಳು ಕೆಲವೇ ಸಮಯದಲ್ಲಿ ಅಟ್ಟ ಹತ್ತಿ ಕುಳಿತವು. ಹಾಗೆ ಮತ್ತೆ ನಿರುದ್ಯೋಗಿಯಾದ ಸದಾಶಿವಜ್ಜನಿಗೆ ೧೯೭೦ರಲ್ಲಿ ಮಂಗಳೂರಿನ ಖಾದಿ ಭವನದಲ್ಲಿ ಕೆಲಸ ಕೊಡಿಸಲಾಯಿತು. ಆ ಲಾಗಾಯ್ತು ಇಂದಿನವರೆಗೆ ಅಂದರೆ ಸುಮಾರು ನಲವತ್ತು ವರ್ಷಗಳ ಕಾಲ ಅಜ್ಜ ಖಾದಿ ನಡುವೆ ಬದುಕು ಬೆಳೆಸಿದ್ದಾರೆ.


ಈಗಾಗಲೇ ಹೇಳಿದ ಹಾಗೆ ಸರ್ಕಾರದಿಂದ ಅಧಿಕೃತಗೊಂಡಿರುವ ಮಂಗಳೂರಿನ ಎರಡೇ ಎರಡು ಖಾದಿ ಅಂಗಡಿಗಳೆಂದರೆ, ರಥಬೀದಿಯಲ್ಲಿರುವ ಖಾದಿ ಮತ್ತು ಗ್ರಾಮೋದ್ಯೋಗ ಭವನ, ಮತ್ತು ಕೆ.ಎಸ್.ರಾವ್ ರಸ್ತೆಯಲ್ಲಿರುವ ಕಾರ್ನಾಡು ಸದಾಶಿವ ರಾವ್ ಸ್ಮಾರಕ ಖಾದಿ ಭಂಡಾರ. ಖಾದಿ ಮತ್ತು ಗ್ರಾಮೋದ್ಯೋಗ ಆಯೋಗದಿಂದ ಅನುಮೋದನೆಗೊಂಡಿರುವ ಈ ಎರಡನ್ನೂ ಸೌತ್ ಕೆನರಾ ವಿಲೇಜ್ ಇಂಡಸ್ಟ್ರೀಸ್ ಅಸೋಸಿಯೇಶನ್ ನಡೆಸಿಕೊಂಡು ಹೋಗುತ್ತಿದೆ. ನಮ್ಮ ಸದಾಶಿವಜ್ಜ ಎರಡೂ ಅಂಗಡಿಗಳಲ್ಲಿ ದುಡಿದಿದ್ದಾರೆ.


ನಂಬಿ ಸ್ವಾಮಿ, ದಶಕಗಳ ಕಾಲ ಖಾದಿಯ ಹಾದಿ ಸವೆಸಿರುವ ಈ ೭೭ರ ಅಜ್ಜನಿಗೆ ಈಗ ದೊರೆಯುತ್ತಿರುವ ಸಂಬಳ ಬರೀ ೨,೯೦೦ ರುಪಾಯಿ!


"ನಮಗೆ ರಿಟೈರ್ ಮೆಂಟ್ ಅಂತ ಇಲ್ಲ. ಅದಿರುತ್ತಿದ್ದರೆ, ೬೦ರ ನಂತ್ರ ಪೆನ್ಷನ್ ಆದರೂ ಬರುತ್ತಿತ್ತು... ನನ್ನ ಸಂಬಳ ೩೦೦೦ ಆಗಬೇಕಾದರೆ ಇನ್ನೂ ಸುಮಾರು ವರ್ಷ ಆಗಬೇಕು... ಪರವಾಗಿಲ್ಲ; ಹಾಗೂ ಹೀಗೂ ದಿನ ಕಳೆಯುತ್ತದೆ. ಹೆಂಡತಿ ಶಾಂತಾ ಬೀಡಿ ಕಟ್ಟುತ್ತಾಳೆ. ಬೆಳಗ್ಗೆ ಗಂಜಿ ಇಟ್ಟರೆ ರಾತ್ರಿಯವರೆಗೂ ಆಯಿತು. ನಾನು ಹೊಟೇಲಿಗೆ ಹೋಗುವುದಿಲ್ಲ. ಮನೆಯಿಂದ ಗಂಜಿ ತರುತ್ತೇನೆ. ಕಾರ್ ಸ್ಟ್ರೀಟಿನ ಒಂದು ಕ್ಯಾಂಟೀನಿನಿಂದ ದಿನಾ ಸ್ವಲ್ಪ ಸಾಂಬಾರ್ ತಗೊಂಡರೆ ಊಟ ಮುಗೀತದೆ. ಇನ್ನೇನಾಗಬೇಕು?" ಎಂದು ಅಬೋಧ ಮಗುವಿನಂತೆ ಕೇಳುತ್ತಾರೆ ಸದಾಶಿವಜ್ಜ.


"ಎಷ್ಟು ವರ್ಷ ಹೀಗೆ?" ಅಂತ ನೀವು ಕೇಳಬಹುದು. "ಗೊತ್ತಿಲ್ಲ. ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ," ಅದು ಅಜ್ಜನ ಉತ್ತರ.


ಇದು ಅಜ್ಜನ ಕಥೆ. ಸಾಮಾನ್ಯವಾಗಿ ಅವರಿದನ್ನು ಯಾರಿಗೂ ಹೇಳಿದ್ದಿಲ್ಲ. ಹೇಳುವಂಥಾ ಕಥೆಯೂ ಅದಲ್ಲ ಎಂಬುದು ಅವರ ಅಂಬೋಣ. ಅವರು ಹೇಳಿದ ಅಷ್ಟನ್ನೂ ಒಟ್ಟು ಮಾಡಿ ನಿಮಗೆ ಹೇಳಿದ್ದೇನೆ. ಇದರ ಮೇಲೆ ಅವರ ಬಗೆಗೊಂದು ಪ್ರತ್ಯೇಕ ಟಿಪ್ಪಣಿ ಬರೆಯಬೇಕೆಂದು ನನಗನಿಸುವುದಿಲ್ಲ. ಇಷ್ಟು ವರ್ಷಗಳ ಬಳಿಕವೂ "ಕೈಕಾಲುಗಳಲ್ಲಿ ಶಕ್ತಿ ಎಲ್ಲಿವರೆಗೆ ಇರುತ್ತದೋ ಅಲ್ಲಿವರೆಗೆ ದುಡಿಯುವೆ" ಎನ್ನುವ ಅಜ್ಜ ನನಗೆ ಥೇಟ್ ಇತಿಹಾಸದಂತೆ ಕಂಡಿದ್ದಾರೆ.

ನೀವೆಲ್ಲಾದರೂ ಗಾಂಧಿಯ ಕಂಡಿರಾ?


3 ಕಾಮೆಂಟ್‌ಗಳು:

VENU VINOD ಹೇಳಿದರು...

really very interesting and you have written in touchy manner....hats off to sadashivajja

ಮನೋರಮಾ.ಬಿ.ಎನ್ ಹೇಳಿದರು...

ಯಾಕೋ ಎದೆಯ ಒಳಗೆ ಹನಿಯೊಂದು ಕದಡಿದಂತೆ ಭಾಸವಾಯ್ತು...ನಮ್ಮ ನಡುವಿನ ಎಷ್ಟೋ ಬದುಕುಗಳಲ್ಲಿ ಎಂತೆಂತಹ ತಾಕುವ ಕಥೆಗಳಿರುತ್ತವಲ್ವಾ?

ಸಿಬಂತಿ ಪದ್ಮನಾಭ Sibanthi Padmanabha ಹೇಳಿದರು...

ವೇಣು, ಮನೋರಮಾ- ಥ್ಯಾಂಕ್ಸ್.
ವೈದೇಹಿ ಒಮ್ಮೆ ಹೇಳಿದ್ದರು, ಕಥೆಗಳಿಲ್ಲದ ಕ್ಷಣಗಳೇ ಇಲ್ಲ ಅಂತ.