ಮಾರ್ಚ್ 2021ರ 'ವಿದ್ಯಾರ್ಥಿಪಥ' ಪತ್ರಿಕೆಯಲ್ಲಿ ಪ್ರಕಟವಾದ ಲೇಖನ
ಹೆಣ್ಣುಮಕ್ಕಳಿಗೆ ಪಾಠ ಮಾಡಲೆಂದು ಪುಣೆಯ ಗಲ್ಲಿಗಳಲ್ಲಿ ನಡೆದುಹೋಗುತ್ತಿದ್ದರೆ ಆ ಯುವತಿಯ ಮೇಲೆ ಅಕ್ಕಪಕ್ಕದ ಮನೆಗಳಿಂದ
ಸೆಗಣಿ ಎರಚುತ್ತಿದ್ದರಂತೆ, ಅವಾಚ್ಯ ಪದಗಳಿಂದ ನಿಂದಿಸುತ್ತಿದ್ದರಂತೆ. ಇಂಥವುಗಳಿಂದ ರೋಸಿ ಹೋಗಿ ಆಕೆ ತನ್ನ ಕೆಲಸ ನಿಲ್ಲಿಸುತ್ತಾಳೇನೋ ಎಂದು ಜನರು ಬಯಸಿದರೆ, ಅವಳು ತನ್ನೊಂದಿಗೆ ಇನ್ನೊಂದು ಸೀರೆ ಒಯ್ಯುತ್ತಿದ್ದಳಂತೆ! ಅಂಥ ಸಾವಿತ್ರಿಬಾಯಿ ಫುಲೆಯೆಂಬ ಗಟ್ಟಿಹೆಣ್ಣುಮಗಳು ಹುಟ್ಟಿರದಿದ್ದರೆ ಇಂದು ಮಹಿಳೆಯರು ಯಾವ ಪರಿಸ್ಥಿತಿಯಲ್ಲಿ ಇರುತ್ತಿದ್ದರೋ ಊಹಿಸಲಾಗದು.
ಸಾಹಿತ್ಯದಿಂದ ತೊಡಗಿ ತಂತ್ರಜ್ಞಾನದವರೆಗೆ ಮಹಿಳೆ ಪ್ರವೇಶಿಸದ ಕ್ಷೇತ್ರವೇ ಇಲ್ಲವೆಂದು ನಾವಿಂದು ಬೀಗುತ್ತೇವೆ; ಪ್ರತೀ ರಂಗದಲ್ಲೂ ಆಕೆ ಪುರುಷನಿಗೆ ಸಮಬಲಳಾಗಿ ನಿಲ್ಲುವ ಸಾಮರ್ಥ್ಯ ಪಡೆದುಕೊಂಡಿದ್ದಾಳೆಂದು ವಿಶ್ವಾಸದಿಂದ ಹೇಳುತ್ತೇವೆ. ಇಂತಹ ಹೆಮ್ಮೆಯ ಹಿಂದೆ ಶತಮಾನಕ್ಕೂ ಮೊದಲು ಸಾವಿತ್ರಿಬಾಯಿ ಫುಲೆಯಂತಹ ಧೀರೋದಾತ್ತ ಹೆಣ್ಣುಮಕ್ಕಳು ಮಾಡಿದ ಕೆಲಸವಿದೆಯೆಂಬುದನ್ನು ನಾವು ಮರೆಯಬಾರದು.
ಭಾರತದ ಸಾಮಾಜಿಕ ಪರಿವರ್ತನೆಯಲ್ಲಿ ಸಾವಿತ್ರಿಬಾಯಿ ಫುಲೆ-ಜ್ಯೋತಿಬಾ ಫುಲೆ ದಂಪತಿ ನೀಡಿದ ಕೊಡುಗೆ ಅನನ್ಯ. ಎಲ್ಲ ಪರಿವರ್ತನೆಗೂ ಶಿಕ್ಷಣವೇ ಮೂಲ ಎಂಬ ಅವರ ಚಿಂತನೆ ಸಾರ್ವಕಾಲಿಕ. ಅದರಲ್ಲೂ ಮಹಿಳೆಯರು ಶಿಕ್ಷಿತರಾಗದೆ ದೇಶ ಯಾವ ವಿಧದಲ್ಲೂ ಮುಂದುವರಿಯದು ಎಂಬ ಆಶಯವಂತೂ ವಿಶಿಷ್ಟವಾದದ್ದು. ಸಂಪ್ರದಾಯವಾದಿಗಳ ಮಡಿವಂತಿಕೆಯಿಂದಾಗಿ ಹೆಣ್ಣುಮಕ್ಕಳಿಗೆ, ಅದರಲ್ಲೂ ಸಮಾಜದ ಕೆಳಸ್ತರದ ಬಾಲಕಿಯರಿಗೆ ಶಿಕ್ಷಣ ಕನ್ನಡಿಯೊಳಗಿನ ಗಂಟಾಗಿದ್ದಾಗ, ಪ್ರವಾಹದ ವಿರುದ್ಧ ಈಜಿ ಹೊಸ ಶಕೆಯನ್ನು ಆರಂಭಿಸಿದವರು ಈ ದಂಪತಿ.
ಯಾರು ಸಾವಿತ್ರಿಬಾಯಿ?
ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನಯೀಗಾಂವ್ ಗ್ರಾಮದಲ್ಲಿ 1831ರ ಜನವರಿ 3ರಂದು ಲಕ್ಷ್ಮೀ ಹಾಗೂ ಖಂಡೋಜಿ ಪಾಟೀಲ್ ದಂಪತಿಯ ಹಿರಿಯ ಮಗಳಾಗಿ ಸಾವಿತ್ರಿಬಾಯಿ ಜನಿಸಿದರು. ಸುಮಾರು ಎರಡು ಶತಮಾನಗಳ ಹಿಂದಿನ ಕಥೆಯಿದು. ಈ ಇಪ್ಪತ್ತೊಂದನೇ ಶತಮಾನದಲ್ಲೇ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ಮೀನಮೇಷ ಎಣಿಸುವ ಮಂದಿಯಿದ್ದಾರೆ. ಇನ್ನು ಆ ಕಾಲ ಹೇಗಿದ್ದಿರಬಹುದೆಂದು ಯಾರು ಬೇಕಾದರೂ ಊಹಿಸಬಹುದು.
ಸಾವಿತ್ರಿಬಾಯಿಗೆ ಶಾಲಾ ಶಿಕ್ಷಣ ದೊರೆಯುವುದು ಹಾಗಿರಲಿ, 9ನೇ ವರ್ಷಕ್ಕೆ ಮದುವೆಯೇ ಆಗಿಹೋಯಿತು. ಮದುಮಗ ಜ್ಯೋತಿಬಾಫುಲೆಗೆ ಆಗಿನ್ನೂ 12 ವರ್ಷ. ಅದೃಷ್ಟಕ್ಕೆ ಆತನೊಬ್ಬ ಪುಣ್ಯಪುರುಷ. ಪತ್ನಿಯನ್ನು ವಿದ್ಯಾವಂತಳನ್ನಾಗಿಸುವುದರಿಂದ ತೊಡಗಿ ಬದುಕಿನ ಹಂತಹಂತದಲ್ಲೂ ಅವಳ ಬೆಂಬಲಕ್ಕೆ ನಿಂತ. ಅವರಿಬ್ಬರೂ ಜತೆಯಾಗಿ ಹೊಸ ಇತಿಹಾಸ ಬರೆದರು.
ದೇಶದ ಮೊದಲ ಶಿಕ್ಷಕಿ:
ಜ್ಯೋತಿಬಾ ಫುಲೆ ತನ್ನ ಪತ್ನಿಗೆ ಮನೆಯಲ್ಲೇ ವಿದ್ಯಾಭ್ಯಾಸ ಕೊಡಿಸಿದ್ದಷ್ಟೇ ಅಲ್ಲ, ಶಿಕ್ಷಕ ತರಬೇತಿಯನ್ನೂ ಕೊಡಿಸಿದರು. ಪರಿಣಾಮವಾಗಿ ಸಾವಿತ್ರಿಬಾಯಿ ಫುಲೆ ದೇಶದ ಮೊದಲ ಶಿಕ್ಷಕಿಯಾದರು; ಮಾತ್ರವಲ್ಲ, 1848ರಲ್ಲಿ ತಾವೇ ಸ್ಥಾಪಿಸಿದ ಬಾಲಕಿಯರ ಶಾಲೆಯ ಮುಖ್ಯಶಿಕ್ಷಕಿಯೂ ಆದರು. ಶಾಲೆ ಸ್ಥಾಪಿಸಿದಾಗ ಸಾವಿತ್ರಿಬಾಯಿಯ ವಯಸ್ಸು 17, ಜ್ಯೋತಿಬಾ ಫುಲೆ ವಯಸ್ಸು 21. ಮಹಾರಾಷ್ಟ್ರದ ಮಹರ್ವಾಡಾದಲ್ಲಿ ಈ ಯುವದಂಪತಿ ಶಾಲೆ ಆರಂಭಿಸಿದಾಗ ಅವರಿಗೆ ಬೆಂಬಲವಾಗಿದ್ದವರು ಸಗುಣಾಬಾಯಿ ಎಂಬವರು.
ಹೆಣ್ಣುಮಕ್ಕಳಿಗೆ, ಸಮಾಜದ ನಿಮ್ನವರ್ಗದವರಿಗೆ ಶಿಕ್ಷಣ ಗಗನಕುಸುಮವಾಗಿದ್ದ ಕಾಲದಲ್ಲಿ ತಮ್ಮ ಶಾಲೆಗಳನ್ನು ಎಲ್ಲರಿಗೂ ತೆರೆದಿಟ್ಟರು ಫುಲೆ ದಂಪತಿ. ಬಾಲಕಿಯರು ಶಾಲೆಗೆ ಬರುವಂತೆ ಮಾಡುವುದೇ ಅವರ ಪ್ರಮುಖ ಉದ್ದೇಶವಾಗಿತ್ತು. ಬಾಲ್ಯವಿವಾಹ, ಸತೀಪದ್ಧತಿ, ಸ್ತ್ರೀಶೋಷಣೆ ವ್ಯಾಪಕವಾಗಿದ್ದ ಕಾಲದಲ್ಲಿ ವಿದ್ಯೆಯ ಹೊರತಾಗಿ ಇನ್ನೇನೂ ಅವರನ್ನು ಕಾಪಾಡದೆಂದು ಫುಲೆ ದಂಪತಿಗೆ ಸ್ಪಷ್ಟವಾಗಿ ಗೊತ್ತಿತ್ತು.
170 ವರ್ಷಗಳ ಹಿಂದೆ ಬಿಸಿಯೂಟ:
ಫುಲೆ ದಂಪತಿ ಶಾಲೆ ಆರಂಭಿಸಿದಾಗ ಇದ್ದುದು ಎಂಟೊಂಭತ್ತು ಹೆಣ್ಣುಮಕ್ಕಳು. ಒಂದೇ ವರ್ಷದಲ್ಲಿ ಈ ಸಂಖ್ಯೆ 40-45ಕ್ಕೆ ಏರಿತು. 1851ರ ವೇಳೆಗೆ 150 ವಿದ್ಯಾರ್ಥಿಗಳಿಗಾಗಿ ಅವರು ಒಟ್ಟು ಮೂರು ಶಾಲೆಗಳನ್ನು ನಡೆಸುತ್ತಿದ್ದರು. ಮಧ್ಯಾಹ್ನದ ಬಿಸಿಯೂಟದ ಬಗ್ಗೆ ನಾವೀಗ ಮಾತಾಡುತ್ತಿದ್ದೇವೆ. ಫುಲೆ ದಂಪತಿ 170 ವರ್ಷಗಳ ಹಿಂದೆಯೇ ಮಕ್ಕಳನ್ನು ಶಾಲೆಗೆ ಸೆಳೆಯಲು ಬಿಸಿಯೂಟದ ಯೋಜನೆ ಆರಂಭಿಸಿದ್ದರು. ಶಾಲೆಗೆ ಬರುವ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಪೂರ್ವಕವಾಗಿ ಸಣ್ಣ ಶಿಷ್ಯವೇತನವನ್ನೂ ನೀಡುತ್ತಿದ್ದರು.
ಇವೆಲ್ಲ ಬಹು ನಿರಾತಂಕವಾಗಿ ನಡೆಯುತ್ತಿದ್ದವು ಎಂದೇನಿಲ್ಲ. ಫುಲೆ ದಂಪತಿ ತಮ್ಮ ಕೆಲಸಗಳಿಗಾಗಿ ಸಮಾಜದಿಂದ ದೊಡ್ಡ ಮಟ್ಟದ ವಿರೋಧಗಳನ್ನು ಎದುರಿಸಿದರು. ಹೇಳಿಕೇಳಿ ಸ್ವತಃ ಹಿಂದುಳಿದ ವರ್ಗದಿಂದ ಬಂದವರು. ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಸುಲಭವಾಗಿ ಗುರಿಯಾದರು. ಇವರ ಉಪಕ್ರಮಗಳನ್ನು ಹೇಗಾದರೂ ತಡೆಯಬೇಕೆಂದು ಸಮಾಜದ ಮೇಲ್ವರ್ಗದ ಮಂದಿ ನಿರಂತರವಾಗಿ ಪ್ರಯತ್ನ ನಡೆಸುತ್ತಲೇ ಇದ್ದರು. ಸಮಾಜದ ವಿರೋಧಕ್ಕೆ ಹೆದರಿ ಸ್ವತಃ ಜ್ಯೋತಿಬಾಫುಲೆಯವರ ತಂದೆಯೇ ದಂಪತಿಯನ್ನು ಮನೆಯಿಂದ ಆಚೆ ಕಳಿಸಿದರು. ಶಾಲೆ ನಡೆಸಲು ಅವರಿಗೆ ಜಾಗ ದೊರೆಯುವುದೂ ಕಷ್ಟವಾಯಿತು. ಕೆಲವರು ತಮ್ಮ ಮಕ್ಕಳನ್ನು ಅವರ ಶಾಲೆಗೆ ಕಳಿಸಲೂ ಹಿಂದೇಟು ಹಾಕಿದರು. ಆದರೆ ಫುಲೆ ದಂಪತಿಗಳ ದೃಢನಿರ್ಧಾರ, ಉದಾತ್ತ ಧ್ಯೇಯ ಹಾಗೂ ಪರಿಶ್ರಮಕ್ಕೆ ಸೋಲಾಗಲಿಲ್ಲ. ಒಂದಲ್ಲ ಎರಡಲ್ಲ, ಅವರು ೧೮ ಶಾಲೆಗಳನ್ನು ತೆರೆದರು!
ಬ್ರಿಟಿಷ್ ಭಾರತದ ಸರ್ಕಾರಿ ಶಾಲೆಗಳಲ್ಲಿ ಆಗಿನ್ನೂ ಸಾಂಪ್ರದಾಯಿಕ ಪಠ್ಯಗಳನ್ನು ಬೋಧಿಸುತ್ತಿದ್ದರೆ ಫುಲೆ ಶಾಲೆಗಳಲ್ಲಿ ಗಣಿತ, ವಿಜ್ಞಾನಗಳನ್ನು ಬೋಧಿಸಲಾಗುತ್ತಿತ್ತು. ಕೃಷಿಕರಿಗೆ, ಕಾರ್ಮಿಕರಿಗೆ ಅನುಕೂಲವಾಗಲೆಂದು ಅವರು ರಾತ್ರಿಶಾಲೆಗಳನ್ನೂ ನಡೆಸಿದರು.
ಶಿಕ್ಷಣದಿಂದ ಕ್ರಾಂತಿ
ಎರಡು ಶತಮಾನಗಳ ಹಿಂದೆ ಫುಲೆ ದಂಪತಿ ಮಾಡಿದ ಕೆಲಸಗಳನ್ನು ಬಹುದೊಡ್ಡ ಸಾಮಾಜಿಕ ಕ್ರಾಂತಿ ಎಂದು ಯಾವ ಸಂಶಯವೂ ಇಲ್ಲದೆ ಹೇಳಬಹುದು. ಅವರ ಹೋರಾಟ ಕೇವಲ ಶಾಲೆಗಳನ್ನು ಆರಂಭಿಸುವುದಕ್ಕಷ್ಟೇ ಸೀಮಿತವಾಗಿರಲಿಲ್ಲ. ಶಿಕ್ಷಣದ ದೂರಗಾಮಿ ಪರಿಣಾಮಗಳಿಗಾಗಿಯೂ ಅವರು ಟೊಂಕಕಟ್ಟಿದ್ದರು.
ಬಾಲ್ಯವಿವಾಹ, ಸತೀಪದ್ಧತಿ, ಹೆಣ್ಣುಭ್ರೂಣಹತ್ಯೆಗಳೇ ಮೊದಲಾದ ಸಾಮಾಜಿಕ ಪಿಡುಗುಗಳ ವಿರುದ್ಧ ಫುಲೆ ದಂಪತಿ ಬಲಿಷ್ಟ ಹೋರಾಟ ರೂಪಿಸಿದರು. ಮಹಿಳಾ ಹಕ್ಕುಗಳಿಗಾಗಿ ಹೋರಾಡುವುದಕ್ಕಾಗಿ ಸಾವಿತ್ರಿಬಾಯಿ 1852ರಲ್ಲಿ `ಮಹಿಳಾ ಸೇವಾ ಮಂಡಲ’ ಸ್ಥಾಪಿಸಿದರು. ವಿಧವೆಯರ ಕೇಶಮುಂಡನ ಮಾಡುವುದರ ವಿರುದ್ಧ ಕ್ಷೌರಿಕರ ಪ್ರತಿಭಟನೆಯನ್ನು ಸಂಘಟಿಸಿದರು. ಭ್ರೂಣಹತ್ಯೆಯನ್ನು ತಡೆಯುವುದಕ್ಕಾಗಿ ಭಾರತದ ಮೊತ್ತಮೊದಲ 'ಬಾಲಹತ್ಯಾ ಪ್ರತಿಬಂಧಕ ಗೃಹ’ವನ್ನು ಸ್ಥಾಪಿಸಿದರು. ಸಮಾಜದಿಂದ ತಿರಸ್ಕರಿಸಲ್ಪಟ್ಟ ಗರ್ಭಿಣಿಯರ ರಕ್ಷಣೆ ಹಾಗೂ ಪೋಷಣೆಗಾಗಿ ಅಬಲಾಶ್ರಮವನ್ನೂ ಅವರು ಆರಂಭಿಸಿದರು.
1890ರಲ್ಲಿ ಜ್ಯೋತಿಬಾಫುಲೆಯವರು ನಿಧನರಾದ ಬಳಿಕವೂ ಅವರ ಸತ್ಯಶೋಧಕ ಸಮಾಜದ ಚಟುವಟಿಕೆಗಳನ್ನು ಮುಂದುವರಿಸಿದರು ಸಾವಿತ್ರಿಬಾಯಿ. ಪುರೋಹಿತರಿಲ್ಲದ, ವರದಕ್ಷಿಣೆಯಿಲ್ಲದ ಮದುವೆಗಳನ್ನು ನಡೆಸಿ ಸರಳ ವಿವಾಹದ ಮಾದರಿ ಹಾಕಿಕೊಟ್ಟರು. ವಿಧವಾ ಪುನರ್ವಿವಾಹವನ್ನು ಬೆಂಬಲಿಸಿದರು.
ಅಂತೂ ಮಹಿಳೆಯರಿಗೆ ಸಾಮಾಜಿಕ ಹಕ್ಕುಗಳನ್ನು ಒದಗಿಸುವ ಸಂಬಂಧ ಒಂದೂವರೆ-ಎರಡು ಶತಮಾನದ ಹಿಂದೆಯೇ ಕ್ರಾಂತಿಕಾರಕ ಹೆಜ್ಜೆಗಳನ್ನು ಇಟ್ಟವರು ಸಾವಿತ್ರಿಬಾಯಿ ಫುಲೆ. ಎಲ್ಲಾ ರಂಗಗಳಲ್ಲೂ ಇಂದು ಮಹಿಳೆ ಸಾಧಕಳಾಗಿ ಬೆಳೆದಿದ್ದಾಳೆ ಎಂದು ಹೇಳುವಲ್ಲಿ ಇಂಥವರ ಹೋರಾಟಗಳು ನಮಗೆ ನೆನಪಾಗಬೇಕು. ಅವರು ಆ ಕಾಲದಲ್ಲೇ ಶಿಕ್ಷಣದ ದೀಪ ಹಚ್ಚುವ ಮೂಲಕ ಪರಿವರ್ತನೆಯ ಶಕೆ ಆರಂಭಿಸಿರದಿದ್ದರೆ ಇಂದು ಮಹಿಳೆ ಪುರುಷನಿಗೆ ಸಮಬಲಳಾಗಿ ನಿಲ್ಲುವ ಸನ್ನಿವೇಶ ಇರುತ್ತಿರಲಿಲ್ಲವೆಂಬುದು ಸ್ಪಷ್ಟ.
ಸೇವೆಯಲ್ಲೇ ಕೊನೆಯುಸಿರು:
ತಮ್ಮ ಬದುಕಿನ ಕೊನೆಯ ಕ್ಷಣದವರೆಗೂ ಸಮಾಜ ಸೇವೆಯನ್ನೇ ಸರ್ವಸ್ವವಾಗಿಸಿಕೊಂಡಿದ್ದರು ಸಾವಿತ್ರಿಬಾಯಿ. 1890ರ ದಶಕದಲ್ಲಿ ಮಹಾರಾಷ್ಟ್ರ ಪ್ಲೇಗ್ ಮಹಾಮಾರಿಗೆ ತುತ್ತಾದಾಗ ರೋಗಿಗಳ ಆರೈಕೆಗೆ ತಮ್ಮನ್ನು ಸಮರ್ಪಿಸಿಕೊಂಡಿದ್ದರು. ಬಾಲಕನೊಬ್ಬನ ಆರೈಕೆ ಮಾಡುತ್ತಲೇ ತಾವೂ ಅದೇ ಪ್ಲೇಗಿಗೆ ತುತ್ತಾಗಿ 1897ರ ಮಾರ್ಚ್ 10ರಂದು ಆಕೆ ಕೊನೆಯುಸಿರೆಳೆದರು.
ಸಾವಿತ್ರಿಬಾಯಿ ಫುಲೆ ಬದುಕಿದ್ದು ಕೇವಲ 66 ವರ್ಷ. ಪ್ಲೇಗ್ ಮಾರಿ ನುಂಗಿಹಾಕದಿದ್ದಿದ್ದರೆ ಇನ್ನೂ ಸಾಕಷ್ಟು ವರ್ಷ ಆಕೆ ಮಹಿಳೆಯರ ಹಾಗೂ ಹಿಂದುಳಿದ ವರ್ಗಗಳ ಮುನ್ನಡೆಗಾಗಿ ನಿಸ್ಸಂಶಯವಾಗಿ ಶ್ರಮಿಸುತ್ತಿದ್ದರು. ಎಷ್ಟು ವರ್ಷ ಬದುಕಿದ್ದರು ಎಂಬುದಕ್ಕಿಂತಲೂ ಹೇಗೆ ಬದುಕಿದ್ದರು ಎಂಬುದು ಮುಖ್ಯ ಎನ್ನುವುದು ಫುಲೆಯಂಥವರ ಜೀವನದಿಂದ ನಮಗೆ ಮತ್ತೆಮತ್ತೆ ಸಿದ್ಧವಾಗುತ್ತದೆ.
ವರ್ತಮಾನದ ಚಿಂತನೆ
ಶಿಕ್ಷಣದ ವಿಚಾರದಲ್ಲಿ ಮಹಿಳೆ ನೂರಕ್ಕೆ ನೂರು ಪುರುಷನಷ್ಟೇ ಆಯ್ಕೆಗಳನ್ನು ಹೊಂದಿದ್ದಾಳೆಯೇ ಎಂದು ಕೇಳಿಕೊಂಡರೆ ವರ್ತಮಾನದಲ್ಲೂ ಸಣ್ಣ ನಿರಾಸೆ ನಮ್ಮನ್ನು ಕಾಡುತ್ತದೆ. ಹೆಣ್ಣುಮಕ್ಕಳನ್ನು ಓದಿಸುವ ವಿಚಾರದಲ್ಲಿ ಇಂದಿಗೂ ನಮ್ಮ ಸಮಾಜದಲ್ಲಿ ಸಾಕಷ್ಟು ಪೂರ್ವಗ್ರಹಗಳಿವೆ.
ಹೆಣ್ಣುಮಕ್ಕಳನ್ನೂ ಶಾಲೆಗೆ ಕಳಿಸಬೇಕು ಎಂಬುದರಲ್ಲಿ ವಿಶೇಷ ಭಿನ್ನಾಭಿಪ್ರಾಯ ಇಲ್ಲ. ಆದರೆ ಕಾಲೇಜು ಮತ್ತು ಉನ್ನತ ಶಿಕ್ಷಣದ ವಿಚಾರ ಬಂದಾಗ ಜನ ಇನ್ನೂ ಸಂಕುಚಿತ ಪ್ರವೃತ್ತಿಯಿಂದ ಹೊರಬಂದಿಲ್ಲ. ಹುಡುಗಿಯರು ಕಾಲೇಜಿಗೆ ಹೋಗಿ ಏನು ಮಾಡಬೇಕು, ಕೊನೆಗೆ ಬಹುಪಾಲು ಮನೆವಾರ್ತೆ ನೋಡಿಕೊಳ್ಳಬೇಕಾದವರೇ ಎಂಬಲ್ಲಿಂದ ತೊಡಗಿ ಹೆಚ್ಚು ಓದಿದರೆ ಸೂಕ್ತನಾದ ಹುಡುಗನನ್ನು ಹುಡುಕಿ ಮದುವೆ ಮಾಡಿಸುವುದು ಕಷ್ಟ ಎಂಬಲ್ಲಿಯವರೆಗೆ ಹೆಣ್ಣುಹೆತ್ತವರ ಆತಂಕಗಳು ಹರಡಿಕೊಳ್ಳುತ್ತವೆ. ಎಷ್ಟಾದರೂ ಮುಂದೆ ಮದುವೆ ಮಾಡಿ ಕಳಿಸಬೇಕು, ಅಲ್ಲಿಯವರೆಗೆ ಖರ್ಚಾದ ಹಣಕ್ಕೆ ಯಾವ ರಿಟರ್ನ್ಸ್ ಕೂಡ ಇರುವುದಿಲ್ಲ ಎಂದು ಶುದ್ಧ ವ್ಯಾಪಾರೀ ದೃಷ್ಟಿಕೋನದಿಂದ ಯೋಚಿಸುವವರಿಗೂ ಕೊರತೆ ಇಲ್ಲ.
ಸಾಕಷ್ಟು ಮಂದಿ ಕಾಲೇಜು ಹಂತಕ್ಕೆ ತಮ್ಮ ಹೆಣ್ಣುಮಕ್ಕಳನ್ನು ಕಳಿಸಿದರೂ, ಶಿಕ್ಷಣ ಅರ್ಧಕ್ಕೆ ನಿಂತುಹೋಗುವ ನಿದರ್ಶನಗಳೂ ಹಲವಾರು. ಇದಕ್ಕೆ ಪ್ರಮುಖ ಕಾರಣ ಶಿಕ್ಷಣ ಪೂರ್ಣಗೊಳ್ಳುವ ಮೊದಲೇ ವಿವಾಹ ನಿಶ್ಚಯಿಸಿಬಿಡುವುದು. ಈ ಕಾಲದಲ್ಲೂ ತಮ್ಮ ಮಗಳ ಒಳ್ಳೆಯದಕ್ಕಾಗಿ 3-5 ವರ್ಷ ಕಾಯುವ ತಾಳ್ಮೆ ಹೆತ್ತವರಿಗಿಲ್ಲ ಎಂದರೆ ಅಚ್ಚರಿಯಾಗುತ್ತದೆ. ಮುಂದೆ ಸರಿಯಾದ ಗಂಡು ಸಿಗದೆ ಹೋದರೆ ಎಂಬ ಅವರ ಆತಂಕ ಸಂಪೂರ್ಣ ತಳ್ಳಿಹಾಕುವಂಥದ್ದೇನೂ ಅಲ್ಲ; ಆದರೆ ಅವರ ಆತಂಕ ನಿಜವಾಗಿ ಹೆಣ್ಣುಮಗಳ ಭವಿಷ್ಯವೇ ಅನಿಶ್ಚಿತವಾದೀತು ಎಂಬುದಕ್ಕೆ ಯಾವ ಆಧಾರವೂ ಇಲ್ಲ.
ಎಷ್ಟೋ ಹೆಣ್ಣುಮಕ್ಕಳು ವಿವಾಹದ ಕಾರಣದಿಂದ ಕಾಲೇಜಿನ ಒಂದನೇ ಅಥವಾ ಎರಡನೇ ವರ್ಷದಲ್ಲೇ ವಿದ್ಯಾಭ್ಯಾಸ ನಿಲ್ಲಿಸಿಬಿಡುವ ಉದಾಹರಣೆಗಳನ್ನು ಕಳೆದ 10 ವರ್ಷಗಳಿಂದ ಅಧ್ಯಾಪಕನಾಗಿ ನಾನು ಗಮನಿಸಿದ್ದೇನೆ. ಇಂತಹ ಹೆಣ್ಣು ಮಕ್ಕಳೆಲ್ಲ ಆಯ್ಕೆಯ ವಿಷಯದಲ್ಲಿ ಅಸಹಾಯಕರು. `ಅಪ್ಪ-ಅಮ್ಮ ನಿರ್ಧಾರ ಮಾಡಿಬಿಟ್ಟಿದ್ದಾರೆ. ಇಷ್ಟು ವರ್ಷ ಚೆನ್ನಾಗಿ ನೋಡಿಕೊಂಡಿದ್ದಾರೆ. ಈಗ ಮದುವೆ ನಿಶ್ಚಯವಾಗಿದೆ. ಇನ್ನು ನಾವು ಬೇಡ ಅನ್ನುವಂತಿಲ್ಲ’ ಎಂಬುದು ಇವರ ನಿಲುವು.
ಮದುವೆಯಾದ ಮೇಲಾದರೂ ಶಿಕ್ಷಣ ಮುಂದುವರಿಯುತ್ತದೋ ಎಂದರೆ ಆ ಬಗ್ಗೆ ಯಾವುದೇ ಖಚಿತತೆ ಇಲ್ಲ. ವಿವಾಹದ ಬಳಿಕ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದವರ ಸಂಖ್ಯೆಯೇ ಹೆಚ್ಚು. ಶಿಕ್ಷಣವನ್ನು ಪೂರೈಸುವುದು ಬೇಡ ಎಂಬುದಕ್ಕೆ ಗಂಡನ ಕುಟುಂಬದ ಕಡೆಯಿಂದ ಯಾವುದೇ ಸ್ಪಷ್ಟ ಕಾರಣಗಳಿಲ್ಲವಾದರೂ, ಜವಾಬ್ದಾರಿ ತೆಗೆದುಕೊಂಡು ಓದಿಸಿದವರ ಪ್ರಮಾಣ ತೀರಾ ಕಮ್ಮಿ. ಒಂದು ಹಂತಕ್ಕೆ, ಇನ್ನು ಓದಿ ಮಾಡುವುದೇನಿದೆ, ಇಷ್ಟು ಸಾಕು ಎಂಬ ಮನಸ್ಥಿತಿ ಹುಡುಗಿಯಲ್ಲಿ ಬೆಳೆದರೂ ಅಚ್ಚರಿಯಿಲ್ಲ. ಇನ್ನು ವಿವಾಹದ ಬಳಿಕ ಸ್ನಾತಕೋತ್ತರ ಪದವಿ, ಸಂಶೋಧನೆ, ಉದ್ಯೋಗ ಸಂಪಾದನೆ ಇತ್ಯಾದಿಗಳ ಪ್ರಶ್ನೆ ದೂರವೇ ಇದೆ. ಆದರೆ ತಾವು ಓದು ಮುಂದುವರಿಸಬೇಕಿತ್ತು ಎಂಬ ಒಳಗಿನ ಕೊರಗೊಂದು ಶಾಶ್ವತವಾಗಿ ಉಳಿಯುವ ಸಾಧ್ಯತೆ ಇದ್ದೇ ಇರುತ್ತದೆ. ಸಿವಿಲ್ ಸರ್ವೀಸ್ ಪರೀಕ್ಷೆಗಳನ್ನು ಬರೆಯಬೇಕು, ಉದ್ಯೋಗ ಮಾಡಬೇಕು ಎಂದು ಆಸೆ ಹೊತ್ತಿದ್ದ ಎಷ್ಟೋ ವಿದ್ಯಾರ್ಥಿನಿಯರು ಹೆತ್ತವರ ಒತ್ತಾಯಕ್ಕೆ ಕಟ್ಟುಬಿದ್ದು ಮದುವೆಯಾಗಿ ಓದು-ಉದ್ಯೋಗದ ಆಸೆ ಕೈಬಿಟ್ಟದ್ದನ್ನೂ, ಕೆಲ ವರ್ಷಗಳ ನಂತರ ಪಶ್ಚಾತ್ತಾಪಪಟ್ಟದ್ದನ್ನೂ ನಾನು ಕಣ್ಣಾರೆ ನೋಡಿದ್ದೇನೆ. ವಿದ್ಯಾರ್ಥಿಗಳ ಮತ್ತು ಅವರ ಹೆತ್ತವರ ಮನವೊಲಿಸಲು ಅಧ್ಯಾಪಕರಿಗೆ ಇಲ್ಲಿ ಕೊಂಚ ಅವಕಾಶವಿದೆಯಾದರೂ, ಅದಕ್ಕಿಂತ ಹೆಚ್ಚಿನ ಇತಿಮಿತಿಗಳೂ ಇವೆ.
ಲಿಂಗ ನಿರಪೇಕ್ಷ ಶಿಕ್ಷಣದತ್ತ:
ಶಿಕ್ಷಣ 'ಲಿಂಗ ತಟಸ್ಥ’ (Gender Neutral) ಆಗಿರಬೇಕು ಎಂಬ ಚಿಂತನೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಬಲವಾಗುತ್ತಿರುವುದನ್ನು ಕಾಣುತ್ತಿದ್ದೇವೆ. ಪಠ್ಯಕ್ರಮದಲ್ಲೇ ಸ್ತ್ರೀಪುರುಷ ಅಸಮಾನತೆ ಮೊದಲಿನಿಂದಲೂ ಇದೆ; ಇದನ್ನು ಹೋಗಲಾಡಿಸಿ ಸ್ತ್ರೀಪುರುಷರು ಸಮಾನರು ಎಂಬ ಚಿಂತನೆ ಬೆಳೆಯುವಂತಹ ಪಠ್ಯಕ್ರಮ ರೂಪಿಸುವುದು ಅಗತ್ಯ ಎಂಬುದು ಇದರ ಹಿಂದಿನ ಚಿಂತನೆ.
ಈ ನಿಟ್ಟಿನಲ್ಲಿ ಪಠ್ಯಕ್ರಮದಲ್ಲೇ ಸ್ತ್ರೀಯರೆಡೆಗಿನ ಪೂರ್ವಗ್ರಹಗಳನ್ನು ಹೋಗಲಾಡಿಸುವ ಪ್ರಯತ್ನ ಮಾಡುವುದು ಒಂದು ವಿಧಾನವಾದರೆ, ಶಿಕ್ಷಕ ಸಹೋದ್ಯೋಗಿಗಳಲ್ಲೇ ಸ್ತ್ರೀ-ಪುರುಷ ಸಮಾನತೆಯ ದೃಷ್ಟಿಕೋನವನ್ನು ಬಲಪಡಿಸುವುದು ಇನ್ನೊಂದು ವಿಧಾನ ಎಂದು ಸಾಕಷ್ಟು ಪರಿಣಿತರು ಅಭಿಪ್ರಾಯಪಟ್ಟಿದ್ದಾರೆ.
ಒಟ್ಟಿನಲ್ಲಿ, ಮಹಿಳೆಯರ ಶಿಕ್ಷಣದ ವಿಚಾರದಲ್ಲಿ ನಮ್ಮ ಸಮಾಜ ಮತ್ತು ಅದರೊಳಗಿನ ಮಂದಿ ತಮ್ಮ ಮನಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿಕೊಳ್ಳುವ ಅಗತ್ಯ ಇದೆ. ಅದರಲ್ಲೂ ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ, ಇನ್ನಷ್ಟು ಸುಧಾರಣೆಗಳು ಆಗಬೇಕಿದೆ. ಮಹಿಳೆಯರು ಹೆಚ್ಚುಹೆಚ್ಚು ಕಾಲೇಜು ಹಂತ ಮತ್ತು ಅದರಿಂದ ಮುಂದಕ್ಕೆ ಓದಲು ಸಾಧ್ಯವಾಗುವುದು, ಮುಖ್ಯವಾಗಿ ಪುರುಷರಂತೆಯೇ ಉದ್ಯೋಗಗಳನ್ನು ಪಡೆಯಲು ಸಾಧ್ಯವಾಗುವುದು ಆವರ ಸಬಲೀಕರಣದ ದೃಷ್ಟಿಯಿಂದ ತುಂಬ ಪ್ರಮುಖವಾದದ್ದು. ಮಹಿಳೆಯರನ್ನು ಸಶಕ್ತಗೊಳಿಸುವುದು ಎಂದರೆ ಆಕೆಗೆ ಆರ್ಥಿಕ ಸ್ವಾತಂತ್ರ್ಯ ಒದಗಿಸುವುದೇ ಆಗಿದೆ. ಇದು ಶಿಕ್ಷಣ ಮತ್ತು ಉದ್ಯೋಗದಿಂದ ಮಾತ್ರ ಸಾಧ್ಯ. ಇದನ್ನು ಸಾಧ್ಯವಾಗಿಸದೆ ಉಳಿದಂತೆ ಎಷ್ಟು ಮಾತನಾಡಿದರೂ ಅದು ಬರೀ ಬೊಗಳೆಯೇ.
- ಡಾ. ಸಿಬಂತಿ ಪದ್ಮನಾಭ ಕೆ. ವಿ.