ಭಾನುವಾರ, ಜನವರಿ 17, 2021

ರಾಷ್ಟ್ರೀಯ ಶಿಕ್ಷಣ ನೀತಿ: ತಂತ್ರಜ್ಞಾನ ಬಳಕೆಯ ಸಾಧ್ಯತೆ ಮತ್ತು ಸವಾಲುಗಳು

ಡಿಸೆಂಬರ್ 2020ರ 'ವಿದ್ಯಾರ್ಥಿಪಥ'ದಲ್ಲಿ ಪ್ರಕಟವಾದ ಲೇಖನ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತು ವಿವಿಧ ಆಯಾಮಗಳಲ್ಲಿ ಚರ್ಚೆಗಳು ನಡೆಯುತ್ತಿವೆ. ಈ ನೀತಿಯು ನಮ್ಮ ಒಟ್ಟಾರೆ ಶೈಕ್ಷಣಿಕ ವಲಯದಲ್ಲಿ ಎಂತಹ ಬದಲಾವಣೆಗಳಿಗೆ ಕಾರಣವಾಗಬಹುದು ಎಂಬ ಬಗ್ಗೆ ಪರಿಣಿತರು ವಿವಿಧ ಚಿಂತನೆಗಳನ್ನು ಮುಂದಿಡುತ್ತಿದ್ದಾರೆ. ಅವೇನೇ ಇರಲಿ, ರಾಷ್ಟ್ರೀಯ ಶಿಕ್ಷಣ ನೀತಿಯು ಭಾರತದ ಶಿಕ್ಷಣ ರಂಗದಲ್ಲಿ ಹೊಸ ಶಕೆಯೊಂದನ್ನು ಆರಂಭಿಸಲಿರುವುದಂತೂ ನಿಜ. ಈ ಸಂಭಾವ್ಯ ಬದಲಾವಣೆಯ ಹಿಂದೆ ತಂತ್ರಜ್ಞಾನದ ಪಾತ್ರ ಮಹತ್ವದ್ದಾಗಿರಲಿದೆ ಎಂಬುದು ಗಮನಾರ್ಹ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಜಾಗತಿಕ ನಾಯಕನಾಗಿ ಹೊರಹೊಮ್ಮುತ್ತಿದೆ. ಡಿಜಿಟಲ್ ಇಂಡಿಯಾ ಯೋಜನೆಯು ಇಡೀ ರಾಷ್ಟ್ರದ ಒಟ್ಟಾರೆ ಚಿತ್ರಣವನ್ನೇ ಬದಲಾಯಿಸುವ ಮಹತ್ವಾಕಾಂಕ್ಷೆಯಿಂದ ಕೂಡಿದೆ. ಯಾವುದೇ ಪ್ರಗತಿಶೀಲ ಸಮಾಜದಲ್ಲಿ ಶಿಕ್ಷಣದ ಪಾತ್ರ ಅತ್ಯಂತ ಮಹತ್ವದ್ದು ಎಂಬುದು ಎಲ್ಲರೂ ಒಪ್ಪುವ ಮಾತು. ಶಿಕ್ಷಣಕ್ಕೂ ರಾಷ್ಟ್ರದ ಪ್ರಗತಿಗೂ ಇರುವ ಸಂಬಂಧ ಎಷ್ಟು ವಿಶಿಷ್ಟವೋ, ಶಿಕ್ಷಣ ಹಾಗೂ ತಂತ್ರಜ್ಞಾನದ ನಡುವಿನ ಸಂಬಂಧವೂ ಅಷ್ಟೇ ವಿಶಿಷ್ಟವಾದದ್ದು. ಏಕೆಂದರೆ ಶಿಕ್ಷಣದ ಪ್ರಕ್ರಿಯೆ ಹಾಗೂ ಫಲಿತಾಂಶವನ್ನು ವೃದ್ಧಿಗೊಳಿಸುವಲ್ಲಿ ತಂತ್ರಜ್ಞಾನವೂ ಬೆಂಬಲವಾಗಿ ನಿಲ್ಲುತ್ತದೆ. 

ತಂತ್ರಜ್ಞಾನ ಪ್ರೇರಿತ ಕಲಿಕೆಯೆಂಬುದು ಭವಿಷ್ಯದ ಮಂತ್ರವಾಗಲಿದೆ. ಶಿಕ್ಷಣ ಮತ್ತು ಶಿಕ್ಷಣ ಸಂಸ್ಥೆಗಳ ಒಟ್ಟಾರೆ ಪರಿಕಲ್ಪನೆಗಳು ಇನ್ನು ಕೆಲವೇ ವರ್ಷಗಳಲ್ಲಿ ನಮ್ಮ ಊಹೆಯನ್ನೂ ಮೀರಿ ಬದಲಾಗಲಿವೆ. ಹೀಗಾಗಿ ಶೈಕ್ಷಣಿಕ ಪ್ರಕ್ರಿಯೆಯಲ್ಲಿ ತಂತ್ರಜ್ಞಾನದ ಪಾತ್ರವನ್ನು ನಿರ್ಲಕ್ಷಿಸುವುದು ಸಾಧ್ಯವೇ ಇಲ್ಲದ ಮಾತು. ಕಳೆದ ಏಳೆಂಟು ತಿಂಗಳಲ್ಲಿ ಕೊರೋನಾ ಉಂಟುಮಾಡಿದ ಆಟಾಟೋಪ ಈ ಚಿಂತನೆಯನ್ನು ಇನ್ನಷ್ಟು ಪುಷ್ಟಿಗೊಳಿಸಿದೆ. ಸಮಾಜದ ಎಲ್ಲ ರಂಗಗಳು ಎಂತಹ ಸ್ಥಿತ್ಯಂತರವನ್ನು ಕಂಡವೋ, ಅಂತಹ ಸ್ಥಿತ್ಯಂತರಕ್ಕೆ ಶಿಕ್ಷಣರಂಗವೂ ಸಾಕ್ಷಿಯಾಯಿತು. ಇನ್ನು ಐದೋ ಹತ್ತೋ ವರ್ಷಕ್ಕೆ ಜಾರಿಗೆ ಬರಲಿದ್ದ ಆನ್ಲೈನ್ ಪಾಠಪ್ರವಚನಗಳು ಏಕಾಏಕಿ ಅನಿವಾರ್ಯವಾದವು. ಹಳ್ಳಿಹಳ್ಳಿಗಳ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳೂ ಆನ್ಲೈನ್ ಪಾಠಗಳ ಹೊಸ ಸವಾಲಿಗೆ ಒಗ್ಗಿಕೊಳ್ಳತೊಡಗಿದರು.

ಕೊರೋನಾದ ನಡುವೆ ಶಿಕ್ಷಣದ ಕುರಿತಾದ ನಮ್ಮ ಒಟ್ಟಾರೆ ಚಿಂತನೆ ಹೊರಳು ಹಾದಿಗೆ ಬಂದ ಸಮಯದಲ್ಲೇ 2020ರ ರಾಷ್ಟ್ರೀಯ ಶಿಕ್ಷಣ ನೀತಿಯ ಕುರಿತಾದ ಚರ್ಚೆಗಳೂ ಹೆಚ್ಚು ಮಹತ್ವವನ್ನು ಪಡೆದುಕೊಂಡಿವೆ. ಕೊರೋನಾ ಅಲ್ಲದೆ ಹೋಗಿದ್ದರೆ ನಾವು ಯೋಚನೆ ಮಾಡುತ್ತಿದ್ದ ಮತ್ತು ಚರ್ಚಿಸುತ್ತಿದ್ದ ವಿಧಾನಗಳು ಬೇರೆ ಇರುತ್ತಿದ್ದವೋ ಏನೋ? ತಂತ್ರಜ್ಞಾನ ಒಂದು ಶಾಪ ಎಂಬಷ್ಟರ ಮಟ್ಟಿಗೆ ಯೋಚನೆ ಮಾಡುತ್ತಿದ್ದವರೂ, ಮುಂದೆ ಅಂತಹ ಕಟು ಟೀಕೆ ಸಾಧುವಲ್ಲ ಎಂಬ ನಿರ್ಧಾರಕ್ಕೆ ಬಂದಿರಬಹುದು. ಅಷ್ಟರಮಟ್ಟಿಗೆ ಕೊರೋನಾ ತಂತ್ರಜ್ಞಾನದ ಅನಿವಾರ್ಯತೆಯ ಪಾಠ ಮಾಡಿದೆ.

ಗಮನಿಸಲೇಬೇಕಾದ ಅಂಶವೆಂದರೆ ಕೊರೋನಾಕ್ಕೆ ನಾಲ್ಕೈದು ವರ್ಷಕ್ಕೆ ಮೊದಲೇ ನಮ್ಮಲ್ಲಿ ಹೊಸ ಶಿಕ್ಷಣ ನೀತಿಯ ತಯಾರಿಗಳು ಆರಂಭವಾಗಿದ್ದವು. ಶಿಕ್ಷಣ ನೀತಿಯ ರೂಪರೇಖೆಗಳ ಜವಾಬ್ದಾರಿ ಹೊತ್ತವರು ಆಗಲೇ ಎಂತಹ ಮುಂಗಾಣ್ಕೆ ಹೊಂದಿದ್ದರು ಎಂಬುದು ಈಗ ಮನದಟ್ಟಾಗುತ್ತಿದೆ. ತಂತ್ರಜ್ಞಾನದ ದೃಷ್ಟಿಯಿಂದ ಮುಂದುವರಿದ ದೇಶಗಳಲ್ಲಿ ಜನಪ್ರಿಯವಾಗಿರುವ ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಸ್ಮಾರ್ಟ್ ಬೋರ್ಡ್, ಬ್ಲಾಕ್ ಚೈನ್ಸ್, ರೋಬೋಟಿಕ್ಸ್, 3ಡಿ, ಸಿಮ್ಯುಲೇಶನ್ ಮುಂತಾದ ವಿಚಾರಗಳನ್ನು ಶೈಕ್ಷಣಿಕ ಪ್ರಕ್ರಿಯೆಯಲ್ಲಿ ಹೇಗೆ ಬಳಸಬಹುದು ಎಂಬ ಬಗ್ಗೆ ನಮ್ಮ ಹೊಸ ಶಿಕ್ಷಣ ನೀತಿಯು ಈಗಾಗಲೇ ಸಾಕಷ್ಟು ಗಮನ ಹರಿಸಿದೆ. ತಂತ್ರಜ್ಞಾನ ಪ್ರೇರಿತ ಕಲಿಕೆ ಅನಿವಾರ್ಯವಾಗಿರುವ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಏನು ಕಲಿಯುತ್ತಾರೆ ಎನ್ನುವುದಷ್ಟೇ ಬದಲಾಗುವುದಿಲ್ಲ, ಅವರು ಹೇಗೆ ಕಲಿಯುತ್ತಾರೆ ಎಂಬುದು ಕೂಡ ಬದಲಾಗುತ್ತದೆ; ಆದ್ದರಿಂದ ತಂತ್ರಜ್ಞಾನ ಹಾಗೂ ಶಿಕ್ಷಣ ಎರಡೂ ಕ್ಷೇತ್ರಗಳಲ್ಲಿ ವಿಸ್ತೃತ ಸಂಶೋಧನೆಯು ಅನಿವಾರ್ಯವಾಗುತ್ತದೆ.

ಎಲ್ಲೆಲ್ಲಿ ತಂತ್ರಜ್ಞಾನ?

ಬೋಧನೆ, ಕಲಿಕೆ ಮತ್ತು ಮೌಲ್ಯಮಾಪನ ಪ್ರಕ್ರಿಯೆ, ಪಾಠಪ್ರವಚನಕ್ಕೆ ಶಿಕ್ಷಕರಿಗೆ ಅಗತ್ಯವಾಗಿರುವ ಸಿದ್ಧತೆ ಮತ್ತು ಅವರ ವೃತ್ತಿಪರ ಅಭಿವೃದ್ಧಿ, ಎಲ್ಲರಿಗೂ ಶಿಕ್ಷಣ ಕೈಗೆಟುಕುವಂತೆ ಮಾಡುವುದು, ಶೈಕ್ಷಣಿಕ ನಿರ್ವಹಣೆ ಮತ್ತು ಆಡಳಿತದ ಬಲವರ್ಧನೆ, ಭಾಷಾ ಅಡೆತಡೆಗಳನ್ನು ಹೋಗಲಾಡಿಸುವುದು ಹಾಗೂ ದಿವ್ಯಾಂಗರನ್ನು ತಲುಪುವುದು- ಈ ಎಲ್ಲ ಸ್ತರಗಳಲ್ಲಿ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳುವ ಸಾಧ್ಯತೆ ಬಗ್ಗೆ ಹೊಸ ಶಿಕ್ಷಣ ನೀತಿಯು ಪ್ರಸ್ತಾಪಿಸಿದೆ.

ತಂತ್ರಜ್ಞಾನ ಪ್ರೇರಿತ ಕಲಿಕೆಯಿಂದ ವಿದ್ಯಾರ್ಥಿಗಳಿಗೂ ಶಿಕ್ಷಕರಿಗೂ ಪ್ರತ್ಯೇಕ ಅನುಕೂಲಗಳಿವೆ. ವಿದ್ಯಾರ್ಥಿಗಳ ಕಡೆಯಿಂದ ನೋಡುವುದಾದರೆ, ತಂತ್ರಜ್ಞಾನದ ಬೆಂಬಲದಿಂದ ಪ್ರತಿಯೊಬ್ಬರೂ ತಮಗೆ ಸರಿಹೊಂದುವ ವೇಗದಲ್ಲಿ ವ್ಯಾಸಂಗ ನಡೆಸಬಹುದು. ಡಿಜಿಟಲ್ ಯುಗದಲ್ಲಿ ಸಂಪನ್ಮೂಲಗಳ ಕೊರತೆಯಂತೂ ಆಗುವುದು ಸಾಧ್ಯವೇ ಇಲ್ಲ. ಅಲ್ಲದೆ ವಿದ್ಯಾರ್ಥಿಗಳು ಸದಾ ಕ್ರಿಯಾಶೀಲರಾಗಿರಲು ಮತ್ತು ಪರಸ್ಪರ ಸಹಕಾರದಿಂದ ಕಲಿಯಲು ತಂತ್ರಜ್ಞಾನ ಅನುವು ಮಾಡಿಕೊಡುತ್ತದೆ. ಕೌಶಲಗಳನ್ನು ಬಹುಬೇಗನೆ ರೂಢಿಸಿಕೊಳ್ಳಲು ಕೂಡ ನೆರವಾಗುತ್ತದೆ.

ಇನ್ನು ಶಿಕ್ಷಕರ ಕಡೆಯಿಂದ ನೋಡುವುದಾದರೆ, ಕಲಿಕಾ ಪ್ರಕ್ರಿಯೆಯನ್ನು ಹೆಚ್ಚು ಕುತೂಹಲಭರಿತವಾಗಿರುವಂತೆ ನೋಡಿಕೊಳ್ಳಲು ತಂತ್ರಜ್ಞಾನವು ಶಿಕ್ಷಕರಿಗೆ ಸಹಾಯ ಮಾಡುತ್ತದೆ. ಅವರು ಹೊಸಹೊಸ ಬೋಧನಾ ವಿಧಾನಗಳನ್ನು ರೂಢಿಸಿಕೊಳ್ಳಬಹುದು. ಬೇರೆಬೇರೆ ಕಡೆಗಳಲ್ಲಿರುವ ಶಿಕ್ಷಕರು ಸುಲಭವಾಗಿ ಜಂಟಿ ಕಾರ್ಯಯೋಜನೆಗಳನ್ನು ರೂಪಿಸಿಕೊಂಡು ಜಾರಿಗೆ ತರಬಹುದು. ಹೊಸ ಬಗೆಯ ಮೌಲ್ಯಮಾಪನದ ಕ್ರಮಗಳು, ವಿದ್ಯಾರ್ಥಿಗಳ ಪ್ರತಿಕ್ರಿಯೆಯನ್ನು ಆಗಿಂದಾಗ್ಗೆ ಪಡೆಯುವುದೂ ಸುಲಭವಾದೀತು.

ತಂತ್ರಜ್ಞಾನ ಪ್ರೇರಿತ ಕಲಿಕೆಯನ್ನು ಪ್ರೋತ್ಸಾಹಿಸಲು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಅನೇಕ ಯೋಜನೆಗಳನ್ನು ಪ್ರಸ್ತಾಪಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ತಂತ್ರಜ್ಞಾನ ವೇದಿಕೆ (ಎನ್‍ಇಟಿಎಫ್) ಯನ್ನು ಹುಟ್ಟುಹಾಕುವ ಪ್ರಸ್ತಾವನೆ ಬಹುಮುಖ್ಯವಾದದ್ದು. ಶಾಲಾ ಶಿಕ್ಷಣ ಮತ್ತು ಉನ್ನತ ಶಿಕ್ಷಣದ ಹಂತದಲ್ಲಿ ಕಲಿಕೆ, ಮೌಲ್ಯಮಾಪನ, ಯೋಜನೆ ಹಾಗೂ ಆಡಳಿತದಲ್ಲಿ ತಂತ್ರಜ್ಞಾನವನ್ನು ಬಳಸುವ ಸಂಬಂಧ ಚಿಂತನೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಒದಗಿಸುವುದು ಈ ವೇದಿಕೆಯ ಪ್ರಮುಖ ಉದ್ದೇಶ. ಶಿಕ್ಷಣ ಸಂಸ್ಥೆಗಳು ಈ ವೇದಿಕೆಯ ಮೂಲಕ ತಮ್ಮಲ್ಲಿನ ಅತ್ಯುತ್ತಮ ಯೋಜನೆಗಳನ್ನು ದೇಶದ ಇತರ ಶಿಕ್ಷಣ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುವುದಕ್ಕೂ ಇದರಲ್ಲಿ ಅವಕಾಶವಿದೆ.

ತಂತ್ರಜ್ಞಾನ ಆಧಾರಿತ ಉಪಕ್ರಮಗಳ ಬಗ್ಗೆ ಸೂಕ್ತ ನಿದರ್ಶನಗಳ ಸಮೇತ ಈ ವೇದಿಕೆಯು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ಸಲಹೆ ಸೂಚನೆಗಳನ್ನು ನೀಡಲಿದೆ. ಶೈಕ್ಷಣಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಬೌದ್ಧಿಕ ಹಾಗೂ ಸಾಂಸ್ಥಿಕ ಸಾಮಥ್ರ್ಯಗಳನ್ನು ಅಭಿವೃದ್ಧಿಪಡಿಸುವಲ್ಲಿ ಕೂಡ ಇದು ನೆರವಾಗಲಿದೆ. ಸಂಶೋಧನೆ ಹಾಗೂ ಹೊಸ ಸಾಧ್ಯತೆಗಳ ಬಗ್ಗೆ ವಿನೂತನ ಚಿಂತನೆಗಳನ್ನು ಮುಂದಿಡಲಿದೆ.

ತಂತ್ರಜ್ಞಾನದ ಅನುಷ್ಠಾನ

ಹೆಚ್ಚು ವರ್ಚುವಲ್ ಪ್ರಯೋಗಾಲಯಗಳನ್ನು ಸ್ಥಾಪಿಸುವುದು, ಶಾಲೆಗಳ ಡಿಜಿಟಲ್ ಸೌಲಭ್ಯಗಳನ್ನು ಹೆಚ್ಚಿಸುವುದು, ದಿವ್ಯಾಂಗರಿಗೆ ಅನುಕೂಲವಾಗುವ ಶೈಕ್ಷಣಿಕ ಸಾಫ್ಟ್‍ವೇರ್‍ಗಳನ್ನು ಬಳಸುವುದು ಹಾಗೂ ವಂಚಿತ ಗುಂಪುಗಳಿಗೆ ಶಿಕ್ಷಣದ ಲಭ್ಯತೆಯನ್ನು ಹೆಚ್ಚಿಸುವುದು ಮೊದಲಾದವುಗಳ ಕುರಿತು ಶಿಕ್ಷಣ ನೀತಿಯು ಸಲಹೆ ನೀಡಿದೆ.

ಪ್ರಾಥಮಿಕ ಶಿಕ್ಷಣಕ್ಕೆ ಸಂಬಂಧಿಸಿದಂತೆ ಶಿಕ್ಷಣ ನೀತಿಯ ಪ್ರಮುಖ ಪ್ರಸ್ತಾಪಗಳೆಂದರೆ- ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ನಡುವಿನ ಭಾಷಾ ಕಂದಕವನ್ನು ತೊಡೆದುಹಾಕುವ ಉದ್ದೇಶಕ್ಕೆ ತಂತ್ರಜ್ಞಾನವನ್ನು ಬಳಸಿಕೊಳ್ಳವುದು, ಡಿಜಿಟಲ್ ಗ್ರಂಥಾಲಯಗಳನ್ನು ಸ್ಥಾಪಿಸುವುದು, ಭಾಷಾ ಕಲಿಕೆಗೆ ವಿಶೇಷ ಆದ್ಯತೆ ನೀಡುವುದು ಮತ್ತು ನಿರ್ದಿಷ್ಟವಾಗಿ ವಿಶೇಷ ಸಾಮಥ್ರ್ಯದ ಮಕ್ಕಳಿಗೆ ಶಿಕ್ಷಣದ ಹೆಚ್ಚಿನ ಲಭ್ಯತೆ ಒದಗಿಸಿಕೊಡುವುದು, ಶಾಲಾ ಪಠ್ಯಗಳಲ್ಲಿ ಕೋಡಿಂಗ್-ಡಿಕೋಡಿಂಗ್ ಅನ್ನು ಅನುಷ್ಠಾನಕ್ಕೆ ತರುವುದು, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಬಳಸಿಕೊಂಡು ವಿದ್ಯಾರ್ಥಿಗಳ ಜೀವನ ಕೌಶಲಗಳನ್ನು ಪತ್ತೆ ಮಾಡಿ ದಾಖಲಿಸುವುದು; ಆ ಮೂಲಕ ಅವರ ಸಮಗ್ರ ಪ್ರಗತಿ ವರದಿಯನ್ನು ಸಿದ್ಧಪಡಿಸುವುದು.

ವೃತ್ತಿಪರ ಮತ್ತು ಉನ್ನತ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಸ್ತಾಪಗಳೆಂದರೆ: ವಿವಿಧ ಸಾಮಾಜಿಕ ಸವಾಲುಗಳನ್ನು ಎದುರಿಸಲು ತಂತ್ರಜ್ಞಾನವನ್ನು ಬಳಸುವುದು, ಅಂತರಶಿಸ್ತೀಯ ಸಂಶೋಧನೆ ಹಾಗೂ ನಾವೀನ್ಯತೆಗೆ ಹೆಚ್ಚಿನ ಒತ್ತು ನೀಡುವುದು (ಉದಾ: ಕ್ರೆಡಿಟ್ ಆಧಾರದಲ್ಲಿ ಪದವಿ ನೀಡುವುದು), ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ‘ಶೈಕ್ಷಣಿಕ ಬ್ಯಾಂಕು’ಗಳನ್ನು ಸೃಜಿಸುವುದು, ಪದವಿ ಹಾಗೂ ವೃತ್ತಿಪರ ಕೋರ್ಸುಗಳಲ್ಲಿ ಆನ್ಲೈನ್ ಹಾಗೂ ಸಾಂಪ್ರದಾಯಿಕ ಬೋಧನೆಗಳನ್ನು ಮಿಶ್ರಗೊಳಿಸುವುದು, 

ಉನ್ನತ ಶಿಕ್ಷಣದ ನಿಯಂತ್ರಕ ಸಂಸ್ಥೆಗಳಲ್ಲಿ ದಕ್ಷತೆ ಹಾಗೂ ಪಾರದರ್ಶಕತೆಯನ್ನು ತರುವುದಕ್ಕಾಗಿ ತಂತ್ರಜ್ಞಾನವನ್ನು ಬಳಸುವುದು, ಮುಂತಾದವು.

ಕೃತಕ ಬುದ್ಧಿಮತ್ತೆಯ ಬಳಕೆ 

ಕೃತಕ ಬುದ್ಧಿಮತ್ತೆ ಅಥವಾ ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಇಂದಿನ ಹೊಸ ಮಂತ್ರ. ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವೆಲ್ಲ ಇಂದು ಕೃತಕ ಬುದ್ಧಿಮತ್ತೆಯ ಸುತ್ತಮುತ್ತ ಓಡಾಡಿಕೊಂಡಿದ್ದೇವೆ. ನಾವು ಬಳಸುವ ಫೇಸ್ಬುಕ್, ಯೂಟ್ಯೂಬ್ ಮುಂತಾದ ಸಾಮಾಜಿಕ ಜಾಲತಾಣಗಳು ಈ ಕೃತಕ ಬುದ್ಧಿಮತ್ತೆಯ ಸಹಾಯದಿಂದಲೇ ನಮ್ಮ ಬೇಕುಬೇಡಗಳನ್ನು ನಿರ್ಧರಿಸುತ್ತಿವೆ. ಹೊಸ ಶಿಕ್ಷಣ ನೀತಿಯು ಕೂಡ ಇದೇ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‍ನ ಧನಾತ್ಮಕ ಅಂಶಗಳನ್ನು ಶಿಕ್ಷಣದ ವಿವಿಧ ಹಂತಗಳಲ್ಲಿ ಬಳಸುವ ಮೂಲಕ ಅದರ ಸದ್ಬಳಕೆ ಮಾಡುವ ಪ್ರಸ್ತಾಪಗಳನ್ನು ಮುಂದಿಟ್ಟಿದೆ.

ಡಿಜಿಟಲ್ ಸಾಕ್ಷರತೆ, ಸಾಮಥ್ರ್ಯ ವರ್ಧನೆ, ಕೋಡಿಂಗ್, ಕಂಪ್ಯೂಟೇಶನಲ್ ಡಿಸೈನ್ ಥಿಂಕಿಂಗ್ ಮುಂತಾದ ನಿರ್ಣಾಯಕ ಕೌಶಲಗಳನ್ನು ವಿದ್ಯಾರ್ಥಿಗಳಲ್ಲಿ ಬೆಳೆಸುವ ಉದ್ದೇಶ ಹೊಂದಿದೆ. ಶಿಕ್ಷಣ ನೀತಿಯು ಪ್ರಸ್ತಾಪಿಸಿರುವ ಕೃತಕ ಬುದ್ಧಿಮತ್ತೆ ಆಧಾರಿತ ಶಿಕ್ಷಣವು ವಿದ್ಯಾರ್ಥಿಗಳನ್ನು ಸಂವಹನ, ಸೃಜನಶೀಲತೆ, ವಿಮರ್ಶಾತ್ಮಕ ಯೋಚನೆ, ಸಹಭಾಗಿತ್ವ ಹಾಗೂ ಸಮಸ್ಯಾ ಪರಿಹಾರ ಇತ್ಯಾದಿ 21ನೇ ಶತಮಾನದ ಕೌಶಲಗಳನ್ನು ಬೆಳೆಸುವತ್ತ ಗಮನ ನೀಡಲಿದೆ. ಮುಂಬರಲಿರುವ ಅತಿವಿನೂತನ ತಂತ್ರಜ್ಞಾನಗಳ ಕುರಿತಾಗಿ ಸಂಶೋಧನೆಯನ್ನು ಕೈಗೊಳ್ಳುವುದಕ್ಕೆ ಕೃತಕ ಬುದ್ಧಿಮತ್ತೆ ಸಹಕಾರಿಯಾಗಲಿದೆ. ಇದರ ಜೊತೆಗೆ ಡೇಟಾ ನಿರ್ವಹಣೆ ಮತ್ತು ರಕ್ಷಣೆಯ ಕುರಿತಾದ ಆತಂಕಗಳನ್ನೂ ಶಿಕ್ಷಣ ನೀತಿ ಗಮನಿಸಲಿದೆ.

ಪರಿಣಾಮವಾಗಿ ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ತಂತ್ರಜ್ಞಾನಪ್ರೇರಿತ ಬಹುಶಿಸ್ತೀಯ ವಿಧಾನಗಳಿಗೆ ಆದ್ಯತೆ ದೊರೆಯಲಿದೆ. ತಂತ್ರಜ್ಞಾನದಲ್ಲಿ ಸಂಶೋಧನೆಯನ್ನು ವಿಸ್ತರಿಸುವುದಕ್ಕಾಗಿ ಶಿಕ್ಷಣ ಸಚಿವಾಲಯವು ರಾಷ್ಟ್ರೀಯ ಸಂಶೋಧನ ಪ್ರತಿಷ್ಠಾನ (ಎನ್‍ಆರ್‍ಎಫ್)ವನ್ನು ಸ್ಥಾಪಿಸಲಿದೆ. ಇದರಲ್ಲಿ ಕೃತಕ ಬುದ್ಧಿಮತ್ತೆ ವಿಚಾರವಾಗಿ ಮೂರು ಆದ್ಯತೆಗಳು ಇರಲಿವೆ: ಕೃತಕ ಬುದ್ಧಿಮತ್ತೆ ಕುರಿತಾದ ಪ್ರಧಾನ ಸಂಶೋಧನೆಯನ್ನು ಮುಂದುವರಿಸುವುದು; ಆನ್ವಯಿಕ ಸಂಶೋಧನೆಯನ್ನು ಅಭಿವೃದ್ಧಿಪಡಿಸುವುದು; ಹಾಗೂ ಆರೋಗ್ಯ, ಕೃಷಿ ಹಾಗೂ ಹವಾಮಾನ ಬದಲಾವಣೆ ಕ್ಷೇತ್ರಗಳಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸುವುದಕ್ಕಾಗಿ ಕೃತಕ ಬುದ್ಧಿಮತ್ತೆಯನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆಯನ್ನು ಕೈಗೊಳ್ಳುವುದು.

ಇ-ಕಲಿಕಾ ವೇದಿಕೆಗಳು

ಈಗಾಗಲೇ ಜಾರಿಯಲ್ಲಿರುವ ದೀಕ್ಷಾ, ಸ್ವಯಂ, ಸ್ವಯಂಪ್ರಭಾದಂತಹ ಇ-ಕಲಿಕಾ ವೇದಿಕೆಗಳನ್ನು ಇನ್ನಷ್ಟು ಪುಷ್ಟಿಗೊಳಿಸಿ ಶೈಕ್ಷಣಿಕ ವಲಯದ ಸುಧಾರಣೆಗೆ ಅನುವುಗೊಳಿಸುವುದು ರಾಷ್ಟ್ರೀಯ ಶಿಕ್ಷಣ ನೀತಿಯ ಪ್ರಮುಖ ಉಪಕ್ರಮವಾಗಿದೆ. ದೊಡ್ಡ ಸಂಖ್ಯೆಯ ಶೈಕ್ಷಣಿಕ ಸಾಫ್ಟ್‍ವೇರ್‍ಗಳು, ಉಚಿತ ಆ್ಯಪ್‍ಗಳು ಹಾಗೂ ಆನ್ಲೈನ್ ಸಂಪನ್ಮೂಲಗಳನ್ನು ಎಲ್ಲ ಹಂತದ ವಿದ್ಯಾರ್ಥಿಗಳ ಹಾಗೂ ಅಧ್ಯಾಪಕರ ಬಳಕೆಗೆ ಲಭ್ಯವಾಗುವಂತೆ ಮಾಡುವುದು; ಶಾಲಾ ಪಠ್ಯಕ್ರಮಗಳಿಗೆ ಸರಿಹೊಂದುವ, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅನುಕೂಲವಾಗುವ ಕಲಿಕಾ ಸಂಪನ್ಮೂಲಗಳನ್ನು ಒದಗಿಸಿಕೊಡುವುದು; ಪಠ್ಯಪುಸ್ತಕಗಳು, ಅಧ್ಯಯನಕ್ಕೆ ಪೂರಕವಾಗುವ ಲಿಂಕ್‍ಗಳು, ಪೋಷಕ-ಅಧ್ಯಾಪಕರಿಗೆ ಸಲಹೆಗಳು, ಯಶೋಗಾಥೆಗಳು, ನೋಟ್ಸ್, ಪಿಪಿಟಿ ಹಾಗೂ ಪ್ರಶ್ನಾವಳಿ ಇತ್ಯಾದಿ ಸಂಪನ್ಮೂಲಗಳನ್ನು ಎಲ್ಲ ಪ್ರಮುಖ ಭಾರತೀಯ ಭಾಷೆಗಳಲ್ಲಿ ಲಭ್ಯವಾಗುವಂತೆ ಮಾಡುವುದು; ಗ್ರಾಮೀಣ ಪ್ರದೇಶದಲ್ಲಿರುವ ಹಾಗೂ ದಿವ್ಯಾಂಗ ವಿದ್ಯಾರ್ಥಿಗಳೂ ಇದರ ಪ್ರಯೋಜನ ಪಡೆದುಕೊಳ್ಳಲು ಅನುಕೂಲ ಮಾಡಿಕೊಡುವುದು; ಬೋಧನಾ ಹಾಗೂ ಕಲಿಕಾ ಸಾಮಗ್ರಿಗಳನ್ನು ಎಲ್ಲಾ ಭಾಷೆಗಳಲ್ಲಿ ಎಲ್ಲಾ ರಾಜ್ಯಗಳು ಹಾಗೂ ಎನ್‍ಸಿಆರ್‍ಟಿ, ಸಿಐಇಟಿ, ಸಿಬಿಎಸ್‍ಇ, ಎನ್‍ಐಒಸ್ ಮೊದಲಾದ ಸಂಸ್ಥೆಗಳು ತಯಾರಿಸುವುದು; ಇವುಗಳನ್ನು ಸರ್ಕಾರಿ ಹಾಗೂ ಖಾಸಗಿ ಶಿಕ್ಷಣ ಸಂಸ್ಥೆಗಳೂ ಬಳಸಿಕೊಳ್ಳಲು ಅವಕಾಶ ಮಾಡಿಕೊಡುವುದು- ಇವೆಲ್ಲ ‘ದೀಕ್ಷಾ’ದ ಉದ್ದೇಶಗಳು.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರಿಗೆ ಲಭ್ಯವಿರುವ ‘ಸ್ವಯಂ’ (SWAYAM) ಆನ್ಲೈನ್ ಕಲಿಕಾ ವೇದಿಕೆಯು ಈಗಾಗಲೇ ನೂರಾರು ಆನ್ಲೈನ್ ಕೋರ್ಸುಗಳನ್ನು ಒದಗಿಸುತ್ತಿದೆ. ವಿವಿಧ ರೀತಿಯ ಕಲಿಕಾ ಸಾಮಗ್ರಿಗಳನ್ನು ಉಚಿತವಾಗಿ ಲಭ್ಯವಾಗುವಂತೆ ಮಾಡಿದೆ. ಮಾಸಿವ್ ಓಪನ್ ಆನ್ಲೈನ್ ಕೋರ್ಸುಗಳು (MOOC) ಶಿಕ್ಷಣ ವಲಯಕ್ಕೆ ಹೊಸ ಮೆರುಗು ಕೊಟ್ಟಿದೆ. ಶಿಕ್ಷಣದ ಮೂರು ಪ್ರಧಾನ ತತ್ವಗಳಾದ ಲಭ್ಯತೆ, ಸಮಾನತೆ ಹಾಗೂ ಗುಣಮಟ್ಟಗಳನ್ನು ಸಾಧಿಸುವುದಕ್ಕಾಗಿ ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ನೀಡುವುದು; ಅತ್ಯಂತ ಪ್ರತಿಕೂಲ ಪರಿಸ್ಥಿತಿಯಲ್ಲಿರುವವರೂ ಒಳಗೊಂಡಂತೆ ಎಲ್ಲರಿಗೂ ಅತ್ಯುತ್ತಮ ಬೋಧನಾ ಕಲಿಕಾ ಸಂಪನ್ಮೂಲಗಳನ್ನು ತಲುಪಿಸುವುದು; 9ನೇ ತರಗತಿಯಿಂದ ಸ್ನಾತಕೋತ್ತರ ಹಂತದವರೆಗೆ ತರಗತಿಯಲ್ಲಿ ಬೋಧಿಸಲಾಗುವ ಎಲ್ಲ ಕೋರ್ಸುಗಳನ್ನು ಎಲ್ಲರಿಗೂ ಎಲ್ಲ ಕಡೆಯಲ್ಲೂ ಎಲ್ಲ ಸಮಯದಲ್ಲೂ ದೊರೆಯುವ ಹಾಗೆ ಮಾಡುವುದು- ಮುಂತಾದವು ‘ಸ್ವಯಂ’ ಯೋಜನೆಯ ಉದ್ದೇಶಗಳು. ಇವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಬಳಸಲು ಹೊಸ ಶಿಕ್ಷಣ ನೀತಿ ಯೋಜನೆಗಳನ್ನು ಹೊಂದಿದೆ. ದೇಶದ ಅತ್ಯುತ್ತಮ ಶಿಕ್ಷಕರಿಂದ ತಯಾರಾದ ಈ ಎಲ್ಲ ಕೋರ್ಸುಗಳೂ ಪ್ರತಿಕ್ರಿಯಾತ್ಮಕವಾಗಿರುತ್ತವೆ. ಪ್ರತಿಯೊಬ್ಬ ಕಲಿಕಾರ್ಥಿಗೂ ಉಚಿತವಾಗಿ ದೊರೆಯುತ್ತವೆ. 

ವಿಶೇಷವಾಗಿ ಆರಿಸಲಾದ 1000ಕ್ಕೂ ಹೆಚ್ಚು ಅಧ್ಯಾಪಕರು ಈ ಕೋರ್ಸುಗಳನ್ನು ಸಿದ್ಧಪಡಿಸುವಲ್ಲಿ ಭಾಗಿಗಳಾಗಿದ್ದಾರೆ. ಇವು ವೀಡಿಯೋ ಉಪನ್ಯಾಸಗಳು, ಡೌನ್ಲೋಡ್ ಮಾಡಿಕೊಂಡು ಮುದ್ರಿಸಿಕೊಳ್ಳಬಲ್ಲ ಅಧ್ಯಯನ ಸಾಮಗ್ರಿಗಳು, ಸ್ವಯಂ ಮೌಲ್ಯಮಾಪನ ಪರೀಕ್ಷೆಗಳು, ಹಾಗೂ ಅನುಮಾನ ಪರಿಹರಿಸಿಕೊಳ್ಳುವುದಕ್ಕಾಗಿ ಆನ್ಲೈನ್ ಚರ್ಚಾ ವೇದಿಕೆ – ಎಂಬ ನಾಲ್ಕು ಸ್ತರಗಳಲ್ಲಿ ವಿನ್ಯಾಸಗೊಂಡಿವೆ.

ಡಿಜಿಟಲ್ ಮೂಲಸೌಕರ್ಯ

ಹೊಸ ಶಿಕ್ಷಣ ನೀತಿಯು ಡಿಜಿಟಲ್ ಮೂಲಸೌಕರ್ಯ ವೃದ್ಧಿಗೆ ಬಂಡವಾಳ ವಿನಿಯೋಗಿಸುವುದಕ್ಕೆ ಆದ್ಯತೆ ನೀಡಿದೆ. ಆನ್ಲೈನ್ ಬೋಧನಾ ವೇದಿಕೆಗಳು ಹಾಗೂ ಸಾಧನಗಳು, ವರ್ಚುವಲ್ ಪ್ರಯೋಗಾಲಯಗಳು ಹಾಗೂ ಡಿಜಿಟಲ್ ಕಣಜಗಳು, ಉನ್ನತ ಗುಣಮಟ್ಟದ ಆನ್ಲೈನ್ ಸಂಪನ್ಮೂಲಗಳನ್ನು ಸಿದ್ಧಪಡಿಸುವುದಕ್ಕಾಗಿ ಅಧ್ಯಾಪಕರನ್ನು ತರಬೇತುಗೊಳಿಸುವುದು, ಆನ್ಲೈನ್ ಮೌಲ್ಯಮಾಪನವನ್ನು ಯೋಜಿಸುವುದು ಮತ್ತು ಜಾರಿಗೆ ತರುವುದು, ಆನ್ಲೈನ್ ಬೋಧನೆ ಮತ್ತು ಕಲಿಕೆಯಲ್ಲಿ ಬಳಸುವ ಸಂಪನ್ಮೂಲ, ತಂತ್ರಜ್ಞಾನ ಹಾಗೂ ಬೋಧನಾ ವಿಧಾನಗಳಿಗೆ ನಿರ್ದಿಷ್ಟ ಗುಣಮಟ್ಟವನ್ನು ನಿರ್ದೇಶಿಸುವುದು ಇವು ಶಿಕ್ಷಣ ನೀತಿಯ ಪ್ರಸ್ತಾಪಗಳು.

ಈ ಬದಲಾದ ಪರಿಸ್ಥಿತಿಗೆ ನಮ್ಮ ಒಟ್ಟಾರೆ ಶಿಕ್ಷಣ ವಲಯವನ್ನು ಸಿದ್ಧಪಡಿಸುವುದು ಕೂಡ ಒಂದು ದೊಡ್ಡ ಸವಾಲಿನ ಕೆಲಸವೇ. ಹೊಸ ಶಿಕ್ಷಣ ನೀತಿಯಲ್ಲಿ ಈ ಸವಾಲನ್ನು ಎದುರಿಸುವ ಕುರಿತೂ ಸಾಕಷ್ಟು ಚಿಂತನೆಗಳಿವೆ. ಆನ್ಲೈನ್ ಶಿಕ್ಷಣಕ್ಕೆ ಸಂಬಂಧಿಸಿದಂತೆ ಪೂರ್ವಭಾವಿ ಸಮೀಕ್ಷೆಗಳನ್ನು ಕೈಗೊಳ್ಳುವುದು, ಡಿಜಿಟಲ್ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು, ಆನ್ಲೈನ್ ಬೋಧನಾ ವೇದಿಕೆಗಳು ಹಾಗೂ ವಿಧಾನಗಳನ್ನು ಅಭಿವೃದ್ಧಿಪಡಿಸುವುದು, ಕಲಿಕಾ ವಿಷಯಗಳನ್ನು ಸಿದ್ಧಪಡಿಸುವುದು, ಡಿಜಿಟಲ್ ಸಂಪನ್ಮೂಲಗಳ ಭಂಡಾರವನ್ನು ವಿಸ್ತರಿಸುವುದು, ನಗರ ಮತ್ತು ಹಳ್ಳಿಗಳ ಮಧ್ಯೆ ಇರುವ ಡಿಜಿಟಲ್ ಕಂದಕದ ಸಮಸ್ಯೆಗೆ ಪರಿಹಾರ ಕಂಡುಹಿಡಿಯುವುದು, ವರ್ಚುವಲ್ ಪ್ರಯೋಗಾಲಯಗಳ ಅಭಿವೃದ್ಧಿ, ಶಿಕ್ಷಕರ ತರಬೇತಿ ಹಾಗೂ ಪ್ರೋತ್ಸಾಹ, ಆನ್ಲೈನ್ ಪರೀಕ್ಷೆ ಮತ್ತು ಮೌಲ್ಯಮಾಪನ- ಮುಂತಾದವು ಸವಾಲಿನ ಪರಿಹಾರಕ್ಕೆ ಶಿಕ್ಷಣ ನೀತಿಯು ಸೂಚಿಸಿರುವ ಕೆಲವು ಉಪಕ್ರಮಗಳು.

ಇಷ್ಟಾದ ಮೇಲೂ ಹೊಸ ಶಿಕ್ಷಣ ನೀತಿಯು ತಂತ್ರಜ್ಞಾನದ ಅಳವಡಿಕೆ ವಿಚಾರದಲ್ಲಿ ಮಾಡಿರುವ ಪ್ರಸ್ತಾಪಗಳ ಬಗ್ಗೆ ನಾವೆಲ್ಲ ಗಂಭೀರವಾಗಿ ಚಿಂತಿಸುವ ಅವಶ್ಯಕತೆ ಇದ್ದೇ ಇದೆ. ಮುಖ್ಯವಾಗಿ ನಮ್ಮ ಸರ್ಕಾರಿ ಶಾಲೆಗಳಲ್ಲಿ ಇಂತಹ ಆಧುನಿಕ ತಂತ್ರಜ್ಞಾನಗಳನ್ನೆಲ್ಲ ಅಳವಡಿಸುವುದು ಎಷ್ಟರ ಮಟ್ಟಿಗೆ ಸಾಧ್ಯ? ಡಿಜಿಟಲ್ ಸೌಕರ್ಯಗಳನ್ನು ಒದಗಿಸಿಕೊಡುವಲ್ಲಿ ಇರುವ ಉತ್ಸಾಹ ಅದರ ನಿರ್ವಹಣೆಯಲ್ಲೂ ಇದ್ದೀತೇ, ಡಿಜಿಟಲ್‍ಗಿಂತಲೂ ಪೂರ್ವದಲ್ಲಿ ದೊರೆಯಬೇಕಾದ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲಾಗಿದೆಯೇ ಎಂಬ ಪ್ರಶ್ನೆಗಳನ್ನು ನಾವು ಕೇಳಿಕೊಳ್ಳಬೇಕಿದೆ.

2019ರ ಸಮೀಕ್ಷೆಯೊಂದರ ಪ್ರಕಾರ ನಗರ ಪ್ರದೇಶದಲ್ಲಿ ಶೇ. 23.4ರಷ್ಟು ಮನೆಗಳಲ್ಲಿ ಕಂಪ್ಯೂಟರ್ ಇದ್ದರೆ ಹಳ್ಳಿಗಳಲ್ಲಿ ಶೇ. 4.4ರಷ್ಟು ಮನೆಗಳಲ್ಲಿ ಮಾತ್ರ ಇದೆ. ನಗರಗಳ ಶೇ. 42ರಷ್ಟು ಮನೆಗಳಿಗೆ ಇಂಟರ್ನೆಟ್ ಸೌಕರ್ಯ ಇದ್ದರೆ ಹಳ್ಳಿಗಳಲ್ಲಿ ಶೇ. 14.9ರಷ್ಟು ಮನೆಗಳಲ್ಲಿ ಮಾತ್ರ ಇಂಟರ್ನೆಟ್ ಇದೆ. ಈ ಅಸಮಾನತೆಯನ್ನು ಹೋಗಲಾಡಿಸುವುದು ಅತ್ಯಂತ ಮುಖ್ಯ. ಹಾಗೆಯೇ, ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳ ಪೈಕಿ ಬಹುತೇಕರಿಗೆ ಡಿಜಿಟಲ್ ಸಾಧನಗಳು, ಇಂಟರ್ನೆಟ್ ಅಥವಾ ನಿರಂತರ ವಿದ್ಯುತ್ ಲಭ್ಯವಿಲ್ಲ ಎಂಬುದನ್ನೂ ಗಮನಿಸಬೇಕು.

ತಂತ್ರಜ್ಞಾನ ಪ್ರೇರಿತ ಕಲಿಕೆ ಎಂಬ ಸ್ಥಿತ್ಯಂತರಕ್ಕೆ ನಮ್ಮ ಅಧ್ಯಾಪಕರು ಎಷ್ಟರಮಟ್ಟಿಗೆ ಒಗ್ಗಿಕೊಳ್ಳಬಲ್ಲರು ಎಂಬ ಬಗೆಗೂ ಚಿಂತನೆಗಳು ನಡೆಯಬೇಕಿದೆ. ಹಿರಿಯ ತಲೆಮಾರಿನ ಅಧ್ಯಾಪಕರನ್ನು ಬದಲಾದ ಸನ್ನಿವೇಶಗಳಿಗೆ ಒಗ್ಗಿಸುವುದು ಹೇಗೆ, ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ನಾವು ಯೋಚಿಸಬೇಕಿದೆ. ಏಕೆಂದರೆ ತಂತ್ರಜ್ಞಾನವನ್ನು ಎಲ್ಲರೂ ಒಂದೇ ಮನಸ್ಥಿತಿಯಿಂದ ಸ್ವೀಕರಿಸಲಾರರು ಮತ್ತು ಅದಕ್ಕೆ ಒಗ್ಗಿಕೊಳ್ಳಲಾರರು. ಹಾಗೆಂದು ಅದನ್ನು ಒತ್ತಾಯಪೂರ್ವಕ ಹೇರುವುದೂ ಸರಿಯಾದ ಕ್ರಮ ಆಗಲಾರದು. ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರಿಗೆ ಅದರ ಮಹತ್ವವನ್ನು ಮನದಟ್ಟುಮಾಡಿಕೊಟ್ಟು ಮುಂದುವರಿಯುವುದೇ ವಿವೇಕವೆನಿಸುತ್ತದೆ. ಪೋಷಕರ ಮನಸ್ಥಿತಿಯ ಬಗ್ಗೆಯೂ ಇಲ್ಲಿ ನಾವು ಯೋಚಿಸಬೇಕಾಗುತ್ತದೆ. ಹಳೆಯ ಅಂಕಪಟ್ಟಿ ವ್ಯವಸ್ಥೆಗೆ ಒಗ್ಗಿರುವ ಬಹುಪಾಲು ಪೋಷಕರಿದ್ದಾರೆ. ಈ ವ್ಯವಸ್ಥೆಯಿಂದ ದೂರಸರಿದು ಹೊಸ ಪದ್ಧತಿಯೊಂದಿಗೆ ಹೊಂದಿಕೊಳ್ಳುವುದಕ್ಕೆ ಸಾಕಷ್ಟು ಸಮಯಾವಕಾಶ ಮತ್ತು ತಾಳ್ಮೆ ಅಗತ್ಯ.

ಎಲ್ಲಕ್ಕಿಂತ ಮುಖ್ಯವಾಗಿ, ತಂತ್ರಜ್ಞಾನದ ಹೆಸರಿನಲ್ಲಿ ಕಲಿಕೆಯ ನೈಜ ಸೊಗಡು ಮರೆಯಾಗದಂತೆ ಎಚ್ಚರವಹಿಸುವುದು ಆಧುನಿಕ ಕಾಲದ ಅವಶ್ಯಕತೆ. ತಂತ್ರಜ್ಞಾನ ಅಗತ್ಯವೇನೋ ನಿಜ, ಆದರೆ ಅದೇ ಶಿಕ್ಷಣವಲ್ಲ. ಮಾನವ ಸ್ಪರ್ಶವಿಲ್ಲದ ಕಲಿಕೆ ತೀರಾ ಯಾಂತ್ರಿಕವಾದಾಗ ವ್ಯಕ್ತಿತ್ವದ ವಿಕಾಸವೆಂಬ ಶಿಕ್ಷಣದ ಮೂಲ ಉದ್ದೇಶವೇ ಮರೆಯಾಗಿ ಹೋಗುವ ಅಪಾಯವಿದೆ. 21ನೇ ಶತಮಾನದ ತಂತ್ರಜ್ಞಾನ ಆಧರಿತ ಮಾದರಿಗಳೊಂದಿಗೆ ನಮ್ಮ ಸಾಂಪ್ರದಾಯಿಕ ಮಾದರಿಗಳನ್ನು ಉಳಿಸಿಕೊಳ್ಳುವುದು, ಅವುಗಳನ್ನು ಪರಸ್ಪರ ಮಿಳಿತಗೊಳಿಸುವುದು ಇಂದಿನ ಅವಶ್ಯಕತೆ. ಶಿಕ್ಷಣ ಒಂದು ಸಾವಯವ ಪ್ರಕ್ರಿಯೆಯೇ ಹೊರತು ಯಾಂತ್ರಿಕ ನಡಿಗೆ ಅಲ್ಲ.

- ಸಿಬಂತಿ ಪದ್ಮನಾಭ ಕೆ. ವಿ.

2 ಕಾಮೆಂಟ್‌ಗಳು:

MALLIKARJUNAIAH M T ಹೇಳಿದರು...

ಶಿಕ್ಷಣ
ಜ್ನಾನ ಆಧಾರಿತ ಆಗಿರುವುದರ ಜೊತೆಗೆ ಭಾವನಾತ್ಮಕ ಬೆಸುಗೆಯನ್ನುಂಟುಮಾಡುವಂತಾದ್ದು ಆಗಿದೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಬುದ್ದಿ-ಭಾವಗಳ ವಿನಿಮಯ ಹಾಗೂ ವಿಕಸನ ಆಗುತ್ತಿರುತ್ತದೆ. ಯಾಂತ್ರಿಕತೆ ಜೀವನದ ಒಂದಂಶ ಆಗಬೇಕೇ ಹೊರತು, ಅದೇ ಜೀವನವಾಗಬಾರದು

ಸಕಾಲಿಕ ವಿಶ್ಲೇಷಣಾತ್ಮಕ ಚಿಂತನೆಯ ತಮ್ಮ ಬರಹಕ್ಕೆ ಧನ್ಯವಾದಗಳು

MALLIKARJUNAIAH M T ಹೇಳಿದರು...

ಶಿಕ್ಷಣ
ಜ್ನಾನ ಆಧಾರಿತ ಆಗಿರುವುದರ ಜೊತೆಗೆ ಭಾವನಾತ್ಮಕ ಬೆಸುಗೆಯನ್ನುಂಟುಮಾಡುವಂತಾದ್ದು ಆಗಿದೆ.

ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ನಡುವೆ ಬುದ್ದಿ-ಭಾವಗಳ ವಿನಿಮಯ ಹಾಗೂ ವಿಕಸನ ಆಗುತ್ತಿರುತ್ತದೆ. ಯಾಂತ್ರಿಕತೆ ಜೀವನದ ಒಂದಂಶ ಆಗಬೇಕೇ ಹೊರತು, ಅದೇ ಜೀವನವಾಗಬಾರದು

ಸಕಾಲಿಕ ವಿಶ್ಲೇಷಣಾತ್ಮಕ, ಚಿಂತನೆಯ ತಮ್ಮ ಬರಹಕ್ಕೆ ಧನ್ಯವಾದಗಳು