'ಕೋಟೇಶ್ವರ ಮೈತ್ರಿ' ತ್ರೈಮಾಸಿಕದ ಜುಲೈ-ಸೆಪ್ಟೆಂಬರ್ 2020ರ ಸಂಚಿಕೆಯಲ್ಲಿ ಪ್ರಕಟವಾದ ಲೇಖನ
ಭ್ರಷ್ಟಾಚಾರ, ಸ್ವಜಾತಿಪ್ರೇಮ, ವಶೀಲಿಬಾಜಿ, ಸ್ವಾರ್ಥಪರತೆಗಳಿಂದಲೇ ಕೂಡಿರುವ ಧರಣಿಮಂಡಲ ಮಧ್ಯದಲ್ಲಿ ನಿಂತು ಲಾಲ್ ಬಹಾದುರ್ ಶಾಸ್ತ್ರಿಯವರಂಥ ರಾಜಕಾರಣಿಗಳೂ ನಮ್ಮ ದೇಶದಲ್ಲಿ ಇದ್ದರೇ ಎಂದು ಪ್ರಶ್ನಿಸಿಕೊಂಡರೆ ವಿಸ್ಮಯವೆನಿಸುತ್ತದೆ. ಪಾರದರ್ಶಕ, ಸರಳ, ಪ್ರಾಮಾಣಿಕ ಬದುಕಿನ ಪ್ರತಿರೂಪವಾಗಿದ್ದ ಶಾಸ್ತ್ರಿಯವರು ನಮ್ಮ ದೇಶದ ಪ್ರಧಾನಿ ಆಗಿದ್ದರು ಎಂಬುದೇ ನಾವೆಲ್ಲ ಹೆಮ್ಮೆ ಪಡಬೇಕಾದ ಸಂಗತಿ.ಪ್ರಧಾನಿಯಾದ ಬಳಿಕವೂ ಶಾಸ್ತ್ರಿಯವರ ಬಳಿ ಸ್ವಂತದ ಕಾರು ಇರಲಿಲ್ಲವಂತೆ. ತಮ್ಮ ಕುಟುಂಬದ ಒತ್ತಾಯದ ಮೇರೆಗೆ ರೂ. 12,000 ಬೆಲೆಯ ಫಿಯಟ್ ಕಾರೊಂದನ್ನು ಕೊಳ್ಳಲು ಅವರು ನಿರ್ಧರಿಸಿದರು. ಆದರೆ ಅವರ ಬಳಿ ರೂ. 5,000 ಕಡಿಮೆಯಿತ್ತು. ಅದಕ್ಕಾಗಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಅರ್ಜಿ ಸಲ್ಲಿಸಿದರು. ತಕ್ಷಣ ಸಾಲವೂ ಮಂಜೂರಾಯಿತು. ಶಾಸ್ತ್ರಿಯವರು ಅಷ್ಟಕ್ಕೆ ಮುಗಿಸದೆ ಬ್ಯಾಂಕ್ ಮ್ಯಾನೇಜರನ್ನು ಕರೆಸಿ 'ಜನಸಾಮಾನ್ಯರ ಸಾಲದ ಅರ್ಜಿಯನ್ನೂ ಇಷ್ಟು ಚುರುಕಾಗಿ ವಿಲೇವಾರಿ ಮಾಡುತ್ತೀರಾ?' ಎಂದು ವಿಚಾರಿಸಿಕೊಂಡರಂತೆ.
ಇನ್ನೊಂದು ಸಂದರ್ಭದಲ್ಲಿ, ಶಾಸ್ತ್ರಿಯವರ ಮಗನಿಗೆ ಉದ್ಯೋಗದಲ್ಲಿ ಭಡ್ತಿ ದೊರೆಯಿತು. ಅದು ಅರ್ಹವಾಗಿ ಬಂದದ್ದಲ್ಲ ಎಂದು ಅವರಿಗೆ ತೋಚಿತಂತೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಮಗನ ಭಡ್ತಿಯನ್ನು ವಾಪಸ್ ಪಡೆಸಿಕೊಂಡರಂತೆ.
ಇದಕ್ಕೂ ಹಿಂದೆ ಶಾಸ್ತ್ರಿಯವರು ಸ್ವಾತಂತ್ರ್ಯ ಚಳುವಳಿಯ ಹಿನ್ನೆಲೆಯಲ್ಲಿ ಜೈಲುವಾಸ ಅನುಭವಿಸುತ್ತಿದ್ದಾಗ, ಅವರ ಪತ್ನಿ ಅವರನ್ನೊಮ್ಮೆ ಭೇಟಿಯಾದರಂತೆ. ತಮಗೆ ಬರುತ್ತಿದ್ದ ರೂ. ೫೦ ಪಿಂಚಣಿಯಲ್ಲಿ ರೂ. 10ನ್ನು ಉಳಿಸುತ್ತಿರುವುದಾಗಿ ಪತ್ನಿ ತಿಳಿಸಿದರಂತೆ. ಓಹೋ, ಅವಶ್ಯಕತೆಗಿಂತ ಹೆಚ್ಚು ಆದಾಯ ಇದೆ ಎಂದ ಶಾಸ್ತ್ರಿಯವರು ಪಿಂಚಣಿ ಕೊಡುತ್ತಿದ್ದ ಲೋಕ ಸೇವಕ ಮಂಡಲದ ಕಾರ್ಯಕರ್ತರಿಗೆ ಮುಂದಿನ ತಿಂಗಳಿನಿಂದ ತಮಗೆ ರೂ. 40 ಮಾತ್ರ ಪಿಂಚಣಿ ಕೊಟ್ಟರೆ ಸಾಕೆಂದು ಕೇಳಿಕೊಂಡರಂತೆ.
ಜನಸಾಮಾನ್ಯರ ಕಷ್ಟಗಳ ಕಡೆಗೆ ಸಾಕಷ್ಟು ಉದಾರಿಗಳಾಗಿದ್ದ ಶಾಸ್ತ್ರೀಜಿ ತಮ್ಮ ಕುಟುಂಬದ ಬಗ್ಗೆ ನಿರ್ದಯಿಗಳೇ ಆಗಿದ್ದರು. ಅದು ಸಾಮಾಜಿಕ ಬದುಕಿನಲ್ಲಿ ಅವರಿಗಿದ್ದ ಎಚ್ಚರ. ಇದೇ ಕಾರಣಕ್ಕೆ ಅವರು ನಮಗೆ ದೊಡ್ಡ ವಿಸ್ಮಯವಾಗಿ ಕಾಣುವುದು. ಅವಕಾಶ ಸಿಕ್ಕಲ್ಲೆಲ್ಲ ತಮ್ಮ ಕುಟುಂಬದವರನ್ನು, ಬಂಧುಬಾಂಧವರನ್ನು, ಸ್ವಜಾತಿಯವರನ್ನು ಕೂರಿಸಿ ಲಾಭಪಡೆಯುವ ಇಂದಿನ ಅನೇಕ ಭ್ರಷ್ಟ ರಾಜಕಾರಣಿಗಳ ನಡುವೆ ಶಾಸ್ತ್ರೀಜಿಯಂತಹವರು ಇದ್ದರೇ ಎಂದು ಮತ್ತೆಮತ್ತೆ ಕೇಳಿಕೊಳ್ಳಬೇಕೆನಿಸುತ್ತದೆ.
ಆರಂಭಿಕ ಜೀವನ:
ಲಾಲ್ ಬಹಾದುರ್ ಶಾಸ್ತ್ರಿಯವರು ಹುಟ್ಟಿದ್ದು 1904 ಅಕ್ಟೋಬರ್ 2ರಂದು. ಇಂದಿನ ಉತ್ತರ ಪ್ರದೇಶದ ಮುಘಲ್ಸರಾಯ್ ಅವರ ಜನ್ಮಸ್ಥಳ. ತಂದೆ ಶಾರದಾಪ್ರಸಾದ್ ಶ್ರೀವಾಸ್ತವ, ತಾಯಿ ರಾಮ್ದುಲಾರಿ ದೇವಿ. ಒಂದೂವರೆ ವರ್ಷದ ಮಗುವಾಗಿದ್ದಾಗಲೇ ತಂದೆಯನ್ನು ಕಳೆದುಕೊಂಡ ಶಾಸ್ತ್ರಿಯವರು ತಮ್ಮ ಬಾಲ್ಯಜೀವನ ಹಾಗೂ ವಿದ್ಯಾಭ್ಯಾಸದ ಅವಧಿಯನ್ನು ತಾಯಿಯ ತವರಿನಲ್ಲಿ ಕಳೆಯಬೇಕಾಯಿತು.
ಕಷ್ಟದ ಬಾಲ್ಯ ಅವರದ್ದಾಗಿತ್ತು. ಆದರೆ ಪರಮ ಸ್ವಾಭಿಮಾನಿಯೂ ಆಗಿದ್ದರು. ಎಳವೆಯಿಂದಲೇ ಎಲ್ಲ ಜಾತಿಪಂಥಗಳೂ ಸಮಾನ ಎಂಬ ದೃಷ್ಟಿಕೋನ ಅವರಿಗಿತ್ತು. ಅದಕ್ಕೇ ತಮ್ಮ ಹೆಸರಿನೊಂದಿಗಿದ್ದ ’ಶ್ರೀವಾಸ್ತವ’ ಎಂಬ ಪದವನ್ನು ತೆಗೆದುಹಾಕಿದರು.
ವಾರಾಣಸಿಯ ಹರಿಶ್ಚಂದ್ರ ಹೈಸ್ಕೂಲಿನ ಶಿಕ್ಷಕ ನಿಷ್ಕಾಮೇಶ್ವರ ಪ್ರಸಾದ್ ಮಿಶ್ರಾ ಅವರು ಶಾಸ್ತ್ರಿಯವರ ವಿದ್ಯಾಭ್ಯಾಸದ ಕನಸನ್ನು ಪೋಷಿಸಿದವರು. ಅವರದ್ದೇ ಪ್ರೇರಣೆಯಿಂದ ಸ್ವಾತಂತ್ರ್ಯ ಚಳುವಳಿಯಲ್ಲಿ ಸೇರಿಕೊಂಡರು. ಅದಕ್ಕೆ ಅವರ ಮೇಲಿದ್ದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ ಹಾಗೂ ಆನಿ ಬೆಸೆಂಟರ ಬರೆಹಗಳ ಪ್ರಭಾವವೂ ಕಾರಣ. ಇನ್ನೇನು 10ನೇ ತರಗತಿ ಪೂರೈಸುವುದಕ್ಕೆ ಮೂರು ತಿಂಗಳಿದ್ದಾಗಲೇ ಅದನ್ನು ಅರ್ಧಕ್ಕೆ ತೊರೆದು ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕಿಬಿಟ್ಟರು.
ಹೋರಾಟದ ಹಾದಿ:
1921ರಲ್ಲಿ ಗಾಂಧೀಜಿ ಹಾಗೂ ಮದನಮೋಹನ ಮಾಳವೀಯರು ವಾರಾಣಸಿಯಲ್ಲಿ ನಡೆಸಿದ ಸಾರ್ವಜನಿಕ ಸಭೆಯೊಂದರಲ್ಲಿ ಭಾಗವಹಿಸಿದ್ದೇ ಶಾಸ್ತ್ರಿಯವರ ಬದುಕಿಗೆ ತಿರುವು ನೀಡಿತು. ಆಗಿನ್ನೂ 16ರ ಹರೆಯದಲ್ಲಿದ್ದ ಅವರು ಅಸಹಕಾರ ಚಳುವಳಿಗೆ ಸೇರಿಕೊಂಡರು. ಬ್ರಿಟಿಷ್ ಪೊಲೀಸರು ಅವರನ್ನು ಬಂಧಿಸಿ, ಇನ್ನೂ ಪ್ರಾಯಪ್ರಬುದ್ಧರಾಗಿಲ್ಲವಾದ್ದರಿಂದ ಬಿಡುಗಡೆಗೊಳಿಸಿದರು. ಮುಂದೆ ಜೆ. ಬಿ. ಕೃಪಲಾನಿಯವರ ಪ್ರೇರಣೆಯಿಂದ ಕಾಶಿ ವಿದ್ಯಾಪೀಠದಲ್ಲಿ ವಿದ್ಯಾಭ್ಯಾಸ ಮುಂದುವರಿಸಿ 1925ರಲ್ಲಿ ತತ್ತ್ವಶಾಸ್ತ್ರದಲ್ಲಿ ಪದವಿ ಪಡೆದು 'ಶಾಸ್ತ್ರಿ' (ವಿದ್ವಾಂಸ) ಎನಿಸಿಕೊಂಡರು.
ಲಾಲಾ ಲಜಪತರಾಯರು ಸ್ಥಾಪಿಸಿದ್ದ ಲೋಕ ಸೇವಕ ಮಂಡಲದ ಸಕ್ರಿಯ ಸದಸ್ಯರಾಗಿ ಶಾಸ್ತ್ರಿಯವರು ಹರಿಜನರ ಉದ್ಧಾರಕ್ಕೆ ಅಪಾರವಾಗಿ ಶ್ರಮಿಸಿದರು. 1928ರಲ್ಲಿ ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಪೂರ್ಣಾವಧಿ ಕಾರ್ಯಕರ್ತರಾಗಿ ಸ್ವಾತಂತ್ರ ಹೋರಾಟದಲ್ಲಿ ತೊಡಗಿಸಿಕೊಂಡರು. ಎರಡೂವರೆವರ್ಷ ಜೈಲುವಾಸ ಅನುಭವಿಸಿದರು. ಅನೇಕ ಆಯಕಟ್ಟಿನ ಜವಾಬ್ದಾರಿಗಳನ್ನು ನಿರ್ವಹಿಸಿದರು. ಸತ್ಯಾಗ್ರಹದಲ್ಲಿ ಭಾಗವಹಿಸಿದ್ದಕ್ಕಾಗಿ 1940ರಲ್ಲಿ ಮತ್ತೆ ಒಂದು ವರ್ಷದ ಜೈಲುವಾಸ ಅನುಭವಿಸಿದರು.
ರಾಜಕೀಯ ಬದುಕು:
ಸ್ವಾತಂತ್ರ್ಯಾನಂತರದ ಭಾರತಕ್ಕೆ ಶಾಸ್ತ್ರಿಯವರ ನಾಯಕತ್ವ ಹಾಗೂ ದೂರದೃಷ್ಟಿಯ ಅವಶ್ಯಕತೆ ಇತ್ತು. ಆಗಷ್ಟೇ ದೇಶ ಇಬ್ಭಾಗವಾಗಿತ್ತು. ಅಪಾರ ಸಂಖ್ಯೆಯ ವಲಸಿಗರನ್ನು ನಿಭಾಯಿಸಬೇಕಿತ್ತು. ಇನ್ನೊಂದು ಕಡೆ ಭೀಕರ ಕ್ಷಾಮ ದೇಶವನ್ನು ಅಲುಗಾಡಿಸಿತ್ತು. ಆಹಾರದ ಕೊರತೆಯಿಂದ ಭಾರತ ಕಂಗಾಲಾಗಿತ್ತು. ಇಂತಹ ಸಂಕ್ರಮಣ ಕಾಲದಲ್ಲಿ ಅನೇಕ ಮಹತ್ವದ ಹುದ್ದೆಗಳನ್ನು ನಿಭಾಯಿಸಿದ ಶಾಸ್ತ್ರೀಜಿ ದೇಶದ ಅಭಿವೃದ್ಧಿಗೆ ಕೊಟ್ಟ ಕೊಡುಗೆ ಅಪಾರ.
ನೆಹರೂ ಅವರ ಮಂತ್ರಿಮಂಡಲದಲ್ಲಿ ರೈಲ್ವೇ ಸಚಿವರಾಗಿ (1951-56), ಗೃಹಸಚಿವರಾಗಿ (1961-63), ವಿದೇಶಾಂಗ ವ್ಯವಹಾರಗಳ ಸಚಿವರಾಗಿ (1964) ಅವರು ಸಲ್ಲಿಸಿದ ಸೇವೆ ಚರಿತ್ರೆಯಲ್ಲಿ ದಾಖಲಾಗಿದೆ. ನೆಹರೂ ಅವರ ನಿಧನಾನಂತರ 1964-66ರ ನಡುವೆ ದೇಶದ ಎರಡನೇ ಪ್ರಧಾನಿಯಾಗಿ ಅವರು ತೆಗೆದುಕೊಂಡ ನಿರ್ಧಾರಗಳಂತೂ ಜನತೆ ಹೆಮ್ಮೆಪಡುವಂಥದ್ದು.
ದೇಶದ ಆರ್ಥಿಕತೆ ಎಂದೂ ಮರೆಯದ ಹಸಿರುಕ್ರಾಂತಿ ಮತ್ತು ಶ್ವೇತಕ್ರಾಂತಿಗಳ ಹಿಂದೆ ಶಾಸ್ತ್ರೀಜಿಯವರ ದೂರದರ್ಶಿತ್ವ ಇದೆ. ಗುಜರಾತಿನ ಆನಂದ್ನಲ್ಲಿ ವರ್ಗೀಸ್ ಕುರಿಯನ್ ಅವರಿಂದ ಸ್ಥಾಪಿತವಾಗಿದ್ದ ಅಮುಲ್ ಅನ್ನು ಅಪಾರವಾಗಿ ಬೆಂಬಲಿಸಿದರು. ಸಹಕಾರಿ ಮಾದರಿಯಲ್ಲಿ ನಡೆಯುತ್ತಿದ್ದ ಅಮುಲ್ನ ಯಶಸ್ಸಿನ ಗುಟ್ಟನ್ನು ಅರ್ಥಮಾಡಿಕೊಳ್ಳುವುದಕ್ಕಾಗಿ 1964ರ ಅಕ್ಟೋಬರ್ 31ರಂದು ಆನಂದ್ನ ಹಳ್ಳಿಯೊಂದರಲ್ಲಿ ಇಡೀದಿನ ಗ್ರಾಮವಾಸ್ತವ್ಯ ಮಾಡಿ, ಅಮುಲ್ನ ಮಾದರಿಯನ್ನು ದೇಶದ ಇತರ ಭಾಗಗಳಲ್ಲೂ ಹೇಗೆ ಅನುಷ್ಠಾನಕ್ಕೆ ತರಬಹುದೆಂದು ವಿಚಾರ ವಿಮರ್ಶೆ ನಡೆಸಿದರು. ಅದರ ಪರಿಣಾಮವಾಗಿಯೇ 1965ರಲ್ಲಿ ಅದೇ ಆನಂದ್ನಲ್ಲಿ ರಾಷ್ಟ್ರೀಯ ಹೈನುಗಾರಿಕಾ ಅಭಿವೃದ್ಧಿ ಮಂಡಳಿಯನ್ನು ಸ್ಥಾಪಿಸಿದರು. ಗ್ರಾಮವಾಸ್ತವ್ಯದ ಪರಿಕಲ್ಪನೆಯನ್ನು ಅರ್ಧಶತಮಾನದ ಹಿಂದೆ ಯೋಚಿಸಿ ಜಾರಿಗೆ ತಂದವರು ಶಾಸ್ತ್ರೀಜಿ. ಇದಕ್ಕೂ ಮುನ್ನ ಅವರು ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾವನ್ನು ಸ್ಥಾಪಿಸಿದ್ದರು.
ದೇಶದ ಆಹಾರದ ಕೊರತೆ ನೀಗಿಸಲು ಹಸಿರುಕ್ರಾಂತಿಯೊಂದೇ ಪರಿಹಾರ ಎಂದು ಚಿಂತಿಸಿದ ಶಾಸ್ತ್ರೀಯವರು ದೆಹಲಿಯ ತಮ್ಮ ಅಧಿಕೃತ ನಿವಾಸದ ಜಮೀನಿನಲ್ಲಿ ತಾವೇ ಉತ್ತು ರೈತರಲ್ಲಿ ಪ್ರೇರಣೆ ತುಂಬಿದರು. ಅಧಿಕ ಇಳುವರಿ ಕೊಡುವ ಗೋಧಿಯನ್ನು ಪರಿಚಯಿಸಿ ಪಂಜಾಬ್, ಹರ್ಯಾಣ, ಉತ್ತರ ಪ್ರದೇಶಗಳಲ್ಲಿ ಅಧಿಕ ಆಹಾರೋತ್ಪಾದನೆಯ ಕನಸನ್ನು ನನಸಾಗಿಸಿದರು. ಅದೇ ಹಸಿರುಕ್ರಾಂತಿ ಎನಿಸಿಕೊಂಡಿತು. ದೇಶದ ಎಲ್ಲ ಜನರೂ ವಾರದ ಒಂದು ಹೊತ್ತು ಊಟ ಬಿಡುವಂತೆ ಕರೆನೀಡಿದ ಶಾಸ್ತ್ರೀಜಿ ಅದನ್ನು ತಾವೇ ಮೊದಲು ಆಚರಿಸಿ ತೋರಿಸಿದರು. ಇಂದಿಗೂ ಶಾಸ್ತ್ರಿಯವರ ಸೋಮವಾರ ರಾತ್ರಿಯ ಉಪವಾಸ 'ಶಾಸ್ತ್ರಿ ವ್ರತ' ಎಂದೇ ಜನಜನಿತವಾಗಿದೆ.
ಯುದ್ಧ ಮತ್ತು ರಾಜನೀತಿ:
ನೆಹರೂ ಅವರ ಅಲಿಪ್ತ ನೀತಿಯನ್ನೇ ಶಾಸ್ತ್ರಿಯವರು ಅನುಸರಿಸಿದರೂ ದೇಶಕ್ಕೆ ಕಂಟಕ ಒದಗಿದಾಗ ಎದೆಸೆಟೆಸಿ ನಿಂತರು. 1965ರಲ್ಲಿ ಪಾಕ್ ಅನ್ನು ಸಮರ್ಥವಾಗಿ ಎದುರಿಸಿ ದೇಶದ ಸಾರ್ವಭೌಮತೆಯನ್ನು ಎತ್ತಿಹಿಡಿದರು. ಸೋವಿಯತ್ ಒಕ್ಕೂಟದೊಂದಿಗೆ ಉತ್ತಮ ಸಂಬಂಧ ಹೊಂದುವುದು ಭಾರತಕ್ಕೆ ಅವಶ್ಯಕ ಎಂಬುದನ್ನು ಮನಗಂಡಿದ್ದರು. ಅನೇಕ ದೇಶಗಳಿಗೆ ಭೇಟಿ ನೀಡಿ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳನ್ನು ಗಟ್ಟಿಗೊಳಿಸಿದ್ದರು.
'ಜೈ ಜವಾನ್ ಜೈ ಕಿಸಾನ್' ಎಂಬ ಅವರ ಘೋಷಣೆ ಸೈನಿಕರಲ್ಲೂ ರೈತರಲ್ಲೂ ಅಪಾರ ಹುರುಪನ್ನು ತುಂಬಿತು. ಇಂದಿಗೂ ಅವರ ಘೋಷಣೆ ತುಂಬ ಜನಪ್ರಿಯ. ದೇಶದ ರಕ್ಷಣೆಗೂ, ಜನರ ಆಹಾರದ ಅವಶ್ಯಕತೆಗೂ ಅವರು ಎಷ್ಟು ಮಹತ್ವ ನೀಡಿದ್ದರು ಎಂಬುದು ಇದರಿಂದ ಗೊತ್ತಾಗುತ್ತದೆ.
ನಿಗೂಢ ಸಾವು:
ತಮ್ಮ ಬದುಕನ್ನೆಲ್ಲ ಶುದ್ಧಚಾರಿತ್ರ್ಯದಿಂದ ಯಾವುದೇ ವಾದವಿವಾದಗಳಿಗೆ ಎಡೆಮಾಡಿಕೊಡದಂತೆ ಕಳೆದ ಶಾಸ್ತ್ರೀಜಿಯವರು ತಮ್ಮ ಸಾವಿನಲ್ಲಿ ಮಾತ್ರ ನಿಗೂಢತೆಯನ್ನು ಉಳಿಸಿಹೋದದ್ದು ಮಾತ್ರ ದೇಶ ಎಂದೂ ಮರೆಯದ ಒಂದು ಘಟನೆ.
ಪಾಕ್ನೊಂದಿಗಿನ ಯುದ್ಧವನ್ನು ಅಧಿಕೃತವಾಗಿ ನಿಲ್ಲಿಸುವ ಸಂಬಂಧ ಒಪ್ಪಂದವೊಂದಕ್ಕೆ ಸಹಿ ಮಾಡಲು ಅವರು ತಾಷ್ಕೆಂಟ್ಗೆ ತೆರಳಿದ್ದರು. ರಷ್ಯಾದ ಮಧ್ಯಸ್ಥಿಕೆಯಲ್ಲಿ ಮಾತುಕತೆ ನಡೆದ ಬಳಿಕ ಪಾಕಿಸ್ತಾನದ ಪ್ರಧಾನಿ ಅಯ್ಯೂಬ್ ಖಾನ್ ಅವರೊಂದಿಗೆ 'ತಾಷ್ಕೆಂಟ್ ಒಪ್ಪಂದ'ಕ್ಕೆ 1966ರ ಜನವರಿ 11ರಂದು ಸಹಿಯನ್ನೂ ಮಾಡಿದರು. ಆದರೆ ಅದಾದ ಕೆಲವೇ ಗಂಟೆಗಳಲ್ಲಿ ಅವರು ಹೃದಯಾಘಾತದಿಂದ ಸಾವನ್ನಪ್ಪಿದರೆಂಬ ವಾರ್ತೆ ಭಾರತಕ್ಕೆ ಅಪ್ಪಳಿಸಿತು.
ಈ ಘಟನೆ ಮಾತ್ರ ಇಂದಿಗೂ ವಿವಾದದಿಂದ ಹೊರತಾಗಿಲ್ಲ. ಅವರ ಸಾವಿನ ಸುದ್ದಿ ಬಂದ ಬೆನ್ನಲ್ಲೇ ಅವರಿಗೆ ವಿಷಪ್ರಾಶನವಾಗಿತ್ತು ಎಂಬ ಗುಮಾನಿಯೂ ದಟ್ಟವಾಗಿ ಹಬ್ಬಿಕೊಂಡಿತ್ತು. ಅವರಿಗೆ ಹೃದಯದ ಕಾಯಿಲೆ ಮೊದಲೇ ಇತ್ತು, ಅದಕ್ಕೂ ಮೊದಲು ಎರಡು ಬಾರಿ ಹೃದಯಾಘಾತವಾಗಿತ್ತು, ಅವರು ಹೃದಯಾಘಾತದಿಂದಲೇ ಸಾವನ್ನಪಿದರು ಎಂದು ಸಾಕಷ್ಟು ಮಂದಿ ಹೇಳಿದ್ದರೂ, ಸ್ವತಃ ಅವರ ಕುಟುಂಬದ ಮಂದಿಯೇ ಇಂದಿಗೂ ಈ ವಾದವನ್ನು ಒಪ್ಪಿಕೊಂಡಿಲ್ಲ.
ಪ್ರಧಾನಿಯೊಬ್ಬರ ಅನಿರೀಕ್ಷಿತ ಸಾವಿನ ಕುರಿತು ಸಮರ್ಪಕವಾದ ತನಿಖೆಯಾಗಿಲ್ಲ ಎಂಬ ಆರೋಪ ಇಂದಿಗೂ ಉಳಿದುಕೊಂಡಿದೆ. ಶಾಸ್ತ್ರಿಯವರ ಮಾಧ್ಯಮ ಸಲಹೆಗಾರರಾಗಿ ಅವರ ಜೊತೆಗೆ ತಾಷ್ಕೆಂಟಿನಲ್ಲಿದ್ದ ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಶಾಸ್ತ್ರಿಯವರ ಸಾವಿನ ಕುರಿತು ಅನುಮಾನ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದರೂ, ಶಾಸ್ತ್ರಿಯವರ ಪತ್ನಿ ಲಲಿತಾಶಾಸ್ತ್ರಿಯವರ ಸಂದೇಹಕ್ಕೆ ಸೂಕ್ತ ಉತ್ತರ ದೊರೆತಿರಲಿಲ್ಲ ಎಂಬುದನ್ನೂ ಅವರು ಹೇಳಿಕೊಂಡಿದ್ದಾರೆ. ಶಾಸ್ತ್ರಿಯವರ ದೇಹವನ್ನು ಭಾರತಕ್ಕೆ ತಂದಾಗ ಅದು ನೀಲಿಬಣ್ಣಕ್ಕೆ ತಿರುಗಿದ್ದೇಕೆ ಎಂಬ ಲಲಿತಾಶಾಸ್ತ್ರಿಯವರ ಪ್ರಶ್ನೆಗೆ ಯಾರೂ ಸರಿಯಾದ ಉತ್ತರ ನೀಡಿರಲಿಲ್ಲ.
ವಿಚಿತ್ರವೆಂದರೆ ಒಬ್ಬ ಪ್ರಧಾನಿ ನಿಧನರಾದರೂ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆದಿಲ್ಲ! ತಾಷ್ಕೆಂಟಿನಲ್ಲಿ ಅವರ ದೇಹದ ಮರಣೋತ್ತರ ಪರೀಕ್ಷೆ ನಡೆಸಲಿಲ್ಲ. ಭಾರತಕ್ಕೆ ತಂದ ಮೇಲಾದರೂ ನಡೆಯಿತೇ ಎಂಬ ಬಗ್ಗೆ ಈಗಲೂ ಯಾವುದೇ ಸ್ಪಷ್ಟತೆಯಿಲ್ಲ. ಶಾಸ್ತ್ರೀಜಿಯರ ಮರಣಕ್ಕೆ ಸಂಬಂಧಿಸಿದ ಯಾವುದೇ ಕಡತಗಳು ತಮ್ಮಲ್ಲಿಲ್ಲ ಎಂದು ದೆಹಲಿ ಪೊಲೀಸರು ಕೆಲವೇ ವರ್ಷಗಳ ಹಿಂದೆ ಒಂದು ಆರ್ಟಿಐ ಅರ್ಜಿಗೆ ಮಾಹಿತಿ ನೀಡಿದ್ದಾರೆ. ಈ ಕುರಿತು ಇರುವ ಒಂದೇ ಒಂದು ಕಡತವನ್ನು 'ಅತಿ ರಹಸ್ಯ ಕಡತ’ಗಳ ಸಾಲಿಗೆ ಸೇರಿಸಿದ್ದು, ಅದು ಮಾಹಿತಿ ಹಕ್ಕಿನ ವ್ಯಾಪ್ತಿಗೂ ಬರುವುದಿಲ್ಲ. ಅದನ್ನು ಬಹಿರಂಗಗೊಳಿಸುವುದರಿಂದ ಭಾರತದ ಅಂತರ ರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆಯಾಗುತ್ತದೆ ಎಂದಿರುವ ಕೇಂದ್ರ ಸರ್ಕಾರ ಯಾವುದೇ ಕಾರಣಕ್ಕೂ ಅದನ್ನು ಸಾರ್ವಜನಿಕಗೊಳಿಸುವಂತಿಲ್ಲ ಎಂದಿದೆ. ಇದರ ಅರ್ಥ ಏನು? ಒಟ್ಟಾರೆ ಘಟನೆಯ ಬಗ್ಗೆ ಜನರು ಅನುಮಾನ ತಾಳುವುದು ಸಹಜವೇ ಅಲ್ಲವೇ?
ಮರೆತುಹೋದ ಮಹಾನುಭಾವ:
ಇಷ್ಟೆಲ್ಲ ಗೊಂದಲಗಳ ನಡುವೆಯೂ ಶಾಸ್ತ್ರಿಯವರಿಗೆ ಸಿಗಬೇಕಾದ ಗೌರವ ದೊರೆತಿದೆಯೇ ಎಂದು ನೋಡಿದರೆ ಅಲ್ಲಿಯೂ ನಿರಾಸೆಯೇ ಇದೆ. ಶಾಸ್ತ್ರಿಯವರು ಇಂಡಿಯನ್ ನ್ಯಾಷನಲ್ ಕಾಂಗ್ರೆಸಿನ ಸಕ್ರಿಯ ಸದಸ್ಯರಾಗಿ ಮುಂದೆ ಸರ್ಕಾರದಲ್ಲಿ ಪ್ರಧಾನಿವರೆಗಿನ ಅನೇಕ ಹುದ್ದೆಗಳನ್ನು ನಿಭಾಯಿಸಿದ್ದರೂ ಕಾಂಗ್ರೆಸಿಗೆ ಅವರು ಬೇಡವಾಗಿದ್ದಾರೆ. ಗಾಂಧೀ ಜಯಂತಿಯಂದೇ ಶಾಸ್ತ್ರಿಯವರ ಜನ್ಮದಿನವಾಗಿದ್ದರೂ ಅಂದು ಅವರನ್ನು ಸ್ಮರಿಸಿಕೊಳ್ಳುವ ವಿಷಯದಲ್ಲಿ ಅನೇಕ ಮಂದಿಗೆ ಜಾಣಮರೆವು.
ಗಾಂಧಿ, ನೆಹರೂ ಅವರ ಸಮಾಧಿ ಇದ್ದ ಪ್ರದೇಶದಲ್ಲಿ ಶಾಸ್ತ್ರಿಯವರ ಸಮಾಧಿ ಮಾಡುವುದಕ್ಕೂ ಕಾಂಗ್ರೆಸಿನವರದ್ದೇ ವಿರೋಧ ಇತ್ತು. ಕೊನೆಗೆ ಲಲಿತಾಶಾಸ್ತ್ರಿಯವರು ತಾನು ಈ ವಿಷಯವನ್ನು ಸಾರ್ವಜನಿಕಗೊಳಿಸಬೇಕಾಗುತ್ತದೆ ಎಂದು ಪ್ರತಿಭಟಿಸಿದ ಮೇಲೆಯಷ್ಟೇ ಕಾಂಗ್ರೆಸ್ ಅದಕ್ಕೆ ಒಪ್ಪಿಗೆ ನೀಡಿತ್ತು. ಹೆಚ್ಚೇಕೆ, ಶಾಸ್ತ್ರಿಯವರಿಗೆ ಅತ್ಯಂತ ಪ್ರಿಯವಾಗಿದ್ದ 'ಜೈ ಜವಾನ್ ಜೈ ಕಿಸಾನ್’ ಘೋಷಣೆಯನ್ನು ಅವರ ಸಮಾಧಿಯ ಮೇಲೆ ಕೆತ್ತಿಸುವುದನ್ನೂ ಅವರ ಪಕ್ಷದವರೇ ವಿರೋಧಿಸಿದ್ದರು. ಇಂದಿರಾಗಾಂಧಿಯವರಿಗಂತೂ ಕಾಂಗ್ರೆಸಿನ ಹಳಬರ ಬಗ್ಗೆ ನಿರ್ಲಕ್ಷ್ಯವೇ ಇತ್ತು ಎಂದು ನಯ್ಯರ್ ಬರೆದುಕೊಂಡಿದ್ದಾರೆ.
ಶಾಸ್ತ್ರಿಯವರ ನಿಧನಾನಂತರವಾದರೂ ಅವರಿಗೆ ಭಾರತರತ್ನ ಘೋಷಿಸಲಾಯಿತು (1966ರಲ್ಲಿ) ಎಂಬುದೊಂದೇ ನಾವು ಸಮಾಧಾನಪಡಬಹುದಾದ ಸಂಗತಿ. ದೇಶ ಎಂದೂ ಮರೆಯಲಾಗದ, ಮರೆಯಬಾರದ ವ್ಯಕ್ತಿತ್ವ ಅವರದ್ದು. ಅವರನ್ನು ಮರೆಯುವುದಾಗಲೀ ಅಲಕ್ಷಿಸುವುದಾಗಲೀ ದೇಶ ತನಗೆ ತಾನೇ ಮಾಡಿಕೊಳ್ಳುವ ಆತ್ಮವಂಚನೆ ಎನ್ನದೆ ಬೇರೆ ವಿಧಿಯಿಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.
2 ಕಾಮೆಂಟ್ಗಳು:
ಉತ್ತಮ ಲೇಖನ ಶಾಲಾ ಪಾಠ್ಯಕ್ರಮದಲ್ಲಿ ಸೇರಿಸಲು ಯೋಗ್ಯವಾಗಿದೆ
ಧನ್ಯವಾದಗಳು ಸರ್.
ಕಾಮೆಂಟ್ ಪೋಸ್ಟ್ ಮಾಡಿ