13 ಅಕ್ಟೋಬರ್ 2019ರ 'ವಿಜಯ ಕರ್ನಾಟಕ'ದಲ್ಲಿ ಪ್ರಕಟವಾದ ಲೇಖನ
ಮಾಧ್ಯಮ ಸ್ವಾತಂತ್ರ್ಯ ಹತ್ತಿಕ್ಕಲು ಹೊರಟವರದ್ದು ಅಸಹಾಯಕತೆಯಲ್ಲವೆ?
“ಯಾರು ಪತ್ರಿಕೆಗಳ ಆಕ್ಷೇಪಣೆಗಳನ್ನು ಎದುರಿಸಬಲ್ಲಷ್ಟು ಸಾಹಸ ಸಾಮಥ್ರ್ಯಗಳನ್ನು ಪಡೆದಿರುವರೋ ಅಂಥವರು ಮಾತ್ರವೇ ಸರಕಾರವನ್ನು ನಡೆಸಲು ಅರ್ಹರಾಗಿರುತ್ತಾರೆ. ಯಾರು ಪತ್ರಿಕೆಗಳಿಗೆ ಅಂಜುವಷ್ಟು ದುರ್ಬಲರೂ, ಪತ್ರಿಕೆಗಳ ಚಳವಳಿಯಿಂದಲೇ ಪ್ರಜೆಗಳ ಅಪನಂಬಿಕೆಗೆ ಪಾತ್ರರಾಗಿ ಅಧಿಕಾರವನ್ನು ಕಳೆದುಕೊಳ್ಳುವಷ್ಟು ಅವಿಚಕ್ಷಣರೂ ಅಪ್ರಶಸ್ತರೂ ಆಗಿರುವರೋ, ಅಂಥವರು ಸರಕಾರವನ್ನು ಬಿಡುವುದೇ ಲೇಸು.” ಕನ್ನಡ ಪತ್ರಿಕಾರಂಗದ ಶಕಪುರುಷರಲ್ಲಿ ಒಬ್ಬರೆನಿಸಿದ ಡಿವಿಜಿಯವರು ಈ ಮಾತನ್ನು ಹೇಳಿ ಇನ್ನೇನು ಒಂದು ಶತಮಾನವಾಗುತ್ತಾ ಬಂತು.
ಅವರು ಹೀಗೆಂದು ಹೇಳಿದಾಗ ಟಿವಿ ಚಾನೆಲ್‍ಗಳೂ ಇರಲಿಲ್ಲ, ಮಾಧ್ಯಮರಂಗದ ಒಟ್ಟಾರೆ ಪರಿಸ್ಥಿತಿಯೂ ಹೀಗಿರಲಿಲ್ಲ.
ಅಂದಿಗೂ ಇಂದಿಗೂ ಆಕಾಶ-ಪಾತಾಳದಷ್ಟು ಅಂತರ. ಆದರೆ ಆಳುವ ವರ್ಗದ ಮನಸ್ಥಿತಿ ಮಾತ್ರ ಎಲ್ಲಾ ಕಾಲದಲ್ಲೂ ಒಂದೇ ರೀತಿ ಇರುತ್ತದೆ ಎಂಬುದಕ್ಕೆ ಸದ್ಯದ ಬೆಳವಣಿಗೆಗಳೇ ಸಾಕ್ಷಿ. ಪತ್ರಿಕೆಗಳನ್ನು ನಿಯಂತ್ರಿಸಲು ಬ್ರಿಟಿಷ್ ದೊರೆಗಳು ಒಂದಾದಮೇಲೊಂದರಂತೆ ಕಾಯ್ದೆಗಳನ್ನು ರೂಪಿಸುತ್ತಿದ್ದುದಕ್ಕೂ, ತುರ್ತುಪರಿಸ್ಥಿತಿಯ ಹೆಸರಿನಲ್ಲಿ ಮಾಧ್ಯಮಗಳು ಪ್ರಭುತ್ವದ ಕಾಲ್ತುಳಿತಕ್ಕೆ ಸಿಲುಕಿದ್ದಕ್ಕೂ, ಪ್ರಸ್ತುತ ಕರ್ನಾಟಕ ವಿಧಾನಸಭೆ ಪ್ರವೇಶಕ್ಕೆ ಖಾಸಗಿ ಚಾನೆಲ್‍ಗಳ ಕ್ಯಾಮೆರಾಮೆನ್ ಹಾಗೂ ಪತ್ರಿಕಾ ಛಾಯಾಗ್ರಾಹಕರಿಗೆ ನಿರ್ಬಂಧ ವಿಧಿಸಿದ್ದಕ್ಕೂ ಅಂತಹ ವ್ಯತ್ಯಾಸವೇನೂ ಕಾಣುತ್ತಿಲ್ಲ. ಎಲ್ಲವೂ ವಿವಿಧ ಕಾಲಘಟ್ಟದ ಆಳುವವರ್ಗದ ಒಂದೇ ಮನಸ್ಥಿತಿಯ ಪ್ರತೀಕಗಳಷ್ಟೇ.
ಆಡಳಿತಾರೂಢರ ಮತ್ತು ಮಾಧ್ಯಮಗಳ ತಿಕ್ಕಾಟ ಪತ್ರಿಕೆಗಳು ಹುಟ್ಟಿಕೊಂಡಲ್ಲಿಂದಲೂ ಇದೆ. ಭಾರತದ ಪ್ರಪ್ರಥಮ ಪತ್ರಿಕೆಯ ಸಂಪಾದಕ ಜೇಮ್ಸ್ ಆಗಸ್ಟಸ್ ಹಿಕಿಯೇ ಒಂದೆರಡು ವರ್ಷದ ಪ್ರಭುತ್ವದೊಂದಿಗಿನ ಗುದ್ದಾಟದಲ್ಲಿ ನಾಮಾವಶೇಷವಾಗಿಹೋಗಿದ್ದ. ಇತಿಹಾಸದಲ್ಲಿ ಅಂತಹ ನೂರಾರು ಕತೆಗಳು ಇವೆ. ಸರ್ಕಾರ-ಮಾಧ್ಯಮಗಳ ನಡುವೆ ಒಂದು ಆರೋಗ್ಯಕರ ಗುದ್ದಾಟ ಯಾವತ್ತಿಗೂ ಅಪೇಕ್ಷಣೀಯವೇ. ಅದೊಂದು ಬಗೆಯ ಮೊಸರು-ಕಡೆಗೋಲು ನಡುವಿನ ಘರ್ಷಣೆಯ ಹಾಗೆ. ಅದರ ಕೊನೆಯಲ್ಲಿ ಸಿಗುವುದು ಪ್ರಜಾಪ್ರಭುತ್ವವೆಂಬ ನವನೀತ. ಆದರೆ ಈ ತಿಕ್ಕಾಟ ಪರಸ್ಪರರನ್ನು ಕೊಲ್ಲುವ ಯುದ್ಧವಾಗಿ ಮಾರ್ಪಟ್ಟಾಗ ಮಾತ್ರ ಪ್ರಜಾಪ್ರಭುತ್ವದ ಒಟ್ಟಾರೆ ಆಶಯವೇ ನಾಶವಾಗುತ್ತದೆ.
ಟೀಕೆಗೆ ಟೀಕೆಯ ರೂಪದಲ್ಲೂ, ಸಮರ್ಥನೆಯ ರೂಪದಲ್ಲೂ, ತಪ್ಪನ್ನು ತಿದ್ದಿಕೊಳ್ಳುವ ಮೂಲಕವೂ ಉತ್ತರ ನೀಡಬಹುದು. ಟೀಕೆಯನ್ನೇ ಮಾಡಬೇಡಿ ಎಂದೋ, ನೀವು ಸಮೀಪಕ್ಕೆ ಬರಬೇಡಿ ಎಂದೋ ಕಾನೂನು ಮಾಡುವುದು ಸರಿಯಾದ ವಿಧಾನ ಅಲ್ಲ. ಅದು ಡಿವಿಜಿ ಹೇಳುವ ಹಾಗೆ ಅವಿಚಕ್ಷಣರೂ ಅಪ್ರಶಸ್ತರೂ ಮಾಡುವ ಕೆಲಸ. ಇದನ್ನೂ ಕೂಡ ಕರ್ನಾಟಕದಲ್ಲಿ ಗುಂಡೂರಾಯರಿಂದ ತೊಡಗಿ ಕುಮಾರಸ್ವಾಮಿಯವರೆಗೆ ಅನೇಕ ಮಂದಿ ಮಾಡಿಕೊಂಡು ಬಂದಿದ್ದಾರೆ.
80ರ ದಶಕದ ಆರಂಭದಲ್ಲಿ ಗುಂಡೂರಾಯರು ಪತ್ರಕರ್ತರನ್ನೆಲ್ಲ ಅರಬ್ಬೀ ಸಮುದ್ರಕ್ಕೆ ಎಸೆಯಬೇಕು ಎಂದು ಗುಡುಗಿದ್ದು ಗೊತ್ತೇ ಇದೆ. 1988ರಲ್ಲೇ ರಾಮಕೃಷ್ಣ ಹೆಗಡೆಯವರು ಮಾಧ್ಯಮಗಳನ್ನು ನಿಯಂತ್ರಿಸುವ ದೂರಾಲೋಚನೆಯೊಂದಿಗೆ ಕರ್ನಾಟಕ ಶಾಸಕಾಂಗ (ಅಧಿಕಾರಗಳು, ಸವಲತ್ತುಗಳು & ವಿನಾಯಿತಿಗಳು) ಮಸೂದೆಯನ್ನು ಪ್ರಸ್ತಾಪಿಸಿದ್ದರು ಮತ್ತು ಮಾಧ್ಯಮವಲಯದ ಟೀಕೆಗೂ ಗುರಿಯಾಗಿದ್ದರು. ಆದರೆ ಅವರ ರಾಜೀನಾಮೆಯ ಬಳಿಕ ಅದು ಮೂಲೆಸೇರಿತು. 2012ರಲ್ಲಿ ಡಿ.ವಿ. ಸದಾನಂದಗೌಡರು ಮುಖ್ಯಮಂತ್ರಿಯಾಗಿದ್ದಾಗ ಸದನಕ್ಕೊಂದು ಪ್ರತ್ಯೇಕ ಚಾನೆಲನ್ನೇ ರೂಪಿಸುವ ಚರ್ಚೆ ಮುನ್ನೆಲೆಗೆ ಬಂದು ವಾದವಿವಾದಗಳು ನಡೆದುಹೋದವು. ಆಗಿನ್ನೂ ಮೂವರು ಸಚಿವರು ಸದನದೊಳಗೆ ನೀಲಿಚಿತ್ರ ವೀಕ್ಷಿಸಿದ ದೃಶ್ಯಗಳು ಜಗಜ್ಜಾಹೀರಾದ ಸಮಾಚಾರ ಹಸಿಹಸಿಯಾಗಿದ್ದರಿಂದ ಸ್ವತಂತ್ರ ಚಾನೆಲ್‍ನ ಪ್ರಸ್ತಾಪ ಬೇರೆಯೇ ಸ್ವರೂಪ ಪಡೆದುಕೊಂಡಿತು. ನಿಧಾನಕ್ಕೆ ಅದೂ ಜನರಿಗೆ ಮರೆತುಹೋಯಿತು. 2017ರಲ್ಲಿ ಆಗ ಸ್ಪೀಕರ್ ಆಗಿದ್ದ ಕೆ. ಬಿ. ಕೋಳೀವಾಡ ಮಾಧ್ಯಮಗಳಿಗೆ ‘ಲಕ್ಷ್ಮಣರೇಖೆ’ಯೊಂದನ್ನು ಎಳೆಯುವುದಕ್ಕಾಗಿ ಸದನ ಸಮಿತಿಯೊಂದನ್ನು ರಚಿಸುವ ಪ್ರಸ್ತಾಪ ಮಾಡಿದ್ದರು. ತಾನು ಯಾವ ಚಾನೆಲ್‍ನವರೊಂದಿಗೂ ಮಾತನಾಡುವುದಿಲ್ಲವೆಂದು ಕಳೆದ ಚುನಾವಣೆ ವೇಳೆ ಕುಮಾರಸ್ವಾಮಿಯವರು ಪ್ರತಿಜ್ಞೆ ಮಾಡಿದ್ದನ್ನು ಕೂಡ ಜನ ಮರೆತಿಲ್ಲ. ಈಗ ವಿಧಾನಸಭಾಧ್ಯಕ್ಷರು ಇನ್ನೂ ಒಂದು ಹೆಜ್ಜೆ ಮುಂದಕ್ಕೆ ಹೋಗಿ ಕ್ಯಾಮೆರಾಮೆನ್, ಛಾಯಾಗ್ರಾಹಕರ ಪ್ರವೇಶವನ್ನೇ ನಿರ್ಬಂಧಿಸುವ ನಿರ್ಧಾರಕ್ಕೆ ಬಂದಿರುವುದರಿಂದ ಮಾಧ್ಯಮಗಳೆಡೆಗಿನ ಸರ್ಕಾರದ ಅಸಹಿಷ್ಣುತೆ ಗರಿಷ್ಠ ಹಂತವನ್ನು ತಲುಪಿದಂತಾಗಿದೆ.
ನ್ಯಾಯಾಲಯ ವರದಿಗಾರಿಕೆಗೆ ನಿರ್ದಿಷ್ಟ ಮಾರ್ಗಸೂಚಿಗಳನ್ನು ರೂಪಿಸುವ ಸಂಬಂಧ ಜನಾಭಿಪ್ರಾಯವನ್ನು ಪಡೆಯುವುದಕ್ಕಾಗಿ 2012ರಲ್ಲಿ ಸ್ವತಃ ಸುಪ್ರೀಂ ಕೋರ್ಟ್ ಆಗಿನ ಮುಖ್ಯ ನ್ಯಾಯಾಧೀಶ ಎಸ್.ಎಚ್. ಕಪಾಡಿಯಾ ನೇತೃತ್ವದಲ್ಲಿ ಪಂಚಸದಸ್ಯ ಪೀಠವೊಂದನ್ನು ರಚಿಸಿದ್ದನ್ನೂ ಇಲ್ಲಿ ಉಲ್ಲೇಖಿಸಬಹುದು. ಆದರೆ ಸುಪ್ರೀಂ ಕೋರ್ಟ್ ಅನುಸರಿಸಿದ ವಿಧಾನ ಪ್ರಸ್ತುತ ವಿದ್ಯಮಾನಕ್ಕಿಂತ ಭಿನ್ನವಾಗಿತ್ತು. ಮಾಧ್ಯಮಗಳ ಸಂಪಾದಕರೂ ಸೇರಿದಂತೆ ಸಮಾಜದ ವಿವಿಧ ವಲಯಗಳ ಪ್ರತಿನಿಧಿಗಳ ಅಭಿಪ್ರಾಯ ಮಂಡನೆಗೆ ಅವಕಾಶ ನೀಡಲಾಗಿತ್ತು.
ಸಂವಿಧಾನದ 21ನೇ ಪರಿಚ್ಛೇದ ಹಾಗೂ 19(1)(ಎ) ಪರಿಚ್ಛೇದದ ನಡುವೆ ಸಮತೋಲನ ತರುವುದೇ ನಮ್ಮ ಪ್ರಸ್ತಾಪದ ಆಶಯ ಎಂದ ಸರ್ವೋಚ್ಛ ನ್ಯಾಯಾಲಯ, ‘ಮಾಧ್ಯಮಗಳ ಸಂಪಾದಕೀಯ ವಸ್ತುವಿಚಾರಗಳನ್ನು ನಿಯಂತ್ರಿಸುವಲ್ಲಿ ನಮಗೆ ಆಸಕ್ತಿ ಇಲ್ಲ. ತಪ್ಪು ಮಾಡುವ ಮಾಧ್ಯಮಗಳ ಮೇಲೆ ಕ್ರಮ ಕೈಗೊಳ್ಳುವುದಕ್ಕಿಂತಲೂ ಅಂತಹ ತಪ್ಪುಗಳಾಗದಂತೆ ತಡೆಗಟ್ಟುವುದೇ ನಮ್ಮ ಉದ್ದೇಶ’ ಎಂದು ಸ್ಪಷ್ಟೀಕರಿಸಿತು. ಆ ನಂತರ ನಡೆದ ಚರ್ಚೆಗಳೂ ಅಷ್ಟೇ ಆರೋಗ್ಯಕರವಾಗಿದ್ದವು.
‘ನ್ಯಾಯಾಂಗದ ತುತ್ತತುದಿಯಲ್ಲಿರುವ ಸುಪ್ರೀಂ ಕೋರ್ಟ್ ವರದಿಗಾರಿಕೆಗೆ ಮಾರ್ಗಸೂಚಿಗಳನ್ನು ರೂಪಿಸಿಬಿಟ್ಟರೆ ಅದು ಸರ್ಕಾರದ ಇತರ ಅಂಗಗಳಿಗೂ ಪ್ರೇರಣೆಯಾಗುವ ಸಾಧ್ಯತೆಯಿದೆ; ಸಂಸತ್ತು, ರಾಜ್ಯ ವಿಧಾನಸಭೆಗಳು, ಸಚಿವಾಲಯಗಳು ಹೀಗೆ ಎಲ್ಲರೂ ಪತ್ರಕರ್ತರಿಗೆ ನಿಯಮಗಳನ್ನು ರೂಪಿಸುತ್ತಾ ಹೋಗುವುದಕ್ಕೆ ಕಾರಣವಾಗಬಹುದು’ ಎಂದು ಅನೇಕ ಹಿರಿಯ ಪತ್ರಕರ್ತರು ಆತಂಕ ವ್ಯಕ್ತಪಡಿಸಿದರು. ಕೊನೆಗೆ ಸುಪ್ರೀಂ ಕೋರ್ಟ್ ತನ್ನ ಪ್ರಸ್ತಾಪದಿಂದ ಹಿಂದೆ ಸರಿಯಬೇಕಾಯಿತು.
ಮಾಧ್ಯಮಗಳಿಗೆ ಒಂದು ಹಂತದ ನಿಯಂತ್ರಣ ಅಗತ್ಯ ಎಂದು ವಾದಿಸುತ್ತಲೇ ಇದ್ದ ನ್ಯಾ| ಮಾರ್ಕಾಂಡೇಯ ಕಟ್ಜು ಕೂಡ ಅದನ್ನು ಸರ್ಕಾರ ಮಾಡಬೇಕೆಂದು ಎಲ್ಲೂ ಹೇಳಲಿಲ್ಲ. ಅವರು ಹೇಳುತ್ತಿದ್ದುದು ಭಾರತೀಯ ಪತ್ರಿಕಾ ಮಂಡಳಿಗೆ ಹೆಚ್ಚಿನ ಅಧಿಕಾರ ಕೊಡಿ ಎಂದಷ್ಟೇ. ಅಂದರೆ ತನ್ನ ಕೆಲಸಕಾರ್ಯ, ನೀತಿನಿಯಮ, ನಿಯಂತ್ರಣ ಇತ್ಯಾದಿಗಳನ್ನೆಲ್ಲ ಮಾಧ್ಯಮವಲಯವೇ ನೋಡಿಕೊಳ್ಳಬೇಕು, ಹೊರಗಿನವರಲ್ಲ ಎಂಬುದು ಅವರ ಒತ್ತಾಯದ ತಿರುಳಾಗಿತ್ತು. ‘ರೆಗ್ಯುಲೇಶನಿಗೂ ಕಂಟ್ರೋಲ್‍ಗೂ ವ್ಯತ್ಯಾಸವಿದೆ. ಮಾಧ್ಯಮಗಳನ್ನು ಕಂಟ್ರೋಲ್ ಮಾಡಬೇಕಾದ್ದಲ್ಲ; ರೆಗ್ಯುಲೇಶನ್ ರೂಪಿಸಬಹುದು. ಆ ಅಧಿಕಾರವನ್ನು ಪತ್ರಿಕಾ ಮಂಡಳಿಗೆ ಕೊಡಿ’ ಎಂಬುದು ಅವರ ವಾದ.
ಆದರೆ ಕರ್ನಾಟಕ ವಿಧಾನಸಭೆಯ ಹೊಸ ಹೆಜ್ಜೆ ‘ಕಂಟ್ರೋಲ್’ ಹಂತಕ್ಕೆ ಹೋಗಿದೆ. ಮಾಧ್ಯಮಗಳ ಕಾರ್ಯನಿರ್ವಹಣೆ ಹದತಪ್ಪಿಹೋಗದಂತೆ ನೋಡಿಕೊಳ್ಳುವುದಕ್ಕೆ ಈಗಾಗಲೇ ಇರುವ ನೀತಿನಿಯಮ, ಕಾನೂನುಗಳೇ ಬೆಟ್ಟದಷ್ಟಿವೆ. ಭಾರತೀಯ ದಂಡ ಸಂಹಿತೆಯಿಂದ ತೊಡಗಿ ಈ ದೇಶದ ಒಂದೊಂದು ಕಾನೂನು ಕೂಡ ಜನಸಾಮಾನ್ಯರಿಗೆ ಅನ್ವಯಿಸಿದಷ್ಟೇ ಸಮಾನವಾಗಿ ಪತ್ರಕರ್ತರಿಗೂ ಅನ್ವಯಿಸುತ್ತದೆ. ನಮ್ಮ ಸಂವಿಧಾನವೇ ಎಲ್ಲ ಕಾನೂನುಗಳ ಅಗ್ರಜ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿರುವ 19(1)(ಎ) ಪರಿಚ್ಛೇದದ ಬೆನ್ನಿಗೇ 19(2) ಪರಿಚ್ಛೇದದಲ್ಲಿ ‘ಸಕಾರಣ ನಿರ್ಬಂಧ’ಗಳೂ ಇವೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರತಿಯೊಬ್ಬನಿಗೂ ಇದ್ದರೂ ದೇಶದ ಸಾರ್ವಭೌಮತೆ ಮತ್ತು ಐಕ್ಯತೆ, ಭದ್ರತೆ, ನೈತಿಕತೆ, ನ್ಯಾಯಾಂಗ ನಿಂದನೆ, ಮಾನಹಾನಿ, ಅಪರಾಧದ ಚಿತಾವಣೆಯಂತಹ ಸನ್ನಿವೇಶಗಳಲ್ಲಿ ಆ ಸ್ವಾತಂತ್ರ್ಯವನ್ನು ಸರ್ಕಾರ ನಿರ್ಬಂಧಿಸಬಹುದು ಎನ್ನುತ್ತದೆ ಸಂವಿಧಾನದ 19(2)ನೇ ಪರಿಚ್ಛೇದ.
ತಮ್ಮ ಕಾರ್ಯಕಲಾಪಗಳನ್ನು ಸಸೂತ್ರವಾಗಿ ನಡೆಸಿಕೊಂಡು ಹೋಗುವುದಕ್ಕೆ ಸಂಸತ್ತು ಮತ್ತು ರಾಜ್ಯವಿಧಾನಮಂಡಲಗಳಿಗೆ ಸ್ವತಃ ಸಂವಿಧಾನವೇ ವಿಶೇಷಾಧಿಕಾರವನ್ನು (ಪಾರ್ಲಿಮೆಂಟರಿ ಪ್ರಿವಿಲಿಜಸ್) ನೀಡಿದೆ. ತನ್ನ ನೀತಿನಿಯಮಗಳನ್ನು ತಾನೇ ರೂಪಿಸಿಕೊಳ್ಳುವುದು, ಅವುಗಳನ್ನು ಉಲ್ಲಂಘಿಸುವವರನ್ನು ಶಿಕ್ಷಿಸುವುದು ಕೂಡ ಅದರಲ್ಲಿ ಸೇರಿದೆ. ವಿಶೇಷಾಧಿಕಾರವನ್ನು ಉಲ್ಲಂಘಿಸಿದ ಪ್ರಕರಣಗಳಲ್ಲಿ (ಬ್ರೀಚ್ ಆಫ್ ಪ್ರಿವಿಲಿಜಸ್) ಈಗಾಗಲೇ ಅನೇಕ ಮಂದಿ ಪತ್ರಕರ್ತರು, ಮಾಧ್ಯಮಸಂಸ್ಥೆಗಳು ಸದನದ ಛೀಮಾರಿಗೆ ಒಳಗಾದ ಘಟನೆಗಳು ಕರ್ನಾಟಕವೂ ಸೇರಿದಂತೆ ಭಾರತದ ಬೇರೆಬೇರೆ ಭಾಗಗಳಲ್ಲಿ ಸಾಕಷ್ಟು ನಡೆದಿವೆ. ಅಂತಹ ಸಂವಿಧಾನದತ್ತ ವಿಶೇಷಾಧಿಕಾರವನ್ನು ಚಲಾಯಿಸಬೇಡಿರೆಂದೋ, ತೆಗೆದುಹಾಕಿರೆಂದೋ ಯಾರೂ ಈಗ ಪ್ರತಿಭಟನೆ ನಡೆಸುತ್ತಿಲ್ಲ. ಅವುಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರುವುದು ಬಿಟ್ಟು ವಾಹಿನಿಗಳನ್ನೇ ಒಳಕ್ಕೆ ಬರದಂತೆ ನಿರ್ಬಂಧಿಸುತ್ತಿರುವುದರ ಹಿಂದಿನ ರಾಜಕಾರಣವೇನು ಎಂಬುದೇ ಎಲ್ಲರ ಪ್ರಶ್ನೆ.
2002ರಲ್ಲಿ ಜಾಗತಿಕ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಭಾರತದ ಸ್ಥಾನ 80ನೆಯದಾಗಿತ್ತು. 2016ರಲ್ಲಿ ಅದು 133ಕ್ಕೆ ಕುಸಿಯಿತು. 2019ರಲ್ಲಿ ಅದು ಇನ್ನೂ ಕೆಳಗಿಳಿದು 140ನೇ ರ್ಯಾಂಕಿಗೆ ತಲುಪಿದೆ. ದೇಶದ ಪತ್ರಿಕಾ ಸ್ವಾತಂತ್ರ್ಯದ ಪರಿಸ್ಥಿತಿಗೂ ಪ್ರಸ್ತುತ ವಿದ್ಯಮಾನಕ್ಕೂ ನೇರಸಂಬಂಧವಿಲ್ಲದೇ ಹೋದರೂ, ಇಂತಹ ಬೆಳವಣಿಗೆಗಳೆಲ್ಲ ನಮ್ಮ ಒಟ್ಟಾರೆ ಪರಿಸ್ಥಿತಿಯನ್ನು ಇನ್ನಷ್ಟು ಬಿಗಡಾಯಿಸುತ್ತವೆ ಎಂಬುದರಲ್ಲಿ ಸಂಶಯವಿಲ್ಲ.
ಪಾರದರ್ಶಕತೆಯೇ ಪ್ರಜಾಪ್ರಭುತ್ವದ ಜೀವಾಳ. ಮಾಧ್ಯಮ ಸ್ವಾತಂತ್ರ್ಯ ಇಲ್ಲದೇ ಹೋದರೆ ಆಡಳಿತದಲ್ಲ್ಲಿ ಪಾರದರ್ಶಕತೆ ಎಂಬ ಮಾತಿಗೆ ಅರ್ಥವೇ ಇರುವುದಿಲ್ಲ. ಅಧಿಕಾರಿಗಳಷ್ಟೇ ಅಲ್ಲ, ಜನಪ್ರತಿನಿಧಿಗಳೂ ಸದನಗಳಲ್ಲಿ ಏನು ಮಾಡುತ್ತಾರೆ, ಹೇಗೆ ವರ್ತಿಸುತ್ತಾರೆ ಎಂಬುದನ್ನು ತಿಳಿದುಕೊಳ್ಳುವ ಹಕ್ಕು ಒಬ್ಬೊಬ್ಬ ಮತದಾರನಿಗೂ ಇದೆ. ಆ ಹಕ್ಕು ಕಾರ್ಯರೂಪಕ್ಕೆ ಬಂದಾಗಲೇ ಮತದಾರ ನಿಜದರ್ಥದಲ್ಲಿ ಪ್ರಜ್ಞಾವಂತನಾಗುವುದು. ನಿಮ್ಮ ಒಂದೊಂದು ಮತವೂ ಅಮೂಲ್ಯ, ಯೋಗ್ಯರನ್ನು ಆಯ್ಕೆ ಮಾಡಿ ಎಂದು ಪ್ರಚಾರ ಮಾಡಿದರೆ ಸಾಲದು, ತಾನು ಎಂಥವರಿಗೆ ಮತ ಹಾಕುತ್ತಿದ್ದೇನೆ ಎಂದು ಆ ಮತದಾರನಿಗೂ ತಿಳಿಯುವಂತೆ ಮಾಡಬೇಕು. ಮತದಾನ ಮಾಡಿದಲ್ಲಿಗೆ ಮತದಾರನ ಕರ್ತವ್ಯ ಮುಗಿಯಲಿಲ್ಲವಷ್ಟೆ? ಸರ್ಕಾರಿ ಚಾನೆಲ್ ಮೂಲಕ ಪ್ರಸಾರವಾಗುವ ದೃಶ್ಯಗಳನ್ನಷ್ಟೇ ಪ್ರಸಾರ ಮಾಡಿ ಎಂದು ತಾಕೀತು ಮಾಡುವುದರ ಹಿಂದಿನ ಮರ್ಮವೇನು ಎಂದು ವೀಕ್ಷಕರಿಗೆ ಅರ್ಥವಾಗುವುದಿಲ್ಲವೇ? ಎಂಬಲ್ಲಿಗೆ ಸರ್ಕಾರದ ಭಾಗವಾಗಿರುವ ಮತದಾರನ ಮಾಹಿತಿಯ ಹಕ್ಕನ್ನೂ ಕಸಿದುಕೊಂಡಂತೆ ಆಗಲಿಲ್ಲವೇ? ಸದನದ ಗಾಂಭೀರ್ಯತೆ, ಘನತೆ ಕಾಪಾಡುವ ಚಿಂತನೆ ಅದರಲ್ಲಿ ಭಾಗವಹಿಸುವವರಿಂದಲೇ ಬರಬೇಕೇ ಹೊರತು ಮಾಧ್ಯಮಗಳನ್ನು ನಿರ್ಬಂಧಿಸುವ ಮೂಲಕ ಅಲ್ಲ.
- ಸಿಬಂತಿ ಪದ್ಮನಾಭ ಕೆ. ವಿ.

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ