ಮೇ 15, 2018ರಂದು 'ಉದಯವಾಣಿ' 'ಜೋಶ್' ಪುರವಣಿಯಲ್ಲಿ ಪ್ರಕಟವಾದ ಲೇಖನ.
ಮಂಗ್ಳೂರಿನವರು ತುಂಬ ಚೆನ್ನಾಗಿ ಏನನ್ನು ಮಾಡಬಲ್ಲರು? - ಸ್ನೇಹಿತರೊಬ್ಬರು ಅಚಾನಕ್ಕಾಗಿ ಹಾಗೊಂದು ಪ್ರಶ್ನೆ ಕೇಳಿದರು. ಒಂದೊಂದಾಗಿ ಹೇಳುತ್ತಾ ಹೋದೆ: ಮಂಗ್ಳೂರಿನವರು ತುಂಬ ಚೆನ್ನಾಗಿ ಬಿಸಿನೆಸ್ ಮಾಡಬಲ್ಲರು; ಬೆಸ್ಟ್ ಅನಿಸುವ ಹೋಟೆಲ್ ನಡೆಸಬಲ್ಲರು; ಚೆನ್ನಾಗಿ ಬೇಸಾಯ ಮಾಡಬಲ್ಲರು; ಸೊಗಸಾದ ಕನ್ನಡ ಮಾತಾಡಬಲ್ಲರು; ಒಳ್ಳೊಳ್ಳೆಯ ಮನೆ ಕಟ್ಟಬಲ್ಲರು; ಯಾವ ಊರಿಗೇ ಹೋದರೂ ಯಕ್ಷಗಾನ, ತುಳು ಮತ್ತು ಮೀನು ಬಿಡಲೊಲ್ಲರು. 'ಅದೆಲ್ಲ ಸರಿ, ಬಹಳ ಮುಖ್ಯವಾದದ್ದನ್ನೇ ಬಿಟ್ಟಿದ್ದೀರಲ್ಲಾ?’ - ಅವರು ಮತ್ತೆ ಕೇಳಿದರು. ಏನದು? ಎಂಬಂತೆ ಅವರ ಮುಖವನ್ನೇ ನೋಡಿದೆ. 'ಮಂಗ್ಳೂರಿನವರು ಭಯಂಕರ ಮ್ಯಾಜಿಕ್ ಮಾಡಬಲ್ಲರು ಮಾರಾಯ್ರೆ’ ಎನ್ನುತ್ತಾ ಘೊಳ್ಳನೆ ನಕ್ಕುಬಿಟ್ಟರು.
ಆಮೇಲೆ ತಮ್ಮ ಮಾತಿಗೆ ಅವರೇ ವಿವರಣೆ ಕೊಟ್ಟರು: ಯಾವ ವರ್ಷವೇ ಇರಲಿ, ಎಸ್‌ಎಸ್‌ಎಲ್‌ಸಿ/ ಪಿಯುಸಿ ರಿಸಲ್ಟ್ ಬಂದಾಗ ಪತ್ರಿಕೆಯವರಿಗೆ ಹೆಡ್‌ಲೈನ್ ಬದಲಾಯಿಸುವ ಕೆಲಸವೇ ಇರೋದಿಲ್ಲ ನೋಡಿ. ’ಪಿಯುಸಿ ಫಲಿತಾಂಶ ಪ್ರಕಟ: ದಕ್ಷಿಣ ಕನ್ನಡ, ಉಡುಪಿಗೆ ಮೊದಲೆರಡು ಸ್ಥಾನ’ ಎಂಬ ಹೆಡ್‌ಲೈನ್ ಶಾಶ್ವತ. ಈ ಸ್ಥಾನ ಬೇರೆ ಯಾವ ಜಿಲ್ಲೆಗೂ ಬಿಟ್ಟು ಹೋಗದಂತೆ ಅದು ಹೇಗೆ ನೋಡಿಕೊಳ್ಳುತ್ತಾರೆ ಈ ಮಂದಿ? ಒಂದು ವರ್ಷ, ಎರಡು ವರ್ಷವೇನೋ ಓಕೆ. ಶತಮಾನದಿಂದಲೂ ಇದೇ ಕತೆ. ಇದು ಮ್ಯಾಜಿಕ್ ಅಲ್ಲದೆ ಇನ್ನೇನು?
ಅವರ ಪ್ರಶ್ನೆ ಸಹಜವಾದದ್ದೇ. ಆದರೆ ಅದು ಮ್ಯಾಜಿಕ್ ಅಲ್ಲ ಎಂದು ಸಿದ್ಧಪಡಿಸುವುದು ಬಹಳ ಕಷ್ಟ. ಮ್ಯಾಜಿಕ್ ಅಲ್ಲ ಎಂದರೆ ಬೇರೆ ಏನು ಎಂದು ವಿವರಣೆ ಕೊಡಬೇಕು. ಅದುವೇ ತುಸು ಕಠಿಣ ಕೆಲಸ. ಕರಾವಳಿ ಜಿಲ್ಲೆಗಳು ಯಾಕೆ ಶಿಕ್ಷಣದಲ್ಲಿ ಯಾವಾಗಲೂ ಮುಂದು? ಅದು ಆ ನೆಲದ ಗುಣವೇ? ನೀರು-ಗಾಳಿಯ ಫಸಲೇ? ಪ್ರಕೃತಿಯ ವರವೇ? ಪರಿಶ್ರಮದ ಪ್ರತಿಫಲವೇ? ಉತ್ತರಿಸುವುದು ಸುಲಭ ಅಲ್ಲ.
ಯಾವ ವಿಷಯದಲ್ಲೂ ಒಂದೇ ಒಂದು ಮಾರ್ಕೂ ಕಮ್ಮಿಯಿಲ್ಲದಂತೆ ಅಷ್ಟನ್ನೂ ಬಾಚಿಕೊಂಡ ಹುಡುಗನನ್ನೋ ಹುಡುಗಿಯನ್ನೋ ಸುಮ್ಮನೇ ಕೇಳಿನೋಡಿ, ಇಷ್ಟು ಮಾರ್ಕ್ಸ್ ನಿನಗೆ ಹೇಗೆ ಬಂತು ಎಂದು. 'ನಮ್ಮ ಶಾಲೆಯಲ್ಲಿ ಚೆನ್ನಾಗಿ ಪಾಠ ಮಾಡ್ತಾರೆ ಸಾರ್. ನಾನು ಚೆನ್ನಾಗಿ ಓದಿಕೊಂಡಿದ್ದೆ’ - ಇದರ ಹೊರತಾಗಿ ಇನ್ಯಾವ ಮ್ಯಾಜಿಕಲ್ ಫಾರ್ಮುಲಾ ಕೂಡ ಈಚೆ ಬರುವುದಿಲ್ಲ. ಅಸಲಿಗೆ ಅವರು ಮುಚ್ಚಿಡುವಂಥದ್ದೇನೂ ಇರುವುದಿಲ್ಲ. ಅವರ ಉತ್ತರ ನೂರಕ್ಕೆ ನೂರು ಪ್ರಾಮಾಣಿಕ. ಅವರು ಹೇಳುವ 'ಚೆನ್ನಾಗಿ ಪಾಠ ಮಾಡುವುದು, ಚೆನ್ನಾಗಿ ಓದುವುದು’ ಅಂದರೇನು ಎಂಬುದಷ್ಟೇ ನಾವು ಅರ್ಥಮಾಡಿಕೊಳ್ಳಬೇಕಾದ ಸಂಗತಿ.
'ದಕ್ಷಿಣ ಕನ್ನಡದಲ್ಲಿ ಕಲಿಕೆಗೆ ಪೂರಕ ವಾತಾವರಣ ಇದೆ. ಇದನ್ನು ನಿರ್ಮಿಸುವಲ್ಲಿ ಶಿಕ್ಷಕರು ಹಾಗೂ ಪೋಷಕರ ಪಾತ್ರ ತುಂಬ ದೊಡ್ಡದು. ಚೆನ್ನಾಗಿ ಕಲಿತರೆ ಮಾತ್ರ ನಾಳಿನ ಬದುಕು ಚೆನ್ನಾಗಿರುತ್ತದೆ ಎಂಬ ಭಾವನೆಯನ್ನು ಮಕ್ಕಳು ಚಿಕ್ಕವರಾಗಿದ್ದಾಗಿಂದಲೂ ಬೆಳೆಸಿಕೊಂಡು ಬರಲಾಗುತ್ತದೆ. ಇದೊಂದು ಮನಸ್ಥಿತಿಯಾಗಿ ಬೆಳೆಯುವುದರಿಂದ ತಮ್ಮ ಓದು ಮುಗಿಯುವವರೆಗೂ ಮಕ್ಕಳು ಬೇರೆ ಆಕರ್ಷಣೆಗಳಿಗೆ ಒಳಗಾಗುವುದು ಕಡಿಮೆ. ಶಿಸ್ತು ಹಾಗೂ ಕಟ್ಟುನಿಟ್ಟಿನ ದಿನಚರಿಯೂ ಇದಕ್ಕೊಂದು ಕಾರಣ’ ಎನ್ನುತ್ತಾರೆ ವೇಣೂರು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ವೆಂಕಟೇಶ ಎಸ್. ತುಳುಪುಳೆ.
ನಿಯಮ ಹೇರಲ್ಪಟ್ಟಾಗ ಅದು ಶಿಕ್ಷೆಯೆನಿಸುವುದುಂಟು. ಆದರೆ ಅದು ಬದುಕಿಗೆ ಮುಖ್ಯ ಎಂಬ ಭಾವನೆ ವಿದ್ಯಾರ್ಥಿಯ ಮನಸ್ಸಿನಲ್ಲೇ ಮೂಡಿದಾಗ ಸ್ವಯಂಶಿಸ್ತು ಬೆಳೆಯುತ್ತದೆ. ಇದು ಮಗು ಶಾಲೆಗೆ ಸೇರಿದ ಮೇಲೆ ಉಂಟಾಗುವ ಹೊಸ ಬೆಳವಣಿಗೆ ಅಲ್ಲ. ಮನೆಯೇ ಮೊದಲ ಪಾಠಶಾಲೆ ಎಂಬ ಮಾತು ಕರಾವಳಿಯಲ್ಲಿ ಅಕ್ಷರಶಃ ಸತ್ಯ. ಜವಾಬ್ದಾರಿಯುತ ಜೀವನದ ಕಲ್ಪನೆ ಮನೆಯಲ್ಲೇ ಆರಂಭವಾಗುತ್ತದೆ. ಗುರುಹಿರಿಯರನ್ನು ಗೌರವಿಸು, ಓರಗೆಯವರನ್ನು ಪ್ರೀತಿಸು, ನಿನ್ನ ಮೇಲೆ ಬೆಟ್ಟದಷ್ಟು ಭರವಸೆ ಇಟ್ಟಿರುವ ಅಪ್ಪ-ಅಮ್ಮನಿಗೆ ನಿರಾಸೆ ಮಾಡಬೇಡ ಎಂಬ ಪಾಠ ಪ್ರತಿದಿನ ಕಿವಿಗೆ ಬೀಳುತ್ತಲೇ ಇರುತ್ತದೆ. ಅದು ಲಕ್ಷಗಟ್ಟಲೆ ದುಡ್ಡು ಚೆಲ್ಲಿ ಕೊಡುವ ಕೋಚಿಂಗ್ ಅಲ್ಲ. ಆದ್ದರಿಂದಲೇ ಅದಕ್ಕೆ ಸಂಸ್ಕಾರ ಎಂದು ಹೆಸರು.
'ಎಸ್‌ಎಸ್‌ಎಲ್‌ಸಿ ಇರಲಿ, ಪಿಯುಸಿ ಇರಲಿ, ಇನ್ಯಾವುದೋ ಮಹತ್ವದ ಹಂತ ಇರಲಿ, ಮಕ್ಕಳನ್ನು ಕ್ಷಣಕ್ಷಣವೂ ಎಚ್ಚರಿಸಿ ಮುನ್ನಡೆಸುವುದು ಇದೇ ಸಂಸ್ಕಾರ. ಇದರ ಮುಂದುವರಿದ ಭಾಗ ಶಾಲೆಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಮತ್ತು ಶಿಕ್ಷಕರ ಮನಸ್ಥಿತಿ. ಕೇವಲ ಸಂಬಳಕ್ಕಾಗಿ ದುಡಿಯುವ ಶಿಕ್ಷಕರು ಇಲ್ಲಿ ಇಲ್ಲವೇ ಇಲ್ಲ ಎನ್ನುವಷ್ಟು ಕಮ್ಮಿ. ವಿದ್ಯಾರ್ಥಿಗಳು ಒಳ್ಳೆಯ ಬದುಕು ಕಟ್ಟಿಕೊಳ್ಳಬೇಕು ಎಂದು ನಮ್ಮ ಮೇಷ್ಟ್ರುಗಳು ಪ್ರಾಮಾಣಿಕವಾಗಿ ಬಯಸುತ್ತಾರೆ’ ಎನ್ನುತ್ತಾರೆ ನಿಡ್ಲೆ ಎಂಬ ಹಳ್ಳಿಯಲ್ಲಿರುವ ಪೋಷಕ ಕೃಷ್ಣಮೋಹನ.
ಕಟ್ಟುನಿಟ್ಟಾಗಿ ತರಗತಿಗಳನ್ನು ನಡೆಸುವುದು ಎಷ್ಟು ಮುಖ್ಯ ಎಂದು ವಿವರಿಸುತ್ತಾರೆ ಉಪ್ಪಿನಂಗಡಿ ಸಮೀಪದ ಶ್ರೀ ರಾಮಕುಂಜೇಶ್ವರ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸ ಗಣರಾಜ ಕುಂಬ್ಳೆ. 'ಇಲಾಖೆಯ ನಿಯಮ ಪ್ರಕಾರ ನಡೆಸಬೇಕಾದ ತರಗತಿಗಳಿಗಿಂತ ಹೆಚ್ಚೇ ತರಗತಿಗಳು ಇಲ್ಲಿ ನಡೆಯುತ್ತವೆ. ರಿವಿಶನ್‌ಗೂ ಹೆಚ್ಚಿನ ಮಹತ್ವ. ಪಿಯುಸಿ ಹಂತದಲ್ಲೂ ಹೋಂವರ್ಕ್ ನೀಡುವ ಪದ್ಧತಿಯಿದೆ. ಇದರಿಂದ ತರಗತಿಯಲ್ಲಿ ಆದ ಪಾಠದ ಮನನ ಅದೇ ದಿನ ನಡೆಯುತ್ತದೆ’ ಎನ್ನುತ್ತಾರೆ ಅವರು.
'ಪರೀಕ್ಷೆಗಳಂತೂ ಕಟ್ಟುನಿಟ್ಟಾಗಿ ನಡೆಯುತ್ತವೆ. ನಕಲು ಮಾಡಬಾರದು, ಅದು ನಾಚಿಕೆಗೇಡು ಎಂಬ ಭಾವನೆ ಮಕ್ಕಳಲ್ಲಿ ಮೊದಲಿನಿಂದಲೂ ಬೆಳೆದಿರುತ್ತದೆ. ಕ್ಲಾಸ್ ಟೆಸ್ಟುಗಳೂ ವಾರ್ಷಿಕ ಪರೀಕ್ಷೆಯಷ್ಟೇ ಶಿಸ್ತಿನಿಂದ ನಡೆಯುತ್ತವೆ. ಗೈಡುಗಳ ಮೇಲೆ ವಿದ್ಯಾರ್ಥಿಗಳ ಅವಲಂಬನೆ ಕಡಿಮೆ. ಹೀಗಾಗಿ ಸ್ವತಂತ್ರ ಕಲಿಕೆಯ ಸಾಮರ್ಥ್ಯ ಮಕ್ಕಳಲ್ಲಿ ಸಹಜವಾಗಿ ಬೆಳೆದಿರುತ್ತದೆ. ನೀರಿಗೆ ನೂಕಿದ ಮೇಲೆ ಈಜು ಕಲಿಯಲೇಬೇಕಲ್ಲ?’ ಎಂದು ಪ್ರಶ್ನಿಸುತ್ತಾರೆ ಕುಂಬ್ಳೆ.
ಇದನ್ನು ವಿದ್ಯಾರ್ಥಿಗಳೂ ಒಪ್ಪುತ್ತಾರೆ. 'ಪರೀಕ್ಷೆ ಮಾತ್ರ ಅಲ್ಲ, ಮೌಲ್ಯಮಾಪನವೂ ಕಟ್ಟುನಿಟ್ಟು. ಇದರಿಂದ ಚೆನ್ನಾಗಿ ಬರೆದರೆ ಮಾತ್ರ ಒಳ್ಳೆಯ ಅಂಕ ಎಂಬ ಭಾವನೆ ನಮ್ಮಲ್ಲಿ ಬೆಳೆದಿರುತ್ತದೆ. ನಿಧಾನ ಕಲಿಕೆಯವರನ್ನು ಗುರುತಿಸಿ ಅವರಿಗೆ ಹೆಚ್ಚಿನ ಮಾರ್ಗದರ್ಶನ ನೀಡುವ ಪದ್ಧತಿ ನಮ್ಮ ಶಾಲೆಯಲ್ಲಿದೆ. ಎಂತಹವರೂ ಪಾಸ್ ಆಗುವಂತೆ ಬೆಳೆಸಿ ಬೆನ್ನುತಟ್ಟುವ ವಿಶಿಷ್ಟ ಗುಣ ನಮ್ಮ ಹೆಡ್‌ಮಿಸ್‌ಗಿದೆ. ಬೆಳಗ್ಗೆ ೮ ಗಂಟೆಯಿಂದ ರಾತ್ರಿ ೮ರವರೆಗೂ ಅವರು ಶಾಲೆಯಲ್ಲೇ ಇರುವುದುಂಟು’ ಎನ್ನುತ್ತಾರೆ ಧರ್ಮಸ್ಥಳದ ಎಸ್.ಡಿ.ಎಂ. ಆಂಗ್ಲಮಾಧ್ಯಮ ಶಾಲೆಯಲ್ಲಿ ಈಗಷ್ಟೇ ಎಸ್‌ಎಸ್‌ಎಲ್‌ಸಿ ಮುಗಿಸಿರುವ ಅಶ್ವಿನ್.
'ದಕ್ಷಿಣ ಕನ್ನಡದಲ್ಲಿ ಪ್ರಾಥಮಿಕ ಶಿಕ್ಷಣ ಭದ್ರವಾಗಿದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಭಾಷಾಕೌಶಲ ಬೆಳೆದಿರುತ್ತದೆ. ವಿದ್ಯಾರ್ಥಿದೆಸೆಯಲ್ಲಿ ಓದುವುದೇ ಪರಮಗುರಿ ಎಂಬ ಭಾವನೆ ವಿದ್ಯಾರ್ಥಿಯಲ್ಲಿ ಮೂಡಿದಾಗ ಅಡ್ಡದಾರಿಗಳ ಕಡೆಗೆ ಮನಸ್ಸು ಹೋಗುವುದೇ ಇಲ್ಲ. ಪೋಷಕರಲ್ಲೂ ಹೆಚ್ಚಿನವರು ವಿದ್ಯಾವಂತರು ಇರುವುದೂ ಇದಕ್ಕೆ ಕಾರಣ’ ಎನ್ನುತ್ತಾರೆ ಕುಂತೂರುಪದವು ಸಂತ ಜಾರ್ಜ್ ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ತಮ್ಮಯ್ಯ ಗೌಡರು.
ಕರುನಾಡು, ಹೆಣ್ಣುಮಕ್ಕಳ ಬೀಡು
ದಕ್ಷಿಣ ಕನ್ನಡ-ಉಡುಪಿ ಜಿಲ್ಲೆಗಳ ಸಾಕ್ಷರತಾ ಪ್ರಮಾಣ ರಾಜ್ಯದ ಸರಾಸರಿ ಸಾಕ್ಷರತೆಗಿಂತ ತುಂಬ ಮೇಲ್ಮಟ್ಟದಲ್ಲಿದೆ. ಇಡೀ ರಾಜ್ಯದಲ್ಲೇ ಅತಿಹೆಚ್ಚು ಅಂದರೆ ಶೇ. ೮೮.೫೭ರಷ್ಟು ಸಾಕ್ಷರತಾ ಪ್ರಮಾಣ ದ.ಕ. ಜಿಲ್ಲೆಯಲ್ಲಿದೆ. ಉಡುಪಿಯಲ್ಲಿ ಇದು ಶೇ. ೮೬.೨೪ ಇದೆ. ಇನ್ನೊಂದು ವಿಶೇಷವೆಂದರೆ ಗಂಡು-ಹೆಣ್ಣು ಅನುಪಾತ ಉಳಿದ ಜಿಲ್ಲೆಗಳಿಗಿಂತ ಕರಾವಳಿ ಜಿಲ್ಲೆಯಲ್ಲಿ ಭಿನ್ನವಾಗಿದೆ. ಉಳಿದ ಕಡೆ ಹೆಣ್ಣುಮಕ್ಕಳ ಸಂಖ್ಯೆ ಕುಸಿಯುತ್ತಿದ್ದರೆ, ದ.ಕ.ದಲ್ಲಿ 1000:1020 ಹಾಗೂ ಉಡುಪಿಯಲ್ಲಿ 1000:1094 ಪುರುಷ-ಸ್ತ್ರೀ ಅನುಪಾತ ಇದೆ. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿಗೂ ಕರಾವಳಿಯ ಶಿಕ್ಷಣದ ಗುಣಮಟ್ಟಕ್ಕೂ ಏನಾದರೂ ಸಂಬಂಧವಿರಬಹುದೇ?