ಶನಿವಾರ, ಫೆಬ್ರವರಿ 11, 2017

ಬಾಡಿಗೆ ತಾಯ್ತನ: ನಿಷೇಧವೇ? ನಿಯಂತ್ರಣವೇ?

ಡಿಸೆಂಬರ್ 2016ರ 'ಉತ್ಥಾನ' ಮಾಸಪತ್ರಿಕೆಯಲ್ಲಿ ಪ್ರಕಟವಾದ ಲೇಖನ

Credit: http://kathmandupost.ekantipur.com
ಇದು ಸುಮಾರು ಮೂವತ್ತೆರಡು ವರ್ಷಗಳ ಹಿಂದಿನ ಕಥೆ. ೧೯೮೪ರ ಮಾರ್ಚ್ ತಿಂಗಳು. ಅಮೇರಿಕದ ಪತ್ರಿಕೆಯೊಂದರಲ್ಲಿ ಹೀಗೊಂದು ಜಾಹೀರಾತು ಪ್ರಕಟವಾಗಿತ್ತು: 'ಬೇಕಾಗಿದ್ದಾರೆ! ಮಕ್ಕಳಿಲ್ಲದ ದಂಪತಿಗಳಿಬ್ಬರಿಗೆ ಮಗುವನ್ನು ಹೆತ್ತುಕೊಡಲು ಸಿದ್ಧವಿರುವ ಮಹಿಳೆಯೊಬ್ಬರು ಬೇಕಾಗಿದ್ದಾರೆ!’ ಮೇರಿ ಬೆತ್ ವೈಟ್‌ಹೆಡ್ ಎಂಬ ಮಹಿಳೆಗೆ ಈ ಜಾಹೀರಾತಿನಲ್ಲಿ ಕುತೂಹಲ ಮೂಡಿತು. ಮೇರಿ ಒಬ್ಬ ಪೌರಕಾರ್ಮಿಕನ ಪತ್ನಿ. ಹೈಸ್ಕೂಲಿನಲ್ಲೇ ಓದು ನಿಲ್ಲಿಸಿದ್ದಳು. ಆಕೆಗೆ ಆಗಲೇ ಇಬ್ಬರು ಮಕ್ಕಳಿದ್ದರು. ಮನೆಯಲ್ಲಿ ಬಡತನ. ಈ ಜಾಹೀರಾತು ತನ್ನ ಭಾಗ್ಯದ ಬಾಗಿಲು ತೆರೆದೀತೇ ಎಂಬ ಸಣ್ಣ ಆಸೆ ಮೇರಿಯ ಮನಸಿನಲ್ಲಿ ಸುಳಿಯದಿರಲಿಲ್ಲ.

ಆಕೆ ಹೆಚ್ಚು ಸಮಯ ಕಳೆಯದೆ ಜಾಹೀರಾತು ನೀಡಿದವರನ್ನು ಸಂಪರ್ಕಿಸಿಯೇಬಿಟ್ಟಳು. ಅದು ನ್ಯೂಯಾರ್ಕಿನ ಬಂಜೆತನ ನಿವಾರಣಾ ಕೇಂದ್ರವೊಂದರ ಜಾಹೀರಾತು. ಮಗು ಬಯಸಿದ್ದವರು ವಿಲಿಯಂ ಸ್ಟೆರ್ನ್ ಹಾಗೂ ಎಲಿಜಬೆತ್ ಎಂಬ ಶ್ರೀಮಂತ ದಂಪತಿ. ವಿಲಿಯಂ ಒಬ್ಬ ಜೀವರಸಾಯನಶಾಸ್ತ್ರಜ್ಞ; ಎಲಿಜಬೆತ್ ಸ್ವತಃ ಮಕ್ಕಳ ವೈದ್ಯೆ. ಆದರೆ ಆಕೆ ಮಕ್ಕಳನ್ನು ಹೆರುವ ಪರಿಸ್ಥಿತಿಯಲ್ಲಿರಲಿಲ್ಲ. ಗರ್ಭಿಣಿಯಾದರೆ ಆಕೆಯ ಆರೋಗ್ಯ ಸಮಸ್ಯೆ ಬಿಗಡಾಯಿಸುವ ಅಪಾಯ ಇತ್ತು. ಹೀಗಾಗಿ ಪರ್ಯಾಯ ಸಾಧ್ಯತೆಗಳ ಬಗ್ಗೆ ಯೋಚಿಸಿದ್ದ ಆ ದಂಪತಿ ನೋವೆಲ್ ಕೀನ್ ಎಂಬ ನ್ಯಾಯವಾದಿ ನಡೆಸುತ್ತಿದ್ದ ಬಂಜೆತನ ನಿವಾರಣಾ ಕೇಂದ್ರದ ಮೂಲಕ ಜಾಹೀರಾತು ಕೊಡಿಸಿದ್ದರು.

ಮಾತುಕತೆ ನಡೆಯಿತು. ವಿಲಿಯಂ ದಂಪತಿ ಹಾಗೂ ಮೇರಿ ನಡುವೆ ಒಪ್ಪಂದ ಕುದುರಿತು. ವಿಲಿಯಂನ ವೀರ‍್ಯವನ್ನು ಕೃತಕ ವಿಧಾನದಿಂದ ಮೇರಿಯ ಗರ್ಭದಲ್ಲಿರಿಸುವುದು, ಆಕೆ ಮಗುವನ್ನು ಹೆತ್ತುಕೊಡುವುದು, ಇದಕ್ಕೆ ಪ್ರತಿಯಾಗಿ ಆಕೆ ಹತ್ತು ಸಾವಿರ ಡಾಲರ್ ಹಣ ಪಡೆಯುವುದು- ಇದು ಒಪ್ಪಂದ. ಒಪ್ಪಂದ ಜಾರಿಯಾಯಿತು. ಮೇರಿ ಗರ್ಭಿಣಿಯಾದಳು. ೧೯೮೬ರ ಮಾರ್ಚ್ ೨೭ರಂದು ಒಂದು ಮುದ್ದಾದ ಹೆಣ್ಣು ಮಗುವಿಗೆ ಜನ್ಮವಿತ್ತಳು. ಮಗುವಿಗೆ ಸಾರಾ ಎಂದು ಹೆಸರಿಟ್ಟಳು. ಒಪ್ಪಂದದ ಪ್ರಕಾರ ನವಜಾತ ಶಿಶುವನ್ನು ವಿಲಿಯಂ ದಂಪತಿಗಳಿಗೆ ಹಸ್ತಾಂತರಿಸಿದ್ದೂ ಆಯಿತು.

ಕರುಳ ಬಳ್ಳಿ ಸಂಬಂಧ ಅಷ್ಟು ಸುಲಭದಲ್ಲಿ ಕಡಿದುಹೋಗುವಂಥದ್ದೇ? ಎಷ್ಟಾದರೂ ಅಮ್ಮ ಅಮ್ಮನೇ ಅಲ್ಲವೇ? ತಾನೇ ಒಂಬತ್ತು ತಿಂಗಳು ಹೊತ್ತು ಹೆತ್ತ ಮಗುವನ್ನು ಬಿಟ್ಟು ಒಂದು ದಿನವೂ ಕಳೆಯದಾದಳು ಮೇರಿ. 'ಅಮ್ಮಾ ನಿನ್ನ ಹೊಟ್ಟೆಯೊಳಗಿರುವುದು ತಂಗಿಯಾ ತಮ್ಮನಾ?’ ಮಕ್ಕಳು ದಿನಾ ಕೇಳುತ್ತಿದ್ದರು. ಈಗ ಅವರು 'ಹೊಸ ಪಾಪು ಎಲ್ಲಮ್ಮಾ?’ ಎಂದು ಕೇಳಿದರೆ ಏನು ಹೇಳುವುದು? ಹಣಕ್ಕಾಗಿ ಯಾರಿಗೋ ಮಾರಿಬಿಟ್ಟೆ ಎನ್ನುವುದೇ? ಮಕ್ಕಳು ಈ ತಾಯಿಯನ್ನು ಕ್ಷಮಿಸಿಯಾರೇ? ಆ ಹಸುಗೂಸಿಗೆ ಎದೆ ಹಾಲುಣಿಸದೆ ಹೋದರೆ ಅದರ ಶಾಪ ತನ್ನನ್ನು ತಾಕದೇ ಬಿಟ್ಟೀತೇ? ಅಯ್ಯೋ ನಾನೆಂತಹ ಅಮ್ಮ? ಹೀಗೆಂದು ನೋವಿನಲ್ಲಿ ಒದ್ದಾಡಿದಳು ಮೇರಿ. ಜೀವನಪೂರ್ತಿ ಕೊರಗಿನಲ್ಲಿ ಕರಗುವ ಬದಲು ಅದಕ್ಕೊಂದು ಮಂಗಳ ಹಾಡುವುದೇ ಸರಿ ಎಂಬ ನಿರ್ಧಾರಕ್ಕೆ ಬಂದಳು.

ವಿಲಿಯಂ ದಂಪತಿಗಳ ಬಳಿಗೆ ಹೋಗಿ 'ನನ್ನ ಮಗುವನ್ನು ಬಿಟ್ಟು ಇರಲಾರೆ. ದಯವಿಟ್ಟು ಅವಳನ್ನು ನನಗೆ ವಾಪಸ್ ಕೊಟ್ಟುಬಿಡಿ. ನಿಮ್ಮ ದುಡ್ಡು ನೀವೇ ಇಟ್ಟುಕೊಳ್ಳಿ’ ಎಂದು ಬೇಡಿಕೊಂಡಳು. 'ನಾವು ಕಾನೂನು ಪ್ರಕಾರ ಒಪ್ಪಂದ ಮಾಡಿಕೊಂಡಿದ್ದೇವೆ. ನೀನು ಸಹಿ ಮಾಡಿದ್ದೀಯೆ. ಹೆತ್ತ ಬಳಿಕ ಮಗು ನಮಗೆ ಸೇರಿದ್ದು’ ಎಂದು ವಾದಿಸಿದರು ದಂಪತಿಗಳು. 'ನಿಮ್ಮ ಕಾನೂನಿಗಿಷ್ಟು ಬೆಂಕಿ. ಮಗು ಎಂದರೆ ನಿಮ್ಮ ಕಾಗದ ಪತ್ರಗಳಿಗೆ ಸಮವೇ? ಅದು ನನ್ನ ಜೀವದ ತುಣುಕು, ಅದನ್ನು ನಾನೇ ಸಲಹಬೇಕು. ಕೊಟ್ಟುಬಿಡಿ ಪ್ಲೀಸ್’ ಎಂದು ಗೋಗರೆದಳು ಮೇರಿ. ಕೊನೆಗೆ 'ನೀವು ನನ್ನ ಮಗುವನ್ನು ಕೊಡದೇ ಹೋದರೆ ನಿಮ್ಮೆದುರೇ ಪ್ರಾಣ ಕಳೆದುಕೊಳ್ಳುತ್ತೇನೆ’ ಎಂದು ಆತ್ಮಹತ್ಯೆಯ ಬೆದರಿಕೆ ಹಾಕಿಬಿಟ್ಟಳು. ವಿಲಿಯಂ ದಂಪತಿಗಳು ಬೇರೆ ದಾರಿ ಕಾಣದೆ ಮಗುವನ್ನು ಮೇರಿ ವಶಕ್ಕೆ ನೀಡಿದರು.

ಆದರೆ ವಿಷಯವನ್ನು ಅಲ್ಲಿಗೇ ಬಿಡಲು ಅವರು ಸಿದ್ಧರಿರಲಿಲ್ಲ. ಕೋರ್ಟ್ ಮೊರೆ ಹೋದರು. ವಿಚಾರಣೆ ನಡೆಸಿದ ನ್ಯೂಜೆರ್ಸಿಯ ಅಧೀನ ನ್ಯಾಯಾಲಯವು ದಂಪತಿಗಳು ಮಾಡಿಕೊಂಡಿದ್ದ ಒಪ್ಪಂದದವನ್ನೇ ಎತ್ತಿಹಿಡಿಯಿತು. ಕಾನೂನು ಪ್ರಕಾರ ಮಗು ವಿಲಿಯಂ ದಂಪತಿಗೆ ಸೇರಬೇಕಾದ್ದು ಎಂದು ತೀರ್ಪು ನೀಡಿತು. ಮಗುವನ್ನು ಮೇರಿಯಿಂದ ಬಿಡಿಸಿಕೊಂಡು ವಿಲಿಯಂ ದಂಪತಿಗೆ ನೀಡುವುದಕ್ಕಾಗಿ ಪೊಲೀಸರು ಮೇರಿಯ ಮನೆಗೆ ಬಂದರೆ ಅವರನ್ನು ಸ್ವಾಗತಿಸಿದ್ದು ಬಾಗಿಲಿನ ಬೀಗ. ಇನ್ನೇನು ಮಗು ಕಳೆದುಹೋಗುತ್ತದೆಂಬ ಆತಂಕದಿಂದ ಮೇರಿ ಶಿಶುವನ್ನು ಎದೆಗವಚಿಕೊಂಡು ಫ್ಲಾರಿಡಾದಲ್ಲಿನ ತನ್ನ ತವರು ಮನೆಗೆ ಓಡಿಹೋಗಿದ್ದಳು. ಆದರೆ ಪೊಲೀಸರು ಬಿಡಬೇಕಲ್ಲ? ಅಲ್ಲಿಗೂ ಹೋಗಿ ಬಲವಂತವಾಗಿ ಮಗುವನ್ನು ಬಿಡಿಸಿಕೊಂಡು ವಿಲಿಯಂ ದಂಪತಿಗಳಿಗೆ ನೀಡಿದರು.

ಅಮ್ಮ ಅಷ್ಟು ಸುಲಭಕ್ಕೆ ಮಗುವನ್ನು ಬಿಟ್ಟಾಳೆಯೇ? ಮತ್ತೆ ಕೋರ್ಟ್ ಮೆಟ್ಟಿಲೇರಿದಳು. ತನ್ನೆಲ್ಲ ಬಡತನದ ನಡುವೆಯೂ ಕಾನೂನು ಹೋರಾಟ ನಡೆಸಿದಳು. ಇಡೀ ಪ್ರಪಂಚ ಈ ಹೋರಾಟವನ್ನು ಕುತೂಹಲದಿಂದ ವೀಕ್ಷಿಸುತ್ತಿತ್ತು. ಅಂತೂ ಇದಕ್ಕೆ ತೆರೆ ಬೀಳುವ ದಿನ ಬಂತು. ೧೯೮೮ರ ಫೆಬ್ರವರಿ ೩ರಂದು ಐತಿಹಾಸಿಕ ತೀರ್ಪು ಬರೆದ ನ್ಯೂಜೆರ್ಸಿಯ ಸುಪ್ರೀಂ ಕೋರ್ಟ್ ಮೇರಿಯ ಮಾತೃತ್ವವನ್ನು ಸಿಂಧುಗೊಳಿಸಿ, ಅವರು ಮಾಡಿಕೊಂಡಿದ್ದ ಒಪ್ಪಂದನ್ನು ಅಮಾನ್ಯಗೊಳಿಸಿತು. ಮಗುವನ್ನು ಹೆರಲು ಮಹಿಳೆಗೆ ಹಣ ನೀಡುವುದು ಅವಳನ್ನು ಅಗೌರವಿಸಿದಂತೆ. ಇದು ಅಪರಾಧ. ಮಗುವಿನ ಮಾರಾಟಕ್ಕೂ ಇದಕ್ಕೂ ಏನು ವ್ಯತ್ಯಾಸ? ಎಂದು ಕೇಳಿತು ನ್ಯಾಯಾಲಯ. ಮೇರಿ ಸಂತೋಷದಿಂದ ಹಿರಿಹಿರಿಹಿಗ್ಗಿದಳು. ನನ್ನ ಮಗು ನನಗೆ ಸಿಕ್ಕಿತು ಎಂದು ಕಣ್ಣೀರುಗರೆದಳು. ಆದರೆ ಅವಳ ಸಂತೋಷ ಹೆಚ್ಚು ಸಮಯ ಉಳಿಯಲಿಲ್ಲ. ಕೋರ್ಟು ತನ್ನ ತೀರ್ಪನ್ನು ಪೂರ್ಣಗೊಳಿಸುವಾಗ ಹೀಗೆ ಹೇಳಿತು: ಮೇರಿಯೇ ಮಗುವಿನ ನಿಜವಾದ ತಾಯಿ. ಆದರೆ ಮಗುವಿನ ಭವಿಷ್ಯದ ಹಿತದೃಷ್ಟಿಯಿಂದ ಅದು ವಿಲಿಯಂ ದಂಪತಿಗಳ ಬಳಿ ಬೆಳೆಯುವುದೇ ಹೆಚ್ಚು ಸರಿ. ಮೇರಿ ತನಗೆ ಬೇಕೆನಿಸಿದಾಗೆಲ್ಲ ಮಗುವನ್ನು ಭೇಟಿಮಾಡಿಕೊಂಡು ಬರಬಹುದು...
ಮೇರಿ ಕುಸಿದುಕುಳಿತಳು. ಅವಳು ಗೆದ್ದು ಸೋತಿದ್ದಳು. ವಿಲಿಯಂ ದಂಪತಿಗಳು ಸೋತು ಗೆದ್ದಿದ್ದರು.

***

ಇದು ಇಡೀ ವಿಶ್ವದ ಗಮನ ಸೆಳೆದ 'ಬೇಬಿ ಎಂ’ ಪ್ರಕರಣ. ಮೇರಿ ತನ್ನ ಹೆಣ್ಣುಮಗುವಿಗೆ ಸಾರಾ ಎಂದು ಹೆಸರಿಟ್ಟರೂ, ವಿಲಿಯಂ ದಂಪತಿಗಳು ಅವಳನ್ನು ಮೆಲಿಸ್ಸಾ ಎಂದು ಕರೆದರು. ಹಾಗೆ ಕೋರ್ಟ್ ಭಾಷೆಯಲ್ಲಿ ಆಕೆ 'ಬೇಬಿ ಎಂ’ ಆದಳು. ಬಾಡಿಗೆ ತಾಯ್ತನದ ಪರಿಕಲ್ಪನೆ ಇದಕ್ಕೂ ಒಂದಷ್ಟು ವರ್ಷಗಳ ಮೊದಲೇ ಪ್ರಚಲಿತದಲ್ಲಿದ್ದರೂ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಮಟ್ಟದ ಚರ್ಚೆಯನ್ನು ಹುಟ್ಟುಹಾಕಿದ, ಜಗತ್ತಿನ ಪ್ರತಿಯೊಂದು ದೇಶಕ್ಕೂ ಆತ್ಮಾವಲೋಕನದ ಅವಶ್ಯಕತೆಯನ್ನು ಮನಗಾಣಿಸಿದ ಪ್ರಕರಣ ಇದು. ಅಂದಹಾಗೆ, ಇಂತಹದ್ದೇ ಒಂದು 'ಬೇಬಿ ಎಂ’ ಪ್ರಕರಣ ಭಾರತದಲ್ಲೂ ನಡೆಯಿತು. ಮುಂದುವರಿಯುವ ಮುನ್ನ ಆ ಘಟನೆಯನ್ನೂ ಒಮ್ಮೆ ನೋಡಬೇಕು.

ಭಾರತದ 'ಬೇಬಿ ಎಂ’ ಪ್ರಕರಣ ನಡೆದದ್ದು ಈಗ ಎಂಟು ವರ್ಷಗಳ ಹಿಂದೆ. ಕಾನೂನಿನ ಪರಿಭಾಷೆಯಲ್ಲಿ ಇದು 'ಬೇಬಿ ಮಾಂಜಿ ಯಮಡಾ ವರ್ಸಸ್ ಭಾರತ ಸರ್ಕಾರ’ ಪ್ರಕರಣ.

ಬಾಡಿಗೆ ತಾಯಿಯ ಮೂಲಕ ಮಗುವೊಂದನ್ನು ಪಡೆಯುವ ಉದ್ದೇಶದಿಂದ ೨೦೦೭ರಲ್ಲಿ ಇಕುಫುಮಿ ಯಮಡಾ ಹಾಗೂ ಯೂಕಿ ಎಂಬ ಜಪಾನೀ ವೈದ್ಯ ದಂಪತಿಗಳು ಭಾರತಕ್ಕೆ ಬಂದರು. ಗುಜರಾತಿನ ಆನಂದ್‌ನಲ್ಲಿ ’ಆಕಾಂಕ್ಷಾ’ ಎಂಬ ಬಂಜೆತನ ನಿವಾರಣಾ ಕೇಂದ್ರ ನಡೆಸುತ್ತಿದ್ದ ಡಾ. ನಯನ ಪಟೇಲ್ ಅವರನ್ನು ಭೇಟಿಯಾದರು. ತಮ್ಮ ಹಂಬಲ ತೋಡಿಕೊಂಡರು. ಡಾ. ನಯನ, ಅವರ ಆಸೆಯನ್ನು ಈಡೇರಿಸುವ ಭರವಸೆ ನೀಡಿದರು.

ಪ್ರೀತಿ ಬೆನ್ ಮೆಹ್ತಾ ಎಂಬ ಮಹಿಳೆಯೊಬ್ಬರು ಬಾಡಿಗೆ ತಾಯಿಯಾಗಲು ಒಪ್ಪಿಕೊಂಡರು. ಇಕುಫುಮಿಯ ವೀರ್ಯ ಹಾಗೂ ಅನಾಮಧೇಯ ಮಹಿಳೆಯೊಬ್ಬರ ಅಂಡಾಣುವನ್ನು ಐವಿಎಫ್ ವಿಧಾನದಲ್ಲಿ ಸಂಯೋಗಗೊಳಿಸಿ ಫಲಿತಗೊಂಡ ಭ್ರೂಣವನ್ನು ಪ್ರೀತಿ ಬೆನ್ ಗರ್ಭಾಶಯದಲ್ಲಿ ಇರಿಸಲಾಯಿತು. ೨೦೦೮ರ ಜುಲೈ ತಿಂಗಳಲ್ಲಿ ಆಕೆ ಆರೋಗ್ಯವಂತ ಹೆಣ್ಣುಮಗುವೊಂದಕ್ಕೆ ಜನ್ಮನೀಡಿದರು. ಒಪ್ಪಂದದಂತೆ ಆ ಮಗು ಈಗ ಯಮಡಾ ದಂಪತಿಗಳಿಗೆ ಸೇರಬೇಕು. ಆದರೆ ಪರಿಸ್ಥಿತಿಯ ವಿಪರ್ಯಾಸವೋ ಮಗುವಿನ ದುರದೃಷ್ಟವೋ, ಅದು ಹುಟ್ಟುವ ಒಂದು ತಿಂಗಳು ಮೊದಲಷ್ಟೇ ಯಮಡಾ ದಂಪತಿಗಳಿಗೆ ವಿಚ್ಛೇದನವಾಗಿತ್ತು!

ನಿಜವಾದ ಸಮಸ್ಯೆ ಆರಂಭವಾಗುವುದೇ ಇಲ್ಲಿ. ಒಂದು ಕಡೆ ಮಗುವನ್ನು ಒಂಬತ್ತು ತಿಂಗಳು ಹೊತ್ತ ಬಾಡಿಗೆ ತಾಯಿ, ಇನ್ನೊಂದು ಕಡೆ ಮಗುವನ್ನು ಪಡೆಯಬೇಕಿದ್ದ ವಿಚ್ಛೇದಿತ ತಾಯಿ, ಮತ್ತೊಂದು ಕಡೆ ಅಂಡಾಣು ದಾನ ಮಾಡಿದ್ದ ಅನಾಮಧೇಯ ತಾಯಿ. ಮೂವರು ತಾಯಂದಿರು ಇದ್ದರೂ ನವಜಾತ ಶಿಶು ’ಮಾಂಜಿ’ ತಬ್ಬಲಿಯಾಗಿ ಮಲಗಿದ್ದಳು. ಮಗುವನ್ನು ಹೆತ್ತಲ್ಲಿಗೆ ಬಾಡಿಗೆ ತಾಯಿಯ ಕರ್ತವ್ಯ ಮುಗಿದಿತ್ತು; ಅಂಡಾಣು ದಾನ ಮಾಡಿದ್ದಾಕೆ ಅನಾಮಧೇಯ ಮಹಿಳೆ; ಕಾನೂನು ಪ್ರಕಾರ ಅಮ್ಮ ಆಗಬೇಕಿದ್ದವಳು ವಿಚ್ಛೇದನ ಪಡೆದಿದ್ದಳು.

ತಂದೆ ಇಕುಫುಮಿ ಮಾಂಜಿಯನ್ನು ಜಪಾನಿಗೆ ಒಯ್ಯಲು ತುದಿಗಾಲಲ್ಲಿ ನಿಂತಿದ್ದರು. ಆದರೆ ಕಾನೂನು ಎಲ್ಲದಕ್ಕಿಂತ ದೊಡ್ಡ ತೊಡಕಾಗಿತ್ತು. ಜಪಾನೀ ನಾಗರಿಕ ಸಂಹಿತೆಯ ಪ್ರಕಾರ ಯಾರು ಮಗುವಿಗೆ ಜನ್ಮ ನೀಡುತ್ತಾರೋ ಆಕೆಯೇ ಮಗುವಿನ ತಾಯಿ. ಆದರೆ ಪ್ರೀತಿ ಬೆನ್ ಇಕುಫುಮಿಯ ಹೆಂಡತಿಯಲ್ಲ. ಅಲ್ಲದೆ ಬಾಡಿಗೆ ತಾಯಿಯಿಂದ ಹುಟ್ಟಿದ ಮಗುವಿಗೆ ಜಪಾನಿನ ಪೌರತ್ವ ದೊರೆಯುವುದಿಲ್ಲ. ಹೀಗಾಗಿ ಮಾಂಜಿಗೆ ಜಪಾನಿನ ಪಾಸ್‌ಪೋರ್ಟ್ ದೊರೆಯಲಿಲ್ಲ. ಇಕುಫುಮಿ ಆ ಮಗುವನ್ನು ದತ್ತು ಪಡೆದುಕೊಳ್ಳಬಹುದು. ಆದರೆ ಭಾರತೀಯ ಕಾನೂನಿನ ಪ್ರಕಾರ ಏಕಾಂಗಿ ಪುರುಷ ಮಗುವನ್ನು ದತ್ತು ಪಡೆದುಕೊಳ್ಳುವಂತಿಲ್ಲ. ವಾಸ್ತವವಾಗಿ ಮಾಂಜಿಗೆ ಜನನ ಪ್ರಮಾಣ ಪತ್ರವೇ ಸಿಕ್ಕಿರಲಿಲ್ಲ. ಜನನ ಪ್ರಮಾಣ ಪತ್ರದಲ್ಲಿ ತಂದೆ-ತಾಯಿ ಇಬ್ಬರ ಹೆಸರನ್ನೂ ನಮೂದಿಸುವುದು ಅನಿವಾರ್ಯ. ಮಾಂಜಿಯ ಅಮ್ಮ ಯಾರು?

ಬೇರೆ ದಾರಿ ಕಾಣದೆ ಇಕುಫುಮಿ ಹಿರಿಯ ವಕೀಲೆ ಇಂದಿರಾ ಜೈಸಿಂಗ್ ಸಹಾಯ ಕೋರಿದರು. ಅವರ ಪ್ರಯತ್ನದ ಫಲವಾಗಿ ಮಗುವಿಗೆ ಜನನ ಪ್ರಮಾಣ ಪತ್ರ ಲಭಿಸಿತು. ಅದರಲ್ಲಿ ತಂದೆಯ ಹೆಸರು ಮಾತ್ರ ನಮೂದಾಗಿತ್ತು. ಈ ನಡುವೆ ಇಕುಫುಮಿಯ ವೀಸಾ ಅವಧಿ ಮುಗಿದಿದ್ದರಿಂದ ಕಾನೂನು ಹೋರಾಟ ಮುಂದುವರಿಸಲು ಆತನ ತಾಯಿ (ಮಾಂಜಿಯ ಅಜ್ಜಿ) ಎಮಿಕೊ ಯಮಡಾ ಭಾರತಕ್ಕೆ ಬಂದರು. ಇತ್ತ ಜಪಾನಿ ದಂಪತಿಗೆ ಮಗು ಪಡೆಯಲು ವ್ಯವಸ್ಥೆ ಮಾಡಿದ್ದ ಡಾ. ನಯನ ಪಟೇಲ್ ಮಕ್ಕಳ ಕಳ್ಳಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಸ್ವಯಂಸೇವಾಸಂಸ್ಥೆಯೊಂದು ಆರೋಪಿಸಿತು. ಅಂತೂ ಪ್ರಕರಣ ಸರ್ವೋಚ್ಛ ನ್ಯಾಯಾಲಯದ ಮೆಟ್ಟಿಲೇರಿತು. ಮಗುವಿನ ಪರವಾಗಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ಮಗುವನ್ನು ಅಜ್ಜಿಯ ವಶಕ್ಕೆ ನೀಡಬಹುದು ಎಂದಿತಲ್ಲದೆ, ಮಾಂಜಿಗೆ ಪಾಸ್‌ಪೋರ್ಟ್ ಕೊಡುವ ವಿಚಾರ ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟದ್ದು ಎಂದಿತು. ಕೊನೆಗೂ ಪಾಸ್‌ಪೋರ್ಟ್ ಕಚೇರಿಯಿಂದ ಮಾಂಜಿಗೆ ಗುರುತು ಪತ್ರವೂ, ಜಪಾನೀ ರಾಯಭಾರ ಕಛೇರಿಯಿಂದ ವೀಸಾವೂ ದೊರೆಯಿತು. ಅಲ್ಲಿಗೆ ಭಾರತದ 'ಬೇಬಿ ಎಂ ಪ್ರಕರಣ’ ಒಂದು ಬಗೆಯ ಮುಕ್ತಾಯ ಕಂಡಿತು.

***

'ಬಾಡಿಗೆ ತಾಯ್ತನ’ ಎಂಬ ಆಕರ್ಷಕ ಪದಪುಂಜದೊಳಗಿರುವ ಸಂಕೀರ್ಣತೆಯ ವಿಶ್ವರೂಪ ದರ್ಶನಕ್ಕೆ ಬಹುಶಃ ಈ ಎರಡು 'ಬೇಬಿ ಎಂ’ ಪ್ರಕರಣಗಳು ಧಾರಾಳ ಸಾಕು. ಬಾಡಿಗೆ ತಾಯ್ತನ ಎಂಬುದು ಕೇವಲ ಒಂದು ಕೌಟುಂಬಿಕ ಅಥವಾ ಸಾಮಾಜಿಕ ವಿಚಾರ ಅಲ್ಲ, ಅದು ಭಾವನಾತ್ಮಕ, ನೈತಿಕ, ಧಾರ್ಮಿಕ, ಕಾನೂನಾತ್ಮಕ, ಆರ್ಥಿಕ ಹಾಗೂ ಆರೋಗ್ಯ ಸಂಬಂಧೀ ಅನೇಕ ವಿಚಾರಗಳನ್ನು ಒಳಗೊಂಡ ಒಂದು ಬಹುದೊಡ್ಡ ಸಂಕೀರ್ಣ ಸಂಗತಿ.

ಕಳೆದ ನಲುವತ್ತು ವರ್ಷಗಳ ಬಾಡಿಗೆ ತಾಯ್ತನದ ಇತಿಹಾಸ ಕೆದಕಿದರೆ ಇಂತ ಹತ್ತಾರು ಪ್ರಕರಣಗಳು ನಮ್ಮೆದುರು ತೆರೆದುಕೊಳ್ಳುತ್ತಲೇ ಹೋಗುತ್ತವೆ. ಭಾರತವೂ ಒಳಗೊಂಡಂತೆ ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಇಂತಹ ಪ್ರಕರಣಗಳು ನಡೆದುಹೋಗಿವೆ. ಪ್ರತೀ ಪ್ರಕರಣ ನಡೆದಾಗಲೂ ಆಯಾ ದೇಶ ಹೊಸಹೊಸ ಪಾಠಗಳನ್ನು ಕಲಿಯುತ್ತಲೇ ಇದೆ. ಅನೇಕ ದೇಶಗಳು ಇನ್ನಷ್ಟು ಅಪಾಯಗಳನ್ನು ತಡೆಯುವ ನಿಟ್ಟಿನಿಂದ ಸೂಕ್ತ ತಯಾರಿಗಳನ್ನು ಮಾಡಿಕೊಂಡಿವೆ. ದುರದೃಷ್ಟವಶಾತ್, ಬಾಡಿಗೆ ತಾಯ್ತನದ ರಾಜಧಾನಿಯೆಂಬ ಕುಖ್ಯಾತಿಗೆ ಒಳಗಾಗಿರುವ ಭಾರತ ಮಾತ್ರ ಇನ್ನೂ ಗೊಂದಲದಲ್ಲೇ ಮುಳುಗಿದೆ.

ಏನಿದು ಬಾಡಿಗೆ ತಾಯ್ತನ?
ನಾವು ಮನೆ ಬಾಡಿಗೆಗೆ ನೀಡುವುದು ಕೇಳಿದ್ದೇವೆ, ವಾಹನ ಬಾಡಿಗೆಗೆ ನೀಡುವುದು ಕೇಳಿದ್ದೇವೆ; ಇದೇನು ತಾಯ್ತನವೂ ಬಾಡಿಗೆಗೆ ದೊರೆಯುವ ಕಾಲ ಬಂತಾ ಎಂದು ಅಚ್ಚರಿಯಾಗದೆ ಇರದು. ಹೌದು, ತಾಯ್ತನವೂ ಒಂದು ಧಂಧೆಯಾಗಿರುವ ವಿಚಿತ್ರ ಪ್ರಪಂಚದಲ್ಲಿ ನಾವೆಲ್ಲ ಬದುಕುತಿದ್ದೇವೆ. ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳಲ್ಲಿ ಹೊಸಹೊಸ ಸಂಶೋಧನೆಗಳಾಗುತ್ತಿದ್ದಂತೆ ಜಗತ್ತಿನ ಅಭ್ಯುದಯದ ಹೊಸಹೊಸ ಆಯಾಮಗಳು ತೆರೆದುಕೊಂಡವು ಎಂದೇ ಸಾಮಾನ್ಯವಾಗಿ ಭಾವಿಸಲಾಗುತ್ತದೆ. ವೈದ್ಯಕೀಯ ಕ್ಷೇತ್ರದಲ್ಲಾಗಿರುವ ಅನೇಕ ಸಂಶೋಧನೆಗಳು ಕೂಡ ಕ್ರಾಂತಿಕಾರಕ ಎನಿಸಿದವು. ಅದರಲ್ಲೂ ಪ್ರಜನನ ವಿಜ್ಞಾನದಲ್ಲಿ ಆಗಿರುವ ಹೊಸ ಬೆಳವಣಿಗೆಗಳಿಂದ ಸಾವಿರಾರು ಮಂದಿ ಸಮಾಧಾನದ ನಿಟ್ಟುಸಿರು ಬಿಟ್ಟಿದ್ದಾರೆ. ಹತ್ತಾರು ವರ್ಷ ಮಕ್ಕಳಾದೆ ಕೊರಗಿದವರು ಸಂತಾನ ಭಾಗ್ಯ ಪಡೆದು ಸಂತೋಷಪಟ್ಟಿದ್ದಾರೆ.

ಆದರೆ ಸಮಸ್ಯೆಗಳು ಆರಂಭವಾಗುವುದು ಮನುಷ್ಯ ಪ್ರಕೃತಿಯ ವಿರುದ್ಧ ಹೋದಾಗ. ಮನುಕುಲದ ಒಳಿತಿಗಾಗಿ ಒಂದಷ್ಟು ಕೃತಕ ವಿಧಾನಗಳ ಮೊರೆಹೋಗುವುದು ಇದ್ದದ್ದೇ. ಆದರೆ ತನ್ನ ಮಿತಿಗಳನ್ನು ದಾಟಿ ಮನುಷ್ಯ ತಾನೇ ಪ್ರಕೃತಿಯಾಗಹೊರಟಾಗ ಅಥವಾ ಪ್ರಕೃತಿಯ ಮೇಲೆ ಆಧಿಪತ್ಯ ಸಾಧಿಸಹೊರಟಾಗ ಪರಿಸ್ಥಿತಿ ಹದಗೆಡುತ್ತದೆ; ಅದಕ್ಕೆ ತಕ್ಕ ಪ್ರತಿಫಲಗಳನ್ನು ಉಣ್ಣಬೇಕಾಗುತ್ತದೆ. ಸಂತಾನೋತ್ಪತ್ತಿಯಂತಹ ತೀರಾ ಖಾಸಗಿ ವಿಚಾರಗಳು ಬಯಲಿಗೆ ಬಂದಾಗ, ಅವೇ ಒಂದು ವಾಣಿಜ್ಯಾತ್ಮಕ ದಂಧೆಗಳಾಗಿ ಬದಲಾದಾಗ ಸಮಾಜ ಅದಕ್ಕೆ ಸೂಕ್ತ ಬೆಲೆ ತೆರುವುದು ಅನಿವಾರ್ಯವಾಗುತ್ತದೆ.
ಬಾಡಿಗೆ ತಾಯ್ತನದ ಪರಿಕಲ್ಪನೆಯನ್ನು ತಾಂತ್ರಿಕವಾಗಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸೋಣ. ಹೆಸರೇ ಹೇಳುವಂತೆ ಇದು ಇನ್ನೊಬ್ಬರಿಗಾಗಿ ಮಗುವನ್ನು ಹೆತ್ತುಕೊಡುವ ಒಂದು ವ್ಯವಸ್ಥೆ. ಇಂಗ್ಲಿಷಿನಲ್ಲಿ ಇದಕ್ಕೆ 'ಸರೋಗಸಿ’ ಅಥವಾ 'ಸರೋಗೇಟ್ ಮದರ್‌ಹುಡ್’ ಎಂಬ ಪದಗಳು ಚಾಲ್ತಿಯಲ್ಲಿವೆ. ಇದರಲ್ಲಿ ಪ್ರಮುಖವಾಗಿ ಎರಡು ವಿಧ: ಮೊದಲನೆಯದು, ಟ್ರೆಡಿಶನಲ್ ಸರೋಗಸಿ (traditional surrogacy) ಅಥವಾ ಸಾಂಪ್ರದಾಯಿಕ ಇಲ್ಲವೇ ಆಂಶಿಕ ಬಾಡಿಗೆ ತಾಯ್ತನ; ಎರಡನೆಯದು, ಜೆಸ್ಟೇಶನಲ್ ಸರೋಗಸಿ (gestational surrogacy) ಅಥವಾ ಸಂಪೂರ್ಣ/ನೇರ ಬಾಡಿಗೆ ತಾಯ್ತನ.

ಮೊದಲನೆಯದರಲ್ಲಿ, ಸಂತಾನ ಪಡೆಯಲಿಚ್ಛಿಸುವವರ ಪೈಕಿ ತಂದೆಯ ವೀರ್ಯವನ್ನು ಮಹಿಳೆಯೊಬ್ಬರ ಗರ್ಭದಲ್ಲಿ ಕೃತಕ ವಿಧಾನದಿಂದ ಇರಿಸಿ ಆಕೆ ಗರ್ಭವತಿಯಾಗುವಂತೆ ಮಾಡಿ ಮಗುವನ್ನು ಪಡೆಯಲಾಗುತ್ತದೆ. ಕೆಲವೊಮ್ಮೆ ದಾನಿಯ ವೀರ‍್ಯವನ್ನೂ ಪಡೆದಿರಬಹುದು. ಇಲ್ಲಿ ಗರ್ಭಕಟ್ಟಲು ಬೇಕಾಗುವ ಅಂಡಾಣು ಮಗುವನ್ನು ಹೆತ್ತುಕೊಡಲು ಒಪ್ಪಿರುವ ಮಹಿಳೆಯದ್ದೇ ಆಗಿರುವುದರಿಂದ ಆಕೆಗೂ ಮಗುವಿಗೂ ಜೈವಿಕ ಸಂಬಂಧ ಇರುತ್ತದೆ. ಆದರೆ ಕಾನೂನಿನ ಪ್ರಕಾರ ಆಕೆ ತಾಯಿ ಅಲ್ಲ, ಬಾಡಿಗೆ ತಾಯಿ ಮಾತ್ರ.

ಎರಡನೆಯದರಲ್ಲಿ, ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ವಿಧಾನದಿಂದ ಉತ್ಪಾದನೆಗೊಂಡ ಭ್ರೂಣವನ್ನು ಮಹಿಳೆಯ ಗರ್ಭದಲ್ಲಿರಿಸಿ ಅವಳಿಂದ ಮಗುವನ್ನು ಪಡೆಯಲಾಗುತ್ತದೆ. ಇದನ್ನು ನಾಲ್ಕು ರೀತಿಯಲ್ಲಿ ಮಾಡುವ ಅವಕಾಶ ಇದೆ: ಒಂದು, ಸಂತಾನವನ್ನು ಪಡೆಯಲಿಚ್ಛಿಸುವ ದಂಪತಿಗಳದೇ ವೀರ‍್ಯ ಹಾಗೂ ಅಂಡಾಣುಗಳನ್ನು ಕೃತಕ ವ್ಯವಸ್ಥೆಯಲ್ಲಿ ಫಲಿತಗೊಳಿಸಿ, ಭ್ರೂಣವನ್ನು ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು; ಎರಡು, ತಂದೆಯ ವೀರ‍್ಯ ಹಾಗೂ ಯಾರಾದರೂ ದಾನಿಯ ಅಂಡಾಣುವನ್ನು ಫಲಿತಗೊಳಿಸಿ ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು; ಮೂರು, ಯಾರಾದರೂ ದಾನಿಯ ವೀರ‍್ಯ ಹಾಗೂ ಸಂತಾನ ಬಯಸುವ ತಾಯಿಯ ಅಂಡಾಣುವನ್ನು ಫಲಿತಗೊಳಿಸಿ ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು; ನಾಲ್ಕು, ವೀರ‍್ಯ ಹಾಗೂ ಅಂಡಾಣು ಎರಡನ್ನೂ ದಾನವಾಗಿ ಪಡೆದು ಫಲಿತಗೊಳಿಸಿ ಬಾಡಿಗೆ ತಾಯಿಯ ಗರ್ಭದಲ್ಲಿರಿಸುವುದು. ಈ ನಾಲ್ಕೂ ಸಂದರ್ಭಗಳಲ್ಲಿ, ಮಗುವಿಗೂ ಅದನ್ನು ಹೆತ್ತುಕೊಡುವ ಮಹಿಳೆಗೂ ಜೈವಿಕ ಸಂಬಂಧ ಇರುವುದಿಲ್ಲ. ಏಕೆಂದರೆ ಇಲ್ಲಿ ಬಳಕೆಯಾಗುವ ಅಂಡಾಣು ಆಕೆಯದಲ್ಲ. ಅವಳು ಬಾಡಿಗೆ ತಾಯಿ ಮಾತ್ರ. ಅವಳನ್ನು ಮಾನವ ಇನ್‌ಕ್ಯುಬೇಟರ್ ಎಂದು ಕರೆದರೆ ತೀರಾ ನಿರ್ದಯವಾದೀತೋ ಏನೋ? ಆದರೆ ಅದೇ ನಿಜ.

ಈ ವ್ಯವಸ್ಥೆಯನ್ನು 'ವಾಣಿಜ್ಯಾತ್ಮ ಬಾಡಿಗೆ ತಾಯ್ತನ’ (commercial surrogacy) ಹಾಗೂ 'ನೈತಿಕ ಬಾಡಿಗೆ ತಾಯ್ತನ’ (altruistic surrogacy) ಎಂದು ವಿಂಗಡಿಸುವ ಪದ್ಧತಿಯೂ ಇದೆ. ಮೊದಲನೆಯದರಲ್ಲಿ, ಮಗುವನ್ನು ಹೆತ್ತುಕೊಡುವವಳು ತನ್ನ ಸೇವೆಗೆ ಪ್ರತಿಯಾಗಿ ನಿರ್ದಿಷ್ಟ ಹಣ ಪಡೆಯುತ್ತಾಳೆ. ಎರಡನೆಯದರಲ್ಲಿ ಹಣಕಾಸಿನ ವ್ಯವಹಾರ ಇರುವುದಿಲ್ಲ. ಇದು ಪೂರ್ತಿ ಸೇವಾ ಮನೋಭಾವದಿಂದ ಒಪ್ಪಿಕೊಳ್ಳುವ ಕೆಲಸ. ಈ ವ್ಯವಸ್ಥೆ ಸಾಮಾನ್ಯವಾಗಿ ಹತ್ತಿರದ ಸಂಬಂಧಿಗಳ ನಡುವೆ ನಡೆಯುತ್ತದೆ.

ಪ್ರಣಾಳಶಿಶುವಿನಿಂದ ತೊಡಗಿ...
ಪ್ರಣಾಳಶಿಶು ತಂತ್ರಜ್ಞಾನದ (IVF) ಅನ್ವೇಷಣೆಯೇ ಬಾಡಿಗೆ ತಾಯ್ತನದ ಮೂಲ. ೧೯೭೮ರ ಜುಲೈ ತಿಂಗಳಲ್ಲಿ ಇಂಗ್ಲೆಂಡಿನಲ್ಲಿ ಜನಿಸಿದ ಲೂಯಿ ಬ್ರೌನ್ ಎಂಬ ಹೆಣ್ಣು ಮಗುವೇ ಪ್ರಪಂಚದ ಮೊತ್ತಮೊದಲ ಪ್ರಣಾಳಶಿಶು. ಈ ಸಂಶೋಧನೆಗಾಗಿ ವಿಜ್ಞಾನಿ ರಾಬರ್ಟ್ಸ್ ಎಡ್ವರ್ಡ್‌ಗೆ ೨೦೧೦ರಲ್ಲಿ ನೊಬೆಲ್ ಪುರಸ್ಕಾರವೂ ಸಂದಿತು. ಐವಿಎಫ್ ತಂತ್ರಜ್ಞಾನದ ಪ್ರಕಾರ, ಮಹಿಳೆಯಿಂದ ಸಂಗ್ರಹಿಸಿದ ಅಂಡಾಣುವನ್ನೂ ಪುರುಷನಿಂದ ಸಂಗ್ರಹಿಸಿದ ವೀರ್ಯವನ್ನೂ ಕೃತಕ ವ್ಯವಸ್ಥೆಯಲ್ಲಿ ಸಂಯೋಗಗೊಳಿಸಿ ಅವು ಫಲಿತಗೊಂಡ ನಂತರ ಕೃತಕ ವಿಧಾನದಿಂದ ಮಹಿಳೆಯ ಗರ್ಭಾಶಯದಲ್ಲಿ ಇರಿಸಲಾಗುತ್ತದೆ.

ಜಗತ್ತಿನ ಎರಡನೇ ಪ್ರಣಾಳಶಿಶುವನ್ನು ಪಡೆದ ಹೆಗ್ಗಳಿಕೆ ಭಾರತದ್ದು. ಲೂಯಿ ಬ್ರೌನ್ ಹುಟ್ಟಿದ ಎರಡೇ ತಿಂಗಳಲ್ಲಿ ಅಂದರೆ ೧೯೭೮ರ ಅಕ್ಟೋಬರಿನಲ್ಲಿ ಕಲ್ಕತ್ತಾದಲ್ಲಿ ಕನುಪ್ರಿಯಾ ಅಗರ್‌ವಾಲ್ ಅಥವಾ ದುರ್ಗಾಳ ಜನನವಾಯಿತು. (ಆದರೆ ಸರ್ಕಾರ ಇಂದಿಗೂ ಇದನ್ನು ಅಧಿಕೃತ ಎಂದು ಒಪ್ಪಿಕೊಂಡಿಲ್ಲ. ಅನೇಕ ಮೂಲಗಳು ೧೯೮೬ರಲ್ಲಿ ಮುಂಬೈಯಲ್ಲಿ ಜನಿಸಿದ ಹರ್ಷಾ ಎಂಬ ಹೆಣ್ಣುಮಗುವೇ ಭಾರತದ ಮೊದಲ ಪ್ರಣಾಳಶಿಶು ಎಂದು ದಾಖಲಿಸುತ್ತವೆ.)

ಪತಿಯಲ್ಲೋ ಪತ್ನಿಯಲ್ಲೋ ಇರುವ ದೈಹಿಕ ನ್ಯೂನತೆಗಳಿಂದಾಗಿ ಗರ್ಭಧಾರಣೆ ಅಸಾಧ್ಯವಾಗಿ ಬಂಜೆತನದ ಕೊರಗಿನಲ್ಲಿ ಜೀವನ ಕಳೆಯಬೇಕಾಗಿದ್ದ ದಂಪತಿಗಳಿಗೆ ಐವಿಎಫ್ ತಂತ್ರಜ್ಞಾನ ಒಂದು ವರವಾಗಿ ಪರಿಣಮಿಸಿತು. ಇದರ ನೆರವು ಪಡೆದು ೧೯೭೮ರಿಂದೀಚೆಗೆ ಜಗತ್ತಿನಾದ್ಯಂತ ನಾಲ್ಕು ಮಿಲಿಯನ್‌ಗೂ ಹೆಚ್ಚು ದಂಪತಿಗಳು ಸಂತಾನಭಾಗ್ಯ ಪಡೆದಿದ್ದಾರೆ. ಈ ತಂತ್ರಜ್ಞಾನದ ಅನ್ವೇಷಣೆಯೂ ಎಲ್ಲೆಡೆ ಸಾಕಷ್ಟು ಚರ್ಚೆಗಳಿಗೆ ಕಾರಣವಾಯಿತಾದರೂ ವೈದ್ಯಕೀಯ ವಿಜ್ಞಾನದಲ್ಲಿ ಇದೊಂದು ಕ್ರಾಂತಿಕಾರಕ ಬೆಳವಣಿಗೆ ಆಗಿತ್ತು; ಬಾಹ್ಯನೆರವಿನ ಪ್ರಜನನ ತಂತ್ರಜ್ಞಾನ (assisted reproductive technology - ART) ಕ್ಷೇತ್ರದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿತ್ತು. ಮಾನವ ದೇಹದಿಂದ ಹೊರಗೆ ನಡೆಸುವ ಜೀವಸೃಷ್ಟಿ ಪ್ರಕ್ರಿಯೆಯ ಅಸ್ವಾಭಾವಿಕತೆ ಹಾಗೂ ಅದರೊಂದಿಗೆ ತಲೆದೋರಬಹುದಾದ ಆರೋಗ್ಯದ ಸಮಸ್ಯೆಗಳಷ್ಟೇ ಐವಿಎಫ್ ಬಗೆಗಿನ ಚರ್ಚೆಯ ವಿಷಯಗಳಾಗಿದ್ದವು. ಆದರೆ ಇದರ ಮುಂದುವರಿದ ಭಾಗವಾಗಿ ಬಂದಿರುವ ಬಾಡಿಗೆ ತಾಯ್ತನದ ಪರಿಕಲ್ಪನೆ ಮಾತ್ರ ಇಡೀ ಮನುಕುಲದ ಎದುರು ಹೊಸ ಆತಂಕಗಳನ್ನು ತೆರೆದಿಟ್ಟಿದೆ.

ಬಾಡಿಗೆ ತಾಯ್ತನದ ರಾಜಧಾನಿ
ಯಾವ ಭಾರತ ಪ್ರಣಾಳಶಿಶು ತಂತ್ರಜ್ಞಾನವೂ ಸೇರಿದಂತೆ ಸಂತಾನೋತ್ಪತ್ತಿಗೆ ಸಂಬಂಧಿಸಿದ ಒಟ್ಟಾರೆ ವೈದ್ಯವಿಜ್ಞಾನಕ್ಕೆ ಮಹತ್ತರ ಕೊಡುಗೆ ನೀಡಿತೋ ಅದೇ ಭಾರತ ಇಂದು ಬಾಡಿಗೆ ತಾಯ್ತನದ ರಾಜಧಾನಿ ಎಂಬ ಕುಖ್ಯಾತಿ ಗಳಿಸಿರುವುದು ಒಂದು ವಿಪರ್ಯಾಸವಲ್ಲದೆ ಇನ್ನೇನೂ ಅಲ್ಲ. ಜಗತ್ತಿನ ಬೇರೆಬೇರೆ ದೇಶಗಳ ಮಂದಿ ಇಂದು ಬಾಡಿಗೆ ತಾಯಂದಿರನ್ನು ಹುಡುಕಿಕೊಂಡು ನಮ್ಮ ದೇಶಕ್ಕೆ ಸಾಲುಗಟ್ಟಿ ಬರುತ್ತಿದ್ದಾರೆ ಎಂಬುದು ನಮಗೆ ಹೆಮ್ಮೆಯ ವಿಷಯವೇ?

ವಿಶ್ವಸಂಸ್ಥೆಯ ಅಂಕಿ ಅಂಶಗಳ ಪ್ರಕಾರ, ಭಾರತದಲ್ಲಿ ಪ್ರಸ್ತುತ ೩,೦೦೦ಕ್ಕೂ ಹೆಚ್ಚು ಪ್ರಜನನ ಸಂಬಂಧೀ ಚಿಕಿತ್ಸಾಲಯಗಳು ಕಾರ್ಯನಿರ್ವಹಿಸುತ್ತಿದ್ದು, ಬಾಡಿಗೆ ತಾಯ್ತನವೆಂಬುದು ವಾರ್ಷಿಕ ಸುಮಾರು ಮೂರು ಸಾವಿರ ಕೋಟಿ ರೂ.ಗಳಿಗೂ ಹೆಚ್ಚಿನ ವಹಿವಾಟು ಹೊಂದಿರುವ ಒಂದು ಬೃಹತ್ ಉದ್ಯಮ. ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತೇ ಸ್ವತಃ ೧,೨೦೦ ಪ್ರಣಾಳಶಿಶು ಚಿಕಿತ್ಸಾ ಕೇಂದ್ರಗಳನ್ನು ಪಟ್ಟಿ ಮಾಡಿದೆ.  ಒಂದು ಕಾಲಕ್ಕೆ ಭಾರತದ ಕ್ಷೀರಕ್ರಾಂತಿಯ ರಾಜಧಾನಿಯಾಗಿ ವಿಶ್ವದ ಗಮನ ಸೆಳೆದಿದ್ದ ಗುಜರಾತಿನ ಆನಂದ್ ಇಂದು ಅತಿಹೆಚ್ಚು ಬಾಡಿಗೆ ತಾಯಂದಿರ ತವರುನೆಲವಾಗಿ ಮಾರ್ಪಟ್ಟಿರುವುದು ದುರಂತವಲ್ಲದೆ ಇನ್ನೇನೂ ಅಲ್ಲ. ಗುಜರಾತ್ ಅಷ್ಟೇ ಅಲ್ಲದೆ ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರಿನಂತಹ ಮಹಾನಗರಗಳು ಇಂದು ಅತಿಹೆಚ್ಚು ವಿದೇಶೀ ದಂಪತಿಗಳನ್ನು ಆಕರ್ಷಿಸುತ್ತಿವೆ.

ಕುತೂಹಲದ ಸಂಗತಿಯೆಂದರೆ ವೈದ್ಯವಿಜ್ಞಾನದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿರುವ ಅಮೇರಿಕ, ಇಂಗ್ಲೆಂಡ್, ಆಸ್ಟ್ರೇಲಿಯಾದಂತಹ ಶ್ರೀಮಂತ ರಾಷ್ಟ್ರಗಳಿಗಿಂತ ಭಾರತ, ಥಾಲೆಂಡ್, ಜಾರ್ಜಿಯಾ, ಉಕ್ರೇನ್‌ನಂತಹ ಅಭಿವೃದ್ಧಿಶೀಲ ದೇಶಗಳೇ ಬಾಡಿಗೆ ತಾಯಂದಿರನ್ನು ಅರಸಿ ಬರುವವರ ಪ್ರೀತಿಯ ತಾಣಗಳಾಗಿವೆ. ಇಸ್ರೇಲಿನಲ್ಲಂತೂ ಜಗತ್ತಿನಲ್ಲೇ ಅತಿಹೆಚ್ಚು ಐವಿಎಫ್ ಕ್ಲಿನಿಕ್‌ಗಳಿವೆ. ಹಾಗೆ ನೋಡಿದರೆ ಭಾರತಕ್ಕೆ ಈ ಉದ್ದೇಶಕ್ಕೆ ಭೇಟಿ ನೀಡುವವರ ಪೈಕಿ ಈ ಶ್ರೀಮಂತ ದೇಶಗಳ ಪ್ರಜೆಗಳೇ ಅಧಿಕ. ಒಂದು ಅಧ್ಯಯನದ ಪ್ರಕಾರ ಐವಿಎಫ್ ಚಿಕಿತ್ಸೆಯನ್ನು ಬಯಸುವ ಅಮೇರಿಕದ ಶೇ. ೪೦ ಮಹಿಳೆಯರೂ ಆಯ್ಕೆ ಮಾಡಿಕೊಳ್ಳುವುದು ಭಾರತವನ್ನೇ.

ಇದಕ್ಕೆ ಪ್ರಮುಖ ಕಾರಣ, ವಿದೇಶಗಳಿಗೆ ಹೋಲಿಸಿದರೆ ಪ್ರಣಾಳಶಿಶು ಚಿಕಿತ್ಸೆಯಾಗಲೀ ಬಾಡಿಗೆ ತಾಯಂದಿರ ಸೌಲಭ್ಯವಾಗಲೀ ತುಂಬ ಅಗ್ಗವಾಗಿ ದೊರೆಯುವುದು ನಮ್ಮಲ್ಲೇ. ಒಂದು ಪ್ರಣಾಳಶಿಶು ಚಿಕಿತ್ಸೆಗೆ ಇಂದು ಅಮೇರಿಕದಲ್ಲಿ ತಗಲುವ ವೆಚ್ಚ ಬರೋಬ್ಬರಿ ಹತ್ತು ಲಕ್ಷ ರೂಪಾಯಿ; ಅದೇ ಥಾಲೆಂಡ್‌ನಲ್ಲಾದರೆ ನಾಲ್ಕೂವರೆ ಲಕ್ಷ ರೂಪಾಯಿ; ಭಾರತದಲ್ಲಿ ಕೇವಲ ಎರಡು ಲಕ್ಷ ರೂಪಾಯಿ. ಬಾಡಿಗೆ ತಾಯಂದಿರನ್ನು ಹುಡುಕಿ ಬರುವವರ ಪ್ರಮುಖ ಗುರಿಯೂ ಬಡವರ್ಗದ ಮಹಿಳೆಯರೇ. ಏಕೆಂದರೆ ಅವರು ಕಡಿಮೆ ಖರ್ಚಿನಲ್ಲಿ ಲಭ್ಯವಾಗುತ್ತಾರೆ. ಅಮೇರಿಕದಲ್ಲಿ ಬಾಡಿಗೆ ತಾಯಿ ಸೌಲಭ್ಯ ಪಡೆದುಕೊಳ್ಳಲು ಏನಿಲ್ಲವೆಂದರೂ ೫೦ ಲಕ್ಷ ರೂಪಾಯಿ ಖರ್ಚು ಮಾಡಬೇಕು, ಭಾರತದಲ್ಲಿ ಅದರ ಅರ್ಧದಷ್ಟು ಕೂಡ ಖರ್ಚಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಲ್ಲಿ ಕಾನೂನಿನ ತೂಗುಗತ್ತಿಯಿಲ್ಲ. ಜಗತ್ತಿನ ಅನೇಕ ದೇಶಗಳು ಬಾಡಿಗೆ ತಾಯ್ತನವನ್ನು ಸಂಪೂರ್ಣವಾಗಿ ಇಲ್ಲವೇ ಭಾಗಶಃ ನಿಷೇಧಿಸಿವೆ; ಇನ್ನೂ ಅನೇಕ ದೇಶಗಳು ಅದನ್ನು ನಿಯಂತ್ರಿಸುವ ಕಠಿಣ ಕಾನೂನುಗಳನ್ನು ಜಾರಿಗೆ ತಂದಿವೆ. ಭಾರತದಲ್ಲಿ ಈಗಷ್ಟೇ ಈ ಬಗ್ಗೆ ಗಂಭೀರ ಚರ್ಚೆ ಆರಂಭವಾಗುತ್ತಿದೆ.

ಶೋಷಣೆಯ ಹೊಸರೂಪ
ಬಾಡಿಗೆ ತಾಯ್ತನವೆಂಬುದು ಸ್ತ್ರೀ ಸಬಲೀಕರಣದತ್ತ ಒಂದು ಪ್ರಮುಖ ಹೆಜ್ಜೆ ಎಂದು ವ್ಯಾಖ್ಯಾನಿಸುವ, ಅದು ಜನರ ಕುಟುಂಬ ರಚನೆಯ ಹಕ್ಕಿನ ಒಂದು ಭಾಗ ಎಂದು ಪ್ರತಿಪಾದಿಸುವ ಒಂದಷ್ಟು ಮಂದಿ ನಮಗೆ ಸಿಗುತ್ತಾರೆ. ಆದರೆ ಈ ಪರಿಕಲ್ಪನೆಯ ಹಿಂದಿನ ಶೋಷಣೆಯ ಕರಾಳತೆಯ ಬಗ್ಗೆ ಮಾತ್ರ ಅವರು ತಮ್ಮ ಕಣ್ಣು-ಕಿವಿಗಳನ್ನು ತೆರೆಯುವುದೇ ಇಲ್ಲ. ಸ್ತ್ರೀಸಬಲೀಕರಣದ ಬಗ್ಗೆ ಭಾಷಣ ಮಾಡುವವರ ಪೈಕಿ ಎಷ್ಟು ಮಂದಿ ಬಾಡಿಗೆ ತಾಯಂದಿರಾಗಿ ಕಾರ್ಯನಿರ್ವಹಿಸಲು ಸಿದ್ಧರಿದ್ದಾರೆ ಎಂಬ ಬಗ್ಗೆ ಒಂದು ಸಮೀಕ್ಷೆ ನಡೆಸಿದರೆ ಅಸಲಿಯತ್ತು ಈಚೆ ಬಂದೀತು.

ಈಗಾಗಲೇ ಹೇಳಿರುವಂತೆ, ಬಾಡಿಗೆ ತಾಯ್ತನದ ವ್ಯೂಹದಲ್ಲಿ ಸಿಲುಕಿಕೊಳ್ಳುವವರು ಬಡಮಹಿಳೆಯರು. ಭಾರತದಲ್ಲಂತೂ ಈ ಕೆಲಸಕ್ಕೆ ಮುಂದೆ ಬರುವವರು ಬಹುಪಾಲು ಗಾರ್ಮೆಂಟ್ ಉದ್ಯೋಗಿಗಳು ಅಥವಾ ಅಂತಹದೇ ಬೇರೆ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡಿರುವುದು. ಅವರಿಗಿರುವುದು ಹಣದ ಅವಶ್ಯಕತೆಯೇ ಹೊರತು ಬೇರೇನಲ್ಲ. ರಾಷ್ಟ್ರಮಟ್ಟದ ಆಂಗ್ಲ ನಿಯತಕಾಲಿಕವೊಂದು ನಡೆಸಿದ ಸಮೀಕ್ಷೆಯ ಪ್ರಕಾರ ಬಾಡಿಗೆ ತಾಯಂದಿರಾಗಿ ಕೆಲಸ ಮಾಡಿದ ಬಹುಪಾಲು ಮಹಿಳೆಯರು ತಮ್ಮ ಕಾರ್ಯವು ಸ್ತ್ರೀವಿಮೋಚನಾ ಆಂದೋಲನದ ಒಂದು ಭಾಗವೆಂದೋ, ಮಾತೃತ್ವವನ್ನು ಎತ್ತಿಹಿಡಿಯುವ ಒಂದು ಹೆಜ್ಜೆಯೆಂದೋ ಭಾವಿಸಿಲ್ಲ. ಬದಲಾಗಿ ತಾವು ಒಪ್ಪಿಕೊಂಡ ಕೆಲಸದ ಬಗ್ಗೆ ಅವರಿಗೆ ಅಪಾರ ನಾಚಿಕೆಯೂ ಮುಜುಗರವೂ ಇತ್ತು.
ಅವರ ಮುಂದಿದ್ದ ಏಕೈಕ ಆಕರ್ಷಣೆ ಹಣದ್ದು ಮಾತ್ರ. ಈ ಹಣದಿಂದಲಾದರೂ ಅವರು ಆರ್ಥಿಕವಾಗಿ ಒಂದಿಷ್ಟು ಸಬಲಾಗುತ್ತಾರೆಯೇ ಎಂದು ನಾವು ನಿರೀಕ್ಷಿಸಿದರೆ ಅದೂ ಸುಳ್ಳು.  ಈ ಪ್ರಕ್ರಿಯೆಯಲ್ಲಿ ಲಕ್ಷಾಂತರ ರೂಪಾಯಿ ವ್ಯವಹಾರವಿದ್ದರೂ ಬಾಡಿಗೆ ತಾಯಿಯಾಗುವ ಬಡಪಾಯಿಗೆ ದೊರೆಯುವುದು ಬಿಡಿಗಾಸು ಮಾತ್ರ. ಉಳಿದೆಲ್ಲ ದುಡ್ಡನ್ನು ನುಂಗಿ ನೀರು ಕುಡಿಯುವವರು ದಲ್ಲಾಳಿಗಳು, ಆಸ್ಪತ್ರೆಗಳು ಮತ್ತು ಕಾನೂನು ಸಲಹೆಗಾರರು.

ಪ್ರಪಂಚದ ಬೇರೆಬೇರೆ ಭಾಗಗಳಲ್ಲಿ ಹಾಗೂ ಭಾರತದಲ್ಲಿ ನಡೆದಿರುವ ಹತ್ತಾರು ಪ್ರಕರಣಗಳು ಬಾಡಿಗೆ ತಾಯ್ತನದ ಜತೆಗಿರುವ ಇನ್ನೂ ಅನೇಕ ಸಮಸ್ಯೆಗಳ ಸಂಕೀರ್ಣತೆಯನ್ನು ನಮಗೆ ಮನದಟ್ಟು ಮಾಡುತ್ತವೆ. ಅಮೇರಿಕದ ಬೇಬಿ ಎಂ ಪ್ರಕರಣ, ಭಾರತದ ಬೇಬಿ ಮಾಂಜಿ ಪ್ರಕರಣಗಳು ಕೇವಲ ಉದಾಹರಣೆಗಳಷ್ಟೇ. ಇಂತಹದೇ ಪ್ರಕರಣವೊಂದರಲ್ಲಿ, ಭಾರತಕ್ಕೆ ಬಂದಿದ್ದ ಜರ್ಮನ್ ದಂಪತಿಗಳ ಮಗುವಿಗೆ ಆ ದೇಶದ ಸರ್ಕಾರ ವೀಸಾ ನಿರಾಕರಿಸಿದ್ದರಿಂದ ಸಮಸ್ಯೆ ಕಗ್ಗಂಟಾಗಿತ್ತು. ಕೊನೆಗೆ ಸರ್ವೋಚ್ಛ ನ್ಯಾಯಾಲಯವೇ ಮಧ್ಯಪ್ರವೇಶಿಸಿ ಪರಿಹಾರ ಸೂಚಿಸಬೇಕಾಯಿತು.

ಮೂರು ವರ್ಷಗಳ ಹಿಂದಷ್ಟೇ ನಡೆದ 'ಬೇಬಿ ದೇವ್’ ಪ್ರಕರಣದಲ್ಲಂತೂ ಬಾಡಿಗೆ ತಾಯ್ತನದ ಇನ್ನೊಂದು ಕರಾಳ ಮುಖದ ದರ್ಶನವಾಯಿತು. ಮಗುವನ್ನು ಪಡೆಯುವ ಉದ್ದೇಶದಿಂದ ಆಸ್ಟ್ರೇಲಿಯಾದ ಇಬ್ಬರು ದಂಪತಿಗಳು ಭಾರತಕ್ಕೆ ಬಂದಿದ್ದರು. ಬಾಡಿಗೆ ತಾಯಿಯಿಂದ ಅವರಿಗೆ ಮಗುವೂ ಲಭಿಸಿತು. ಆದರೆ ಹುಟ್ಟಿದ್ದು ಅವಳಿ ಮಕ್ಕಳು. ಒಂದು ಹೆಣ್ಣು, ಒಂದು ಗಂಡು. ಆಸ್ಟ್ರೇಲಿಯನ್ ದಂಪತಿಗಳು ತಮಗೆ ಬೇಕಾಗಿರುವುದು ಒಂದೇ ಮಗು, ತಾವು ಹಣ ನೀಡುವ ಒಪ್ಪಂದ ಮಾಡಿಕೊಂಡದ್ದೂ ಒಂದೇ ಮಗುವಿಗಾಗಿ ಎನ್ನುತ್ತಾ ಹೆಣ್ಣುಮಗುವನ್ನು ಮಾತ್ರ ಎತ್ತಿಕೊಂಡು ಜಾಗ ಖಾಲಿ ಮಾಡಿದ್ದರು. ಆಸ್ಪತ್ರೆಯಲ್ಲೇ ಉಳಿದಿದ್ದ ಗಂಡುಮಗುವಿನ ಗತಿ ಏನಾಯಿತೆಂದು ಇಂದಿಗೂ ಯಾರಿಗೂ ಗೊತ್ತಿಲ್ಲ!

೨೦೧೩ರಲ್ಲಿ ಥಾಲೆಂಡ್‌ನಲ್ಲಿ ನಡೆದ ಇಂತಹದೇ ಪ್ರಕರಣವೊಂದರಲ್ಲಿ, ಆಸ್ಟ್ರೇಲಿಯಾದ ದಂಪತಿಗಳಿಬ್ಬರು ಬಾಡಿಗೆ ತಾಯಿಯ ಮೂಲಕ ಪಡೆದ ಇಬ್ಬರು ಮಕ್ಕಳಲ್ಲಿ ಒಂದು ಮಗು ಡೌನ್ಸ್ ಸಿಂಡ್ರೋಮಿನಿಂದ ಬಳಲುತ್ತಿರುವುದು ಗೊತ್ತಾಗಿ ಅದನ್ನು ಅಲ್ಲೇ ಬಿಟ್ಟು ಇನ್ನೊಂದು ಆರೋಗ್ಯವಂತ ಮಗುವನ್ನು ಎತ್ತಿಕೊಂಡು ತಮ್ಮ ದೇಶಕ್ಕೆ ಓಡಿಹೋಗಿದ್ದರು. ಅವಳಿ ಮಕ್ಕಳು ತಮಗೆ ಬೇಕಾಗಿಲ್ಲವೆಂದೋ, ಹುಟ್ಟಿದ ಮಗುವಿಗೆ ದೈಹಿಕ ಸಮಸ್ಯೆಯಿದೆಯೆಂದೋ ಅದನ್ನು ನಡುಬೀದಿಯಲ್ಲಿ ಬಿಟ್ಟು ಹೋದರೆ ಹೆತ್ತ ತಾಯಿ ಅದನ್ನು ಏನು ಮಾಡಬೇಕು?

ಕೆಲವು ಪ್ರಕರಣಗಳಲ್ಲಂತೂ ಮಹಿಳೆಗೆ ಅನಿರೀಕ್ಷಿತ ಗರ್ಭಪಾತವಾಗುವುದು, ಅಥವಾ ಬೆಳೆಯುತ್ತಿರುವ ಭ್ರೂಣದಲ್ಲೇ ಯಾವುದೋ ವೈಕಲ್ಯ ಕಂಡುಬಂದು ಒತ್ತಾಯಪೂರ್ವಕ ಗರ್ಭಪಾತ ನಡೆಸುವುದೂ ನಡೆದಿದೆ. ಕೆಲವೊಮ್ಮೆ ಹೆರಿಗೆಯ ವೇಳೆ ಮಗು ಸಾವನ್ನಪ್ಪುವುದು ಇಲ್ಲವೇ ತಾಯಿಯೇ ಸಾವನ್ನಪ್ಪುವುದೂ ಇದೆ. ಈ ಎಲ್ಲದರ ದೈಹಿಕ, ಮಾನಸಿಕ ಪರಿಣಾಮಗಳಿಗೆ ಯಾರು ಹೊಣೆ? ಒಪ್ಪಂದದ ಪ್ರಕಾರ ಮಗುವನ್ನು ಹೆತ್ತುಕೊಟ್ಟರೆ ಮಾತ್ರ ಬಾಡಿಗೆ ತಾಯಿ ಸಂಭಾವನೆ ಪಡೆಯುತ್ತಾಳೆ. ಅಂದುಕೊಂಡಂತೆ ನಡೆಯದೇ ಹೋದರೆ ಆಕೆಯ ನೆರವಿಗೆ ಬರುವವರು ಯಾರು?

ನಿಯಂತ್ರಣವೇ? ನಿಷೇಧವೇ?
ಸರೋಗಸಿಯ ಗಂಭೀರತೆಯನ್ನು ಜಗತ್ತಿನ ಬಹುತೇಕ ರಾಷ್ಟ್ರಗಳು ಅರ್ಥಮಾಡಿಕೊಂಡು ತಮ್ಮದೇ ನಿರ್ಧಾರಗಳನ್ನು ಕೈಗೊಂಡಿವೆ. ಕ್ಯಾಲಿಫೋರ್ನಿಯಾ, ಇಲಿನಾಯ್ಸ್, ಮೇರಿಲ್ಯಾಂಡ್‌ನಂತಹ ಕೆಲವು ರಾಜ್ಯಗಳನ್ನು ಹೊರತುಪಡಿಸಿ ಅಮೇರಿಕ ಸಂಯುಕ್ತ ಸಂಸ್ಥಾನದ ಉಳಿದೆಲ್ಲ ರಾಜ್ಯಗಳು ಸರೋಗಸಿ ಸಂಬಂಧ ಕಾನೂನುಗಳನ್ನು ರೂಪಿಸಿವೆ. ಇಂಗ್ಲೆಂಡ್, ನ್ಯೂಜಿಲೆಂಡ್, ಕೆನಡಾ, ಆಸ್ಟ್ರೇಲಿಯಾದಂತಹ ದೇಶಗಳಲ್ಲೂ ವಾಣಿಜ್ಯಾತ್ಮಕ ಸರೋಗಸಿಯನ್ನು ನಿಷೇಧ ಹೇರಲಾಗಿದೆ, ಕೇವಲ ನೈತಿಕ ಸರೋಗಸಿಗಷ್ಟೇ ಅವಕಾಶ ನೀಡಲಾಗಿದೆ. ಸರೋಗಸಿಯ ತವರಾಗಿದ್ದ ಥಾಲೆಂಡ್ ಕೂಡ ಮೇಲಿಂದಮೇಲೆ ಏಟು ತಿಂದ ಮೇಲೆ ಕಳೆದ ವರ್ಷವಷ್ಟೇ ವಿದೇಶಿಯರಿಗೆ ಬಾಡಿಗೆ ತಾಯಿ ಸೇವೆ ಒದಗಿಸುವುದನ್ನು ನಿಲ್ಲಿಸಿದೆ. ವಿಷಯ ಇಷ್ಟೊಂದು ಗಂಭೀರವಾಗಿದ್ದರೂ ಈ ವಿಚಾರದಲ್ಲಿ ಭಾರತ ಇನ್ನೂ ಒಂದು ಸ್ಪಷ್ಟ ನಿರ್ಧಾರ ತೆಗೆದುಕೊಳ್ಳದೇ ಇರುವುದು ಆತಂಕದ ಸಂಗತಿಯೇ ಸರಿ. ಸರೋಗಸಿಯನ್ನು ನಿಯಂತ್ರಿಸುವ ಒಂದಾದರೂ ಕಾನೂನು ಭಾರತದಲ್ಲಿ ಇಲ್ಲ ಎನ್ನುವುದು ವಿಚಿತ್ರವಾದರೂ ಸತ್ಯ.

ಸರೋಗಸಿ ಪರಿಕಲ್ಪನೆಯನ್ನು ಒಂದು ಕಾನೂನಿನ ಚೌಕಟ್ಟಿಗೆ ಒಳಪಡಿಸುವ ಒಂದಷ್ಟು ಪ್ರಯತ್ನಗಳೇನೋ ಈಚಿನ ವರ್ಷಗಳಲ್ಲಿ ಭಾರತದಲ್ಲಿ ನಡೆದಿವೆ. ೨೦೦೨ರಲ್ಲಿ ಭಾರತ ಸರ್ಕಾರ ಬಾಡಿಗೆ ತಾಯ್ತನವನ್ನು ಕಾನೂನಬದ್ಧಗೊಳಿಸಿತು. ೨೦೦೫ರಲ್ಲಿ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ತು (ಐಸಿಎಂಆರ್) ಬಾಹ್ಯನೆರವಿನ ಪ್ರಜನನ ತಂತ್ರಜ್ಞಾನ (ಎಆರ್‌ಟಿ) ಕ್ಲಿನಿಕ್‌ಗಳ ಮಾನ್ಯತೆ, ಉಸ್ತುವಾರಿ ಹಾಗೂ ನಿಯಂತ್ರಣಗಳಿಗೆ ಸಂಬಂಧಿಸಿದ ರಾಷ್ಟ್ರೀಯ ನಿಯಮಾವಳಿಗಳನ್ನು ಪ್ರಕಟಿಸಿತು. ಎಪ್ಪತ್ತರ ದಶಕದಿಂದಲೇ ಪ್ರಣಾಳಶಿಶು ತಂತ್ರಜ್ಞಾನ ಭಾರತದಲ್ಲಿ ಲಭ್ಯವಿದ್ದರೂ ಇದಕ್ಕೆ ಸಂಬಂಧಿಸಿದಂತೆ ಒಂದು ರಾಷ್ಟ್ರಮಟ್ಟದ ನಿಯಮಾವಳಿಗಳನ್ನು ರೂಪಿತವಾದದ್ದು ಕೇವಲ ಹತ್ತು ವರ್ಷಗಳ ಹಿಂದೆ. ಅದೂ ನಿಯಮಾವಳಿ ಮಾತ್ರ, ಕಾನೂನು ಅಲ್ಲ. ಅಲ್ಲಿಯವರೆಗೆ ಇಂತಹ ಪ್ರಕ್ರಿಯೆಗಳಿಗೆ ಆಧಾರವಾಗಿದ್ದುದು ಭಾರತೀಯ ಕರಾರು ಕಾಯ್ದೆ ಮತ್ತು ಪೋಷಕತ್ವದ ಕಾನೂನುಗಳು.

೨೦೦೮ರಲ್ಲಿ ಬೇಬಿ ಮಾಂಜಿ ಪ್ರಕರಣ ರಾಷ್ಟ್ರಮಟ್ಟದಲ್ಲಿ ದೊಡ್ಡಮಟ್ಟದ ಚರ್ಚೆಯನ್ನು ಹುಟ್ಟುಹಾಕಿದ ಮೇಲೆ ಐಸಿಎಂಆರ್ ಬಾಹ್ಯನೆರವಿನ ಪ್ರಜನನ ತಂತ್ರಜ್ಞಾನ (ಎಆರ್‌ಟಿ) ಕರಡು ಮಸೂದೆಯನ್ನು ರೂಪಿಸಿತು. ಭಾರತದ ಕಾನೂನು ಆಯೋಗ ಕೂಡ ೨೦೦೯ರಲ್ಲಿ ಸಲ್ಲಿಸಿದ ತನ್ನ ವರದಿಯಲ್ಲಿ ವಾಣಿಜ್ಯ ಉದ್ದೇಶದ ಸರೋಗಸಿಯನ್ನು ನಿಷೇಧಿಸುವ ಅವಶ್ಯಕತೆಯನ್ನು ಶಿಫಾರಸು ಮಾಡಿತ್ತು. ಎಆರ್‌ಟಿ ಮಸೂದೆ ೨೦೧೦, ೨೦೧೩ ಹಾಗೂ ೨೦೧೪ರಲ್ಲಿ ಸತತ ತಿದ್ದುಪಡಿಗೆ ಒಳಗಾದರೂ ಅದಕ್ಕೆ ಕಾಯ್ದೆಯಾಗುವ ಯೋಗ ಕೂಡಿ ಬರಲೇ ಇಲ್ಲ. ಕಳೆದ ವರ್ಷ ಹಿರಿಯ ನ್ಯಾಯವಾದಿ ಜಯಶ್ರೀ ವಾದ್ ಎಂಬವರು ವಾಣಿಜ್ಯಾತ್ಮಕ ಸರೋಗಸಿಯನ್ನು ಖಡಾಖಂಡಿತ ನಿಷೇಧಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಸುಪ್ರೀಂ ಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯೊಂದನ್ನು ಹೂಡಿದ ಮೇಲೆ ಈ ಮಸೂದೆ ಮತ್ತೆ ಸಜೀವಗೊಂಡಿದೆ.

ಸಂಶೋಧನೆಯ ಹೊರತಾಗಿ ಬೇರೆ ಯಾವ ಉದ್ದೇಶಕ್ಕೂ ಮಾನವ ಭ್ರೂಣದ ಆಮದು ಸಲ್ಲದು ಎಂದು ೨೦೧೫ರ ಅಕ್ಟೋಬರ್ ೨೬ರಂದು ಕೇಂದ್ರ ಸರ್ಕಾರ ಒಂದು ಆದೇಶ ಹೊರಡಿಸಿತು.  ಬಾಡಿಗೆ ತಾಯ್ತನದ ನೆರವು ಪಡೆಯುವ ಉದ್ದೇಶದಿಂದ ಭಾರತಕ್ಕೆ ಬರಲು ಇಚ್ಛಿಸುವ ಯಾವ ವಿದೇಶೀ ದಂಪತಿಗಳಿಗೂ ವೀಸಾ ನೀಡಬಾರದು ಎಂಬ ಇನ್ನೊಂದು ಸೂಚನೆಯನ್ನು ಗೃಹ ಇಲಾಖೆಯು ಕಳೆದ ವರ್ಷ ನವೆಂಬರ್ ೩ರಂದು ವಿದೇಶಗಳಲ್ಲಿನ ತನ್ನ ಎಲ್ಲ ರಾಯಭಾರ ಕಛೇರಿಗಳಿಗೆ ನೀಡಿತು. ಅದರ ಮರುದಿನವೇ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಆರೋಗ್ಯ ಸಂಶೋಧನಾ ಇಲಾಖೆಯು ಸರೋಗಸಿ, ಎಆರ್‌ಟಿ ಹಾಗೂ ಐವಿಎಫ್ ಕ್ಲಿನಿಕ್‌ಗಳಿಗೆ ಸಂಬಂಧಿಸಿದ ಕೆಲವು ನಿಯಮಾವಳಿಗಳನ್ನು ಜಾರಿಗೊಳಿಸಿತು.

ಸುಷ್ಮಾ ಸ್ವರಾಜ್ ನೇತೃತ್ವದ ಉನ್ನತಾಧಿಕಾರ ಸಮಿತಿ ರೂಪಿಸಿರುವ ೨೦೧೬ರ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆಗೆ ಈ ವರ್ಷ ಆಗಸ್ಟ್ ತಿಂಗಳಿನಲ್ಲಷ್ಟೇ ಕೇಂದ್ರ ಸಂಪುಟ ತನ್ನ ಒಪ್ಪಿಗೆ ಸೂಚಿಸಿದೆ. ಮುಂದಿನ ಚಳಿಗಾಲದ ಅಧಿವೇಶನದಲ್ಲಿ ಸಂಸತ್ತಿನ ಸಮ್ಮತಿ ದೊರೆತ ಬಳಿಕ ಅದು ಕಾನೂನು ಸ್ವರೂಪ ಪಡೆದುಕೊಳ್ಳಲಿದೆ ಎಂಬುದು ಸದ್ಯದ ಮಟ್ಟಿಗೆ ಒಂದು ಆಶಾದಾಯಕ ಬೆಳವಣಿಗೆ. ಪ್ರಸ್ತುತ ರೂಪಿತವಾಗಿರುವ ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ ಈ ಹಿಂದಿನ ಎಆರ್‌ಟಿ ಮಸೂದೆಯದ್ದೇ ಒಂದು ಭಾಗ. ವಾಣಿಜ್ಯ ಉದ್ದೇಶದ ಸರೋಗಸಿಯನ್ನು ವಿದೇಶೀಯರೂ ಸೇರಿದಂತೆ ಎಲ್ಲರಿಗೂ ಸಂಪೂರ್ಣವಾಗಿ ನಿಷೇಧಿಸುವ ಈ ಮಸೂದೆಯು, ಕೇವಲ ಮಕ್ಕಳಿಲ್ಲದ ಭಾರತೀಯ ದಂಪತಿಗಳಿಗಾಗಿ ನೈತಿಕ ಸರೋಗಸಿಗೆ ಮಾತ್ರ ಅವಕಾಶ ಮಾಡಿಕೊಟ್ಟಿದೆ- ಅದೂ ಹತ್ತಿರದ ಸಂಬಂಧಿಗಳ ನಡುವೆ ಮಾತ್ರ.

ಈ ನಡುವೆ ಮಸೂದೆಯ ಕುರಿತಾದ ಪರ-ವಿರೋಧ ಚರ್ಚೆಗಳು ಮಾಧ್ಯಮಗಳಲ್ಲಿ ಕಾವು ಪಡೆದುಕೊಳ್ಳುತ್ತಿವೆ. ಒಂದು ಕಡೆ ಇದರ ನಿಷೇಧವೇ ಸರಿ ಎಂಬ ಮಾತು ಕೇಳಿಬಂದರೆ ಇನ್ನೊಂದೆಡೆ 'ಸಂಪೂರ್ಣ ನಿಷೇಧ ಬೇಡ, ಆದರೆ ಕಟ್ಟುನಿಟ್ಟಿನ ನಿಯಂತ್ರಣ ಬೇಕು’ ಎಂಬ ಒತ್ತಾಯಗಳು ಕೇಳಿಬರುತ್ತಿವೆ. ಬಾಡಿಗೆ ತಾಯ್ತನವಷ್ಟೇ ಅಲ್ಲ, ದೇಶದಲ್ಲಿ ಕಾರ್ಯಾಚರಿಸುತ್ತಿರುವ ವೀರ್ಯ ಹಾಗೂ ಅಂಡಾಣು ಬ್ಯಾಂಕುಗಳಿಗೂ ನಿಯಂತ್ರಣದ ಅಂಕುಶ ತೊಡಿಸುವುದು ಇಂದಿನ ತುರ್ತು ಎಂದು ಐಸಿಎಂಆರ್ ಬೊಟ್ಟು ಮಾಡಿದೆ.

ವ್ಯಾಪಾರೀಕರಣಕ್ಕೆ ತಾಯ್ತನವೇ ಬೇಕೇ?
ಒಬ್ಬ ಮಹಿಳೆಯಾಗಿ, ತಾಯಿ-ಮಕ್ಕಳ ತಜ್ಞೆಯಾಗಿ ತಾಯ್ತನವನ್ನು ಮಾರಿಕೊಳ್ಳುವ ಅಸ್ವಾಭಾವಿಕ ವಿದ್ಯಮಾನದ ಕುರಿತು ಬೇಸರಪಟ್ಟುಕೊಳ್ಳಬಹುದೇ ಹೊರತು ಅದನ್ನು ತಡೆಯಲಾರೆ. ವೈದ್ಯಕೀಯ ವಿಜ್ಞಾನ ಮತ್ತು ಅದರ ತಂತ್ರಜ್ಞಾನಗಳ ಬೆಳವಣಿಗೆಯನ್ನು ಪ್ರಶಂಸಿಸುತ್ತಿರುವ ಸಂದರ್ಭದಲ್ಲಿ ನನಗೆ ಅದರ ವ್ಯಾಪಾರೀಕರಣದ ಕುರಿತು ಕಳವಳ ಉಂಟಾಗುತ್ತಿದೆ ಎಂದು ತಮ್ಮ ಅಂಕಣವೊಂದರಲ್ಲಿ ಬರೆದಿದ್ದಾರೆ ಡಾ. ಆಶಾ ಬೆನಕಪ್ಪ.

ಜಾಗತೀಕರಣ, ಉದಾರೀಕರಣಗಳ ಜಗತ್ತಿನಲ್ಲಿ ವ್ಯಾಪಾರೀಕರಣಕ್ಕೆ ಒಳಗಾಗದೆ ಯಾವುದೂ ಉಳಿದಿಲ್ಲ, ಆದರೆ ತಾಯ್ತನವೂ ಈ ಸಾಲಿಗೆ ಸೇರಿಹೋಗುವುದನ್ನು ಮಾತ್ರ ಯಾವ ಪ್ರಜ್ಞಾವಂತ, ಸೂಕ್ಷ್ಮ ಮನಸ್ಸೂ ಒಪ್ಪಿಕೊಳ್ಳಲಾರದು. ಭಾರತೀಯ ಪರಂಪರೆಯಲ್ಲಂತೂ ಮಾತೃತ್ವಕ್ಕೆ ಅತ್ಯುನ್ನತ ಗೌರವ, ಸ್ಥಾನಮಾನಗಳಿವೆ. ಹಣದ ಲೆಕ್ಕಾಚಾರದಲ್ಲಿ ಅಳೆಯುವ ಪರಿಕಲ್ಪನೆ ಅದಲ್ಲ. 'ಕುಪುತ್ರೋ ಜಾಯತೇ ಕ್ವಚಿದಪಿ ಕುಮಾತಾ ನ ಭವತಿ’ ಎಂದ ಸಂಸ್ಕೃತಿಯಿದು. ಅಂತಹುದರಲ್ಲಿ ನಿರ್ದಿಷ್ಟ ಮೊತ್ತವನ್ನು ಪಡೆದುಕೊಂಡು ಮಗುವನ್ನು ಹೆತ್ತುಕೊಡುವ ಉದ್ಯೋಗವನ್ನು ಭಾರತೀಯ ತಾಯಿಯೊಬ್ಬಳು ಹೇಗೆ ಮನಸಾರೆ ಮಾಡಿಯಾಳು?

ಬಾಡಿಗೆ ತಾಯಂದಿರಿಗೆ ಹಣದಿಂದ ಒಂದಿಷ್ಟು ಅನುಕೂಲವಾಗಬಹುದೇನೋ? ಆದರೆ ಜೀವನ ನಡೆಸಲು ಬಡ ಹೆಣ್ಣುಮಕ್ಕಳು ತಮ್ಮ ಗರ್ಭಾಶಯವನ್ನೇ ಮಾರಿಕೊಳ್ಳಬೇಕಾದ ಭಾರತವನ್ನು ನಾವು ರೂಪಿಸಬೇಕೇ? ಎಂಬ ಐಸಿಎಂಆರ್ ಮಹಾ ನಿರ್ದೇಶಕಿ ಡಾ. ಸೌಮ್ಯ ಸ್ವಾಮಿನಾಥನ್ ಅವರ ಮಾತು ಎಷ್ಟೊಂದು ಮಾರ್ಮಿಕವಾಗಿದೆ!

ಭಾರತೀಯ ನಂಬಿಕೆ-ನಡವಳಿಕೆಗಳಲ್ಲಿ ಮಗುವನ್ನು ಹೆರುವುದು ಕೇವಲ ಒಂದು ಜೈವಿಕ ಪ್ರಕ್ರಿಯೆ ಮಾತ್ರ ಅಲ್ಲ, ಎರಡು ಜೀವಗಳ ನಡುವಿನ ಅಖಂಡ ಸಂಬಂಧಕ್ಕೆ ನೀಡುವ ಒಂದು ಅಪೂರ್ವ ವ್ಯಾಖ್ಯಾನ. ಮಗುವನ್ನು ಹೆತ್ತ ಮೇಲೆ ಕರುಳ ಬಳ್ಳಿಯನ್ನು ಭೌತಿಕವಾಗಿ ಮಾತ್ರ ಕಡಿದುಕೊಳ್ಳಬಹುದು, ಮಾನಸಿಕವಾಗಿ ಅಲ್ಲ. ಅದು ಜೀವನಪರ್ಯಂತ ಅಮ್ಮ-ಮಗುವಿನ ನಡುವೆ ಅದೃಶ್ಯವಾಗಿ ಹೊಸೆದುಕೊಂಡೇ ಇರುತ್ತದೆ. ಈ ಸಂಬಂಧದ ಶ್ರೇಷ್ಠತೆ ಒಂದು ಅಪ್ಪಟ ಭಾರತೀಯ ಮನಸ್ಸಿಗೆ ಮಾತ್ರ ಅರ್ಥವಾದೀತೇ ಹೊರತು ಎಲ್ಲವನ್ನೂ ವ್ಯಾವಹಾರಿಕ ದೃಷ್ಟಿಯಿಂದಲೇ ನೋಡುವ ಸಿನಿಕ ಮನಸ್ಸುಗಳಿಗಲ್ಲ. ಇಂತಹ ಸನ್ನಿವೇಶದಲ್ಲಿ, ಒಬ್ಬ ಹೆಣ್ಣುಮಗು ಭ್ರೂಣವೊಂದನ್ನು ಒಂಬತ್ತು ತಿಂಗಳು ಗರ್ಭದಲ್ಲಿಟ್ಟು ತನ್ನದೇ ದೇಹದ ಒಂದು ಭಾಗವಾಗಿ ಪೋಷಿಸಿ ಆಮೇಲೆ ತನಗೂ ಅದಕ್ಕೂ ಸಂಬಂಧವೇ ಇಲ್ಲದಂತೆ ಎದ್ದುಹೋಗುವುದು, ಅಂತಹ ಇನ್ನೊಂದು ಹೆರಿಗೆಗೆ ಸಿದ್ಧವಾಗುವುದು, ಇದನ್ನೆಲ್ಲ ಯಾವ ನೆಲೆಗಟ್ಟಿನಲ್ಲಿ ಅರ್ಥ ಮಾಡಿಕೊಳ್ಳುವುದು? ಬದುಕೆಂದರೆ ಏನು? ಕೊಡುಕೊಳ್ಳುವ ವ್ಯವಹಾರವೇ? ಮರುಭೂಮಿಯಲ್ಲಿನ ನಡಿಗೆಯೇ? ಅಲ್ಲಿ ಭಾವನೆಗಳಿಗೆ ಯಾವ ಬೆಲೆಯೂ ಇಲ್ಲವೇ?

ಗರ್ಭಧಾರಣೆ ಅಸಾಧ್ಯವಾಗಿರುವವರಾದರೂ ಪರ್ಯಾಯ ಮಾರ್ಗವೊಂದರ ಬಗ್ಗೆ ಯೋಚಿಸುವುದರಲ್ಲಿ ತಥ್ಯವಿದೆ. ತಮ್ಮ ದೇಹಾಕಾರ ಕೆಡುತ್ತದೆ, ಸೌಂದರ್ಯ ನಶಿಸುತ್ತದೆ, ವೃತ್ತಿಜೀವನಕ್ಕೆ ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಬಾಡಿಗೆ ತಾಯಂದಿರನ್ನು ಹುಡುಕುವವರೂ ತುಂಬ ಮಂದಿ ಇದ್ದಾರೆ. ಇಂಥವರಿಗೆ ನಿಜವಾಗಿಯೂ ತಾಯ್ತನದ ಮರ್ಮ ಅರ್ಥವಾದೀತೇ? ಸರೋಗಸಿ ಮೂಲಕ ಪಡೆದ ಮಗುವನ್ನು ಸೂಪರ್ ಮಾರ್ಕೆಟಿನಿಂದ ಖರೀದಿಸಿದ ವಸ್ತುವೊಂದಕ್ಕಿಂತ ವಿಭಿನ್ನವಾಗಿ ಅವರು ನೋಡಿಯಾರೇ? ತಮ್ಮ ಪ್ರಿಯ ಪತ್ನಿಯರಿಗೆ ನೋವಾದೀತೆಂದು ಬಾಡಿಗೆ ತಾಯಿಯ ಮೊರೆಹೋದವರಲ್ಲಿ ಬಾಲಿವುಡ್‌ನ ಖಾನ್‌ದಾನ್‌ಗಳೂ ಇದ್ದಾರೆ. ಇವರಲ್ಲಿ ನಿಜವಾಗಿಯೂ ಹೆಣ್ಣಿನ ನೋವನ್ನು ಅರ್ಥ ಮಾಡಿಕೊಳ್ಳುವ ಪ್ರಾಮಾಣಿಕತೆ ಇದೆಯೇ?

**********************************************
’ಬಾಡಿಗೆ ತಾಯ್ತನ ಮಸೂದೆ’ಯಲ್ಲಿ ಏನಿದೆ?
೨೦೧೬ ಆಗಸ್ಟ್ ೨೫ರಂದು ಕೇಂದ್ರ ಸಚಿವ ಸಂಪುಟ 'ಬಾಡಿಗೆ ತಾಯ್ತನ (ನಿಯಂತ್ರಣ) ಮಸೂದೆ’ಗೆ ತನ್ನ ಒಪ್ಪಿಗೆ ಸೂಚಿಸಿದೆ. ಮಹಿಳೆಯರ ಶೋಷಣೆ ತಡೆಯುವುದೇ ಪ್ರಸ್ತಾಪಿತ ಕಾಯ್ದೆಯ ಪ್ರಮುಖ ಉದ್ದೇಶ ಎಂದು ಸರ್ಕಾರ ಹೇಳಿಕೊಂಡಿದೆ. ಅದರ ಮುಖ್ಯಾಂಶಗಳು ಹೀಗಿವೆ:

  • ವಾಣಿಜ್ಯ ಉದ್ದೇಶದ ಸರೋಗಸಿ ಮೇಲೆ ಸಂಪೂರ್ಣ ನಿಷೇಧ. ಪರೋಪಕಾರಿ ನೆಲೆಯಲ್ಲಿ ಮಾತ್ರ ಬಾಡಿಗೆ ತಾಯ್ತನಕ್ಕೆ ಅವಕಾಶ.
  • ಮಗುವನ್ನು ಪಡೆದ ದಂಪತಿ ವೈದ್ಯಕೀಯ ವೆಚ್ಚವನ್ನು ಮಾತ್ರ ಭರಿಸಬೇಕು. ಬಾಡಿಗೆ ತಾಯಿಗೆ ಪರಿಹಾರ ರೂಪದಲ್ಲಿ ಯಾವುದೇ ಹಣ ನೀಡುವಂತಿಲ್ಲ.
  • ಹತ್ತಿರದ ಸಂಬಂಧಿಗಳು ಮಾತ್ರ ಬಾಡಿಗೆ ತಾಯಿ ಸೇವೆ ನೀಡಬಹುದು. 
  • ವಿದೇಶಿಯರು ಮತ್ತು ಸಾಗರೋತ್ತರ ಭಾರತೀಯ ಪೌರತ್ವ ಕಾರ್ಡ್ ಹೊಂದಿರುವವರು ಭಾರತದಲ್ಲಿ ಈ ಸೇವೆ ಪಡೆಯುವಂತಿಲ್ಲ.
  • ಕಾನೂನು ಪ್ರಕಾರ ವಿವಾಹಿತರಾಗಿರುವ ಭಾರತದ ದಂಪತಿ ಮಾತ್ರ ಬಾಡಿಗೆ ತಾಯಿ ಸೇವೆ ಪಡೆಯಬಹುದು.
  • ಬಾಡಿಗೆ ತಾಯ್ತನಕ್ಕೆ ಮುಂದಾಗುವವರು ವಿವಾಹಿತರಾಗಿದ್ದು, ಈಗಾಗಲೇ ಆರೋಗ್ಯವಂತ ಮಗುವಿಗೆ ಜನ್ಮ ನೀಡಿರಬೇಕು.
  • ಮದುವೆಯಾಗಿ ಐದು ವರ್ಷ ಕಳೆದ ಬಳಿಕವೇ ಬಾಡಿಗೆ ತಾಯಿ ಮೂಲಕ ಮಕ್ಕಳನ್ನು ಪಡೆಯುವ ಅವಕಾಶ.
  • ಅವಿವಾಹಿತ ಜೋಡಿ, ಏಕಾಂಗಿ ಪುರುಷ ಅಥವಾ ಮಹಿಳೆ, ಸಹಜೀವನ ನಡೆಸುವ (ಲಿವಿಂಗ್ ಟುಗೆದರ್) ಜೋಡಿ, ವಿಧವೆಯರು ಮತ್ತು ಸಲಿಂಗಿಗಳು ಬಾಡಿಗೆ ತಾಯಿಯ ಸೇವೆ ಪಡೆಯುವಂತಿಲ್ಲ.
  • ಬಾಡಿಗೆ ತಾಯ್ತನದ ನಿಯಂತ್ರಣಕ್ಕೆ ರಾಷ್ಟ್ರೀಯ ಹಾಗೂ ರಾಜ್ಯ ಮಟ್ಟದ ಬಾಡಿಗೆ ತಾಯ್ತನ ಮಂಡಳಿ ಸ್ಥಾಪನೆ.
  • ನಿಯಮ ಉಲ್ಲಂಘಿಸುವವರಿಗೆ ೧೦ ವರ್ಷಗಳವರೆಗೆ ಜೈಲು ಮತ್ತು ರೂ. ೧೦ ಲಕ್ಷದವರೆಗೆ ದಂಡ.


***********************************************
ಬಾಡಿಗೆ ತಾಯ್ತನ, ಸಾಹಿತ್ಯ, ಸಿನಿಮಾ...
ಬಾಡಿಗೆ ತಾಯ್ತನ ವಸ್ತುವಿನ ಆಧಾರದಲ್ಲಿ ಸಾಕಷ್ಟು ಪುಸ್ತಕಗಳು, ಸಿನಿಮಾಗಳು ಬಿಡುಗಡೆಯಾಗಿ ಜನಪ್ರಿಯತೆ ಗಳಿಸಿವೆ. ’ಎ ಮದರ್ಸ್ ಸ್ಟೋರಿ: ದಿ ಟ್ರುತ್ ಎಬೌಟ್ ದಿ ಬೇಬಿ ಎಂ ಕೇಸ್’ (೧೯೮೯) ಎಂಬ ಮೇರಿ ಬೆತ್ ವೈಟ್‌ಹೆಡ್ ಕೃತಿ ಈ ಲೇಖನದ ಆರಂಭದಲ್ಲಿ ಉಲ್ಲೇಖಿಸಲಾಗಿರುವ ’ಬೇಬಿ ಎಂ’ ಪ್ರಕರಣದ ಒಳಹೊರಗನ್ನು ಬಾಡಿಗೆ ತಾಯಿಯ ಅನುಭವದ ಹಿನ್ನೆಲೆಯಲ್ಲಿ ಮನೋಜ್ಞವಾಗಿ ಕಟ್ಟಿಕೊಡುತ್ತದೆ. ಗೀತಾ ಅರವಮುದನ್ ಅವರ ’ಬೇಬಿ ಮೇಕರ್ಸ್: ದಿ ಸ್ಟೋರಿ ಆಫ್ ಇಂಡಿಯನ್ ಸರೋಗಸಿ’ (೨೦೧೪), ಅನಿಲ್ ಮಲ್ಹೋತ್ರಾ ಅವರ ’ಸರೋಗಸಿ ಇನ್ ಇಂಡಿಯಾ: ಎ ಲಾ ಇನ್ ದ ಮೇಕಿಂಗ್- ರಿವಿಸಿಟೆಡ್’ (೨೦೧೬) ಪ್ರಮುಖ ಪ್ರಕಟಣೆಗಳು.

ಬಾಡಿಗೆ ತಾಯ್ತನದ ವಸ್ತುವನ್ನು ಹಾಲಿವುಡ್, ಬಾಲಿವುಡ್‌ಗಳೆರಡೂ ಸಶಕ್ತವಾಗಿ ಬಳಸಿಕೊಂಡಿವೆ. ’ದಿ ಸರೊಗೇಟ್’ (೧೯೯೫), ’ಬೇಬಿ ಮಾಮಾ’ (೨೦೦೮), ’ದಿ ಸರೊಗಸಿ ಟ್ರ್ಯಾಪ್’ (೨೦೧೩) ಪ್ರಮುಖ ಇಂಗ್ಲಿಷ್ ಸಿನಿಮಾಗಳು. ಭಾರತದಲ್ಲಂತೂ ಈ ನಿಟ್ಟಿನಲ್ಲಿ ಅನೇಕ ಚಲನಚಿತ್ರಗಳು ಬಂದಿವೆ. ಲೇಖ್ ಟಂಡನ್ ನಿರ್ದೇಶನದ ’ದೂಸ್ರೀ ದುಲ್ಹನ್’ ೧೯೮೩ರಷ್ಟು ಹಿಂದೆಯೇ ಬಾಡಿಗೆ ತಾಯ್ತನದ ಕಥಾನಕವನ್ನು ಬಳಸಿಕೊಂಡ ಒಂದು ಹಿಂದಿ ಸಿನಿಮಾ. ೨೦೦೬ರಲ್ಲಿ ಇದು ’ಉತ್ತರಾಯಣ’ ಎಂಬ ಹೆಸರಿನಲ್ಲಿ ಬಂಗಾಲಿ ಭಾಷೆಯಲ್ಲೂ ತಯಾರಾಯಿತು. ೨೦೦೧ರಲ್ಲಿ ಬಂದ ’ಚೋರಿ ಚೋರಿ ಚುಪ್ಕೇ ಚುಪ್ಕೇ’ ಬಾಡಿಗೆ ತಾಯ್ತನದ ವಸ್ತುವುಳ್ಳ ಇನ್ನೊಂದು ಜನಪ್ರಿಯ ಚಿತ್ರ. ಸಲ್ಮಾನ್‌ಖಾನ್, ರಾಣಿ ಮುಖರ್ಜಿ, ಪ್ರೀತಿ ಜಿಂಟಾ ಅಭಿನಯದ ಈ ಸಿನಿಮಾ ಸಾಕಷ್ಟು ವಿವಾದಗಳನ್ನು ಹುಟ್ಟುಹಾಕಿತ್ತು. ೨೦೦೨ರಲ್ಲಿ ಬಂದ ’ಫಿಲ್ಹಾಲ್’, ೨೦೧೦ರ ’ಐಯಾಮ್ ಅಫಿಯಾ’, ೨೦೧೨ರ ’ವಿಕ್ಕಿ ಡೋನರ್’ ವೀರ್ಯದಾನದ ವಸ್ತುವನ್ನು ಹೊಂದಿರುವ ಚಿತ್ರಗಳು.

೨೦೧೧ರಲ್ಲಿ ಬಿಡುಗಡೆಯಾದ ’ಮಲಾ ಆಯಿ ವ್ಹಾಯ್‌ಚಿ!’ (ನಾನು ಅಮ್ಮನಾಗಬೇಕು) ಸರೊಗಸಿ ವಸ್ತವಾಗುಳ್ಳ ರಾಷ್ಟ್ರಪ್ರಶಸ್ತಿ ಪುರಸ್ಕೃತ ಮರಾಠಿ ಸಿನಿಮಾ. ವೃತ್ತಿಯಲ್ಲಿ ವಕೀಲೆಯಾಗಿರುವ ಸಮೃದ್ಧಿ ಪೊರೆ ಇದರ ನಿರ್ದೇಶಕಿ. ಮೇರಿ ಎಂಬ ವಿದೇಶಿ ಮಹಿಳೆಯೊಬ್ಬಳ ಮಗುವಿಗೆ ಬಾಡಿಗೆ ತಾಯಿಯಾಗುವ ಯಶೋದ ಎಂಬ ಸಾಮಾನ್ಯ ಮಹಿಳೆಯೊಬ್ಬಳ ಈ ಕಥೆ ತನ್ನ ಭಾವನಾತ್ಮಕ ನಿರೂಪಣೆಯಿಂದ ನೋಡುಗರನ್ನು ಆರ್ದ್ರವಾಗಿಸುತ್ತದೆ. ಮೇರಿ ಗರ್ಭಿಣಿ ಯಶೋದಳ ಯೋಗಕ್ಷೇಮ ನೋಡಿಕೊಳ್ಳುತ್ತಾ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ಇರುತ್ತಾಳೆ. ಆದರೆ ಕೆಲವು ಸಮಸ್ಯೆಗಳಿಂದಾಗಿ ಹುಟ್ಟಲಿರುವ ಮಗು ಅಂಗವಿಕಲವಾಗಿರುವ ಸಾಧ್ಯತೆಯಿದೆ ಎಂದು ವೈದ್ಯರು ತಿಳಿಸುತ್ತಾರೆ. ಈ ವಿಷಯ ಗೊತ್ತಾದಲ್ಲಿಗೆ ಮೇರಿ ತನಗೂ ಕರಾರಿಗೂ ಸಂಬಂಧವೇ ಇಲ್ಲದಂತೆ ಸ್ವದೇಶಕ್ಕೆ ಹಿಂತಿರುಗುತ್ತಾಳೆ. ಯಶೋದ ಪರಿಪರಿಯಾಗಿ ಬೇಡಿಕೊಂಡರೂ ಆಕೆ ಕಿವಿಗೆ ಹಾಕಿಕೊಳ್ಳುವುದಿಲ್ಲ. ಕೊನೆಗೆ ’ಇದು ನನ್ನ ಮಗು, ನಾನೇ ಸಾಕುತ್ತೇನೆ’ ಎಂಬ ನಿರ್ಧಾರಕ್ಕೆ ಬರುತ್ತಾಳೆ ಯಶೋದ. ಗಂಡುಮಗು ಹುಟ್ಟುತ್ತದೆ. ಅಚ್ಚರಿಯೆಂಬಂತೆ ಅದು ಆರೋಗ್ಯವಾಗಿಯೇ ಇರುತ್ತದೆ. ತಾಯಿ-ಮಗುವಿನ ಭಾವನಾತ್ಮಕ ನಂಟು ಗಟ್ಟಿಯಾಗುತ್ತದೆ. ಇದ್ದಕ್ಕಿದ್ದಂತೆ ಒಂದು ದಿನ ಮೇರಿ ವಾಪಸಾಗುತ್ತಾಳೆ. ತನ್ನದೇ ಮಗುವನ್ನು ಕಂಡು ಮತ್ತೆ ಅವನನ್ನು ತನ್ನೊಂದಿಗೆ ಕರೆದೊಯ್ಯವುದಾಗಿ ಹಠ ಹಿಡಿಯುತ್ತಾಳೆ. ಆದರೆ ಈ ಹೊತ್ತಿಗಾಗಲೇ ಯಶೋದ ಮತ್ತು ಮಗುವಿನ ಬಂಧ ಬಿಡಿಸಲಾಗದಷ್ಟು ಗಟ್ಟಿಯಾಗಿರುತ್ತದೆ. ಮುಂದೇನಾಗುತ್ತದೆ ಎಂಬುದು ಕಥೆಯ ಕ್ಲೈಮಾಕ್ಸ್.

ಕಾಮೆಂಟ್‌ಗಳಿಲ್ಲ: