ಶನಿವಾರ, ಅಕ್ಟೋಬರ್ 15, 2016

ಕಲೆಯ ಸೆಲೆಯಿಲ್ಲದೆ ಬದುಕಿಗೆಲ್ಲಿಯ ಬೆಲೆ?

ಅಕ್ಟೋಬರ್ 13, 2016ರ 'ಕನ್ನಡ ಪ್ರಭ' ಕ್ಯಾಂಪಸ್ ಪುಟದಲ್ಲಿ ಪ್ರಕಟವಾದ ಲೇಖನ

ಅತ್ತ ನವರಾತ್ರಿಯ ಹುಲಿಗಳು ತಮಟೆಯ ಬಡಿತಕ್ಕೆ ಲಯಬದ್ಧವಾಗಿ ಹೆಜ್ಜೆಹಾಕುತ್ತಿದ್ದರೆ ಇತ್ತ ಉಮಾಮಹೇಶ್ವರ ಸಂಗೀತಶಾಲೆಯ ವಿದ್ಯಾರ್ಥಿಗಳು ನಾದಸರಸ್ವತಿಯ ಉಪಾಸನೆಯಲ್ಲಿ ಮುಳುಗಿದ್ದರು. ಭಾವ-ರಾಗ-ತಾಳಗಳನ್ನು ಮೇಳೈಸಿಕೊಂಡು ಹತ್ತಾರು ಮಕ್ಕಳು ಮುಂಜಾನೆಯಿಂದ ಮಧ್ಯರಾತ್ರಿಯವರೆಗೂ ಹಾಡುತ್ತಲೇ ಹೋದರು. ಅವರಿಗೆ ದಣಿವೆಂಬುದೇ ಇರಲಿಲ್ಲ. ಅವರಲ್ಲಿ ತುಂಬಿ ತುಳುಕುತ್ತಿದ್ದ ಪ್ರತಿಭೆ ಮತ್ತು ಮುಖದಲ್ಲಿ ಹೊಮ್ಮುತ್ತಿದ್ದ ಜ್ಞಾನದ ಪ್ರಭೆಗೆ ಇಡೀ ಸಭಾಂಗಣ ಅಕ್ಷರಶಃ ಮಿರಮಿರನೆ ಮಿಂಚುತ್ತಿತ್ತು.

ಅದ್ಯಾಕೋ ಇದ್ದಕ್ಕಿದ್ದಂತೆ ಕೋಚಿಂಗ್ ಸೆಂಟರುಗಳೆಂಬ ಮಹಾಜೈಲುಗಳಲ್ಲಿ ಪುಸ್ತಕಗಳ ನಡುವೆ ನರಳುತ್ತಿರುವ ಇದೇ ವಯಸ್ಸಿನ ಮಕ್ಕಳ ಚಿತ್ರ ಕಣ್ಮುಂದೆ ಸುಳಿದು ಮರೆಯಾಯಿತು. ಮಾತೆತ್ತಿದರೆ ಮಾರ್ಕ್ಸ್, ಬಾಯ್ಬಿಟ್ಟರೆ ರ‍್ಯಾಂಕ್, ದಿನಬೆಳಗಾದರೆ ಎಂಜಿನಿಯರಿಂಗ್-ಮೆಡಿಕಲ್ ಸೀಟುಗಳ ಜಪ... ಈ ಫಸ್ಟ್ ರ‍್ಯಾಂಕ್ ರಾಜುಗಳು ಸುಂದರ ಸೂರ್ಯೋದಯವನ್ನೋ ರಮಣೀಯ ಸೂರ್ಯಾಸ್ತವನ್ನೋ ಹೃದಯಂಗಮ ಕಡಲ ತೀರವನ್ನೋ ಹಚ್ಚಹಸುರಿನ ಪ್ರಕೃತಿಸಿರಿಯನ್ನೋ ನೋಡಿ ಅದೆಷ್ಟು ದಿನಗಳಾದವೋ? ಇನ್ನು ಅವರು ಸಂಗೀತವೆಂಬ ಆತ್ಮಸಂತೋಷದ ತಂತಿಯನ್ನು ಮೀಟುವುದಕ್ಕೆ ಬಿಡುವಾದರೂ ಎಲ್ಲಿ ದೊರಕೀತು!

ನಾನು ನನ್ನ ಕಂಪೆನಿಗೆ ತಂತ್ರಜ್ಞರುಗಳನ್ನು ಆಯ್ಕೆ ಮಾಡುವಾಗ ಕೇವಲ ಅವರ ಎಂಜಿನಿಯರಿಂಗ್ ಪ್ರತಿಭೆಯಷ್ಟನ್ನೇ ನೋಡುವುದಿಲ್ಲ. ಸಂಗೀತವೇ ಮೊದಲಾದ ಲಲಿತ ಕಲೆಗಳಲ್ಲಿ ಅವರು ತರಬೇತಿ ಪಡೆದಿದ್ದಾರೆಯೇ ಎಂಬುದನ್ನು ಗಮನಿಸುತ್ತೇನೆ ಮತ್ತು ಅಂಥವರಿಗೆ ಆದ್ಯತೆ ನೀಡುತ್ತೇನೆ - ಹೀಗೆಂದವರು ’ಆಪಲ್’ ಸಂಸ್ಥಾಪಕ ಸ್ಟೀವ್ ಜಾಬ್ಸ್. ಅವರು ತಮ್ಮ ಮಾತನ್ನು ಹೀಗೆ ಮುಂದುವರಿಸುತ್ತಾರೆ: ಮ್ಯಾಕಿಂಟೋಶ್ ಯಾಕೆ ಒಂದು ಅದ್ಭುತ ಸಂಶೋಧನೆಯಾಯಿತೆಂದರೆ ಅದಕ್ಕಾಗಿ ಕೆಲಸ ಮಾಡಿದವರು ಜಗತ್ತಿನ ಶ್ರೇಷ್ಠ ಕಂಪ್ಯೂಟರ್ ವಿಜ್ಞಾನಿಗಳಷ್ಟೇ ಆಗಿರಲಿಲ್ಲ, ಅವರು ಸಂಗೀತಜ್ಞರು, ಕವಿಗಳು, ಕಲಾವಿದರು ಮತ್ತು ಇತಿಹಾಸಕಾರರೂ ಆಗಿದ್ದರು.

ತಮ್ಮ ಮಗು ಲಕ್ಷಗಟ್ಟಲೆ ಸಂಬಳ ಗಳಿಸುವ ಎಂಜಿನಿಯರ್ ಆದರಷ್ಟೇ ಜನ್ಮ ಸಾರ್ಥಕ ಎಂದುಕೊಳ್ಳುವ ಹೆತ್ತವರು, ಅವರು ಹಾಕಿದ ಲಕ್ಷ್ಮಣರೇಖೆ ದಾಟದೆ ಸ್ಕೋರಿಂಗ್ ಮಶೀನುಗಳಾಗುವುದಷ್ಟೇ ತಮ್ಮ ಕರ್ತವ್ಯ ಎಂದುಕೊಂಡಿರುವ ಮಕ್ಕಳೆಲ್ಲರೂ ಸ್ಟೀವ್ ಜಾಬ್ಸ್‌ನ ಮಾತನ್ನೊಮ್ಮೆ ಮನಸಾರೆ ಗುನುಗುನಿಸಬೇಕು. ಬದುಕು ಎಂದರೆ ಏನು? ಬರೀ ಸ್ಪರ್ಧೆಯೇ? ಬರೀ ಸಂಪಾದನೆಯೇ? ಬರೀ ಓಟವೇ? ಬರೀ ಒತ್ತಡವೇ? ಅದರಾಚೆಗೆ ಏನೂ ಇಲ್ಲವೇ?

ಮಿತ್ರರೇ ನಾವು ಶ್ರೇಷ್ಠ ವಿಜ್ಞಾನಿಗಳಾಗೋಣ, ಪ್ರಸಿದ್ಧ ವೈದ್ಯರಾಗೋಣ, ಕೈತುಂಬ ಸಂಬಳ ಗಳಿಸುವ ಎಂಜಿನಿಯರುಗಳಾಗೋಣ. ಆದರೆ ಅಷ್ಟಕ್ಕೇ ನಮ್ಮ ಜೀವನ ಸೀಮಿತಗೊಂಡರೆ ನಮಗೂ ರೋಬೋಟ್‌ಗಳಿಗೂ ಏನು ವ್ಯತ್ಯಾಸ ಉಳಿಯುತ್ತದೆ? ಮನುಷ್ಯ ಸಹಜ ಭಾವನೆಗಳಿಗೆ ಅಭಿವ್ಯಕ್ತಿ ಸಿಗದೇ ಹೋದರೆ ನಾವು ಮನುಷ್ಯರು ಹೇಗಾದೇವು? ಈ ಪ್ರಪಂಚ ಎಷ್ಟೊಂದು ವಿಶಾಲ ವೈವಿಧ್ಯಮಯ ಅವಕಾಶಗಳ ಆಗರ. ಕೇವಲ ಹಣಗಳಿಕೆಯಷ್ಟೇ ನಮ್ಮ ಉದ್ದೇಶವಾದರೆ ಮಾನವನೆಂಬ ಪ್ರಕೃತಿಯ ಅಮೂಲ್ಯ ಸೃಷ್ಟಿಗೆ ಎಲ್ಲಿಯ ಕಿಮ್ಮತ್ತು?

ಲಲಿತಕಲೆಗಳು ನಮ್ಮ ಬದುಕನ್ನು ಪರಿಪೂರ್ಣವಾಗಿಸುತ್ತವೆ. ಅದರಲ್ಲೂ ಸಂಗೀತ, ನೃತ್ಯಗಳಂತಹ ಕಲೆಗಳು ಕಷ್ಟಕಾಲದಲ್ಲಿ ನಮ್ಮನ್ನು ಕಾಪಾಡುತ್ತವೆ. ಹಣದ ರಾಶಿ ತತ್‌ಕಾಲಕ್ಕೆ ಸಂತೋಷವನ್ನೂ ಹೆಮ್ಮೆಯನ್ನೂ ತಂದುಕೊಡಬಲ್ಲುದೇನೋ? ಆದರೆ ಅದು ಶಾಶ್ವತವಲ್ಲ. ಕಲೆ ತಂದುಕೊಡುವ ಸಂತೃಪ್ತಿ ಸಂಪೂರ್ಣವೂ ಶಾಶ್ವತವೂ ಆದದ್ದು. ನಮ್ಮೊಂದಿಗೆ ಯಾರೂ ಇಲ್ಲದ ವೇಳೆ ನಮ್ಮ ಬಳಿಯಿರುವ ಸಂಪತ್ತಿನ ಚೀಲ ಯಾವ ಪ್ರಯೋಜನಕ್ಕೂ ಬರದು. ಆದರೆ ನಮ್ಮೊಂದಿಗಿರುವ ಕಲೆ ಅಂತಹ ಕಾಲದಲ್ಲಿ ನಮ್ಮ ಅತ್ಯುತ್ತಮ ಒಡನಾಡಿಯಾದೀತು. ಎಲ್ಲಿ ಶಬ್ದಗಳು ವಿಫಲವಾಗುತ್ತವೋ ಅಲ್ಲಿ ಸಂಗೀತ ಮಾತನಾಡುತ್ತದಂತೆ. ಎಲ್ಲಿ ಒಂಟಿತನದ, ಸೋಲಿನ ಭೀತಿ ಆವರಿಸುತ್ತದೋ ಅಲ್ಲಿ ಕಲೆ ನಮ್ಮ ಕೈಹಿಡಿಯುತ್ತದೆ.

ಅಂಕಗಳ, ರ‍್ಯಾಂಕುಗಳ ಹಿಂದೆ ಬಿದ್ದಿರುತ್ತಿದ್ದರೆ ನಮಗೊಬ್ಬರು ಎಂ. ಎಸ್. ಸುಬ್ಬುಲಕ್ಷ್ಮಿ ಸಿಗುತ್ತಿದ್ದರೇ? ಲತಾ ಮಂಗೇಶ್ಕರ್ ಸಿಗುತ್ತಿದ್ದರೇ? ಚೆಂಬೈ, ಪಟ್ಟಮ್ಮಾಳ್, ಶೆಮ್ಮಗುಂಡಿ, ಲಾಲ್ಗುಡಿ, ಚೌರಾಸಿಯಾ, ಭೀಮಸೇನ್ ಜೋಶಿ, ಎಸ್. ಜಾನಕಿ, ಬಾಲಮುರಳೀಕೃಷ್ಣ, ಮಲ್ಲಿಕಾ ಸಾರಾಭಾಯಿ, ಝಾಕಿರ್ ಹುಸೇನ್, ಪದ್ಮಾ ಸುಬ್ರಹ್ಮಣ್ಯಂ, ಎ. ಆರ್. ರೆಹಮಾನ್, ಎಂ.ಎಸ್. ಗೋಪಾಲಕೃಷ್ಣನ್ ಅಥವಾ ಆರ್. ಕೆ. ಶ್ರೀಕಂಠನ್ ಸಿಗುತ್ತಿದ್ದರೇ? ಇವರಿಗಾಗಲೀ ಇವರ ಕುಟುಂಬಕ್ಕಾಗಲೀ ಸಂಗೀತ ನೃತ್ಯಗಳೇ ಬದುಕಿನ ಸರ್ವಸ್ವವಾಗಿದ್ದವು. ಅದರಲ್ಲೇ ಬೆಳಗು, ಅದರಲ್ಲೇ ರಾತ್ರಿ. ಅವರು ಸಂಪಾದಿಸಿದ್ದು ಅವರೊಂದಿಗೇ ಮುಗಿಯಲಿಲ್ಲ. ಇನ್ನೂ ನೂರಾರು ವರ್ಷಗಳ ಕಾಲ ನಮ್ಮ ನಡುವೆ ಕಾಲಪ್ರವಾಹದಲ್ಲಿ ಹರಿಯುತ್ತಲೇ ಇರುತ್ತದೆ.

ನಾನು ಒಂದುವೇಳೆ ಭೌತವಿಜ್ಞಾನಿ ಆಗಿಲ್ಲದಿರುತ್ತಿದ್ದರೆ, ಬಹುಶಃ ಸಂಗೀತಜ್ಞ ಆಗಿರುತ್ತಿದ್ದೆ. ನಾನು ಸಂಗೀತಲ್ಲೇ ಯೋಚಿಸುತ್ತೇನೆ. ಸಂಗೀತದಲ್ಲೇ ನನ್ನ ಹಗಲುಗನಸುಗಳನ್ನು ಕಾಣುತ್ತೇನೆ ಎಂದಿದ್ದರು ಆಲ್ಬರ್ಟ್ ಐನ್‌ಸ್ಟೀನ್. ಜಗತ್ತು ಕಂಡ ಶ್ರೇಷ್ಠ ವಿಜ್ಞಾನಿಗಳು, ತಂತ್ರಜ್ಞರೆಲ್ಲರೂ ಲಲಿತಕಲೆಗಳ ಬಹುದೊಡ್ಡ ಅಭಿಮಾನಿಗಳೆಂಬುದನ್ನು ನಾವು ಗಮನಿಸಬೇಕು. ಅವರ‍್ಯಾರಿಗೂ ಸಂಗೀತವಾಗಲೀ ನೃತ್ಯವಾಗಲೀ ಚಿತ್ರಕಲೆಯಾಗಲೀ ವಿದ್ಯಾಭ್ಯಾಸಕ್ಕಿರುವ ತೊಡಕೆಂದು ಅನಿಸಲೇ ಇಲ್ಲ. ಬದಲಾಗಿ, ಇವೆಲ್ಲ ವ್ಯಕ್ತಿಯ ಒಟ್ಟಾರೆ ಕಲಿಕೆಯ ವೇಗವರ್ಧಕಗಳೆಂದು ಅವರು ಭಾವಿಸಿದ್ದರು.

ಭಾರತೀಯ ಸಂಜಾತ ವಿಶ್ವಪ್ರಸಿದ್ಧ ಗಣಿತಜ್ಞ ಹಾಗೂ ಪ್ರತಿಭಾವಂತ ತಬಲಾಪಟು ಮಂಜುಳ್ ಭಾರ್ಗವ ಕಳೆದ ವರ್ಷ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಮಾಡಿದ ಭಾಷಣ ನಮ್ಮ ಕಣ್ತೆರೆಸುವಂತಿದೆ: ಭಾರತಕ್ಕೆ ಶ್ರೇಷ್ಠ ವಿಜ್ಞಾನಿಗಳು, ಅನ್ವೇಷಕರು, ನ್ಯಾಯಪಂಡಿತರು ಬೇಕಿದ್ದರೆ ನಿಮ್ಮ ಮಕ್ಕಳಿಗೆ ಸಂಗೀತ ಕಲಿಸಿ... ಶಾಸ್ತ್ರೀಯ ಸಂಗೀತದ ಶಕ್ತಿ ಏನೆಂದರೆ ಅದು ವ್ಯಕ್ತಿಯೊಬ್ಬ ತೊಡಗಿರುವ ಇತರ ಕ್ಷೇತ್ರಗಳಲ್ಲಿಯೂ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಭಾರತೀಯ ಸಂಗೀತವೆಂಬುದು ಆಳ ಗಣಿತವನ್ನೂ ಸಂಕೀರ್ಣ ಸೌಂದರ್ಯವನ್ನೂ ತನ್ನೊಳಗಿರಿಸಿಕೊಂಡಿರುವ ಅತಿ ವಿಸ್ತಾರದ ಅಭಿವ್ಯಕ್ತಿ...

ಸ್ನೇಹಿತರೇ, ಒಂದೋ ಅತಿಯಾದ ಓದು ಇಲ್ಲವೇ ಅತಿಯಾದ ಮೋಜು- ಇವುಗಳಲ್ಲೇ ನಮ್ಮ ವಿದ್ಯಾರ್ಥಿ ಜೀವನ ಕಳೆದುಹೋಗುವ ಅಪಾಯ ಹೆಚ್ಚು. ಓದು, ಅಸೈನ್‌ಮೆಂಟು, ಪರೀಕ್ಷೆಗಳ ನಡುವೆ ನಮ್ಮ ಸ್ಟೂಡೆಂಟ್‌ಲೈಫು ಕರಗಿಹೋದರೆ ಕೊನೆಗೆ ಉಳಿಯುವುದು ಅಂಕಪಟ್ಟಿ ಮಾತ್ರ. ಎಲ್ಲ ಗಡಿಬಿಡಿಗಳ ನಡುವೆ ಒಂದಿಷ್ಟು ಸಮಯವನ್ನು ಹೊಂದಿಸಿಕೊಂಡು  ಸಂಗೀತವನ್ನೋ ನೃತ್ಯವನ್ನೋ ಅಭ್ಯಾಸ ಮಾಡಿ. ನೀವು ಓದುತ್ತಿರುವ ಊರಿನಲ್ಲೇ ಹುಡುಕಿದರೆ ನಿಮಗೊಬ್ಬ ಒಳ್ಳೆಯ ಗುರು ಸಿಗಬಹುದು. ಅವರಿಂದ ನಿಮ್ಮ ಬದುಕಿಗೊಂದು ಮಹತ್ವದ ತಿರುವೂ ಲಭಿಸಬಹುದು. ನೀವು ಅದರಲ್ಲೇ ಮುಂದುವರಿದು ದೊಡ್ಡ ಕಲಾವಿದರಾಗಬೇಕೆಂದೇನೂ ಇಲ್ಲ; ಕಲೆಯ ಬಗ್ಗೆ ಗೌರವ, ಕಲಾಸ್ವಾದನೆಯ ಗುಣ ನಿಮ್ಮಲ್ಲಿ ಬೆಳೆದರೆ ಸಾಕು. ನೀವು ಯಾವ ಉದ್ಯೋಗದಲ್ಲಾದರೂ ಮುಂದುವರಿಯಿರಿ, ಯಾವ ದೇಶದಲ್ಲಾದರೂ ಬದುಕಿ, ಆದರೆ ನಿಮ್ಮೊಳಗೆ ಚಿಗಿತ ಕಲೆಯ ಪುಟ್ಟ ಬಳ್ಳಿ ನಿಮ್ಮ ಇಡೀ ಜೀವನಕ್ಕೆ ನೆಮ್ಮದಿಯ ತೋರಣ ಕಟ್ಟೀತು ಎಂಬುದು ಮಾತ್ರ ಸಂಗೀತದಾಣೆ ಸತ್ಯ.

ಕಾಮೆಂಟ್‌ಗಳಿಲ್ಲ: