(ನಿರಾಂಜು ಕೆ. ಎಚ್. ಅವರ ಕವನ ಸಂಕಲನ 'ಕೆಂಡಸಂಪಿಗೆ'ಗೆ ಬರೆದ ಮುನ್ನುಡಿ)
ನಿರಾಂಜು ಅವರ ಕವಿತೆಗಳ ಮೇಲೆ ಕಣ್ಣಾಡಿಸುತ್ತಿದ್ದರೆ ಥಟ್ಟನೆ ನೆನಪಾಗುವುದು 'ಗುಡಿಸಲಿನಲ್ಲಿ ಅರಳುವ ಗುಲಾಬಿ ನಕ್ಷತ್ರ ನನ್ನ ಕವನ/ ಕತ್ತಲೆಯಲ್ಲಿ ಕಾಣುವ ಬೆಳಕು ಬಂಡಾಯದ ಈ ಕವನ' ಎಂಬ ಸಿದ್ದಲಿಂಗಯ್ಯನವರ ಹಾಡಿನ ಸಾಲುಗಳು. ಬಹುಶಃ ನಿರಾಂಜು ಅವರ ಬಹುತೇಕ ಕವಿತೆಗಳ ಒಳಗಿನಿಂದ ಹೊಮ್ಮುತ್ತಿರುವ ಸಾತ್ವಿಕ ಪ್ರತಿಭಟನೆಯ ದನಿಯೇ ಇದಕ್ಕೆ ಕಾರಣವಿರಬೇಕು.
ಸಾಹಿತ್ಯ ಇತಿಹಾಸದ ಉದ್ದಕ್ಕೂ ವ್ಯವಸ್ಥೆಯ ವಿರುದ್ಧದ ಪ್ರತಿಭಟನೆಯ ದ್ಯೋತಕಗಳಾಗಿ ಹತ್ತುಹಲವು ಕವಿಗಳು, ನೂರಾರು ಕವಿತೆಗಳು ಕಾಣಿಸಿಕೊಂಡಿರಬಹುದು; ಆದರೆ ನಿರಾಂಜು ಈ ಸಾಲಿನಲ್ಲಿ ಹನ್ನೊಂದನೆಯವರಾಗಿ ಕಾಣುವುದಿಲ್ಲ. ಏಕೆಂದರೆ ಅವರ ಕವಿತೆಗಳಲ್ಲಿ ಅಲ್ಲಲ್ಲಿ ಗೋಚರಿಸುವ ಬಡತನ, ಹಸಿವು, ಅಸಹಾಯಕತೆ ಹಾಗೂ ಶೋಷಣೆ-ತರತಮ ಭಾವನೆಯ ನೋವು ಅವರದ್ದೇ ಹೊರತು ಇನ್ನೊಬ್ಬರದ್ದಾಗಿರಲು ಸಾಧ್ಯವಿಲ್ಲ.
ಯಾವುದೇ ಸೃಜನಶೀಲ ಪ್ರಕ್ರಿಯೆಯೂ ಮೂಲತಃ ಅನುಭವಜನ್ಯವಷ್ಟೇ. ಹೀಗಾಗಿ ನಿರಾಂಜು ಅವರ ಕವಿತೆಗಳ ಹಿಂದಿರಬಹುದಾದ ಮಾನಸಿಕ ತುಮುಲ ನಿರ್ಲಕ್ಷಿಸುವಂಥದ್ದಲ್ಲ. ವಯೋಸಹಜವಾಗಿ ಮೂಡಬಹುದಾದ ಪ್ರೀತಿ-ಪ್ರೇಮಗಳ ನವಿರು ಭಾವ, ಪ್ರಕೃತಿಯ ಕುರಿತಾದ ವಿಸ್ಮಯ, ನಾಡಿನೆಡೆಗಿನ ತುಡಿತ ನಿರಾಂಜು ಕವಿತೆಗಳಲ್ಲೂ ಇವೆ; ಆದರೆ ಅದಕ್ಕಿಂತ ಮಿಗಿಲಾಗಿ ನಮ್ಮನ್ನು ಕಾಡುವುದು ಮತ್ತು ಕಲಕುವುದು ಬಾಲ್ಯ-ಹದಿಹರೆಯವನ್ನು ಸಂಭ್ರಮಿಸಬೇಕಾದ ವಯಸ್ಸಿನಲ್ಲಿ ಅವರು ಅನುಭವಿಸಿರಬಹುದಾದ ಮಾನಸಿಕ ತುಮುಲಗಳು. ಈ ಸಂಘರ್ಷ ಬಾಲಕನದ್ದೋ, ಯುವಕನದ್ದೋ, ಮಧ್ಯವಯಸ್ಕನದ್ದೋ, ವೃದ್ಧನದ್ದೋ ಯಾರದ್ದೇ ಆದರೂ ಅದು ನಾಗರಿಕ ಸಮಾಜದ ಆತ್ಮಾವಲೋಕನಕ್ಕೆ ಕಾರಣವಾಗಬೇಕು.
ನಾರುವ ಕೆಲಸಗಳಲ್ಲಿ
ನರಳುತ್ತಿರುವ ನನ್ನ ಜನಗಳೇ
ಮೇಲ್ವರ್ಗದ ಎದುರಿಗೆ
ಮಾತನಾಡದ ಮೂಕಪ್ರಜೆಗಳೇ
ಎಂದು ಆರಂಭವಾಗುವ 'ಕೆಂಡಸಂಪಿಗೆ' ಕವನ ಈ ಸಂಕಲನದ ಪ್ರಮುಖ ಕವಿತೆಗಳಲ್ಲೊಂದು. ದೇಶಕ್ಕೆ ಸ್ವಾತಂತ್ರ್ಯ, ಸಂವಿಧಾನ ಬಂದು ಆರೇಳು ದಶಕ ಸಂದರೂ ನಿಜದರ್ಥದಲ್ಲಿ ಸಮಾಜದಲ್ಲಿ ಪ್ರಜಾಪ್ರಭುತ್ವ ನೆಲೆಗೊಂಡಿಲ್ಲ ಎಂಬುದನ್ನು ಸೂಚಿಸುವ ಈ ಸಾಲುಗಳು ಎಳೆಯ ಕೊರಳಿನಿಂದ ಹೊರಟ ಬಲಿತ ದನಿಯಂತೆ ಭಾಸವಾಗುತ್ತವೆ.
ಇವು ಕಣ್ಣೀರಲ್ಲಿ ಬೆಂದ ಕಣ್ಣುಗಳಾದರೂ
ನಿಮ್ಮಂಥವರ ದಾರಿಗೆ ಕೆಂಡಗಳಾಗುತ್ತವೆ
ಎಂಬ ಸಾಲುಗಳಲ್ಲಿನ ತಣ್ಣನೆಯ ಆಕ್ರೋಶ ಮತ್ತು ಸ್ಪಷ್ಟವಾಗಿ ಕೇಳಿಸುವ ಎಚ್ಚರಿಕೆಯ ಕರೆಗಂಟೆ ಎಂತಹವರನ್ನಾದರೂ ಒಂದು ಕ್ಷಣ ಯೋಚಿಸುವಂತೆ ಮಾಡುವ ಶಕ್ತಿ ಹೊಂದಿವೆ. ಆದರೆ ಕವಿಯ ಈ ಆಕ್ರೋಶ ಸಾತ್ವಿಕವಾದದ್ದು ಮತ್ತು ಅದರ ಹಿಂದಿನ ಮನಸ್ಸು ಘರ್ಷಣೆಯನ್ನು ಮೀರಿದ ಸಾಮರಸ್ಯವನ್ನು ಬಯಸುವಂಥದ್ದೆಂಬುದನ್ನು ಗಮನಿಸಬೇಕು. ಅದು ಕವಿತೆಯ ಕೊನೆಯ ಭಾಗದಲ್ಲಿ ವ್ಯಕ್ತವಾಗಿದೆ:
ಗಾಳಿ ಬೆಳಕಿನಂತೆ ಬಂದರೆ
ನಿಮ್ಮ ಜೊತೆಯೇ ಬೆಳೆದು
ಸರ್ವರ ದಾರಿಗೆ ಹೂವುಗಳಾಗುತ್ತವೆ
ಹೂವುಗಳಾಗುತ್ತವೆ, ಹೂವುಗಳಾಗುತ್ತವೆ
'ಡೊಂಕು ಸಮಾಜ' ಎಂಬ ಕವಿತೆಯಲ್ಲಿ ತಾನು ಬದುಕುತ್ತಿರುವ ಭ್ರಷ್ಟಸಮಾಜದ ಬಗೆಗಿನ ಸಿಟ್ಟಿದೆ. ಜತೆಗೆ ಇದನ್ನು ಸರಿಪಡಿಸುವತ್ತ ತನಗೇನೂ ಮಾಡಲಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯ ಭಾವವೂ ದಟ್ಟವಾಗಿದೆ.
ಒಲೆಯ ಮೇಲೆ ನೀರು
ಕುದಿಯುತ್ತಿದೆ, ಕೊತ ಕೊತನೆ
ನನಗೂ ಕುದಿಯುತ್ತಿದೆ ರಕುತ
ಅಮ್ಮ ಬೈದು ಹೇಳುತ್ತಾಳೆ
ನಿನಗದು ಸಲ್ಲದು
ಎಂದು ತನ್ನ ಸಿಟ್ಟನ್ನು ಒಲೆಯ ಮೇಲೆ ಕೊತಕೊತನೆ ಕುದಿಯುತ್ತಿರುವ ನೀರಿಗೆ ಸಮೀಕರಿಸಿರುವುದು, ಅದಕ್ಕೆ 'ನಿನಗದು ಸಲ್ಲದು' ಎಂಬ ಅಮ್ಮನ ಬುದ್ಧಿವಾದವನ್ನು ಪೋಣಿಸಿರುವುದು ಸುಂದರವಾಗಿದೆ. 'ಅಧಿಕಾರದ ದಾಹ', 'ಇಂದಿನ ಯುಗ’, 'ಎತ್ತ ಸಾಗುತ್ತಿದೆ’ ಮುಂತಾದ ಕವಿತೆಗಳೂ ಸಮಕಾಲೀನ ಸಮಾಜದ ಸಾಗುತ್ತಿರುವ ಹಾದಿಯ ಬಗ್ಗೆ ಆತಂಕ ವ್ಯಕ್ತಪಡಿಸುತ್ತವೆ.
ಬಣ್ಣದ ಬೊಂಬೆ ಜೊತೆ ಹೊರಟವರೆ ಸಮುದ್ರಕ್ಕೆ
ಅವರಿಗೂ ದಾರಿ ಕಾಣ್ತಾ ಇಲ್ಲ- ಬೊಂಬೆಗೆ ಮೊದ್ಲೇ ಜೀವ ಇಲ್ಲ
ಅತ್ತಲೈ ಹೋಗದೇ- ಇತ್ತಲೂ ಬರದೆ
ಎತ್ತದಾರಿ, ಎತ್ತದಾರಿ ಎಂದು ದಾರಿ ತಪ್ಪಿದೋರೇ ಎಲ್ಲಾ
ಎಂಬ 'ಇಂದಿನ ಯುಗ’ ಕವಿತೆಯ ಸಾಲುಗಳು ಆಧುನಿಕ ಸಮಾಜದಲ್ಲಿ ನೆಲೆಸಿರುವ ಒಟ್ಟಾರೆ ಗೊಂದಲವನ್ನು ಪ್ರತಿನಿಧಿಸುತ್ತವೆ.
'ಕುಸುಮ’ ಈ ಕವನ ಸಂಕಲನದಲ್ಲಿ ಗಮನ ಸೆಳೆಯುವ ಇನ್ನೊಂದು ಪ್ರಮುಖ ಕವಿತೆ. ಹೂವನ್ನು ಉದ್ದೇಶಿಸಿ ಮಾತನಾಡುತ್ತಲೇ ಅತ್ಯಂತ ಮಹತ್ವದ ಪ್ರಶ್ನೆಯೊಂದನ್ನು ಕವಿ ಎತ್ತಿರುವ ರೀತಿ ಕುತೂಹಲಕರವಾಗಿದೆ:
ಬಡವರ ಹೊಟ್ಟೆ ತುಂಬಿಸುವೆ
ನೋಡುಗರ ಕಣ್ಣಿಗೆ ಸ್ವರ್ಗವೇ ತೋರಿಸುವೆ
ಶುಭಸಮಾರಂಭಕ್ಕೆ ಆತಿಥ್ಯ ವಹಿಸುವೆ
ಮಡಿದವರ ಮೇಲೆ ಏಕೆ ಮೌನವಹಿಸುವೆ?
ಎಂಬಲ್ಲಿ 'ಮಡಿದವರ ಮೇಲೆ ಏಕೆ ಮೌನ ವಹಿಸುವೆ?’ ಎಂಬ ಸಾಲು ನಮಗರಿವಿಲ್ಲದಂತೆ ಸಣ್ಣಗೆ ಬೆಚ್ಚಿಬೀಳಿಸುತ್ತದೆ.
ದೇವರ ಮೇಲಿನ ನಿನ್ನ ಕಣ್ಣಿಗೆ ಒತ್ತಿ
ಕಿವಿಯಲ್ಲಿ ತಲೆಯಲ್ಲಿ ಮುಡಿಸುವರು
ಸ್ಮಶಾನದಲ್ಲಿ ನಿನ್ನನ್ನು ನೋಡಿ
ಏಕೆ ದೂರ ಸರಿಯುವರು?
ಎಂಬ ಪ್ರಶ್ನೆಯ ಮೂಲಕ ಹೂವಿನ ಸಂಕೇತದೊಂದಿಗೆ ಸಮಾಜದಲ್ಲಿ ಜೀವಂತವಾಗಿರುವ ಮೇಲು-ಕೀಳು ಭಾವನೆಯತ್ತ ಕವಿತೆ ಹೊರಳುತ್ತದೆ.
'ನನ್ನವರು’, 'ಹಟ್ಟಿಯ ಹುಡುಗ’, 'ಮುಳ್ಳಿನ ಹಾದಿ’, 'ಅಂದಿನಿಂದ ಇಂದಿನವರೆಗೂ’, 'ಕನಸನ್ನು ಹೊತ್ತು’, 'ಸ್ವಾಭಿಮಾನಿ’, 'ಹಸಿದವರ ಬಾಯಿಗೆ ಹಣ್ಣಾದವಳು’ ಇತ್ಯಾದಿ ಕವಿತೆಗಳು 'ಕೆಂಡಸಂಪಿಗೆ’ ಕವಿತೆಯ ಮುಂದುವರಿದ ಭಾಗಗಳಾಗಿ ಕಾಣಿಸುತ್ತವೆ. ಇನ್ನೂ ಅಸಹಾಯಕತೆಯಲ್ಲಿ ಕಾಲ ಕಳೆಯುತ್ತಿರುವ ತನ್ನಂತಹ ಸಾವಿರಾರು ಜನರ ಕಡೆಗೆ ಸಹಾನುಭೂತಿ ತೋರುತ್ತಲೇ ಅವರು ಸಾಗಬೇಕಾದ ಹಾದಿಯ ಬಗ್ಗೆ, ಅವರ ಮುಂದಿರುವ ಸವಾಲುಗಳ ಬಗ್ಗೆ ಕವಿ ಯೋಚಿಸುತ್ತಾನೆ.
ಬೆಟ್ಟದಂತಿವೆ ನಮ್ಮ ಆಸೆಗಳು
ಆದರೆ ಏನು ಮಾಡುವುದು
ಸಾಗರದಷ್ಟಿದೆ ದುಃಖ
ಈಜಿ ಬರುವುದೇ ದೊಡ್ಡ ಸವಾಲು
ಎಂದು ಆರಂಭವಾಗುವ 'ಮುಳ್ಳಿನ ಹಾದಿ’ ಎಂಬ ಕವಿತೆಯ ಕೊನೆಯ ಸಾಲುಗಳು ಕವಿ ನಿರಾಶಾವಾದಿಯಲ್ಲ ಎಂಬುದನ್ನು ದೃಢಪಡಿಸುತ್ತವೆ.
ಸಾಗರಕ್ಕೆ ಕೊನೆ ಇರಲೇಬೇಕು
ನಾವು ದಡವನ್ನು ಸೇರಲೇಬೇಕು
ಕಷ್ಟಗಳು ದೂರಾಗಿ ಸಂತಸ
ಇಮ್ಮಡಿಯಾಗಿ ನಮ್ಮ ಬಾಳಿನ
ಹಾದಿ ಕೊನೆಗೊಳಿಸಬೇಕು
ಎಂಬ ಸಾಲುಗಳಿಂದ ಇಣುಕುವ ಆಶಾವಾದ ಮನಸ್ಸಿಗೆ ಮುದ ನೀಡುತ್ತವೆ. ನೋವುಗಳಿಂದ ಹೊರಬಂದು ಆತ್ಮವಿಶ್ವಾಸದ ಬದುಕನ್ನು ಕಟ್ಟಿಕೊಳ್ಳಬೇಕಾದರೆ ತಮಗೆ ಬೇಕಾಗಿರುವುದು ಜ್ಞಾನದ ಬೆಳಕು ಎಂಬ ಅರಿವು ಪ್ರಶಾಂಸಾರ್ಹವಾದದ್ದು. ಅದು 'ಬೆಳಕಿನೆಡೆಗೆ’ ಎಂಬ ಕವಿತೆಯಲ್ಲಿದೆ:
ನಾವು ಇಂದು ನಡೆಯಬೇಕಾಗಿದೆ
ಕತ್ತಲಿನಿಂದ ಬೆಳಕಿನೆಡೆಗೆ
ಅಜ್ಞಾನದಿಂದ ಅರಿವಿನ ಕಡೆಗೆ
ನೋಡಬೇಕಾಗಿದೆ ಕಣ್ ತೆರೆದು ಜಗವನು
ಜ್ಞಾನವೆಂಬ ಜ್ಯೋತಿಯನ್ನು ಹಿಡಿದು
ಅಜ್ಞಾನದ ಅಂಧಕಾರ ತೊಡೆಯಬೇಕಾಗಿದೆ
ಸೂರ್ಯನ ರೀತಿ ಉದಯಿಸಬೇಕಿದೆ
ಕತ್ತಲೆಯ ತೊಡೆಯಬೇಕಿದೆ
ಎಂಬ ಸಾಲುಗಳು ಕೊಂಚ ವಾಚ್ಯವೆನಿಸಿದರೂ ಅವುಗಳ ಅಂತರ್ಯದಲ್ಲಿ ಹುದುಗಿರುವ ಭರವಸೆಯ ದನಿ ಇಂದಿನ ಅವಶ್ಯಕತೆಯೆಂಬುದರಲ್ಲಿ ಎರಡು ಮಾತಿಲ್ಲ.
ಒಟ್ಟಾರೆಯಾಗಿ, ತನ್ನ ಮೊದಲ ಕವನ ಸಂಕಲನದಲ್ಲೇ ನಿರಾಂಜು ಒಬ್ಬ ಪ್ರಬುದ್ಧ ಕವಿಯಾಗಬಲ್ಲ ಭರವಸೆಯನ್ನು ತೋರಿಸಿದ್ದಾರೆ. ವಿಸ್ತಾರವಾದ ಸಾಹಿತ್ಯದ ಓದು ಮತ್ತು ಚಿಂತನೆಯ ಮೂಲಕ ತನ್ನ ಕವಿತೆಗಳಲ್ಲಿ ಇನ್ನಷ್ಟು ಪ್ರೌಢತೆಯನ್ನು ಅವರು ಸಾಧಿಸಿಕೊಳ್ಳಬಹುದು. ಹಾಗೆಯೇ ಮನಸ್ಸಿನಲ್ಲಿ ಮೂಡುವ ವಸ್ತುವನ್ನು ಕಾವ್ಯವಾಗಿಸುವಾಗ ಅದನ್ನು ವಾಚಾಳಿಯಾಗದಂತೆ ಪಳಗಿಸಲು ಒಂದಿಷ್ಟು ಧ್ಯಾನದ ಅವಶ್ಯಕತೆಯೂ ಇದೆ. ಇದನ್ನು ಮಾಡಲು ಇನ್ನೂ ವಿದ್ಯಾರ್ಥಿ ದೆಸೆಯಲ್ಲಿರುವ ನಿರಾಂಜು ಅವರಿಗೆ ಸಾಧ್ಯವಿದೆ ಮತ್ತು ಅದಕ್ಕೆ ಇದು ಸಕಾಲ ಕೂಡ.
ಜಡ್ಡುಗಟ್ಟಿದ ವ್ಯವಸ್ಥೆಯ ವಿರುದ್ಧ ಹೋರಾಡಲು ತಾನೂ ಸೇರಿದಂತೆ ಸಮಾಜದ ದೊಡ್ಡದೊಂದು ಭಾಗ ಇನ್ನೂ ಅಸಹಾಯಕವಾಗಿದೆ ಎಂಬುದನ್ನು ನಿರಾಂಜು ಅಲ್ಲಲ್ಲಿ ಹೇಳಿದ್ದಾರೆ. ಸಮಾಧಾನದ ಸಂಗತಿಯೆಂದರೆ ಅಂತಹ ವ್ಯವಸ್ಥೆಯ ವಿರುದ್ಧದ ಹೋರಾಟವನ್ನು ಸಾಧ್ಯವಾಗಿಸಬಲ್ಲ ಕವಿತೆಯೆಂಬ ಬಹುದೊಡ್ಡ ಅಸ್ತ್ರವೇ ಅವರ ಕೈಯಲ್ಲಿದೆ. ಇದು ಆರೋಗ್ಯಕರ ಸಮಾಜಕ್ಕೂ, ಸಾಹಿತ್ಯ ಲೋಕಕ್ಕೂ ಒಂದು ಒಳ್ಳೆಯ ಸುದ್ದಿ ಎಂದು ನಾನು ಭಾವಿಸುತ್ತೇನೆ. ಈ ಎರಡನ್ನೂ ಗಮನದಲ್ಲಿರಿಸಿಕೊಂಡು ನಿರಾಂಜು ಆತ್ಮವಿಶ್ವಾಸದಿಂದ ಮುಂದುವರಿಯಲಿ ಎಂಬುದು ನನ್ನ ಹಾರೈಕೆ.
ನವೆಂಬರ್ 10, 2015 ಸಿಬಂತಿ ಪದ್ಮನಾಭ ಕೆ. ವಿ.
ದೀಪಾವಳಿ ತುಮಕೂರು

1 ಕಾಮೆಂಟ್:
ನಿನ್ನಂಥ ಮೇಷ್ಟ್ರುಗಳು ಸಿಕ್ಕರೆ ಹ್ಯಾಟ್ರಿಕ್ ಮಾತ್ರ ಯಾಕೆ ನೂರು ಬರಬಹುದು ನಿರಾಂಜು ಆತ್ಮವಿಶ್ವಾಸದಿಂದ ಮುಂದುವರಿಯಲಿ ಎಂಬುದು ನನ್ನ ಹಾರೈಕೆ ಕೂಡ. ನನ್ನ ಪರವಾಗಿ ಶುಭಾಶಯ ತಿಳಿಸಿ
ಕಾಮೆಂಟ್ ಪೋಸ್ಟ್ ಮಾಡಿ